ಮಧ್ಯೆ ಒಂದು ಹಟ್ಟಿಯಲ್ಲಿ ತುಸು ಹೊತ್ತು ಊಟ ಮಾಡಿದ್ದನ್ನು ಬಿಟ್ಟರೆ, ಗೌರಿ, ಗುಣದಮ್ಮ, ಗಂಗ ಮತ್ತು ಬೊಂತೆಯ – ಯಾತ್ರಿಕರ ತಂಡ ಕಾಲ್ನಡಿಗೆಯಲ್ಲಿ ನಡೆಯಿತು. ಗೌರಿ ತಪ್ಪಿ ಕೂಡ ತನ್ನ ತಂದೆ ತಾಯಿಗಳನ್ನು ಜ್ಞಾಪಿಸಿಕೊಳ್ಳಲಿಲ್ಲ. ಮನೆಯಲ್ಲಿ ಹೇಳದೆ ಕೇಳದೆ ಹೀಗೆ ಬಂದದ್ದು ತಪ್ಪೆಂದು ಅನ್ನಿಸಲೇ ಇಲ್ಲ. ಅಣ್ಣನಿಗೆ ಹೇಳಿದಂತೆ ಚಿಕ್ಕಮ್ಮಣ್ಣಿಗೂ ಹೇಳಿ ಬಂದಿದ್ದರೆ ಒಳ್ಳೆಯದಿತ್ತೆಂದು ಅನ್ನಿಸಿತಾದರೂ ಅವಳು ಹೋಗಲು ಬಿಡುತ್ತಿರಲಿಲ್ಲವೆನ್ನಿಸಿ ತಾನು ಮಾಡಿದ್ದೇ ಸರಿ ಎಂದು ಅಂದುಕೊಂಡಳು. ಅಣ್ಣ ಹೇಳಿದ ಮೇಲೆ ಸ್ವಲ್ಪ ಹೊತ್ತು ಹಳಹಳಿಸಿ, ಒಂದೆರಡು ರಾತ್ರಿ ಅಳುತ್ತಾಳೆಂದು ಸುಮ್ಮನಾದಳು. ಅಣ್ಣನ ಬಗ್ಗೆ ಹಳಹಳಿಯಾಯಿತು. ರವಿ ಕಂಚಿಗೆ ಹೋಗುವುದಕ್ಕೆ ತಂದೆ ಬಿಡುತ್ತಾನೋ ಇಲ್ಲವೋ ಎಂದು ಆತಂಕವೂ ಆಯಿತು. ಎಲ್ಲವನ್ನು ಅಮ್ಮ ನೋಡಿಕೊಳುತ್ತಾಳೆ ಎಂದು ಹೆಜ್ಜೆಯಿಟ್ಟಳು.

ಗೌರಿಗೆ ನಡೆದು ರೂಢಿಯಿರಲಿಲ್ಲವಾದ್ದರಿಂದ ಮಧ್ಯಾಹ್ನದ ಹೊತ್ತಿಗೇ ದಣಿದು ಹೈರಾಣಾಗಿದ್ದಳು. ನೆತ್ತಿಯ ಮ್ಯಾಲೆ ಹರಿತವಾದ ಸುಡು ಬಿಸಿಲಿತ್ತು. ಒಂದೇ ಸಮಾಧಾನವೆಂದರೆ ಸುತ್ತ ಹಸಿರಿತ್ತು; ತಂಗಾಳಿ ಬೀಸುತ್ತಿತ್ತು. ದಾರಿ ಬದಿಯ ಒಂದು ಮರದಡಿ ತಂಗಿ ಹೊತ್ತು ಇಳಿದ ಮೇಲೆ ಮತ್ತೆ ನಡೆದರು. ಹೇಳಿದರೆ ಹಿಂದುರುಗಿ ಕಳಿಸಿಯಾರೆಂಬ ಭಯದಿಂದ ಗೌರಿ ತನ್ನ ದಣಿವನ್ನು ತೋರಿಸಲೂ ಇಲ್ಲ; ಹೇಳಿಕೊಳ್ಳಲೂ ಇಲ್ಲ. ನಿಧಾನವಾಗಿಯಾದರೂ ನಡೆಯುತ್ತ ಸಂಜೆ ಸಮಯಕ್ಕೆ ಕನಕಪುರಿ ಗಡಿಯ ಚಂದ್ರಧಾರಾ ನದಿ ದಾಟಿ ಗೊಲ್ಲರ ಹಟ್ಟಿಗೆ ತಲುಪಿ ಜೋಗ್ತಿಯರಿಬ್ಬರೂ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಸೀದಾ ಹಟ್ಟಿಯ ಸಾಮೂಹಿಕ ಮಂಟಪಕ್ಕೆ ಹೋಗಿ ಗಂಟೆ ಬಾರಿಸಿದರು. ಹಟ್ಟಿಯ ಹಿರಿಯ ಬಂದು ಜೋಗ್ತಿಯರನ್ನು ಕಂಡು ಸಂತೋಷಪಟ್ಟ. ಗೌರಿಯನ್ನು ನೋಡಿ “ಈ ಕೂಸು ಯಾರು?” ಅಂದ

“ಹೊಸಬಳು, ಬಿಳಿಗಿರಿಯವಳು. ಕನಕಪುರಿಗೆ ಬಂದಿದ್ದಳು. ಶಿವಾಪುರಕ್ಕೆ ನಾನೂ ಬರ್ತೇನೆ ಅಂತ ಬಂದಳಪ್ಪ.”

ಎಂದಳು ಗುಣದಮ್ಮ. ಜೋಗ್ತಿಯರಿಬ್ಬರಿಗೂ ಗೌರಿ ಹೇಳಿದ್ದೂ ಇಷ್ಟೆ. ಆದರೆ ತಪ್ಪಿ ಕೂಡಾ ತಾನು ರಾಜಕುಮಾರಿ ಎಂದು ಹೇಳಿರಲಿಲ್ಲ. ಹಾಗೆಯೇ ಹೇಳಬೇಕೆಂದು ಬೊಂತೆಯನಿಗೂ ತಾಕೀತು ಮಾಡಿದ್ದಳು. ಇವರೂ ಕೇಳಿರಲಿಲ್ಲ. ಅಥವಾ ಕೇಳುವುದಕ್ಕೆ ಗೌರಿ ಅವಕಾಶ ಕೊಟ್ಟಿರಲಿಲ್ಲ. ಸಾಮಾನ್ಯವಾಗಿ ಶಿವಾಪುರಕ್ಕೆ ವಾರಿ ಹೊರಟಾಗ ದಾರಿಯಲ್ಲಿ ಹೊಸ ಯಾತ್ರಿಕರು ಬಂದು ಸೇರಿಕೊಳ್ಳುವುದಿದೆ; ಸೇರಿಕೊಂಡಿದ್ದಾಳೆ ಎಂದುಕೊಂಡಿದ್ದರು ಅಷ್ಟೆ.

ಯಾತ್ರಿಕರಿಗೆ ಮೊದಲು ಸಿಕ್ಕುವ ಹಟ್ಟಿ ಇದು. ದೂರದಿಂದ ಬರುವ ಯಾತ್ರಿಕರು ಶಿವಾಪುರದ ಸೀಮೆಯಲ್ಲಿ ಕಾಲಿಟ್ಟ ಕೂಡಲೇ ಅವರು ತಂಗುವುದಕ್ಕೆ ಎಂಟು ಸ್ಠಳಗಳಿವೆ. ಒಂಬತ್ತನೆಯ ಸ್ಥಳವೇ ಶಿವಾಪುರ. ಮೊದಲಿನ ಎಂಟೂ ಸ್ಥಳಗಳಲ್ಲಿ ಹಳೆಯ ಯಾತಿರ್ಕರು ಹೊಸ ಯಾತ್ರಿಕರಿಗೆ ಅಮ್ಮನ ಕಥೆ ಹೇಳುವ ಪದ್ದತಿ ಇದೆ. ಅವು ಒಟ್ಟು ಒಂಬತ್ತು ಕಥೆಗಳಿವೆ. ಈ ಕಥೆಗಳನ್ನು ಮೊದಲು ಹೇಳಿದವನು ಶಿವಪಾದನೆಂದೇ ಭಕ್ತಾಧಿಗಳು ನಂಬುತ್ತಾರೆ. ಒಂಬತ್ತನೆಯ ಕಥೆಯನ್ನು ಅಮ್ಮನ ಬೆಟ್ಟದ ಮೇಲೆ ಶಿವಪಾದನೇ ಹೇಳಬೇಕು. ಎಂಟು ಕಥೆಗಳನ್ನು ಆಯಾಯಾ ಸ್ಥಳದಲ್ಲಿ ಆಯಾಯಾ ಕಥೆಗಳನ್ನೇ ಹೇಳಬೇಕೆಂದು ನಿಯಮವಿದೆ. ಎರಡು ಸ್ಥಳಗಳ ಮಧ್ಯೆ – ಒಂದು ಸ್ಥಳದಿಂದ ಬೆಳಿಗ್ಗೆ ಕಾಲ್ನಡಿಗೆಯಲ್ಲಿ ಹೊರಟರೆ ಸಂಜೆ ಇನ್ನೊಂದು ಸ್ಥಳ ತಲುಪಬಹುದು; ಅಷ್ಟು ಅಂತರವಿದೆ. ಕಾಲಾನುಕಾಲದಿಂದಲೂ ಈ ಚಕ್ರ ಹಾಗೇ ಮುಂದುವರೆದಿದೆ. ಈಗಲೂ ಯಾತ್ರಿಕರು ಆವವೇ ಸ್ಥಳಗಳಲ್ಲಿ ತಂಗುತ್ತಾರೆ. ಅವವೇ ಕಥೆಗಳನ್ನು ಹೇಳಿ ಕೇಳುತ್ತಾರೆ. ಪದ್ದತಿಯಂತೆ ಹಟ್ಟಿಯ ಹಿರಿಯ ನಾಲ್ವರಿಗೂ ಊಟದ ವ್ಯವಸ್ಥೆ ಮಾಡಿ, ಅತಿಥಿಗಳ ಸೇವೆಗೆ ಇಬ್ಬರು ಮುತೈದೆಯರನ್ನ ಕಳಿಸಿದ.

ಹೆಂಗಳೆಯರು ಗೌರಿಯನ್ನು ನೋಡಿ ಬಹಳ ಸಡಗರಪಟ್ಟರು. ನಡೆದು ನಡೆದು ಗೌರಿಯ ಎಳೆಯ ಪಾದಗಳು ಕುಂಕುಮದ ಹಾಗೆ ಕೆಂಪಾಗಿದ್ದವು. ಒಂದೆಡೆ ಬೆರಳಸಂದಿಯಲ್ಲಿ ರಕ್ತ ಕೂಡ ಬಂದಿತ್ತು. ಮುಖವಂತೂ ದಣಿದು ಬೆಂಕಿಯ ಮುಂದಿನ ಹೂವಿನಂತೆ ಬಾಡಿತ್ತು. ಹೆಂಗಸರಿಬ್ಬರೂ ಬಿಸಿನೀರಲ್ಲಿ ಗೌರಯನ್ನೆರೆದು ಚೆನ್ನಾಗಿ ಆರೈಕೆ ಮಾಡಿದರು. ಪಾದಗಳಿಗೆ ಮದ್ದರೆದು ಹಚ್ಚಿದರು. ಗೌರಿಯ ದೇಹ ಹಗುರವಾಯಿತು. ತಾವೇ ತುತ್ತು ಮಾಡಿ ಗೌರಿಗೆ ಉಣ್ಣಿಸಿದರು. ಗೌರಿ ತನ್ನ ದಣಿವನ್ನೆಲ್ಲ ಮರೆತಳು.

ಊಟವಾದ ಮೇಲೆ ಹಟ್ಟಿಯ ಗಂಡಸರು ಹೆಂಗಸರು ಮಂಟಪಕ್ಕೆ ಬಂದರು. ಗೌರಿ ಎಲ್ಲರಿಗೂ ಅಚ್ಚುಮೆಚ್ಚಿನವಳಾದಳು. “ಥೇಟು ಅಮ್ಮನೇ!” ಎಂದು ಹೆಂಗಸರು ಲಟಿಕೆ ಮುರಿದು ದೃಷ್ಟಿ ತೆಗೆದರು. ಒಬ್ಬ ವೃದ್ದೆಯಂತೂ ಗೌರಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಕತೆ ಮುಗಿಯುವ ತನಕ ಅವಳನ್ನು ಕೆಳಗಿಳಿಸಲಿಲ್ಲ. ಅವರ ಅಂತಃಕರಣಕ್ಕೆ ಗೌರಿ ಕರಗಿ ಆನಂದಭಾಷ್ಪ ಉದುರಿಸಿದಳು. ಅ ದಿನ ಗುಣದಮ್ಮ ಹೇಳಿದ ಕಥೆಯಿದು:

“ಅನಾದಿ ಕಾಲದಲ್ಲಿ ಅಂದರೆ ಆದಿಯಿನ್ನೂ ಹುಟ್ಟಿಲ್ಲದ ಕಾಲದಲ್ಲಿ ಮಿರಿ ಲೋಕದಲ್ಲಿ ನಮಶ್ಶಿವಾಯ ಸ್ವಾಮಿ ತಪ ತಪ ತಪಸ್ಸು ಮಾಡುತ್ತಿದ್ದ. ಒಬ್ಬನೇ ತಪಸ್ಸು ಮಾಡಿ ಮಾಡಿ ಬೇಸರವಾಗಿ ವಾಮಾಂಗದಿಂದ ಮಾಯಾಂಗನೆಯ ಸೃಷ್ಟಿ ಮಾಡಿ ಅವಳೊಂದಿಗೆ ಕ್ರೀಡಿಸಿದ.

ಅದೂ ಸಾಕಾಗಿ ಮಿರಿಲೋಕದಲ್ಲಿರುವಂಥಾ ಕೀಲಿ ಜಡಿದ ಬಾಗಿಲೊಂದನ್ನು ತೋರಿ “ಮಡದೀ ಅದು ಅತಳ ವಿತಳ ಪಾತಾಳ ರಸಾತಳದ ಬಾಗಿಲು. ತಗಿಯಬ್ಯಾಡೆಂದು” ತಾಕೀತು ಮಾಡಿ ಮತ್ತೆ ತಪಸ್ಸಿಗೆ ಕೂತ.

ಇತ್ತ ಮಾಯಾಂಗನೆ “ಆಹಾ ಪಾತಾಳದ ಬಾಗಿಲು ತಗಿಯಬ್ಯಾಡೆಂದು ಮುದ್ದಾಂ ನನಗೆ ತಾಕೀತು ಮಾಡಿದನಲ್ಲಾ! ಇದರಲ್ಲೇನಿದೆ. ಅಂತ ನಾನು ತಿಳಿಯಬ್ಯಾಡವೇ?”

ಅಂತ ಅಂದುಕೊಂಡು ಬಾಗಿಲು ತೆಗೆದಳು ನೋಡು – ಪಾತಾಳ ರಸಾತಳದಲ್ಲಿ ಕೊತ ಕೊತ ಕುದಿಯುತ್ತಿದ್ದ ಅಂಧಮ್‌ತಮಸ್ಸೆಂಬ ಕಗ್ಗತ್ತಲೆ ಉಕ್ಕಿ ಬಂದು ಮಿರಿಲೋಕವ ಆವರಿಸಿತು. ಅಗಲಾ ನಮ್ಮ ನಮಶ್ಶಿವಾಯಸ್ವಾಮಿ ಎಚ್ಚರಗೊಂಡು ಎಲ ಎಲಾ ಆಗಬಾರದ್ದು ಆಗಿಹೊಯ್ತಲ್ಲ ಎನ್ನುತ್ತ ಕಗ್ಗತ್ತಲಾವರಿಸಿದ್ದ ಅರ್ಧ ಭಾಗವ ಚಿವುಟಿ ಕೆಳಗೆಸೆದರು. ಅದು ಕೆಳಗೆ ಬಿದ್ದು ಅದರೊಂದಿಗೆ ಮಾಯಾಂಗನೆಯೂ ಕೆಳಗೆ ಬಂದಳು.

ಹಿಂಗೇ ಅನಾದಿ ಕಳೆದು ಆದಿ ಕಾಲ ಬಂದು ಕುದಿಯುವ ಕಗ್ಗತ್ತಲಾರಿ ಮಾಯಾಂಗನೆಯ ದೇಹದ ಉಬ್ಬು ತಗ್ಗುಗಳು ಗುಡ್ಡ ಕೊಳ್ಳ ತಗ್ಗುಗಳಾಗಿ, ಅವಳ ಬೆವರು ಕಣ್ಣೀರು ನದಿಗಳಾಗಿ ಮಾಯಾಂಗನೆಯ ಉಸಿರು ಗಾಳಿಯಾಗಿ ಜೀವ ತಳೆದಳು. ನಮಶ್ಶಿವಾಯಸ್ವಾಮಿ ಮಾಯಾಂಗನೆಯ ಕಡೆಗೆ ನೋಡಿದ ನೋಟದಿಂದ ಚಂದ್ರನ ಮಾಡಿ ತನ್ನ ಹಣೆಗಣ್ಣಿನ ಕಿಡಿಯಿಂದ ಸೂರ್ಯನ ಮಾಡಿ ಹಗಲು ರಾತ್ರಿ ಮಾಡಿ ಮಾಯಾಂಗನೆಗೆ ಬಾಳು ಹೆಣ್ಣೇ ಅಂದ.

ಆಗ ಮಾಯಾಂಗನೆ,

“ಒಬ್ಬಳೇ ಬಾಳು ಅಂದರೆ ಹೆಂಗ ಬಾಳೇನುs ಶಿವನೇ? ಕೊಟ್ಟಿಗೆಯಲ್ಲಿ ದನ ಇಲ್ಲ, ಹಟ್ಟಿಯಲ್ಲಿ ಜನ ಇಲ್ಲ” ಅಂದಳು.

ಆಗ ನಮಶ್ಶಿವಾಯಸ್ವಾಮಿ ತನ್ನ ಬೆವರಿನಿಂದ ಒಬ್ಬ ಹಿರಿಯನನ್ನ ಸೃಷ್ಟಿ ಮಾಡಿ ಭೂಮಿಯ ಮ್ಯಾಕೆ ಇಟ್ಟ. ಅವನೊಬ್ಬ, ಅವನ ನೆರಳು ಇನ್ನೊಬ್ಬನಾಗಿ ಒಟ್ಟು ಇಬ್ಬರು ಹಿರಿಯರಾದರು. ಒಬ್ಬ ಹಿರಿಯ ಚಂದ್ರನ ಒಕ್ಕಲಾದ. ಇನ್ನೊಬ್ಬ ಸೂರ್ಯನ ಒಕ್ಕಲಾದ. ಮನುಷ್ಯ ಅಪೂರ್ಣನೆಂದು ಚಂದ್ರನ ಒಕ್ಕಲು ಮೂರೇಳು ಮತ್ತೇಳು ಕಲೆಗಳ ಸೃಷ್ಟಿ ಮಾಡಿ ಅವುಗಳ ಮೂಲಕ ಪೂರ್ಣನಾಗಲಿಕ್ಕೆ ಪ್ರಯತ್ನಿಸಿದ.

ಸೂರ್ಯನ ಒಕ್ಕಲು ಅರವತ್ತನಾಲ್ಕು ವಿದ್ಯೆಗಳನ್ನ ಸೃಷ್ಟಿ ಮಾಡಿ ಆ ಮೂಲಕ ದೇವರೊಂದಿಗೆ ಸ್ಪರ್ಧಿಸಲಿಕ್ಕೆ ಸುರು ಮಾಡಿದ. ಮಾಯಾಂಗನೆ ಹಗಲು ಒಬ್ಬನೊಂದಿಗೆ, ರಾತ್ರಿ ಇನ್ನೊಬ್ಬನೊಂದಿಗೆ ಬಾಳಿದಳು. ಆದರೆ ಮಕ್ಕಳ ಫಲಪುತ್ರ ಸಂತಾನಾವಾಗದೆ ಹಲುಬುತ್ತಿದ್ದಳು.

ಒಂದು ರಾತ್ರಿ ಬೆಳ್ದಿಂಗಳಲ್ಲಿ ಭೂಮಿ ಚೆಂದಾಗಿ ಹೊಳೆಯುತ್ತಿರಲು ಮಿರಿಲೋಕದ ದೇವತೆಗಳೆಲ್ಲ ಇಲ್ಲಿಗೆ ಆಡಲಿಕ್ಕೆ ಹೊರಟರು. ಆಗ ನಮಶ್ಶಿವಾಯ ಸ್ವಾಮಿ ಅವರಿಗೆ “ಮೂಡು ಬೆಟ್ಟದಲ್ಲಿ ಸೂರ್ಯನಾರಾಯಣ ಸ್ವಾಮಿ ಮೂಡುವ ಮುನ್ನ ವಾಪಸಾಗಿರೆಂದು” ತಾಕೀತು ಮಾಡಿ ಕಳಿಸಿದ. ಹಂಗೇ ಆಗಲೆಂದು ಅವರೆಲ್ಲ ಒಪ್ಪಿ ಭೂಲೊಕಕ್ಕೆ ಬಂದು ಬೆಳ್ದಿಂಗಳಲ್ಲಿ ಆಟ ಆಡತೊಡಗಿದರು. ಆಟದ ಹುಮ್ಮಸ್ಸಿನಲ್ಲಿ ಮೂಡುಬೆಟ್ಟದಲ್ಲಿ ಸೂರ್ಯನಾರಾಯಣ ಸ್ವಾಮಿ ಮೂಡಿದ್ದು ಒಬ್ಬಳು ವಿನಾ ಉಳಿದೆಲ್ಲರಿಗೆ ತಿಳಿದು ಮಿರಿಲೋಕಕ್ಕೆ ಹೋದರು. ಒಬ್ಬಳಿಗೆ ಮಾತ್ರ ಆಟದ ಹುಮ್ಮಸ್ಸಿನಲ್ಲಿ ಸೂರ್ಯ ಮೂಡಿದ್ದು ತಿಳಿಯಲಿಲ್ಲವಾಗಿ ಎಚ್ಚರವಾಗಿ ನೋಡಿದಳು. ವಾರಿಗೆ ದೇವರೆಲ್ಲ ಮಿರಿಲೋಕಕ್ಕೆ ಹೋಗಿ ಇವಳೊಬ್ಬಳೇ ಇಲ್ಲಿ ಉಳಿದಳು. ಹಾರಬೇಕೆಂದರೆ ಆಗಲೇ ನೆಲದಲ್ಲಿ ಬೇರು ಬಿಟ್ಟುದರಿಂದ ಹಾರಲಾಗಲಿಲ್ಲ.

ಆಮ್ಯಾಲೆ ನಮಶ್ಶಿವಾಯಸ್ವಾಮಿ ಭೂಲೋಕದಲ್ಲಿ ಬೇರು ಬಿಟ್ಟವಳಿಗಾಗಿ ಮಳೆರಾಯನ ಕಳಿಸಿ ಮಳೇ ಸುರಿಸಿದ. ಸದರಿ ದೇವತೆಯೇ ಮರದೇವತೆಯಾಗಿ ಎಲೆ ಹಸಿರೇರಿ ಪುಷ್ಪವತಿಯಾಗಿ ಫಲವಂತಿಯಾದಳು. ಆಗ ಮಾಯಾಂಗನೆ ಸದರಿ ಮರದ ಬಳಿಗೆ ಹೋಗಿ ನನಗೂ ಫಲವಂತಿಯಾಗುವ ಗುಟ್ಟು ಹೇಳಿಕೋಡೇ ಎಂದು ಕೇಳಿ ಪಡೆದಳು. ಅದರಿಂದ ತಾಯಿ ಭೂಮಿಯ ತುಂಬ ಚೌರ್ಯಾಂಸಿ ಲಕ್ಷ ಜೀವರಾಶಿಯ ಹೆತ್ತು, ಭೂಲೋಕವ ತುಂಬಿದಳು. ಅದರಲ್ಲಿ ಕೆಲವರು ಚಂದ್ರನ ಒಕ್ಕಲಾದರು. ಉಳಿದವರು ಸೂರ್ಯನ ಒಕ್ಕಲಾದರು. ಚಂದ್ರನ ಒಕ್ಕಲು ಮೂರೇಳು ಏಳು ಕಲೆಗಳ ಸೃಷ್ಟಿ ಮಾಡಿ ನಮಶ್ಶಿವಾಯ ದೇವರ ಗೆಳೆತನ ಮಾಡಿ ಮಿರಿಲೋಕ ಸೇರುವರು. ಸೂರ್ಯನ ಒಕ್ಕಲು ಒಂದಕ್ಕೆ ಎಂಟು, ಎಂಟಕ್ಕೆಂಟು ಒಟ್ಟು ಅರವತ್ತನಾಕು ವಿದ್ಯೆಗಳ ಸೃಷ್ಟಿ ಮಾಡಿ, ಎದುರಾದವರ ತುಳಿದು, ಬಾಗಿದವರನೊದ್ದು ಲೋಕವನಾಳುವರು. ಮರದೇವತೆಯ ಕಂಡು ಅಮ್ಮ ಪುಷ್ಪವತಿ ಫಲವಂತಿಯಾಗದಿದ್ದರೆ ನಿನ್ನ ಮುಂದೆ ನಾನೂ ಕೂರುತ್ತಿರಲಿಲ್ಲ, ನನ್ನ ಮುಂದೆ ನೀವೂ ಇರುತ್ತಿರಲಿಲ್ಲ.

ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ.”