ಊರು ಉಂಡು ಮಲಗುವುದರೊಳಗೆ ಹಿಂದ ಜನಸೂರ್ಯನಾಗಿದ್ದವನೇ ಈಗ ರಾಜನಾಗಿ ಬಂದ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ ಶಿವಾಪುರದ ಎಲ್ಲ ಜನರಿಗೆ ತಲುಪಿಯಾಗಿತ್ತು. ಮಂಟಪದ ಬಳಿ ಜನ ಸೇರಿ ರಾಜನ ದ್ರೋಹ, ತಾಯ್ಗಂಡತನಗಳ ಬಗ್ಗೆ ಬಾಯಿಗೊಂದೊಂದು ಅಂದು ತಲೆಗೊಂಡು ಶಾಪ ಹಾಕಿದರು. ಅನೇಕರ ಮಾತುಗಳಲ್ಲಿ ಮಗಳನ್ನು ಮದುವೆಯಾದ ಸೇಡು ಇತ್ಯಾದಿ ವಿಷಯಗಳಿದ್ದರೂ ಮುಖ್ಯವಾಗಿ ಇದು ಬೆಟ್ಟ ಮತ್ತು ಕನಕಪುರಿ ಎದುರುಬದುರಾದ ಸಂಗತಿಯೆಂಬಂತೆ ಚಿತ್ರಿಸುವ ಮಾತುಗಳೇ ಹೆಚ್ಚಿಗಿದ್ದವು.

ಮೂರು ತಾಸು ರಾತ್ರಿಯಾದರೂ ಊರು ಈ ದಿನ ಮಲಗಿರಲಿಲ್ಲ. ಶಕೆ ಹೆಚ್ಚಿದ್ದರಿಂದ ಒಂದೆರಡು ಹನಿ ಮಳೆ ಹನಿಯಬಹುದೆಂದೂ ಜನ ಹಾರೈಸುತ್ತಿದ್ದರು. ಮಂಟಪದ ಬಳಿಯಿದ್ದ ಪಂಜಿನ ಬೆಳಕಲ್ಲದೇ ಮನೆಗಳ ಚಿಕ್ಕ ಪುಟ್ಟ ಕಿಟಕಿಗಳಿಂದ ಹೊರಚೆಲ್ಲುತ್ತಿದ್ದ ಬೆಳಕಿನಿಂದಲೂ ಮಂಟಪದ ಅಸ್ಪಷ್ಟ ಆಕೃತಿ ಕಾಣುತ್ತಿತ್ತು. ಈ ಮಧ್ಯೆ ಚಂಡೀದಾಸ ಕನಕಪುರಿ ದಿವಾಳಿಯೆದ್ದ ಸ್ಥಿಯನ್ನು ವರ್ಣನೆ ಮಾಡುತ್ತಿದ್ದ. ಧಾನ್ಯದ ಅಭಾವದಿಂದ ಎಲ್ಲೆಲ್ಲಿಂದಲೋ ತಂದ ಧಾನ್ಯವನ್ನು ವರ್ತಕರು ಬಚ್ಚಿಟ್ಟು ತಿಂದುಕೊಂಡಿದ್ದರೆ, ಇಲ್ಲದವರು ಅವರ ಮನೆಗಳಿಗೆ ಕನ್ನ ಹಾಕಿ ಚಿನ್ನ ಬಿಟ್ಟು ಧಾನ್ಯ ಕುದಿಯುವ, ಅಕಸ್ಮಾತ್ ಸಿಕ್ಕುಬಿದ್ದರೆ ಚಿನ್ನ ಕೊಟ್ಟು ಪಾರಾಗುವ ದೃಶ್ಯವನ್ನಾತ ಹೃದಯಂಗಮವಾಗಿ ವರ್ಣನೆ ಮಾಡುತ್ತಿದ್ದ. ಊರು ಮತ್ತು ಅರಮನೆ ತುಂಬ ಸೈನಿಕರೇ ತುಂಬಿರುವದನ್ನು ಹೇಳಿ ಜನ ಯಾವಾಗೆಂದರೆ ಆವಾಗ ದಂಗೆ ಏಳುವ ಸ್ಥಿತಿಯಲ್ಲಿದ್ದಾರೆಂದೂ ಹೇಳುತ್ತಿದ್ದ. ಹೇಳುತ್ತ ಆಕಾಶದ ಕಡೆ ನೋಡಿ “ಅರೆ!” ಅಂದಾಗ ಎಲ್ಲರೂ ಆಕಡೆ ನೋಡಿದರು. ತೆಂಕು ದಿಕ್ಕಿನಲ್ಲಿ ಉಲ್ಕೆಯೊಂದು ಉದುರಿ ಬಿಟ್ಟ ಬಾಣದ ಹಾಗೆ ಕೆಳಗೆ ಬಿತ್ತು. ಎಲ್ಲರೂ ಉಸಿರು ಬೆಗಿಹಿಡಿದು ನೋಡಿದರು. ಅದು ಬಿದ್ದಾಗ ತಮಗೆ ಗೊತ್ತಿಲ್ಲದಂತೆ ತುಟಿಯ ಮೇಲೆ ಬೆರಳಿಟ್ಟುಕೊಂಡು “ಹಾ!” ಎಂದರು. ಅನೇಕರು ಸಣ್ಣ ದನಿಯಲ್ಲಿ ಹೇಳಿದರೂ ಏಕಕಾಲದಲ್ಲಿ ಹೇಳಿದ್ದರಿಂದ ಅದೊಂದು ದೊಡ್ಡ ಉದ್ಗಾರವಾಗಿ ಕೇಳಿಸಿತು. ಬೆಟ್ಟದ ಮೇಲಿದ್ದ ಮೋಡ ಈಗ ಮೇಲೇರಿ ಅಸ್ಪಷ್ಟವಾಗಿ ಮೂಡಿದ್ದ ಚಂದ್ರನನ್ನಾವರಿಸಿ ದೊಡ್ಡ ಉದ್ಗಾರವಾಗಿ ಕೇಳಿಸಿತು. ಬೆಟ್ಟದ ಮೇಲಿದ್ದ ಮೋಡ ಈಗ ಮೇಲೇರಿ ಅಸ್ಪಷ್ಟವಾಗಿ ಮೂಡಿದ್ದ ಚಂದ್ರನನ್ನಾವರಿಸಿ ದೊಡ್ಡ ಗಿಡುಗನ ಹಾಗೆ ಕೂತುಕೊಂಡಿತ್ತು. ಎಲ್ಲರೂ ತಂತಮ್ಮ ಕರಿ ವಿಚಾ‌ರಗಳಿಂದ, ತಮ ತಮಗೆ ತಿಳಿದಂತೆ ಉಲ್ಕಯೆ ಫಲಾಫಲಗಳನ್ನು ಊಹಿಸುತ್ತ ಪರಿಣಾಮ ಸರಿಕಾಣದೆ ಭೀತರಾದರು.

ಅಂದು ಮಗ ಶಿವಪಾದನಾದುದರಿಂದ ಬೆಳ್ಳಿ ಒಬ್ಬಳೇ ಊರ ಹೊರಗಿನ ಕಪಲಿ ದಿನ್ನಯೆ ಮೇಲಿನ ಜಟ್ಟಿಗನ ಪಾದ ಪಡೆಯಲು ಗುಡಿಗೆ ಬಂದಿದ್ದಳು. ಮಳೆಯ ಸಂಭವವಿದ್ದುದರಿಂದ ಮೋಡಗಳಲ್ಲಿದ್ದ ಚಂದ್ರ ಅಸ್ಪಷ್ಟವಾಗಿದ್ದ. ಆಕಾಶದಲ್ಲಿ ಅಷ್ಟಾಗಿ ಚಿಕ್ಕೆಗಳು ಕಾಣಿಸುತ್ತಿರಲಿಲ್ಲ. ಕಾಣುವ ಒಂದೆರಡು ಚಿಕ್ಕೆಗಳೂ ಮಸಕಾಗಿದ್ದವು. ದೂರದಿಂದ ಹುಲ್ಲಿನ ವಾಸನೆ ಬರುತ್ತಿತ್ತು. ನದಿಯ ಕಡೆಯಿಂದ ತಂಪು ಬೆರೆತ ಗಾಳಿ ಬೀಸಿ ಕೆನ್ನೆ ತೀಡಿ ಅವಳ ಮುಂಗುರುಳನ್ನು ಊದಿ ಹಣೆಯ ಮೇಲೆ ಹಾರಿಸಿತಲ್ಲದೆ ಸೆರಗನ್ನೂ ಓರೆ ಮಾಡಿತು. ಮರದೆಲೆಗಳ ಮರ್ಮರ ಬಿಟ್ಟು ಉಳಿದಂತೆ ರಾತ್ರಿ ನಿಶ್ಯಬ್ದವಾಗಿತ್ತು. ಸಾಮಾನ್ಯವಾಗಿ ಅವಳು ಗುಡಿಗೆ ಬಂದಾಗ ಜಟ್ಟಿಗ ನೆರಳಾಗಿ ಮೂಡಿ ಬಳಿ ಸುಳಿಯುತ್ತಿದ್ದ. ಇವತ್ತು ಬರಲಿಲ್ಲ. ಅವಳಿಗದು ನೆನಪೂ ಆಗಲಿಲ್ಲ.

ಶಿಖರಸೂರ್ಯ ಬಂದಾಗಿನಿಂದ ಅಸಮಾಧಾನದಿಂದ ಚಡಪಡಿಸಿ ಏನೂ ಮಾಡಲಾರದ್ದಕ್ಕೆ ತನ್ನನ್ನು ತಾನೇ ಹಿಂಸಿಸಿಕೊಂಡಿದ್ದಳು. ಶಿಖರಸೂರ್ಯನ ಪಾಶವೀಶಕ್ತಿಯ ಎದುರು ತಾವ್ಯಾರೂ ನಿಲ್ಲುವುದು ಶಕ್ಯವಿಲ್ಲೆನಿಸಿ ನಿರಾಸೆಯಿಂದ ಕಂಗಾಲಾಗಿದ್ದಳು. ಇಷ್ಟು ವರ್ಷಗಳ ತನಕ ಜಟ್ಟಿಗನ ನೆನಪನ್ನು ಕಾಪಾಡಿಕೊಂಡಂತೆ, ಶಿಖರಸೂರ್ಯನ ದ್ರೋಹದ ಸೇಡನ್ನೂ ಕಾಪಾಡಿಕೊಂಡು ಬಂದಿದ್ದಳು. ಆದರೆ ಆತ ಪುನಃ ಸಿಕ್ಕಾನೆಂಬುದನ್ನ ಅವಳು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಈಗ ಸಿಕ್ಕಿದ್ದಾನೆ ತಮ್ಮೆಲ್ಲರ ಒಟ್ಟಾರೆ ಶಕ್ತಿಯ ನೂರು ಪಟ್ಟು ಬಲಾಢ್ಯನಾಗಿ! ತನ್ನ ಅಸಹಾಯಕತೆ ನೆನೆದು ಗುಡಿಯ ಕಡೆ ಮುಖ ಮಾಡಿ “ಏನ್ ಮಾಡಲೋ ನನ್ನ ಜಟ್ಟಿಗಾ!” ಎಂದು ಕಣ್ಣೀರಿಂದ ಕೆನ್ನೆ ತೊಯ್ಸಿಕೊಂಡಳು.

ಈವರೆಗೆ ಜಟ್ಟಿಗ ಕರೆದಾಗ ನೆನಪಿಗೆ ಬರುತ್ತಿದ್ದ. ಕಲ್ಪನೆಯ ಮಾತಾಡಿ ಜೊತೆ ಕೂಡುತ್ತಿದ್ದ. ಮಗನ ಬಗ್ಗೆ ಹೇಳಲು ಪ್ರೋತ್ಸಾಹಿಸುತ್ತದ್ದ. ಅವನ ಚೇಷ್ಟೆಗಳನ್ನು ವರ್ಣಿಸಿದರೆ ಸಂತೋಷಪಡುತ್ತಿದ್ದ. ತಪ್ಪಿ ಕೂಡ ಜಯಸೂರ್ಯನ ನೆನಪು ತೆಗೆಯುತ್ತಿರಲಿಲ್ಲ. ಅದಕ್ಕೇ ಇರಬೇಕು: ಈ ದಿನ ಜಟ್ಟಿಗನೂ ಅವಳ ನೆನಪಿಗೆ ಸುಳಿದಿರಲಿಲ್ಲ. ಸಾಯಬೇಕೆನ್ನಿಸಿತು. ತಾಯೀ ನನ್ನನ್ನ ನಿಂತ ನೆಲದಲ್ಲೇ ಯಾಕೆ ಮುಚ್ಚಬಾರದು?

ಈಗ ಹೊಂಗೆ ಮರದ ಮರ್ಮರ ಹೆಚ್ಚಾಯಿತು. ಜಟ್ಟಿಗ ಮೊದಲ ಬಾರಿ ಬಂದು ಮೆಲ್ಲಗೆ ದನಿ ಮಾಡಿ ಕರೆದ ನೆನಪಾಯಿತು. ಪ್ರೇಮಾಂಕುರದ ಮೊದಲ ದಿನ ಸಪ್ಪಳಾಗದ ಹಾಗೆ ಇದೇ ಮರದ ಬಳಿ ಕರೆತಂದು ಇದೇ ಹೊತ್ತಿನಲ್ಲಿ ಮುಖದ ತುಂಬೆ ಮುದ್ದಾಡಿ ಮುಖವನೆಂಜಲು ಮಾಡಿದ್ದ. ತಾನೆಷ್ಟು ಪೆದ್ದಿಯಾಗಿದ್ದಳೆಂದರೆ ಒರೆಸಿಕೊಳ್ಳುತ್ತ ಪುನಃ ತನ್ನನ್ನು ಅವನ ಬಾಯಿಗೊಡ್ಡುತ್ತ ನಿಂತಿದ್ದಳು. ಆಗಲೂ ರಾತ್ರಿಯ ಶ್ರೀಮಂತಿಕೆ ಹೀಗೆ ಇತ್ತು. ಆದರೆ ಬಾನ ತುಂಬ ಚಿಕ್ಕೆಗಳಿದ್ದವು. ಹಾಗೆ ಒರೆಸಿಕೊಂಡಷ್ಟೂ ಅವನು ಕೆನ್ನೆ ತುಟಿಗಳನ್ನು ಕಚ್ಚಿ ನೆಕ್ಕುತ್ತಿದ್ದ. ಕೊನೆಗವನು ತುಟಿ ಹೀರುತ್ತ ಕೈಯಾಡಿಸಿದಾಗ ಥರಥರ ನಡುಗಿದ್ದಳು. ಅವನು ನಗುತ್ತ ತನ್ನ ಚಿಗುರುಮೀಸೆ ಕೊರೆವ ಗಡ್ಡಗಳಿಂದ ಕೆನ್ನೆ ತುರಿಸಿದ್ದ. ತಕ್ಷಣ ಚಿರತೆಯ ಕಂಡಂತಾಗಿ ಬೇಡಬೇಡವೆಂದರೂ ಜಯಸೂರ್ಯನ ನೆನಪಾಯಿತು. ಅವನ ದ್ರೋಹದ ನೆನಪಾಯಿತು. ಉಳಿದದ್ದೆಲ್ಲ ಮಾಯವಾಗಿ ಸೇಡು ಹೆಡೆ ತೆರೆದು ಮನಸ್ಸಿನ ತುಂಬ ಅಡತೊಡಗಿತು. ಮರದಲ್ಲಿ ಗಾಳಿ ಇನ್ನಷ್ಟು ಜೋರಾಗಿ ಬೀಸಿತು. ಪಡುವಣದಲ್ಲಿ ಮಿಂಚಾಡಿ ಬೆಳಕು ಚಿಮ್ಮಪ ಆಕಾಶ ಹಲ್ಲು ಕಿರಿದು ಮರೆಯಾಯಿತು. ಕೊಳ್ಳದಲ್ಲಿ ಗುಡುಗಿನ ಪ್ರತಿಧ್ವನಿ ಕೇಳಿಸಿತು. ಮಗ, ಸೊಸೆ ಕಾಯುತ್ತಿರಬಹುದೆನ್ನಿಸಿ ಹೊರಟಳು. ಅಷ್ಟರಲ್ಲಿ ಯಾರೋ ಬಂದ ಹಾಗೆ ಹೆಜ್ಜೆ ಸಪ್ಪಳ ಕೇಳಿಸಿತು.

ತಕ್ಷಣ ನಿಂತು ಆಸುಪಾಸು ಹಿಂದೆ ಮುಂದೆ ನೋಡಿದಳು. ಹೆಜ್ಜೆ ಸದ್ದು ಕೇಳಿಸಲಿಲ್ಲ. ಭ್ರಮೆಯಿಂರಬಹುದೇ? ಮಿಕ ಬಂದಿರಬಹುದೇ? ಮತ್ತೆ ಒಂದೆರಡು ಕಳ್ಳ ಹೆಜ್ಜೆ ಸದ್ದು ಕೇಳಿಸಿ ಚಿರತೆಯೇ ಇರಬಹುದೆಂದುಕೊಂಡು ಕಣ್ಣಿನಿಂದ ಕತ್ತಲನ್ನು, ಕಿವಿಯಿಂದ ಗಾಳಿಯನ್ನು ಭೇದಿಸುತ್ತ ನಿಂತಳು. ಹೆಜ್ಜೆಯ ಸದ್ದು ಅನುಮಾನದಲ್ಲಿ ನಿಂತುಕೊಂಡಿತು. ಯಾರೋ ಗಂಡಸು ಕೆಮ್ಮಿದ. ಅದು ಜಯಸೂರ್ಯನ ಧ್ವನಿ! “ಈ ಮಿಕವನ್ನು ನಾನು ಎರಡನೆಯ ಸಲ ಕ್ಷಮಿಸಲಾರೆ!”

ಬೆಳ್ಳಿ ಅಲುಗಲಿಲ್ಲ. ಮೈಯಂತೆ ಮೈಯೆಲ್ಲ ಬೆಂಕಿ ಹೊತ್ತಿ ದೀಪ ಕಂಬದ ಹಾಗೆ ಉರಿಯತೊಡಗಿದಳು. ಹೃದಯ ಜೋರಾಗಿ ಎದೆಗೂಡನ್ನು ಒದೆಯುತ್ತಿರುವ ಹಾಗನ್ನಿಸಿತು. ಅಷ್ಟರಲ್ಲಿ ಮೊಡಗಳನ್ನು ಹರಿದು ಮಿಂಚು ಹೊಳೆದು ಹೊಂಗೆ ಮರದಡಿಯ ಬೆಳ್ಳಿಯನ್ನೂ ಅವಳೆದುರು ಬೇಟೆಗಾಗಿ ಹೊಂಚಿನಿಂತ ಶಿಖರಸೂರ್ಯನನ್ನೂ ತೋರಿಸಿತು. ಇಬ್ಬರೂ ಮಾತಾಡಲಿಲ್ಲ. ಆಮೇಲೆ ಶಿಖರಸೂರ್ಯನೇ ಆಶ್ಚರ್ಯ ಮತ್ತು ಆನಂದಗಳನ್ನು ಬೆರೆಸಿ “ಬೆಳ್ಳಿ!” ಅಂದ. ಮರದೆಲೆಯ ಮರ್ಮರ ಹೆಚ್ಚಾಯಿತು. ಶಿಖರಸೂರ್ಯ ಸಮೀಪ ಬಂದು ಹೇಳಿದ: “ಗುಡಿಯನ್ನು ನೋಡಿಕೊಂಡು ಹೋಗೋಣ ಅಂತ ಬಂದೆ”.

ಅವಳ ಹಗೆ ಎಲ್ಲಿ ಹೋಯಿತೋ, ಹೆಸರಿಸಲಾಗದ ಭಯ ಆವರಿಸಿತು. ಬೆಳ್ಳಿಗೆ ಅವನ ದನಿ ಕೇಳಿಸಿತೇ ವಿನಾ ಮಾತು ಕೇಳಿಸಲಿಲ್ಲ. ಸುದೀರ್ಘ ನಿಟ್ಟುಸಿರು ಬಿಟ್ಟು ‘ನಾನ್ಯಾಕೆ ನಿಂತುಕೋಬೇಕು?’ ಅಂದುಕೊಂಡು ತಾನು ಹೆದರಿಲ್ಲವೆಂದು, ನಿನ್ನ ಬಗ್ಗೆ ನನ್ನಲ್ಲಿ ತಿರಸ್ಕಾರವೆಂದು ತೋರಿಸಲು ಹೊರಟಳು. ಶಿಖರಸೂರ್ಯ ಕೈಚಾಚಿ ಅಡ್ಡಗಟ್ಟಿದ. ಅವಳ ಉಸಿರಾಟದ ಬಿರುಸು ಅವನಿಗೂ ಕೇಳಿಸಿತು. ಕಣ್ಣು ಕಿಸಿದು ನೆರಳಿನಂತಿದ್ದ ಅವನ ಮುಖ ನೋಡುತ್ತ ಹಾಗೇ ನಿಂತಳು. ನರ ನರಗಳಲ್ಲಿ ಕೋಪ ಕುದಿಯುತ್ತ ಮೈಗೆ ಆ ಕುದಿತ ಕೇಳಿಸುವಂತೆ ಹರಿದಾಡಿತು.

“ನನ್ನನ್ನು ನೀನಿನ್ನೂ ಕ್ಷಮಿಸಿಲ್ಲವೇ ಬೆಳ್ಳಿ?”

ಹಾಗೇ ಬಹಳ ಹೊತ್ತು ನಿಂತುದರಿಂದ ಇರಬೇಕು ಚಳಿ ಅವಳನ್ನಾವರಿಸಿತು. ಧೈರ್ಯ ಮಾಡಿ ಹೆಜ್ಜೆ ಮುಂದಿಟ್ಟಳು.

“ನಿಂತಕೊ ಬೆಳ್ಳಿ, ನನ್ನ ಕಂಡರೆ ಭಯವೆ?”

ಈಗ ಬಾಯಿಬಿಡಲೇ ಬೇಕಾಯಿತು.

“ಭಯ ಯಾಕೆ ಬರಬೇಕು? ನೀನೇನು ಹುಲಿಯ? ಚಿರತೆಯೆ?

“ಭಯವಾಗದಿದ್ದರೆ ಒಂದು ಗಳಿಗೆ ನಿಂತುಕೊಂಡು ಮಾತಾಡಬಹುದಲ್ಲ?”

“ಯಾಕೆ ಮಾತಾಡಬೇಕು? ಯಾರೊಂದಿಗೆ ಮಾತಾಡಬೇಕು? ನೀನೇನು ಹತ್ತಿದವನ? ಹೊಂದಿದವನ? ಬಂಧುವ? ಬಳಗವ?”

“ನಿನ್ನ ಮನೆಯಲ್ಲಿ ಒಂದು ಕಾಲಕ್ಕೆ ಅತಿಥಿಯಾಗಿದ್ದವನು ಅಂತಾದರೂ ಮಾತಾಡಬಹುದಲ್ಲಾ?”

“ಹೌದು ಆಸರೆ ಕೊಟ್ಟವನನ್ನ ಕೊಂದು. ಅವನ ಮಡದಿಯನ್ನೇ ಹೊಲೆ ಮಾಡಲಿಕ್ಕೆ ಬಂದವನಲ್ಲಾ! ಅದಕ್ಕೆ ಮಾತಾಡಿಸಬೇಕೇನಪ್ಪಾ?”

“ಹಳೆಯದನ್ನ ಮರೆಯೋದೇ ಇಲ್ಲವ ನೀನು?”

ಎಂದು ಅವಳಿಗೆ ಗೊತ್ತಾಗದಂತೆ ಕೊಂಚ ಸಮೀಪವಾದ. ಅವಳ ಕೋಪ ಅವನ ಬಗೆಗಿನ ಹೇಸಿಕೆಯಾಗಿ ಹೇಳಿದಳು:

“ಚಿಕ್ಕವಳಾಗಿದ್ದಾಗ ಒಂದು ಚಿರತೆ ನನಗ ಗುಂಟು ಬಿದ್ದಿತ್ತು. ಹೋದ ಬಂದಲ್ಲಿ ಹೊಂಚಿ ಕೂತಿರುತ್ತಿತ್ತು. ಅದಕ್ಕೇ ನಾನೂ ಜಟ್ಟಿಗನ ಜತೆಗೇ ಇರುತ್ತಿದ್ದೆ. ಒಂದು ದಿನ ಮಧ್ಯಾಹ್ನ ಅದು ಇರಲಿಕ್ಕಿಲ್ಲ ಅಂತ ಒಬ್ಬಳೇ ಬಂದರೆ ಮಳೆಯೊಳಗೆ ಹೊಂಚಿ ಕುಂತಿದೆ! ಬ್ಯಾರೇ ದಾರೀನೇ ಇರಲಿಲ್ಲ. ಕೈಯೆಲ್ಲಿ ಕೊಡಲು ಹಿಡಕಂಡಿದ್ದೆ. ಅದರ ಕಡೆ ಬೀಸಿ ಎಸೆದ ನೋಡು ನಾನಂಥ ಗುರಿಕಾರುತ್ತೀಯೇನಲ್ಲ. ಅದರ ದೈವವೋ, ನ್ನನ ದೈವವೋ, ಕೊಡಲು ಅದರ ಮಕ್ಕಕ್ಕೆ ತಾಗಿ ಮಿಕ ಸತ್ತೇ ಹೋಯಿತು. ಇಷ್ಟು ದಿನ ನನ್ನನ್ನ ಅಟ್ಟಾಡಿದಿದ ಚಿರತೆಯನ್ನು ಕೊಂಡು ಹಾಕಿದೆ ಅಂತ ಸಂತೋಷ ಆಯ್ತು ನಿಜ. ಅಲ್ಲಿಗೆ ಮುಗೀತಲ್ಲ! ಅದರ ಅದರ ಚರ್ಮ ಗೂಡಿನಾಗ ಹಾಂಗ ಐತಿ. ನೋಡಿದಾಗೊಮ್ಮಿ ನೆನಪಾಗತೈತಿ. ಏನ ಮಾಡಲಿ? ಹೊರಗ ಬಂದರೂ ಆ ನೆನಪು ಚುಚ್ಚೋ ಹಾಂಗ ಹೆಜ್ಜೆ ಇಟ್ಟಾಗೊಮವಮಿ ಚುಚ್ಚತೈತಿ ಚಪ್ಪಲಿ ಬಿಸಾಕಿಧಾಂಗ ಕೆಟ್ಟ ನೆನಪನ್ನ ಬಿಸಾಡಲಿಕ್ಕಾದೀತೇನಪ?”

“ಕಠೋರಳಾಗಬೇಡ ಬೆಳ್ಳಿ; ಕೈ ಮುಗಿಯುತ್ತೇನೆ. ನನ್ನನ್ನ ಅರ್ಥ ಮಾಡಿಕೊ. ನಾನು ಸಂತನಲ್ಲ ನಿಜ. ಆದರೆ ನಿನ್ನ ಸೌಂದರ್ಯವೇ ನನ್ನನ್ನ ರಾಕ್ಷಸನನ್ನಾಗಿ ಪರಿವರ್ತನೆ ಮಾಡಿತು. ನನ್ನಲ್ಲಿಯ ಎಲ್ಲ ಒಳ್ಳೆಯತನ ಮತ್ತು ಕೆಡುಕನ್ನ ಹೊರತರುವ ಶಕ್ತಿ ಇದ್ದವಳು ನೀನೊಬ್ಬಳೇ. ಆದರೆ ಜಟ್ಟಿಗನಿಗೆ ಎಲ್ಲಾ ಕೊಟ್ಟು ಬಿಟ್ಟಿದ್ದೀ ಅಂತ ಗೊತ್ತು. ಆದರೆ ನನಗೇನೂ ಕೊಡಲಿಲ್ಲ. ಸುಖ ಇರಲಿ, ಮನಶಾಂತಿ ಕೂಡ ಕೊಡಲಿಲ್ಲ. ಹುಚ್ಚು ನಿರಾಸೆಗಳನ್ನು ಮಾತ್ರ ಕೊಟ್ಟೆ.”

ಎನ್ನುತ ಬಿಕ್ಕಿದವನಂತೆ ಕೊಂಚ ಆರ್ದ್ರತೆಯನ್ನು ಅಭಿನಯಿಸಿ ಮತ್ತೆ ಹೇಳಿದ:

“ನಿನ್ನ ಹಿತಕ್ಕಾಗಿಯೇ ಹೇಳುತ್ತಿದ್ದೇನೆ ಬೆಳ್ಳಿ, ಮಹಾರಾಣಿಯಾಗಿ ಮೆರೆಯಬೇಕಾದ ಸೌಂದರ್ಯವತಿ ನೀನು! ಚಕ್ರವರ್ತಿಯಾದ ತಕ್ಷಣ ನಾನು ಯಾರನ್ನ ಜ್ಞಾಪಿಸಿಕೊಂಡೆ ಗೊತ್ತ? ನನ್ನನ್ನು! ಆದರೆ ಈ ಕಗ್ಗಾಡಿನಲ್ಲಿ ಕಾಡುಪ್ರಾಣಿಯ ಹಾಗೆ ಬದುಕುತ್ತಿರೋದನ್ನ ನೋಡಿ ಎಷ್ಟು ಮರುಗ್ತೀನಿ ಗೊತ್ತ?”

ಅವನ ಆಸೆಯಿಂದ ಬೆಳ್ಳಿ ಇನ್ನಷ್ಟು ಹೇಸಿಕೊಂಡಳು.

“ಭಲೇ ಭಲೇ! ಎಂಥ ಅವಕಾಶ ಕಳಕೊಂಡ್ನೆಲ್ಲಪೊ!” ಎಂದು ಕೊಂಚ ಆಶ್ಚರ್ಯವನ್ನಭಿನಯಿಸಿ ತಕ್ಷಣ ಸಿಡಿದಳು: –

“ಯೋ ಸರಿಯಾಗಿ ಕೇಳಿಕೋ. ಎಲ್ಲಿದ್ದರೂ ಎಂದಿದ್ದರೂ ಜಟ್ಟಿಗನೇ ನನ್ನ ಒಡೆಯ, ನನ್ನ ಮಾಲೀಕ, ನನ್ನ ಗಂಡ! ಅವನನ್ನ ಕೂಡಿದಾಗ ನಿನ್ನಂಥ ಮಗನನ್ನ ಪಡೀಬೇಕಂತ ಕನಸು ಕಂಡಿದ್ದೆ. ನಿನ್ನಂಥಾ ಸ್ವಭಾವದವನಲ್ಲ. ನಿನ್ನಂಥ ರೂಪದವನು. ನನ್ನ ಜಟ್ಟಿಗನಿಗೆ ನನ್ನೆಲ್ಲ ಪ್ರೀತಿಯನ್ನ ಧಾರೆ ಎರೆದು ಈಗ ನಿನ್ನನ್ನ ಮಗನಾಗಿ ಕಾಣೋವಷ್ಟು ಪ್ರೀತಿ ಮಾತ್ರ ಉಳಿದೈತಿ ಕಣ್ಣಾ! ಹಾಂಗೇ ನಿನಗೂ ಅನಿಸಿದರೆ ಬರೋಬ್ಬರಿ. ಅನ್ನಿಸದಿದ್ದರೂ ನನಗೆ ಬ್ಯಾಸರಿಲ್ಲಪ. ಯಾಕೆಂದರೆ ಕೆಟ್ಟ ಮಗ ಹುಟ್ಟಬಹುದು. ಕೆಟ್ಟ ತಾಯಿ ಇರಬಾರದಲ್ಲ? ಹೊರಡು”.

ಈ ಮಾತಿನ ವ್ಯಂಗ ಅವನ ಹೃದಯಕ್ಕೆ ನಟ್ಟಿತಾದರೂ ಮನಸ್ಸಿನಲ್ಲಿ ಗೊಂದಲವಾಯಿತು. ಇದು ಇವಳು ಉದ್ದೇಶಪೂರ್ವಕ ಮಾಡಿದ ಅವಮಾನವೆಂದು ಖಾತ್ರಿಯಾಗಿ ನೆತ್ತರು ಕಾವೇರಿ ಮುಖಕ್ಕಡರಿತು. ಆದರೂ ಸೋಲುವುದಕ್ಕೆ ಮನಸ್ಸಿರಲಿಲ್ಲ. ಈಗ ಸೋತರೂ ಗೆದ್ದರೂ ಇದೇ ಕೊನೇ ಅವಕಾಶವೆಂದು ಅವನಿಗೆ ಗೊತ್ತಿತ್ತು. ಅಸಂಗತ ಹರಟೆಗಳೆಂಬಂತೆ ಮುಖಸ್ತುತಿ ಮಾಡುತ್ತ ಅವಳ ಮೈ ಮರೆಸುವುದಕ್ಕೆ ಸುರು ಮಾಡಿದ:

“ನಾನಿಲ್ಲಿಗೆ ಬಂದಾಗ ಪುಟ್ಟ ಹುಡುಗಿ ನೀನು. ವೀಳ್ಯ ತಿಂದು ಬಾಯ ಒಂದು ಬದಿಗಿಟ್ಟುಕೊಂಡು ಕೆಂಪು ಉಗುಳು ಸೊಸುವ ಮುಗುಳು ನಗೆ ನಗುತ್ತ ಮುಖ ಮ್ಯಾಲೆತ್ತಿ ಮಾತಾಡುತ್ತಿದ್ದೆ. ಚೆಲ್ಲು ಚೆಲ್ಲಾಗಿ ಈಗಷ್ಟೆ ಹೆಂಗಸಾಗಿ ಅರಳುವ ಹುಡುಗಿಯಾಗಿದ್ದೆ. ಚೆಲುವೆ, ಮುಗ್ಧೇ, ಮೃದುವಾಗಿ ಗಂಡಸರನ್ನು ಆಕರ್ಷಿಸುವ ಈ ಮೂರು ಗುಣಗಳ ಬೆರಕೆಯಾಗಿದ್ದೆ. ಈಗಲೂ ನೀನು ಯಾವುದೇ ಗಂಡಸನ್ನು ಹುಚ್ಚು ಹಿಡಿಸಿ ಕೊಲ್ಲಬಲ್ಲೆ. ಈ ವಯಸ್ಸಿನಲ್ಲೂ ನೀನಿಂತ ಸುಂದರಿಯಾದರೆ ನನಗಿನಗನು ಉಳಿಗಾಲವುಂಟೆ ಬೆಳ್ಳಿ?”.

ಎಂದು ಹೊಗಳಿ ನೋಡಿದ. ಅಷ್ಟು ಸಮೀಪ ನಿಂತಿದ್ದರೂ ಕೋಪದ ನಿಡುಸುಯ್ಲಿನಿಂದ ಬೆಳ್ಳಿಯ ಎದೆ ಉಬ್ಬಿ ಕೆಳಗಿಳಿಯುವುದು ಕಾಣಲಿಲ್ಲ.

“ನನ್ನ ಹೃದಯವನ್ನ ನೀನೊಮ್ಮೆ ಕದ್ದ ಮೇಲೆ ಅದನ್ನ ಯಾರ‍್ಯಾರಿಗೋ ಕೊಡಲು ಪ್ರಯತ್ನಿಸಿದೆ. ಆದರೆ ನೀನದನ್ನು ಶಾಶ್ವತವಾಗಿ ಕದ್ದು ಬಿಟ್ಟಿದ್ದು ಗೊತ್ತಾಗಿ ಅಂಥ ಪ್ರಯತ್ನವನ್ನು ಬಿಟ್ಟೆ….”

ಎಂದು ಇನ್ನೊಂದು ಸುಳ್ಳು ಬಿಟ್ಟ.

ತಕ್ಷಣ ಬೆಳ್ಳಿ ‘ಮಗ ಕಾಯುತ್ತಾನೆ’ ಎಂದು ಹೇಳಿ ಹೊರಡಲು ಹೆಜ್ಜೆ ಇಟ್ಟಳು. ಕಣ್ಣಲ್ಲಿ ಅಶ್ಲೀಲವಾದ ಜೊಲ್ಲು ಸುರಿಸುತ್ತ “ನಿನ್ನ ಮಗ ನನಗೂ ಮಗ ಅಲ್ಲವೆ?” ಅಂದ. ಅವನಲ್ಲಿ ಪುನಃ ದುಷ್ಟತನದ ಪ್ರವಾಹ ಹರಿದು ಇಡೀ ದೇಹವನ್ನು ಉತ್ಸಾಹಗೊಳಿಸಿತು. ಇವನಿಗೆ ಭ್ರಮೆಯೋ, ಹುಚ್ಚೋ – ಇನ್ನಷ್ಟು ದೃಢ ನಿರ್ಧಾರದಿಂದ ಬೆಳ್ಳಿ ಹೇಳಿದಳು.

“ಯೋ ದೊಡ್ಡ ಮನುಷ್ಯ ನನ್ನ ಮಗ ಯಾರು ಗೊತ್ತ? ನಿನ್ನಡಿ ಯಾರು ಗೊತ್ತ? ನೀನು ಕದ್ದು ಕೂತಿದ್ದೀಯಲ್ಲ ಕನಕಪುರಿಯ ಸಿಂಹಾಸನ? – ಅದರ ಹಕ್ಕಿನ ಅಧಿಕಾರಿ – ತರುಣ ಚಂದ್ರ! ಅವನಿಗದು ತಿಳಿದಿಲ್ಲ ಅಂದುಕೋಬ್ಯಾಡ. ನೀನು ಕೂತು ಮೈಲಿಗೆ ಆಯ್ತು ನೋಡು, ನನಗೆ ಆ ಸಂಹಾಸನ ಬೇಡ ಅಂತ ಉಗಿದು ಬಿಟ್ಟವನು. ಅವನ ಎಂಜಲದ ಮೇಲೆ ನೀನು ಕೂತಿದ್ದು. ಅವನ ಮಡದಿ ಅಂದರೆ ನನ್ನ ಸೊಸೆ ಯಾರು ಗೊತ್ತೊ? ವಿಷ ಹಾಕಿದ್ದೆಯಲ್ಲ, ನಿನ್ನ ಮಗಳು ಗೌರಿಗೆ – ಆ ಗೌರಿ ನ್ನನ ಸೊಸೆ! ಗರ್ಭ ಕಳಚಿ ಬೀಳಲಿ ಅಂತ ವಿಷ ಹಾಕಿದ್ದೆಯಲ್ಲ, ಅದೂ ಕಳಚಲಿಲ್ಲ. ಹುಟ್ಟು ಬರಲಿದ್ದಾಳೆ ಕಲ್ಯಾಣಿ! ತಿಳಿಯಿತೇನಪ್ಪ. ನಿನ್ನ ಯೋಗ್ಯತೆ?

– ಎಂದು ಅಣಗಿಸುತ್ತ ವಯ್ಯಾರದಿಂದ ಕೈ ತಿರುವುತ್ತ ಮುಂದುವರಿಸಿದಳು, –

“ಬಂದು ದೊಡ್ಡ ಮನುಷ್ಯ! ನನ್ನ ಮಗ ಅಂತ ! ಇನ್ನೊಂದು ಬಾರಿ ಈ ಮಾತಾಡು ಒದರಿದರೆ….. ಹುಷಾರ್?”

– ಎಂದು ತೋರುಬೆರಳು ತೋರುತ್ತ ತಾಕೀತು ಮಾಡಿ ಹೊರಟಳು. ಶಿಖರಸೂರ್ಯ ತೀವ್ರ ಆಘಾತದಿಂದ ತತ್ತರಿಸಿ ಹೋದ. ಮಗಳು ಜೀವಂತವಿದ್ದದ್ದು, ಅದು ತನಗೂ ತನ್ನ ಬೇಹುಗಾರರಿಗೂ ತಿಳಿಯದೇ ಇದ್ದದ್ದು, ನಿನ್ನಡಿಯ ಮೂಲಕ ಎಲ್ಲರಿಗೂ ಗೊತ್ತಾದದ್ದು – ಈ ಹಡಬೆ ತನ್ನ ಪ್ರೀತಿಯನ್ನ ನಿರಾಕರಿಸಿದ್ದರು – ಇದೆಲ್ಲವೂ ಸೇರಿ – ಇದೇ ತನ್ನ ಮತ್ತು ಬೆಳ್ಳಿಯ ಕೊನೇ ಭೇಟಿಯೆಂದು, ಅದು ಕೂಡ ಅವಮಾನಕರವಾದ ಸೋಲಿನಲ್ಲಿ ಮುಗಿಯಿತೆಂದು ಖಾತ್ರಿಯಾಯ್ತು. ತಕ್ಷಣ ಅವನಲ್ಲಿ ದುಷ್ಟತನದ ಘೋರವೂ ವಿಕಾರವೂ ಆದ ಭಾವನೆಗಳುಕ್ಕಿ ಅವನ ಹೃದಯ ಭೀಕರ ಪೈಶಾಚಿಕ ಭಾವನೆಗಳಿಂದ ತಳಮಳಗೊಂಡಿತು. ಕಿವಿಯ ಕೂದಲು ಜಾಲಿಯ ಮುಳ್ಳಿನಂತೆ ಸೆಟೆದವು. ಹಲ್ಲು ಮಸೆದಂತೆ ಅವಡುಗಚ್ಚಿ ಕಚ್ಚಿಯಾದರೂ ಇವಳನ್ನು ಕೊಲ್ಲಬೇಕೆಂದು ನಿರ್ಧರಿಸಿ ರಾಕ್ಷಸ ಹೆಜ್ಜೆಗಳನ್ನಿಡುತ್ತ ಹೋಗಿ ಬೆಳ್ಳಿಯನ್ನು ಅಡ್ಡಗಟ್ಟಿ ಎಡಗೈ ಹಿಡಿದು ಕ್ಷಣಕಾಲ ಆಸೆಯಿಂಧ ನೋಡುವಂತೆ ಕಣ್ಣಿಂದ ಅವಳ ಮುಖ ನೆಕ್ಕುತ್ತ ನಿಂತ. ಈ ಕ್ಷಣವನ್ನೇ ಕಾಯುತ್ತಿರುವಂತೆ ಬೆಳ್ಳಿಯ ಮೈಯಂತ ಮೈಯೆಲ್ಲ ಕೋಪದ ವಿದ್ಯುತ್ ಸಂಚಾರವಾಗಿ, ಕೆನ್ನೆ ಕಣ್ಣುಗಳಿಗೆ ನೆತ್ತರೇರಿ ಕಣ್ಣಿಗೆ ಹೊಸದಾಗಿ ನುಗ್ಗಿದ ಭಯಾನಕವಾದ ಬೆಳಕನ್ನು ಝಳಪಿಸುತ್ತ “ಬಿ ಕೈ” ಎಂದಳು. ದೃಢ ನಿರ್ಧಾರದಿಂದ, ನಿಧಾನವಾಗಿ ಅಕ್ಷ್ಕ್ಷರ ಕಚ್ಚಿ ಹೇಳಿದ:

“ನಮ್ಮ ಈವರೆಗಿನ ಎಲ್ಲಾ ಕತೆಗೆ ಕೊನೆ ಮಾಡುವುದಕ್ಕೆ ಕೊನೆಯದಾಗಿ – ಅಂತಿಮವಾಗಿ ಹೇಳುತ್ತಿದ್ದೇನೆ ಹೆಣ್ಣೇ ಒಂದು ಮುದ್ದು ಕೊಡು, ಬಿಡುತ್ತೇನೆ.”

ಬೆಳ್ಳಿಯ ಮೈಮೇಲೆ ಆವೇಶವಾದಂತೆ ವಿಚಿತ್ರವಾಗಿ ನಡುಗಿದಳು. ಬಲಹಸ್ತ ಕಂಪಿಸಿತು. ಜೋರಾಗಿ ಬೆರಳು ಮಡಿಚಿ ಉಕ್ಕುತ್ತಿದ್ದ ವಿದ್ಯುತ್ ಪ್ರವಾಹ ತಡೆದು ತುಸು ಹೊತ್ತು, ಶಕ್ತಿಯ ಸಂಗ್ರಹಿಸಿದಳು. ತಾನೇನು ಮಾಡುತ್ತಿದ್ದೇನೆಂದು ಅರಿಯದೆ ಬಲ ಹಸ್ತ ಅಗಲಿಸಿ ಫಟಾರೆಂದು ಅವನ ಎಸಗೆನ್ನೆಗೆ ಏಟು ಹಾಕಿದಳು ನೋಡು! ಏಟು ಅವಳದೋ, ಗವಿಯ ಅಮ್ಮನದೋ, ಗುಡಿಯ ಜಟ್ಟಿಗನದೋ, ಮಗ ನಿನ್ನಡಿಯದೋ, ಶಿವಾಪುರದ ಜನಗಳದ್ದೋ – ಇಡೀ ಕೊಳ್ಳದ ತುಂಬ ಪ್ರತಿಧ್ವನಿಸಿತು! ಬಲಾಢ್ಯವಾದ ಅನಿರೀಕ್ಷಿತ ಏಟಿನ ರಭಸಕ್ಕೆ ಶಿಖರಸೂರ್ಯ ತತ್ತರಿಸಿ ಸುಮಾರು ಮೂರು ಮಾರು ದೂರ ಎತ್ತಿ ಒಗೆದಂತೆ ಹಾರಿ ಕಮರಿಗೆ ಬಿದ್ದ! ಕೆಳಗಿನ ಬಂಡೆಗೆ ತಲೆ ತಾಗಿ ಕಣ್ಣಿಗೆ ಕತ್ತಲೆ ಕವಿದು ಎಲ್ಲಿದ್ದೇನೆಂಬುದೇ ಮರೆವಾಗಿ ಕಣ್ಣು ಮುಚ್ಚಿದ.

ಭಯಂಕರ ಆವೇಶದ ರಭಸದಲ್ಲೇ ಬೆಳ್ಳಿ ಬೆರಗಾಗಿ ನಿಂತಿರುವಾಗ “ಅಬ್ಬೇ” ಎಂದು ಕರೆದದ್ದು ಕೇಳಿಸಿತು. ಮನೆಯಲ್ಲಿ ತಾಯಿಯ ಕಾಣದೆ ಬಂದ ನಿನ್ನಡಿ ದೃಶ್ಯದ ಕೊನೆಯ ಅಬ್ಬೆಯ ಆವೇಶವನ್ನು ನೋಡಿದ್ದ. ಮೆಲ್ಲನೆ ಹೋಗಿ ಭುಜ ಹಿಡಿದುಕೊಂಡ. ಅಬ್ಬೆಯ ಮೈ ಬಿಸಿಯೇರಿ ಕಂಪಿಸುತ್ತಿದ್ದಳು. ಮಂದವಾದ ತಿಂಗಳ ಬೆಳಕಿನಲ್ಲಿ ಅವಳ ಮುಖದ ಒಂದೊಂದು ಗೆರೆಯೂ ಹರಿತವಾದ ಆಯುಧದ ಮೊನೆಯಂತೆ ಕಂಡವು. ಮಗ ಕೂಸಿನ ಬೆರಗಿನಲ್ಲಿ ನೋಡುತ್ತ ತಾಯ ತಲೆ ನೇವರಿಸಿ ಪ್ರಾರ್ಥಿಸುವ ದನಿಯಲ್ಲಿ “ಅಬ್ಬೇ ಶಾಂತಳಾಗು. ನಾನು ನಿನ್ನ ಮಗ ನಿನ್ನಡಿ!” ಅಂದ. ಅಷ್ಟು ಸಾಕಾಯಿತು ತಾಯಿಗೆ. ಏರಿದ ಆವೇಶ ಇಳಿದು ತಿಳಿಯಾಗಿ ಈಗಷ್ಟೇ ಒಳಪ್ರವೇಶಿಸಿದ ಶಕ್ತಿಯನ್ನೆಲ್ಲ ಮಮತೆಯಾಗಿ ಪರಿವರ್ತಿಸಿ ಮಗನಿಗದನ್ನು ಹಸ್ತಾಂತರಿಸಲೆಂಬಂತೆ “ಮಗನೇ!” ಎಂದು ತಬ್ಬಿಕೊಂಡಳು.