ನಿನ್ನಡಿ ಮತ್ತು ಬೆಳ್ಳಿ ಮಿಂದು ಒದ್ದೆ ಬಟ್ಟೆಯಲ್ಲೇ ಬೆಟ್ಟ ಏರಿ ಶಿವಪಾದ ಹೇಳಿದ ಸಮಯಕ್ಕೆ ಸರಿಯಾಗಿ ಗವಿಗೆ ಬಂದರು. ಮರದ ಮರೆಯಲ್ಲಿ ಅವಿತಿದ್ದರಿಂದ ಶಿಖರಸೂರ್ಯ ಕಾಣಲಿಲ್ಲ. ನೇರವಾಗಿ ಗವಿಯೊಳಕ್ಕೇ ಹೋದರು. ಬೆಳ್ಳಿ ಒಳಗೆ ಬಂದು ನಮಸ್ಕಾರವನ್ನಾಚರಿಸಿ ಅಮ್ಮನ ಮೂರ್ತಿಯ ಮುಂದೆ ಕಣ್ಣು ಮುಚ್ಚಿ ಧ್ಯಾನಸ್ಥಳಾದಳು.

ನಿನ್ನಡಿ ಮೆಲ್ಲಗೆ ಮೆಟ್ಟಲೇರಿ ಅಂತರಂಗದ ಕದ ಸರಿಸಿದ. ಒಳಗೆ ಸಾವಿರ ಹುಣ್ಣಿಮೆಯ – ಬೆಳ್ದಿಂಗಳಿತ್ತು! ನೋಡಿದರೆ ಶಿವಪಾದ ಕೂತ ಸ್ಥಳದಲ್ಲಿ, ಅದೇ ಭಂಗಿಯಲ್ಲಿ ಶಿವಪಾದನೇ ಕೂತಂತೆ ಅವನ ಅಸ್ಥಿ ಪಂಜರ ಕೂತಿತ್ತು. ಲಿಂಗಪೂಜೆಯಲ್ಲಿ ಲಿಂಗನ ಹಿಡಿಯುವಂತೆ ಎಡ ಅಂಗೈಯಲ್ಲಿ ಪ್ರಶಾಂತವಾದ ಸಾವಿರ ಚಂದ್ರ ಪ್ರಭೆಯುಳ್ಳ ಜ್ಯೋತಿಯ ಹಿಡಿದಿದ್ದ. ನೋಡಿ ಸಳ ಸಳ ರೋಮಾಂಚವೆದ್ದು ಜಲ ಜಲ ಬೆವರಿ ಬಿಟ್ಟ. ಊಹಿಸಲಾಗದ ಅನಿರೀಕ್ಷಿತ ಪ್ರಕಾಶದ ಹೊಳೆಯಲ್ಲಿ ಮುಳುಗಿ ಏನು ಮಾಡಬೇಕೆಂದು ತಿಳಿಯದೆ ಚೀರಬೇಕೆಂದಾಗ ಅಸ್ಥಿಪಂಜರದ ಕಡೆಯಿಂದ ಶಿವಪಾದನ ದನಿ ಕೇಳಿಸಿತು.

“ಜ್ಯೋತಿಗೆ ಕೈ ಒಡ್ಡು ಮಗನೇ”.

ನಿನ್ನಡಿ ಮೆಲ್ಲಗೆ ಹೋಗಿ ನಮಸ್ಕಾರವನ್ನಾಚರಿಸಿ ಭಯಭಕ್ತಿಯಿಂದ ಕೈಯೊಡ್ಡಿದ, ಜ್ಯೋತಿ ಮೆಲ್ಲಗೆ ಇವನ ಅಂಗೈಗಿಳಿದು ಅಲ್ಲೇ ಇಂಗಿತು. ಜ್ಯೋತಿಯ ಸ್ಪರ್ಶ ಸುಖದಿಂದ ಗಡಗಡ ನಡುಗಿ “ತಂದೇ! ತಂದೇ!” ಎಂದು ಶಿವಪಾದನ ಸ್ಮರಿಸುತ್ತ ಅವನ ಅಸ್ಥಿಪಾದಂಗಳ ಮೇಲೆ ಕಣ್ಣೀರು ಸುರಿಸಿ, ನಮಸ್ಕರಿಸಿ ಕೆಳಗಿಳಿದು ಬಂದ. ಅವನೀಗ ಶಿವಪಾದನಾಗಿದ್ದ!

ದಿವ್ಯ ಕಾಂತಿಯಿಂದ ಹೊಳೆವ ನಿನ್ನಡಿಯ ಮುಖ ನೋಡಿ ಬೆಳ್ಳಿ ಆನಂದ, ಮೆಚ್ಚುಗೆ ಅಭಿಮಾನಗಳಿಂದ ಚಕಿತಳಾಗಿ ಕಣ್ಣಗಲ ಮಾಡಿಕೊಂಡು ನಿಂತಳು.

ಶಿಖರಸೂರ್ಯ ಗವಿಯ ಹೊರಗೆ ಬಹಳ ಹೊತ್ತು ಕಾದು ನಿಂತಿದ್ದರೂ “ಹೊರಗೆ ಯಾರೂ ಬರಲಿಲ್ಲವಲ್ಲ!” ಅಂದುಕೊಂಡ: ಬೆಳ್ಳಿ ಹ್ಯಾಗಿದ್ದಳೋ ಹಾಗೇ ಇದ್ದಾಳೆ. ಮುಖದಲ್ಲಿ ಮೊದಲಿನ ತುಂಟತನವಿಲ್ಲ. ನಡಿಗೆಯಲ್ಲಿ ಜವಾಬ್ದಾರಿಯ ಭಾರಿ, ಗಾಂಭೀರ್ಯಗಳಿವೆ. ಬಣ್ಣ ಮಾಸಿಲ್ಲ. ಸೌಂದರ್ಯ ಬಾಡಿಲ್ಲ. ಬದಲಾಗಿ ಇನ್ನಷ್ಟು ಸುಂದರಿಯಾಗಿ ಕಂಡಳು.

ಭೇಟಿಯಾದರೆ ಏನೆಂದುಕೊಳಬಹುದು? ಅಥವಾ ಏನು ಮಾಡಬಹುದು? ಕೋಪವಂತೂ ಇನ್ನೂ ಇದೆ. ಆಗಲೇ ನೋಡಿದಾಗಲೂ ಅವಳ ಕಣ್ಣಲ್ಲಿ ಪ್ರಖರವಾದ ಬೆಳಕಿತ್ತು. ಏನಿದ್ದರೂ ಈ ಸಲದ ಭೇಟಿ ಆನಂದದಾಯಕವಂತೂ ಆಗಿರುವುದಿಲ್ಲವೆಂದು ಖಾತ್ರಿಯಾಯ್ತು. ಇನ್ನಷ್ಟು ಸಮೀಪದಿಂದ ನೋಡಬಹುದೆಂದು ಒಳಗೆ ಹೋದ. ಬಾಗಿಲ ಬಳಿಯ ಕಲ್ಲಿನ ಮರೆಯಲ್ಲಿ ಅವರನ್ನೇ ನೋಡುತ್ತ ನಿಂತ.

ಮಗನ ಮುಂದೆ ನಿಂತ ಬೆಳ್ಳಿ ಕಣ್ಣಲ್ಲಿ ಆನಂದಬಾಷ್ಪ ಸುರಿಸುತ್ತ ನಿಂತಿದ್ದಳು. ಏನನ್ನೋ ನೆನೆದು ಹತ್ತಿರ ಬಂದು ಕಣ್ಣೀರೊರೆಸಿ “ಅಬ್ಬೇ!” ಅಂದ ನಿನ್ನಡಿ. ಬೆಳ್ಳಿ ಮೆಲ್ಲಗೆ ಮಗನ ಮುಖ ನೋಡಿದಳು. ಅವನ ಮುಖದ ಕಾಂತಿ ಚಂದ್ರನಂತೆ ಪ್ರಶಾಂತವಾಗಿತ್ತು. ನೋಡಿ ದೃಷ್ಟಿ ತೆಗೆದು ಹಾಗೇ ನಿಂತಳು. ಅಮ್ಮನಿಗೆ ನಮಸ್ಕಾರವನ್ನಾಚರಿಸಿ ಮಗನನ್ನು ಕರೆದುಕೊಂಡು ಹೊರಗೆ ನಡೆದಳು. ಹೊರಕ್ಕೆ ಬಂದೊಡನೆ ಯಾರೋ ಹಿಂದೆ ತಳ್ಳಿದ ಹಾಗೆ ಬೆಳ್ಳಿ ಗಕ್ಕನೆ ನಿಂತಳು. ಎದುರಿಗೆ ಅಪರಿಚಿತ ಬೃಹದಾಕೃತಿಯೊಂದು ಕಾಣಿಸಿಕೊಂಡಿತು. ಅಗಲ ಭುಜದ, ದೃಢವಾದ ಎತ್ತರ ದೇಹದ, ಹಕ್ಕಿಯ ಚುಂಚಿನಂಥ ಚೂಪು ಮೂಗಿನ, ಹದ್ದಿನ ಹೋಲಿಕೆ ಕೊಡುವಂತೆ ಎರಡೂ ಕಿವಿಗಳಲ್ಲಿ ಬೆಳೆದ ಹುಲುಸುಗೂದಲಿನ ಈತನನ್ನ ನೋಡಿದ್ದೇ ಒಂದು ಕ್ಷಣ ಮೊಳಕಾಲು ಸೋತಂತಾಗಿ ಮುಖದ ಮ್ಯಾಲಿನ ಕಳೆ ಬಾಡಿತು. ಮಾರನೇ ಕ್ಷಣವೇ ಜಯಸೂರ್ಯನ ನೆನಪಾಗಿ ಕಣ್ಣಲ್ಲಿ ಕೆಂಪು ಬೆಳಕಾಡಿ ಕಳೆಕಳೆಯಾದಳು. ಮೈಯಿಡೀ ಶಕ್ತಿ ಸಂಚಾರವಾಗಿ, ಅವಯವಗಳು ಬಿಸಿಯೇರಿ ಬಿಗಿದುಕೊಂಡವು. ಮೂಗಿನ ಹೊಳ್ಳೆಗಳಿಂದ ಅವಳಿಗೇ ಕೇಳಿಸುವಂತೆ ಸದ್ದು ಮಾಡುತ್ತ ಉಸಿರಾಡತೊಡಗಿದಳು. ಶಿವಪಾದನ ಮಾತು ನೆನಪಾಗಿ ತಣ್ಣಗಾದಳು.

ಶಿಖರಸೂರ್ಯ ಅಂದುಕೊಂಡ: ಬೆಳ್ಳಿಯ ಕಣ್ಣೆಷ್ಟು ಚೆನ್ನ! ರತ್ನದ ಹರಳುಗಳಂತೆ ಏಕಕಾಲಕ್ಕೆ ಅನೇಕ ಭಾವನೆಗಳಿಂದ ಹೊಳೆಯುತ್ತಿವೆ! ಚೈತ್ರ ಮಾಸದ ಸೂಸಗಾಳಿಯಂತೆ ಅವಳ ದೃಷ್ಟಿ ಎದುರು ಬಂದವರ ಹೃದಯಗಳನ್ನು ಸವರಿಕೊಂಡೇ ಮುಂದುವರಿಯುತ್ತದೆ. ವಯಸ್ಸಾಗಿದೆ, ಸುಖದ ಬೆಳಕಿಲ್ಲ ಮುಖದ ಮ್ಯಾಲೆ, ಆದರೂ ಹಿಂದೆಂದಿಗಿಂತ ಚೆಲುವೆಯಾಗಿ ಕಾಣಿಸುತ್ತಿದ್ದಾಳೆ”!

– ಎಂದುಕೊಳ್ಳುತ್ತ ಬಟ್ಟೆಯಲ್ಲಿ ಹುದುಗಿ ಕಾಣದ ಅವಳ ಅಂಗಾಂಗಳ ವಕ್ರರೇಖೆಗಳನ್ನು ಕಲ್ಪಸಿಕೊಂಡ. ಅವಳೂ ತನ್ನನ್ನು ಹೀಗೆಯೇ ಗಮನಿಸುತ್ತಿರಬೇಕು ಅಂದುಕೊಂಡ.

ನನ್ನವಳಿವಳು. ಆದರೆ ಹೆದರಿದ್ದಾಳೆ. ನನಗಲ್ಲ, ತನಗೆ ತಾನೇ ಹೆದರಿದ್ದಾಳೆ. ಹುಚ್ಚು ಹುಡುಗಿ! ಮುಗುಳು ನಕ್ಕು ಮನಸ್ಸಿನಲ್ಲೇ ಹೇಳಿಕೊಂಡ “ನನ್ನನ್ನು ಸೋಲಿಸಬಲ್ಲ ಒಬ್ಬಳೇ ಹೆಣ್ಣು ಇವಳು!”

ಬೆಳ್ಳಿ ಅಂದುಕೊಂಡಳು:

ಭಯಂಕರ ಕೊಳಕ, ಬಲಶಾಲಿ, ಆದರೆ ಸಾವಿನಂಥವ! ಭಯವಾಯಿತಾದರೂ ಆತ್ಮವಿಶ್ವಾಸದಿಂದ ಭಯವನ್ನು ಹೊರ ತಳ್ಳಿ ಉಕ್ಕಿ ಬಂದ ತಿರಸ್ಕಾರವನ್ನ ನಿಯಂತ್ರಿಸಿಕೊಂಡಳು. ಮಗನೂ ಹೆದರಿರಬಹುದೆಂದು ನಿನ್ನಡಿಯ ಕಡೆಗೆ ನೋಡಿದಳು. ಆತ ನಿರ್ಭಾವುಕನಾಗಿ ಕೊನೇಪಕ್ಷ ಒಬ್ಬ ಅಪರಿಚಿತನನ್ನು ನೋಡಿದ ಬೆರಗನ್ನು ಕೂಡ ಪ್ರದರ್ಶಿಸಿದೆ ನಿಂತಿದ್ದ. ಮಗನ ಭುಜ ತಟ್ಟಿ ‘ಬಾ’ ಎಂದು ಮುಂದೆ ನಡೆದಳು. ನಿನ್ನಡಿಯೂ ನಡೆದ.

ಅವರು ಹೋದಮೇಲೆ ಶಿಖರಸೂರ್ಯ ಅಂದುಕೊಂಡ: ಬೆಳ್ಳಿಯ ಗಂಡಸುತನ ಗುಂಡುಗಳನ್ನೂ ಮೀರಬಲ್ಲದು. ಅವಳ ಹೆಣ್ಣುತನವೂ ಹಾಗೆಯೇ, ಯಾವುದೇ ಕೋಮಲೆಯನ್ನು ಮೀರಬಲ್ಲದು!- ಎಂದುಕೊಳ್ಳುತ್ತ ಗವಿಯನ್ನು ಪ್ರವೇಶಿಸಿದ.

ಶಿವಪಾದ ಇರಲಿಲ್ಲವಾದರೂ ಅವನ ನೆನಪು ನೆರಳಿನ ಹಾಗೆ ಗವಿಯ ತುಂಬ ಅಡ್ಡಾಡಿತು. ಹಿಂದಿನ ಶಿವಪಾದರ ಅಸ್ಥಿಪಂಜರಗಳಿಂದಾಗಿ ಗವಿ ಅವರೆಲ್ಲರ ಆತ್ಮಗಳು ಅಲೆದಾಡುವ ಗೋರಸ್ಥಾನದಂತೆ ಹಿಂದೆ ಕಂಡಿತ್ತು. ಒಮ್ಮೊಮ್ಮೆ ಅವರ ನೆರಳುಗಳೇ ಅಲೆದಾಡುವಂತೆ, ಅಟ್ಟದ ಮೇಲಿಂದ ಪಿಸುನುಡಿದಂತೆ ಕೇಳಿಸಿ ತಕ್ಷಣ ಎಚ್ಚತ್ತು ಸುತ್ತಲೂ ನೋಡಿದ್ದ. ಅಟ್ಟಕ್ಕೆ ಹೋಗಲು ಹಚ್ಚಿದ್ದ ಏಣಿ ಅಸ್ವಾಭಾವಿಕವಾಗಿ ಬಾಗಿದ್ದರಿಂದ ಅದರ ಬಾಗು, ಅದರ ತುದಿಗಿದ್ದ ಅಂತರಂಗ, ಅದರಲ್ಲಿದ್ದಿರಬಹುದಾದ ಅಸ್ಥಿಪಂಜರ – ಇವೆಲ್ಲ ಕನಸಿನಲ್ಲಿಯ ವಸ್ತುಗಳಂತೆ ಕಂಡವು. ತಕ್ಷಣವೆ ಭಯದಿಂದಲ್ಲ ಅಥವಾ ಯಾಕೋ ಏನೋ ಇಲ್ಲೊಂದು ಮಾತಾಡುವ ಮಾನವ ಜೀವ ಇದ್ದಿದ್ದರೆ ಎಷ್ಟು ಚಲೋ ಇತ್ತಲ್ಲ ಅನ್ನಿಸಿತು. ಮುಖ ಮುಟ್ಟಿ ನೋಡಿಕೊಂಡು ತಾನಾದರೂ ಜೀವಂತವಾಗಿದ್ದೇನಲ್ಲಾ – ಅಂದುಕೊಂಡ.

ಶಿವಪಾದನೊಂದಿಗೆ ತಾನು ಇಲ್ಲಿದ್ದ ದಿನಗಳು ನೆನಪಾದವು. ಶಿವಪಾದ ಚಿಕ್ಕವನಾಗಿದ್ದಾಗ ಹೆಂಗಿದ್ದನೋ! ಆದರೆ ಅವನ ಸ್ಥಳದಲ್ಲಿ ಅಮ್ಮನನ್ನು ಚಿತ್ರಿಸಿಕೊಳ್ಳುವುದು ಸುಲಭ. ಅಮ್ಮ ಎಂದರೆ ಮೈತುಂಬ ಕುಂಕುಮ, ಭಂಡಾರ ಮೆತ್ತಿದ ಆಳೆತ್ತರದ ಬಂಡೆ. ತೊಡೆಯ ಮಧ್ಯೆ ತಲೆಕೆಳಗಾಗಿ ಒಂದು ಕೂಸು ಬೀಳುತ್ತಿರುವಂತಿದೆ. ಅಮ್ಮನ ವಿಶೇಷವೆಂದರೆ ಅಗಲವಾಗಿ ತೆರೆದ ಎರಡು ದೊಡ್ಡ ಕಣ್ಣುಗಳು!

ಆ ಕಣ್ಣುಗಳ ಬಗ್ಗೆ ಮೊದಮೊದಲು ತನಗೆ ಯಾವ ಭಾವನೆಗಳೂ ಬರಲಿಲ್ಲ. ಅವುಗಳಲ್ಲಿ ಉಳಿದವರಿಗೆ ಕಂಡ ಭಯಾನಕತೆಯಾಗಲಿ, ಶಿವಪಾದನಿಗೆ ಕಂಡ ಕರುಣೆಯಾಗಲಿ ಯಾವುದೂ ಇವನ ಅನುಭವಕ್ಕೆ ಬರಲಿಲ್ಲ. ಒಂದೇ ಕಡೆಗೆ ಒಂದನ್ನೇ ಒಂದೇ ಭಾವದಿಂದ ನೋಡುವ ಆ ಕಣ್ಣುಗಳನ್ನು ತನ್ನ ಬಗ್ಗೆ ಅಸಮಾಧಾನ, ಕೋಪ ಇದ್ದಂತೆ ಅನ್ನಿಸಿತು.

ಈ ಗವಿ ತನಗೆಂದೂ ಇಷ್ಟವಾಗಿರಲಿಲ್ಲ. ಇದರ ವಿವರಗಳ ಬಗ್ಗೆ ಸರಿಯಾದ ತಿಳುವಳಿಕೆಯೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಬೆಟ್ಟ ಗವಿಗಳ ಹಾಗೆ ಇದೊಂದು ಸಹಜ ಗವಿ ಅಂತಲೂ ಅನ್ನಿಸಿರಲಿಲ್ಲ. ಒಮ್ಮೊಮ್ಮೆ ಮಾತ್ರ ಈ ಗವಿಯನ್ನು ಪ್ರವೇಶಿಸಿದಾಗ ಯಾರದ್ದೋ ದಃಸ್ವಪ್ನದಲ್ಲಿ ಪ್ರವೇಶ ಮಾಡಿದ ಹಾಗೆ ಅನ್ನಿಸುತ್ತಿತ್ತು. ಆದರೆ ಇವತ್ತು ಹಾಗಾಗಲಿಲ್ಲ. ಈವರೆಗೆ ತಾನು ಕನಸಿಸಿದ ನಿಧಿಯೆಲ್ಲವೂ ಗಟ್ಟಿಯಾಗಿ ಅಖಂಡ ಬಂಡೆಯ ರೂಪದಲ್ಲಿ ನಿಂತಂತೆ ಕಂಡಿತು. ಅನೇಕ ಕಡೆಗಳಲ್ಲಿ ಕೈಯಾಡಿಸಿ ಆನಂದಪಟ್ಟ. ನಾಗಾರ್ಜುನ ಯಾವಾಗ ಗಮನಿಸಿದ್ದನೋ – ಅನೇಕ ಕಡೆ ಅಡ್ಡಾಡುವುದರ ಕೈಗಳು ತಗಲಿ ತಗಲಿ ಸವೆದು ಒಳಗಿನ ಚಿನ್ನ ಹೊಳೆದು ಕಾಣುತ್ತಿತ್ತು. ತಾನು ಇದನ್ನೂ ಗಮನಿಸಿರಲಿಲ್ಲ. ಈಗ ತಾನು ಈವರೆಗೆ ಬಯಸಿದ ಎರಡು ಅಮೂಲ್ಯ ನಿಧಿಗಳು ತನ್ನ ಅಂಗೈಯಲ್ಲಿವೆ ಅನ್ನಿಸಿತು: ಗವಿ ಮತ್ತು ಬೆಳ್ಳಿ!