ಇತ್ತ ಕಂಚಿಯಲ್ಲಿ ವಿಶ್ವರೂಪಾಚಾರ್ಯನ ಆರೋಗ್ಯ ದಿನೇ ದಿನೇ ಇಳಿಮುಖವಾಗುತ್ತಿತ್ತು. ಮೂಗಿನ ತುದಿಯಲ್ಲೇ ಮುಂಗೋಪ  ಕೂತಿರುತ್ತಿತ್ತು. ಎದುರು ಮಾತನ್ನ ಸಹಿಸುತ್ತಿರಲಿಲ್ಲ. ವಿನಾಕಾರಣ ಕಿರಿಕಿರಿ ಮಾಡುತ್ತಿದ್ದ ಮಗಳು ತಪ್ಪು ಮಾಡಿ ಮೋಸ ಹೋದಳೆಂದು, ಇದಕ್ಕೆಲ್ಲ ತಾನು ಮೊದಲೇ ಹೇಳಿದಂತೆ ಕೇಳಲಿಲ್ಲವೆಂಬುದೇ ಕಾರಣವೆಂದು ಆತ ಹೇಳುವಂತಿತ್ತು. ಆದರೆ ಬಾಯಿಬಿಟ್ಟು ಹೇಳಲಾರ. ಮಾಯೆಯಿಂದ ಬೆಳೆಸಿದ ತಬ್ಬಲಿಮಗಳ ಮನಸ್ಸನ್ನ ನೋಯಿಸಲಾರ. ಅಜ್ಜಿ ಮಗಳ ಪರವಾಗಿ ಮಾತಾಡಿದಾಗೆಲ್ಲ ಸಲಿಗೆ ಕೊಟ್ಟು ಮಗಳನ್ನ ಮುದ್ದು ಮಾಡಿದರೆ ಆಗುಅ ಅಪಾಯದ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದ. ಈಗ ಮಗಳು ಪಶ್ಚಾತ್ತಾಪ ಪಡುವಂತಾಯಿತೆಂದು ನೋಂದು “ಶಿವ ಶಿವಾ ಎಂಥಾ ಸ್ಥಿತಿಗೆ ತಂದೆಯಪ್ಪಾ”  ಎಂದು ಪಲ್ಲವಿ ನುಡಿಯುತ್ತಿದ್ದ. ಮಗಳ ತೀರ್ಮಾನವನ್ನು ಅಣಕವಾಡಿ ನೋಯಿಸಿ ಮತ್ತೆ “ಮಗಳೇ ಮಗಳೇ, ನಿನ್ನನ್ನ ಶಿವನೇ ಕಾಪಾಡಬೇಕು ಎಂದು ಮರುಗುತ್ತಿದ್ದ. ಇಷ್ಟಾದರೂ ವಾಸಂತಿ ಮಾತ್ರ ಇನ್ನೂ ನಿರಾಶಳಾಗಿರಲಿಲ್ಲ. ಸಹನೆ ಇದ್ದರೆ ಪ್ರೀತಿ ಫಲ ನೀದುತ್ತದೆಂದೇ ನಂಬಿ – ಆ ನಂಬಿಕೆಯನ್ನ ತಂತಾನೇ ಹೇಳಿಕೊಂಡು ಆತ್ಮ ವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಳು.

ಆಚಾರ್ಯ ತನ್ನ ಮಗಳನ್ನು ಎಳೆಯ ಮಡದಿಯಾಗಿ ಕಲ್ಪಿಸಿಕೊಳ್ಳಬಲ್ಲವನಾಗಿದ್ದನೇ ಶಿವಾಯಿ ಎಳೆಯ ತಾಯಿಯಾಗಿ ಅಲ್ಲ. ಯಾಕೆಂದರೆ ತಾಯ್ತನಕ್ಕೆ ಜವಾಬ್ದಾರಿ ಅಂತಿದೆ. ಅದನ್ನ ಸ್ವಯಂ ಮಗುವಾಗಿರುವ ವಾಸಂತಿ ಹ್ಯಾಗೆ ನಿಭಾಯಿಸಿಯಾಳು? ತಾನು ಮತ್ತು ತನ್ನ ತಾಯಿ ಎಷ್ಟು ದಿನದವರು? ನಾವಿಲ್ಲದಾಗ ಇವಳನ್ನು ನೀಡಿಕೊಂಬವರು ಯಾರು? ರವಿಯನ್ನು ಅವಲಂಬಿಸಲಿಕ್ಕಾಗುವುದಿಲ್ಲವೆಂಬ ಮಾತು ಅವನಿಗೆ ಹೆಚ್ಚು ನೋವಿನದಾಗಿತ್ತು. ತನ್ನ ಮಗಳು ತನ್ನ ಆಯ್ಕೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ ಎನ್ನುವುದೇ ಮುದುಕನ ದುಃಖ ಮತ್ತು ಕಾಳಜಿಗೆ ಕಾರಣವಾಗಿತ್ತು. ಈಗೀಗಂತೂ ಮನೆ ಹಿಡಿದ ಶಿಲ್ಪಿ ಹೊರಗೆ ಬರುತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ವೃದ್ಧನಾದ. ಶಿಷ್ಯರಿಗೆ ಹೇಳಿಕೊಡುವುದನ್ನೂ ನಿಲ್ಲಿಸಿದ್ದರಿಂದ ಸಾಮಾನ್ಯವಾಗಿ ಶಿಷ್ಯರಿಂದ ತುಂಬಿರುತ್ತಿದ್ದ ಅಂಗಳ ಈಗ ಬಿಕೋ ಎನ್ನುತ್ತಿತ್ತು. ಒಂದು ಸಲ ಮಹಾರಾಜರು ಹೇಳಿಕಳಿಸಿದರೂ ಅನಾರೋಗ್ಯವೆಂದು ಹೋಗಲಿಲ್ಲ. ಸದಾಕಾಲ ಮನೆಯಲ್ಲಿ, ತನ್ನ ಹಾಸಿಕೆಯಲ್ಲೇ ಕುಂತಿರುತ್ತಿದ್ದ. ವಾಸಂತಿಯೇ ಅವನಿದ್ದಲ್ಲಿಗೆ ಹೋಗಿ ಊಟೋಪಚಾರ ನೋಡಿಕೊಳ್ಳುತ್ತಿದ್ದಳು. ಹುಟ್ಟಿದ ಕೂಸು ಬೆಳೆಯುತ್ತಲೇ ಇತ್ತು.

ರವಿಕೀರ್ತಿಯೋ ಅವಳಿಗೊಂದು ಘನವಾದ ನೆನಪನ್ನು ಕೊಟ್ಟು ಹೋಗಿದ್ದ. ಅದು ನೆನಪೋ, ಗಾಯವೋ ತಿಳಿಯದಂತಾಗಿತ್ತು. ಕೊನೆಗೆ “ಶಿವೇಚ್ಛೆ” ಅಂತಲೋ ಶಿವನೇ ಕಾಪಾಡಬೇಕು ಅಂತಲೊ ಮುದುಕ ತನ್ನ ಚಿಂತೆಗಳನ್ನು ಮುಗಿಸುತ್ತಿದ್ದ.

“ತೇನ ವಿನಾ ತೃಣಮಪಿ ನ ಚಲತಿ’ ಎಂಬ ಮಾತಿನಲ್ಲಿ ಅವನಿಗೀಗ ಎಲ್ಲಿಲ್ಲದ ನಂಬಿಕೆ ಬಂದುಬಿಟ್ಟಿತು. ಇಲ್ಲದಿದ್ದರೆ ಎಲ್ಲಿಯ ರವಿ, ಎಲ್ಲಿಯ ವಾಸಂತಿ – ಇವರನ್ನ ಕೂಡಿಸಿದ್ದು ಯಾವುದು? ಉತ್ತರ ಸಿಕ್ಕದೆ ಇದ್ದಾಗ ಆ ಕೂಸು ಅತ್ತಿತ್ತು. – ಖಂಡಿತ ಅದು ಉತ್ತರವಲ್ಲ ಎಂದು ಹೇಳಿಕೊಂಡ.

ಮಗು ರವಿಕಿರಣ ಹುಟ್ಟಿದ ಮೇಲೂ ವಾಸಂತಿ ರವಿಕೀರ್ತಿಯ ಸುದ್ದಿಯ ನಿರೀಕ್ಷೆಯಲ್ಲಿ ಇಡೀ ತಿಂಗಳು ಕಳೆದಳು. ಹಾಗೆಯೇ ಇನ್ನೆರಡು ತಿಂಗಳೂ ಕಳೆದಳು. ಮತ್ತೂ ಓಂದು ತಿಂಗಳು ಕಳೆದರೂ ಏನೊಂದು ಸುದ್ದಿಯೂ ಬಾರದೆ ಹತಾಶಳಾಗಿ ಅಜ್ಜಿಯ ಎದೆಗೊರಗುತ್ತಿದ್ದಳು. ಹೊರಗೆ ಹೋಗುತ್ತಿರಲಿಲ್ಲ. ಉತ್ಸಾಹ ರಹಿತಳಾಗಿ ಮನೆಯ ಹಿತ್ತಲ ಬಾಗಿಲಿನಿಂದ ತಲೆಬಾಗಿಲಿಗೂ ಅಡ್ಡಡುತ್ತಿದ್ದಳು. ರಾತ್ರಿ ಮಲಗಿದಾಗ ಗುಟ್ಟಾಗಿ ಅಳುತ್ತಿದ್ದಳು ಮಗು ಅತ್ತಾಗ ಅದರ ದನಿಯಲ್ಲಿ ಅಜ್ಜಿಗೂ ತಂದೆಗೂ ಕೇಳಿಸಿದಂತೆ ಬಿಕ್ಕುತ್ತಿದ್ದಳು. ಇವಳ ಬಾಡಿದ ಮುಖ ನೋಡಿ ನೋಡಿ ಅಜ್ಜಿ ರವಿಕೀರ್ತಿಯ ಮೇಲಿನ ಕೋಪದಿಂದ ಮನಸ್ಸಿನಲ್ಲೇ ಬಯ್ಯುತ್ತ ಕಣ್ಣುಕೆಂಪಗೆ ಮಾಡಿಕೊಂಡಿರುತ್ತಿದ್ದಳು. ಇದೇ ದುಃಖದಲ್ಲಿ ಹಾಸಿಗೆ ಹಿಡಿದ ತಂದೆ ಮ್ಯಾಲೆದ್ದಿರಲಿಲ್ಲ. ತನ್ನ ಗೋಳು ಮನೆಯಲ್ಲಿ ಮಾತ್ರವಲ್ಲದೆ ನೆರೆಹೊರೆಗೂ ಗೊತ್ತಾಗಿ ಅವರೆಲ್ಲ ತನ್ನನ್ನು ನೋಡಿ ಮರುಗುತ್ತಿರುವಂತೆ ಇಲ್ಲವೇ ನಗುತ್ತಿರುವಂತೆ ಇವಳಿಗನ್ನಿಸಿ ದೇವಸ್ಥಾನಕ್ಕೆ ಹೋಗುವುದನ್ನೂ ನಿಲ್ಲಿಸಿದ್ದಳು. ನೆರೆಹೊರೆಯವರ ಮರುಕ ಇವಳ ಸ್ವಾಭಿಮಾನವನ್ನು ಕೆಣಕಿದಂತಾಗಿ ತೀವ್ರ ಸಂಕಟವನ್ನು ಅನುಭವಿಸಿದಳು.

ಒಂದು ಸಲ ತಂದೆಗೆ ಮದ್ದು ಕುಡಿಸಿ ಮಲಗಿಸಲು ಪ್ರಯತ್ನಿಸಿದಾಗ ಆತ ಮಲಗದೆ ಹಾಗೇ ಗೋದೆಗೊರಗಿ ಕೂತು ಮಗಳ ಕಡೆಗೆ ನೋಡಿ ಏನನ್ನೋ ಹೇಳಲು ಪ್ರಯತ್ನಿಸಿದಾಗ ತಟ್ಟನೆ ವಾಸಂತಿ ಮಧ್ಯೆ ಬಾಯಿ ಹಾಕಿ

“ತಪ್ಪಾಯಿತಪ್ಪ. ನಾನಿನ್ನು ಮೇಲೆ ಆತನ ಬಗ್ಗೆ ಯೋಚನೆ ಮಾಡುವುದಿಲ್ಲ. ಆತ ಬಂದ, ಗಾಯ ಮಾಡಿ ಹೋದ…. ಅಷ್ಟೇ!” ಎನ್ನುತ್ತಿದಂತೆ ಧ್ವನಿ ಗದ್ಗದಿಸಿ “ನಾನು ನೆಮ್ಮದಿಯಿಂದ ಇದ್ದೇನಪ್ಪ!”

ಎಂದು ತಂದೆಯ ಎದೆಗೊರಗಿ ಬಿಕ್ಕಿ ಬಿಕ್ಕಿ ಅತ್ತಳೂ. ಅಮೇಲೆ ತಾನೇ ದುಃಖವನ್ನು ನಿಯಂತ್ರಿಸಿಕೊಂಡು ಒಳಕ್ಕೆ ಹೋದಳು.

‘ಆಡಾಡುತ್ತ ಆಗಬಾರದ್ದು ಆಗಿಹೋಯಿತು. ನಂಬಿಕೆಗೆ ಅನರ್ಹನಾದವನನ್ನ ದೂರಿ ಪ್ರಯೋಜನವೇನು? ಅವನನ್ನು ಮರೆತು ಎದುರಾದ ಸಮಸ್ಯೆಯನ್ನು ನಿಭಾಯಿಸುವುದು ಜಾಣತನ’ – ಎನ್ನುವುದು ಅಜ್ಜಿಯ ಒಟ್ಟಾರೆ ಅಭಿಪ್ರಾಯವಾಗಿತ್ತು. ‘ಇದ್ದೊಬ್ಬ ಮಗಳ ಬಾಳು ಹೀಗಾಯಿತಲ್ಲ! ತನ್ನ ಯಾವ ಜನ್ಮದ ಪಾಪ ಕ್ರೋಡೀಕೃತಗೊಂಡು ಹೀಗಾಯಿತೋ! ಮಗಳು ಮೊಮ್ಮಗಳ ನೆಮ್ಮದಿ ನೋಡಿ ‘ಶಿವಾ’ ಎಂದು ಉಸಿರೆಳೆಯಬೇಕೆಂದರೆ ಇಂಥಾ ಅಂತ್ಯ ತಂದೆಯಲ್ಲೋ ಶಿವನೇ’ ಎಂದು ಮುದುಕ ಒಳಗೊಳಗೇ ಗೋಳಿಡುತ್ತಿದ್ದ. ಇವರಿಬ್ಬರನ್ನು ಸಮಾಧಾನ ಮಾಡಲು ವಾಸಂತಿ ಹರಸಾಹಸ ಮಾಡುತ್ತಿದ್ದಳು. ತನಗೆ ಪ್ರಿಯವಾಗಿದ್ದ, ಅಜ್ಜಿ ಮತ್ತು ತಂದೆ ಇಬ್ಬರೂ ಮೆಚ್ಚಿಕೊಂಡಿದ್ದ ಹಾಡನ್ನು ತೊಟ್ಟಿಲು ತೂಗುವಾಗ ಗುನುಗುತ್ತಿದ್ದಳು. ಗುನುಗಿನ ಅಂತ್ಯಕ್ಕೆ ಬಿಕ್ಕು ಬಂದು ದನಿ ಕೀರಲಾಗಿ ನಿಲ್ಲಿಸುತ್ತಿದ್ದಳು. ಕನ್ನಡಿಯಲ್ಲಿ ನಿಂತು ಕುಂಕುಮ ಹಚ್ಚಿಕೊಂಬಾಗ ಅಳು ಬರುತ್ತಿತ್ತು. ತನ್ನ ಚಹರೆಯಲ್ಲಾದ ಬದಲಾವಣೆಗಳನ್ನು ಗಮನಿಸಿ ಭೀತಳಾಗುತ್ತಿದ್ದಳು. ಬಿಳಿಚಿಕೊಂಡ ಮುಖ ನೋಡಿ ಕಿರಚಬೇಕೆನಿಸುತ್ತಿತ್ತು.

ಒಂದು ದಿನ “ಈ ವಿಷಯವನ್ನು ಇಷ್ಟು ತಲೆಗಂಟಿಸಿಕೊಂಡು ಪ್ರಯೋಜನವೇನು? ಬಂದದ್ದನ್ನು ಎದುರಿಸಬೇಕಷ್ಟೆ. ಈಗಿರುವಂತೆ ಮುದಿ ಅಜ್ಜಿಗೂ ತಂದೆಗೂ ಮ್ಯಾಲೆ ಈ ಮಗುವಿಗೂ ತಾನೋಬ್ಬಳೇ ಆಧಾರ ನೆರೆಹೊರೆ ಏನೆಂದರೂ ಮಗು ಬೆಳೆಯುತ್ತಿರುವುದೇನು ಸುಳ್ಳಲ್ಲ. ಈ ಮೂವರನ್ನೂ ಕಟ್ಟಿಕೊಂಡು ಬದುಕುವುದು – ಅಷ್ಟೇ. ಮಿಕ್ಕದ್ದು ಶಿವನಿಚ್ಛೆ” – ಎಂದುಕೊಂಡು ಪೂರ್ವದ ಸಹಜಸ್ಥಿತಿಗೆ ಹಿಂತಿರುಗಲು ಗಟ್ಟಿ ಮನಸ್ಸು ಮಾಡಿದಳು.

“ಏನೇ ಬರಲಿ, ಎದುರಿಸಿ ನಿಮ್ಮಿಬ್ಬರನ್ನೂ ನೋಡಿಕೊಳ್ಳುತ್ತೇನೆ; ಮಗುವನ್ನೂ ಸಾಕುತ್ತೇನೆ. ನೀವು ಮಾತ್ರ ನನ್ನ ಬಗ್ಗೆ ಕಾಳಜಿ ಮಾಡುವುದು ಬೇಡ”

– ಎಂದು ಹೇಳಿ ಆಹಾರ ನಿರಾಕರಿಸಿದ ತಂದೆಗೆ ಒತ್ತಾಯ ಮಾಡಿ ಉಣಬಡಿಸಿದಳು. ಅವಳ ಗೆಲುವಿನ ಕಳೆ ನೋಡಿ ಆಚಾರ್ಯ ಮುಗುಳು ನಕ್ಕು ತನ್ನ ನೆಮ್ಮದಿಯನ್ನು ಸೂಚಿಸಿದ.

ನನ್ನ ಪಾಡಿಗೆ ನಾನಿರಲು ನೆರೆಹೊರೆ ಅವಕಾಶ ಕೊಟ್ಟರೆ ಸರಿ: ಇಲ್ಲದಿದ್ದರೆ ಅವರನ್ನೂ ಬಿಡುವುದಿಲ್ಲ.”

ಎಂದು ಅಜ್ಜಿಯ ಮುಂದೆ ಸಾರಿ ಹೇಳಿ ಧೈರ್ಯ ಪ್ರದರ್ಶಿಸಿದಳು.

ಆಚಾರ್ಯನ ಶಿಷ್ಯನೊಬ್ಬ ಸೇವೆ ಮಾಡಲು ಬರುತ್ತಿದ್ದ. ಅವನ ನೆರವಿನಿಂದ ತಾನೇ ಮನೆ ನಡೆಸಲು ಸಿದ್ದತೆ ಮಾಡಿಕೊಂಡು ಒಂದು ದಿನ ಕಳೆದಿತ್ತು. ಮಾರನೇ ದಿನ ಮುಂಜಾನೆ ಕುಂಕುಮ ಹಚ್ಚಿಕೊಳ್ಳಲು ಕನ್ನಡಿಯ ಮುಂದೆ ನಿಂತಿದ್ದಾಗ, ಮನೆಯ ಮುಂದೆ ಕುದುರೆಗಾಡಿ ನಿಂತ ಸದ್ದಾಯಿತು. ಕಿವಿ ಚುರುಕಾದವು. “ಯಾರದು”? ಎಂದು ಒಳಗಿನಿಂದಲೇ ಕೂಗುತ್ತ ‘ಕುದುರೆಗಾಡಿ’ ಎಂದರೆ ಇನ್ಯಾರು? ನನ್ನ ರವಿಯೇ” ಅವಸರದಲ್ಲಿ ಕುಂಕುಮ ಹಚ್ಚಿಕೊಳ್ಳಬೇಕೆಂದಾಗ ಕೈ ಜಾರಿ ಕರಡಿಗೆ ಕೆಳಗುರುಳಿ ಬಿದ್ದು ಕುಂಕುಮವೆಲ್ಲ ನೆಲದ ಮೇಲೆ ಚೆಲ್ಲಾಪಿಲ್ಲಿಯಾಯಿತು. ಅಪಶಕುನವೆಂದು ಭಯವಾಗಿ ಮೈ ಗಡಗಡ ನದುಗಿ ಬೆವರೊಡೆಯಿತು. ಕಾಲು ಸೋತು ನಿಲ್ಲಲಾಗದೆ ಕೆಳಗೆ ಕೂತಳು, ಕರೆಯದಿದ್ದರೂ ಬೆಂತೆಯ ಮತ್ತವನ ಜೊತೆಗೊಬ್ಬ ಸೈನಿಕ ಒಳಬಂದು ಮಿಗಸಾಲೆಯಲ್ಲಿ ನಿಂತು “ಆಚಾರ್ಯರು ಒಳಗಿದ್ದಾರೆಯೇ?”ಎಂದು ಆ ಸೈನಿಕ ಕೇಳಿದ ಮೊಗಸಾಲೆಗೆ ಹೋಗಬಹುದಾಗಿದ್ದವಳು, ಉತ್ತರಿಸುವಷ್ಟು ಶಕ್ತಿ ಇದ್ದವಳು ಮನೆಯಲ್ಲಿ ಅವಳೊಬ್ಬಳೇ ಆದ್ದರಿಂದ ಹೆದರಿಕೊಂಡೇ ಎದ್ದಳು. ಹೊರಗೆ ಹೋಗಬೇಕಿದ್ದವಳು ಅಪಶಕುನದ ಭಯದಿಂದ ಅಜ್ಜಿಯ ಬಳಿಗೆ ಹೋದಳು. ಹೊರಗೆ ಹೋಗಬೇಕಿದ್ದವಳು ಅಪಶಕುನದ ಭಯದಿಂದ ಅಜ್ಜಿಯ ಬಳಿಗೆ ಹೋದಳು. ಅಜ್ಜಿ ಹಾಸಿಗೆಯ ಮೇಲೆ ಮುಖದಲ್ಲಿ ಕಿಂಚಿತ್ತೂ ಕಾಂತಿಯಿಲ್ಲದೆ ಮಣ್ಣಲ್ಲಿ ಮಾಡಿದ ಗೊಂಬೆಯ ಥರ ಕುಂತಿದ್ದಳು. ಎದುರಿನ ಮಾಡದಲ್ಲಿ ಶಿವನ ವಿಗ್ರಹವಿತ್ತು. ಅದರಲ್ಲಿ ಕಣ್ಣು ಕೀಲಿಸಿ ಕೈಮುಗಿದು ಪ್ರಾರ್ಥಿಸುತ್ತಿದ್ದವಳು ಹೊರಗಡೆ ಸೈನಿಕನ ದನಿ ಕೇಳಿ ಯಾರು, ಏನು ಎಂದು ತಿಳಿಯಲು ಕುತೂಹಲಿಯಾದಳು.

“ಶಿವ ಕಾಪಾಡಲಿ, ಹೋಗು ಹೊರಗೆ ಯಾರೋ ಬಂದಿದ್ದಾರೆ. ಯಾಕೆಂದು ಕೇಳು”

– ಎಂದು ಮೊಮ್ಮಗಳನ್ನು ನಿಟ್ಟುಸಿರು ಬಿಡುತ್ತ ಕಳಿಸಿದಳು. ಯಾವುದೇ ಆಶಾಕಿರಣವಿಲ್ಲದ ಅವಳ ಮಾತಿನಲ್ಲಿ ಇನ್ನೇನು ಕಾದಿದೆಯೋ ಎಂಬ ಹತಾಶೆ ಬೇಕಾದಷ್ಟಿತ್ತು.

ಹೊರಬಂದು ಅಪರಿಚಿತ ವ್ಯಕ್ತಿಗಳನ್ನು ನೋಡಿ,-

“ಯಾರು ನೀವು?”

-ಎಂದಳು. ದಯಮಾಡಿ ಇನ್ನಷ್ಟು ಹಿಂಸೆ ಕೊಡಬೇಡಿ ಎಂಬಂತೆ ಅವಳ ದನಿಯಿತ್ತು. ಬೊಂತೆಯ ಎದೆ ತಟ್ಟಿ “ನಾನು ಬೊಂತೆಯ ರವಿಕೀರ್ತಿಯವರ ಬಂಟ” ಎಂದು ಹೇಳುವ ಸನ್ನೆಗಳನ್ನ ಅನೇಕ ಸಲ ಮಾಡಿದ. ಕೊನೆಗೆ ಮೇವಿನ ಸೈನಿಕ ಮುಂದೆ ಬಂದು-

“ವಾಸಂತಿ ಅಂದರೆ ನಿವೇನಾ?”

ಅಂದ. ಕಾತರದಿಂದ “ನಾನೇ” ಅಂದು ತುಸು ಹೊತ್ತು ಉದ್ವೇಗದಿಂದ ಮಾತನಾಡಲಿಲ್ಲ. ಸೈನಿಕ ಕಲಿತ ಮಾತು ಹೇಳಿದ:

“ನಾವು ಯುವರಾಜ ರವಿಕೀರ್ತಿಯವರ ಬಂಟರು…”

ಮುಂದೆ ಅವನನ್ನು ಮಾತಾಡಲಿಕ್ಕೆ ಬಿಡದೆ

“ಹ್ಯಾಗಿದ್ದಾರೆ? ಎಲ್ಲಿದ್ದಾರೆ?”

ಎಂದಳು. ಅದೇ ಸೈನಿಕ ನಿರ್ಭಾವದಿಂದ

“ಚನ್ನಾಗಿದ್ದಾರೆ, ಇದೇ ಊರಿಗೆ ಬಂದಿದ್ದಾರೆ. ಆಶ್ರಮದಲ್ಲಿದ್ದಾರೆ. ತಮ್ಮನ್ನು ಕರೆತರಲು ಗಾಡಿಕೊಟ್ಟು ನಮ್ಮನ್ನು ಅಟ್ಟಿದ್ದಾರೆ ತಾಯಿ.”

– ಅಂದ. ನಿಶ್ಚಿಂತೆಯ ನಿತ್ತುಸಿರು ಬಿಟ್ಟು ಅಜ್ಜಿಗೂ ತಂದೆಗೂ ಹೇಳಲು ಒಳಗೋಡಿದಳು. ಸುದ್ದಿ ಕೇಳಿ ಆಚಾರ್ಯನಿಗೆ ಹಿಡಿಸಲಾರದಷ್ಟು ಹಿಗ್ಗಾಯಿತು. ಮಗಳ ಕೈ ಹಿಡಿದು ಮ್ಯಾಲೆದ್ದು ಹೊರಬಂದು “ಬಂದೆಯಪ್ಪಾ ರವೀ…” ಎಂದು ಉತ್ಸಾಹದಿಂದ ಹೊರಬಂದು ಕೇಳಿದ.

“ಬಂದಿದ್ದಾರೆ ಸ್ವಾಮೀ. ಈಗಷ್ಟೇ ರಾಜಕಾರ್ಯ ಮುಗಿಸಿಕೊಂಡು ಆಶ್ರಮಕ್ಕೆ ಬಂದರು. ನಿಮಗೇ ಗೊತ್ತಲ್ಲ, ನಿಮ್ಮ ಶ್ವೇತಕೇತು ಮಹಾರಾಜರೂ ನಮ್ಮ ಚಿಕ್ಕ ದಣಿಗಳೂ ಬಾಲ್ಯ ಸ್ನೇಹಿತರೂ . ಆಶ್ರಮದಲ್ಲಿ ಜೊತೆ ಓದಿದವರು…”

ಮುದುಕನಿಗೆ ಆನಂದವಾಗಿ ಎದೆ ಹಿಡಿದುಕೊಂಡು ‘ಶಿವಾ ಶಿವಾ’ ಎನ್ನುತ್ತ ಸುಯ್ದು ಆನಂದದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ. ‘ಯಾಕೇ ಸ್ವಾಮಿ?’ ಅಂದರೆ “ಹರ್ಷವಾಗಿದೆಯಪ್ಪಾ… ಅಂತಿಂಥ ಹರ್ಷವಲ್ಲ!….

– ಎನ್ನುವಾಗ ಕಣ್ಣೀರಿನ ಮೂಲಕ ನಗೆಯೂ ಬಂತು. ವಾಸಂತಿ ಯಾವಾಗಲೋ ಅಜ್ಜಿಯ ಹತ್ತಿರ ಓಡಿಹೋಗಿದ್ದಳು.

ಕೊನೆಗೆ ಮಗು ಸಮೇತ ವಾಸಂತಿ ಮತ್ತು ಆಚಾರ್ಯ ಗಾಡಿಯಲ್ಲಿ ಕೂತರು. ಆಗಲೇ ಮನೆ ಮುಂದಿನ ಮಲ್ಲಿಗೆ ಬಳ್ಳಿ ಬಾಡಿತು.