ಎರಡನೆಯ ದಿನ ಯಾತ್ರಿಕರ ತಂಡ ಇನ್ನಷ್ಟು ಉತ್ಸಾಹದಿಂದ ತಾವರೆಕೆರೆಗೆ ತಲುಪಿತು. ಇದರಲ್ಲಿ ಹಿಂದಿನ ಹಟ್ಟಿಯ ಇನ್ನಿಬ್ಬರು ಯಾತ್ರಿಕರು ಸೇರಿಕೊಂಡಿದ್ದರು. ಈ ದಿನ ಮಧ್ಯಾಹ್ನ ಗೌರಿ ಉದರಶೂಲೆಯಿಂದ ಸ್ವಲ್ಪ ಸಂಕಟಪಟ್ಟಳಾದರೂ ಆ ಬಗ್ಗೆ ಯಾರೆದರಿಗೂ ಬಾಯಿ ಬಿಡಲಿಲ್ಲ. ಸಂಜೆಯ ಸಮಯ ಈ ಹಟ್ಟಿಗೆ ಬಂದಾಗ ಸುಸ್ತಾಗಿ ಪಾದಗಳು ಬಾತುಕೊಂಡಿದ್ದವು. ದಿನವಿಡೀ ನಡೆದು ಮಾನಸಿಕವಾಗಿ ಸೋತಿದ್ದಳಲ್ಲದೇ ಮಧ್ಯಾಹ್ನ ಉದರಶೂಲೆಯಿಂದ ಊಟ ಮಾಡಿರಲಿಲ್ಲವಾಗಿ ದೇಹ ದುರ್ಬಲವಾಗಿತ್ತು. ಯಥಾಪ್ರಕಾರ ಈ ಹಟ್ಟಿಯಲ್ಲೂ ಹಿಂದಿನಂತೆಯೇ ಅತಿಥಿ ಸತ್ಕಾರ ಸಿಕ್ಕಿತು.
ಈ ಹಟ್ಟಿಯ ಮಂಟಪ ಹಿಂದಿನ ಹಟ್ಟಿಯ ಮಂಟಪಕ್ಕಿಂತ ಚಿಕ್ಕದು. ಇದರಲ್ಲಿ ಒಂದು ಒಲೆಯಿದ್ದು ಅದರ ಮೇಲೊಂದು ತುಂಬಿದ ಹಂಡೆಯಿತ್ತು. ಹೋದ ಕೂಡಲೇ ಗಂಗ ನೀರು ಕಾಯಿಸಲು ಕೂತ. ಹೆಂಗಸರು ಒಳಗೆ ಮಲಗಿ, ಗಂಡಸರು ಹೊರಗೆ ಮಲಗುವ ವ್ಯವಸ್ಥೆಯಿತ್ತು. ಆದರೆ ಇಲ್ಲಿಯೂ ಹಟ್ಟಿಯ ಹೆಂಗಸರು ಗೌರಿಯನ್ನು ತಮ್ಮ ಬಿಡದಿಗೆ ಕರೆದೊಯ್ದು ಆರೈಕೆ ಮಾಡಿ ಉಣಿಸಿ ಕಥೆಯ ಸಮಯಕ್ಕೆ ಕರೆತಂದರು.
ಬೊಂತೆಯ ಮಾತ್ರ ಹಗುರವಾಗಿದ್ದ. ತನ್ನ ತಪ್ಪಿಲ್ಲದಿದ್ದರೂ ವಾಸಂತಿ, ಅವಳ ತಂದೆ, ಮತ್ತು ಮಗುವನ್ನ ಸೈನಿಕರು ಅಮಾನುಷವಾಗಿ ಕೊಂದ ಸುದ್ದಿ ತಿಳಿದರೆ ಯುವರಾಜರು ತನ್ನನ್ನ ಕ್ಷಮಿಸುವುದಿಲ್ಲ ಎಂದು ಗೊತ್ತಿತ್ತು. ಕನಕಪುರಿಯಲ್ಲಾದರೂ ಎಲ್ಲರ ಕಣ್ಣು ತಪ್ಪಿಸಿ ಎಷ್ಟು ದಿನ ಇರಲಾಗುತ್ತಿತ್ತು? ಒಂದಿಲ್ಲೊಂದು ದಿನ ಮಹಾರಾಜನಿಗೆ ಗೊತ್ತಾಗಿ ಅವನು ತನ್ನನ್ನು ಮುಗಿಸದೆ ಬಿಡುತ್ತಿರಲಿಲ್ಲ. ಸಧ್ಯ ತಾನು ಕನಕಪುರಿಯಿದ ದೂರ ಬಂದದ್ದು ಶಿವಾಪುರದಮ್ಮನ ದಯೆ ಎಂದು ತಿಳಿದು ಸಮಾಧಾನದಿಂದ ಇದ್ದ. ಆದರೂ ವಾಸಂತಿಯ ಮನೆ ತೋರಿಸಿ ತಾನು ಯುವರಾಜನಿಗೆ ಅನ್ಯಾಯ ಮಾಡಿದೆನೆಂದು ಪಶ್ಚಾತ್ತಾಪವಾಗುತ್ತಿತ್ತು. ರಾಜಕುಮಾರಿಯ ಸೇವೆ ಮಾಡುವುದರ ಮೂಲಕ ಆ ಪಾಪ ತೊಳೆದುಕೊಳ್ಳಬೇಕೆಂದಿದ್ದನು.
ಆ ದಿನ ಬೆಳಿಗ್ಗೆ ಪಯಣವಾಗುವ ಮೊದಲು ಬೊಂತೆಯ ಓಡಿಬಂದು ಗೌರಿಗೆ ನಮಸ್ಕರಿಸಿ ಹಲ್ಕಿರಿದಾಗ ಇವನನ್ನ ಈ ಮುಂಚೆ ಅಷ್ಟಾಗಿ ನೋಡಿಲ್ಲದ ಗೌರಿಗೆ ತಂದೆಯ ಬಂಟ ಬಂದನೆಂದು ಭಯವಾಯಿತು. ಆ ಮೇಲೆ ತನ್ನ ಹಂಕಾರ ಹೂಂಕಾರ ಕೈಬಾಯಿ ಸನ್ನೆಗಳಿಂದ ತಾನು ಬೊಂತೆಯನೆಂದೂ ಯುವರಾಜ ಕಳಿಸಿದನೆಂದೂ ಹೇಳಿದಾಗ ಮನಸ್ಸು ಹಗುರವಾಯಿತು. ತಕ್ಷಣ ಅವನನ್ನು ಪ್ರತ್ಯೇಕ ಕರೆದು ತಾನು ರಾಜಕುಮಾರಿಯೆಂದು ಯಾರಿಗೂ ಹೇಳಕೂಡದೆಂದು, ಕೇಳಿದರೆ ಬಿಳಿಗಿರಿಯವಳೆಂದು ಹೇಳಲು ತಾಕೀತು ಮಾಡಿದಳು. ಯಾತ್ರಿಕರು ಪ್ರಯಾಣ ಸುರುಮಾಡಿದ್ದರು.
ಈ ಹಟ್ಟಿಯಲ್ಲಿ ಕಥೆ ಕೇಳಲು ಹೆಚ್ಚು ಜನ ಸೇರಿದ್ದರು. ಗಂಗ ಮತ್ತು ಗುಣದಮ್ಮ ಇನ್ನಷ್ಟು ಹುರುಪಿನಿಂದ ಎರಡನೆಯ ಕಥೆ ಸುರು ಮಾಡಿದರು:
ಈ ಹಟ್ಟಿಯಲ್ಲಿ ಕಥೆ ಕೇಳಲು ಹೆಚು ಜನ ಸೇರಿದ್ದರು. ಗಂಗ ಮತ್ತು ಗುಣದಮ್ಮ ಇನ್ನಷ್ಟು ಹುರುಪಿನಿಂದ ಎರಡನೆಯ ಕಥೆ ಸುರು ಮಾಡಿದರು:
ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಕಾಸುವ ಕಮ್ಮಾರ ಮೋನಪ್ಪನಿದ್ದ. ಕಬ್ಬಿಣ ಕಾಸಿ ರೈತರಿಗೆ ರೆಂಟಿಕುಂಟಿ ಕುಳ ಕುರುಪಿ ಕುಡಗೋಲು ಮಾಡಿಕೊಡುತ್ತಿದ್ದ. ಆ ವರ್ಷ ಇದ್ದಿಲು ಸಿಗಲಿಲ್ಲ.
ರೈತರಿಗೇನಪ್ಪ ಹೇಳೋದು?
ಇದ್ದೊಂದು ಮರದ ತುಂಡು ಹಾಕಿ ತಿದಿ ಊದಿದ.
ಕಬ್ಬಿಣ ಕಾಯಲಿಲ್ಲ.
ಕಬ್ಬಿಣ ಕಾಯದಿದ್ದರೆ ರೈತ ಗೇಯೋದಿಲ್ಲ.
ರೈತ ಗೇಯದಿದ್ದರೆ ಕಾಳು ಧಾನ್ಯ ಆಹಾರವಿಲ್ಲ. ಹುಲ್ಲು ಮೇವಿಲ್ಲ.
ರೈತರು ಸಾಯ್ತಾರೆ, ಜನ ದನಕರು ಸಾಯ್ತಾವೆ. ಹೆಂಗ ಮಾಡೋದು?
ಆಗ ಅವನಿಗೆ ನೆನಪಾದಳು ನೋಡು! ಯಾರು?
ಕುಂತನಿಗೆ ಕೋಲಾದಾಳು.
ಮುಳುಗೋನಿಗೆ ಹುಲ್ಲೆಸಳಾದಾಳು.
ಸಾವಿರದೆಂಟು ಹೆಸರುಳ್ಳೋಳು.
ಯಾರು ಹೇಳು?
ಅಮ್ಮ! ತಾಯಿ! ಶಿವಾಪುರದಮ್ಮ! ಜಗದಂಬೆ!
ಮೋನಪ್ಪ ಏನು ಮಾಡಿದ?
ಅಮ್ಮನ ಸಾವಿರದೆಂಟು ಹೆಸರುಗಳನ್ನ ಸಾವಿರದೆಂಟು ಸಲ ಹೇಳಿ ತಿದಿ ಊದಿದ. ಗಳಿಗೆ ಹೊತ್ತಾಗಿ ನೋಡ್ತಾನೆ: ಒಲೆಯಲ್ಲಿಟ್ಟ ಕೂಡಲೇ ಕಬ್ಬಿಣ ಕಾಯುತ್ತಿದೆ! ಒಂದೇಟಿಗೇ ರೆಂಟಿ ಕುಂಟಿ ಕುಳ, ಕುರುಪಿ ಕುಡುಗೋಲಾಗ್ತಿವೆ!
ಇದು ನನ್ನ ಕೆಲಸ ಅಲ್ಲ!
ತಿದಿಗೆ ಕೈ ಮುಗಿದು ಕೇಳಿದ:
‘ಕೇಳೋವಂಥಾ ಒಂದು ಮಾತಿದೆ. ಹೆದರಿಕೊಂಡು ಕೇಳಲೋ?
ಹೆದರದೇ ಕೇಳಲೋ?’
ತಿದಿ ಮಾತಾಡಲಿಲ್ಲ.
“ನನಗೆ ಬೆಂಕಿಯಂಥ ಒಂದು ಸತ್ಯ ಹೊಳೆದಿದೆ.
ಅದನ್ನು ಜಗತ್ತಿಗೆ ಸಾರಲೊ? ಬಾಯಿ ಮುಚ್ಚಿಕೊಂಡಿರಲೋ?”
ತಿದಿ ಮಾತಾಡಲಿಲ್ಲ.
ಅದನ್ನೇ ಮನನ ಮಾಡುತ್ತ ಮೋನಪ್ಪಮುಂದೆ ನಡೆದ.
ಒಂದು ಹಟ್ಟಿಯಲ್ಲಿ ಸೀಮೆ ಬುದ್ದಿವಂತರು ವಾದ ಮಾಡುತ್ತಿದ್ದರು.
“ಜಗತ್ತಿನ ಚರಾಚರ ಮುಂದುವರಿಯುವದು ಯಾರಿಂದ!?”
“ಸೂರ್ಯನಿಂದ !”
ಅಲ್ಲ ತಗಿ ಎಂದರು ಬುದ್ದಿವಂತರು.
“ಮಳೆರಾಯನಿಂದ!”
ಅಲ್ಲ ತಗಿಯೆಂದರು ಮಾನವಂತರು.
ಉಳಿದವರೆಲ್ಲ ಎಂತೆಂಥದೋ ಉತ್ತರ ಒದರಿ ಅಲ್ಲ ತಗಿ ಅನ್ನಿಸಿಕೊಂಡು ಹರಳೆಣ್ಣೆ ಕುಡಿದು ಕೂತರು.
ಅಲ್ಲಿಗೆ ಹೋದನು ಮೋನಪ್ಪ.
ಒಬ್ಬಳು ಹೊಳೆವ ಕಣ್ಣಿನ ಹೆಂಗಸು ಕೇಳಿದಳು:
“ಏನಪ್ಪ ಮೋನಪ್ಪ, ಜಗತ್ತಿನ ಚರಾಚರ ಮುಂದುವರಿಯುವುದು ಯಾರಿಂದ ನೀ ಹೇಳಪ್ಪ.”
ಹೇಳುವಂಥಾ ಒಂದು ಮಾತಿದೆ. ಹೆದರಿಕೊಂಡು ಹೇಳಲೋ
ಹೆದರದೆ ಹೇಳಲೋ?
“ಹೆದರದೆ ಹೇಳು.”
ಭೂಮಿಯ ಚರಾಚರ ಮುಂದುವರಿಯುವುದು ಅಮ್ಮನಿಂದ: ತಾಯಿಯಿಂದ, “ತಂದೆಯಿಲ್ಲದೆ ತಾಯಿಗೆ ಬೆಲೆಯುಂಟೇನೊ ಹುಚ್ಚಾ?”
ತಾಯಿಗೆ, ಸ್ವಾರ್ಥವಿಲ್ಲ, ಅಹಂಕಾರವಿಲ್ಲ, ಪಕ್ಷಪಾತವಿಲ್ಲ. ತಾಯಿ ಗಾಳಿ ನೀರಿನ ಹಾಗೆ ಒಂದು ವಸ್ತು. ಹೆತ್ತುದೆಲ್ಲವನ್ನೂ ಪ್ರೀತಿಸುತ್ತ, ಬೆಳೆಸುತ್ತ ಹಿತಕಾರಿಯಾಗಿರುತ್ತಾಳೆ. ಮಕ್ಕಳನ್ನು ಬಡಿದಾಟಕ್ಕೆ ಬಿಡುವುದಿಲ್ಲ. ಬದುಕಿರಿ ಎನ್ನುತ್ತಾಳೆ. ಬದುಕಿಸುತ್ತಾಳೆ.
“ತಂದೆಗೂ ಇವೆಲ್ಲ ಗುಣಗಳಿವೆ.”
ಇಲ್ಲ. ಅವನಿಗೆ ಅಹಂಕಾರದ ಸ್ವಾರ್ಥವಿದೆ. ಮಗನ ಹುಟ್ಟಿಸಿದರೂ ಅಹಂಕಾರ, ದೊಡ್ಡವನನ್ನಾಗಿ ಮಾಡಿದರೂ ಅಹಂಕಾರ, ಮಗನಿಗೆ ಕೀರ್ತಿ ಬಂದರೂ ಅಹಂಕಾರ. ತಂದೆಗೆ ಅಧಿಕಾರ ಬೇಕು. ಕೀರ್ತಿ ಬಲ ಬೇಕು.
ತಾಯಿ ಮಕ್ಕಳಿಗೆ ಕತೆ ಹೇಳುತ್ತಾಳೆ. ಕತೆಗಳಿಂದ ನೆನಪುಗಳನ್ನ ಕಾಪಾಡಿಕೊಡುತ್ತ ಭವಿಷ್ಯವನ್ನು ತಿದ್ದುತ್ತಾಳೆ.
ಕಾಲವನ್ನ ತುಂಡು ಮಾಡುವುದಿಲ್ಲ; ಅಖಂಡವಾಗಿಡುತ್ತಾಳೆ.
ಕಾಲವನ್ನು ನೆನಪುಗಳಿಂದ ಬಗ್ಗಿಸಿ ಅದನ್ನ ವರ್ತುಲ ಮಾಡುತ್ತಾಳೆ.
ತಂದೆ ಮಕ್ಕಳಿಗೆ ಚರಿತ್ರೆ ಕಲಿಸುತ್ತಾನೆ. ಕಾಲವನ್ನು ತುಂಡು ಮಾಡಿ ಭೂತ, ವರ್ತಮಾನ, ಭವಿಷ್ಯವೆನ್ನುತ್ತಾನೆ. ಚರಿತ್ರೆ ಮಾಡೆಂದು ಮಗನಿಗೆ ಹೇಳುತ್ತಾನೆ. ಕಾಲವನ್ನ ಲಂಬವಾಗಿಸಿ ಏರುತ್ತಾನೆ. ಏರಿದವನು ಮೂಲಕ್ಕೆ ಬರದೆ ಅಲ್ಲೆಲ್ಲೋ ಮುಗಿಯುತ್ತಾನೆ. ಅವನಿಗೆ ಮುಕ್ತಿ ಇಲ್ಲ. ಅಂಥ ತಾಯಿ ಯಾರು! ಎಲ್ಲಿದ್ದಾಳೆ?
ಪ್ರಪಂಚದಲ್ಲಿರೋ ತಾಯಿ ಒಬ್ಬಳೇ, ಶಿವಾಪುರದಮ್ಮ
ಭಲೇ ಎಂದರು ಎಲ್ಲರೂ. ಒಂದು ಕಡಿಮೆ ಇಪ್ಪತ್ತು ಸಲ ಹೊಗಳಿ ಮಾನಕ್ಕೆ ಸನ್ಮಾನ ಮಾಡಿ, ಕೈತುಂಬ ಆಯಾರು ನೀಡಿ ಕಳಿಸಿದರೆಂಬಲ್ಲಿಗೆ
ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ”
Leave A Comment