ಮಾರನೆಯ ದಿನ ಯಾತ್ರಿಕರ ತಂಡ, ಹುಲಿಕಟ್ಟಿಗೆ ಹೊರಟಿತು. ಈ ದಿನವೂ ಗೌರಿ ತನ್ನ ಬೇನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಆದರೆ ಅವಳ ಮುಖ ಗೆಲುವಾಗಿಲ್ಲವೆಂಬುದನ್ನು ಗುಣದಮ್ಮ ಗಮನಿಸಿದಳು. ಮಧ್ಯಾಹ್ನ ದಾರಿ ಬದಿಯ ಗುಡಿಸಲಲ್ಲಿ ಊಟವಾದ ಮೇಲೆ ಗೌರಿ ಒಂದು ಕಡೆ ಅಡ್ಡಾಗಿದ್ದಳು. ಮತ್ತೆ ಮತ್ತೆ ಮಗ್ಗಲು ಬದಲಿಸುವುದನ್ನು ಗುಣದಮ್ಮ ನೋಡಿ ನೋವು ಅಸಹನೀಯವಾಗಿರಬಹುದೆಂದು ಮರುಗಿದಳು. ಮದ್ದು ತಗೊಳ್ಳಲು ಗೌರಿ ಒಪ್ಪುತ್ತಿರಲಿಲ್ಲ. ನೋವಿನ ಪ್ರಸ್ತಾಪ ಬಂದರೆ ಸಾಕು ತಕ್ಷಣ ಯಾವುದೋ ನೆಪದಲ್ಲಿ ಮರೆಸಿ ಪ್ರವಾಸ ಮುಂದುವರಿಸುತ್ತಿದ್ದಳು. ಈ ಹೊತ್ತು ಹೊಸದಾಗಿ ಸೇರಿದ ಯಾತ್ರಿಕರಿದ್ದರು. ಕನಕಪುರಿಯ ಹಳ್ಳಿಗಳ ಜನ ಆಹಾರದ ಬಗ್ಗೆ ಹಾಹಾಕಾರ ಮಾಡುತ್ತಿರುವುದನ್ನು ಹೇಳಿದರು. ಎಲ್ಲರೂ ಚಿತ್ತಗೊಟ್ಟು ಅದನ್ನೇ ಕೇಳಿದ್ದರಿಂದ ಸಮಯ ಹೋದದ್ದು, ಆ ದಾರಿ ಸವೆದದ್ದು ಗೊತ್ತಾಗಲೇ ಇಲ್ಲ. ಎಲ್ಲರೂ ಸಂಜೆ ಗೋಧೂಳಿ ಲಗ್ನದ ಸುಮಾರಿಗೆ ಹುಲಿಕಟ್ಟೆ ತಲುಪಿ ಮಂಟಪದಲ್ಲಿ ತಂಗಿದರು.

ಎಲ್ಲ ಹಟ್ಟಿಗಳಂತೆ ಇಲ್ಲಿಯೂ ಆತಿಥ್ಯ ಚನ್ನಾಗಿತ್ತು. ಒಂದೇ ಹೊಸ ಸುದ್ದಿಯೆಂದರೆ ರಾಜಕುಮಾರಿ ಕಳೆದುಹೋದ ಸಮಾಚಾರ ಇವರಿಗೆ ತಲುಪಿತ್ತು. ಬಂದರೆ ಅವಳನ್ನು ಇಲ್ಲಿಯೇ ಇಟ್ಟುಕೊಂಡಿರಲು ಗೌಡನಿಗೆ ಭಂಟರು ತಾಕೀತು ಮಾಡಿದ್ದರು. ಗುಣದಮ್ಮ ನಾಲ್ಕನೇಯ ಕತೆ ಹೇಳಿದಳು.

ಒಮ್ಮೆ ಪುಣ್ಯಕೋಟಿ ಮೇಯಲಿಕ್ಕೆ ಕಾಡಿಗೆ ಹೋಗಿದ್ದಳು. “ಹೊಸನಾತ! ಹೊಸನಾತ! ಅಂತ ಅರ್ಭಟ ಮಾಡುತ್ತ ಹುಲಿರಾಯ ಬಂದು ಅಡ್ಡಗಟ್ಟಿದ.

“ಕೊಲ್ಲಬ್ಯಾಡಪ್ಪ ಹುಲಿರಾಯ ಮನೆಯಲ್ಲಿ ಹಸಿದ ಕರು ಇದೆ.”

ಅಂದಳು ಪುಣ್ಯಕೋಟಿ. ಆಗ ಹುಲಿರಾಯ

“ಹಸಿದ ಕರುವಿಗೆ ಹುಲ್ಲಾದರೆ ನನಗೆ ನೀನು ಆಹಾರ!” ಅಂದು ಅವಳ ಮ್ಯಾಲೆ ಹಾರಿದ. ಪುಣ್ಯಕೋಟಿ ತಪ್ಪಿಸಿಕೊಂಡು ಬ್ರಹ್ಮ ದೇವರಲ್ಲಿಗೆ ಓಡಿ ಹೋಗಿ ‘ಬ್ರಮ್ಮರಾಯಾ, ಹುಲಿರಾಯನಿಂದ ಕಾಪಾಡು’ ಅಂದಳು.

“ನನ್ನಿಂದಾಗದಮ್ಮ, ಇಷ್ಣುವಿನ ಮನೆಗೆ ಹೋಗು” ಅಂದ ಬ್ರಮ್ಮರಾಯ”

ಪುಣ್ಯಕೋಟಿ ಇಷ್ಣುವಿನ ಮನೆಗೆ ಹೋಗಿ ವಿಷ್ಣುರಾಯಾ ಹುಲಿರಾಯನಿಂದ ಕಾಪಾಡು” ಅಂದಳು. ಆಗ ಇಷ್ಣುರಾಯನೇನೆಂದ?”

“ನನ್ನಿಂದಾಗದಮ್ಮ. ಶಿವನ ಮನೆಗೆ ಹೋಗು.”

“ಶಿವನೂ ನನ್ನಿಂದಾಗದಮ್ಮ, ಒಳಗೆ ಅಮ್ಮನ ಹತ್ತಿರ ಹೋಗು” ಅಂದ

ಪುಣ್ಯಕೋಟಿ ಅಮ್ಮನ ಹತ್ತಿರ ಹೋದಳು.

ಒಳಗೆ ಅಮ್ಮ ಈಗಷ್ಟೆ ಪೂಜೆಗೊಂಡು ಆಕಳಿಸುತಾ ಕುಂತಿದ್ದಳು.

ಪುಣ್ಯಕೋಟಿ ಬಂದು “ಅಮ್ಮಾ ಹುಲಿರಾಯನಿಂದ ಕಾಪಾಡು” ಅಂದಳು. ಅಮ್ಮನಿಗೆ ಎಲ್ಲಾ ತ್ರಿಕಾಲಜ್ಞಾನ ಆಯಿತು ನೋಡು” ಬರಲಿ, ನೀನು ಒಳಗೆ ನನ್ನ ಪೂಜೆ ಮನೆಯಲ್ಲಿ ಅಡಗಿರು” ಅಂದಳು. ಪುಣ್ಯಕೋಟಿ ಒಳಗೆ ಹೋದಳು

ಆಮ್ಯಾಲೆ ಹುಲಿರಾಯ ಬಂದ “ಅಮ್ಮಾ ಒಳಗೆ ಪುಣ್ಯಕೋಟಿ ಅಡಗಿರುವಳೋ?

“ಖರೆ ಹೇಳಬೇಕೊ? ಖೋಟ್ಟಿ ಹೇಳಬೇಕೊ?

“ಖರೆ ಹೇಳು”

“ಪುಣ್ಯಕೋಟಿ ಇಲ್ಲಿಗೆ ಬಂದಿಲ್ಲವಪ್ಪ.”

ಅಂದಳು, ಹುಲಿರಾಯ ಪುಣ್ಯಕೋಟಿಯನ್ನ ಹುಡುಕುತ್ತ ಬೇರೆ ಕಡೆ ಹೋದ.

“ಈಗ ಬರೋಬರಿ ಹೇಳಿದರ ಬಚಾವಾಗ್ತಿ; ತಪ್ಪು ಹೇಳಿದರ ಸಾವಿರ ಹೋಳಾಗ್ತಿ. ತಾಯಿ ಖರೆ ಹೇಳಿದಳೊ? ಖೋಟ್ಟಿ ಹೇಳಿದಳೊ?”

“ತಾಯಿ ಖರೆ ಹೇಳಿದಳು.”

“ಪುಣ್ಯಕೋಟಿ ಒಳಗ ಇದ್ದಳಪ್ಪ ತಾಯಿ ಖೊಟ್ಟಿ ಹೇಳಿದಂಗಾಗಲಿಲ್ಲವ?”

“ಹಾಂಗಲ್ಲ ನಿಲ್ಲು; ಒಳಗೆ ಪುಣ್ಯಕೋಟಿ ಅಡಗಿದ್ದಳು ನಿಜ. ಆದರೆ ಅವಳು ತಾಯಿ. ಆ ತಾಯಿ ಹೇಳಿದ್ದೇನು? ‘ಹುಲಿರಾಯಾ ಮನೆಯಲ್ಲಿ ಹಸಿದ ಕರು ಇದೆ; ನನ್ನನ್ನ ಕೊಲ್ಲಬ್ಯಾಡಾ”

ಅಂದಳು, ಅಂದರ ನಾನು ತಾಯಿ. ಹಸಿವಿಗಾಗಿ ಒಬ್ಬ ತಾಯಿಹತ್ಯೆ ಸಲ್ಲದು ಅಂತ. ಅದಕ್ಕೆ ಹುಲಿರಾಯ ಅಂದ:

“ಹುಲ್ಲು” ನಿನ್ನ ಆಹಾರ, ನೀನು ನನ್ನ ಆಹಾರ! ಆಹಾರವೇ ನನ್ನನ್ನ ತಿನ್ನಬ್ಯಾಡ ಅಂದರೆ ನಾನು ಎಲ್ಲಿಗೆ ಹೋಗಲಿ?

“ಹಂಗಲ್ಲ ನಿಲ್ಲು. ನಾವು ದೇವರಿಗೆ ಯಾವ ಹೂವು ಕೋಡಬೇಕು? ಯಾವುದು ಫಲವಾಗುವುದಿಲ್ಲವೋ ಅದನ್ನ! ಕರು ದೊಡ್ಡದಾಗಿ ಹುಲ್ಲು ತಿನ್ನುವಂತಾದ ಮೇಲೆ ನಾನು ನಿನ್ನ ಆಹಾರ. ಅಲ್ಲೀತನಕ ಕರುವಿಗೆ ಹಾಲು ಕುಡಿಸುವುದು ತಾಯಿಯ ಜವಾಬ್ದಾರಿ. ನೀನು ತಿನ್ನಬೇಕಾದ್ದೂ ಆಹಾರವನ್ನ: ತಾಯಿಯನ್ನಲ್ಲ! ನಾನು ಕಂದಮ್ಮನ ತಾಯಿ. ಅವನು ಬೆಳೆಯುವತನಕ ನನ್ನನ್ನು ಬೀಡು.”

“ಹಸಿದಾಗ ಇದನ್ನೆಲ್ಲ ತಿಳೀಲಿಕ್ಕಾಗುತ್ತದೇನು?”

“ತಿಳಿಯೋ ಹಾಗೆ ನಾನು ಹೇಳಿದೆನಲ್ಲ”

ಆಗಲೂ ಹುಲಿರಾಯ ಕೇಳಲಿಲ್ಲ. ಅದಕ್ಕೇ ತಾಯಿ ಬ್ರಮ್ಮದೇವರ ಬಳಿ ಮೊರೆ ಹೋದಳು. ಬ್ರಮ್ಮ ವಿಷ್ಣು, ಶಿವ ಮೂವರೂ ಹೊಣೆಗೇಡಿಗಳು. ತಾಯಿಯನ್ನು ತಿಳಿಯದಾರು, ಸತ್ಯ ತಿಳಿಯದವರು. ಆದರೆ ಅಮ್ಮನಿಗೆ ಗೊತ್ತಾಯಿತು. ಸತ್ಯ ಯಾವುದು? ಕರುವನ್ನ ಪೊರೆಯಲು ತಾಯಿಯ ಜೀವ ಬೇಕೆಂಬ ತಾಯಿಯ ಖೋಟ್ಟಿಯೇ ಸತ್ಯ. ತಾಯಿಯ ಜೀವವೇ ಸತ್ಯ.

ಹಾಗೆ ತಾಯಿ ಸತ್ಯ ಹೇಳಿದ್ದರಿಂದ ನಾವಿಲ್ಲಿದ್ದೀವಿ. ನೀವು ನನ್ನ ಮುಂದೆ ಇದ್ದೀರಿ.

ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲಿಂದ ಶಿವಪಾದ ಶರಣೆನ್ನಿರೇ”