ಅದೇ ದಿನ ದೇವಸ್ಥಾನದಿಂದ ಬಂದೊಡನೆ ದಂಡೆತ್ತಿಬಂದವನು ಶಿಖರಸೂರ್ಯನೆಂಬ ಸುದ್ದಿ ಗೊತ್ತಾಗಿ ಮಹಾರಾಣಿ ಪ್ರಧಾನಿಯನ್ನ ಕರೆಕಳಿಸಿ – ಸಂದರ್ಭವನ್ನು ಹ್ಯಾಗೆ ನಿಭಾಯಿಸುವುದೆಂದು ಚರ್ಚಿಸಿದಳು. ಚಿತ್ತ ಕದಡಿ ಅತ್ತಿತ್ತ ಅಲೆದಾಡುತ್ತ, “ನಾನು ಅವನನ್ನ ನಂಬಲಾರೆ, ಅವನೊಬ್ಬ ಕುತಂತ್ರಿ. ಅವನು ಬದುಕಿರೋತನಕ ನಮಗೆ ಕುತ್ತು ತಪ್ಪಿದ್ದಲ್ಲ” ಎಂದು ಹೇಳಿ ಹಲ್ಲು ಕಚ್ಚಿ ಮುಷ್ಟಿ ಬಿಗಿದು ಪೀಠಕ್ಕೆ ಗುದ್ದಿ ಕುಕ್ಕರಿಸಿದಳು.

ಅವು ಮಳೆಯ ದಿನಗಳಲ್ಲವಾದರೂ ಸಂಜೆ ಒಂದು ಸರಳು ತುಂತುರು ಮಳೆ ಬಂದು ವಾತಾವರಣ ಧೂಳಿಲ್ಲದೆ ನಿಚ್ಚಳವಾಗಿತ್ತು. ಪ್ರಧಾನಿ ಸಾಧ್ಯವಾದಷ್ಟೂ ಕಣ್ಣಿಗೆ ಕಣ್ಣು ಕೊಟ್ಟು ನೋಡುತ್ತಿರಲಿಲ್ಲ. ಆಕೆ ಬೇರೆ ಕಡೆ ನೋಡುತ್ತಿದ್ದಾಗ ಮಾಹಾರಾಣಿಯನ್ನೇ ಟಕಮಕ ನೋಡುತ್ತ ಸನ್ನಿವೇಶದ ಗಂಭಿರತೆಗೆ ಭೀತನಾಗಿ ತಬ್ಬಿಬ್ಬಾಗಿದ್ದ ದಾಸಾನುದಾಸನಂತೆ ಹಲ್ಲು ಗಿಂಗುತ್ತ, ಆಕೆ ಮಾತಾಡಿದೊಡನೆ ಕಿವಿಗೊಟ್ಟು ಭಯಭಕ್ತಿಯಿಂದ ಕೇಳಿಸಿಕೊಳ್ಳುತ್ತ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಭಾರೀ ಆಸಕ್ತಿಯನ್ನು, ನಿಷ್ಠೆಯನ್ನು ಅಭಿನಯಿಸುತ್ತಿದ್ದ.

“ಹೇಳು ಪ್ರಧಾನಿ, ಅವನ ಸೈನ್ಯ ಎಷ್ಟಿದೆ?” ಎಂದೊಡನೆ,

ಎದ್ದು ನಿಂತು ಹೇಳಿದ:

“ಮೂರು ಸಾವಿರಕ್ಕೂ ಮೇಲ್ಪಟ್ಟು ಅವನ ಸೈನ್ಯವಿದೆ ಮಹಾರಾಣಿ. ಅವರಲ್ಲಿ ಸಾವಿರ ಸೈನಿಕರ ಕೈಯಲ್ಲಿ ಶಸ್ತ್ರಾಸ್ತ್ರಗಳಿವೆ. ವಿಷದ ಬಿಲ್ಲುಬಾಣದವರೇ ಒಂದು ಕಡಿಮೆ ನಲವತ್ತರ ಆರು ಪಡೆಗಳಿವೆಯಂತೆ. ಮುನ್ನೂರು ಮಾರಕಾಸ್ತ್ರಗಳಿವೆ. ಉಳಿದವರ ಕೈಯಲ್ಲಿ ಕೋಲು ದೊನ್ನೆಗಳಿವೆ.”

“ಕೂತುಕೋ.”

ಎಂದಳು ಮಹಾರಾಣಿ. ಪ್ರಧಾನಿ ಕೈ ಕೈ ಹೊಸೆಯುತ್ತ ಚಡಪಡಿಸುತ್ತ ಕೂತ. ಮತ್ತೆ ಕೇಳಿದಳು –

“ಈಗ ಹೇಳು, ನಮ್ಮ ಸೈನ್ಯದ ಸ್ಥಿತಿಗತಿ ಏನು?”

ಪ್ರಧಾನಿ ಮತ್ತೆ ಎದ್ದು ನಿಂತು, –

“ಕ್ಷಮಿಸಬೇಕು ಮಹಾರಾಣಿ, ಎಲ್ಲಾ ಮಾಂಡಳಿಕರ ಸೈನ್ಯ ಸೇರಿದರೂ ನಮ್ಮ ಸೈನ್ಯ ಒಂದೂವರೆ ಸಾವಿರವಾಗಲಾರದು. ಆಕ್ರಮಣದ ಅಂದಾಜು ನಮಗಾಗಲಿಲ್ಲ. ಬಂಟರು ತಂತಮ್ಮ ಊರು ಕೇರಿಗೆ ಹೋಗಿದ್ದಾರೆ. ಸಂಬಳವಿಲ್ಲದೆ ಬೇರೆಯವರ ಸೈನ್ಯ ಸೇರಿಕೊಂಡಿದ್ದಾರೆ. ಈಗಿದ್ದವರ ನಿಷ್ಠೆಯನ್ನು ಕೂಡ ನಂಬಲಾಗುತ್ತಿಲ್ಲ.”

“ಯಾಕೆ ? ಯಾಕೆ?”

“ಬದೆಗನನ್ನು ಹಿಂಸಿಸಿದ್ದು ನಾವಾಗಿ ಅಪಾಯವನ್ನ ಮೈಮ್ಯಾಲೆಳೆದುಕೊಂಡಂತಾಗಿದೆ ಮಹಾರಾಣಿ. ಹೆಚ್ಚಿನ ಬಂಟರು ಅವನ ಜಾತಿಯವರು. ಸುಕ್ರ ಬೇರೆ ಶಿಖರಸೂರ್ಯನ ದಂಡಿನಲ್ಲಿ ದೊಡ್ಡ ಬಂಟನಾಗಿದ್ದಾನೆ.”

– ಎಂದು ಹೇಳಿ ಕೂತ.

“ನಮ್ಮ ಗುಪ್ತಚಾರರು ಏನಾದರೂ ಹೇಳಿದ್ದಿದೆಯೊ?”

– ಎಂದಳು ಮಹಾರಾಣಿ. ಪ್ರಧಾನಿ ಪುನಃ ಎದ್ದು ನಿಂತು ನೋಡುತ್ತ ಹಸ್ತ ಹೊಸೆಯುತ್ತ ಹೇಳಿದ:

“ರಾಜಧಾನಿಯ ತುಂಬ ಶಿಖರಸೂರ್ಯನ ಗುಪ್ತಚಾರರೇ ತುಂಬಿದ್ದಾರೆ ಮಹಾರಾಣಿ, ನಮ್ಮ ಅನೇಕ ಗಣ್ಯರು ಅವನ ಭೇಟಿಗೆ ಕದ್ದು ಹೋಗುತ್ತಿದ್ದಾರೆ. ಭೇಟಿಯಾದವರಿಗೆಲ್ಲ ಮುಷ್ಟಿತುಂಬ ಚಿನ್ನ ಕೊಟ್ಟು ತನ್ನ ಕಡೆ ಒಲೆಸಿಕೊಳ್ಳುತ್ತಿದ್ದಾನೆ. ನಮಗೆ ನಿಷ್ಠರಾದವರಾರೋ, ವೈರಿಗಳ್ಯಾರೋ ತಿಳಿಯದಾಗಿದೆ.”

“ಈ ಸಭೆಗೆ ವರ್ತಕ ಸಂಘದ ಪ್ರತಿನಿಧಿಗಳನ್ನ ಕರೆಯಲಿಲ್ಲವೆ?”

“ಅವರಿಂದ ಬಂದ ಸುದ್ದಿಯಂತೂ ಇನ್ನೂ ಭಯಾನಕವಾಗಿದೆ. ವರ್ತಕ ಸಂಘದ ಬಹುತೇಕ ವರ್ತಕರು ಅವನ ಕಡೆಗೆ ವಾಲಿದ್ದಾರೆ. ವರ್ತಕ ಸಂಘದ ಪದಾಧಿಕಾರಿಗಳು ನನ್ನ ಕಡೆ ನೋಡಿ ಮುಖ ತಿರುಗಿಸಿಕೊಂಡು ಹೋದರು! ಹೇಳಿ ಕಳಿಸಿದರೆ ಮನೆಯಲ್ಲಿದ್ದೂ ಇಲ್ಲವೆಂದು ಹೇಳಿದರು. ಏನು ಮಾಡಲಿ ಮಹಾರಾಣಿ? ತಾವು ಅಪ್ಪಣೆ ಕೊಟ್ಟರೆ ಒಂದು ಮಾತು ಹೇಳೋಣ ಅಂತಿದ್ದೇನೆ.”

“ಹೇಳು.”

“ಶಿಖರಸೂರ್ಯ ಹೊರಗಿನವನಲ್ಲ, ನಡಾವಳಿಯಿಂದ ನಮಗೆ ಅಳಿಯನಾಗಬೇಕು. ಉಪಾಯದಿಂದ ಅವನೊಂದಿಗೆ ಒಪ್ಪಂದ ಮಾಡಿಕೊಂಡರೆ ನಮಗದು ಅವಮಾನದ ಸಂಗತಿಯೂ ಆಗಲಾರದು,- ಅಂತ ನನ್ನ ಅಭಿಪ್ರಾಯ.”

ಮಹಾರಾಣಿ ತಲೆ ಬಗ್ಗಿಸಿ ನೆಲ ನೋಡುತ್ತಿದ್ದ ಪ್ರಧಾನಿಯನ್ನ ಅವನ ಹೃದಯದಾಳಕ್ಕಿಳಿದು ನೋಡುವಂತೆ ಇರಿವ ಕಣ್ಣಿಂದ ನೋಡಿದಳು. ಧನಪಾಲ ತಕ್ಷಣ ಮುಖ ಕೆಳಗೆ ಹಾಕಿ ಹುಬ್ಬಿನ ಕಡೆಯಿಂದ ಅವಳನ್ನೇ ನೋಡಿದ. ಅವಳ ಮುಖ ಕೋಪದಿಂದ ಕೆಂಪೇರಿ ಕಣ್ಣು ಕೆಂಡವಾಗಿದ್ದವು. ಕೇಳಿದಳು:

“ಹೇಳಯ್ಯಾ ನಿನ್ನನ್ನಾದರೂ ನಂಬಬಹುದ?”

ಧನಪಾಲ ಈ ಪ್ರಶ್ನೆಯನ್ನ ನಿರೀಕ್ಷಿಸಿರಲಿಲ್ಲ. ಮುಖ ಮ್ಯಾಲೆತ್ತಿ

“ತಾವು ಈ ಸೇವಕನನ್ನ ನಂಬಬಹುದು ಮಹಾರಾಣಿ”

– ಅಂದ. ತನ್ನ ಮಾತಿನಲ್ಲಿ ನಂಬಿಕೆ ಬಂತೋ ಇಲ್ಲವೋ ಎಂದು ಮಳ ಮಳ ಅವಳ ಮುಖವನ್ನೇ ನೋಡಿದ. ಮಹಾರಾಣಿ ಅವನ ಮುಖ ನೋಡದೆ ಬೇರೆ ಕಡೆ ಹೊರಳಿ ಎರಡು ಹೆಜ್ಜೆಯಿಟ್ಟು,

“ನೀನು ಹೇಳುವುದು; ಈಗ ನಾನು ಮತ್ತು ರಾಜ ಇಬ್ಬರೇ ಒಂದು ಕಡೆ, ಉಳಿದವರೆಲ್ಲ ಸೂರ್ಯನ ಕಡೆಗಿದ್ದಾರೆ – ಅಂತಲ್ಲವ?”

“ತಮ್ಮೊಂದಿಗೆ ನಾನಿದ್ದೀನಲ್ಲ ಮಹಾರಾಣಿ.”

“ಹಾಗಿದ್ದರೆ ಹೇಳು. ನಮ್ಮ ಮೇಲೆ ನಂಬಿಕೆಯಿರುವ, ನಾನು ನಂಬಬಹುದಾದ ಹತ್ತು ಜನ ಬಂಟರು ಬೇಕು, ಕೊಡ್ತೀಯಾ?”

“ಕೊಡಬಹುದು ಮಹಾರಾಣಿ”

“ಬಹುದು ಅಲ್ಲವೋ, ಕೊಡಬಲ್ಲೆಯಾ? ಬೊಗಳು.”

– ಎಂದು ಮಹಾರಾಣಿ ಕಿರಿಚಿದಳು. ಇಡೀ ಅರಮನೆಯೇ ಕಿರಿಚಿದಂತಾಗಿ ದೂರದಲ್ಲಿದ್ದ ಸೇವಕರು ಯಾರಿಗೇನಾಯಿತೆಂದು ಬೆದರಿ ಓಡಿಬಂದು ಹಣಕಿದರು. ಮಹಾರಾಣಿ ಆಗಲೇ ಸಾವರಿಸಕೊಂಡು ಮೊದಲಿನಂತಾಗಿದ್ದಳು. ಧನಪಾಲ ಮಾತ್ರ ಜಲಜಲ ಬೆವರಿ ಗಡಗಡ ನಡುಗಿ ಮಹಾರಾಣಿಯನ್ನೊಮ್ಮೆ ಸೇವಕರನ್ನೊಮ್ಮೆ ನೋಡುತ್ತ –

“ಕೊ ಕೊ ಕೊಡ್ತೀನಿ ಮಹಾರಾಣೀ” ಅಂದ ಅವಸರದಿಂದ.

ಮಹಾರಾಣಿ ಅವನ ಮಾತಿಗೆ ಪ್ರತಿಕ್ರಿಯಿಸಲೇ ಇಲ್ಲ. ಆಗಲೇ ನಿರ್ಧರಿಸಿದಂತೆ ಹೇಳಿದಳು:

“ಹೋಗು ಶಿಖರಸೂರ್ಯ ನಾಳೆ ನಮ್ಮ ಅತಿಥಿಯಾಗಲಿ, ಅದ್ದೂರಿ ಸ್ವಾಗತಮಾಡಿ ಅರಮನೆಗೆ ಕರೆದುಕೊಂಡು ಬಾ. ಸಂಜೆ ವರ್ತಕ ಸಂಘದ ಪದಾಧಿಕಾರಿಗಳಿಗೂ, ಮಾಂಡಳಿಕ ಮನ್ನೆಯರಿಗೂ ಆಮಂತ್ರಣವಿರಲಿ, ಸಭಾಮಂಟಪದಲ್ಲಿ ಮನರಂಜನೆ ಕಾರ್ಯಕ್ರಮ ಏರ್ಪಡಿಸು” ಎಂದಳು. “ಅಪ್ಪಣೆ ಮಹಾರಾಣಿ” ಎಂದು ನಮಸ್ಕರಿಸಿ ಅವಸರದಿಂದ ನಡೆದ. ಬಾಗಿಲವರೆಗೆ ಬಂದಿದ್ದಾಗ ಮಹಾರಾಣಿ “ನಿಲ್ಲು” ಎಂದಳು. ನಿಂತ ಮೇಲೆ ತಾನೇ “ಏನಿಲ್ಲ ತೊಲಗು” ಎಂದಳು. ತೊಲಗಿದ.

ಶಿಖರಸೂರ್ಯನ ಕಾರ್ಯ ಆತ ಅಂದುಕೊಂಡಂತೇ ಸುಲಭವಾಗಿತ್ತು. ಕನಕಪುರಿಯ ಮಾಂಡಳಿಕ, ಮನ್ನೆಯರನ್ನ ವರ್ತಕ ಶ್ರೀಮಂತರನ್ನ ಭ್ರಷ್ಟಗೊಳಿಸುವುದು ಸಲಭದ ಕೆಲಸವಾಯಿತು. ನಿರೀಕ್ಷಿತ ಪ್ರತಿಭಟನೆಯಾಗಲಿ ಅಪನಂಬಿಕೆಯಾಗಲಿ ಎದುರಾಗಲೇ ಇಲ್ಲ. ಎಲ್ಲರೂ ರಾಜವಂಶದ ಋಣದಲ್ಲಿದ್ದವರಾದರೂ ಹಣ ಗಳಿಸುವುದಕ್ಕಾಗಿ ಮತ್ತು ಪುಕ್ಕಟೆ ಮನರಂಜನೆಗಾಗಿ ಅರಮನೆಯನ್ನು ಬಳಸಿಕೊಂಡವರೇ ಶಿವಾಯಿ ಇಕ್ಕಟ್ಟಿನ ಸಮಯದಲ್ಲಿ ಅದರ ಪರವಾಗಿ ನಿಲ್ಲುವಂಥವರಾರೂ ಇರಲಿಲ್ಲ. ಆಳ್ವಿಕೆಯಲ್ಲಿ ಅವರ ಪಾಲುಗಾರಿಕೆ ಇದ್ದರೂ ನಿಷ್ಠೆ ತೋರಬೇಕಾದಾಗ, ಜವಾಬ್ದಾರಿ ಹೊರಬೇಕಾದಾಗ ಹಿಂಜರಿದರು. ಅರ್ಥಕೌಶಲ ಇರುವತನಕ ಅರಮನೆಯ ಅಧಿಕಾರ ನಿರಾತಂಕವಾಗಿತ್ತು. ಆತ ಕೌಶಲ್ಯದಿಂದ ವರ್ತಕರಿಂದ ನಿಷ್ಠೆಯನ್ನು ಹೊರಗೆ ತೆಗೆಯುತ್ತಿದ್ದ. ಧನಪಾಲ ಬಂದ ಮೇಲೆ ಮಾತ್ರ ಹೇಳಕೇಳುವವರಾರೂ ಇಲ್ಲದೆ ಅರಮನೆಯ ಮಾನ ಅನಾಥವಾಯಿತು. ಸಂಬಳವಿಲ್ಲದೆ ಬಂಟರು ಸೈನ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಹೋದರು. ಉಳಿದವರು ನಿಷ್ಠೆಯನ್ನ ಉಳಿಸಿಕೊಂಬ ಯಾವ ಕ್ರಮವನ್ನೂ ಧನಪಾಲ ತೆಗೆದುಕೊಳ್ಳಲಿಲ್ಲ. ಧನಪಾಲ ಮಂತ್ರಿಯಾದ ಮೇಲಂತೂ ಅವನ ಪಿತ್ತ ನೆತ್ತಿಗೇರಿತು. ಒಬ್ಬೊಬ್ಬರನ್ನು ಒಂದೊಂದು ಕಾರಣಕ್ಕೆ ದ್ವೇಷಿಸುತ್ತಿದ್ದ. ಅವರಲ್ಲಿ ಅನೇಕರು ಅರ್ಥಕೌಶಲನ ನಂತರ ಪ್ರಧಾನಿಯಾಗಲು, ಕೊನೇಪಕ್ಷ ಹೆಚ್ಚಿನ ಹುದ್ದೆಗೇರಲು ಬಯಸಿದವರಿದ್ದರು. ಧನಪಾಲ ಬಂದು ಯಾವಾಗ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸುರು ಮಾಡಿದನೋ ಆಗ ಮಾತ್ರ ಅವರು ನಿಷ್ಠೆಯನ್ನು ಮಾರಾಟ ಮಾಡತೊಡಗಿದರು. ರಾಜಕಾರಣದಲ್ಲಿ ಯಾರ ನಿಷ್ಠೆಯನ್ನೂ ಒಂದೇ ಸಲ ಕೊಳ್ಳಲಾಗುವುದಿಲ್ಲ. ಕೆಲಸಕ್ಕೊಮ್ಮೆ ಕೊಳ್ಳಬೇಕಾಗುತ್ತದೆ. ಇಂಥ ಸರಳ ಸತ್ಯವನ್ನೂ ಅವನು ಅರಿಯಲಿಲ್ಲ.

ಕೊತವಾಲನ ಸ್ಥಾನಮಾನಗಳನ್ನು ಕೆಳಗಿಳಿಸಿದ್ದರಿಂದ ರಾಜಧಾನಿಯನ್ನು ಪ್ರವೇಶಿಸುವ ಅಗಸೀಬಾಗಿಲು ವೈರಿಯ ವಶವಾಯಿತು. ಅನೇಕ ಮುಖ್ಯರಾದ ವರ್ತಕರನ್ನು ಎಲ್ಲರೆದುರು ಅವಮಾನಿಸಿದ್ದರಿಂದ ಅವರ ನಿಷ್ಠೆ ತುಂಬ ಅಗ್ಗವಾಗಿ ಶಿಖರಸೂರ್ಯನಿಗೆ ಲಭ್ಯವಾಯಿತು. ರಾಜಧಾನಿಯಲ್ಲಿ ಒಂದು ರಹಸ್ಯವೂ ಈಗ ರಹಸ್ಯವಾಗಿ ಉಳಿಯದಂತಾಯಿತು.

ಮಹಾರಾಣಿಯ ದುರ್ದೈವವೆಂದರೆ ಇದ್ಯಾವುದೂ ಅವಳ ಗಮನಕ್ಕೆ ಬಂದಿರಲೇ ಇಲ್ಲ. ಯಾಕೆಂದರೆ ಮಗನ ಮದುವೆಯನ್ನೇ ವಿರೋಧಿಸಿದಾಳಾಗಿ ರಾಜ, ಪ್ರಧಾನಿ ಇಬ್ಬರೂ ಹಗೆಗಳಾಗಿ ಆಕೆಯನ್ನು ಸೇಡಿನಿಂದ ಉದ್ದೇಶಪೂರ್ವಕ ಮರೆತರು. ಮಹತ್ವದ ಯಾವುದೇ ತೀರ್ಮಾನವನ್ನು ಆಕೆಯ ಗಮನಕ್ಕೆ ತರಲೇ ಇಲ್ಲ. ಮಗ ಆದಿತ್ಯಪ್ರಭನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದರೂ ಅದನ್ನು ಮಹಾರಾಣಿಗೆ ತಿಳಿಸಿರಲಿಲ್ಲ.

ಇಂದಿನ ಸಂಜೆ ಭೋಜನಕ್ಕೆ ಬರಬೇಕೆಂದು ಪ್ರಧಾನಿ ಬಂದು ಆಮಂತ್ರಿಸಿದಾಗ ಮೊದಲು ಒಪ್ಪಿಕೊಂಡನಾದರೂ ಆಮೇಲೆ ಶಿಖರಸೂರ್ಯನಿಗೆ ಸಂದೇಹ ಬಂತು. ಸಲಹೆ ಕೇಳಿದಾಗ ಸುಕ್ರ, “ಒಪ್ಪಕೊಂಡಾದ ಮೇಲೆ ಹೋಗಲೇಬೇಕು. ಅಲ್ಲಿ ನಿನಗೆ ಎರಡು ಅಪಾಯಗಳಿವೆ ಒಡೆಯಾ. ಒಂದು : ಮಹಾರಾಣಿ ಈ ದಿನ ಹತ್ತು ಜನ ಬುಡಕಟ್ಟಿನ ಜಟ್ಟಿಗಳನ್ನು ಕರೆಸಿದ್ದಾಳಂತೆ. ಯಾರೇ ಬಂದರೂ ಅವರನ್ನು ನಾವು ನೋಡಿಕೊಳ್ತೇವೆ. ನಿನ್ನ ಹಿಂದೆ ಬೊಂತೆಯ ಇರ್ತಾನೆ. ಹತ್ತಿಪ್ಪತ್ತು ಅಡಿಗಳಲ್ಲಿ ನಾನು ಮತ್ತು ಬಂಡೆಯ ಇರ್ತೇವೆ. ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ನಮ್ಮ ಸೈನಿಕರಿದ್ದಾರೆ. ಇನ್ನು ಎರಡನೆ ಅಪಾಯವೆಂದರೆ ರಾತ್ರಿ ಊಟದಲ್ಲಿ ವಿಷ ಹಾಕಿರುತ್ತಾರೆ ಅಂತ ಸುದ್ದಿ. ಅದನ್ನು ನೀನು ನೋಡಿಕೊಂಡರಾಯ್ತು, ಉಳಿದಂತೆ ನಮ್ಮ ತಯಾರಿಯಲ್ಲಿ ನಾವಿದ್ದೇವೆ” ಅಂದ.

ಶಿಖರಸೂರ್ಯ ಅರಮನೆಗೆ ಹೋಗುವುದಕ್ಕೆ ವಿಶೇಷ ಶೃಂಗಾರವಾದ. ಹಳೆಯ ಕೊಳೆ ಬಟ್ಟೆ ಕಳೆದು ಬಂದೀಕಟ್ಟೆಯ ಸರಪಳಿ ಅಂಚಿನ ಮಡಿ ಧೋತ್ರ ಉಟ್ಟ. ಗಿಣಿ ಬರೆದ ತಲೆವಸ್ತ್ರ ಸುತ್ತಿ ಸಳೆನೂಲು ಹೊದ್ದು ಓರೆ ಅರಪಳಿ ಹಾಕಿಕೊಂಡ. ಬಂಗಾರ ಕಟ್ಟಿನ ಚಾಕು, ಬೆಳ್ಳಿ ಕಟ್ಟಿನ ಚೂರಿ ಸೊಂಟದಲ್ಲಿ ಏರಿಸಕೊಂಡು ಚಂದ್ರಾಯುಧ ಹಿಡಿದುಕೊಂಡ. ಆಮೇಲೆ ಕಾಲಿಗೆ ಎಕ್ಕಡ ಹಾಕಿಕೊಂಡು ಪಂಚವಾದ್ಯ ಮೇಳದ ಹಿಂದಿನಿಂದ ಹೊರಟ. ಸುಕ್ರ ಬಂಡೆಯ ಅವನ ಹಿಂದಿನಿಂದ ಬರುತ್ತಿದ್ದರೆ ಅವರ ಮುಂದೆ ಬೊಂತೆಯ ಚಿನ್ನ ತುಂಬಿದ ತಟ್ಟೆಯ ಮೇಲೆ ಬಣ್ಣದ ಬಟ್ಟೆ ಹೊದಿಸಿ ಹಿಡಿದುಕೊಂಡು ಬರುತ್ತಿದ್ದ.

ಪ್ರಧಾನಿ, ರಾಜಗುರು, ಪುರೋಹಿತರು ಮತ್ತು ವೇದಾಂತಿಗಳು, ಮಹಾರಾಣಿಯಿದ್ದಲ್ಲಿಗೆ ಶಿಖರಸೂರ್ಯನನ್ನು ಕರೆದುಕೊಂಡು ಹೋದರು. ಮಹಾರಾಣಿಯನ್ನು ನೋಡಿದೊಡನೆ ಬೊಂತೆಯ (ತಟ್ಟೆಯ ಮ್ಯಾಲಿನ ಬಟ್ಟೆ ತೆಗೆದು) ಕಾಣಿಕೆಯನ್ನು ಆಕೆಯ ಮುಂದೆ ಇಟ್ಟು ವಿನಯದಿಂದ ಅಂಡೆತ್ತಿ ತಲೆಯ ನೆಲಕ್ಕೂರಿ ನಮಸ್ಕರಿಸಿ ಹಿಂದೆ ಸರಿದ. ಪರಸ್ಪರ ನಮಸ್ಕಾರದ ಶಾಸ್ತ್ರ ಮುಗಿದ ಮೇಲೆ ಕಾಣಿಕೆಗಳನ್ನು ನೋಡಿ ಮಹಾರಾಣಿಯ ಕಣ್ಣು ಅಗಲವಾದವು. ಆನಂದದಿಂದ ಮುಖ ಮ್ಯಾಲೆತ್ತಿ ನೋಡಿದಳು. ಶಿಖರಸೂರ್ಯ ಥೇಟ್ ಇಂದ್ರನಂತೆ ಕಾಣಿಸುತ್ತಿದ್ದಾನೆ! ಅವನ ಅಪಾರವಾದ ಸೈನ್ಯ, ಚಿನ್ನ, ಶ್ರೀಮಂತಿಕೆ ಕಂಡು ಬೆಕ್ಕಸ ಬೆರಗಾದ ಮಹಾರಾಣಿ ಒಂದೊಂದನ್ನೇ ಪ್ರೀತಿ ಆಸಕ್ತಿ ಆಶ್ಚರ್ಯಗಳಿಂದ ನೋಡುತ್ತಿದ್ದಾಳೆ! ಶಿಖರಸೂರ್ಯ ಮುಗುಳು ನಗುತ್ತ ಅವಳ ಮುಖವನ್ನೇ ನೋಡುತ್ತಿದ್ದ. ಮಹಾರಾಣಿ ತೋರುಬೆರಳುಗಳನ್ನು ತನ್ನ ಚೆಂದುಟಿಯ ಮ್ಯಾಲಿಟ್ಟುಕೊಂಡು ಬಹಳ ಹೊತ್ತು ಶಿಖರಸೂರ್ಯನನ್ನೇ ನೋಡುತ್ತ ಆಮೇಲೆ ಅವನ ಎರಡೂ ಕೈಹಿಡಿದುಕೊಂಡು “ರಾಜವೈದ್ಯನೇ!” ಎಂದು ಹೇಳುತ್ತ ಪಕ್ಕದ ಪೀಠದಲ್ಲಿ ಕೂರಿಸಿಕೊಂಡಳು. ಬೊಂತೆಯ ಸೂರ್ಯನ ಹಿಂದೆ ಕಲ್ಲಿನ ಕಂಬದಂತೆ ನಿಂತ. ಸುಕ್ರಬಂಡೆಯರು ಜಟ್ಟಿಗಳ ಶೋಧನೆ ಮಾಡುತ್ತಿದ್ದರು. ವೇದಾಂತಿ ಮತ್ತು ಪ್ರಧಾನಿಯೂ ಆಸನಗಳಲ್ಲಿ ಕೂತರು.

ಮಹಾರಾಣಿ ಕೂತಿದ್ದರೂ ಇನ್ನೂ ಶಿಖರಸೂರ್ಯನ ಕೈ ಬಿಟ್ಟಿರಲಿಲ್ಲ. ಅವಳೇ ಮಾತಿಗಾರಂಭಿಸಿದಳು:

“ಈಗ ಹೇಳು ವೈದ್ಯ ಮಿತ್ರಾ, ನಮ್ಮನ್ನು ಬಿಟ್ಟು ಇಲ್ಲಿಂದ ಎಲ್ಲಿಗೆ ಹೋದೆ? ಏನು ಮಾಡಿದೆ? ಛಾಯಾ, ಚಿಕ್ಕಮ್ಮಣ್ಣಿ, ಮಕ್ಕಳು ಹ್ಯಾಗಿದ್ದಾರೆ? ನಿನ್ನ ಅನುಭವ ಕೇಳಲು ಕಾತರಳಾಗಿದ್ದೇನೆ.”

ಇಂಥ ಪ್ರಶ್ನೆಯಲ್ಲಿ ಅವಳಿಗೆ ಆಸಕ್ತಿ ಇರುವುದಿಲ್ಲವೆಂದು ಅರಿತಿದ್ದ ಶಿಖರಸೂರ್ಯ,

“ತಾವು ಹೇಳಿದಂತೆ ಬೇಕಾದಷ್ಟು ದೇಶಗಳನ್ನು ಸುತ್ತಿ ಬಂದೆ ನಿಜ. ಆದರೆ ಅಲ್ಲೆಲ್ಲೂ ತಮ್ಮಂಥ ಸುಂದರಿಯರು ಇರಲಿಲ್ಲ ಮಹಾರಾಣಿ!”

– ಎಂದ. ಪ್ರಶಂಸೆಯಿಂದ ಅವಳ ಮುಖ ಕೆಂಪೇರಿತು. ನಾಚಿಕೆಯಿಂದ,

“ನೀನು ನನ್ನ ವಂದಿಮಾಗಧನಾಗಿಬಿಟ್ಟೆ ವೈದ್ಯಮಿತ್ರನೇ, ನಿನ್ನಷ್ಟು ಚೆನ್ನಾಗಿ ನಮ್ಮ ಒಬ್ಬ ಕವಿಯೂ ನನ್ನನ್ನು ಹೊಗಳಲಿಲ್ಲ.”

– ಎಂದಳು ಆನಂದದಿಂದ ಉಕ್ಕಿಬಂದ ನಗೆಯನ್ನು ನಿಯಂತ್ರಿಸಿಕೊಳ್ಳತ್ತ.

“ನಿಜ ಹೇಳುವುದಕ್ಕೆ ನಿಮ್ಮ ಕವಿಗಳು ಹೆದರುತ್ತಾರೆ ಮಹಾರಾಣಿ”

“ಛೇ ಛೇ, ಇದನ್ನು ಕೇಳಿ ನಮ್ಮ ವೇದಾಂತಿಗಳೇನೆಂದಾರು ? ಅವರೂ ಉದ್ದಾಮ ಕವಿಗಳು!”

“ನಿಮ್ಮ ಬಗ್ಗೆ ಅವರಿನ್ನೂ ಕಾವ್ಯ ಬರೆದಿಲ್ಲವೆಂದರೆ ಆಶ್ಚರ್ಯವಲ್ಲವೆ ?”

– ಎಂದು ವೇದಾಂತಿಯ ಕಡೆಗೆ ಶಿಖರಸೂರ್ಯ ತುಂಟ ದೃಷ್ಟಿ ಬೀರಿದ. ವೇದಾಂತಿ ತಕ್ಷಣವೇ, “ನಾನು ಮಹಾಸ್ರಗ್ಧರಾದಲ್ಲಿ ಮಹಾರಾಣಿಯ ಬಗ್ಗೆ ಶತಕ ಬರೆದಿದ್ದೇನೆ!”

– ಎಂದು ಹೇಳಿದ. ಅವನ ಮಾತನ್ನು ಇಬ್ಬರೂ ನಂಬಲಿಲ್ಲ. ಅಷ್ಟರಲ್ಲಿ ಪ್ರಧಾನಿ ಬಂದು

“ಮಹಾರಾಣಿ ಕಾರ್ಯಕ್ರಮಕ್ಕೆ ಹೋಗೋಣವೆ?” ಅಂದ.

“ಹೌದಲ್ಲ” ಎಂದು ಮಹಾರಾಣಿ ಎದ್ದಳು. ಶಿಖರಸೂರ್ಯನೂ ಎದ್ದು ಹೊರಟ.

* * *

ಸಭಾಮಂಟಪದಲ್ಲಿ ನೃತ್ಯ ಕಾರ್ಯಕ್ರಮದ ಪೂರ್ವಭಾವಿ ತಯಾರಿಗಳೆಲ್ಲ ಮುಗಿದಿದ್ದವು. ಅರಮನೆಯ ತುಂಬ ದೀಪಗಳನ್ನು ಹಚ್ಚಿಟ್ಟಿದ್ದರು. ನದಿಯ ಮೇಲಿನಿಂದ ತಂಪುಗಾಳಿ ಬೀಸುತ್ತಿತ್ತು. ಸಭಾಂಗಣದಲ್ಲಿ ರಂಗಮಂದಿರದ ಎದುರಿನ ಆಜುಬಾಜು ಎರಡೂ ಗೋಡೆಗಳಿಗಂಟಿ ಮಾಂಡಳಿಕ ಮನ್ನೆಯರು ಮತ್ತು ಪ್ರಭಾವಿ ಮಂದಿಗಾಗಿ ಒರಗಿ ಕೂರುವ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಊರಿನ ಪ್ರಮುಖರೆಲ್ಲ ಹಾಜರಿದ್ದು ತಂತಮ್ಮ ಆಸನಗಳಲ್ಲಿ ಆಸೀನರಾಗಿದ್ದರು. ರಂಗಮಂಚದ ಎದುರಿನ ಮಧ್ಯದ ಪೀಠದಲ್ಲಿ ಮಹಾರಾಣಿ, ಬಲಗಡೆ ಶಿಖರಸೂರ್ಯ ಪೀಠಸ್ಥರಾಗಿದ್ದರು. ಮಹಾರಾಣಿಯ ಎಡಗಡೆ ಅನತಿ ದೂರದಲ್ಲಿ ವೇದಾಂತಿ, ಪುರೋಹಿತ, ರಾಜಗುರು ಕೂತಿದ್ದರು. ಆಸನಗಳ ಮಧ್ಯದ ಸ್ಥಳದಲ್ಲಿ ಚಾಪೆಗಳ ಮೇಲೆ ಆಮಂತ್ರಿತ ಸಜ್ಜನರು ಪ್ರಜೆಗಳು ಕೂತಿದ್ದರು. ಇವರೇನು ಮಾತಾಡಿದರೂ ಮುಂದಿನವರಿಗೆ ಕೇಳಿಸುತ್ತಿರಲಿಲ್ಲ. ರಂಗಮಂಚದ ಬಳಿ ಸುಕ್ರ ಚಿಂತಾಕ್ರಾಂತನಾಗಿ ಟಕಮಟ ನೋಡುತ್ತಿದ್ದ. ಅಲ್ಲಿ ಬಂಡೆಯ ಇರಲಿಲ್ಲ. ತನ್ನ ಹಿಂದೆ ಬೊಂತೆಯನಿರುವುದನ್ನು ಖಾತ್ರಿ ಮಾಡಿಕೊಂಡು ಶಿಖರಸೂರ್ಯ ಮಹಾರಾಣಿಯ ಹೃದಯವನ್ನಿರಿದು ಒಳಕ್ಕೇನಿದೆ ಎಂದು ನೋಡಿದ. ಮಹರಾಣಿ ಅವನ ಕಣ್ನು ತಪ್ಪಿಸಿ ಬೇರೆ ಕಡೆಗೆ ನೋಡುತ್ತಿದ್ದಳು. ಜಟ್ಟಿಗಳ ವಿಷಯಕ ಪ್ರಧಾನಿಗೆ ಗೊತ್ತಿರಲಿಲ್ಲ. ಅದನ್ನು ಮಹಾರಾಣಿ ತಾನೇ ವ್ಯವಸ್ಥೆ ಮಾಡಿಕೊಂಡಿದ್ದಳು. ವ್ಯವಸ್ಥೆ ಮಾಡಿದಾತ ಕಾಣದೆ ಚಡಪಡಿಸುತ್ತಿದ್ದಳು. ಈಗ ಸುಕ್ರನೂ ಮರೆಯಾಗಿದ್ದರಿಂದ ಶಿಖರಸೂರ್ಯನೂ ಆತಂಕದಲ್ಲಿದ್ದ.

ನಾಟ್ಯ ಸುರುವಾಗಿತ್ತು. ಊರ್ವಶಿ ಪುರೂರವರ ಸನ್ನಿವೇಶವನ್ನ ಅಭಿನಯಿಸುತ್ತಿದ್ದಾರೆಂದು ಆಮೇಲೆ ಗೊತ್ತಾಯಿತು. ಊರ್ವಶಿ ರಂಗದ ತುಂಬ ಓಡಾಡಿ ಭಯ ನಾಚಿಕೆಗಳನ್ನು ಅಭಿನಯಿಸುತ್ತಿದ್ದಳು. ಪುರೂರವ ಅವಳನ್ನು ಒಲಿಸಿಕೊಳ್ಳಲು ಅಂಗಲಾಚುತ್ತ ಪ್ರೇಮ ಮತ್ತು ಅದಕ್ಕೆ ಪೂರಕವಾದ ಸಂಚಾರಿ ಭಾವಗಳನ್ನು ಅಭಿನಯಿಸುತ್ತಿದ್ದ. ಪುರೂರವನ ನೃತ್ಯದಲ್ಲಿ ಯೌವನದ ಆಕರ್ಷಣೆಯ ಜೊತೆಗೆ ಅವನ ಭಂಗಿ ವಿನ್ಯಾಸಗಳಲ್ಲಿ ಪಾದರಸದಂಥ ಚಲನೆಯಿತ್ತು. ತಾಲು ಮಾನವನೆಂಬ ಅಭಿಮಾನವಿತ್ತು. ಕತ್ತಿನವರೆಗೆ ಗುಂಗುರು ಕೂದಲು, ಚಿಗುರು ಮೀಸೆಯ ಚೆಲುವನಾದ ಆ ನಟನ ಮೈಯಲ್ಲಿ ಒಂದು ಬಗೆಯ ಸ್ಥಳೀಯ ಒರಟುತನವಿತ್ತು. ಹಾಗೆಯೇ ಊರ್ವಶಿಯ ನೃತ್ಯದಲ್ಲಿ ದೇವತೆಗೆ ಸಹಜವಾದ ನಯ ನಾಜೂಕಿನ, ಯೌವನ ಸಹಜವಾದ ಒಯ್ಯಾರಗಳಿದ್ದವು.

ಇದ್ದಕ್ಕಿದ್ದಂತೆ ಸಂಗೀತ ಇಳಿಮುಖವಾಗಿ ಮೆದುವಾಗಿ ಕುತೂಹಲದಿಂದ ನೋಡುವವರ ನಾಡಿ ಬಡಿತ ಜೋರಾಗುವಂತಾಯಿತು. ಊರ್ವಶಿ ಕನಸಿನಲ್ಲಿ ತೇಲುತ್ತಿರುವಂತೆ ರಂಗದಂಚಿನಿಂದ ಮೆಲ್ಲಗೆ ಪುರೂರವನಿಂದ ದೂರ ಸರಿದಳು. ಪುರೂರವ ಎರಡೂ ಕೈಗಳನ್ನ ಸೊಂಟದ ಮೇಲಿಟ್ಟುಕೊಂಡು ಕಾಯುತ್ತಿದ್ದಂತೆ ಸಂಗೀತ ಮೃದುವಾಗಿ ಮೆಲ್ಲಗೆ ಕೊಳಲು ಮತ್ತು ತಂತೀವಾದ್ಯ ಸೇರಿದೊಡನೆ ಪುರೂರವ ವಿರಹವನ್ನ ಅಭಿನಯಿಸಿದ. ಬೆಳದಿಂಗಳಲ್ಲಿ ಇಬ್ಬರೂ ಎದುರು ಬದುರು ಬಂದೊಡನೆ ಇವಳ ಮೇಲೆ ತನಗೆ ಅಧಿಕಾರವಿದೆಯೆಂಬಂತೆ ಅವಳ ಸೊಂಟವನ್ನು ಎಡಗೈಯಿಂದ ಭದ್ರವಾಗಿ ಹಿಡಿದು ತನ್ನಡೆಗೆ ಸೆಳೆದುಕೊಂಡ. ಇಬ್ಬರೂ ಪರಸ್ಪರ ಮುಖಗಳನ್ನು ಸಮೀಪ ತಂದಾಗ ಸಂಗೀತ ತಕ್ಷಣ ನಿಂತಿತು; ಇಡೀ ಸಭಾಂಗಣ ಸ್ತಬ್ಧವಾಯಿತು!

ಮಹಾರಾಣಿ ಶಿಖರಸೂರ್ಯನ ಭಾವನೆಗಳನ್ನರಿಯಲು ಅವನ ಕಡೆ ನೋಡಿದಳು. ಆತ ನೃತ್ಯ ನೋಡುತ್ತಿರಲಿಲ್ಲ. ಜಯಶಾಲಿಯಾದಂತೆ ವಿಜಯ ಮತ್ತು ವ್ಯಂಗ್ಯದ ಮಂದಹಾಸ ಬೀರುತ್ತ, ಹಸಿದ ಚಿರತೆ ಬೇಟೆಗೊಂಬ ಜಿಂಕೆಯನ್ನು ನೋಡುವಂತೆ ಕಣ್ಣಗಲಿಸ ಇವಳ ಕೆನ್ನೆಗೆ ಮೀಸೆ ಚುಚ್ಚುವಷ್ಟು ಸಮೀಪದಿಂದ ಇವಳನ್ನೇ ನೋಡುತ್ತಿದ್ದ. ಯಾಕಂತೀರೋ? ಮಹಾರಾಣಿಯ ಜಟ್ಟಿಗಳು ಬಂದಿರಲಿಲ್ಲ. ಬೊಂತೆಯ ಇವನ ಹಿಂದೆ ಇದ್ದ. ಸುಕ್ರ ಬಂಡೆಯರು ನಗುತ್ತ ನೃತ್ಯ ನೋಡುತ್ತಿದ್ದರು.

ಅವನ ವ್ಯಂಗ್ಯ ನಗು ನೇರವಾಗಿ ಅವಳ ಹೃದಯವನ್ನ ಇರಿದಂತಾಗಿ ಮುಖ ಗಂಟುಗಂಟಾಯಿತು. ನಕ್ಕಂತೆ ಸೋಗು ಮಾಡಿದರೂ ಒಳಗೊಳಗೆ ಅವಳ ಅಭಿಮಾನಕ್ಕೆ ಗಾಯವಾಗಿತ್ತು. ಕೃತಕ ನಗೆಯನ್ನ ಮುಂದುವರಿಸಲಾರದೆ, ಪಿಸುದನಿಯಲ್ಲಿ,

“ನೃತ್ಯ ಚೆನ್ನಾಗಿದೆ ಅಲ್ಲವೆ ವೈದ್ಯನೇ?”

– ಎಂದಳು. ಗುಟ್ಟಾಗಿ ಅವಳ ಕಿವಿಯಲ್ಲಿ ಏನೋ ಹೇಳುವಂತೆ “ನಿನ್ನಷ್ಟಲ್ಲ” ಎಂದ.

“ಎಲಾ ಇನವ ಸೊಕ್ಕೆ!”

ಎಂದುಕೊಳ್ಳುತ್ತ ಕೋಪದಿಂದ ಕಂಪಿಸಿದಳು ಮಹಾರಾಣಿ.

ರಸೋತ್ಕರ್ಷದ ಶಿಖರ ಅಭಿನಯಕ್ಕೆ ಅನುಕೂಲವಾಗುವಂತೆ ಈಗ ಸಂಗೀತ ವಾದ್ಯಗಳು ತೀವ್ರಗತಿಯಲ್ಲಿ ಚುರುಕಾಗಿ, ಪ್ರೇಕ್ಷಕರು ಉಸಿರು ಬಿಗಿಹಿಡಿದುಕೊಂಡು ಲಯದಲ್ಲಿ ಭಾಗಿಯಾಗುವಂತೆ ಮಾಡಿದವು. ಪುರೂರವ ರಂಗದ ಕೇಂದ್ರದಲ್ಲಿ ನಿಂತುಕೊಂಡು ಮೆಚ್ಚುಗೆಯಿಂದ ಮಂದಹಾಸದಿಂದ ಊರ್ವಶಿಯನ್ನೇ ನೋಡುತ್ತ ನಿಂತ. ಊರ್ವಶಿ ವಯ್ಯಾರ ಮಾಡುತ್ತ ಆಕಾಶದಿಂದ ಹಾರುತ್ತ ಅವನ ವಶವರ್ತಿಯಾಗುವಂತೆ ಬಂದು ತಬ್ಬಿಕೊಂಡಳು. ಆಮೇಲೆ ಇಬ್ಬರೂ ಮಾದಕ ಶೃಂಗಾರದಲ್ಲಿ ತನ್ಮಯರಾದಂತೆ ನರ್ತಿಸಿದರು.

ಶಿಖರಸೂರ್ಯ ಹಸಿದ ಕಣ್ಣುಗಳಿಂದ ಮಹಾರಾಣಿಯನ್ನು ನೋಡಿದ. ಅವಳು ಇವನನ್ನೇ ಕದ್ದು ದಿಗಿಲು ಮತ್ತು ಭಯಗಳಿಂದ ನೋಡುತ್ತಿದ್ದಳು. ಈತ ನೃತ್ಯವನ್ನು ನೋಡುತ್ತಿಲ್ಲವೆ? ಅವನ ಕಣ್ಣುಗಳಲ್ಲಿ ರಂಗದ ದೀಪಗಳು ಪ್ರತಿಬಿಂಬಿಸಿ ರಾಗೋಜ್ವಲವಾಗಿ ಹೊಳೆಯುತ್ತಿದ್ದವು.

ನೃತ್ಯಗತಿ ಇನ್ನಷ್ಟು ತೀವ್ರವಾಯತು. ಬಣ್ಣಗಳು ಹರಿದಾಡಿದಂತೆ ಇಬ್ಬರೂ ರಂಗದ ತುಂಬ ಕುಣಿದರು. ಸಂಗೀತ ಬೆಳುದಿಂಗಳ ವಾತಾವರಣವನ್ನ ಸೃಷ್ಟಿಸಿ ಅದರಲ್ಲಿ ತನ್ಮಯವಾದಂತೆ ಮೆತ್ತಗಾಗಿತ್ತು. ನಟನಟಿಯರ ಅವಯವಗಳು ಪ್ರತ್ಯೇಕವಾಗಿ ಕಾಣದಷ್ಟು, ಚಿತ್ರದ ಗೆರೆಗಳು ಚಲಿಸುವಂತೆ ಇಬ್ಬರೂ ಶೃಂಗಾರ ಬೆಳದಿಂಗಳಲ್ಲಿ ಈಜಾಡುತ್ತಿರುವಂತೆ, ಹಾರಾಡುತ್ತಿರುವಂತೆ, ತೇಲುತ್ತಿರುವಂತೆ ನರ್ತಿಸಿದರು. ಕೊನೆಗೆ ಊರ್ವಶಿ ಪುರೂರವನ ತೋಳಿನಲ್ಲಿ ಬಂದಿಯಾಗಿ ಅರ್ಪಿಸಿಕೊಂಡಳು. ಇಬ್ಬರೂ ಕೆನ್ನೆಗೆ ಕೆನ್ನೆ ತಾಗಿಸಿದಾಗ ಸಭೆ ದೀರ್ಘ ಕರತಾಡನ ಮಾಡಿ ಮೆಚ್ಚುಗೆ ಸೂಚಿಸಿತು. ಶಿಖರಸೂರ್ಯ ಮಹಾರಾಣಿಯ ಕಿವಿಯ ಬಳಿಗೆ ತುಟಿಗಳನ್ನು ತಂದು “ಸುಂದರವಾಗಿದೆಯಲ್ಲವೆ ಮಹಾರಾಣಿ?” ಅಂದ. ಅವನ ಒರಟು ಮೀಸೆ ಮುಳ್ಳಿನಂತೆ ಕೆನ್ನೆಗೆ ಚುಚ್ಚಿದವು. ಸಾಲದ್ದಕ್ಕೆ ಆಸನದ ಮೇಲಿನ ರಾಣಿಯ ಬಲಗೈ ಬೆರಳುಗಳಲ್ಲಿ ಬೆರಳು ಸೇರಿಸಿ ಹಿಸುಕಿ ಅವಳ ಮುಖವನ್ನೇ ನೋಡುತ್ತ ಕಣ್ಣು ಮಿಟುಕಿಸಿದ.

ಮಹಾರಾಣಿ ತಕ್ಷಣ ಕೈಬಿಡಿಸಿಕೊಂಡು ಎದ್ದು ನಿಂತಳು. ಕಲಾವಿದರನ್ನು ಗೌರವಿಸುವ ಕೆಲಸವನ್ನು ಪ್ರಧಾನಿಗೆ ವಹಿಸಿ,

“ವೈದ್ಯಮಿತ್ರನೇ ಬಾ” ಎಂದು ಮುಂದೆ ನಡೆದಳು. ಜಟ್ಟಿಗಳ ವಿಷಯ ಈತನಿಗೆ ಗೊತ್ತಾಗಿತ್ತೇ? ಜಟ್ಟಿಗಳ್ಯಾಕೆ ಬರಲಿಲ್ಲ? ಒಂದೂ ಅರ್ಥವಾಗದೆ ಮಹಾರಾಣಿ ಹೆದರಿ ಅವಸರದಿಂದ ನಡೆದಳು. ಅಷ್ಟೇ ಅವಸರದಿಂದ ಅವಳ ಹಿಂದೆ ಹಿಂದೆ ಇವನೂ ನಡೆದ. ಅವಳ ಬೆನ್ನಿನ ಮಾಟವನ್ನು, ಅದರ ಮ್ಯಾಲೆ ಜೋತುಬಿದ್ದ ಕಪ್ಪು, ಮೃದುವಾದ ಕೂದಲಿನ ತುರುಬನ್ನು ನೋಡುತ್ತಿದ್ದಂತೆ ಕೆಳಗೆ ನೋಡಿ “ಛೇ! ಈ ನಿತಂಬಗಳ ಲಯವಂತಿಕೆಯೊಂದೇ ಸಾಕು ನನಗೆ ಹುಚ್ಚುಹಿಡಿಸಲು!” ಅಂದುಕೊಂಡ.

ಅರಮನೆಯಲ್ಲಿ ಅನಿರೀಕ್ಷಿತ ಅವಸರದಲ್ಲಿ ಇಬ್ಬರೇ ಹೋಗುತ್ತಿದ್ದಾಗ ತಿರುವಿನಲ್ಲಿ ಒಂದು ಕೋಣೆಯಿತ್ತು. ಬೆಳಕಿರಲಿಲ್ಲ. ಹಿಂದಾಗಲಿ ಮುಂದಾಗಲಿ ಯಾರೂ ಇರಲಿಲ್ಲ. ಕ್ಷಣಾರ್ಧದಲ್ಲಿ ಶಿಖರಸೂರ್ಯ ಮಹಾರಾಣಿಯ ತೋಳು ಹಿಡಿದೆಳೆದುಕೊಂಡು ಕತ್ತಲ ಕೋಣೆಯೊಳಗಡೆ ನುಗ್ಗಿದ. ಏನು ಎತ್ತ ತಿಳಿಯದೆ ಮಹಾರಾಣಿ ಬಿಡಿಸಿಕೊಳ್ಳಲು ಹೆಣಗುತ್ತಿರುವಂತೆ ಸೆರಗು ಜಾರಿ ರವಿಕೆಯ ಗುಂಡಿ ಸಿಡಿದವು. ಚಿರತೆಯ ಸೇಡು ಪ್ರೀತಿ ಹಸಿವುಗಳಿಂದ ಅವಳನ್ನು ತಬ್ಬಿ ಎದೆಗೊತ್ತಿಕೊಂಡು ಮೃಗೀಯವಾಗಿ ಹಿಂಡಿ ಮುಖದ ತುಂಬ ಮುದ್ದಿಟ್ಟು ತುಟಿ ಹೀರಿದ. ಮಹಾರಾಣಿ ನಿಶ್ಯಕ್ತಿಯಿಂದ ಮುದ್ದೆಯಾಗಿ ಅವನ ತೋಳಿನಲ್ಲಿ ಬಿದ್ದು ಥರಥರ ನಡುಗಿದಳು. ಏದುಸಿರು ಬಿಡುತ್ತ ಪಿಸುದನಿಯಲ್ಲಿ

“ನಿನಗೇನು ಬೇಕು ?” ಎಂದಳು.

“ನೀನು!”

“ಈಗ ಬಿಟ್ಟು ಮಾನ ಉಳಿಸು, ಜನ ಬರ್ತಿದಾರೆ. ನಾಳೆ ಸೇರೋಣ.”

– ಎಂದಳು.

“ಎಲ್ಲಿ? ಯಾವಾಗ? ಈಗಲೇ ಹೇಳು” – ಅಂದ.

“ನಾಳೆ ಸಂಜೆ ನನ್ನ ಅಂತಃಪುರಕ್ಕೆ ಬಾ.”

“ನಮ್ಮಿಬ್ಬರ ಶಿವಾಯಿ ಇನ್ಯಾರೂ ಇರಕೂಡದು.”

“ಆಯ್ತು.”

– ಎಂದು ಹೇಳಿದೊಡನೆ ಮಹಾರಾಣಿ ಸೀರೆಯನ್ನು ಸರಿಪಡಿಸಿಕೊಂಡು ನಡೆದಳು. ಅವನ ಕೈಯಲ್ಲಿ ಅವಳ ಕಂಠೀಹಾರವಿತ್ತು.

ಅತಿಥಿಗಳನ್ನು ಕೂರಿಸಲು ಹೇಳಿ ಮಹಾರಾಣಿ ಅಂತಃಪುರಕ್ಕೆ ಹೋಗಿ ಕನ್ನಡಿಯ ಮುಂದೆ ನಿಂತಳು. ಉಡುಪು ಅಸ್ತವ್ಯಸ್ಥವಾಗಿತ್ತು. ತುರುಬು ಬಿಚ್ಚಿ ಕೂದಲು ಕೆದರಿ ಹಣೆ ಕನ್ನೆಗಳ ಮೇಲೆ ಸ್ವತಂತ್ರವಾಗಿ ಹಾರಾಡುತ್ತಿದ್ದವು. ಮಹಾರಾಣಿ ನಿರಾಸೆ ಅವಮಾನಗಳಿಂದ ಕತಕತ ಕುದಿಯುತ್ತಿದ್ದಳು. ಶಿಖರಸೂರ್ಯ ತಾನವನ ಸೂಳೆಯೆಂಬಂತೆ ಅನುಚಿತವಾಗಿ ವರ್ತಿಸಿದ್ದ. ಜಟ್ಟಿಗಳು ಕೈಕೊಟ್ಟಿದ್ದರು. ಶಿಕ್ಷಿಸಲಾಗಲಿ, ಎದುರಿಸಲಾಗಲಿ ಶಕ್ತಿ ಇರಲಿಲ್ಲ. ಯಾರೊಬ್ಬರೂ ತನ್ನೊಂದಿಗಿರಲಿಲ್ಲ. ಮಹಾರಾಜ ಹೋದ. ಅರ್ಥಕೌಶಲ ಹೋದ. ಮಗ ಹೀಗಾದ. ವರ್ತಕರನ್ನು ನಂಬುವಂತಿಲ್ಲ. ಪ್ರಧಾನಿಯನ್ನು ಅವಲಂಬಿಸುವಂತಿಲ್ಲ. ಅಸಹಾಯಕಳಾಗಿ ಕೊರಳಸೆರೆ ಬಿಗಿದು ಬಂತು. ಹಲ್ಲು ಕಚ್ಚುತ್ತ ಪಿಸುದನಿಯಲ್ಲಿ ಶಾಪಗಳನ್ನು ಉಗಿದಳು, ಚಿತ್ತ ಕೆಟ್ಟ ಹಕ್ಕಿಯ ಹಾಗೆ ಚಡಪಡಿಸುತ್ತ ಅತ್ತಿತ್ತ ಗುರಿಯಿಲ್ಲದೆ ಹರಿದಾಡಿದಳು. ನದಿಯ ಕಡೆಯಿಂದ ನಾವಿಕನೊಬ್ಬನ ಹಾಡು ಬರುತ್ತಿತ್ತು:

ಯಾಕಳುವಿಯೇ ರಾಣಿ ? ಯಾಕಳುವಿಯೆ ?                ||ಪ||
ಅಂಗೈಯಾಗಿರುವಂಥ ಚಂದಿರನ ಕಳಕೊಂಡೆ
ಹುಡುಕುವಿಯೆ ಆಕಾಶದೊಳಗೆ |
ಬೆಳ್ದಿಂಗಳಿನ ಕೋಲು ಕೋಣೆಯಲಿ ಆಡಿದರೆ
ನೆನಪಾಗಿ ಓಡುವಿಕೆ ಹೊರಗೆ ||
ನೀ ಹೀಗೆ ಹುಡುಕಿದ್ದು ವ್ಯರ್ಥವಾಗದು ಹೆಣ್ಣೆ
ಬಂದೇ ಬರುವನು ಚಂದ್ರ ಬಳಗೆ |
ತಾಳ್ಮೆಗೆಡದಿರು ರಾಣಿ ಅಮವಾಸೆ ಕಳಿವನಕ
ಸಿಕ್ಕೆ ಸಿಗುವನು ಚಂದ್ರ ಕೈಗೆ ||

ಕನ್ನಡಿಯ ಮುಂದೆ ನಿಂತುಕೊಂಡೇ ಯೋಚಿಸಿದಳು: ಶಿಖರಸೂರ್ಯ ತನ್ನನ್ನು ಜೀವಂತ ಬಿಡಲಾರ. ಸಾವಿನಲ್ಲಿ ಶಾಂತಿ ಸಿಕ್ಕೀತೋ ಏನೋ! ಆ ಸಾವು ಈ ಕ್ಷಣವೇ ಸಿಕ್ಕರೆ! ಅಂದುಕೊಂಡಳು. ಅಷ್ಟರಲ್ಲಿ ಸೇವಕಿ ಬಂದು “ಪ್ರಧಾನಿ ಕಾಯುತ್ತಿದ್ದಾರೆ” ಎಂದಳು. ಬರಲಿರುವ ಯಾವುದೇ ಅಪಾಯವನ್ನು ಎದುರಿಸಲು ಸಿದ್ಧಳಾಗಿ, ಅವಸರದಲ್ಲಿ ಸೀರೆ ಬದಲಿಸಿ, ಕೂದಲು ಕಟ್ಟಿಕೊಂಡು ಊಟಕ್ಕೆ ಹೊರಟಳು.

ಅಂತಃಪುರದ ಹೊರಗೆ ನಿಂತಿದ್ದ ಪ್ರಧಾನಿ ನಮಸ್ಕಾರನ್ನಾಚರಿಸಿದ.

“ಆದಿತ್ಯಪ್ರಭ ಹ್ಯಾಗಿದ್ದಾನೆ?”

ಧನಪಾಲ ಮುಖ ಕೆಳಗೆ ಹಾಕಿ ಹೇಳಿದ:

“ಆರೋಗ್ಯದಲ್ಲಿ ಸುಧಾರಣೆ ಇಲ್ಲ, ಮಹಾರಾಣಿ.”

ಮಹಾರಾಣಿ ಖೇದದಿಂದ ಅರ್ಧ ಸ್ವಗತಕ್ಕೆ ಇನ್ನರ್ಧ ಪ್ರಧಾನಿಗೆಂಬಂತೆ ಹೇಳಿದಳು:”ಯಾರಿಗೋ ಬಲೆ ಹಾಕ್ತೀವಿ, ಆ ಬಲೆಯಲ್ಲಿ ನಾವೇ ಬಿದ್ದಿರ್ತೀವಿ! ವಿಚಿತ್ರ ಅಲ್ಲವೆ ಧಲಪಾಲ?”

ಮಾತಿನರ್ಥ ಪ್ರಧಾನಿಗೆ ಸ್ಪಷ್ಟವಾಗಿ ಚುಚ್ಚಿ ಮುಖ ಬಿಳಿಚಿಕೊಂಡಿತು. ತೋರಿಸಿಕೊಳ್ಳದೆ “ತಾವು ನನ್ನನ್ನು ನಂಬಬಹುದು ಮಹಾರಾಣಿ” ಅಂದ. ಮಹಾರಾಣಿ ಇನ್ನೂ ಅದೇ ಯಾತನೆಯಲ್ಲಿ ತಲ್ಲೀನಳಾಗಿದ್ದಳು.

“ಕನಕಪುರಿಯ ಮಹಾರಾಣಿ! ಯಃಕಶ್ಚಿತ್ ಪ್ರಜೆಗೂ ಅವಳ ಮೇಲೆ ನಂಬಿಕೆಯಿಲ್ಲ! ಆಶ್ಚರ್ಯ ಅಲ್ಲವೆ?”

“ನಾವು ನಿಮ್ಮನ್ನೇ ಅವಲಂಬಿಸಿದವರು ಮಹಾರಾಣಿ.”

“ಸರಿಯಾಗಿ ಹೇಳಿದೆ ನೀನು. ‘ಅವಲಂಬಿಸಿದವರು’ ನಂಬಿದವರಲ್ಲ ! ಆಯ್ತು ಬಾ ಅತಿಥಿಗಳು ಕಾದಿದ್ದಾರೆ.”

– ಎಂದು ಹೇಳಿ ಮುಂದೆ ಹೊರಟಳು. ಧನಪಾಲನೂ ಅವಳ ಹಿಂದಿನಿಂದ ಹೊರಟ.

ಮಹಾರಾಣಿ ಉತ್ಸಾಹ ಮತ್ತು ಉಮೇದಿಗಳನ್ನು ಅಭಿನಯಿಸುತ್ತ ರೆಕ್ಕೆ ಬೀಸಿದ ಹಾಗೆ ಸೆರಗು ಹೊದೆಯುತ್ತ ಬಂದು ಸ್ವಾಗತಿಸಿದಳು. ಮಹಾರಾಣಿ ಇಷ್ಟು ಚೆಲುವೆಯಾಗಿ ಶಿಖರಸೂರ್ಯನಿಗೆಂದೂ ಕಂಡಿರಲಿಲ್ಲ. ಜಟ್ಟಿಗಳನ್ನು ಸುಲಭವಾಗಿ ನಿವಾರಿಸಿದ್ದರಿಂದ ಆ ವಿಷಯ ಮರೆತು ಕಣ್ಣಗಲಿಸಿ ಆಸೆ ಮತ್ತು ಬೆರಗಿನ ಮಂದಹಾಸದಿಂದ ಅವಳನ್ನೇ ನೋಡುತ್ತಿದ್ದ. ಅಪರೂಪಕ್ಕೆ ಮಣೆಯ ಮೇಲೆ ಮಹಾರಾಣಿಯೂ ಕುಂತಳು. ಬಲಗಡೆ ಪ್ರಧಾನಿ, ಎದುರಿಗೆ ಶಿಖರಸೂರ್ಯ ಕುಂತಿದ್ದರು. ಮುಂದಿನ ಮಣೆಗಳ ಮಲೆ ಬಾಳೆಯೆಲೆ ಹಾಕಿ ನೀರು ಚಿಮುಕಿಸಿದರು. ಮೂವರೂ ಬಾಳೆಯೆಲೆ ಸ್ವಚ್ಛಮಾಡಿಕೊಂಡರು. ಸೇವಕಿಯರು ಒಂದೊಂದೇ ಪದಾರ್ಥಗಳನ್ನು ಬಡಿಸತೊಡಗಿದರು. ಶಿಖರಸೂರ್ಯ ಬಂದನೆಂದು ತಿಳಿದು ಕೆಲವು ಸೇವಕರು ಮಹಾರಾಣಿಗೆ ಕಾಣಿಸದಂತೆ ದೂರದ ಮೂಲೆಯಿಂದ ಹಣಿಕಿ ಹಾಕಿದರು. ಅವರಿಗೆ ಶಿಖರಸೂರ್ಯನ ಬೆನ್ನು ಮಾತ್ರ ಕಾಣಿಸಿತು. ಏನು ಬದಲಾದರೂ ಕಿವಿಯ ಕೂದಲು ಮಾತ್ರ ಹಾಗೇ ಇತ್ತು. ಊಟ ಬಡಿಸಲು ಅವಕಾಶವಿದ್ದ ಸೇವಕರಂತೂ ಒಂದೊಂದೇ ಪದಾರ್ಥ ನೀಡಿ ಶಿಖರಸೂರ್ಯನ ನೋಡಿ ಧನ್ಯರಾದಂತೆ ಒಳಗೆ ಬಂದು ಅವರು ಹಾಗಿದ್ದಾರೆ ಹೀಗಿದ್ದಾರೆ ಎಂದು ಉಬ್ಬುಬ್ಬಿ ಹೇಳುತ್ತಿದ್ದರು.

ಅತಿಥಿಗಳಿಗೆ ಊಟ ಬಡಿಸಿ ಮಹಾರಾಣಿಗೆ ಬಡಿಸಲು ಹೋದಾಗ “ಮೈ ಹುಷಾರಿಲ್ಲ ಹಾಲು ತಗೊಳ್ತೇನೆ, ಅತಿಥಿಗಳಿಗೆ ಬಡಿಸು” ಅಂದಳು. ಶಿಖರಸೂರ್ಯ ತಕ್ಷಣ ಹುಷಾರಾಗಿ ತನ್ನೊಳಗಿನ ಕೋಪ ಮತ್ತು ಕೌರ್ಯಗಳು ಗೊತ್ತಾಗದಂತೆ ಮಹಾರಾಣಿಯನ್ನು ನೋಡಿದ. ಈ ಕಡೆಗೆ ಧನಪಾಲನೂ ತಲೆ ತಗ್ಗಿಸಿ ಕಳ್ಳಗಣ್ಣಿನಿಂದ ನೋಡುತ್ತ ಮಹಾರಾಣಿಯ ಮುಖಚರ್ಯೆಯನ್ನು ಅನುಸರಿಸಿ ಇಲ್ಲ ನಗುತ್ತಿದ್ದ, ಇಲ್ಲ ಪ್ರಶ್ನಾರ್ಥಕ ಮುಖ ಮಾಡುತ್ತಿದ್ದ. ಮಹರಾಣಿ ನಿರ್ಲಿಪ್ತಳಾಗಿದ್ದಳು. ಪ್ರಧಾನಿ ಸುಮ್ಮನಿರಲಾರದೆ ಮಹಾರಾಣಿಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇದ್ದವನಂತೆ,

“ವೈದ್ಯರಿಗೆ ತೋರಿಸಿದ್ದೀರಾ ಮಹಾರಾಣಿ?” ಅಂದ.

“ಸಣ್ಣ ಜ್ವರ, ಉಪವಾಸವಿದ್ದರೆ ಸರಿಹೋಗುತ್ತದೆ.”

– ಎಂದು ನಿರ್ಲಕ್ಷದಿಂದ ಹೇಳಿದಳು.

ಸೇವಕಿ ಬಂದು ಮೂವರ ಮುಂದೆ ಹಾಲಿನ ಗಿಂಡಿಗಳನ್ನಿಟ್ಟು ಹೋದಳು. ತಾನು ತಗೊಳ್ಳದೆ ಇವರು ಊಟ ಮಾಡುವುದಿಲ್ಲವೆಂದುಕೊಂಡು ಮಹಾರಾಣಿ ಗಿಂಡಿಯನ್ನೆತ್ತಿ ಕುಡಿಯಬೇಕೆಂದಾಗ ಶಿಖರಸೂರ್ಯ ತಕ್ಷಣ,

“ಕಂಚಿಯ ಮಹಾರಾಜರು ಇಲ್ಲಿಗೆ ಬಂದಿದ್ದರಂತೆ ಹೌದೆ ಮಹಾರಾಣಿ?”

– ಎಂದ. ಗಿಂಡಿ ಕೆಳಗಿಳಿಸಿ ಮಹಾರಾಣಿ ಉತ್ಸಾಹದಿಂದ ಹೇಳಿದಳು:

“ಹೌದು, ನಿನ್ನ ಬಗ್ಗೆ ತುಂಬ ವಿಚಾರಿಸಿಕೊಂಡರು ವೈದ್ಯನೆ. ರವಿಕೀರ್ತಿ ಮತ್ತು ಕಂಚಿಯ ಮಹಾರಾಜರು ಸಹಪಾಠಿಗಳಂತೆ. ನೀನು ಅವರನ್ನು ಕಂಡಿದ್ದೀಯಾ ವೈದ್ಯನೆ?

“ಹೌದು ಆಗವರು ಏನು ಹೇಳಿದರು ಗೊತ್ತೆ ಮಹಾರಾಣಿ ? ಕನಕಪುರಿಯ ಮಹಾರಾಣಿಯ ಬಗ್ಗೆ ಕವಿಗಳು ವರ್ಣನೆ ಮಾಡಿದ್ದನ್ನು ಕೇಳಿದ್ದೆ. ಆದರೆ ಅವರನ್ನು ಪ್ರತ್ಯಕ್ಷ ನೋಡಿದ ಮೇಲೆ ಅನ್ನಿಸಿತು: ಅವರು ವರ್ಣಿಸಿದ್ದು ಬಹಳ ಕಡಿಮೆ.”

“ಎಂದು ಹೇಳಿದರೆ?”

“ಹೌದು ಮಹಾರಾಣಿ”

ಮಹಾರಾಣಿಯ ಮುಖದಲ್ಲಿ ಮಂದಹಾಸ ಮೂಡಿತು. ತನ್ನೊಂದು ಸುಳ್ಳಿಗೆ ಇಂಥ ಮಾಂತ್ರಿಕ ಶಕ್ತಿ ಇದೆಯೆಂದು ತಿಳಿದು ಸೂರ್ಯನಿಗೂ ಆಶ್ಚರ್ಯವಾಯಿತು. ಮಹಾರಾಣಿ ಮಾತ್ರ ಮೂಡಿನಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯಿತು. ವಾಸ್ತವಕ್ಕೆ ಜರಿದಾದ ಖೇದಗೊಂಡಳು.

“ನನಗೂ ವಯಸ್ಸಾಯ್ತು ವೈದ್ಯನೇ. ಕಂಚಿಯ ಮಹಾರಾಜರು ತರುಣರು. ತರುಣರು ಪ್ರೇಮಿಗಳಾಗಿದ್ದಾಗ ಕವಿಗಳಾಗುತ್ತಾರೆ. ನೋಡಿದ್ದೆಲ್ಲ ಅಂಥವರಿಗೆ ಪರಿಮಳದ ಹೂ ಹಸಿರಾಗೇ ಕಾಣಿಸುತ್ತದೆ. ವಯಸ್ಸಾಯಿತೋ ನಮ್ಮ ನೆರಳೇ ನಮಗೆ ಬೆಂಬತ್ತಿದ ಸಾವಿನ ಹಾಗೆ ಕಾಣಿಸುತ್ತದೆ. ತಾರುಣ್ಯದಲ್ಲಿ ಸಾಯುವವರೇ ಪುಣ್ಯವಂತರು.”

“ತುಂಬ ಖೇದದಲ್ಲಿದ್ದೀರಿ ಮಹಾರಾಣಿ” ಎಂದ ಶಿಖರಸೂರ್ಯ.

ಇನ್ನೂ ಖೇದದಿಂದ ಮಹಾರಾಣಿ ಹೇಳಿದಳು:

“ಬದುಕಿನ ಬಗ್ಗೆ ಹೊಸಪಾಠ ಕಲಿಯುತ್ತಿದ್ದೇನೆ ವೈದ್ಯನೇ. ಮನುಷ್ಯ ಮುಗ್ಧನಾಗಿದ್ದರೆ ಸುಖ ಸಂತೋಷದಲ್ಲಿರ್ತಾನೆ. ಯಾಕಂತೀಯೋ ? ಯೋಚನೆ ಮಾಡೋದಿಲ್ಲ ನೋಡು, ಅದಕ್ಕೆ! ಬುದ್ಧಿವಂತನಾದನೋ – ದುಃಖದಲ್ಲಿರ್ತಾನೆ. ಜೀರ್ಣಶಕ್ತಿ ಇರೋತನಕ ಇವನಿಗೆ ತೊಂದರೆಯಿಲ್ಲ.”

“ಅಂದರೆ ಸುಖ ಮತ್ತು ಬುದ್ಧಿವಂತಿಕೆ ಎರಡೂ ಪರಸ್ಪರ ವಿರೋಧಿಗಳು ಅಂತಿರೇನು ?” ಎಂದ ಧನಪಾಲ.

“ಹೌದು. ಜೀವನದಲ್ಲಿ ಸುಖವಾಗಿದ್ದಾನೆ ಪುಣ್ಯಾತ್ಮ – ಅಂತ ಹೇಳಬಾರದು. ನೋಡಿ ಅವನೆಷ್ಟು ಮುಗ್ಧನಾಗಿದ್ದಾನೆ – ಪುಣ್ಯಾತ್ಮ! ಅನ್ನಬೇಕು. ಅದು ಸರಿಯಾದ ಮಾತು.”

ಇಲ್ಲೀತನಕ ಅವರ ಮಾತುಗಳನ್ನ ಆಸಕ್ತಿಯಿಂದ ಕೇಳುತ್ತಿದ್ದ ಶಿಖರಸೂರ್ಯ ಈಗ ಕೇಳಿದ:

“ಪ್ರಪಂಚದಲ್ಲಿ ದುಃಖ, ವಂಚನೆ, ದುರಂತ – ಇದು ಬಿಟ್ಟು ಇನ್ನೇನೂ ಇಲ್ಲವೆಂದಾದರೆ ನಾವೆಲ್ಲಾ ಸತ್ತುಬಿಡೋದೇ ಉತ್ತಮ. ಇಂಥ ಕಗ್ಗತ್ತಲೆ ತುಂಬಿದ ಪ್ರಪಂಚದಲ್ಲಿ ಬದುಕೋದಕ್ಕೆ ಆಸೆ ಪಡುವಂತೆ ಮಾಡೋದ್ಯಾವುದು ? ಅಥವಾ ಏನೂ ಇಲ್ಲ ಅಂತೀರಾ ಮಹಾರಾಣಿ?”

ವೈದ್ಯನನ್ನು ನೋಡಿ, ಮಹಾರಾಣಿ ಅಹಂಕಾರ ಜಾಗೃತವಾಯ್ತು. ಹೇಳಿದಳು:

“ಧೈರ್ಯ! ಧೈರ್ಯ ಬೇಕು ವೈದ್ಯನೆ, ಧೈರ್ಯವಿದ್ದರೆ ಇಂಥ ಕ್ರೂರ ಜಗತ್ತನ್ನು ಗೆಲ್ಲಬಹುದು. ಬುದ್ಧಿವಂತಿಕೆಯಿಂದ ಕ್ರೂರವಾದ ಜಗತ್ತನ್ನು ಎದುರಿಸಲು ಧೈರ್ಯವೊಂದೇ ಅಸ್ತ್ರ. ಬುದ್ಧಿವಂತಿಕೆ ಇ‌ಟ್ಟುಕೊಂಡೂ ನಗೋದಕ್ಕೆ ಸಾಧ್ಯವಾಗಬೇಕಾದರೆ ಧೈರ್ಯಬೇಕು.”

ಯಾವುದೋ ಸತ್ಯವನ್ನು ಹೇಳಿದೆನೆಂಬ ಆತ್ಮವಿಶ್ವಾಸದಿಂದ ಅವಳ ಕಣ್ಣು ಉಜ್ವಲವಾಗಿ ಹೊಳೆದವು. ಪ್ರಧಾನಿ ಮಂತ್ರಮುಗ್ಧನಾಗಿ ಅವಳ ಕಡೆಗೆ ನೋಡುತ್ತಿದ್ದ. ಈಗ ಯಾರೂ ಮಾತಾಡಲಿಲ್ಲವಾದ್ದರಿಂದ ಅವಳೊಳಗಿನ ಪೊಳ್ಳುತನದ ಅರಿವಿದ್ದ ಶಿಖರಸೂರ್ಯನೊಬ್ಬನೇ ಒಳಗೊಳಗೆ ನಗುತ್ತಿದ್ದ. ಒಂದಿಲ್ಲೊಂದು ದಿನ ಈ ಹೆಂಗಸು ಯಾವುದೋ ನಾಯಿಯಿಂದ ಕಚ್ಚಿಸಿಕೊಂಡು ಸಾಯ್ತದೆ ಅಂದುಕೊಂಡ. ಮಹಾರಾಣಿಯ ಶಕ್ತಿಯ ಹೊಸ ಪರಿಚಯವಾದಂತೆ ಪ್ರಧಾನಿ ಚಕಿತನಾಗಿದ್ದ. ವಾತಾವರಣ ಸ್ತಬ್ಧಬಾಗಿದ್ದಂತೆ ಅನಿಸಿ ಅದಕ್ಕೆ ಚಾಲನೆ ಕೊಡಲು ಮಹಾರಾಣಿಯೇ ಮುಂದಾಗಿ “ಊಟ ಸುರು ಮಾಡಿ” ಎಂದು ಹೇಳಿ ಹಾಲಿನ ಗಿಂಡಿ ತಗೊಂಡು ಬಾಯಿಗೆ ಒಯ್ದಳು. ತಕ್ಷಣ ಶಿಖರಸೂರ್ಯ –

“ಇರಿ ಮಹಾರಾಣಿ, ತುಂಬ ಚೆನ್ನಾಗಿ ಮಾತಾಡುತ್ತಿದ್ದೀರಿ, ಲೋಕಸುಂದರಿಯ ಬಾಯಿಂದ ಇಂಥ ಅಪರೂಪದ ವೇದಾಂತ ಬರುತ್ತಿರುವಾಗ ಹಸಿವೆ ಹ್ಯಾಗಾದೀತು?”

ಮಹಾರಾಣಿಯ ಮುಖ ಮತ್ತೆ ವ್ಯಗ್ರವಾಯಿತು. ಎದೆ ಸೆರಗು ಹೊದ್ದು ಮುಂಗುರುಳನ್ನು ಸರಿಪಡಿಸಿಕೊಂಡು ಶಿಖರಸೂರ್ಯನ ಕಡೆಗೆ ಕ್ರೂರ ನೋಟ ಬೀರಿದಳು. ಅವಳ ಭಂಗಿಯನ್ನು ಮೌನವಾಗಿ ನೋಡಿ ಆಮೇಲೆ ತನ್ನ ಮುಂದಿನ ಊಟದೆಲೆಯ ಕಡೆಗೆ ನೋಡಿದ. ತನ್ನನ್ನು ಕೊಲೆ ಮಾಡಲು ಪೂರ್ತಿ ಪೂರ್ವಸಿದ್ಧತೆ ಮಾಡಿಕೊಂಡಿರುವಂತೆ ಕಂಡಿತು. ಅವಳ ಕಣ್ಣ ಸುತ್ತ ಇರುವ ಕಾಡಿಗೆ ಮತ್ತು ನೆರಳು ಸೇರಿ ಮಹಾರಾಣಿ ಭಯಾನಕ ರಾಕ್ಷಸಿಯಂತೆ ಕಂಡಳು. ತುಟಿ ಸಮೀಪದ ಗಿಂಡಿ ಕೆಳಗಿಟ್ಟು ಕೇಳಿದಳು.

“ಈ ನಿನ್ನ ಆಕ್ರಮಣದ ಬಗ್ಗೆ ಏನೆನ್ನಿಸುತ್ತದೆ ವೈದ್ಯನೆ ? ನೀನು ನಮ್ಮ ಬಳಗದನ. ಕನಕಪುರಿಯ ವಿದ್ಯಮಾನ ಗೊತ್ತಿದ್ದವ, ಕನಕಪುರಿ ಬೇಕೆಂದು ನೇರ ಬಂದು ಕೇಳಬಹುದಿತ್ತಲ್ಲ? ಹೀಗೆ ಏಕಾಏಕಿ ಆಕ್ರಮಿಸುವ ಅಗತ್ಯವಿತ್ತೆ?”

ಇವಳ ಮಾತಿನ ಹಿಂದೆ ರಹಸ್ಯೋದ್ದೇಶವೇನಾದರೂ ಇದೆಯಾ ? ಎಂದು ತೂಗಿ ನೋಡಿ ಹೇಳಿದ.

“ನಿಮ್ಮ ಗೂಢಾಚಾರರು, ಮುತ್ಸದ್ದಿಗಳು ಹೇಳಿರಬೇಕಲ್ಲ ಮಹಾರಾಣಿ?”

– ಎಂದು ತೀಕ್ಷ್ಣವಾಗಿ ಪ್ರಧಾನಿಯನ್ನು ನೋಡಿದ.

“ಹೇಳಲಿಲ್ಲ, ಅವರಿಗೆ ಹೊಳೆಯಲೂ ಇಲ್ಲ. ಅವರ ಬುದ್ಧಿವಂತಿಕೆಗಿಂತ ನಿನ್ನ ಚಾತುರ್ಯ ಹೆಚ್ಚಿನದು ಅನ್ನೋಣ.”

“ಅದೇನಿದೆಯೋ! ನಿಮ್ಮವರು ಸರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲ ಎನ್ನುವದಂತೂ ನಿಜ. ನಿಮ್ಮವರು ತಪ್ಪಿದರು ಅಂದರೆ ನಮ್ಮವರು ಸರಿಯಾಗಿ ಕೆಲಸ ಮಾಡಿದರು ಅಂತ ಅರ್ಥವಲ್ಲವೆ?”

– ಎಂದು ಅರ್ಥಪೂರ್ಣವಾಗಿ ನಗುತ್ತ ಕಣ್ಣಿಂದ ಅವಳನ್ನು ಎರಿದ. ಅವನ ನೋಟದ ಅರ್ಥವನ್ನು ಮಹಾರಾಣಿ ಗ್ರಹಿಸಿ ಅಸಹಾಯಕತೆ ಮತ್ತು ಭಯದಿಂದ ಇನ್ನೊಂದು ಕಡೆ ಮುಖ ತಿರಿಗಿಸಿದಳು.

ಈ ಮಧ್ಯೆ ಧನಪಾಲ ಊಟ ಸುರು ಮಾಡಲು ಕಾತರನಾಗಿ ಶಿಖರಸೂರ್ಯನ ಕಡೆಗೆ ನೋಡಿದ. – ಇವನಿಗೆ ಗೊತ್ತಾಗಿರಬಹುದೇ ಅಂತ ಅನುಮಾನ ಬಂತು. ತಾನು ಮುಗ್ಧನೆಂದು ತೋರಿಸಿಕೊಳ್ಳಲು ಅವರ ಸಂವಾದವನ್ನು ಆಸಕ್ತಿಯಿಂದ ಕೇಳುತ್ತಿರುವಂತೆ ಅಭಿನಯಿಸುತ್ತ “ಇನ್ನು ಊಟ ಸುರು ಮಾಡೋಣವಾ ಮಹಾರಾಣಿ?” ಅಂದ. ತಕ್ಷಣ ಶಿಖರಸೂರ್ಯ ತನ್ನ ಪೀಠದಿಂದೆದ್ದು ಪ್ರಧಾನಿಯ ಹಿಂದೆ ಬಂದು,

“ಪ್ರಧಾನಿಗಳೇ, ನೀವು ನನ್ನ ಪೀಠದಲ್ಲಿರಿ. ನಾನು ಮಹಾರಾಣಿಯವರ ಜೊತೆ ಕೊಂಚ ಅಂತರಂಗ ಮಾತಾಡಬೇಕು.”

– ಎಂದು ಅನಿರೀಕ್ಷಿತವಾಗಿ ಸಲಿಗೆಯಿಂದ ಪ್ರಧಾನಿಯ ಭುಜ ಹಿಡಿದೆಬ್ಬಿಸಿ ತನ್ನ ಪೀಠ ತೋರಿಸಿ ಪ್ರಧಾನಿಯ ಪೀಠದಲ್ಲಿ ಕೂತೇ ಬಿಟ್ಟ! ಮಹಾರಾಣಿಗೆ ಶಿಷ್ಟಾಚಾರದ ಬಗ್ಗೆ ಕೊಂಚ ಬೇಸರವಾದರೂ ಅನಿವಾರ್ಯವೆಂದು ಸುಮ್ಮನಿದ್ದು ಹಾಲಿನ ಗಿಂಡಿಯನ್ನು ತುಟಿಗಿಟ್ಟುಕೊಂಡು ಬಾಯಿಗೆ ಬಗ್ಗಿಸುತ್ತ ಕತ್ತು ಮ್ಯಾಲೆತ್ತಿದಳು. ಇನ್ನೇನು ಕುಡಿಯಬೇಕು – ಶಿಖರಸೂರ್ಯ ದೂರ ಬೀಳುವಂತೆ ಎಡಗೈಯಿಂದ ಗಿಂಡಿಯನ್ನ ತಳ್ಳಿದ! ಮಹಾರಾಣಿಯ ಮೈಮೇಲೆ ಅರ್ಧ ಹಾಲು ಬಿದ್ದುಹೋಯಿತು. ಮಹಾರಾಣಿ ಸೀರೆ ನೋಡಿಕೊಂಡು ಆಶ್ಚರ್ಯ ಆಘಾತಗಳಿಂದ ಶಿಖರಸೂರ್ಯನನ್ನು ನೋಡಿದಳು. ಆತ ಮುಖ ಕೆಳಗೆ ಹಾಕಿದ್ದ! ಪ್ರಧಾನಿ ಆಘಾತದಿಂದ ಎದ್ದು ನಿಂತ. ಮಹಾರಾಣಿ ಸೀ‌ರೆ ಮ್ಯಾಲಿನ ಹಾಲು ಕೊಡುವುತ್ತ ತಾಳ್ಮೆಗೆಟ್ಟು,

“ಇದು ಅತಿಯಾಯಿತು, ವೈದ್ಯನೇ!”

– ಎಂದಳು ಬೇಸರದಿಂದ. ಶಿಖರಸೂರ್ಯ ವಿನಯದಿಂದ ಕೈಮುಗಿದು

“ನನ್ನ ಅನುಚಿತ ವರ್ತನೆಗೆ ಕ್ಷಮೆಯಿರಲಿ, ತಮ್ಮ ಹಾಲಿನಲ್ಲಿ ವಿಷವಿದೆ ಮಹಾರಾಣಿ, ನನ್ನ ಹಾಲಿನಲ್ಲೂ ಇದೆ, ”

– ಅಂದ.

“ಏನೆಂದೆ?”

– ಎಂದು ಭೀತಿ ಗೊಂದಲ ಆಶ್ಚರ್ಯಗಳಿಂದ ಕಣ್ಣಗಲಿಸಿ ಎದ್ದು ನಿಂತಳು. ಶಿಖರಸೂರ್ಯನನ್ನು ನೋಡಿ, – ಅವನು ಪ್ರಧಾನಿಯ ಕಡೆಗೆ ನೋಡುತ್ತಿದ್ದುದನ್ನು ಗಮನಿಸಿದಳು. ಪ್ರಧಾನಿಯ ಕಣ್ಣು ತುಟಿ ಬಿಳಿಚಿ, ಗಡಗಡ ನಡುಗುತ್ತ ನಿಂತಿದ್ದ. ಹೆದರಿದ ಮಕ್ಕಳು ಕಿರಿಚಿ ಮಾತಾಡುವಂತೆ ಅಸಹಜ ದನಿಯಲ್ಲಿ ಮಹಾರಾಣಿ –

“ನಿಜ ಬೊಗಳು? ವಿಷ ಹಾಕಿದ್ದೀಯಾ?” ಎಂದಳು.

“ನಾನಲ್ಲ ಮಹಾರಾಣಿ….”

– ಎನ್ನುತ ಪ್ರಧಾನಿ ತಲೆ ಬಾಗಿದ.

“ಹಾಗಿದ್ದರೆ ಯಾರು ಹಾಕಿದ್ದು?”

“ನನಗೆ ಗೊತ್ತಿಲ್ಲ ಮಹಾರಾಣಿ.”

– ಎಂದು ಹೇಳುತ್ತ ಧನಪಾಲ ಹಾಗೇ ಕುಸಿದು,

“ನನಗೆ ಎದೆ ನೋವು, ನಾನು ಬರಲೆ ಮಹಾರಾಣಿ?”

– ಎಂದು ಹೇಳಿ ಅಪ್ಪಣೆಗಾಗಿ ಕಾಯದೆ ನಡೆದ. ಮಹಾರಾಣಿಗೀಗ ಖಾತ್ರಿಯಾಯಿತು, ಗಂಭೀರವಾಗಿ ಗುಡುಗಿದಳು, –

“ನಾನು ಹೇಳಿದ್ದು ಕೇಳಿಸಲಿಲ್ಲವೆ? ಉತ್ತರ ಬೊಗಳು, ವಿಷ ಹಾಕಿದವರ್ಯಾರು?”

“ನನಗೇನು ಗೊತ್ತು?”

– ಎಂದು ಇವನೂ ಸಿಡಿದ. ಮಹಾರಾಣಿ ಕೋಪದಿಂದ ನಡುಗಿದಳು.

“ಹಾಗಿದ್ದರೆ ಗೊತ್ತಾಗೋತನಕ ಬಿದ್ದುಕೊ.”

– ಎಂದು ಹುಬ್ಬುಗಂಟಿಕ್ಕಿ ಜುಗುಪ್ಸೆಯಿಂದ ನುಡಿದಳು, ಆಮೇಲೆ

“ಎಲ್ಲಿ ಅಡಿಗೆಯವರು?”

ಎಂದು ಕೂಗಿದಳು. ಅಡಿಗೆಯ ಸೇವಕ ಸೇವಕಿಯರು ಬಂದು ನಡುಗುತ್ತ ದೂರ ನಿಂತರು.

“ಇಂದಿನ ಅಡಿಗೆ ಮಾಡಿದವರಾರು?”

ಎಂದಳು ಮಹಾರಾಣಿ. ಮುದಿ ಸೇವಕನೊಬ್ಬ ಬಂದು ತಲೆಬಾಗಿ ನಿಂತುಕೊಂಡ. ಆತ ತನ್ನ ದುರ್ದೈವವನ್ನಾಗಲೇ ಕಂಡುಕೊಂಡಿದ್ದಂತೆ ಒಂದು ಬಗೆಯ ನಿಶ್ಚಿಂತೆಯಿಂದ, ಬಂದದ್ದನ್ನು ಎದುರಿಸಲು ಸಿದ್ಧನಾಗಿದ್ದ. ಮಹಾರಾಣಿ ಕಿರಿಚಿದಳು:

“ನಿಜ ಬೊಗಳು ಹಾಲಿನಲ್ಲಿ ವಿಷ ಹಾಕಲಿಕ್ಕೆ ಯಾರು ಹೇಳಿದ್ದು?”

“ನಾವ್ಯಾರೂ ವಿಷ ಹಾಕಿಲ್ಲ ಮಹಾರಾಣಿ.”

ಶಿಖರಸೂರ್ಯ ಮಧ್ಯ ಪ್ರವೇಶಿಸಿ “ನಾನೊಂದು ಪ್ರಶ್ನೆ ಕೇಳಲೆ ಮಹಾರಾಣಿ?” ಅಂದ.

ನಿಲ್ಲುವುದಕ್ಕೆ ಶಕ್ತಿ ಸಾಲದೆ ಮಹಾರಾಣಿ ಹೋಗಿ ತನ್ನ ಪೀಠದಲ್ಲಿ ಕುಸಿದಳು. ಕೇಳು ಎಂಬಂತೆ ಕೈ ಸನ್ನೆ ಮಾಡಿದಳು. ಶಿಖರಸೂರ್ಯ ಕೇಳಿದ:

“ನೀವ್ಯಾರೂ ವಿಷ ಹಾಕಿಲ್ಲ ಅಲ್ಲವೆ ? ಹಾಗಿದ್ದರೆ ಈ ಹಾಲು ಕುಡಿ.”

ಆ ಮುದುಕ ಗಡಗಡ ನಡುಗುತ್ತ

“ಬ್ಯಾಡಿ ಸ್ವಾಮಿ, ನಾನು ಬಡವ, ಮಕ್ಕಳೊಂದಿಗ”

– ಎನ್ನುತ್ತ ಹಿಂದೆ ಸರಿಯತೊಡಗಿದ. ಮಹಾರಾಣಿ ಥಟ್ಟನೆದ್ದು ಹಾಲಿನ ಗಿಂಡಿ ಹಿಡಿದುಕೊಂಡು

“ಕುಡಿದೆಯೋ ಸರಿ. ಇಲ್ಲದಿದ್ದರೆ ಇಲ್ಲಿಯೇ ನಿನ್ನನ್ನು ಮುಗಿಸುತ್ತೇನೆ. ಹೇಳು ವಿಷ ಹಾಕಲು ಹೇಳಿದವರಾರು?”

ಕೋಪದಿಂದ ಅವನ ಹೃದಯವನ್ನು ಪರಚುವಂತೆ ಹೇಳಿ ಶಿಖರಸೂರ್ಯನ ಸೊಂಟದಲ್ಲಿದ್ದ ಚಂದ್ರಾಯುಧವನ್ನು ಹಿರಿದು ಮುದುಕನ ಕತ್ತಿಗೆ ಗುರಿ ಹಿಡಿದಳು. ಮುದುಕ ನಡುಗುತ್ತ ಪ್ರಧಾನಿಯ ಕಡೆಗೆ ಕೈ ತೋರಿಸಿ ದೊಪ್ಪನೆ ನೆಲಕ್ಕೆ ಬಿದ್ದು ಎರಡೂ ಕೈಗಳಿಂದ ನೆಲ ಬಡಿಯುತ್ತ ತಪ್ಪಾಯಿತೆನ್ನುತ್ತ, ತನ್ನ ಕಿವಿ ತಾನೇ ಹಿಡಿದುಕೊಂಡು ಕೂತು ಎದ್ದು ಮಾಡತೊಡಗಿದ. ಮಧ್ಯೆ ಮಧ್ಯೆ ಎದೆ ಎದೆ ಬಡಿದುಕೊಂಡ. ಪ್ರಧಾನಿ ಜಾಣ ಮೂರ್ಛೆ ಹೋಗಿ ಪಾರಾಗಲು ಕಾಯುತ್ತಿದ್ದ. ಗರ ಬಡಿದಂತೆ ಮಹಾರಾಣಿ ಹಿಂದೆ ಸರಿದು ಪೀಠದ ಮ್ಯಾಲೆ ಕುಸಿದಳು. ಬಹಳ ಹೊತ್ತು ಯಾರೂ ಮಾತಾಡಲಿಲ್ಲ. ಸೇವಕ ಸೇವಕಿಯರು ಮಂದಿ ಪಾಕಾಚಾರಿಯ ಕಡೆಗೂ ಪ್ರಧಾನಿಯ ಕಡೆಗೂ ನೋಡುತ್ತ ಕಣ್ಸನ್ನೆಗಳಲ್ಲಿ ಆಶ್ಚರ್ಯಗಳನ್ನು ಹಂಚಿಕೊಳ್ಳುತ್ತಿದ್ದರು. ಶಿಖರಸೂರ್ಯ ದೂರದಲ್ಲಿ ನಿಂತಿದ್ದ ಸುಕ್ರ ಮತ್ತು ಬೊಂತೆಯರನ್ನು ನೋಡಿದ. ಬಂಟರು ಬಂದು ಪ್ರಧಾನಿಯನ್ನೂ, ಪಾಕಾಚಾರಿಯನ್ನೂ ಕರೆದೊಯ್ದರು. ಉಳಿದವರೆಲ್ಲ ಮಹಾರಾಣಿಯ ದುಃಖದಲ್ಲಿ ಮರುಗಿ ಕರಗಿದವರಂತೆ ಮಾಯವಾದರು.

ಈಗ ಮಹಾರಾಣಿ ಮತ್ತು ಶಿಖರಸೂರ್ಯ ಇಬ್ಬರೇ ಇದ್ದರು. ಹೊರಗೆ ಕಗ್ಗತ್ತಲಿತ್ತು. ಶಿಖರಸೂರ್ಯ ಮೆಲ್ಲಗೆ ಮಹಾರಾಣಿಯ ಬಳಿಗೆ ಹೋಗಿ ಕೂತು ಅವಳ ಕೈ ಹಿಡಿದು ಅದುಮಿ ಧೈರ್ಯ ಹೇಳಲು ನೋಡಿದ. ಮಹಾರಾಣಿ ನಿಟ್ಟುಸಿರು ಬಿಟ್ಟು ಶಿಖರಸೂರ್ಯನ ಕೈಯನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡಳು, ಜಲ ಜಲ ಕಣ್ಣೀರು ಸುರಿಸುತ್ತ –

“ಇಷ್ಟು ವರ್ಷಗಳಾದ ಮೇಲೆ ನನಗೊಂದು ಸತ್ಯ ಹೊಳೆಯಿತು. ವೈದ್ಯ ಮಿತ್ರಾ…. ಹೇಳಲೇ?”

“ಹೇಳಿ ಮಹಾರಾಣಿ”

“ನಾನು ಅಬಲೆ!”

ಎಂದು ಎರಡು ಹನಿ ಕಣ್ಣೀರುದುರಿಸಿ ಎದ್ದು ತಡವರಿಸುತ್ತ ಹೊರಟಳು. ಎರಡು ಹೆಜ್ಜೆ ನಡೆದಿರಬೇಕು, ಕಾಲು ಸೋತು ಕುಸಿದಳು. ತಕ್ಷಣ ಶಿಖರಸೂರ್ಯ ಹೋಗಿ ಅವಳ ಕೈ ಹಿಡಿದು ಎತ್ತಿದ. ಆಧಾರವಾಗಿ ಎಡಗೈ ಹಿಡಿದುಕೊಂಡು ಅಂತಃಪುರದತ್ತ ನಿಧಾನವಾಗಿ ನಡೆಸಿಕೊಂಡು ಹೋದ. ಮೆಲ್ಲಗೆ ಹಾಸಿಗೆಯಲ್ಲಿ ಒರಗಿಸಿ, ಮುದ್ದಿಟ್ಟು ಹಿರಿಯಸೇವಕಿಯರ ಕರೆದು, ಜಾಗ್ರತೆಯಾಗಿ ನೋಡಿಕೊಳ್ಳಲು ಹೇಳಿ ತನ್ನ ಬಿಡಾರಕ್ಕೆ ಹೋದ.

ತನ್ನ ಅರಮನೆಯಲ್ಲಿ ತಾನೆ ಬಂಧಿಯಾಗಿ ಸರ್ವಾಧಿಕಾರಿಯಂತೆ, ಎಲ್ಲವೂ ತನ್ನ ನಿಯಂತ್ರಣದಲ್ಲಿರುವಂತೆ ಅಭಿನಯಿಸುತ್ತಿದ್ದ ಮಹಾರಾಣಿಗೆ ಈಗ ಕಂಡು ಹಿಡಿದ ಸತ್ಯ ಜೀರ್ಣವಾಗುವುದು ಕಷ್ಟ. ಅವಳೆಂದೂ ಈ ಪರಿ ಅಸಹಾಯಕಳಾಗಿರಲಿಲ್ಲ. ಒಬ್ಬ ನಂಬಿಗಸ್ಥರಿಲ್ಲ. ನಿಷ್ಠೆಯನ್ನ ಕೊಳ್ಳೋದಕ್ಕೆ ಹಣವಿಲ್ಲ. ದಿವಂಗಿತ ರಾಜ, ರೋಗಿಷ್ಟ ಮಗ. ವಿಶ್ವಾಸದ್ರೋಹಿಯಾದ ಪ್ರಧಾನಿ! ಅರಮನೆಯಲ್ಲಿ ಯಾರನ್ನು ನಂಬುವುದು ? ಯಾರನ್ನು ಬಿಡುವುದು? ಯಾವಾಗ ವಿಷ ಹಾಕಿ ಕೊಲ್ಲುವರೆಂಬ ಖಾತ್ರಿಯಿಲ್ಲ! ಒಂದು ಕಾಲಕ್ಕೆ ಮಹಾರಾಣಿಯ ವಿನೋದಕ್ಕೆ ಗುರಿಯಾದದ್ದೇ ತನಗೆ ಗೌರವವೆಂದು ವರ್ತಕರನೇಕರು ಭಾವಿಸುತ್ತಿದ್ದರು. ಅದಕ್ಕಾಗಿ ಉದ್ದೇಶಪೂರ್ವಕ ದಡ್ಡರ ಹಾಗೆ ಅಭಿನಯಿಸಿ ಮಹಾರಾಣಿಯನ್ನು ನಗಿಸಲು ಪ್ರಯತ್ನಿಸುತ್ತಿದ್ದರು. ಈಗ ಒಬ್ಬ ವರ್ತಕನೂ ಅವಳ ಬಳಿಗೆ ಸುಳಿದಿರಲಿಲ್ಲ.

ಆದರೂ ಅವಳು ಅಂಗಾಲಿನಿಂದ ನೆತ್ತಿಯತನಕ ಮಹಾರಾಣಿಯೇ! ಗತ್ತಿನ ನಡಿಗೆ, ಮಾತಿನ ಶೈಲಿ, ಹಿಂಜರಿಕೆಯಿಲ್ಲದ ದರ್ಪ, ಪಂಡಿತರನ್ನ ತಬ್ಬಿಬ್ಬುಗೊಳಿಸುವ ವಿಚಾರ ಸರಣಿ – ಇವೆಲ್ಲ ಅವಳನ್ನು ಹುಟ್ಟಿನಿಂದ ಮಾತ್ರವಲ್ಲ ಗುಣದಿಂದಲೂ ಮಹಾರಾಣಿಯನ್ನಾಗಿ ಮಾಡಿದ್ದವು. ಕನಕಪುರಿಯನ್ನ ಆಕೆಯ ಹಾಗೆ ಪ್ರೀತಿಸಿದವರು ಇನ್ನೊಬ್ಬರಿಲ್ಲ. ಆದರೆ ಕನಕಪುರಿಯ ಬಗೆಗಿನ ಅವಳ ಅಭಿಮಾನವೇ ಈಗ ಮೈಲಿಗೆಗೊಂಡಿತ್ತು! ಮಹಾರಾಣಿಯೀಗ ಗತವೈಭವದ ಶವದ ಹಾಗೆ ಕಾಣುತ್ತಿದ್ದಳು.