ಕಂಚಿಗೆ ಬಂದಾಗಿನಿಂದ ಹಿಡಿದು ಬಿಳಿಗಿರಿಯ ಕುದುರೆಗಾಡಿ ಬರುವತನಕ ರವಿಕೀರ್ತಿಯ ಬದುಕಿನಲ್ಲಿ ಬೇಕಾದಷ್ಟು ನೀರು ಹರಿದಿತ್ತು. ಹರಿದ ನೀರು ಎರಡೂ ದಡಗಳನ್ನು ಕೊರೆದು ಪ್ರವಾಹದ ಪಾತ್ರವನ್ನ ದೊಡ್ಡದಾಗಿಸಿತ್ತು. ಈಗವನು ವಿದ್ಯೆಗಾಗಿ ಬಂದ ಅನೇಕರಲ್ಲಿ ಒಬ್ಬನಾಗಿರಲಿಲ್ಲ. ಅವನ ಅಭಿಪ್ರಾಯಗಳಿಗೆ ವಿದ್ಯಾರ್ಥಿಗಳು ಮೊದಲುಗೊಂಡು ಅಧ್ಯಾಪಕರವರೆಗೆ ಮನ್ನಣೆ ಕೊಡುತ್ತಿದ್ದರು. ಅಭಿಪ್ರಾಯಗಳನ್ನ ಒಪ್ಪಲಿ ಬಿಡಲಿ ಯಾವುದಕ್ಕೂ ಅವನೊಂದಿಗೆ ಚರ್ಚಿಸಲು ಪಂಡಿತರಾದಿಯಾಗಿ ಎಲ್ಲರೂ ಇಷ್ಟಪಡುತ್ತಿದ್ದರು. ರವಿಕೀರ್ತಿ ದೂರದಿಂದ ನೋಡಿದವರಿಗೆ ಲಘು ಹೃದಯದ ಹಾಸ್ಯಪ್ರಿಯ, ಸಂತೋಷವನ್ನು ಇಷ್ಟಪಡುವ, ನಿಷ್ಕಾಳಜಿಯ ಶ್ರೀಮಂತನಾಗಿ ಕಂಡರೆ, ಸ್ನೇಹಿತರಾಗಿ ಹತ್ತಿರದಿಂದ ನೋಡಿದವರಿಗೆ ಒಡ್ಡನಾಗಿ, ಹಟಮಾರಿಯಾಗಿ, ಆದರೆ ಪ್ರಮಾಣಿಕವಾಗಿ ಕಾಣುತ್ತಿದ್ದ. ಸಂಕಟದಲ್ಲಿದ್ದ ಸ್ನೇಹಿತರಿಗೆ “ನಿನ್ನಂಥ ಮೂರ್ಖನಿಗೆ ಹೀಗೇ ಆಗಬೇಕು” ಎಂದು ಹೇಳಿ ತಪ್ಪದೆ ಸಹಾಯ ಮಾಡುತ್ತಿದ್ದ. ಯಾರಿಗಾದರೂ ಮಾತು ಕೊಟ್ಟರೆ ಪ್ರಾಣಹೋಗುವ ಪ್ರಸಂಗ ಬಂದರೂ ಮಾತಿಗೆ ಬದ್ಧನಾಗಿರುತ್ತಿದ್ದ. ತರತಮಗಳನ್ನು ಕಂಡರೆ ಅಸಹ್ಯ ಪಡುತ್ತಿದ್ದ. ಶಿವಾಪುರ ಅವನಿಗೆ ಇಷ್ಟವಾಗುತ್ತಿದ್ದುದೇ ಈ ಕಾರಣಕ್ಕೆ. ಯಾಕೆಂದರೆ ಅಲ್ಲಿಯ ಭಾಷೆಯಲ್ಲಿ ಏಕವಚನ ಬಿಟ್ಟು ಬಹುವಚನ ಇರಲೇ ಇಲ್ಲ. ಸಂಭೋದನೆಯಲ್ಲಿ ದೇವರಾದಿಯಾಗಿ ಎಲ್ಲರಿಗೂ ಏಕವಚನವೇ ಬಳಕೆಯಲ್ಲಿತ್ತು. ಹುಸಿ ಕಂಡರಾಗುತ್ತಿರಲಿಲ್ಲ. ಅಂಥವರ ಮೇಲೆ ಕೈಮಾಡಲೂ ಹಿಂಜರಿಯುತ್ತಿರಲಿಲ್ಲ. ಒಮ್ಮೊಮ್ಮೆ ಸಂಬಂಧವಿಲ್ಲದವರಿಗೆ ಅನ್ಯಾಯವಾದಾಗಲೂ ಬಾಯಿ ಹಾಕಿ ಜಗಳಕ್ಕೆ ನಿಲ್ಲುತ್ತಿದ್ದ. “ನಿನಗ್ಯಾಕೆ ಬೇಕು ಉಸಾಬರಿ? ನಿನಗೆ ಮೋಸವಾಗಿಲ್ಲವಲ್ಲ?” ಎಂದರೆ ಯಾರಿಗಾದರೂ ಯಾಕೆ ಮೋಸವಾಗಬೇಕು?” ಎಂದು ಮೊಂಡು ವಾದ ಹೂಡುತ್ತಿದ್ದ. ವರ್ಣಾಶ್ರಮದ ಬಗ್ಗೆ ಮಾತಾಡಿ ಪರವಿರೋಧ ಅಭಿಪ್ರಾಯಗಳನ್ನ ಬಿರುಸಾಗಿಯೇ ಪಡೆದಿದ್ದ.

ಕಂಚಿಗೆ ಬಂದ ಪ್ರಥಮದಲ್ಲಿ ರವಿಕೀರ್ತಿಗೆ ಸ್ನೇಹಿತನಾಗಿ ಸಿಕ್ಕವನು ಶ್ವೇತಕೇತು. ಆತ ಚೋಳರ ರಾಜಕುಮಾರ. ಹುಲುಸಾಗಿ ತಲೆಗೂದಲು ಬೆಳೆದ, ಗೋದಿವರ್ಣದ ಉಬ್ಬಿದ ಕೆನ್ನೆಗಳ, ತೆಳುದುಟಿಗಳ ಮ್ಯಾಲೆ ಗೆರೆಕೊರೆದಂಥ ಚಿಗುರುಮೀಸೆಯಿದ್ದ ಚೆನ್ನಿಗ. ನೋಡಿದರೆ ನಂಬಿಕೆ ಬರುವಂಥ, ಸದಾ ಆನಂದದಾಯಕ ನಗೆ ಬೀರುವಾತ. ರವಿಗಿಂತ ಮೂರುವರ್ಷ ಮುಂಚೆ ಬಂದವನು. ವಯಸ್ಸಿನಲ್ಲೂ ಹಿರಿಯ. ಇಬ್ಬರೂ ಕಾಳಗ, ಯೋಗವೇ ಮೊದಲಾದ ರಾಜವಿದ್ಯೆಗಳನ್ನು ಜೊತೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಒಂದು ಸಲ ವಾಕ್ಯಾರ್ಥದಲ್ಲಿ ಭಕ್ತಿಪಂಥದಂತಹ ಜನಾಂದೋಳನ ಇನ್ನೊಂದಿಲ್ಲವೆಂದೂ ಪುರೋಹಿತರ ಬಂಧನದಲ್ಲಿದ್ದ ದೇವರುಗಳನ್ನ ಶೂದ್ರರಾದಿಯಾಗಿ ಸರ್ವರಿಗೂ ಕೊಡಮಾಡಿದ ಮಹಾನ್ ಜನಪರ ಚಳುವಳಿಯೆಂದೂ ರವಿಕೀರ್ತಿ ವಾದ ಮಾಡಿದ. ಇಲ್ಲಿಯೇ ಶ್ವೇತಕೇತು ರವಿಕೀರ್ತಿಯನ್ನು ಮೆಚ್ಚಿ ಸ್ನೇಹಿತನಾಗಿದ್ದ. ಆಮೇಲೆ ರಾಜವಿದ್ಯೆ ಕಲಿಯುವ ಆರು ಜನರಲ್ಲಿ ಇಬ್ಬರೂ ವಿಚಾರ, ಅನುಭವಗಳನ್ನು ಹಂಚಿಕೊಳ್ಳುತ್ತ ಪರಸ್ಪರ ಹಚ್ಚಿಕೊಂಡಿದ್ದರು.

ಒಂದು ದಿನ ಇಬ್ಬರೂ ಕಂಚೀಪಟ್ಟಣದ ಭಗವಾನ್ ಪುರುಷೋತ್ತಮರ ಆಶ್ರಮದಾಚೆಯ ಸರೋವರದ ತಡೆಯಲ್ಲಿ ಕೂತು ಚರ್ಚೆ ಮಾಡುತ್ತಿದ್ದರು. ಚಳಿಗಾಲದ ಹರಿತವಾದ ಇಳಿಬಿಸಿಲ ಸುಖವನ್ನ ಅನುಭವಿಸುತ್ತ, ಆಕಾಶದ ನೀಲಿಮದಲ್ಲಿ ತೇಲುತ್ತಿದ್ದ ಬಿಳಿಯ ಮೋಡಗಳನ್ನ ನೋಡುತ್ತ, ಕೂತಿದ್ದ ನೆಲದ ಮ್ಯಾಲಿನ ಚಿಗುರು ಗರಿಕೆಯ ಮೇಲೆ ಕೈಯಾಡಿಸುತ್ತ ಮಾತಾಡುತ್ತಿದ್ದರು. ಈ ತನಕ ಚಲನೆ ಮರೆತಿದ್ದ ಗಾಳಿ ಈಗ ಮೆಲ್ಲಗೆ ಉಸಿರಾಡತೊಡಗಿದಂತೆ ನೀರ ಮೇಲಿಂದ ಬೀಸತೊಡಗಿತು. ರವಿಕೀರ್ತಿ ಹೇಳಿದ:

“ಶಿವಾಪುರದ ವಿಷಯ ನಾನು ಕಂಡಿಲ್ಲ! ಆದರೆ ಕೇಳಿದ್ದೇನೆ. ಚಂಡೀದಾಸ ಶಿವಪಾದರ ಶಿಷ್ಯರು. ಅವರ ‘ಒಂದು ಕಡಿಮೆ ನಲವತ್ತು ಹಟ್ಟಿಗಳ ಪ್ರದೇಶಕ್ಕೆ ಅಮ್ಮನ ಸೀಮೆಯೆಂದೇ ಹೆಸರು. ಜನ ತೃಪ್ತರು. ಅಸೂಯೆ ಇಲ್ಲದವರು. ಯುದ್ಧ, ಬೇಟೆ ಮತ್ತು ಸ್ತ್ರೀಕಾರಣವಾದ ನಮ್ಮ ಸಂತೋಷಗಳು ಅವರ ತೃಪ್ತಿಯ ಮುಂದೆ ಸೀಮಿತ ಮತ್ತು ಕೃತಕ’ ಅಂತಿದ್ದನಪ! ಒಂದು ಸಲ ಅಲ್ಲಿಗೆ ಹೋಗಬೇಕೆಂದುಕೊಂಡಿದ್ದೇನೆ.”

ಶ್ವೇತಕೇತು ಹೇಳಿದ:

“ನನಗೊಂದು ಸಂಶಯ ಇದೆ. ಕಗ್ಗಾಡಿನಲ್ಲಿ ಅದೇನು ಜೀವನ ಇದ್ದೀತು ಮಾರಾಯಾ? ಮಳೆ ಬಿಸಿಲು ಚಳಿಗಾಲ ಬಿಟ್ಟರೆ ಬೇರೇನೂ ಬದಲಾವಣೆಗಳನ್ನೇ ತೋರಿಸದ ನಿಸರ್ಗದ ಬಗ್ಗೆ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಈ ಜನಕ್ಕೆ ಬೇಸರವೇ ಆಗಿಲ್ಲವೆಂದರೆ ಆಶ್ಚರ್ಯವಲ್ಲವೆ? ನಮ್ಮ ಹಿತ್ತಲಲ್ಲೊಂದು ನೇರಳೆ ಮರವಿದೆ. ಅದನ್ನಂತೂ ಚಿಕ್ಕಂದಿನಿಂದ ನೋಡುತ್ತಿದ್ದೇನೆ. ಯಾವಾಗಲೂ ಇರೋ ಹಾಗೇ ಇದೆ. ನನ್ನೊಬ್ಬ ಕವಿಮಿತ್ರ ಮಾತ್ರ ಅದನ್ನು ಕಂಡಾಗೊಮ್ಮೆ ನವಿರೇಳುತ್ತ ಆನಂದವನ್ನು ಅನುಭವಿಸುತ್ತ ಇರುತ್ತಾನೆಂದರೆ… ಇದು ಆತ್ಮವಂಚನೆ ಅಲ್ಲವೆ?”

“ನಿಮಗೆ ನಿತ್ಯ ಬದಲಾವಣೆ ಬೇಕು. ಅದಕ್ಕಾಗಿ ಸಾಹಸ ಬೇಕು. ಯುದ್ಧ ಪ್ರಾಣಿಬೇಟೆ, ಸ್ತ್ರೀ ಬೇಟೆ, ಜೂಜು, ಅಧಿಕಾರ ಇವೆಲ್ಲ ಬೇಕು. ಇವುಗಳಾಚೆ ನಿಮಗೆ ಜೀವನವಿಲ್ಲ. ಅವರಿಗಾದರೆ ಅವರ ಬದುಕಿಗೆ ಇನ್ನೊಂದು ಆಯಾಮವಿದೆ; ಕ್ಷಿತಿಜದಾಚೆಗಿನದು! ಆ ಭಯ, ಆ ಬೆರಗು ಇಲ್ಲಿಯದನ್ನ ಕಣ್ಣು ತೆರೆದು ನೋಡುವುದಕ್ಕೆ ಪ್ರೇರಿಸುತ್ತದೆ. ಒಂದು ಮರದಂತೆ ಇನ್ನೊಂದಿಲ್ಲ, ಒಂದು ಸುರ್ಯೋದಯ ಸೂರ್ಯಾಸ್ತದಂತೆ ಇನ್ನೊಂದಿಲ್ಲ. ಒಂದು ಎಲೆಯಂತೆ ಇನ್ನೊಂದಿಲ್ಲ. ಒಂದು ದಿನದಂತೆ ಇನ್ನೊಂದಿಲ್ಲ. ಈ ವೈವಿಧ್ಯ, ಈ ಜೀವನ ಪ್ರೀತಿ ನಮಗೆ ಅಗೋಚರ ಮಿತ್ರಾ.”

ಎಂದು ರವಿಕೀರ್ತಿ ಭಾವುಕನಾಗಿ ಹೇಳಿ ಮತ್ತೆ ಮುಂದುವರಿಸಿದ-

“ನೀವೇನು ಅಂದುಕೊಳ್ತೀರಿ ಗೊತ್ತೇನು? ಈ ಜಗತ್ತು ತನ್ನ ಮಾಮೂಲಿತನದಿಂದ ನಾಶದ ಕಡೆಗೆ ಹೊರಟಿದೆ. ಅದನ್ನ ಉಳಿಸಬೇಕೆಂದು ಸಂಕಲ್ಪ ಮಾಡುತ್ತೀರಿ. ಆ ಮೂಲಕ ನೀವೇ ಅದನ್ನು ವಿನಾಶಕ್ಕೂ ತಳ್ಳುತ್ತೀರಿ.”

“ಹ್ಯಾಗೆ?”

“ಯುದ್ಧಗಳು, ಸ್ಪರ್ಧೆಗಳು, ಶೋಧನೆಗಳು, ಸಾಹಸಗಳು ಅಧಿಕಾರದ ದಾಹಗಳು…. ಇವೆಲ್ಲ ಏನು? ಬದಲಾವಣೆಗಳನ್ನ ಪ್ರಚೋದಿಸುತ್ತವೆ. ಇದನ್ನೇ ನೀವು ಪ್ರಗತಿ ಎನ್ನುತ್ತೀರಿ. ಇಂಥ ಯಾವ ಬದಲಾವಣೆಗಳೂ ಕಾಡಿಗೆ ಬೇಕಿಲ್ಲ. ಅಲ್ಲವೇ? ಅದು ಯುದ್ಧ ವಿರೋಧಿಯಾದ ಮಾತೃ ಸಂಸ್ಕೃತಿ.”

ಈ ಮಾತುಗಳನ್ನ ಹೇಳುವಾಗ ರವಿಯ ಮುಖದಲ್ಲಿ ಆತ್ಮವಿಶ್ವಾದ ಕಳೆ ಹೊಳೆಯಿತು.

“ನಿಮ್ಮದು ಸ್ಪರ್ಧೆಯಿರುವ ಅಧಿಕಾರದಾಹಿಯಾದ ಪಿತೃ ಸಂಸ್ಕೃತಿ. ಇದಕ್ಕೆ ಸ್ಪರ್ಧೆಬೇಕು. ಯುದ್ಧ ಮಾಡಿ ನನ್ನ ಅಧಿಕಾರ ಕಸಿದುಕೊ ಅನ್ನುತ್ತಾನೆ ತಂದೆ. ಮಾತೃಸಂಸ್ಕೃತಿ ಹಾಗಲ್ಲ. ಅದಕ್ಕೆ ಶಾಂತಿ ಬೇಕು. ಮೌಲ್ಯಗಳು ಬೇಕು. ನೆನಪು ಬೇಕು. ನಿಮಗೆ ಚರಿತ್ರೆ ಬೇಕು. ಚರಿತ್ರೆಗೆ ನೆನಪುಗಳಿಲ್ಲ. ಅದಕ್ಕೇ ಮತ್ತೆ ಅವೇ ತಪ್ಪುಗಳನ್ನ ಮಾಡುತ್ತದೆ. ಅವೇ ಯುದ್ಧ ಮಾಡುತ್ತದೆ. ಮಾತೃ ಸಂಸ್ಕೃತಿಗೆ ಇತಿಹಾಸ ಬೇಡ, ಆದ್ದರಿಂದ ಯುದ್ಧಬೇಡ. ಗಂಡ, ಮಗ ಇಬ್ಬರೂ ಬದುಕಬೇಕು ಅನ್ನುತ್ತಾಳೆ ತಾಯಿ.”

ಶ್ವೇತಕೇತುವಿಗೆ ರವಿಕೀರ್ತಿಯನ್ನ ಎದುರಿಸಲಿಕ್ಕಾಗದಿದ್ದರೂ ತನ್ನ ವಾದದಲ್ಲಿ ಹೆಚ್ಚು ಹುರುಳಿದೆ ಅನ್ನಿಸಿತು. ಆದರೆ ಅದನ್ನು ಸರಿಯಾಗಿ ಮಂಡಿಸಲಾಗುತ್ತಿಲ್ಲವೆಂದೂ ತಿಳಿಯಿತು. ಹತಾಶೆಯಿಂದ “ಇತಿಹಾಸವಿಲ್ಲದೆ ಈ ಬದುಕಿಗೆ ಅರ್ಥವಿದೆ ಅನ್ನುತ್ತೀಯಾ?” ಅಂದ. ಆದರೆ ಯಾಕೋ ಏನೋ ತನ್ನ ಮಾತಿನಲ್ಲಿ ತಥ್ಯವಿಲ್ಲವೆಂದು ಆತನಿಗೇ ಅನ್ನಿಸಿದ್ದರಿಂದ ಉತ್ತರ ಬಯಸಲಿಲ್ಲ. ಉತ್ತರಿಸಬೇಕೆಂಬ ಹಠ ಹಿಡಿಯದೆ ರವಿಯೂ ಹೇಳಿದ “ಇತಿಹಾಸವಿಲ್ಲದೆ ಮನುಷ್ಯನಿಗೆ ಬದುಕೋದು ಸಾಧ್ಯವಿಲ್ಲ ಅಂತೀಯಾ?” ಪರಸ್ಪರ ಪ್ರಶ್ನೆಗಳಿಂದ ಇಬ್ಬರೂ ವಿಚಲಿತರಾಗಿ ಸುಮ್ಮನಾದರು.

ಬೇಸಿಗೆ ಬಂತೆಂದರೆ ಯುದ್ಧರಹಿತ ಎಲ್ಲ ಪಟ್ಟಣಗಳಂತೆ ಕಂಚೀಪಟ್ಟಣದ ವಾತಾವರಣವೂ ಆಹ್ಲಾದಕರವಾಗುತ್ತದೆ. ಒಂದಾದ ಮೇಲೊಂದರಂತೆ ಬರುವ ಹಬ್ಬ, ಜಾತ್ರೆ, ವಸಂತೋತ್ಸವಗಳು ಪಡ್ಡೆ ಹುಡುಗ ಹುಡುಗಿಯರಿಗೆ ಪ್ರಣಯದ ವಾತಾವರಣ ನಿರ್ಮಿಸಿ ರಂಜನೆ ನೀಡುತ್ತವೆ. ಆಗ ಹೊಸ ಲಂಗದಾವಣಿಗಳಲ್ಲಿ ಸರಸರ ಸದ್ದು ಮಾಡುತ್ತ, ಲಜ್ಜೆಯಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಕ್ಕಿಗಳಂತೆ ಹಾರಾಡುವ ಎಳೆಯ ಬೆಡಗಿಯರ ಸಡಗರವನ್ನಂತೂ ಹೇಳತೀರದು. ಅವರ ನಗುವಿಗೆ ಮೈಮರೆಯದವರಿಲ್ಲ. ಫಳ ಫಳ ಹೊಳೆವ ನೀಲಿಕಣ್ಣುಗಳಿಗೆ ಮಾರು ಹೋಗದವರಿಲ್ಲ. ಪ್ರತಿಯೊಬ್ಬ ವಿಲಾಸಲೋಲ ತರುಣನೂ ಇಂಥ ಲಾವಣ್ಯವತಿಯರನ್ನು ಹಸಿದ ಕಂಗಳಿಂದ ನೋಡುತ್ತ, ನೋಡಿಸಿಕೊಳ್ಳುತ್ತ, ಹಾಡು ಗುನುಗುತ್ತ ಆಮೋದ ಪ್ರಮೋದಗಳಲ್ಲಿ ಸಂಭ್ರಮಿಸುತ್ತಾನೆ. “ಸುಖದ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡವೋ-ಪ್ರೀತಿಯೊಂದೇ ಸತ್ಯ; ಮಿಕ್ಕುದುಲ್ಲಾ ಮಿಥ್ಯ”ವೆಂದು ಬೋಧನೆ ಮಾಡುತ್ತ ಸರೀಕರನ್ನು ಪ್ರಚೋದಿಸುತ್ತಾನೆ.

ಒಂದು ದಿನ ಸಾಯಂಕಾಲ ಕಂಚೀಪಟ್ಟಣದ ವಸಂತೋತ್ಸವಕ್ಕೆ ಹೋಗಿದ್ದ ರವಿ ಮತ್ತು ಶ್ವೇತಕೇತು ಸಾಲುಮರಗಳ ಮಧ್ಯದ ದಾರಿಗುಂಟ ಆಶ್ರಮದ ಕಡೆಗೆ ಬರುತ್ತಿದ್ದರು. ಸರೋವರದ ಆಚೆ ದಡದ ಗುಡ್ಡ ಬಿಳಿ ಮೋಡಗಳಲ್ಲಿ ಮುಖ ಮುಚ್ಚಿಕೊಂಡಿತ್ತು. ಬೆಚ್ಚಗಿನ ಹಿತಕರವಾದ ಗಾಳಿ ದಕ್ಷಿಣದ ಕಡೆಯಿಂದ ಬೀಸಿ ಬರುತ್ತಿತ್ತು. ಹಳೆಯ ಋತುಮಾನ ತರುಮರಗಳ ಎಲೆ ಉದುರಿಸಿಯಾಗಿತ್ತು. ಹೊಸ ಚಿಗುರಿನ್ನೂ ಮೂಡಿರಲಿಲ್ಲ. ಹುಡುಗರಿಬ್ಬರೂ ತಮ್ಮ ವಯಸ್ಸಿನಷ್ಟೇ ಎಳೆಯ ಲೋಕವನ್ನ ಕಲ್ಪಿಸಿ ಅದರಲ್ಲಿ ತಮಗಿಷ್ಟವಾದ ಸಂಗತಿಗಳು, ವಸ್ತುಗಳು ಮೌಲ್ಯಗಳು ವ್ಯಕ್ತಿಗಳನ್ನ ತುಂಬುತ್ತಿದ್ದರು. ಅಷ್ಟರಲ್ಲಿ ಅನತಿದೂರದ ಸರೋವರದ ಕಡೆಯ ಮಳೆಯಲ್ಲಿ ಹುಡುಗಿಯರು ನಗಾಡುತ್ತ ಬರುತ್ತಿದ್ದುದು ಕೇಳಿಸಿತು. ಸ್ವಲ್ಪ ಹೊತ್ತಿನಲ್ಲಿ ಹುಡುಗಿಯರು ಗುಂಪಾಗಿ ಒಬ್ಬಳು ಇನ್ನೊಬ್ಬಳನ್ನ ಹಿಂದೆ ಹಾಕುತ್ತ ಉಲ್ಲಾಸದಿಂದ ಓಡೋಡುತ್ತ ಬಂದರು. ಎಲ್ಲರಿಗಿಂತ ಮುಂದಿನವಳು ಕಪ್ಪು ಕೂದಲಿನ ತೆಳ್ಳಗಿನ ಬಿಳಿ ಹುಡುಗಿ ಬಳಕುತ್ತ ರವಿಯನ್ನು ನೋಡಿ ಕಿಲ ಕಿಲ ನಗುತ್ತ ಓಡಿದಳು. ನಗುವಾಗಿನ ಅವಳ ದನಿ ಮಾದಕವಾಗಿತ್ತು. ಹಸಿರು ಲಂಗ ಮತ್ತು ಎದೆಯ ಚಿಗುರುಬ್ಬುಗಳನ್ನು ಕೊರೆದಂತೆ ತೋರಿಸುವ ಬಿಳಿ ದಾವಣಿ ಹೊದ್ದಿದ್ದಳು. ಓಡುತ್ತಿದ್ದಾಗ ಮುಖದ ಮೇಲಿನ ಮುಂಗುರುಳು ಮತ್ತು ಬೆನ್ನ ಮೇಲಿನ ನೀಳವಾದ ಸಡಿಲು ಜಡೆ ಎಡಬಲ ತೂಗಾಡುತ್ತಿದ್ದವು. ನಗಾಡುವಾಗ ಮಿಂಚಿನಂತೆ ಹೊಳೆದ ಅವಳ ದಂತಪಂಕ್ತಿ ಬಹಳ ಆಕರ್ಷಕವಾಗಿತ್ತು.

ಅಸ್ತಂಗತನಾಗುತ್ತಿದ್ದ ಸೂರ್ಯನ ಚಿನ್ನದ ಬಿಸಿಲು ಉಲ್ಲಾಸಕರವಾಗಿತ್ತು. ನಗುವತನಕ ಹುಡುಗಿಯರು ಮಳೆಯ ಮರೆಯಲ್ಲಿದ್ದದ್ದು ಗೊತ್ತಾಗಲೇ ಇಲ್ಲ. ಎಷ್ಟೊತ್ತಿನಿಂದ ಅಲ್ಲಿದ್ದರು? ಯಾಕಾಗಿ ಅಲ್ಲಿದ್ದರು? ಮುಂದಿನ ಆ ಹುಡುಗಿ ಹರ್ಷದಿಂದಿದ್ದಳು. ತನ್ನನ್ನು ನೋಡಿ ನಕ್ಕುದಕ್ಕೆ ಏನು ಕಾರಣವಿದ್ದೀತು?

ರವಿಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಬೊಂತೆಯ ಹೊರಗೆ ಗೊರಕೆ ಹೊಡೆಯುತ್ತಿದ್ದ. ಎದ್ದು ಕಿಟಕಿಯ ಬಳಿಗೆ ಹೋದ. ಹೊರಗೆ ಬೆಳ್ದಿಂಗಳು. ಹುಲ್ಲು ಹೊದಿಸಿದ್ದ ಸಣ್ಣ ಸಣ್ಣ ಗುಡಿಸಲುಗಳು, ಅಲ್ಲಿದ್ದ ತರುಮರಗಳು ಸಂತೃಪ್ತಿಯಿಂದ ಮೈಮರೆತು ಬೆಳ್ದಿಂಗಳಲ್ಲಿ ಮೀಯುತ್ತಿದ್ದವು. ನೀರವ ರಾತ್ರಿ ಆಹ್ಲಾದಕರವಾಗಿತ್ತು. ದೂರದ ಹುಲಸಾದ ಮುದ್ದೆ ಮುದ್ದೆಯಾದ ಪೊದೆಗಟ್ಟಿದ ಸಸ್ಯರಾಶಿಯ ನೆತ್ತಿ ಬೆಳ್ದಿಂಗಳಿಂದ ಹೊಳೆಯುತ್ತಿತ್ತು.

ನಕ್ಷತ್ರರಹಿತವಾದ, ಪ್ರಶಾಂತವಾದ ಆಕಾಶದಲ್ಲಿ ಅಷ್ಟಮಿಚಂದ್ರ ಕಿವಿಯಿಂದ ಕಿವಿತನಕ ನಗುತ್ತಿದ್ದ. ಆಶ್ರಮದಲ್ಲಿ ಯಾರೂ ಎಚ್ಚರಿರಲಿಲ್ಲ. ರವಿಯ ಕಣ್ಣು ಚಂದ್ರನ ಮೇಲೆ ನಾಟಿದ್ದರೂ ಸಂಜೆ ಕಂಡ ಆ ಹುಡುಗಿಯ ಕಿಲ ಕಿಲ ನಗು ಕೇಳಿಸುತ್ತಿತ್ತು. ಅವಳ ನಗುಮುಖ ಗೋಚರವಾಗುತ್ತಿತ್ತು. ನೇತಾಡುವ ಮುಂಗುರುಗಳು ಮತ್ತೆ ಜಡೆ ಇವುಗಳೊಂದಿಗೆ ಅವಳ ದಂತಪಂಕ್ತಿ ಮಿಂಚುತ್ತಿತ್ತು. ರವಿ ಮಧುರಭಾವದಿಂದ ಪುಳಕಿತನಾದ. ಅಂಗೈಯಲ್ಲಿ ಹಿಡಿದು ಅವಳ ಮುಖವನ್ನ ಚಂದ್ರನಿಗೆದುರಾಗಿ ತಂದರೆ ಅವಳ ಕಂಗಳಲ್ಲಿ ಮೂಡುವ ಚಂದ್ರನ ಪ್ರತಿಬಿಂಬ ಹ್ಯಾಗಿರಬಹುದೆಂದು ಕಲ್ಪಿಸಿಕೊಂಡು ಆನಂದಪಟ್ಟ. ತಕ್ಷಣ ಅವಳನ್ನು ಹಿಂದೆ ನೋಡಿದ್ದ ನೆನಪಾಯಿತು. ದನಿ ಕೂಡ ಕೇಳಿದ್ದಂತೆ ನೆನಪಾಯಿತು. ಎಲ್ಲಿ ನೋಡಿದ್ದೇನೆ? ನೆನಪಾಗಲೇ ಇಲ್ಲ. ತನ್ನನ್ನು ನೋಡಿ ನಕ್ಕಳಲ್ಲ, ಅವಳಿಗೆ ತನ್ನ ನೆನಪಿರಬಹುದೆ? ಉದ್ದೇಶಪೂರ್ವಕ ನನ್ನನ್ನು ನೋಡಿ ನಕ್ಕಳೆ?

ಇಂತೆಂದು ಆಲೋಚನೆ ಮಾಡುತ್ತ ಯೌವನ ಸಹಜವಾದ ಯೋಚನೆ ಆಕಾಂಕ್ಷೆಗಳ ಅನಿರೀಕ್ಷಿತ ತುಮುಲುದಲ್ಲಿ ಮನಸ್ಸು ಕಲಕಿದವನಾಗಿ ಹೋಗಿ ಹಾಸಿಗೆ ಮೇಲೆ ಉರುಳಿದ. ಏನೋ ನೆನಪಾಗಿ ಥಟ್ಟನೆ ಎದ್ದು ತನ್ನಲ್ಲೇ ನಗುತ್ತ ಬಂದು ಕಿಂಡಿಯಲ್ಲಿ ನಿಂತುಕೊಂಡ. ಹೌದು ಅವಳು ಶಿಲ್ಪಿ ವಿಶ್ವರೂಪಾಚಾರ್ಯನ ಮಗಳು!

ವಿಶ್ವರೂಪಾಚಾರ್ಯ ಇಡೀ ದಕ್ಷಿಣದ ಪ್ರಖ್ಯಾತ ಸ್ಥಪತಿ. ಚೋಳರಾಜರ ದೇವಸ್ಥಾನಗಳನ್ನ ಅವನೇ ನಿಂತು ಕಟ್ಟಿಸಿದ್ದಲ್ಲದೆ ಅವುಗಳಲ್ಲಿರುವ ಪ್ರಸಿದ್ಧ ಮೂರ್ತಿ ಶಿಲ್ಪಿಗಳಿಗಾಗಿ ಪ್ರತ್ಯೇಕವಾಗಿಯೇ ಹೆಸರುವಾಸಿಯಾದವನು. ಶಿಲ್ಪಶಾಸ್ತ್ರವನ್ನು ಕೂಲಂಕುಷ ಅಧ್ಯಯನ ಮಾಡಿದವನು ಮತ್ತು ಆ ಬಗ್ಗೆ ಅಧಿಕಾರವಾಣಿಯಿಂದ ಮಾತಾಡಬಲ್ಲವನು. ಭಗವಾನ್ ಪುರುಷೊತ್ತಮನ ಆಶ್ರಮಕ್ಕೆ ಶಿಲ್ಪಶಾಸ್ತ್ರದ ಬಗ್ಗೆ ಪಾಠ ಮಾಡುವುದಕ್ಕೆಂದೇ ಬರುತ್ತಿದ್ದ. ಬಂದಾಗ ಒಂದೆರಡು ವಾಕ್ಯಾರ್ಥಗಳಲ್ಲೂ ಭಾಗವಹಿಸಿದ್ದ. ಒಂದು ಸಲ ಒಬ್ಬ ವಿದ್ವಾಂಸರ ಜೊತೆ ರವಿಕೀರ್ತಿ ಮಾತೃಸಂಸ್ಕೃತಿಯ ಬಗ್ಗೆ ವಾದ ಮಾಡಿ ಅನೇಕರ ಮೆಚ್ಚುಗೆ ಗಳಿಸಿದ್ದ. ಸಹಜವಾಗಿ ಅಲ್ಲಿದ್ದ ವಿಶ್ವರೂಪಾಚಾರ್ಯನಿಗೂ ಇವನ ವಾದ ಸರಿಕಂಡಿತ್ತು. ಯುದ್ಧಗಳು ಅನಗತ್ಯವೆಂದು ಒಂದು ದಿನ ರವಿ ವಾದಿಸಿದ್ದ. ಇವೆಲ್ಲ ಹೇಡಿಗಳ ಕಲ್ಪನೆಯೆಂದು ಶ್ವೇತಕೇತು ವಾದಿಸಿದ್ದ. ಆದರೆ ರವಿಯ ವಾದಗಳಲ್ಲಿ ತಾಳಮೇಳ ಇರಲಿಲ್ಲ. ನಿಜ; ಆದರೆ ಒಳನೋಟಗಳಿದ್ದವು. ಅದಕ್ಕೇ ಅವನು ತನ್ನ ವಾದದಿಂದ ಶ್ವೇತಕೇತುವನ್ನು ಕೆರಳಿಸಿದ್ದ. ಶ್ವೇತಕೇತು ಜಾಣತನದಿಂದ ತರ್ಕಬದ್ಧವಾಗಿ ಮಾತಾಡಿದ್ದ. ಆದರೆ ಅವನ ವಾದ ಶುಷ್ಕವಾಗಿತ್ತು. ಹುಸಿಯಾಗಿತ್ತು. ಮಾತಿಗಾಗಿ ಮಾತಾಡಿದಂಗಿತ್ತು ಅಥವಾ ವಾದದಲ್ಲಿ ಗೆಲ್ಲುವುದಕ್ಕಾಗಿ ಮಾತಾಡಿದಂಗಿತ್ತು. ವಿಶ್ವರೂಪಾಚಾರ್ಯ ಆ ದಿನ ರವಿಯನ್ನು ಬೆಂಬಲಿಸಿದ್ದ. ಇದೇ ನೆಪದಲ್ಲಿ ಪಟ್ಟಣದಲ್ಲಿದ್ದ ಆಚಾರ್ಯನ ಮನೆಗೂ ಒಮ್ಮೆ ರವಿ ಹೋಗಿದ್ದ, ಆಗ ನೋಡಿದ್ದು ಈ ಬೆಡಗಿಯನ್ನ!

ವಿಶ್ವರೂಪಾಚಾರ್ಯನ ವಾಸದ ಮನೆ ಚಿಕ್ಕದು. ಮನೆಯ ಮುಂದೆ ವಿಶಾಲವಾದ ಅಂಗಳವಿದ್ದು, ಅಂಗಳದ ತುಂಬ ಅರ್ಧಗಿರ್ಧ ಮುಕ್ಕಾಲು ಕಡೆದ ಮಾನವರು, ಕಣ್ದೆರೆಯದ ಅಪ್ಸರೆಯರು, ಕೈಕಾಲು ಮೂಡದ ದೇವತೆಗಳು, ಮುಂದೆ ಮೂರ್ತಿಯಾಗಬಹುದಾದ ಕಚ್ಚಾ ಕಲ್ಲುಗಳು-ಇವುಗಳಿಂದ ತುಂಬಿ ಹೋಗಿತ್ತು. ಅಂಗಳದ ಅಂಚಿನಲ್ಲಿ ದನದ ಕೊಟ್ಟಿಗೆಯಿತ್ತು. ಮನೆಗಂಟ ಅಂಗಳದ ಆರಂಭದಲ್ಲೇ ಹುಲುಸಾಗಿ ಬೆಳೆದ ಮಲ್ಲಿಗೆ ಬಳ್ಳಿಯಿತ್ತು. ನೆಲದಿಂದ ಛಾವಣಿಯವರೆಗೆ ಬೆಳೆದು ಹಬ್ಬಿಕೊಂಡಿದ್ದ ಆ ಬಳ್ಳಿಯಲ್ಲಿ ಎಲೆಗಳಿಗಿಂತ ಹೆಚ್ಚೆನಿಸುವಷ್ಟು ಹೂ ಅರಳಿದ್ದವು. ಅದರಿಂದಾಗಿ ಇಡೀ ಮನೆ ಮತ್ತು ಅಂಗಗಳು ಘಮಘಮ ಪರಿಮಳದಿಂದ ತುಂಬಿ ಮನಸ್ಸಿಗೆ ಉಲ್ಲಾಸ ತರುತ್ತಿದ್ದವು.

ಮನೆ ಚಿಕ್ಕದಾದರೂ ಒಳಗೆ ದೊಡ್ಡ ಮೊಗಸಾಲೆಯಿತ್ತು. ಮನೆಯ ಮೂಲೆಗಳಲ್ಲೂ ಮೂರ್ತಿಗಳು ತುಂಬಿದ್ದವು. ಮನೆಯ ಹಿಂದೊಂದು ತರಕಾರಿ ಬೆಳೆವ ಹಿತ್ತಲಿತ್ತು. ಅದರಂಚಿಗೆ ಪೌಳಿಯಿದ್ದು ಅದರಾಚೆ ಸುಂದರವಾದ ಶಿವದೇವಾಲಯವಿತ್ತು. ಮನೆ ಬಡವರದೇ ಆದರೂ ಸ್ಚಚ್ಛವಾಗಿತ್ತು. ಗೋಡೆಗಳ ಮೇಲೆ ಬರೆದ ಸುಂದರವಾದ ಚಿತ್ತಾರಗಳು, ಕಲಾತ್ಮಕ ಬಾಗಿಲುಗಳು, ನೆಲಗಟ್ಟಿನ ಮೇಲೆ ಬರೆದ ಚಿತ್ರಗಳು, ಅಂಗಳದ ಅಂದವಾದ ರಂಗೋಲಿಗಳಿಂದ ಒಳಗೆ ಹೊಕ್ಕರೆ ವಿಚಿತ್ರವಾದ ತಂಪು ಶಾಂತಿ ಅನುಭವಕ್ಕೆ ಬರುತ್ತಿತ್ತು. ಛಾವಣಿ ಕಲಾತ್ಮಕವಾಗಿದ್ದುದರಿಂದ ಬಡವರ ಮನೆ ಕೂಡ ಅರಮನೆಗಿಂತ ಸುಂದರವಾಗಿರಬಹುದೆಂಬುದಕ್ಕೆ ಸಾಕ್ಷಿಯಾಗಿತ್ತು.

ದೊಡ್ಡ ಮನೆಯಲ್ಲಿದ್ದ ರವಿಕೀರ್ತಿಗಿದು ಚಿಕ್ಕ ಮನೆ ಅನ್ನಿಸಿದ್ದು ಸಹಜವೆ. ಆದರೆ ತಮ್ಮ ದೊಡ್ಡ ಮನೆಗಿಲ್ಲದ ಒಂದು ಅಚ್ಚುಕಟ್ಟುತನ, ಒಂದು ಚಂದ ಈ ಮನೆಗಿತ್ತು. ತಮ್ಮ ಮನೆಯಲ್ಲಿ ಆಳುಕಾಳು ಜನಗಳ ಗಿಜಿ ಗಿಜಿ; ಆಕಸ್ಮಾತ್ ಶಬ್ದ ಕೊಂಚ ಕಮ್ಮಿಯಾದರೂ ಬಿಕೋ ಎನ್ನುತ್ತಿತ್ತು. ಅದರಲ್ಲಿ ಸಂತೃಪ್ತಿಯ ಭಾವದ ಶಾಂತ ವಾತಾವರಣವಿತ್ತು. ಆಚಾರ್ಯನ ಹೆಂಡತಿ ಸ್ವರ್ಗವಾಸಿಯಾಗಿದ್ದಳು. ತಬ್ಬಲಿ ಮಗಳು ವಾಸಂತಿಯನ್ನು ಆತನ ಮುದಿ ತಾಯಿಯೇ ನೋಡಿಕೊಳ್ಳುತ್ತಿದ್ದಳು. ಮನೆ ತುಂಬ ಒಬ್ಬಳೇ ಮಗಳಾದ್ದರಿಂದ ಮುದುಕಿಗೂ ಆಚಾರ್ಯನಿಗೂ ವಾಸಂತಿಯೇ ಜೀವ, ವಾಸಂತಿಯೇ ಆತ್ಮ; ಗಲಾಟೆ ಮಾಡಿದರೂ ಅವಳೇ, ಶಾಂತವಾಗಿದ್ದರೂ ಅವಳೇ.

ಮನೆ ಚಿಕ್ಕದಿರಬಹುದು, ಆದರೆ ಆಚಾರ್ಯನ ಘನತೆ ಗೌರವಗಳಿಗೆ ಕೊರತೆಯಿರಲಿಲ್ಲ. ರಾಜಮಹಾರಾಜರು ಮೊದಲುಗೊಂಡು ತಪಸ್ವಿಗಳು, ಗುರುಗಳು ಮುನಿಗಳು ಮಂತ್ರಿಮಾನ್ಯರು ಮಾಂಡಳಿಕರು ಗೌಡಳಿಕೆ ಪಾಳೇಗಾರರು-ಎಲ್ಲರೂ ಇವನಿಗೆ ಗೌರವ ತೋರಿಸುತ್ತಿದ್ದರು. ರಾಜಸಭೆಗೂ ಈತನಿಗೆ ಆಮಂತ್ರಣವಿರುತ್ತಿತ್ತು.

ವಾಸಂತಿ ತಾಯಿಯಿಲ್ಲದ ತಬ್ಬಲಿ, ಒಬ್ಬಳೇ ಮಗಳೆಂಬ ಮಾಯದಲ್ಲಿ ಬೆಳೆದವಳು. ಮೊದಲನೇ ದಿನ ರವಿಕೀರ್ತಿ ಇವರ ಮನೆಗೆ ಬಂದಾಗ ಬಾಯಾರಿಕೆಗೆ ಗಿಂಡಿಯಲ್ಲಿ ನೀರು, ಬಟ್ಟಲಲ್ಲಿ ಬೆಲ್ಲ ತಂದಿಟ್ಟಿದ್ದಳು. ಮನೆಯ ವಿವರಗಳು ನೆನಪಿರಲಿಲ್ಲ. ಆದರೆ ಅಂಗಳದಲ್ಲಿ ಸೊಗಸಾಗಿ ಬೆಳೆದ ಮಲ್ಲಿಗೆ ಬಳ್ಳಿ, ಅದರ ತುಂಬ ಹೂ ಅರಳಿ ಇಡೀ ಅಂಗಳ ಪರಿಮಳದಿಂದ ತುಂಬಿದ್ದೂ ನೆನಪಾಯಿತು. ವಾಸಂತಿಯನ್ನು ಕಂಡದ್ದು ಸಂಕ್ಷಿಪ್ತವಾಗಿಯಾದರೂ ಸೂಸುತ್ತಿದ್ದ ಅವಳ ಕಿರುನಗೆಯಲ್ಲಿ, ಬಿಳಿ ಹಲ್ಲಿನ ಕಾಂತಿಯಲ್ಲಿ ಕ್ಷಣಕಾಲ ಮಿಂದದ್ದೂ ನೆನಪಾಯಿತು.

ಆದರೆ ಇವತ್ತು ಕೊಂಚ ದೀರ್ಘ ಕಾಲ ನೋಡಿದ್ದ. ಅಲ್ಲದೆ ಇವನ ಕಡೆಗೊಮ್ಮೆ ಕೃಪಾಕಟಾಕ್ಷ ಬೀರಿ ಸುಂದರವಾದ ವಕ್ಷದ ಮೇಲಿನ ದಾವಣಿಯನ್ನು ಸರಿಪಡಿಸಿಕೊಳ್ಳುತ್ತ ಓಡಿದ್ದಳು. ವಯಸ್ಸಿಗೆ ಸಹಜವಾದ ಲಜ್ಜೆಯಿಂದ ಓಡಿದಾಗ ಚಿಗುರೆದೆ ಮತ್ತು ನಿತಂಬಗಳು ನರ್ತಿಸಿದಂತೆ ಕಂಡು ಪುಳಕಿತನಾದ. ಅದನ್ನೇ ನೆನೆಯುತ್ತ ನಾಳೆ ಯಾವುದಾದರೂ ನೆಪದಿಂದ ಅವರ ಮನೆಗೆ ಹೋಗಲೇಬೇಕೆಂದು ತೀರ್ಮಾನಿಸಿ ಕಣ್ಣು ಮುಚ್ಚಿದ – ಕನಸಿನಲ್ಲಿ ಅವಳನ್ನು ಕಾಣುವ ಹಂಬಲದಲ್ಲಿ.

ಶ್ವೇತಕೇತುವಿಗೆ ಯಾವುದೋ ನೆಪ ಹೇಳಿ ಇಳಿಹೊತ್ತಿನಲ್ಲಿ ಕಂಚೀ ಪಟ್ಟಣಕ್ಕೆ ಹೋಗಿಯೇ ಬಿಟ್ಟ. ಅವರ ಮನೆಗೂ ಹೋಗಿ “ಆಚಾರ್ಯರು ಇದ್ದಾರೆಯೆ?” ಎಂದು ಕೇಳಿಯೂ ಬಿಟ್ಟ. ಬಾಗಿಲಿಗೆ ಬಂದು ಇಲ್ಲವೆಂದು ಹೇಳಿದವಳು ವಾಸಂತಿ. ಇಲ್ಲವೆಂದರೆ ಒಳಕ್ಕೆ ಬರಬೇಕಾಗಿದ್ದಿಲ್ಲ ಎಂದು ಅರ್ಥ. ಆದರೆ ಅಷ್ಟು ದೂರದಿಂದ ಅಷ್ಟೊಂದು ಆಸೆಯಿಟ್ಟುಕೊಂಡು ಬಂದವನಿಗೆ ಭೇಟಿ ಇಷ್ಟು ಸಂಕ್ತಿಪ್ತವಾದರೆ ಹ್ಯಾಗೆ? ಸೌಜನ್ಯ ಮೀರಿ ಹಾಗೇ ನಿಂತು “ಬಾಯಾರಿಕೆಗೆ ನೀರು ಕೊಡುತ್ತೀರಾ” ಅಂದ. ತಕ್ಷಣ ವಾಸಂತಿ ಒಳಗೋಡಿದಳು.

ಅವಳು ಬರುವುದೊಳಗೆ ಮನೆ ಮುಂದಿನ ಕಟ್ಟೆಯ ಮೇಲೆ ಪ್ರತಿಷ್ಠಾಪಿತನಾಗಿ ಅಂಗಳದಲ್ಲಿ ಬಿದ್ದಿದ್ದ ಥರಾವರಿ ಮೂರ್ತಿಗಳನ್ನ ಅಧ್ಯಯನ ಮಾಡುವವರಂತೆ ನೋಡುತ್ತ, ಆದರೆ ಕಳ್ಳ ನೋಟಗಳಿಂದ ಮನೆ ಬಾಗಿಲನ್ನೇ ಕಾಯುತ್ತ ಕೂತ. ನಿರೀಕ್ಷೆಯಂತೆ ವಾಸಂತಿ ಬೆಲ್ಲ, ನೀರಿನೊಂದಿಗೆ ಬಂದಳು. ಕಟ್ಟೆಯ ಮೇಲಿಡುವುದಷ್ಟೇ ತಡ ಬೆಲ್ಲ ತಿಂದು ನೀರು ಕುಡಿದು ಬಾಯಾರಿಕೆ ನೀಗಿ ಒಡಲು ತಂಪು ಮಾಡಿಕೊಂಡವರಂತೆ ಹಾ!’ ಎಂದು ಉದ್ಗರಿಸಿ, ಅವಳನ್ನೇ ನೋಡಿದ. ಇವನ ಆಗಮನದಿಂದ ಮನೆಯಲ್ಲಿ ತಾರುಣ್ಯದ, ಚೈತನ್ಯದ ತಂಬೆಲರು ಸುಳಿದಂಗಾಗಿತ್ತು. ಅವಳೂ ಅವನನ್ನೇ ನೋಡುತ್ತಿದ್ದಳು. ಸರಳ ಸ್ವಭಾವದ ಹುಡುಗಿ, ಅವನು ಹಾಗೆ ನೋಡುವುದನ್ನು ಗಮನಿಸಿ ಲಜ್ಜೆಯಿಂದ ಒಳಗೊಳಗೇ ಮುಗುಳುನಗುತ್ತ ಗಿಂಡಿ ಬಟ್ಟಲು ತಗೊಂಡು ಹಿಂದಿರುಗಿದಳು. ಹೋಗುವಾಗ ಈಗಲೂ ಹಾಗೇ ನೋಡುತ್ತಿರುವನೇ? ಎಂದು ತಿಳಿಯಲು ಹಿಂದುರುಗಿ ನೋಡಿದಳು. ಆಸಾಮಿ ಪಳಗಿಸದ ಒರಟು ಪ್ರಾಣಿಯಂತಿದ್ದ. ಉತ್ಸುಕತೆಯಿಂದ ದುಂಡಗಿನ ಮುಖದಲ್ಲಿ ಮೂಗಿನ ತುದಿ, ಕೆನ್ನೆ, ಗದ್ದದ ತುದಿಗಳಲ್ಲಿ ತಾಜಾ ರಕ್ತ ಹರಿದಾಡುವ ತಾಣಗಳಾಗಿ ಕೆಂಪಗೆ ಹೊಳೆಯುತ್ತಿದ್ದವು. ಅವಳ ಪ್ರೇಮಾನುಗ್ರಹಕ್ಕೆ ಕಾತರನಾಗಿರುವಂತೆ ಅವನೂ ಹಾಗೇ ನೋಡುತ್ತಿದ್ದ.

ವಾಸಂತಿ ಈತನಕ ಯಾವ ಹುಡುಗನ ಕಡೆಗೂ ಗಂಭೀರವಾಗಿ ಗಮನ ಹರಿಸಿದವಳಲ್ಲ, ಅವನ ಪ್ರಸನ್ನವದನ, ದೃಢವಾದ ಆತ್ಮವಿಶ್ವಾಸ, ಸೌಜನ್ಯಶೀಲ ನಡೆವಳಿಕೆ, ವಯಸ್ಸಿಗೆ ಹಿರಿದಾದ ಗಾಂಭೀರ್ಯಗಳನ್ನು ಮೆಚ್ಚಿಕೊಂಡಳು. ಸಾಮಾನ್ಯವಾಗಿ ಹುಡುಗಿಯರು ಎದುರಾದ ಎಲ್ಲ ಗಂಡಸರ ಮುಖಗಳ ಮೇಲೆ ಒಂದು ಸಾರಿ ಕಣ್ಣಾಡಿಸಿದ ತಮಗೆ ಪ್ರಿಯವಾದ ಮುಖವನ್ನೇ ಆಯ್ದುಕೊಳ್ಳುತ್ತಾರೆ. ರವಿಯನ್ನು ನೋಡಿದ ಮೇಲೆ ಅವನಲ್ಲೇ ಅವಳು ಕಣ್ಣು ನೆಟ್ಟಳು. ಬೇರೆ ಮುಖ ನೋಡುವ ಆತುರವಾಗಲಿ, ಆಸಕ್ತಿಯಾಗಲಿ ಅವಳಲ್ಲಿ ಉಳಿಯಲಿಲ್ಲ. ಈಗಂತೂ ಲಜ್ಜೆ ಮತ್ತು ಸಂತೋಷಗಳಿಂದ ಅವಳ ಮುಖ ಮತ್ತು ಕಣ್ಣುಗಳಲ್ಲಿ ಅಪೂರ್ವವಾದ ಬೆಳಕು ಮಿಂಚಿತು. ನರ್ತಿಸುವಂತೆ ಹೆಜ್ಜೆಯಿಡುತ್ತ ಒಳನಡೆದಳು. ಈತ ಅವಸರದಿಂದ

“ಆಚಾರ್ಯರಲ್ಲಿ ಶಿಲ್ಪಶಾಸ್ತ್ರದ ಬಗ್ಗೆ ಕೆಲವು ಪ್ರಶ್ನೆ ಕೇಳಿ ತಿಳಿಯಬೇಕಾಗಿತ್ತು.”

-ಅವಳು ತಪ್ಪು ತಿಳಿದಾಳೆಂಬ ಸಂಕೋಚದಿಂದ ಹೇಳಿದ.

“ನಾಳೆ ಬರುತ್ತಾರೆ”

-ಅಂದಳು ಅವಳೂ ಅದೇ ಭಾವದಿಂದ ವಾಪಸು ಬರುತ್ತ.

“ಅಂದರೆ?….”

“ಇಂದಲ್ಲ ನಾಳೆ… ಅಂದರೆ ಇಪ್ಪತ್ತನಾಲ್ಕು ಘಂಟೆ ಆದಮೇಲೆ…”

ಎಂದು ಹೇಳಿ ಉಕ್ಕಿಬಂದ ನಗೆಯನ್ನು ನಿಯಂತ್ರಿಸಿಕೊಂಡಳು.

“ಮಲ್ಲಿಗೆ ಬಳ್ಳಿ ಸೊಗಸಾಗಿದೆ. ಎಷ್ಟೊಂದು ಹೂಗಳು!”

“ಬೇಕಾದರೆ ಒಂದೆರಡು ಕಿತ್ತುಕೊಳ್ಳಿ.”

-ಎಂದು ಹೇಳಿ ಈಗ ಮಾತ್ರ ನಗೆ ತಡೆಯದೆ ಕಿಲಕಿಲ ನಗುತ್ತ ಒಳಗೋಡಿದಳು. ವಾಸಂತಿ ಚಲನೆಯ ವಿಲಾಸದಿಂದ, ಅಂಗಾಂಗಳ ಸುಕುಮಾರ ಸಂಪನ್ನತೆಯಿಂದ, ಪ್ರಮಾಣಬದ್ಧ ಬೆಡಗಿನ ಆಕಾರದಿಂದ ಸೂಜಿಗಲ್ಲಿನಂತೆ ಅವನ ವ್ಯಕ್ತಿತ್ವವನ್ನು ಆಕರ್ಷಿಸಿದಳು. ಅವಳ ರೂಪ, ನಗೆಯ ಭಂಗಿ, ಚಲನೆ, ಹುಡುಗಾಟಿಕೆಯ ಮಾತು, ಇವೆಲ್ಲವೂ ಅಖಂಡವಾಗಿ ಅವನ ಹೃದಯವನ್ನು ಇರಿದಂತಾಗಿ ಮುಖ ಇನ್ನೂ ಕೆಂಪಗಾಯಿತು. ಮುಗುಳುನಕ್ಕಂತೆ ಸೋಗುಮಾಡಿದರೂ ಒಳಗೊಳಗೆ ಹುಡುಗನ ಯೌವನಕ್ಕೆ ಗಾಯವಾಗಿತ್ತು. ಕೃತಕ ನಗೆಯನ್ನು ಮುಂದುವರೆಸಲಾರದೆ ಹೊರಟ.

ಮಾರನೇ ದಿನವೂ ಅದೇ ಹೊತ್ತಿಗೆ ಬಂದ. ವಾಸಂತಿ ಹೂ ಕಿತ್ತು ಉಡಿಯಲ್ಲಿ ತುಂಬಿಕೊಳ್ಳುತ್ತ ನಿಂತಿದ್ದಳು. ಇವಳೇ ಮಾತಿಗೆ ಮುಂದಾದಳು:

“ಇನ್ನೂ ಬಂದಿಲ್ಲವಲ್ಲ!”

ರವಿಕೀರ್ತಿ ಇದನ್ನು ನಿರೀಕ್ಷಿಸಿರಲಿಲ್ಲ. ಅಥವಾ ಈಕೆಗೆ ತಾನಿಲ್ಲಿ ಬರುವುದರ ಉದ್ದೇಶದ ಬಗ್ಗೆ ಸಂದೇಹ ಬಂದಿರಬಹುದೇ? ಅನ್ನಿಸಿ,

“ನಿಜವಾಗ್ಲೂ ನಾನು ಆಚಾರ್ಯರನ್ನು ನೋಡಬೇಕಿತ್ತು ಇವರೇ”

ಅಂದ. ಇವಳೂ ಅದೇ ದಾಟಿಯಲ್ಲಿ

“ನಿಜವಾಗ್ಲೂ ಅವರಿನ್ನೂ ಬಂದಿಲ್ಲ ಇವರೆ.” ಅಂದಳು. ಇಬ್ಬರೂ ಒಂದೇ ಧಾಟಿಯಲ್ಲಿ ಮಾತಾಡಿದ್ದಕ್ಕೆ ನಗೆ ಬಂದರೂ ಆತ ಪೆದ್ದನಂತೆ ನಿಂತುದರಿಂದ ನಗೆ ತಡೆದುಕೊಂಡೇ ನಿಂತಳು.

ಮಾತು ಮುಂದುವರಿಸುವುದಕ್ಕೆ ಇನ್ನೇನೂ ಇಲ್ಲವೆಂದುಕೊಂಡು ತಿರುಗಿ ಹೊರಟ.

“ಮಲ್ಲಿಗೆ ಬೇಡವೆ?”

ಇವಳೇ ತುಂಟತನದಿಂದ ಕೇಳಿದಳು. ಹೂ ಎಂದು ಕತ್ತು ಹಾಕಿದ. ಉಡಿಯಿಂದ ಕೈತುಂಬ ಹೂ ತೆಗೆದುಕೊಟ್ಟಳು. ಬರ್ತೀನಿ ಎಂದು ಹೇಳಿ ಹೊರಟ.

ಆ ದಿನ ಅಷ್ಟೂ ಹೂಗಳನ್ನ ಎದೆಯ ಮೇಲಿಟ್ಟುಕೊಂಡು ನಿದ್ದೆ ಮರೆತು ಮಲಗಿದ. ಅವಳನ್ನು ಕಂಡ ಕೂಡಲೇ ಹೃದಯ ಜೋರಾಗಿ ಬಡಿದುಕೊಂಡಿತ್ತು. ಅದಕ್ಕೆ ಕಾರಣ ಗೌರವವೋ, ಭಯವೋ, ನಿರೀಕ್ಷೆಯೋ, ಪ್ರೀತಿಯೋ, ಯಾವುದೂ ಅರ್ಥವಾಗಲಿಲ್ಲ. ಬಹುಶಃ ಅವಳ ವಿಶಿಷ್ಟ ಆಕೃತಿಯೇ ಕಾರಣವೆಂದು ತಿಳಿದುಕೊಂಡ. ತಕ್ಷಣ ಅದನ್ನೂ ನಿರಾಕರಿಸಿದ. ಹಾಳಾದ್ದು ಪ್ರೀತಿ ಎನ್ನುವುದು ತರ್ಕವನ್ನ ಮೀರಿದ್ದು. ನಮಗೆ ಗೊತ್ತಾಗುವ ಮುನ್ನವೇ ನಾವು ಪ್ರೀತಿಯಲ್ಲಿ ಮುಳುಗಿರುತ್ತೇವೆ. ಅದೇನೆಂದೇ ತಿಳಿಯುವುದಿಲ್ಲ. ಆದರೆ ಅದು ಇರುತ್ತದೆ ಎಂದು ತರ್ಕಿಸುತ್ತ ಹೊರಳಾಡುತ್ತ ಮಲಗಿದ. ಇವಳೂ ನಿದ್ದೆ ಕಳೆದುಕೊಂಡಿದ್ದಳು.

ವಾಸಂತಿ ತೆಳ್ಳಗೆ ಬೆಳ್ಳಗೆ ರವಿಕೀರ್ತಿಯ ಭುಜದಷ್ಟು ಎತ್ತರ ಬೆಳೆದ ಹುಡುಗಿ. ಗೊಂಬೆಯಂಥವಳು, ಉತ್ಸಾಹ ಆನಂದಗಳು ತುಂಬಿ ತುಳುಕುತ್ತಿದ್ದಳು. ಸದಾ ನಗುವ, ಫಳ ಫಳ ಹೊಳೆವ ದೊಡ್ಡ ಕಣ್ಣು, ಅಂದವಾಗಿ ಬಾಗಿದ ಹುಬ್ಬು, ದಟ್ಟವಾಗಿ ಹಣೆ ಕೆನ್ನೆಯ ಮೇಲೂ ಚಿನ್ನಾಟವಾಡುವ ಕಪ್ಪು ಕೂದಲು, ನೋಡಿದವರಿಗೆ ಪ್ರಿಯವಾಗುವಂತೆ ನಗುವ, ನಕ್ಕಾಗ ಫಳ್ಳನೆ ಬೆಳಕು ಚೆಲ್ಲುವ ದಂತ ಪಂಕ್ತಿಗಳಿಂದಾಗಿ ಒಮ್ಮೆ ನೋಡಿದವರು ಅವಳನ್ನು ಮರೆಯುವುದು ಸಾಧ್ಯವೇ ಇರಲಿಲ್ಲ. ಹಾಗೆಯೇ ಬುದ್ಧಿವಂತಿಕೆ, ಹಾಸ್ಯ ಮನೋಭಾವವುಳ್ಳಾಕೆ. ಹರಿತವಾದ ಗ್ರಹಿಕೆ, ಮತ್ತು ಇನ್ನೊಬ್ಬರ ಬಗ್ಗೆ ಅನುಕಂಪವುಳ್ಳಾಕೆ. ಹಾಗೆಯೇ ಸ್ವಾಭಿಮಾನಿ. ದೃಢವಾದ ಸಂಕಲ್ಪ ಶಕ್ತಿವುಳ್ಳವಳು. ರವಿಕೀರ್ತಿಯಂತೆ ಅವಳೂ ಜಾತಿ ವರ್ಣಾಶ್ರಮ ಧರ್ಮಗಳನ್ನು ವಿರೋಧಿಸುತ್ತಿದ್ದಳು.

ಅಂದಿನಿಂದ ಇಬ್ಬರೂ ನಿದ್ದೆ ಕಳೆದುಕೊಂಡರು. ಇನ್ನೂ ಪರಸ್ಪರ ತಿಳಿಸಿರಲಿಲ್ಲ. ಈ ಮಧ್ಯೆ ಇನ್ನೂ ಅನೇಕ ಭೇಟಿಗಳು, ನಗೆ ಮಾತುಗಳ ವಿನಿಮಯವಾಗಿ, ಅರ್ಥವಿಲ್ಲದ ಅದು ಇದು ಚರ್ಚೆಗಳ ನೆಪದಲ್ಲಿ ಪರಸ್ಪರ ನೋಡುತ್ತಾ ಕಾಲಕಳೆಯುವುದು-ಇದೆಲ್ಲ ನಡೆದು ನವರಾತ್ರಿಯ ಮೊದಲ ದಿನ ಬನ್ನಿ ಹಂಚಲು ರವಿ ಇವರ ಮನೆಗೆ ಬಂದ. ಆಚಾರ್ಯ ಅರಮನೆಗೆ ಹೋಗಿದ್ದ. ವಿದ್ಯಾರ್ಥಿಗಳ್ಯಾರೂ ಇರಲಿಲ್ಲ. ಅಜ್ಜಿ ಒಳಗಿದ್ದಳು. ಬನ್ನಿ ಹಂಚಿ ನಾವಿಬ್ಬರೂ ಬಂಗಾರವಾಗೋಣ ಎಂದು ಹೇಳಿ ಬನ್ನಿ ಕೊಟ್ಟು ತಗೊಳ್ಳುವಾಗ ಇಬ್ಬರ ಕೈ ಉದ್ದೇಶಪೂರ್ವಕ ತಾಗಿದವು. ಒಂದು ಕ್ಷಣ ರವಿ ನಿಂತು ಅವಳನ್ನೇ ನೋಡಿದ. ಆ ಕೇಶರಾಶಿ, ಹೊಳೆಯುವ ಕಪ್ಪು ಕಣ್ಣು ಸಂಪೂರ್ಣ ವಿಕಾಸಗೊಳ್ಳದ ಕುಚಗಳು, ಕೆಂಪುಗೆನ್ನೆ, ಕೌಮಾರ್ಯದ ಸ್ವಾರ್ಥರಹಿತ ಪ್ರೇಮ, ಮುದ್ದಿಸುವ ಯಾವ ಉದ್ದೇಶವೂ ಇಲ್ಲದೇ ಮೆಲ್ಲನೆ ಅವಳ ಕಿವಿಯ ಬಳಿ ಬಾಯ ತಂದು “ನಿಮ್ಮಂಥ ಚೆಲುವೆಯ ನಾ ಕಾಣೆ” ಎಂದು ಮೆಲ್ಲನೆ ಉಸುರಿದ. ಕೆನ್ನೆ ಕೆಂಪೇರಿ ಅನುದ್ದಿಶ್ಯವಾಗಿ ಒಂದು ಹರಿತ ನೋಟ ಬೀರಿ ಅವನ ಕಡೆ ನೋಡಿದ್ದೇ, ಗಪ್ಪನೆ ಹಿಡಿದು ರವಿ ಮುದ್ದಿಟ್ಟು ತಪ್ಪಾಯಿತೇನೋ ಎಂಬಂತೆ ಅವಳ ಕಡೆ ನೋಡಿದ. ಅವಳು ನಾಚಿಕೆಯಿಂದ ಇನ್ನಷ್ಟು ಕೆಂಪೇರಿ ದೂರ ಸರಿದಳು. ಈದಿನ ನಾನು ತಪ್ಪು ಮಾಡಿದೆನೆ? ಎಂದು ರವಿ ಯೋಚಿಸುತ್ತ ನಿದ್ದೆಗೆಟ್ಟ. ವಾಸಂತಿಯೂ ಅಷ್ಟೆ.

ನವರಾತ್ರಿ ಮುಗಿದು ಒಂದು ವಾರವಾಗಿದ್ದೀತು. ಒಂದು ದಿನ ರವಿ ತನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಬೇಕೆಂದು ಆಚಾರ್ಯರ ಮನೆಗೆ ಬಂದ. ವಾಸಂತಿ ದೇವಾಲಯಕ್ಕೆ ಹೊರಟಿದ್ದಳು. “ನಾನೂ ಬರಲೇ?” ಅಂದ ಧೈರ್ಯ ಮಾಡಿ. ಬನ್ನಿ ಅಂದಳು. ಜೊತೆಯಲ್ಲಿ ಈಶ್ವರ ದೇವಸ್ಥಾನಕ್ಕೆ ಹೋದರು. ಭಕ್ತಾದಿಗಳ ಹಾವಳಿಯ ದಿನ ಅಲ್ಲ ಅದು. ಸಂಜೆ ದೇವಸ್ಥಾನದಲ್ಲಿ ಇಬ್ಬರೇ ಗರ್ಭಗೃಹದ ಪ್ರದಕ್ಷಿಣೆ ಹಾಕುತ್ತಿದ್ದರು. ಏಕಾಂತದಲ್ಲಿ ಕೊಂಚ ಕತ್ತಲ ಪ್ರದೇಶ ಬಂದೊಡನೆ ರವಿಕೀರ್ತಿ ತನ್ನ ಮುಂದೆ ನಡೆದಿದ್ದ ವಾಸಂತಿಯ ಎಡಭುಜದ ಮೇಲೆ ಕೈ ಇಟ್ಟ. ಇವಳ ವೇಗ ಕಡಿಮೆಯಾಗಿ ರಕ್ತದೊತ್ತಡ ಅಧಿಕವಾಗಿ ಕೆನ್ನೆ ಬಿಸಿಯಾದವು. ಇಬ್ಬರ ದೇಹಗಳಿಗೆ ಪರಸ್ಪರ ಭಾವನೆಗಳು ಅರ್ಥವಾಗಿ ಅವುಗಳ ಪಾಡಿಗೆ ಅವನ್ನು ಬಿಟ್ಟಿದ್ದರೆ ಸಂವಹನ ಸುಲಭವಾಗಬಹುದಿತ್ತು. ಆದರೆ ಇವಳಿಗದು ತಿಳಿಯದೆ ಅವನ್ನು ವಾಚ್ಯವಾಗಿಸಲು ಶಬ್ದಗಳನ್ನು ಬಳಸಿ “ಏನಂದ್ರಿ?” ಅಂದಳು ಹಿಂದಿರುಗಿ! ಭಾಷೆ ಇಬ್ಬರ ಮಧ್ಯೆ ವಹಿವಾಟನ್ನು ಬೆಳೆಸದೆ ಕಲ್ಲಿನ ಗೋಡೆಯ ಹಾಗೆ ನಿಂತುಬಿಟ್ಟಿತು. ಅಕಸ್ಮಾತ್ ಭೇಟಿಯಾದ ಅಪರಿಚಿತರ ಹಾಗೆ ಒಬ್ಬರ ಮನಸ್ಸು ಇನ್ನೊಬ್ಬರಿಗೆ ತಿಳಿಯದೆ ಪ್ರದಕ್ಷಿಣೆ ಮುಂದುವರಿಸಿದರು.

ಇನ್ನೊಂದು ಸುತ್ತು ಮುಗಿದು ಅದೇ ಸ್ಥಳಕ್ಕೆ ಬಂದಾಗ ರವಿಕೀರ್ತಿ ಗಪ್ಪನೆ ಅವಳನ್ನು ಬರಸೆಳೆದು ಬಿಗಿಯಾಗಿ ತಬ್ಬಿಕೊಂಡು ಮುದ್ದಿಟ್ಟ. ವಾಸಂತಿ ಇದಕ್ಕಾಗಿ ಪೂರ್ವತಯಾರಿ ಮಾಡಿಕೊಂಡಿದ್ದಂತೆ ಮುದ್ದೆಯಾಗಿ ಅವನ ತೆಕ್ಕೆಗೆ ಸರಿದು ತನ್ನನ್ನು ತಾನು ಅರ್ಪಿಸಿಕೊಂಡು ಗಡಗಡ ನಡುಗಿದಳು. ಮುದ್ದಿಸುತ್ತ ಎಂಜಲು ವಿನಿಮಯ ಮಾಡಿಕೊಳ್ಳುವಾಗ ಯಾರೋ ಗಂಟೆ ಬಾರಿಸಿದೊಡನೆ ತಕ್ಷಣ ಬಿಟ್ಟು ಪ್ರದಕ್ಷಿಣೆ ಮುಂದುವರೆಸಿದರು.

ರವಿ ಅಂದು ರಾತ್ರಿಯೂ ನಿದ್ದೆಗೆಟ್ಟ. ಚುಂಬನದ ಸವಿಯಿನ್ನೂ ನಾಲಗೆಯಲ್ಲಿತ್ತು. ಮತ್ತೆ ಮತ್ತೆ ಜ್ಞಾಪಿಸಿಕೊಂಡ. ಪ್ರೀತಿ ಅಂದರೇನೆಂದು ತಿಳಿಯಲು ಪ್ರಯತ್ನ ಮಾಡಿದ: ‘ಜೀವನದಲ್ಲಿ ಅನೇಕ ಕೆಟ್ಟ ಯೋಚನೆ ಮಾಡಿದ್ದೇನೆ, ಪಶ್ಚಾತ್ತಾಪ ಪಟ್ಟಿದ್ದೇನೆ. ಆದರೆ ಇದೊಂದನ್ನು ಮಾಡಿದಾಗ ಮಾತ್ರ ನನಗೆ ಪಶ್ಚಾತ್ತಾಪವಾಗಲೇ ಇಲ್ಲ. ನಾನು ಅವಳನ್ನು ಪ್ರೀತಿಸಿದೆ ಎನ್ನಿಸಿತೇ ವಿನಾ ಮೋಸಮಾಡಿದೆ ಅಂತ ಅನ್ನಿಸಲೇ ಇಲ್ಲ. ಅಥವಾ ಏನನ್ನೋ ಕಳೆದುಕೊಂಡೆ ಮತ್ತು ಏನನ್ನೋ ಪಡೆದುಕೊಂಡೆ ಅನ್ನಿಸಿತು. ಕಳೆದುಕೊಂಡದ್ದಕ್ಕೆ ಹಳಹಳಿಯಾಗಲಿಲ್ಲ, ಆದರೆ ಪಡೆದದ್ದಕ್ಕೆ ಆನಂದವಾಯಿತು. ಅವಳಿಗೂ ಹೀಗೇ ಅನ್ನಿಸಿದ್ದರೆ ಚಂದ’ ಎಂದುಕೊಳ್ಳುತ್ತ ನಿದ್ದೆಗೆಟ್ಟು ಕೊನೆಗೆ ಅವಳನ್ನೇ ಮದುವೆಯಾಗುವುದೆಂದು ತೀರ್ಮಾನಿಸಿದ. ವಾಸಂತಿಯೂ….!

ಆದರೆ ಅದು ಸುಲಭವಲ್ಲವೆಂದು ತಿಳಿಯಲು ತಡವಾಗಲಿಲ್ಲ. ತಂದೆಯ ಸ್ವಭಾವ ಗೊತ್ತಿದ್ದ ರವಿಕೀರ್ತಿಗೆ ತಮ್ಮಿಬ್ಬರ ಮದುವೆ ದೂರದ ಕನಸಾಗಿ ಕಂಡಿತು.

ಒಂದು ದಿನ ವಾಸಂತಿಗೆ ಈ ಬಗ್ಗೆ ಹೇಳಿಯೂ ಬಿಟ್ಟ-

“ನಮ್ಮಪ್ಪ ಪ್ರೇಮ, ಪ್ರೀತಿ ಗೊತ್ತಿಲ್ಲದವ. ಹಾಗೆ ಯಾರಾದರೂ ಹೇಳಿದರೆ ಅವರನ್ನು ಆತ್ಮವಂಚಕರೆಂದೋ ಸಮಾಜದ್ರೋಹಿಗಳೆಂದೋ ಕರೆವಾತ. ಅಷ್ಟಾಗಿಯೂ ವಾದ ಮುಂದುವರಿಸಿದರೆ ಅವನ ಕಿವಿಗೂದಲು ನಿಮಿರುವುದರಲ್ಲಿ ಸಂದೇಹವೇ ಇಲ್ಲ.”

ವಾಸಂತಿಗೆ ನಿರಾಸೆಯಿಂದ ಅವಮಾನವಾಯಿತು. ನೊಂದುಕೊಂಡು,

“ಅಂದರೆ ನಮ್ಮಪ್ಪ ಪುಕ್ಕಲು ಅಂತಲ? ಬಡಶಿಲ್ಪಿ, ಅವನಿಗ್ಯಾರು ಹೇಳೋರು ಕೇಳೋರು ಇಲ್ಲ ಅಂತಲ?”

“ಹಾಗಲ್ಲ ವಾಸಂತಿ, ಆಚಾರ್ಯರು ಸಜ್ಜನರು ಅಂತ. ಮುಗ್ಧರನ್ನ, ಮೂರ್ಖರನ್ನ, ನಿಜವಾದ ತತ್ವಗಳಿಗಾಗಿ ಸಾಯುವ ಸಂತರನ್ನ ಕಂಡರೆ ಆಗೋದಿಲ್ಲ ನಮ್ಮಪ್ಪನಿಗೆ. ಅಗತ್ಯ ಬಿದ್ದರೆ ಸಂತ, ಮೂರ್ಖ, ಮುಗ್ಧರಂತೆ ನಟಿಸಲೂ ಬಲ್ಲ. ಸಿಹಿಯಾದ ನಗೆಗಳಿಂದ, ಬೆಲ್ಲದ ಮಾತುಗಳಿಂದ, ಬೆಲೆಯಿಲ್ಲದ ಭರವಸೆಗಳಿಂದ, ಹಣವಿಲ್ಲದ ಔದಾರ್ಯಗಳಿಂದ ಪುಕ್ಕಟೆ ಹೃದಯವಂತಿಕೆಯಿಂದ ಅವನನ್ನು ಕೊಳ್ಳುವುದು ಸಾಧ್ಯವಿಲ್ಲ. ಕ್ರೌರ್ಯದಲ್ಲಿ ನಮ್ಮಪ್ಪನ ಹಂತಕ್ಕೆ ಹೋಗುವುದು ಯಾರಿಂದಲೂ ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಮನುಷ್ಯರನ್ನೇ ಹರಿದು ತಿಂಬಾತ! ಅವನಾಗಲೇ ನನ್ನನ್ನು ಕೇಂದ್ರದಲ್ಲಿಟ್ಟುಕೊಂಡು ಮಹತ್ವಾಕಾಂಕ್ಷೆಗಳನ್ನ ಹಣೆದಿದ್ದಾನೆ!”

ವಾಸಂತಿ ಈಗ ಪ್ರತಿಯಾಗಿ ರವಿಗೆ ಅವಮಾನ ಮಾಡಲೆಂದೇ ಹೇಳಿದಳು:

“ಮಹತ್ವಾಕಾಂಕ್ಷೆ ಅಂದರೆ?…. ಅದೆ ನರಮಾಂಸ ತಿನ್ನೋದು?”

“ಹಾಗಲ್ಲ ಮಾರಾಯಳೇ, ನಾನು ಚಕ್ರವರ್ತಿ ಆಗಬೇಕಂತ ನಮ್ಮಪ್ಪನ ಆಸೆ. ಯಾವನೋ ಮಹಾರಾಜನ ಮಗಳನ್ನು ಮದುವೆಯಾದರೆ ಚಕ್ರವರ್ತಿ ಆಗೋದು ಸುಲಭ ಅಂತ ಅವನ ಲೆಕ್ಕಾಚಾರ.”

“ಸರಿ ಸ್ವಾಮಿ, ದೊಡ್ಡ ದೇಶದ ರಾಜಕುಮಾರಿಯನ್ನು ಕಟ್ಟಿಕೊಂಡು ನಮ್ಮ ಪಾಡಿಗೆ ನಮ್ಮನ್ನ ಬಿಟ್ಟು ಚಕ್ರವರ್ತಿಯಾಗಿ ಮೆರೆಯಿರಿ. ಆದರೆ ಒಂದು ಮಾತು. ಇಷ್ಟು ಸ್ವಾರ್ಥಿಯಾದ ನಿನ್ನಪ್ಪ ನಿನ್ನನ್ನೇ ಚಕ್ರವರ್ತಿ ಮಾಡತಾನೆ ಅಂತ ಏನು ಭರವಸೆ? ತಾನೇ ಆಗಬಹುದಲ್ಲ?”

ರವಿಕೀರ್ತಿಯ ಕಣ್ಣು ಹೊಳೆದವು.

“ಚಕ್ರವರ್ತಿಯಾದರೂ ಆಗಲಿ, ದೇವರಾದರೂ ಆಗಲಿ. ಆದರೆ ಒಂದಂತೂ ನಿಜ: ಆತ ಬೇಕಾದಷ್ಟು ವಿರೋಧಗಳನ್ನ, ಅವು ಇರಲೇ ಇಲ್ಲ ಎಂಬಂತೆ ನಿಭಾಯಿಸಬಲ್ಲ!”

“ಸರಿ ಸ್ವಾಮಿ”

-ಎಂದು ಹೇಳುತ್ತ ದೂರ ಸರಿದಳು. ಅವಳ ಮನಸ್ಸು ನೊಂದದ್ದು ಗೊತ್ತಾಗಿ ರವಿಕೀರ್ತಿ ತಕ್ಷಣ ವಾಸಂತಿಯನ್ನು ಆಲಂಗಿಸಿ ಗಟ್ಟಿಯಾಗಿ ತನಗಂಟಿಸಿಕೊಂಡು ಜೋರಾಗಿ ಮುದ್ದಿಟ್ಟ.

“ನಾನದನ್ನೆಲ್ಲಾ ಯೋಚನೆ ಮಾಡಿಲ್ಲ ಅಂದುಕೊಂಡೆಯಾ ವಾಸಂತಿ? ನನಗೆ ನಮ್ಮಪ್ಪನ ರಾಜ್ಯ ಬೇಡವೇ ಬೇಡ. ನಾವು ಬಿಳಿಗಿರಿಯಲ್ಲಿ ಇದ್ದು ಬಿಡುವಾ. ಅದು ನನ್ನ ಅಜ್ಜನ ಮನೆ. ಚಿಕ್ಕ ಮನೆ, ಚಿಕ್ಕ ಮಡದಿ, ನನಗೊಂದು ಚಿಕ್ಕ ಅಜ್ಜಿ ಇದೆ. ಚಿಕ್ಕ ಚೊಕ್ಕ ಸಂಸಾರ. ಬಿಳಿಗಿರಿಯವರೂ ಇಲ್ಲವೆಂದರೆ ನನ್ನ ಮಿತ್ರ ಶ್ವೇತಕೇತುವಿನಲ್ಲಿ ಆಸ್ಥಾನ ಪಂಡಿತನಾಗುತ್ತೇನೆ. ಹ್ಯಾಗಿದೆ ಉಪಾಯ?”

ವಾಸಂತಿಗೆ ಖುಶಿಯಾಗಿ ಮುಖ ಕೆಂಪೇರಿ ಅವನ ಎದೆ ಕೆನ್ನೆಗಳಿಗೆ ತನ್ನ ಕೆನ್ನೆಯಿಂದ ಉಜ್ಜುತ್ತ ರೋಮಾಂಚನ ಮತ್ತು ಲಜ್ಜೆ ಎರಡನ್ನೂ ಅನುಭವಿಸಿದಳು. ಸದ್ಯಕ್ಕೆ ಆಚಾರ್ಯನಿಗೆ ವಿಷಯ ತಿಳಿಸದೆ ಮೊದಲು ಅಜ್ಜಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆಲೋಚನೆ ಮಾಡಿ ಎದ್ದರು.

ವಾಸಂತಿಯ ಅಜ್ಜಿಗೆ ಹುಡುಗ ಇಷ್ಟವಾದ. ಆದರೆ ಮುದುಕಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಬೋಧಿಸಿದಳು. ಆಚಾರ್ಯನಿಗೆ ಹೇಳದಿದ್ದರೆ ಮಗಳು ಮತ್ತು ರವಿಕೀರ್ತಿಯ ಮಧ್ಯೆ ಬೆಳೆದ ಸಲುಗೆಯಿಂದ ವಿಚಲಿತನಾಗಿ ಸಕಾಲದಲ್ಲಿ ಬುದ್ಧಿ ಹೇಳಬೇಕೆಂದು ಮಗಳಿಗೆ ಹೇಳಿದ:

“ರವಿಕೀರ್ತಿಯ ತಂದೆಯನ್ನು ನಾನು ಕಂಡಿದ್ದೇನೆ ಮಗಳೆ. ಇಷ್ಟು ತಿಳಿದಿರು: ಆತ ಮನುಷ್ಯನಂತೂ ಅಲ್ಲ. ಈಗಲೇ ಅವನ ಮಗನಿಂದ ದೂರವಿರಲು ಹೇಳಿದ್ದೇನೆ, ಹುಷಾರ್‌!”

ವಾಸಂತಿಗೆ ತನ್ನ ದಿವಂಗತ ತಾಯಿಯ ಹೆಸರು ತಗೊಂಡು ಕಣ್ಣೀರಿಟ್ಟರೆ ಅಪ್ಪ ಮೆತ್ತಗಾಗುತ್ತಾನೆಂದು ಗೊತ್ತಿತ್ತು. ಆದ್ದರಿಂದ ಅವಳು ನಿಶ್ಚಿಂತಳಾಗಿದ್ದಳು. ನಿಶ್ಚಿತಾರ್ಥ ಕೂಡ ಆಗದೆ ಇವರಿಬ್ಬರೂ ಹೀಗೆ ಸಲುಗೆಹಿಂದ ವರ್ತಿಸುವುದು ಆಚಾರ್ಯನಿಗೂ ಅಜ್ಜಿಗೂ ಸರಿಬರದಿದ್ದರೂ ಇವರು ಹಿಂಜರಿಯಲಿಲ್ಲ. ಅವರಿಬ್ಬರ ಆತ್ಮೀಯ ಪರಿಚಯ ಕೂಡ ಇತ್ತೀಚೆಗಷ್ಟೆ ಸುರುವಾಗಿತ್ತು. ಇಬ್ಬರೂ ಆಗಲೇ ಅನೇಕ ವರ್ಷಗಳಿಂದ ಸ್ನೇಹಿತರೆಂಬಂತೆ, ಪ್ರೇಮಿಗಳೆಂಬಂತೆ ಸಹಜವಾಗಿ ಇರತೊಡಗಿದ್ದರು. ಹೊರಗಣ್ಣಿಗೆ ರವಿ ಬೇಜವಾಬ್ದಾರಿ ಪ್ರವಾಸಿಯಂತೆ ಕಂಡರೂ ವಾಸ್ತವವಾಗಿ ಒಳ್ಳೆಯವ, ತಾನೇನೆಂದು ಅರಿತವ, ಅವನಿಗೆ ಹೆದರಬೇಕಾಗಿಲ್ಲವೆಂದು ಮನೆಯವರಿಗೆ ವಾಸಂತಿ ಭರವಸೆ ನೀಡಿದಳು.

ಆಮೇಲಾಮೇಲೆ ರವಿ ಕೂಡ ಅವರೊಂದಿಗೆ ಸಂಕೋಚವಿಲ್ಲದೆ ಬೆರೆಯುತ್ತ ಯಾವ ನಿರ್ಬಧಗಳಿಲ್ಲದೆ ಅಜ್ಜಿಯ ಜೊತೆಗೂ ಆಚಾರ್ಯನ ಜೊತೆಗೂ ಮಾತಾಡುತ್ತಿದ್ದ. ಶಿಲ್ಪಶಾಸ್ತ್ರದ ಬಗ್ಗೆ ಆಚಾರ್ಯನೊಂದಿಗೆಸುದೀರ್ಘ ಚರ್ಚೆ ಮಾಡುತ್ತಿದ್ದ. ಅಪರೂಪಕ್ಕೆ ಒಮ್ಮೊಮ್ಮೆ ತನ್ನ ಭವಿಷ್ಯದ ಬಗ್ಗೆಯೂ ಹೇಳುತ್ತಿದ್ದ.

ವಾಸಂತಿ ರವಿಯನ್ನ ಸಂಪೂರ್ಣ ನಂಬಿ ಅವಲಂಬಿಸಿದವಳಾದ್ದರಿಂದ ರವಿಯಿದ್ದಲ್ಲಿ ತಾನು ಎಂಬಂತಿದ್ದಳು. ರವಿಯ ರಾಗ ಭಾವಗಳನ್ನು ಊಹಿಸಿ ಹಂಚಿಕೊಳ್ಳುತ್ತಿದ್ದಳು. ಇಬ್ಬರೇ ಏಕಾಂತದಲ್ಲಿದ್ದಾಗ ವಾಸಂತಿಯ ಕೆಂಪೇರಿದ ಮುಖವನ್ನು ರವಿ ಏಕಗ್ರಚಿತ್ತದಿಂದ ನೋಡುತ್ತಿದ್ದ. ತಾನು ಮಾತನಾಡುವಾಗ ಆತ ತದೇಕ ದೃಷ್ಟಿಯಿಂದ ತನ್ನನ್ನೇ ನೋಡುತ್ತಿದ್ದುದನ್ನ ಗಮನಿಸಿ ಅವಳೂ ಹರ್ಷೋನ್ಮಾದದಲ್ಲಿರುತ್ತಿದ್ದಳು. ರವಿಯ ಮಾತಿನ ಶೈಲಿ ಮತ್ತು ನಗೆಗಳನ್ನು ಚೆನ್ನಾಗಿ ಅನುಕರಣೆ ಮಾಡಿ ಅಜ್ಜಿಯನ್ನು ನಗಿಸುತ್ತಿದ್ದಳು. ಅಗಲಿಕೆಯ ವಿಚಾರ ಬಂದಾಗ ಮಾತ್ರ ವಾಸಂತಿ ಭಯಭೀತಳಾಗಿ ಬಾಡುತ್ತಿದ್ದಳು.

ಇಂತಿರುವಲ್ಲಿ ಬಿಳಿಗಿರಿಯಿಂದ ಕುದುರೆಗಾಡಿ ಸಮೇತ ಭಂಟನೊಬ್ಬ ಬಂದು ಗೌರಿಯ ನಿಶ್ಚಯ ಕಾರ್ಯಕ್ಕೆ ಬರಬೇಕೆಂಬ ಸಂದೇಶ ಪತ್ರವನ್ನು ರವಿಕೀರ್ತಿಯ ಕೈಗೆ ಕೊಟ್ಟ.

ಪತ್ರ ಓದಿ ಆಕಾಶದಲ್ಲಿ ಹಾರಾಡುತ್ತಿದ್ದ ಇಬ್ಬರೂ ದಸಕ್ಕನೇ ಕುಸಿದು ನೆಲದ ಮೇಲೆ ಕಾಲೂರಿದರು. ಹೋಗಿ ಒಂದೆರಡು ವಾರ ಇದ್ದು ಬರುವುದೆಷ್ಟೋ ಅಷ್ಟೇ ಎಂದು ಎಷ್ಟು ಹೇಳಿದರೂ ವಾಸಂತಿ ನಂಬಲಿಲ್ಲ. ಇಬ್ಬರೂ ಹಿಂದಿರುಗಿ ಮೊದಲಿನ ಸ್ಥಳಕ್ಕೆ ಬಾರದಷ್ಟು ಮುಂದೆ ಹೋಗಿದ್ದರು. ಮುಂದಿನ ದಾರಿ ಕಾಣದಾಗಿತ್ತು. ಈಗ ನಿರ್ಧಾರ ತೆಗೆದುಕೊಳ್ಳಬೇಕಾದವನು ರವಿಕೀರ್ತಿಯೇ; ಅವನ ಅನುಕೂಲಕರ ನಿರ್ಧಾರಕ್ಕಾಗಿ ವಾಸಂತಿ ಕಾತರಿಸಿದ್ದಳು.

ಕುದುರೆಗಳಿಗೆ ವಿಶ್ರಾಂತಿ ಕೊಡಲು ಒಂದು ದಿನ ಬಿಟ್ಟು ಅದರ ಮಾರನೇ ದಿನ ಬಿಳಿಗಿರಿಗೆ ಹೊರಡುವುದೆಂದು ನಿರ್ಧರಿಸಿದ. ವಿಶ್ರಾಂತಿಯ ದಿನ ಸಂಜೆ ರವಿ ನಿತ್ಯ ಕೂಡಿ ಮಾತಾಡುತ್ತಿದ್ದ ದೇವಸ್ಥಾನಕ್ಕೆ ಬಂದ. ವಾಸಂತಿ ಇನ್ನೂ ಸಪ್ಪಗಿದ್ದಳು.

“ವಾಸಂತಿ ನೀನು ಹೀಗೆ ಸಪ್ಪಗಿದ್ದರೆ ನನಗೆ ದುಃಖವಾಗುತ್ತದೆ, ನಿನಗೆ ನಂಬಿಕೆ ಬರುವಂತೆ ನಾನೇನು ಮಾಡಬೇಕು ಹೇಳು.”

-ಎಂದು ಭುಜ ಹಿಡಿದು ಎದುರು ನಿಲ್ಲಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಮುಂದೆ ಹೆಜ್ಜೆಯಿಟ್ಟು ಅವನ ಎದೆಯ ಮೇಲೆ ಒರಗಿ ಹೇಳಿದಳು:

“ನನಗೆ ನಿನ್ನಲ್ಲಿ ನಂಬಿಕೆಯಿದೆ. ನೀನೇನೂ ಮಾಡಬೇಕಾದ್ದಿಲ್ಲ.”

“ನನ್ನ ಆತ್ಮತೃಪ್ತಿಗಾಗಿ ಹೇಳುತ್ತಿದ್ದೇನೆ: ನಾವ್ಯಾಕೆ ಶಿವಲಿಂಗದ ಮುಂದೆ ನಿಂತು ಈಗಲೇ ಮದುವೆಯಾಗಬಾರದು?” ಅಂದ.

“ನಾವಿಬ್ಬರೆ?”

“ಬೇಕಾದರೆ ಆಚಾರ್ಯರನ್ನ ಕರೆತರೋಣ.”

ವಾಸಂತಿ ಸುಮ್ಮನೆ ನಿಂತಳು. ರವಿಕೀರ್ತಿಯ ಮಾತಿನಲ್ಲಿ ಅವಳಿಗೆ ನಂಬಿಕೆಯಿತ್ತು. “ಬೇರೆ ಯಾರೂ ಬೇಡ. ಶಿವಲಿಂಗನ ಸಾಕ್ಷಿಯಲ್ಲೇ ನಾವಿಬ್ಬರೇ ಮದುವೆಯಾಗೋಣ. ಅದಕ್ಕೆ ಇಬ್ಬರೂ ಬದ್ಧರಾಗಿರೋಣ.”

ಇಬ್ಬರೂ ಶಿವಲಿಂಗದೆದುರಿಗೆ ಕೈ ಮುಗಿದು ನಿಂತರು. ಶಿವಲಿಂಗವನ್ನು ಕುರಿತು ರವಿ ಹೇಳಿದ:

“ಶಿವಲಿಂಗ ತಂದೆ, ನಾನು ವಾಸಂತಿಯನ್ನು ಹೃತ್ಪೂರ್ವಕ ಇಷ್ಟ ಪಟ್ಟಿದ್ದೇನೆ. ಪ್ರೀತಿಸಿದ್ದೇನೆ. ತಂಗಿಯ ಮದುವೆ ಮುಗಿಸಿ ಬಂದು ಶಾಸ್ತ್ರೋಕ್ತ ಮದುವೆಯಾಗುತ್ತೇನೆ. ನಿನ್ನ ಸಾಕ್ಷಿಯಲ್ಲಿ ಅವಳ ಕೈ ಹಿಡಿದಿದ್ದೇನೆ. ಇದೇ ಗುರುತು.”

ಎಂದು ಹೇಳಿ ಶಿವಲಿಂಗದ ಮೇಲಿನ ಒಂದು ಹೂವನ್ನು ಅವಳ ಮುಡಿಗಿಡಿಸಿದ. ವಾಸಂತಿಯ ಕಣ್ಣು ತುಂಬಿ ಬಂತು. ಭಾವತುಂಬಿ ರವಿಕೀರ್ತಿಯ ಕಾಲು ಮುಟ್ಟಿ ನಮಸ್ಕರಿಸಿ ಶಿವಲಿಂಗಕ್ಕೂ ನಮಸ್ಕಾರ ಮಾಡಿದಳು. ಅಷ್ಟರಲ್ಲಿ ಹಿಂದಿನಿಂದ ಗಂಟೆ ಬಾರಿಸಿತು. ನೋಡಿದರೆ ಆಚಾರ್ಯ!

ಅವರನ್ನು ನೋಡಿ ಇಬ್ಬರಿಗೂ ಆಘಾತವಾಯ್ತು. ಆಚಾರ್ಯನಿಗೂ ಆಘಾತವಾಗಿತ್ತು. ದೇವರಿಗೂ ನಮಸ್ಕರಿಸದೇ ವಾಪಾಸಾದ.

ಮಾರನೇ ಬೆಳಿಗ್ಗೆ ಕೋಳಿ ಕೂಗುವ ಮೊದಲೇ ರವಿಕೀರ್ತಿಯ ಕುದುರೆಗಾಡಿ ಬಿಳಿಗಿರಿಗೆ ಹೊರಡುವ ಮುನ್ನ ಆಚಾರ್ಯನ ಮನೆ ಮುಂದೆ ಬಂದು ನಿಂತಿತು. ಬೆಳ್ಳಂಬೆಳಗು ದಿವಂಗತ ಮಡದಿಯನ್ನ ಮತ್ತು ಮಗಳ ಭವಿಷ್ಯವನ್ನ ನೆನೆದು ಮುದುಕ ನಿದ್ದೆಯಿಲ್ಲದೆ ಚಡಪಡಿಸಿದ್ದ. ಕೊನೆಗೆ ಯಾವುದೋ ದೃಢನಿರ್ಧಾರಕ್ಕೆ ಬಂದಾಗಲೇ ಕೊಂಚ ಸಮಾಧಾನವಾಗಿ ಕಣ್ಣು ಮುಚ್ಚಿದ್ದ. ಈಗಷ್ಟೇ ನಿದ್ದೆ ಹತ್ತಿತ್ತು; ಗಾಡಿಯ ಸಪ್ಪಳ ಕೇಳಿ ಎದ್ದು ಕೂತ. ರವಿ ಒಳಗೆ ಹೋಗಿ ಅಜ್ಜಿಗೆ ನಮಸ್ಕರಿಸಿ, ವಾಸಂತಿಗೆ ಸಮಾಧಾನ ಹೇಳಿ ಬಂದಾಗ ಇವನಾಗಲೇ ಎದ್ದು ಕೂತಿದ್ದ.

“ಹೋಗಿ ಬರ್ತೀನಿ”

ಅಂದ ರವಿ ಕೈಮುಗಿದು.

“ಆಯ್ತಪ್ಪ ಬೇಗ ಬಾ.”

“ವಾಸಂತಿಯ ವಿಷಯದಲ್ಲಿ ಎಲ್ಲ ತೀರ್ಮಾನಿಸಿದ್ದೇನೆ. ಬೇಗ ಬಂದು ಕರೆದೊಯ್ಯುತ್ತೇನೆ. ಅಲ್ಲೀತನಕ…”

“ಲೋಕದ ತಂದೆ ತಾಯಿಗಳು ಮಾಡುವ ಯಾವುದೇ ಉಪಚಾರ ಅವಳಿಗೂ ಸಿಗುತ್ತದೆ. ಅವಳು ನಮಗೆ ಭಾರವಲ್ಲ. ಇನ್ನು ನಮ್ಮನ್ನು ಮೀರಿದ್ದು ಏನಾದರೂ ನಡೆದರೆ ಅದಕ್ಕೆ ಶಿವ ಜವಾಬ್ದಾರ, ನಾವಲ್ಲ ಅಲ್ಲವೆ?”

“ಅವಳು ಗಾಬರಿಯಾಗಿದ್ದಾಳೆ. ತಾಯಿ ಇಲ್ಲದ ಹುಡುಗಿ. ನೆರೆಹೊರೆ ಹೇಳಿದ್ದನ್ನೆಲ್ಲ ಕೇಳಿಕೊಂಡು ಹೆದರುತ್ತಾಳೆ.”

“ಹೌದಪ್ಪ. ಕನಸು ಕಂಡರೂ ಹೆದರುತ್ತಾಳೆ. ಏನು ಮಾಡ್ಲಿಕ್ಕಾಗುತ್ತದೆ? ಚಿಂತೆ ಬೇಡ ನಾನಿದ್ದೇನಲ್ಲ.”

ಆಚಾರ್ಯನಿಗೆ ವಯಸ್ಸಾಗಿ ಮೂಳೆಗಳೇ ಎದ್ದು ಕಾಣುತ್ತಿದ್ದವು. ಮೂಳೆ ಕೈಯಿಂದ ರವಿಯ ಬೆನ್ನು ಚಪ್ಪರಿಸಿ ನೇರವಾಗಿ ಅವನ ಅಂತರಂಗವನ್ನು ಸಮೀಕ್ಷಿಸುವಂತೆ ತೀಕ್ಷ್ಣದೃಷ್ಟಿ ಹಾಯಿಸಿ ನಕ್ಕ. ‘ನಿನ್ನೆ ದೇವಾಲಯದಲ್ಲಿ ಕೋಪದಿಂದ ದೇವರಿಗೂ ನಮಸ್ಕರಿಸದೇ ಬಂದ ಮುದುಕನೇ ಇವನು?’ ಎಂದು ರವಿಗೆ ಆಶ್ಚರ್ಯವಾಯಿತು. ಮುದುಕ ಪುನಃ ಹೇಳಿದ: “ನೀನು ನೆಮ್ಮದಿಯಿಂದ ಹೋಗು.” ರವಿ ಮಾತಾಡಲಿಲ್ಲ. ಸಮಾಧಾನದಿಂದ ಹೊರಟ. ಮುದುಕ ಆತುರಾತುರವಾಗಿ ಹೇಳಿದ:

“ನೀನು ರಾಜ ಮನೆತನದವ. ಜವಾಬ್ದಾರಿಗಳಿರುತ್ತವೆ. ಆಳು ಕಾಳು ಸಾಕಷ್ಟು ಜನ ಇರ್ತಾರಲ್ಲ? ಆಗಾಗ ಅವರನ್ನು ಇತ್ತ ಓಡಿಸಿ ನಿನ್ನ ಯೋಗಕ್ಷೇಮ ತಿಳಿಸುತ್ತಿರು. ನನಗಲ್ಲ, ವಾಸಂತಿಗೆ. ಯಾಕಂತಿಯೋ? ಆಕೆ ನಿನ್ನ ಮೇಲೆ ಜೀವ ಹಿಡಿದುಕೊಂಡವಳು ನೋಡು, ಅದಕ್ಕಾಗಿ.”

“ಖಂಡಿತ ನೀವು ಹೇಳಿದಂತೆ ನಡೆದುಕೊಳ್ಳುತ್ತೇನೆ. ನಂದೊಂದು ಮಾತಿದೆ. ಹೇಳಲೇ?”

-ಎಂದ ರವಿ. ಮುದುಕ ‘ಹೇಳು’ ಎಂಬಂತೆ ಅವನ ಕಡೆ ನೋಡಿದ.

“ನೀವು ಹೇಳಿದ ಹಾಗೆ, ನಮ್ಮನ್ನು ಮೀರಿದ್ದು ಏನಾದರು ನಡೆದು ನಾನು ಸತ್ತರೆ, ನಮಗೊಂದು ಕೂಸಾದರೆ ವಾಸಂತಿ ಮತ್ತು ಮಗುವನ್ನು ನೀವೇ ನೋಡಿಕೋಬೇಕು.”

ಮುದುಕನಿಗೆ ಆಘಾತವಾಗಿ ಒಂದು ಕ್ಷಣ ಕೋಪದಿಂದ ಗಡಗಡ ನಡುಗಿದ. ಮತ್ತೆ ತನ್ನನ್ನು ತಾನೇ ನಿಯಂತ್ರಿಸಿಕೊಂಡು ಸಮಾಧಾನವನ್ನ ಅಭಿನಯಿಸುತ್ತ ಸಮಯಪ್ರಜ್ಞೆಯಿಂದ “ಅಂಥಾ ಮಾತನಾಡಬಾರದು. ನೀನು ಯಾವ ದೇವರ ಸಾಕ್ಷಿಯಲ್ಲಿ ಅವಳ ಕೈ ಹಿಡಿದೆಯೋ ಆ ದೇವರು ನಿನ್ನ ಕೈ ಬಿಡಲಾರ.” ಅಂದ.

ತಕ್ಷಣ ಇಬ್ಬರೂ ಎದುರು ಬದುರಾಗಿ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು.

ಮುದುಕನ ಹರಿತವಾದ ಕಣ್ಣು ರವಿಯ ಎಳೇ ಕಣ್ಣಲ್ಲಿ ನೆಟ್ಟಿದ್ದವು. ಮೂಳೆ ಕೈ ಚಾಚಿ ರವಿಯ ಕೈ ಹಿಡಿದುಕೊಂಡ. ಇಬ್ಬರ ಕೈಗಳೂ ತಣ್ಣಗಿದ್ದವು. ಕೋಪ ಮತ್ತು ಉದ್ವೇಗದಿಂದ ಆಚಾರ್ಯನ ಕೈ ನಡುಗುತ್ತಿದ್ದವು. ರವಿ ಸುಯ್ದು ಇನ್ನೊಮ್ಮೆ ವಾಸಂತಿಯ ಕಡೆಗೆ ಹೋದ. ಮುದುಕ ರಭಸದಿಂದ ತನ್ನ ಕೋಣೆಗೆ ಹೋದ.

ಅಳುತ್ತ ಕೂತಿದ್ದ ವಾಸಂತಿ ಎದ್ದು ನಿಂತಳು. ರವಿ ಬಾಚಿ ತಬ್ಬಿಕೊಂಡ. ಅವಳು ಹಾಗೇ ಮೂರ್ಛೆ ಹೋದಂತೆ ಅವನ ತೋಳುಗಳಲ್ಲಿ ಒರಗಿದಳು. ತುಸು ಹೊತ್ತಾದ ಬಳಿಕ ಮೆಲ್ಲಗೆ ಅವಳನ್ನು ತೋಳಿನಿಂದ ಬಿಡಿಸಿ, ಪೀಠದ ಮೇಲೆ ಕೂರಿಸಿ ಕೆನ್ನೆ ತಟ್ಟಿ, ಬರ್ತೀನಿ” ಅಂದು ಕೈ ಹಿಸುಕಿದ. ವಾಸಂತಿ ಆಗಲೆಂಬಂತೆ ಕತ್ತು ಹಾಕಿದಳು. ಹೊರಗೆ ನಡೆದ.

ತುಸು ಹೊತ್ತಾಗಿ ಕೋಪ ನಿಯಂತ್ರಣಕ್ಕೆ ಬಂದ ಬಳಿಕ ಮುದುಕ ಹೊರಗೆ ಬಂದ. ರವಿ ಇರಲಿಲ್ಲ. ವಾಸಂತಿ ಅಂಗಳದಲ್ಲಿ ನಿಂತಿದ್ದಳು. ಮುದುಕ ಅವಸರದಿಂದ “ಹೋಗೇ ಬಿಟ್ಟನ?” ಎಂದು ಗೊಣಗುತ್ತ ಬಂದ.

ಕುದುರೆ ಗಾಡಿ ಆಗಲೇ ಮರೆಯಾಗಿತ್ತು. ಮುದುಕ ಅಲ್ಲೇ ಮಲ್ಲಿಗೆ ಕಟ್ಟೆಯ ಮೇಲೆ ಕುಸಿದು ಕೂತ!