ಯಾತ್ರಿಕರು ಮಾರನೇ ಬೆಳಿಗ್ಗೆ ನವಿಲುತೀರ್ಥಕ್ಕೆ ಪಯಣವಾದರು. ರಾಜಭಟರ ಉಪಟಳ ಇಷ್ಟಕ್ಕೆ ಮುಗಿದೀತೆಂಬ ಭರವಸೆ ಯಾತ್ರಿಕರಿಗಿರಲಿಲ್ಲ. ಯಾತ್ರಿಕರ ಪೈಕಿ ರಾಜಭಟರಿಗೆ ಅನುಮಾನ ಬರುವುದು ಗಂಗ ಮತ್ತು ಗೌರಿಯರ ಬಗ್ಗೆ ಮಾತ್ರ. ಆದ್ದರಿಂದ ಇಕ್ಕಟ್ಟಿನ ಪ್ರಸಂಗ ಬಂದರೆ ಏನು ಮಾಡುವುದು? ಎಂಬ ಬಗ್ಗೆ ಇಬ್ಬರೂ ಮಾತಾಡಿಕೊಳ್ಳುವುದು ಒಳ್ಳೆಯದೆಂದು ಗಂಗ ತೀರ್ಮಾನಿಸಿದ. ಮಧ್ಯಾಹ್ನ ದಾರಿಯಲ್ಲಿ ಊಟವಾದ ಮೇಲೆ ಗುಣದಮ್ಮ ಮರದ ನೆರಳಿನಲ್ಲಿ ತೂಕಡಿಸುತ್ತಿದ್ದಳು. ಬೊಂತೆಯ ಗೌರಿಯನ್ನು ಜೊತೆ ಕರೆದುಕೊಂಡು ಗಂಗ ಇನ್ನೊಂದು ಮರದಡಿ ಕೂತುಕೊಂಡು ಗೌರಿಗೆ ಹೇಳಿದ.

“ತಂಗೀ ಹಿಂಗ ಕೇಳ್ತೀನಂತ ಬ್ಯಾಸರ ಮಾಡಕೋಬ್ಯಾಡ. ನೀನು ರಾಜಕುಮಾರಿ ಇರಬೇಕಂತ ನಮಗ ಸಂಶೇ ಐತಿ. ಗುಣದಮ್ಮಗೂ ಐತಿ. ಖರೆ ಏನು? ಅಂಬೂದನ್ನ ಒಂದು ಸಲ ಹೇಳಿಬಿಡು.”

“ಗುಣದಮ್ಮ ಮತ್ತು ನಿನ್ನನ್ನ ನಂಬಿ ನಿಮ್ಮ ಜೊತೆ ಬಂದಿದೀನಿ. ಬರೋವಾಗ ನನ್ನಣ್ನನಿಗೆ ಹೇಳಿದ್ದೀನಿ. ನಾನು ರಾಜಕುಮಾರಿ ಹೌದು. ಈಗ ನೀವಿಬ್ಬರೂ ನನ್ನನ್ನ ಶಿವಾಪುರದ ತನಕ ಕರೆದುಕೊಂಡು ಹೋಗಿ ಶಿವಪಾದನ ಉಡೀಗೆ ಹಾಕೊದು ನಿಮ್ಮ ಜವಾಬ್ದಾರಿ”

ತಾನು ಊಹಿಸಿದ್ದು ನಿಜವಾದುದಕ್ಕೆ ಗಂಗನ ಎದೆ ಧಸಕ್ಕನೆ ಕುಸಿಯಿತು.

‘ಅಣ್ಣನಿಗೆ ಹೇಳಿ ಬಂದಿದ್ದಾಳೆ, ನಿಜ; ಆದರೆ ಬುದ್ದಿಬಲಿಯದ ಎಳೀಕೂಸನ್ನ ಈ ರೀತಿ ಬೆಣ್ಣಿಗೆ ಕಟ್ಟಿಕೊಂಡು ಬರೋದು ದೊಡ್ಡ ಜವಾಬ್ದಾರಿ ಅಲ್ಲವೇ? ಕೂಸಿಗೆ ತಿಳಿಯಲಿಲ್ಲ ಅಂದರೆ ನಿಮಗೂ ತಿಳಿಯಬಾರದೇ? ಎಂದು ಜನ ಕೇಳಿದರೆ ಉತ್ತರ ಕೋಡಬೇಕಾದವರು ನಾವಲ್ಲವೆ?’

ಬಹಳ ಹೊತ್ತು ಗಂಗ ಚಿಂತೆಯಲ್ಲಿ ಮುಳುಗಿ ಮಾತಾಡಲಿಲ್ಲ. ಇದನ್ನು ಗುಣದಮ್ಮನ ಗಮನಕ್ಕೂ ತರುವುದು ಒಳ್ಳೆಯದೆಂದು ತೀರ್ಮಾನಿಸಿದ ಆದರೆ ಗೌರಿಗೇನು ಹೇಳುವುದು! ಗೌರಿ ಇನ್ನೊಮ್ಮೆ ಎಚ್ಚರ ಕೊಡುವ ದಾಟಿಯಲ್ಲಿ ಹೇಳಿದಳು:

“ನೀವೇನಾದರೂ ನಡುದಾರಿಯಲ್ಲಿ ನನ್ನ ಕೈ ಬಿಟ್ಟಿರೋ ನಾನು ಆತ್ಮಹತ್ಯೆ ಮಾಡಿಕೊಳ್ತಿನಿ. ಆ ಕರ್ಮ ನಿಮಗೆ ಕಟ್ಟಿಟ್ಟದ್ದು.”

ಗಂಗ ಆಘಾತದಿಂದ ತತ್ತರಿಸಿ ಹೋದ. ಒಂದೇ ದೈರ್ಯವೆಂದರೆ ಈ ತಪ್ಪಿನಲ್ಲಿ ನಮಗಿಂತ ಅವಳ ಅಣ್ಣನ ಪಾಲು ಹೆಚ್ಚಾಗಿದೆ. ಜೊತೆಗೊಬ್ಬ ಸೇವಕನನ್ನೂ ಕಳಿಸಿದ್ದಾನೆ. ಇಂಥ ಪುಟ್ಟ ಹುಡುಗಿ ಅರಮನೆ ಬಿಟ್ಟು ಬರೋದಕ್ಕೆ ಏನೇನು ಕಾರಣಗಳಿವೆಯೋ! ‘ಮಲತಾಯಿ ಇದ್ದಿರಬೌದು’ ಎಂದು ಸಮರ್ಥನೆ ಮಾಡಿಕೊಂಡು ತನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಿದ್ದ ಗೌರಿಗೆ

“ಉಂಗುರ ಬಿಚ್ಚಿ ಇಲ್ಲಿ ಕೊಡು” ಅಂದ

ಗೌರಿ ದೂಸರಾ ಮಾತಿಲ್ಲದೆ ಉಂಗುರ ಬಿಚ್ಚಿಕೊಟ್ಟಳು. ಬೊಂತೆಯನಾಗಲೇ ಮುಖ ಕಿವುಚಿ ಹುಬ್ಬು ಕಂಟಿಕ್ಕಿದ್ದ. ಅದನ್ನು ಗಮನಿಸಿದ ಗಂಗ ನಿರ್ಲಕ್ಷಿಸಿ ಉಂಗುರವನ್ನು ತನ್ನ ಬೆರಳಿಗಿಟ್ಟುಕೊಂಡು ತನ್ನ ಹಸ್ತವನ್ನು ತಿರುಗಿಸುತ್ತ ನೋಡಿಕೊಂಡ.

ಆದರೆ ಇವತ್ತು ಗೌರಿ ನಗುವ ಸ್ಥಿತಿಯಲ್ಲಿರಲಿಲ್ಲ. ನಿನ್ನೆ ಉದರಶೂಲೆ ಇರಲಿಲ್ಲವಾದ್ದರಿಂದ ಅದು ತಂತಾನೇ ಮಾಯವಾಯಿತೆಂದು ಭಾವಿಸಿದ್ದು ಹುಸಿಯಾಗಿತ್ತು. ಗಂಗನ ಹಾಸ್ಯಗಳಲ್ಲಿ ತನ್ನ ನೋವನ್ನು ಮರೆಯಲು ಪ್ರಯತ್ನ ಮಾಡಿದಳು. ಆದರೆ ಉದರಶೂಲೆ ಇವಳ ಪ್ರಯತ್ನಗಳನ್ನು ಮೀರಿ ಹಿಂಡುತ್ತಿತ್ತು. ಇದು ಅಮ್ಮ ಮಾಡುತ್ತಿರುವ ಸತ್ವಪರೀಕ್ಷೆ . ಇದನ್ನು ಗೆಲ್ಲಲೇಬೇಕೆಂದು ಸಂಕಲ್ಪ ಮಾಡಿದಳು. ಮರುಕ್ಷಣವೇ ತೀವ್ರ ನೋವಿನಿಂದಾಗಿ ‘ಅಯ್ಯೋ’ ಎಂದು ಮೆಲ್ಲಗೆ ನರಳಿ ಹೊಟ್ಟೆ ಹಿಸುಕಿಕೊಂಡಳು. ಗುಣದಮ್ಮ ಅವಳ ಒಳಹೋರಾಟವನ್ನು ಗಮನಿಸಿದಳಾದರೂ ಮೌನ ಪ್ರಾರ್ಥನೆ ಬಿಟ್ಟು ಇನ್ನೇನೂ ಮಾಡಲಾರದವಳಾಗಿದ್ದಳು. ಮಧ್ಯೆ ಒಮ್ಮೆ ಗೌರಿಯ ಹತ್ತಿರ ಹೋಗಿ ಮೆಲ್ಲನೆ “ನಾವೇನಾದರೂ ಸಹಾಯ ಮಾಡುವಂಥಾದ್ದಿದೆಯೇ ಕೂಸು?” ಅಂದಳು “ಏನೂ ಇಲ್ಲ, ಹೋಗೋಣ” ಎಂದು ಗೌರಿ ಎದ್ದಳು. ಮತ್ತೆ ಹೊಟ್ಟೆ ಹಿಡಿದುಕೊಂಡು ಕುಸಿದು ಇನ್ನೂ ಕೂತಿದ್ದ ಗುಣದಮ್ಮನ ಮೇಲೆ ಒರಗಿದಳು. ತಾಯಿಗೆ ಅರಿವಾಯಿತು. ಗೌರಿಯ ಹೊಟ್ಟೆಯ ಮೇಲೆ ತುಸು ಹೊತ್ತು ಕೈಯಾಡಿಸಿದಳು. ಕೈಯಾಡಿಸುತ್ತಲೇ ಮೆಲ್ಲನೇ ಕೇಳಿದಳು.

“ನೀನು ಗರ್ಭಿಣಿಯೇನೆ ಕೂಸು?”

ತಕ್ಷಣ ಗೌರಿ ಎದ್ದು ಕೂತು ಗುಣದಮ್ಮನ ಮುಖವನ್ನೇ ತುಸು ಹೊತ್ತು ನೋಡಿ “ಹೌದು” ಎಂದಳು. ಗುಣದಮ್ಮನ ಚಿಂತೆ ಎರಡು ಪಟ್ಟು ಹೆಚ್ಚಾಯಿತು.

ಆ ದಿನವೆಲ್ಲ ಗೌರಿ ಭಯಾನಕವಾದ ಭಾವ ಕೋಲಾಹಲವನ್ನು ಅನುಭವಿಸಿದ್ದಳು. ಅದರಿಂದ ಪಾರಾಗಲು ಅವಳಿಗೆ ವಿಶ್ರಾಂತಿಯ ಅಗತ್ಯವಿತ್ತು, ಸ್ವಲ್ಪ ಹೊತ್ತು ಮಲಗಿದರೆ ಪುನಃ ತಾನು ಸಾಧಾರಣ ಸ್ಥಿತಿಗೆ ಮರಳಬಹುದೆಂದು ಆಸೆಯಿತ್ತು. ಉದರಶೂಲೆ ಅವಳ ತಾಳ್ಮೆಯ ಪರೀಕ್ಷೆ ಮಾಡುತ್ತಿತ್ತು. ಹೊಟ್ಟೆಯನ್ನು ಅನೇಕ ಸಲ ಹಿಸುಕಿಕೊಂಡು ನೋವಿನಿಂದ ಹಗುರವಾಗಲು ಯತ್ನಿಸಿದಳು.

ದೇವರ ದಯೆಯಿಂದ ಅವರು ಬಂದ ದಾರಿಯಲ್ಲಿ ಈ ದಿನ ಭಂಟರ ಕೋಲಾಹಲ ಇರಲಿಲ್ಲ, ಹೊಲಸು ಧೂಳು ಗಾಳಿ ಎಲ್ಲ ಸೇರಿ ಎರಡು ಸಲ ಕಣ್ಣು ಕಾಣದಂತೆ ಮಾಡಿತ್ತು.

ಮಬ್ಬು ಕವಿಯುತ್ತಿದ್ದುದರಿಂದ ಇನ್ನೂ ದೀಡ ಹರಿದಾರಿ ಮಾರ್ಗ ನಡೆಯಬೇಕೆಂಬ ಚಿಂತೆ ಗುಣದವ್ವನಿಗಿತ್ತು. ಗೊತ್ತಿಲ್ಲದಂತೆ ಹೊಟ್ಟೆ ಹಿಸುಕಿಕೊಂಡಿದ್ದಳಾಗಿ ಒಳಗಿನ ಜೀವಕ್ಕೇನಾದರೂ ತೊಂದರೆಯಾದೀತೇ ಎಂದು ತಿಳಿಯಬೇಕಿತ್ತು. ಬೆಳುದಿಂಗಳ ಜೊತೆಗೆ ತಂಗಾಳಿ ತೀಡಿ ಗೌರಿಗೆ, ಮಧ್ಯಾಹ್ನ ಉಂಡಿರಲಿಲ್ಲವಾದ್ದರಿಂದ ಬಹಳ ಹಸಿವೆಯಾಗಿತ್ತು. ಜೊತೆಗೆ ಬಾಯಾರಿಕೆಯೂ ಆಗಿತ್ತು. ತಾವು ತಂದ ನೀರು ಮುಗಿದುಹೋಗಿತ್ತು. ತಿನ್ನುವುದಕ್ಕೆ ಸಿಕ್ಕಿದಿದ್ದರೂ ಬಾಯಾರಿಕೆಗೆ ಒಂದೆರಡು ಗುಟುಕು ನೀರು ಸಿಕ್ಕಿದ್ದರೂ ಸಾಕಿತ್ತು. ಇಲ್ಲಿ ಕೂತರೆ ನೀರೆಲ್ಲಿಂದ ಬರಬೇಕೆಂದು ತಾನೆ ಮನಸ್ಸು ಮಾಡಿ ಗುಣದಮ್ಮನ ಬಳಿಗೆ ಸರಿದು “ರಾತ್ರಿಯಾಯಿತು, ಹೊರಡೋಣವ ಅಮ್ಮ?” ಎಂದಳು ಕ್ಷಮೆ ಕೇಳುವಂತೆ. ಗುಣದಮ್ಮನಿಗೆ ಸಮಾಧಾನವಾಯಿತು. ಗೌರಿಯ ಗದ್ದ ಹಿಡಿದು “ಆಗಲಿ ಕಂದಾ, ಏಳು” ಎಂದು ಹೇಳುತ್ತಿರುವಲ್ಲಿ ಇಬ್ಬರು ಯಾತ್ರಿಕರು ಅವರಿದ್ದಲ್ಲಿಗೇ ಬಂದು ದಣಿವಾರಿಸಿಕೊಳ್ಳಲು ಕೂತರು.

ಅನತಿದೂರ ಕೂತಿದ್ದವರು ತಮ್ಮೊಂದಿಗೆ ತಂದಿದ್ದ ರೊಟ್ಟಿ ಗಂಟು ಬಿಚ್ಚುತ್ತ “ಶಿವಾಪುರಕ್ಕೆ ಹೊಂಟಿರೇನ್ರೆವ್ವಾ?” ಎಂದರು. ರೊಟ್ಟಿ ಪಲ್ಯ, ಚಟ್ನಿಯ ಕಂಪು ಮೂಗಿಗೆ ತಾಗಿದ್ದೇ ಗೌರಿಯ ಹಸಿವು ಕೆರಳಿತು. ಒಂದು ರೊಟ್ಟಿ ಕೇಳಬೇಕೆಂದೂ ಅಂದುಕೊಂಡಳು. ಆದರೆ ಗುಣದವ್ವ ಹ್ಯಾಗೋ ಏನಂದುಕೊಳ್ಳುವಳೋ ಏನೋ ಎಂದು ಸುಮ್ಮನಾದಳು. ಅಷ್ಟರಲ್ಲಿ ಯಾತ್ರಿಕರಲ್ಲಿದ್ದ ಹೆಣ್ಣುಮಗಳು,

ರೊಟ್ಟಿ ತಿನ್ನೋಣ ಬರ್ರೆಲ್ಲಾ” ಎಂದಳು.

“ನಿಮ್ಮದ್ಯಾವುರು ಎವ್ವ?” ಅಂದಳು ಗುಣದಮ್ಮ

“ಬೆಳ್ಳಿ ತೊರಿಯವರು, ನಿಮ್ಮದ್ಯಾವೂರs ಎವ್ವ?” ಅಂದ ಅವಳ ಜೊತೆಗಿದ್ದ ಹಿರಿಯ,

“ಬಿಳಿಗಿರಿ ನನ್ನಪ್ಪ”

“ಬಾಳ ದೂರದಿಂದ ಬಂದೀರಿ, ನವಿಲು ತೀರ್ಥಕ್ಕ ಹೋಗಾಕ ಎಳೆ ಭಾಳ ಬೇಕು, ಮಂಟಪದಾಗ ಊಟ ಸಿಗಾಕಿಲ್ಲ, ಇಲ್ಲೇ ಒಂದು ರೊಟ್ಟಿ ತಿಂದ ಬಿಡ್ರೆಲ್ಲಾ” ಅಂದ.

“ಕೂಸಿಗೊಂದು ರೊಟ್ಟಿ ಕೊಡು ನನ್ನಪ್ಪ”

ಅಷ್ಟರಲ್ಲಿ ಆ ಹೆಣ್ಣುಗಳು ಎರಡೆರಡು ರೊಟ್ಟಿಗಳ ಮ್ಯಾಲೆ ಪಲ್ಯ, ಚಟ್ನಿ ಖಾರ ಸೌತೆಕಾಯಿಯ ಚೂರು ಇಟ್ಟು ಗೌರಿ, ಗುಣದವ್ವ – ಇಬ್ಬರಿಗೂ ಕೊಟ್ಟು ಗಂಗ, ಬೊಂತೆಯರಿಗೂ ಕೊಟ್ಟಳು. “ಕೂಸಿಗೊಂದು ಹನಿ ನೀರು ಕೊಡು ಎಪ್ಪ” ಅಂದಳು ಗುಣದಮ್ಮ. ಮುದುಕ ತತ್ರಾಣಿ ಕೊಟ್ಟ. ಗುಣದಮ್ಮ ತಾನೇ ಎತ್ತಿ, ಗೌರಿಗೆ ನೀರು ಕುಡಿಸಿದಳು.

ಗೌರಿ ರೊಟ್ಟಿ ಮುರಿದು ತಿನ್ನತೊಡಗಿದಳು. ತನ್ನ ಜೀವಮಾನದಲ್ಲೇ ಇಷ್ಟು ರುಚಿಕರವಾದ ಊಟ ಮಾಡಿರಲಿಲ್ಲವೆನ್ನಿಸಿತು. ಅತಿಯಾಸೆಯಿಂದ ದೊಡ್ಡ ದೊಡ್ಡ ತುತ್ತು ಮುರಿದು ಮೆಲ್ಲುತ್ತ ಮೆಲುಕು ಹಾಕುತ್ತ ಎಲ್ಲರಿಗಿಂತ ಮುಂಚೆ ಮುಗಿಸಿ ಗುಣದಮ್ಮ, ಗಂಗರ ಕಡೆಗೆ ನೋಡಿದಳು. ಅವರಿನ್ನೂ ಅರ್ಧ ಕೂಡ ತಿಂದಿರಲಿಲ್ಲ. ಆಸೆಬುರುಕಿ ಅನ್ನುತ್ತಾರೆಂದು ಗೌರಿ ನಾಚಿಕೊಂಡಳು. ಆದರೂ ಇನ್ನೊಂದು ರೊಟ್ಟಿ ಸಿಕ್ಕಿದ್ದರೆ… ಎಂದುಕೊಂಡಲಾದರೂ ಕೇಳಲಿಲ್ಲ. ಆದರೆ ಯಾತ್ರಿಕ ಹೆಂಗಸು “ಇನ್ನೊಂದು ರೊಟ್ಟಿ ತಗೊಳ್ಳs ಕೂಸs” ಎಂದು ರೊಟ್ಟಿ ಕೊಡಬಂದಳು. ಗೌರಿ ಸಂಕೋಚದಿಂದ ಗುಣದಮ್ಮನ ಮುಖ ನೋಡಿದಳು. ಗುಣದಮ್ಮ “ತಗೊ ಕಂದಾ” ಎಂದೊಡನೆ ಕಸಿದುಕೊಂಡಂತೆ ರೊಟ್ಟಿ ತಗೊಂಡು ಗಪ ಗಪ ತಿನ್ನತೊಡಗಿದಳು.

“ಯಾರs ಎವ್ವಾ ಇದು, ದೊಡ್ಡ ಮನಿತನದ ಹೆಣ್ಣುಮಗಳ್ಹಾಂಗ ಕಾಣತೈತಲ್ಲ ಈ ಕೂಸು?”

– ಎಂದಳು ರೊಟ್ಟಿ ಕೊಟ್ಟ ಹೆಂಗಸು. “ಹೌದ ಬಾ ತಾಯಿ” ಎಂದು ಗುಣದಮ್ಮ, ಅದೊಂದು ದೊಡ್ಡಕತೆ ಎಂಬಂತೆ, ದನಿ ತೆಗೆದು ಹೇಳಿ ಮುಂದೆ ಆ ಮಾತು ಬೆಳೆಸದಂತೆ ಸೂಚನೆ ಕೊಟ್ಟಳು.

ಊಟವಾದ ಮೇಲೆ ಉಳಿದ ರೊಟ್ಟಿ ಗಂಟು ಕಟ್ಟಿಕೊಂಡು, ಬಲಿತ ಬೆಳ್ದಿಂಗಳಲ್ಲಿ ಯಾತ್ರಿಕರು, ನವಿಲುತೀರ್ಥಕ್ಕೆ ಹೊರಟರು. ದಾರಿಯಲ್ಲಿ ಗೌರಿ ಗುಣದಮ್ಮನ ಹತ್ತಿರ ಬಂದು ಕಿವಿಯಲ್ಲಿ ಮಧ್ಯಾಹ್ನ ಹೊಟ್ಟೆ ಹಿಸುಕಿಕೊಂಡದ್ದನ್ನು ಹೇಳಿ “ನನಗೆ ಭಯವಾಗ್ತಿದೆ, ಅದಕ್ಕೇನೂ ಆಗೋದಿಲ್ಲ ತಾನೆ?” ಅಂದಳು

“ಹೆದರೋಳು ತಾಯಿ ಆಗಲಾರಳು. ದೈರ್ಯವಾಗಿರು ಮಗಳೇ.”

ಎಂದು ಹೇಳಿ ಗುಣದಮ್ಮ ಗೌರಿಯ ಕೈ ಹಿಡಿದು ಕರೆದುಕೊಂಡು ನಡೆದಳು.

ನವಿಲು ತೀರ್ಥದಲ್ಲಿ ಹೇಳುವ ಕಥೆಯನ್ನು ಗುಣದಮ್ಮ ದಾರಿಯಲ್ಲೇ ಹೇಳಿದಳು:

ಆದಿಕಾಲದಲ್ಲಿ ಉಚ್ಛ ನೀಚ ಜಾತಿಯ ದೇವದಾನವರಲ್ಲಿ ಜಗಳವಾಗಿ ಪಾಪ ಅಧಿಕವಾಯಿತು. ಮಳೆ ಬೆಳೆ ಕಂದಿ, ಲೋಕದ ಮಂದಿಗೆ ಸಂಕಟವಾಗಿ ಸಾಧು ಸತ್ಪುರುಷ ಸಜ್ಜನ ಮಂದಿಗೆ ಸಂಕಟವಾಗಿ ರುಷಿ ಮುನಿಗಳ ಜಪತಪಕ್ಕೆ ಕಂಟಕವಾಯಿತು. ಭೂಮಿತಾಯಿ ಪಾರ್ವತಿಯ ಬಳಿಗೆ ಹೋಗಿ ಕಾಪಾಡಬೇಕೆಂದು ಸೆರಗೊಡ್ಡಿ ಬೇಡಿಕೊಂಡಳು. ಕೂಡಲೇ ಪಾರ್ವತಿಯು ತನ್ನ ಹಣೆ ಬೆವರಿನ ಹನಿಯೊಂದನ್ನು ಭೂಮಿಯ ಮ್ಯಾಲೆ ಚೆಲ್ಲಿದಳು. ಅದೇ ಸ್ತ್ರೀಯಾಗಿ ದೊಡ್ಡ ದೇವರ ಮನೆಯಲ್ಲಿ ಹುಟ್ಟಿ ಕರಿಮಾಯಿಯಾದಳು.

ಆಗ ಬಿರುಬೇಸಿಗೆ, ಬಿಸಿಲಿನ ಧಗೆ ತಡೆಯಲಾರದೆ ಬಾಯಾರಿಕೆಯಾಗಿ, ಕರಿಮಾಯಿ ನೀರಿಗಾಗಿ ಹುಡುಕುತ್ತ ಹೊರಟಳು. ಅಷ್ಟರಲ್ಲಿ ಪಾತಾಳ ಬಾವಿಯಿಂದ “ಅಯ್ಯೋ ಕಾಪಾಡಿರೋ” ಎಂಬ ದನಿ ಕೇಳಿಸಿತು. ಹೋಗಿ ನೋಡಿದರೆ ಆಳದಲ್ಲೊಬ್ಬ ಶೂದ್ರಾತಿಶೂದ್ರ ದಾನವನು ದೇವತೆಗಳಿಗೆ ಹೆದರಿ ಓಡಿಹೋಗುವಾಗ ಕಾಲೆಡವಿ ಪಾತಾಳ ಬಾವಿಯಲ್ಲಿ ಬಿದ್ದಿದ್ದ. ಕಾಪಾಡಿರೆಂದು ಎದೆ ಎದೆ ಬಡಿದುಕೊಳ್ಳುತ್ತಿದ್ದ.

ಅವನನ್ನು ಹ್ಯಾಗೆ ಕಾಪಾಡೋದು? ಸುತ್ತ ಯಾರಿಲ್ಲದನ್ನು ನೋಡಿ ಉಟ್ಟದಟ್ಟಿಯನ್ನೇ ಬಾವಿಯಲ್ಲಿ ಇಳಿಬಿಟ್ಟು: “ಕಣ್ಣು ಮುಚ್ಚಿ ದಟ್ಟೀ ಹಿಡಿ. ನಾನು ತಗಿ ಅಂಬೋತನಕ ಕಣ್ಣು ತೆರೆಯಬೇಡ. ಕಣ್ಣು ತೆರೆದರೆ ಸಿಗಿದು ಹಾಕೇನೆಂದು ಹೇಳಿದಳು. ಅವನು ಬಿಟ್ಟ ದಟ್ಟಿಯ ಆ ತುದಿ ಹಿಡಿದ. ಈ ತುದಿಯಿಂದ ಇವಳು ಎಳೆದಳು.

ಮ್ಯಾಲೆ ಬಂದು ಕಣ್ಣು ತೆಗೆದರೆ ಎದುರಿಗೆ ಬೆತ್ತಲೆ ಕರಿಮಾಯಿ! ದಾನವನ ಚಿತ್ತ ಚಂಚಲವಾಗಿ ಕಣ್ಣಗಲ ಮಾಡಿದ. ಕೂಡಲೇ ಕರಿಮಾಯಿ ತನ್ನ ಕಠಾರಿಯಿಂದ ನೆಲದ ಮೇಲೆ ಏಳುಗೆರೆ ಕೊರೆದು ದಾಟಿ ಬಂದರೆ ಮೀಟಿ ಒಗೆದೇನೆಂಡಳು. ಆ ದಾನವನು ಕೊರೆದ ಏಳೂಗೆರೆಗಳಲ್ಲಿ ತನ್ನ ರಕ್ತ ಹರಿಸಿ, ಗೆರೆಗಳಲ್ಲಿಯ ರಕ್ತ ನದಿಯಾಗಿ ಹರಿಯುವುದರೊಳಗೆ ಇವಳು ದಟ್ಟಿಯುಟ್ಟು ವಯಸ್ಸಿಗೆ ಬಂದಿದ್ದಳು. ಏಳು ನದಿ ದಾಟಿ ಬಂದು ಕರಿಮಾಯಿಯನ್ನು ಒರೆಸಿ ಮದುವೆಯಾದ.

ಶೂದ್ರಾತಿಶೂದ್ರನನ್ನ ಮದುವೆಯಾದುದರಿಂದ ದೊಡ್ಡದೇವರು ಕರಿಮಾಯಿಯನ್ನು ಮನೆಯೊಳಗೆ ಕರಿದುಕೊಳ್ಳಲಿಲ್ಲ. ಕೊನೆಗಿವರು ನವೀಲುತೀರ್ಥದ ಕಾಡಿನಲ್ಲಿ ಬಾಳುವೆ ಮಾಡತೊಡಗಿದರು.

ದಂಪತಿಗಳಿಗೆ ಈಗ ಇಬ್ಬಗೆಯ ಶತ್ರುಗಳು ಹುಟ್ಟಿದರು. ಇತ್ತ ಶೂದ್ರಾತಿಶೂದ್ರನ ಮದುವೆಯಾಗಿ ಕುಲವ ಮೈಲಿಗೆಗೊಳಿಸಿದಳೆಂದು ದೊಡ್ಡ ದೇವರು, ಇತ್ತ ದೊಡ್ಡ ದೇವರ ಮನೆಮಗಳ ಮದುವೆಯಾಗಿ ಕುಲವ ಹೊಲೆಗೆಡಿಸಿದನೆಂದು ಶೂದ್ರರು ಕೋಪಗೊಂಡು ದಂಪತಿಗಳನ್ನು ಸಂಹರಿಸಬೇಕೆಂದು ಇಬ್ಬರೂ ಛಲ ಹಿಡಿದರು. ಆಗ ಕರಿಮಾಯಿ ತುಂಬು ಗರ್ಭಿಣಿ.

ಒಂದು ದಿನ ದೊಡ್ಡ ದೇವರ ಬಳಗವೆಲ್ಲ ಸೇರಿ ಬೇಟೆಗೆ ಬಂದ ಶೂದ್ರಾತಿಶೂದ್ರನನ್ನು ಕೊಂದು ಹಾಕಿದರು. ಸಾಲದ್ದಕ್ಕೆ ಅವನ ಸಂತಾನವನ್ನು ನಾಶಮಾಡಬೇಕೆಂದು ಕರಿಮಾಯಿಯ ಗರ್ಭ ಗುರಿಯಾಗಿ ಹೊರಟರು ಕರಿಮಾಯಿ ಮೂವತ್ತಮೂರು ಕೋಟೆ ದೇವತೆಗಳನ್ನು ಎದುರಿಸಲಾರದೇ, ತುಂಬಿದ ಗರ್ಭ ಹೊತ್ತುಕೊಂಡು ಅಡವಿ ಪಾಲಾದಳು. ತ್ರಿಕಾಲ ಜ್ಞಾನಿಗಳಾದ ದೇವತೆಗಳಿಗೆ ಕರಿಮಾಯಿಯಿರುವ ಟಿಕಾಣಿ ಗೊತ್ತಾಗಿ ಅವಳಿಗೆ ಅನ್ನ ನೀರು ಸಿಕ್ಕದ ಹಾಗೇ ಮಾಡಿದರು. ತಾಯಿ ಕಲ್ಲು ಕುದಿಸಿ, ಮುಳ್ಳು ಬೇಯಿಸಿ ತಿಂದು, ಕಣ್ಣಿರು ಕುಡಿದು ಬದುಕಿದಳು.

ಅಟ್ಟಿಸಿಕೊಂಡು ಬಂದ ದೇವತೆಗಳಿಂದ ಪಾರಾಗಿ ಮಾವಿನ ತೋಪಿನಲ್ಲಿ ಹುದುಗಿಕೊಂಡಿದ್ದಳು. ಜೋತು ಬಿದ್ದ ಮಾವಿನ ಗೊಂಚಲು ನೋಡಿ ಬಯಕೆಯಾಗಿ ಬಾಯಿ ನೀರೂರಿತು. ಅವು ಕೈಗೆ ಎಟುಕುವಂತಿರಲಿಲ್ಲ. ಕಷ್ಟಪಟ್ಟು ಕಲ್ಲಿನ ಮೇಲೆ ಕಲ್ಲು ಪೇರಿಸಿ, ಅದರ ಮೇಲೆ ಹತ್ತಿ ಇನ್ನೇನು ಮಾವಿನ ಗೊಂಚಲು ಸಿಕ್ಕಿತೆಂಬಾಗ “ಕಾಯಿ ಹರಿದೀಯೇ ಹಾದರಗಿತ್ತೆ!” ಎಂದು ದನಿ ಕೇಳಿಸಿತು! ನೋಡಿದರೆ ದೇವತೆಗಳೊಂದು ಕಡೆ ಸಾವಿರ ಬಿಲ್ಲುಬಾಣಗಳಿಂದ ಗರ್ಭಕ್ಕೆ ಗುರಿ ಹಿಡಿದಿದ್ದಾರೆ! ಇನ್ನೊಂದು ಸಾವಿರ ಗದೆ ಹಿಡಿದ ಏಳೇಳು ಭುಜದ ದಾನವರು ಗರ್ಭಕ್ಕೆ ಗುರಿ ಹಿಡಿದಿದ್ದಾರೆ. ಹಾ ಎನ್ನುವುದರೊಳಗೆ ಸಾವಿರ ಬಾಣಗಳು ಸಾವಿರ ಗದೆಗಳು ಕರಿಮಾಯಿಯ ಗರ್ಭಕ್ಕೆ ತಾಗಿ ತಾಯಿ ಕಿಟಾರನೆ ಕಿರಿಚಿಕೊಂಡಳು.

ಕಳಚಿದ ಪಿಂಡವನ್ನು ಹೊಟ್ಟೆಗೆ ಕಟ್ಟಿಕೊಂಡು ಶಿವಾಪುರದಮ್ಮನ ಬಳಿ ಬಂದು,

“ಮಗುವಿನ ಜೀವಾ ಕೋಡುತ್ತಿಯೋ? ನನಗೆ ಸಾಯಂತಿಯೋ?” ಅಂದಳು

ಅದಕ್ಕೆ ಶಿವಪುರದಮ್ಮ ಹೇಳಿದಳು:

“ಹೊಟ್ಟೆಗೆ ಕಟ್ಟಿಕೊಂಡ ಪಿಂಡ ಹಿಂತಿರುಗಿ ಗರ್ಭಸೇರಿ, ಶಿವನೇ ನಿನಗೆ ಮಗನಾಗಿ ಹುಟ್ಟುತ್ತಾನೆ. ತಿರುಗಿ ಹೋಗೇ ಕರಿಮಾಯಿ!”

ಕರಿಮಾಯಿ ನವಿಲುತೀರ್ಥಕ್ಕೆ ಹಿಂದಿರುಗಿ ಗಂಡುಮಗನ ಹೆತ್ತಳು. ದೊಡ್ಡ ದೇವರು ಪಂಚಾತಿಕೆ ಮಾಡಿ ಹಾದರದ ತಾಯಿ, ಮಗನಿಗೆ ಬಹಿಷ್ಕಾರ ಹಾಕಿದರು.

“ಏನಪ್ಪ ನಚಿಕೇತ ದೊಡ್ಡ ದೇವರು ಹೊರಗೆ ಹಾಕಿದ್ದು ಸರಿಯೇನಪ್ಪಾ? ಸರಿ ಹೇಳಿದರೆ ಉಳಿಯುತ್ತಿ, ಸುಳ್ಳು ಹೇಳಿದರೆ ಸುಟ್ಟು ಹೋಗುತ್ತಿ. ಈಗ ಹೇಳಪ್ಪಾ”

ತಾಯಿಗೆ ಸೂತಕವಿಲ್ಲ, ಕಳಂಕವಿಲ್ಲ ಪಾಪವಿಲ್ಲ.

ಕಳಂಕವಿಲ್ಲದ ತಾಯಿಗೆ ಹುಟ್ಟಿದ ಮಗನಿಗೂ ಕಳಂಕವಿಲ್ಲ.

ಕಳಂಕ, ಸೂತಕ, ಮೈಲಿಗೆ ಇರೋದು ದೇವತೆಗಳಿಗೆ.

ಸೂತಕ ಮೈಲಿಗೆ ಕಳಂಕಗಳು ಹೊತ್ತ ಗರ್ಭಕ್ಕಲ್ಲ!

ಗರ್ಭದ ಪಿಂಡಕ್ಕೂ ಸಲ್ಲ.

ಹಾಗಾಂದವರಿಗೆ ಅವೆಲ್ಲವೂ ಉಂಟು ಅದಕ್ಕೆ ಅವರು ನರಕಕ್ಕೆ ಹೋದರು.

ನವಿಲು ತೀರ್ಥದಲ್ಲಿ ಈಗಲೂ ತಾಯಿ ನವಿಲಾಗಿ ನರ್ತಿಸುತ್ತಿದ್ದಾಳೆ. ಮಗ ಹನ್ನೊಂದನೆಯ ಶಿವಪಾದನಾಗಿ ಶಿವಾಪುರವನಾಳಿ ಹಾಡುಲಾವಣಿಯಾಗಿ ಶಿವಾಪುರ ನಾಡಿನಲ್ಲಿದ್ದಾನೆಂಬಲ್ಲಿ

ಇಲ್ಲೀಗೆ ಹರಹರ
ಇಲ್ಲೀಗೆ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ.”