ಇತ್ತ ಕನಕಪುರಿಯಲ್ಲಿ ಶಿಖರಸೂರ್ಯ ತೀವ್ರ ಚಡಪಡಿಕೆಯಲ್ಲಿದ್ದ. ಚಿಕ್ಕಮ್ಮಣ್ಣಿಗೆ ಮಾತ್ರ ಹೇಳಿ ಕಂಚಿಗೆ ಹೋಗಿದ್ದ ರವಿ ತಿಂಗಳಾದರೂ ನಾಪತ್ತೆಯಾಗಿದ್ದ. ರವಿಯನ್ನು ಹುಡುಕಲು ಹೋದ ಸುಕ್ರ ಕಂಚಿಯಿಂದ ಆತಂಕದ ಕಾಗದ ತಂದಿದ್ದ: ವಾಸಂತಿ, ಅವಳ ಮಗು ಮತ್ತು ಆಚಾರ್ಯರು ಅಮಾನುಷವಾಗಿ ಕೊಲೆಯಾದ ಸುದ್ದಿ ಕೇಳಿ ರವಿಕೀರ್ತಿಗೆ ಆಘಾತವಾಗಿ ಕಾಡಿನಲ್ಲಿ ಕಣ್ಮರೆಯಾದನೆಂದೂ ಸೈನಿಕರನ್ನಟ್ಟಿ ಹುಡುಕಿಸಿದರೂ ಸಿಕ್ಕಿಲ್ಲವೆಂದೂ ಕಂಚಿಯ ದೊರೆ ಕನಕಪುರಿಯ ಮಹಾರಾಜನಿಗೆ ಕಾಗದ ಬರೆದಿದ್ದ. ನಿಮಗೆ ಸಿಕ್ಕರೆ ನಮಗೂ ಸುದ್ದಿ ಕಳಿಸಿರೆಂದು ಹೇಳಿ ನಡೆದ ದುರ್ದೈವದ ಸಂಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ!

ಶಿಖರಸೂರ್ಯ ಇದನ್ನು ನಿರೀಕ್ಷಿಸಿರಲಿಲ್ಲ. ದಿನಗಳೆದಂತೆ ವಾಸಂತಿಯ ನೆನಪು ಮಸಳಿಸಿ, ಮನಸ್ಸಿನ ಗಾಯಾಗಳು ಮಾಗಿ, ಮಗ ದಾರಿಗೆ ಬಂದೇ ಬರುವನೆಂದು ತನಗೆ ತಾನೇ ಹೇಳಿಕೊಂಡು ಸುಮ್ಮನಾದ. ಆದರೆ ಈಚೀಚೆ ಮಗನ ಬಗ್ಗೆ ಛಾಯಾದೇವಿಯ ಹಂಬಲ ಹೆಚ್ಚಾಗಿತ್ತು. ಗಂಡನನ್ನು ಕೇಳುವದಕ್ಕೆ ಭಯ. ಶಿಖರಸೂರ್ಯನಿಲ್ಲದಾಗ ‘ಸುದ್ದಿಯೇನಾದರೂ ಗೊತ್ತಾಯಿತೇನಪ್ಪ’ ಎಂದು ಸೇವಕರನ್ನು ಕದ್ದು ಕೇಳುತ್ತಿದ್ದಳು. ತಾಯಿಯ ಮುಂದೆಯೂ ಸಂಕಟ ತೋಡಿಕೊಳ್ಳಲಾಗುತ್ತಿರಲಿಲ್ಲ. ಎಚ್ಚರಾದರೆ ರವಿಯ ನೆನಪಾಗಿ ‘ಮಗ ಬಂದನೇ ಮಗಳೇ’, ಎಂದು ಕೇಳಿ ಉತ್ತರಿಸುವುದರೊಳಗಾಗಿ ಚಿಕ್ಕಮ್ಮಣ್ಣಿ ತೂಕಡಿಸುತ್ತಿದ್ದಳು. ಇನ್ನು ಗೌರಿಯ ಬಗ್ಗೆಯೇನಾದರೂ ತಿಳಿಯೋಣವೆಂದರೆ ಪುಣ್ಯಾತ್ಮ ಅವಳ ಹೆಸರು ತಗೊಂಡ ಕೂಡಲೇ ಮುಖ ಬಿರುಸು ಮಾಡಿ ಕಿವಿಗೂದಲು ನಿಮಿರಿಸಿ, ನೋಟಗಳಲ್ಲಿ ಚೂರಿ ಹಿಡಿದು ಇರುಯುತ್ತಿದ್ದ. ಆದರೆ ವಿಷಯವನ್ನು ಚಿಕ್ಕಮ್ಮಣ್ಣಿಗಾಗಲಿ, ಛಾಯಾದೇವಿಗಾಗಲಿ ತಿಳಿಸಿರಲಿಲ್ಲ. ಆಗಲೂ ಗೌರಿಯ ಬಗ್ಗೆ ಅವರು ಕೇಳಿದರೆ –

“ಬೇಹುಗಾರರು ಶಿವಾಪುರಕ್ಕೆ ಹೋಗಿದ್ದಾರೆ. ಇಂದು ನಾಳೆ ಸುದ್ದಿ ತರುತ್ತಾರೆ. ಆದರೆ ಹೇಳ ಕೇಳದೆ ಮನೆಬಿಟ್ಟು ಹೋದ ಹೆಣ್ಣನ್ನು ನಾನು ಮನೆ ಸೇರಿಸಿಕೊಳ್ಳಲಾರೆ.”

– ಎಂದು ತನ್ನ ಹಳೆಯ ಮಾತನ್ನೇ ಪುನಃ ಹೇಳುತ್ತಿದ್ದ.

ಆದರೆ ಶಿಖರಸೂರ್ಯನಿಗೆ ಗೌರಿಯ ಬಗ್ಗೆ ಮಾಹಿತಿ ಇತ್ತು. ಗುಣದವ್ವನನ್ನು ಅಟ್ಟಿಸಿಕೊಂಡು ಹೋದ ನಂಬಿಕೆಯ ಬೇಹುಗಾರರೇ ಸುದ್ದಿ ತಂದಿದ್ದರು. ಶಿವಾಪುರಕ್ಕೆ ಹೋಗುವ ದಾರಿಯಲ್ಲೇ ಗೌರಿ ಹೊಟ್ಟೆ ನೋವೆಂದು ಚಡಪಡಿಸಿ ಸತ್ತಳೆಂದೂ, ಆದರೆ ಆಕೆ ರಾಜಕುಮಾರಿ ಎಂದು ಯಾರಿಗೂ ಗೊತ್ತಾಗಲಿಲ್ಲವೆಂದೂ ಹೇಳಿದ್ದರು. ಇದನ್ನು ಕೇಳಿ ಒಳಗೋಳಗೆ ಅವನೂ ಮರುಗಿದ. ಕೋಪದ ಪ್ರತಾಪದಲ್ಲಿ, ಹಿಂದೆ ಮುಂದೆ ನೋಡದೆ ಮಗಳಿಗೆ ವಿಷವಿಟ್ಟುದು ಒಳ್ಳೆಯದಾಗಲಿಲ್ಲವೆಂದುಕೊಂಡ. ನಿಜ ಗೊತ್ತಾದರೆ ಮಗ, ಅಜ್ಜಿ, ಮಡದಿಯಿರಲಿ, ಕನಕಪುರಿಯ ಯಾವನೊಬ್ಬ ಪ್ರಜೆಯೂ ತನ್ನ ಬಗ್ಗೆ ಹೇಸಿಕೆ ಪಟ್ಟುಕೊಳ್ಳದಿರಲಾರನೆಂದು ನಾಚಿಕೆಯಿಂದ ಪಶ್ಚಾತಾಪ ಪಟ್ಟ. ಆದರೆ ನಿನ್ನಡಿಯೇ ತರುಣಚಂದ್ರನೆಂದು ನೆನಪಾಗಿ ಮತ್ತೆ ಕೋಪಾವಿಷ್ಟನಾಗಿ ದವಡೆಯ ತುಂಬ ವಿಷ ತುಂಬಿಕೊಂಡು ಹೆಡೆಯಾಡಿಸುತ್ತಿದ್ದ. ಒಂದಂತು ನಿಜ. ನಿನ್ನಡಿ ನಾಶವಾಗುವತನಕ ತನಗಾಗಲಿ, ರವಿಗಾಗಲೆ ನೆಮ್ಮದಿಯಿಲ್ಲವೆಂದು ಖಾತ್ರಿ ಮಾಡಿಕೊಂಡಿದ್ದ. ಅಂಥ ವೈರಿಯನ್ನು ವರಿಸಿದ್ದು ಗೌರಿಯ ದೊಡ್ಡ ತಪ್ಪು. ಇದೂ ಚಿಕ್ಕಮ್ಮಣ್ಣಿಯದೇ ಕಿತಾಪತಿಯೆಂದು ಅವಳ ಮೇಲೂ ಹರಿಹಾಯುತ್ತಿದ್ದ. ಆದರೆ ತಾನೇ ಹಾಕಿದ ಮದ್ದಿನಿಂದ ಆ ವೃದ್ಧೆ ಸದಾಕಾಲ ತೂಕಡಿಸುತ್ತಿದ್ದಳಾಗಿ ಬಚಾವಾಗಿದ್ದಳು.

ಕೌಟುಂಬಿಕ ಸಮಸ್ಯೆ ಒಂದು ತೂಕವಾದರೆ ಕನಕಪುರಿಯೇ ಇನ್ನೊಂದು ತೂಕದ ಸಮಸ್ಯೆಯಾಗಿತ್ತು. ಧಾನ್ಯದ ಅಭಾವದಿಂದ ನಗರ ತತ್ತರಿಸಿ ಹೋಗಿತ್ತು. ಚಿನ್ನ ಕೊಡುತ್ತೇವೆಂದರೂ ಧಾನ್ಯ ಕೊಡುವವರಿರಲಿಲ್ಲ. ದೂರದ ದೇಶಗಳಿಂದ ಧಾನ್ಯವನ್ನು ಆಮದು ಮಾಡಿ ನಿಯಂತ್ರಣದಲ್ಲಿ ಹಂಚಲಾಗುತ್ತಿತ್ತು. ಇದರಿಂದ ವರ್ತಕರ ಸ್ವಾಭಿಮಾನ ಕೆರಳಿ ಕೆಂಡವಾಗಿದ್ದರು. ವರ್ತಕರ ಮಾತಿನಲ್ಲಿಯೇ ಹೇಳುವದಾದರೆ – “ಚಿನ್ನದ ತೂಕದಲ್ಲಿ ಧಾನ್ಯ ಸಿಗದಾಗಿತ್ತು!” ಸದಾ ಗಿಜಿಗುಟ್ಟುವ ಜನರಿಂದ ತುಂಬಿರುತ್ತಿದ್ದ ಕನಕಪುರಿಯ ಪ್ರಸಿದ್ಧ ಪೇಟೆ ಈಗ ಭಿಕೋ ಎನ್ನುತ್ತಿತ್ತು, ಇದರಿಂದಂತೂ ವರ್ತಕಜರ ಆತ್ಮಸ್ಥೈರ್ಯ ಕುಸಿದು ಕೆಲವರು ಅಕ್ಕಪಕ್ಕದ ರಾಜಧಾನಿಗಳಿಗೆ ನುಗ್ಗಿ ವ್ಯವಹಾರ ಕುದುರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಇವರಿಗಿಂತ ಮುನ್ನ ಅಲ್ಲಿಗೆ ನಕಲಿ ಚಿನ್ನದ ಕತೆಗಳು ಹರಡಿ ಕನಕಪುರಿಯವರು ಎಂದು ಹೇಳಿದೊಡನೆ ಅನುಮಾನದಿಂದ ನೋಡುತ್ತಿದ್ದರು. ಒಂದು ರಾಜ್ಯದಲ್ಲಂತೂ ಕನಕಪುರಿಯ ವರ್ತಕರೆಂದು ಹೇಳಿದ್ದೇ ತಡ ಸದರಿ ಇಬ್ಬರೂ ವರ್ತಕರನ್ನು ಸೆರೆಮನೆಗಟ್ಟಿದ್ದರು. ಹೀಗಾಗಿ ಕನಕಪುರಿಯವರು ಆತ್ಮ ವಿಶ್ವಾಸ ಕಳೆದುಕೊಂಡದ್ದರಿಂದ ಇನ್ನೊಂದು ಕಡೆ ವ್ಯವಹರಿಸಲು ಸಂಕೋಚ ಪಡುತ್ತಿದ್ದರು ಇಲ್ಲವೆ ಹೆದರುತ್ತಿದ್ದರು. ಏನೇನು ಮಾಡಲು ಸಾಧ್ಯವಾಗದೆ ಶಿಖರಸೂರ್ಯನಿಗೆ ಶಾಪಹಾಕುತ್ತ ಕೈಕೈ ಹೊಸೆಯುತ್ತ, ಅಂಗಡಿಗಳಲ್ಲಿ ಕೂತಿದ್ದರು.

ಇದು ಪೇಟೆಯ ಮಾತಾದರೆ ಊರ ಹೊರಗಿನ ಹೊರಕೇರಿ ಹೊಲಗೇರಿಗಳಲ್ಲಿ ಗಡ್ಡೀಬೇನೆ ಹಬ್ಬತೊಡಗಿತ್ತು. ಜನದಟ್ಟಣೆಯ ಹೊರಕೇರಿಯಲ್ಲಿ, ಆಗಲೇ ಆರೇಳೂ ಹೆಣ ಬಿದ್ದಿದ್ದವು. ಅದು ಭಯಂಕರ ಸಾಂಕ್ರಾಮಿಕ ರೋಗವೆಂದು ಶಿಖರಸೂರ್ಯನಂಥ ವೈದ್ಯಗೆ ಹೇಳಿಕೊಡಬೇಕಾಗಿದ್ದರಲಿಲ್ಲ. ಆದರೆ ಧಾನ್ಯದ ಅಭಾವ ಅದಕ್ಕಿಂತ ಭಯಾನಕವೆನ್ನುವುದೈ ನಿಜ!

ಇನ್ನು ಜನಗಳಾಡಿದ ಒಂದು ಮಾತೂ ಇವನ ಕಿವಿ ಹೊಕ್ಕು ಮಿಡಿಯಲಿಲ್ಲ. ಮಿಡಿಯುವದಕ್ಕೆ ಶಿಖರಸೂರ್ಯ ಬಿಡಲಿಲ್ಲ. ಸಧ್ಯ ತನ್ನ ಆಯುಧಾಗಾರದಲ್ಲಿ ವರ್ತಕರನ್ನು ಎದುರಿಸುವ ಆಯುಧಗಳಿರಲಿಲ್ಲ. ಅವನ್ನು ಸೃಷ್ಟಿಸಬೇಕಾಗಿತ್ತು. ಯಾಕೆಂದರೆ ಈ ರಾಜ್ಯವೇ ಅವರದು. ಆದರೆ ಇಷ್ಟು ಗೊತ್ತಿದ್ದೂ ಅವನು ಅಸಹಾಯಕನಾಗಿದ್ದ. ಬರುವ ಸುಗ್ಗಿಯತನಕ ಹ್ಯಾಗೋ ನಿಭಾಯಿಸಿಕೊಂಡು ಹೋಗಬೇಕೆಂದು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದ.

ಅಷ್ಟರಲ್ಲಿ ಶಿವಾಪುರದಲ್ಲಿ ಧಾನ್ಯದ ಹೇರಳ ಸಂಗ್ರಹವಿದೆಯೆಂಬ ಸುದ್ದಿ ಬಂತು ನೋಡು, ಶಿಖರಸೂರ್ಯನ ಕಿವಿ ಚುರುಕಾದವು. ಕ್ಷಿಪ್ರವಾಗಿ ಶಿವಾಪುರವನ್ನು ವಶಕ್ಕೆ ತಕ್ಕೊಳ್ಳುವ ಯೋಜನೆ ತಯಾರಿಸಿದ. ಸಿಡಿತಲೆ ಎಳೆಯುವ ಎರಡು ಗಾಡಿಗಳು, ಸಿಡಿತಲೆ ಸಿಡಿಸುವ ಎಂಟು ಜನ ಯೋಧರನ್ನು ಕರೆದು ಸಜ್ಜಾಗಿರಬೇಕೆಂದು ಆಜ್ಞೆಮಾಡಿದ.

ಶಿವಾಪುರವೇನು ದೊಡ್ಡ ರಾಜ್ಯವಲ್ಲ. ಎದುರಿಸುವಂಥ ಪಡೆಯಿಲ್ಲ, ಕೋಟೆ ಕೊತ್ತಳಗಳಿಲ್ಲ. ನೇರ ಹೋಗಿ ಧಾನ್ಯ ತಗೊಂಡು ಬೆಟ್ಟವ ವಶಪಡಿಸಿಕೊಂಡು ಬರುವುದೆಷ್ಟೋ ಅಷ್ಟೇ ಎಂಬಷ್ಟು ಸರಳ ಸಮಸ್ಯೆಯಾದರೂ ಇಷ್ಟೆಲ್ಲಾ ಪೂರ್ವತಯಾರಿ ಮತ್ತೂ ಒಂದು ಯೋಜನೆ ಬೇಕೇ? ಎನಿಸಬಹುದು. ಆದರೆ ಅದು ಜನಸಾಮಾನ್ಯರ ನಂಬಿಕೆಯ ಪ್ರದೇಶ. ಬಂಟರ ಸಹಾಯವಿಲ್ಲದೆ ತಾನೊಬ್ಬನೇ ಹೋಗಿ ಪ್ರಯೋಜನವಿಲ್ಲ. ದೋಚಿದ ಧಾನ್ಯವನ್ನ ತರಬೇಕಾದರೂ ಜನ ಬೇಕಲ್ಲ? ಇದು ಜನತೆಗೆ ಹೇಳುವ ಉತ್ತರವಾದರೂ ಅವನ ಮನದಿಂಗಿತದ ಮಹತ್ವಾಕಾಂಕ್ಷೆ ಇನ್ನೂ ಆಳವಾಗಿತ್ತು. ಶಿವಾಪುರದ ಮಡುವಿನ ಬುಡದಿಂದ ಬೆಟ್ಟದ ತುದಿಯವರೆಗಿನ ಒಂದೇ ಅಖಂಡ ಬಂಡೆ ಅಸಲಿ ಚಿನ್ನದ ಗಟ್ಟಿಯಾಗಿತ್ತು! ಅದು ನನ್ನದಾದರೆ ನನಗೆ ಸರಿಸಾಟಿ ಯಾರು? ಆವಾಗ ಇಂದ್ರ ಚಂದ್ರರಿಗೂ ಬಿಡಿಗಾಸಿನ ಬೆಲೆ ಇರೋದಿಲ್ಲ! ಅದನ್ನ ದೋಚಬೇಕಾದರೆ ಜನರ ಮನಸ್ಸನ್ನು ಪ್ರಭಾವಗೊಳಿಸುವ, ಒಪ್ಪಿಸುವ ರಾಜಕೀಯ ಬಲಬೇಕಿತ್ತು!

ನಮ್ಮ ಭಂಟರೋ ಶಿವಾಪುರ, ಶಿವಪಾದ, ಅಮ್ಮ ಎಂದರೆ ಅಡ್ಡ ಬೀಳುವಂಥವರು. ಇಂಥವರನ್ನು ಕಟ್ಟಿಕೊಂಡು ಶಿವಾಪುರದೆದುರು ಯುದ್ಧ ಮಾಡಲಾದೀತೆ? ಬಂಡೆಯ, ಸುಕ್ರರು ಮಾತ್ರವಲ್ಲ ಯಾವನೇ ಮನುಷ್ಯನನ್ನು ಒಯ್ಯಬಾರದೆಂದೂ, ಮೇವಿನ ಸೈನಿಕರನ್ನು, ಅದರಲ್ಲೂ ಗೊತ್ತಿಲ್ಲದ ಸ್ಥಳದ ಮೇವಿನಿಂದ ತಯಾರಿಸಲಾದ ಸೈನಿಕರನ್ನು ಯುದ್ಧದಲ್ಲಿ ತೊಡಗಿಸಬೇಕೆಂದೂ ನಿರ್ಧರಿಸಿದ. ಮತ್ತು ತಾನೂ ಶಿವಾಪುರದ ಮೇಲೆ ಯುದ್ಧಕ್ಕೆ ಹೋಗುತ್ತಿರುವ ಸಂಗತಿಯನ್ನು ಗೌಪ್ಯವಾಗಿಡಬೇಕೆಂದೂ ಸುಕ್ರನಿಗೆ ಹೇಳಿ, ಸಿಡಿತಲೆ ಎಳೆಯುವ ಎರಡು ಗಾಡಿ, ಹಾಗೂ ತನಗಾಗಿ ಇನ್ನೊಂದು ಗಾಡಿ ಹಾಗೂ ಎಂಟು ಜನ ಬಂಟರನ್ನು ಜೊತೆ ಕರೆದುಕೊಂಡು ಶಿವಾಪುರಕ್ಕೆ ಪಯಣವಾದ.

ಊರು ಪ್ರವೇಶಿಸುವ ಮುನ್ನ ಅಗಸಿಯಲ್ಲಿ ಗಾಡೀ ನಿಲ್ಲಿಸಿ ಒಂದು ಸಲ ಇಡೀ ರಸ್ತೆಯನ್ನೆ, ಆಜೂ ಬಾಜೂ ಇದ್ದ ಮನೆ ಗೊಡುಗಳನ್ನ, ರಸ್ತೆಯಂಚಿನ ಮಂಟಪವನ್ನ, ಬೀದಿಯ ಎಡಭಾಗದಲ್ಲಿ ಎದ್ದು ಕಾಣುವ ಬೆಳ್ಳಿಯ ಮನೆಯನ್ನ ನೋಡಿದ. ಈಗ ಬೆಳ್ಳಿಯೇ ಹೊರಗಡೆ ಬಂದು ನಿಂತರೆ – ಅವಳೆದುರು ತನ್ನ ವೈಭವವನ್ನು ಮೆರೆಯಬಹುದೆಂಬ ಆಸೆ ಮೂಡಿತು. “ಇಂದಿಲ್ಲಾ ನಾಳೆ ನನ್ನ ಬಳಿಗೆ ಬರಲೇಬೆಕಲ್ಲ” ಎಂದುಕೊಳ್ಳುತ್ತ ಆಮೇಲೆ ಬೆಟ್ಟದ ಕಡೆಗೆ ದೃಷ್ಟಿಯನ್ನು ಚಲಿಸಿದ. ದೃಷ್ಟಿ ತುದಿ ತಲುಪುವ ಮುನ್ನವೇ ಗೋಮಾಳದ ದಿನ್ನೆಯ ಮೇಲೊಂದು ಹೊಸ ದೇವಸ್ಥಾನ ಎದ್ದುದನ್ನು ನೋಡಿ ಇದಾವ ದೇವರು ಬಂತೋ ಎಂದು ಶಿವಾಪುರದ ಮೂಢನಂಬಿಕೆಗೆ ಕರುಣೆಗೊಂಡು, ಆಮೇಲೆ ಬೆಟ್ಟವ ನೋಡಿದ! ಕಣ್ಣು ಫಳ್ಳನೆ ಮಿಂಚಿದವು! ಚಿನ್ನದ ಬೆಟ್ಟ! ಇದೊಂದು ವಶವಾದರೆ…. ಎಂದುಕೊಳ್ಳುತ್ತ, ಅದು ವಶವಾದ ಮೇಲೆ ತನಗೆ ಸಿಕ್ಕುವ ವೈಭವವನ್ನ ಕಲ್ಪಿಸಿಕೊಂಡು ಪುಳಕಿತನಾದ!

ಊರಿನ ಜನರಾಗಲೇ ಕುದುರೆಗಾಡಿಯ ಸುತ್ತ ನೆರೆದಿದ್ದರು. ಮಕ್ಕಳು ಹೆಂಗಸರು ಭೀತಿ ಬೆರಗುಗಳಿಂದ ರಾಜನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರು. ಜನಗಳೇನು ರಾಜನನ್ನು ಕಾಣದವರಲ್ಲ. ಆದರೆ ಇವನ ವೈಭವ ತುಂಡರಸರ ವೈಭವಕ್ಕಿಂತ ಎಷ್ಟೋ ಪಾಲು ಹೆಚ್ಚಾಗಿತ್ತು. ಇವನ ಆಕಾರ, ವ್ಯಕ್ತಿತ್ವವು ಹಾಗಿತ್ತು. ಆದರೆ ಈ ಹಿಂದೆ ನಮ್ಮಲ್ಲಿದ್ದ ಜನಸೂರ್ಯನೇ ಇವನು! ಎಂದು ಯಾರಿಗೊಬ್ಬರಿಗೂ ಹೊಳೆಯಲಿಲ್ಲ. ಯಾರಿವನು? ರಾಜನೋ? ದೇವರೋ? ಎಂದು ಜನ ತಂತಮ್ಮಲ್ಲೇ ಕದ್ದಾಡಿಕೊಳ್ಳುತ್ತಿದ್ದರು.

ಈ ಊರನ್ನು ಮೊದಲಿನಿಂದ ಬಲ್ಲನೆಂದು ತೋರಿಸಿಕೊಳ್ಳಲು – ಅಂದರೆ ಆಗಲಾದರೂ ಜನ ತನ್ನನ್ನು ಗುರುತಿಸಿ ಬೆರಗುಗೊಂಡಾರೆಂದು, –

“ಅಮ್ಮನ ಜಾತ್ರೆ ಯಾವಾಗ್ರಯ್ಯಾ?”

ಅಂದ. ಈ ಮಾತು ಅರ್ಥವಾಗಿ ಅನೇಕರು ಉತ್ತರಿಸಲು ಮುಂದೆ ಬಂದರು. ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟರೂ ಎಲ್ಲ ಉತ್ತರಗಳ ಸಾರಾಂಶ ಒಂದೇ ಆಗಿತ್ತು: ಜಾತ್ರೆ ಎಂದೋ ಮುಗಿದು ಹೋಗಿದೆ!

ಶಿಖರಸೂರ್ಯನಿಗೆ ನಿರಾಸೆಯಾಯ್ತು. ತಕ್ಷಣ ಕುದುರೆಗಳನ್ನ ಚಲಿಸುವಂತೆ ಮಾಡಿ ಊರ ಹೊರಗಿನ ಮುರಿಗೆಪ್ಪನ ತೋಟಕ್ಕೆ ಹೋದ!

ಅಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿ ನಿನ್ನಡಿಯ ಕರೆತರಲು ಜನ ಕಳಿಸಿ ಬೆಟ್ಟಕ್ಕೆ ಹೋದ. ಮ್ಯಾಲೆ ಆಕಾಶದ ನೀಲಿ ಮಡುಗಟ್ಟಿದ ಸರೋವರದ ಹಾಗೆ, ಕೆಂದೇರಿದ ಸೂರ್ಯ ಅದರಲ್ಲಿ ಅರಳಿದ ಕಮಲದ ಹಾಗೆ ಕಾನುತ್ತಿದ್ದ. ಸಂಜೆಯ ನಸುಗೆಂಪು ವರ್ಣವನ್ನ ಮೋಡಗಳ ಮ್ಯಾಲೆ ಚೆಲ್ಲಿ ಅಲ್ಲಿ ಸ್ವರ್ಗ ಪ್ರತಿಬಿಂಬಿಸಿದಂತೆ ಕಾಣುತ್ತಿತ್ತು. ಕೆಳಗೆ ಶಿವಾಪುರದ ಬದುಕು ಸ್ತಬ್ಧವಾಗಿರುವಂತೆ ಮೌನ ಆವರಿಸಿತ್ತು.

ಬೆಟ್ಟ ಹತ್ತಿ ಹೊನ್ನೆಮರದಡಿಯ ಕಟ್ಟೆಯ ಮೇಲೆ ಕೂತ. ಆ ಮರದಡಿ ಕೂತಾಗ ಯಾರೋ ಗುಡ್ಡದಳತೆಯ ವ್ಯಕ್ತಿಯೊಬ್ಬನ ಮುಂದೆ ಕೂತಂತೆ ಅನುಭವವಾಯಿತು. ಆ ಗಾತ್ರದ ವ್ಯಕ್ತಿ ನಿಜವಾಗಿ ಅಕ್ಕಪಕ್ಕ ಕೂತರೆ…. ಎಷ್ಟು ಭಯಾನಕ ಅಂದುಕೊಂಡು ಆಮೇಲೆ ಶಿವಪಾದ ನಿಲ್ಲುತ್ತಿದ್ದ ಸ್ಥಳಕ್ಕೆ ಹೋಗಿ ನಿಂತುಕೊಂಡ. ಪರಿಮಳಯುಕ್ತವಾದ ಗಾಳಿಯ ಸೇವನೆಯಿಂದ ಶ್ವಾಸಕೋಶಗಳಿಗೆ ಚೈತನ್ಯವೊದಗಿ ಸಂತೋಷವಾಯಿತು. ಕೊಳ್ಳ, ಘಟಪ್ರಭಾ ನದಿ, ಬೆಟ್ಟ, ನಾಚಿಕೆಯಿಂದ ಮರಗಳಲ್ಲಿ ಮುಖ ಮುಚ್ಚಿಕೊಂಡ ಶಿವಾಪುರ – ಇವೆಲ್ಲ ಮನಪಸಂದಾಗಿ ಶೋಭಿಸಿದವು. ವಿಭಿನ್ನ ಸೌಂದರ್ಯದ ಈ ನೋಟದಿಂದ ಶಿಖರಸೂರ್ಯನಲ್ಲಿ ಮಾತ್ಸರ್ಯ ಉಂಟಾಯಿತು. ತನ್ನಲ್ಲಿಗೆ ಒಬ್ಬ ಚಕ್ರವರ್ತಿ ಬಂದಿರುವನೆಂದಾಗಲಿ, ತನ್ನನ್ನು ಇದಕ್ಕಿಂತ ನೂರುಪಟ್ಟು ಆಕರ್ಷಣೀಯ ಸ್ಥಳವನ್ನಾಗಿ ಮಾಡಬಲ್ಲ ದೊರೆ ಬಂದಿರುವನೆಂದಾಗಲೆ ಬಡ ಶಿವಾಪುರಕ್ಕೆ ಗೊತ್ತೇ ಇರಲಿಲ್ಲ!

ಕೆಳಗಿನ ಕೊಳ್ಳ, ಗದ್ದೆಗಳು, ಕಾಡಿನ ಹಸಿರು ಎಲ್ಲವನ್ನು ನೋಡುತ್ತಿದ್ದಂತೆ ಶಿವಪಾದ ಹೇಳುತ್ತಿದ್ದುದು ನೆನಪಾಯಿತು:

“ಕನಕಪುರಿಯವನನ್ನ ಕೇಳು: ‘ನನ್ನಂಥಾ ಬಡವನೇ ಜಗತ್ತಿನಲ್ಲಿಲ್ಲ’ ಅಂತಾನೆ”.

“ಶಿವಪುರದವನನ್ನ ಕೇಳು: ಈ ಹಸಿರು, ಬೆಟ್ಟ, ನದಿ, ಕೊಳ್ಳ, ಆಕಾಶ, ಭೂಮಿ ಎಲ್ಲವೂ ನಮ್ಮದೆ! ನಮ್ಮಂಥಾ ಶ್ರೀಮಂತರು ಯಾರಿದ್ದಾರಪ್ಪಾ?”

ಈ ಮಾತು ಈಗ ನಿಜ ಅನ್ನಿಸಿತು. ‘ಇದೆಲ್ಲಾ ನನ್ನದೇ!’ ಎಂದು ಹೆಮ್ಮೆಯಿಂದ ಕೊಳ್ಳವನ್ನ, ಬೆಟ್ಟದಿಂದ ಇಳಿವ ಘಟಪ್ರಭಾ, ಅದು ಬೀಳುವಲ್ಲಿ ಉಂಟಾದ ಚಂದ್ರಾವತಿ ಮಡು, ಅದರ ಸುತ್ತ ಥರಾವರಿ ಮರಗಳು, ನಿರ್ಭಯದಿಂದ ನೀರು ಕುಡಿಯಲಯ ಬರುವ ಮೃಗಗಳು, ದಂಡೆಯನ್ನು ಬಿಡಲಾರದೆ ಅಲ್ಲೇ ಮಲಗಿ ಕಾಲ ಕಳೆಯುವ ಸೋಂಬೇರಿ ಪ್ರಾಣಿಗಳು, ಮಡುವಿನಲ್ಲಿರುವ ಚಿನ್ನದ ಹರಳುಗಳು, ಮಂಟಪವೊಂದೇ ಎತ್ತರವಾಗಿರುವ ಪುಟ್ಟ ಶಿವಾಪುರ, ಕಡುವಾದ ಹಸಿರು ಘನೀಭೂತವಾದಂತಿದ್ದ ಕಾಡು, ಇದೆಲ್ಲಾ ನನ್ನದೇ! ಹಿಂದೆ ಇಲ್ಲಿದ್ದಾಗ ಯಾವುದೂ ಚಂದ ಕಂಡಿರಲಿಲ್ಲ. ಈಗ ಎಲ್ಲವೂ ಚಂದ ಕಂಡಿತು. ಶಿವಾಪುರದ ಸೌಂದರ್ಯವನ್ನು ಹಡಿದ ಕಣ್ಣುಗಳಿಂದ ಹೀರುವಂತೆ ನೋಡಿದ. ಈಗ ಬೆಳ್ಳಿಯ ನೆನಪಾಯಿತು. ಅವಳ ಭುಜದ ಮೇಲೆ ಎಡಗೈ ಇಟ್ಟು ಜೊತೆಯಲ್ಲಿ ಕೆಳಗಿನ ಶಿವಾಪುರವ ನೋಡುವಂತಾಗಿದ್ದರೆ!

‘ಸೂರ್ಯನ ಕಿರಣಗಳಲ್ಲಿ ಮಿನಿಗುತ್ತಿರುವ ಚಿನ್ನದ ಘಟ್ಟಿ ಈ ಬೆಟ್ಟ, ಈಗ ನನ್ನ ಪದತಲದಲ್ಲಿದೆ! ಎಲಗೇ ಬೆಡಗಿನ ಬೆಳ್ಳಿ, ಈ ಬೆಟ್ಟದ ಮ್ಯಾಲೊಂದು ರಾಜಧಾನಿಯ ನಿರ್ಮಿಸುತ್ತೇನೆ ನಿನಗಾಗಿ! ಭವ್ಯ, ಅದ್ಭುತ ಸೌಧಗಳ ನಗರಿಗೆ ನೀನೇ ಮಹಾರಾಣಿ. ಐವತ್ತಾರು ದೇಶಗಳ ಚಕ್ರವರ್ತಿನಿ! ಐವತ್ತಾರು ದೇಶಗಳಿಗೆ ಕೃಪೆ ಮಾಡುವ ಸ್ಥಳದಲ್ಲಿ ನಿನ್ನ ಕೂರಿಸುತ್ತೇನೆಯೇ ಬೆಳ್ಳಿ!’

‘ಎಷ್ಟು ವರ್ಷಗಳಿಂದ ಇದು ಹೀಗೇ ಇದೆಯಲ್ಲ!’ ಎಂದು ಶಿವಾಪುರದ ಪ್ರಾಚೀನ ಸೌಂದರ್ಯಕ್ಕೆ ಮಾರುಹೋದ! ಎಷ್ಟೊಂದು ಕಾಲ ಸರಿದು, ಏನೆಲ್ಲ ಬದಲಾವಣೆಗಳನ್ನ ಕಂಡಿವೆ ಕನಕಪುರಿಯಂಥ ಸ್ಥಳಗಳು! ಕಾಲದ ಒಂದೊಂದು ಹೆಜ್ಜೆ ಗುರುತುಗಳನ್ನೂ ಲೆಕ್ಕ ಹಾಕಿ ಹೇಳಬಹುದಾದಂತೆ ಕನಕಪುರಿಯ ಲಕ್ಷಣಗಳಿಗೆ. ಆದರೆ ಈ ಶಿವಾಪುರ ಹಾಗಲ್ಲ, ಕಾಲ ಇಲ್ಲೂ ಇದೆ – ಅಖಂಡವಾಗಿ, ತಾನಿಟ್ಟ ಎಲ್ಲಾ ಹೆಜ್ಜೆಗಳ ಜೀವಂತ ಮೊತ್ತವಾಗಿ! ನಾನು ಕಟ್ಟಲಿರುವ ರಾಜಧಾನಿ ನಿರ್ಮಾಣವಾದ ಮೇಲೆ ಈ ಭಾಗ ಹ್ಯಾಗೆ ಕಾಣುವುದೆಂಬ ಕಲ್ಪನೆಯಿಂದ ಪುಳಕಿತನಾದ.

ಇಷ್ಟು ದಿನ ಕನಸಾಗಿದ್ದ ಶಿವಾಪುರ ಈಗ ನನ್ನ ವಶದಲ್ಲಿದೆ. ಮನಸ್ಸು ಮಾಡಿದರೆ ನಾನಿದನ್ನ ಬೂದಿ ಮಾಡಬಹುದು. ಬೇಕಾದರೆ ಇಂದ್ರ ನಗರಿಯಾಗಿ ಪರಿವರ್ತಿಸಬಹುದು. ಎರಡೂ ನನ್ನ ಕೈಯಲ್ಲಿವೆ!

ತಾನು ಮತ್ತು ಬೆಳ್ಳಿ ಎದುರಾಗುವುದನ್ನ ಕಲ್ಪಿಸಿಕೊಂಡ. ‘ಕಳೆದ ಬಾರಿ ಅವಳು ತಿರಸ್ಕರಿಸಿದ್ದರೆ ಅದು ಸಹಜವೆ. ಆಗಿನ್ನೂ ಜಟ್ಟಿಗನಿದ್ದ. ತಾನೊಬ್ಬ ಭಿಕಾರಿಯಾಗಿದ್ದ. ಈಗ ನಾನು ಚಕ್ರವರ್ತಿ! ಒಂದು ಕಡಿಮೆ ಇಪ್ಪತ್ತು ದೇಶಗಳ ರಾಜ ಮಹಾರಾಜರುಗಳೇ ನನ್ನ ಆಜ್ಞೆಗಾಗಿ ಕಾದಿರುವಾಗ ನಿನ್ನಡಿ ಬೆಳ್ಳಿಗಳ್ಯಾರು? ಎಷ್ಟರವರು?’

ಕೆಳಗಿನ ಶಿವಪುರದ ಪ್ರಾಣಿಗಳಂತಿರುವ ಜನಗಳನ್ನು ಜ್ಞಾಪಿಸಿಕೊಂಡು ಖಿನ್ನನಾದ. ನಾನವರಿಗೆ ನಾಗರಿಕತೆ ಕಲಿಸಬೇಕು. ಕಾಡಿಗಿಂತ ಹೆಚ್ಚು ಮಹತ್ವಾಕಾಂಕ್ಷೆಯ, ಹೆಚ್ಚು ಸುಖ ಸೌಲಭ್ಯಗಳುಳ್ಳ, ಹೆಚ್ಚು ಆನಂದವನ್ನ ನೀಡುವ ಜೀವನ ಪದ್ಧತಿಯಿದೆ. ಬರೀ ಪ್ರಾಣಿಗಳಂತೆ ಬದುಕುವುದರಲ್ಲೇ ಮನುಷ್ಯನ ಸುಖ ನಿಲ್ಲುವುದಿಲ್ಲ, ಅದರಾಚೆಗೂ ಇದೆಯೆಂಬುದನ್ನು ಇವರಿಗೆ ತೋರಿಸುತ್ತೇನೆ. ನಿಮ್ಮ ನೆಮ್ಮದಿ ಪ್ರಾಣಿಗಳಿಗಿರುವ ನೆಮ್ಮದಿ ಕಣ್ರಯ್ಯಾ! ಬುದ್ಧಿವಂತರ ನೆಮ್ಮದಿಯಲ್ಲ. ಬುದ್ಧಿವಂತರಾಗಿದ್ದರೆ ಈ ರೀತಿ ಪ್ರಾಣಿಗಳಂತೆ ನೀವು ಇರುತ್ತಿರಲಿಲ್ಲ – ಎಂಬುದನ್ನ ಖಾತ್ರಿ ಮಾಡಿಕೊಡುತ್ತೇನೆ.

“ನಾನು ಅವರಿಗೆ ಚಿನ್ನದ ಹೊಸ ದೇವರನ್ನು ತೋರಿಸುತ್ತೇನೆ. ಅವರ ಗವಿಯಲ್ಲೇ ಇರುವ ಹಡೆಯುವ ಕಲ್ಲಿನ ದೇವರಿಗೆ ಬದಲು, ಹೊಳೆಯುವ, ಹೊಟ್ಟೆ ತುಂಬಿಸುವ ಚಿನ್ನದ ದೇವರನ್ನ ತೋರಿಸುತ್ತೇನೆ. ಮಂಕು ಮರುಳು ಮಾಡುವ ಕತೆ ಹಾಡುಗಳಿಂದಲ್ಲ. ನೇರವಾಗಿ ಕಣ್ಣಿಗೆ ರಾಚುವಂತೆ ಸತ್ಯ ತೋರಿಸುವುದರಿಂದ ಅವರನ್ನು ತಿದ್ದುತ್ತೇನೆ. ಹೊಚ್ಚು ಹೊಸ ಭವ್ಯ ಭವಿಷ್ಯವನ್ನು ತೋರಿಸುತ್ತೇನೆ, ನಾನೇ ನಿಮ್ಮ ಭವಿಷ್ಯ ಅಂತ ಹೇಳ್ತೇನೆ”.

“ಗೊಡ್ಡು ಅಮ್ಮನನ್ನು ಬಿಟ್ಟು ಇನ್ನೊಂದನ್ನು ಕಾಣದ ಈ ಊರಿಗೆ ಕನಕಪುರಿಯ ವ್ಯವಹಾರ ಪ್ರತಿಭೆಯನ್ನ ಕಸಿ ಮಾಡಿ ಬೆಟ್ಟದಗುಂಟ ದೊಡ್ಡ ರಾಜಧಾನಿಯನ್ನು ಕಟ್ಟುತ್ತೇನೆ! ಇನ್ನು ಮುಂದೆ ಇದು ಅಮ್ಮನ ದರಿದ್ರ ಶಿವಪುರವಾಗಿ ಉಳಿಯುವುದಿಲ್ಲ. ಸೂರ್ಯಪುರವಾಗಿ ಐವತ್ತಾರು ದೇಶಗಳ ಬೃಹನ್ನಗರವಾಗಿ ಬೆಳೆಯುತ್ತದೆ”

– ಎಂದು ಅಂದುಕೊಳ್ಳುವಷ್ಟರಲ್ಲಿ ಯಾರೋ ಬಂದಂತೆನಿಸಿ ತಕ್ಷಣ ಹೊನ್ನೆ ಮರದ ಮರೆಗೆ ನಿಂತು ಬಂದವರು ಯಾರು ಎಂದು ಹಣಿಕಿದ. ಒಬ್ಬ ಹೆಂಗಸು, ಅವಳ ಹಿಂದಿನಿಂದ ಒಬ್ಬ ತರುಣ ಇದ್ದ. ಹೆಂಗಸು ಬೆನ್ನ ಮೇಲೆ ಹಸಿಕೂದಲು ಬಿಟ್ಟಿದ್ದಳು. ಮಿಂದು ಒದ್ದೆ ಬಟ್ಟೆಯಲ್ಲೇ ಬಂದಿದ್ದರಿಂದ ಬಟ್ಟೆ ಮೈಗುಂಟ ದೇಹದ ಸಣ್ಣ ದೊಡ್ಡ ಉಬ್ಬುಗಳನ್ನು ಆಕರ್ಷವಾಗಿ ತೋರಿಸುತ್ತಿತ್ತು. ಇನ್ನೂ ಮುಂದೆ ಬಂದಾಗ ನೋಡಿದರೆ ಬೆಳ್ಳಿ! ಶಿಖರಸೂರ್ಯನ ಹೃದಯದ ಬಡಿತ ಹೆಚ್ಚಾಗಿ, ಮುಖಕ್ಕೆ ನೆತ್ತರೇರಿ ಒಂದು ಕ್ಷಣ ಕಣ್ಣು ಮುಚ್ಚಿ ಸುಧಾರಿಸಿಕೊಂಡ. ಅಷ್ಟರಲ್ಲಿ ತರುಣನೂ ಹತ್ತಿರ ಬಂದ. ಸೊಂಟದ ಬಟ್ಟೆ ಬಿಟ್ಟರೆ ಉಳಿದಂತೆ ಅವನೂ ಮಿಂದು ಬಂದುದರಿಂದ ಒ‌ದ್ದೆ ಕೂದಲು ಕತ್ತು, ಭುಜಗಳ ಮ್ಯಾಲೆ ಹರಡಿ ಅವನ ಆಕೃತಿಗೊಂದು ಅನುಪಮ ಸೌಂದರ್ಯ ಕೊಟ್ಟಿತ್ತು. ಆಗಂತುಕರಿಬ್ಬರೂ ಆ ಕಡೆ ಈ ಕಡೆ ನೋಡದೆ ನೇರವಾಗಿ ಗವಿಯೊಳಕ್ಕೆ ಹೋದರು. ಈಗಿವರು ಬಂದದ್ದು ಶಿವಪಾದ ನಿರ್ವಾಣವಾದ ನಂತರದ ಮೂರನೇ ಹುಣ್ಣಿಮೆಯ ಶಿವಸೋಮವಾರದಂದು.