ಬೆಳಿಗ್ಗೆ ಬೇಗನೇ ಎದ್ದು ಯಾತ್ರಿಕರು ಸಾವಳಗಿಗೆ ನಡೆದರು. ಇವತ್ತು ಗೌರಿ ನಗುನಗುತ್ತ ಉಲ್ಲಾಸದಿಂದಿದ್ದಳು. ಬೇಗ ಬೇಗ ಹೆಜ್ಜೆ ಹಾಕುತ್ತ ಎಲ್ಲರನ್ನು ಹಿಂದೆ ಹಾಕಿದಳು. ಗಂಗ ಅವಳೊಂದಿಗೆ ಹೆಜ್ಜೆ ಹಾಕುತ್ತ ಗೌರಿಯನ್ನು ನಗಿಸುವ ಮಾತುಗಳನ್ನಾಡುತ್ತ ನಡೆದಿದ್ದ. ಅವರ ಹಿಂದೆ ಬೊಂತೆಯನಿದ್ದ. ಗೌರಿ ಸಂತೋಷದಲ್ಲಿ ಇದ್ದುದರಿಂದ ಅವನ ಸಡಗರ ಹೇಳತೀರದು. ಗಂಗನ ಮಾತಿಗೆ ಎಲ್ಲರಿಗಿಂತ ಹೆಚ್ಚು ನಗುತ್ತಿದ್ದವನು ಅವನೇ ಎಲ್ಲರಿಗಿಂತ ಹಿಂದೆ ಇದ್ದ ಗುಣದಮ್ಮ ಹೊಸ ಯಾತ್ರಿಕರಿಂದ ಕನಕಪುರಿಯ ಹಳ್ಳಿಗಳ ಸುದ್ದಿ ಕೆಳುತ್ತ ಬರುತ್ತಿದ್ದಳು. ರಾಜಕುಮಾರಿ ಕಾಣೆಯಾಗಿರುವ ಕಥೆಯನ್ನು ಇವರೂ ಹೇಳಿದರು. ಆಮೇಲೆ ಚಿನ್ನಕ್ಕೆ ಧಾನ್ಯಮಾರಿ ಮನೆಯಲ್ಲಿ ಚಿನ್ನವಿದ್ದರೂ ಉಣ್ಣುವುದಕ್ಕೆ ಅನ್ನವಿಲ್ಲದೆ ಬಡವರಾದವರ ಕಥೆ ಹೇಳಿದರು. ದಲ್ಲಾಳಿಗಳೂ ವರ್ತಕರು ಸೇರಿ ರೈತರನ್ನ ಸುಲಿಯುವುದಕ್ಕೆ ರಾಜನೇ ಕುಮ್ಮಕ್ಕು ಕೊಡುತ್ತಿರುವನೆಂದೂ ಹೇಳಿದರು.

ಅಷ್ಟರಲ್ಲಿ ಎಲ್ಲಿಂದಲೋ ಮೂವರು ರಾಜಭಟರು ಬಂದು ಯಾತ್ರಿಕರನ್ನು ಸುತ್ತುವರಿದು ನಿಂತು ಬಿಟ್ಟರು. ನಾಯಕ ಕಿರುಚಿದ:

“ಯಾರು ಅಲುಗಾಡಕೂಡದು. ಅಲುಗಾಡಿದರೆ ಮುಗಿಸಿ ಬಿಡ್ತಿನಿ. ಹುಷಾರ್!”

ಗುಣದವ್ವ ತನ್ನ ಪ್ರಾಣವನ್ನು ಅಂಗೈಯಲ್ಲಿ ಹಿಡಿದಿದ್ದಳು.

“ಗಂಟು ಗದಡಿ ಕೆಳಗಿಡ್ರಿ. ಯಾರು ನೀವು?”

“ಯಾತ್ರಿಕರು”

“ಎಲ್ಲಿಗೆ ಹೊಂಟೀರಿ?”

“ಶಿವಪುರಕ್ಕ”

“ಅಂದರ ನೀವು ನಮ್ಮ ವೈರಿಗಳು ಅಂದಂಗಾಯ್ತು?”

“ನಮಗೂ ನಿಮಗೂ ಏನು ಸಂಬಂದ ಸ್ವಾಮಿ? ನಾವು ನಿಮ್ಮ ರಾಜರನ್ನ ದೋಚಿದುವ? ನಿಮ್ಮ ವಿರುದ್ದ ಮಾತಾಡಿದುವ? ನಾವು ಸೂರ್ಯ ಮಹಾರಜರ ಪ್ರಜೆಗಳು ಸ್ವಾಮಿ!”

“ಗಂಟಿನಾಗೇನೈತಿ?”

“ಅರಿವೆ, ಹೊದಿಕೆ, ಇದು ರೊಟ್ಟಿ ಗಂಟು.”

ರೊಟ್ಟಿಗಂಟ? ಕೊಡಿಲ್ಲಿ ಅದನ್ನ”

“ಮಕ್ಕಳಿಗಾಗಿ ಇಟ್ಟುಕೊಂಡೀವ್ರಿ”

“ನೋಡಿ ವಾಪಸ್ ಕೊಡ್ತಿವಿ ಕೊಡು”

ರೊಟ್ಟಿಗಂಟು ಕೊಟ್ಟಮೇಲೆ ಕೊಟ್ಟವ ಕೇಳಿದ”

ನಿಮಗ ಯಾರು ಬೇಕ್ರಿ?

“ರಾಜಕುಮಾರಿ”

“ಆಕಿ ಒಂದು ವಾರದ ಹಿಂದೆ ಸತ್ತಳಲ್ಲರಿ!”

“ಹಾಗಂತ ಸುದ್ದಿ ಇದೆ. ಆದರೆ ಅವಳಿನ್ನೂ ಜೀವಂತ ಇದ್ದಾಳ.”

ಎಲ್ಲರೂ ಗೌರಿಯ ಕಡೆಗೆ ಕಳ್ಳನೋಟ ಬೀರಿದರು.

“ಇನ್ನ ಹೊಂಡೋಣೇನ್ರಿ?”

ಇಬ್ಬರೂ ಭಂಟರು ಗಂಗ ಗೌರಿಯನ್ನೇ ಪರೀಕ್ಷಿಸುವ ನೇತ್ರಗಳಿಂದ ನೋಡುತ್ತಿದ್ದರು. ಗೌರಿಗೆ ಎಷ್ಟು ಆತಂಕವಾಯಿತೆಂದರೆ ಇಡೀ ತರುಮರ ವಾತಾವರಣವೆಲ್ಲ ತನ್ನನ್ನು ನೋಡಿ ಕುದಿಯುತ್ತಿದೆ ಎನ್ನಿಸಿತು. ನನ್ನನ್ನ ಶಿವಾಪುರಕ್ಕೆ ಕರೆಸಿಕೊಳ್ಳೋದು ಬಿಡೋದು ಅಮ್ಮನ ಕೆಲಸ. ಅವಳು ಬಯಸಿದರೆ ನನ್ನನ್ನ ಯಾರೂ ತಡೆಯಲಾರರು ತಡೆದರೆ ಅದೇ ಅವಳಿಷ್ಟ ಅಂತ ಬಂದದ್ದನ್ನು ಎದುರಿಸುವುದೆಂದು ತೀರ್ಮಾನಿಸಿಬಿಟ್ಟಳು. ಯಾವಾಗ ಭಂಟರ ದೃಷ್ಟಿ ಗಂಗನ ಮೇಲೆ ಹರಿಯಿತೋ ಆವಾಗ ಸ್ವಲ್ಪ ನೆಮ್ಮದಿಗೊಂಡಳು. ಗುಣದಮ್ಮನ ಸ್ಥಿತಿ ಚಿಂತಾಜನಕವಾಗಿತ್ತು. ಗೌರಿ ರಾಜಕುಮಾರಿಯಾಗಿದ್ದರೆ, ಹೇಳದೆ ಕೇಳದೆ ಕರೆದುತಂದುದಕ್ಕೆ ರಾಜಭಟರು ತನ್ನನ್ನು ಶಿಕ್ಷಿಸದೇ ಬಿಡಲಾರರೆಂದು ಹೆದರಿದ್ದಳು.

ಅಂತೂ ಯಾತ್ರಿಕರ ತಂಡ ಆ ದಿನ ರಾಜಭಟರಿಂದ ಹೆಂಗೋ ಪಾರಾಗಿ ಸಕಾಲಕ್ಕೆ ಸಾವಳಗಿಗೆ ತಲುಪಿ ಮಂಟಪದಲ್ಲಿ ಉಳಿದರು. ಗುಣದಮ್ಮ ಆದಿನ ಹೇಳಿದ ಕತೆ ಇದು:

ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ಬಡ ಬೆಸ್ತರ ಹುಡುಗನಿದ್ದ. ಹಸಿದ ಬೆಸ್ತರ ಹುಡುಗ ಹಸಿವಿಗೆ ಏನು ಮಾಡಲಿ? ಬದುಕಬೇಕೆಂದರೆ ಊಟ ಬೇಕು. ನನಗೆ ಊಟ ಹಾಕಿ ಬದುಕಿಸುವ ತಾಯಿ ಎಲ್ಲಿದ್ದಾಳು? – ಎಂದು ನದಿಯ ದಂಡೆಯ ಮ್ಯಾಲೆ ಕುಂತು ಚಿಂತೀ ಮಾಡುತ್ತಿದ್ದ. ಅಷ್ಟರಲ್ಲಿ ಅವನ ಮುಂದೊಂದು ಬಣ್ಣದ ಮೀನು ಚಂಗನೇ ಮ್ಯಾಲೆ ನೆಗೆದು ನೀರಲ್ಲಿ ಮುಳುಗಿತು. ಹೀಗೆ ಎರಡು ಮೂರು ಸಲ ನೆಗೆದು ಇನ್ನೊಮ್ಮೆ ಬಂದಾಗ ಇವನೂ ನೆಗೆದು ಅದರ ಬಾಲ ಹಿಡಿದುಕೊಂಡ.

ಬಣ್ಣದ ಮೀನು ಈಜುತ್ತ ಪಾತಾಳಲೋಕದ ಅರಮನೆಗೆ ಹೋಯಿತು. ಅಲ್ಲಿದ್ದ ವಾರಿಗೆಯ ದೇವಕನ್ಯೆಯರು ಬಂದು ಕೀಲಿ ಹಾಕಿದ್ದ ಮೂರು ಕೋಣೆಗಳನ್ನು ತೋರಿಸಿ, ‘ರಾತ್ರಿ ಬೇಸರವಾದರೆ ಯಾವ ಕೋಣೆಗೂ ಹೋಗಬೇಡ’ ಎಂದು ತಾಕೀತು ಮಾಡಿ ಕೀಲಿ ಕೈ ಕೊಟ್ಟು ಹೋದರು.

ಅವರು ಹೋದ ಮೇಲೆ ಹುಡುಗ ಕುತೂಹಲ ತಾಳಲಾರದೇ ಮೊದಲನೇ ಕೋಣೆಯ ಬಾಗಿರು ತೆರೆದು ನೋಡಿದ. ಎದುರಿಗೆ ಚಿನ್ನದ ಸಿಂಹ!

“ಬಾರೋ ಹುಡುಗ ನನ್ನ ಬೆನ್ನಮೇಲೆ ಕೂರು. ನಿನಗೆ ಸೂರ್ಯಲೋಕ ತೋರಿಸ್ತೀನಿ.”

ಎಂದಿತು. ಹುಡುಗ ಬೆನ್ನೇರಿದ.

ಸಿಂಹ ಹಾರಿ ನಿಮಿಷಾರ್ಧದಲ್ಲಿ ಚಿನ್ನದ ನದಿ, ಚಿನ್ನದ ಗುಡ್ಡ ಪರ್ವತ, ಚಿನ್ನದ ತುರುಮರ ಜೀವರಾಶಿಯಿರುವ ಲೋಕಕ್ಕೆ ಕರೆದೊಯ್ದಿತು. ಅಲ್ಲಿ ದನಗಳಂತೆ ಹೆಂಗಸರು ಮತ್ತು ದುರ್ಬಲರನ್ನು ಹೂಡಿ, ಸ್ಪರ್ಧೆ ಮಾಡುತ್ತಿದ್ದರು. ಜನ ಕಿರಿಚಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅದನ್ನು ನೋಡುವಷ್ಟು ನೊಡಿ “ಇನ್ನು ಹೊರಡೋಣ”ವೆಂದು ಸಿಂಹದ ಬೆನ್ನೇರಿದ. ವಾಪಸು ಬರುವ ಸುಮಾರಿಗೆ ಸೂರ್ಯೋದಯವಾಗಿತ್ತು. ದೇವಕನ್ಯೆಯರು ಪುನಃ ಬಂದರು.

ಸಂಜೆಯವರೆಗೆ ಆಡಿ ಹೋದರು. ಎರಡನೆಯ ಕೋಣೆಯ ಬಾಗಿಲು ತೆರೆದು ನೋಡಿದ: ಅದರಲ್ಲಿ ಬೆಳ್ಳಿಯ ಕುದುರೆ. ಅದು “ಬಾರೋ ಹುಡುಗ, ನಿನಗೆ ಚಂದ್ರಲೋಕ ತೋರಿಸ್ತಿನಿ ಬಾ.”

ಹುಡುಗ ಬೆನ್ನೇರಿದ. ಅದು ನೂರು ಚಂದ್ರರ ಬೆಳದಿಂಗಳಿದ್ದ ಮಾದಕ ಲೋಕ; ಬೆಳ್ಳಿಯ ನದಿ, ಬೆಳ್ಳಿಯ ಗುಡ್ಡಪರ್ವತ, ಬೆಳ್ಳಿಯ ತರುಮರ ಜೀವರಾಶಿಯಿರುವ ಲೋಕ. ಅಲ್ಲಿದ್ದ ಬೆಳ್ಳಿಯ ಜನ ಅಮೃತ ಕುಡಿಯುತ್ತಿದ್ದರು. ಒಬ್ಬರೂ ಇವನ ಕಡೆಗೆ ನೋಡಲೂ ಇಲ್ಲ. ಇವನನ್ನು ಕರೆಯಲೂ ಇಲ್ಲ. ಹುಡುಗ ಕುದುರೆಯ ಬೆನ್ನೇರಿ ವಾಪಸು ಬಂದ. ಬಂದಾಗ ಬೆಳಗಾಗಿತ್ತು.

ಮೂರನೆಯ ದಿನ ಕೊನೆಯ ಕೋಣೆಯ ಬಾಗಿಲು ತೆರೆದ. ಅಲ್ಲೊಂದು ಕತ್ತೆ. “ಬಾರೋ ಹುಡುಗಾ, ನಿನಗೆ ಮಣ್ಣಿನ ಲೋಕ ತೋರಿಸ್ತೀನಿ ಬಾ.” ಹುಡುಗ ಬೆನ್ನೇರಿದ. ಕತ್ತೆ ಅವನು ಮೊದಲಿದ್ದ ಊರಿಗೇ ಕರೆತಂದಿತು! ನೋಡಿದರೆ ಹುಡುಗ ಹುಡುಗಿ ದೂರದ ಒಂದು ಮರದಡಿ ಪ್ರೀತಿ ಮಾಡುತ್ತಿದ್ದರು. ಇನ್ನೊಂದು ಕಡೆ ಬಡರೈತ ಹೊಲದಲ್ಲಿ ಬೆವರು ಸುರಿಸುತ್ತ ಆದರೆ ಹಾಡುತ್ತ ಕೆಲಸ ಮಾಡುತ್ತಿದ್ದ. ಅವನ ಹೆಂಡತಿ ಮಗುವಿಗೆ ಮೂಲೆಯೂಡುತ್ತಿದ್ದವಳು ಇವನನ್ನು ನೋಡಿ ಕೈಮಾಡಿ ಕರೆದು ಕುಡಿಯಲು ಅಂಬಲಿ ಕೊಟ್ಟಳು. ನಂಜಿಕೊಳ್ಳೋದಕ್ಕೊಂದು ಉಪ್ಪಿನಕಾಯಿ ಚೂರು ಕೊಟ್ಟಳು. ಹುಡುಗ ತಿಂದು ರೈತನ ಹತ್ತಿರ ಅವನಿಗೆ ಸಹಾಯ ಮಾಡುತ್ತ ನಿಂದ. ಕತ್ತೆ ಬಂದು “ಹೊರಡೋಣವಾ?” ಎಂದಿತು. ಹುಡುಗ “ನಾನಿಲ್ಲೇ ಇರ್ತೇನೆ. ನೀನು ಹೋಗು” ಎಂದು ಕಳಿಸಿದ.

ಈಗ ಹೇಳು: ಬೆಸ್ತರ ಹುಡುಗ ಚಿನ್ನದ ಲೋಕ, ಬೆಳ್ಳಿಯ ಲೋಕ, ಬಿಟ್ಟು ಭೂಲೋಕವನ್ನೇ ಆರಿಸಿಕೊಂಡನಲ್ಲ. ಯಾಕೆ?

ಭೂಲೋಕದಲ್ಲಿ ತಾಯಿ ಇದ್ದಳೂ. ಉಳಿದೆರಡು ಲೋಕಗಳಲ್ಲಿ ತಾಯಿ ಇರಲಿಲ್ಲ. ಸ್ಪರ್ಧಿಸಿ ಕಚ್ಚಾಡುವ ಸೂರ್ಯಲೋಕವೂ ಬೇಡ. ಇನ್ನೊಬ್ಬರನ್ನು ನೋಡಲಾರದ ಬೆಳ್ಳಿಲೋಕವೂ ಬೇಡ. ಹಾಡುತ್ತ ಕಾಯಕ ಮಾಡುವ ರೈತ, ಹಸಿದ ಕಂದನಿಗೆ ಅಂಬಲಿ ನೀಡುವ ತಾಯಿ ಇರುವ ಲೋಕವೇ ಶ್ರೇಷ್ಠ.

ಹುಡುಗ ಹಸಿದಿದ್ದ. ದೇವಕನ್ಯೆಯರು ಊಟಕೊಡಲಿಲ್ಲ.

ಚಿನ್ನದ ಲೋಕದವರು ಕೊಡಲಿಲ್ಲ.

ಬೆಳ್ಳಿಯ ಲೋಕದವರು ಕರೆಯಲಿಲ್ಲ.

ಭೂಲೋಕದಲ್ಲಿ ತಾಯಿ ಕೊಟ್ಟಳು.

ಅಂಥಾ ತಾಯಿಯಿರುವ ಭೂಲೋಕವೇ ಶ್ರೇಷ್ಠವೆಂಬಲ್ಲಿ

ಇಲ್ಲೀಗಿ ಹರಹರ
ಇಲ್ಲೀಗೆ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ”