ಶಿಖರಸೂರ್ಯ ಬೆಳಿಗ್ಗೆ ಎದ್ದು ಬಿಡಾರದಲ್ಲಿ ಕೂತಿದ್ದಾಗ ಹಕ್ಕಗಳ ಚಿಲಿಪಿಲಿ ಸುಪ್ರಭಾತದೊಂದಿಗೆ ಹರ್ಷದಾಗಯಕ ತಂಗಾಳಿ ಬೀಸಿ ಬಂತು. ನದಿಯ ನೀರು ಚಿಕ್ಕಪುಟ್ಟ ತೆರೆಗಳಿಂದ ಸಂಭ್ರಮ ಪಡುತ್ತಿತ್ತು. ನಿನ್ನೆಯ ಘಟನೆಗಳು ಒಂದೊಂದೇ ನೆನಪಿಗೆ ಬಂದು ಶಿಖರಸೂರ್ಯ ನಗುತ್ತ ಹೊರಗೆ ಕೂತಿದ್ದ ಬಂಡೆಯನನ್ನು ಒಳಗೆ ಕರೆದು ಕೇಳಿದ:

“ಸ್ವಯಂ ಪ್ರಧಾನಿ, ಆದಿತ್ಯಪ್ರಭನ ಮಾವ – ಮಹಾರಾಣಿಗೂ ನನಗೂ ವಿಷ ಹಾಕಿದ್ದನಲ್ಲ ಮಾರಾಯ! ಕನಕಪುರಿಯ ಮನಸ್ಸೇ ತಿಳಿಯುವುದಿಲ್ಲವಲ್ಲ. ಅಲ್ಲವೊ ಬಂಡೆಯ, ಮಹಾರಾಣಿ ನನಗೆ ವಿಷವುಣ್ಣಿಸಲಿದ್ದಾಳೆ ಅಂತಲ್ಲವ ನೀನು ಹೇಳಿದ್ದು?”

ಅಂದ. ಅದಕ್ಕೆ ಬಂಡೆಯ –

“ನಾನು ಅಂಗೇಳಿದ್ದು ನಿಜ ಒಡೆಯಾ. ಆದರೆ ಪ್ರಧಾನಿ ವಿಷ ಇಕ್ಕಿದ್ದಕ್ಕೂ ಕಾರಣ ಐತೆ” ಅಂದ.

ಶಿಖರಸೂರ್ಯ ಕುತೂಹಲದಿಂದ “ಅದೇನು ಕಾರಣ ಕಂಡುಹಿಡಿದೆಯೊ ಮರಾಯಾ?” ಅಂದ.

“ಮಹಾರಾಣಿ ನಿನ್ನನ್ನ ಮುಗಿಸಬೇಕಂತ ಜಟ್ಟಿಗಳನ್ನು ಕರೆಸಿದ್ದಳು. ಅವರೆಲ್ಲಾ ನಮ್ಮ ಕಡೆಯವರಾಗಿದ್ದರಿಂದ ನಮ್ಮ ಮಾತು ಕೇಳಿ ವಾಪಸಾದರು. ನಿಮ್ಮ ಮಹಾರಾಜ ಇಂದೋ ನಾಳೆಯೇ ಹರಾ ಅನ್ನೊದಕ್ಕೆ ಸಿದ್ಧವಾಗವ್ನೆ, ಅವನು ಹರಾ ಅಂದರೆ ಪಟ್ಟಕ್ಕೆ ಯಾರು? ಪ್ರಧಾನಿ ಮಗನೇ! ಆದರೆ ಅದಕ್ಕೆ ಅಡ್ಡಿ ಬರೋರಾರು? ನೀನು ಮತ್ತು ಮಹಾರಾಣಿ! ನಿಮ್ಮಿಬ್ಬರನ್ನೂ ಮುಗಿಸಿದರೆ – ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಲಿ ಅಂದುಕೊಂಡ!”

ಈಗ ಮಾತ್ರ ಶಿಖರಸೂರ್ಯನಿಗೆ ನಗೆ ತಡೆದುಕೊಳ್ಳಲಾಗಲಿಲ್ಲ. ಅವನು ನಗುವುದನ್ನ ನೋಡಿ “ಒಡಯ ತನ್ನ ಮಾತನ್ನು ನಂಬಲಿಲ್ಲವೆಂದು ಬಂಡೆಯನಿಗೆ ನಾಚಿಕೆಯಾಯಿತು. ಮಳಮಳ ಒಡೆಯನ ಮುಖವನ್ನೇ ನೋಡುತ್ತ

“ನನ್ನ ಲೆಕ್ಕ ತಪ್ಪಂತೀಯಾ ಒಡೆಯಾ?” ಎಂದು ವಿವರಣೆ ನಿರೀಕ್ಷಿಸಿ ಕೇಳಿದ.

“ಇಲ್ಲಪ್ಪ. ನೀನು ಊಹಿಸಿದ್ದೇ ಸರಿ. ಇವತ್ತು ಮಹಾರಾಣಿಯ ಸಮಯ ಕೇಳಿ ತಿಳಿಸು” ಎಂದು ಪುನಃ ಮುಗುಮ್ಮಾಗಿ ನಕ್ಕ.

ಯಾಕಂತೀರೊ ? ಹಾಲಲ್ಲಿ ವಿಷ ಹಾಕಿಸಿದವನು ಪ್ರಧಾನಿಯಲ್ಲ, ಶಿಖರಸೂರ್ಯ! ಅರಮನೆಯ ಪಾಕಾಚಾರಿ ರಾಜವೈದ್ಯನ ಹಳೇ ಪರಿಚಯ. ಅವನಿಗೆ ಹಿಡಿತುಂಬ ಚಿನ್ನ ಕೊಟ್ಟು ತನ್ನ ಹಾಗೂ ಮಹಾರಾಣಿಯ ಗಿಂಡಿಗಳಲ್ಲಿ ವಿಷ ಹಾಕಿಸಿ, ಪ್ರಧಾನಿಯ ಕಡೆಗೆ ಕೈತೋರಿಸುವಂತೆ ತಯಾರು ಮಾಡಿದ್ದ!

ಅಷ್ಟರಲ್ಲಿ ಸುಕ್ರ ಬಂದು, “ಪಾಕಾಚಾರಿಯನ್ನು ಮುಗಿಸಿದೆವು ಒಡೆಯಾ!” ಎಂದು ಹೇಳಿ ಆಮೇಲೆ ಕೇಳಿದ:

“ಇಷ್ಟು ದಿನ ಇಂಥ ನರಿಗಳ ಮಧ್ಯ ಆ ಹೆಂಗಸು ಹೆಂಗೆ ಬದುಕಿದೆ ? ನೆನಪಾದರೆ ಕರುಳು ಚುರ್ಂತಿದೆ, ನನ್ನೊಡೆಯಾ.”