ಶಾಸ್ತ್ರೋಕ್ತವಾಗಿ ಪಟ್ಟಾಭಿಷೇಕವಾಗಿರಲಿಲ್ಲವಾದರೂ ಉಳಿದೆಲ್ಲ ವ್ಯಾವಹಾರಿಕ ಅರ್ಥಗಳಲ್ಲಿ ಕನಕಪುರಿ ಶಿಖರಸೂರ್ಯನ ರಾಜ್ಯವಾಗಿತ್ತು. ಮಹಾರಾಣಿಯ ಅಂತ್ಯ ಒಂದು ರೀತಿಯಲ್ಲಾದರೆ ಆದಿತ್ಯಪ್ರಭ ತನ್ನ ರೋಗದಿಂದ, ಧನಪಾಲ ಶ್ವಾನಕೂಪದ ನಾಯಿಗಳಿಂದ ಸತ್ತು ಏನೇನೂ ರಕ್ತಪಾತವಿಲ್ಲದೆ ಕನಕಪುರಿ ಕೈಗೆ ಸಿಕ್ಕಿತು. ಆತ ವೈದ್ಯನಾಗಿ ಕನಕಪುರಿಗೆ ಬಂದಾಗ ಚೂರಿಯಂತೆ ಕೊರೆವ ಅವನ ಕಣ್ಣು ನೋಡಿ ಆಳಿದ ಮಹಾರಾಜ ಹೆದರಿದ್ದ. ಇಚ್ಛೆಯ ಮುಚ್ಚಿ ಮಾತಾಡುವನೆಂದು, ಅವನಾಗಲೇ ಇದು ತನ್ನ ಅರಮನೆಯೆಂಬಂತೆ ನೋಡುವನೆಂದು ಹೇಳಿದ್ದ. ಆರ್ಥಕೌಶಲನಿಗೆ ಈ ಮಾತು ಅಂತ್ಯದಲ್ಲಿ ಖಾತ್ರಿಯಾಗಿತ್ತು. ಇಷ್ಟಾದರೂ ಶಿಖರಸೂರ್ಯ ತೃಪ್ತಿ ಹೊಂದಿದವನಲ್ಲ. ದಕ್ಕಿದ ರಾಜ್ಯಕ್ಕೆ ತಾನು ಅರ್ಹ ಅಧಿಕಾರಿಯೆಂದು ಸಿದ್ಧಮಾಡಿ ತೋರಿಸದಿದ್ದರೆ ಕನಕಪುರಿಯನ್ನು ಆಳುವದು ಕಷ್ಟವೆಂದು ಅವನಿಗೆ ಗೊತ್ತಿತ್ತು. ಮಹಾರಾಜನಾಗಿ ಮಾತ್ರವಲ್ಲ, ಚಕ್ರವರ್ತಿಯಾಗಿ ಆಳಿ ತೋರಿಸಬೇಕೆಂಬ ಛಲ ಮೂಡಿ ಸೀಮೋಲ್ಲಂಘನದ ಯೋಜನೆ ಹಾಕಿದ.

ಅಧಿಕಾರ ಗ್ರಹಿಸಿದೊಡನೆ ಕಪ್ಪ ಮತ್ತು ತೆರಿಗೆಯನ್ನಯ ಧಾನ್ಯ ರೂಪದಲ್ಲಿ ಕೊಡಬಹುದೆಂಬ ಕಾನೂನು ಜಾರಿಗೆ ತಂದ. ನಾವು ಆಕ್ರಮಿಸಬೇಕೇ ಹೊರತು ಆಕ್ರಮಣಕ್ಕೀಡಾಗಬಾರದೆಂಬುದು ಶಿಖರಸೂರ್ಯನ ಸಿದ್ಧಾಂತ. ವೈರಿಗಳ ನಾಶ ಮತ್ತು ಸ್ವರಕ್ಷಣೆಗಾಗಿ ಉತ್ತರದ ಚಾಳಕ್ಯಪುರಿಯ ಕಮ್ಮಾರರು ವಿಶೇಷವಾಗಿ ತಯಾರಿಸಿದ, ಸಿಡಿದರೆ ಅರ್ಧ ಕನಕಪುರಿ ನಾಶವಾಗುವಂಥ ಸಿಡಿತಲೆಗಳನ್ನು ತರಿಸಿದ್ದ. ಇನ್ನೇನು ಬೇಕು? ಆಮೇಲೆ ಒಂದು ವಾರ ಸುಕ್ರ, ಬಂಡೆಯ ಮತ್ತು ರವಿಕೀರ್ತಿಯೊಂದಿಗೆ ಕೂತು ಆಕ್ರಮಣದ ಯೋಜನೆಗಳನ್ನು ತಯಾರಿಸಿದ. ಅರಮನೆಯಲ್ಲಿ ಧಾನ್ಯದಿಂದ ಮಾಡಿದ ಹೇರಳ ಚಿನ್ನವಿತ್ತು. ಅಪಾರ ಸಂಖ್ಯೆಯ ಮೇವಿನ ಸೈನ್ಯವಿತ್ತು. ವಿಜಯದಶಮಿಯಂದು ಸೈನ್ಯ ಹೊರಟೇ ಬಿಟ್ಟಿತು.

ಮಹರ್ಷಿ ಟಾಲ್ ಸ್ಟಾಯ್ ಅವರು ಹೇಳಿದಂತೆ ಸಾಮಾನ್ಯವಾಗಿ ಸೈನಿಕರಿಗೆ ಭಾವನೆಗಳೇ ಇರುವುದಿಲ್ಲ. ಅವರು ಸದಾಕಾಲ ಆಟವಾಡುತ್ತಲೇ ಇರುವ, ಆದರೆ ಯಾಕಾಗಿ, ಯಾರಿಗಾಗಿ ಆಟ ಆಡುತ್ತಿದ್ದೇವೆಂಬ ಅರಿವಿಲ್ಲದ ಪ್ರಾಣಿಗಳು. ಆಟದ ಸಂತೋಷದ ಹೊರತು ಬೇರೆ ಭಾವನೆಗಳಿಗೆ ಅವರಲ್ಲಿ ಅವಕಾಶವೇ ಇರುವುದಿಲ್ಲ. ಸಾಮಾನ್ಯ ಸೈನಿಕರಕ ಪಾಡೇ ಹೀಗಾದರೆ ಇನ್ನು ಮೇವಿನ ದಂಟಿನಿಂದ ಹುಟ್ಟಿದ ಶಿಖರಸೂರ್ಯನ ಸೈನಿಕರು ಹ್ಯಾಗಿರಬೇಕೆಂದು ನೀವೇ ಊಹಿಸಿಕೊಳ್ಳಿರಿ.

ಎಷ್ಟೋ ಸಲ ಯಾರಿಗಾಗಿ ಕೊಲ್ಲುತ್ತಾರೋ ಆ ವ್ಯಕ್ತಿಯನ್ನವರು ನೋಡಿರುವುದೇ ಇಲ್ಲ. ಯಾಕಾಗಿ ಕೊಲ್ಲುತ್ತಿದ್ದಾರೆಂದೂ ಅವರು ಯೋಚಿಸುವುದಿಲ್ಲ. ಕೇಳಿದರೆ ವೈರಿಯನ್ನು ಕೊಂದೆವೆಂದು ಹೇಳುತ್ತಾರೆ. ವೈರಿ ಇವರಿಗೇನು ಕೇಡು ಮಾಡಿದ್ದ? ಇವರೊಂದಿಗೆ ಜಗಳವಾಡಿದ್ದನೆ? ವೈರಿ ಮತ್ತು ಈ ಕಡೆಯ ಸೈನಿಕ ಇವರಾದರೂ ಪರಸ್ಪರ ನೋಡಿದವರೋ? ಅದೂ ಇಲ್ಲ. ಆದರೂ ಇಬ್ಬರ ಮಧ್ಯೆ ವೈರವಿದೆಯೆಂದು ನಂಬುತ್ತಾರೆ; ಪರಸ್ಪರ ಕೊಲ್ಲುತ್ತಾರೆ. ಇವನು ವೈರಿ ಎಂದು ಮೇಳಿನವರು ಹೇಳಿದ್ದಾರೆ, ಆದ್ದರಿಂದ ಇವರೂ ಅದನ್ನು ನಂಬುತ್ತಾರೆ. ಕೊಲ್ಲುವುದರ ಅರ್ಥವಾದರೂ ಅವರಿಗೆ ತಿಳಿದಿದೆಯೊ? ಅದನ್ನೂ ಮೇಲಿನವರೇ ತಿಳಿದಿರುತ್ತಾರೆ ಅಥವಾ ತಿಳಿಯಬೇಕೆಂಬ ಸಾಮಾನ್ಯ ಕುತುಹಲವೂ ಇವರಿಗಿರುವುದಿಲ್ಲ. ಹೋಗಲಿ ಗೆದ್ದಾಗಲಾದರೂ ಇವರಿಗೆ ಸಂತೋಷವಾಗುತ್ತದೆಯೊ? ಸಂತೋಷ ಪಡೆಬೇಕೆಂದು ಕೂಡ ಮೇಲಿನ ಅಧಿಕಾರಿಗಳೇ ಹೇಳಬೇಕು.

ಇನ್ನಿವರ ಜೀವನದ ಬಗೆಗಿನ ತಿಳುವಳಿಕೆಯೋ – ದೇವರೇ ಕಾಪಾಡಬೇಕು. ಅಥವಾ ಊರಲ್ಲಿದ್ದವರ ಸಾಮಾಜಿಕ ಸಂಬಂಧಗಳು, ಕಲಹಗಳು, ಸಂಚು ಹೊಂಚುಗಳು, ಸರಿಪಡಿಸಿಕೊಳ್ಳಬೇಕಾದ ವ್ಯವಹಾರಗಳು – ಇವೆಲ್ಲ ಅವರಿಗೆ ಅರ್ಥವಾಗದ ಬಾಬುಗಳು. ಕಳ್ಳ ಮತ್ತು ಸೈನಿಕನ ಹೆಂಡತಿ ಯಾವತ್ತೂ ವಿಧವೆ ಎಂಬೊಂದು ಗಾದೆಯಿದೆ. ಕಳ್ಳನಿಗೆ ಕೊನೇ ಪಕ್ಷ ಸ್ವಾರ್ಥವಿದೆ. ಸೈನಿಕನಿಗೆ ಅದೂ ಇಲ್ಲ. ಯಾಕಾಗಿ, ಯಾರಿಗಾಗಿ ಹೋರಾಡುತ್ತಿದ್ದೇನೆ ಎಂಬುದೇ ಗೊತ್ತಿಲ್ಲದವನಿಗೆ ಸ್ವಾರ್ಥವೇನು ಬಂತು?

ಒಂದು ಸಲ ಶಿಖರಸೂರ್ಯ ಮಗ ರವಿಕೀರ್ತಿಯೊಂದಿಗೆ ಯುದ್ಧದ ಬಗ್ಗೆ ಚರ್ಚಿಸುತ್ತಿದ್ದಾಗ ರವಿಕೀರ್ತಿ ಹೇಳಿದ್ದ:

“ಯುದ್ಧಗಳೆಲ್ಲ ಒಂದೇ ರೀತಿ ಇರುತ್ತವಲ್ಲಪ; ಒಬ್ಬರ ಮೇಲೆ ಇನ್ನೊಬ್ಬರು ದಾಳಿ ಮಾಡುವುದು. ಒಬ್ಬ ಕೊಲ್ಲುತ್ತಾನೆ; ಇನ್ನೊಬ್ಬ ಸಾಯುತ್ತಾನೆ. ಒಟ್ಟಿನಲ್ಲಿ ಯುದ್ಧವೆಂದರೆ ಕೊಲೆ. ಇಬ್ಬರೂ ಮನುಷ್ಯರೇ ಆದ್ದರಿಂದ ಆತ್ಮಹತ್ಯೆ ಎನ್ನುವುದೇ ಉತ್ತಮ”.

ರವಿಕೀರ್ತಿಯ ಈ ಮಾತನ್ನ ಗಂಭೀರವಾಗಿ ಪರಿಗಣಿಸಿದವನಂತೆ ಶಿಖರಸೂರ್ಯ ಮುಖ ಗಂಟು ಹಾಕಿ ಯೋಚನೆ ಮಾಡುವವರಂತೆ ಹಿಂದಕ್ಕೆ ಕೈ ಕಟ್ಟಿಕೊಂಡು, ಹುಬ್ಬುಗಂಟಿಕ್ಕಿ ಆಲೋಚಿಸುತ್ತ, ಕೋಣೆಯ ಮೂಲೆಯಿಂದ ಮೂಲೆಗೆ ನಿಧಾನವಾಗಿ ಹೆಜ್ಜೆಹಾಕತೊಡಗಿದ. ಆಮೇಳೆ ನಿಧಾನವಾಗಿ –

“ಆತ್ಮಹತ್ಯೆ! ಆತ್ಮ ಅಂದರೇನೋ ಮರಿ? ಹ್ಯಾಗಿರುತ್ತಯ್ಯಾ ಅದು?”

“ಅದು ಪರಿಶುದ್ಧರ ಅನುಭವಕ್ಕೆ ಮಾತ್ರ ಬರುವಂಥದಪ್ಪ.”

ಇನ್ನಷ್ಟು ಯೋಚನೆ ಮಾಡುವವರಂತೆ ಹುಬ್ಬು ಬಿಗಿದು,

“ಅದೇನೋ ಪರಿಧಡ್ಡರ ಅನುಭವ ಅಂದೆಯಲ್ಲ? ಯಾರಯ್ಯ ಪರಿಧಡ್ಡರು ಅಂದರೆ? ಶಿವಾಪುರದ ಅಮ್ಮನ ಭಜನೆ ಮಾಡ್ತಾರಲ್ಲ ಜನ, ಅವರ? ಅಥವಾ ಆ ಎಲುಬಿನ ಗೂಡು ಶಿವಪಾದನ? ಇಲ್ಲಾ ಪುಸ್ತಕ ಓದಿಕೊಂಡು ಚರ್ಚೆ ಮಾಡ್ತಾರಲ್ಲ ನಿನ್ನಂಥವರು, ಅವರ? ಯಾರಯ್ಯಾ ಪರಿಶುದ್ಧರು? ನನ್ನ ಬಲಿತ ಬುದ್ಧೆಗೂ ನಿನ್ನ ತರ್ಕ ನಿಲುಕುವುದಿಲ್ಲವಲ್ಲ ಮಾರಾಯಾ”.

ಅಂದ. ತಂದೆ ತನ್ನ ಮಾತನ್ನ ಪಲ್ಲಟಿಸಿ ಹಾಸ್ಯ ಮಾಡುತ್ತಿದ್ದಾನೆಂದು ಖಾತ್ರಿಯಾಗಿ ರವಿ ವಾದ ಬೆಳೆಸಲಿಲ್ಲ. ಆದರೆ ಶಿಖರಸೂರ್ಯ ಬಿಡಲಿಲ್ಲ. ಈಗ ದನಿ ಬಿರುಸು ಮಾಡಿ, –

“ಮನುಷ್ಯರ ಬಗ್ಗೆ ಸರಿಯಾಗಿ ತಿಳಿದುಕೊ. ಕಂಚಿ ಕನಕಪುರಿ ಅಥವಾ ಇನ್ನೆಲ್ಲೋ ಇರಲಿ – ಒಟ್ಟಾರೆ ಜೀವಿಗಳಲ್ಲಿ ಎರಡು ವಿಧ: ಒಂದು ಮನುಷ್ಯ, ಇನ್ನೊಂದು ಮೃಗ. ಮನುಷ್ಯ ಮೃಗಗಳಿಗಿಂಗ ಕ್ರೂರಿ. ಯಾಕಂತೀಯೊ? ಆತ ಮೋಸ ಮಾಡಬಲ್ಲ; ಭವಿಷ್ಯದ ಬಗ್ಗೆ ಕನಸು ಕಾಣಬಲ್ಲ. ತನ್ನ ಕನಸನ್ನ ನನಸಾಗಿಸಲು ಮೋಸ ಮಾಡಬಲ್ಲ. ನನಗೂ ಕನಸಿದ್ದರೆ ಸರಿ. ಇಲ್ಲದಿದ್ದಲ್ಲಿ ನಮಗೆ ಯಾರೂ ಮೋಸ ಮಾಡದಿರಲಿ ಅಂತಾದರೂ ನಾವು ಎಚ್ಚರವಾಗಿರೋದು ಬ್ಯಾಡವಾ? ಹಾಗೆಯೇ ನಮಗೆ ಯಾರೂ ಮೋಸ ಮಾಡದಿರಲಿ ಅಂತ ಅವರ ಮೇಲೆ ನಾವೇ ದಾಳಿ ಮಾಡಿ ಗೆಲ್ಲೋದಕ್ಕೆ ಯುದ್ಧ ಮಾಡಬೇಕಯ್ಯಾ. ಅದು ಆತ್ಮಹತ್ಯೆಯಲ್ಲ, ಆತ್ಮರಕ್ಷಣೆ. ಕಂಚಿಗೆ ಹೋಗಿ ರಾಜವಿದ್ಯೆ ಕಲಿತು ಬಾ ಅಂದರೆ ನೀನು ಆತ್ಮವಿದ್ಯೆ ಕಲಿತು ಬಂದೆಯಲ್ಲಾ ಮಾರಾಯಾ!”

– ಎಂದು ಬೇಸರದಿಂದ ಹೇಳಿ ತಿರಸ್ಕಾರದಿಂದ ಭುಜ ಹಾರಿಸಿದ್ದ, ಆಮೇಲೆ –

“ಈಗೇನು, ಯುದ್ಧಕ್ಕೆ ಬರ್ತೀಯೋ? ಆತ್ಮ ಪರಮಾತ್ಮ ಅಂತ ಪದ ಹಾಡಿಕೊಂಡು ಕೂರ್ತಿಯೊ?”

ಅಂದ. ರವಿಕೀರ್ತಿ ಯುದ್ಧಕ್ಕೆ ಸಿದ್ಧನಾಗಿದ್ದ.

ಸದರಿ ಮೇವಿನ ಸೈನಿಕರ ಬಗ್ಗೆ ಇನ್ನೊಂದು ಮಾತನ್ನು ಈಗಲೇ ಹೇಳಿ ಬಿಡುತ್ತೇವೆ: ಅವರು ಮಂತ್ರದ ಗೊಂಬೆಗಳ ಹಾಗೆ. ಮಂತ್ರ ಹಾಕಿದವ ಏನು ಹೇಳುತ್ತಾನೋ, ಎಷ್ಟು ಹೇಳುತ್ತಾನೋ ಅದನ್ನು, ಅಷ್ಟನ್ನು ಮಾತ್ರ ಚಾಚೂ ತಪ್ಪದೆ ಮಾಡುವವರು. ಅದರಾಚಿ ಈಚೆ ಒಂದಿ ಕಡ್ಡಿ ಕೂಡ ತೆಗೆದು ಗೊತ್ತಿರದವರು. ಊಟಕ್ಕೆ ಒಮ್ಮೊಮ್ಮೆ ಹುಲ್ಲು ತಿನ್ನಿರೆಂದು ಹೇಳಿದರೆ ಹುಲ್ಲನ್ನೇ ತಿಂದು ಬದುಕುವವರು. ಖರ್ಚು ವೆಚ್ಚಗಳಿಲ್ಲದ ಇಂಥ ಮಂತ್ರನಿಷ್ಠೆಯ ಸೈನಿಕರನ್ನು ಕಟ್ಟಿಕೊಂಡು ಸುಕ್ರ ಮತ್ತು ರವಿಕೀರ್ತಿ ಜೊತೆಗೂಡಿ ಮೂಡನ ರಾಜ್ಯಗಳ ಮೇಲೆ ಆಕ್ರಮಣ ಮಾಡಲು ತೆರಳಿದರೆ ಶಿಖರಸೂರ್ಯ ಮತ್ತು ಬಂಡೆಯರು ಬಡಗಣ ಸೀಮೆಗೆ ನುಗ್ಗಿದರು.

ರವಿಕೀರ್ತಿ ಹೇಳಿರುವಂತೆ ಯುದ್ಧಗಳೆಲ್ಲಾ ಒಂದೇ ರೀತಿ ಇರುವುದರಿಂದ ಅವನ್ನು ವರ್ಣಿಸುವುದರಲ್ಲಿ ನಮಗೆ ಆಸಕ್ತಿಯಿಲ್ಲ. ಕೊಲ್ಲುತ್ತಾರೆ, ಸಾಯುತ್ತಾರೆ, ಗೆಲ್ಲುತ್ತಾರೆ. ಸೋಲುತ್ತಾರೆ. ಅಥವಾ ಕೊಂದು ಗೆಲ್ಲುತ್ತಾರೆ, ಸೋತು ಸಾಯುತ್ತಾರೆ, ಎಂದು ಹೇಳಿ ಅದೆಲ್ಲಾ ಚೌಕಾಶಿಯಿಲ್ಲದೆ ಯುದ್ಧದ ಪರಿಣಾಮ ಫಲಿಗಳು ಏನೆಂದು, ಎಂತೆಂದು ಹೇಳಿಕೆಗಳ ಕೇಳಿಕೊಂಡು, ಪ್ರತ್ಯಕ್ಷಕ ನೋಡಿ ತಿಳಿದುಕೊಂಡು ಹೇಳುತ್ತೇವೆ, ಕೇಳಿರಿ:ಫಾಲ್ಗುಣ ಮಾಸದಿಂದ ದೀಪಾವಳಿಯವರೆಗೆ ಯುದ್ಧಮಾಡಿ ಮೂಡಣ ಬಡಗಣದ ಒಟ್ಟು ಒಂದು ಕಡಿಮೆ ಇಪ್ಪತ್ತು ದೇಶಗಳನ್ನೂ ಜಯಿಸಿ, ಗೆದ್ದವರನ್ನ ಮಾಂಡಳಿಕರನ್ನಾಗಿ ಮಾಡಿಕೊಂಡು, ಕನಕಪುರಿಯ ಕೀರ್ತಿ ಧ್ವಜವನ್ನು ಮೂಡಣ ಸಮುದ್ರದಿಂದ ಪಡುವಣ ಸಮುದ್ರದ ತನಕ ಹಾರಾಡಿಸಿ ವಾಪಸಾದರು.

ಹೋದಹೋದಲ್ಲಿ ಅಲ್ಲಿಯ ರಾಜ ಮಹಾರಾಜರುಗಳು ದಂತೆಯೇಳದಂತೆ ಒಬ್ಬೊಬ್ಬ ನಂಬಿಕಸ್ಥರನ್ನ ನಿಯಮಿಸಿ ಬೇಕಾದಷ್ಟು ಗಿಜಿ ಗಿಜಿ ಸೈನಿಕರನ್ನು ಸೃಷ್ಟಿಸಿ, ಕರ್ತವ್ಯದ ಬಗ್ಗೆ ತಾಕೀತು ಮಾಡಿ ನಿಯಮಿಸಿದರು. ಹೋದಹೋದಲ್ಲಿ ಕನಕಪುರಿಯ ಕುಲದೇವತೆ ತಕ್ಕಡಿ ತೂಗುವ ಗರುಡನ ಗುಡಿ ಗುಂಡಾರ ದೇವಾಲಯಗಳೆದ್ದವು.

ರಾಜ್ಯಗಳನ್ನು ಸೋಲಿಸಿ, ಸುಲಿದು, ಕೊಳ್ಳೆ ಹೊಡೆದು, ಹೇರಳ ಧನಕನಕ, ಅಪರೂಪದ ಕಾಣಿಕೆಗಳು ಬೆಲೆಬಾಳುವ ವಸ್ತು ಒಡವೆ, ಭೋಗಿಸಲು ಬೇಕಾದಷ್ಟು ಸೊಗಸುಗಳನ್ನು ತಂದಿದ್ದರು. ಅವನ್ನೆಲ್ಲ ಪ್ರದರ್ಶಿಸಿ ಮೆರವಣಿಗೆ ಮಾಡಿದರು. ಹಿಂದೆಂದೂ ಕಾಣದ ಇಂಥ ವೈಭವದಿಂದ ಕನಕಪುರಿ ಹತ್ತಿ ಹೆಂಡ ಕುಡಿದ ಕೋತಿಗಿಂತ ಎತ್ತರ ಹಾರಿ ಕುಣಿದಾಡವಂತಾಯಿತು. ಒಂದು ಕಡಿಮೆ ಇಪ್ಪತ್ತು ದೇಶಗಳನ್ನು ಗೆದ್ದು ಶಿಖರಸೂರ್ಯ ಕನಕಪುರಿಯ ವರ್ತಕರ ಭಾಗ್ಯದ ಬಾಗಿಲುಗಳನ್ನು ತೆರೆದುಬಿಟ್ಟಿದ್ದ. ಒಬ್ಬ ವರ್ತಕನೂ ಈಗ ಖಾಲಿ ಇರಲಿಲ್ಲ. ಪ್ರತಿಯೊಬ್ಬರೂ ಗೆದ್ದ ರಾಜ್ಯಗಳಿಗೆ ವಸ್ತುಗಳನ್ನು ವಿತರಿಸುವ, ಮಾರುವ ಕೆಲಸದಲ್ಲಿ ತೊಡಗಿದ್ದರು. ಕನಕಪುರಿಯ ಆಡಳಿತ ಮಂಡಳಿಯ ವರ್ತಕರು ಮತ್ತು ಹಿರಿಯ ನಾಯಕರು ಬಂದು ಬಹಳ ದಿನ ಸಿಂಹಾಸನ ಖಾಲಿ ಉಳಿಯಬಾರದೆಂದು ಹೇಳಿ ಪಟ್ಟಾಭಿಷೇಕದ ಪ್ರಸ್ತಾಪ ಮಾಡಿದರು. ಪುಷ್ಯ ಮಾಸದಲ್ಲಿ ಅದೂ ಜರುಗೆ “ಮಹಾಮಾರ್ತಾಂಡ ಮೂಡುಪಡುವ ಸಮುದ್ರಾಧೀಶ ಶಿಖರಸೂರ್ಯನ ಚಕ್ರಾಧೀಶನಾದ!” ಎಲ್ಲ ರಾಜ್ಯಗಳ ಎಲ್ಲ ಪ್ರಜೆಗಳ ನಾಲಗೆಗಳ ಮೇಲೆ ಶಿಖರಸೂರ್ಯನ ಹೆಸರು ನೂರಾರು ಬಿರುದಾವಳಿಗಳಿಂದ ಮೊಳಗಿತು. ಸುಕ್ರ ಪ್ರಧಾನಿಯಾದ. ಬಂಡೆಯ ಸೇನಾಧಿಪತಿಯಾದ. ರವಿಕೀರ್ತಿ ಯುವರಾಜನಾದ. ತರುಣ ವರ್ತಕರಿಂದ ಕೂಡಿದ ಆಡಳಿತ ಮಂಡಳಿ ಜಾರಿಗೆ ಬಂತು.

ಈ ಸಂದರ್ಭದಲ್ಲಿ ಕಂಚೀ ಮಹಾರಾಜನ ಪ್ರತಿನಿಧಿಯಾಗಿ ಅವನ ಪ್ರಧಾನಿಯೇ ಬಂದು ಪಟ್ಟಾಭಿಷೇಕದಲ್ಲಿ ಪಾಲ್ಗೊಂಡಿದ್ದ. ರವಿಕೀರ್ತಿಯೊಂದಗಿನ ತಮ್ಮ ಮಹಾರಾಜರ ಗೆಳೆತನವನ್ನು ಜ್ಞಾಪಿಸಿ ಸ್ನೇಹಹಸ್ತ ಚಾಚಿದ್ದ. ಸ್ನೇಹ ಗಟ್ಟಿಯಾಗಲು ರವಿಕೀರ್ತಿಗೆ ತನ್ನ ತಂಗಿಯನ್ನು ಕೊಟ್ಟು, ತಾನು ವರಿಯ ತಂಗಿ ಮುದ್ದು ಗೌರಿಯೊಂದಿಗೆ ಮದುವೆಯಾಗುವ ತನ್ನಿಚ್ಛೆಯನ್ನು ಹೇಳಿ ಕಳಿಸಿದ್ದ. ಈ ಅನಿರೀಕ್ಷಿತ ಪ್ರಸ್ತಾವದಿಂದ ಶಿಖರಸೂರ್ಯನಿಗೆ ಬಹಳ ಸಂತೋಷವಾಯಿತು. ಎಲ್ಲರನ್ನ ಹೆದರಿಸಿ ಸೋಲಿಸಿ ಅಂಕಿತದಲ್ಲಿಟ್ಟುಕೊಳ್ಳಬಹುದು. ಆದರೆ ಸಮಾನರಾದ ಸಂಬಂಧಿಕರು, ಸುಖದುಃಖ ಹಂಚಿಕೊಂಬ ಸ್ನೇಹಿತರೂ ಬೇಕಲ್ಲ. ಮಕ್ಕಳಿಗೆ ಇದಕ್ಕಿಂತ ಹೆಚ್ಚಿನ ಸಂಬಂಧ ಕೂಡಿ ಬರಲಾರದೆಂದು ಮನಸ್ಸಿನಲ್ಲೇ ಆನಂದಗಳನುಂಡ. ಅಂದೇ ರಾತ್ರಿ ಚಿಕ್ಕಮ್ಮಣ್ಣಿ ಛಾಯದೇವಿ ಇಬ್ಬರಿಗೂ ವಿಷಯ ಹೇಳಿದ. ಕೇಳಿಸಿಕೊಂಡ ಇಬ್ಬರ ಮುಖಗಳೂ ಕಪ್ಪಿಟ್ಟುದನ್ನು ತನ್ನ ಉಮೇದಿಯಲ್ಲಿ ಆತ ಗಮನಿಸಲಿಲ್ಲ.

ಪಟ್ಟಾಭೀಷೇಕವಾದ ಮೇಲೆ ಶಿಖರಸೂರ್ಯ ಕುಟುಂಬ ಕನಕಪುರಿಯ ಅರಮನೆಯಲ್ಲೇ ಉಳಿಯಿತು. ಶಿಖರಸೂರ್ಯನಂತೂ ಹೆಮ್ಮೆ ಆನಂದಗಳಿಂದ ಬೀಗಿ ಹೋಗಿದ್ದ. ರವಿಕೀರ್ತಿ ಕಂಚಿಯ ಮಹಾರಾಜನ ಸಹಪಾಠಿ ಮತ್ತು ಸ್ನೇಹಿತನೆಂದು ತಿಳಿದ ಮೇಲಂತೂ ಅವನಿಗೆರಡು ಕೊಂಬು ಮೂಡಿದಂತಾಗಿತ್ತು. ಸ್ಥಾನಭ್ರಷ್ಟನಾಗಿ ಕನಕಪುರಿಯನ್ನ ಬಿಟ್ಟಾಗಿನಿಂದ ಹೆಂಡತಿ ಮಕ್ಕಳ ಯೋಗಕ್ಷೇಮವನ್ನು ಮರತೇ ಬಿಟ್ಟಿದ್ದವನು ಇವತ್ತು ಪ್ರಥಮ ಬಾರಿ ಅಂತಃಪುರಕ್ಕೆ ಹೋಗಿ ಅವರನ್ನು ವಿಚಾರಿಸಿಕೊಂಡ.

ಇಷ್ಟು ಸದರ ಸಿಕ್ಕದ್ದೇ ಆಯ್ತು, – ಚಿಕ್ಕಮ್ಮಣ್ಣಿ ಶಿವಾಪುರದ ನಿನ್ನಡಿ ಬೆಳಿಗಿರಿಗೆ ಬಂದಾಗಿನಿಂದ ಹಿಡಿದು ನಿನ್ನಡಿಯ ಆಕಾರ, ಸೌಂದರ್ಯ ಆರುಬೆರಳುಗಳನ್ನು ಅತಿಯೆಂಬಷ್ಟು ಹೊಗಳಿ ಗೌರಿಯನ್ನಾತ ಮದುವೆಯಾಗಲು ಅಪೇಕ್ಷೆ ಪಟ್ಟದ್ದನ್ನೂ ಹೇಳಿದಳು. ಕಳೆದ ತಿಂಗಳು ಬಿಳಿಗಿರಿಗೆ ಪುನಃ ಬಂದಿದ್ದನೆಂದೂ ಗೌರಿಯನ್ನ ಬಿಟ್ಟು ತಾನಿರಲಾರೆನೆಂದು ಹೇಳಿದ್ದನ್ನೂ ಜೊತೆಗೆ ಶಿಖರಸೂರ್ಯ ಸತ್ಯ ತಿಳಿಯಲು ಸಹಾಯ ಮಾಡಲೆಂದು ನಿನ್ನಡಿಯೇ ತನ್ನ ಕಳೆದುಹೋದ ಮಗ ತರುಣಚಂದ್ರನಿರಬಹುದೇ? ಎಂಬ ತನ್ನ ಸಂದೇಹವನ್ನೂ ಹೇಳಿ “ಇರಬಹುದು ಎನಿಸಿತಪ್ಪ” ಎಂದು ಪ್ರಶ್ನೋತ್ತರಗೆರಡನ್ನೂ ಅವಳೇ ಮಾತಾಡಿ ಹಗುರವಾದಳು.

ಶಿಖರಸೂರ್ಯ ಅವಳು ಹೇಳುವುದನ್ನೆಲ್ಲ ನಿರ್ಭಾವದಿಂದ ಕೇಳಿಸಿಕೊಂಡು ಹಾಹೂ ಅನ್ನದೆ ಎದ್ದು ಹೊರಗೆ ಹೋದ. ಅವನು ಏನೂ ಹೇಳಲಿಲ್ಲವಾದ್ದರಿಂದ ಸಕಾಲಕ್ಕಾಗಿ ಕಾಯಬೇಕಿತ್ತೆಂದು ಹಳಹಳಿಸಿದಳು. ಆ ರಾತ್ರಿಯೆಲ್ಲಾ ಅಜ್ಜಿ ಮೊಮ್ಮಗಳು ನಿದ್ದೆಯಿಲ್ಲದೆ ಮಗ್ಗಲು ಬದಲಿಸುತ್ತಲೇ ಕಳೆದರು.

ತಂದೆಯ ತಿರಸ್ಕಾರದಿಂದ ಗೌರಿ ಕನಕಪುರಿಯಲ್ಲೆ ಇನ್ನಷ್ಟು ಒಂಟಿಯಾದಳು. ಅಣ್ಣನೂ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ನೋಡಲು ಹೋದಾಗೆಲ್ಲ ತನ್ನ ಕೋಣೆಯಲ್ಲಿ ಆ ಕಡೆಯಿಂದ ಈ ಕಡೆಗೆ ಉದ್ವೇಗದಿಂದ ಅಡ್ಡಾಡುತ್ತ, ದೊಡ್ಡ ಸನ್ನೆಗಳನ್ನು ಅಭಿನಯಿಸುತ್ತ ತಂತಾನೇ ಮಾತಾಡಿಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಅಂತರಂಗದ ಭಾವನೆಗಳನ್ನು ಯಾರದೋ ಎದುರಿಗೆ ಮಂಡಿಸಲು ಸಮರ್ಥ ಮಾತುಗಳಿಗಾಗಿ ಆತ ತಡಕಾಡುವಂತಿತ್ತು. ಅವನ ಭಾವನೆಗಳು ಏನೆಂದು ಗೊತ್ತಿದ್ದುದರಿಂದ ಗೌರಿಗೆ ಅವನ ಬಗ್ಗೆ ಸಹಾನುಭೂತಿ ಇತ್ತು. ಆದರೆ ಅವನ ಸಮಸ್ಯೆಗೆ ತಾನಾಗಲಿ, ತನಗೆ ಅವನಾಗಲಿ ಸಹಾಯ ಮಾಡುವ ಸ್ಥಿತಿಯಲ್ಲಿ ಇಬ್ಬರೂ ಇರಲಿಲ್ಲ.

ಅರಮನೆಯ ಆಮೋದಗಳು ಆಟಗಳು ಗೌರಿಗಾಗುತ್ತಿರಲಿಲ್ಲ. ಬೆರೆತು ಮಾತಾಡುವುದಕ್ಕೆ ಸಖಿಯರಿರಲಿಲ್ಲ. ಅಮನೆಗೆ ಬರುತ್ತಿದ್ದ ವರ್ತಕರ ಹೆಂಡಂದಿರು, ಹುಡುಗಿಯರೋ ಕತ್ತಿನ ತುಂಬ ಬಂಗಾರ ಹೇರಿಕೊಂಡು ಅಣ್ಣನ ಕೋಣೆಯತ್ತ ನೋಡಿ ನೋಡಿ ಹಲ್ಲು ಕಿರಿದು ಹೋಗುತ್ತಿದ್ದರು. ಶ್ರೀಮಂತ ಹುಡುಗರೂ ತನ್ನೊಂದಿಗೆ ಮಾತಾಡಲು ಹಾರೈಸಿ ನಿರಾಶರಾಗಿ ಇಲ್ಲವೆ ಹೆದರಿ ಹೋಗುತ್ತಿದ್ದರು. ಅರಮನೆಯಲ್ಲಿ ಸದಾ ಸದ್ದು ಗದ್ದಲವಿರುತ್ತಿತ್ತು.

ಕಂಚೀರಾಜನ ಪ್ರಸ್ತಾಮವನ್ನ ತಾಯಿ ಎರಡು ಸಾರಿ ಮಾಡಿ ಅವನ ಬಗ್ಗೆ ಮಾತಾಡಲು ಹಾರೈಸಿದ್ದಳು. ಆದರೆ ತನ್ನ ನಿರಾಸಕ್ತಿಯನ್ನು ಗಮನಿಸಿ ಅಸಮಾಧಾನಗೊಂಡಿದ್ದಳು. ನಿನ್ನಡಿಯ ಹೆಸರು ತಗೊಂಡಾಗೆಲ್ಲ ತಾಯಿ ಸಿಡುಕುತ್ತಿದ್ದಳು. ಈಗೀಗಿಂತಲೂ ಅವಳ ಸಿಡುಕು ಕ್ರೌರ್ಯವಾಗಿ ನಿನ್ನಡಿಯ ಹೆಸರನ್ನೇ ಮನೆಯಿಂದ ನಿಷೇಧಿಸಿದಂತೆ ಮಾಡಿದ್ದಳು. ಇನ್ನು ಮದುವೆಯ ವಿಚಾರವಂತೂ ದೂರಾತಿದೂರ ಉಳಿಯಿತು.

ಮೊದಮೊದಲು ಗೌರಿ ಒಬ್ಬಳೇ ಮೂಲೆಯಲ್ಲಿ ಕುಳಿತು ನಿನ್ನಡಿ ಕಳೆದ ತಿಂಗಳು ತನ್ನನ್ನು ಕಾಡಿಗೆ ಕರೆದುಕೊಂಡು ಹೋಗಿ ಪ್ರೀತಿ ಮಾಡಿದ್ದನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುತ್ತಿದ್ದಳು. ಹಾಗೆ ನೆನಪಿಸಿಕೊಂಡಾಗೆಲ್ಲ ಮುಖ ಕೆಂಪೇರಿ ನಾಚಿಕೊಳ್ಳುತ್ತಿದ್ದಳು. ಈಗ ಅದು ನೆನಪಾದಾಗ ಅಳು ಬರುತ್ತಿತ್ತು.

ಈ ಬಗ್ಗೆ ತಂದೆಯನ್ನೋಪ್ಪಿಸುವುದು ಚಿಕ್ಕಮ್ಮಣ್ಣಿಗೆ ಮಾತ್ರ ಸಾಧ್ಯವಿತ್ತು. ಮದುವೆ ತೀರ್ಮಾನ ಒಂದು ಕ್ಷಣದ ಕೆಲಸ. ಆದರೆ ಚಿಕ್ಕಮ್ಮಣ್ಣಿ ವಿಚಾರ ಮಾಡೋಣವೆಂದು ಹೇಳುವಂಥಾದ್ದೇನಿದೆ ಇದರಲ್ಲಿ? – ಎಂದು ನಿಡುಸುಯ್ಯುತ್ತಿದ್ದಳು. ಅಪ್ಪ ಸದಾಕಾಲ ಯಾವುದೋ ಲೆಕ್ಕಾಚಾರದಲ್ಲಿದ್ದಂತೆ ಏಕಕಾಲಕ್ಕೆ ಅನೇಕ ಯೋಜನೆಗಳನ್ನು ಆಲೋಚಿಸುತ್ತಿರುವಂತೆ ಹಣೆ ಗಂಟು ಹಾಕಿಕೊಂಡಿರುತ್ತಿದ್ದ. ಮಾತಿಗೆ ಬಾರದ ವಿಷಯಗಳನ್ನು ತಲೆಗೆ ಹಚ್ಚಿಕೊಂಡು ಆತ ಸಿಡುಕಿದಾಗಂತೂ ಗೌರಿಯ ದೇಹ ಕೋಪದಿಂದ ಕಂಪಿಸುತ್ತಿತ್ತು. ಆಮ್ಯಾಲೆ ಛೇ, ತಾನ್ಯಾಕೆ ಹೀಗೆ ಮಾಡಿದೆನೆಂದು ಒಬ್ಬಳೇ ಮೂಲೆಗೊರಗಿ ಚಂಡೀದಾಸ ಕೊಟ್ಟ ಅಡಿಕೆ ಹಿಡಿದುಕೊಂಡು ಪಶ್ಚಾತ್ತಾಪ ಪಡುತ್ತಿದ್ದಳು. ಚಂಡೀದಾಸನಾದರೂ ಈಗ ಪ್ರತ್ಯಕ್ಷನಾಗಬಾರದೆ? ಎಂದು ಹಾರೈಸಿದಳು.

ಇದ್ದಕ್ಕಿದ್ದಂತೆ ಒಂದು ದಿನ ಛಾಯಾದೇವಿ ಮಕ್ಕಳಿಗೆ ಅರಮನೆಯ ಶಿಷ್ಟಾಚಾರ ಕಲಿಸತೊಡಗಿದಳು. ಇವರು ಯಾರು ಅಂಥ ಶಿಷ್ಟಾಚಾರ ಅರಿಯದವರಲ್ಲ. ಎಷ್ಟೆಂದರೂ ಬಿಳಿಗಿರಿ ಅರಮನೆಯಲ್ಲಿ ಇದ್ದು ಬಂದವರಲ್ಲವೆ? ಆದರೆ ಅದು ಒಬ್ಬ ಮಾಂಡಳಿಕ ರಾಜನ ಅರಮನೆ. ಇದು ಚಕ್ರವರ್ತಿಯ ಅರಮನೆ. ಇಲ್ಲಿ ‘ಶಿಖರಸೂರ್ಯ ಮಹಾಪ್ರಭು’ ಎಂದು ಸಂಬೋಧಿಸಬೇಕು. ಅವನು ಬಂದಾಗ ಎಲ್ಲರೂ ಅಂದರೆ ಚಿಕ್ಕಮ್ಮಣ್ಣಿ ಕೂಡ ಎದ್ದು ನಿಲ್ಲಬೇಕು. ಇತ್ಯಾದಿ ತಾಕೀತು ಮಾಡಿದಳು. ಇದು ಅಮ್ಮನ ಕಿತಾಪತಿ ಎಂದು ಗೌರಿ ಮತ್ತು ರವಿ ನಗಾಡಿ ಹಗುರಾಗಿ ತಗೊಂಡರು. ಒಂದು ಸಲ ಗೌರಿ ಶಿಖರಸೂರ್ಯನನ್ನ ಅಪ್ಪಾ ಎಂದು ಕರೆದಾಗ ಅವನು ಅಸಹ್ಯಗೊಂಡು “ಇದಕ್ಕೆ ಅರಮನೆಯ ಶಿಷ್ಟಾಚಾರ ಕಲಿಸಲಿಲ್ಲವೆ ಮಹಾರಾಣಿ?” ಎಂದು ಛಾಯಾದೇವಿಯ ಮೇಲೆ ಕೋಪಗೊಂಡ. ಅಂದೇ ಗೌರಿ ತಾನು ಇಲ್ಲಿಗೆ ಸಂಬಂಧಪಟ್ಟವಳಲ್ಲ ಎಂದು ಅರಮನೆಗೆ ಪರಕೀಯಳಾಗಿ ಬಿಟ್ಟಳು. ನಾನು ರಾಜಕುಮಾರಿಯಲ್ಲ “ಗೌರಿ” ಎಂದು ಅಣ್ಣನಿಗೆ ಹೇಳಿ ತಾನು ಮಾತ್ರ ಅವನಿಗೆ ಯುವರಾಜನೆನ್ನದೆ ಅಣ್ಣ ಎಂದೇ ಕರೆಯತೊಡಗಿದಳು.

ಇದರಿಂದಾಗಿ ಛಾಯಾದೇವಿ ವಿನಾಕಾರಣ ಮಗಳ ಮೇಲೆ ಸಿಟ್ಟಿಗೇಳುತ್ತಿದ್ದಳು. ಗೌರಿ ಎಂದು ಕರೆಯದೆ ತಿರಸ್ಕಾರದಿಂದ ‘ಚಿಕ್ಕದು ಎಲ್ಲಿದೆ? ಅದು ಬಂತೆ? ಹೋಯ್ತೆ?’ ಎನ್ನುತ್ತಿದ್ದಳು. ಯಾರು ತಪ್ಪು ಮಾಡಿದರೂ ತುದಿಯಲ್ಲಿ ಗೌರಿಯನ್ನೇ ಅಂದಾಡಲು ಸುರು ಮಾಡಿದಳು. ರವಿ ತಪ್ಪು ಮಾಡಿದರೂ “ಇದೊಂದು ಇದೆಯಲ್ಲ ಅರಮನೆಯಲ್ಲಿ. ಇದರಿಂದಾಗಿಯೇ ಇದೆಲ್ಲ ನಡೀತಿರೋದು” ಎಂದು ಎಲ್ಲದಕ್ಕೂ ಗೌರಿಯನ್ನೇ ಗುರಿ ಮಾಡುತ್ತಿದ್ದಳು. ಅವಮಾನ ಕುಚೋದ್ಯ ಮಾಡುವ ಒಂದು ಅವಕಾಶವನ್ನೂ ಬಿಡುತ್ತಿರಲಿಲ್ಲ. “ಶಿವಪುರದ ಕರಡಿಗೆ ನಮ್ಮ ಮನೆ ಕೋತಿ ಬೇಕಂತೆ. ನಾವು ಇದಕ್ಕೆ ಒಪ್ಪಿಗೆ ಕೊಡಬೇಕಂತೆ!” ಎಂದು ಗೌರಿಗೆ ಕೇಳಿಸುವಂತೆಯೇ ಅವಳನ್ನುದ್ದೇಶಿಸಿಯೇ ಮಾತಾಡುತ್ತಿದ್ದಳು.

ಈ ಸಲದ ಚಳಿಗಾಲ ಮುಗಿಯುತ್ತ ಬಂದಂತೆ ಚಳಿಯ ತೀವ್ರತೆ ಕಡಿಮೆಯಾಗಿತ್ತು. ರೈತರಿಗೆ ಈಗ ಸಮಯವೇ ಸಿಕ್ಕುವುದಿಲ್ಲ. ಆದರೆ ರಾಜಧಾನಿಯಲ್ಲಿರುವವರಿಗೆ ಚಳಿ ಕಾಸುವುದು ಮತ್ತು ಮನರಂಜನೆಗಳನ್ನ ನೋಡುವುದು ಬಿಟ್ಟರೆ ಬೇರೆ ಕೆಲಸವೇ ಇರುವುದಿಲ್ಲ. ಶಿಖರಸೂರ್ಯನಿಗೆ ಹಗಲು ರಾತ್ರಿ ಕೆಲಸವಾದ್ದರಿಂದ ಹೊರಗಡೆ ಹೋಗಿದ್ದ.

ನಿನ್ನೆಯಷ್ಟೆ ಗೌರಿ ಅಣ್ಣನೊಂದಿಗೆ ರಾಜಧಾನಿಯ ಹೊರಗಡೆ ಹೋಗಿದ್ದಳು. ರೈತಾಪಿ ಜನರಿಗಿದು ಸುಗ್ಗಿಯ ಕಾಲ. ಧಾನ್ಯ ತೂರುವ, ಕೇರುವ, ರಾಶಿ ಮಾಡುವ, ಸುಗ್ಗಿ ಒಕ್ಕುವ, ತರಕಾರಿ ಕಾಳು ಸಂಗ್ರಹಿಸುವ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ್ದಳು. ರೈತಾಪಿ ಹೆಂಗಸರು ಇವಳನ್ನು ನೋಡಿ “ರಾಜಕುಮಾರಿ” ಎಂದು ನಮಸ್ಕರಿಸಿ ಗೌರವ ಸೂಚಿಸಿದ್ದರು. ಅವರನ್ನೂ ಆ ವಾತಾವರಣವನ್ನೂ ನೋಡಿದ್ದೇ ತಡ ಗೌರಿಗೆ ನಿನ್ನಡಿಯ ನೆನಪಾಗಿ ಕಣ್ಣು ತುಂಬ ಬಂತು.

ಅದೇ ನೆನಪಿನಲ್ಲಿ ಮೂರನೇ ದಿನ ಮಧ್ಯಾಹ್ನ ಅಣ್ಣನ ಕೋಣೆಗೆ ಹೋದಳು. ಅವನು ತಾಡೋಲೆ ಗ್ರಂಥವೊಂದನ್ನು ಪರಿಶೀಲಿಸುತ್ತಿದ್ದ. ಕೆಳಗಡೆ ಅಂತಃ ಪುರಕ್ಕೆ ಹೋದಳು. ಛಾಯಾದೇವಿ ಪೀಠದಲ್ಲಿ ಕುಳಿತೇ ತೂಕಡಿಸುತ್ತಿದ್ದಳು, ಅಲ್ಲೇನೂ ವಿಶೇಷ ಕಾಣದೆ ಅರಮನೆಯ ಹಜಾರದಲ್ಲಿ ಅಜ್ಜಿಯ ದನಿ ಕೇಳಿ ಅಲ್ಲಿಗೆ ಬಂದಳು. ಅಲ್ಲಿ ನೋಡಿದರೆ ಅಷ್ಟೂ ದೊಡ್ಡ ಹಜಾರ ತುಂಬಿ ಹೊಸ ಧಾನ್ಯದ ಬೃಹತ್ ರಾಶಿ ಬಿದ್ದಿದೆ! ಚಕಿತಳಾಗಿ ಚಿಕ್ಕಮ್ಮಣ್ಣಿ ಇದ್ಯಾಕೆಂದು ಸೇವಕನನ್ನು ವಿಚಾರಿಸುವಲ್ಲಿಗೆ ಗೌರಿ ಹೋಗಿ ಅಜ್ಜಿಯ ಪಕ್ಕ ಸುಮ್ಮನೆ ನಿಂತಳು. ಸೇವಕ ಬೇರೆ ಕಡೆ ಹೋದ ಮೇಲೆ ಗೌರಿಯ ಬಾಡಿದ್ದ ಮುಖ ನೋಡಿ “ಯಾಕೆ ಕೂಸು ಹಿಂಗಿದ್ದೀಯಾ?” ಎಂದಳು.

“ಅಜ್ಜೀ ನಾನು ಹೋಗವೇಕು.”

“ಎಲ್ಲಿಗೆ ಕಂದಾ?”

“ಶಿವಪುರಕ್ಕೆ.”

ಚಿಕ್ಕಮ್ಮಣ್ಣಿ ಮುಖ ತಿರುಗಿಸಿ ನಿಟ್ಟುಸಿರುಬಿಟ್ಟಳು. ಆಮೇಲೆ ಅಸಹಾಯಕಳಾಗಿ ಇವಳ ಕಡೆಗೆ ನೋಡಿದಳು. ಅಜ್ಜಿಯನ್ನು ನೋಡಿದ್ದೇ ಇವಳ ಕೊರಳ ಸೆರೆ ತುಂಬಿ ಬಂತು.

“ಹಾಗೆಲ್ಲ ನನ್ನನ್ನ ನೋಡಬೇಡ. ನನಗೆ ಅಳು ಬರುತ್ತದೆ.”

ಎಂದುಲಿಯುತ್ತ ಹೊರಗೋಡಿದಳು.

ಹೊರಗಡೆ ಕಾಲಿಡುತ್ತ ದೂರ ನೋಡಿದರೆ ಅರಮನೆಯಂಗಳದಲ್ಲಿ ಚಂಡೀದಾಸ ಬರುತ್ತಿದ್ದಾನೆ! ದೇವರನ್ನು ಕಂಡಂತೆ ಗೌರಿ “ಅಜ್ಜೀ, ತಾತ ಬಂದ!” ಎನ್ನುತ್ತ ಓಡಿಹೋಗಿ ಚಂಡೀದಾಸನನ್ನು ತಬ್ಬಿಕೊಂಡು ಕೈಹಿಡಿದು ಒಳಗೆ ಕರೆತಂದಳು.

ಏನು ಎತ್ತ ಎಲ್ಲಿಂದ ಏನೇನೊ ಕೇಳದೆ ಸೀದಾ ಪಾಠಶಾಲೆಗೆ ಕರೆದೊಯ್ದು ಕಾಲಧೂಳು ಕಳೆಯಲು ನೀರು ಕೊಟ್ಟು ಅದಾಗಿ ಅವನನ್ನು ಎಳೆತಂದು ಕೂರಿಸಿ ಎಲೆ ಹಾಕಿ, ನೀರು ಕೂಡ ತಾನೇ ಚಿಮುಕಿಸಿ ತೊಳೆದು ಪಾಕಶಾಲೆಯಲ್ಲಿ ಏನಿದೆಯೋ ಅದನ್ನು ತಂದು ಬಡಿಸಿ “ಉಣ್ಣು” ಎಂದು ಅವನ ಮುಂದೇ ಕೂತಳು. ಚಂಡೀದಾಸನೋ ಮೊದಲೇ ಗೌರಿ ಎಂದರೆ ಬೆಟ್ಟದಮ್ಮನ ಅವತಾರವೆಂದುಕೊಂಡವನು – ಈಗ ಪ್ರತ್ಯಕ್ಷ ಅನ್ನಪೂರ್ಣೆಯನ್ನೇ ಕಾಣುತ್ತ ಉತ್ಸಾಹದ ಪ್ರೀತಿಯ ಅಂತಃಕರಣದ ಆನಂದದ ಮುದ್ದು ಮುದ್ದಾದ ಮಾತುಗಳನ್ನು ಕೇಳಿ ಆಶ್ರುನಯನನಾಗಿ ಅವಳಿಂದ ಕಣ್ಣು ಕೀಳದೆ ತಿನ್ನುತ್ತಿದ್ದಾಗ ಸೇವಕರು ಸ್ವತಃ ರಾಜಕುಮಾರಿಯೇ ಬಂದುದರಿಂದ ಮುಂದೆ ಬಂದು ಸಹಾಯ ಮಾಡಲಾರದೆ ಸುಮ್ಮನಿರಲೂ ಆಗದೆ ನಿಂತುಕೊಂಡು ಚಡಪಡಿಸುತ್ತ ನೋಡುತ್ತಿರಲು, ಹಸಿದಾಗ ಕೂಸು ತಾಯಿಯ ಕೈಗೆ ತನ್ನ ತಾನು ಅರ್ಪಿಸಿಕೊಂಡು ಉಣ್ಣು ಎಂದೊಡನೆ ಗಬಗಬ ತಿಂದಿ ಎದ್ದ.

ಅಲ್ಲಿಂದ ಅವನನ್ನು ಅಣ್ಣನ ಕೋಣೆಯ ಕಡೆಗೆ ಕರೆದೊಯ್ಯುವಾಗ ಹಜಾರದಲ್ಲಿಯ ಬೃಹತ್ ಧಾನ್ಯ ರಾಶಿಯನ್ನು ಕಂಡಿ ಚಂಡೀದಾಸ ಬೆರಗಾಗಿ ನಿಂತ. ಗೌರಿಗೂ ಅದು ಆಶ್ಚರ್ಯಕರವೇ, ಕೇಳಿದಳು:

“ತಾತಾ, ನಾವು ಅರಮನೆಯಲ್ಲಿದ್ದವರಿಗೆ ವರ್ಷಕ್ಕೆ ಇಷ್ಟೊಂದು ಧಾನ್ಯ ಬೇಕಾ?” ಈಗ ನೀನು ನನಗೆ ಹಾಕಿದಂತೆ ಅವರಿಗೂ ಊಟ ಹಾಕಬೇಕಲ್ಲವ? ಅದಕ್ಕೇ ಇರಬೇಕು, ಆದರೂ ಇದು ಹೆಚ್ಚೇ.”

ಗೌರಿಗೆ ಈ ತರ್ಕ ಖಾತ್ರಿಯಾಗಲಿಲ್ಲ. ಹೇಳಿದವನು ಚಂಡೀದಾಸನಾದ್ದರಿಂದ ಇರಬಹುದೇನೋ ಎಂದುಕೊಂಡು ಸುಮ್ಮನಾದಳು.

ಈಗ ಚಿಕ್ಕಮ್ಮಣ್ಣಿ ತನ್ನ ಕೋಣೆಗೆ ಬಂದು ಚಂಡೀದಾಸನಿಗಾಗಿ ಕಾಯುತ್ತಿದ್ದಳು. ಚಿಕ್ಕಮ್ಮಣ್ಣಿಯ ಅಂತಃ ಪುರವೆಂದರೆ ಸರಳವಾದ ಏನೇನೋ ವೈಭವಗಳಿಲ್ಲದ ಒಂದು ಕೋಣೆ. ಬದಲಾದ ಸಂದರ್ಭದಲ್ಲಿ ಆಕೆ ಹಿಂದಿನ ಮಹಾರಾಣಿ ಇದ್ದಲ್ಲಿ ವಾಸಿಸಬಹುದಾಗಿತ್ತು. ಅಲ್ಲಿಗೆ ಹೋಗದೆ ಮೊದಲು ತಾನಿದ್ದ ಸಣ್ಣ ಕೋಣೆಯಲ್ಲೇ ಈಗಲೂ ಇದ್ದಳು. ಅಷ್ಟರಲ್ಲಿ ಚಂಡೀದಾಸ ಗೌರಿಯೊಂದಿಗೆ ಬಂದ. ನಮಸ್ಕಾರವನ್ನಾಚರಿಗೆ ತೋರಿಸಿದ ಪೀಠದಲ್ಲಿ ಕೂತ. ಎತ್ತರದ ಪೀಠದಲ್ಲಿ ಚಿಕ್ಕಮ್ಮಣ್ಣಿ ಕೂತು ಅವಳ ಹಿಂದೆ ಗೌರಿ ನಿಂತಳು.

ಕೋಣೆ ನಿರಾಡಂಬರವಾಗಿತ್ತು. ವಸ್ತುಗಳು ಕಡಿಮೆಯಿದ್ದುದರಿಂದ ಕೋಣೆ ಇದ್ದುದಕ್ಕಿಂತ ವಿಶಾಲವಾಗಿ ಕಾಣುತ್ತಿತ್ತು. ಪಡುವಣದ ಗೋಡೆಗೆರಡು ದೊಡ್ಡ ಕಿಡಕಿಗಳಿದ್ದು ಅಲಂಕರಿಸಿದ ನಸುಗೆಂಪು ಬಣ್ಣದ ಪರದೆಗಳಿದ್ದವು. ಇನ್ನೂ ಹೆಚ್ಚು ಬೆಳಕು ಬರಲೆಂದು ಪರದೆಗಳನ್ನು ಓರೆ ಮಾಡಿ ಕಟ್ಟಲಾಗಿತ್ತು. ಒಂದು ಬದಿಯಲ್ಲಿ ಮಂಚವಿತ್ತು. ಅದರ ಮೇಲೆ ಗಿಣಿ ಚಿತ್ರವಿರುವ ಬಟ್ಟೆಯನ್ನು ಹಾಸಲಾಗಿತ್ತು. ಅದರ ಪಕ್ಕದ ಗೋಡೆಯ ಮೇಲೆ ಓರಣವಾಗಿ ನಿಲುವುಗನ್ನಡಿಯನ್ನ ತೂಗು ಹಾಕಲಾಗಿತ್ತು. ಅದರ ಎಡ ಬಲ ಬದಿಗಳಲ್ಲಿ ಆಭರಣ ಮತ್ತು ಬಟ್ಟೆಯಿಡುವ ಎರಡು ಮರದ ಪೆಟ್ಟಿಗೆಗಳಿದ್ದವು. ಪಡುವಣ ಬಿಟ್ಟು ಉಳಿದ ಮೂರು ಗೋಡೆಗಳಲ್ಲಿ ಚೌಕಟ್ಟುಳ್ಳ ಎರಡೆರಡು ಮಾಡಗಳಿದ್ದು, ಅವುಗಳಲ್ಲಿ ಹಿತ್ತಾಳೆಯ ದೀಪಗಳನ್ನಿಡಲಾಗಿತ್ತು. ಒಂದು ಮೂಲೆಯಲ್ಲಿ ದೀಪ ಹಿಡಿದ ಹಿತ್ತಾಳೆಯ ದೀಪದ ಮೊಲ್ಲೆ ನಿಂತಿದ್ದಳು. ಮುಗುಳು ನಗುತ್ತ “ಹ್ಯಾಗಿದ್ದೀಯಪ್ಪಾ?” ಎಂದಳು ಚಿಕ್ಕಮ್ಮಣ್ಣಿ.

“ನಿಮ್ಮ ಆಶೀರ್ವಾದ; ಹೀಗಿದ್ದೀನಿ ತಾಯಿ” ಎಂದ ಚಂಡೀದಾಸ ವಿನಯದಿಂದ. ಚಿಕ್ಕಮ್ಮಣ್ಣಿ ಆಗಲೇ ತಾಳ್ಮೆಗೆಟ್ಟಿದ್ದಳು. “ಮುದ್ದೂ, ನೀನು ಅಣ್ಣನನ್ನು ಕರೆದು ತಾ” ಎಂದು ಹೇಳಿ ಗೌರಿ ಹೊರಗಡೆ ಹೋಗುವತನಕ ಕಾಯ್ದು ಆಮೇಲೆ – ಮೆಲ್ಲಗೆ ಕೇಳಿದಳು:

“ನಿನ್ನಡಿಯ ಬಗ್ಗೆ ಶಿವಪಾದನಲ್ಲಿ ವಿಚಾರಿಸಿದೆನೇನಪ್ಪಾ?”

ಉತ್ಸುಕತೆ, ಕಾತರತೆಗಳಿಂದ ಕಾಯುತ್ತಿದ್ದಳೆಂದು ಅವಳ ಮಾತಿ ಧಾಟಿಯಲ್ಲೇ ವ್ಯಕ್ತವಾಗುತ್ತಿತ್ತು. ಇವನೂ ಚುರುಕಾಗಿ – ಸಮಾಧಾನ ಮಾಡುವ ದನಿಯಲ್ಲಿ –

“ಹೌದು ತಾಯಿ, ನಿಮ್ಮ ನಂಬಿಕೆಯೇ ನಿಜವಾಗಿದೆ.”

“ಅಂದರೆ …. ಅವನು ನನ್ನ ಮಗ ತರುಣಚಂದ್ರನೇ?”

“ಹೌದು ತಾಯೀ ಹೌದು.”

ತಕ್ಷಣ ಚಿಕ್ಕಮ್ಮಣ್ಣಿ ಎದ್ದು ಒಂದು ಹೆಜ್ಜೆ ಮುಂದೆ ಬಂದು ಚಂಡೀದಾಸನ ಬಲಗೈ ಹಿಡಿದು

“ನಿಜವೇ ನನ್ನಪ್ಪಾ?”

– ಎಂದು ಕೂಡಲೇ “ಇದನ್ನೇ ನಿಜವೆಂದು ದಯಮಾಡಿ ಹೇಳೆಂಬಂತೆ ಅಂಗಲಾಚಿದಳು. ತಾಯ ಹಂಬಲನೋಡಿ ಕೊರಳಸೆರೆ ತುಂಬಿ ಇವನೂ ಎದ್ದುನಿಂತು “ತಾಯಿಯೊಂದಿಗೆ ಆಟ ಆಡಲುಂಟೆ ಮಹಾರಾಣಿ? ಅಕ್ಷರಶಃ ನಿಜ, ಈ ಬಗ್ಗೆ ತಾವು ಸಮಾಧಾನದಿಂದ ಕೂತತೆ ಶಿವಪಾದ ಹೇಳಿದ್ದೆಲ್ಲವನ್ನು ಒಪ್ಪಿಸುತ್ತೇನೆ” ಎಂದ. ಚಿಕ್ಕಮ್ಮಣ್ಣಿಗೆ ತಾನು ಎದ್ದು ನಿಂತದ್ದು ಅಸಹಜವೆನ್ನಿಸಿ ಮತ್ತೆ ಪೀಠದಲ್ಲಿ ಕೂತು “ಹೇಳು ನನ್ನಪ್ಪಾ, ಶಿವಪಾದ ಏನು ಹೇಳಿದರು?”

“ನಿನ್ನಡಿ ಸುಮಾರು ಒಂದು ವರುಷದವನಾಗಿದ್ದಾಗ ಒಬ್ಬ ಕಾಡುಮುದುಕಿ ಬಂದು, ಮಗುವನ್ನ ಶಿವಪಾದನ ಪಾದದಲ್ಲಿಟ್ಟು “ಅನಾಥ ಶಿಶು ಕಾಡಿನಲ್ಲಿ ಸಿಕ್ಕಿತು, ಕಾಪಾಡಿರೆಂದು” ಒಪ್ಪಿಸಿ ಹೋದಳಂತೆ. ಇವನೂ ಒಪ್ಪಿಕೊಂಡ. ಆಮೇಲೆ ಮಗು ಅಮ್ಮನನ್ನು ಜ್ಞಾಪಿಸಿಕೊಂಡು ಅಳತೊಡಗಿದ. “ಅಲ್ಲವೆ? ಅಲ್ಲವೆ?” ಎಂದು ಚಿಕ್ಕಮ್ಮಣ್ಣಿ ಅಳುತ್ತ ಕಣ್ಣೀರು ಸುರಿಸುತ್ತ “ಮುಂದೆ?” ಅಂದಳು. ಕಾಡು ಮುದುಕಿಯನ್ನ ಪುನಃ ಕರೆಸಿ ಕೇಳಿದಾಗ, “ಕೊಲೆ ಮಾಡಲಿಕ್ಕೆಂದು ತಂದ ಕೂಸು ಸ್ವಾಮಿ. ಈತ ಕನಕಪುರಿಯ ರಾಜಕುಮಾರ, ಸವತಿ ಮತ್ಸರದಲ್ಲಿ ಇನ್ನೊಬ್ಬ ರಾಣಿಯ ಅಸೂಯೆಗೆ ಗುರಿಯಾಗಿ ಮಗುವಿಗೆ ಈ ಗತಿ ಬಂದಿದೆ. ನೀವೇನಾದರೂ ದಯಾಮಯ ಅಂತ ವಾಪಸ್ಸು ಕೊಟ್ಟರೆ – ನನ್ನ ಬುಡಕಟ್ಟೂ ನಾಶವಾಗುತ್ತದೆ, ಮಗುವೂ ಸಾಯುತ್ತದೆ. ಇನ್ನು ನಿಮ್ಮಷ್ಟ. ಕಾಪಾಡುವುದೇ ಆದರೆ ಗುಟ್ಟು ರಟ್ಟಾಗದಂತೆ ಕಾಪಾಡಬೇಕು.” ಎಂದು ಹೇಳಿ ಹೋದಳು. ಮಗುವಿನ ಮುಖ ನೋಡಿಯೇ ನನ್ನ ಗುರುವಿಗೆ ಇವನು ಮುಂದೆ ಕನಕಪುರಿಯ ರಾಜನಾಗಬೇಕಾದವನು ಎಂದು ಗೊತ್ತಾಗಿ ಬೆಳ್ಳಿಗೆ ಕಾಪಾಡು ಎಂದು ಕೊಟ್ಟ. “ಅವನೇ ಈಗ ಇಷ್ಟು ದೊಡ್ಡವನಾಗಿದ್ದಾನೆ” ಎಂದು ಹೇಳಿದ. ಚಿಕ್ಕಮ್ಮಣ್ಣಿಯ ಮುಖವಾಗಲೇ ಕೆಂಪಗಾಗಿ ಮೂಗು ಅಸಹಜವೆಂಬಷ್ಟು ಉಬ್ಬಿ ಸದ್ದು ಮಾಡುತ್ತ ಉಸಿರಾಡುತ್ತಿದ್ದಳು. ವೈದ್ಯನಾದ ಇವನು ಅತಿಯಾದ ಹರ್ಷದಿಂದ ಹೀಗಾಗಿದೆಯೆಂದು ಅಂದುಕೊಳ್ಳುವಷ್ಟರಲ್ಲಿ ಮೂರ್ಛಾಗತಳಾಗಿ ನೆಲಕ್ಕುರುಳಿದಳು. ಚಂಡೀದಾಸ “ಯಾರಲ್ಲಿ, ಒಳಗೆ ಬನ್ನಿ” ಎಂದು ಜೋರಿನಿಂದ ಕೂಗಿದ. ಸೇವಕಿಯರು ಬಂದು ಚಿಕ್ಕಮ್ಮಣ್ಣಿಯನ್ನು ಮೆಲ್ಲಗೆ ಎತ್ತಿ ಮಂಚದ ಮೇಲೊರಗಿಸಿ ಗಾಳಿ ಬೀಸತೊಡಗಿದರು. ಅಷ್ಟರಲ್ಲಿ ಗೌರಿ ರವಿಕೀರ್ತಿಯರೂ ಬಂದು, ಸಹಾಯ ಮಾಡಿದರು. ಚಂಡೀದಾಸ ನಾಡೀ ನೋಡಿ ದಯಮಾಡಿ ವಿಶ್ರಾಂತಿ ತಗೊಳ್ಳಲಿ -” ಎಂದು ಸೇವಕಿಯರಿಗೆ ಅಲ್ಲೇ ಇದ್ದು ಕಾಲೊತ್ತಲು ಬಿಟ್ಟು ಉಳಿದವರನ್ನು ಹೊರಗೆ ಕರೆತಂದ.

ಮೂವರು ರವಿಯ ಕೋಣೆಗೆ ಹೋದರು. ಅವರ ದುರ್ದೈವಕ್ಕೆ ಮಹಾಪ್ರಭುಗಳು – ಅಂದರೆ ಶಿಖರಸೂರ್ಯ ಬರುತ್ತಿರುವ ಸುದ್ದಿ ಬಂದು. ಈಗ ಅವಸರದಿಂದ ಇಬ್ಬರೂ ತಂತಮ್ಮ ಸಮಸ್ಯೆಗಳನ್ನು ಹೇಳಿ ತಮ್ಮ ಪರವಾಗಿ ತಂದೆಯಲ್ಲಿ ರಾಯಭಾರ ಮಾಡಬೇಕೆಂದು ಬೇಡಿಕೊಂಡರು.

ಚಂಡೀದಾಸನಿಗೆ ವಾಸಂತಿ ರವಿಕೀರ್ತಿಯವರ ವಿಚಾರ ಗೊತ್ತಿತ್ತು. ಈ ಸಲ ಕಂಚಿಯ ಕಡೆಗೆ ಹೋದಾವ ವಿಶ್ವರೂಪಾಚಾರ್ಯ ಭೇಟಿಯಾಗಿ ವಿಷಯ ತಿಳಿಸಿದ್ದ. ರವಿಕೀರ್ತಿ ಚಂಡೀದಾಸನ ಕೈ ಹಿಡಿದುಕೊಂಡು “ನೀವು ನನ್ನ ಸಹಾಯಕ್ಕೆ ಬರಲೇಬೇಕು. ವಾಸಂತಿಯ ಬಗ್ಗೆ ಹೇಳಿ, ನಾನು ಬೇರೆ ಯಾರನ್ನೂ ಪ್ರೀತಿಸಿಲ್ಲ. ಪ್ರೀತಿಸುವುದು ಸಾಧ್ಯವೂ ಇಲ್ಲ. ನಿಮ್ಮ ಬಗ್ಗೆ ಅಪ್ಪನಲ್ಲಿ ತುಂಬ ಪ್ರೀತಿ ಇದೆ. ಸಮಯ ಸಂದರ್ಭ ನೋಡಿಕೊಂಡು ಈ ಮದುವೆಗಾಗಿ ಕಾಯುತ್ತಿದ್ದೇನೆಂದು ನೀವು ಅಪ್ಪನಿಗೆ ತಿಳಿಸಬೇಕು” ಎಂದು ಕೇಳಿಕೊಂಡ. ಚಂಡೀದಾಷನಿಗೆ ರವಿ ಈ ವಿಷಯದಲ್ಲಿ ಬಹಳ ಆಳಕ್ಕಿಳಿದಿರುವ ವಿಚಾರ ಖಾತ್ರಿಯಾಗಿ ಸ್ತಬ್ಧನಾಗಿದ್ದ.

ಚಂಡೀದಾನ ಬರಲು ಹೇಳಿ ಕಳಿಸಿ ಶಿಖರಸೂರ್ಯನೊಬ್ಬನೇ ತನ್ನ ವಿಶಾಲವಾದ ಕೋಣೆಯಲ್ಲಿ ಕಾಯುತ್ತಿದ್ದ. ಅಷ್ಟರಲ್ಲಾಗಲೇ ಚಂಡೀದಾಸ ಬಾಗಿಲಿಗೆ ಬಂದಿದ್ದ. ಚಕ್ರವರ್ತಿಯ ಕೋಣೆಯ ವೈಭವವನ್ನ ಕಣ್ಣಗಲಿಸಿ ನೋಡುತ್ತ, ಮುಖದಲ್ಲಿ ಆನಂದಾಶ್ಚರ್ಯಗಳನ್ನ ಮುಕ್ಕಳಿಸುತ್ತ ಒಳಗೆ ಬಂದ. ಶ್ರೀಮಂತ ಪೀಠಗಳನ್ನುಳ್ಳ ಅತಿಥಿಗಳ ಕೋಣೆಯನ್ನ ದಾಟಿ, ಅದಕ್ಕಿಂತ ದೊಡ್ಡದಾದ ಇನ್ನಷ್ಟು ಶ್ರೀಮಂತ ಪೀಠೋಪಕರಣಗಳು, ಗೆದ್ದು ತಂದ ಬೆಲೆಯುಳ್ಳ ಕಲಾಕೃತಿಗಳಿದ್ದ ಅಭಾಗ್ಯತರ ಕೋಣೆಯಲ್ಲಿ ಹಾದು, ಇಂದ್ರನ ಚಿಕ್ಕ ಸದನದಂಥ ಕೋಣೆಗೆ ಬಂದ.

ಉನ್ನತ ವೈಭವದ, ಕಲ್ಪನೆಗೆ ಮೀರಿದ ಸುಂದರ ಕಲಾಕೃತಿಗಳಿದ್ದ ವಿಶಾಲವಾದ ಕೋಣೆಯನ್ನ ನೋಡಿ ದಿಗಿಲುಗೊಂಡು ಕಣ್ಣಗಲಿಸಿಕೊಂಡು ಚಂಡೀದಾನ ನಿಂತ. ಇವನ ದಿಗಿಲನ್ನು ಆನಂದಿಸುತ್ತ ಶಿಖರಸೂರ್ಯ ನಿಂತ. ಮೂಡಣ ಪಡುವಣ ಗೋಡೆಗಳಲ್ಲಿ ಎರಡೆರಡು ದೊಡ್ಡ ಕಿಡಿಕಿಗಳಿದ್ದು ಒಂದರಾಚೆ ಹೂ ಬಿಟ್ಟ ಗಿಡಮರಗಳೂ ಇನ್ನೊಂದರಾಚೆ ನೇತ್ರಾವತಿ ನದಿಯ ಸುಂದರ ದೃಶ್ಯಗಳೂ ಕಾಣುತ್ತಿದ್ದವು. ಎಲ್ಲ ಕಿಡಿಕಿಗಳಿಗೂ ನಸುಗೆಂಪು ಬಟ್ಟೆಯ ಪರದೆಗಳಿದ್ದು ಅವುಗಳಲ್ಲಿ ಹಸಿರು ಬಳ್ಳಿ, ಅದರ ತುಂಬ ಗಿಣಿ ಮುತ್ತಿಕೊಂಡ ಚಿತ್ರಗಳನ್ನು ಬಿಡಿಸಲಾಗಿತ್ತು. ಮರದ ಪೀಠಗಳಿಗೆ ಹೊಳೆಯುವ ಚಿನ್ನದ ಕಟ್ಟು ಕೂಡಸಲಾಗಿತ್ತು. ಚಕ್ರವರ್ತಿಯ ವಿಶೇಷ ಪೀಠ ತಕ್ಕಡಿ ಹಿಡಿದ ಗರುಡನ ಮೇಲೆ ರಾಜ ಕೂರುವ ಹಾಗೆ ಇತ್ತು. ಗರುಡನ ಕಣ್ಣುಗಳಲ್ಲಿ ನವರತ್ನಗಳನ್ನು ಕೂರಿಸಲಾಗಿದ್ದು ಬಂದವರು ಎಲ್ಲಿ ನಿಂತರೂ ಗರುಡ ನೇರವಾಗಿ ಅವರನ್ನೇ ನೋಡಿದಂತೆ ಕಾಣುತ್ತಿತ್ತು.

ಚಂಡೀದಾಸ ಬಂದೊಡನೆ ಅವನನ್ನು ಎದುರಿನ ಸಣ್ಣ ಪೀಠದಲ್ಲಿ ಕೂರಿಸಿ ಶಿಖರಸೂರ್ಯ ಯೋಚಿಸಿದ. ಹೊಲಸು, ತಲೆಗೂದಲು, ಅಸಡ್ಡಾಳ ಬಟ್ಟೆ ಬರೆಯ ಭಿಕ್ಷುಕ ನಂತಿದ್ದ ಇಂಥವನನ್ನ ಆಪ್ತವಲಯದಲ್ಲಿ ಕೂರಿಸಿಕೊಂಡು ಸೇವಕರೆದುರು ಮಾತಾಡುವುದೆ? ಅಲ್ಲದೆ ಈತ ಅರಮನೆಯ ಶಿಷ್ಟಾಚಾರಗಳನ್ನು ಲೆಕ್ಕಸದವನು. ಹಗುರು ಬಾಯವನು – ಎಂದು ಸಂಕೋಚಗೊಂಡು ಸೇವಕರನ್ನು ಕರೆದು

“ನಾನು ಹೇಳುವತನಕ ಹೊರಗೇ ನಿಂತಿರಿ. ಒಳಗೆ ಯಾರನ್ನೂ ಬಿಡಕೂಡದು” ಎಂದು ತಾಕೀತು ಮಾಡಿ ಸೇವಕರನ್ನು ಹೊರಗಟ್ಟಿ ಶಿಖರಸೂರ್ಯ ಬಂದು ಪೀಠದಲ್ಲಿ ಕೂತು,

“ಈಗ ಹೇಳು, ನಿನ್ನ ಜ್ಯೋತಿಷ್ಯ ಏನು ಹೇಳುತ್ತದೆ” ಎಂದು ನಗಾಡಿದ. ಶಿಖರಸೂರ್ಯನ ಗ್ರಹಗತಿಯಲ್ಲಾದ ಬದಲಾವಣೆಯ ಬಗ್ಗೆ ಚಂಡೀದಾಸ ದಿಗಿಲುಗೊಂಡಿದ್ದ.

“ನೀನು ಏನೇ ಹೇಳು, ಇದೆಲ್ಲ ನಾನು ಊಹಿಸಿದ್ದ ಹಾಗೇ ಆಗಿದೆ. ಕೇಳಿದ್ದರೆ ಮೊದಲೇ ಹೇಳಿರುತ್ತಿದ್ದೆ. ಆದರೆ ಈ ಶಾಸ್ತ್ರದಲ್ಲಿ ನಿನಗೆ ನಂಬಿಕೆ ಇಲ್ಲವಾದ್ದರಿಂದ ಹೇಳಲಿಲ್ಲ”.

“ನೀನು ಬಿಡು, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಪೈಕಿ.”

– ಎಂದು ಶಿಖರಸೂರ್ಯ ನಕ್ಕ. ಇವನೂ ನಕ್ಕ. ಆದರೆ ಶಿಖರಸೂರ್ಯನ ಸಾಧನೆಯ ಬಗ್ಗೆ ಅಪಾರ ಮಚ್ಚುಗೆಯಿತ್ತು.

“ನಿನ್ನ ಸಂಕಲ್ಪ, ಸಾಧನೆಗಳ ಮುಂದೆ ನಾವೆಲ್ಲ ತಲೆ ಬಾಗಲೇಬೇಕು. ಮಾರಾಯಾ”

“ಹೇಳು ನಿನ್ನ ಶಿವಪಾದ ಏನಂತಾನೆ ಇದಕ್ಕೆ?”

“ಈ ಮಧ್ಯೆ ಅವನ್ಯಾಕೆ ಬರಬೇಕು? ಬಿಡು ಬಿಡು. ನೀನು ಚಕ್ರವರ್ತಿಯಾದರೆ ಅವನಿಗೆ ಹೊಟ್ಟೆಕಿಚ್ಚಿಲ್ಲವಲ್ಲ. ಸುದ್ದಿ ತಿಳಿದರೆ ಅವನೂ ಹೃತ್ಫೂರ್ವಕ ಸಂತೋಷಪಟ್ಟಾನು.”

“ಹಾಗಾದರೆ ಪಟ್ಟಾಭಿಷೇಕದ ಕಾಲಕ್ಕೆ ಗದ್ದಿಗೆಯಿಂದ ಆಶೀರ್ವಾದವನ್ನಾದರೂ ಕಳಿಸಬಹುದಿತ್ತಲ್ಲ?”

“ಆಮಂತ್ರಣ ಕಳಿಸಿದ್ದೆಯಾ?”

“ಅವನ ಮಠದಲ್ಲಿ ಓದಿದ ಶಿಷ್ಯನಲ್ಲವೆ ನಾನು? ಪ್ರತ್ಯೇಕ ಆಮಂತ್ರಣ ಬೇಕೆ?”

– ಎಂದು ಮೊಂಡು ಹಟ ಮಾಡಿ ಹೇಳಿದ ಸೂರ್ಯ.

“ಹುಡುಗಾಟ ಆಡಬೇಸ. ಕಲ್ಲು ಮಣ್ಣಿನ ದೇವರಿಗೆಲ್ಲಾ ಆಮಂತ್ರಣ ಕಳಿಸಿದವನು ಶಿವಪಾದನಿಗೆ ಕಳಿಸದಿದ್ದರೆ ಹ್ಯಾಗಯ್ಯಾ? ಕಳಿಸಿದ್ದರೆ ಖಂಡಿತ ಬಂದಿರೋನು.”

ಕೊನೆಗೆ ಶಿಖರಸೂರ್ಯನೇ ಸಮಾಧಾನ ಮಾಡುತ್ತ ಹೇಳಿದ:

“ಆತ ಇಲ್ಲಿಗೆ ಬರುವುದು ನನಗೆ ಬೇಕಿರಲಿಲ್ಲ.”

“ಹಾಗಿದ್ದರೆ ಅವನ್ಯಾಕಿ ಈ ಕಡೆ ಸುಳಿದಾನು?”

“ಹೇಳು ಯಾವಾಗ ಬಂದೆ? ಎಲ್ಲಿಂದ ಬಂದೆ? ನೀನಿರೋ ಸ್ಥಳ ಗೊತ್ತಾಗಿದ್ದರೆ ಆಮಂತ್ರಣ ಕಳಿಸುತ್ತಿದ್ದೆ. ನೀನೋ ಅವಧೂತ.”

ಇಷ್ಟು ಹೇಳಿದ್ದೇ ಆಯ್ತು. ಈತನಕ ಅದು ಮಿಟ್ಟ ತನ್ನ ಸಂತೋಷ ಅಭಿಮಾನಗಳನ್ನೆಲ್ಲ ಹೊರಚೆಲ್ಲುತ್ತ ಎರಡು ಹಸ್ತಗಳನ್ನ ಚಾಚಿ ಹೇಳಿದ:

“ಆಮಂತ್ರಣವಿಲ್ಲದಿದ್ದರೂ ಬಂದು ನಿನ್ನ ಪಟ್ಟಾಭಿಷೇಕವನ್ನ ಕಣ್ಣಾರೆ ಕಂಡು ಸಂತೋಷಪಟ್ಟೆನಯ್ಯಾ. ದಯಮಾಡಿ ಕೋ ಮಾಡಿಕೋಬೇಡ: ವಿದ್ಯುಲ್ಲತೆಯನ್ನೂ ನಾನೇ ಕರೆತಂದಿದ್ದೆ….”

ತಕ್ಷಣ ಶಿಖರಸೂರ್ಯನ ಮುಖ ಕಪ್ಪಾಗಿ ಕಿವಿಗೂದಲು ನಿಮಿರಿದವು. ಇದು ಗೊತ್ತಾಗಿ ಅಷ್ಟೇ ವೇಗವಾಗಿ ಚಂಡೀದಾಸ ಮತ್ತೆ ಹೇಳಿದ:

“ನಿನ್ನ ವೈಭವವನ್ನು ನೋಡಲೇಬೇಕೆಂದು ಮಕ್ಕಳ ಹಾಗೆ ಹಟ ಮಾಡಿದಳಪ್ಪ. ದೂರದಿಂದಲೇ ನೋಡಿ ಆನಂದದ ಕಣ್ಣೀರು ಸುರಿಸಿ ನಲಿದಾಡಿದಳು. !”

“ಮಹಾರಾಣಿಯಿಂದೇನಾದರೂ ಬಿರುಮಾತು ಬಂದುವ?

“ಆಕೆ ಯಾರ ಕಣ್ಣಗೂ ಬೀಳಲಿಲ್ಲ ಮಾರಾಯಾ. ಬಂಡೆಯ ಪಟ್ಟಾಭಿಷೇಕದ ವೈಭವ ಸಡಗರ ತೋರಿಸಿ ವಾಪಸ್ಸು ಕಳಿಸಿದ.”

ಸೂರ್ಯನ ಮುಖ ಈಗ ಹಗುರಾಗಿ ಮೊದಲಿನ ಬಣ್ಣ ಬಂತು. ಮತ್ತೆ ಚಂಡೀದಾಸನೇ ಮುಂದುವರಿಸಿದ:

“…. ನಿನ್ನ ಮಕ್ಕಳು ರವಿಕೀರ್ತಿ, ಗೌರಿ – ಮಕ್ಕಳನ್ನು ನೋಡಿ ಎಷ್ಟು ದೊಡ್ಡವರಾಗಿದ್ದಾರೆಂದು ಪರಮಾನಂದಗೊಂಡಳು. ಗೌರಿಯ ಸೌಭಾಗ್ಯದ ವಿಷಯ ಕೇಳಿಯಂತೂ…. ?

ಎಂದು ಹೇಳಿ ಮುಂದಿನದನ್ನು ಹೇಳಲು ಅವಸರ ಮಾಡಬಾರದೆಂದು ತಡೆದು ಪ್ರತಿಕ್ರೀಯೆ ತಿಳಿಯಲು ಮುಖ ನೋಡಿದ.

“ಗೌರಿಯ ಸೌಭಾಗ್ಯವೆಂಥದಯ್ಯಾ? ಮಾತು ನುಂಗಬೇಡ. ಅದೇನು ಹೇಳು.”

“ನೀನಿಲ್ಲದಾಗ ನಿನ್ನಡಿ ಬಿಳಿಗರಿಗೆ ಬಂದ ಸಮಾಚಾರ ಗೊತ್ತಿಲ್ಲವೆ?”

“ಗೊತ್ತು. ಇನ್ನೊಮ್ಮೆ ವಿವರವಾಗಿ ಹೇಳು.”

– ಎಂದು ಆಶ್ಚರ್ಯ ನಟಿಸುತ್ತ ಕೇಳಿದ.,

ನಿನ್ನಡಿ ಕನ್ಯಾರ್ಥಿಯಾಗಿ ಹೊರಟದ್ದು, ತನ್ನ ವಿನಂತಿಯಿಂದಾಗಿ ಬಿಳಿಗಿರಿಗೂ ಬಂದದ್ದು, ಕನ್ಯೆಯ ಆಯ್ಕೆಗೆ ಶಿವಪಾದ ನಿಗದಿಪಡಿಸಿದ ಪರೀಕ್ಷೆ, ನಿನ್ನಡಿಯನ್ನೇ ತಬ್ಬಿಬ್ಬುಗೊಳಿಸಿದ ಗೌರಿಯ ಉತ್ತರಗಳನ್ನು ಹೇಳುವ ಹೊತ್ತಿವೆ ಸೂರ್ಯನ ಮುಖ ಕಪ್ಪಾಗಿ, ಕಿವಿಯ ಕೂದಲು ನಿಮಿರಿ ನಿಂತಿದ್ದವು. ಅಹಿತಕರ ಸುದ್ದಿ ಕಿವಿಯ ಮೇಲೆ ಬಿದ್ದಂತೆ ಮುಖ ಸಿಂಡರಿಸಿಕೊಂಡಿದ್ದ. ಚಂಡೀದಾನ ಮಾತನ್ನು ಇನ್ನಷ್ಟು ಮೃದುಗೊಳಿಸಿ ಸೌಜನ್ಯದಿಂದಲೇ ಹೇಳಿದ:

“ಆಗಬಾರಗದ್ದೇನೂ ಆಗಿಲ್ಲ ಮಿತ್ರಾ…. ಮನೆಯಲ್ಲಿ ಕನ್ಯೆ ಇದ್ದಾಗ ಕನ್ಯಾರ್ಥಿಯಾಗಿ ಬಂದವರಿಗೆ ತೋರಿಸಬೇಕಾದ್ದು ಪದ್ಧತಿ, ಅಲ್ಲವೊ? ಇಷ್ಟಾಗಿ ನಿನ್ನಡಿಯಾಗಲಿ, ಶಿವಪಾದನಾಗಲಿ ನಿನಗೆ ಅಪರಿಚಿತರಲ್ಲ. ಅಲ್ಲದೆ ಶಿವಪಾದನ ತಿಳುವಳಿಕೆಯಿಂದ ಇದೆಲ್ಲ ನಡೆಯಲಿಲ್ಲ. ಗೌರಿಯನ್ನು ತೋರಿಸಲು ನಾನೇ ಮುಂದಾಗಿ ಮನಸ್ಸು ಮಾಡಿದ್ದು. ಅದೇ ತಪ್ಪೆಂದಾದರೆ ನಾನು ಕ್ಷಮೆ ಕೋರುತ್ತೇನೆ”.

ಈಗ ಸೂರ್ಯ ಸ್ವಲ್ಪ ತಣ್ಣಗಾದ.

“ನೀನು ಮಾಡಿದ್ದು ತಪ್ಪು ಅಂತಲ್ಲ, ಮನೆಯಲ್ಲಿ ಹಿರಿಯರು ಅಂತ ಇರುತ್ತಾರಲ್ಲ. ಚಿಕ್ಕವರು ದೊಡ್ಡವರು ಹಾಕಿದ ಗೆರೆ ಮೀರಬಾರದಲ್ಲ! ಮುಂದೆ ಏನಾದರೂ ತಪ್ಪು ಎಡವಟ್ಟುಗಳಾದರೆ ಯಾರು ಜವಾಬ್ದಾರಿ?”

ಅವನ ಮಾತಿನಲ್ಲಿನ್ನೂ ಒಗರಿತ್ತು. ಜಗಳಗಂಟುತನಕ ಸಿಡುಕಿತ್ತು.

“ಇದ್ಯಾವುದೂ ಕದ್ದು ಮುಚ್ಚಿ ನಡೆದದ್ದಲ್ಲ ಮಾರಾಯ, ಚಿಕ್ಕಮ್ಮಣ್ಣಿಯ ನೇತೃತ್ವದಲ್ಲೇ ನಡೆದದ್ದು. ಈಗ ಹೇಳಪ್ಪ – ತಪ್ಪು, ಎಡವಟ್ಟುಗಳೇನಿವೆ ಇದರಲ್ಲಿ?”

ಸೂರ್ಯ ಹಿಂದಕ್ಕೆ ಕೈ ಕಟ್ಟಿಕೊಂಡು, ಹುಬ್ಬು ಗಂಟಿಕ್ಕಿ, ಕಣ್ಣುಗಳನ್ನು ಕಿರಿದುಗೊಳಿಸಿ ಮೂಲೆಯಿಂದ ಮೂಲೆಗೆ ಹೆಜ್ಜೆ ಹಾಕುತ್ತ ಆಲೋಚಿಸಿ,

“ಆಯಿತಲ್ಲ; ಇನ್ನಿದನ್ನ ಮರೆತುಬಿಡು.”

ಎಂದು ಹೇಳಿ ಎರಡೂ ಕೈ ಹಸ್ತದಲ್ಲಿ ಹಸ್ತ ಸೇರಿಸಿ ಅದರ ಮೇಲೆ ಗದ್ದ ಊರಿ ಕೂತ. ಚಂಡೀದಾಸನಿಗೆ ನಿರಾಸೆಯಾಯಿತು.

“ಮರೆತುಬಿಡು ಅಂದರೆ? ಗೌರಿ ಮತ್ತು ನಿನ್ನಡಿ ಪರಸ್ಪರ ಒಪ್ಪಿದ್ದಾರಲ್ಲ? ಅದಕ್ಕೇನು ಹೇಳುತ್ತಿ?”

“ಅವರು ಒಪ್ಪಿಕೊಂಡಾಗಲೇ ಮದುವೆ ಆಗಿ ಹೋಗಿದ್ದರೆ ಏನಾಗುತ್ತಿತ್ತೋ ನಮಗೆ ಗೊತ್ತಿಲ್ಲ. ಸಧ್ಯ, ಮದುವೆ ಆಗಿಲ್ಲ. ಇನ್ನು ಮೇಲೆ ಆಗುವಂತಿಲ್ಲ. ಅದಕ್ಕೇ ಹೇಳಿದೆ; ಅಲ್ಲಿಗದನ್ನ ಮರೆತುಬಿಡು ಅಂತ, ”

ಗೌರಿಯ ಭಾವನೆಗಳನ್ನು ತಿಳಿಹೇಳಲಿಕ್ಕೆ, ಅವಳ ಪರವಾಗಿ ವಾದ ಮಾಡಲಿಕ್ಕೆ ಚಂಡೀದಾಸ ಇನ್ನೂ ಸಿದ್ಧನಿದ್ದ. ನಿನ್ನಡಿ ಆಗಲೇ ಗೌರಿಯನ್ನು ತಮ್ಮ ಮದುವೆ ಪದ್ಧತಿಯಂತೆ ಕಾಡಿಗೆ ಕರೆದುಕೊಂಡು ಹೋದದ್ದನ್ನು ಹೇಳಬೇಕೆಂದಿದ್ದ. ಆದರೆ ಶಿಖರಸೂರ್ಯನ ಕಡ್ಡೀ ಮುರಿದು ತುಂಡು ಮಾಡಿದಂಥ ನಿಷ್ಠುರ ಮಾತುಗಳನ್ನ ಎದುರಿಸಲು ಸಿದ್ಧನಿರಲಿಲ್ಲ. ಗೌರಿಗೆ ನಿನ್ನಡಿಗಿಂತ ಉತ್ತಮ ವರ ಪ್ರಪಂಚದಲ್ಲೇ ಇಲ್ಲವೆಂದು ಒತ್ತುಕೊಟ್ಟು ಹೇಳಿದ. ಶಿಖರಸೂರ್ಯ ಇನ್ನೊಮ್ಮೆ ಇನ್ನಷ್ಟು ದೃಢವಾಗಿ ಹೇಳಿದ: “ಆಗೋದಿಲ್ಲ” ಎಂದು.

“ಯಾಕೆ ಅಂತ ಕೇಳಬೌದೋ?

“ಯಾಕೆಂದರೆ ಕೇಳು: ನಾವು ಒಂದು ಕಡಿಮೆ ಇಪ್ಪತ್ತು ರಾಜ್ಯಗಳ ಚಕ್ರವರ್ತಿಗಳು, ಅವನು ಒಂದು ಬುಡಕಟ್ಟಿನ ಹದಿನಾಲ್ಕು ಒಡೆಯ, ಗೌರಿ ಈಗ ಚಕ್ರವರ್ತಿಯ ಮಗಳು; ರಾಜಕುಮಾರಿಯ ನೆಂಟಸ್ತಿಕೆ ಸಮಾನರಲ್ಲಿರಬೇಕು. ಇಂತಿರುವಲ್ಲಿ ಬೆಟ್ಟ ಮತ್ತು ದಿನ್ನೆಗಳ ಮಧ್ಯೆ ನೆಂಟಸ್ತಿಕೆ ಸರಿಯಲ್ಲ. ನಿನಗಿಷ್ಟೂ ಅರ್ಥವಾಗುವುದಿಲ್ಲವೆ ವೈದ್ಯನೆ?”

ಶಿಖರಸೂರ್ಯನ ಈ ಹೊಸ ಮುಖದ ದರ್ಶನ ಅವನಿಗಾಗಿರಲಿಲ್ಲ. ಅಪರಿಚಿತನ ಜೊತೆ ಸಲಿಗೆಯಿಂದ ಮಾತಾಡಿ ಮುಖಭಂಗವಾದಂತೆ ಮುಖ ಸಣ್ಣದು ಮಾಡಿದ. ಅರ್ಧ ತನ್ನ ಬಗ್ಗೆ ಇನ್ನರ್ಧ ಶಿಖರಸೂರ್ಯನ ಬಗೆಗಿನ ಕೋಪದಿಂದ ಕೇಳಿದ:

“ಅಂದರೆ ನಾನೀಗ ಮಾತಾಡ್ತಿರೋದು ಮಹಾಪ್ರಭುಗಳ ಜೊತೆಗೆ, ಸ್ನೇಹಿತನ ಜೊತೆಗಲ್ಲ ಎಂದು ನಿನ್ನ ಮಾಥಿನ ಇಂಗಿತವೂ?”

“ನೀನು ನಿನ್ನ ಹಾಗೂ ನನ್ನ ಸ್ಥಾನಮಾನಗಳನ್ನು ಸರಿಯಾಗಿ ತಿಳಿದುಕೊಳ್ಳುವುದಾದಲ್ಲಿ ಖಂಡಿತ ಹೌದು.”

ಇಬ್ಬರೂ ಪರಸ್ಪರ ಎದುರುಬದುರು ಬಂದು ನೇರ ದೃಷ್ಟಿಗಳ ಬದಲಾಯಿಸಿದರು. ಶಿಖರಸೂರ್ಯನ ಹಿನ್ನಲೆಯ ಬೆಳಕಿನಿಂದಾಗಿ ಕಿವಿಯ ಕೂದಲ ತುದಿಯಿಂದ ನೀಲಿ ಕಿಡಿ ಹಾರಿದಂತಾಯಿತು. ಗೌರಿಯ ನೆನಪಾಯಿತು. ಇದರಲ್ಲಿ ಗೌರಿಯ ತಪ್ಪೇನಿದೆ? ಇಲ್ಲಿಗೆ ತಂದೆಯನ್ನು ಒಪ್ಪಿಸೆಂದು ಅಂಗಲಾಚಿ ಕೇಳಿಕೊಂಡಳು. ಚಿಕ್ಕಮ್ಮಣ್ಣಿಗೂ ಈ ಸಂಬಂಧ ಇಷ್ಟ. ಇವನ ಅಹಂಕಾರದಲ್ಲಿ ಮಗಳ ಮನಸ್ಸು ಯಾಕೆ ನೋಯಬೇಕು? ಈಗ ನಿಜವನ್ನು ಹೇಳಲೇಬೇಕೆಂದು ಗಟ್ಟಿ ಮನಸ್ಸು ಮಾಡಿ ಹೇಳಿದ:

“ಸ್ವಾಮಿ, ನಾನು ಶಿವಾಪುರದ ಶಿವಪಾದನ ಶಿಷ್ಯನಾದ್ದರಿಂದ, ನಮ್ಮ ಪದ್ಧತಿಯಲ್ಲಿ ಬಹುವಚನವಿಲ್ಲವಾದ್ದರಿಂದ ಏಕವಚನದಲ್ಲೇ ಮಾತಾಡುತ್ತೇನೆ, ಕೇಳುವುದಾಗಬೇಕು: ನಿನ್ನಡಿ ಹುಟ್ಟಿನಲ್ಲಿ ಬುಡಕಟ್ಟಿನ ಒಡೆಯನಲ್ಲ. ನಿನಗೂ ಗೊತ್ತಿದೆ: ಕನಕಪುರಿಯ ಆಳಿದ ಮಹಾರಾಣಿಯೇ ಸವತಿ ಚಿಕ್ಕಮ್ಮಣ್ಣಿಯ ಮಗನಿಗೆ ರಾಜ್ಯ ದಕ್ಕಬಾರದೆಂದು ತರುಣಚಂದ್ರನನ್ನ ಕದ್ದು ಕೊಲೆ ಮಾಡಲು ಕಳಿಸಿದ್ದಳು. ಶಿವಪಾದ ಆ ಹುಡುಗನನ್ನು ಕಾಪಾಡಿ ಬೆಳೆಸಿ ನಿನ್ನಡಿ ಮಾಡಿದ್ದಾನೆ. ಆ ತರುಣಚಂದ್ರನೇ ನಿನ್ನಡಿ, ಕನಕಪುರಿಯ ಪಟ್ಟಕ್ಕೆ ಹಕ್ಕಿನ ಅಧಿಕಾರಿ!”

“ಇದು ನೀನು ಹೇಳು ಕಟ್ಟುಕಥೆ”.

“ಸ್ವಯಂ ಶಿವಪಾದನೇ ಹೇಳಿದ್ದನ್ನ ಹೇಳಿದೆ. ನಿನಗೇ ಗೊತ್ತಿದೆ ಶಿವಪಾದ ವೈರಿಗೂ ಸುಳ್ಳು ಹೇಳುವುದಿಲ್ಲ.”

“ಅವನೂ ಸುಳ್ಳು ಹೇಳಬಹುದು.”

“ಅದು ನಿನ್ನ ದುರ್ದೈವ. ನೀನು ಕೇಳು, ಬಿಡು ಇನ್ನೊಂದು ಮಾತನ್ನ ಹೇಳುತ್ತೇನೆ: ಸರಿಯಾಗಿ ಕೇಳು: ಕಂಚಿಯ ಮಹಾನ್ ಶಿಲ್ಪಿ ವಿಶ್ವರೂಪಾಚಾರ್ಯನ ಹೆಸರನ್ನು ನೀನೂ ಕೇಳಿರಬಹುದು. ಅವನ ಮಗಳು ವಾಸಂತಿಯನ್ನ ನಿನ್ನ ಮಗ ಇಷ್ಟಪಟ್ಟಿದ್ದಾನೆ. ಶಿವದೇವಾಲಯದಲ್ಲಿ ಮದುವೆ ಕೂಡ ಆಗಿದ್ದಾನೆ. ಗಂಡು ಮಗುವೂ ಇದೆ. ರವಿಕೀರ್ತಿ ವಾಸಂತಿಯರ ಜೋಡಿ, ಗೌರಿ ಮತ್ತು ನಿನ್ನಡಿಯ ಜೋಡಿ ಶಿವಸಂಕಲ್ಪ. ಈ ಜೋಡಿಗಳನ್ನ ಮುರಿಯಲು ಪ್ರಯತ್ನಪಟ್ಟೆಯೋ – ನೀನು ಕೆಟ್ಟೆ, ಬರ್ತೀನಿ!”

ಎಂದು ನಿಷ್ಠುರವಾಗಿ ಮೊಳಗುವ ನುಡಿಗಳ ಗುಡುಗಿ ರಭಸದಿಂದ ಹೊರಟ. ತಕ್ಷಣ ಸೂರ್ಯ ಖಡ್ಗಕ್ಕೆ ಕೈ ಹಾಕಿದವನು ಬಿಟ್ಟು, “ನಿಲ್ಲು” ಎಂದು ಹೇಳಿ ಚಂಡೀದಾಸನ ಮುಂದೆ ಬಂದು ಅಡ್ಡ ನಿಂತು,

“ಇದು ಚಿಕ್ಕಮ್ಮಣ್ಣಿಗೆ ಗೊತ್ತೊ?” ಅಂದ.

“ಹೌದು.”

“ಯಾರು ಹೇಳಿದರು?”

“ನಾನೇ”

“ಯಾವ ದುರುದ್ದೇಶದಿಂದ ಹೇಳಿದೆ”

– ಎಂದು ಕಿರಿಚಿದ. ಆಶ್ಚರ್ಯವಾಗಿ ಚಂಡೀದಾಸ ಅವನ ಮುಖ ನೋಡಿ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣಲ್ಲಿ ಕಣ್ಣು ನೆಟ್ಟು:

“ಯಾವ ದುರುದ್ದೇಶವೂ ಇಲ್ಲ ಸ್ವಾಮಿ, ಚಿಕ್ಕಮ್ಮಣ್ಣಿಯೇ ನಿನ್ನಡಿಯನ್ನ ನೋಡಿದೊಡನೆ ಅವನ ಆರುಬೆರಳು, ನಿನ್ನ ಮಡದಿಯ ಹೋಲಿಕೆಯನ್ನ ನೋಡಿ ಅನುಮಾನಗೊಂಡು ಅವನ ಮೂಲಕ ಬಗ್ಗೆ ಶಿವಪಾದನನ್ನು ಕೇಳಲು ಹೇಳಿದ್ದಳು. ಕೇಳಿ ಬಂದು ಹೇಳಿದೆ; ಈಗ ನಿನಗೂ ಹೇಳಿದೆ. ಇದು ಸತ್ಯ, ಸತ್ಯ. ಇಗೋ ಹೊರಟೆ. ನನ್ನನ್ನ ತಡೆಯಬೇಡ.”

ತಕ್ಷಣ ಶಿಖರಸೂರ್ಯ ಖಡ್ಗ ಹಿರಿದು ಒಂದು ಹೆಜ್ಜೆ ಹಿಂದೆ ಸರಿದು ಅದರ ತುದಿಯನ್ನು ಅವನೆದೆಗೆ ತಾಗಿಸಿ ನಿಂತು “ನಾನು ಹೇಳುವತನಕ ನೀನು ಇಲ್ಲಿಂದ ಕಾಲು ಕೀಳಕೊಡದು, ” ಅಂದ.

“ಅಯ್ಯಾ ಚಿನ್ನಮುತ್ತನೇ, ನನ್ನನ್ನು ತಡೆಯಬಲ್ಲವರು ಈಗ ಇಬ್ಬರೇ. ಒಬ್ಬ ಶಿವಪಾದ ಇನ್ನೊಬ್ಬ ನಿನ್ನಡಿ. ಚಕ್ರವರ್ತಿಯಾಗುವ ಮೊದಲು ನಿನಗೂ ಆ ಅಧಿಕಾರವಿತ್ತು. ಈಗ ಕಳಕೊಂಡೆ.”

ಎಂದು ಅವನ ಖಡ್ಗವನ್ನ ಎಡಗೈಯಿಂದ ಪಕ್ಕಕ್ಕೆ ಸರಿಸಿ ಹೊರಟುಹೋದ. ಒಂದೆರಡಲ್ಲ ಏಕಕಾಲದಲ್ಲಿ ಆದ ಅನೇಕ ಆಘಾತಗಳಿಂದ ತತ್ತರಿಸಿ, ಕಾಲು ಸೋತು ಶಿಖರಸೂರ್ಯ ಮೆಲ್ಲಗೆ ಹೋಗಿ ಪೀಠದ ಮೇಲೆ ಕುಸಿದ. ಪಡುವಣದಲ್ಲಿ ಸೂರ್ಯ ಅಸ್ತಮಿಸಿದ.

ನಾನು ಹೇಳುವತನಕ ಬರಬೇಡಿರೆಂದು ಸೇವಕರಿಗೆ ಹೇಳಿದ್ದರಿಂದ ಯಾರೂ ಒಳಗೆ ಬರಲಿಲ್ಲ. ನುಗ್ಗಿದ ಅಧೋಲೋಕದ ಕಗ್ಗತ್ತಲಲ್ಲಿ ಒಬ್ಬನೇ ಕೂತ.

ಅಂದೇ ಮಲಗುವ ಮುನ್ನ ಚಿಕ್ಕಮ್ಮಣ್ಣಿಯ ಆರೋಗ್ಯ ವಿಚಾರಿಸಿ ಮದ್ದು ಕೊಟ್ಟ. ಅಂದಿನಿಂದ ಅವಳು ಕೂತಕೂತಲ್ಲೇ ತೂಕಡಿಸಲಿಕ್ಕೆ ಸುರು ಮಾಡಿದಳು. ದೊಡ್ಡ ಆಘಾತದಿಂದ ಹೀಗಾಗಿದೆಯೆಂದು ಮಡದಿ ಮಕ್ಕಳಿಗೆ ಹೇಳಿ ನಂಬಿಸಿದ!