ಶಿಖರಸೂರ್ಯ ಆನಂದಸಾಗರದಲ್ಲಿ ತೇಲಾಡುತ್ತಿದ್ದ. ನಾಗಾರ್ಜುನ ಕಾಂತಿಯಿಂದ ಹೊಳೆವ ಬಿಳಿಯ ಹಕ್ಕಿಯಾಗಿ ಹಾರುತ್ತ ಆಗಸದ ನೀಲಿಮದಲ್ಲಿ ಲೀನವಾದುದನ್ನು ಹೃತ್ಪೂರ್ವಕ ಪ್ರೀತಿಯಿಂದ ನೋಡಿದ. ಬೀಳ್ಕೊಡುವಂತೆ ಭಕ್ತಿಯಿಂದ ಎರಡೂ ಕೈ ಜೊಡಿಸಿ ಎತ್ತಿ, ನೆತ್ತಿಯ ಮ್ಯಾಲಿಟ್ಟುಕೊಂಡು ನಮಸ್ಕರಿಸಿದ ಆಮೇಲೆ ಸಮಾಧಾನದಿಂದ ಶಿಖರದ ಮ್ಯಾಲಿಂದ ಇಳಿದ. ಇಳಿಯುವಾಗ ಏರುವಾಗಿನಂಥ ಕಷ್ಟವಾಗಲಿಲ್ಲ.

ಕೆಳಕ್ಕಿಳಿದು ಬಂದಾಗ ಶರತ್ಕಾಲದ ಛಳಿಯಿತ್ತು. ನೆಲದ ಮೇಲೆ ಮಂಜುಬಿದ್ದು ಒದ್ದೆಯಾಗಿತ್ತು. ಎಲ್ಲ ಕಡೆ ಹಸಿರು, ಹಸಿರಿನ ಮೇಲೆ ಸೂರ್ಯನ ಬಂಗಾರ ವರ್ಣದ ಬಿಸಿಲು ಬಿದ್ದು ಹೊಲಗದ್ದೆ, ಕಾಡುಗಳೆಲ್ಲ ಹಸಿರು ಹಳದಿ ಬೆರೆತ ಕಾಂತಿಯಿಂದ ಹೊಳೆಯುತ್ತಿದ್ದವು. ಹುಲ್ಲುಗರಿಕೆಯಿದ್ದಲ್ಲಿ ಮೊಲಗಳು ಓಡಾಡುತ್ತಿದ್ದವು. ಎಲ್ಲೆಲ್ಲೂ ಕಾಡುಹೂಗಳರಳಿ ಅವುಗಳ ಪರಿಮಳಗಳು ಘಮ್ಮಂತ ಮುಗು ತುಂಬಿ ಜೀವಿಗಳಲ್ಲಿ ಉತ್ಸಾಹ ಚಿಮ್ಮಿಸುತ್ತಿದ್ದವು. ಹೊಲಗದೆಗಳಲ್ಲಿ ಉತ್ಸಾಹದ ರೈತಾಪಿ ಜನ ಫಸಲು ಕುಯ್ಯುವುದರಲ್ಲಿ, ಕುಯ್ದುದನ್ನು ಗೂಡು ಹಾಕುವುದು, ತೆನೆ ಬಿಡಿಸುವುದು, ರಾಶಿ ಆಡುವುದೇ ಮುಂತಾದ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದರು. ಹುಡುಗ ಹುಡುಗಿಯರು ಕೆಲಸ ಮಾಡುವ ನೆಪದಲ್ಲಿ ಆಸೆಬುರುಕತನದಿಂದ ಪರಸ್ಪರ ನೋಡುತ್ತ ಸಾಧ್ಯವಾದರೆ ಪರಸ್ಪರ ತಗಲುತ್ತ ನಗಾಡುತ್ತಿದ್ದರು. ಕೆಲವರಾಗಲೇ ಹಂತಿ ತಿರುಗಿಸುತ್ತ ದೂರದ ಪ್ರೇಮಿಗಳಿಗೆ ಹಾಡಿನ ಮೂಲಕ ಸಂದೇಶ ಕಳಿಸುತ್ತಿದ್ದರು. ಸುಗ್ಗಿಯ ಸಮೃದ್ಧಿಯನ್ನು ನೋಡಿ ಶಿಖರಸೂರ್ಯನ ಕನಸುಗಳು ಶ್ರೀಮಂತಿಕೆಯಿಂದ ಕೊಬ್ಬಿದವು.

ಅನತಿದೂರದಲ್ಲಿ ಒಬ್ಬ ರೈತನ ಸುಂದರವಾದ ತೋಟಕ್ಕೆ ಹೋದ. ಅಂಚಿನಲ್ಲಿ ಒಂದು ಗುಡಿಸಲ ಮನೆಯಿತ್ತು. ಅಂಗಳದಲ್ಲಿ ಎತ್ತರವಾದ ಬೆಲೆಯುಳ್ಳ ಕುದುರೆ ನಿಂತಿತ್ತು. ಶಿಖರಸೂರ್ಯ ಕುದುರೆಯನ್ನು ಮೆಚ್ಚಿಕೊಂಡು ಅದರ ಸುತ್ತ ಅಲೆದು ನೋಡಿದ. ಮುದ್ದಾಂ ಮೇಯಿಸಿದ ಘನಾಂದಾರಿ ಕುದುರೆ ಅದು. ಕರೀ ಮೈ ಮಿರ ಮಿರ ಮಿಂಚುತ್ತಿತ್ತು. ಕಣ್ಣುಗಳೆರಡೂ ಹರಿತವಾದ ಖಡ್ಗದಂತಿದ್ದವು. ಇವನು ಹೀಗೆ ಹಿಂದೆ ಮುಂದೆ ಸರಿದು ಮೆಚ್ಚುಗೆಯಿಂದ ಕುದುರೆಯನ್ನು ನೋಡುತ್ತಿದ್ದಾಗ ಎಲ್ಲಿಂದಲೋ ಪ್ರತ್ಯಕ್ಷವಾದ ನಾಯಿ ಬೊಗಳುತ್ತ ಓಡಿ ಬಂತು. ಅವನ ಮೇಲೆ ಹಾರಬೇಕೆಂಬಷ್ಟರಲ್ಲಿ ಅದರ ಮುಖ ಹಿಡಿದು ಬಾಯಿಂದ ಗುಬ್ಬಚ್ಚಿಯಂಥ ದನಿ ಮಾಡಿ ಅಚ್ಚೆ ಮಾಡಿದ. ನಾಯಿ ಅವನ ವಾಸನೆಗೆ ಮಂತ್ರಮುಗ್ಧವಾಗಿ ತನ್ನ ಹಳೆಯ ಯಜಮಾನನ ಗುರುತಿಸಿದಂತೆ ನಾಲಗೆ ಹಿರಿದು ಜೊಲ್ಲು ಸುರಿಸುತ್ತ ಬಾಲ ಅಲುಗಾಡಿಸತೊಡಗಿತು. ಶ್ವಾನಕೂಪದ ನಾಯಿಗಳನ್ನೇ ಪಳಗಿಸಿದವನಿಗೆ ಇದು ದೊಡ್ಡದಲ್ಲ.

ರೈತರು ಬೇರೊಂದು ಕಡೆಗೆ ಕೆಲಸದಲ್ಲಿ ತೊಡಗಿದ್ದುದರಿಂದ ಗುಡಿಸಲಲ್ಲಿ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಶಿಖರಸೂರ್ಯ ಗುಡಿಸಲೊಳಕ್ಕೆ ನುಗ್ಗಿದ. ಅಷ್ಟರಲ್ಲಿ ತುಂಬಿದ ಭಾರವಾದ ಬುಟ್ಟಿಯನ್ನು ಹೊತ್ತುಕೊಂಡು, ನಲವತ್ತು ವಯಸ್ಸಿನ ಹೆಂಗಸೊಬ್ಬಳು ಗುಡಿಸಲಿಗೆ ಬಂದಳು. ತಕ್ಷಣ ಈತ ಅಡಗಿದ. ಸಾದು ಬಣ್ಣದ ಆ ಹೆಂಗಸು ಕಷ್ಟಪಟ್ಟು ಬುಟ್ಟಿ ಇಳಿಸಿ, ನೀರು ತರಲು ಬರಿ ಬಿಂದಿಗೆ ತಗೊಂಡು ಹೊರಗೆ ಹೋದಳು. ಬುಟ್ಟಿಯಲ್ಲಿ ಮಾಡಿಟ್ಟ ಅಡಿಗೆ ಗಮಗಮ ನಾರುತ್ತಿತ್ತು. ಬಡಿಸಿಕೊಂಡು ಗಬಗಬ ತಿಂದ. ಸ್ವಲ್ಪ ಸಮಯದಲ್ಲಿ ನೀರು ತುಂಬಿಕೊಂಡು ಒಳಗೆ ಬಂದ ಹೆಂಗಸು ಇವನನ್ನು ನೋಡಿ ಕಿಟಾರನೆ “ಕೋತಿ” ಎಂದು ಬಾಯಿ ಬಾಯಿ ಬಡಿದುಕೊಳ್ಳತೊಡಗಿದಳು. ಇವನು ಅವಳ ಕಡೆಗೆ ನೋಡಲು ಇಲ್ಲ. ತಿನ್ನುವುದನ್ನು ನಿಲ್ಲಿಸಲೂ ಇಲ್ಲ. ನಾಯಿ ಮಾತ್ರ ಬಾಲ ಅಲ್ಲಾಡಿಸುತ್ತಲೇ ಇತ್ತು. ದೂರದಲ್ಲಿಯ ಜನಗಳನ್ನು ಕರೆತರೋಣವೆಂದು ಅವಳು ಓಡಿಹೋದಳು.

ಆ ಹೆಂಗಸ್ಯಾಕೆ ಹಾಕೆ ಕಿರುಚಿದಳೆಂದು ಶಿಖರಸೂರ್ಯ ತನ್ನ ತಾ ನೋಡಿಕೊಂಡರೆ ಆಶ್ಚರ್ಯವಾಯಿತು. ಹುಲುಸಾಗಿ ತಲೆಗೂದಲು ಕೆದರಿ ಕೆಲವು ಕಡೆ ಧೂಳು ಮೆತ್ತಿ ಜಡೆಗಟ್ಟಿತ್ತು. ಗಡ್ಡ ಮೀಸೆ ಹ್ಯಾಗೆಂದರೆ ಹಾಗೆ ಬೆಳೆದು ಅಲ್ಲಲ್ಲಿ ಮಣ್ಣು ಮೆತ್ತಿ ಚರಂಡಿಯಲ್ಲಿ ಉರುಳಾಡಿ ಬಂದಂತೆ ಕಾಣುತ್ತಿತ್ತು. ಮೈ ಗಲೀಜಾಗಿ ಬೆವರೊಣಗಿ ಅಂಟಂಟಾಗಿ ಗಬ್ಬೆದ್ದು ನಾರುತ್ತಿತ್ತು. ಸೊಂಟದ ಚಿಂದಿ ವಿನಾ ಮೈಮೇಲೆ ಬಟ್ಟೆಯಿರಲಿಲ್ಲ. ಅಷ್ಟರಲ್ಲಿ ಇನ್ನಿಬ್ಬರು ಹೆಂಗಸರು ಬಂದು ಬಾಯಿ ಮಾಡುತ್ತಿದ್ದಂತೆ ಶಿಖರಸೂರ್ಯ ಅಂಗಳದಲ್ಲಿ ಕಟ್ಟಿದ್ದ ಕುದುರೆಯನ್ನ ಬಿಚ್ಚಿಕೊಂಡು ಹತ್ತಿ ಓಡಿಸಿದ.

ಮೊದಲು ಸುಕ್ರನನ್ನು ನೋಡಿ ಸಾಧ್ಯವಾದಷ್ಟು ಸೈನ್ಯ ಕೂಡಿಸಿಕೊಂಡು ನಾಳೆಯೇ ಬಂಡೆಯನೊಂದಿಗೆ ಕನಕಪುರಿಗೆ ಬರಬೇಕೆಂದು ತಿಳಿಸಿ ತಾನು ಕನಕಪುರಿ ಮಾರ್ಗದಲ್ಲಿ ದೌಡಾಯಿಸಿದ.

ಅವಸರವಸರದಲ್ಲಿ ಒಂದು ಕಡಿಮೆ ನಲವತ್ತರ ಎರಡು ಆಳ್ಪಡೆಗಳನ್ನು ಕೂಡಿಸಿಕೊಂಡು ಸುಕ್ರ ಬಂಡೆಯರು ಕನಕಪುರಿಗೆ ತಲುಪುವುದರೊಳಗೆ ಅಗತ್ಯವಿರುವಷ್ಟು ಚಿನ್ನ ಮತ್ತು ಮೂರು ಸಾವಿರ ಸೈನ್ಯದೊಂದಿಗೆ ಶಿಖರಸೂರ್ಯ ಇವರಿಗಾಗಿ ಕಾಯುತ್ತಿದ್ದ! ಮೂವರೂ ಕೂಡಿಕೊಂಡು ಆಕ್ರಮಣದ ಯೋಜನೆ, ಉಪಾಯ, ನಿರ್ವಹಣೆಗಳನ್ನು ತಯಾರಿಸಿ ರಾಜಧಾನಿಯ ಹೊರಗೆ ಸೈನ್ಯ ನಿಲ್ಲಿಸಿ ಸಂಧಿವಿಗ್ರಹಿಯಾಗಿ ಸುಕ್ರನನ್ನು, ಬೇಹುಗಾರಿಕೆಗಾಗಿ ಬಂಡೆಯನನ್ನು ಕಳಿಸಿ ತಾನು ಹೊರಗೇ ನಿಂತ.