ಅಂದಿನಿಂದ ಶಿವಪಾದ ಶಿಸುಸಹಜ ಆನಂದದಿಂದ ಅರಳಿದ. ತಾಯಿಯಿಂದಿಗೆ ಸುದೀರ್ಘ ಸಂವಾದ ಮಾಡಿ ಬಂದಂತೆ ಅವನ ನಿರ್ಮಲ ಮುಖದಲ್ಲಿ ತೃಪ್ತಿಯ ಕಾಂತಿ ಹೊಳೆಯಿತು. ಅವನ ಕಣ್ಣುಗಳಲ್ಲಿ ತಿಳಿಯಾದ ಬೆಳಕು ಹೊಳೆದು ಕಣ್ಣಂಚಿನಲ್ಲಿ ಆನಂದಭಾಷ್ಪ ತುಳುಕಿದವು.
ಕ್ಷಣಕಾಲ ಬಿಡುವಿಲ್ಲದಂತೆ ಸಂದರ್ಶನದಲ್ಲಿ ತೊಡಗಿದ್ದರೂ ಪ್ರೆಶ್ನೆ ಕೇಳಿದ ಯಾರನ್ನೂ ಶಿವಪಾದ ನಿರಾಸೆಗೊಳಿಸಲಿಲ್ಲ. ಒಂದು ದಿನ ಮಲಗುವ ಮುನ್ನ ಕಳ್ಳ ಹೆಜ್ಜೆ ಇಡುತ್ತ ಚಂಡೀದಾಸ ಬಂದ. ಶಿವಪಾದನೇ ಮುಂದಾಗಿ “ಇನ್ನೂ ಮಲಗಲಿಲ್ಲವೇ ಮಗನೇ?”
“ಪ್ರಶ್ನೆ ಇತ್ತು”
“ಕೇಳು”
“ಗೌರಿ ನಿನಗೆ ಮೊದಲಿನಿಂದಲೂ ಗೊತ್ತ ಶಿವಪಾದವೆ?”
“ಹೌದು ಕಳೆದ ಜನ್ಮದಿಂದಲೂ ಗೊತ್ತು”
ಶಿವಪಾದನ ನೆನಪು ಮತ್ತು ಅನುಭವ ಅಪಾರವೆಂದು ಚಂಡೀದಾಸನಿಗೂ ಗೊತ್ತಿತ್ತು. ಅಲ್ಲದೆ ಶಿವಪಾದನೆಂದೂ ಸುಳ್ಳು ಹೇಳುವುದಿಲ್ಲವೆನ್ನುವುದೂ ಗೊತ್ತು. ಆದರೆ ಜನ್ಮಾಂತರದ ಉತ್ತರವನ್ನು ಚಂಡೀದಾಸ ನಿರೀಕ್ಷಿಸಿರಲಿಲ್ಲ. ಮುಂದೆ ಬಂದು ಶಿವಪಾದನ ಪಾದ ತಗೊಂಡು ಮೆಲ್ಲಗೆ ಹಿತಕರವಾಗಿ ತಿಕ್ಕುತ್ತ ಕೇಳಿದ:
“ಮೊನ್ನೆ ರಾತ್ರಿ ನೀನೇ ನೋಡಿದೆಯಲ್ಲ ಶಿವಪಾದವೇ ಗವಿಯಲ್ಲಿ ಕೊಳಲಿದ್ದುದು ನಮಗ್ಯಾರಿಗೂ ಗೊತ್ತಿರಲಿಲ್ಲ. ಗೌರಿ ಗವಿಯಲ್ಲಿದ್ದ ಕೊಳಲನ್ನು ತಂದು ಕೊಟ್ಟುದೇ ಆಯ್ತು. ನಿನ್ನಡಿ ಎಷ್ಟು ಅದ್ಭುತವಾಗಿ ಕೊಳಲು ನುಡಿಸಿದ! ನಿನ್ನಡಿ ಕೊಳಲು ಯಾವಾಗ ಕಲಿತ? ಅವನನ್ನು ಕೇಳಿದರೆ ನನಗೆ ಗೊತ್ತಿಲ್ಲ ಅಂತಾನೆ!”
“ನಿನಗೆ ಚಂದ್ರಮುತ್ತನ ವಿಷಯ ಗೊತ್ತೋ?”
“ಅದೇ ಕಲಾವಿದ ಚಂದಮುತ್ತಾ… ಯಕ್ಷಿಗಾಗಿ ಪ್ರಾಣಾರ್ಪಣೆ ಮಾಡಿದವ?”
“ಹೌದು ಅವನೇ ಇಂದಿನ ನಿನ್ನಡಿ. ಕಳೆದ ಜನ್ಮದಲ್ಲಿ ಚಂದಮುತ್ತನಾಗಿದ್ದ. ಗೌರಿ ಅವನ ಯಕ್ಷಿಯಾಗಿದ್ದಳು. ನಿನ್ನಡಿ ನುಡಿಸಿದನಲ್ಲ ಆ ಕೊಳಲು ಕೂಡ ಚಂದಮುತ್ತನದೇ. ನಾನೆ ತಂದು ಗವಿಯಲ್ಲಿಟ್ಟಿದ್ದೆ. ಅದೆಲ್ಲಿ ಇದೆ ಅಂತಲೇ ನನಗೆ ಮರೆವಾಗಿತ್ತು. ಗೌರಿಗೆ ಸಿಕ್ಕಿತು ನೋಡು. ಹುಣ್ಣಿಮೆ ಬೆಳ್ದಿಂಗಳಲ್ಲಿ ಇಬ್ಬರ ಜನ್ಮಾಂತರದ ನೆನಪು ಕೆರಳಿ ಒಂದಾದರು. ಇದೇ ಚಿನ್ನಮುತ್ತನೇ ಹಿಂದೆ ಚಕೋರಿ ಚಂದಮುತ್ತರಿಗೆ ತೊಂದರೆ ಕೊಟ್ಟ. ಈ ಜನ್ಮದಲ್ಲಿ ಅವನೇ ಅವಳ ತಂದೆಯಾಗಿ ವಿಷವಿಕ್ಕಿದ. ಈ ಸಲ ಕಾಪಾಡಿದವನೂ ಚಂದಮುತ್ತನೇ, ಅಂದರೆ ನಿನ್ನಡಿಯೇ.”
“ಚಂದಮುತ್ತ ಪರಿಪೂರ್ಣತೆಗೆ ಸಂದನೆಂದು ಕೇಳಿದ್ದೆನು, ಅಂಥವನು ಮತ್ತೆ ಹುಟ್ಟಿ ಬಂದನೇ?”
“ಯಕ್ಷಿರೂಪದ ಸಂಗೀತವನ್ನು ಮುಕ್ತಗೊಳಿಸಿದ್ದು ಸಾಧನೆಯಾದರೂ ಅಕಾಲ ಮರಣದಿಂದ ಅವನ ಪೂರ್ಣತೆಯ ಹಂಬಲ ಅಪೂರ್ಣವಾಗುಳಿಯಿತು. ಈ ಜನ್ಮದಲ್ಲಿ ರಾಜರ್ಷಿಯಾಗಿ ಅದನ್ನ ಸಾಧಿಸಬೇಕೆಂದು ಇಬ್ಬರೂ ಬಂದಿದ್ದಾರೆ. ತೃಪ್ತಿಯಾಯಿತೆ ಮಗನೆ?”
“ಆಯ್ತು ನನ್ನಯ್ಯ”
“ನಾನೂ ನಿನಗೊಂದು ಮಾತು ಹೇಳಲಿಕ್ಕಿದೆ.”
“ಅಪ್ಪಣೆ ಕೊಡು ಶಿವಪಾದವೇ.”
“ನೀನಿನ್ನು ಊರುರು ಅಲೆದಾಡುವುದು ಬಿಟ್ಟು ಶಿವಾಪುರಕ್ಕೆ ಅಂಟಿಕೋ. ಮೂವರು ಸೇರೆ ಮುರಿದದ್ದನ್ನ ಕಟ್ಟಬೇಕು.
“ಆಯ್ತು ನನ್ನಯ್ಯ”
ಆಮೇಲೆ ‘ಮುರಿದದ್ದನ್ನು ಕಟ್ಟಬೇಕು’ ಅಂದನಲ್ಲ ಯಾಕೆ? ಎಂದು ಯೋಚಿಸಿ ಕೇಳಬೇಕೆಂಬಷ್ಟರಲ್ಲಿ ಶಿವಪಾದ ನಿದ್ದೆ ಮಾಡುತ್ತಿದ್ದ.
ಮಾರನೇ ದಿನ ಗೌರಿ ಕೇಳಿದಳು:
“ಮಾನವ ಜನ್ಮ ದೊಡ್ಡದೆಂದು ಆದ್ಯರು ಹೇಳಿದ್ದಾರಲ್ಲ ಯಾಕೆ?”
“ಯಾಕಂತಿಯೋ? ಮನುಷ್ಯ ಅಪೂರ್ಣ ದೇವರ ಮುಂದೆ ಅದೇ ಅವನ ಬಲ. ಅದಕ್ಕೆ ಅವನಿಗೆ ಅಹಂಕಾರವಿದೆ. ಅಪೂರ್ಣನಾದ್ದರಿಂದಲೇ ಮನುಷ್ಯನಿಗೆ ಹುಟ್ಟು, ಬೆಳವಣಿಗೆ, ಸಾವುಗಳಿವೆ. ಅದೇ ಅವನ ಚಲನಶೀಲತೆಯ ಗುಟ್ಟು. ಅದಕ್ಕೆ ಅವನು ಜಂಗಮ. ದೇವರು ಜಂಗಮರಲ್ಲ. ಇಪ್ಪತ್ತೈದು ವರ್ಷಗಳಾದ ಮೇಲೆ ಅವರಿಗೆ ಬೆಳವಣಿಗೆ ಇಲ್ಲ. ಸಾವಂತೂ ಮೊದಲೇ ಇಲ್ಲ. ಮನುಷ್ಯ ಕೇಳದ ಹೊರತು ಅವನಿಗೆ ಏನು ಕೊಡಬೇಕೆಂದೂ ಹೊಳೆಯದಷ್ಟು ದಡ್ಡರವರು.
ಅದಕ್ಕೆ ಹೇಳುವುದಮ್ಮಾ, ಮನುಷ್ಯ ಜೀವನಕ್ಕೆ ಸಮಾನವಾದದ್ದು ಯಾವುದು ಇಲ್ಲ;- ದೇವತ್ವ ಕೂಡ!
ತಾಯಿ ಹಾಗಲ್ಲ ನೋಡು. ತಾಯಿ ಆದಿಮಾಯೆ. ಆದ್ದರಿಂದ ಸದಾ ಚಲನಶೀಲೆ. ಅವಳಿಗೆ ನಿತ್ಯವೂ ಹೆರಿಗೆ. ದಿನಾ ಹೆರಬೇಕು, ದಿನಾ ಬೆಳಸಬೇಕು; ಅವಳು ಜಂಗಮರ ಜಂಗಮ. ಮಕ್ಕಳು ಕೇಳೋತನಕ ಅವಳು ಸುಮ್ಮನಿರುವುದಿಲ್ಲ. ಅವಳೇ ತಿಳಿದು ಕೊಟ್ಟು ಬಿಡುತ್ತಾಳೆ. ತಾಯಿಗೂ ಮಕ್ಕಳಿಗೂ ಇರೋದು ಆಮೆ ಮತ್ತು ಮರಿಯ ಸಂಬಂಧ.”
“ಅಂದರೆ?”
“ಮರಿ ಆಮೆಗೆ ತಾನು ಹಸಿದಿದ್ದೇನೆ ಎಂದು ಹೇಳಲು ಬರುವುದಿಲ್ಲ. ಹಸಿದೊಡನೆ ತಾಯಿಆಮೆಯ ಕಡೆಗೆ ನೋಡುತ್ತದೆ. ತಾಯಿ ಆಮೆಗೆ ಅದು ಗೊತ್ತಾಗಿ “ಅಯ್ಯೋ ನನ್ನ ಮಗು ಹಸಿಯಿತಲ್ಲಾ!” ಎಂದು ಕರುಣೆಯಿದ, ಅಕ್ಕರೆಯಿಂದ, ಅಂತಃಕರಣದಿಂದ ಮರಿಯ ಕಡೆಗೆ ನೋಡುತ್ತದೆ. ಆ ಕ್ಷಣವೆ ಮರಿಯ ಹೊಟ್ಟೆ ತುಂಬುತ್ತದೆ; ಅಷ್ಟೆ !”
“ಅಂದರೆ … ಪ್ರತ್ಯಕ್ಷ ಮೂಲೆಯೊಡುವುದಿಲ್ಲ ಅಂತಲ ನೀನು ಹೇಳೋದು?”
“ಹೌದು!”
“ಅದು ಹೇಗೆ ಸಾಧ್ಯ?”
“ನನ್ನ ಮುಂದೇ ಕೂತಿದ್ದೀಯಲ್ಲಮ್ಮಾ ತಾಯಿ! ನನಗೆ ಇದೇ ಹದದ, ಇಂಥದೇ ರುಚಿಯ, ಇಷ್ಟೇ ಪ್ರಮಾಣದಲ್ಲಿ ಕಾಯ್ದಾರಿದ ಹಾಲು ಬೇಕೆಂದು ನಿನಗೆ ಯಾರು ಹೇಳಿದರು?”
“ಯಾರು ಹೇಳಲಿಲ್ಲ.”
“ಮತ್ತೆ ಹ್ಯಾಗೆ ತಂದೆ?”
ಗೌರಿ ತಾನ್ಯಾಕೆ ಅಂಥ ಹಾಲು ತಂದುಕೊಟ್ಟೆ? ಎಂದು ಯೋಚನೆ ಮಾಡಿ ಮಾಡಿ ನಿರುತ್ತರಳಾಗಿ ಶಿವಪಾದನ ಕಡೆಗೆ ನೋಡಿದಳು. ಶಿವಪಾದನೂ ನಗುತ್ತ ಇವಳನ್ನೇ ನೋಡುತ್ತಿದ್ದ.
“ನನಗೆ ಗೊತ್ತಿಲ್ಲ” ಅಂದಳು ಗೌರಿ.
“ಇದೆ ಆಮೆ ಮತ್ತು ಮರಿಯ ಸಂಬಂಧ. ನನಗೆ ಈಗ ಆರು ತಿಂಗಳಿಂದ ಇಲ್ಲದ ಹಸಿವೆ ಈ ದಿನ ಆಯಿತು. ನನಗೆ ಅಂಥ ಹಾಲು ಬೇಕಾಯಿತು. ನಾನು ಹೇಳಲಿಲ್ಲ. ಆದರೂ ನೀನು ಕೇಳಿಸಿಕೊಂಡು ಹಾಲನ್ನು ತಂದುಕೊಟ್ಟೆ. ತಾಯಿ ಮಕ್ಕಳ ಆಸೆ ಪೂರೈಸೋದು ಹೀಗೇನೇ…”
ಇನ್ನೂ ಇಂಥ ಅನೇಕ ವಿಷಯ ಹೇಳಿಕೊಡುವ ತಾತ ನಿರ್ವಾಣವಾಗುವನಲ್ಲ ಎಂದು ಗೌರಿ ಮೌನಿಯಾದಳು. ಕೊನೆಗೆ ತಾತ ತನ್ನ ಮುಖವನ್ನೇ ನೋಡುತ್ತಿರುವುದನ್ನು ಗಮನಿಸಿ ಅಳುವುಕ್ಕಿ ಬಿಕ್ಕುತ್ತ ಕೇಳಿದಳು:
“ನಿರ್ವಾಣವೆಂದರೆ ಎನ್ ತಾತಾ?”
“ನಿರ್ವಾಣವೆಣ್ಣುವುದು ಪರಮಾನಂದದ ಸ್ಥಿತಿ. ತಾಯಿ ಕರುಣಿಸಿದ್ದಾಳೆ. ನಾನು ಆ ಸ್ಥಿತಿಗೆ ಹೋಗಬೇಕೆಂದರೆ ನೀನು ಅಳುತ್ತೀಯಲ್ಲ ಕೂಸು?”
“ನಾನು ಬಂದು ವಾರ ಕೂಡ ಕಳೆದಿಲ್ಲ: ಆಗಲೇ ನಿರ್ವಾಣವಾಗಬೇಕಂತೀಯಲ್ಲ, ಅದಕ್ಕೇ”
“ಕೂಸು, ನಾನು ಒಂದು ವರ್ಷದ ಹಿಂದೆಯೇ ನಿರ್ವಾಣವಾಗಬೇಕೆಂದಿದ್ದೆ. ತಾಯಿ ನಿನ್ನ ಮತ್ತು ನಿನ್ನಡಿಯನ್ನ ಕೂಡಿಸಿ ಬಾ ಅಂದಳು. ಮಂಗಲವಾಯ್ತು. ಹೊರಟೆ. ಅಂದರೆ ನಿನಗಾಗಿ ನಾನು ಒಂದು ವರ್ಷ ಕಾಲ ತಡಮಾಡಿದೆ. ಸಾಲದೆ?”
ಈ ಮಾತನ್ನು ಹೇಳುತ್ತಿರುವಂತೆ ನಿನ್ನಡಿ ಬಂದ. ಶಿವಪಾದ ಕೈ ಸನ್ನೆ ಮಾಡಿ ಕೂರಲು ಸೂಚಿಸಿದ. ನಿನ್ನಡಿ ಕೂತು ಶಿವಪಾದನ ಪಾದದ ಮೇಲೆ ಕೈಯಿಟ್ಟು ಮೆಲ್ಲಗೆ ಕೈಯಾಡಿಸುತ್ತ ಗೌರಿಯ ಕಡೆಗೆ ನೋಡಿದ. ಜವಾಬ್ದಾರಿಗಳಿಂದ ದಣಿದಿದ್ದರು ಇನ್ನು ಉತ್ಸಾಹ ಚಿಮ್ಮುತ್ತಿತ್ತು. ಗೌರಿ ಅಳುತ್ತಿರುವುದನ್ನು ಗಮನಿಸಿ;
“ನೀನು ಹೀಗೆ ಅಳುತ್ತ ಕೂತರೆ ಬಂದ ಅತಿಥಿಗಳನ್ನು ನೋಡೋರ್ಯಾರು ಗೌರಿ?” ಅಂದ.
ಮಾಡಿದ ತಪ್ಪಿನ ಅರಿವಾಗಿ ಗೌರಿಯ ಮುಖ ನಾಚಿಕೆಯಿಂದ ಕಪ್ಪಾಯಿತು. ಉಕ್ಕಿ ಬರುತ್ತಿದ್ದ ಕಣ್ಣೀರನ್ನು ನಿಯಂತ್ರಿಸಿಕೊಂಡು ಇನ್ನೊಂದೇ ಮಾತು:
“ನೀರ್ವಾಣವಾದ ಮೇಲೆ ನೀನು ಏನಾಗುತ್ತಿ ತಾತಾ?” ಎಂದಳು.
“ಇಲ್ಲಿರುವ ಎಲ್ಲ ನೆನಪುಗಳಲ್ಲಿ ಸೇರಿಕೊಳುತ್ತೇನೆ. ನಾನಿನ್ನು ಮೆಲೆ ಅಮ್ಮನ ಗವಿಯಾಗುತ್ತೇನೆ. ಬೆಟ್ಟವಾಗುತ್ತೇನೆ. ಚಂದ್ರಾವತಿಯಲ್ಲಿ ಚಿಗುರಿ ಹೂ ಬಿಡುತ್ತೇನೆ. ಗಾಳಿಯಾಗಿ ನಿನ್ನ ಮುಂಗುರುಳು ನೇವರಿಸಿ ಬೆಳಗುತ್ತೇನೆ. ಶಿವಾಪುರವಾಗುತ್ತೇನೆ. ಶಿವಾಪುರದ ಮಕ್ಕಳಾಡುವ ಚಿನ್ನಾಟಕ್ಕೆ ಮಣ್ಣಾಗುತ್ತೇನೆ.”
“ನೀನು ಏನಾಗಬೇಕೂಂತ ನನಗೊಂದಾಸೆಯಿದೆ.”
“ಅದೂ ಈಡೇರುತ್ತದೆ”.
“ಅದೇನೆಂದು ನಾನಿನ್ನೂ ಹೇಳಲಿಲ್ಲ.”
“ಆಮೆ ಮತ್ತು ಮರಿ ಸಂಬಂಧ ಗೊತ್ತಲ್ಲ? ನಿನ್ನಾಸೆ ಅಮ್ಮನಿಗೆ ಅರ್ಥವಾಗಿ ಆಶೀರ್ವಾದ ಮಾಡಿಬಿಟ್ಟಳು!”
ಗೌರಿಯ ಕಣ್ಣಲ್ಲಿ ಫಳ್ಳನೆ ಬೆಳಕು ಮಿಂಚಿ ಭಯಭಕ್ತಿ ಪ್ರೀತಿಯಿಂದ ಶಿವಪಾದನ ಪಾದ ಪಡಕೊಂಡು ಪಾದಧೂಳಿಯನ್ನು ತಲೆಗೆ ಹಚ್ಚಿಕೊಂಡು ಅತಿಥಿಗಳನ್ನು ನೋಡಲು ಹೊರಟಳು.
ನಿನ್ನಡಿ ಕೇಳದಿದ್ದರೂ ತಾನೊಂದು ಮಾತನ್ನು ಹೇಳುವ ಅಗತ್ಯವಿದೆ ಎನ್ನಿಸಿ ಶಿವಪಾದ ಹೇಳಿದ:
“ಮಗನೇ ಶಿವಪುರವನ್ನ ನಾವ್ಯಾಕೆ ಕಟ್ಟಿದಿವಿ? ಅದು ಶಾಶ್ವತವಾಗಿ ಇರಲಿ ಅಂತಲ? ಆಕಾರಗೊಂಡುದಕ್ಕೆಲ್ಲಾ ಅಳಿವಿರುವಾಗ ಶಿವಪುರವಷ್ಟೇ ಶಾಶ್ವತವಾಗಿ ಹೆಂಗುಳಿದೀತು? ನಾವೆಲ್ಲ ಶಿವಾಪುರ ಶಿವಾಪುರ ಅಂತ ಬಡಕೊಂಡದ್ದು ಒಂದು ದಿನ ಅದೂ ಮಣ್ಣಾಗೋದೇ! ಸ್ವತಃ ಅಮ್ಮನೇ ತನ್ನ ಹೆಸರು ತಾನೇ ಬದಲಿಸಿಕೊಂಡು ಇನ್ನೊಂದಾಗ್ತಾಳಂತೆ! ಇನ್ನು ಶಿವಾಪುರವ ಬಿಟ್ಟಾಳೆಯೇ?
ಆದರೂ ಶಿವಾಪುರ ಕಟ್ಟತೀವಿ ಯಾಕ್ಹೇಳು?
ಯಾಕಂದರ ಅವ್ವ ಹೇಳತಾಳ: “ಮಕ್ಕಳ್ರಾ ಶಿವಾಪುರ ಕಟ್ಟಿರಿ” ಅಂತ. ಆಕೀನs ಹೇಳದ ಮ್ಯಾಲ ನಮ್ಮದೇನು?
ನಾವಷ್ಟೇ ದೊಡ್ಡವರಾದರೂ ತಾಯಿಗೆ ಮಕ್ಕಳೇ! ಮಕ್ಕಳಿಗೆ ಆಟ ಮಾತ್ರ ಗೊತ್ತು. ಹಿಂದೆ ಮುಂದೆ ಮತ್ತೊಂದು ಗೊತ್ತಿಲ್ಲ. ಹಾಂಗ ಆಟ ಆಡಿಕೋಂತ ಕಟ್ಟತೀವಿ. ಕಟ್ಟಿದ ಮ್ಯಾಲ ಮುರಿದು ಬೀಳತೈತಿ. ತಪ್ಪ ತಿದ್ದಿಕೊಂಡ ಮತ್ತ ಕಟ್ಟತೀವಿ.
ಹಿಂಗs ಕಟ್ಟುತ್ತಾ, ತಿದ್ದಿಕೊಳ್ಳುತ್ತಾ, ಕೈಲಾಸ ಕಟ್ಟುತ್ತಿದ್ದೇವಂತೆ ನಂಬುತ್ತಾ ಕಟ್ಟತೀವಿ, ಬೀಳತೈತಿ, ಕಟ್ಟತೀವಿ.
ಕಟ್ಟೋದು ನಮ್ಮ ಕರ್ಮ. ಅದಕ್ಕs ನಮಗ ದಣಿವಿಲ್ಲ. ಮಕ್ಕಳಾಟ ಎಷ್ಟು ನೋಡಿದರೂ ಅವ್ವಗ ದಣಿವಿಲ್ಲ.
ಮಗನೇ,-
ಇದು ತಾಯಿಯ ಪೀಠ
ರಾಜ್ಯಗಳನ್ನಲ್ಲ, ಹೃದಯಗಳನ್ನು ಗೆದ್ದುಕೋ.
ಗವಿಯಲ್ಲಿ ಬೇಕಾದಷ್ಟು ಉಪಯುಕ್ತವಾದ ನೆನಪುಗಳಿವೆ, ಉಪಯೋಗಿಸಿಕೊ.
ಚಿನ್ನದ ಆರಾಧಕರಿಗೆ, ಪಿತೃಸಂಸ್ಕೃತಿಯವರಿಗೆ ಪ್ರೀತಿ ಗೊತ್ತಿರುವುದಿಲ್ಲ.
ಶಿವಾಪುರ ಗಟ್ಟಿ ಇದ್ದರ ಇರಲಿ, ಕನಕಪುರಿ ಬಿದ್ದರೂ ಕಟ್ಟು, ಜಗತ್ತೆಲ್ಲಾ ಶಿವಾಪುರ ಅಂತ ಕಟ್ಟಬೇಕಪಾ ಮಗನs ಅಂತಾಳ ತಾಯಿ. ಅದು ನಂದಲ್ಲ, ಅದನ್ಯಾಕ ಕಟ್ಟಬೇಕಂತ ವಿಚಾರ ಮಾಡಬಾರದು.
ಎಲ್ಲಿ ಏನು ಕಟ್ಟಿದರೂ ಶಿವಾಪುರವೆಂದು ಕಟ್ಟು.
ಕಟ್ಟು! ಕಟ್ಟಿದ್ದೆಲ್ಲಾ ಶಿವಾಪುರವೆಂದು ಕಟ್ಟು.”
* * *
ಯಾರಿಗೂ ಹೇಳಿ ಕಳಸಿದಿದ್ದರೂ ನಿರ್ವಾಣ ಹೊಂದುವ ಸುದ್ದಿ ಸುತ್ತ ಹರಡಿ ಒಂದು ಕಡಿಮೆ ನಲವತ್ತು ಹಟ್ಟಿಗಳ ಭಕ್ತಾದಿಗಳು, ಗುಡ್ಡರು ಬಂದು ಶಿವಪಾದನ ಪಾದ ಪಡಕೊಂಡರು. ದೂರದ ಛಪ್ಪನ್ನೈವತ್ತಾರು ದೇಶಗಳಲ್ಲಿದ್ದ ಅವನ ಶಿಷ್ಯರು, ತಪಸ್ವಿಗಳು ತಾಂತ್ರಿಕ ಸಿದ್ಧರು, ಸಂತರು, ಪಂಡಿತರು, ರಾಜರು, ಮಾಂಡಳಿಕ ಮನ್ನೆಯರು ಗಣ್ಯಾತಿಗಣ್ಯರು ಬಂದು ದರ್ಶನಾಶೀರ್ವಾದ ಪಡೆದರು. ಬಂದವರೆಷ್ಟೋ ಮಂದಿ ಆಶೀರ್ವಾದ ಪಡೆದು ಹೋದರೂ ನಿರ್ವಾಣವಾಗುವ ದಿನ ಬೆಟ್ಟ ತುಂಬಿ ತುಳುಕುವಷ್ಟು ಜನ ಗವಿಯ ಮುಂದೆ ಸೇರಿದ್ದರು.
ಅತಿಥಿಗಳ ಆತಿಥ್ಯದ ಜವಾಬ್ದಾರಿ ಬೆಳ್ಳಿ ಗೌರಿಯರ ನೇತೃತ್ವದ ಶಿವಾಪುರದ ಮಹಿಳೆಯರ ಮೇಲಿತ್ತು. ರಾಜ ಮಹಾರಜರು ಬುಡಕಟ್ಟಿನವರು ಅವರಿವರೆನ್ನದೆ ಎಲ್ಲರನ್ನು ಸಮನಾದ ಆದರ ಔದಾರ್ಯಗಳಿಂದ ಸತ್ಕರಿಸಿದರು. ಗೌರಿಯಂತೂ ಅಹ್ಲಾದಕರ ಮಂದಹಾಸ ಬೀರುತ್ತ, ಹಗುರ ಹೆಜ್ಜೆ ಹಾಕುತ್ತ ಗೌರವಪೂರ್ವಕ ಅನ್ನ ನೀಡುತ್ತ ನಡೆದರೆ ಸಾಕ್ಷಾತ್ ಅನ್ನಪೂರ್ಣೆಯಂತೆ ಕಂಗೊಳಿಸುತ್ತಿದ್ದಳು. ಮಾತಿಲ್ಲದೆ ಸೂಕ್ಷ್ಮ ಭಾವನೆಗಳನ್ನ ತಿಳಿಸುವ ವಿಶಿಷ್ಟ ಶಕ್ತಿ ಅವಳ ಮುಖದಲ್ಲಿತ್ತು. ಅವಳ ದೊಡ್ಡ ಕಣ್ಣುಗಳಲ್ಲಿಯೂ ನೋಡಿದವರಲ್ಲಿ ಆತ್ಮೀಯತೆ ಮತ್ತು ಗೌರವ ಭಾವನೆಯನ್ನು ಹೆಚ್ಚಿಸುವ ಗುಣವಿತ್ತು. ಊಟ ಮಾಡಿದವರು ಗೌರಿಯನ್ನು ಎಲ್ಲಿ ಕಂಡರೂ ತಕ್ಷಣ ಸರಿದು ಅವಳು ದಾಟಿ ಹೋಗುವತನಕ ನಿಂತು ಗೌರವ ಸೂಚಿಸುತ್ತಿದ್ದರು. ಇದನ್ನು ಕಂಡಾಗಂತೂ ಬೆಳ್ಳಿ ಅಭಿಮಾನದಿಂದ “ಎಷ್ಟಂದರೂ ನನ್ನ ಸೊಸೆ ರಾಜಕುಮಾರಿ ಅಲ್ಲವೆ?” ಎಂದು ಹೆಮ್ಮೆ ಪಡುತ್ತಿದ್ದಳು.
ಶಿವನ ಸೋಮವಾರ ಬ್ರಾಹ್ಮೀ ಮುಹೂರ್ತ ಬಂತೆಂದಾಗ ಕುರುಮುನಿ ಚಂಡೀದಾಸರು ದಾರಿ ಮಾಡಿಕೊಡುತ್ತ ಗವಿಯೊಳಗಿಂದ ಮುಂದೆ ಮುಂದೆ ಬಂದರು. ಹಿಂದಿನಿಂದ ನಿನ್ನಡಿಯ ಭುಜದ ಮೇಲೆ ಕೈಯೂರಿಕೊಂಡು ಶಿವಪಾದ ಹೊರಗೆ ಬಂದ. ಕೂಡಲೇ ಭಕ್ತರು ಅಂಥ ಬೆಳಗಿನ ಹೊತ್ತಿನಲ್ಲೂ ಬೆಟ್ಟ ನಡುಗುವ ಹಾಗೆ “ಅಮ್ಮ ನಿನ್ನ ಪಾದಕ್ಕುಧೋ” ಎಂದು “ಶಿವಪಾದಾ ಚಾಂಗಭಲಾ” ಎಂದು ಘೋಷವಾಕ್ಯಗಳನ್ನು ಮೊಳಗಿಸಿದರು. ಶಿವಪಾದ ಹೊಳೆಯುವ ಕಂಗಳಿಂದ ಜನರನ್ನು ನೋಡುತ್ತ ಆನಂದತುಂದಿಲನಾಗಿ ಬಲಗೈ ಎತ್ತಿ ಆಶಿರ್ವಾದ ಮಾಡಿದ. ಅಡ್ಡ ಬೀಳುವ, ಪಾದ ಮುಟ್ಟುವ ಜನಗಳ ದಟ್ಟಣೆಯಿಂದ ಬರುವುದು ಕಷ್ಟವಾದರೂ ಕುರುಮುನಿ ನಿಷ್ಟುರವಾಗಿ ದಾರಿ ಮಾಡಿಕೊಟ್ಟುದರಿಂದ ಮರದ ಕಟ್ಟೆಗೆ ಬಂದು ಹತ್ತಿ ನಿಂತ. ಆಶೀರ್ವಾದ ಮಾಡುವಂತೆ ಎರಡೂ ಕೈ ಮ್ಯಾಲೆತ್ತಿ ತುಟಿ ಅಲುಗಿದೊಡನೆ ಜನಸಾಗರ ನಿಶ್ಯಬ್ದವಾಯಿತು.
ಶಿವಪಾದ ಶಾಂತವಾಗಿ ಸ್ಫುಟವಾಗಿ ಕರುಣೆಯಿಂದ ಹೇಳಿದ:
ತಾಯಿಯೇ ಅಂತಿಮ ಸತ್ಯ.
ಎಷ್ಟು ಜನ ತಾಯಂದಿರೋ ಅಷ್ಟು ಸತ್ಯಗಳು
ಎಲ್ಲಾ ಸತ್ಯಗಳನ್ನು ಗೌರವಿಸುವ ನಿನ್ನ ತಾಯಿಯನ್ನು ಆರಾಧಿಸು.
ಎಷ್ಟು ಜೀವರಾಶಿಗಳೋ
ಅಷ್ಟೊಂದು ತಾಯಂದಿರು.
ಎಂಬತ್ತನಾಲ್ಕು ಲಕ್ಷ ತಾಯಂದಿರನ್ನು ಗೌರವಿಸುವ ನಿನ್ನ ತಾಯಿಯನ್ನು ಆರಾಧಿಸು.
ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸು
ಮೂವತ್ತಮೂರು ಕೋಟಿ ನಂಬಿಕೆಗಳನ್ನು ಸಾಕಿದ ಸೀಮೆಯಿದು.
ತಾಯಿಗೆ ಭಕ್ತಿ ಇಷ್ಟ.
ನವವಿಧ ಭಕ್ತಿಯಿಂದ ತಾಯಿಯನ್ನು ಆರಾಧಿಸು.
ಇಷ್ಟು ಹೇಳಿ ಸುತ್ತಲೂ ಎತ್ತಿದ ಕೈಗಳಿಂದ ಹರಸಿ ಹಾಗೆಯೇ ಗವಿಯ ಕಡೆಗೆ ತಿರುಗಿದ. ನಿನ್ನಡಿ ತಕ್ಷಣ ನಿಂತು ಕೈ ಊರಲು ಹೆಗಲು ಕೊಟ್ಟ. ಕುರುಮುನಿ, ಚಂಡೀದಾಸರು ದಾರಿ ಮಾಡುತ್ತ ಪಾದ ಪಡಕೊಳ್ಳುವ ಜನರನ್ನು ನಿಯಂತ್ರಿಸುತ್ತ ಮುಂದೆ ಮುಂದೆ ನಡೆದರು. ನಿನ್ನಡಿಯ ಮೇಲೆ ಕೈಯೂರಿಕೊಂಡು ಶಿವಪಾದ ಗವಿಯೊಳಕ್ಕೆ ಹೋದ. ಜನ ಘೋಷವಾಕ್ಯಗಳ ಘೋಷಿಸುತ್ತಲೇ ಇದ್ದರು.
ಗವಿಯೊಳಕ್ಕೆ ಪ್ರವೇಶಿಸಿದೊಡನೆ ಚಂಡೀದಾಸ ಕಲ್ಲು ಸರಿಸಿ ಗವಿಯ ಬಾಗಿಲು ಮುಚ್ಚಿದ. ಒಳಗಿನ ಅಂತರಂಗದ ಮೆಟ್ಟಿಲುಗಳನ್ನು ನಿನ್ನಡಿಯೇ ಮುಂದಾಗಿ ಹತ್ತಿ ಬಾಗಿಲಂತಿದ್ದ ಕಲ್ಲು ಸರಿಸಿದ. ಆಮೇಲೆ ಶಿವಪಾದನನ್ನು ಕರೆ ತರಲು ಕೆಳಗಿಳಿಯಬೇಕೆಂದಾಗ ಶಿವಪಾದನಾಗಲೇ ಮೆಲ್ಲಗೆ ಹತ್ತಿ ಬಾಗಿಲ ಬಳಿ ಬಂದಿದ್ದ!
ಅಂತರಂಗದಲ್ಲಿ ತುಪ್ಪದ ಸೊಡರಿತ್ತು. ಶಿವಪಾದ ನಿಧಾನವಾಗಿ ನಡೆಯುತ್ತ ಪೀಠದ ಬಳಿ ಬಂದು ತಾಯಿಗೂ ಪೀಠಕ್ಕೂ ನಮಿಸಿ ಪ್ರಾರ್ಥನೆ ಸಲ್ಲಿಸಿದ ಮೇಲೆ –
“ಮಗನೇ, ನೀನಿನ್ನು ಹೊರಡು. ಇಲ್ಲಿಂದ ಮೂರನೇ ಹುಣ್ಣಿಮೆಯ ಶಿವ ಸೋಮವಾರ ಗೋಧೂಳಿ ಲಗ್ನದಲ್ಲಿ ಅಬ್ಬೆ ಸಮೇತ ಇಲ್ಲಿಗೆ ಬಾ. ಅಲ್ಲಿಯತನಕ ಅಂತರಂಗದ ಬಾಗಿಲು ಭದ್ರವಾಗಿರಲಿ”, – ಅಂದ.
ನಿನ್ನಡಿ ಜಲ ಜಲ ಕಣ್ಣೀರು ಸುರಿಸುತ್ತಿದ್ದ. ಕರ್ತವ್ಯ ಪ್ರಜ್ಞೆಯಿಂದ ತುಟಿ ಕಚ್ಚಿ ಬಿಕ್ಕು ತಡೆ ಹಿಡಿದುಕೊಂಡು ‘ತಂದೇs’ ಎಂದು ಶಿರಸಾಷ್ಟಾಂಗ ನಮಸ್ಕಾರವನ್ನಾಚರಿಸಿದ. ಶಿವಪಾದ ಶಿಶುಸದೃಶ ತೃಪ್ತಿಯಿಂದ ಬೆನ್ನು ತಟ್ಟಿ ಪ್ರೀತಿಯಿಂದ ಕಣ್ಣೀರೊರೆಸಿ, ನೆತ್ತಿಯ ಮೂಸಿ ಆಶೀರ್ವದಿಸಿ ಆಜ್ಞೆಯೆಂಬಂತೆ “ಇನ್ನು ಹೊರಡು ಕಂದಾ” ಎಂದ. ಸಮಯ ಮೀರಬಾರದೆಂದು ನಿನ್ನಡಿಯೂ ಜಾಗೃತೆಯಾಗಿ ಹೊರಬಂದು ಕಲ್ಲು ಸರಿಸಿ ಬಾಗಿಲು ಭದ್ರಮಾಡಿ ಕೆಳಗೆ ಬಂದ.
* * *
ಶಿವಪಾದ ಹೇಳಿದಂತೆ ಮೂರನೇ ಹುಣ್ಣಿಮೆಯ ಶಿವಸೋಮವಾರ ಶಿವಪಾದ ಹೇಳಿದಂತೆ ನಿನ್ನಡಿ ಮತ್ತು ಬೆಳ್ಳಿ ಮಿಂದು ಒದ್ದೆ ಬಟ್ಟೆಯಲ್ಲೇ ಬೆಟ್ಟ ಏರಿ ಶಿವಪಾದ ಹೇಳಿದ ಸಮಯಕ್ಕೆ ಸರಿಯಾಗಿ ಗವಿಗೆ ಬಂದರು. ಮರದ ಮರೆಯಲ್ಲಿ ಅವಿತಿದ್ದರಿಂದ ಶಿಖರಸೂರ್ಯ ಕಾಣಲಿಲ್ಲ. ನೇರವಾಗಿ ಗವಿಯೊಳಕ್ಕೇ ಹೋದರು. ಬೆಳ್ಳಿ ಒಳಗೆ ಬಂದು ನಮಸ್ಕಾರವನ್ನಾಚರಿಸಿ ತಾಯಿಯ ಮೂರ್ತಿಯ ಮುಂದೆ ಕಣ್ಣುಮುಚ್ಚಿ ಧ್ಯಾನಸ್ಥಳಾದಳು. ನಿನ್ನಡಿ ಅಂತರಂಗಕ್ಕೆ ಏರಿ ಹೋದ.
ಪ್ರಶಾಂತವಾದ ಅದರ ಕಿರಣಗಳ ದಿವ್ಯ ಕಾಂತಿಯಲ್ಲಿ ನಿನ್ನಡಿಯ ಅಂದರೆ ಈಗಿನ ಶಿವಪಾದನ ಕಣ್ಣುಗಳ ಅಪೂರ್ವ ಕಾಂತಿಯಿಂದ ಹೊಳೆದವು. ಶಿಶುಸದೃಶ ಮುಖ ಉಲ್ಲಾಸದ ತೃಪ್ತಿಯಿಂದಿತ್ತು.
Leave A Comment