ನಿರೀಕ್ಷೆಯಂತೆ ಆ ದಿನ ಮುಂಜಾನೆ ನಿನ್ನಡಿ ಬರಲಿಲ್ಲ. ಬೆಟ್ಟಕ್ಕೆ ಹೋಗಿ ಬೆಳಗಿನ ಹನಿಪೂಜೆ, ಮದ್ಯಾಹ್ನದ ಮಹಾಪೂಜೆ ಮುಗಿಸಿ ಬರುವಾಗ ಇಳಿಹೊತ್ತಾಗಿತ್ತು. ದಾರಿಯಲ್ಲಿ ಸಿಕ್ಕ ಚಂಡೀದಾಸನೊಂದಿಗೆ ಮುರಿಗೆಪ್ಪನ ತೋಟಕ್ಕೆ ಬಂಡೀಮಾರ್ಗದಿಂದ ಬಂದಾಗ ಬೆಟ್ಟಕ್ಕೆ ಹೋಗಿದ್ದ ಶಿಖರಸೂರ್ಯ ಇನ್ನೂ ಬಂದಿರಲಿಲ್ಲ. ಮುಳುಗುವ ಸೂರ್ಯನ ಮಾಗಿದ ಬಿಸಿಲಿನಿಂದ ಮುರಿಗೆಪ್ಪನ ತೋಟ, ಅದರ ಸುತ್ತಮುತ್ತಲಿನ ತರುಮರುಗಳು ಚಿನ್ನದ ಮಿರುಗಿನಿಂದ ಹೊಳೆಯುತ್ತಿದ್ದವು. ಹಕ್ಕಿಗಳ ಚಿಲಿಪಿಲಿಯೊಂದಿಗೆ ಆಗಾಗ ದೂರದಿಂದ ಕೇಳಿಸುವ ದೊಡ್ಡ ಹಕ್ಕಿಗಳ ಇನಿದನಿ ಸೇರಿ ಅನೇಗ ಗದ್ದೆಗಳಿರುವ ಆ ಬಯಲಿಗೆ ಲಘುವಾದ ಸಂಗೀತ ನೀಡಿ ಆ ಪ್ರದೇಶದ ಚಂದವನ್ನ ಹೆಚ್ಚಿಸಿದ್ದವು. ಅದನ್ನು ಗ್ರಹಿಸಿ ತಾನ್ಯಾವುದೋ ಅಪರಿಚಿತ ಸುಂದರ ಸ್ಥಳಕ್ಕೆ ಅಥವಾ ಮರೆತ ಸ್ಥಳಕ್ಕೆ ಬಂದಂತೆನಿಸಿ ನಿನ್ನಡಿಗೆ ಹಾಯೆನ್ನಿಸಿತು.

ಕೊಟ್ಟಿಗೆಯಲ್ಲಿ ದನದ ಬದಲು ಎಂಟು ಕುದುರೆ ಕಟ್ಟಿದ್ದರು. ಕುದುರೆ ಗಾಗಿ ಅಲ್ಲೇ ಇತ್ತು. ಅದರ ಜೊತೆಗೆ ಸಿಡಿತಲೆ ಯಂತ್ರ ಹೇರಿದ ಇನ್ನೆರಡು ಗಾಡಿಗಳು ನಿಂತಿದ್ದವು. ಯಾವುದೋ ಯುದ್ಧದಿಂದ ಹಿಂದಿರುಗುವಾಗ ಇಲ್ಲಿಗೆ ಬಂದಿರಬಹುದು ಅಂದುಕೊಂಡ.

ಮುರಿಗೆಪ್ಪ ಕುದುರೆಗಾಡಿಯ ನೊಗದ ಮೇಲೆ ಕೂತಿದ್ದವನು ನಿನ್ನಡಿ, ಚಂಡೀದಾಸರನ್ನು ನೋಡಿದ ಕೂಡಲೇ ಜಿಗಿದು “ಬಾ ತಮ್ಮಾ” ಎನ್ನುತ್ತ ನಿನ್ನಡಿಯ ಕೈಹಿಡಿದು ಕರಕೊಂಬಂದ. ಪ್ರೀತಿಯಿಂದ ಮೊಗಸಾಲೆಯಲ್ಲಿದ್ದ ಗಡಂಚಿಯ ಮ್ಯಾಲೆ ತಟ್ಟು ಹಾಸಿ ಕೂರಿಸಿದ. ನಿನ್ನಡಿ ಹೇಳಿದ:

“ಮಾರಾಜನೆಲ್ಲಿ ಚಿಗಪ್ಪ?”

“ಬೆಟ್ಟದ ಕಡೆ ಹೋಗ್ಯಾನ. ಇನ್ನೇನು ಬಂದಾನು”.

ಚಂಡೀದಾಸ ಮನೆ ತುಂಬ ಹುಡುಕು ನೋಟ ಹರಿಸಿ “ನಿನ್ನ ಬಳಗ ಎಲ್ಲೂ ಕಾಣದಲ್ಲಪ್ಪ?” ಅಂದ.

“ಅವರನ್ನ ಬ್ಯಾರೆ ಕಡೆ ಅಟ್ಟಿದೀನಿ.”

“ಅಂದರೆ?”

“ಮೂರು ದಿನಾ ನಿನ್ನ ಮನೆಯೊಳಗಿರುತ್ತೀನಿ. ತೊಗೊ ಬಾಡಿಗಿ” ಅಂದು ಬೊಗಸಿತುಂಬ ಬಂಗಾರ ಕೊಟ್ಟನಪ್ಪ! ಮಾರಾಜ ಕೇಳಿದಮ್ಯಾಲೆ ಬ್ಯಾಡ ಅಂತ ಯಾವ ಬಾಯಿಂದ ಹೇಳಲಿ? ಒಂದೆರಡು ದಿನ ಮನಿ ಬಿಟ್ಟುಕೊಟ್ಟು ಮನೀಮಂದೆಲ್ಲಾ ಊರೊಳಗಿನ ಮನ್ಯಾಗಿದ್ದೀವಿ” ಅಂದ.

ಚಂಡೀದಾಸನಿಗೆ ತಕ್ಷಣ ಶಿವಪಾದನ ಮಾತು ನೆನಪಾಯ್ತು: “ಚಿನ್ನದ ವಿಚಾರವ? ಹಂಗಾದರ ನಿನಗ ದ್ರೋಹ ಮಾಡದವರು ಯಾರೂ ಇಲ್ಲ ಬಿಡು!” ಶಿವಪಾದ ಈ ಮಾತನ್ನ ನಗಾಡುತ್ತ ಹೇಳಿದ್ದನ್ನು ಜ್ಞಾಪಿಸಿಕೊಂಡು ಇವನೂ ಮುಗುಳುನಕ್ಕ. ಕುತೂಹಲ ಕೆರಳಿ,

“ಬೊಗಸಿ ಚಿನ್ನವ? ಎಲ್ಲಿ ತೋರಿಸು?” ಅಂದ.

ಮುರಿಗೆಪ್ಪ ಒಳಕ್ಕೆ ಹೋಗಿ ಚಿನ್ನ ಇಟ್ಟಿದ್ದ ತಟ್ಟೆಯನ್ನ ತಂದು ಚಂಡೀದಾಸನಿಗೆ ಕೊಟ್ಟ. ಚಂಡೀದಾಸ ಅದನ್ನು ಹಿಡಿದು ಪರೀಕ್ಷಿಸಿ ನಿನ್ನಡಿಯ ಮುಂದೆ ಹಿಡಿದ.

“ಇದು ಎಲ್ಲಿಯ ಚಿನ್ನ, ಹೇಳಪ್ಪ ಶಿವಪಾದನ ಶಿಷ್ಯ ನೀನು!”

ಎಂದು ಸವಾಲೆಸೆದಂತೆ ಕೇಳಿದ. ಇವನು ಹಿಂಗ್ಯಾಕೆ ಕೇಳಿದನೆಂದು ನಿನ್ನಡಿಗೆ ಅರ್ಥವಾಗಲಿಲ್ಲ. “ಏನೂ ನೆನಪಾಗವೊಲ್ದು” ಅಂದ ನಿನ್ನಡಿ.

“ಇದು ಗೋಧಿ ಚಿನ್ನ!”

ನಿನ್ನಡಿ ಮತ್ತೆ ನೋಡಿ “ಹೌದು ಇವೆಲ್ಲ ಆಭರಣದ ಕಾಳು.”

ಎಂದು ಹೇಳಿ ಗುರುತು ಹಿಡಿದಿದ್ದಕ್ಕೆ ಭೇಷ್ ಪಡೆದವನಂತೆ ಸಮಾಧಾನ ಹೊಂದಿದ. ಚಂಡೀದಾಸ ಅಷ್ಟಕ್ಕೇ ಬಿಡಲಿಲ್ಲ –

“ಇದು ಮುರಿಗೆಪ್ಪನ ಹೊಲದ ಗೋಧೀ ಚಿನ್ನ!”

ಎಂದು ಹೇಳಿ ಎದ್ದು ನಿಂತು,

“ಮುರಿಗೆಪ್ಪ, ನಿನ್ನ ಗೋಧೀ ಚೀಲ ಎಲ್ಲಿಟ್ಟಿದ್ದ? ತೋರಿಸು”

ಅಂದ. ‘ಒಳಗಿದೆ’ ಎಂದು ಒಳಕ್ಕೆ ಹೋದ. ಹೋದವನು ಅಲ್ಲಿಂದಲೇ “ಶಿವಪಾದಾs” ಎಂದು ಕಿಟಾರನೆ ಕಿರಿಚಿದ. ಏನಾಯಿತೋ ಎಂದು ಇಬ್ಬರೂ ಹೆದರಿ ಒಳಕ್ಕೋಡಿ ಹೋಗಿ ನೋಡಿದರೆ ಮುರಿಗೆಪ್ಪನ ಬಾಯಿಂದ ಮಾತೇ ಇಲ್ಲ! ತೆರೆದ ಬಾಯಿ ತೆರೆದಂತೇ ನಿಂತು ಅರ್ಧ ತೆರೆದ ಗೋಧೀ ಚೀಲದ ಕಡೆಗೆ ಕೈ ಮಾಡಿ ತೋರಿಸಿದ. ನೋಡಿದರೆ ಇಡೀ ಚೀಲದ ತುಂಬ ಚಿನ್ನದ ಗೋಧಿಯಿದೆ! ಆಘಾತದಿಂದ ನಿನ್ನಡಿ ಸುಮ್ಮನಾದರೆ ಚಂಡೀದಾನ ತನ್ನ ಕೋಪವನ್ನ ನಿಯಂತ್ರಿಸಲು ಪ್ರತ್ನಿಸುತ್ತಿದ್ದ. ಕನಕಪುರಿ ಮಹಾರಾಜನ ಬಲ ದೌರ್ಬಲ್ಯಗಳ ಗುಟ್ಟು ಇಡಿಯಾಗಿ ಬಯಲಾಗಿತ್ತು. ಅವನ ಅರಮನೆಯಲ್ಲಿ ಸಂಗ್ರಹಿಸಿದ್ದ ಧಾನ್ಯೆ ಪ್ರಮಾಣ ನೋಡಿದಾಗಲೇ ಚಂಡೀದಾಸನಿಗೆ ಅನುಮಾನ ಬಂದಿತ್ತು. ಕನಕಪುರಿಯ ಆ ಮೇಲಿನ ಕತೆಗಳು ಇದನ್ನೇ ಸಮರ್ಥಿಸಿದ್ದವು. ಮಂತ್ರದಾಡದಿಂದ ಇಷ್ಟೆಲ್ಲ ಮೆರೆವವನು ಅದನ್ನು ಉಪಯೋಗಿಸುವಾಗ ನಿಷ್ಕಾಳಜಿಯಿಂದ ಇರಬಾರದಲ್ಲ! ಬಹುಶಃ ತಾಯಿ ಕೊಟ್ಟ ಮುದ್ದತು ಮುಗಿಯಿತೇನೋ! ತನ್ನ ನಿಷ್ಕಾಳಜಿಗೆ ಅವನು ತೆರುವ ಬೆಲೆ ನೆನೆದು ನಕ್ಕು –

“ಇಂಥ ಮಾಟಗಾರನಿಗೆ ಮಹಾರಾಜ ಅಂತ ನಮಸ್ಕಾರ ಮಾಡು ಅಂತೀಯಲ್ಲ ಮಾರಾಯಾ, ಇವನಿಗಿನ್ನ ನಮ್ಮ ಕುರುಮುನಿಯೇ ವಾಸಿ. ಬರುತ್ತೀನೆ”

ಎಂದು ಪ್ರತಿಕ್ರಿಯೆಗಾಗಿ ಕಾಯದೆ ಚಂಡೀದಾಸ ಹೊರಟು ಬಿಟ್ಟ. ನಿನ್ನಡಿಯಿನ್ನೂ ವಾಸ್ತವಕ್ಕೆ ಬಂದಿರಲೇ ಇಲ್ಲ. ಮುರಿಗೆಪ್ಪ ಓಡಿ ಬಂದು.

“ಈ ಚಿನ್ನದಿಂದ ಮತ್ತೆ ಗೋಧೀ ಮಾಡೊದಕ್ಕೆ ಬರತೈತೇನಣ್ಣಾ?” ಅಂದ.

ಚಂಡೀದಾಸ “ಇದಕ್ಕೆ ಉತ್ತರ ಹೇಳಬಲ್ಲವನು ಕುರುಮುನಿ ಒಬ್ಬನೇ. ಅವನನ್ನೇ ಕೇಳೋಣ, ಬಾ” ಎಂದು ಹೊರಟ. ಅವನ ಹಿಂದಿನಿಂದ ಮುರಿಗೆಪ್ಪನೂ ಹೋದ.

ಅವರು ಮರೆಯಾಗಿ ಸ್ವಲ್ಪ ಹೊತ್ತಿನಲ್ಲಿಯೇ ಕುದುರೆಯ ಖುರಪುಟ ಕೇಳಿಸಿತು. ನೋಡಿದರೆ ಶಿಖರಸೂರ್ಯನಾಗಲೇ ಒಳಬಂದು ಕುದುರೆಯಿಂದಿಳಿಯುತ್ತಿದ್ದ. ಸಿಟ್ಟು ಮಾಡಿದ ಬಾಲಕನಂತೆ ಕೂತಿದ್ದ ನಿನ್ನಡಿಯ ಗಡಂಚಿಯ ಎದುರಿನಲ್ಲೇ ಇನ್ನೊಂದು ಗಡಂಚಿಯನ್ನೆಳೆದುಕೊಂಡು ಕೂತು ನಿನ್ನಡಿಯನ್ನು ನೋಡಿದ, ಆಶ್ಚರ್ಯವಾಯಿತು.

ನಿನ್ನಡಿ ಛಾಯಾದೇವಿಯನ್ನು ಬಹುವಾಗಿ ಹೋಲುತ್ತಿದ್ದ. ಛಾಯಾದೇವಿಯ ಕಣ್ಣು ಕೊಂಚ ಆತಂಕ ಮತ್ತು ದಿಗಿಲಿನಲ್ಲಿರುವ ಕಣ್ಣು. ಹುಷಾರಾಗಿರಲು ಪೂರ್ವ ತಯಾರಿಗೆಂಬಂತೆ ಸಂಕೋಚಗೊಂಡ ಕಣ್ಣು. ಇವನ ಕಣ್ಣು ಅಗಲವಾಗಿ ದುಂಡಗೆ ಹೊಳೆಯುತ್ತಿವೆ. ಆದರೂ ಛಾಯಾದೇವಿಯ ಚೆಲುವಿಕೆಗಿಂತ ಇನ್ನೇನೋ ಒಂದು ವಿಶೇಷ ಆಕರ್ಷಣೆ ಇವನಲ್ಲಿದೆ ಎನ್ನಿಸಿತು. ಬಹುಶಃ ಇವನ ಕಣ್ಣಿನ ಕಾಂತಿಯ ಎದುರಿಗೆ ಯಾರಿದ್ದರೂ ಅವರಲ್ಲಿ ಉತ್ಸಾಹ ಲವಲವಿಕೆ ಲಾಸ್ಯವಾಡುವಂತೆ ಮಾಡಬಲ್ಲ ಅಪಾರ ಪ್ರೀತಿ ಈ ಕಣ್ಣುಗಳಲ್ಲಿದೆ. ಆ ದಪ್ಪವಾದ ಕೂದಲ್ಲು ಮ್ಯಾಲೆತ್ತಿ ತಲೆಯ ಹಿಂಭಾಗದಲ್ಲಿ ಗಟ್ಟಿಯಾಗಿ ಕಟ್ಟಿದ್ದರೂ ಕೆಲವು ಕಳ್ಳ ಕೂದಲು ಮುಖ ಮತ್ತು ಕತ್ತಿನ ಸುತ್ತ ಹರಡಿಕೊಂಡಿದ್ದವು. ಛಾಯಾದೇವಿ ನಿನ್ನಡಿಯ ತಾಯಿಯಂತೆ ಕಾಣುತ್ತಿದ್ದಳೇ ವಿನಾ ಅಕ್ಕನಂತಲ್ಲ.

ಬಹಳ ಹೊತ್ತು ಇಬ್ಬರ ರೂಪಗಳನ್ನು ನೆನೆಯುತ್ತಿದ್ದ ಶಿಖರಸೂರ್ಯನಿಗೆ ಆಸೆ, ಆಸಕ್ತಿಗಳಿಂದ ತನ್ನನ್ನೇ ನೋಡುತ್ತಿರುವ ನಿನ್ನಡಿಯನ್ನ ನೋಡಿ ಬೇಸರವೇ ಆಯಿತು. ಯಾಕಂತೀರೋ? ತನ್ನನ್ನ ನೋಡಿ ಹುಡುಗ ಏಳಲಿಲ್ಲ; ಬಾಗಿ ನಮಸ್ಕಾರವನ್ನಾಚರಿಸಲಿಲ್ಲ. ಬಹಿರಂಗವಾಗಿ ಮುಖ ಮುರಿದೂ ನೋಡಿದ; ನಿನ್ನಡಿಗದು ಅರ್ಥವಾಗಲಿಲ್ಲ.

“ಏನಾಯ್ಯಾ ನಾನು ಯಾರು ಗೊತ್ತಾಯಿತ?”

“ಗೊತ್ತಾಗದೇನು? ಮಹಾರಾಜನೆಂದು ಗುರುತು ಸಿಕ್ಕಿದ್ದರಿಂದಲೇ ಏನು ಬಂದೀ? – ಕೇಳಿಕೊಂಡು ಹೋಗೋಣ ಅಂತ ಬಂದೆ”.

“ಮತ್ತೇ, ಗುರುತೇ ಸಿಗದವರಂತೆ ಮುಖ ಮಾಡಿಕೊಂಡು ಕೂತಿದ್ದೀಯಲ್ಲ ಮಾರಾಯಾ! ನಾನೀಗ ಚಕ್ರವರ್ತಿಯಾಗಿರಬಹುದು; ಆದರೆ ಈ ಸ್ಥಳದಲ್ಲಿ ಓದಿದವನಯ್ಯಾ ನಾನು. ನಿನಗೇನಾದರೂ ಸಹಾಯ ಬೇಕಿದ್ದರೆ ಹೇಳು. ಒಂದು ಕಡಿಮೆ ಇಪ್ಪತ್ತು ರಾಜ್ಯಗಳನ್ನು ಗೆದ್ದಾಗ ಅನೇಕ ಮಾಂಡಳಿಕರು ಕೇಳಿದರು: “ನೆರೆಯ ಶಿವಾಪುರ ಸೀಮೆಯೊಂದನ್ನ ಯಾಕೆ ಬಿಟ್ಟಿರಿ?” ಅಂತ. ಅದೇ ರಹಸ್ಯ. ಅಲ್ಲಿರೋನು ನನ್ನ ಎಳೇ ಮಿತ್ರ: ಅವನ ಮೇಲೆ ಯುದ್ಧವೆ? ಛೇ! – ಎಂದು ನಾನೇ ಬಿಟ್ಟೆ. ಮಾಂಡಳೀಕನಾಗೋದೊ ಬಿಡೋದೂ ನಿನ್ನಿಷ್ಟ. ಆದರೆ ಹಳೇ ಸಂಬಂಧವಂತೂ ಹಾಗೇ ಇರುತ್ತೊ? ನನ್ನ ಎಳೇ ಮಿತ್ರ ಕೊಳ್ಳುವುದಕ್ಕ ಎಹಣವಿಲ್ಲದ ದರಿದ್ರರಿಂದ ಕೂಡಿ ಸಣ್ಣ ಸೀಮೆಯನ್ನ ಆಳಿಕೊಂಡಿದ್ದಾನೆ. ಅವನಿಗೆ ಕೊಂಚ ಸಹಾಯ ಮಾಡೋಣ ಅಂತ ಬಂದೆ ಕಣಯ್ಯಾ!”

ಶಿಖರಸೂರ್ಯನ ಅಂದರೆ ಜಯಸೂರ್ಯನ ಮಾತಿ ಧಾಟಿ, ಶ್ರೀಮಂತಿಕೆಯ ಸೊಕ್ಕು, ಎದುರಿನವರನ್ನ ಮೂಗಿನ ತುದಿಯಿಂದ ನೋಡುವ ಧಿಮಾಕುಗಳನ್ನ ನೋಡಿ ನಿನ್ನಡಿಗೆ ಬಯಲಾಟದ ರಾವಳನ ನೆನಪಾಯಿತು. ಅದ್ಯಾಕೆ ಈತ ಇಷ್ಟೊಂದು ಅಭಿನಯ ಮಾಡುತ್ತಿದ್ದಾನೆಂದು ಹೊಯ್ಕಾಯಿತು. ಆತ ಹೇಳಿದ – ಹಣ ಮತ್ತು ಕೊಳ್ಳೋದು – ಎಂಬ ಮಾತಿನರ್ಥ ಕೇಳಿದ:

“ಹಣದಿಂದ ಕೊಳ್ಳೋದ? ಏನ್ನ ಕೊಳ್ಳಬೇಕಾಗಿತ್ತು”.

“ಸುಖ, ಸೌಲಭ್ಯಗಳನ್ನ! ಆನಂಧಗಳನ್ನ!” ಶಿಖರಸೂರ್ಯನಂದ.

“ನಮಗೀಗ ಏನೂ ಕೊರತೆ ಇಲ್ಲವಲ್ಲ! ಸುಖಿಗಳಾಗಿದ್ದೇವೆ….”

“ಏನಯ್ಯಾ, ಇಂಥ ಜೀವನಕ್ಕೂ ಸುಖ ಅಂತೀರಲ್ರಯ್ಯಾ!”

ಈಗ ನಿಜವಾಗಿ ನಿನ್ನಡಿ ಗೊಂದಲದ ಮಡುವಿನಲ್ಲಿ ಬಿದ್ದ –

“ಆಯಿತಯ್ಯ ಇದು ಸುಖ ಅಥವಾ ದುಃಖ ಅಂತ ಹೇಳೋರು ಯಾರು? ನಾವ? ನೀನ?”

“ನೀವೆ”

“ನಾವೇ ಹೇಳ್ತಿದ್ದೀವಲ್ಲ ಸುಖದಿಂದ ಇದ್ದೀವಿ ಅಂತ.”

ಶಿಖರಸೂರ್ಯನಿಗೆ ಈ ಮಾತಿನಿಂದ ಸಂತೋಷವೇ ಆಯ್ತು. ಮನಸಾರೆ ಗಹಗಹಿಸಿ ನಕ್ಕು ನಿನ್ನಡಿಗೆ ಹೇಳಿದ:

“ನಿನ್ನಂಥಾ ಸುಖಪುರುಷನನ್ನೇ ನೋಡಲಿಲ್ಲವಯ್ಯಾ ನಾನು! ನಿನ್ನ ಶ್ರೀಮಂತಿಕೆಯ ಮುಂದೆ ಕನಕಪುರಿ ದರಿದ್ರವಾಗಿ ಕಾಣುತ್ತಯ್ಯಾ! ಪುಟ್ಟ ಸೀಮೆಯ ರಾಜ್ಯ, ಶಿವಾಪುರವೆಂಬ ಹಟ್ಟಿಯಂಥ ಪುಟ್ಟ ಊರೇ ರಾಜಧಾನಿ, ಬೆಟ್ಟದ ಗವಿಯೇ ಅರಮನೆ, ನೀನು ಹೇಳಿದ್ದೇ ಕಾನೂನು! ಎಂದೆಂದಿಗೂ ಸದಾ ಬಾಗಿ ನಿಲ್ಲುವ, ಅತೃಪ್ತರಾಗದ, ದಂಗೆಯೇಳದ ಹುಡುಗರು, ಸದಾ ಹಲ್ಲು ಕಿರಿಯುತ್ತ ಹಸ್ತ ಹೊಸೆಯುವ ಗುಲಾಮ ಭಕ್ತರು, ಹುರಿದು ಮುಕ್ಕಿತೆಂದರೂ ಆನಂದ ಪಡುವ ಪ್ರಜೆಗಳು …. ಆಹಾಹಾ ಶಿವಾಪುರವೇ!”

ಈತ ಭ್ರಮೆಗಳೊಂದಿಗೆ ಆಟವಾಡುತ್ತ ತನ್ನ ಬೆಲೆ ತಾನೆ ಹೆಚ್ಚಿಸಿಕೊಳ್ಳುತ್ತ ಕೊಬ್ಬುತ್ತಿದ್ದಾನಲ್ಲಾ! ಎನ್ನಿಸಿತು ನಿನ್ನಡಿಗೆ. ತಕ್ಷಣ ತಾನೇ ಮುಂದಾಗಿ ತಿದ್ದಿದ:

“ಇದು ರಾಜ್ಯವಲ್ಲ. ಅಮ್ಮನ ಬೆಟ್ಟ. ಶಿವಪಾದನ ಪೀಠ. ಶಿವಪಾದನಿಗೆ ಪರಿಪೂರ್ಣತೆ ಯಾವುದೆಂದು ತಿಳಿದಿತ್ತು. ಆದರೆ ಮನುಷ್ಯ ಅಪೂರ್ಣ ಅಂತಲೂ ಗೊತ್ತಿತ್ತು. ಪರಿಪೂರ್ಣ ಸತ್ಯಕ್ಕೆ ಸಂಬಂಧಗಳ ಪ್ರಮಾಣ ಬೇಕೆಂದು ಹೇಳಿದ ಪ್ರಸ್ಥಾನವಿದು. ಅಂಥದರ ಬಗ್ಗೆ ಲಘುವಾಗಿ ಮಾತಾಡಬಾರದಲ್ಲವೆ?”

ಎಂದು ತೋರುಬೆರಳು ತೋರಿ ತಾಕೀತು ಮಾಡುವಂತೆ ಅಲುಗಿ ಕೆಳಗಿಳಿಸಿದ. ಅವನ ಪ್ರತಿಭಟನೆಯ ಧ್ವನಿ ಮತ್ತು ಭಂಗಿಯಿಂದ ಬಂದ ಕೋಪವನ್ನು ನಿಯಂತ್ರಿಸಿಕೊಂಡು ವಿಷಯಾಂತರ ಮಾಡಲು ಹೇಳಿದ.

“ನೆಪ್ಪಿರಲಿ ತರುಣ ಮಿತ್ರಾ, ನಾನೂ ಶಿವಾಪುರದ ಒಕ್ಕಲು. ಆ ಅಭಿಮಾನದಿಂದಲೇ ಇಲ್ಲಿಗೆ ಬಂದಿರೋದು. ಗೊತ್ತಾಯ್ತಾ?”

“ಅದಿಲ್ಲದೆ ನಾನಾದರೂ ಈ ಪರಿ ಮಾತಾಡ್ಲಿಕ್ಕಾಗುತ್ತಿತ್ತ ರಾಜನೇ?”

“ಹಾಗೆ ಬಾ” ಅಂದು ಅವನ ಏಕವಚನಕ್ಕೆ ಅಸಮಾಧಾನಗೊಂಡರೂ ಮಹಾರಾಜನೊಬ್ಬ ಮಾಂಡಳಿಕರೊಂದಿಗೆ ಅಂತರಂಗ ಮಾತಾಡುವ ಔದಾರ್ಯದ ಗತ್ತಿನಲ್ಲಿ ಹೇಳಿದ:

“ವಸ್ತುಗಳಿಗೆ ನಿಜವಾದ ಬೆಲೆ ಇರೋದು ನಿನ್ನ ಶಿವಾಪುರದಲ್ಲಯ್ಯಾ. ಈಗಲೂ ಇಲ್ಲಿ ಚಿನ್ನ ಅಂದರೆ ಒಂದು ಲೋಹ ಮಾತ್ರ. ಎಂಥಾ ಭಾಗ್ಯವಂತರು ನೀವು! ಅದೇ ಕನಕಪುರಿಯಲ್ಲಿ ನೋಡು: ಒಂದು ಚಿನ್ನದ ಹಣಕ್ಕೆ ಒಂದು ಚೀಲ ಭತ್ತ! ಐವತ್ತಾರು ದೇಶಗಳಿಗೆ ಕನಸಿನ ಪುರವಾದ ಕನಕಪುರಿ ನನಗೆ ನರಕವಯ್ಯಾ! ಹುಟ್ಟಿನಿಂದ ನಾನು ಕಂಡ ಕನಸು ನನ್ನೆದುರು ಸಿಕ್ಕಿದೆಯಣ್ಣಾ! ಈವರೆಗೆ ಎಲ್ಲೆಲ್ಲೋ ಇದೆ ಅಂತ ಹಾರೈಸಿ ಹುಡುಕಿದೆ – ಇಲ್ಲಿರೋದು ತಿಳಿಯದೆ! ಈಗ ಅದು ನನ್ನ ಅಂಗೈಯಲ್ಲೇ ಇದೆ! ಶಿವಾಪುರವೇ ನನ್ನ ಕನಸು! ಶಿವಾಪುರವೇ ನನ್ನ ಚಿನ್ನ! ಚಿನ್ನವೇ ನನ್ನ ಶಿವಾಪುರ! ಶಿವಾಪುರವೇ ನನ್ನ ಹೊಸ ರಾಜಧಾನಿ!”

ಇವನೇನು ಕನವರಿಸುತ್ತಿದ್ದಾನೆಂದು ತಿಳಿಯದೆ ನಿನ್ನಡಿ ಕಕ್ಕಾಬಿಕ್ಕಿಯಾಗಿ

“ನಿನ್ನ ಮಾತು ನನಗೆ ತಿಳಿಯದಲ್ಲ, ರಾಜನೆ!” ಅಂದ.

“ತಿಳಿಯಲಾರದ್ದು ಇದರಲ್ಲೇನಿದೆ ಹುಡುಗಾ? ನೀನು ಒಂದು ಕಡಿಮೆ ನಲವತ್ತು ಹಟ್ಟಿಗಳ ಈ ಶಿವಾಪುರ ಸೀಮೆಗೆ ಒಡೆಯನಲ್ಲವೋ? ಅದರಲ್ಲಿರೋ ಈ ಅಮ್ಮನ ಬೆಟ್ಟವೊಂದನ್ನು ನನಗೆ ಕೊಡು. ಉಳಿದಂತೆ ನೀನೇ ರಾಜ! ನಿನ್ನ ಮೇಲೆ ಯುದ್ಧಮಾಡಿ ಗೆದ್ದುಕೋಬಹುದು. ಅದು ಬೇರೆ ಕಡೆಗೆ. ಶಿವಾಪುರದ ಬೆಟ್ಟವನ್ನಲ್ಲ. ಇಲ್ಲಿರೋನು ನನ್ನ ತರುಣ ಮಿತ್ರ ನಿನ್ನಡಿ! ಒಂದು ಕಾಲಕ್ಕೆ ನಾನು ಓದಿದ ವಿದ್ಯಾಪೀಠವಿದು. ಅದರ ಮೇಲೆ ಯುದ್ಧವೇ ಛೇ! ಅದಕ್ಕೇ ಒಬ್ಬ ಭಂಟನನ್ನೂ ತರಲಿಲ್ಲ ನಾನು! ನನಗೂ ನಿನಗೂ ಮುಖಾಮುಖಿ ಮಾತುಕತೆಯಾದರೆ ಆಯ್ತು. ಪುಗಸಟ್ಟೆ ಕೇಳಿದೆ ಅಂದುಕೋಬೇಡ. ಕೇಳಿದ ಬೆಲೆ ಕೊಡ್ತೀನಪ್ಪ. ಕನಕಪುರಿಯ ಚಕ್ರವರ್ತಿ ನಾನು! ಒಂದು ಕಡಿಮೆ ಇಪ್ಪತ್ತು ರಾಜ್ಯಗಳ ಚಕ್ರವರ್ತಿ! ಇಷ್ಟು ಅಂತ ಬೆಲೆ ಹೇಳು. ಅಷ್ಟೂ ಚಿನ್ನದ ಹಣ ಕೋಡ್ತೀನಿ, ಆಯ್ತ?

ನಿನ್ನಡಿ ನಿರ್ಭಾವುಕನಾಗಿ ಸಮಾಧಾನದಿಂದ ಹೇಳಿದ:

“ರಾಜನೇ ನಾನು ಇಲ್ಲಿಗೆ ಬಂದದ್ದು ಕನಕಪುರಿ ರಾಜ ಬಂದಿದ್ದಾನೆ, ಮಾತಾಡಿಸಿಕೊಂಡು ಹೋಗೋಣ ಅಂತ. ಬೆಟ್ಟದ ಮಾರಾಟಕ್ಕಲ್ಲ.”

– ಎಂದು ಎದ್ದು ಹೊರಡಲು ಸಿದ್ಧನಾದ. ಈಗ ಮಾತ್ರ ಮಹಾರಾಜ ಕತಕತ ಕುದಿಯತೊಡಗಿದ. ತನ್ನ ಮಾತು ಕೇಳಿಸಿಕೊಳ್ಳದೆ ತನ್ನ ಅಪ್ಪಣೆ ಇಲ್ಲದೆ ಹೊರಟುದಕ್ಕೆ ಭಾರೀ ಕೋಪ ಬಂತು. “ನಿಂತುಕೊಳ್ಳಯ್ಯ?” – ಅಂದ ಜೋರಾಗಿ. ಆಗಲೇ ಎರಡು ಹೆಜ್ಜೆಯಿಟ್ಟಿದ್ದ ನಿನ್ನಡಿ ನಿಂತ. ಶಿಖರಸೂರ್ಯ ಗುಡುಗಿದ.

“ಹೇಳಕೇಳದೆ ಹೊರಟರಾಯ್ತೇನಯ್ಯಾ ದೊಡ್ಡ ಮನುಷ್ಯ…?’

ಅಷ್ಟೇ ನಿಷ್ಠುರವಾಗಿ ನಿನ್ನಡಿ ಹೇಳಿದ:

“ಬೆಟ್ಟ ನನ್ನೊಬ್ಬನದಲ್ಲ. ಒಂದು ಕಡಿಮೆ ನಾಲವತ್ತು ಹಟ್ಟಿಗಳ ಭಕ್ತರಿಗೆ ಸೇರಿದ್ದು. ನೀನು ಕೊಡುವ ಬೆಲೆಗೆ ಬೆಟ್ಟವನ್ನು ಕೊಡುವದೂ ಬಿಡುವದೂ ಅವರ ತೀರ್ಮಾನಕ್ಕೆ ಬಿಟ್ಟಿದ್ದು”.

– ಎಂದೊಂದು ಹೆಜ್ಜೆ ಇಟ್ಟ. ಮತ್ತೆ ಶಿಖರಸೂರ್ಯ “ನಿಲ್ಲು” ಎಂದು ಕಿರಿಚಿದ. ನಿನ್ನಡಿ ನಿಂತ.

“ಬೆಟ್ಟವನ್ನ ನನಗೆ ಕೊಡೋದರಿಂದ ನಿಮ್ಮ ಹಟ್ಟಿಗಳಿಗೆ ಏನೇನು ಲಾಭವಿದೆ ಅಂತ ಅವರಿಗೆ ತಿಳಿಸಿ ಹೇಳು. ಈ ಬೆಟ್ಟ ನನ್ನ ಸಾಮ್ರಾಜ್ಯದ ರಾಜಧಾನಿ ಆಗುತ್ತದೆ. ದೇಶ ವಿದೇಶಗಳ ಪ್ರವಾಸಿಗಳ, ವರ್ತಕರ, ಹಾಗೂ ಪ್ರಭಾವಶಾಲಿಗಳ ಕೇಂದ್ರವಾಗುತ್ತದೆಂದು ಹೇಳು. ಪ್ರತಿಯೊಬ್ಬರಿಗೆ ಕೆಲಸ, ಕೈತುಂಬ ಹಣ ಸಿಗುತ್ತದೆಂದು ಹೇಳು. ಕನಕಪುರಿಗಿಂತ ಹೆಚ್ಚಿನ ವಿಲಾಸ ಜೀವನದ ಸೌಭಾಗ್ಯ ನಿಮಗಾಗಿ ಕಾದಿದೆ ಎಂದು ಹೇಳು. ಅವರನ್ನೆಲ್ಲ ಇಲ್ಲಿಗೇ ಕರೆದುಕೊಂಡು ಬಾ. ನಾನೇ ಹೇಳುತ್ತೇನೆ. ಇಷ್ಟಕ್ಕೆಲ್ಲಾ ನಿನಗೇನು ಲಾಭ? ಅಂತ ಅನುಮಾನ ಬೇಡ. ಶಾಸ್ತ್ರಕ್ಕೆ ಮಾಂಡಳಿಕನಾಗಿರುತ್ತ ಕನಕಪುರಿಯನ್ನ ನೀನೇ ಆಳಯ್ಯ!

“ಇನ್ನೊಂದು ಮಾತು. ಅಮ್ಮ ಇರುವ ಬೆಟ್ಟ ಕೊಡೋದು ಹ್ಯಾಗೆ? ಅಂತ ತಕರಾರು ತೆಗೆದಾರು. ನನ್ನ ಔದಾರ್ಯದ ಬಗ್ಗೆ ಅನುಮಾದ ಬೇಡವೋ – ಅಮ್ಮನಿಗೆ ಬೇರೆ ಕಡೆಗೆ ಕಂಬಕ್ಕೊಂದು ಶಿಲ್ಪವಿರುವ ಸಾವಿರ ಕಂಬಗಳ ದೇವಾಲಯ ಕಟ್ಟಿಸಿ ಕೊಡ್ತೀನಿ. ಅರ್ಥವಾಯಿತೋ?”

ಎಂದ ಮಾತಿಗೆ ನಿನ್ನಡಿ ವ್ಯಂಗವಾಗಿ ಕತ್ತು ಹಾಕಿ ಹೊರಟ. ತಕ್ಷಣ ಶಿಖರಸೂರ್ಯ ಕಿರಿಚಿದ:

“ಇದನ್ನೂ ಹೇಳು: ಕೊಡದಿದ್ದಲ್ಲಿ ಬಲದಿಂದ ಪಡೆಯುವ ಶಕ್ತಿ, ಈ ಮಹಾರಾಜನಿಗಿದೆ.”

ತಕ್ಷಣ ನಿನ್ನಡಿ ತಿರುಗಿ ನಿಂತು – ಶಾಂತಚಿತ್ತದಿಂದ ಹೇಳಿದ:

“ಇಲ್ಲಿಯವರೆಗೆ ಯಾವ ರಾಜಮಹಾರಾಜನೂ ಒಂದು ಕಡಿಮೆ ನಲವತ್ತು ಹಟ್ಟಿಗಳಿಗೆ ಸೇರಿದ ಈ ಶಿವಾಪುರ ಸೀಮೆ ತನ್ನದೆಂತು ಹೇಳಿಕೊಂಡಿಲ್ಲ. ಕಪ್ಪು ಕಾಣಿಕೆ ಪೊಗದಿ ಕೇಳಿಲ್ಲ. ಈ ಬೆಟ್ಟ ಆತ್ಮ ರಕ್ಷಣೆ ಮಾಡಿಕೊಳ್ಳೋದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ”. ಕೇಳಿಲ್ಲ. ಈ ಬೆಟ್ಟ ಆತ್ಮ ರಕ್ಷಣೆ ಮಾಡಿಕೊಳ್ಳೋದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ”.

ಇಷ್ಟು ಹೇಳಿ ನಿನ್ನಡಿ ತಿರುಗಿ ಹೊರಟ.

ಅವನ ಸೊಕ್ಕಿನ ಮಾತು ಕೇಳಿ ಶಿಖರಸೂರ್ಯನಿಗೆ ರುದ್ರಗೋಪ ಬಂತು ನೋಡು ವಾರೆಗಣ್ಣು ಕಿಸಿದು ಭಂಟರ ಕಡೆಗೆ ನೋಡಿ ಸನ್ನೆ ಮಾಡಿದ.

ತಕ್ಷಣ ಭಂಟರು ನಿನ್ನಡಿಯನ್ನ ಬಂಧಿಸಿ ಕೈ ಬಾಯಿ ಕಟ್ಟಿ ಒಳಗಿನ ದೇವರ ಕೋಣೆಯಲ್ಲಿ ಚೆಲ್ಲಿ ಬೀಗ ಜಡಿದರು.