ಆ ದಿನ ಮಧ್ಯರಾತ್ರಿಯಿಂದಲೇ, ಚಂದ್ರಾವತಿ ಮಡುವಿನಲ್ಲಿ ಸಿದ್ಧರು, ಸಾಧಕರು, ಸನ್ಯಾಸಿಗಳು, ಯೋಗಿ ಋಷಿಮುನಿಗಳು ಮೀಯತೊಡಗಿದ್ದರು. ಇವು ಹಬ್ಬ ಆಚರಣೆಯ ದಿನಗಳಲ್ಲ. ಯಾರೂ ಹೇಳಿ ಕಳಿಸಿರಲಿಲ್ಲ. ಆದರೂ ಇವರೆಲ್ಲ ಹ್ಯಾಗೆ ಬಂದರು? ಯಾಕೆ ಬಂದರು? ಇದೆಲ್ಲಾ ನಮಗೆ ತಿಳಿಯದ ಸಂಗತಿ. ಇವರಿಗೆ ಯಾರಿಗೂ ಅಪಾಯದ ಅಂದಾಜು ಕೂಡ ಆದಂತಿರಲಿಲ್ಲ. ನೋಡಿದರೆ ಬೇಜವಬ್ದಾರಿಗಳೋ ಅಥವಾ ಬದುಕಿನ ಅಸಂಗತವನ್ನು ಅರಿತವರೋ – ಅಂತೂ ಜಾತ್ರಗೆ ಬಂದ ಸಖೀ ಜನರಂತೆ ನೆರೆದಿದ್ದರು.

ಇವರದೊಂದು ತೂಕವಾದರೆ ಕುರುಮುನಿ ಮಹಾರಾಜನದೇ ಇನ್ನೊಂದು ತೂಕ. ಶಿವಾಪುರದಲ್ಲಿ ಪ್ರತ್ಯಕ್ಷನಾದಾಗೊಮ್ಮೆ ಒಂದೊಂದು ವೇಷದಲ್ಲಿ ಬರುತ್ತಿದ್ದ. ಈ ಸಲದ ಅವನ ವೇಷ ಇನ್ನೂ ಹಾಸ್ಯಾಸ್ಪದವಾಗಿತ್ತು. ನಾಲ್ಕಡಿ ಎತ್ತರದ ದೇಹಕ್ಕೆ ಮಹಾರಾಜನಂತೆ ಹಸಿರು ಮೇಲಂಗಿ ಧರಿಸಿ ತಲೆಗೆ ದೊಡ್ಡ ಬುಟ್ಟಿಯಂಥ ಜರಿ ರುಮಾಲು ಸುತ್ತಿದ್ದ. ಬೆಕ್ಕಿನ ಕಣ್ಣಿನಂತೆ ತನ್ನ ಹಸಿರುಗಣ್ಣಿಗೆ ಕಾಡಿಗೆ ಹಚ್ಚಿಕೊಂಡಿದ್ದ. ಬೇರೆ ಸಾಧಕರು ಮಂತ್ರೋಚ್ಛಾರಣೆ ಮಾಡುತ್ತ ಮೀಯುತ್ತಿದ್ದರೆ ಈತ ಮಡುವಿನ ಬಳಿ ಕೂತು ತನ್ನ ಕಾಲೆಗೇ ಬೆಂಕಿ ಹೊತ್ತಿಸಿಕೊಂಡು ಕಾಸಿಕೊಳ್ಳುತ್ತ ಜನಪದ ಪ್ರಣಯ ಗೀತೆಗಳನ್ನು ಗುನಗುತ್ತಿದ್ದ. ವಯಸ್ಸಾದವರಿಗೆ ಕೂಡ “ಮಗು” ಎಂದೇ ಕರೆದು ಮಾತಾಡಿಸುತ್ತಿದ್ದ. ಅನೇಕ ಯುವ ಸಾಧಕರು ಅವನ ಸೇವೆ ಮಾಡುವದಕ್ಕೆ ನಾ ಮುಂದು ತಾ ಮುಂದೆಂದು ಉತ್ಸಾಹ ತೋರಿಸುತ್ತಿದ್ದರು. ಇವನ ವಿಷಯ ಗೊತ್ತಿದ್ದ ಕಲವರು ಬೇಕೆಂದೇ ಬಂದು “ಮಹಾರಾಜ ಚಿಲುಮೆ ಸೇದಲಿಕ್ಕೆ ಬೆಂಕಿ ಬೇಕು” ಎಂದು ಕೇಳುತ್ತಿದ್ದರು. ಈತ “ತಗೊ” ಎಂದು ತನ್ನ ತೋರು ಬೆರಳನ್ನ ಸೆಟೆಸಿ ನಿಲ್ಲಿಸಿದರೆ ಅದರ ತುದಿಗೆ ಉರಿ ಕಾಣಿಸುಕೊಳ್ಳುತ್ತಿತ್ತು! ಇಂಥ ಅನೇಕ ಚಮತ್ಕಾರಗಳನ್ನಾತ ಮಾಡುತ್ತಿದ್ದ. ಆತನ ಮಾತುಗಾರಿಕಿಯೂ ರೋಚಕವೇ.

ಮಿಂದ ಅನೇಕರು ಬೆಟ್ಟಕ್ಕೆ ಹೊರಟರೆ ಇನ್ನು ಕೆಲವರು ಇವನ ಸುತ್ತ ಮಾತಿಗಾಗಿ ಕೂತರು. ಇನ್ನಿವನ ಮಾತುಗಾರಿಕೆ ಸುರುವಾಯಿತು ನೋಡು – ಶಿಖರಸೂರ್ಯ ಬಂದಾಗಿನಿಂದ ಕನಕಪುರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ವರ್ಣನೆ ಮಾಡುತ್ತಿದ್ದ. ಕೂತಿದ್ದ ವೃದ್ಧಸನ್ಯಾಸಿಯೊಬ್ಬ,

“ಅದೆಲ್ಲಾ ಬರೋಬರಿ ಮಾರಾಜನೇ, ಈ ಜಯಸೂರ್ಯ ಮಹಾರಾಜ ಶಿವಾಪುರಕ್ಕೆ ಯಾಕೆ ಬಂದ?

“ಈ ಮೂರ್ಖರಾಜ ಶಿವಪುರಕ್ಕೆ ಬಂದಿದ್ದಾನಲ್ಲ, ಯಾಕೆ ಗೊತ್ತೊ? ಬೆಟ್ಟದ ಅಮ್ಮನ ಜಾಗಾ ಖಾಲಿ ಮಾಡಿಸಿ ಆ ಸ್ಥಳದಲ್ಲಿ ತಾನು ಕೂತುಕೋಬೇಕು ಅಂತ ಆಸೆ ಅವನಿಗೆ….”

ಚಿಲುಮೆ ಸೇದುತ್ತ ಕೂತಿದ್ದ ಇನ್ನೊಬ್ಬ ಸನ್ಯಾಸಿ ಸಡುವೆ ಬಾಯಿ ಹಾಕಿದ.

“ಅಮ್ಮನನ್ನ? ನಮ್ಮ ಆತ್ಮದಳೊಗಿನ ಅಮ್ಮನನ್ನ ಕಿತ್ತು ಹಾಕೋದು ಸಾಧ್ಯವೆ ಮಹಾರಾಜ?”

ಕುರುಮುನಿ ಹೇಳಿದ:

“ಮಗು, ಆತ ನಿನ್ನ ಆತ್ಮದಳೊಗಿನ ಅಮ್ಮನನ್ನ ಕಿತ್ತು ಹಾಕೋದಿಲ್ಲಪ್ಪ…. ನಿನ್ನ ಆತ್ಮವನ್ನೇ ಕೊಂಡು ಬಿಡ್ತಾನವನು! ಆವಾಗೇನು ಮಾಡ್ತಿ? ನಿನಗಿನ್ನೂ ಈ ಕತೆ ಗೊತ್ತಿಲ್ಲ. ಕನಕಪುರಿಯ ರಾಜ ಬಂದು ಯಾವುದೋ ಹಳ್ಳಿಯ ಪೂಜಾರಿಗೆ ಅದೇನೋ ರಸ ಕುಡಿಸಿದನಂತಪ್ಪ, ನಮ್ಮ ಗೊಳಬಾರಸ ಇರುತ್ತಲ್ಲ ಹಾಗಿತ್ತಂತೆ ಅದು, ಪೂಜಾರಿ ಕುಡಿದ…. ಕುಡಿದ…. ಕೂಡಲೇ ಹದ್ದಾಗಿ ಹಾರಬೇಕಂತ ಆಸೆ ಆಯ್ತು! ನೋಡಿಕೊಂಡರೆ ಅವನ ಕೈಗಾಗಲೇ ಹದ್ದಿನ ರೆಕ್ಕೆ ಪುಕ್ಕ ಮೂಡಿವೆ! ಮೂಗು ಹದ್ದಿನ ಚುಂದಿನ ಹಾಗೆ ಬಿರುಸಾಗಿದೆ!

ಆದರೂ ಯಾಕೋ ಏನೋ ಹಾರಲಿಕ್ಕೆ ಬರವೊಲ್ದು! ರೆಕ್ಕೆ ಪುಕ್ಕ ಎಷ್ಟು ಬೀಸಿದರೂ ಹಾರಲಿಕ್ಕಾಗವೊಲ್ದು! ಕೊನೆಗೆ ರಾಜನ ಬಂಟರು ಅವನನ್ನ ಬೆಟ್ಟದ ಮ್ಯಾಲೆ ನಿಲ್ಲಿಸಿ “ಹಾರಲೇ ಪೂಜಾರಿ!” ಅಂತ ತಳ್ಳಿದರು. ರೆಕ್ಕೆ ಮೂಡಿದ ಪೂಜಾರಿ ಕೈ ಬೀಸಿದ. ಕಾಲು ಬಡಿದ! ಏನು ಮಾಡಿದರೂ ಹಾರಲಿಕ್ಕಾಗದೆ ಕೆಳಗೆ ಬಿದ್ದು ಸತ್ತ! ರಾಜನ ಭಟರು ಓಡಿ ಹೋಗಿ ಅವನ ಹೆಣ ತಂದು ಕುದಿಸಿ ತಿಂದರಪ! ಮಾರನೇ ಬೆಳಿಗ್ಗೆ ಬಾಳೇ ಎಲೆಯಲ್ಲಿ ತಮ್ಮ ಹೇಲು ತಂದು “ನಿಮ್ಮ ಪೂಜಾರಿ ಏನಾಗಿದ್ದಾನೆ ನೋಡಿರಿ!” ಅಂದರು. ಸಾಕೇನಪ್ಪ?!

ಈ ಮಾತಿಗೆ ಯಾರೂ ನಗಲಿಲ್ಲ. ಕುರುಮುನಿಗೆ ನಿರಾಸೆಯಾಯಿತು. “ಯಾಕ್ರೆಪಾ ಯಾರೂ ನಗಲಿಲ್ಲ?” ಅಂದ. ಕತೆಯ ಸತ್ಯ ಅವರಿಗರ್ಥವಾಗಿತ್ತು. ವಿಷಾದದಿಂದ “ನೀ ಹೇಳಿದ್ದು ಖರೆ ಐತಿ ಮಹಾರಾಜ!” ಎಂದು ಹೇಳಿ ಮೌನಿಗಳಾಗಿ ಗವಿಯ ಕಡೆಗೆ ನಡೆದರು.

ಇತ್ತ ಶಿಖರಸೂರ್ಯನಿಗೆ ಬೇರೆ ಸಮಸ್ಯೆ ಎದುರಾಗಿತ್ತು. ಮಾನವ ಭಂಟರನ್ನ ಕರೆತಂದರೆ ಅವರು ಶಿವಾಪುರವನ್ನಾಗಲಿ, ಅಮ್ಮನ ಪ್ರಭಾವಳಿಯನ್ನಾಗಲಿ ಎದುರಿಸದೆ ಸುಲಭವಾಗಿ ಒಳಗಾಗುವರೆಂದು ಅನುಮಾನವಿತ್ತು. ಅಲ್ಲದೆ ತನ್ನ ಮೇಲೇ ತಿರುಗಿ ಬೀಳಬಹುದೆಂದೂ ಅನುಮಾನವಿದ್ದುದರಿಂದ ಮೇವಿನ ಸೈನಿಕರನ್ನೇ ನಚ್ಚಿಕೊಂಡು ಬಂದಿದ್ದಲ ಆದರಿಲ್ಲಿ ಕೆಳಗಿನಿಂದ ಬೆಟ್ಟದ ಮೇಲಿನ ಗವಿಗೆ ಸಿಡಿತಲೆ ಸಿಡಿಸುವುದಾಗಲಿ, ಗುರಿಯಿಡುವುದಾಗಲೆ ಸಾಧ್ಯವಿರಲಿಲ್ಲವಾದ್ದರಿಂದ ಸಿಡಿತಲೆ ಗಾಡಿಯನ್ನು ಬೆಟ್ಟದ ಮೇಲಕ್ಕಿ ಏರಿಸಬೇಕಾಗಿತ್ತು. ಆದರೆ ಬೆಟ್ಟದ ಕಾಲು ದಾರಿಯೇ ಬೇರೆ. ಬಂಡೀ ಮಾರ್ಗ ಸುತ್ತು ಬಳಸಿ ಏರುವಂತಾದ್ದು. ಅದಕ್ಕೆ ಮಾಗಘ ಬಲ್ಲವರೇ ಆಗಬೇಕು. ಆದ್ದರಿಂದ ಊರಿನ ಸುಮಾರು ಒಂದು ಕಡಿಮೆ ಇಪ್ಪತ್ತು ತರುಣರನ್ನು ಸೇರಿಸಿ ಪ್ರತಿಯೊಬ್ಬರಿಗೆ ಬೊಗಸೆ ತುಂಬ ಚಿನ್ನ ಕೊಟ್ಟು ಹೇಳೀದ:

“ಚಿನ್ನದ ಅಪೇಕ್ಷೆ ಇದ್ದವರೆಲ್ಲಾ ನನ್ನ ಸೋದರ ಸೋದರಿಯರು. ಅವರಿದ್ದಲ್ಲಿ ನಾನಿದ್ದೇನೆ. ಅವರಿರುವ ಸೀಮೆಯೇ ನನ್ನ ಸೀಮೆ. ಅವರಿರುವ ದೇಶವೇ ನನ್ನ ದೇಶ; ನನಗೆ ನನ್ನ ಸ್ವಂತ ಊರು ಯಾವುದಿದೆ? ಚಿನ್ನವಿರುವ ಪ್ರದೇಶವೇ ನನ್ನ ಪ್ರದೇಶ. ಅದೇ ನನಗನ ರಾಜ್ಯ. ನನ್ನ ಊರು, ನನ್ನ ಕನಸು, ಭವಿಷ್ಯ, ದೇವರು!

ಹಳೇ ಗೊಡ್ಡುಗಳು ತಮ್ಮ ರಕ್ಷಣೆಗೆ ಏನೇನೋ ಕಟ್ಟಿಕೊಂಡಿದ್ದಾವೆ; ಧರ್ಮ ದೇವರು, ಸಮಾಜ, ಭಕ್ತಿ ಇತ್ಯಾದಿ ಇನ್ನೂ ಏನೇನೊ. ಅವನ್ನೆಲ್ಲಾ ನಾವು ಮನಸ್ಸಿಗೆ ಹಚ್ಚಿಕೋಬಾರದು.

“ಬದಲಾವಣೆಗೆ ಈ ಊರಿನ ಗುಗ್ಗುಗಳು ಹೆದರುತ್ತಾರೆ. ಅವರಿಗೆ ಅದೇ ಶಿವಾಪುರ ಬೇಕು. ಅದೇ ಬೆಳೆ ಬಿತ್ತುವ, ಬೆಳೆಯುವ, ಅದೇ ಸುಗ್ಗಿ ಒಕ್ಕುವ, ಅದೇ ರೈತ, ಅದೇ ಶಿವಪಾದ…. ಇದು ಜೀವನ ಅಲ್ಲ ಅಂತ ನೀವು ಹೇಳಿಕೊಡಬೇಕು. ನೀವು ಯುವಕರು. ಗೊಡ್ಡು ಪುರಾನ ಹೇಳುತ್ತ ಕೇಳುತ್ತ ದರಿದ್ರರಾಗೋದು ನಮಗೆ ಬೇಡ ಅಂತ ಹೇಳುವ ಕಾಲ ಬಂದಿದೆ.

ನಿಮಗಾಗಿ ಸ್ನೇಹಿತರೇ, ನಿಮಗಾಗಿ ಹೊಸಗಾಳಿ ಬೀಸುತ್ತಿದೆ. ಹೊಸ ಮಳೆ ಬೀಳಲಿದೆ. ಕುಯ್ಲಿಗಾಗಿ ಹೊಸ ಬೆಳೆ ಬರಲಿದೆ. ಬನ್ನಿ ಮುಂದೆ ಬನ್ನಿ!”

– ಎಂದು ಹುರಿದುಂಬಿಸಿ, ಅವರನ್ನು ಸಿಡಿತಲೆಯಿದ್ದ ಗಾಡಿಯನ್ನು ತಳ್ಳುವ, ಎತ್ತುವ ಬೆಟ್ಟಕೊಯ್ಯುವ ಕೆಲಸಕ್ಕೆ ನಿಯಮಿಸಿದ.

ಮುಂದೆ ನಾಲ್ಕು ಕುದುರೆ ಹೂಡಿದ್ದರು ಎಳೆಯಲಾಗದ ಗಾಡಿಯನ್ನು ಸದರಿ ಹುಡುಗರು ಹೆಗಲು ಹಚ್ಚಿ ಮ್ಯಾಲೆ ತಳ್ಳುತ್ತಿದ್ದರು. ಕುದುರೆಗಳು ಜಗ್ಗಲಾರದೆ ಏಟು ತಿಂದು ಅವುಗಳ ಬಾಯಲ್ಲಿ ನೊರೆ ಬರುತ್ತಿತ್ತು. ಮೈಯಿಂದ ಬೆವರು ಸುರಿಯುತ್ತಿತ್ತು. ಹುಡುಗರು ಮಾತ್ರ ಉತ್ಸಾಹದಿಂದ ಇದ್ದರು. ಹುಡುಗರಿಗೆ ತಾವೇನು ಒಯ್ಯುತ್ತಿದ್ದೇವೆ, ಯಾಕೆ ಒಯ್ಯುತ್ತಿದ್ದೇವೆಂಬ ಅರಿವಿಲ್ಲವೆಂದು ಭಾವಿಸಿ ಒಬ್ಬ ಅವರ ಬಳಿಗೆ ಹೋಗಿ ವಿವರಿಸಿ ನೋಡಿದ. ಕೆಲಸಕ್ಕೆ ಹಿಂಜರಿದರಾದರೂ ಯಾರೊಬ್ಬರೂ ತಗೊಂಡ ಚಿನ್ನವನ್ನ ಹಿಂದಿರುಗಿಸಲು ಮನಸ್ಸು ಮಾಡಲಿಲ್ಲ. !

ಇತ್ತ ಶಿವಪುರದವರಿಗೆ ಇನ್ನೊಂದು ಭಾರೀ ಆಶ್ಚರ್ಯ ಕಾದಿತ್ತು. ಸುಮಾರು ಒಂದು ನೂರು ಜನ ಶಿಸ್ತಿನ ಸೈನಿಕರು ಶಿವಾಪುರದಲ್ಲಿದ್ದ ಒಂದೇ ರಸ್ತೆಯಲ್ಲಿ ಮುರಿಗೆಪ್ಪನ ತೋಟದಿಂದ ಮಂಟಪದವರೆಗೆ, ಮಂಟಪದಿಂದ ಪುನಃ ತೋಟದವರೆಗೆ ಸಾಲಾಗಿ ಕೈ ಬೀಸುತ್ತ, ನೆಲಕ್ಕೆ ಕಾಲು ಅಪ್ಪಳಿಸುತ್ತ ನಡೆದಾಡತೊಡಗಿದರು. ಬರೀ ನಡೆದಾಡುವುದೇ ಶಿವಾಯಿ ಆಜೂ ಬಾಜೂ ಯಾರನ್ನೂ ನೋಡುತ್ತಿರಲಿಲ್ಲ. ಅವರಲ್ಲಿಯ ಯಾರೊಬ್ಬರ ಮುಖದಲ್ಲೂ ಭಾವನೆಗಳಿರಲಿಲ್ಲ. ಪ್ರತಿಯೊಬ್ಬರೂ ನೇರವಾಗಿ ಸೆಟೆದು ಸರಳ ರೇಖೆಯಾಗಿ ಅಳೆದಿಟ್ಟಂತೆ ಹೆಜ್ಜೆಯಿಡುತ್ತಿದ್ದರು. ತಮ್ಮ ನಡಿಗೆಯಲ್ಲಾಗಲಿ, ಕ್ರಿಯೆಯಲ್ಲಾಗಲಿ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ. ಯಾರೊಬ್ಬರೂ ಮಾತಾಡುತ್ತಿರಲಿಲ್ಲ, ನಗುತ್ತಿರಲಿಲ್ಲ.

ನಿನ್ನಡಿ ಆಟಕ್ಕಾಗಿ ಮೇವಿನಿಂದ ತಯಾರಿಸಿದ ಇಂಥ ಸೈನಿಕರನ್ನು ನೋಡಿದವರಾದ್ದರಿಂದ ಜನ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆ ಸೈನಿಕರನ್ನು ನೋಡಿ ಬಿದ್ದೂ ಬಿದ್ದೂ ನಕ್ಕವನೆಂದರೆ ಕುರುಮುನಿ ಮಾತ್ರ.

ಸದರೀ ಸೈನಿಕರು ನಾಲ್ಕು ತಾಸು ಹೊತ್ತೇರುವ ತನಕ ಕವಾಯತು ಮಾಡಿ ನ್ಯಾರೇ ಸಮಯಕ್ಕೆ ದಾಸೋಹದ ಮನೆಗೆ ನುಗ್ಗಿದರು. ಅಲ್ಲಿದ್ದ ಯಾರನ್ನೂ ದಾದು ಮಾಡದೆ ವಲಸೆ ಬಂದ ಅತಿಥಿಗಳು, ಸಾಧು ಸನ್ಯಾಸಿಗಳಿಗಾಗಿ ಮಾಡಿಟ್ಟ ಅಡಿಗೆಯನ್ನೆಲ್ಲ ಬಡಿಸಿಕೊಂಡು ತಿಂದರು. ಎಂಜಲೆಲೆಗಳನ್ನು ಕಾನಿನಿಂದೊದ್ದು ಚೆಲ್ಲಾಡಿದರು. ಪ್ರತಿಭಟಿಸಿದ ಹಿರಿಯರನ್ನು ಪಕ್ಕಕ್ಕೆ ತಳ್ಳಿ ತಮ್ಮ ಪಾಡಿಗೆ ತಾವು ತಿಂದು ಉಂಡು ಉಳಿದದ್ದನ್ನ ಚೆಲ್ಲಾಡಿ ಹೊರ ನಡೆದರು!

ಹೊರಬಂದ ಸೈನಿಕನೊಬ್ಬ ನೀರು ತರುವ ಹೆಂಗಸಿನತ್ತ ಗುರಿ ಹಿಡಿದು ಧೋತ್ರ ಎತ್ತಿ ನಿಂತುಕೊಂಡೇ ಉಚ್ಚಿಹೊಯ್ದ. ಊರ ಹಿರಿಯನೊಬ್ಬ ಅದನ್ನು ನೋಡಿದವನೇ ಆ ಸೈನಿಕನನ್ನು ಜಾಡಿಸಿ ಒದ್ದ. ಸೈನಿಕ ಅಷ್ಟು ದೂರ ಹೋಗಿ ಅವನೊಂದು ಕಡೆಗೆ ಅವನ ಭಲ್ಲೆ ಒಂದು ಕಡೆಗಾಗಿ ಬಿದ್ದ. ತಕ್ಷಣ ಎದ್ದು ತನ್ನ ಬಲ್ಲೆಯನ್ನ ತಗೊಂಡು ಇವನ ಕಡೆಗೆ ಗುರಿ ಮಾಡಿ ಹಿಡಿದ. ಇರಿಯುವಷ್ಟರಲ್ಲಿ ಇನ್ನೊಬ್ಬ ಹುಡುಗ ಅವನ ಭಲ್ಲೆ ಹಿಡಿದೆಳೆದು ಅಷ್ಟು ದೂರ ಎಸೆದು ಇವನೂ ಅವನನ್ನು ಒದ್ದ. ಹಾ ಎನ್ನುವುದರೊಳಗಾಗಿ ಜನ ಸೇರಿ ಸೈನಿಕರೆದುರು ನಿಂತರು. ಕೆಂಜಗ ಮುಖ ಮಾಡಿಕೊಂಡ ಇನ್ನೊಬ್ಬ ಸೈನಿಕ ದೃಢವಾಗಿ ನಿಂತು ತನ್ನ ಸಂಗಡಿಗರ ಶಕ್ತಿ ಎಷ್ಟೆಂದು ಗ್ರಹಿಸಿ ಅವರೊಂದಿಗೆ ಎದುರಿಗೆ ನಿಂತಿರುವ ಜನಜಂಗುಳಿಯ ಎದುರು ತಾವು ನಿಲ್ಲಲಾರೆವೆಂದು ಅನ್ನಿಸಿ, ಹಿಂದಿರುಗುವಷ್ಟರಲ್ಲಿ ಕಿವಿಗಡಚಿಕ್ಕುವಂತೆ ಸದ್ದು ಕೇಳಿಸಿತು. ಇಡೀ ಊರು, ಕೊಳ್ಳ, ಬೆಟ್ಟ, ಸ್ತಬ್ಧವಾದವು. ಆ ಕೊಳ್ಳದಲ್ಲಿ ಐದಾರು ಸಲ ಅದರ ಪ್ರತಿಧ್ವನಿ ಕೇಳಿಸಿತು. ಜನ ಎಲ್ಲಿ ಏನಾಯಿತೆಂದು ತಿಳಿಯದೆ ಅತ್ತ ಇತ್ತ ಗಾಬರಿಯಿಂದ ಕಣ್ಣಗಲಿಸಿ ನೋಡತೊಡಗಿದರು. ಸಿಡಿತಲೆಯಿದ್ದ ಇನ್ನೊಂದು ಗಾಡಿಯಿಂದೊಬ್ಬ ಬೆಟ್ಟ ಗುರಿಯಾಗಿ ಸಿಡಿತಲೆ ಹಾರಿಸಿದ್ದ! ಅದು ಹಾರಿದಲ್ಲಿಂದ ಅದು ಬಿದ್ದಲ್ಲಿ ಹೊಗೆಮಂಡಲ ರಚನೆಗೊಂಡು ಸೂರ್ಯನ ಬೆಳಕನ್ನ ಕಡಿಮೆ ಮಾಡಿತು. ಅದನ್ನು ನೋಡಿ ಅಲ್ಲಿದ್ದ ಎಲ್ಲರ ಮುಖಗಳು ಪ್ರಕಾಶಗೊಂಡವು. ಮದ್ದಿನ ವಾಸನೆ ಹಬ್ಬುತ್ತಿತ್ತು. ಗಾಳಿ ಇರಲಿಲ್ಲವಾದ್ದರಿಂದ ಹೊಗೆ ಚಲಿಸದೇ ಅಲ್ಲೇ ಸುತ್ತಾಡತೊಡಗಿತು.

ಜನ ಸೇರಿ ರಾಜನನ್ನು ದ್ರೋಹಿ ಎಂದು ಬೈದು ಅವನ ಬಲಿಯಾಗಬೇಕೆಂದರು. ಅಷ್ಟರಲ್ಲಿ ಬಕ್ಕತಲೆಯ, ನೆತ್ತರು ಸೋರುತ್ತಿದ್ದ ಒಬ್ಬನನ್ನು ಇಬ್ಬರು ತೋಳು ಹಿಡಿದು ಕರೆದು ತಂದರು. ಸಿಡಿತಲೆ ಗುಂಡು ಮಂಟಪಕ್ಕೆ ಬರುತ್ತಿದ್ದವನ ತೋಳಿನಲ್ಲಿ ಹೊಕ್ಕು ಅವನ ತೋಳು ತುಂಡಾಗಿ ಜೋತಾಡುತ್ತಿತ್ತು. ಅಲ್ಲಿಂದ ಒಂದೇ ಸಮ ರಕ್ತ ಸುರಿದು ಬಟ್ಟೆ ಒದ್ದೆಯಾಗಿತ್ತು. ಸೈನಿಕರಿನ್ನೂ ಸುಮ್ಮನೆ ನಿಂತುಕೊಂಡು ಓಡುವುದೋ ಎದುರಿಸುವುದೋ – ಅಂತ ಚಿಂತೆಮಾಡುತ್ತ ನಿಂತಿದ್ದಾಗ _ ಶಿಖರಸೂರ್ಯನ ಕುದುರೆಗಾಡಿ ಅಲ್ಲಿಗೇ ಬಂತು! ಜನ ನುಗ್ಗಿ ತೋಳು ಕಳೆದುಕೊಂಡವನನ್ನು ತೋರಿಸಿ “ದ್ರೋಹಿ, ಪಾಪಿ” ಎಂದು ಜರಿದರು. ಕೈಕಳೆದುಕೊಂಡವನನ್ನು ನೋಡಿ ಶಿಖರಸೂರ್ಯನ ಮುಖಚೆರ್ಯೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಅವನಲ್ಲಿ ಆತಂಕವಾಗಲಿ, ಮರುಕವಾಗಲಿ ಮೂಡಲಿಲ್ಲ. ಮುಗುಳುನಗೆ ನಗುತ್ತ ತನ್ನ ಗಿಡುಗನೋಟದಿಂದ ಎಲ್ಲರನ್ನು ಕೃತಕ ಪ್ರೀತಿಯಿಂದ ನೋಡಿದ. ಗಾಯಾಳುವಿಗೆ ಕೂಡಲೇ ಬೊಗಸೆ ತುಂಬ ಚಿನ್ನದ ಧಾನ್ಯ ಕೊಡಲು ಗಾಡಿಯ ಸಾರಥಿಗೆ ಹೇಳಿದ. ಸಾರಥಿ ಕೊಡಹೋದಾಗ ಅವನು “ಕಳೆದ ಕೈ ಕೊಡ್ತಿಯಾ?” ಎಂದು ಕೇಳಿದ. ತಕ್ಷಣ ಶಿಖರಸೂರ್ಯ ಎರಡೂ ಕೈಗಳಿಂದ ಗಾಡಿಯಲ್ಲಿದ್ದ ಚೀಲದಿಂದ ಬೊಗಸೆ ತುಂಬ ಚಿನ್ನದ ಧಾನ್ಯ ತಗೊಂಡು ಕೈ ಕಳೆದುಕೊಂಡವನ ಮೇಲೆ ನಿಧಾನವಾಗಿ ಸುರಿದ! ಇಡೀ ಜನಜಂಗುಳಿ ಬೆರಗಿನಿಂದ ನಿಶ್ಯಬ್ದವಾಗಯಿತು. ಇನ್ನೊಂದು ಬೊಗಸೆ ತಗೊಂಡು ಜನರ ಮೇಲೆ ಎಸೆದು ಕುರುಮುನಿಯ ಕಡೆಗೆ ನೋಡಿದ. ಅವನ ಮೇಲೂ ಒಂದು ಬೊಗಸೆ ಎಸೆದ. ಆಯ್ದುಕೊಳ್ಳಲು ನೂಕುನುಗ್ಗಲು ಹೆಚ್ಚಾಯಿತು. ಮಹಾರಾಜ ಗೆದ್ದನೆಂದು ಹೆಮ್ಮೆಯಿಂದ ಬೀಗಿದ. ಆರಿಸಿಕೊಳ್ಳುತ್ತ ಇಲ್ಲೇ ಬಿದ್ದಿರಲೆಂದು ಇನ್ನಷ್ಟು ಎಸೆದು ಕುರುಮುನಿಯನ್ನ ನೋಡಿ ವಿಜಯದ ನಗೆ ನಗುತ್ತ ಗಾಡಿಯನ್ನು ತಿರುಗಿಸಲು ಸೂಚಿಸಿದ.

ಶಿಖರಸೂರ್ಯನ ಆರ್ಭಟದಿಂದ ಹಿರಿಯರು ಹತಾಶರಾದರು. ಬೆಟ್ಟಕ್ಕೆ ಹೋದ ನಿನ್ನಡಿ ಇನ್ನೂ ಬಂದಿಲ್ಲವೆಂದು, ಕರೆದು ತರಲು ಹೋದ ಹುಡುಗ ಒಬ್ಬನೇ ಹಿಂದಿರುಗಿದನೆಂದು ತಿಳಿದೊಡನೆ ಜನ ಕಂಗಾಲಾದರು. ಶಿಖರಸೂರ್ಯ ಧಾನ್ಯದ ಚಿನ್ನವನ್ನ ತನ್ನ ತಲೆಯ ಮೇಲೆ ತೊರಿದಾಗಂತೂ ಕುರುಮುನಿ ಅವಮಾನದಿಂದ ಚಡಪಡಿಸಿದ. ಯಃಕಶ್ಚಿತ್ ರಾಜ, ಮಹಾರಾಜನಾದ ತನ್ನನ್ನ ಅವಮಾನಿಸಿದನೆಂದು – ಅಲ್ಲಿ ನಿಲ್ಲಲಾಗದೆ ಬೆಳ್ಳಿಯ ಮನೆಯ ಕಡೆಗೆ ರಭಸದಿಂದ ಹೊರಟ.

ನಿನ್ನೆ ಕಂಡ ಕನಸಿನ ಭಯದಲ್ಲಿಯೇ ಗೌರಿ ಒಲೆಯ ಮುಂದೆ ಕೂತಿದ್ದಳು. ಬೆಟ್ಟದ ಬಳಿ ಭಯಾನಕವಾದ ಗುಂಡು ಹಾರಿದ ಸದ್ದು ಕೇಳಿಸಿತ್ತು. ಎಲ್ಲಿ ಹೋದರೂ ಗೌರಿಗೆ ತಪ್ಪಿದರೆ ಅಬ್ಬೆಗೆ ಹೇಳಿ ಗೋಗುವ ನಿನ್ನಡಿ ನಿನ್ನೆ ಹೇಳದೆ ಕೇಳದೆ ಬೆಟ್ಟಕ್ಕೆ ಹೋಗಿದ್ದ. ಹೋದವ ಹೊತ್ತೇರಿ ಊರು ಚಡಪಡಿಸುತ್ತಿದ್ದರೂ ಬಂದಿರಲಿಲ್ಲ. ಕನಸನ್ನು ಜ್ಞಾಪಿಸಿಕೊಂಡಷ್ಟೂ ಭಯವಾಗುತ್ತಿತ್ತು. ಸುಮ್ಮನೆ ಕೂರಲಾರದ ಗೌರಿ ಏನನ್ನೋ ನಿರ್ಧರಿಸಿ ಎದ್ದು, ಮಿಂದು ಮಡಿಯುಟ್ಟು, ಕುಂಕುಮ ಇಟ್ಟುಕೊಂಡು ಹೊರಗೆ ರಂಗೋಲಿ ಗೆರೆ ಎಳೆದು ಬಂದಳು. ಸಮಾಧಾನವಾಗಲಿಲ್ಲ.

ಬೆಳ್ಳಿ ಆಗಲೇ ಎಚ್ಚತ್ತಿದ್ದಳಾದರೂ ಮ್ಯಾಲೆ ಎದ್ದಿರಲಿಲ್ಲ. ಚಿರತೆಯ ಚರ್ಮ ತೂಗು ಹಾಕಿದ ಗೋಡೆಗೆ ಒರಗಿ ಯೋಚನೆ ಮಾಡುತ್ತ ಕೂತಿದ್ದಳು. ಮೊನ್ನೆ ರಾತ್ರಿಯ ಭಾವೋದ್ವೇಗ ಇನ್ನೂ ತಣ್ಣಗಾಗಿರಲಿಲ್ಲ. ತನ್ನೊಂದು ಏಟಿಗೆ ಶಿಖರಸೂರ್ಯ ಮೂರು ಮಾರು ದೂರ ಹಾರಿಬಿದ್ದನಲ್ಲ! ಅಷ್ಟೊಂದು ಶಕ್ತಿ ತನ್ನಲ್ಲಿದೆಯೆ? ಎಂದು ಆಶ್ಚರ್ಯ ಪಡುತ್ತಿದ್ದಳು. ಹಾಗಿದ್ದಲ್ಲಿ ಇನ್ನೊಂದೇಟು ಹಾಕಬಹುದಿತ್ತೆಂದೂ ಅಂದುಕೊಳ್ಳುತ್ತಿದ್ದಳು.

ಎದ್ದು ಪಾದರಸಚಂತೆ ಒಳಗೂ ಗೊರಗೂ ಓಡಾಡುತ್ತ ಅದು ಇದು ಕೆಲಸ ಮಾಡುತ್ತಿದ್ದ ಅಬ್ಬೆ, ಈ ದಿನ ಎದ್ದು ಹಾಸಿಗೆಯಲ್ಲಿ ಸುಮ್ಮನೇ ಕುಂತಿದ್ದಳಾಗಿ ಗೌರಿಗೂ ಆಶ್ಚರ್ಯವಾಗಿತ್ತು: “ಅಬ್ಬೇ” ಎಂದು ಹೋಗಿ ಬೆನ್ನಿನ ಮೇಲೆ ಕೈಯೂರಿದಳು. ಮೈ ಬಿಸಿಯಾಗಿತ್ತು. ಕಷಾಯ ಕುದಿಸಿ ತರುತ್ತೇನೆಂದು ಎದ್ದಳು.

“ನನಗೇನಾಗಿಲ್ಲ ಬಾ ಕೂಸು.”

– ಎಂದು ಬೆಳ್ಳಿ ಹೇಳುತ್ತ ನೋಡಿದರೆ ಇವಳೂ ನಿದ್ದೆಗೆಟ್ಟು ಮುಖ ದಪ್ಪ ಮಾಡಿಕೊಂಡಿದ್ದಾಳೆ. ರಾತ್ರಿಯಿಡೀ ನಿನ್ನಡಿ ಬಂದಿರಲಿಲ್ಲ. ಎಲ್ಲಿದ್ದಾನೆಂದು ಸುದ್ದಿ ತಿಳಿದಿರಲಿಲ್ಲ. ಯಾರನ್ನಾದರೂ ಬೆಟ್ಟಕ್ಕೆ ಅಟ್ಟೋಣವೆಂದರೆ ಜನ ಇಲ್ಲ. ಇವಳ ಮುಖಚರ್ಯ ನೋಡಿದರೆ ಏನೋ ತೀರ್ಮಾನಿಸಿ, ಎಲ್ಲಿಗೋ ಹೊರಟಂತಿದೆಯೆಂಬ ಆತಂಕದಿಂದ ಕೇಳಿದಳು:

“ಇಷ್ಟು ಬೇಗ ಎಲ್ಲಿಗಾದರೂ ಹೋಗಬೇಕಿತ್ತೇ ಕೂಸು?”

“ಹೇಳುತ್ತೇನೆ, ನೀನು ಬೇಡ ಅನ್ನಬಾರದು.”

– ಎಂದಳು ಗೌರಿ. ಮನೆಯಲ್ಲಿ ನಿನ್ನಡಿ ಇಲ್ಲ. ಇವಳೂ ಹಟಮಾರಿ, ಕೆರಳಿಸಬಾರದೆಂದು –

“ಅದೇನು ನನಗsಟು ಹೇಳು ನನ್ನವ್ವಾ” ಎಂದಳು.

ಗೌರಿ ಅಳುಮುಖ ಮಾಡಿ

“ನಿನ್ನೆ ಕೆಟ್ಟ ಕನಸಾಯ್ತು. ಅಣ್ಣನಿಗೆ ಏನಾದರೂ ಆದರೆ ನನಗೆ ಸಂಕಟವಾಗ್ತದೆ”.

– ಎಂದು ಹೇಳಿ ಬೆಳ್ಳಿಯ ಭುಜದಲ್ಲಿ ಮುಖ ಹುದುಗಿಸಿ ಅಳತೊಡಗಿದಳು. ಬಂದಾಗಿನಿಂದ ಅಣ್ಣನಿಗಾಗಿ ಹಲುಬುವುದನ್ನ ಕೇಳಿಸಿಕೊಂಡಿದ್ದ ಬೆಳ್ಳಿಗೆ ಕರುಣೆ ಬಂತು. ತಲೆ ನೇವರಿಸುತ್ತ,

“ಈಗೇನು ಮಾಡಬೇಕಂತೀ ಮಗಳೇ?” ಅಂದಳು.

“ಅಣ್ಣ ಹ್ಯಾಗಿದ್ದಾನೆ ಅಂತ ಅಪ್ಪನ್ನ ಕೇಳಿ ಬರುತ್ತೀನೆ”.

ಅವನೋ ದನ. ಇಲ್ಲಿಗೆ ಬಂದಾಗಿನಿಂದ ಮಗಳನ್ನು ನೋಡಬೇಕಂತ ಅನ್ನಿಸದೇ ಇದ್ದವನಿಗೆ ಇವಳ ದುಃಖ ಅರ್ಥವಾದೀತೆ? ಸಮಾಧಾನಕ್ಕಾಗಿ ಹೋಗಿ ಬರಲೆಂದು ಅಂದುಕೊಂಡರೂ ಆತ ಅಂತಃಕರಣದವನಲ್ಲವೆಂದು ನೆನಪಾಯಿತು. ಮಗಳಿಗೆ ಅಪಾಯ ತಂದರೂ ತಂದನೇ! ಚಂಡಾಲ ನನ್ನ ಮೇಲಿನ ಸೇಡನ್ನ ಕೂಸಿನ ಮೇಲೆ ತೀರಿಸಿಕೊಳ್ಳಲಿಕ್ಕೂ ಹೇಸದವ. ಅಂಥ ದುಷ್ಟನ ಬಳಿಗೆ ಗೌರಿ ಒಬ್ಬಳನ್ನೇ ಕಳಿಸಲಿಕ್ಕೆ ಹಿಂಜರಿಕೆಯಾಯಿತು. ಕೂಡಲೇ ಎದ್ದು ಹೊರಬಂದು ನೋಡಿದರೆ ಹೇಳಿ ಕಳಿಸಿದ ಹಾಗೆ ಕುರುಮುನಿ ಅಬ್ಬೆಯ ಕಡೆಗೇ ಧಾವಿಸಿ ಬಂದ. ಬಂದವನೇ,

“ಅಬ್ಬೆ ನಿನಗಾದರೂ ಬುದ್ಧಿ ಬ್ಯಾಡವಾ? ಮಾರಾಜನಾದ ನಾನೇ ಬಾಗಬೇಕಾಗಿ ಬಂತಲ್ಲ – ಇದು ಯೋಗ್ಯವ?”

“ನೀನ್ಯಾಕಪ್ಪ ಬಾಗಬೇಕು?”

– ಎಂದಳು ಬೆಳ್ಳಿ.

“ಯಾಕಂದರ ಶಿವಪಾದನ ಅಪ್ಪಣೆ ಇಲ್ಲ. ಅವನಪ್ಪಣೆ ಸಿಗದ ಶಿವಾಯಿ ನಾನು ನನ್ನ ವಿದ್ದಯೆ ತೋರಸೋ ಹಂಗಿಲ್ಲ! ನಿನ್ನಡಿ ಊರಲ್ಲಿಲ್ಲ, ಮಂಡಪದಲ್ಲಿಲ್ಲ. ಹೋಗಲಿ ಮನೆಯಲ್ಲಿದ್ದಾನ?”

“ಬೆಟ್ಟಕ್ಕೆ ಹೋಗ್ಯಾನಲ್ಲಪ್ಪ….”

“ಬೆಟ್ಟದಲ್ಲಿಲ್ಲವ್ವ!”

ಬೆಳ್ಳಿ, ಗೌರಿಯರಿಬ್ಬರೂ ಕಂಗಾಲಾದರು. ಬೆಳ್ಳಿ ಚಿಂತೆಯಿಂದ ಹೇಳಿದಳು:

“ಅಯ್ ಶಿವನ! ಮತ್ತೆಲ್ಲಿ ಹೋದ? ನಿನ್ನೆ ಅಮ್ಮನ್ನ ನೋಡಿಕೊಂಡ ಬರ್ತೀನಿ ಅಂತ ಹೋದವನು ಹಾಂಗs ಮರಾಜನ ಹತ್ತರ ಹೋದನಂತ!”

“ಬೆಟ್ಟದಾಗಿಲ್ಲಬೆ”

ಇದನ್ನೆಲ್ಲ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಗೌರಿ ಮುಂದೆ ಬಂದು

“ಎಲ್ಲಿದಾನಂತ ನನಗೊತ್ತು. ಕರಕೊಂಬರ್ತಿನಿರು”.

– ಎಂದು ಹೊರಟೇ ಬಿಟ್ಟಳು. ತುಂಬು ಗರ್ಭಿಣಿ; ಹೀಗೆ ಹೊರಟರೆ ಹ್ಯಾಗೆಂದು ಆತಂಕವಾಗಿ ಹಿಂದಿನಿಂದ ಬೆಳ್ಳಿಯೂ ಹೊರಡಲು ಎದ್ದಳು. ಗೌರಿ ಹೊಸ್ತಿಲು ದಾಟಿ ತಿರುಗಿ ನಿಂತು ಬೆಳ್ಳಿಯ ಕಡೆಗೆ ತೋರು ಬೆರಳಾಡಿದುತ್ತ ಮಕ್ಕಳಿಗೆ ತಾಕೀತು ಮಾಡುವಂತೆ –

“ಅಬ್ಬೆ ನೀನಿಲ್ಲೇ ಇರು. ಮಾರಾಜ, ಬಾ ನನ್ನ ಜೊತೆ”

– ಎಂದು ಮುಂದೆ ನಡೆದಳು. ಕುರುಮುನಿಯೂ ಹಿಂದಿನಿಂದ ನಡೆದ.

ಗೌರಿ ಮತ್ತು ಕುರುಮುನಿ ಮುರಿಗೆಪ್ಪನ ತೋಟಕ್ಕೆ ಬಂದಾಗ ಸೂರ್ಯನಾಗಲೇ ಬೆಟ್ಟದ ನೆತ್ತಿಯನ್ನು ಬಂಗಾರದ ಬಿಸಿಲಿನಿಂದ ಬೆಳಗುತ್ತಿದ್ದ. ಬೆಳಗಿನ ಸಣ್ಣ ಮಳೆಯಿಂದಾಗಿ ನೆಲ ಇನ್ನೂ ಒದ್ದೆಯಾಗಿ ತರುಮರ ಬೆಳೆಗಳು ಮಿಂದ ಹೆಂಗಸಿನ ಮುಗ್ಧತೆಯಿಂದ ಶೋಭಿಸುತ್ತಿದ್ದವು. ಆಗಷ್ಟೆ ಊರಲ್ಲಿ ನಡೆದ ಗಲಭೆಗಳಿಂದ ಹಕ್ಕಿಗಳ ಚಿಲಿಪಿಲಿ ಕೂಡ ಇರಲಿಲ್ಲ. ಮಂಟಪದ ಬಳಿಯೇ ಹೆಚ್ಚು ಜನ ಸೇರಿದ್ದರಾಗಿ ದಾರಿಯಲ್ಲಿ ಜನಗಳು ಕಾಣಿಸಲಿಲ್ಲ.

ಮುರಿಗೆಪ್ಪನ ತೋಟದ ಮುಖ್ಯ ಬಾಗಿಲಲ್ಲೇ ಕಾವಲು ಭಂಟರು ಇವರನ್ನು ತಡೆದರು. ಅವರಿಗೆ ಯಾರಿಗೂ ಇವರ ಪರಿಚಯವಿರಲಿಲ್ಲವಾಗಿ ಮಾತಾಡಿಸಲೂ ಇಲ್ಲ. ಸುಮ್ಮನೆ “ಬರಬೇಡಿ ತಿರುಗಿ ಹೋಗಿರೆಂದು ಸನ್ನೆ ಮಾಡಿ ಮತ್ತೆ ಮೊದಲಿನಂತೆ ನಿಂತುಕೊಂಡರು. ಸುದೈವಕ್ಕೆ ಅದೇ ಸಮಯಕ್ಕೆ ಮುರಿಗೆಪ್ಪ ಹೊರಬಂದು ಇವರನ್ನು ತೋಟದೊಳಕ್ಕೆ ಕರೆದುಕೊಂಡು ಹೋದ. ಆದರೆ ಮಹಾರಾಜನಿದ್ದ ಮನೆಯೊಳಕ್ಕೆ ಬಿಡಲೇ ಇಲ್ಲ. ಒಬ್ಬ ಶಸ್ತ್ರಸಜ್ಜಿತ ಸೈನಿಕ ಬಂದು ಅಡ್ಡಗಟ್ಟಿದ. “ರಾಜನ ಸ್ವಂತ ಮಗಳು ದರ್ಶನಕ್ಕ ಬಂದಾಳ, ಬಿಡಪ್ಪಾ” ಎಂದು ಮುರಿಗೆಪ್ಪ ಕೊಂಚ ಅಧಿಕಾರವಾಣಿಯಿಂದ ಹೇಳಿದ. ಕೇಳಿಸಿಕೊಂಡು ಆ ಸೈನಿಕ ತನ್ನ ಪಾಡಿಗೆ ತಾನು ಸುಮ್ಮನಿದ್ದ. ಕುರುಮುನಿಗೆ ಅಲ್ಲಿಯ ಕೃತಕ ಗಂಭೀರ ವಾತಾವರಣ ನೋಡಿ ನಗಾಡುವ ಮನಸ್ಸಾಯ್ತು. ಆದರೆ ಸಿಟ್ಟು ಮಾಡಿದ ಕೂಸಿನಂತೆ ಮುಖ ಉಬ್ಬಿಸಿಕೊಂಡಿದ್ದ ಗೌರಿಯನ್ನು ನೋಡಿ ಭಯವಾಯಿತು. ಆದರೂ ಸುಮ್ಮನಿರದೆ ಮೆಲ್ಲಗೆ “ಒಳಗ ನಿನ್ನಡಿ ಇದ್ದಾನ ಮಗು?” ಎಂದು ಮುರಿಗೆಪ್ಪನನ್ನ ಕೇಳಿದ. ಅವನು “ಬೆಟ್ಟಕ್ಕ ಹೋಗ್ಯಾನಂತಪ ಮಾರಾಜ” ಅಂದ. ಅಷ್ಟರಲ್ಲಿ ಶಿಖರಸೂರ್ಯ ಹೊರಬಂದು ಮೊಗಸಾಲೆಯ ಗಡಂಚಿಯ ಮೇಲಿ ಕೂತು ಒಂದು ಸಲ ಬಂದವರಿಬ್ಬರನ್ನೂ ನೋಡಿದ. ಕುರುಮುನಿಯ ಗುರುತೇ ಇಲ್ಲವೆಂಬಂತೆ ಅವನನ್ನು ನಿವಾರಿಸಿ ಗೌರಿಯನ್ನ ಮಾತ್ರ ನೋಡಿ, “ಸರಿ, ಗೌರಿ ಬದುಕಿದ್ದು, ನಿನ್ನಡಿ ಅವಳ ವಿಷ ತೆಗೆದು ಬದುಕಿಸಿದ್ದು ನಿಜ ಎಂದಾಯಿತು”. ಇನ್ನೇನು ಅಪ್ಪ “ಮುದ್ದೂ” ಕೂಗುತ್ತಾನೆಂದುಕೊಂಡ ಮಗಳ ಕಿವಿಯ ಮೇಲೆ,

“ಬಂದವರು ಯಾರು ಮುರಿಗೆಪ್ಪ?”

ಎಂದ ರಾಜನ ತಿರಸ್ಕಾರದ ದನಿ ಕೇಳಿಸಿತು.

“ನಿನ್ನ ಮಗಳು ಮತ್ತು ಕುರುಮುನಿ ಮಹಾರಾಜ ನಿನ್ನ ದರ್ಶನಕ್ಕೆ ಬಂದಾರ ಸ್ವಾಮೀ!”

ಅಂದ ಮುರಿಗೆಪ್ಪ.

“ನನ್ನ ಮಗಳು ಸತ್ತು ತಿಂಗಳಾದುವಯ್ಯಾ, ಇವಳ್ಯಾವಳೋ ನಕಲಿ ರಾಜಕುಮಾರಿ, ತಳ್ಳಿರಯ್ಯಾ ಹೊರಕ್ಕೆ!”

ಎಂದು ಬಿರುಸಾಗಿ ನುಡಿದ. ಗೌರಿಗೆ ಅವಮಾನದಿಂದ ಆಘಾತವಾಗಿ ಮೈ ತುಂಬ ಬೆಂಕಿ ಹೊತ್ತಿಸಿಕೊಂಡಂತೆ ಚಡಪಡಿಸಿದಳು. ಅವಮಾನದಿಂದ ಕುರುಮುನಿಯ ಮುಖ ಕಪ್ಪಗಾಯ್ತು. ಇವನು ಮನುಷ್ಯನೇ ಅಲ್ಲವೆಂಬ ತೀರ್ಮಾನಕ್ಕೆ ಮುರಿಗೆಪ್ಪ ಬಂದು,

“ಏನಪ್ಪಾ ರಾಜಾ, ತಂದೆಯಾದವನು ಮಗಳಿಗೆ ಆಡೋ ಮಾತುಗಳ ಇವು?” ಅಂದ.

“ನಿನ್ನಿಂದಲೂ ಬುದ್ಧಿಮಾತು ಕೇಳಬೇಕಾಯಿತು ನಾನು?”

ಎಂದು ಹೇಳುತ್ತ ಕಣ್ಣಿಂದ ಭಂಟನಿಗೆ ಅಸಮಾಧಾನದ ಸನ್ನೆ ಮಾಡಿದ. ಭಂಟ ಬಂದು ಮುರಿಗೆಪ್ಪನ ಬೆನ್ನಿನ ಮೇಲೆ ತಾನು ಹಿಡಿದ ಭಾರವಾದ ಕೋಲಿನಿಂದ ಜೋರಾಗಿ ಏಟು ಹಾಕಿದ. ಮುರಿಗೆಪ್ಪ “ಅಯ್ಯೋ ಎವ್ವಾs” ಅಂದು ಬೊಕ್ಕು ಬೋರಲು ನೆಲಕ್ಕೆ ಬಿದ್ದ. ನೆಲಗಲ್ಲಿಗೆ ಮೂಗು ತಾಗಿ ಬಳ ಬಳ ರಕ್ತ ಸುರಿಯತೊಡಗಿತು.

ಗೌರಿಯ ಕೋಪ ನೆತ್ತಿಗೇರಿತು ನೋಡು, – ಕೆಂಪು ಕಣ್ಣು ಕಿಸಿದು, ಸೀರೆಯ ಸೆರಗು ಸೊಂಟದಲ್ಲಿ ಸಿಕ್ಕಿಸಿಕೊಂಡು, ಏಟು ಹಾಕಿದ ಸೈನಿಕನ ಕೋಲು ಕಸಿದು, ಆಮೇಲೆ ಆ ಸೈನಿಕನ ಎದೆಗೆ ಜೋರಾಗಿ ಒದ್ದಳಪ್ಪ! ಅಷ್ಟು ದೂರ ಬಿದ್ದ. ಅವನ ಜುಟ್ಟು ಹಿಡಿದು ಎಳೆಯುತ್ತ ಶಿಖರಸೂರ್ಯನೇ ಗೌರಿಯ ರೌದ್ರಾವತಾರ ನೋಡಿ ಆಘಾತ ಹೊಂದಿ ಚಿತ್ರದ ಗೊಂಬೆಯಂತೆ ನಿಂತ. ಎಳೆದು ತಂದಿದ್ದ ಭಂಟನನ್ನ ಕಸದ ಮೂಟೆ ಎಸೆಯುವಂತೆ ತಂದೆಯ ಪಾದದ ಮೇಲೆ ಚೆಲ್ಲಿ ಹೇಳಿದಳು:

“ಹೇಳು ನಿನ್ನ ರಾಜನಿಗೆ, ಶಿವಾಪುರದಲ್ಲಿ ಅವನಾಗಲೆ, ಅವನ ಭಂಟರಾಗಲಿ, ಯಾರೊಬ್ಬರ ಮೇಲೆ ಕೈ ಮಾಡಿದರೆ – ಇಕಾ ಇಲ್ಲಿದೆಯಲ್ಲ – ?”

ಎನ್ನುತ್ತ ಅಲ್ಲೇ ನೇತುಹಾಕಿದ್ದ ಕುಡುಗೋಲು ಸೆಳೆದುಕೊಂಡು ತೋರಿಸುತ್ತ, “ಕುಡಗೋಲಿಂದ ನಿಮ್ಮ ಬೇಟೆಯಾಡುತ್ತೇನೆ ಹುಷಾರ್”, ಎಂದು ಹೇಳಿ ಈಗ ನೇರವಾಗಿ ತಂದೆಯನ್ನೇ ನೋಡುತ್ತ ಕೇಳದಳು.

“ಈಗೇನು ನನ್ನ ಗಂಡನನ್ನ ಬಿಟ್ಟುಕೊಡ್ತಿಯೋ? …. ಇಲ್ಲಾ….”

ಕೋಪವುಕ್ಕಿ ಬಂತು ರಾಜನಿಗೆ, ಹೇಸಿಕೆಯಿಂದೆಂಬಂತೆ –

“ನಿನ್ನ ಗಂಡನ ವಿಷಯ ನನಗೇನೇ ಗೊತ್ತೇ ದರಿದ್ರವೆ?” ಅಂದ.

“ನಿನಗೆ ಕರುಳಿಲ್ಲ. ತಿಳಿಯೋದಿಲ್ಲ. ನನಗಿವೆ ತಿಳೀತದೆ. ನನ್ನ ಗಂಡ ಇಲ್ಲಿದ್ದಾನೆ. ಬಿಡ್ತೀಯೋ ಬಿಡಿಸಿಕೊಳ್ಳಬೇಕೋ”

ಇದೂ ಆ ಬೆಳ್ಳಿಯ ಹಾಗೆ ಹೊಡೆಯುತ್ತೊ ಏನು ಕತೆಯೊ! ಎಂದು ಹೆದರಿ

“ಯಾರಿದ್ದೀರಯ್ಯಾ ಇಲ್ಲಿ? ತಳ್ಳಿರಯ್ಯಾ ಈ ನಾಯೀನ್ನ!”

ಎಂದು ಮಹಾರಾಜ ಕಿರಿಚಿದ. ಬಂಟರು ಹೆದರಿಕೊಂಡು ಅವಳ ಹತ್ತಿರ ಬರುತ್ತಿದ್ದಂತೆ ಈಕೆ ಒಳಹೋಗಿ ಆವೇಶದಿಂದ ಧಡ್ ಧಡ್ ಸಪ್ಪಳಾಗುವಂತೆ ಬಾಗಿಲನ್ನೊದ್ದಳು. ದಢಾರೆಂದು ಬಾಗಿಲು ಮುರಿದು ಬಿದ್ದು ಬಿಟ್ಟಿತು. ಒಳಕ್ಕೆ ನುಗ್ಗಿದಳು.

ಅವಮಾನದಿಂದ ಮಹಾರಾಜ, ಸೈನಿಕರು ಮತ್ತು ಮುರಿಗೆಪ್ಪನನ್ನು ನೋಡುತ್ತಿದ್ದ. ಸೈನಿಕರು, ಮುರಿಗೆಪ್ಪ ಗಡ ಗಡ ನಡಗುತ್ತಿದ್ದರು. ಸಾಮಾನ್ಯವಾಗಿ ಇಂಥ ಘಟನೆಗಳಿಂದ ಮನರಂಜನೆ ಪಡೆವ ಕುರುಮುನಿಯೂ ನಡಗುತ್ತಿದ್ದ. ಯಾಕೆನೆ ಗೌರಿ ಅವನರಿಯದವಳಲ್ಲ. ಅವಳ ಮೇಲಿನ ತಾಯಿಯ ಕೃಪೆಯ ಅರಿವೂ ಇತ್ತು.

ಆದರೆ ಈ ದಿನ ಪ್ರತ್ಯಕ್ಷ ತಾಯಿಯೇ ಗೌರಿಯಲ್ಲಿ ಆವೇಶವಾಗಿದ್ದಳು! ಅವಳ ಬಗೆಗಿನ ಅವನ ಮಮತೆ ಭಕ್ತಿಯಾಗಿ ಪರಿವರ್ತನೆ ಹೊಂದಿತು. ಎಲ್ಲರ ಕಣ್ಣು ದೇವರಕೋಣೇಯ ಕಡೆಗೆ ನೆಟ್ಟಿರಲು ಗೌರಿ, ಗಂಡನ ಕೈ ಹಿಡಿದುಕೊಂಡು ಸರಸರನೆ ಇವರ ಮುಂದೆಯೇ ದಾಟಿ ನಡೆದಳು. ಮಹಾರಾಜ ಆವಾಕ್ಕಾಗಿ ಅವರನ್ನೇ ನೋಡುತ್ತಿದ್ದಾಗ ಗೌರಿ ತಿರುಗಿ ನಿಂತು ತಂದೆಗೆ ತಾಕೀತು ಮಾಡುವಂತೆ ಹೇಳಿದಳು:

“ಇನ್ನೆರಡು ತಾಸಿನೊಳಗೆ ಈ ಜಾಗ ಖಾಲಿ ಮಾಡಿದೆಯೊ ನಿನ್ನ ಹಡಗು ನಿನಗೆ ದಕ್ಕೀತು. ತಡ ಮಾಡಿದೆಯೋ ನಿನ್ನ ಹಡಗು ಮುಳುಗೀತು. ನೆಪ್ಪಿರಲಿ.”

– ಎಂದು ಹೇಳಿ ತಂದೆಯ ಎದೆಗೊದ್ದ ಹಾಗೆ ಬಲಗಾಲಿನಿಂದ ನೆಲ ಒದ್ದು ರಭಸದಿಂದ ಬಿರಿಬಿರಿ ನಡೆದಳಪ್ಪ! ಕುರುಮುನಿ ಚಕಿತನಾಗಿ ತಂದೆ ಮಗಳ ಮುಖಗಳನ್ನು ಟಕಮಕ ನೋಡಿ ಅವಸರದಿಂದ ಗೌರಿ ನಿನ್ನಡಿಯರ ಹಿಂದೆ ಓಡಿದ. ತಕ್ಷಣ ಶಿಖರಸೂರ್ಯ ಕ್ರಿಯಾಶೀಲನಾದ.

* * *

ಮುಂದಿನ ಕತೆ ಅನುಮಾನಾಸ್ಪದ ತಿರುವು ತಗೊಂಡಿದೆ. ಈವರೆಗಿನ ಪೂರ್ವತಯಾರಿ ಮತ್ತು ಪ್ರದರ್ಶನ ನೋಡಿದರೆ ಶಿಖರಸೂರ್ಯ ವಿಜಯಶಾಲಿಯಾಗಲೇಬೇಕು – ಅದೊಂದು ಯುದ್ಧವೆನ್ನುವುದಾದರೆ ! ಆದರಿದು ಯುದ್ಧವಲ್ಲ, ಅವನಿಗೊಬ್ಬ ಎದುರಾಳಿಯಿಲ್ಲ, ಎದುರಾಳಿಯ ಸೈನ್ಯವಿಲ್ಲ, ಎದುರಿಗಿದ್ದದ್ದು ಅಸಂಘಟಿತ, ಅರಕ್ಷಿತ ಜನಜಂಗಳಿ, ದೊಂಬಿ! ಗೆಯ್ಮೆ ಕಾಲದಲ್ಲಿ ಹಿಡಿದ ಕುಡುಗೋಲೇ ಅವರು ಹಿಡಿದ ದೊಡ್ಡ ಆಯುಧ. ಈಗ ಅದನ್ನೂ ಹಿಡಿದಿರಲಿಲ್ಲ. ಇಂಥವರ ಎದುರು ಒಬ್ಬ ಭಂಟ ಬಂದರೂ ಗೆಲ್ಲಲೇಬೇಕು. ಆದರೆ ಈ ಕದನದಲ್ಲಿ ಶಿಖರಸೂರ್ಯ ಸೋತ! ಅಷ್ಟೇ ಅಲ್ಲ. ಹಸಿದ ತೋಳುಗಳ ಹಿಂಡು ಅಟ್ಟಿಸಿಕೊಂಡು ಬಂದಂತೆ ಸತ್ತೆನೋ ಕೆಟ್ಟೆನೋ ಎಂದು ಓಡಿದ ! ಶಿಖರಸೂರ್ಯನಿಗೆ ಯಾಕೆ ಸೋಲಾಯಿತು? ಹ್ಯಾಗೆ ಸೋಲಾಯಿತು? ನಮಗೆ ತಿಳಿಯುತ್ತಿಲ್ಲ.

ನಾವು ಪ್ರತ್ಯಕ್ಷ ಕಂಡುದಿಷ್ಟು:

ಅಂದು ಮಧ್ಯಾಹ್ನ ಹೊತ್ತಿಗೇ ಶಿವಾಪುರದ ಹುಡುಗರು ಸಿಡಿತಲೆಯ ಗಾಡಿಯನ್ನು ಬೆಟ್ಟದ ತುದಿಗೆ ತಂದು ನಿಲ್ಲಿಸಿಯಾಗಿತ್ತು. ಸಂಜೆ ಶಿಖರಸೂರ್ಯ ತನ್ನ ನೂರಾಳ್ಪಡೆಯೊಂದಿಗೆ ಹೊತ್ತಿಸಿದ ಪಂಜು ಹಿಡಿದುಕೊಂಡು, ಸಿಡಿತಲೆ ಸಿಡಿಸುವ ತಯಾರಿಯೊಂದಿಗೆ ಬೆಟ್ಟ ಏರತೊಡಗಿದ. ಅವನು ಹಾಗೆ ಪಂಜು ಹಿಡಿದುಕೊಂಡು ತನ್ನವರೊಂದಿಗೆ ಬೆಟ್ಟ ಏರುವ ಭಯಂಕರ ದೃಶ್ಯವನ್ನ ಶಿವಾಪುರಚ ಜನ ಅವಾಕ್ಕಾಗಿ, ಬಾಯಿ ತೆರೆದುಕೊಂಡು ಮುಗಿಚ ಕೈ ಹೊತ್ತು ಅಮ್ಮನಿಗೆ ಮೌನ ಪ್ರಾರ್ಥನೆ ಸಲ್ಲಿಸುತ್ತ ನೋಡುತ್ತಿದ್ದರು. ಮಹಾರಾಜ ಇನ್ನೇನು ಬೆಟ್ಟ ಹತ್ತಿ ಬಿಡುವಷ್ಟು ಸಮೀತ ಬಂದಿದ್ದಾಗ ಇವನ ಇನ್ನಷ್ಟು ಸೈನಿಕರೇ ಬೆಟ್ಟದ ತುಟ್ಟ ತುದಿಯಲ್ಲಿ ಸಿಡಿತಲೆ ಗಾಡಿಯನ್ನು ನಿಲ್ಲಿಸಿ ಕೆಳಕ್ಕೆ ಉರುಳಿಸಲು ಸಿದ್ಧರಾಗಿ ನಿಂತಿದ್ದರು! ಅವರ ಜೊತೆ ನಿನ್ನಡಿ ಕುರುಮುನಿ ನಿಂತಿದ್ದರು! ಶಿಖರಸೂರ್ಯನಿಗೆ ಆಘಾತವಾಯ್ತು! ಸುಮಾರು ಜನ ತರುಣರು ಮತ್ತು ತನ್ನ ಸೈನಿಕರು ಆರೇಳುಗಂಟೆ ಕಷ್ಟಪಟ್ಟು ಗಾಡಿಯನ್ನು ತಳ್ಳಿಕೊಂಡು, ಅಕ್ಷರಶಃ ಹೊತ್ತುಕೊಂಡು ಬೆಟ್ಟಕ್ಕೆ ತಂದಿದ್ದರು. ಈಗ ಅವರೇ ನಿನ್ನಡಿಯ ಮುಂದೆ ನಿಂತು ಗಾಡಿಯನ್ನು ಕೆಳಕ್ಕೆ ತಳ್ಳಲು ಸಿದ್ಧರಾಗಿದ್ದಾರೆ ಅಂದರೆ ಹ್ಯಾಗೆ ನಂಬುವುದು? ಇಲ್ಲೇನೋ ಮೋಸವಾಗಿದೆಯೆಂದು ಅನುಮಾನ ಬಂತು. ಆದರೆ ಸೈನಿಕರು ನಮ್ಮವರೇ! ಒಬ್ಬರೂ ಮಾತಾಡಲೊಲ್ಲರು. ಶಿಖರಸೂರ್ಯ ಕೂಗಿ –

“ಲೋ ಅಯೋಗ್ಯರಾ, ನಿಮ್ಮನ್ನ ಸೃಷ್ಟಿ ಮಾಡಿದವ ಹೆಚ್ಚೋ? ಲಂಚ ಕೊಟ್ಟು ಕೊಂಡವ ಹೆಚ್ಚೊ?”

ಎಂದು ಗದರಿ ನೋಡಿದ.

“ನಮ್ಮನ್ನು ಸೃಷ್ಟಿಸಿದವ ಹೆಚ್ಚು”

ಎಂದು ಹೇಳಿ ಕುರುಮುನಿಯ ಕಡೆಗೆ ನೋಡಿ ಗಾಡಿಯನ್ನು ಇನ್ನಷ್ಟು ಅಂಚಿಗೆ ತಂದರು!

ಅಂದರೆ ಇವರು ನಾನು ಸೃಷ್ಟಿಸಿದವರಲ್ಲವೆ? ಅಥವಾ ಭಂಟರನ್ನು ಸೃಷ್ಟಿ ಮಾಡುವ ವಿದ್ಯೆ ನಿನ್ನಡಿಗೂ ಗೊತ್ತಿದೆಯೊ? ಅದು ಸಾಧ್ಯವೆಂದು ಅಂದುಕೊಳ್ಳುವುದಕ್ಕೂ ಅವಕಾಶ ಕೊಡದೆ ಕುರುಮುನಿ ಸನ್ನೇ ಮಾಡಿದ್ದೇ ಆಯ್ತು. ಅವನ ಸೈನಿಕರು ಗಾಡಿಯನ್ನು ಕೆಳಗೆ ತಳ್ಳಿಯೇ ಬಿಟ್ಟರು! ಅದು ಗುಡು ಗುಡು ಉರುಳುತ್ತ ಬಂಢೆಗಳಿಗೆ, ತರುಮರಗಳಿಗೆ ತಾಗಿ ಮುರಿದು, ತಾಗಿದಾಗೊಮ್ಮೆ ಇನ್ನಷ್ಟು ಸದ್ದು ಮಾಡುತ್ತ ಶಿಖರಸೂರ್ಯನ ಕಡೆಗೇ ಬಂದಾಗ ಅವನು ಮತ್ತು ಅವನ ಜನ ಗಾಬರಿಯಾಗಿ ಭಾಗಮ್ ಭಾಗವಾದರು! ಜೊತೆಗೇ ಶಿಖರಸೂರ್ಯನ ಮಹತ್ವಕಾಂಕ್ಷೆಯೂ ಪತನವಾಯಿತು. !ಉರುಳುತ್ತಿರುವ ಗಾಡಿ, ಅದರೊಳಗಿದ್ದ ಸಿಡಿಗಂಡು, ಹಾರಿಸುವ ಕೊಳಾಯಿಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ತಿರುಗಿ ನೋಡಿದರೆ ನಿನ್ನಡಿ, ಕುರುಮುನಿಯೊಂದಿಗೆ ಶಿವಾಪುರದ ಹಿರಿಯರು, ಸಿದ್ಧರು ಸಾಧು ಸನ್ಯಾಸಿಗಳು ಮಂತ್ರತಾಂತ್ರಿಕರು ತಾವೂ ಪಂಜು ಹಿಡಿದು ಶಿವಾಪುರದಮ್ಮನ ಘೋಷಣೆಗಳನ್ನು ಒದರುತ್ತ ಕೆಳಗಿಳಿಯತೊಡಗಿದರು!

ತನ್ನ ಕಡೆಗೆ ನುಗ್ಗುತ್ತಿದ್ದ ದೊಂಬಿಯನ್ನು ಎದುರಿಸುವುದು ಅಸಾಧ್ಯವೆನ್ನಿಸಿ ಶಿಖರಸೂರ್ಯ ಹಿಂದೆ ನೋಡಿದ. ತನ್ನೊಂದಿಗೆ ಬಂದಿದ್ದ ನೂರಾಳ್ಪಡೆಯ ಒಬ್ಬ ಸೈನಿಕನೂ ಇರಲಿಲ್ಲ! ಗಾಬರಿಯಾಗಿ, ಎದೆ ದಸ್ಸೆಂದು ಒಡೆದಂತಾಗಿ ಕೆಳಗೋಡಿದ!

ಓಡಿ ಓಡಿ ಬೆಟ್ಟದ ತಳಕ್ಕೆ ಬಂದಾಗ ಎರಡು ಕುದುರೆ ಹಿಡಿದುಕೊಂಡು ಸುಕ್ರ ನಿಂತಿದ್ದ. “ಬೇಗ ಬಾ ಒಡೆಯಾ, ಈ ಕಡೆಯಿಂದಲೂ ಜನ ಬರ್ತಿದ್ದಾರೆ!” ಎಂದು ಅವಸರದಿಂದ ರಾಜನ ಕೈಗೊಂದು ಕುದುರೆ ಕೊಟ್ಟು ತಾನೂ ಹತ್ತಿದ. ಲಗುಬರೆಯಿಂದ ಇಬ್ಬರೂ ಕುದುರೆಗಳನ್ನ ಓಡಿಸಿದರು.

***

ಶಿಖರಸೂರ್ಯ ಹೇಳಿದಂತೆ, ಇದು ಮೂಢನಂಬಿಕೆಯ ವಿರುದ್ಧ ಮಾಡಿದ ಧರ್ಮಯುದ್ಧವಂತೂ ಅಲ್ಲ. ಮೇವಿನ ಸೈನಿಕರನ್ನು ಸೃಷ್ಟಿ ಮಾಡಿದವನು ಶಿಖರಸೂರ್ಯ. ಮಂತ್ರದ ಸೈನಿಕರು ಸೃಷ್ಟಿಸಿದವನ ಆಜ್ಞೆಗಳನ್ನು ಪಾಲಿಸಲಿಲ್ಲವಲ್ಲ? ಕುರುಮುನಿಯ ಆಜ್ಞೆಗಳನ್ನು ಪಾಲಿಸಿದರಲ್ಲ, ಯಾಕೆ? ಆಜ್ಞೆ ಪಾಲಿಸಿದ ಈ ಬಂಟರು ಯಾರ ಸೃಷ್ಟಿ? ನಿನ್ನಡಿಯಂತೂ ಆಗಿರಲಾರ. ಯಾಕೆನೆ, ಆತ ದೊರೆತ ಸದರಿ ವಿದ್ಯೆಯನ್ನು ತಾನೇ ತಾನಾಗಿ ಮುಂದೆ ಬಂದು ತಿನ್ನುವ ಅನ್ನವನ್ನು ಚಿನ್ನವಾಗಿಸುವ, ದನಗಳು ತಿನ್ನುವ ಆಹಾರವನ್ನು ಸೈನ್ಯವಾಗಿಸುವ ಈ ವಿದ್ಯೆ ತನಗೆ ಬೇಡವೆಂದು ಖುದ್ದಾಗಿ ಶಿವಪಾದನಿಗೆ ಹಿಂದಿರುಗಿಸಿದ್ದ. ಇಂಥ ವಾಮ ವಿದ್ಯೆಗಳನ್ನು ಆಸೆಬುರುಕುತನದಿಂದ ಕರಗತ ಮಾಡಿಕೊಂಡಿರುವಾತ ಕುರುಮುನಿ. ಆದರೆ ವಾಚಾಳಿಯಾದ ಆತ ಯಾರೆದುರಿಗೂ ಬಾಯಿ ಬಿಡದೆ ತನ್ನ ವಿದ್ಯೆಯ ಪರಿಣಾಮ ನೋಡಿ ಒಳಗೊಳಗೇ ನಗುತ್ತಿದ್ದ.

ಇನ್ನೂ ಒಂದು ಭಯ ಇದೆ. ಶಿಖರಸೂರ್ಯನೊಂದಿಗೆ ಬೆಟ್ಟ ಹತ್ತಿ ಬಂದ ನೂರಾಳ್ಪಡೆಯ ಸೈನಿಕರಲ್ಲ ಏನಾದರು? ಅವನು ಹಿಂದಿರುವಾಗ ಅವರೆಲ್ಲ ಮಾಯವಾಗಿದ್ದರೆಂದು ಜನಪದ ಲಾವಣಿ ಹೇಳುತ್ತದೆ. ಮಾಯವಾದರೆಂದರೆ ಏನರ್ಥ? ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕರೆ ನಮ್ಮ ಮುಂದಿನ ಚರಿತ್ರೆಗೆ ಸಕಾರಣವಾದ ತಿರುವು ಸಿಗುತ್ತದೆ. ಇಲ್ಲದಿದ್ದರೆ ಗೊಂದಲದಲ್ಲಿ ಮುಗಿಯಬೇಕಾಗುತ್ತದೆ. ಯಾಕಂತಿರೊ? ಧಾನ್ಯದಿಂದ ಚಿನ್ನ, ಮೇವಿನಿಂದ ಸೈನ್ಯ ಮಾಡುವ ವಿದ್ಯೆ ಹೇಳಿಕೊಟ್ಟ ನಾಗಾರ್ಜುನನೇ ಶಿಖರಸೂರ್ಯನಿಗೆ ಇನ್ನೂ ಒಂದು ಮಾತು ಹೇಳಿ ತಾಕೀತು ಮಾಡಿದ್ದ: “ನಿನ್ನ ಮೇವಿನ ಸೈನ್ಯಕ್ಕೆ ಮತ್ತು ಚಿನ್ನದ ಧಾನ್ಯಕ್ಕೆ ಯಾರಾದರೂ ತಿರುಮಂತ್ರ ಹಾಕಿದರೋ – ಆ ಕ್ಷಣವೇ – ನಿನ್ನೆಲ್ಲ ಸೃಷ್ಟಿ ಮೂಲರೂಪಕ್ಕೆ ತಿರುಗುತ್ತದೆ. ! ಹುಷಾರ್” ಶಿಖರಸೂರ್ಯನ ಹೃದಯ ಡಬ ಡಬ ಅಂತ ಹೊಡಕೊಂಡದ್ದು ಈ ಕಾರಣಕ್ಕೆ! ಅವನು ಬೆಟ್ಟದಿಂದ ಇಳಿಯುವಾಗಿ ಒಬ್ಬ ಸೈನಿಕನೂ ಇರಲಿಲ್ಲ! ಅದನ್ನಾತ ಗಮನಿಸಿಯೇ ಸುಕ್ರನ ಸಲಹೆಯನ್ನು ಒಪ್ಪಿ ಕುದುರೆ ಹತ್ತು ಓಡಿಸಿದ! ಅಲ್ಲಿಂದ ಪಾರಾದ ಮೇಲೂ ಆತನ ಮನಸ್ಸಿನಲ್ಲಿ ಚಿಂತೆ ಕೊರೆಯುತ್ತಿತ್ತು: “ಕನಕಪುರಿಯಲ್ಲೂ ಹೀಗೇ ಆಗಿದ್ದರೇನು ಗತಿ?” ಅವನ ದುರ್ದೈವಕ್ಕೆ ಅದು ಹಾಗೇ ಆಗಿತ್ತು!

* * *

ಅದಕ್ಕೇ ನಾವಿದನ್ನು ಶಿಖರಸೂರ್ಯ ಹೇಳಿದಂತೆ ಧರ್ಮಯುದ್ಧವೆನ್ನುವುದಿಲ್ಲ, ಇಬ್ಬರು ಮಂತ್ರವಾದಿಗಳ ಜಗಳ ಎಂದು ಹೇಳಬಹುದು. ಅದೇನೇ ಇರಲಿ, ಮಂತ್ರವಾದಿಗಳನ್ನು ನಂಬುವುದೂ ಬಿಡುವುದೂ ನಿಮ್ಮಿಷ್ಟ. ನಾವದನ್ನು ಆಧಾರವಾಗಿ ತಗೊಳ್ಳುವುದೂ ಇಲ್ಲ. ಚರ್ಮದ ತುಂಡುಗಳನ್ನೇ ನಾಣ್ಯದಂತೆ ಚಲಾವಣೆ ಮಾಡಬಹುದಾದರೆ ನಕಲಿ ಚಿನ್ನದ ನಾಣ್ಯವನ್ನೇಕೆ ಮಾಡಬಾರದು? “ಮೇವಿನ ಸೈನಿಕರನ್ನ ಯತ್ರಮಾನವರೆಂದು ಯಾಕೆ ತಿಳಿಯಬಾರದು? ಅದು ಆಯಾ ರಾಜನ ಸಾಮರ್ಥ್ಯ ಮತ್ತು ಪ್ರಭಾವಗಳನ್ನು ಅವಲಂಬಿಸಿರುತ್ತದೆಂದು ಇಂದಿನ ರಾಜಕೀಯವೇ ತೋರಿಸುತ್ತಿದೆ – ಅದೇನೇ ಇರಲಿ, ಇಂದಿನ ರಾಜಕಾರಣಕ್ಕೆ ಇದೊಂದು ಉತ್ತಮ ರೂಪಕವೆಂಬುದಂತೂ ನಿಜ.

* * *

ಅಪಾಯವಿಲ್ಲ ಎನ್ನುವವರೆಗೂ ಕುದುರೆ ಓಡಿಸಿ ಕೊನೆಗೊಂದು ನದಿಯ ದಂಡೆಯಲ್ಲಿ ನಿಲ್ಲಿಸಿ ತುಸುಹೊತ್ತು ಇಬ್ಬರೂ ಸುಧಾರಿಸಿಕೊಂಡರು. ಆಗಲೇ ಬೆಳಕು ಒಡೆದಿತ್ತು. ಪ್ರಧಾನಿ ಸುಕ್ರ – ರವಿಕೀರ್ತಿ ಅಪಾಯದ ಅಂಚಿನಲ್ಲಿರುವ ಸಂಗತಿಯನ್ನು ಶಿಖರಸೂರ್ಯನಿಗೆ ಹೇಳಿದ. “ಯಾರೊಬ್ಬರನ್ನೂ ಗುರುತಿಸುವುದಿಲ್ಲ. ಚಿಕ್ಕಮ್ಮಣ್ಣಿ ಮತ್ತು ತನ್ನ ತಾಯಿಯನ್ನು ಕೂಡ ಗುರುತಿಸಲಿಲ್ಲ ಒಡೆಯಾ! ಬಾಯಿ ತೆಗೆದಾಗೊಮ್ಮೆ “ವಾಸಂತೀ….. ಅಂತಾನೆ! ಇದ್ದಕ್ಕಿದ್ದಂತೆ ಲೆಕ್ಕ ಹಾಕುವ ಹಾಗೆ ಕೈ ಬೆರಳು ಮಡಿಸುತ್ತ “ನಮ್ಮಪ್ಪ ಚಕ್ರವರ್ತಿ. ನಮ್ಮದು ಚಕ್ರವರ್ತಿಗಳ ಮನೆತನ ವಾಸಂತೀ. ನೀವು ರಾಜಮನೆತನದವರಲ್ಲ… ಅಂತ ಬಡಬಡಿಸುತ್ತ ಯಾರನ್ನೋ ನೋಡಿ ಆಚಾರ್ಯರೇ ಅಂತ ಹಿಡಿದುಕೊಳ್ಳಲು ಓಡುತ್ತಾನೆ. ಸೇವಕರೆಲ್ಲ ಅವನನ್ನ ನೋಡಿ ಗೋಳೋ ಎಂದು ಅತ್ತರು ಒಡೆಯಾ”.

ಎಲ್ಲ ಎಲ್ಲದಕ್ಕೂ ಒಂದು ಅಂತ್ಯ ಸಮೀಪಿಸುತ್ತಿದೆ ಅನ್ನಿಸಿತು. ಎಲ್ಲ ಅಸ್ತವ್ಯಸ್ತಕ್ಕೆ, ಎಲ್ಲ ಹತಾಶೆ, ಕಳವಳಗಳಿಗೆ, ಎಲ್ಲ ನುಚ್ಚು ನೂರುಗಳಿಗೆ ಯಾವದೂ ಸರಿಯಿಲ್ಲ ಅಥವಾ ಎಲ್ಲವೂ ತಪ್ಪು ಎನ್ನುವಂತಿದ್ದ ಎಲ್ಲದಕ್ಕೆ “ತಾರ್ಕಿಕವಾದ ಅಥವಾ ತರ್ಕ ಮೀರಿದ – ಅಂತೂ ಒಂದು ಕೊನೆ ಬರುತ್ತಿದೆ” ಅನ್ನಿಸಿತು. ಈ ವಿಚಾರವನ್ನ ಎದುರಿಸಲಾರದೆ ಅವಸರದಿಂದ ಶಿಖರಸೂರ್ಯ ಕೇಳಿದ:

“ಹೇಳು ಈಗೆಲ್ಲಿದ್ದಾನವನು?”

“ಹದ್ದಿನಕೊಳ್ಳದ ಕಡೆಗೆ ಕುದುರೆ ಓಡಿಸಿದನು ಒಡೆಯಾ. ಸೊರಗಿ ಕಡ್ಡಿಯಾಗಿದ್ದಾನೆ. ಅದೆಲ್ಲಿಂದ ಶಕ್ತಿ ಬಂತೋ ನಾಲ್ಕಾರು ಜಟ್ಟಿಗಳಿಗೂ ಜಗ್ಗಲಿಲ್ಲ. ಕೊಸರಿಕೊಂಡು ಓಡಿದ. ಅವನನ್ನು ಹಿಡಿದಿಡಲು ನಮಗಾಗಲೇ ಇಲ್ಲ.”:

ತಕ್ಷಣ ಮಹಾರಾಜ ಎದ್ದು “ಏಳು” ಎಂದು ಹೇಳಿದವನೇ ಕುದುರೆ ಹತ್ತಿ ಓಡಿಸಿದ. ಹಿಂದಿನಿಂದ ಸುಕ್ರನೂ ಓಡಿಸಿದ.

ಇಬ್ಬರೂ ಹದ್ದಿನಕೊಳ್ಳದ ಅರಮನೆಗೆ ಬಂದಾಗ ನಾಕು ತಾಸು ಹೊತ್ತೇರಿತ್ತು. ಅರಮನೆಯ ಮುಂದೆ ಜನ ಸೇರಿದ್ದು. ನೋಡಿದ್ದೇ ಶಿಖರಸೂರ್ಯ ಎದೆ ಡವ ಡವ ಹೊಡೆದುಕೊಳ್ಳಲಾರಂಭಿಸಿತು. ಕುದುರೆ ಇಳಿದಾಗ ದೃಢವಾಗಿ ನಿಲ್ಲಲೂ ಸಾಧ್ಯವಾಗಷ್ಟು ಕಾಲು ಸೋತು ಬಂದವು. ಇವರನ್ನು ನೋಡಿ ಜನ ಇಬ್ಭಾಗವಾಗಿ ಹತ್ತಿರ ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟರು. ನಿಧಾನವಾಗಿ ನಡೆದು ಹೋಗಿ ನೋಡಿದರೆ ರವಿಕೀರ್ತಿ ಮತ್ತು ವಿದ್ಯುಲ್ಲತೆಯರ ಹೆಣಗಳನ್ನು ಆಜೂ ಬಾಜೂ ಮಲಗಿಸಿದ್ದರು! ವಿದ್ಯುಲ್ಲತೆಯ ಕೂದಲು ಕೆದರಿ ಹೆಣ ಒದ್ದೆ ಬಟ್ಟೆಯಲ್ಲಿತ್ತು. ಸತ್ತಿಲ್ಲ; ಮಲಗಿದ್ದಾಳೆ ಎನ್ನುವಂತಿತ್ತು ಶವ! ರವಿಕೀರ್ತಿಯ ಮೈಮೇಲೆ ಬಟ್ಟೆಯಿರಲಿಲ್ಲ. ಸೊಂಟದ ಮೇಲೊಂದು ಬಟ್ಟೆ ಚೆಲ್ಲಿದ್ದರು. ಮುಖ ಹಸಿರೇರಿತ್ತು. ಜಡೆಗಟ್ಟಿದ ಗಡ್ಡ ಕೂದಲು ಕೆದರಿತ್ತು. ದೇಹ ಕಡ್ಡಿಯಷ್ಟು ಕ್ಷೀಣವಾಗಿತ್ತು. ಎರಡೂ ಹೆಣಗಳ ಮಧ್ಯೆ ವಿದ್ಯುಲ್ಲತೆಯ ತಾಯಿ ಇನ್ನೊಂದು ಹೆಣದ ಹಾಗೆ ಕೂತಿದ್ದಳು. ಕಣ್ಣೀರು ಬತ್ತಿದ ಕಣ್ಣುಗಳಲ್ಲಿ ಬೆಳಕೆಂಬುದೇ ಇರಲಿಲ್ಲ. ಮುಖದ ಬಣ್ಣಕ್ಕೂ ಮಣ್ಣಿಗೂ ವ್ಯತ್ಯಾಸವಿರಲಿಲ್ಲವಾಗಿ ಮಣ್ಣಿನ ಮೂರ್ತಿಯಂತೆ ಕಾಣುತ್ತಿದ್ದಳು. ತಲೆಯ ಕೂದಲು ಜಡೆಗಟ್ಟಿ ಮುಖದಲ್ಲಿ ಚಿಕ್ಕ ಮೀಸೆ ಗಡ್ಡ ಬೆಳೆದಿದ್ದವು. ಎದೆ ಮೇಲೆ ಬಟ್ಟೆ ಇಲ್ಲದೆ ಅಡಿಕೆ ಗಾತ್ರದ ಮೊಲೆ ಜೋತುಬಿದ್ದಿದ್ದವು.

ಶಿಖರಸೂರ್ಯನನ್ನ ನೋಡಿ ಅರಿವಿಗೆ ಬಂದಳು. ಏನೂ ಉಳಿದಿಲ್ಲವೆಂಬಂತೆ ಎರಡೂ ಹಸ್ತಗಳನ್ನ ಅಲುಗುತ್ತ “ಓದರು ಒಂಟೋದರು!…” ಎಂದೊರಲುತ್ತ ಕೂತಳು. ಶಿಖರಸೂರ್ಯ ಬಾಯಿಂದ ಮಾತುಗಳೇ ಹೊರಡಲಿಲ್ಲ. ನೋಡ ನೋಡುತ್ತ ಹಾಗೇ ಕಟ್ಟೆಯ ಮೇಲೆ ಕುಸಿದು ಕೂತ. ಯಾರನ್ನೂ ಕಣ್ಣೆತ್ತಿ ನೋಡಲಿಲ್ಲ. ಒಂದೆರಡು ಸಣ್ಣ ಪುಟ್ಟ ಹಕ್ಕಿಗಳ ಸಣ್ಣ ಚಿಲಿಪಿಲಿ ಬಿಟ್ಟು ಉಳಿದಂತೆ ಸ್ಮಶಾನ ಮೌನ ಆವರಿಸಿತ್ತು. ಅವನನ್ನು ಮಾತಾಡಿಸುವ, ಸಮಾಧಾನ ಹೇಳುವ ಧೈರ್ಯ ಯಾರಿಗೂ ಆಗಲಿಲ್ಲ. ಮಹಾರಾಜನನ್ನ ಕಂಡು ಅನೇಕರಿಗೆ ದುಃಖ ಉಕ್ಕಿ ಬಂದರೂ ಮುಖ ಓರೆ ಮಾಡಿ ಕಣ್ಣೀರೊರೆಸಿಕೊಂಡರು. ಹೀಗೇ ತುಸು ಹೊತ್ತು ಕಳೆದ ಬಳಿಕ ಸುಕ್ರ ಮಹಾರಾಜನ ಬಳಿಗೆ ಹೋಗಿ “ಸಂಸ್ಕಾರ ಕಾರ್ಯ….” ಎಂದೇನೋ ಹೇಳ ಹೋಗಿ ಇನ್ನರ್ಧ ಮಾತು ನುಂಗಿ ಮಹಾರಾಜನ ಆಜ್ಞೆಗಾಗಿ ಕಾಯುತ್ತ ಕೂತ.

ಎಷ್ಟು ಹೊತ್ತು ಕಾದರೂ ಮಹಾರಾಜನ ಆಜ್ಞೆ ಬರಲೇ ಇಲ್ಲ;. ಆಮೇಲೆ ಬಂದರಾಯಿತೆಂದು ಎದ್ದ. ಹೊರಡುವಷ್ಟರಲ್ಲಿ ರಾಜ,

“ಸಂಸ್ಕಾರ ಕಾರ್ಯ ಜರುಗಲಿ” ಎಂದ.

“ಕನಕಪುರಿಯಿಂದ….”

“ಯಾರೂ ಬೇಡ. ಸುರುವಾಗಲಿ.”

ಎಂದ ಕೂಡಲೇ ಸುಕ್ರ ಸಂಸ್ಕಾರದ ಕಾರ್ಯಕ್ಕೆ ಜನಗಳನ್ನು ಕಳಿಸಿ ಮುದುಕಿಯ ಹತ್ತಿರ ಹೋಗಿ ಕೂತ.

ಮುದುಕಿ ಕೊಂಚ ಸುಧಾರಿಸಿಕೊಂಡಿದ್ದಳು. ಮುಖದಲ್ಲಿ ಜೀವ ಬಂದಿತ್ತು. ಸುಕ್ರ ಮೆಲ್ಲಗೆ, “ಏನಮ್ಮಾ ಇದೆಲ್ಲ? ಎಂಗಾಯ್ತು?” ಯಾಕಾಯ್ತು?” ಅಂದ. ಮುದುಕಿ ಇದಕ್ಕಾಗಿಯೇ ಕಾಯುತ್ತಿದ್ದಳೆಂಬಂತೆ ದೊಡ್ಡ ಹಾವ ಭಾವಗಳನ್ನು ಮಾಡುತ್ತ ಕೇಳಿದವರಿಗೆ ಮಗಳ ಮೇಲೆ ಕರುಣೆ ಬರುವಂತೆ, ಆದರೆ ಇದರಲ್ಲಿ ಮಗಳ ತಪ್ಪಿಲ್ಲವೆಂದು ಸ್ಪಷ್ಟವಾಗುವಂತೆ ಹೇಳಿದಳು:

“ಏನು ಹೇಳ್ಲಿ ನನ್ನಪ್ಪಾ. ದೊರೆಮಗ ಬೆಳಗ್ಗೆ ಒಬ್ಬನೇ ಬಂದ. ಮೈಮ್ಯಾಲೆ ಹರಕಂಗಿ ಹಾಕಿದ್ದ. ತುಂಡು ಬಟ್ಟೆ ಉಟ್ಟಿದ್ದ. ಗಡ್ಡ ಕೂದಲು ಒಂದಾಗಿ ಸೊರಗಿ ಕಡ್ಡಿ ಆಗಿದ್ದ. ಬಾಯಾರಿಕೆ ಅಂದ. ಇವನ್ಯಾರೋ ಹುಚ್ಚ ಬಂದ ಅಂತ ಹೆದರಿಕೊಂಡಿಬಿ. ಮಹಡಿಯಲ್ಲಿದ್ದ ಮಗಳು ಮಾತ್ರ ಇವನೇ ನ್ನ ಮಗ ರವಿಕೀರ್ತಿ ಇರಬಹುದೇ ಅಂತ ಸಂಶಯದಿಂದ ಕರೆಯ ಹೇಳಿದಳು.

ಮಗಳು ಮೂರು ಮೂರು ಮಾಳಿಗೆಯಿಂದಿಳಿದು ಬಂದು “ಬಾಯಾರಿಕೆಗೆ ಕಪಿಲೆಯ ಹಾಲು ತಗಂಬಾ” ಎಂದು ಹೇಳಿದಳು. “ಅವನು ಮೋರೆ ನಾನು, ನನ್ನ ಮೋರೆ ಆತ ನೋಡದ ಹಾಗೆ ನಡುಚಾವಡಿಯಲ್ಲಿ ಅಡ್ಡಗಂಬಳಿ ಹಿಡಿಯಿರಿ” ಎಂದಳು. ಆ ನುಡಿ ಕೇಳಿ ಹೆಣ್ಣಾಳ್ಗಳು ಕರಿಕಂಬಳಿಯ ಚಾವಡಿಗೆ ಅಡ್ಡ ಹಿಡಿದು ಆಚೆ ಬದಿಯಲ್ಲಿ ರವಿಕೀರ್ತಿಯ ನಿಲ್ಲಿಸಿ ಈಚೆ ಬದಿಗೆ ವಿದ್ಯುಲ್ಲತೆ ನಿಂತು “ಮ್ಯಾಲೆ ನೋಡಬೇಡಿ. ಕಂಬಳಿಯಾಚೆ ಕೊಡುವ ಹಾಲನ್ನು ಕೊಂಡು ಬಾಯಾಸರೆ ತೀರಿಸಿಕೊಳ್ಳಿರಿ” ಎಂದಳು. ಕೆಳಗೆ ನೋಡುತ್ತ ಹಾಲು ಕೊಂಬಾಗ ವಿದ್ಯುಲ್ಲತೆಯ ಹೂವಿನಂಥ ಪಾದಗಳ ಉಂಗುಟದ ಅಂದವ ಕಂಡು “ಆಹಾ ನನ್ನ ವಾಸಂತಿ!” ಅಂತ ಬೋಧೆ ತಪ್ಪಿ ಬಿದ್ದುಬಿಟ್ಟರು! ತಕ್ಷಣ ಅಡ್ಡ ಕಂಬಳಿ ಬಿಸಾಕಿ ನೋಡಿ, ಮಗ ರವಿಕೀರ್ತಿಯೇ ಹೌದೆಂದು ಖಾತ್ರಿಯಾಗಿ – ಮಗಳು ಜಯವುಳ್ಳ ದೇವರ ನೆನೆದು ಸೀರೆಸೆರಗಿನಿಂದ ಗಾಳಿ ಬೀಸಿ ಬೋಧಗೊಳಿಸಲು ಪ್ರಯತ್ನಸಿದಳು. ಮಗ ಬೋಧಗೊಂಡು ನಿಧಾನ ಕಣ್ಣು ತೆರೆದ. “ಗುರುತು ಸಿಕ್ಕಿತ ಮಗನೆ?” ಅಂದಳು. ಮಗ ಮಗಳನ್ನ ನೋಡಿ ನಕ್ಕರು. ಇವಳೂ ನಕ್ಕಳು. ಅದೇನು ದೆವ್ವ ಮೈ ಸೇರಿತೋ “ವಾಸಂತೀ ವಾಸಂತೀ” ಅಂತ ಹೇಳಿದವರೇ ಅವಳ ಮೇಲೆ ಹಾರಿ ಸೀರೆ ಸೆಳೆದರು! ಇವಳು ಕಿರಿಚಿ ಓಡಿದಳು. ಬೆನ್ನು ಹತ್ತಿದರು. ಸೀರೆ ಸೆಳೆದು ಮೊಗಸಾಲೆಯಲ್ಲಿ ಚೆಲ್ಲಿದರು. ಅಡ್ಡ ಬಂದ ಆಳನ್ನ ಒದ್ದು ತಳ್ಳಿದರು. ಮಗಳು ದನ ಒದರಿದ ಹಾಗೆ ಒದರಿದಳು, ಕಿರಿಚಿದಳು, ಕೂಗಿದ್ದಳು, ಬಾಯಿ ಬಾಯಿ ಬಡಕೊಂಡಳು, ಕೇಳಲಿಲ್ಲ. ಗಟ್ಟಿಯಾಗಿ ಹಿಡಿದುಕೊಂಡು ರಗತ ಬರೋ ಹಾಂಗೆ ತಲ್ಲ ತುಟಿ ಕಚ್ಚಿ ಹಾಂಗೇ ಉರುಳಿ ಬಿದ್ದ. ಇವಳೆದ್ದು ಕಿರುಚುತ್ತ ಓಡಿಹೋಗಿ ಬಾವಿ ಹಾರಿದಳೋ ಮಗಳು ಬಾವೀ ಹಾರಿದಳು..”

ಎಂದು ಹೇಳುತ್ತ ಮುದುಕಿ ಎದೆ ಎದೆ ಬಡಿದುಕೊಂಡು ಅಳತೊಡಗಿದಳು. ಯಾರೂ ಅವಳನ್ನು ಸಮಾಧಾನ ಮಾಡಲಿಲ್ಲ.

ಸಂಸ್ಕಾರದ ಸಮಯದಲ್ಲಿ ಇವರೇ ನಾಲ್ಕಾರು ಜನಗಳನ್ನ ಬಿಟ್ಟರೆ ಇನ್ಯಾರೂ ಇರಲಿಲ್ಲ. ಕನಕಪುರಿಗೆ ಸುದ್ದಿ ಹೋಗಿತ್ತು. ಯಾರೂ ಬರಲಿಲ್ಲ. ಮಗನಿಗೆ ಚಿತೆ ಇಟ್ಟಮೇಲೆ ಮಾತ್ರ ಮಹಾರಾಜ “ಮಗನೇ” ಎಂದು ಆಕಾಶದ ಕಡೆ ಮುಖ ಮಾಡಿ ಒಂದು ಸಲ ಅರಚಿ ಮೊಳಕಾಲ ಮೇಲಿ ಕುಸಿದ, ಅಷ್ಟೆ!

ಆಮೇಲೆ ಬಿಳಿಗಿರಿಯ ಇಂದ್ರ ನಿವಾಸದ ಅಟ್ಟದ ಕೋಣೆಯೇರಿ ಬಾಗಿಲಿಕ್ಕಿಕೊಂಡವನು ಮೂರು ಹಗಲು ಎರಡು ರಾತ್ರಿ ಹೊರ ಬರಲಿಲ್ಲ.

ಸುಕ್ರನಿಗೆ ಕನಕಪುರಿಯ ಕಾಳಜಿಯಾಗಿತ್ತು. ಮಹಾರಾಜನ ಕೋಣೆಯ ಹೊರಗಡೆ ನಿಂತು “ಕನಕಪುರಿಗೆ ಹೋಗಿ ನೋಡಿಕೊಂಡು ಬರಲಾ ಒಡೆಯಾ?” ಎಂದು ಕೇಳಿದ. ಒಳಗಡೆಯಿಂದ ಉತ್ತರ ಬರಲಿಲ್ಲ. ಎರಡು ದಿನ ಎರಡೆರಡು ಬಾರಿ ಕೇಳಿದ. ಉತ್ತರ ಬರಲಿಲ್ಲ. ಮೂರನೇ ದಿನದ ಕೊನೆಗೆ “ನಾನೂ ಬರ್ತಿನಿ, ನಡೆ” ಎಂದು ಮಹಾರಾಜನ ದನಿ ಕೇಳಿಸಿತು.

ಇಬ್ಬರೂ ಕನಕಪುರಿಗೆ ಬಂದರು ಅಲ್ಲೇನಿದೆ?