ಈ ಸಲದ ಚಳಿಗಾಲ ಹರಿತವಾಗಿತ್ತು. ದೊಡ್ಡ ಪಡೆ ತಗೊಂಡು ರಾಜನೊಬ್ಬ ತಮ್ಮ ಮೇಲೆ ಏರಿಬಂದಾನೆಂದು ಕನಕಪುರಿಯ ಯಾವ ಮುತ್ಸದ್ದಿ ರಾಜಕಾರಣಿಯೂ ಊಹಿಸಿರಲಿಲ್ಲ. ಯಾವ ದೇವರೂ ಕಾಲಜ್ಞಾನ ನುಡಿದಿರಲಿಲ್ಲ. ಚಳಿಯಿಂದಾಗಿ ರಸ್ತೆಗಳು ಬೆಳಗಿನ ನಾಕು ತಾಸು ಹೊತ್ತೇರುವ ತನಕ ಭಿಕೋ ಎನ್ನುತ್ತಿದ್ದವು. ಅಂಗಡಿ ಬಾಗಿಲು ಕೂಡ ತೆರೆಯುತ್ತಿರಲಿಲ್ಲ. ರಸ್ತೆ ಗುಡಿಸುವವರ ವಿನಾ ಬೇರೆ ಯಾರೂ ರಸ್ತೆಗಳಲ್ಲಿ ಕಾಣಿಸುತ್ತಿರಲಿಲ್ಲ ಆದರೆ ಪರಿಚಯವಿಲ್ಲದ, ಎತ್ತರ ಮತ್ತು ದಷ್ಟಪುಷ್ಟ ದೇಹಾಕೃತಿಯ, ಅಹಂಕಾರದ ನೋಟಗಳ ಕೆಲವರು ರಸ್ತೆಗಳಲ್ಲಿ ಮತ್ತು ಅರಮನೆ ಮತ್ತು ಮಂತ್ರಿ ಮನೆಯ ಆಸುಪಾಸು ಹಾದಾಡುತ್ತಿದ್ದರು. ಕಸಗುಡಿಸುವವರು ಅವರನ್ನ ಗಮನಿಸಿದ್ದರೂ ಇನ್ನೊಬ್ಬರ ಉಸಾಬರಿ ತಮಗ್ಯಾಕೆಂದು ಅವರೂ ನಿರ್ಲಿಪ್ತರಾಗಿದ್ದರು.

ಬಿಸಿಲು ಬಿರುಸಾದ ಮೇಲೆ ಒಂದೊಂದೇ ಅಂಗಡಿ ಬಾಗಿಲು ತೆರೆಯತೊಡಗಿದವು. ಹಣ್ಣು ತರಕಾರಿ ಮಾರುವ ರೈತರು ಪೇಟೆ ರಸ್ತೆಯಲ್ಲಿ ತಂತಮ್ಮ ವಸ್ತುಗಳನ್ನು ಹರಹಿ ಗಿರಾಕಿಗಳಿಗಾಗಿ ಕಾಯತೊಡಗಿದರು. ಕಂಬಳಿ ಮಾರುವವರಿಗೆ ಚಳಿ ಅನುಕೂಲವಾಗಿತ್ತು. ಬರಬರುತ್ತ ಕೌದಿ ಮಾರುವವರು, ಅಗ್ಗದ ಚಾಕು ಚೂರಿ ಮಾರುವವರು, ಕರಿದ ತಿಂಡಿ ಮಾರುವವರ ಚಟುವಟಿಕೆ ಹೆಚ್ಚಾದವು. ಲೈಂಗಿಕ ಶಕ್ತಿ ವೃದ್ಧಿಸುವ ವನಸ್ಪತಿಯ ಮಾತ್ರೆ ಮಾರುವವನ ಸುತ್ತ ಆಗಲೇ ಜನ ಸೇರಿದ್ದರು. ಅವನ ಸುತ್ತ ಧೂಳು, ದನಿ, ಗದ್ದಲವಿತ್ತು. ಬೀದಿನಾಯಿಗಳು ಬೊಗಳುತ್ತಿದ್ದವು.

ರಸ್ತೆಯಂಚಿನ ದೇವಾಲಯದ ಮುಂದೆ ಭಿಕ್ಷುಕರಾಗಲೇ ಸಾಲಾಗಿ ಕೂತು, ತಮ್ಮ ಕೊರತೆಗಳು ಮತ್ತು ಕೃತಕ ಗಾಯಗಳನ್ನು ಪ್ರದರ್ಶಿಸಿ, ದಾನಮಾಡಿದವರಿಗೆ ಪರಲೋಕದಲ್ಲಿ ಪುಣ್ಯ ಸಿಕ್ಕುವ ವಾಗ್ಧಾನ ಮಾಡುತ್ತಿದ್ದರು. ಯಾರೊಬ್ಬರು ಭಕ್ತಾದಿಗಳು ಬಂದರೂ ಇವರು ದನಿದೋರಿ, ಒದರಿ ಇಲ್ಲವೇ ಅಂಗಲಾಚಿ ಇಲ್ಲವೆ ಹಲುಬಿ ತಮ್ಮ ದಯನೀಯ ಸ್ಥಿತಿಯನ್ನು ಪ್ರದರ್ಶಿಸಿ ಕರುಣೆ ಬರುವಂತೆ ಮಾಡುವುದರಲ್ಲಿ ಸ್ಪರ್ಧೆ ನಡೆಸಿದ್ದರು.

ಆದರೆ ಬೀದಿಗಳಲ್ಲಿ ಹಾದಾಡುವ ನಾಗರಿಕರಲ್ಲಿ ಹೊರಗೆ ಹೇಳಲಾರದ ಭೀತಿ ಕೊರೆಯುತ್ತಿದ್ದುದು ಸ್ಪಷ್ಟವಿತ್ತು. ಇವತ್ತಿನ ವ್ಯಾಪಾರ ಎಂದಿನಂತಿರಲಿಲ್ಲ. ಕೆಲವರು ಇಬ್ಬರೇ ಗುಂಪಾಗಿ ಏನೇನೋ ಮಾತಾಡಿಕೊಳ್ಳುತ್ತ ಇನ್ನೊಬ್ಬರು ಬಂದರೆ ತಕ್ಷಣ ಗುಂಪೊಡೆದು ಬೇರೆ ದಾರಿ ಹಿಡಿದು ಜಾರಿಕೊಳ್ಳುತ್ತಿದ್ದರು. ಏರಿ ಬಂದವರು ಕಂಚಿಯ ಸಾಮ್ರಾಟರೆಂದು, ಬಿಳಿಗಿರಿ ಮಹಾರಾಜರೆಂದು, ಮಾಳವದ ಚಕ್ರವರ್ತಿಗಳೆಂದು – ಗುಂಪಿನಿಂದ ಗುಂಪಿಗೆ ಹೆಸರು ಬದಲಾದರೂ ಅಂತೂ ಒಬ್ಬ ಬಲಾಢ್ಯ ಮಹಾರಾಜ ದೊಡ್ಡ ಪಡೆಯೊಂದಿಗೆ ಕನಕಪುರಿಯ ಮೇಲೆ ದಂಡೆತ್ತಿ ಬಂದಿರುವನೆಂದು ಮಾತಾಡುತ್ತ ಕಳವಳ ವ್ಯಕ್ತಪಡಿಸುತ್ತಿದ್ದರು. ರೋಗಿಷ್ಟ ರಾಜ, ನರಗಳಿಲ್ಲದ ಮಂತ್ರಿ, ಸೇನಾಪತಿಯಿಲ್ಲದ ಸೈನ್ಯದಿಂದ ಏನಾದೀತೆಂದು, ಅಧೋಗತಿಯಲ್ಲದೆ ಬೇರೆ ಗತಿ ಇಲ್ಲವೆಂದು ಮಾತಾಡಿಕೊಳ್ಳುತ್ತಿದ್ದರು. ಬದೆಗನನ್ನು ಶ್ವಾನಕೂಪಕ್ಕೆ ತಳ್ಳಿದ್ದರಿಂದ ಹೀಗಾಯಿತೆಂದು ಕೆಲವರೆಂದರೆ ಶಿಖರಸೂರ್ಯನನ್ನು ಹೊರಹಾಕಿದ್ದೇ ಇದಕ್ಕೆ ಕಾರಣವೆಂದು ಕೆಲವರೆಂದರು. ದಂಡೆತ್ತಿ ಬಂದಿರುವಾತ ಶಿಖರಸೂರ್ಯನೆಂದು ಮಾತ್ರ ಇನ್ನೂ ಯಾರಿಗೂ ಗೊತ್ತಿರಲಿಲ್ಲ. ಮಹಾರಾಜ ಹಾಸಿಗೆ ಬಿಟ್ಟೇಳುವ ಸ್ಥಿತಿಯಲ್ಲಿಲ್ಲವೆಂದೂ ಈಗ ರಾಜ್ಯವನ್ನ ಉಳಿಸುವುದು ಮಹಾರಾಣಿಗೆ ಮಾತ್ರ ಸಾಧ್ಯವೆಂದೂ ಕೆಲವರು ಅಂದಾಡಿಕೊಂಡರು.

ದಂಡೆತ್ತಿ ಬಂದ ರಾಜನ ಸಂಧಿವಿಗ್ರಹಿ ಎರಡು ಸಲ ಮಹಾರಾಣಿಯನ್ನ ನೋಡಿ ಶರಣಾಗತಿಗೆ ಒಪ್ಪಿಸಿ ಹೋದನೆಂದು ಸುದ್ದಿಯಿತ್ತು. ಮಹಾರಾಣಿಯನ್ನು ನೋಡಲಿಕ್ಕೆ ನಿನ್ನೆ ರಾತ್ರಿ ಪ್ರಧಾನಿ ಹೋಗಿದ್ದನೆಂದೂ, ಮಹಾರಾಣಿ ಅವನ ಹೇಡಿ ಮುಖವನ್ನು ನೋಡಲು ತಿರಸ್ಕರಿಸಿದಳೆಂದು, ಭೇಟಿಯಾಗದ್ದಕ್ಕೆ ಮಂತ್ರಿ ಕೈ ಕೈ ಹಿಸುಕಿಕೊಂಡು ಶತಪಥ ತಿರುಗುತ್ತ ಚಿಂತಿಸುತ್ತಿರವನೆಂದೂ, ಅರಮನೆಯೊಂದಿಗೆ ಬಳಕೆಯಿದ್ದವರು ಆಡಿಕೊಂಡರು. ಬಾಣಕ್ಕಿಂತ ವೇಗವಾಗಿ ಸುದ್ದಿಗಳು, ಚಾಡಿಗಳು ಪಿಸುಮಾತುಗಳು ಹರಡಿದ್ದವು.

ಮಧ್ಯಾಹ್ನವಾಗುವುದಕ್ಕೆ ಪೂರ್ವತಯಾರಿಗೆಂಬಂತೆ ಸೂರ್ಯ ಪಶ್ಚಿಮಕ್ಕೆ ವಾಲಿದ್ದ. ಆಡುವ ಮಕ್ಕಳೂ ಇಲ್ಲದೆ ಬೀದಿಗಳು ನಿರ್ಜನವಾಗಿದ್ದವು. ದೇವಸ್ಥಾನದ ಬಳಿಯ ಭಿಕ್ಷುಕರನ್ನು ಕೂಡ ಓಡಿಸಿದ್ದರು. ಅಷ್ಟರಲ್ಲಿ ಅರಮನೆಯ ದಕ್ಷಿಣ ದ್ವಾರ ತೆರೆದು ದೇವಾಲಯಕ್ಕೆ ಮಹಾರಾಣಿ (ರಾಜಮಾತೆ) ಪ್ರವೇಶ ಮಾಡಿದಳು. ಆಕೆಯ ಬರವಿನ ಬಗ್ಗೆ ಮೊದಲೇ ಮಾಹಿತಿಯಿದ್ದ ಪುರೋಹಿತರು ಆಕೆಗೆ ಪೂರ್ಣಕುಂಭ ಸ್ವಾಗತ ನೀಡಲು ಮಂತ್ರೋಚ್ಛಾರಣೆ ಸುರುಮಾಡಿದೊಡನೆ ಬೇಡವೆಂದು ಮಹಾರಾಣಿ ಸನ್ನೆ ಮಾಡಿದಳು. ತಕ್ಷಣ ಅವರ ಬಾಯಿ ಮುಚ್ಚಿಕೊಂಡವು. ಮೌನದಿಂದಲೇ ಒಳಗೆ ಕರೆದೊಯ್ದರು. ಇಬ್ಬರು ಸೇವಕಿಯರು ಗರ್ಭಗುಡಿಯ ದ್ವಾರದಲ್ಲಿ ಬಾಡಿದ ಮಾಲೆಗಳಂತೆ ನಿಂತರು.

ಮಹಾರಾಣಿಯ ಆಜ್ಞೆಯಂತೆ ಬೆಳಗಿನಿಂದ ಬಗೆಬಗೆಯ ಪೂಜೆ ಪುನಸ್ಕಾರ ಯಜ್ಞ – ಯಾಗಾದಿಗಳನ್ನು ಮಾಡಿ ಮಾಡಿ ಆಶೀರ್ವಾದ ಪ್ರಸಾದ ವಿನಿಯೋಗವಷ್ಟೇ ಬಾಕಿ ಉಳಿದಿತ್ತು. ಮಹಾರಾಣಿ ಕುಬೇರನ ವಿಗ್ರಹದ ಮುಂದೆ ಕೂತು ನೀವೆಲ್ಲ ಹೊರಕ್ಕೆ ಹೋಗಿರೆಂದು ಸನ್ನೆ ಮಾಡಿದಳು. ಅವಸರದಿಂದ ಎಲ್ಲ ಪುರೋಹಿತರು ಹೋದಮೇಲೆ ಕೈ ಮುಗಿದು ಪ್ರಾರ್ಥಿಸುತ್ತ ಕೂತಳು.

ಯಜ್ಞ ಮಾಡಿದ ಹಿತಕರವಾದ ವಾಸನೆ ದೇವಾಲಯದ ತುಂಬ ಹರಡಿತ್ತು. ವಿಗ್ರಹದ ಸುತ್ತಮುತ್ತ ಹೂವಿನ ರಾಶಿ ಬಿದ್ದಿತ್ತು. ದೇವರ ಮುಂದಿನ ಯಜ್ಞಕುಂಡದಿಂದ ಇನ್ನೂ ಹೊಗೆ ಎದ್ದು ಸರ್ಪದಂತೆ ವಕ್ರವಾಗಿ ಸುತ್ತಿ ಮ್ಯಾಲೇರಿ ಮಾಯವಾಗುತ್ತಿತ್ತು.

ಮಹಾರಾಣಿಯ ಪ್ರಾರ್ಥನೆ ಮುಗಿದ ಮೇಲೆ ಮೊಳಕಾಲೂರಿ ಹಣೆ ನೆಲಕ್ಕೆ ತಾಗಿಸಿ ದೀರ್ಘಕಾಲ ನಮಸ್ಕರಿಸಿ ಎದ್ದಳು. ಅವಳು ಹಣೆ ಊರಿದಲ್ಲಿ ಕೆಂಪು ಕಣಗಿಲೆ ಹೂವು ಬಿದ್ದಿತು. ಅದು ರಕ್ತದ ಕಲೆಯಂತೆ ಕಂಡು ಛಟ್ಟನೇ ಎದ್ದು ಹೊರಟಳು. ಪಾಪಗಳು ಘನೀಭವಿಸಿ ಸುತ್ತ ಅಡರುತ್ತಿರುವಂತೆನಿಸಿತು. ಇವಳನ್ನೇ ನೋಡುತ್ತ ನಿಂತಿದ್ದ ಪುರೋಹಿತರು ಓಡಿಬಂದು ತೀರ್ಥಪ್ರಸಾದ ಕೊಡಬಂದರು. ಬೇಡವೆಂದು ಸನ್ನೆ ಮಾಡಿ ಹೊರ ನಡೆದಳು. ಮನಸ್ಸಿಗೆ ನೆಮ್ಮದಿ ಇರಲಿಲ್ಲ. ನವರಂಗದಲ್ಲಿ ಕಲಾತ್ಮಕವಾಗಿ ಕೆತ್ತಲಾದ ಒಂದುನೂರಾ ಎಂಟು ಎತ್ತರವಾದ ಕಂಬಗಳಿದ್ದವು. ಒಂದೊಂದು ಕಂಬದಲ್ಲೂ ತಾಂಡವ ನೃತ್ಯ ಮಾಡುವ ಶಿವನ ಅನೇಕ ಭಂಗಿಗಳ ವಿಗ್ರಹಗಳಿದ್ದವು.

ಮಹಾರಾಣಿ ಹೋದಮೇಲೆ ಪುರೋಹಿತರು ಆಶ್ಚರ್ಯಪಡುತ್ತ ನಿಂತರು. ಯಾಕೆಂದರೆ ಮಹಾರಾಣಿ ಹಿಂದೆ ಮಹಾರಾಜರು ಜೀವಂತವಾಗಿದ್ದಾಗ ಅವರೊಂದಿಗೆ ಒಂದೆರಡು ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಬಂದವಳೇ ಹೊರತು ಒಬ್ಬಳೇ ಬಂದವಳೇ ಅಲ್ಲ ಅವರಿಗೆಲ್ಲ ಆಶ್ಚರ್ಯವಾಯಿತು. ಯಾಕೆನೆ ಆಕೆ ದೇವರಲ್ಲಿ ನಂಬಿಕೆ ಇಟ್ಟವಳಲ್ಲ. ತಾನಾಗಿ ದೇವಸ್ಥಾನಕ್ಕೆ ಬಂದವಳಲ್ಲ. ತೀರ್ಥಪ್ರಸಾದ ಕೊಂಡವಳಲ್ಲ. ಭಕ್ತಿ ಮಾಡಿದವಳಲ್ಲ. ಆದರೂ ಬಂದಿದ್ದಳಲ್ಲ! ಬಹುಶಃ ಈಗಿನ ಸಂದರ್ಭದಲ್ಲಿ ಮನೆತನದ ಪರವಾಗಿ ಪ್ರಾರ್ಥಿಸಲಿಕ್ಕಿರುವ ಹಿರಿಯ ವ್ಯಕ್ತಿ ಅವಳೇ ಆದ್ದರಿಂದ ಬಂದಿರಬಹುದೆಂದುಕೊಂಡರು. ಅವಳು ಹೋದ ಮೇಲೆ ಮಾತ್ರ ಎಲ್ಲ ಪುರೋಹಿತರು ಹಗುರ ಮನಸ್ಸಿನವರಾದರು.