ಮಾರನೇ ಬೆಳಿಗ್ಗೆ ಬೆಳ್ಳಿ ಮೂಡಿ ಹಕ್ಕಿ ಸ್ವರ ಮಾಡುವ ಹೊತ್ತಿಗೆ ಬೆಟ್ಟ ಹತ್ತುವುದಕ್ಕೆ ಸುರು ಮಾಡಿದ. ಈಗ ಅವನ ಹೆಜ್ಜೆಗಳಲ್ಲಿ ದೃಢತೆ, ಆತ್ಮವಿಶ್ವಾಸ ಇತ್ತು. ಆ ಹಕ್ಕಿಯ ಬಗ್ಗೆ ಅಳುಕು ಇರಲಿಲ್ಲ. ಎಷ್ಟು ಹಗಲು ಎಷ್ಟು ರಾತ್ರಿ ಹತ್ತಿದ? ಏನೇನು ಕಷ್ಟಗಳನ್ನು ಎದುರಿಸಿದ? ಓದುಗರಿಗೆ ಇಷ್ಟನ್ನಂತೂ ಜ್ಞಾಪಿಸುತ್ತೇವೆ: ಆತ ವಜ್ರದೇಹಿ; ವೈದ್ಯ ಬಲ್ಲವನು. ಸಸ್ಯ ಹೃದಯ ಅರಿತವನು. ಹತುವ ದಾರಿ ಕಡಿದಾಗಿತ್ತು. ಹತ್ತುತ್ತ ಹೋದಂತೆ ಹೆಚ್ಚು ಇಕ್ಕಟ್ಟಿನದಾಗಿತ್ತು. ಮೊದಮೊದಲು ಸಹಾಯಕವಾದ ಮರಗಳಿದ್ದವು. ಬರುಬರುತ್ತ ಅವೂ ಕಡಿಮೆಯಾಗಿ ಬರೀ ಕಂಟಿಗಳು ಹತ್ತಿದವು. ಅವೂ ಕಡಿಮೆಯಾಗಿ ಆಮೇಲೆ ಬರೀ ಕರಿ ಬಂಡೆಗಳಿದ್ದವು. ಬಂಡೆಗಳಲ್ಲಿ ದಾರಿ ಇರಲಿಲ್ಲ. ಹತ್ತಿದ್ದೇ ದಾರಿ ಮಾಡಿಕೊಂಡು ಹತ್ತಿದ. ಒಂದೊಮ್ಮೆ ಹತ್ತಲು ಅನುಕೂಲವಾಗದಿದ್ದಲ್ಲಿ ದೂರ ದೂರ ಸರಿದು ಅಲ್ಲಿಂದ ಮೇಲೆ ಹತ್ತಬೇಕಾಗಿತ್ತು.

ಇನ್ನಷ್ಟು ಮೇಲೆ ಹತ್ತಿದಾಗ ಮೋಡಗಳಲ್ಲಿ ಬೆಟ್ಟ ಮುಚ್ಚಿಹೋಗಿತ್ತು. ಮೊದಮೊದಲು ಕಪ್ಪಗಿದ್ದ ಬೆಟ್ಟ ಅಡಿ ಅಂತರದಲ್ಲಾದರೂ ಕಾಣುತ್ತಿತ್ತು. ಬರಬರುತ್ತ ಅದೂ ಇಲ್ಲವಾಗಿ ಕುರುಡನಂತೆ ಕೈಯಾಡಿಸಿ ಕೈಯಿಡುತ್ತ ಕಾಲಾಡಿಸಿ ಕಾಲಿಡುತ್ತ ಎಲ್ಲವನ್ನೂ ಸ್ಪರ್ಶದಿಂದಲೇ ತಿಳಿಯುತ್ತ ಹತ್ತಿದ. ಮುಖದ ಮೇಲಿನ ಬೆವರು ಕೂಡ ತಕ್ಷಣ ಹಿಮವಾಗುತ್ತಿತ್ತು. ಯಾವುದನ್ನೂ ಗಣನೆಗೆ ತಕ್ಕೊಳ್ಳದೆ – ಸಾಯುವುದು – ಇಲ್ಲ – ಹತ್ತುವುದು – ಇಲ್ಲಾ ಹತ್ತುತ್ತಲೇ ಸಾಯುವುದೆಂದು ಹತ್ತತೊಡಗಿದ. ಮ್ಯಾಲೆ ಮ್ಯಾಲೆ ಏರಿದಂತೆ ಮೋಡಗಳಿಂದಾಗಿ ನೀರು ಸದಾ ಜಿನುಗುತ್ತಿದ್ದುದರಿಂದ ಜಾರುಬಂಡೆಯಂಥ ಶಿಖರ ಏರುವುದೆಂದರೆ ಎಣ್ಣೆ ಸವರಿದ ಮಲ್ಲಗಂಬ ಏರಿದ ಅನುಭವವಾಗತೊಡಗಿತು. ಏರುತ್ತ ಏರುತ್ತ ಸಣ್ಣ ಹುಲ್ಲು ಕಡಿಮೆಯಾಗಿ ಬರೀ ತೋಯ್ದ ಬಂಡೆಯನ್ನೇ ಹಿಡಿದು ಏರಬೇಕಾಗಿತ್ತು. ಸದಾ ಮೈಮೆಲೆ ಸುರಿವ ಜೀಬರು ಮಳೆಯನ್ನೇ ಕುಡಿದು ಆಹಾರದ ಶಕ್ತಿ ಪಡೆಯಬೇಕಾಗಿತ್ತು. ರಾತ್ರಿ ತಂಗುದಾಣಗಳಿಲ್ಲ. ಬಂಡೆಗಡರಿ ಗಟ್ಟಿಯಾಗಿ ಹಿಡಿದುಕೊಂಡೇ ರಾತ್ರಿಯಲ್ಲ ನಿಂತಿರಬೇಕಿತ್ತು. ಕಿಂಚಿತ್ ಕೈ ಜಾರಿದರೂ ಪಾತಾಳಕ್ಕೆ ಪತನವಾಗಬೇಕು. ಇದನ್ನೆಲ್ಲ ಹ್ಯಾಗೆ ಸಹಿಸಿಕೊಂಡ? ನಮಗೆ ತಿಳಿಯದು. ತನ್ನ ಗುರಿಯ ಬಗ್ಗೆ, ಸಾಮರ್ಥ್ಯದ ಬಗ್ಗೆ ಒಮ್ಮೆಯಾದರೂ ಅನುಮಾನ ಸುಳಿಯಲಿಲ್ಲವೇ? ನಮಗೆ ತಿಳಿಯದು. ಸುಕ್ರ ನಮಗೆ ಹೇಳಿದ್ದು; ಆತ ಶಿಖರವನ್ನು ಹತ್ತಿದ!

ಮ್ಯಾಲೆ ಸುಮಾರು ನೂರಡಿ ವ್ಯಾಸದ ಬಯಲಿತ್ತು. ಪಶ್ಚಿಮಕ್ಕೊಂದು ಕೋಡುಗಲ್ಲು ಚಾಚಿತ್ತು. ಆರಡಿಯಲ್ಲಿ ಚಿಕ್ಕ ಹೊಂಡವಿತ್ತು. ಮ್ಯಾಲೆ ಹತ್ತಿ ಆಯಾಸದಿಂದ ಏದುಸಿರು ಬಿಡುತ್ತ ಕಲ್ಲು ಹಾಸಿನ ಮ್ಯಾಲೆ ಅಂಗಾತ ಬಿದ್ದುಕೊಂಡ. ಬಟ್ಟೆ ಹರಿದು ಚಿಂದಿಯಾಗಿ ಅಲ್ಲಿಷ್ಟು ಇಲ್ಲಿಷ್ಟು ಮೈಗಂಟಿತ್ತು. ಮೋಡಗಳು ದಟ್ಟವಾಗಿ ಆವರಿಸಿದ್ದುದರಿಂದ ಕೆಳಗಿನ ನೆಲ ಎಷ್ಟು ದೂರವಿದೆಯೆಂದು ತಿಳಿಯುತ್ತಿರಲಿಲ್ಲ. ಒಮ್ಮೊಮ್ಮೆ ಮೋಡಗಳು ನುಗ್ಗಿ ಎರಡಡಿಯಾಚೆ ಏನಿದೆಯೆಂದು ತಿಳಿಯುತ್ತಿರಲಿಲ್ಲ.

ಬಹಳ ಹೊತ್ತಿನ ನಂತರ ತಲೆಯ ಹಿಂಭಾಗದಲ್ಲಿ ಕೊಂಬುಗಲ್ಲಿನ ಮ್ಯಾಲೆ ಭಯಾನಕ ಗಾತ್ರದ ಆ ಗರುಡ ಕೂತದ್ದು ನೋಡಿ ಸಮಾಧಾನವಾಯಿತು. ದಣಿವು ಅಸಹಾಯಕತೆಗಳಿಂದ ಬಸವಳಿದು ಕಂಗಾಲಾಗಿ ಹೆಣದ ಹಾಗೆ ಬಿದ್ದುಕೊಂಡೇ ನಿದ್ದೆಯೋ ಮೂರ್ಛೆಯೋ ಕಣು ಮುಚ್ಚಿದ. ಗರುಡ ಮಾತ್ರ ಈತನನ್ನು ಗಮನಿಸಲೇ ಇಲ್ಲವೆಂಬಂತೆ ನಿರ್ಲಿಪ್ತವಾಗಿ ದಿಗಂತದಲ್ಲಿ ಕಣ್ಣು ನೆಟ್ಟು ಕೂತಿತ್ತು.

ಬೆಳಕು ಕತ್ತಲೆ ಇವೆರಡೇ ಗೊತ್ತಾಗುತ್ತಿದ್ದ ಆ ಲೋಕದಲ್ಲಿ ದಿನ ವಾರ ತಿಂಗಳಿರಲಿ ಸಮಯವೆಂಬುದೂ ತಿಳಿಯುತ್ತಿರಲಿಲ್ಲ. ದಿನದಿನಕ್ಕೆ ಶಕ್ತಿ ಕ್ಷೀಣವಾಗಿ ನೋಟ ಮಸಳಿಸಿತ್ತು. ಸಾಯುವುದು ಖಾತ್ರಿಯಾಗಿ ಆಗಾಗ ಅರಿವಿಗೆ ಬಂದಾಗ ಕ್ಷಣಗಣನೆ ಮಾಡುತ್ತ ಬಿದ್ದುಕೊಂಡ. ನೆನಪುಗಳು ಅಳಿಸಿಹೋದವು. ಕೈಕಾಲು ಮರಗಟ್ಟಿ ಅಲುಗಾಡುತ್ತಿರಲಿಲ್ಲ. ಅವುಗಳಿಗೆ ಛಳಿ ಕೂಡ ಹತ್ತದೆ ನಿಧನಿಧಾನವಾಗಿ ದೇಹ ಸಂವೇದನೆ ಕಳೆದುಕೊಳ್ಳುತ್ತಿರುವ ಅನುಭವವಾಯಿತು. ಕೊನೆಗೊಮ್ಮೆ ಬಾಯಿ ತೆರೆದು ಕತ್ತು ಹೊರಳಿತು.

ಎಚ್ಚರವಾಗಿ ಕಣ್ಣು ತೆರೆದಾಗ ನಿಚ್ಚಳ ಬೆಳಕಿತ್ತು. ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. ಹಗಲೋ ರಾತ್ರಿಯೋ ಅದು ಸರಿಯಾಗಿ ತಿಳಿಯುತ್ತಿರಲಿಲ್ಲ. ಮ್ಯಾಲೆ ಸೂರ್ಯನಾಗಲಿ, ಚಂದ್ರನಾಗಲಿ ಕಾಣಲಿಲ್ಲ. ಕೋಡುಗಲ್ಲಿನ ಮ್ಯಾಲೆ ಹಕ್ಕಿ ಸಹ ಕಾಣಲಿಲ್ಲ. ಬಾಯಾರಿಕೆಯಾಗಿತ್ತು. ಕತ್ತು ಹೊರಳಿಸಿ ಹೊಂಡದ ಕಡೆಗೆ ನೋಡಿದ. ಹೊಂಡದಲ್ಲೊಂದು ಹೆಣ ಬೆನ್ನುಮೇಲಾಗಿ ತೇಲುತ್ತಿರುವುದು ಕಂಡಿತು. ದೇಹದಲ್ಲಿನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಎದ್ದು ಕೂತ. ಆಶ್ಚರ್ಯವೆಂದರೆ ಏಳಲು ಅಷ್ಟೊಂದು ಕಷ್ಟವೆನಿಸಲಿಲ್ಲ. ತೆವಳಿಕೊಂಡೇ ಹೊಂಡದ ಬಳಿಗೆ ಹೋದ. ದಂಡೆಯ ಬಂಡೆಯ ಮೇಲೆ ಕೂತುಕೊಂಡು ಬೊಗಸೆ ಒಡ್ಡಿ ಕೈ ಚಾಚಿದ. ನೀರು ಬೆಚ್ಚಗಿತ್ತು. ಅಂಬಲಿಯಂತೆ ಗಟ್ಟಿಯಾಗಿದ್ದುದರಿಂದ ಸರ್ರನೆ ಕೈ ಸೆಳೆದುಕೊಂಡು ನೋಡಿಕೊಂಡ. ಚಿನ್ನದ ಗಟ್ಟರಸ ಹಳದಿ ಪಾದರಸದಂತೆ ಕೈಗಂಟಿಕೊಂಡಿತ್ತು. ಹ್ಯಾಗೂ ಸಾಯಲಿದ್ದೇನೆ, ಹೀಗೆ ಸಾಯುತ್ತೇನೆಂದು ಒಂದು ಬೊಗಸೆ ಕುಡಿದು ಕತ್ತು ಚೆಲ್ಲಿ ಕೂತುಬಿಟ್ಟ!

ಹಾಗೆ ಎಷ್ಟೋ ಹೊತ್ತು ಕೂತಿದ್ದ ಎಂದು ತಿಳಿಯದು. ಅಷ್ಟರಲ್ಲಿ ರಸದಲ್ಲಿ ತೇಲುತ್ತಿದ್ದ ಹೆಣ ನೋಡುನೋಡುತ್ತಿರುವಂತೆ ಮಡುವಿನಲ್ಲಿ ಮಿಂದೇಳುವಂತೆ ಅಜಾನುಬಾಹು ಆಕೃತಿಯೊಂದು ಮಡುವಿನಲ್ಲಿ ಉಧ್ಭವಿಸಿ ಧುತ್ತೆಂದು ಇವನೆಡೆಗೆ ಬಂದು ನಿಂತುಕೊಂಡಿತು! ಶಿಖರಸೂರ್ಯ ಚಕಿತಗೊಂಡು, ಕಣ್ಣಗಲಿಸಿ ನೋಡುತ್ತ ನಿಂತ. ಆ ದೊಡ್ಡ ಚಿನ್ನದ ರಸದಿಂದಾಗಿ ಆತ ಜೀವಂತ ಚಿನ್ನದ ಮೂರ್ತಿಯ ಹಾಗೆ ಕಂಡ. ಮೊದಲೆರಡು ಕ್ಷಣ ಭೂತವೋ ಪ್ರೇತವೋ ಅಂದುಕೊಂಡ. ಅವನ ನಗೆ ನೋಡಿ ಧೈರ್ಯ ತಗೊಂಡು ಭಯದಲ್ಲಿ ಇವನೂ ಮುಗುಳು ನಕ್ಕ. ಉದ್ದುದ್ದ ಕೂದಲು, ಗಡ್ಡ ಮೀಸೆಯ, ನೀಳ ಮೂಗಿನ ದೊಡ್ಡ ಗಾತ್ರದ ವ್ಯಕ್ತಿಯ ಕಣ್ಣು ಮಾತ್ರ ಉರಿವ ಕೆಂಡದ ಹಾಗೆ ಹೊಳೆಯುತ್ತಿದ್ದವು. ಆಶ್ಚರ್ಯವೆಂದರೆ ಅವನ ಕಿವಿಯಲ್ಲು ದಟ್ಟ ಪೊದೆಗೂದಲಿದ್ದವು! ಟೊಂಕದ ಒದ್ದೆ ಬಟ್ಟೆಯ ಮೇಲೆ ಕೈ ಇಟ್ಟುಕೊಂಡು ಇವನನ್ನೇ ಹರಿತವಾದ ದೃಷ್ಟಿ ಮತ್ತು ನಗೆಯಿಂದ ಇರಿಯುತ್ತ ನಿಂತಿದ್ದ! ಭಯವೋ ಬೆರಗೋ ಆನಂದವೋ – ಶಿಖರಸೂರ್ಯ ಬೆಪ್ಪನಂತೆ ಬಾಯಿ ತೆರೆದು ನಿಂತ! ಮಾತೇ ಹೊರಡದಾಯಿತು.

ತಲೆ ಮತ್ತು ಮೈಮೇಲಿನ ಚಿನ್ನದ ನೀರನ್ನ ಬಸಿದೊಗೆದು ಚಿನ್ನದ ಬಣ್ಣದ ಮೃಣ್ಮಯ ಮೂರ್ತಿ ಮೈವೆತ್ತಿ ಬಂದಂತಿದ್ದ ಆ ವ್ಯಕ್ತಿ. ತುಸು ಹೊತ್ತಾದ ಬಳಿಕ ಅಂಟಿದ್ದ ಚಿನ್ನದ ರಸ ಬಸಿದು ಮೈ ಮುಖದ ತುಂಬ ವಯಸ್ಸಿನ ಅಡ್ಡ ತಿಡ್ಡ ಗೆರೆಗಳೂ ಮೂಡಿದವು. ಚರ್ಮ ಜೋತು ಬಿದ್ದು ನಿಮಿರಿನಿಂತ ಕಿವಿಗೂದಲು ಎತ್ತಿನ ಕೊಂಬಿನಂತೆ ಕಾಣುತ್ತಿದ್ದವು. ಶಿಖರಸೂರ್ಯ ಒಮ್ಮೆಲೆ ಬೆಳಕು ಹೊಳೆದು – “ನಾಗಾರ್ಜುನ ದೇವಾ!” ಎಂದು ಉತ್ಸಾಹ ಮತ್ತು ನಿಶ್ಯಕ್ತಿಯ ವಿಕಾರ ದನಿಯಲ್ಲಿ ಕೂಗಿದ. ಗುರುತು ಹಿಡಿದದ್ದಕ್ಕೆ ಮುಗುಳು ನಕ್ಕು ಚೂಪು ದೃಷ್ಟಿಯಿಂದ ಇವನನ್ನೇ ನೋಡುತ್ತ ನಾಗಾರ್ಜುನ ನೀರಿನಿಂದ ಮೇಲೆ ಬಂದು ಕೋಡುಗಲ್ಲಿನತ್ತ ನಡೆದ. ಶಿಖರಸೂರ್ಯನೂ ಹಿಂದಿನಿಂದ ನಡೆದ. ಹಿಂದಿರುಗಿ ನಿಂತು ನಾಗಾರ್ಜುನ ಕೇಳಿದ:

“ನೀನೂ ಶಿವಪಾದನ ಶಿಷ್ಯನಲ್ಲವೋ?

“ಹೌದು ಸ್ವಾಮಿ”

“ಬಾ ಗುರುವಂದನೆ ಮಾಡೋಣ”

– ಎಂದು ಹೇಳಿ ಕೋಡುಗಲ್ಲಿನಡು ಪದ್ಮಾಸನ ಹಾಕಿಕೊಂಡು ಧ್ಯಾನಸ್ಥನಾಗಿ ಕುಳಿತ. ಇವನೂ ಅವನನ್ನೇ ಅನುಸರಿಸಿದ. ಶಿಖರಸೂರ್ಯನ ಮನಸ್ಸು ಏಕಾಗ್ರಗೊಳ್ಳಲಿಲ್ಲ. ತನ್ನ ಪ್ರಾರ್ಥನೆ ಕೃತಕವಾಗಿರುವುದನ್ನು ಈತ ಗಮನಿಸುತ್ತಿರಬಹುದೇ ಎಂಬ ಸಂದೇಹ ಬಂತು. ಕೊನೆಗೆ ತನ್ನ ಪ್ರತಿಭೆಯನ್ನೆಲ್ಲ ಒಗ್ಗೂಡಿಸಿ ಭಕ್ತಿಯಿಂದ ಪ್ರಾರ್ಥಿಸುವಂತೆ ಅಭಿನಯಿಸುತ್ತ ಕೂತ.

ಸ್ವಲ್ಪ ಹೊತ್ತಾದ ಬಳಿಗೆ ನಾಗಾರ್ಜುನ ಕಣ್ಣು ತೆರೆದ. ಇವನೂ ತೆರೆದ. ಮುದುಕ ಬಹಳ ಖುಷಿಯಾಗಿದ್ದ. ಮಾತಿನ ಆಸೆಯಾಯ್ತು. ಸಂತೋಷಪಡಿಸೋಣವೆಂದು ಮನಸ್ಸು ಮಾಡಿದ. ಆದರೆ ಅಂಥ ಸೂಚನೆಯೂ ಅವನಿಂದಲೇ ಬರಲೆಂದು ಕಾದು ಕೂತ. ನಾಗಾರ್ಜುನ ಹೇಳಿದ:

“ನಿನ್ನನ್ನು ನೋಡಿ ಸಂತೋಷವಾಯಿತಯ್ಯಾ! ನಾನು ನಾಗಾರ್ಜುನ ಹೌದು”.

“ನಾನು ಚಿನ್ನಮುತ್ತ, ಶಿವಾಪುರದಲ್ಲಿ ಜಯಸೂರ್ಯ, ಈಗ ಶಿಖರಸೂರ್ಯ. ನಾನೂ ಶಿವಪಾದನ ಶಿಷ್ಯನೇ…”

“ನಿನ್ನ ಎಲ್ಲಾ ವಿಷಯ ನನಗೆ ಗೊತ್ತು. ಬಂದ ಉದ್ದೇಶ ಹೇಳು”.

“ಉದ್ದೇಶ ಇನ್ನೇನಿದ್ದಿತು ಗುರುವೆ? ಚಿನ್ನ, ಸೈನ್ಯ ಮಾಡುವ ವಿದ್ಯೆಗಾಗಿ ಬಂದೆ.

ಸ್ವಲ್ಪ ಹೊತ್ತು ನಾಗಾರ್ಜುನ ಮಾತಾಡಲಿಲ್ಲ. ಧ್ಯಾನ ಮಾಡುವಂತೆ ಕಣ್ಣು ಮುಚ್ಚಿ ಕೂತು, ಆಮೇಲೆ ಹೇಳಿದ:

“ನಿನ್ನನ್ನು ಕಂಡು ಮೆಚ್ಚುಗೆಯಂತೂ ಆಯಿತು. ಯಾಕಂತೀಯೊ? ಈ ಶಿಖರ ಏರಿದ ಎರಡನೆಯ ಸಾಧಕ ನೀನು! ನೀನು ಬಯಸಿದ ವಿದ್ಯೆ ಪಡೆವ ಎಲ್ಲ ಅರ್ಹತೆಗಳೂ ನಿನಗಿವೆ. ನಿನ್ನ ಛಲ, ಧೈರ್ಯ, ಆತ್ಮವಿಶ್ವಾಸಗಳನ್ನು ಹೊಗಳಲೇ ಬೇಕು. ಆದರೆ ಒಂದೆರಡು ಎಚ್ಚರಿಕೆಯ ಮಾತಿವೆ; ಕೇಳು: ನನಗೆ ಈ ವಿದ್ಯೆ ಬಂದದ್ದು ಶಿವಪಾದನ ಗವಿಯಿಂದಲೇ! ವಿದ್ಯೆಯ ಜೊತೆಗೆ ಶಿವಪಾದ ಶಾಪವನ್ನೂ ಕೊಟ್ಟ. ನೀನೂ ಅಷ್ಟೆ: ವಿದ್ಯೆಯ ಜೊತೆಗೆ ಆ ಶಾಪಕ್ಕೂ ವಾರಸುದಾರನಾಗಬೇಕು, ಆದಿತೋ?”

“ಸಿದ್ಧನಿದ್ದೇನೆ, ಅಪ್ಪಣೆಯಾಗಲಿ ಸ್ವಾಮಿ”

“ಭೇಷ್! ಶಾಪವೇನೆಂದು ಹೇಳುವ ಮುಂಚೆಯೇ ಒಪ್ಪಿಕೊಂಡೆಯಲ್ಲ! ನನ್ನ ಕೆಲಸ ಸುಲಭವಾಯಿತು. ಈಗೇನು ಮೊದಲು ಶಾಪ ಹೇಳಲ? ನೇರವಾಗಿ ವಿದ್ಯೆಯನ್ನೇ ಭೋದಿಸಲ?”

“ವಿದ್ಯೆಯನ್ನೇ ಹೇಳಿಕೊಡಿ ಸ್ವಾಮಿ”

“ಈ ವ್ಯವಹಾರದಲ್ಲಿ ಅವಸರ ಮಾಡಬೇಡಯ್ಯಾ. ಮನೆವಾಳ್ತೆಯಲ್ಲಾದರೆ ಕೊಟ್ಟವ ಕೋಡಂಗಿ, ಈಸಿಕೊಂಡವ ಈರಭದ್ರ. ಇಲ್ಲಿ ಕೊಟ್ಟವ ಈರಭದ್ರ, ಕೊಂಬವ ಕೋಡಂಗಿ! ಶಿವಪಾದನಿಂದ ವೈದ್ಯ ಕಲಿಯುತ್ತ ನೀನು ಹ್ಯಾಗೆ ವಿಷವಿದ್ಯೆ ಮತ್ತು ವಜ್ರದೇಹಿಯಾಗುವುದನ್ನ ಕದ್ದು ಕಲಿತೆಯೋ ನಾನು ಹಾಗೇ ಬಹಿರಂಗದಲ್ಲಿ ವೈದ್ಯ ವಿದಾರ್ಥಿಯಾಗಿ ಅಲ್ಲಿದ್ದ ಗ್ರಂಥಗಳನ್ನು ಕದ್ದು ಓದಿ ಚಿನ್ನ ಸೈನ್ಯದ ವಿದ್ಯೆ ಕಲಿತೆ. ನನ್ನ ಕಳ್ಳತನದ ವಿಷಯ ಗೊತ್ತಿದ್ದರೂ ಶಿವಪಾದ ನನಗೆ ತಾಕೀತು ಮಾಡಲಿಲ್ಲ. ಅವರವರ ಕರ್ಮಕ್ಕೆ ಯಾರೇನೂ ಮಾಡಲಾಗದೆಂದು ಸುಮ್ಮನಾದ. ಹಾಗಂತ ವಿದ್ಯೆಯನು ನಿರಾಕರಿಸಲೂ ಇಲ್ಲ. ಅದೇ ಅಮ್ಮನ ಗವಿಯ ವಿಶೇಷ.

ನಾನು ಕದ್ದು ಕಲಿತ ವಿದ್ಯೆಯನ್ನ ಹೆಮ್ಮೆಯಿಂದ ಎಲ್ಲೋ ಪ್ರದರ್ಶಿಸಿದೆ ನೋಡು ಶಿವಪಾದ ಮರದ ಬಳಿ ಬಾ ಅಂತ ಹೇಳಿಕಳಿಸಿದ, ಹೋದೆ.

“ನೀನು ಕೇಳಿದ್ದರೆ ಇದಕ್ಕಿಂತ ಸುಲಭವಾದ ವಿದ್ಯೆಯನ್ನು ಕೋಡುತ್ತಿದ್ದೆನಲ್ಲಪ್ಪ. ಧಾನ್ಯದಿಂದ ಚಿನ್ನ ಮಾಡಬೇಕಲ್ಲವೇ? ಬೇಡ, ನೀನು ಕೈಯಾರೆ ಮುಟ್ಟಿದ್ದೆಲ್ಲ ಚಿನ್ನದ ನೀರಾಗುತ್ತದೆ ಹೋಗು?”ಅಂದ.

ನಾನು ನಂಬಲಿಲ್ಲ – “ಇದು ನಿಜವೆ ಗುರುದೇವಾ” ಅಂದೆ.

“ಬೇಕಾದರೆ ಈಗಲೇ ಪರೀಕ್ಷೆ ಮಾಡಿ ನೋಡು. ಆದರೆ ಈ ಮರವನ್ನ ಮತ್ತು ನನ್ನನ್ನ ಮುಟ್ಟಬೇಡ” ಎಂದು ನಕ್ಕ

“ನಾನು ಓಡಿಹೋಗಿ ಒಂದು ಬಂಡೆಯನ್ನು ಮುಟ್ಟಿದ್ದೇ ತಡ ಕಣ್ಣೆದುರಲ್ಲೇ ಕರಗಿ ಚಿನ್ನದ ನೀರಾಗಿ ಮಡುಗಟ್ಟಿತಯ್ಯಾ! ಅದನ್ನು ಕಂಡುದೇ ಬಾಯಾರಿಕೆಯಾಗಿ ಕುಡಿದೆ. ಕುಡಿದಷ್ಟೂ ದಾಹ ಹೆಚ್ಚಾಯಿತು. ಇನ್ನಷ್ಟು ವಸ್ತುಗಳನ್ನ ಮುಟ್ಟಿದೆ. ಇನ್ನಷ್ಟು ಚಿನ್ನದ ನೀರು ಕುಡಿದು ಕುಡಿದು ಹೊಟ್ಟೆಯುಬ್ಬಿ ಕಾರಿಕೊಂಡೆ. ನೋಡಿದರೆ ಬಳಿಯಲ್ಲಿ ಶಿವಪಾದನೇ ಇಲ್ಲ! ಯಾವಾಗ ಮುಟ್ಟಿದ್ದೆಲ್ಲಾ ಚಿನ್ನದ ನೀರಾಗಿ, ಅನ್ನವೆಂದು ಮುಟ್ಟಿದ್ದೂ ಚಿನ್ನವಾಯಿತೋ ಆವಾಗ ಮಾತ್ರ ಓಡಿಹೋಗಿ ಗುರುವಿಗೆ ಕೈಮುಗಿದು “ಕಾಪಾಡು ನನ್ನಪ್ಪ” ಅಂದೆ. “ಕದ್ದು ಕಲಿತ ವಿದ್ಯೆಯನ್ನ ಅರ್ಹನಿಗೆ ದಾನ ಮಾಡುವ ತನಕ ನಿನಗೆ ಮುಕ್ತಿಯಿಲ್ಲ” ಅಂದ. “ಈಗ ಹೇಳು ವಿದ್ಯೆ ಹೇಳಿಕೋಡಲಾ?”

“ಈ ವಿದ್ಯೆಗೆ ಶಾಪವೇನೆಂದು ಹೇಳಲಿಲ್ಲ.”

“ಕೇಳು: ಇದು ಮಂತ್ರ ಹೇಳಿ ಧ್ಯಾನದಿಂದ ಚಿನ್ನ ಮಾಡುವ, ಮೇವಿನಿಂದ ಸೈನಿಕರನ್ನು ಮಾಡುವ ವಿದ್ಯೆ…”

ಕೇಳಿ ಶಿಖರಸೂರ್ಯ ಅಂಗಾಲಿನಿಂದ ನೆತ್ತಿಯತನಕ ಪುಳಕಗೊಂಡ

“ಆದರೆ ನೆನಪಿಡು: ಧಾನ್ಯವನ್ನ ಚಿನ್ನ ಮಾಡಿದಾಗಲೇ, ಮೇವಿನಿಂದ ಸೈನ್ಯ ಮಾಡಿದಾಗಲೇ ನಿನ್ನ ಮನುಷ್ಯತ್ವ ಹೋಯಿತು! ಅವನ್ನು ಮರಳಿ ಪಡೆಯಬೇಕೆಂದರೆ…”

“ಮೊದಲು ಮಂತ್ರ ಹೇಳಿಕೊಡಿ ಸ್ವಾಮಿ”

“ಯಾಕಯ್ಯ ಅಷ್ಟು ಅವಸರ ಮಾಡುತ್ತಿ? ಶಾಪದಿಂದ ಮುಕ್ತಿ ಪಡೆಯುತ್ತಿರುವ ನನಗೇ ಅವಸರವಿಲ್ಲ. ನಿನಗೆ ಅವಸರವೆ?”

“ಆಯ್ತು ಅದೇನಿದೆಯೋ ಬೇಗ ಹೇಳಿ ಸ್ವಾಮಿ.”

“ನಾ ಕೊಡುವ ಮಂತ್ರಕ್ಕೆ ಯಾರಾದರೂ ತಿರುಮಂತ್ರ ಹಾಕಿದರೆ – ಅದೇ ನಿನ್ನ ವಿದ್ಯೆಯ ಕೊನೆ! ಆ ಕ್ಷಣವೇ ನಿನ್ನೆಲ್ಲ ಸೃಷ್ಟಿ ಮೂಲರೂಪಕ್ಕೆ ತಿರುಗುತ್ತದೆ, ಹುಷಾರ!

ಆಮೇಲೆ ಗರುಡನ ಬೆಟ್ಟ ಹತ್ತಿಬಂದ ಯಾವನಿಗಾದರೂ ಆ ವಿದ್ಯೆಯನ್ನು ಬೋಧಿಸಿದಾಗಲೇ ನಿನಗೆ ಮುಕ್ತಿ. ಅಲ್ಲಿಯವರೆಗೆ ಹದ್ದಾಗಿ ಬೆಟ್ಟ ಕಾಯುವುದೇ ನಿನ್ನ ಗತಿ! ಇದೇ ಶಾಪ. ಗೊತ್ತಾಯಿತಲ್ಲ?”

ಶಿಖರಸೂರ್ಯ ಉತ್ಸಾಹದಿಂದ ಕತ್ತು ಹಾಕಿ ಗೊತ್ತಾಯಿತೆಂದ. ನಾಗಾರ್ಜುನ ತನ್ನೊರಡೂ ಹಸ್ತಗಳಿಂದ ಅಮ್ಮನ ಗವಿಯ ಗೌಪ್ಯ ಸಂಕೇತಗಳನ್ನು ರಚಿಸಿ ಶಿಖರಸೂರ್ಯನನ್ನ ಹತ್ತಿರ ಕೂರಿಸಿಕೊಂಡು ಬಲಗಿವಿಯಲ್ಲಿ ಮಂತ್ರ ಬೋಧಿಸಿ, –

“ಇದು ಧಾನ್ಯದಿಂದ ಚಿನ್ನ ಮಾಡುವ ಮಂತ್ರ, ಇದನ್ನು ಹೇಳಿ ಧಾನ್ಯದಲ್ಲಿ ಬಲಗೈ ಆಡಿಸು. ಅದು ಚಿನ್ನವಾಗುತ್ತದೆ. ಈ ಕಡೆ ಬಾ.”

ಎಂದು ಎಡಗಿವಿಯಲ್ಲಿ ಇನ್ನೊಂದು ಮಂತ್ರ ಹೇಳಿ, –

“ಈ ಮಂತ್ರ ಹೇಳಿ ಮೇವಿಗೆ ಎಡಗೈ ತಾಕಿಸಿದರೆ ಮೇವಿನಲ್ಲಿ ಎಷ್ಟು ದಂಟುಗಳೋ ಅಷ್ಟು ಜನ ಸೈನಿಕರು ಬರುತ್ತಾರೆ. ಇಷ್ಟಾದ ಮೇಲೆ ಇನ್ನೊಂದು ಮಾತು ಹೇಳಬೇಕೆನಿಸುತ್ತದೆ. ಇದು ಮಹಾತ್ವಾಕಾಂಕ್ಷೆ ಇದ್ದ ಸಾಮ್ರಾಟರ ಮಂತ್ರ. ಮಂತ್ರದ ಚಿನ್ನ ಎಂದಿದ್ದರೂ ಕೃತಕ ಚಿನ್ನವೇ. ನಕಲಿ ಚಿನ್ನದಿಂದ ಸಾಮ್ರಾಜ್ಯ ಗಳಿಸಬಹುದು. ಆದರೆ ಉಳಿಸಲಾಗದು! ಸಾಮ್ರಾಜ್ಯ ಉಳಿಯಬೇಕಾದರೆ ಅಸಲಿ ಚಿನ್ನವೇ ಬೇಕು. ಅದಕ್ಕಾಗಿ ಒಂದು ನಿಧಿ ತೋರಿಸುತ್ತೇನೆ.”

“ಬೇಗ ಹೇಳು ಗುರುವೇ.”

“ಮೂರು ವರ್ಷ ಆ ಗವಿಗೆ ಮಣ್ಣು ಹೊತ್ತೆಯಲ್ಲ, ಗವಿಯಡಿಯ ಮಡುವಿನಲ್ಲಿ ಚಿನ್ನ ಬೀಳುತ್ತಿದ್ದುದನ್ನು ನೋಡಲಿಲ್ಲವೆ?”

“ಹೌದು ಬೀಳುತ್ತಿತ್ತು!”

“ಮತ್ತೆ ಬುಡದಿಂದ ತುದಿಯವರೆಗೆ ಗವಿಯ ಅಖಂಡ ಬಂಡೆ ಚಿನ್ನದ್ದೆಂದು ಹೊಳೆಯಲಿಲ್ಲವೆ?”

ತನ್ನ ಪ್ರತಿಭೆಯನ್ನು ಅಣಕಿಸಿದ ನಾಗಾರ್ಜುನನ ಮಾತು ಕೇಳಿ ಶಿಖರಸೂರ್ಯನಿಗೆ ವಿದ್ಯುತ್ ಪ್ರವಾಹದಲ್ಲಿ ಕೊಚ್ಚಿ ಹೋದಂತೆನಿಸಿತು. ಕಣ್ಣಲ್ಲಿ ಪ್ರಕರವಾದ ಬೆಳಕು ಹೊಳೆಯಿತು. ಏನನ್ನೋ ಕೇಳಲು ಬಾಯಿ ತೆರೆಯುವುದರೊಳಗೆ ಮತ್ತೆ ನಾಗಾರ್ಜುನನೇ ಗುಡುಗಿದ:

“ನನಗೆ ಶಾಪವಿದ್ದುದರಿಂದ ಸೋತೆ. ನೀನು ಹೋಗು ಅದರ ಒಡೆಯನಾದರೆ ನೀನೆ ಇಂದ್ರ! ನೀನೇ ಚಂದ್ರ! ಹತ್ತು ಸಾಮ್ರಾಜ್ಯಗಳನ್ನು ಅಂಗೈಯಲ್ಲಿಟ್ಟುಕೊಂಡು ಆಳಬಹುದು.”

“ಆದರೆ….”

“ಇಲ್ಲಿ ನೋಡಿದ್ದನ್ನ ನೋಡಿದೆನೆನ್ನಬೇಡ. ಇಲ್ಲಿ ಕೇಳಿದ್ದನ್ನ ಕೇಳಿದೆನೆನ್ನಬೇಡ. ನೋಡಿದೆ ಕೇಳಿದೆನೆಂದರೆ ಅದೇ ನಿನ್ನ ಕೇಡು!”

ಎಂದು ಹೇಳಿ ಪ್ರತಿಕ್ರಿಯೆಗೆ ಕಾಯದೆ ಗರುಡನಾಗಿ ಪರಿವರ್ತನೆ ಹೊಂದಿ ಹಾರುತ್ತ ಆಗಸಕ್ಕೇರಿ ನೀಲಿಮದಲ್ಲಿ ಕರಗಿ ಹೋದ.