ಬೆಟ್ಟ ಇಳಿದು ಮನೆ ತಲುಪುವುದರೊಳಗೆ ನಿನ್ನಡಿಗೆ ಕನಕಪುರಿಯ ದೊರೆ ಬಂದು ಮುರಿಗೆಪ್ಪನ ತೋಟದ ಗೂಡಿನಲ್ಲಿ ಬಿಡಾರ ಹೂಡಿದ ಸಂಗತಿಯನ್ನು ಜನ ತಿಳಿಸಿದರು. ಕೇಳಿಸಿಕೊಂಡು ನಿನ್ನಡಿ ಶಿವಪಾದನ ನಿರ್ವಾಣದ ವಿಷಯ ತಡವಾಗಿ ತಿಳಿದು ಗೌರವ ಸಲ್ಲಿಸಲಿಕ್ಕೆ ಬಂದಿದ್ದಾನೆಂದು ಸುಮ್ಮನಾದ. ಆದರೆ ಬೆಳ್ಳಿ ಮಾತ್ರ ಎಲ್ಲವೂ ಒಂದು ನೆಮ್ಮದಿಯ ನಿಲುಗಡೆಗೆ ಬಂದಾಗ ಇವನು ಬಂದನಲ್ಲ! ಎಂದು ಅಸಮಾಧಾನ ಹೊಂದಿದಳು. ಅದನ್ನು ತೋರಗೊಡದೆ ಅವಸರ ಮಾಡಿ ಮಗನಿಗಿಂತ ಮುಂದೆ ಮನೆ ಸೇರಿದಳು.

ಮನೆಯೊಳಗೆ ಗೌರಿ ಕೆಂಜಗದಂತೆ ಮುಖ ಮಾಡಿಕೊಂಡು ನಿಂತಿದ್ದಳು. “ಮುದ್ದುವಿಗೆ ಯಾರೇನಂದರು? ಇಲ್ಲಾ ಅವರಪ್ಪ ಬಂದಿದ್ದನೆ?” ಎಂದು ಬೆಳ್ಳಿಗೆ ಹೊಯ್ಕಾಯಿತು. ಅನುಕಂಪೆಯಿಂದ ಹತ್ತಿರ ಹೋಗಿ ಬೆನ್ನು ನೇವರಿಸುತ್ತ,

“ಯಾಕೆ ಮುದ್ದೂ ಹಿಂಗಿದ್ದೀಯಾ? ಯಾರಾದರೂ ಬಂದಿದ್ದರೇನು”? ಅಂದಳು.

“ನನ್ನಪ್ಪ – ಕನಕಪುರಿಯ ಮಹಾರಾಜ ಬಂದಿದ್ದಾನಂತೆ! ಶಿವಪಾದ ಹೋಗಿ ಮಡಿ ಹಾಸಿ ಕರಕೊಂಬಂದು ಮರ್ಯಾದೆ ಮಾಡಬೇಕಂತೆ”.

ಇವಳಿಗೂ ವಿಷಯ ಗೊತ್ತಾಗಿದೆಯೆಂದು ಬೆಳ್ಳಿಗೆ ತಿಳಿಯಿತಾದರೂ ಗೌರಿ ಈ ಪರಿ ಕೋಪಗೊಂಡಾಳೆಂದು ನಿರೀಕ್ಷಿಸಿರಲಿಲ್ಲ. ಅಷ್ಟರಲ್ಲಿ “ಹಾಗಂತ ಯಾರು ಹೇಳಿದ್ದು ಮುದ್ದೂ?” ಎಂದು ಕೇಳುತ್ತ ನಿನ್ನಡಿ ಬಚ್ಚಲು ಮನೆಯಿಂದ ಒಳಗೆ ಬಂದ.

“ಮುರಿಗೆಪ್ಪ ಬಂದು ಹೇಳಿ ಹೋದ”

– ಎಂದು ಹೇಳಿ ಸಿಡುಕಿನ ಮುಖವನ್ನ ತೋರಬಾರದೆಂದು ಪಡಸಾಲೆಗೆ ಹೋದಳು. ತಾಯಿ ಮಗ ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಆದರೂ ಶಿಖರಸೂರ್ಯನನ್ನು ಭೇಟಿಯಾಗುವುದರಲ್ಲಿ ತಪ್ಪಿಲ್ಲ ಎನ್ನಸಿತು ನಿನ್ನಡಿಗೆ. ಅವನೂ ಇಲ್ಲಿ ಕಲಿತವನೆ. ಶಿವಪಾದನಿಗೆ ಗೌರವ ಸಲ್ಲಿಸಲು ಬಂದ್ದ್ದಾನು. ನಾನು ಚಿಕ್ಕವನಾದುರಿಂದ ಹೋಗಿ ಮಹಾರಾಜನಿಗೆ ಗೌರವ ಸಲ್ಲಿಸುವುದು ಶಿಷ್ಟಾಚಾರ. “ಹೋಗಿ ಬರಲೆ ಅಬ್ಬೆ?” ಅಂದ.

ಸ್ವಲ್ಪ ಹೊತ್ತು ಬೆಳ್ಳಿ ಮಾತಾಡಲಿಲ್ಲ. ಆಮೇಲೆ ತನ್ನ ಪಾಡಿಗೆ ತಾನು ಗಡಂಚಿಯ ಮ್ಯಾಲಿನ ಸಂಚಿ ತಗೊಂಡು, ಅದರೊಳಗಿನ ಅಡಿಕೆ ಹೋಳೊಂದನ್ನು ಬಾಯಿಗೆ ಒಕ್ಕೊಂಡಿ, ವೀಳ್ಯದೆಲೆಯ ಶಿರ ಬಿಡಿಸಿ ಸುಣ್ಣವ ಲೇಪಿಸಿ, ಮಡಿಚಿ ಬಾಯಿಗಿಟ್ಟುಕೊಂಡು ಕೂತಾಗ ನಿನ್ನಡಿ,

“ಬಂದ ರಾಜರಿಗೆ ಅವಮರ್ಯಾದೆ ಆಗಬಾರದು. ಹೋಗಿ ಮಾತಾಡಿಸಿ ಬರಲೇನಬೆ?”

ಅಂದ. ಬೆಳ್ಳಿ ಎದ್ದು ಕೊಟ್ಟಿಗೆಗೆ ಹೋಗಿ, ಚಿಮ್ಮುವ ಉಗುಳನ್ನು ನಿರ್ದೇಶಿಸುವಂತೆ ತುಟಿಯ ಮ್ಯಾಲೆರಡು ಬೆರಳಿಟ್ಟುಕೊಂಡು ಪಿಚಕ್ ಎಂದು ಉಗಿದಳು. ಆಮೇಲೆ ತನ್ನ ಅಸಮಾಧನವನ್ನು ನಿಯಂತ್ರಿಸಿಕೊಂಡೇ ಹೇಳಿದಳು:

“ಶಿವಪಾನದ ತಿಥಿ ಅಂತ ಬಂದಿದ್ದಾನು. ಬೂದಿ ಪಡಕೊಂಡು ಹೋದಾನು”

“ಆದರೂ ಮಹಾರಾಜ ಅಂದರೆ….”

“ಅಯ್ತಪ್ಪ, ನಿನ್ನ ಮಡದಿಗೂ ಒಂದು ಮಾತು ಹೇಳು”

ಇದನ್ನೆಲ್ಲ ಕೇಳಿಸಿಕೊಳ್ಳುತ್ತ ಗೌರಿ ಆಗಲೇ ಮಡಸಾಲೆಯ ಬಾಗಿಲಿಗೆ ಬಂದು ಕದಕ್ಕೊರಗಿ ನಿಂತಿದ್ದಳು. ನಿನ್ನಡಿ ಅವಳ ಕಡೆಗೆ ನೋಡಿದ:

“ಹೋಗೋದಾದರೆ ಹೋಗು; ಆದರ ಅವ ನಮ್ಮ ಮನೆಗೆ ಬರಕೂಡದು”

ಎಂದು ಹೇಳಿ ಸರನೆ ಒಳಕ್ಕೆ ಹೋದಳು. ಬೆಳ್ಳಿಗೆ ತನ್ನ ಮುದ್ದು ಸೊಸೆಯ ಕೋಪ ತಾಪದ ಪ್ರಥಮ ಪರಿಚಯವಾಗಿ ಹೊಯ್ಕಾಯಿತು. “ಬಲ್ ನನ್ ಸೊಸೆ ಮುದ್ದೇ!” ಎಂದು ಮನಸ್ಸಿನಲ್ಲೇ ಮೆಚ್ಚಿಕೊಂಡು ಕತ್ತು ಹಾಕಿದಳು. “ಆಯಿತು, ಈ ಬಗ್ಗೆ ಹಿರಿಯರೊಂದಿಗಾದರೂ ಚರ್ಚಿಸಬೇಕಲ್ಲ” ಎಂದುಕೊಂಡು ನಿನ್ನಡಿ ಹೊರಟ. ಬೆಳ್ಳಿ ಅಂದುಕೊಂಡಳು: ಮಾರಾಜನಾಗಿ ಕನಕಪುರಿ ಆಳಬೇಕಾದವ ಹೋಗಿ ನಕಲಿ ಮಾರಾಜನಿಗೆ ಮುಜುರೆ ಮಾಡಿ ಬರ‍್ತೀನಿ ಅಂತಾನಲ್ಲ! “ಮಾತಾಯೇ ನಿನ್ನ ಲೀಲೆ ತಿಳೀದಮ್ಮಾ!” ಎಂದು ಹೇಳಿ ಸಪ್ಪಳಾಗುವಂತೆ ಚಪ್ಪಾಳೆ ತಟ್ಟಿ ಬೆಟ್ಟದ ಕಡೆಗೆ ಕೈ ಮುಗಿದಳು.