ಶಿಖರಸೂರ್ಯನ ಅಸಮಾಧಾನ ತಣ್ಣಗಾಗಿದೆಯೆಂದು ಅನ್ನ ತಂಗಿ ಇಬ್ಬರೂ ಸಡಗರಗೊಂಡರು. ರಾತ್ರಿ ಬಹಳ ಹೊತ್ತಿನ ತನಕ ಮಾತಾಡಿಕೊಂಡರು. ರವಿಕೀರ್ತಿ ಅಪ್ಪನೊಂದಿಗಿನ ಸಂಭಾಷಣೆಯನ್ನು ವಿವರವಾಗಿ ಎರಡು ಬಾರಿ ಹೇಳಿ, ಗೌರಿ ಕೇಳಿ ಆನಂದಗಳನ್ನಾಚರಿಸಿದರು. ತನ್ನೊಂದಿಗೂ ತಂದೆ ಹೀಗೆಯೇ ಅನುಕೂಲಕರನಾಗುವನೆಂದು ಗೌರಿ, ಗೌರಿಯ ಬಗೆಗೆ ರವಿಯೂ ಹಾರೈಸಿ, ಆಶಾಭರಿತರಾದರು. ಆ ದಿನ ರವಿ ವಾಸಂತಿಯನ್ನು ಕಲ್ಪಿಸಿಕೊಂಡು ಅವಳ ಚಿಂತೆಯಲ್ಲಿ ಬೆಳ್ಳಂಬೆಳಗು ಮಲಗಲಿಲ್ಲ. ಹ್ಯಾಗಿದ್ದಾಳೋ, ಹ್ಯಾಗಿದೆಯೋ ಏನು ಕತೆಯೋ… ಇಷ್ಟರಲ್ಲೇ ತಂದೆಯ ಅಪ್ಪಣೆ ಪಡೆದು ಒಂದುಸಲ ಹೋಗಿ ಬರಬೇಕೆಂದುಕೊಂಡ.

ಇದಾಗಿ ಎರಡು ವಾರಗಳಾದ ಮೇಲೆ ಒಂದು ಮುಂಜಾನೆ ಗೌರಿ ಶಿವದೇವಾಲಯಕ್ಕೆ ಹೋಗಿದ್ದಾಗ ಶಿವಾಪುರಕ್ಕೆ ವಾರಿ ಹೊರಟ ಇಬ್ಬರು ಯಾತ್ರಿಕರನ್ನು ಕಂಡಳು. ಅವಳ ಕನಸು ಕೆರಳಿ ಅಂದೇ ಸಂಜೆ ತಾನೇ ಮುಂದಾಗಿ ತಂದೆಯಲ್ಲಿಗೆ ಹೋದಳು.

ಪಟ್ಟಕ್ಕೆ ಬಂದಕೂಡಲೇ ತೆರಿಗೆ ಮತ್ತು ಕಪ್ಪಕಾಣಿಕೆಯನ್ನು ಕೂಡಾ ಧಾನ್ಯದ ರೂಪದಲ್ಲಿ ಕೊಡಬಹುದೆಂದು ಶಿಖರಸೂರ್ಯ ಸಾರಿದ್ದರಿಂದ ಆ ವರ್ಷ ಅರಮನೆ ಧಾನ್ಯದ ರಾಶಿಯಿಂದ ತುಂಬಿ ಹೋಗಿತ್ತು. ಹೊಸದಾಗಿ ಎರಡು ಬೃಹತ್ ಕಣಜಗಳನ್ನು ಕಟ್ಟಿದ್ದು ಅರಮನೆಯಲ್ಲಿದ್ದ ಧಾನ್ಯವನ್ನು ಕಣಜಗಳಿಗೆ ಸಾಗುಸುತ್ತ ತಂದೆ ಅಲ್ಲೇ ಖುದ್ದಾಗಿ ನಿಂತಿದ್ದ. ಅಲ್ಲಿ ಮರದ ಪೀಠಗಳನ್ನು ತೆಗೆದು ಖಾಲಿ ಮಾಡಿದ್ದರಿಂದ ಕೂತುಕೊಳ್ಳಲಿಕ್ಕೇನೂ ಇರಲಿಲ್ಲ. ಇಷ್ಟೊಂದು ಧಾನ್ಯ ಸಂಗ್ರಹದ ಕಾರಣಕೇಳಲು ಸಹಜವಾಗಿಯೇ ಅವಳಲ್ಲಿ ಕುತೂಹಲ ಕೆರಳುವುದೆಂದು ಗೊತ್ತಿದ್ದ ಶಿಖರಸೂರ್ಯ ಮಾತಾಡಲಿಕ್ಕೆ ಅವಕಾಶ ಕೊಡದೆ ಹೊರಕ್ಕೆ ನಡೆದ. ಗೌರಿಯೂ ಹಿಂದಿನಿಂದ ಹೊರಟಳು.

ತನ್ನ ಕೋಣೆಗೆ ಬಂದು ಪೀಠದಲ್ಲಿ ಕೂತು “ಬಾ ಮುದ್ದು” ಅಂದ. ಒಳಕ್ಕೆ ಹೋಗಿ ಅವಳೂ ಅವನ ಸಮೀಪ ಕೂತಳು. ಅವಳು ಕೇಳುವ ಮಾತು ಅಂದಾಜಾಗಿದ್ದುದರಿಂದ ಅವಳನ್ನೇ ನೋಡುತ್ತ ಕೂತ. ಗೌರಿಯೇ ಮಾತಿಗಾರಂಭಿಸಿದಳು.

“ಅಪ್ಪಾ ಶಿಪಾಪೂರದ ನಿನ್ನಡಿ ಬಿಳಿಗಿರಿಗೆ ಬಂದು ಹೋದ ವಿಚಾರ ನಿನಗೆ ಗೊತ್ತಿದೆ. ನೀನು ಹೇಳಿದ ಕಂಚಿ ರಾಜಕುಮಾರನ ವಿಷಯ ನನಗೆ ಗೊತ್ತಿದೆ. ಎಲ್ಲವನ್ನು ವಿಚಾರ ಮಾಡಿ ಶಿವಾಪುರವೇ ನನಗೇ ಯೋಗ್ಯವಾದ ಸ್ಥಳವೆಂದು ತೀರ್ಮಾನಿಸಿದ್ದೇನೆ. ಬದುಕೋದಕ್ಕೆ ಕನಕಪುರಿ ಲಾಯಖ್ಖಾದ ಊರಲ್ಲ ಎಂದು ನೀನೇ ಹೇಳುತ್ತಿದ್ದೇ. ದಯವಿಟ್ಟು ನನ್ನನ್ನ ಅಲ್ಲಿಗೆ ಕಳಿಸಿಬಿಡಪ್ಪ.”

‘ನಮ್ಮ ಪುಟ್ಟ ಹುಡುಗಿ ಮುದ್ದುವಿಗೆ ಇಷ್ಟೋಂದು ಧೈರ್ಯ ಬಂತೆ!’ ಎಂದು ಆಶ್ಚರ್ಯವಾದರೂ ಶಿಖರಸೂರ್ಯ ಅದನ್ನು ತೋರಿಸಿಕೊಳ್ಳಲಿಲ್ಲ. ಪ್ರೀತಿ ಮತ್ತು ಮೆಚ್ಚುಗೆಗಳನ್ನು ಅಭಿನಯಿಸುತ್ತ –

“ಹೌದಮ್ಮಾ, ಬೀಗ ಬೀಗರ ಮಾತು, ನಿಶ್ಚಯಕಾರ್ಯ, ಮದುವೆ – ಇದ್ಯಾವುದೂ ಇಲ್ಲದೆ ನೀನು ಶಿವಪುರಕ್ಕೆ ಹೋಗುತ್ತಿಯಾ? ಹೇಳೋರು ಕೇಳೋರು ನಿನಗ್ಯಾರೂ ಹಿರಿಯರಿಲ್ಲವೇ?”

“ಅದಕ್ಕೆ ನಿನ್ನನ್ನ ಕೇಳಿದೆನಲ್ಲಪ್ಪ.”

“ಆದರೆ ನೀನಾಗಲೇ ಮನಸ್ಸಿನಲ್ಲಿ ಮದುವೆ ನಿಶ್ಚಯ ಮಾಡಿಬಿಟ್ಟಿದ್ದೀಯಲ್ಲಮ್ಮ. ತೀರ್ಮಾನ ತಗೊಳ್ಳೋದಕ್ಕೆ ನಮಗೇನುಳಿದಿದೆ. ?”

ಮುಗ್ಧತೆ ಕೂಡ ಕ್ರೂರವಾಗಿರಬಲ್ಲದು. ಮಕ್ಕಳು ವಿಷಬೇಡಿ ಹಟಹಿಡಿದರೆ ಹ್ಯಾಗೋ ಹಾಗಾಯಿತೆಂದು ಅಂದುಕೊಂಡ.

“ಅಪ್ಪಾ ನಾನು ಎಷ್ಟು ಸಲ ಶಿವಾಪುರ ಎಲ್ಲಿದೆ ಅಂತ ಕೇಳಿದರೂ ಆ ವಿಷಯ ಮಾತಾಡೋದಕ್ಕೆ ನಿನಗಿನ್ನೂ ವಯಸ್ಸು ಸಾಲದು ಅಂದೆ. ಅದನ್ನೆಲ್ಲ ಚಂಡಿದಾಸ ತಾತಾ ಹೇಳಿದ. ಶಿವಾಪುರ, ಶಿವನಪಾದ ಬಗ್ಗೆ ಅವನು ಹೇಳುವ ತತ್ವಗಳ ಬಗ್ಗೆ ಚಂಡೀದಾಸ ತಾತಾ ಹೇಳಿದಾಗಿನಿಂದ ನನ್ನಲ್ಲಿ ಆಸಕ್ತಿ ಮೂಡಿದೆ. ಅವನ ಮಾತು ಕೇಳಿದಾಗೆಲ್ಲ ನನಗೆ ಕನಕಪುರಿ ನರಕವಾಗಿ ಕಾಣುತ್ತಿದೆ. ?”

“ನೀನಗಾಗಲೇ ಸ್ವರ್ಗ ನರಕಗಳ ಪರಿಚಯವೂ ಆಗಿದೆಯೋ?”

– ಎಂದು ವ್ಯಂಗ್ಯವಾಗಿ ನಕ್ಕು ಹತಾಶೆಯಿಂದ ಸಿಟ್ಟಿಗೆದ್ದು ನುಡಿದ:

“ಶಿವಾಪುರದ ಬಗ್ಗೆ ನೀನೇನು ಬಲ್ಲೆಯೇ ದಡ್ಡಿ? ಚಂಡೀದಾಸನ ಬೊಗಳೆ ಕೇಳಿದಳಂತೆ, ಮನಸ್ಸನ್ನು ಮಾರಿಕೊಂಡೇ ಬಿಟ್ಟಳಂತೆ! ಸಾಲದ್ದಕ್ಕೆ ಇವಳಿಗೆ ಸ್ವರ್ಗ ನರಕಗಳ ಪ್ರಮಾಣ ಬೇರೆ; ಖುದ್ದಾಗಿ ಶಿವಾಪುರದಲ್ಲಿ ಇದ್ದು ಮೂರು ವರ್ಷ ಶಿವಪಾದನಿಗೆ ಮಣ್ಣು ಹೊತ್ತ ನಿನ್ನ ಹೆತ್ತ ತಂದೆಯ ಅನುಭವ ಮುಖ್ಯವೋ, ದಾಸಯ್ಯನ ಬೊಗಳೆ ಮುಖ್ಯವೋ? – ಅದನ್ನ ಮೊದಲು ಹೇಳು.

“ಶಿವಾಪುರ, ಶಿವಪಾದ ಮುಖ್ಯ ಅಂತ ಅನ್ನಿಸಿದ್ದರೆ ನಾನೇ ನಿನಗೆ ಹೇಳುತ್ತಿರಲಿಲ್ಲವೇ? ಅದು ಜೀವನ ವಿರೋಧಿಯಾದ ಪ್ರಭಾವವಾದ್ದರಿಂದ ನಿನಗೆ ಹೇಳಲಿಲ್ಲ, ಅಷ್ಟೇ. ಬೆವರು ಸುರಿಸಿ ಗಳಿಸಿದ ಹಣದಲ್ಲಿ ಬಡತನ, ದುಷ್ಟತನಗಳು ತಿಳಿಯದ ಹಾಗೆ ನಿನ್ನನ್ನ ಬೆಳೆಸಿದ್ದೇ ನನ್ನ ತಪ್ಪು. ಶಿವಾಪುರ, ಶಿವಪಾದಗಳು ಕನಕಪುರಿಯ ಬುದ್ದಿಜೀವಿಗಳ ಐಭೋಗಗಳು. ಜೀವನ ಅಂದರೇನೆಂದು ಗೊತ್ತಿಲ್ಲದ ವಿಲಾಸಿಗಳ ಮಾತಿನ ತುರಿಕೆಗಳು, ವಿಲಾಸದ ಬದುಕು ಬೋರಾಗಿ ಮಂತ್ರ ತಂತ್ರಾದಿ ರಹಸ್ಯಗಳು, ನಿಗೂಢಗಳ ಬಗ್ಗೆ ಮಾತಾಡಿಕೊಂಡು ಎಲ್ಲಾ ಗೊತ್ತಿದೆಯೆಂದು ತೋರಿಸಿಕೊಂಬ ಶ್ರೀಮಂತರ ದುಶ್ಚಟಗಳವು. ನಾನು ರಾಜ್ಯಭ್ರಷ್ಟನಾಗಿ ಕಷ್ಟಪಟ್ಟು ಗಳಿಸಿದ ಆನಂದಗಳ ಕನಕಪುರಿಯನ್ನ ನಿನಗೆ ಕೊಟ್ಟೆ. ನೀನು ಬಂದು ಶಿವಾಪುರದ ಕಾಲ್ಪನಿಕ ಸುಖದ ಮುಂದೆ ಇದೆಲ್ಲ ಕ್ಷುಲ್ಲಕ ಎಂದು ಹೇಳಿಬಿಟ್ಟೆಯಲ್ಲಮ್ಮ. !”

ದ್ರೋಹ ಮಾಡಿದಳೆಂಬಷ್ಟು ಸಿಟ್ಟು ಬಂತು ಶಿಖರಸೂರ್ಯನಿಗೆ. ಕಿವಿಗೂದಲು ನಿಮಿರಿದ್ದವು. ಬಿದ್ದು ಹೊರಳಾಡುವಂತೆ ಕೆನ್ನೆಗೆರಡೇಟು ಬಿಗಿದು ಬಿಡಬೇಕೆಂದುಕೊಂಡ. ಶಿವಾಪುರ ಶಿವಪಾದನಲ್ಲಿಯ ನಂಬಿಕೆಯಿಂದ ಮಗಳು ಕುರೂಪಿಯಾಗಿ ಕಂಡಳು. ಮುದ್ದು ಮಗಳಿಗೆ ಸಂಬಂಧಪಟ್ಟುದೆಲ್ಲವೂ ಚಂದ ಆನಂದವೆಂದುಕೊಂಡಿದ್ದ ಶಿಖರಸೂರ್ಯನಿಗೆ ಗೌರಿ ಹೇಸಿಕೆ ಬರುವಷ್ಟುವಿಕಾರಿಯಾಗಿ ಕಂಡಳು. ಗೌರಿ ಸೋತ ದನಿಯಲ್ಲಿ ಹೇಳಿದಳು

“ಅಪ್ಪ ನೀನು ನಂಬುವುದಿಲ್ಲ. ಆದರೆ ನಾನು ದೇವರನ್ನು ನಂಬುತ್ತೇನೆ. ಕನಕಪುರಿನಾನು ಇಷ್ಟ ಪಡುವ ಸ್ಥಳವಲ್ಲನನ್ನನ್ನ ಶಿವಾಪುರಕ್ಕೆ ಕಳಿಸಿದರೆ ಅಮ್ಮನ ಸಾನ್ನಿಧ್ಯದಲ್ಲಿ ಧ್ಯಾನ ಮಾಡಿಕೊಂದಿರುತ್ತೇನೆ. ನಾನು ಧ್ಯಾನ ಮಾಡುವುದು ನಿನಗಾಗಿ ಮತ್ತು ಅಣ್ಣನಿಗಾಗಿ – ”

“ಯಾರನ್ನ ಕುರಿತು ಧ್ಯಾನ ಮಾಡ್ತೀಯೇ ಹುಚ್ಚು ಹುಡುಗಿ? ನಿನ್ನ ಧ್ಯಾನ ಕೇಳಿಸಿಕೊಂಬುವರ್ಯಾರು ಇಲ್ಲಾಮ್ಮ. ನಿನ್ನ ಧ್ಯಾನ ಕೇಳಿ ಒಲಿದು ಬಂದು ವರಕೊಡುವಂಥ ದೇವರ್ಯಾರೂ ಇಲ್ಲ. ಅವೆಲ್ಲಾ ಜನಪದ ಕತೆಗಳಲ್ಲಿ ಬರುವ ದೇವರು: ದುಃಖಿಗಳನ್ನ ಅವಮಾನಿತರನ್ನ ಸಂತೈಸುವ ದೇವನ್ಯಾರೂ ಇಲ್ಲವಮ್ಮ. ಬರ ಬಿದ್ದರೆ, ಪ್ರವಾಹ ಬಂದರೆ ಸಾಯುವವರನ್ನು ಕಾಪಾಡುವ ದೇವರಿಲ್ಲವಮ್ಮ! ದಡ್ಡಿ ನಿನ್ನ ಆರೈಕೆಗೆ, ಗುಡಿ ಗುಂಡಾರ ಕಟ್ಟೋದಕ್ಕೆ ಹಣ ಖರ್ಚಾಗುತ್ತದೆ ಅಂತ ಗೊತ್ತೇನು? ಯುದ್ಧ ಮಾಡಿ ಜನರನ್ನ ಕೊಲ್ತಿವಲ್ಲ, ಅದಕ್ಕೆ ಹಣ ಬೇಕು ಗೊತ್ತೇನು?. ಸಿಡಿತಲೆ ಆಡಲಿಕ್ಕೆ, ಕೊಲ್ಲೊ ಕತ್ತಿ, ಬಾನ, ಚೂರಿ, ಮಾಡೋದಕ್ಕೆ ಹಣ ಬೇಕು, ಇದನ್ನೆಲ್ಲಾ ಯಾರು ಬೆಟ್ಟದಮ್ಮ ಕೊಡ್ತಾಳೇನು? ಹಣ ಇಲ್ಲದೆ ಶಿವ ಶಿವ ಪದ ಹಾಡಿದರೆ ಶಿವ ಹಣ್ಸದ ಮಳೆ ಸುರಿಸ್ತಾನೆಯೇ?”

ವಾದ ಮಾಡುವುದಕ್ಕೆ ಗಟ್ಟಿ ಮನಸ್ಸು ಮಾಡಿದ್ದಳೆಂದೋ, ತನಗೆ ತಾನು ಹೇಳಿಕೊಂಡ ಹಾಗೆ ಇಲ್ಲವೆ ವಾದಕ್ಕೊಂದು ಕೊನೆ ಹೇಳುವ ಹಾಗೆ ಹೇಳಿದಳು:

“ಇಂಥ ಜಗತ್ತಿನಲ್ಲಿ ಇರುವುದಕ್ಕೆ ಸಾಧ್ಯವಿಲ್ಲವೆಂದೇ ನಾನು ಶಿವಾಪುರ ಬೆಟ್ಟಕ್ಕೆ ಹೊರಟಿರೋದು. ನಿನ್ನ ಜಗತ್ತಿನಲ್ಲಿ ಎಲ್ಲಾ ಇದೆ. ಸಂತೋಷ ಮತ್ತು ದೇವರನ್ನು ಬಿಟ್ಟು. ನನಗೆ ಅವೇ ಎರಡೂ ಬೇಕು. ಇವೆರಡೂ ಇಲ್ಲದ ಜಗತ್ತಿಗಾಗಿ ನನಗೆ ಕರುಣೆ ಬರುತ್ತದೆ, ಮತ್ತು ದೇವರಲ್ಲಿ ಜಗತ್ತಿಗೆ ಎರಡನ್ನೂ ಕೊಡು ಅಂತ ಪ್ರಾರ್ಥನೆ ಮಾಡ್ತೀನಿ.

ನಿಜ ಹೇಳುತ್ತೇನೆ: ನೀನು ನಮಗಾಗಿ ತೆಗೆದುಕೊಂಡ ಶ್ರಮಕ್ಕೆ, ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಪ್ರತಿಯಾಗಿ ಏನನ್ನಾದರೂ ಕೊಡುವುದಕ್ಕೂ ಈ ಜನ್ಮದಲ್ಲಿ ಸಾಧ್ಯವಿಲ್ಲ. ದೇವರಲ್ಲಿ ನಂಬಿಕೆ ಬರುವಂತೆ ನಿನ್ನನ್ನು ಪರಿವರ್ತನೆ ಮಾಡುವುದೂ ಸಾಧ್ಯವಿಲ್ಲವೆಂದೂ ಗೊತ್ತು. ನಿನಗೆ ನೆಮ್ಮದಿ ಸಿಗಲೆಂದು ದೇವಲಲ್ಲಿ ಬೇಡಿಕೊಳ್ಳುತ್ತೇನೆ..”

ಎಂದು ಹೇಳಿ ಕೈ ಜೋಡಿಸಿ, ಸೂರ್ಯನ ಎಳೆಬಿಸಿಲ ಕಾಂತಿ ಬಿಂಬಿಸಿ ತುಪ್ಪದ ಸೊಡರಿನಂತೆ ಹೊಳೆಯುತ್ತಿದ್ದ ಕಂಗಳಿಂದ ಅವನನ್ನೇ ನೋಡುತ್ತಾ ಬಾಗಿ ಕಾಲುಮುಟ್ಟಿ ನಮಸ್ಕರಿಸಿ “ನನ್ನನ್ನು ಆಶೀರ್ವದಿಸು”ಎಂದಳು.

“ನೀನು ಹೇಳುವಂಥ ದೇವರು ಮತ್ತು ಸಂತೋಷ ಸಿಕ್ಕೊದು ಹುಚ್ಚರಿಗೆ, ಮೂರ್ಖರಿಗೆ ಮತ್ತು ನಟರಿಗೆ ಮಾತ್ರ ಸಾಧ್ಯ ಈ ಜಗತ್ತು ಏನಂತ ತಿಳುವಳಿಕೆ ಇರಬೇಕು. ಅದರೊಂದಿಗೆ ಕೊಡುಕೊಳ್ಳೋ ವ್ಯವಹರಿಸಿ ಒಪ್ಪಂದ ಮಾಡಿಕೋಬೇಕಮ್ಮಾ… ಹಟ ಹಿಡಿದರೆ ಹ್ಯಾಗೆ… ?

– ಎಂದು ನಮಸ್ಕರಿಸುತ್ತಿದ್ದ ಗೌರಿಯನ್ನು ಎಬ್ಬಿಸುತ್ತಿದ್ದಾಗ ಅನುಮಾನವಾಗಿ ಗಪ್ಪನೆ ನಾಡೀ ಹಿಡಿದಾಗ ಗೊತ್ತಾಯಿತು: ಮಗಳು ಗರ್ಭಿಣಿ ಎಂದು! ಅನಿರೀಕ್ಷಿತ ಅಘಾತವಾಗಿ ಕಿವಿಗೂದಲು ನಿಮಿರಿ, ಮೀಸೆ, ತಲೆಗೂದಲು ಕೆದರಿ ಮುಖ ವಿಕಾರವಾಯ್ತು. ಕೊಂದು ಬೆಡಬೇಕೆಂದು ಗಪ್ಪನೆ ಎರಡೂ ಕೈಗಳಿಂದ ಅವಳ ಕತ್ತು ಹಿಡಿದು ಹಿಸುಕಿ – ತಕ್ಷಣ ಈ ಕಡೆಗೆ ನೋಡಿದ: ಒಬ್ಬ ಸೇವಕಿಯ ಕಂಡು ಕೋಪವನ್ನು ನಿಯಂತ್ರಿಸಿಕೊಂಡು, “ಮಗಳೇ, ನಿನಗೆ ಶಿವಪಾದನ ಹುಚ್ಚು ಹಿಡಿದಿದೆ. ನೀನು ನಡೆ ಆಮೇಲೆ ಮಾತಾಡೋಣ” ಎಂದು ಹೊರಹೋಗುವಂತೆ ಸನ್ನೆ ಮಾಡಿದ. ಅವಳೂ ಹೋಗುತ್ತಲೂ ಗಟ್ಟಿಯಾಗಿ ಮುಷ್ಟಿ ಬಿಗಿದು, ಹಲ್ಲಿ ಕಚ್ಚಿ ಪೀಠದ ಮೇಲೆ ಗುದ್ದಿದ. ಅದು ಮುರಿದು ನೆಲಕ್ಕೊರಗಿತು.

ಅಂದಿನ ರಾತ್ರಿ ಉಳಿದೆಲ್ಲರ ಊಟ ಮುಗಿದ ಬಳಿಕ ಕುಟುಂಬದವರೆಲ್ಲ ಭಾವಾವೇಶಕ್ಕೆ ಒಳಗಾಗುವಂತೆ ಮಾಡಿದ. ಪ್ರತೀಕಾರದ ಉರಿಯುಗುಳುತ್ತ “ನಾನು ಯಾರನ್ನೂ ಮಣ್ಣು ಮುಕ್ಕಿಸಬಲ್ಲೇ! ದೇವರನ್ನ ಕೂಡಾ!” ಎಂದು ಏನೇನೋ ಮಾತಾಡುತ್ತ ಕೋಣೆಯಿಂದ ಮೊಗಸಾಲೆಗೂ ಮೊಗಸಾಲೆಯಿಂದ ಕೋಣೆಗೂ ದಾಪುಗಾಲು ಹಾಕಿ ಹೋಗಿಬರುತ್ತ, ತಕರಾರು ತೆಗೆಯುತ್ತ ಕುಟುಂಬದ ಎಲ್ಲರನ್ನು ಅನವಶ್ಯಕವಾಗಿ ಬಯ್ದ. ಸೇವಕಿಯರಿಗೆ ಪರಸ್ಪರ ವಿರುದ್ಧವಾದ ಆಜ್ಞೆಗಳನ್ನು ಒದರಿದ.

ಯಾರಿಗೂ ಹಾಕಿದೆಲ್ಲ ಎಂದು ತಿಳಿಯಲಿಲ್ಲ. ಗೌರಿಗೆ ಮಾತ್ರ ಇದೆಲ್ಲ ತನ್ನನ್ನೇ ಕುರಿತ ನಾಟಕವೆಂದು ಒಳಗೊಳಗೆ ಅಳುಕಾಗಿ ಹ್ಯಾಗೆ ಎದುರಿಸುವುದೆಂದು ಪೂರ್ವ ತಯಾರಿ ನಡೆಸಿದಳು.

ಆಮೇಲಿನ ಎರಡು ದಿನ ಮನೆಯ ಹೆಂಗಸರನ್ನೇ ಗಮನಿಸಿದ. ಹೆಂಗಸರಿಗೆ ಈ ವಿಷಯ ಗೊತ್ತಿರಲೇ ಬೇಕಲ್ಲ. ಅವರ್ಯಾಕೆ ತನ್ನ ಮುಂದೆ ಹೇಳುತ್ತಿಲ್ಲ? ತಾಯಿ, ಅಜ್ಜಿ ಇಬ್ಬರೂ ಗೌರಿಗೆ ಪ್ರೋತ್ಸಾಹ ಕೊಡುತ್ತಿರಬಹುದೇ? ಅಥವಾ ಅವರಿಗೇ ಇನ್ನೂ ಗೊತ್ತಿಲ್ಲದಿರಬಹುದು. ಗೊತ್ತಿಲ್ಲದಿದ್ದರೆ ಒಳ್ಳೇಯದೇ ಆಯಿತು. ಸನ್ನಿವೇಶ ಬಹಳ ನಾಜೂಕಿನದು. ಸ್ವಲ್ಪ ವಾಸನೆ ಬಂದರೂ ಚಕ್ರವರ್ತಿಯ ಮಗಳು ಹಾಗಂತೆ ಹೀಗಂತೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈಗ ಗೊತ್ತಿರೋದು ಗೌರಿಗೆ, ನನಗೆ. ಮೂರನೇಯವರಿಗೆ ತಿಳಿಯುವ ಮೊದಲೇ ಗೌರಿಗೆ ವಿಷವುಣ್ಣಿಸಿ ಬಿಳಿಗಿರಿಗಟ್ಟುವುದೇ ಸರಿಯಾದ ಉಪಾಯವೆಂದು ತೀರ್ಮಾಣಿಸಿದ.