ಏಳನೇ ದಿನ ಯಾತ್ರಿಕರ ತಂಡ ಬೀರನಟ್ಟಿಗೆ ಪಯಣವಾಯಿತು. ಆ ದಿವಸ ಗಂಗ ಭಾರಿ ಸಡಗರದಲ್ಲಿದ್ದ. ಗೌರಿ ಕೊಟ್ಟ ಲಂಗ ದಾವಣಿ ಹಾಕಿಕೊಂಡು ತುಟಿಗೆ ಚದುರಂಗದ ರಸ ಹಚ್ಚಿಕೊಂಡು ರಂಗುರಂಗಾಗಿದ್ದ! ಹಣೆಯ ಮೇಲೆ ಮುಂಗುರುಳು ಬಿಟ್ಟುಕೊಂಡು ಕೂದಲಶೈಲಿಯನ್ನು ಬದಲು ಮಾಡಿಕಂಡಿದ್ದ. ಅವನನ್ನು ನೋಡಿ ಉದರಶೂಲೆಯಲ್ಲೂ ಗೌರಿ ಮನಸಾರೆ ನಕ್ಕಳು. ಗಂಗನ ಕನ್ನೆ ಚಿವುಟಿ ಚೇಷ್ಟ ಮಾಡಿದಳು. ಇದರಿಂದ ಪ್ರೋತ್ಸಾಹಗೊಂಡ ಗಂಗನ ಒನಪು ವಯ್ಯಾರಗಳನ್ನಂತೂ ಹೇಳತೀರದು. ಸಹಜವಾಗಿಯೇ ಸುಂದರವಾಗಿ ಕಾಣುತ್ತಿದ್ದ ಆತ ಈಗ ಒಯ್ಯಾರ ಮಾಡುವುದರ ಮೂಲಕ ಪರಿಚಿತರಲ್ಲದ ದಾರಿಹೋಕರ ಮೇಲೂ ಮಾಯೆ ಚೆಲ್ಲಿದ. ಗುಣದಮ್ಮ ನಕ್ಕಳಾದರೂ ಭಂಟರ ಕೂಡ ಆಡುವುದು ಅಪಾಯಕಾರಿ ಎಂದು ಎಚ್ಚರಿಕೆ ಕೊಡಲು ಮರೆಯಲಿಲ್ಲ.

ಸಂಜೆಯ ತನಕ ಭಂಟರ್ಯಾರೂ ಬರಲಿಲ್ಲ. ಬೀರನಟ್ಟಿ ಇನ್ನೆರಡು ಕೂಗಳತೆ ಇದೆ ಎಂದಾಗ ನಿನ್ನೆ ಕಂಡ ಮೂವರೂ ಭಂಟರು ಬಂದು ಯಾತ್ರಿಕರನ್ನು ಸುತ್ತುವರಿದು ನಿಂತರು. ಗಂಗನನ್ನು ನೋಡಿದ್ದೆ ಕೊನೆಗೆ ಸಿಕ್ಕುಬಿದ್ದಳೆಂದು ತಂತಮ್ಮಲ್ಲಿ ಕಣ್ಣು ಮಿಟುಕಿಸಿ ಮಾತಾಡಿಕೊಂಡರು. ನಾಯಕನಂತೂ ತನ್ನ ಕುದುರೆಯನ್ನ ಗಂಗನ ಸುತ್ತಲೇ ತಿರುಗಿಸುತ್ತ ಕಿವಿಯಿಂದ ಕಿವಿತನಕ ಮಗುಳು ನಗುತ್ತಿದ್ದ. ಬೊಂತೆಯನಿಗೂ ಮೋಜು, ಆದರೆ ಉಳಿದ ಯಾತ್ರಿಕರು ಗಾಬರಿಯಾದರು. ಗುಣದಮ್ಮ ಗೌರಿಯನ್ನು ಅವುಚಿ ಹಿಡಿದುಕೊಂಡಳು.

ಅಷ್ಟರಲ್ಲಿ ನಾಯಕನೇ ಮುಂದಾಗಿ “ಇವಳನ್ನು ಬಿಟ್ಟು ಉಳಿದವರು ತೊಲಗಿರಿ. ಇಲ್ಲದಿದ್ದರೆ ಕೈಕಾಲು ಮುರಿಯುತ್ತೇವೆ ಹುಷಾರ!” ಎಂದ ಕೂಡಲೇ ಯಾತ್ರಿಕರು ಹೆದರಿ ದಾರಿ ಹಿಡಿದರು. ಗುಣದಮ್ಮ ಗೌರಿಯರು ಮಾತ್ರ ಗಂಗನಿಗಾಗಿ ನಿಂತರು. ಕೂಡಲೇ ಬೊಂತೆಯ ಮುಂದೆ ಬಂದು “ನಾನು ನೋಡಿಕೊಳ್ತೇನೆ, ನೀವು ಹೊರಡಿರಿ” ಎಂದು ಸನ್ನೆ ಮಾಡಿದ. ಇವರು ಹೊರಟರು. ಯಾತ್ರಿಕರೆಲ್ಲ ತೋಳಗಳು ಅಟ್ಟಿಸಿಕೊಂಡು ಬರುತ್ತಿವೆಯೆಂಬಂತೆ ಅವಸರ ಮಾಡಿ ಬೀರನಟ್ಟಿ ಹೊಕ್ಕರು.

ಭಂಟರು ಪಕ್ಕದ ಹಟ್ಟಿಯ ಮಂತಪಕ್ಕೆ ಗಂಗನನ್ನು ಕರೆದೊಯ್ದರು. ಅವರಲ್ಲಿಗೆ ತಲುಪಿದಾಗ ರಾತ್ರಿಯಾಗಿತ್ತು. ಭಂಟರಿಗೆ ಗೊತ್ತಾಗದಂತೆ ಬೊಂತೆಯ ಇವರಿದ್ದ ಸ್ಥಳಕ್ಕೆ ಬಂದು ಅಡಗಿದ್ದ. ಇಬ್ಬರೂ ಭಂಟರನ್ನು ಹೊರಗೆ ನಿಲ್ಲಿಸಿ ನಾಯಕ ವಿಚಾರಣೆಗಾಗಿ ಗಂಗನನ್ನು ಮಂಚದ ಮೇಲೆ ತನ್ನೆದುರಿಗೇ ಕೂರಿಸಿಕೊಂಡು ಮುಗುಳು ನಗುತ್ತ ಹುಬ್ಬು ಕುಣಿಸುತ್ತ ಕೇಳಿದ:

ಅವರ ಸಂಭಾಷಣೆ ಹೀಗಿತ್ತು.

“ಈಗೇನಂತೀಯೇ? ರಾಜಕುಮಾರಿ ಸತ್ತಳು ಅಂದಿದ್ದೆಯಲ್ಲ, ಈಗೆಲ್ಲಿಂದ ಬಂದಳು?”

“ಖರೆ ಹೇಳ್ತಿನಿ, ನಾನು ರಾಜಕುಮಾರಿ ಅಲ್ಲ ಶಿವಾ!”

“ಅಲ್ಲಂದರ ಛಲೋ ಆಯಿತಲ್ಲ, ನಾನು ನಿನ್ನನ್ನ ಕೊಲ್ಲೋದಿಲ್ಲ!”

“ಅಂದರೆ ನಾನು ರಾಜಕುಮಾರಿ ಆಗಿದ್ದರ ಕೊಲ್ಲತಿದ್ದೆಯಾ?”

“ಹೌದು, ಹಾಗಂತ ಕನಕಪುರಿ ಮಹಾಪ್ರಭುಗಳು ಅಪ್ಪಣೆ ಕೊಡಿಸ್ಯಾರ!”

ಗಂಗ ಆಘಾತದಿಂದ ತತ್ತರಿಸಿ ಹೋದ

“ಕನಕಪುರಿಯ ಮಹಾರಾಜ ರಾಜಕುಮಾರೀನ್ನ ಕೊಲ್ಲಬೇಕಂದನ? ಅಂದರೆ ತನ್ನ ಮಗಳ ಕೊಲೆ ಮಾಡಂದನ?”

“ಮಗಳೋ, ಅವ್ವನೋ ಅದಕ್ಕೆಲ್ಲಾ ಕೆಡೋವಷ್ಟು ನಮ್ಮ ತಲೆ ಘನವಾದದ್ದಲ್ಲ. ರಾಜಕುಮಾರಿ ಹೊಂಟಾಳ. ಆಕಿ ತಾನs ಸತ್ತರ ಸೈ. ಸಾಯದಿದ್ದರ ಸಾಯಿಸಿ ಬರ್ರೆಲೇ ಅಂದಾರ, ಬಂದಿವಿ. ನೀ ರಾಜಕುಮಾರಿ ಆಗಿದ್ದರೆ ಬೆಳಿಗ್ಗೆ ಕೊಲ್ತೀವಿ. ಆಗದಿದ್ದರೆ ಬೆಳಿಗ್ಗೆ ಬಿಡ್ತೀವಿ ಆಯಿತಲ್ಲ?

“ನಾನು ರಾಜಕುಮಾರಿ ಅಲ್ಲ ಸ್ವಾಮೀ!”

“ಅಲ್ಲಂದರ ಅಲ್ಲಿಗದು ಮುಗೀತಲ್ಲ! ಏ ಗಯ್ಯಾಳಿ ಬಾ ಅಂತೀನಿ, ಬಾ ಎಲಿ ಅಡಿಕಿ ತಿನ್ನೋಣ, ಒಂದೆರಡ ಮಾತೋಡೋಣ, ಕೂಡಿ ಮಲಗೋಣ…”

ಎನ್ನುತ್ತ ಕೈ ಹಿಡಿದೆಳೆದ. ಕೂಡಲೇ ಗಂಗ ದೀಪವಾರಿಸಿದ.

* * *

ಆ ದಿನ ಬೀರನಟ್ಟಿಯಲ್ಲಿ ಗುಣದಮ್ಮ ಈ ಕಥೆ ಹೇಳಿದಳು.

ಒಮ್ಮೆ ಶಿವಾಪುರದಮ್ಮನ ಜಾತ್ರೆ ನಡೆದಿತ್ತು.
ಬಳಿಗಾರ ಚೆನ್ನಯ್ಯ ಹೊನ್ನೆ ಮರದ ಕೆಳಗೆ ಹೊಂಗಸರಿಗೆ ಬಳೆ
ಇಡಿಸಬೇಕೆಂದು ಕುಂತಿದ್ದ. ಹೆಂಗಸರ ಹತ್ತಿರ ಹಣ ಇರಲಿಲ್ಲ.
ಆದ್ದರಿಂದ ಯಾರೂ ಚೆನ್ನಯ್ಯನ ಬಳಿಗೆ ಬರಲಿಲ್ಲ.
ಬುಟ್ಟಿತುಂಬ ಬಳೆ ಹಾಗೇ ಉಳಿದವು.
ಕಾದು ಕಾದು ಕಾಯುತ್ತ ಕುಂತ
ಹೆಂಗಸರು ಆಸೆಯಿಂದ ನೋಡಿ ನೋಡಿ ನೋಡುತ್ತ ಕುಂತರು.
ಅಷ್ಟರಲ್ಲಿ ಗವಿಯೊಳಗಿಂದ ಒಂದು ಮುದುಕಿ ಬಂದು
“ಬಳೆಗಾರ ಚನ್ನಯ್ಯಾ, ನನಗೆ ಬಳೆ ಇಡಿಸಪ್ಪ” ಅಂದಳು.
ಬಳಿಗಾರ ಚನ್ನಯ್ಯ ಮುದುಕಿಯ ಎರಡೂ ಕೈ ತುಂಬ ಬಳೆ ಇಡಿಸಿ ಹಣ ಕೇಳಿದ.
ಮುದುಕಿ ದೂರದಲ್ಲಿ ನಿಂತಿದ್ದ ಶಿವಪಾದನನ್ನು ತೋರಿಸಿ,
“ಅಕೋ ಅಲ್ಲಿ ನಿಂತಿದ್ದಾನಲ್ಲ, ನನ್ನ ಮಗ, ಅವನನ್ನ ಕೇಳು” ಅಂದಳು
ಬಳಿಗಾರ ಚನ್ನಯ್ಯ ಶಿವಪಾದನ ಬಳಿಗೆ ಹೋಗಿ ಹಣ ಕೇಳಿದ.
“ಯಾಕಾಗಿ ಹಣ ಕೊಡಬೇಕಪ್ಪ?”
“ನಿಮ್ಮ ತಾಯಿಯ ಎರಡೂ ಕೈ ತುಂಬ ಬಳೆ ಇಡಿಸಿದ್ದೇನೆ.”
“ಹಾಗೊ? ಇರು”
ಎಂದು ಗವಿಯೋಳಕ್ಕೆ ಹೋಗಿ ನೋಡಿದ. ತಾಯಿಯ ಕೈ ತುಂಬ ಬಳೆ ಇದ್ದವು. ಶಿವಪಾದ ಒಂದು ಹಣ ಕೊಟ್ಟ.
“ನೂರು ಹಣ ಬೇಕು.”
“ಅಮ್ಮನಿಗೆ ಮಾತ್ರ ಬಳೆ ಇಡಿಸಿದ್ದಲ್ಲವ್ವ?”
“ಆದರೆ ಬುಟ್ಟಿಯಲ್ಲಿಯ ಎಲ್ಲಾ ಬಳೆ ಹೋಗಿವೆ.
“ಎಲ್ಲಿಗೆ?”
“ನಿಮ್ಮಮ್ಮನಿಗೇ ಗೊತ್ತು”
ನೋಡಿದರೆ ಜಾತ್ರೆಗೆ ಬಂದ ಎಲ್ಲಾ ಹೆಂಗಸರ ಕೈ ತುಂಬ ಬಳೆ ಇವೆ! “ಇದೇನು ತಾಯಿ? ಇವರೆಲ್ಲಾ ಯಾರು?
“ಹೆತ್ತವರೆಲ್ಲಾ ತಾಯಂದಿರು
ಹೆರುವವರೆಲ್ಲಾ ತಾಯಂದಿರು.
ಎಲ್ಲಾ ತಾಯಂದಿರಲ್ಲಿರುವ ನಿನ್ನ ತಾಯಿಯನ್ನು ಆರಾಧಿಸು.”

ಎಂದು ಹೇಳುವಷ್ಟರಲ್ಲಿ

ಇಲ್ಲೀಗಿ ಹರಹರ
ಇಲ್ಲೀಗಿ ಶಿವ ಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ