ಇತಿಹಾಸವನ್ನು ವಂಚಿಸಿ ಇಷ್ಟು ವರ್ಷ ಶಿಖರಸೂರ್ಯ ಎಲ್ಲಿಗೆ ಹೋಗಿದ್ದ? ಏನು ಮಾಡಿದ? ಕನಕಪುರಿಯನ್ನು ಗೆಲ್ಲುವುದಕ್ಕೆ ಸೈನ್ಯ ಸಂಪತ್ತನು ಹ್ಯಾಗೆ ಸಂಪಾದಿಸಿದ? ಇತಿಹಾಸಕ್ಕೆ ಅವನ ಇತ್ತೀಚಿನ ಬದುಕಿನ ಎರಡು ಕ್ಷಣಗಳು ಮಾತ್ರ ಗೊತ್ತಿವೆ.

ಒಂದು: ಆತ ಮಾಯವಾದದ್ದು, ಇನ್ನೊಂದು: ಕಳೆದವಾರ ಕನಕಪುರಿಯನ್ನು ವಶಪಡಿಸಿಕೊಂಡು ತಾನೇ ರಾಜನಾದದ್ದು ಈ ನಡುವಿನ ಅವನ ಬದುಕಿನ ವಿವರಗಳು ನಮಗೇ ತಿಳಿದಿಲ್ಲವೆಂದರೆ ಉಳಿದವರನ್ನ ಹ್ಯಾಗೆ ನಂಬುವುದು? ಹೋಗಲೆಂದರೆ ಸದರಿ ಅವಧಿಯಲ್ಲಿ ಏನು ನಡೆಯಿತೆಂದು ಸುಳ್ಳು ಹೇಳುವುದಕ್ಕಾದರೂ ಯಾರಿದ್ದಾರೆ? ಎಂದು ಅಂದುಕೊಳ್ಳುತ್ತಿರುವಾಗ ನಮಗೆ ದೊರೆತವನು ಸುಕ್ರ! ಅವನ ಕಥನಕ್ಕೆ ಆಮೇಲೆ ಬರೋಣ. ಶಿಖರಸೂರ್ಯ ಮರೆಯಾಗುವ ಮುನ್ನ ಒಂದು ತಿಂಗಳ ಕಾಲ ಹದ್ದಿನ ಕೊಳ್ಳದಲ್ಲಿ ವಿದ್ಯುಲ್ಲತೆಯ ಜೊತೆಗಿದ್ದ. ಅವಳಿಂದ ಸೇವೆ ಪಡೆದು ಸಂತೃಪ್ತನಾದ. ಆಮೇಲೊಂದು ದಿನ ಅವಳಿಗೂ ತಿಳಿಸದೆ ಮಾಯವಾದ. ಈಗ ಒಂದು ವಾರದ ಹಿಂದೆ ಬಲಾಡ್ಯಸೈನ್ಯದೊಂದಿಗೆ ಕನಕಪುರಿಯ ಹೊರಭಾಗದಲ್ಲಿ ಪ್ರತ್ಯಕ್ಷನಾದ! ನಮಗೆ ಗೊತ್ತಿರುವವರಲ್ಲಿ ಸುಕ್ರನೊಬ್ಬನೇ ಈ ಹಿಂದೆಯೂ ಈಗಲೂ ಆತನ ಜೊತೆಗಿದ್ದವನು. ಉಳಿದವರೆಲ್ಲ ಅಪರಿಚಿತರು.

ಶಿಖರಸೂರ್ಯ ಹೇಳದೇ ಕೇಳದೇ ಮಡದಿ ಮಕ್ಕಳು ಮತ್ತು ಮತ್ತು ಚಿಕ್ಕಮ್ಮಣ್ಣಿ ಸಮೇತ ಮಾಯವಾದದ್ದು ಕನಕಪುರಿಯವರಿಗೆ ಆಶ್ಚರ್ಯವಾದರೂ ಒಳಗೊಳಗೆ ಪೀಡೆ ತಂತಾನೇ ತೊಲಗಿತೆಂದು ಸಮಾಧಾನದ ಉಸಿರುಬಿಟ್ಟಿದ್ದರು. ದಾಯಾದಿ ಎಂದ ಮೇಲೆ ಒಂದಿಲ್ಲೊಂದು ದಿನ ತಲೆ ಎತ್ತುವವನೇ; ಅರಮನೆಯ ವ್ಯವಹಾರದಲ್ಲಿ ಮೂಗು ತೂರುವವನೇ! ಅವನಲ್ಲ, ಅವನ ಮಕ್ಕಳಾದರೂ ಚಿಕ್ಕಮ್ಮಣ್ಣಿಯ ನಾತೆಯಿಂದ ಪಾಲಿಗೆ ಬರುವವರೇ. ಅವರು ಬಾರದಿದ್ದರೆ ಬಿಳಿಗಿರಿಯವರಾದರೂ ಕಾಲು ಕೆದರುವವರೇ. ಆದರೀಗ ಅದ್ಯಾವುದೂ ಇಲ್ಲದೆ ಪೀಡೆ ತೊಲಗಿತ್ತಲ್ಲ ಎಂದು ನಿರುಮ್ಮಳ ನಿಟ್ಟುಸಿರು ಬಿಟ್ಟಿದ್ದರೆ – ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಈಗ ಬಂದು ಮಹಾರಾಜನಾಗಿ ಬಿಟ್ಟನೇ!

ಶಿಖರಸೂರ್ಯ ಕನಕಪುರಿಯವರೊಂದಿಗೆ ಪ್ರಚಂಡ ಯುದ್ಧವನ್ನೇನೂ ಮಾಡಬೇಕಾಗಿ ಬರಲಿಲ್ಲ. ಹ್ಯಾಗೂ ಆತನಿಗೆ ಕನಕಪುರಿಯ ಬೇಹುಗಾರಿಕೆ, ಅಗಸಿ ಬಾಗಿಲು, ಕಿಂಡಿ, ಕಿಡಿಕಿ, ಸುರಂಗ ಮಾರ್ಗ, ಸೈನ್ಯ ಮತ್ತು ಪುರದ ತಳ ಬುಡ, ಆಯಕಟ್ಟಿನ ಜಾಗ, ರಾಜರಾಣಿ ಪ್ರಧಾನಿಯ ದೌರ್ಬಲ್ಯಗಳು, ಅವರ ಮರ್ಮಸ್ಥಳಗಳು, ಎಲ್ಲವೂ ಗೊತ್ತಿದ್ದವು. ಕಾಮೋನ್ಮತ ರಾಜ, ಅವಿವೇಕಿ ಪ್ರಧಾನಿ, ಧನಮದದ ವರ್ತಕರು ಇದ್ದಲ್ಲಿ ಅವ್ಯವಸ್ಥೆಯಲ್ಲದೇ ಇನ್ನೇನಿದ್ದೀತು? ಬೇರೆ ಮಹಾರಾಜರನ್ನ ಗೆಲ್ಲುವುದಿರಲಿ ಇದ್ದ ಮಾಂಡಳೀಕರನ್ನ ಅಂಕೆಯಲ್ಲಿಟ್ಟುಕೊಳ್ಳುವುದೇ ಅವರಿಗೆ ಕಠಿಣವಾಗಿತ್ತು. ಇಂಥವರ ಮೇಲೆ ಶಿಸ್ತಿನ, ಬಲಾಢ್ಯ ಸೈನ್ಯ ಬಂದು ಧಾಳಿ ಮಾಡಿದರೆ ಅದನ್ನು ಎದುರಿಸುವ ತಯಾರಿಯಾಗಲಿ, ಬಲವಾಗಲಿ ಕನಕಪುರಿಗಿರಲಿಲ್ಲ. ಕೆಲವರ ಕೈಕಾಲು ಮುರಿದದ್ದು ಬಿಟ್ಟರೆ ಒಂದು ಹನಿ ರಕ್ತ ಕೂಡ ಬೀಳದೆ ಕನಕಪುರಿ ಶಿಖರಸೂರ್ಯನ ವಶವಾಯಿತು. ಮಹಾರಾಣಿ ಮೊದಲುಗೊಂಡು ರಾಜ, ರಾಣಿ, ಪ್ರಧಾನಿ, ಮಂತ್ರಿ ಮಾಂಡಳಿಕ ಮನ್ನೆಯರೆಲ್ಲ ಗೃಹಬಂಧಿಗಳಾದರು.

ಕನಕಪುರಿಯ ಕಥನಕ್ಕೆ ಮುನ್ನ ಶಿಖರಸೂರ್ಯ ಕಣ್ಮರೆಯಾಗಿದ್ದ ಅವಧಿಯ ಅವನ ಸಾಧನೆಗಳನ್ನು ತಿಳಿಯುವುದಕ್ಕೆ ನಾವು ಮೊದಲೇ ಹೇಳಿದ ಹಾಗೆ ನಮಗಿರೋ ಆಧಾರ ವ್ಯಕ್ತಿ ಸುಕ್ರನೊಬ್ಬನೆ. ಅವನ ಕಥನವೋ! ‘ನಂಬಿದರೆ ನಂಬಿ ಬಿಟ್ಟರೆ ಬಿಡಿ’ ಅಥವಾ ‘ಒಂದಾನೊಂದು ಕಾಲದಲ್ಲಿ ಹದ್ದಿನ ತಲೆಯ ಒಬ್ಬ ರಾಕ್ಷಸನಿದ್ದ’ – ಮಾದರಿಯದು. ಈಗೀಗ ಜನಪದ ಪುರಾಣ ಕತೆಗಳಲ್ಲಿ ಕೂಡ ಇತಿಹಾಸ ಅಡಗಿರುತ್ತದೆಂದು ವಿದ್ವಾಂಸರು ಹೇಳಿರುವುದರಿಂದ ಅದನ್ನೇ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ; ನಮ್ಮ ಶಬ್ದಗಳಲ್ಲಿ. ಆದರಿದು ಒಂದಾನೊಂದು ಕಾಲದಲ್ಲಿ ನಡೆದದ್ದಲ್ಲ ಎಂದು ನಿಮಗೆ ನೆನಪಿದ್ದರೆ ಸಾಕು:

ಶಿಖರಸೂರ್ಯ ಆ ದಿನ ಬೆಳಗಿನ ಬೆಳ್ಳಿ ಮೂಡುವ ಮುನ್ನ ಹದ್ದಿನ ಕೊಳ್ಳದ ಪಡುವನಕ್ಕೆ ಮುಖ ಮಾಡಿ ನಡೆದ. ಯಾವ ಸ್ಥಳಕ್ಕೆ ಯಾಕೆ ಹೋಗುತ್ತಿದ್ದೇನೆಂದು ಯೋಚಿಸಿರಲೇ ಇಲ್ಲ. ಆದರಿಷ್ಟೇ, ಊರಿದ್ದಲ್ಲಿ ತಂಗಲಿಲ್ಲ, ನೆರಳಿದ್ದಲ್ಲಿ ಕೂರಲಿಲ್ಲ. ಬರುಬರುತ್ತ ಊರುಕೇರಿ ಜನ ಪ್ರಾಣಿಗಳು ಕಡಿಮೆಯಾಗಿ ಸಂಜೆಯಾಗಿ ಹೊತ್ತು ಮುಳುಗಿ ಕತ್ತಲಾದಾಗ ಒಂದು ದೊಡ್ಡ ಮರದಡಿ ಕೂತ. ಹಸಿವೆಯಾಗಿತ್ತು. ಏನೂ ಇಲ್ಲವಾದ್ದರಿಂದ ಹಾಗೇ ಮರಕ್ಕೊರಗಿ ಮಲಗಿದ.

ಬೆಳಿಗ್ಗೆದ್ದು ಪುನಃ ಪಶ್ಚಿಮಕ್ಕೆ ನಡೆದ. ಹಸಿವೆಗೆ ತಿನ್ನಬಹುದಾದ ಎಲೆ ತಿಂದ. ತೊರೆ ಸಿಕ್ಕಲ್ಲಿ ನೀರು ಕುಡಿದು ನಡೆದ. ನದಿ ಎದುರಾದರೆ ಈಜಿ, ಗುಡ್ಡ ದಿನ್ನೆ ಸಿಕ್ಕರೆ ಹತ್ತಿ, ಕೊಳ್ಳ ಇಳಿಜಾರಿನಲ್ಲಿ ಇಳಿದು ನಡೆದ. ಇಷ್ಟಾಗಿ ಎಲ್ಲಿಗೆ ಹೊರಟಿದ್ದೇನೆಂದು ನಿಶ್ಚಯಿಸಿರಲಿಲ್ಲ. ಬಹುಶಃ ನಡೆಯುವುದಕ್ಕೆ ಅವಕಾಶವಿರುವ ತನಕ, ಕಾಲಲ್ಲಿ ಶಕ್ತಿ ಇರುವ ತನಕ ನಡೆಯುವುದೆಂದು ತೀರ್ಮಾನಿಸಿದ್ದಂತೆ ಇತ್ತು. ಇಂಥವನ ದಿನ ಗಂಟೆ ಸಮಯಗಳನ್ನು ಲೆಕ್ಕ ಹಾಕುವುದು ಹ್ಯಾಗೆ ಸಾಧ್ಯ? ಏಳು ರಾತ್ರಿ ಎಂಟು ಹಗಲು ನಡೆದ ಎಂದೂ ಹೇಳಿದರೂ ಆತನ ನಡಿಗೆ ಏಳು ರಾತ್ರಿಯ ನಡಿಗೆಯನ್ನು ಒಂದೇ ದಿನ ನಡೆದ, ಎಂಟು ಹಗಲಿನ ನಡಿಗೆಯನ್ನ ಒಂದೇ ಹಗಲು ನಡೆದ – ಎನ್ನುವಂಥಾದ್ದು. ಆದ್ದರಿಂದ ಶಕ್ತಿಯಿರುವಷ್ಟು, ಅವಕಾಶವಿರುವಷ್ಟು ನಡೆದ ಎಂದು ಹೇಳುವುದೇ ಉಚಿತ.

ನಡೆದು ನಡೆದು ನಡುಹಗಲು, ಸುಡುಬಿಸಿಲು, ಕಟ್ಟೇಕಾಂತದ ಸರೋವರವಿರುವ ಸ್ಥಳಕ್ಕೆ ಬಂದ. ಆಶ್ಚರ್ಯವೆಂದರೆ ಪ್ರಾಣಿ ಪಶುಗಳ ಅರ್ಭಟ, ಆಟಕೂಟಗಳಿಂದ ನಲುಗಬೇಕಾದ ಕಾಡಿನಲ್ಲಿ ದನಿಯೆಂಬುದೇ ಇರಲಿಲ್ಲ! ತಮ್ಮ ಕೀಚು ಕಿರುಚುಗಳಿಂದ ಕಾಡಿನ ಮೌನದ ಮ್ಯಾಲೆ ಚಿತ್ತಾರ ಗೀಚುವ ಒಂದು ಹಕ್ಕಿಪಕ್ಕಿಯ ದನಿಯೂ ಇರಲಿಲ್ಲ. ತರುಮರಗಳ ಒಂದೆಲೆಯೂ ಅಲುಗುತ್ತಿರಲಿಲ್ಲ. ಉಸಿರು ಬಿಗಿ ಹಿಡಿದು ಗಾಳಿ ನಿಂತಲ್ಲಿಂದ ಒಂದೂ ಹೆಜ್ಜೆ ಚಲಿಸುತ್ತಿರಲಿಲ್ಲ. ಯಾಕೆ ಹೀಗೆಂದು ಸುತ್ತ ಕಣ್ಣಾಡಿಸಿದರೆ ಎದುರಿಗೊಂದು ಎತ್ತರವಾದ ಬಂಡೆಯಿತ್ತು. ಬಂಡೆಯ ಶಿಖರವನ್ನು ಮೋಡಗಳು ಮುತ್ತಿದ್ದರಿಂದಾಗಿ ಅದರ ಎತ್ತರದ ಅಂದಾಜು ಆಗುತ್ತಿರಲಿಲ್ಲ. ಬಂಡೆಗಂಟಿದ್ದ ಇನ್ನೊಂದು ಚಿಕ್ಕ ಬಂಡೆಯ ಮ್ಯಾಲೆ ಮುತ್ತಿದ ಮೋಡಗಳು ಕೆಳಗಡೆ ಆನೆಗಾತ್ರದ ಗರುಡ ಇವನನ್ನೇ ನೋಡುತ್ತ ಕೂತಿತ್ತು! ಅದರ ಮೈಮ್ಯಾಲೆ ಮೋಡಗಳು ಕಿಂಡಿಗಳಿಂದ ತೂರಿ ಬಂದ ಬಿಸಿಲು ಬಿದ್ದು ಅದರ ಮೈ ಚಿನ್ನದ ಹಾಗೆ ಮಿರ ಮಿರನೇ ಮಿಂಚುತ್ತಿತ್ತು.

ಕೊಬ್ಬಿದ ಕತ್ತು, ಮುಖಕ್ಕೆ ಮೂರಡಿ ಉದ್ದದ ಆಯುಧದಂತೆ ಚಾಚಿದ ಕೊಕ್ಕು, ಗಂಧಕದ ಗಣಿಯಂತೆ ಉರಿಯುವ ಕಣ್ಣು… ! ಕೆಳಗಡೆ ಸರೋವರದ ನಡುಗುವ ನೀರಿನಲ್ಲಿ ಬಂಗಾರದ ಹದ್ದಿನ ಪ್ರತಿಬಿಂಬ ಮೂಡಿತ್ತು. ಅಲೆಗಳು ಹೆದರಿಕೊಂಡು ಮೆಲ್ಲನೆ ಆ ಪ್ರತಿಬಿಂಬವನ್ನು ಸ್ಪರ್ಶಿಸಿ ದೂರ ಸರಿದಾಗ, ಬಿಂಬದ ಕಾಂತಿಯನ್ನು ತಮ್ಮ ಜೊತೆಗೊಯ್ಯುವಂತೆ ಕಾಣುತ್ತಿದ್ದವು. ಸೂರ್ಯನ ಪ್ರತಿಬಿಂಬಕ್ಕಿಂತ ಹದ್ದಿನ ಬಿಂಬವೇ ಒಂದು ಕೈ ಹೆಚ್ಚಾಗಿ ಹೊಳೆಯುತ್ತಿತ್ತು. ಹದ್ದಿನ ಪ್ರತಾಪಕ್ಕೆ ಹೆದರಿ ಯಾವ ಪ್ರಾಣಿ ಪಕ್ಷಿಯೂ ಸರೋವರದ ಬಳಿ ಸುಳಿಯುತ್ತಿರಲಿಲ್ಲ.

ಇದು ಬರೆದ ಚಿತ್ರವೋ ಅಥವಾ ನಿಜವಾದ ಬಂಡೆ ಗಾತ್ರದ ಹದ್ದೋ?

– ತಿಳಿಯುತ್ತಿರಲಿಲ್ಲ. ಚಿತ್ರವೇ ಇರಬೇಕೆನಿಸಿತು. ಚಿತ್ರವಾದರೂ ಹರಿತವಾದ ದೃಷ್ಟಿಯಿಂದ ನೋಡುವವರನ್ನೇ ನೆತ್ತರು ಬರುವಂತೆ ಕಣ್ಣಿಂದಿರಿಯುವಂತೆ ಅದರ ದೃಷ್ಟಿ ಕ್ರೂರವಾಗಿತ್ತು. ಎಷ್ಟು ದೂರ ಸರಿದರೂ ಹದ್ದು ಇವನನ್ನೇ ಹೊಂಚಿ ನೋಡುತ್ತಿರುವಂತೆ, ಇವನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಇವನ ಪಿಸುಮಾತುಗಳನ್ನು, ಇವನೊಳಗಿನ ಅನಿಸಿಕೆಗಳನ್ನ ಕೂಡ ಕೇಳಿಸಿಕೊಳ್ಳುತ್ತಿರುವಂತೆ ಕಂಡಿತು. ದೇವರಲ್ಲದೆ ಒಬ್ಬ ಮರ್ತ್ಯ ಮಾನವ ಇಂಥ ಚಿತ್ರ ಬರೆಯುವುದು ಸಾಧ್ಯವೇ ಇಲ್ಲ – ಎಂದುಕೊಳ್ಳುತ್ತಿರುವಂತೆ ಕಾಡಿನ ಬೆಂಕಿ ಚಲಿಸಿದಂತೆ ‘ಚಿತ್ರದ ಹದ್ದು’ ಬಂಡೆಯ ತುದಿಗೆ ನಡೆದು ಬಂದು ಹಾರಿ ಇವನ ಮ್ಯಾಲೆ ಎರಗುವ ತಯಾರಿಯಿಂದ ಕೂತುಕೊಂಡಿತು. ಶಿಖರಸೂರ್ಯನಿಗೀಗ ಅದು ತನ್ನನ್ನು ಹಿಡಿದುಕೊಂಡು ಹೋಗುವುದೆಂಬುದರಲ್ಲಿ ಅನುಮಾನವೇ ಉಳಿಯಲಿಲ್ಲ. ತಾನು ವಜ್ರದೇಹಿ ಎಂದು ನೆನಪಾದರೂ ಈ ಬಲಾಢ್ಯ ಹದ್ದಿನ ಮುಂದೆ ತನ್ನ ಆಟ ನಡೆಯದೆಂದು ಖಾತ್ರಿಯಾಗಿಬಿಟ್ಟಿತು.

ಓಡಿ ಮರದ ಮಧ್ಯೆ ಅಡಗಬೇಕೆಂದ. ಕಾಲು ಬೇರುಬಿಟ್ಟಂತೆ ನೆಲಕ್ಕಂಟಿ ಚಲಿಸದಾದವು. ಅಕ್ಕಪಕ್ಕ ಮರೆಮಾಡುವ ಮರಗಳಿವೆಯೇ ಎಂದು ನೋಡಿದ. ಹಕ್ಕಿಯನ್ನೇ ನೋಡುತ್ತ ಕಷ್ಟಪಟ್ಟು ಒಂದು ಹೆಜ್ಜೆ ಹಿಂದಿಟ್ಟ. ಹದ್ದು ಇನ್ನಷ್ಟು ಮುಂದೆ ಕತ್ತು ಚಾಚಿತು. “ಓಡು” ಅಂದರು ಯಾರೋ! ಯಾರೆಂದೂ ನೋಡುವುದಕ್ಕೂ ಭಯವಾಯಿತು. ಕ್ಷಣಾರ್ಧದಲ್ಲಿ ಹಿಂದಿರುಗಿದವನೇ ಓಡತೊಡಗಿದ. ಒಂದಿಷ್ಟು ಓಡಿಹೋಗಿ ಆಕ್ರಮಣದ ಅಂದಾಜುಮಾಡಲು ಹಿಂದುರಿಗಿ ನೋಡಿದ. ಹದ್ದು ಇರಲಿಲ್ಲ.

“ಹೆದರಿದೆಯಾ?”

ಎಂದಿತು ದನಿ.

ಹಿಂದಿರುಗಿ ಅಕ್ಕಪಕ್ಕ ನೋಡಿದ ಸ್ವಲ್ಪದೂರದಲ್ಲೇ ಮೆಳೆ ಇತ್ತು. ಒಳಗಡೆ ಸ್ವಲ್ಪ ಮಾತ್ರ ಬೆಳಕಿತ್ತು. ಏದುಸಿರು ಬಿಡುತ್ತ ಬಂಡೆಯ ಮೇಲೆ ಕೂತ. “ಹೆದರಿದೆಯಾ?” ಎಂದು ಇನ್ನೊಮ್ಮೆ ಅದೇ ದನಿ ಕೇಳಿತು. ನೋಡಿದರೆ ಇನ್ನೊಂದು ಬಂಡೆಯ ಮೇಲೆ ಇವನನ್ನೇ ನೋಡುತ್ತ ಒಬ್ಬ ಕರಿ ಹುಡುಗ ಕುಂತಿದ್ದ. ತಲೆ ಕತ್ತಿನ ಮೇಲೆ ದಟ್ಟವಾದ ಕಪ್ಪು ಕೂದಲಿದ್ದು ಕಿವಿಯಲ್ಲೂ ಅಂಗುಲ ಉದ್ದದ ಕೂದಲು ಬೆಳೆದು ನಿಮಿರಿ ನಿಂತಿತ್ತು. ಹೊಳಪುಳ್ಳ ಕಣ್ಣು ಹದ್ದಿನ ಕಣ್ಣಿನಂತೆ ತೀಕ್ಷ್ಣವಾಗಿದ್ದವು.

ನೀಳವಾದ ಮೂಗು ಮುಂದೆ ಚಾಚಿದ್ದರಿಂದ ಇಡೀ ಆಕೃತಿ ಹದ್ದೇ ಮನುಷ್ಯ ರೂಪದಲ್ಲಿ ಬಂದಂಗಿದ್ದ.

ಇವನನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ – ಎಂದುಕೊಂಡ. ಆಮೇಲೆ ಜ್ಞಾಪಕವಾಯಿತು. ಹಿಂದೆ ಒಂದೆರಡು ಸಾರಿ ಕನಸಿನಲ್ಲಿ ಕಾಣಿಸಿಕೊಂಡಿದ್ದ ಹುಡುಗ ಇವನೇ ಎಂದು. ಈಗ ದೊಡ್ಡವನಾಗಿದ್ದ. ನಿನ್ನೆ ಮೊನ್ನೆ ಎಳೆಯ ಗಡ್ಡ ಮೀಸೆ ಮೊಳಕೆಯಿಡೆದ ಕಿಶೋರ. ಜಡೆಗಟ್ಟಿದ ತಲೆಗೂದಲನ್ನು ನೆತ್ತಿಯ ಮ್ಯಾಲೆ ಕಟ್ಟಿಕೊಂಡಿದ್ದ. ಕರೀದೇಹ ಮಾತ್ರ ಕಡಿಮೆ ಬೆಳಕಿನಲ್ಲೂ ಉಕ್ಕಿನಂತೆ ಮಿರುಗುತ್ತಿತ್ತು. ಮಾತಾಡುವಾಗ, ನಗುವಾಗ ಕಾಣಿಸುವ ಮಿಂಚಿನಂಥ ಹಲ್ಲು ಭಯ ಹುಟ್ಟಿಸುತ್ತಿದ್ದವು. ಕಿವಿಯಲ್ಲಿಯ ಕೂದಲು ಮಾತ್ರ ಅಸ್ವಾಭಾವಿಕವೆಂಬಷ್ಟು ಬೆಳೆದು ಸೆಟೆದು ನಿಂತಿದ್ದವು.

ಶಿಖರಸೂರ್ಯ ಎದ್ದು ಸಮೀಪ ಹೋದ. ಹುಡುಗ ಕೈಯಲ್ಲಿ ಚೂರಿ ಹಿಡಿದುಕೊಂಡಿದ್ದ. ತದೇಕದೃಷ್ಟಿಯಿಂದ ಪರಸ್ಪರರನ್ನು ನೋಡುತ್ತಿದ್ದುದರಿಂದ ಆಕ್ರಮಣದ ಭಾವನೆ ಬಾರದಿರಲೆಂದು ಶಿಖರಸೂರ್ಯನೆ ಮುಂದಾಗಿ ಆ ಈ ಕಡೆ ನೋಡಿದ. ಹುಡುಗ ಮಾತ್ರ ಇವನ ಮ್ಯಾಲಿನ ದೃಷ್ಟಿಯನ್ನು ಕೀಳಲೇ ಇಲ್ಲ. ಶಿಖರಸೂರ್ಯ ಮೆಲ್ಲಗೆ ಸಮೀಪ ಹೋಗಿ ಥಟ್ಟನೇ ಅವನ ಕೈಯಲ್ಲಿದ್ದ ಚೂರಿಗೆ ಕೈ ಹಾಕಿ ಕಸಿದುಕೊಂಡ. ಹುಡುಗ ಗಟ್ಟಿಯಾಗಿ ಹಿಡಿದುಕೊಳ್ಳಲಿಕ್ಕೆ ಪ್ರಯತ್ನಿಸಲೂ ಇಲ್ಲ. ಪ್ರತಿಭಟಿಸಲೂ ಇಲ್ಲ. ಈಗ ಶಿಖರಸೂರ್ಯ ಹುಡುಗನಿಗೇ ಗುರಿ ಹಿಡಿದು ನಿಂತ. ಇವನಂದುಕೊಂಡಿದ್ದಂತೆ ಹುಡುಗನಲ್ಲಿ ಅಸಹಾಯಕ ಭಯದ ಭಾವನೆ ಮೂಡಲೇ ಇಲ್ಲ. ಕೋಪಗೊಂಡಂಗಿತ್ತು. ಶಿಖರಸೂರ್ಯ ಮಾತ್ರ ಇನ್ನೂ ಗುರಿ ಹಿಡಿದೇ ಇದ್ದ. ಈಗ ನೋಡಿದರೆ ಇವನ ಕೈಗಳೇ ನಡುಗುತ್ತಿದ್ದವು. ಈತ ಮೂರನೇ ಬಾರಿ ಭೇಟಿಯಾದ ಹುಡುಗನೆಂದು ಗುರುತು ಇತ್ತು. ಚೂರಿಯ ಕೈ ಕೆಳಗಿಳಿಸಿದ.

“ಭೂತಗಳಲ್ಲಿ ನಿನಗೆ ನಂಬಿಕೆಯಿದೆಯಾ?”

“ಇದೆ.”

“ಹದ್ದು ನಿನ್ನ ಮೇಲೆ ದಾಳಿ ಮಾಡಿದಾಗಲೇ ಗೊತ್ತಾಯಿತು – ನಿನಗೆ ಭೂತ ಪಿಶಾಚಿಗಳಲ್ಲಿ ನಂಬಿಕೆ ಇದೆ ಅಂತ. ನಂಬಿಕೆ ಇದ್ದರೆ ಬಿಡಬೇಡ. ಇಲ್ಲದಿದ್ದರೆ ಇಟ್ಕೋಬೇಡ. ತಾರ್ಕಿಕ ಅಂತ್ಯಕ್ಕೆ ತಲುಪುವುದು ಮುಖ್ಯವಯ್ಯ. ಮಧ್ಯೆ ಬಾವುಕನಾಗಬೇಡ. ತರ್ಕದ ಮೂಲಕವೇ ನಿನಗೂ ನಿನ್ನ ಕನಸಿಗೂ ಹೊಸ ಸಂಬಂಧ ಏರ್ಪಡಬೇಕು. ಭಾವನೆಗಳು, ಅನಿಸಿಕೆಗಳಿಗೆ ಒಳಗಾದರೆ ಗುರಿ ತಲುಪಲಿಕ್ಕಾಗುವುದಿಲ್ಲ. ಒಮ್ಮೆ ಭಾವನೆಗಳ ಪ್ರವಾಹದಲ್ಲಿ ಸಿಕ್ಕರೆ ಅದರಿಂದ ಹೊರಬರುವುದು ಕಷ್ಟ. ಭ್ರಮಾರಾಜ್ಯಕ್ಕೆ ತಲುಪಬೇಕಾಗುತ್ತದೆ.”

“ಕನಸಿನೊಂದಿಗೆ ಸಂವಹನ ಮಾಡಲು ಹೊಸ ಭಾಷೆಯೊಂದನ್ನು ಸೃಷ್ಟಿಸುವ ಅಗತ್ಯವಿದೆ ಅಂತ ಅನ್ನಿಸಲಿಲ್ಲವೆ ನಿನಗೆ? ಅಂಥ ಭಾಷೆಯನ್ನು ಸೃಷ್ಟಿಸಿದರೆ ಹದ್ದು ನಿನ್ನನ್ನು ಹೆದರಿಸಬೇಕಾದ ಅಗತ್ಯವೇ ಇರಲಿಲ್ಲ. ಅದು ಪ್ರತ್ಯಕ್ಷವಾಗಿ ನಿನ್ನನ್ನು ಮುಗಿಸಲು ಬಂದಿತ್ತಲ್ಲ? ಯಾಕೆ ಹೇಳು? ಯಾಕೆಂದರೆ ನಿನಗೂ ಕನಸಿತೂ ಸಂವಹನವೇ ಇಲ್ಲ ಅದಕ್ಕೆ. ?

“ಅಂದರೆ ಹದ್ದಿಗೂ ನನ್ನ ಕನಸಿಗೂ ಸಂಬಂಧವಿದೆ ಎಂದಾಯಿತು.”

“ಅದೆಲ್ಲಿದೆ”?

“ಭಾಷೆಯಲ್ಲಿ! ಅನೇಕ ಸಲ ಅದರ ಭಾಷೆ ಕಿವಿಯ ಮೇಲೆ ಬೀಳುತ್ತದೆ. ಆದರೆ ನೀನು ಕೇಳಿಸಿಕೊಳ್ಳುವುದಿಲ್ಲ; ಅಷ್ಟೇ?

ಆತ ಹತ್ತಿರವಿದ್ದಾಗ ಸಂಶಯಗಳು ಕರಗಿ ಹೆಚ್ಚು ಬಲ ಬಂದಂತೆನಿಸಿತು. ದಾರಿ ನಿಚ್ಚಳವಾಗಿ ಕಾಣತೊಡಗಿತು. ತನ್ನನ್ನು ಈಗ ಯಾರೂ ತಡೆಯಲಾರರು. ಭಾವನೆಗಳು ತನ್ನೆದುರು ನಿಲ್ಲಲಾರವೆಂಬಷ್ಟು ಆತ್ಮ ವಿಶ್ವಾಸ ಉಕ್ಕಿ ಇದು ನಿರಾಯಾಸ ಗುರಿ ಮುಟ್ಟಿಸುತ್ತದೆಂದು ಅನಿಸಿತು. ಈ ವರೆಗೆ ಗೊತ್ತಿಲ್ಲದ ಆದರೆ ತನ್ನಲ್ಲೇ ಇದ್ದ ಅಸಾಧ್ಯ ಬಲವೊಂದು ತನ್ನ ದೇಹಕ್ಕೆ ನುಗ್ಗಿ ಬಂದಂತಾಯಿತು.

“ಆಯ್ತು; ನನಗೆ ಆ ಹದ್ದು ಬೇಕು.”

“ಯಾಕೆ?”

“ಯಾಕೆಂದರೆ ಅದು ಶಕ್ತಿ ಮತ್ತು ಅಧಿಕಾರ ಕೊಡುತ್ತದೆ.”

“ಹೊರಡು ಅವನೇ ನಾಗಾರ್ಜುನ!”