ಇವರು ಶಿವಾಪುರ ತಲುಪಿದಾಗ ಗೋಧೂಳಿ ಲಗ್ನದ ಸಮಯವಾಗಿತ್ತು. ಊರಿಗೂರೇ ಇವರನ್ನು ಸ್ವಾಗತಿಸಲು ನಿಂತಿತ್ತು. ಭೈರನ ಮೇಲೆ ಬಂದ ಗೌರಿಯಂತೂ ನಂದಿಯನ್ನೇರಿ ಬಂದ ಪಾರ್ವತಿಯಂತೇ ಕಂಡು ಗಂಡು ಹೆಣ್ಣು ಭಾವುಕರಾಗಿ ಕೈಮುಗಿದು ಆನಂದಭಾಷ್ಪ ಸುರಿಸಿದರು. ಬೆಳ್ಳಿಯ ಸಡಗರವನ್ನಂತೂ ಹೇಳತೀರದು. ಗೌರಿಗೆ ಸಾವಿರ ಸಲ ಲಟಿಕೆ ಮುರಿದಳು. ಸಾವಿರ ಸಲ ದೃಷ್ಟಿ ನಿವಾಳಿಸಿದಳು. ಅಂದು ಸಂಜೆಯೇ ನಿನ್ನಡಿ ಗೌರಿಯನ್ನು ಜಟ್ಟಿಗನ ಸಮಾಧಿಗೆ ಕರೆದೊಯ್ದು. ಇಬ್ಬರೂ ಜಟ್ಟಿಗನಿಗೆ ನಮಸ್ಕರಿಸಿ ಬಂದರು. “ಸೊಸೆಯನ್ನು ನೋಡಲು ನೀನಿರಬೇಕಿತ್ತೋ ನನ್ನ ಜಟ್ಟಿಗ” ಎಂದು ಬೆಳ್ಳಿ ಅತ್ತಳು.

ಬೆಳ್ಳಿ ಮೂಡುವ ಮೊದಲೇ ಬೆಳ್ಳಿ ಮತ್ತು ನಿನ್ನಡಿ ಮಿಂದು ಹೆತ್ತಯ್ಯ ಮುತ್ತಯ್ಯರ ನೆನೆದು, ಜಟ್ಟಿಗನ ಗೋರಿಗೆ ನಮಿಸಿ, ಬೆಟ್ಟಕ್ಕೆ ಹೋದರು. ಹೇಳಿದ ಸಮಯಕ್ಕೆ ಮುತ್ತೈದೆಯರೊಂದಿಗೆ ಗೌರಿಗೆ ಅರಿಷಿಣ ನೀರೆರೆದು ಮುಡಿಯುಡಿಸಿ ಬೆಟ್ಟ ಏರಿದರು. ಸಕಾಲದಲ್ಲಿ ಶಿವಪಾದನ ನೇತೃತ್ವದಲ್ಲಿ ಅಮ್ಮನ ಸಾಕ್ಷಿಕದಲ್ಲಿ ಗೌರಿಯನ್ನ ನಿನ್ನಡಿಗೆ ಧಾರೆಯೆರೆದುಕೊಟ್ಟರು. ಸುತ್ತಲಿನ ಒಂದು ಕಡಿಮೆ ನಲವತ್ತು ಹಟ್ಟಿಯ ಜನ ಸೇರಿದ್ದರು. ನಿನ್ನಡಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಈ ವಾರ ನಿರೀಕ್ಷೆ ಮೀರಿ ಕನಕಪುರಿ ಕಡೆಯ ಜನರು ವಲಸೆ ಬಂದುದರಿಂದ ಸಂಗ್ರಹವಾದ ಧಾನ್ಯ ಸಾಲದೇ ಬರಬಹುದೆಂದು ಹೆದರಿದ್ದ. ಆದರೆ ವಲಸೆಯ ಜನರನ್ನು ಗಮನಿಸಿಯೇ ಸೀಮೇಯ ಜನ ಮೂರು ಮೂರು ಬಂಡಿ ಧಾನ್ಯ ತುಂಬಿಸಿಕೊಂಡು ಬಂದು ಸುರುವಿದ್ದರು. ಅವರವರೇ ಕೆಲಸ ಹಂಚಿಕೊಂಡು ಬೆಟ್ಟದ ತುಂಬ ಸೇರಿದ ಜನಕ್ಕೆ ಭಾರಿ ಭೋಜನದ ವ್ಯವಸ್ಥೆ ಮಾಡಿದ್ದರು. ಬೆಟ್ಟ ಏರಲಾರದ ವೃದ್ಧರಿಗೂ ಬಾಣಂತಿಯರಿಗೂ ಶಿವಾಪುರದ ಮಂಟಪದ ಬಳಿ ಇನ್ನೊಂದು ಚಪ್ಪರ ಕಟ್ಟಿ ವ್ಯವಸ್ಥೆ ಮಾಡಿದ್ದರು.

ಎಲ್ಲಿ ನೋಡಿದಲ್ಲಿ ಮೇಲೆ ಬೆಟ್ಟದ ತುಂಬ, ಕೆಳಗೆ ಊರು ಕೇರಿ ಮಡುವಿನ ಸುತ್ತ ಮುತ್ತ ಹಾಡುವ, ಕುಣಿಯುವ, ಕುಡಿನೋಟದಲ್ಲಿ ಮಾತಾಡಿಕೊಂಬ ಬೇಟಬೇಟೆಯ ಹುಡುಗಿಯರಿಂದ, ಚೇಷ್ಟೆ ಮಾಡುವ ಮುದುಕ ಮುದುಕಿಯರಿಂದ ಇಡೀ ಪ್ರದೇಶ ದಿಮಿದಿಮಿ ದಿಮಿ ಎನ್ನುವಂತೆ ಜನ ಹಬ್ಬವನ್ನು ಆಚರಿಸಿದರು. ಪ್ರಾಣಿಗಳ ಕೂಗುಗಳನ್ನು ಅನುಕರಿಸುವ, ಅಣಕಿಸುವ, ಥರಾವರಿ ದೈಹಿಕ ಚಮತ್ಕಾರಗಳನ್ನು ತೋರಿಸುವ ಸೋಬಾನೆ ಲಾವಣಿ ಹಾಡುವ, ಹಲಗೆ ಕರಡಿ ಡೊಳ್ಳು ಬಾರಿಸುವ ವಿವಿಧ ವೇಷ ಪ್ರದರ್ಶನಗಳಿಗಂತೂ ಲೆಕ್ಕವಿರಲಿಲ್ಲ.

ಗೌರಿ, ಶಿವಪಾದರು ಪರಸ್ಪರ ನೋಡಿದ ತಕ್ಷಣದಿಂದಲೇ ಕಳೆದು ಹೋದ ತಾತ, ಮೊಮ್ಮಗಳು – ಪುನಃ ಭೇಟಿಯಾದವರಂತೆ ಹಚ್ಚಿಕೊಂಡರು. ಗವಿಯ ಒಳಗೂ ಜನ, ಹೊರಗು ಜನ … ಜನರನ್ನೂ ನೋಡಿದಷ್ಟೂ ಶಿವಪಾದನಿಗೆ ಸಂತೋಷ ಹೆಚ್ಚಿತು.

ಇಳಿ ಹೊತ್ತಿನಲ್ಲಿ ಗೌರಿಯನ್ನು ಹತ್ತಿರ ಕೂರಿಸಿಕೊಂಡು ಪ್ರೀತಿಯಿಂದ ಅನೇಕ ವಿಷಯಗಳನ್ನು ಹೇಳಿ, ಕೇಳಿದ. ಆಕೆ ಮೆಲ್ಲಗೆ ಆತನ ಕಿವಿಯಲ್ಲಿ “ತಾತ ನನಗೆ ಒಂಬತ್ತನೇ ಕತೆ ಹೇಳು” ಎಂದಳು. ಅಲ್ಲೇ ಕೂತಿದ್ದ ಬೊಂತೆಯ ಏನನ್ನೋ ಹೇಳಲು ಬಹಳ ಒದ್ದಾಡುತ್ತಿದ್ದ. ಕೈ ಸನ್ನೆ ಬಾಯಿ ಸನ್ನೆ ಮಾಡಿ ಏನನ್ನೋ ಕೇಳಲು ತವಕಿಸುತ್ತಿದ್ದ, ಅವನನ್ನು ನೋಡಿ ಶಿವಪಾದ ಮುಗುಳುನಗುತ್ತಿದ್ದ. ಗೌರಿ ತಾನೇ ಮುಂದಾಗಿ “ಅವನು ಬೊಂತೆಯ, ಬಾಯಿ ಇಲ್ಲ ತಾತ” ಅಂದಳು. “ಅಲ್ಲ ಅವನು ಮಹಾನುಭಾವ. ಈಗ ಮಾತಾಡುತ್ತಾನೆ ನೋಡು” ಎಂದ ಶಿವಪಾದ.

ಬೊಂತೆಯ ತಲೆ ಚಚ್ಚಿಕೊಂಡು ತಲೆಗೂದಲು ಕಿತ್ತುಕೊಳ್ಳುತ್ತ “ತಾ…. ತಾ… ತಾತಾ ಶಿವಾಪುರ ಎಲ್ಲಿ?” ಅಂದ.

ಗೌರಿಗೆ ಮೈತುಂಬ ಸಳ ಸಳ ಪುಳಕವೆದ್ದು ತೆರೆದ ಬಾಯಿ ತೆರದಂತೇ ಕಣ್ಣಗಲಿಸಿ ಶಿವಪಾದನನ್ನೇ ನೋಡುತ್ತ ಬರೆದ ಚಿತ್ರದ ಹಾಗೆ ಕೂತುಬಿಟ್ಟಳು. ಶಿವಪಾದ ಅವಳ ಭುಜ ತಟ್ಟಿ “ಕೇಳಿದೆಯಾ ಕೂಸೇ?” ಅಂದ.

“ನಿನಗೆ ಹೇಳುವ ಕಥೆಯೇ ಅವನಿಗೆ ಉತ್ತರ. ತೋರಿಸುತ್ತೇನೆ ಇಬ್ಬರೂ ಬನ್ನಿ”

– ಎಂದು ಎದ್ದು ಗೌರಿಯ ಭುಜದ ಮೇಲೆ ಬಲಗೈಯನ್ನು ಊರಿ ಮಾತಾಡುತ್ತ ನಿಧಾನವಾಗಿ ನಡೆದ. ಶಿವಪಾದ ಹೇಳಿದ:

“ಇವನು ತಾ ಮಾಡಿದ ಕರ್ಮಕ್ಕೆ ಪಶ್ಚಾತ್ತಾಪ ಪಟ್ಟು ನಿನ್ನ ಮತ್ತು ನಿನ್ನಡಿಯ ಸೇವೆ ಮಾಡಿಕೊಂಡಿರಲು ಬಂದಿದ್ದಾನೆ”

ಗೌರಿಗೆ ಶಿವಪಾದ ಹೇಇದ ಮಾತಿನ ತಲೆ ಬುಡ ಅರ್ಥವಾಗಲಿಲ್ಲ. ಆದರೆ ಬೊಂತೆಯನಿಗೆ ಬಾಯಿ ಬಂದ ಪವಾಡ ತನ್ನೆದುರಿನಲ್ಲಿಯೇ ನಡೆದಿತ್ತು. ಈಗ ಅವಳಿಗೆ ಶಿವಪಾದನ ಎದುರು ಮಾತಾಡುವುದಕ್ಕೆ ಭಯವಾಯಿತು. ಶಿವಪಾದ ಹೇಳಿದ:

“ಹೊಂಡದಲ್ಲಿ ಮುಖ ನೋಡಿಕೊಂಡು ಪ್ರತಿಬಿಂಬವನ್ನೇ ಪ್ರಿತಿಸಿದ ರಾಜಕುಮಾರನ ಕತೆ ಗೊತ್ತಲ್ಲ? ಹಾಗೆಯೇ ತನ್ನ ಹೆಣ ತಿಂಬ ರಾಜನ ಕತೆಯೂ ಗೊತ್ತು. ಇದೂ ಹಾಗೆಯೇ, ಆತ್ಮರತಿಯ ಕತೆ.”

ಇಷ್ಟು ಹೇಳುವುದರಲ್ಲಿ ಮೂವರೂ ಬೆಟ್ಟದ ಅಂಚಿಗೆ ಬಂದಿದ್ದರು. ಶಿವಪಾದ ಕೆಳಗೆ ನೋಡಿರಿ ಅಂದ. ಗೌರಿ ನೋಡಿದಳು. ಬೊಂತೆಯನೂ ನೋಡಿದ. ಕೆಳಗೆ ಸುಂದರವಾದ ಚಂದ್ರಾವತಿ ಮಡು ಕಾಣುತ್ತಿತ್ತು.

“ಮಡು ಇದೆ” ಎಂದಳು ಗೌರಿ.

“ಅದರಲ್ಲಿ ಏನೇನು ಮೂಡಿದೆ? ನೀನೆಲ್ಲಿ ಮೂಡಿರುವಿ, ನೋಡಿಕೊ.”

ನೋಡಿದಳು. ಆಕಾಶ ಮೂಡಿತ್ತು. ಮೋಡಗಳು, ಹಾರಾಡುವ ಹಕ್ಕಿಗಳು, ದಂಡೆಯ ಹಸಿರು ತರುಮರ ಬಳ್ಳಿ ಪ್ರಾಣಿಗಳು, ಹುಡುಗ ಹುಡುಗಿ, ವೃದ್ಧ ವೃದ್ದೆಯರು, ಇರುವೆ ಮೊದಲು ಆನೆ ಕಡೆಯಾಗಿ ಬೇಕಾದಷ್ಟು ಜೀವರಾಶಿ ಮೂಡಿತ್ತು. ತಕ್ಷಣ ಬೊಂತೆಯನೂ ಬಾಯಿ ಕೂಡಿಸಿದ: “ನೀನು, ಅಕ್ಕ, ನಾನು ಮೂವರೂ ಮೂಡಿದ್ದೀವಿ: – ಈಗ ಶಿವಪಾದ ಹೇಳಿದ:

“ನೋಡು ಮಗನೇ, ಇದೇ ಶಿವಾಪುರ. ಕನ್ನಡಿ ನೋಡಿಕೊಂಡೆಯಾ? ಒಬ್ಬನೇ ಇರ್ತಿಯಾ – ಒಂಟಿಯಾಗಿ, ಹೆಣವಾಗಿ! ಮಡುವಿನಲ್ಲಿ ನೋಡಿಕೊಂಡಿಯೋ? ನೀನೂ ಮೂಡುತ್ತಿ, ನಿನ್ನೆಲ್ಲ ಬಳಗದ ಜೊತೆಗೆ! ಇದೇ ಶಿವಾಪುರ! ಬಳಗವಾಗಿ ಬದುಕು ಎನ್ನುತ್ತದೆ ಶಿವಾಪುರ. ಬಳಗವೆಂದರೆ ಯಾರು? ನಿನಗೆ ಎರಡನೆಯ ಸಲ ಭೇಟಿಯಾದವರೆಲ್ಲ ನಿನ್ನ ಬಳಗ!”

ಒಮ್ಮೆ ಒಬ್ಬ ಶಿವಪಾದ ಕೇಳಿದ:

“ತಾಯೀ ನಿನಗ್ಯಾವ ಮಾರ್ಗ ಇಷ್ಟ? ಜ್ಞಾನ ಮಾರ್ಗವೇ? ಕರ್ಮ ಮಾರ್ಗವೇ ಭಕ್ತಿ ಮಾರ್ಗವೇ?”

ತಾಯಿ ಹೇಳಿದಳು: “ಕರ್ಮಕ್ಕೆ, ಜ್ಞಾನಕ್ಕೆ ಸಂಬಂಧಗಳು ಬೇಕಿಲ್ಲ.

ಭಕ್ತಿ ಮಾರ್ಗವಾದರೆ ಕೊನೇಪಕ್ಷ ಒಂಬತ್ತು ಸಂಬಂಧಗಳಿಂದ ದೇವರನ್ನು ಪ್ರೀತಿಸಬಹುದು.

ಸಂಬಂಧಗಳೇ ಭಕ್ತಿ, ಭಕ್ತಿಯನ್ನು ಗೌರವಿಸು.”

* * *

ಶಿವಪಾದ ಬೆಳಿಗ್ಗೆ ತನ್ನ ಮೈಗೊಂದು ಧೋತ್ರ ಸುತ್ತಿಕೊಂಡು ಮ್ಯಾಲೊಂದು ಹೊದ್ದುಕೊಂಡು, ಪ್ರವಾಸ ಮಾಡುವಾಗ ಹಿಡಿಯುವ ಉದ್ದಕೋಲನ್ನು ಹಿಡಿದುಕೊಂಡು ಅಮ್ಮನ ಮುಂದೆ ಬಂದ. ಕೋಲನ್ನು ಬದಿಗಿಟ್ಟು ದೀರ್ಘದಂಡ ನಮಸ್ಕಾರವನ್ನಾಚರಿಸಿ,-

“ತಾಯೀ, ಶಿವಪುರವನ್ನು ನಡೆಸುವಾತ ಬಂದಿದ್ದಾನೆ. ಅವನಲ್ಲಿ ವಿದ್ಯೆ ವಿವೇಕ ಎರಡೂ ಇವೆ. ಅವೂ ತಪ್ಪಿದಾಗ ಅವನಿಗೆ ದರಿ ತೋರಿಸಲು ನೀನಿರುವೆ. ಹಿಂದಿನ ಎಲ್ಲ ಶಿವಪಾದರಿಗೆ ಮಾಡಿದಂತೆ ನನಗೂ ಪ್ರತ್ಯಕ್ಷವಾಗಿ ಅಪ್ಪನೆ ಕೊಡು”

ಎಂದು ನಿತ್ಯದಂತೆ ಹೇಳಿ ಹೊರಗೆ ಬರುವುದಷ್ಟೇ ತಡ ಚಂಡೀದಾಸ ಓಡಿಬಂದು ಶಿವಪಾದನಿಗೆ ಹಿಡಿದುಕೊಳ್ಳಲಿಕ್ಕೆ ಭುಜಕೊಟ್ಟ. ಹೋಗಿ ಹೊನ್ನೆ ಮರದಡಿಯ ಕಲ್ಲಿನ ಕಟ್ಟೆಯ ಮೇಲೆ ಕೂರಿಸಿದ. ಬೆಟ್ಟದ ಮ್ಯಾಲೆ ಸೂರ್ಯನಾರಾಯಣಸ್ವಾಮಿಯ ಪ್ರಥಮ ಕಿರಣಗಳು ಇದ್ದು ಹಸಿರಿನ ಮ್ಯಾಲೆ ಬಂಗಾರದ ಓಕುಳಿ ಎರಚಿದ ಹಾಗೆ ಹೊಳೆಯುತ್ತಿತ್ತು. ಬೆಳಗಿನ ಛಳಿಯಿತ್ತು. ಇಡೀ ರಾತ್ರಿ ಭಕ್ತಾದಿಗಳು ಹಾಡು ಕುಣಿತ ಕೇಕೆಗಳಿಂದ ಧಿಮಿಧಿಮಿಸುತ್ತಿದ್ದ ಬೆಟ್ಟ ಈಗ ನಿಶ್ಯಬ್ಧವಾಗಿತ್ತು. ಹೊನ್ನೆಮರ ಸಾಮಾನ್ಯವಾದುದಲ್ಲ. ಕಾಡನ್ನೆಲ್ಲ ವ್ಯಾಪಿಸಿದಂತೆ ಅಡ್ಡಾದಿಡ್ಡಿಯಾಗಿ ಬೆಳೆದು ಆ ಸುತ್ತಿನ ಮರಗಳಿಗಿಂತ ದಪ್ಪವಾದ ಮತ್ತು ಎತ್ತರವಾಗಿದ್ದ ಮರ ಅದು. ಅದರ ನಿಲುವಿನಲ್ಲಿ ಕೂಡ ಒಂದು ಘನತೆ ಕಾಣುತ್ತಿತ್ತು. ನಿನ್ನೆ ಇಲ್ಲಿಗೆ ಬಂದಿದ್ದ ಮಕ್ಕಳು ಅದರ ಬೊಡ್ಡೆಯ ತೊಗಟೆಯನ್ನು ಪರಚಿ ಗೆರೆ ಕೊರೆದ ಕಲೆಗಳಿದ್ದವು. ತೊಂದರೆ ಕೊಡದೆ, ಇನ್ನೊಬ್ಬರಿಂದ ಏನನ್ನೂ ಆಶಿಸದೆ, ತನ್ನ ನೆಮ್ಮದಿಗೂ ಭಂಗ ತಂದುಕೊಳ್ಳದೆ ಸುಮ್ಮನೆ ಕಾಡಿನ ಕಾವಲುಗರನಂತೆ ಆ ಮರ ನಿಂತಿತ್ತು. ನಿನ್ನೆಯ ಸಂಭ್ರಮದ ಅಮಲೇರಿದಂತೆ ತುರುಮರಗಳೂ ನಿಶ್ಯಬ್ದವಾಗಿ ನಿಂತಿದ್ದವು. ತಂಪುಗಾಳಿ ಬೀಸಿ ತರುಮರಗಳನ್ನು ಮಾತ್ರವಲ್ಲ ಶಿವಪಾದನ, ಚಂಡೀದಾಸನ ಕೂದಲನ್ನೂ ನೇವರಿಸಿ ಸಂತೋಷವನ್ನುಂಟು ಮಾಡಿತು.

ಜಟ್ಟಿಗ ತಮ್ಮೊಂದಿಗಿಲ್ಲವೆಂಬ ಕೊರತೆಯ ವಿನಾ ಉಳಿದಂತೆ ಪರ್ವ ಸೊಗಸಾಗಿಯೇ ನಡೆಯಿತು. ಕೊಟ್ಟಿಗೆಯ ಕೋಳಿ ಕೂಗುವ ಮೊದಲೇ ನಿನ್ನಡಿ ಮಿಂದು ತಾಯಿಯನ್ನು ಕರೆದುಕೊಂಡು ಜಟ್ಟಿಗನ ಗೋರಿಯ ಬಳಿಗೆ ಹೋಗಿ ಸೊಡರು ಹಚ್ಚಿ, ಬಾಗಿಲಲ್ಲಿ ಬೆಳಕಿನ ಮರ ನೆಟ್ಟರು. ಮೂರು ಕುಡುತೆ ತುಂಬೆ ಹೂ, ಮೂರು ಬಳ್ಳಿ ಬೆಳ್ತಿಗೆ ಅಕ್ಕಿ ಹಸಿರು ವೀಳ್ಯ ಕಲ್ಲುಸುಣ್ಣ, ಕಪಿಲೆ ಹಾಲು, ಐದು ತೆಂಗಿನಕಾಯಿ ಒಡ್ಡಿ ಮಂತ್ರ ಜಪಿಸಿದ. ಇಬ್ಬರೂ ಶಿವಶಿವ ಪದ ಹಾಡಿ ಸಾವಿರ ಶರಣು ಕೊಟ್ಟು ಪ್ರಾರ್ಥಿಸಿದ ಮ್ಯಾಲೆ ಹಟ್ಟಿಯ ಜನರೂ ಬಂದು ಎದುರಲ್ಲಿ ನಿಂದು ಭಕ್ತಿಯ ನೈವೇದ್ಯ ಕಾಣಿಕೆ ನೀದಿ ವಂದನೆ ಸಲ್ಲಿಸಿದರು.

ಪರ್ವದ ಮೂರು ದಿನ ನಿನ್ನಡಿ ಒಂದು ಕಣ್ಣನ್ನು ಅಬ್ಬೆರ್ಯ ಮೇಲೆ ಇಟ್ಟಿದ್ದ.

ಮೂರನೆಯ ರಾತ್ರಿ ಅವಳನ್ನು ಸಂತೋಷಪಡಿಸಲು ಕುಣಿದ, ಹಾಡಿದ, ಅವಳನ್ನೆಳೆದುಕೊಂಡು ಎದುರು ಬದುರು ಒಂದೆರಡು ಹೆಜ್ಜೆ ಕೂಡ ಹಾಕಿಸಿ, ಕುಣಿದು ಇಡೀ ಸೀಮೆಯ ಜನ ಹೋ ಎಂದು ಚಪ್ಪಾಳೆ ತಟ್ಟಿ ಸಂತೋಷಿಸುವಂತೆ ಮಾಡಿದ. ಬೆಳ್ಳಿ ಕೂಡ ಮಗನೊಂದಿಗೆ ನಾಲ್ಕು ಹೆಜ್ಜೆ ಹಾಕುವಾಗ ನಕ್ಕಳಾದರೂ ಜಟ್ಟಿಗನ ನೆನಪಾಗಿ ಕಣ್ಣು ಒದ್ದೆ ಮಾಡಿಕೊಂಡಳು. ತಕ್ಷಣ ನಿನ್ನಡಿ ಅವಳನ್ನು ತಬ್ಬಿಕೊಂಡು, ಕಣ್ಣೀರೊರಸಿ ಸಮಾಧಾನ ಮಾಡುತ್ತಿದ್ದಂತೆ ಶಿವಪಾದನೇ ಅವರಿಬ್ಬರ ಕೈ ಹಿಡಿದು ಮರದಡಿ ಕರೆದುಕೊಂಡು ಹೋದ. ಕುರುಮುನಿ ಚಂಡೀದಾಸರು ಶಿವಪಾದನ ಒಂದೊಂದು ಕಾಲು ಒತ್ತತೊಡಗಿದರು. ಗೌರಿ ಬೆಳ್ಳಿಯ ಕಣ್ಣೀರೊರೆಸಿ ಕೂರಿಸಿಕೊಂಡಳು. ಶಿವಪಾದ ಮಳಮಳ ನಿನ್ನಡಿಯ ಮುಖವನ್ನೇ ನೋಡುತ್ತ ಹಿತವೆನ್ನಿಸಿ,

“ಅಯ್ಯಾ ನಿನ್ನಡಿ, ನಿನ್ನ ಕೊಳಲು ಕೇಳಿ ವರ್ಷಗಳಾದುವಣ್ಣಾ, ನಿನ್ನ ತಾಯಿಗೆ ಸಂತೋಷವಾಗುವಂತೆ ಒಂದು ರಾಗ ನುಡಿಸಬಹುದಲ್ಲ!”

-ಎಂದ. ತಕ್ಷಣ ನಿನ್ನಡಿ,

“ನನ್ನ ಕೊಳಲು ಎಲ್ಲಿದೆ ಗೂತ್ತಿಲವಲ್ಲ ನನ್ನಯ್ಯಾ!”

ಅಂದ. “ಇವನಿಗೆಂಥ ಕೊಳಲು ಗೊತ್ತಿದ್ದೀತು ನನ್ನಯ್ಯಾ?” ಎಂದು ಬೆಳ್ಳಿ ಬಾಯಿ ಬಿಡುವಷ್ಟರಲ್ಲಿ ಗೌರಿ ಬುದಿಂಗನೇ ಎದ್ದು “ನನಗ್ಗೊತ್ತು ತರ್ತೀನಿರು” ಎಂದು ಹೇಳಿ ಸರಸರ ಗವಿಯೊಳಕ್ಕೆ ಹೋದಳು!

ಬೆಳ್ಳಿ, ಚಂಡೀದಾಸ, ಕುರುಮುನಿ ನಿನ್ನಡಿಯನ್ನು ಬಲ್ಲ ಎಲ್ಲರಿಗೂ ಆಶ್ಚರ್ಯವಾಯಿತು. ಶಿವಪಾದ ಇವರನ್ನ ಮತ್ತು ನಿನ್ನಡಿಯನ್ನು ನೋಡುತ್ತ ನಿಗೂಢ ನಗೆ ನಗುತ್ತಿದ್ದ. ಕೊಳಲು ನಿನ್ನಡಿಗೇನು ಗೊತ್ತು? ಅವನು ನುಡಿಸಿದ್ದನ್ನಾಗಲಿ, ಅಭ್ಯಾಸ ಮಾಡಿದ್ದನ್ನಾಗಲಿ ಯಾರೂ ಕೇಳಿಲ್ಲ. ನೋಡಿಲ್ಲ. ಶಿವಪಾದನಿಗೆ ಮರೆವು ಸುರುವಾಯಿತೆ? ನಿನ್ನಡಿ ನನ್ನ ಕೊಳಲು ಎಲ್ಲಿಟ್ಟೆ? ಅನ್ನುವುದು, ತರ್ತೀನಿ ಅಂತ ಗೌರಿ ಗವಿಯೊಳಕ್ಕೆ ಹೋಗುವುದು ಇವರೇನೋ ಚೇಷ್ಟೆ ಮಾಡುತ್ತಿರಬಹುದೇ? ಕೇಳುವುದಕ್ಕೆ ಯಾರಿಗೂ ಬಾಯಿ ಬರದೇ ಇದ್ದಾಗ ಕುರುಮುನಿ ಒತ್ತುವುದನ್ನು ಮರೆತು ಕುಂತಿದ್ದವನು ಮೆಲ್ಲಗೆ ಒತ್ತುತ್ತ ಕೇಳೇ ಬಿಡೋಣವೆಂದು “ತಂದೆ” ಅಂದ. ಅಷ್ಟರಲ್ಲಿ “ಇಕೋ ತಗೋ” ಎಂದು ಗೌರಿ ಮಾರುದ್ದ ಕೊಳಲಿನೊಂದಿಗೆ ಬಂದೇ ಬಿಟ್ಟಳು!

ತನ್ನ ಸೀರೆ ಸೆರಗಿನಿಂದ ಅದರ ಧೂಳು ಕಳೆದು ಹಸನಾಯಿತೆಂದಾಗ ನಿನ್ನಡಿಯ ಕೈಗಿತ್ತಳು. ನಿನ್ನಡಿ ಕೊಳಲು ಹಿಡಿದುಕೊಂಡು ಅನುಮಾನಿಸುತ್ತಾದ್ದಾಗ ಗೌರಿ ಸಲುಗೆಯಿಂದ ನುಡಿಸು ಎಂದು ಸಂಜ್ಞೆಮಾಡಿ ಕೊಳಲನ್ನು ಅವನ ತುಟಿಗಿಟ್ಟಳು. ನಿನ್ನಡಿ ಅದನ್ನು ಓರೆಯಾಗಿ ಹಿಡಿದು ಎದುರು ಬದುರಾಗುವಂತೆ ಅದರ ಮೇಲೆ ಎರಡೂ ಕೈ ಬೆರಳಿಟ್ಟು ಸ್ವರಗಳ ಹೊರಡಿಸಿದ ನೋಡು – ಕೆಲವರು ಅನುಮಾನದಿಂದ, ಕೆಲವರು ಆಶ್ಚರ್ಯದಿಂದ ಸ್ತಬ್ಧರಾದರು.

ಅಲಾಪ ಮಾಡುವಾಗ ಕೂತವರು ಕೂತಲ್ಲೇ ನಿಂತವರು ನಿಂತಲ್ಲೇ ಕೊಳಲಿನ ಮಾಧುರ್ಯದ ಮಾಯೆಗೆ ಒಳಗಾದರು. ಒಂದು ಹದ ಒದಗಿದಾಗ ನಿನ್ನಡಿ ರಾಗ ಸುರುಮಾಡಿದ.

ಕೈಲಾಸದ ಸುಖದ ತೂಬು ತೆಗೆದುಬಿಟ್ಟಂತೆ ನಿನ್ನಡಿಯ ರಾಗದ ಬೆಳ್ದಿಂಗಳ ಹಾಲಹೊಳೆ ಭೂಮಿಗಿಳಿಯತೊಡಗಿತು. ‘ಹಾ’! ಎಂದು ಶಿವಪಾದ ಕಣ್ಣು ಮುಚ್ಚಿದ. ಗೌರಿ ನಿನ್ನಡಿಗೆ ಗೊತ್ತಾಗದಂತೆ ಹಾಗೇ ಅವನ ಬೆನ್ನಿಗೊರಗಿ ಲೋಕಾಂತರಗೊಂಡಳು. ಕುರುಮುನಿ ಚಂಡೀದಾಸರು ತೇಲುಗಣ್ಣಾದರು. ಬೆಳ್ಳಿ ಕಣ್ಣಗಲ ಮಾಡಿಕೊಂಡು ಪವಾಡ ಕಂಡ ಶಿಶುವಿನಂತೆ ಮೈ ಮರೆತಳು.

ಬೆಟ್ಟದ ಚರಾಚರವೆಲ್ಲ ಬೆರಗಿನಲ್ಲಿ ತೇಲುಗಣ್ಣಾಗಿ, ಲೋಕೊತ್ತರ ಸುಖದಲ್ಲಿ ತನ್ಮಯವಾಯಿತು. ಅಂತರಾಳದ ಅಜ್ಞಾತವನ್ನ ಮಿಡಿದಂತೆ ಜನ ಸುಖದ ನೋವನುಭವಿಸಿದರು. ಸಮಯ ಸರಿದುದು ಯಾರಿಗೂ ತಿಳಿಯಲಿಲ್ಲ.

ಹಕ್ಕಿ ಉಲಿದು ಬೆಳಗಿನ ತಂಗಾಳಿ ಬೀಸಿದಾಗಲೇ ನಿನ್ನಡಿ ಕೊಳಲು ನಿಲ್ಲಿಸಿದ. ಎಲ್ಲರೂ ಎಚ್ಚರಗೊಂಡರು. ಲೌಕಿಕ ಅರಿವಿಗೆ ಬಂದವರು ಬಿಡುಗಡೆಗೊಂಡಂತೆ ಕೊಂಚ ಕೈಕಾಲು ಆಡಿಸುತ್ತಿರಲು ನಿನ್ನಡಿ ಇನ್ನೊಂದು ಲಘುವಾದ ಆಲಾಪ ಎತ್ತಿಕೊಂಡ. ಜನರ ನಾಡೀ ಬಡಿತಕ್ಕೆ ತನ್ನ ಲಯವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿರುವಂತೆ ಕಂಡಿತು. ಎರಡೂ ಸರಿಹೋಯಿತೆಂಬಾಗ “ಬಾರೆ ನನ್ನ ಮಲ್ಲಿಗೆ” ಎಂಬ ಜನಪದ ಹಾಡೊಂದನ್ನು ಎತ್ತಿಕೊಂಡ.

ಜನ ಹೋ ಎಂದು ಕೂಗಿ ಹುಡುಗ ಹುಡಿಗಿಯರೆದ್ದು ಹಾಡಿನ ಲಯಾನುಸಾರ ಮೈ ಕೈಕಾಲುಗಳ ಚಲನೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುತ್ತ, ಅದೊಮ್ಮೆ ಸರಿಹೋಯಿತೆಂಬಾಗ ಪ್ರಾಯ, ಉತ್ಸಹವುಕ್ಕಿ ಕುಣಿಯತೊಡಗಿದರು! ಅದಾಗದವರು ಮೈ ಕೈ ಒಲೆಯುತ್ತ ತಾಳ ಕಟ್ಟುತ್ತ ಹಾಡು ಕುಣಿತಗಳಲ್ಲಿ ಭಾಗಿಯಾದರು.

ಮಾಗಿದ ತಿಂಗಳ ಬೆಳಕಿನಲ್ಲಿ ದಂತದ ಪುತ್ಧಳಿಯಂತೆ ಸಂಮೋಹಗೊಂಡು ನಿಂತಿದ್ದ ಗೌರಿಯ ಎದುರಿಗೇ ಹೋಗಿ “ಬಾರೆ ನನ್ನ ಮಲ್ಲಿಗೆ” ಎಂಬ ಪಲ್ಲವಿಯನ್ನು ಮತ್ತೆ ಮತ್ತೆ ನುಡಿಸಿ ಗೌರಿಗೆ ಸವಾಲೆಸುಯುವಂತೆ ಎರಡು ಹೆಜ್ಜೆ ಹಾಕಿದ. ತಕ್ಷಣವೇ ಗೌರಿ ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ಚಂಗನೆ ನೆಗೆದು ನಿನ್ನಡಿಯ ಸುತ್ತ ನವಿಲಿನಂತೆ ಕುಣಿದಳು. ಹುಡುಗ ಹುಡುಗಿಯರಾಗಲೆ ಕೊಳಲಿಗೆ ತಂತಮ್ಮ ಸ್ವರ ಕೂಡಿಸಿ ಹಾಡತೊಡಗಿದ್ದರು. ಬೆಳ್ಳಿ ಗೌರಿಯನ್ನೆಳೆದುಕೊಂಡು ಮುಖದ ತುಂಬ ಮುದ್ದಿಟ್ಟು, ದೃಷ್ಟಿ ತೆಗೆದು ತಾನೂ ಸೇರಿಕೊಂಡಳು. ಶಿವಪಾದ ಕೂಡ ಕುರುಮಿನಿ ಚಂಡೀದಾಸರ ಕೈ ಹಿಡಿದು ನಿನ್ನಡಿಯ ಮುಂದೆ ಎರಡು ಹೆಜ್ಜೆ ಹಾಕಿದಾಗ ಇಡೀ ಸಮುದಾಯ ಕುಣಿತ ಬಿಟ್ಟು ಹೋ ಎಂದು ಕೇಕೆ ಹಾಕಿ ಚಪ್ಪಾಳೆ ತಟ್ಟಿತು!

* * *

ಮುಂಜಾನೆ ಸಮಯ ಭಕ್ತಾದಿಗಳು ಪ್ರಸಾದ ಕಟ್ಟಿಕೊಂಡು ಶಿವಪಾದನ ಪಾದ ಪಡೆದುಕೊಂಡು ತಂತಮ್ಮ ಹಟ್ಟಿಗಳ ಹಾದಿಯ ಹಿಡಿಯುತ್ತಿದ್ದರು. ಹೊರಟ ಭಕ್ತರಿಗೆ ಆಶೀರ್ವಾದ ಮಾಡುತ್ತ ಎಳೆಬಿಸಿಲು ಕಾಸುತ್ತ ಶಿವಪಾದ ಕೂತಿದ್ದ. ಚಂಡಿದಾಸ ಪಾದ ಒತ್ತುತ್ತಿದ್ದ. ಬರುಹೋಗುವ ಭಕ್ತರು ಒಂದೆರಡು ಸಾರಿ ಶಿವಪಾದನ ಇನ್ನೊಂದು ಪಾದವನ್ನು ಒತ್ತಿ ನಮಸ್ಕರಿಸಿ ಹೋಗುತ್ತಿದ್ದರು. ಹತ್ತಿರದಲ್ಲೇ ಭೈರ ಮೆಲುಕಾಡಿಸುತ್ತ ಮಲಗಿದ್ದ. ಶಿವಪಾದನ ಪಾದ ಪಡೆದ ಮೇಲೆ ಭಕ್ತರು ಭೈರನ ಬಾಲದ ತುದಿಯನ್ನೂ ಕಣ್ಣಿಗೊತ್ತಿಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ನಿನ್ನಡಿ ಮತ್ತು ಗೌರಿ ಬಂದರು. ನಿನ್ನಡಿ ಗವಿಯೊಳಕ್ಕೆ ಹೋದ. ಗೌರಿ ನೇರವಾಗಿ ಶಿವಪಾದನಿದ್ದಲಿಗೇ ಬಂದು ತಾನು ತಂದಿದ್ದ ಪಾತ್ರೆಯ ಮುಚ್ಚಳ ತೆರೆದು ಶಿವಪಾದನಿಗೆ ಬಾಯಿಗೆ ಹಿಡಿದಳು. ಶಿವಪಾದ ನಿಧಾನವಾಗಿ ಹಾಲು ಕುಡಿದ. ಅವನು ಕುಡಿದಷ್ಟೂ ಹೊತ್ತು ಪಕ್ಕದಲ್ಲೇ ತಾಳ್ಮೆಯಿಂದ ನಿಂತಿದ್ದು, ಅಮೇಲೆ ನೀರು ಮುಕ್ಕಳಿಸಿ ವಸ್ತ್ರದಿಂದ ಬಾಯೊರೆಸಿಕೊಂಡಾದ ಮೇಲೆ ಚಂಡೀದಾಸನೊಂದಿಗೆ ಶಿವಪಾದನ ಇನ್ನೊಂದು ಕಾಲು ಒತ್ತುತ್ತ ಕೂತಳು. ಚಂಡೀದಾಸ ಅವಳನ್ನೇ ನೋಡುತ್ತ, ಇದೆಲ್ಲ ನಿತ್ಯದ ಕಾರ್ಯಕ್ರಮದಂತೆ ಜರುಗಿದ್ದರಿಂದ ಈ ಅಪರಿಚಿತ ಸ್ಥಳಕ್ಕೆ ‘ಎಲ್ಲಿದೆ ಶಿವಾಪುರ?’ ಅಂತ ಬಂದ ಹುಡುಗಿ ಮೂರೇ ದಿನಗಳಲ್ಲಿ ಈ ಪರಿ ಹೊಂದಾಣಿಕೆ ಮಾಡಿಕೊಂಡದ್ದು ಚಂಡೀದಾಸನಿಗೆ ಪವಾಡವಾಗಿ ಕಂಡಿತು. ಕನಕಪುರಿಯಲ್ಲಿ ತನಗೊಂದು ಬಳಗ ಇದೆಯೆಂಬುದನ್ನೇ ಅವಳು ಮರೆತಹಾಗಿತ್ತು. ಶಿವಪಾದನನ್ನು ನೋಡಿದರೆ ಆತ ತೃಪ್ತಿಯಿಂದ ಮುಗುಳುನಗುತ್ತಿದ್ದ. ಆ ಕಾಲನ್ನ ಎಲ್ಲಿ ಮತ್ತು ಹ್ಯಾಗೆ ತಿಕ್ಕಿದರೆ ಶಿವಪಾದನಿಗೆ ಹಿತವಾಗುತ್ತದೆಂದು ಗೌರಿ ಮೊದಲೇ ತಿಳಿದವಳಂತೆ ತಿಕ್ಕುತ್ತಿದ್ದಳು. ಹಿತವನ್ನನುಭವಿಸಿದ ತೃಪ್ತಿ ಶಿವಪಾದನ ಮುಖದಲ್ಲಿತ್ತು. ಆಮೇಲೆ ಶಿವಪಾದ ಚಂಡೀದಾಸನಿಂದ ಎಡಗಾಲು ಬಿಡಿಸಿಕೊಂಡು ಇದಕ್ಕೂ ತಿಕ್ಕು ಮಗಳೇ ಎಂದು ಅವಳಿಗೆ ಕೊಟ್ಟ ಮುದುಕ ಕಣ್ಣು ಮುಚ್ಚಿಕೊಂಡು ಅವಳು ತಿಕ್ಕುವುದರಿಂದಾಗುತ್ತಿರುವ ಹಿತವನ್ನು ಅನುಭವಿಸಿದ. ಚಂಡೀದಾಸ ಇನ್ನಷ್ಟು ಚಕಿತನಾಗಿ ಇಬ್ಬರನ್ನೂ ನೋಡುತ್ತ ಕೂತ.

ಅಷ್ಟರಲ್ಲಿ ಇದ್ದಕ್ಕಿದ್ದಂತೆ ಕಾಡಿನೊಳಗಿಂದ ಬುಡಕಟ್ಟಿನ ಹಣ್ಣು ಹಣ್ಣು ಮುದುಕಿಯೊಬ್ಬಳು ತಕರಾರಿನ ದನಿಯಲ್ಲಿ ಒದರಾಡುತ್ತ ಬಂದಳು. ಒಂದು ಕಾಲಕ್ಕೆ ಸುಂದರಿಯಾಗಿರಬಹುದಾದ ಬಿಳಿ ಮುದುಕಿಯ ಹನೆ, ಕೆನ್ನೆ, ಗದ್ದ ಮತ್ತು ಕೈಗಳ ಮೇಲೆ ಹಚ್ಚೆಯ ಹಸಿರು ಚಿತ್ರಗಳಿದ್ದವು. ವಯಸ್ಸಾದುದರಿಂದ ಮುಖದಲ್ಲಿ ಕನಿಷ್ಠ ಒಂದು ಸಾವಿರ ಅಡ್ಡತಿಡ್ಡ ಗೆರೆಗಳು ಮೂಡಿದ್ದವು. ಸೂರ್ಯನ ಕಡೆಗೆ ಬೆನ್ನಾಗಿದ್ದ ಅವಳ ಮುಖದ ಗೆರೆಗಳು ಜೇಡರ ಬಲೆಯಂತೆ ಪಸರಿಸಿ, ಕಣ್ಣು ಆಳದಲ್ಲಿ ಕೂತುಕೊಂಡು ಹೊಂಚುವ ಜೇಡನ ಹಾಗೆ ಕಾಣುತ್ತಿದ್ದವು. ಬಿರುಗಾಳಿಯಂತೆ ಎದುರು ಕೂತವರ ಹೃದಯಗಳನ್ನು ಸವರಿಕೊಂಡೇ ಬಂದವಳು ಇನ್ನೇನು ಮದ್ದಿನಂತೆ ಸಿಡಿಯುತ್ತಾಳೆ ಎನ್ನುವಷ್ಟರಲ್ಲಿ ಗೌರಿಯನ್ನು ನೋಡಿದವಳೇ,

“ಆಯ್ ಶಿವನೆ! ಎನ್ಚಂದ ಐತೆಲ್ಲ ಮುದುಕಪ್ಪ ನಿನ್ನ ಸೊಸಿ! ಗೊಂಬೆ ದಂತದ ಗೊಂಬೆ ಆಗ್ಯಾಳಲ್ಲಪ್ಪ!”

ಎಂದು ಹೇಳುತ್ತ ಗೌರಿಯ ಬಳಿ ಬಂದು ಎರಡೂ ಕೆನ್ನೆ ಸವರಿ ಲಟಿಕೆ ಮುರಿದು ದೃಷ್ಟಿ ತೆಗೆದಳು. ಶಿವಪಾದನ ಕಣ್ಣಲ್ಲಿ ಫಳ್ಳನೆ ಬೆಳಕಾಡಿತು. ಗೌರಿ ಕಣ್ಣು ಪಿಳುಕಿಸದೆ ಅವಳನ್ನೇ ತದೇಕ ಧ್ಯಾನದಿಂದ ನೋಡುತ್ತ ಈ ಮುದುಕಿಯನ್ನೆಲ್ಲೋ ನೋಡಿದ್ದೇನಲ್ಲ ಎಂದು ನೆನಪಿಸಿಕೊಳ್ಳುತ್ತ ಕೂತಳು. ಎರಡೂ ಕೈಗಳಲ್ಲಿ ಗೌರಿಯ ಮುಖ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ.

“ಹಟ ಹಿಡಿದು ಗಂಡನನ್ನು ಕರಕಂಬಂದು ತಿರುಗಿ ಹುಟ್ಟಿ ಬಂದೆಯಲ್ಲೇ ನನ್ನ ಮುದ್ದು ಗೌರೀ. ಆನಂದದಿಂದ ನೂರು ವರ್ಸ ಬಾಳು ನನ್ನ ಕೂಸೇ!”

ಎಂದು ಗೌರಿಯ ನೆತ್ತಿಗೆ ಮುದ್ದಿಟ್ಟು ಆಶೀರ್ವದಿಸಿ ಎದ್ದಳು. ಅಮೇಲೆ ತನ್ನೆರಡೂ ಕೈಗಳನ್ನ ಸೊಂಟದ ಮ್ಯಾಲಿಟ್ಟುಕೊಂಡು ಕಣ್ಣುಗಳಲ್ಲಿ ವಿಚಿತ್ರವಾದ ಬೆಳಕನ್ನು ಝಳಪಿಸುತ್ತ ನಡುಗುವ ದನಿಯಲ್ಲಿ ಜಗಳಗಂಟಿಯ ವಾಕ್ಯ ಸರಣಿಯನ್ನು ಹರಿಬಿಟ್ಟಳು ನೋಡು –

“ಏನಪ್ಪ ಮುದುಕಪ್ಪಾ, ಕಾಲೋತ್ತೋರು ಸಿಕ್ಕರೆ ಮೈಮರೆತು ಕೂತೇ ಬಿಡೋದೇನಪ್ಪ? ಹೇಳೋರು ಕೇಳೋರು ನಿನಗ್ಯಾರಿಲ್ಲವ? ಬಂದ ಕೆಲಸ ಮುಗಿದ ಮ್ಯಾಲೆ ಜಾಗ ಖಾಲಿ ಮಾಡಬೇಕಪ. ಏಳೇಳು ಎದ್ದೇಳು.”

ಎಂದು ಬುಡಕಟ್ಟು ಬಾಷೆಯ ಬಿರುಸು ಶೈಲಿಯಲ್ಲಿ ಹೇಳುತ್ತ ಕಾಡಿನಲ್ಲಿ ಕಣ್ಮರೆಯಾದಳು. ಗೌರಿ ಆಘಾತ ಆನಂದಗಳಿಂದ ಇನ್ನೂ ಕಣ್ಣು ಪಿಳುಕಿಸಿರಲಿಲ್ಲ. ಚಂಡೀದಾಸ

“ಈಯಮ್ಮ ಗೊಲ್ಲರಟ್ಟಿ ಗೌಡ್ತಿ ಅಲ್ಲವ” ಎಂದ

ಶಿವಪಾದ ಮುಗುಳು ನಗುತ್ತ

“ಈ ಮುದುಕಿ ಯಾರು ಮುದ್ದೂ?” ಅಂದ.

ಗೌರಿ “ಅಮ ಗುಣದಮ್ಮಾs” ಎನ್ನುತ್ತ ಎದ್ದು ಮುದುಕಿ ಹೋದ ದಿಕ್ಕಿಗೆ ಅವಸರದಿಂದ ಓಡಿದಳು. ತಾಯಿ ಮಾಯವಾದದನ್ನು ಕಂಡು, “ನೀನೇ ನನ್ನ ಸೇವೆ ಮಾಡಿದೆಯಲ್ಲೇ ತಾಯೀ ಗುಣದಮ್ಮಾ!” ಎಂದು ಕೈ ಮುಗಿದುಕೊಂಡೇ ಪಶ್ಚಾತ್ತಾಪದಿಂದ ಕುಸಿದಳು. ಚಂಡೀದಾಸ ಬೆರಗಾಗಿ “ಹೌದೆ ನನ್ನಯ್ಯ?” ಅಂದ. ಧನ್ಯತಾ ಭಾವದಿಂದ ಶಿವಪಾದನ ಕಣ್ಣಲ್ಲಿ ನೀರಾಡುತ್ತಿತ್ತು. ಮೈಪುಳಕಗೊಂಡು ಜನ ಜಲ ಬೆವರಿದ್ದ. ಹೌದೆಂಬಂತೆ ಕತ್ತು ಹಾಕಿ ಮುದುಕಿ ಹೋದ ದಿಕ್ಕನ್ನೇ ನೋಡುತ್ತ ಸಂತೃಪ್ತಿಯಿಂದ ಮೈಮರೆತು ಕೂತಿದ್ದವನು ಕೊನೆಗೆ ಚಂಡೀದಾಸನಿಗೆ ಹೇಳಿದ:

“ಹೌದು ಮಗನೇ ತಾಯಿ ಹನ್ನೊಂದು ದಿನ ಮುದ್ದು ಗೌರಿಯ ಬೆನ್ನಿಗೆ ನಿಂತು, ಕಾಪಾಡಿಕೊಂಡು ಬಂದು ಶಿವಾಪುರಕ್ಕೆ ತಲುಪಿಸಿದಳು. ನನಗೂ ತಾಯಿ ಪ್ರತ್ಯಕ್ಷಳಾಗಿ ಕೃಪೆ ಮಾಡಿದಳಪ್ಪ! ಅನೇಕ ದಿನಗಳಿಂದ ಕೇಳುತ್ತಿದ್ದ ವರವನ್ನು ಇವತ್ತು ದಯಪಾಲಿಸಿದಳು ಹೋಗು ನಿನ್ನಡಿಗೆ ಹೇಳು, ಬರುವ ಸೋಮವಾರ ಬೆಳಗಿನ ಬ್ರಾಹ್ಮೀ ಮಹೂರ್ತದಲ್ಲಿ ನಾನು ನಿರ್ವಾಣ ಹೊಂದುತ್ತೇನೆ.”