ಮಹಾರಾಣಿ ಎಚ್ಚರಗೊಂಡಾಗ ನಾಕು ತಾಸು ಹೊತ್ತೇರಿತ್ತು. ನಿದ್ದೆಯಿಲ್ಲದೆ ಮುಖ ಊದಿಕೊಂಡಿತ್ತು. ಕಣ್ಣು ಕೆಂಪಗೆ ಉರಿಯುವ ಕೊಳ್ಳಿಗಳಾಗಿದ್ದವು. ಎದ್ದು ಕಂಬಳಿ ಹೊದ್ದುಕೊಂಡು ಹಾಸಿಗೆಯಲ್ಲಿ ಕೂತ ಕೂಡಲೇ ಸೇವಕಿ ಬಂದಳು. ಅವಳ ನೆರವಿನಿಂದ ಮಿಂದು ಬಂದಳು. ಹಣ್ಣಿನ ರಸ ಕುಡಿದು ಕೊಟ್ಟಿದ್ದನ್ನ ತಿಂದಳು. ಮಾತಾಡಲಿಲ್ಲ. ಕನ್ನಡಿಯನ್ನ ಕೂಡ ನೋಡಲಿಲ್ಲ. ಆಮೇಲೆ ಹಬ್ಬ ಹರಿದಿನ, ವಿಜಯೋತ್ಸವ ಇತ್ಯಾದಿ ದೊಡ್ಡ ಸಂದರ್ಭಗಳಲ್ಲಿನಂತೆ ಸಿಂಹಾಸನವನ್ನ ಸಿಂಗರಿಸಲು ಹೇಳಿ ಕಳಿಸಿ ಮೈತುಂಬ ಕಂಬಳಿ ಹೊದ್ದುಕೊಂಡು ಹೊತ್ತು ಹೊರಳುವ ತನಕ ಮಲಗಿಬಿಟ್ಟಳು. ಆಮೇಲೆ ಎದ್ದು ತಾನೇ ಶೃಂಗಾರಗೊಳ್ಳಲು ಸುರುಮಾಡಿದಳು!

ತಿದ್ದಿತೀಡಿ ಬೈತಲೆ ತೆಗೆದು ತಲೆ ಬಾಚಿಕೊಂಡಳು. ವಾರೆದುರುಬಿನ ಮ್ಯಾಲೆ ಮಲ್ಲಿಗೆ ಹೂ ಮಾಲೆ ಮುಡಿದಳು. ಹಣೆಗೆ ಚಂದ್ರ ತಿಲಕವಿಟ್ಟುಕೊಂಡು ಕಣ್ಣಿಗೆ ಕಾಡಿಗೆಯ ಗೆರೆಯೆಳೆದುಕೊಂಡಳು. ಅರವತ್ತು ಮೊಳದ ಪಟ್ಟೆಸೀರೆಯುಟ್ಟುಕೊಂಡು ಮುತ್ತಿನ ಬೈತಲೆ ಎಸಳು ಬುಗುಡಿ ಇಟ್ಟುಕೊಂಡಳು. ಝಗಮಗ ಹೊಳೆವ ಕಾಸಿನ ಸರ, ನವರತ್ನ ಹಾರಗಳನ್ನು ಓರಣವಾಗಿಟ್ಟುಕೊಂಡು ಕನ್ನಡಿಯಲ್ಲಿ ಮತ್ತೆ ಮತ್ತೆ ಹಿಂದೆಮುಂದೆ ತಿರುಗಿ ನೋಡಿಕೊಂಡಳು. ವಧುವಿನಂತೆ ಶೃಂಗಾರವಾಗಿ ಅರಮನೆಗೆ ನಡೆದಳು. ಅರಮನೆಯ ಕೋಣೆ ಕೋಣೆಗಳನ್ನ, ಮೂಲೆ ಮೂಲೆಗಳನ್ನ ನೋಡಿದಳು. ಅಲ್ಲಲ್ಲಿ ಇಟ್ಟಿದ್ದ ಪ್ರತಿಮೆಗಳನ್ನ ಕೈಯಾರೆ ಮುಟ್ಟಿ ಅವುಗಳ ಧೂಳು ಒರೆಸಿದಳು. ಅವುಗಳ ನಿಲುವು ಸೌಂದರ್ಯಗಳನ್ನ ಮೆಚ್ಚುಗೆಯಿಂದ ನೋಡಿದಳು. ಅಲ್ಲಲ್ಲಿ ನಿಂತಿದ್ದ ಬಂಟರನ್ನು ಪರದೇಶದವರೆಂಬಂತೆ ನೋಡಿದಳು. ಮಾತಾಡಿಸಲಿಲ್ಲ. ಅವರ ನಮಸ್ಕಾರಗಳನ್ನು ಸ್ವೀಕರಿಸಲೂ ಇಲ್ಲ.

ಗಜಶಾಲೆಗೆ ಹೋಗಿ ಪಟ್ಟದಾನೆಯ ಮುಂದೆ ಬಾಳೆಯಗೊನೆ ಸರಿಸಿ ಅದರ ಮೈ ಸವರಿದಳು. ಅದು ತಿನ್ನಲಿಲ್ಲ. ತನ್ನ ಸೊಂಡಿಲನ್ನ ಇವಳ ಭುಜದ ಮ್ಯಾಲಿಟ್ಟು ಕಣ್ಣು ಮುಚ್ಚಿತು. ಮಹಾರಾಣಿ ಅದರ ಸೊಂಡಿಲನ್ನ ಇವಳ ಭುಜದ ಮ್ಯಾಲಿಟ್ಟು ಕಣ್ಣು ಮುಚ್ಚಿತು. ಮಹಾರಾಣಿ ಅದರ ಸೊಂಡಿಲನ್ನು ನೇವರಿಸಿ ಕಣ್ಣು ಒರೆಸಿದಾಗ ಅದರ ಕಣ್ಣೀರಿನಿಂದ ಕೈ ಒದ್ದೆಯಾದವು. ಮಹಾರಾಣಿ ಅದರ ಮೈ ಮೇಲೆ ಕೈಯಾಡಿಸಿ ಸ್ವಲ್ಪ ಹೊತ್ತು ನಿಂತಿದ್ದು ಆಮೇಲೆ ಬಾಳೆಹಣ್ಣು ಕಿತ್ತು ಸೊಂಡಿಲೆದುರು ಹಿಡಿದಳು. ಅದು ತಗೊಳ್ಳಲಿಲ್ಲ. ಮುಂದೆ ಹೊರಟಳು. ಅವಳ ಕಣ್ಣೂ ಒದ್ದೆಯಾಗಿದ್ದವು.

ಹೊರಗೆ ಬಂದಾಗ ದರ್ಶನ ಪಡೆಯಲು ಇಬ್ಬರು ವರ್ತಕರು ಬಂದಿರುವುದಾಗಿ ಬಂಟ ಬಂದ ಹೇಳಿದ. ಯಾರನ್ನೂ ನೋಡುವುದಿಲ್ಲವೆಂದು ಕೈಸನ್ನೆ ಮಾಡಿ ಸೀದಾ ಒಡ್ಡೋಗಲಕ್ಕೆ ನಡೆದಳು. ಒಂದುನೂರಾ ಎಂಟು ಕಂಬಗಳ, ಒಂದು ಸಾವಿರ ಪ್ರಜೆಗಳು ಕೂರುವಷ್ಟಿದ್ದ ಪ್ರಸಿದ್ಧ ಒಡ್ಡೋಲಗ ಅದು. ನೂರೆಂಟು ಕಂಬಗಳ ಮಧ್ಯೆ ಒಬ್ಬೊಬ್ಬ ಮುಖ್ಯರು ಕೂರುವದಕ್ಕೆ ಪೀಠಗಳಿದ್ದು ಪಡುವಣದ ಕೇಂದ್ರದಲ್ಲಿ ಚಿನ್ನದ ಸಿಂಹಾಸನವಿದೆ. ಅದರ ಮೇಲೆ ಕೂತವರು ಹಿಂದೆ ಒರಗುವಲ್ಲಿ ಗರಿಬಿಚ್ಚಿದ ನವಿಲು ನಿಂತಿದ್ದು ಅದಕ್ಕೆ ಸಾವಿರದೆಂಟು ಕಣ್ಣುಗಳು, ಒಂದೊಂದು ಕಣ್ಣಿನಲ್ಲಿ ಒಂದೊಂದು ರತ್ನಗಳಿವೆ. ಸಿಂಹಾಸನದ ನೆತ್ತಿಯ ಮ್ಯಾಲೆ ಎತ್ತರದಲ್ಲಿ ಕನಕಪುರಿಯ ಕುಲದೇವತೆ ತಕ್ಕಡಿ ತೂಗುವ ಗರುಡನ ಮೂರ್ತಿಯಿತ್ತು. ಸಿಂಹಾಸನದ ಹಿಂಭಾಗದಲ್ಲಿ ಕೆಳಗಡೆ ಮಂತ್ರಿ ಮಾನ್ಯರ ಪೀಠಗಳಿವೆ. ಬೇರೆ ದೇಶದ ಯಾರೇ ಬಂದರೂ ಈ ಪ್ರಸಿದ್ಧ ಒಡ್ಡೋಲಗವನ್ನು ನೋಡದೆ ಹೋಗುವುದಿಲ್ಲ.

ಮಹಾರಾಣಿ ಒಬ್ಬಳೇ ಒಳಕ್ಕೆ ಹೋದಾಗ ಅಲ್ಲಿದ್ದ ಇಬ್ಬರೂ ಬಂಟರಿಗೆ ಆಶ್ಚರ್ಯವಾಯಿತು. ತಕ್ಷಣ ವಿಶೇಷ ಗೌರವದ ನಮಸ್ಕಾರ ಮಾಡಿ ಬೆರಗಿನಲ್ಲಿ ನಿಂತರು. ಇಬ್ಬರೂ ಹಳಬರು. ಅವರನ್ನೂ ಸನ್ನೆಯಿಂದ ಹೊರಗೆ ಕಳಿಸಿ ಸೀದಾ ಹೋಗಿ ಸಿಂಹಾಸನದಲ್ಲಿ ಕೂತಳು. ಪ್ರಜೆಗಳೂ ಮಂತ್ರಿ ಮಾಂಡಳಿಕ ಮನ್ನೆಯರೂ ತಂತಮ್ಮ ಸ್ಥಾನಗಳಲ್ಲಿ ಕೂತಿರುವರೆಂಬಂತೆ ಮಂದಹಾಸ ಬೀರುತ್ತ ಸುತ್ತ ಕಣ್ಣಾಡಿಸಿದಳು.

ಹೀಗೆ ಎಷ್ಟು ಹೊತ್ತು ಕೂತಿದ್ದಳೋ – ಅಷ್ಟರಲ್ಲಿ ಒಬ್ಬ ಸೇವಕ ಒಳಗೆ ಬಂದು ನಮಸ್ಕಾರವನ್ನಾಚರಿಸಿ “ಬಂಡೆಯ ದರ್ಶನ ಕೇಳುತ್ತಿದ್ದಾನೆ. ಅಪ್ಪಣೆಯೆ ಮಹಾರಾಣಿ?” ಅಂದ. “ಬಿಡು” ಎಂಬಂತೆ ಸನ್ನೆ ಮಾಡಿದಳು. ಒಳಬಂದು ನೋಡಿದರೆ ಬಂಡೆಯನಿಗೆ ಆಘಾತವಾಯಿತು! ಎಂಟು ಕಾಲಿನ ಗದ್ದಿಗೆಯಲ್ಲಿ, ಮೊಳಕಾಲುಮಟ ಹೂವಿರುವಲ್ಲಿ, ಮುಗುಳು ಮಲ್ಲಿಗೆ ಪರಿಮಳದ ಸಂಪಿಗೆಯಲ್ಲಿ, ಬೆಡಗಿನ ನವಿಲುಗರಿಯ ಸಿಂಹಾಸನದಲ್ಲಿ ಮಹಾರಾಣಿ ಒಬ್ಬಳೇ ಓಲಗಗೊಂಡಿದ್ದಾಳೆ! ಒಬ್ಬ ಪ್ರಜೆಯಿಲ್ಲ. ಮಂತ್ರಿ ಮಾನ್ಯ ಮಾಂಡಳಿಕರಿಲ್ಲ, ಗಾಳಿ ಬೀಸುವ ಸೇವಕಿಯರಿಲ್ಲ. ಪರಾಕು ಹೇಳುವ ವಂದಿಮಾಗಧರಿಲ್ಲ. ದೊಡ್ಡ ಒಡ್ಡೋಲಗ ಸುಂದರವಾದ ಸಿಂಹಾಸನದಲ್ಲಿ ಒಬ್ಬಳೇ ಕೂತಿದ್ದಾಳೆ. ಅರಮನೆಯ ಬಗೆಗಿನ ಸೇಡು ಎಷ್ಟೇ ಇರಲಿ, ಬಂಡೆಯನಂಥ ಬಂಡೆಯನಿಗೂ ಕರುಳು ಕತ್ತರಿಸಿದಷ್ಟು ದುಃಖವಾಯಿತು. ಮಹಾರಾಣಿಯನ್ನು ನೋಡಿ, ತಕ್ಷಣ ಒಡ್ಡೋಲಗದ ಪದ್ಧತಿಯಂತೆ ನಿಂತಲ್ಲೇ ಬಾಗಿ ಪ್ರಣಾಮಗಳನ್ನಾಚರಿಸುತ್ತ, ಮಹಾರಾಣಿಯ ಪಾದಗಳ ತನಕ ಹೋದ.

ಸಿಂಹಾಸನದ ಮೇಲೆ ಸಿಂಹಿಣಿಯಂತೆ ಕೂತಿದ್ದಳು ಮಹಾರಾಣಿ! ನಿನ್ನೆ ನಡೆದ ದ್ರೋಹದ ಘಟನೆಯ ಕಿಂಚಿತ್ ನೆರಳು ಕೂಡ ಮುಖದಲ್ಲಿ ಕಾಣಲಿಲ್ಲ. ಬಂದವರನ್ನು ನುಂಗಲು ಬಾಯಿ ತೆರೆದು ನಿಂತ ಸಿಂಹಾಸನದ ಸಿಂಹಗಳನ್ನು ಸುಮ್ಮನಿರಿಸುವಂತೆ ಅವುಗಳ ಮೇಲೆ ಕೈಯಿಟ್ಟ ಆ ರಾಜಗಾಂಭೀರ್ಯ, ಭಯಬೇಡ ರಕ್ಷಣೆಗೆ ನಾನಿದ್ದೇನೆ ಎಂಬಂಥ ಅಭಯದ ನಿಲುವು, ಎತ್ತರದ ಬೆಟ್ಟದ ಮ್ಯಾಲೆ ನಿಂತು ಇತರೇ ಪ್ರಾಣಿಗಳನ್ನ ಸಿಂಹಾವಲೋಕನ ಮಾಡುವ ಆ ಕೃಪಾದೃಷ್ಟಿ, ಇವೆಲ್ಲ ಸೇರಿ – “ಇವಳಪ್ಪಾ ಮಹಾರಾಣಿ ಎಂದರೆ!” ಎಂದು ಸಾರಿ ಸಾರಿ ಹೇಳುವಂತಿತ್ತು ಅವಳ ಭಂಗಿ! ಪ್ರಜೆಗಳ್ಯಾರೂ ಇಲ್ಲವೆಂಬ ಕೊರತೆ ಕಾಣಿಸಲೇ ಇಲ್ಲ ಬಂಡೆಯನಿಗೆ. ಸೀದಾ ಹೋಗಿ, “ಮಹಾರಾಣಿಗೆ ಜಯವಾಗಲೆಂದು” ಹೇಳಿ ಅವಳ ಪಾದದ ಮುಂದೆ ಅಡ್ಡಬಿದ್ದ.

ಮಹಾರಾಣಿಯೇ ದಯಮಾಡಿ “ಏಳು” ಎಂದಳು. ಎದ್ದು ಕೈಮುಗಿದು ನಿಂತುಕೊಂಡ. ಮುಖದ ಮೇಲೆ ಆತನ ಬಗ್ಗೆ ಕಿಂಚಿತ್ತೂ ಅಸಮಾಧಾನವಾಗಲಿ, ಕೋಪವಾಗಲಿ ಇರಲಿಲ್ಲ. ಮಹಾರಾಣಿ ಪ್ರಸನ್ನಳಾಗಿ “ಏನು ಬಂದೆ?” ಎಂದಳು. ಒಳಗೊಳಗೇ ಕರಗಿಬಿಟ್ಟಿದ್ದ.

“ರಾಜವೈದ್ಯನಿಗೆ ಸಮಯ ಕೊಡಬೇಕಂತೆ ಮಹಾರಾಣಿ.”

“ಎಂದು ಸಂಜೆ ಅಂತಃಪುರಕ್ಕೆ ಬರಲಿ”

– ಎಂದು ಹೇಳಿ ತೊಲಗು ಎಂಬಂತೆ ಕೈಸನ್ನೆ ಮಾಡಿದಳು. ಬಂಡೆಯ ಅವಳನ್ನು ನೋಡುತ್ತಲೇ ಹಿಂದೆ ಹಿಂದೆ ಸರಿಯುತ್ತಲೇ ಮತ್ತೆ ಮತ್ತೆ ನಮಸ್ಕರಿಸುತ್ತಲೇ ಮಾಯವಾದ.

ಸೂರ್ಯಾಸ್ತವಾಗಿ ಆಕಾಶದ ಬೂದಿಬೆಳಕಾರಿ ಕತ್ತಲಾಗಿರುವಾಗ, ನರಮಾನವರ ಸಂಚಾರವಿಲ್ಲದೆ ಅರಮನೆಯಲ್ಲಿ ಭಯಾನಕ ಮೌನದ ಸ್ಮಶಾನ ವಾತಾವರಣ ಆವರಿಸಿರುವಾಗ, ಬೆದೆಯಿಂದ ಕುದಿವ ಮೈತುಂಬ ಪರಿಮಳವ ನಾರುತ್ತ, ಹಲವಾರು ವರ್ಷಗಳಿಂದ ಹಾರೈಸಿ ಕಾದ, ವಿಪರೀತ ಸುರತದ ಕನಸುಗಳಲ್ಲಿ ಅದ್ದಿದ ಕಣ್ಣುಳ್ಳವನಾಗಿ ಶಿಖರಸೂರ್ಯ ಬಂದ. ಅವನೊಂದಿಗೆ ಕಾಣಿಕೆಯ ತಟ್ಟೆ ಹಿಡಿದ ಒಬ್ಬ ಸೇವಕನೂ ಬಂದ.

ಅಂತಃಪುರದ ಪಡುಕೋಣೆಯಲ್ಲಿ ಪ್ರಶಾಂತವಾದ ಮಂದ ಬೆಳಕಿತ್ತು. ಇವನನ್ನು ನೋಡಿದ್ದೇ ಚೈತನ್ಯ ಉತ್ಸಾಹಗಳಿಂದ ಮಂದಹಾಸ ಬೀರುತ್ತ ಬಂದು, “ಆಹ ಸಖ! ಎಂಥ ಸುಖ!” ಎಂದು ಹೇಳಿ ದುಂಡುದೋಳಿನ, ಉಬ್ಬಿದೆದೆಯ ಮಹಾರಾಣಿ ಗುರುನಿತಂಬಗಳು ನರ್ತಿಸುವಂತೆ ನಡೆಯುತ್ತ ಬಾಗಿಲದವರೆಗೆ ಬಂದು ಶಿಖರಸೂರ್ಯನ ಕೈಹಿಡಿದು ಒಳಗೆ ಕರೆತಂದು ಪೀಠ ತೋರಿಸಿದಳು. ಆಮೇಲೆ ತಾನೂ ಪಕ್ಕದ ಸುಖಾಸನದಲ್ಲಿ ಬೆಡಗಿನಿಂದ ಆಸೀನಳಾದಳು. ಈ ಪರಿಯ ತೆರೆದ ತೋಳಿನ ಸ್ವಾಗತವನ್ನು ಆತ ನಿರೀಕ್ಷಸಿರಲಿಲ್ಲ. ಮೊದಲೆರಡು ಕ್ಷಣ ಆತ ನಂಬಲಿಲ್ಲ. ಆಮೇಲೆ ಅರಿವಿಗೆ ಬಂದು ಸೇವಕನಿಗೆ ಸನ್ನೆ ಮಾಡಿ ಕಾಣಿಕೆಯನ್ನು ಮಹಾರಾಣಿಯ ಪೀಠದ ಮುಂದೆ ಇಡಲು ಸೂಚಿಸಿದ. ಆತ ಕಾಣಿಕೆಯ ತಟ್ಟೆ ಇಟ್ಟು ಹಿಂದೆ ಹಿಂದೆ ಸರಿಯುತ್ತ ಮಾಯವಾದ.

“ಈಗ ಹ್ಯಾಗಿದ್ದೀರಿ ಮಹಾರಾಣಿ?”

– ಎನ್ನುತ್ತ ಅವಳ ಕೈ ಹಿಡಿದು, ತಕ್ಷಣ ಸಲಿಗೆ ಹೆಚ್ಚಾಯಿತೆಂದು ಧೋರಣೆ ಬದಲಿಸಿ ನಾಡಿ ನೋಡತೊಡಗಿದ.

“ನೀನು ವೈದ್ಯ. ನಾನು ಹ್ಯಾಗಿದ್ದೀನಿ ಅಂತ ನೀನು ಹೇಳಬೇಕು”.

ಇಷ್ಟು ಅವಕಾಶ ಸಿಕ್ಕುದೇ ತಡ ಇನ್ನೊಮ್ಮೆ ನಾಡಿ ನೋಡಿದ. ಕೆನ್ನೆ ತೀಡಿ ನೋಡಿದ. ಉದ್ವಿಗ್ನತೆಯಿಂದ ಅವನ ಕೈ ಬಿಸಿಯಾದುದನ್ನು ಮಹಾರಾಣಿ ಗಮನಿಸಿದಳು. ಅಷ್ಟರಲ್ಲಿ ಸೇವಕಿಯೊಬ್ಬಳು ಬಂದು ಮದ್ಯ ತುಂಬಿದ ಒಂದು ಗಿಂಡಿಯನ್ನು ಇಟ್ಟು ಹೊರಗೆ ನಡೆದಳು.

“ಒಂದೇ ಯಾಕೆ? ನೀವು ತಗೊಳ್ಳೋದಿಲ್ಲವೆ ಮಹಾರಾಣಿ?”

“ಅದೇ ಗಿಂಡಿಯನ್ನು ಕೊಡು, ಇಬ್ಬರೂ ಕುಡಿಯೋಣ”

– ಎಂದು ಹೇಳಿ ಗಿಂಡಿಯಲ್ಲಿಯ ಅರ್ಧ ಮದ್ಯವನ್ನು ಹೀರಿ,

“ಇದರಲ್ಲಿ ವಿಷವಿಲ್ಲವೆಂದು ತೋರಿಸಲು ಕುಡಿದೆ. ಇಕೊ ಇನ್ನು ನೀನು ಕುಡಿ.”

– ಎಂದು ಎಂಜಲದ ಗಿಂಡಿಯನ್ನು ಅವನ ಕೈಗಿಡುತ್ತ ಶಿಖರಸೂರ್ಯನ ಕಡೆಗೆ ಕೃಪಾಕಟಾಕ್ಷವ ಬೀರಿದಳು. ಮದ್ಯವನ್ನು ಇಷ್ಟಪಡದ ಶಿಖರಸೂರ್ಯ ಗಟಗಟ ಮದ್ಯ ಹೀರಿ ಕಣ್ಣುಗಳಿಂದ ಅವಳ ಸೌಂದರ್ಯವನ್ನು ಹೀರುತ್ತ “ಇಷ್ಟೇನಾ?” ಎಂದು ಕೇಳುವಷ್ಟರಲ್ಲಿ, ಅದೇ ಸೇವಕಿ ಇನ್ನೊಂದು ಗಿಂಡಿ ತುಂಬ ಮದ್ಯ, ಅದರೊಂದಿಗೆ ಕರಿದ ಮಾಂಸ, ಮೀನುಗಳನ್ನು ತಂದಿಟ್ಟಳು. ಬಿಗಿದ ಹೆದೆಯಂಥ ಎದೆಯಿಂದ ಇವನ ಹೃದಯದಲ್ಲಿ ಗಾಯ ಮಾಡುತ್ತ ಮಹಾರಾಣಿ ಕೇಳಿದಳು –

“ಈಗ ಅರಮನೆಯ ತುಂಬ ನಿನ್ನ ಬಂಟರೇ ಇದ್ದಾರಲ್ಲವೆ?”

“ಹೌದು. ವಿಷದ ಪ್ರಸಂಗ ನಡೆದಾಗಿನಿಂದ ನಿಮಗೆ ಹೇಳದೆ ನಾನೇ ಬದಲಾವಣೆ ಮಾಡಿದೆ. ಬೇಸರವೆ ಮಹಾರಾಣಿ?”

“ಇಲ್ಲ. ಹೋಗಿ ಒಳಗೆ ಯಾರನ್ನೂ ಬಿಡಬೇಡವೆಂದು ದ್ವಾರಪಾಲಕನಿಗೆ ಹೇಳಿ ಬಾಗಿಲು ಹಾಕಿಕೊಂಡು ಬಾ.”

– ಎಂದು ತುರುಬಿನ ಹೂಮಾಲೆಯನ್ನು ಅದೊಂದು ಬಗೆಯ ಬೆಡಗಿನ ಶೈಲಿಯಲ್ಲಿ ಮುಟ್ಟಿ ನೋಡಿಕೊಂಡಳು. ಶಿಖರಸೂರ್ಯನ ಮೈಯಲ್ಲಿ ಮಿಂಚಿನ ಹೊಳೆ ಹರಿಯಿತು. ಕ್ಷಣಾರ್ಧದಲ್ಲಿ ಅವಳು ಹೇಳಿದಂತೆ ಮಾಡಿ ಬಂದು –

“ಈಗ ಆಸುಪಾಸು ಯಾರೂ ಇಲ್ಲ – ಈ ನಿನ್ನ ಸೇವಕನೊಬ್ಬನನ್ನು ಬಿಟ್ಟು.”

ಎಂದು ಪಿಸುದನಿಯಲ್ಲಿ ಹೇಳಿ ತನ್ನ ಬಳಿಯಿದ್ದ ಅವಳ ಕಂಠೀಹಾರವನ್ನು ಅವಳ ಕೈಗಿಟ್ಟ.

“ಇದ್ಯಾವಾಗ ನಿನ್ನ ಕೈಗೆ ಬಂತು?”

“ನಿನ್ನೆಯ ಗುದಮುರಿಗೆಯಲ್ಲಿ ಸಿಕ್ಕಿತು.”

ಹಾರವನ್ನೇ ನೋಡುತ್ತ ಹಿಂದಿನ ದಿನಮಾನಗಳ ನೆನಪಾಗಿ ಮಹಾರಾಣಿಯ ಮುಖದ ಮೇಲೆ ಯಾತನೆ ಮೂಡಿತು.

“ಮಾಳವ ರಾಜ್ಯ ಗೆದ್ದಾಗ ಅರ್ಥಕೌಶಲ ಅಲ್ಲಿಂದ ತಂದದ್ದು ಇದು. ಆತ ಕನಕಪುರಿಯನ್ನ ತುಂಬ ಪ್ರೀತಿಸುತ್ತಿದ್ದ.”

“ನಾನೂ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಹಾರಾಣಿ.”

ಮಹಾರಾಣಿಯ ಮುಖಭಾವದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ತನ್ನ ಎದುರಿಗಿದ್ದ ತಟ್ಟೆಯ ಮೇಲಿನ ಬಟ್ಟೆ ತೆಗೆದಳು. ಅದರ ತುಂಬ ಚಿನ್ನದ ಧಾನ್ಯವಿತ್ತು. ಆಶ್ಚರ್ಯವನ್ನನುಭವಿಸುತ್ತ “ಚಿನ್ನದ ಧಾನ್ಯ!” ಎಂದಳು. ಕೈ ಹಾಕಿ ಮುಷ್ಟಿ ತುಂಬ ಧಾನ್ಯ ತಗೊಂಡ ಪರೀಕ್ಷಿಸುವ ದೃಷ್ಟಿಯಿಂದ ನೋಡಿದಳು. ಅವಳಿಗೆ ಸಂತೋಷವಾಗಿರಲೇಬೇಕೆಂದು ಊಹಿಸಿ ವಿನಯದಿಂದೆಂಬಂತೆ “ಸಣ್ಣ ಕಾಣಿಕೆ!” ಅಂದ. ಅವನು ಅಂದುಕೊಂಡಂಥ ಸಂತೋಷವಾಗಲಿ, ಆಶ್ಚರ್ಯವಾಗಲಿ ಅವಳ ಮುಖದಲ್ಲಿ ಕಾಣಲಿಲ್ಲ. ಮಹಾರಾಣಿ ಶಿಖರಸೂರ್ಯನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, –

“ಧಾನ್ಯದಿಂದ ಚಿನ್ನ ಮಾಡಿದಂತೆ, ಚಿನ್ನದಂತೆ ಧಾನ್ಯ ಮಾಡುವ ವಿದ್ಯಯೂ ನಿನಗೆ ತಿಳಿದಿರಬೇಕಲ್ಲಾ?”

ರಾಣಿಯ ಅಸಾಧಾರಣ ಬುದ್ಧಿಶಕ್ತಿ ಮತ್ತು ತಿಳುವಳಿಕೆಯ ಬಗ್ಗೆ ಶಿಖರಸೂರ್ಯನಲ್ಲಿ ಈಗ ಭಯ ಸುರುವಾಯಿತು. ಯಾವುದು ತನಗಲ್ಲದೆ ಬೇರೆ ಯಾರಿಗೂ ತಿಳಿಯದೆಂದು ಭಾವಿಸಿದ್ದನೋ ಅದು ಇವಳಿಗೆ ಸಾಮಾನ್ಯ ಜ್ಞಾನದಂತೆ ತಿಳಿದಿದೆ! ಮುಖಭಂಗವಾಗಿ ಹೇಳಿದ:

“ಇಲ್ಲ. ಧಾನ್ಯದಿಂದ ಚಿನ್ನ ಮಾಡಬಲ್ಲೆ. ಚಿನ್ನದಿಂದ ಧಾನ್ಯ ಮಾಡಲಾರೆ ಮಹಾರಾಣಿ!”

“ಹಾಗಾದರೆ ಈ ವಿದ್ಯೆಯನ್ನ ನೀನು ಶಿವಪಾದನಿಂದ ಕಲಿಯಲಿಲ್ಲ, ಅಲ್ಲವೆ?”

ಪರಿಶ್ರಮದಿಂದ ಗಳಿಸಿದ ತನ್ನ ರಹಸ್ಯವಿದ್ಯೆ ಇಷ್ಟು ಅಗ್ಗವಾಗಿ ಚರ್ಚಿತವಾಗುವುದನ್ನ ಆತ ಸಹಿಸಲಿಲ್ಲ. ಮಾತು ಬದಲಿಸಲೆಂದು ಹೇಳಿದ:

“ಹೌದು, ನಿಮಗೆ ಶಿವಪಾದ ಗೊತ್ತೆ ಮಹಾರಾಣಿ?”

“ಹೆಸರು ಕೇಳಿದ್ದೇನೆ; ನೋಡಿಲ್ಲ, ಇತ್ತೀಚೆ ಅವನ ಬಗ್ಗೆ ಬಹಳ ಆಸಕ್ತಿ ಮೂಡಿತು ವೈದ್ಯನೇ. ಹತ್ತಿಯಿಂದ ಬಟ್ಟೆ ಮಾಡಿ, ಬಟ್ಟೆಯಿಂದ ಹತ್ತಿ ಮಾಡಲಾಗದ ಸಂಸ್ಕ್ರತಿ, ಧಾನ್ಯದಿಂದ ಚಿನ್ನ ಮಾಡಿ, ಚಿನ್ನದಿಂದ ಧಾನ್ಯ ಮಾಡಲಾರದ ಸಂಸ್ಕ್ರತಿ ವಿನಾಶದತ್ತ ಸರಿಯುತ್ತದೆ ಅಂದನಂತಲ್ಲ! ಎಂಥ ಮಾತಿದು!”

“ಇದೇನಂಥಾ ಮಹತ್ವದ ಮಾತೆಂದು ನನಗನ್ನಿಸಲಿಲ್ಲ. ಹತ್ತಿಯಿಂದ ಬಟ್ಟೆ ಮಾಡೋದು, ಧಾನ್ಯದಿಂದ ಚಿನ್ನ ಮಾಡೋದು ಪ್ರಗತಿಯ ಲಕ್ಷಣ. ಹತ್ತಿಯಿಂದ ಬಟ್ಟೆ, ಧಾನ್ಯದಿಂದ ಚಿನ್ನ ಮಾಡದಿದ್ದರೆ ಮನುಷ್ಯನಿಗೂ ಪ್ರಾಣಿಗೂ ಏನು ವ್ಯತ್ಯಾಸ ಉಳಿಯುತ್ತದೆ ಹೇಳಿ.”

“ಹಾಗಲ್ಲ ವೈದ್ಯಮಿತ್ರನೇ, ತಿನ್ನುವ ಧಾನ್ಯವನ್ನ ಚಿನ್ನ ಮಾಡಿ ಇಟ್ಟುಕೊಳ್ಳೋ ಬುದ್ದಿ ಮನುಷ್ಯನಿಗ್ಯಾಕೆ ಬಂತು? ಅಪಾರ ಪರಿಶ್ರಮವನ್ನ ಸಣ್ಣ ಲೋಹದಲ್ಲಿ ಬಚ್ಚಿಟ್ಟು ಸಂಗ್ರಹಿಸುವುದು – ಸಂಗ್ರಹದಿಂದ ಬಲ, ಬಲದಿಂದ ಅಧಿಕಾರ – ಅದಕ್ಕಾಗಿ ಸ್ಪರ್ಧೆ – ಇದು ನಿಮ್ಮ ಪ್ರಗತಿಯ ನಕ್ಷೆ.

“ನೀನೆ ನೋಡು, ನಾವು ಕನಕಪುರಿಯವರು ಚಿನ್ನದ ಒಕ್ಕಲು. ನಮಗೆ ಚಿನ್ನ ಬೇಕು, ಅಧಿಕಾರ ಬೇಕು. ಚಿನ್ನದ ರಾಜ್ಯದಲ್ಲಿ ಇಬ್ಬರಿರುತ್ತಾರೆ: ಬಲ ಇದ್ದವರು ಮತ್ತು ದುರ್ಬಲರು. ಬಲ ಇದ್ದವರು ದುರ್ಬಲರನ್ನ ಆಳುತ್ತಾರೆ. ಅದಕ್ಕೇ ಚಿನ್ನ ಬೇಕು. ಅರ್ಥಕೌಶಲ ಹೇಳುತ್ತಿದ್ದುದನ್ನು ನೀನೂ ಕೇಳಿರಬೇಕು: ಚಿನ್ನ ಬಿಟ್ಟು ಉಳಿದೆಲ್ಲವೂ ಸೆಗಣಿ; ಆ ಸೆಗಣಿಗೇ ನಾವು ಸದ್ಗುಣ, ಮೌಲ್ಯ, ಗೌರವ, ಮಣ್ಣು ಮಸಿ ಅಂತೀವಿ – ಅಂತ! ಅಂದರೆ ನೀವು ಪ್ರತಿಪಾದಿಸುವ ಪ್ರಗತಿ ಸ್ವಾರ್ಥಪರವಾದದ್ದು. ಅದಕ್ಕೇ ಶಿವಾಪುರದಲ್ಲಿ ನೋಡು; ಅಲ್ಲಿರೋದು ಎರಡೇ; ಸರಿ ಮತ್ತು ತಪ್ಪು. ತಪ್ಪನ್ನು ಸರಿಪಡಿಸುತ್ತ, ಎರಡನ್ನು ರಾಜಿ ಮಾಡಿಸುತ್ತ ಮುಂದುವರಿಯುತ್ತಾರೆ. ಅಲ್ಲಿ ಕನಕಪುರಿಯಲ್ಲಿರುವಂಥ ಸ್ಪರ್ಧೆಯಾಗಲಿ, ರಾಜಕಾರಣವಾಗಲಿ ಇಲ್ಲ. ಇದು ಸರಿಯಾದ ವ್ಯವಸ್ಥೆ ಅಲ್ಲವೆ? ನೀವೋ ಎಷ್ಟು ಸಂಗ್ರಹಿಸಿದರೂ ಸಾಲದೆಂದು ಸದಾ ಅತೃಪ್ತಿಯಿಂದ ಪ್ರಗತಿ ಬದಲಾವಣೆಗಳತ್ತ ಧಾವಿಸುತ್ತಲೇ ಇರುತ್ತೀರಿ. ಅದಕ್ಕಾಗಿ ಯುದ್ಧ ಮಾಡುತ್ತಲೇ, ಸದಾ ಕೊಲ್ಲುತ್ತಲೇ ಇರುತ್ತೀರಿ. ಕೊನೆಗೊಮ್ಮೆ ಸ್ಪರ್ಧೇಗಾಗಿ ದೇವರಿಗೇ ಸೆಡ್ಡು ಹೊಡೆಯುತ್ತೀರಿ! ಮನುಷ್ಯ ಅಪೂರ್ಣನೆಂದು ಅದಕ್ಕೇ ಹೇಳುವದು.

ನಿನ್ನ ಪ್ರಗತಿ ಕೇವಲ ಲಂಬವಾಗಿ, ಎತ್ತರ ಬೆಳೆದರೆ ಸಾಲದು ವ್ಯದ್ಯನೇ. ಅಗಲ ಮತ್ತು ಆಳವಾಗಿಯೂ ಬೆಳೆಯಬೇಕು. ಸರ್ವಾಂಗೀಣ ಬೆಳವಣಿಗೆ ಅಂದರೆ ಅದೇನೇ. ಹಾಗೆ ನೀನು ಬೆಳೆದದ್ದೇ ಆದರೆ ನೆಲ ಬಿಟ್ಟು ಬೆಳೆದರೂ ನೆಲದ ಸಂಪರ್ಕ ಕಡಿಯುವುದಿಲ್ಲ. ವರ್ತುಳಾಕಾರದ ಬೆಳವಣಿಗೆ ಎಂದು ಶಿವಪಾದ ಹೇಳೋದು ಇದನ್ನೇ. ಅವನ ಪ್ರಕಾರ ಬೆಳವಣಿಗೆ ಅಂದರೆ ವರ್ತುಳ ದೊಡ್ಡದಾಗುತ್ತ ಹೋಗುವುದೇ – ಬೆಳವಣಿಗೆ! ಅಂದರೇನೇ ನಿನಗೆ ನಿಸರ್ಗದ ಮಾತು ಕೇಳಿಸುತ್ತದೆ”.

“ಒಂದು ಮಾತಿನಲ್ಲಿ ಹೇಳಿ ಮಹಾರಾಣಿ. ಶಿವಪಾದ ಹೇಳುವುದೇನು?”

ಮಹಾರಾಣಿ ಸ್ವಲ್ಪ ಹೊತ್ತು ಯೋಚಿಸುತ್ತ ಸುಮ್ಮನಾದಳು. ಆಮೇಲೆ ಮೆಲ್ಲನೆ “ಬಳಗವಾಗಿ ಬದುಕು”.

“ನಾವು ಬದುಕ್ತಿರೋದು ಹ್ಯಾಗೆ”

“ನೀವು ಸ್ವಾರ್ಥಿಗಳು. ದುರ್ಬಲರ ಮೇಲೆ ಸವಾರಿ ಮಾಡಿ ಬದುಕುತ್ತೀರಿ. ಕೆಲವರಿಗೆ ನೆಮ್ಮದಿಯನ್ನು ಬೋಧಿಸಿ ಪ್ರಾಣಿಗಳಾಗಿಸುತ್ತ, ನೀವು ಮಾತ್ರ ಮನುಷ್ಯರಾಗಿರುವ ಸುಖವನ್ನು ಅನುಭವಿಸುತ್ತ ಮುಂದುವರಿಯುವುದಿದೆಯಲ್ಲ, ಇದು ಶೋಷಣೆ. ಶಿವಪಾದ ಇದನ್ನೊಪ್ಪಲಾರ.”

– ಮಧ್ಯದ ಒದೆ ಮಹಾರಾಣಿಗೆ ಒಳ್ಳೆಯ ಮೂಡು ಕೊಟ್ಟಿದೆಯೆಂದು ಅನ್ನಿಸಿತು. ಸೋಲುವುದಕ್ಕೆ ಶಿಖರಸೂರ್ಯನೂ ತಯಾರಿರಲಿಲ್ಲ.

“ಶಿವಪಾದನನ್ನು ಮುಂದಿಟ್ಟುಕೊಂಡು ನೀವು ಮಾಡಿದ ಚಿಂತನೆಗಳ ಬಗ್ಗೆ ನನಗೆ ಗೌರವ ಭಾವನೆ ಇದೆ ಮಹಾರಾಣಿ. ಆದರೆ ಶಿವಪಾದ ಹೇಳುವುದು ಕಲ್ಪನೆಗಳನ್ನ, ಮೂಢನಂಬಿಕೆಗಳನ್ನ ಮತ್ತು ಭ್ರಮೆಗಳನ್ನ. ಮನುಷ್ಯ ಅಪೂರ್ಣನೆಂಬ ಭಾವನೆ ಇರುವುದರಿಂದಲೇ ಪೂರ್ಣತೆಗಾಗಿ ನಾವು ಸ್ಪರ್ಧಿಸುತ್ತೇವೆ ಎಂದೂ ವಾದಿಸಬಹುದಲ್ಲ? ನಮಗೂ ರಾಮರಾಜ್ಯ ಬೇಕು”.

“ಆದರೆ ರಾಮರಾಜ್ಯ ತರುವುದಕ್ಕಾಗಿ ನೀವು ರಾಮನ ಜೊತೆ ಸ್ಪರ್ಧೆ ಮಾಡುತ್ತೀರಿ. ರಾಮರಾಜ್ಯ ಖಂಡಿತ ನಿಮಗೆ ಮಾದರಿ ಅಲ್ಲ.”

“ಅದು ನಿಜ. ಹೋಗಲಿ ಮನುಷ್ಯನ ನೆಮ್ಮದಿಗೆ ಶಿವಪಾದ ಹೇಳುವುದೇನು? ‘ಆನಂದ ಸಮಾಧಿ!’. ತನ್ನ ಶಿಷ್ಯರಿಗೆ ಆನಂದ ಸಮಾಧಿಸ್ಥಿತಿಯನ್ನ ಬೋಧನೆ ಮಾಡ್ತಾನೆ. ಸಮಾಧಿಸ್ಥಿತಿ ಅಂದರೆ ಸಾವಲ್ಲವೆ ಮಹಾರಾಣಿ? ಇಂಥಾ ಶರಣರನ್ನ ಕಟ್ಟಿಕೊಂಡು ಯಾರಾದರೂ ಬದುಕಲಿಕ್ಕಾಗುತ್ತ? ಯಾರಿಗೆ ಆರೋಗ್ಯ, ಐಶ್ವರ್ಯ, ವೀರ್ಯ ಇರುವುದಿಲ್ಲವೋ ಅವರೆಲ್ಲಾ ಶರಣರಾಗ್ತಾರೆ; ಅಷ್ಟ. ನನಗೆ ನನ್ನ ದಿನನಿತ್ಯದ ಬದುಕಿಗೆ ಉಪಯೋಗವಾಗುವ ಮಾತು ಬೇಕು. ನಿತ್ಯದ ಜೀವನದಲ್ಲಿ ಇರುವ ಸಂತೋಷವನ್ನ ಹ್ಯಾಗೆ ಪಡೀಬೇಕು ಅಂತ ಹೇಳೋನು ಶರಣ. ಶಿವಪಾದನಂಥ ಶರಣ ಜೀವನದಲ್ಲಿರೋದಿಲ್ಲ ಮಹಾರಾಣಿ, ಇದ್ದಿದ್ದರೆ ನಮ್ಮ ಹಾಗೆ ಜಗಳಾಡಿಕೊಂಡು ಕಚ್ಚಾಡಿಕೊಂಡಿರುತ್ತಿದ್ದ. ಇವನು ಯಾತ್ರಿಕನಲ್ಲ ನಮ್ಮಂತೆ. ಹೋಗು ಬರೋರನ್ನ ನೋಡಿಕೊಂಡು ದಾರಿಯ ಪಕ್ಕದಲ್ಲಿ ನಿಂತಿರೋನು”.

ಮಹಾರಾಣಿಗೆ ಅವನ ವಾದ ಬೋರಾಯಿತು. ಈತ ವಾದದಲ್ಲಿ ಗೆಲ್ಲುವುದಕ್ಕಾಗಿ ನಿಲುವಿನಿಂದ ನಿಲುವಿಗೆ ಸುಲಭವಾಗಿ ಜಿಗಿಯುತ್ತಾನೆಂದು ಅರಿವಾಗಿ, ಎದ್ದು ಒಂದೆರಡು ಹೆಜ್ಜೆ ಅಲೆದಾಡಿ ಕಿಡಕಿಗೆ ಹೋದಳು. ನದಿಯ ಕಡೆಯಿಂದ ಸುವಾಸನೆಯ ತಂಗಾಳಿ ಬೀಡಿ ಮನಸ್ಸಿಗೆ ಮುದ ನೀಡಿತು. ಹಾರುವ ಮುಂಗುರುಳ ಜೊತೆಗೆ ಮಹಾರಾಣಿಯ ಸುಂದರವಾದ ಆಕೃತಿ ಕಂಡಿತು. ಮಹಾರಾಣಿ ಮಂದಹಾಸ ಬೀರುತ್ತ ಬಂದು ಪೀಠದ ಮೇಲೆ ಕುಂತು ಹಿಂದಕ್ಕೊರಗಿ ಸಮಾಧಾನದಿಂದ ಹೇಳಿದಳು:

“ಇಂದ್ರಿಯಾನುಭವವೇ ಎಲ್ಲಕ್ಕೂ ಪ್ರಮಾಣವೆಂಬುದನ್ನು ನಂಬಿದವರು ನೀವು. ಶಿವಪಾದನ ಲೋಕನಂಬಿಕೆ ಇದಕ್ಕೆ ವಿರುದ್ಧವಾದುದು. ಒಂದೊಂದು ವಿಷಯವನ್ನ ನಿಮ್ಮಂತೆಯೇ ಅವನೂ ವಿಶ್ಲೇಷಣೆ ಮಾಡುತ್ತಾನೆ. ಇಂದ್ರಿಯಾತೀತ ಅನುಭವದ ಪ್ರಮಾಣವನ್ನ ಅತ್ಯಂತ ಸಹಜವಾಗಿ, ಅದೇ ಹೆಚ್ಚು ನಿಜವೆಂಬಂತೆ ಮಾತಾಡುತ್ತಾನೆ. ಅಸ್ತಿತ್ವಕ್ಕೆ ಸಂಬಂಧಿಸಿದ ಮೂಲಭೂತ ಅನುಭವ ಇಂದ್ರಿಯಗಳ ಮೂಲಕ ಮಾತ್ರ ಬರುವುದೆಂಬ ನಿಮ್ಮ ವಾದವನ್ನ ಅವನು ತಿರಸ್ಕರಿಸಿ ಇಂದ್ರಿಯಾತೀತವಾದುದಕ್ಕೆ ಹೆಚ್ಚಿನ ಪ್ರಾಮಾಣ್ಯ ಮತ್ತು ಅಧಿಕೃತತೆ ತಂದುಕೊಡುತ್ತಾನೆ. ಅವನಿಗೆ ಆ ಅಧಿಕಾರವಿದೆ…. ಆನಂದ ಸಮಾಧಿಯೆಂದರೆ…. ನೀವು ಬಿಡಿಯಪ್ಪ. ನೀನೂ ಅಷ್ಟೆ. ಅರ್ಥಕೌಶಲನೂ ಅಷ್ಟೆ: ಮದ್ಯಸೇವನೆ ಮಾಡಿದರಾಯ್ತು: ಶಿವಪಾದನೇನು, ದೇವರೇನು – ಅಣಕಿಸಿ ಚೆಲ್ಲಿ ಹಾಕಬಲ್ಲಿರಿ.”

ಇಬ್ಬರೂ ತುಸುಹೊತ್ತು ಸುಮ್ಮನಾದರು. ಮಹಾರಾಣಿ ದಣಿದಿದ್ದಳು. ಭೂತಕಾಲದ ಸೇಡುಗಳನ್ನ ಚುಕ್ತಾ ಮಾಡಬೇಕೆಂಬ ಛಲ ಶಿಖರಸೂರ್ಯನಲ್ಲಿತ್ತು. ತನ್ನ ಕಾಡಿನಲ್ಲಿ ತಾನೇ ಅನಾಥಳಾದ ಹುಲಿಯ ನೋವು ಮಹಾರಾಣಿಯಲ್ಲಿತ್ತು. ನಿಜದಲ್ಲಿ ತಂತಮ್ಮ ಬಲಾಬಲಗಳ ಸೀಮೆ ಗುರುತಿಸಿಕೊಂಡು ನಿಂತಂತೆ ಇಬ್ಬರೂ ಎದುರುಬದುರಾಗಿದ್ದರು. ಆದರೆ ಗೆಲುವಿನ ಉನ್ಮಾದದಿಂದ ಹೊಳೆಯುತ್ತಿದ್ದ ಅವನ ಚಿರತೆ ಕಣ್ಣುಗಳನ್ನ ನೋಡಿದ್ದೆ ಈ ಮೃಗಕ್ಕೆ ತಾನು ಸೋತೆನೆನ್ನಿಸಿತು ಮಹಾರಾಣಿಗೆ. ಸಂವಾದ ಸಾಕೆನಿಸಿ ಮುಖಾಮುಖಿಯಾಗಿ ಹೇಳಿದಳು:

“ನಾನು ಸೋತೆ ವೈದ್ಯನೇ, ಇಬ್ಬರ ನೆನಪುಗಳಲ್ಲೂ ಕರಾಳ ಸಂಗತಿಗಳಿವೆ. ಅವನ್ನ ಮರೆತು ಬಿಡೋಣ. ನಿಜ ಹೇಳು: ನಿನ್ನೆ ದಿನ ಹಾಲು ಚೆಲ್ಲಿ ನೀನ್ಯಾಕೆ ನನ್ನನ್ನ ಉಳಿಸಿದೆ?”

“ಹಾಲಿನಲ್ಲಿ ವಿಷ ಇದ್ದದ್ದು ನಿಮಗೆ ಗೊತ್ತಿತ್ತೆ ಮಹಾರಾಣಿ?”

“ಇಲ್ಲ”.

“ನನಗೆ ಗೊತ್ತಾಗಿ ಉಳಿಸಿದೆ”.

“ನಮ್ಮಿಬ್ಬರ ಮಧ್ಯೆ ಇನ್ನು ಸುಳ್ಳು ಸುಳಿಯುವುದು ಬೇಡ – ಸೂರ್ಯ, ನಿಜ ಹೇಳು ಯಾಕೆ ಉಳಿಸಿದೆ?”

“ಹಾಗಿದ್ದರೆ ಕೇಳು: ನಿನ್ನನ್ನ ಹೃತ್ಪೂರ್ವಕ ಪ್ರೀತಿಸಿದವರು ಇಬ್ಬರೇ: ಅರ್ಥಕೌಶಲ ಮತ್ತು ನಾನು. ನಾನು ನಿನ್ನನ್ನು ಪ್ರೀತಿಸಿದ್ದು ಈಗಿನಿಂದಲ್ಲ; ಕನಕಪುರಿಗೆ ಬಂದು ಪ್ರಥಮಬಾರಿ ನಿನ್ನನ್ನ ಕಂಡಾಗಿನಿಂದಲೇ ಪ್ರೀತಿಸಿದೆ. ಅರ್ಥಕೌಶಲ್ಯ ಇದ್ದಾಗ ನಿನ್ನನ್ನ ಮುಟ್ಟಲಿಲ್ಲ. ಈಗ ಅನಿಸಿತು; ನಿನಗೆ ನನ್ನಂತ ಗಂಡಿನ ನೆರವು ಬೇಕೆಂದು, ಅಷ್ಟೆ”.

“ಇಷ್ಟು ವರ್ಷಗಳಾದ ಮೇಲೆ ನನಗೊಂದು ಸತ್ಯ ಗೊತ್ತಾಗಿದೆ. ಹೇಳಲೆ ವೈದ್ಯಮಿತ್ರಾ?”

“ಹೇಳು ಮಹಾರಾಣೀ.”

ಕಣ್ಣಲ್ಲಿ ಕಣ್ಣಿಟ್ಟು ಅವನನ್ನೇ ನೋಡುತ್ತ ಹೇಳಿದಳು:

“ಕನಕಪುರಿ ಅಂದರೆ ನಾನೇ! ಕನಕಪುರಿಯಾದ್ದರಿಂದ ನನಗೆ ಗಂಡನಿಲ್ಲ! ಮಹಾರಾಜನ ಮಡದಿಯಾಗಿರುತ್ತ ಅರ್ಥಕೌಶಲನ ಸೂಳೆಯಾಗಿದ್ದೆ. ಈಗ ನಿನಗೆ ಒಳಗಾಗಿದ್ದೇನೆ. ಇನ್ನೂ ಒಬ್ಬನನ್ನು ಬಯಸಿದ್ದೆ ನಾನು! ಗೊತ್ತ ನಿನಗೆ?”

“ಅವನ್ಯಾರು ಮಹಾರಾಣಿ?”

“ಶಿವಪಾದ!”

ಶಿಖರಸೂರ್ಯ ಆಘಾತ ಹೊಂದಿದ. ಅವಳ ಮಾತನ್ನ ನಂಬಲಿಲ್ಲ.

ಮಹಾರಾಣಿಯೇ ಮುಂದುವರಿಸಿದಳು:

“ನನಗೆ ಗೊತ್ತು ಆತ ಸಿಕ್ಕುವುದಿಲ್ಲವೆಂದು. ನಿನ್ನ ತರುವಾಯ ಕನಕಪುರಿಗೆ ಬರುವವನೂ ಒಬ್ಬ ಶಿವಪಾದನೇ! ನಾವದನ್ನ ತಪ್ಪಿಸಲಾರೆವು. ಅಲ್ಲಿಯ ತನಕ ಇಗೊ….”

ಎನ್ನುತ್ತ ಹಾಸಿಗೆಯ ದಿಂಬಿನ ಕೆಳಗಿನ ಕೀಲಿಕೈ ಗೊಂಚಲನ್ನು ತೆಗೆದು, ಅವನ ಕೈಗಿಟ್ಟು

“ತಗೊ. ಇನ್ನು ಕನಕಪುರಿ ನಿನ್ನದು.”

ಎಂದು ಹೇಳಿ ಹಾಸಿಗೆಯ ಬಳಿ ನಿಂತಳು. ಒಂದು ಕ್ಷಣ ಕೀಲಿಕೈ ಗೊಂಚಲು ತಗೊಂಡು ನೋಡಿ, ಅವಳ ಉಸಿರು ತಾಗುವಷ್ಟು ಸಮೀಪ ಹೋಗಿ,

“ನನ್ನ ಪ್ರೀತಿಗೇನು ಕಾಣಿಕೆ?” ಅಂದ.

ಅವನ ಮಾತು, ಮುಖ, ಅಂಗಚೇಷ್ಟೆಗಳಿಂದ ಮಹಾರಾಣಿ ಹೇಸಿಕೊಂಡಳು. ತಿರಸ್ಕಾರದಿಂದ ಕೇಳಿದಳು:

“ಈಗಲೂ ಹಕ್ಕಲದ ಈ ದೇಹವನ್ನ ಒಕ್ಕಬೇಕೆಂಬ ಅನಿಸುತ್ತದೆಯೆ?”

“ಹೌದು”.

“ಹಾಗಿದ್ದರೆ ತಗೊ”.

ಎಂದು ತೋಳು ತೆರೆದು ನಿಂತಳು. ನಿಯಂತ್ರಣ ತಪ್ಪಿದ ಶಿಖರಸೂರ್ಯನ ಹೃದಯ ರಾಗೋದ್ರೇಕದ ತಿದಿಯಾಗಿ, ಸುಖದ ಸರಬರಾಜಿಗೆ ಸಿದ್ಧನಾಗಿ ಅವಳನ್ನು ತಬ್ಬಿಕೊಂಡು ಸುಖಸುರತ ವಿಪರೀತದ ಮದದಲ್ಲಿ ಹಾಸಿಗೆಯ ಮೇಲೆ ಚೆಲ್ಲಿಕೊಂಡ.

ಕುದಿವ ಬೆದೆಗಳು ವಿದ್ಯುತ್ ಪಾತ್ರೆಯಲ್ಲಿ ಸೋರಿದ ಮೇಲೆ ಕಣ್ಣುತೆರೆದಾಗ ಅಂತಃಪುರದ ಅನೇಕ ಸೊಡರುಗಳು ಎಣ್ಣೆ ತೀರಿ ಆರಿದ್ದವು. ಮೂಲೆಯಲ್ಲಿದ್ದ ಒಂದೇ ಸೊಡರಿನ ಬೆಳಕಿನಲ್ಲಿ ನೋಡಿದಾಗ ಮಹಾರಾಣಿ ವಿಕಾರವಾಗಿ, ಬೆತ್ತಲಾಗಿ ಬಿದ್ದಿದ್ದಳು! ಮೈ ತಣ್ಣಗಾಗಿತ್ತು. ಸುಖದ ಉನ್ಮಾದದಲ್ಲಿಯೇ ಜೀವ ಹೋಗಿರಬೇಕು. ಶವದ ಬಾಯಿ ಆನಂದದಲ್ಲಿ ತೆರೆದುಕೊಂಡಿತ್ತು. ಕಣ್ಣು ತೆರೆದಿದ್ದವು! ಬಟ್ಟೆಯ ಚೆಂಡು ಮಾಡಿ ಕಟ್ಟಿಕೊಂಡಿದ್ದ ಮೊಲೆಗಳು ಎಲ್ಲೆಲ್ಲೋ ಬಿದ್ದಿದ್ದವು. ಬೊಕ್ಕೆ ಎಲುವಿನ ಅಸ್ಥಿಪಂಜರದಂತೆ ಕಾಣುತ್ತಿದ್ದಳು. ಹಾಗಿದ್ದರೆ ಈ ತನಕ ತಾನು ಹೆಣದ ಜೊತೆಗೆ…. ?

ಶಿಖರಸೂರ್ಯ ಕಿಟಾರನೆ ಕಿರಿಚಿ ಬೊಕ್ಕುಬೋರಲು ಮೂರ್ಛೆ ಬಿದ್ದ!

* * *

ಮಾರನೇ ಮುಂಜಾನೆ ಶಿಖರಸೂರ್ಯನಿಗೆ ಎಚ್ಚರವಾದಾಗ ಹೊತ್ತೇರಿತ್ತು. ಮೈ ಮುರಿಯುತ್ತ ಎದ್ದು ಸುತ್ತ ನೋಡಿದರೆ ಸುಕ್ರ, ಸೇವಕರು ಭಟರು ಕಿಸಿದ ಕಣ್ಣುಗಳಿಂದ ತನ್ನನ್ನೇ ನೋಡುತ್ತ ಕೂತಿದ್ದಾರೆ! ಥಟ್ಟನೆ ಮೈಮೇಲೆ ಬಟ್ಟೆ ಹೊದ್ದುಕೊಂಡು,

“ಸುಕ್ರ ಏನಿದೆಲ್ಲ?” ಅಂದ.

“ನೀನು ನಮಗೆ ಹೇಳದೆ ಕೇಳದೇ ಇಲ್ಲಿಗೆ ಬಂದು ಇಂಗೆ ಬಿದ್ದುಕೊಂಡೀದ್ದೀಯಲ್ಲ, ಯಾಕೆ ಅಂತ ಗೊತ್ತಾಗಲಿಲ್ಲ!”

“ಮಹಾರಾಣಿಯೆಲ್ಲಿ?”

“ಅವಳು ಮೊನ್ನೆಯೇ ಸತ್ತೋದಳಲ್ಲ ಒಡೆಯನೇ!”

ತಕ್ಷಣ ನಿನ್ನೆಯ ಬಂಡೆಯನ ಮಾತನ್ನು ನೆನೆದುಕೊಂಡು ಕೇಳಿದ:

“ನಿನ್ನೆ ಮಹಾರಾಣಿ ನನ್ನನ್ನ ಇಲ್ಲಿಗೆ ಬರಹೇಳಿದ್ದು …. ಬಂಡೆಯ ಎಲ್ಲಿ?”

“ಅವನು ನಿನ್ನೆ ಒಡ್ಡೋಲಗದಲ್ಲಿ ಮಹಾರಾಣಿಯ ಭೂತ ಕಂಡು ಹೆದರಿ ಜೊರಾ ಬಂದು ಮನಿಕ್ಕಂಡವನೆ!”

“ಭೂತ! ಹ್ಯಾಗೆ ಸತ್ತಳು?”

“ಪ್ರಧಾನಿ ವಿಷ ಹಾಕಲಿಲ್ಲವೆ ಒಡೆಯಾ?”

ವಿಷದಿಂದ ಪಾರುಮಾಡಿದ ದಿನ ಈತ ನೃತ್ಯಕಾರ್ಯಕ್ರಮದ ತುದಿಗೆ ಕತ್ತಲಕೋಣೆಯಲ್ಲಿ ಮಹಾರಾಣಿಯ ತುಟಿ ಹೀರಿದಾಗಲೇ ಅವಳು ವಿಷದಿಂದ ಕೂಡಿದ್ದಳು!

ವಿಷಕನ್ಯೆಯಂತೆ ಇವನೂ ವಿಷಪುರುಷನಾಗಿದ್ದನೆಂಬುದನ್ನು ಮರೆತಿದ್ದ! ನಿನ್ನೆ ರಾತ್ರಿ ತಾನು ಮಹಾರಾಣಿಯ ಭೂತದ ಜೊತೆಗಿದ್ದೆನೆಂದು ತಿಳಿದು ಮೈತುಂಬ ಮುಳ್ಳೆದ್ದು ಚಳಿಯಿಂದ ನಡುಗಿದ.