ಕತೆಯಿಂದ ಕತೆಗೆ ಹೆಚ್ಚಾಗುತ್ತಿದ್ದ ಗೌರಿಯ ಉದರಶೂಲೆ ಇವತ್ತು ಬೆಳಿಗ್ಗೆಯಿಂದಲೇ ಸುರುವಾಗಿತ್ತು. ಸೂರ್ಯೋದಯದ ಸುಮಾರಿಗೆ ಹೆಚ್ಚು ತೀವ್ರವಾಗಿ ಗೌರಿ ನ್ಯಾರೇ ಕೂಡ ಮಾಡದೇ ಬರೀ ಹೊಟ್ಟೆಯಲ್ಲೇ ಪಯಣ ಹೊರಟಳು. ಎಷ್ಟೇ ಪ್ರಯತ್ನಿಸಿದರೂ ಬೊಂತೆಯ ಮತ್ತು ಗುಣದಮ್ಮನಿಂದ ನೋವನ್ನು ಬಚ್ಚಿಡಲಾಗಲಿಲ್ಲ. ಬೊಂತೆಯ ಮೂಕವೇದನೆ ಪಡುತ್ತ ಅವನೂ ನ್ಯಾರೆ ಮಾಡಲಿಲ್ಲ. ಗುಣದಮ್ಮ ನ್ಯಾರೇ ಮಾಡಿದರೂ ಗೌರಿ ಏನೂ ತಿನ್ನದಿರುವ ಬಗ್ಗೆ ಚಡಪಡಿಸಿದಳು. ‘ನೋವು ತಡೆದುಕೊಳ್ಳಲಿಕ್ಕಾದರೂ ಸ್ವಲ್ಪ ತಿನ್ನು ಮಗಳೇ’ ಎಂದಳು. ಗೌರಿ ಕೇಳಲಿಲ್ಲ. ಮೈ ಬೆಚ್ಚಗಿದ್ದುದರಿಂದ ಇದೊಂದು ದಿನ ವಿಶ್ರಾಂತಿ ತಗೋ ಮಗಳೇ, ಆಮ್ಯಾಲೆ ಹೊರಡೋಣ ಎಂದಳು. ಬೇಡವೆಂದು ಗೌರಿಯೇ ಎದ್ದು ಮುಂದಾದಳು. ದಾರಿಗುಂಟ ಗೌರಿ ಮಾತ್ರ ಭಯಂಕರ ಮೌನದಲ್ಲಿ ಮುಳುಗಿಬಿಟ್ಟಳು. ನಗೆಯಿರಲಿ, ಮುಗುಳು ನಗೆ ಕೂಡ ಮರೆಯಾಗಿ ಅವಳ ಮುಖ ಕಪ್ಪಿಟ್ಟಿತ್ತು.

ಮದ್ಯಾಹ್ನದ ಬಿಸಿಲು ಹರಿತವಾಗಿತ್ತು. ದೊಡ್ಡ ಮರವೊಂದರ ನೆರಳಿನಲ್ಲಿ ಯಾತ್ರಿಕರು ಕಟ್ಟಿತಂದ ಬುತ್ತಿ ತಿಂದು ವಿಶ್ರಾಂತಿ ತಗೊಂಡರು. ಗೌರಿ ಒಂದೆರಡು ತುತ್ತು ತಿಂದಳಾದರೂ ಮೈಗೆ ಹತ್ತಲಿಲ್ಲ. ವಾಂತಿಯಾಗಿ ನೀರು ಕೂಡ ಕುಡಿಯದೆ ನೆರಳಲ್ಲಿ ಅಡ್ಡಾದಳು. ಹೊತ್ತು ಪಡುವಣಕ್ಕೆ ವಾಲಿ ನೆರಳು ಸರಿದು ಇವರು ಕೂತಲ್ಲಿ ಬಿಸಿಲು ಬರುತ್ತಲೂ ಯಾತ್ರಿಕರು ಒಬ್ಬೊಬ್ಬರೇ ದಾರಿ ಹಿಡಿದರು. ಹಳೆಯ ಯಾತ್ರಿಕರು ಮಾತ್ರ ಉಳಿದರು. ಗೌರಿಗೆ ನಿದ್ದೆಯಿರಬೇಕೆಂದು ಎಬ್ಬಿಸದೆ ಗಂಗ ಗುಣದಮ್ಮ ಹಾಗೇ ನಿಂತಿದ್ದಾಗ “ನಾನು ಕರೆತರುತ್ತೇನೆ ನೀವು ಹೊರಡಿರೆಂದು” ಬೊಂತೆಯ ಸನ್ನೆ ಮಾಡಿದ. ಮೆಲ್ಲನೆ ಅವರೂ ನಡೆದರು.

ಇನ್ನಷ್ಟು ಹೊತ್ತು ಕಳೆದ ಮೇಲೆ ಗೌರಿ ಮಗ್ಗಲು ಬದಲಿಸಿದಾಗ ಬೊಂತೆಯ ಗೌರಿಯನ್ನು ನೋಡಿದಾಗ ಕರುಳು ಚಿರುಗುಟ್ಟಿದವು. ಕನಕಪುರಿ ದೇಶದ ರಾಜಕುಮಾರಿ ಬರಿ ನೆಲದ ಮೇಲೆ ಗೂಡುಗಾಲು ಹಚ್ಚಿಕೊಂಡು ಮುದ್ದೆಯಾಗಿ ಬಿದ್ದುಕೊಂಡಿದ್ದಳು. ಮುಂಗುರುಳು ಹೊಳಪಿಲ್ಲದ ಹಣೆ ಕೆನ್ನೆಯ ಮೇಲೆ ಹಾರಾಡುತ್ತಿದ್ದವು. ಬಿಕ್ಷುಕರ ಹುಡುಗಿಯಂತೆ ಸಣಕಲು ದೇಹ, ಹರಿದ ಬಟ್ಟೆ ಹಾಕಿಕೊಂಡಿದ್ದಳು. “ಎಂಥಾ ರಾಜಕುಮಾರಿಗೆ ಏನು ಗತಿ ತಂದೆಯಪ್ಪಾ ಶಿವನೇ!” ಎಂದು ಮನಸ್ಸಿನಲ್ಲೇ – ಅಂದುಕೊಂಡು ಕುಂಯ್ ಕುಂಯ್ ಎಂದು ನಾಯಿಕುನ್ನಿಯಂತೆ ಉಲಿಯುತ್ತ ಜಲ ಜಲ ಕಣ್ಣೀರು ಸುರಿಸಿದ. ಕೂರಲಾರದೆ ಎದ್ದು ಚಡಪಡಿಸಿ ಮತ್ತೆ ಕೂತ. ಗೌರಿ ಮೆಲ್ಲಗೆ ಎದ್ದಳು. ಯಾತ್ರಿಕರ್ಯಾರು ಇರಲಿಲ್ಲ. ಬೆಚ್ಚಿ ಅಗಲವಾಗಿ ಕಣ್ಣು ತೆರೆದು ನೋಡಿದಳು. ತಾನೆಲ್ಲಿದ್ದೇನೆಂದು ತಿಳಿಯಲಿಲ್ಲ. ಬೊಂತೆಯನ ಗುರುತು ಕೂಡ ಹಿಡಿಯಲಿಲ್ಲ. ಅಮೇಲೆ ಬುದ್ಧಿ ತಿಳಿದು ಬೊಂತೆಯನ ಗುರುತಾಗಿ “ನೀರು” ಎಂದಳು. ಕೂಡಲೇ ಬೊಂತೆಯ ತತ್ರಾಣಿ ತಂದುಕೊಟ್ಟ. ಹಿಡಿಯಲು ಆಗದಿದ್ದಾಗ ತಾನೇ ಅದರ ಬಾಯನ್ನು ಗೌರಿಯ ತುಟಿಗೆ ಹಿಡಿದ. ಗೌರಿಯ ಕೈ ಸ್ಪರ್ಶವಾಗಿ ಗಾಬರಿಯಾಯಿತು. ಕೈ ಸುಡುತ್ತಿತ್ತು! ಅವನಿಗ್ಯಾಕೋ ಇವಳಿಂದು ಸಾಯುತ್ತಾಳೆ ಅನ್ನಿಸಿತು. ಸಣ್ಣದೊರೆಗೆ ಕೊಟ್ಟ ಮಾತಿಗೆ ತಪ್ಪಿದೆನಲ್ಲೊ ಶಿವನೇ! ಎಂದು ಮುಖ ಓರೆ ಮಾಡಿ ಕಣ್ಣೀರುಗರೆದ.

ನೀರು ಕುಡಿದು ಗೌರಿ ಸ್ವಲ್ಪ ಹೊತ್ತು ಹಾಗೇ ಕೂತಳು. ಒನಿಕೆಯಿಂದ ಗುದ್ದಿದಂತೆ ಹೊಟ್ಟೆಗೆ ಹೊಡೆವ ನೋವಿನಿಂದಾಗಿ ದಣಿದು ಹೈರಾಣಾಗಿದ್ದಳು. ‘ಶಾಂತವಾದ ವಿಸ್ಮೃತಿಗೆ ನನ್ನನ್ನು ತಳ್ಳು ಶಿವನೇ’ ಎಂದು ಬೇಡಿಕೊಂಡಳು. ಅಂಥ ವಿಸ್ಮೃತಿ ಸಾವಿನಲ್ಲಿದ್ದರೆ ನನಗೆ ಅದನ್ನೇ ಕೊಡು ನನ್ನಪ್ಪಾ!’ ಎಂದಳು. ಸಾವಿನ ಲೋಕದಿಂದ ತಿರುಗಿ ಬಂದವರ್ಯಾರು ಇಲ್ಲ. ಆ ಕಡೆಯಿಂದ ಒಂದು ದ್ವನಿಯೂ ಕೇಳಲಿಲ್ಲ. ಸಾವಿನ ಲೋಕ ಅಷ್ಟೋಂದು ರಹಸ್ಯವೇ? ಅಥವಾ ಅದರಾಚೆ ಬರೀ ಖಾಲಿ ಕತ್ತಲೆ ಇದೆಯೇ? ತಿಳಿವಿಗೆ ನಿಲುಕದ ಖಾಲಿ ಶಾಂತಿ ಇದೆಯೇ? ಧರ್ಮಗಳು, ದೇವರ ಪೂಜೆ, ಯಜ್ಞ ಯಾಗಾದಿಗಳು ಇವೆಲ್ಲ ಹುಸಿಯೇ? ಇವೆಲ್ಲ ಆಚೆ ಇರುವ ಖಾಲಿಯನ್ನು ಅದು ಕಾಣದ ಹಾಗೆ ಮುಚ್ಚಲಿಕ್ಕೆ ನಾವು ತಯಾರಿಸಿಕೊಂಡ ದುರ್ಬಲ ಮೋಸಗಳೆ? ಅಭಿನಯದ ಮಾದರಿಗಳೇ? ಅಯ್ಯೋ ಅಮ್ಮಾ ಎಂದು ಹೊಟ್ಟೆ ಹಿಸುಕಿಕೊಂಡಳು. ಹೊಟ್ಟೆ ನೋವು ಹಾಗೇ ಇತ್ತು. ಬೊಂತೆಯನ ಅಳುಮುಖ ನೋಡಿ ಮರುಗಿದಳು. “ನಿನ್ಯಾವ ಜನ್ಮದಲ್ಲಿ ನನಗೆ ಅಣ್ಣನೋ ತಮ್ಮನೋ ಆಗಿದ್ದೆಯೋ ನನ್ನಪ್ಪಾ! ನನಗಾಗಿ ನೀನೂ ಸಂಕಟ ಪಡುವ ಹಂಗಾಯ್ತೆ” ಎಂದು ಕ್ಷೀಣ ದನಿಯಲ್ಲಿ ನುಡಿದಳು. ಬೊಂತೆಯ ಈ ಮಾತು ಕೇಳಿ ಇನ್ನಷ್ಟು ಕಣ್ಣೀರು ಸುರಿಸುತ್ತ ತನ್ನ ಅಸಹಾಯಕತೆಗೆ ತಾನೇ ಮರುಗುತ್ತ ಕೂತ. “ಸ್ಪಷ್ಟವಾಗಿ ಇದು ಅಮ್ಮ ಮಾಡುತ್ತಿರುವ ನನ್ನ ಸತ್ವ ಪರೀಕ್ಷೆ. ಶಿವಾಪುರ ತಲುಪಲಾಗದಿದ್ದರೆ ಬೇಡ, ದಾರಿಯಲ್ಲೇ ಜೀವ ಹೋಗಲಿ” ಎಂದು ದೃಢ ಸಂಕಲ್ಪ ಮಾಡಿ “ಬೊಂತೆಯ ನಡಿ ಹೋಗೋಣ” ಎಂದು ಕಷ್ಟಪಟ್ಟು ಎದ್ದಳು.

ಮರದ ನೆರಳು ದಾಟಿ ದಾರಿ ಹಿಡಿದರು. ಭಾರೀ ಪ್ರಯತ್ನವಿಲ್ಲದೇ ನಡೆಯುವುದು ಸಾಧ್ಯವಿಲ್ಲವೆನಿಸಿತು. ಭುಜಗಳು ತುದಿಯಲ್ಲಿ ಕೆಳಗೆ ಬೀಳುವಂತೆ ಬಾಗಿದ್ದವು. ಎಡಗಾಲಿನ ಹೆಬ್ಬೆರಳು ಒಡೆದು ಗಾಯವಾಗಿ ಉರಿಯುತ್ತಿತ್ತು. ಆ ಪಾದವನ್ನು ಎತ್ತಿ ಎತ್ತಿ ಇಡುತ್ತಿದ್ದಳು. ಇಟ್ಟಾಗೊಮ್ಮೆ ನೆಲ ನಡುಗಿದಂತೆ ಭಾಸವಾಗುತ್ತಿತ್ತು. ಬಲಗಾಲನ್ನು ಎಳೆದೆಳೆದು ಹಾಕುತ್ತಿದ್ದಳು. ಬರಬರುತ್ತ ಕೆಸರಿನಲ್ಲಿ ಕಾಲಿಟ್ಟು ಎತ್ತಿದಂತೆ ನಡೆಯತೊಡಗಿದಳು. ಹೆಜ್ಜೆಗೊಮ್ಮೆ ಪಕ್ಕಕ್ಕೆ ವಾಲುತ್ತಿದ್ದಳು. ದೂರದ ಗುಡ್ಡ ಮೋಡಗಳ ಗುಂಪಿನಂತೆ ಕಾಣತೊಡಗಿತ್ತು. ಆಗಲೇ ಅವಳಿಗೆ ತಾನು ಸಾಯುವುದು ಖಾತ್ರಿಯಾಗಿ ದಾರಿಯಲ್ಲೇ ಕುಸಿದು ಬಿದ್ದಳು. ಬೊಂತೆಯ ಅವಳ ಸ್ಥಿತಿ ನೋಡುತ್ತ ಎದುರು ಕೂತು “ನನ್ನ ಬೆನ್ನ ಮೇಲೆ ಕೂರು ಕೂಸೇ” ಎಂದು ಕೈ ಮುಗಿದ. ಗೌರಿ ಶಿವಾಪುರದಮ್ಮನನ್ನು ನೆನೆಯುತ್ತ ಕಣ್ಣು ಮುಚ್ಚಿದಳು. ಬೊಂತೆಯ ಗಾಬರಿಯಾಗಿ ಹಾಹೂ ಎನ್ನುತ್ತ ಓಡಿಹೋಗಿ ಒಂದು ಕೂಗಳತೆ ದೂರದಲ್ಲಿ ಹೋಗುತ್ತಿದ್ದ ಗಂಗ, ಗುಣದಮ್ಮರನ್ನು ಕರೆದು ತಂದ. ನೋಡಿ ಗುಣದಮ್ಮ ನನ್ನ ಕಂದಾ ಎಂದು ಎದೆ ಬಡಿದುಕೊಂಡು ಅಳತೊಡಗಿದಳು. ಅಷ್ಟರಲ್ಲಿ ಹಟ್ಟಿ ಕಡೆಗೆ ಹೋಗುತ್ತಿದ್ದ ಒಂದು ಗಾಡಿ ಬಂತು. ಅದರಲ್ಲಿ ಅವಳನ್ನು ಮಲಗಿಸಿಕೊಂಡು ಮುಂದಿನ ಹಟ್ಟಿ ತಲುಪಿದರು.

ಆ ದಿನ ಹಟ್ಟಿಯ ಹಿರಿಯನ ಬೀಡಿನಲ್ಲಿ ಗೌರಿಯನ್ನು ಮಲಗಿಸಿದರು. ಅಳಲೇಕಾಯಿ ವೈದ್ಯನೊಬ್ಬ ಬಂದು ನಾಡಿ ನೋಡಿ ಇದು ತನ್ನ ತಿಳಿವಿಗೆ ಬಾರದ ರೋಗವೆಂದು ಕೈ ಚೆಲ್ಲಿದ. ಆದರೆ ತಣ್ಣೀರ ಪಟ್ಟಿಯನ್ನು ಹಣೆಯ ಮೇಲಿಡುವುದರಿಂದ  ಅಪಾಯವೇನೂ ಇಲ್ಲವೆಂದು ಹೇಳಿ ಹೋದ.

ಗೌರಿಯ ಸ್ಥಿತಿ ಚಿಂತಾಜನಕಾವಾಗಿತ್ತು. ಮುಖ ಹೀರಿ ಕಣ್ಣು ಕೆಂಜಾದಂತಾಗಿದ್ದವು. ಜ್ವರದಿಂದ ಮೈ ಸುಡುತ್ತಿತ್ತು. ಎಲ್ಲ ಯಾತ್ರಿಕರೂ ಅಳು ಮುಖ ಮಾಡಿಕೊಂಡು ನಿಂತಿದ್ದರು. ಗೌರಿ ಜೀವಂತ ಉಳಿದಾಳೆಂಬ ಆಸೆ ಯಾರಿಗೂ ಇರಲಿಲ್ಲ. ಈ ಕೂಸನ್ನು ಕಾಪಾಡಲೆಂದು ಹಟ್ಟಿಯವರೂ ಅಮ್ಮನಲ್ಲಿ ಬೇಡಿಕೊಂಡರು. ರಾತ್ರಿ ಬೊಂತೆಯ ಗುಣದಮ್ಮ ಊಟ ಮಾಡಲೇ ಇಲ್ಲ. ಅಂದಿನ ಕತೆಗೆ ಯಾರೂ ಒತ್ತಾಯ ಮಾಡಲಿಲ್ಲ. ಯಾತ್ರಿಕರು ಊಟ ಮಾಡಿ ಮಂಟಪಕ್ಕೆ ಮಲಗಲಿಕ್ಕೆ ಹೋದರು. ಬೀಡಿನ ಹೊರಗಿನ ಕಟ್ಟೆಯ ಮೇಲೆ ಗಂಗ ಕೂತ. ಕಣ್ಣೀರು ಸುರಿಸುತ್ತ ಬೊಂತೆಯ ನಿಂತ. ಹಣೆಯ ಮೇಲಿನ ನೀರಿನ ಪಟ್ಟಿಯನ್ನು ಬದಲು ಮಾಡುತ್ತ ಗುಣದಮ್ಮ ಗೌರಿಯ ಪಕ್ಕದಲ್ಲೇ ಕೂತಳು.

ಅಮ್ಮನನ್ನು ತೋರಿಸುತ್ತೇನೆ ಬಾ ಎಂದು ಕೂಸನ್ನು ಜೊತೆ ಕರೆತಂದು ಈಗ ಬರಿಗೈಯಲ್ಲಿ ಶಿವಾಪುರಕ್ಕೆ ಹೋಗುವ ಪ್ರಸಂಗ ಬಂತೆಂದು ಗುಣದಮ್ಮ ಬಹಳ ನೊಂದಳು. ತಾಯೀ ಬೇಕಾದರೆ ನನ್ನ ಜೀವ ತಗೊಂಡು ಈ ಕೂಸಿನ ಜೀವ ಉಳಿಸೆಂದು ಪ್ರಾರ್ಥಿಸಿದಳು.

ಮಧ್ಯರಾತ್ರಿಯ ಸುಮಾರಿಗೆ ಗೌರಿಗೆ ನರಳುವುದು ನಿಂತಿತು. ಗುಣದಮ್ಮ ಗಾಬರಿಯಾಗಿ ಪಟ್ಟಿಯನ್ನು ಬದಲಿಸಿ ಮುಟ್ಟಿ ನೋಡಿದಳು. ಮೈಯಿನ್ನೂ ಸುಡುತ್ತಿತ್ತು. ಗೌರಿ ನಿದ್ರಿಸುತ್ತಿದ್ದಳು. ಮೆಲ್ಲನೆದ್ದು ಹೊರ ಬಂದಳು. ಹೊರಗೆ ಹಾಲು ಚೆಲ್ಲಿದಂಥ ಬೆಳ್ದಿಂಗಳಿತ್ತು. ಇನ್ನೂ ಎಚ್ಚರವಿದ್ದ ಗಂಗ ಬೊಂತೆಯರಿಗೆ ನಾಳೆ ಹೊರಡುವುದಕ್ಕೆ ಆಗುವುದಿಲ್ಲವೆಂದು ಹೇಳಿ ಅವರೊಂದಿಗೆ ಮಾತಾಡುತ್ತ ಕೂತಳು.

ಈಗವಳಿಗೆ ಗೌರಿಯೇ ಕನಕಪುರಿಯ ರಾಜಕುಮಾರಿ ಎಂದು ಗೊತ್ತಾಗಿತ್ತು. ಅವಳ ಅಣ್ಣ, ಸೇವಕರು, ಅವಳು ಕದ್ದು ತಂದು ಊಟ ಹಾಕಿದ್ದು – ಕನಕಪುರಿಯ ರಾಜಭಟರು ಇವಳನ್ನು ಹುಡುಕಿಕೊಂಡು ಬಂದದ್ದು – ಇದನ್ನೆಲ್ಲ ಜ್ಞಾಪಿಸಿಕೊಂಡಳು. ಹಿರಿಯರಿಗೆ ಹೇಳದೆ ಕೇಳದೆ ಇವಳನ್ನು ಕರೆದು ತಂದದ್ದು ಒಂದಾದರೆ ಈಗವಳು ಸತ್ತರೆ ಆ ಅಪರಾಧವೂ ತನ್ನ ಮೇಲೆ ಬರುವುದೆಂದು ಭಯದಿಂದ ಬಿಳಿಚಿಕೊಂಡಳು. ಕೊನೆಗೆ ಇದೆಲ್ಲ ತಾಯಿಯ ಮಾಯೆ, ಅವಳೇ ಕಾಪಾಡಲೆಂದು ಬೇಡಿಕೊಳ್ಳುತ್ತ ಹಾಗೇ ತೂಕಡಿಸುತ್ತ ಅಲ್ಲೆ ನಿದ್ದೆ ಹೋದಳು.

ಬೀಡಿನ ಮೊಗಸಾಲೆಯಲ್ಲಿ ಗೌರಿ ಒಬ್ಬಳೇ ಮಲಗಿದ್ದಳು. ಬೆಳ್ಳಿ ಮೂಡುವ ಹೊತ್ತು ಬೆಳಗಿನ ತಂಗಾಳಿ ಬೀಸಿ ಗೌರಿಗೆ ಎಚ್ಚರವಾಯಿತು. ಬಾಯಾರಿಕೆಯಾಗಿತ್ತು. ನೀರಿಗಾಗಿ “ಗುಣದಮ್ಮಾ” ಎಂದು ಪಕ್ಕದಲ್ಲಿ ಮಲಗಿದ್ದ ಗುಣದಮ್ಮನಿಗಾಗಿ ಕೈಯಾಡಿಸಿದಳು. ಬಿಳಿಯ ಕಂಬಳಿ ಹೊದ್ದುಕೊಂಡು ಮಲಗಿರುವಳೆಂದು ‘ಗುಣದಮ್ಮ’ ಎಂದು ಅಲುಗಾಡಿಸಲು ನೋಡಿದಳು. ಬೆಟ್ಟದಂತೆ ಗಾತ್ರ ಮತ್ತು ಸ್ಪರ್ಶದಲ್ಲಿ ಗಟ್ಟಿ ಹತ್ತಿದ್ದರಿಂದ ಇದೇನೆಂದು ಚಕಿತಳಾಗಿ ಮೆಲ್ಲಗೆ ಎದ್ದು ನೋಡಿದಳು. ಮೊದಮೊದಲು ಏನೆಂದು ಗುರುತಾಗಲಿಲ್ಲ. ಗಾಬರಿಯಾಗಿ ಕೂಗುವುದಕ್ಕೂ ಶಕ್ತಿ ಬರಲಿಲ್ಲ. ತೆವಳುತ್ತ ಹೋಗಿ ಕಂಬಕ್ಕೆ ಕಟ್ಟಿದ್ದ ಉರಿಯುವ ಪಂಜನ್ನು ಕಿತ್ತುಕೊಂಡು ಬಂದು ನೋಡಿದಳು. ಬೆಳ್ಳಗೆ ಶುಭ್ರವಾದ ಎತ್ತಿನಂಥ ಆಕೃತಿ ಕಂಡಿತು. ತಕ್ಷಣ ಇನ್ನಷ್ಟು ಹತ್ತಿರ ಬಂದು ನೋಡಿದಳು. ಅದೂ ಕತ್ತೆತ್ತಿ ನೋಡಿದಾಗ ಆನೆಗಾತ್ರದ ಹೋರಿ ತನ್ನ ಹಾಸಿಗೆಯಲ್ಲಿ ಮುಖ ಚಾಚಿ ಮಲಗಿದ್ದದ್ದು ಈಗ ಕತ್ತೆತ್ತಿ ಕಿವಿ ಆಡಿಸಿತು! ತಕ್ಷಣ ಆನಂದ ತಡೆಯಲಾರದೆ “ಭೈರಾs” ಎಂದು ಕಿರಿಚಿ ಪಂಚನ್ನು ಕಂಬಕ್ಕಂಟಿಸಿ ಬಂದು ಭೈರನ ಕತ್ತು ತಬ್ಬಿಕೊಂಡಳು. “ಗಂಗ, ಗುಣದಮ್ಮ ಬೊಂತೆಯಾ…. ಬರ್ರ್ಯೊ, ಭೈರ ಬಂದಿದ್ದಾನೆ ಬನ್ರೊ” ಎಂದು ಕಿರಿಚಿ ಮತ್ತೆ ಮತ್ತೆ ಭೈರನನ್ನ ತಬ್ಬಿಕೊಂಡಳು.

ಗೌರಿಯ ಗಾಬರಿಯ ದನಿ ಕೇಳಿ ಬೊಂತೆಯ ಒಳ ಬಂದ. ನೋಡಿದರೆ ಗೌರಿ ಎತ್ತಿನ ಕತ್ತು ತಬ್ಬಿ ಭೈರಾ ಭೈರಾ ಎಂದಳುತ್ತಿದ್ದಾಳೆ! ಅಷ್ಟರಲ್ಲಿ ಗುಣದಮ್ಮ ಗಂಗರೂ ಬಂದರೂ. ಉಕ್ಕಿಬಂದ ಆನಂದ ತಡೆಯಲಾರದೆ ಅಥವಾ ತನ್ನ ಸಂಕಟ ದೂರವಾಯಿತೆಂಬಂತೆ “ಗುಣದಮ್ಮ ಭೈರ ಬಂದಿದ್ದಾನೆ!” ಎಂದಳು. ಅವರಿನ್ನೂ ಗಾಬರಿಯಲ್ಲಿ ಆನೆ ಗಾತ್ರದ ಹೋರಿಯನ್ನೇ ನೋಡುತ್ತಿದ್ದರೆ, ಗೌರಿ “ಇವನು ನಮ್ಮ ಭೈರ! ಶಿವಾಪುರದ ಭೈರ!” ಅಂದಳು. ಗುಣದಮ್ಮನಿಗೆ ಆಗ ಗುರುತು ಹತ್ತಿತು!

“ಆಯ್ ಶಿವನ! ಇದು ನಿನ್ನಡಿಯ ಹೋರಿ! ಭೈರ!”

ಎಂದು ಹತ್ತಿರಬಂದು ಎರಡೂ ಕೈಗಳಿಂದ ಭೈರನನ್ನು ಮುಟ್ಟಿ ಅದರ ಬಾಲವನ್ನು ಕಣ್ಣಿಗೊತ್ತಿಕೊಂಡಳು. ಆಮೇಲೆ ಉಳಿದವರು ಗುರುತಿಸುವುದು ತಡವಾಗಲಿಲ್ಲ. ಅವರೂ ಗುಣದಮ್ಮನನ್ನು ಅನುಸರಿಸಿ ಭೈರನ ಬಾಲ ಕಣ್ಣಿಗೊತ್ತಿಕೊಂಡು ಧನ್ಯರಾದರು.

ಭೈರ ಇದ್ದಾನೆಂದರೆ ನಿನ್ನಡಿಯೂ ಬಂದಿರಬೇಕಲ್ಲಾ ಎಂದು ಹುಡುಕುವಾಗ – ಮೊಗಸಾಲೆಯ ಬಾಗಿಲೊಳಗೆ ಮನೆ ಹಿರಿಯ, ಮತ್ತವನ ಮಡದಿ ಮಕ್ಕಳು ನೆಮ್ಮದಿಯಿಂದ ನಗುತ್ತ ನಿಂತಿದ್ದರು. ಹಿರಿಯನಿಂದ ವಿಷಯ ತಿಳಿಯಿತು: ನಿನ್ನೆ ಮಧ್ಯೆ ರಾತ್ರಿ ಕಳೆದ ಮೇಲೆ ನಿನ್ನಡಿ, ಚಂಡೀದಾಸರು ಬಂದರೆಂದೂ ಗೌರಿಯ ಜಡ್ಡಿನ ವಿಷಯ ಗೊತ್ತಾಗಿ ಆಗಲೇ ನಾಡೀ ನೋಡಿದರೆಂದೂ, ಈಗ ಎರಡು ಗಳಿಗೆ ಹಿಂದಯಷ್ಟೇ ಮದ್ದು ತರೋದಕ್ಕೆ ಕಾಡಿಗೆ ಹೋಗಿರುವರೆಂದೂ ಗೊತ್ತಾಯಿತು. ಇದನ್ನು ಕೇಳಿ ಗೌರಿ ಆನಂದದಿಂದ ಜಲ ಜಲ ಕಣ್ಣೀರುಗರೆದಳು.

ಅದಾಗಿ ಗೌರಿ ಕಣ್ಣು ಮುಚ್ಚಿ ಮುಖ ಕಿವುಚಿ ‘ಅಯ್ಯೋ ಇದು ಮತ್ತೇ ಸುರುವಾಯಿತೇಂದು’ ಹೊಟ್ಟೆ ಹಿಸುಕಿಕೊಂಡಳು. ಅಷ್ಟರಲ್ಲಿ ಚಂಡೀದಾಸ ಸೊಪ್ಪು ಹಿಡಿದುಕೊಂಡು ಕಾಡಿನಿಂದ ಬಂದ. ಹೊಳೆವ ಕಣ್ಣಿನಿಂದ ಗೌರಿಯನ್ನೇ ನೋಡುತ್ತ ಅವಳ ಮುಂದೆ ಕೂತ. ದನಿ ಗುರುತಾಗಿ ನೋಡಿದರೆ ಚಂಡೀದಾಸ! ‘ತಾತಾ’ ಎನ್ನುತ್ತ ಮಗು ತಾತಾನ ಹತ್ತಿರ ಧಾವಿಸುವಂತೆ ಅವನನ್ನು ತಬ್ಬಿಕೊಂಡಳು. ಚಂಡೀದಾಸ “ಹೇಳದೆ ಕೇಳದೆ ಹೀಗೆ ಬಂದು ಬಿಡೋದಾ?” ಎಂದು ಹೇಳಿ ತಕ್ಷಣ ಅವಳ ಮೈ ಬಿಸಿಯಾದುದನ್ನು ಗಮನಿಸಿ “ಈಗ ಹೇಳು, ನೋವು ಸುರುವಾಯಿತೆ” ಅಂದ.

“ಹೌದು” ಎಂಬಂತೆ ಕತ್ತು ಹಾಕಿ, ಹೊಟ್ಟೆ ತೆರೆದು ನೋವಿದ್ದಷ್ಟು ಭಾಗವನ್ನು ಬೆರಳಿನಿಂದ ಗೆರೆ ಬರೆದು ತೋರಿಸುತ್ತ,

“ಕನಕಪುರಿ ಬಿಟ್ಟಾಗಿನಿಂದ ದಿನಾ ನೋಯುತ್ತಿದೆ. ನಾನು ಸಾಯ್ತಿನಿ ತಾತಾ”

ಎಂದು ಬಿಕ್ಕಿ ಬಿಕ್ಕಿ ಪುನಃ ತಬ್ಬಿಕೊಂಡು ಅಳತೊಡಗಿದಳು.

“ಅದಕ್ಕೆ ನಿನ್ನಡಿ ಮತ್ತು ನಾನು ಬಂದಿರೋದು. ಇನ್ನು ಬಿಟ್ತು ಅನ್ನು”

ಅಂದ ಅವಳ ತಲೆ ನೇವರಿಸುತ್ತ, ಆದರೂ ಅವಳು ಅಳುತ್ತಿರಲು

“ಬಿಟ್ಟು ಅನ್ನು” ಎಂದು ಒತ್ತಾಯ ಮಾಡಿದ.

ಗೌರಿ ಬಿಕ್ಕುತ್ತಲೇ “ಬಿಟ್ತು” ಅಂದಳು. ಗೌಡ್ತಿಯನ್ನು ಕರೆದು, ತಂದಿದ್ದ ಸೊಪ್ಪನ್ನು ಅವಳ ಕೈಗಿಟ್ಟ:

“ನೀನು ಮುದ್ದುವಿಗೆ ಒಂದೆರಡು ಚೊಂಬು ಸ್ನಾನ ಮಾಡಿಸಿ ಈ ಸೊಪ್ಪಿನ ರಸವನ್ನು ಅವಳ ಹೊಟ್ಟೆ ಬೆನ್ನಿಗೆ ಸವರಬೇಕು. ಅದು ಆರಿದ ಮೇಲೆ ಸೂರ್ಯೋದಯವಾಗುವಾಗ ಮಂಟಪದ ಹಿಂದಿನ ಹಾಸುಗಲ್ಲಿಗೆ ಕರೆದುಕೊಂಡು ಬರಬೇಕು. ಹೊಟ್ಟೆಗೇನೂ ತಗೊಳ್ಳುವುದು ಬೇಡ. ನಾವಲ್ಲಿ ಕಾಯುತ್ತೇವೆ.”

– ಎಂದು ಹೇಳಿ ಹೋದ.

ನಿನ್ನಡಿಯಾಗಲೆ ಮಿಂದು ಬಂದು ಹಟ್ಟಿಯ ಹೊರಗಿನ ಹಾಸುಗಲ್ಲಿನ ಮ್ಯಾಲೆ ಸೂರ್ಯಮಂಡಲ ಬರೆದು ಕಾಯುತ್ತಿದ್ದ. ಗೌರಿ ಚಂಡೀದಾಸರು ಬಂದೊಡನೆ ರೋಗಿ ನಿಲ್ಲುವ ಸ್ಥಳದಲ್ಲಿ ಅವಳನ್ನು ಮೂಡಣ ಮುಖವಾಗಿ ನಿಲ್ಲಿಸಿ, ಸಸ್ಯದೇವತೆಗಳು, ಮತ್ತವನ ಪರಿವಾರ ಸಮೇತ ಸರ್ಯನಾರಾಯಣ ಸ್ವಾಮಿಯನ್ನು ಆವಾಹಿಸಿದ. ಆಮೇಲೆ ಅವಳ ಹಿಂದೆ ಬಿದ್ದ ನೆರಳಿನ ಉದರ ಭಾಗ ಮೂಡಿದಲ್ಲಿ ಬಣ್ಣದಿಂದ ಗುರುತು ಮಾಡಿ, ಪಡುವಣಕ್ಕೆ ಮುಖಮಾಡಿ ನಿಲ್ಲಿಸುವಂತೆ ಚಂಡೀದಾಸನಿಗೆ ಹೇಳಿದ. ಚಂಡೀದಾಸ ಗೌರಿಯನ್ನು ತಿರುಗಿಸಿ ಹಿಂದಿನ ನೆರಳೀಗೂ ಈಗಿನದ್ದಕ್ಕೂ ತಾಳೆಯಾಗುವಂತೆ ಹಿಂದೆ ಮುಂದೆ ಎಡ ಬಲ ಸರಿಸಿ ನಿಲ್ಲಿಸಿದ. ನಿನ್ನಡಿ ಈಗ ಮತ್ತೊಮ್ಮೆ ಬಣ್ಣದಲ್ಲಿ ಗುರುತು ಮಾಡಿ ಮೊದಲಿನಂತೆ ಮತ್ತೆ ಮೂಡಣ ಮುಖವಾಗಿ ನಿಲ್ಲಿಸುವಂತೆ ಹೇಳಿದ.

ಈಗ ಚಂಡೀದಾಸ ಸೂರ್ಯನಮಸ್ಕಾರ ಹಾಕಲು ಸುರುಮಾಡಿದ. ನಿನ್ನಡಿ ಮಂತ್ರೋಚ್ಛಾರಣೆ ಮಾಡುತ್ತ ಬಣ್ಣದ ಗುರುತು ಮಾಡಿದಲ್ಲಿ ಗರಿಕೆಯಿಂದ ಕೊರೆಯುತ್ತ ಮತ್ತೆ ಮತ್ತೆ ಗೆರೆಯೆಳೆದ. ಇದು ನೂರಹತ್ತು ಸೂರ್ಯ ನಮಸ್ಕಾರಗಳು ಮುಗಿಯುವ ತನಕ ನಡೆಯಿತು. ಅಮೇಲೆ ನಿನ್ನಡಿ ಮತ್ತು ಚಂಡೀದಾಸ ಇಬ್ಬರೂ ಸೂರ್ಯನಿಗೂ ಸಸ್ಯದೇವತೆಗಳಿಗೂ ಕೃತಜ್ಞತೆ ಹೇಳಿ ವಿಸರ್ಜಿಸಿದರು.

ನಂಬುವುದೂ ಬಿಡುವುದೂ ನಿಮಗೆ ಬಿಟ್ಟದ್ದು. ವಿಷಗಳಲ್ಲಿ ಬೇಕಾದಷ್ಟು ವಿಧಗಳಿವೆ. ಕೆಲವು ವಿಷಗಳು ತಜ್ಞರಿಗೆ ಕೂಡ ತಮ್ಮ ಸ್ವರೂಪ, ವ್ಯಾಪ್ತಿ ಹಾಗೂ ಉದ್ದೇಶದ ಗುಟ್ಟು ಬಿಟ್ಟುಕೊಡುವುದಿಲ್ಲ. ಅಂಥವನ್ನು ಪತ್ತೆ ಮಾಡಿ ತೆಗೆದು ಹಾಕಲು ಶಿವಾಪುರದ ವೈದ್ಯಪ್ರಸ್ಥಾನ ಕಂಡುಕೊಂಡ ಶಸ್ತ್ರಚಿಕಿತ್ಸೆಯ ಪೂರ್ವೀ ಪದ್ದತಿ ಇದು. ಸೂರ್ಯನ ಹರಿತವಾದ ಬಿಸಿಲಲ್ಲಿ ವಿಷಪ್ರಾಶನ ಮಾಡಿದ ರೋಗಿಯ ಮೈಗೆ ನಿರ್ದಿಷ್ಟ ಸೊಪ್ಪಿನ ರಸ ಸವರಿ ನಿಲ್ಲಿಸಬೇಕು. ಆಗ ಸೂರ್ಯನ ಕಿರಣಗಳು (ಇಂದಿನ ಕ್ಷ ಕಿರಣದಂತೆ) ದೇಹದಲ್ಲಿ ಪ್ರವೇಶಿಸಿ ವಿಷದ ವ್ಯಾಪ್ತಿಯನ್ನು ದಟ್ಟ ಛಾಯೆಯ ಮೂಲಕ ತೋರಿಸುತ್ತವೆ. ಸೂಕ್ಷ್ಮವಾಗಿ ಕಾಣಿಸುವ ಅದರ ಸೀಮೆಯನ್ನು ಬಣ್ಣದಿಂದ ಗುರುತಿಸುತ್ತಾರೆ. ಆಮೇಲೆ ಮಂತ್ರೋಪಚಾರಣೆ ಮಾಡುತ್ತ ಗರಿಕೆಯ ತುದಿಯಿಂದ ಆ ಛಾಯೆಯನ್ನು ಕತ್ತರಿಸುತ್ತಾರೆ. ಒಳಗಿನ ವಿಷ ಮಲದ ಮೂಲಕ ಹೊರಹೋಗುತ್ತದೆ. ಇದು ಏಕಾಗ್ರತೆ ಮತ್ತು ಪರಿಶ್ರಮದಿಂದ ಸಾಧಿಸುವ ವೈಧ್ಯಸಿದ್ಧಿ. ಅದು ಶಿವಪಾದನಿಗೆ, ಅವನಿಂದ ನಿನ್ನಡಿಗೆ ಸಿದ್ದಿಸಿತ್ತು. ಕಲಿತದ್ದನ್ನು ಪ್ರಯೋಗಿಸುವ ಅವಕಾಶ ಇಲ್ಲಿತನಕ ಬಂದಿರಲಿಲ್ಲ. ಅದು ಯಶಸ್ವಿಯಾಯಿತೆಂದು ನಿನ್ನಡಿ ಸಂತೋಷಪಟ್ಟ. ವೈದ್ಯಕ್ರಿಯೆ ಮುಗಿದ ಮೇಲೆ ಗೌರಿಗೆ ಆಯಾಸವಾಗಿತ್ತು. ಮಂಟಪದಲ್ಲಿ ಮಲಗಿಸಿದರು. ಗುಣದವ್ವ ಜೊತೆಗಿದ್ದಳು. ಅದೇನೇ ಇರಲಿ ಅಂದಿನಿಂದ ಗೌರಿಯ ಉದರಶೂಲೆಯಂತೂ ಇಲ್ಲವಾಯಿತು.

ಗೌರಿಗೆ ಆ ದಿನ ವಿಶ್ರಾಂತಿ ಬೇಕಿತ್ತು. ಗೌರಿಯ ಜೊತೆ ನಿನ್ನಡಿ, ಚಂಡೀದಾಸ, ಬೊಂತೆಯರೂ ಉಳಿದರು. ಉಳಿದ ಯಾತ್ರಿಕರು ಶಿವಾಪುರಕ್ಕೆ ಪಯಣ ಮಾಡಿದರು.

ನಿನ್ನಡಿಯನ್ನು ನೋಡಿ ಹಟ್ಟಿಯವರಿಗಾದ ಹರುಷ ಅಷ್ಟಿಷ್ಟಲ್ಲ. ಗೌರಿಯ ಆರೈಕೆಗಾಗಿ ಇದ್ದ ತೋಟದ ಮನೆಯಲ್ಲೇ ಇವರನ್ನುಳಿಸಿಕೊಂಡು ಹೊಸ ಯಾತ್ರಿಕರಿಗೆ ಮಂಟಪ ಬಿಟ್ಟುಕೊಟ್ಟರು . ಶಿವಾಪುರಕ್ಕೆ ಹೋದ ಕೂಡಲೇ ಗೌರಿ ಮತ್ತು ನಿನ್ನಡಿ ಕೂಡಿದ ಹಬ್ಬದ ಕಾರ್ಯ ನಡೆಯಬೇಕೆಂಬುದು ಶಿವಪಾದನ ಇಚ್ಛೆಯಾಗಿರುವುದರಿಂದ ಅದನ್ನು ಅಮ್ಮನ ಪರ್ವದ ದಿನವೇ ನೆರವೇರಿಸಲು ಐವರೂ ಮಾತಾಡಿಕೊಂಡರು. ಈ ವ್ಯವಸ್ಥೆಗೆ ಗೌರಿಯ ಒಪ್ಪಿಗೆ ಪಡೆದು ಮದ್ದು ಕೊಟ್ಟು ಮಲಗಿಸಿ ನಿನ್ನಡಿ ಮತ್ತು ಚಂಡೀದಾಸರು ಹೊರಬಂದರು.

ದಟ್ಟ ಬೆಳ್ದಿಂಗಳ ಮಾಯೆ ತೋಟವನ್ನು ಆವರಿಸಿತ್ತು. ದನಗಳ ಬಳಿ – ಮೆಲುಕಾಡಿಸುತ್ತ ನಿಂತಿದ್ದ ಭೈರನ ಬೆನ್ನ ಮೇಲೆ ನಿನ್ನಡಿ ಕೈಯಾಡಿಸಿ ಬಂದ ಮೇಲೆ ಇಬ್ಬರೂ ಕಣದಲ್ಲಿ ಮೇಟಿಯ ಬಳಿ ಕೂತರು.

ಗೌರಿಯ ಉದರಶೂಲೆ ವಿಷಪ್ರಾಶನದಿಂದ ಆದುದು, ಅವಳಿಗ್ಯಾರು ವಿಷ ಕೊಟ್ಟಿರಬಹುದೆಂದು ಇಬ್ಬರ ಚರ್ಚೆಯ ವಿಷಯವಾಗಿತ್ತು. ಇದು ಸುಮಾರು ಒಂಬತ್ತು ಹತ್ತು ದಿನಗಳ ಹಿಂದೆ ತಗೊಂಡ ವಿಷ. ಆವಾಗ ಅವಳು ಕನಕಪುರಿಯಲ್ಲೇ ಇದ್ದಳು. ಅಲ್ಲಿ ಅವಳ ಶತ್ರು ಇರುವುದು ಸಾಧ್ಯವೇ ಇಲ್ಲ ಎಂದು ನಿನ್ನಡಿ ಅಂದರೆ – ಶಿವಾಪುರಕ್ಕೆ ಹೋಗುವ ಇವಳ ಹಟ ನೋಡಿ ಶಿಖರಸೂರ್ಯನೇ ಕೊಟ್ಟಿರಬೇಕೆಂದು ಚಂಡೀದಾಸ ಹೇಳಿದ. ಈ ಸಲದ ಪರ್ವಕ್ಕೆ ಕನಕಪುರಿಯ ಜನರು ವಲಸೆ ಬರುವುದನ್ನ ಚರ್ಚಿಸಿದರು. ಕನಕಪುರಿಯ ಗಡಿಯಲ್ಲಿ ಗಡ್ಡೀಬೇನೆ ಹರಡುವ ಲಕ್ಷಣಗಳು ಕಂಡು ಬಂದುದನ್ನು ಮಾತಾಡಿದರು. ಸದರಿ ಕೃತಕ ಬರಗಾಲಕ್ಕೆ ಚಿನ್ನದ ಹಪಾಪಿತನವೇ ಕಾರಣವೆಂದು, ಶಿವಾಪುರದಲ್ಲಿ ಕೊನೆಪಕ್ಷ ದಿನಕ್ಕೆರಡು ಬಾರಿ ಅಂಬಲಿಯಾದರೂ ಸಿಗುತ್ತದೆಂದು ಕನಕಪುರಿಯ ನಿರ್ಗತಿಕರು, ಭಿಕ್ಷುಕರು ವಲಸೆ ಬರತೊಡಗಿದ್ದರು. ದಿನಕ್ಕೆ ಇಬ್ಬರು ಮೂವರು ಬಂದರೂ ಶಿವಾಪುರದಂಥ ಊರಿಗದು ಭಾರವೇ. ಯಾಕೆನೆ ಶಿವಾಪುರ ಕೃಷಿಯನ್ನೇ ನೆಚ್ಚಿದ ಊರು. ಅವರವರ ಹೊಲ ತೋಟಗದ್ದೆಗಳನ್ನು ಅವರವರೇ ನೋಡಿಕೊಂಡು ಬೇಕಾದಷ್ಟನ್ನು ಬೆಳೆದು ಉಳಿದುದನ್ನು ಧರ್ಮಕರ್ಮಕ್ಕೆ ಅಂತ ಇಟ್ಟುಕೊಂಡು ಬಾಳುತ್ತ ಬಂದವರು. ಬೇರೆ ಕಡೆ ಅನ್ನದ ಆಧಾರವಾಗುವತನಕ ಇದ್ದವರೇ ಈಗಾಗಲೇ ನೂರಾರು ಜನರಾಗಿದ್ದರು, “ನಮ್ಮಲ್ಲಿ ಕಡೇ ಧಾನ್ಯ ಇರೋತನಕ ಅತಿಥಿಗಳಿಗೆ ನಿತ್ಯ ದಾಸೋಹ ನಡೆಯಲಿ. ಧಾನ್ಯ ಮುಗಿದ ಮೇಲೆ ತಾಯಿ ನೋಡಿಕೊಳ್ತಾಳೆ” ಎಂದು ಶಿವಪಾದ ಅಪ್ಪಣೆ ಕೊಟ್ಟಿದ್ದ. ದಾಸೊಹವಾಗಲೇ ಸುರುವಾಗಿ ತಿಂಗಳಾಗಿತ್ತು. ಸುತ್ತಲಿನ ಹಟ್ಟಿಯವರಿಗೆ ಈ ಸುದ್ದಿ ಗೊತ್ತಾಗಿ ತಂತಮ್ಮಲ್ಲಿದ್ದ ಹೆಚ್ಚಿನ ಧಾನ್ಯವನ್ನು ಉದಾರವಾಗಿ ತಂದು ಶಿವಾಪುರದ ಮಂಟಪದಲ್ಲಿ ಸುರುವಿ ಹೋಗಿದ್ದರು.

ಇದನ್ನೆಲ್ಲ ಚರ್ಚಿಸಿ ಇನ್ನು ಮಲಗಬೇಕೆಂದು ಏಳುವಾಗ ನಿನ್ನಡಿಯ ಬಟ್ಟೆಯನ್ನು ಯಾರೋ ಹಿಡಿದು ಎಳೆದಂತಾಯಿತು. ಏನೆಂದು ನೋಡಿದರೆ – ಇವರಿಗೆ ಗೊತ್ತಾಗದಂತೆ ಯಾವಾಗಲೋ ಬಂದ ಗೌರಿ ನಿನ್ನಡಿಯ ಬಟ್ಟೆಯ ಚುಂಗನ್ನು ತನ್ನ ಬೆರಳಿಗೆ ಸುತ್ತಿಕೊಂಡು ನಿದ್ದೆ ಹೋಗಿದ್ದಳು. ಇಬ್ಬರೂ ಪರಸ್ಪರ ಮುಖ ನೋಡಿ ನಕ್ಕರು. ನಿನ್ನಡಿ “ಗೌರೀ” ಅಂದ. ಗೌರಿ ಎಚ್ಚರವಾಗಿ ಎದ್ದು ಕೂತಳು. ಚುಂಗು ಕಟ್ಟಿಕೊಂಡ ಬೆರಳು ತೋರಿಸಿ “ಇದೇನು”? ಅಂದ. “ನೀನು ನನ್ನನ್ನ ಬಿಟ್ಟು ಹೋಗುತ್ತಿ ಅಂತ ಅನುಮಾನ ಬಂದು ಕಟ್ಟಿಕೊಂಡಿದ್ದೆ” ಅಂದು ಬೆರಳಿನ ಗಂಟು ಬಿಚ್ಚಿಕೊಂಡಳು. ಇಬ್ಬರೂ ನಕ್ಕರು.

ಮಾರನೇ ಬೆಳಿಗ್ಗೆ ಭೈರನ ಮೇಲೆ ಗೌರಿಯನ್ನು ಕೂರಿಸಿಕೊಂಡು ಉಳಿದ ನಾಲ್ವರೂ ನಡೆಯುತ್ತ ಶಿವಾಪುರಕ್ಕೆ ಹೊರಟರು. ಇಡೀ ಹಟ್ಟಿ ಅವರೊಂದಿಗೆ ಹೊರಟಿತು.

ಆಗ ಗೌರಿ ಬೆಳ್ದಿಂಗಳಲ್ಲಿ ಅದ್ದಿ ತೆಗೆದ ಸುಂದರ ಗೊಂಬೆಯಂತೆ ಕಂಡಳು ನಿನ್ನಡಿಗೆ.