ಶಿಖರಸೂರ್ಯ ಇಡೀ ಎರಡು ದಿನ ಯಾರೊಂದಿಗೂ ಮಾತಾಡಲಿಲ್ಲ. ಚಂಡೀದಾಸ ಹೋಗಿದ್ದ. ಹೋಗುವ ಮುನ್ನ ಶಿಖರಸೂರ್ಯನೊಂದಿಗಿನ ಭೇಟಿಯಲ್ಲಿ ಏನೇನು ನಡೆಯಿತೆಂದು ರವಿ ಮತ್ತು ಗೌರಿಗೆ ವಿವರವಾಗಿ ಹೇಳಿ ಹೋಗಿದ್ದ. ಅವರಿಬ್ಬರೂ ಸಂದರ್ಭವನ್ನು ಅಳತೆ ಮಾಡುತ್ತಿದ್ದರು. ರವಿಕೀರ್ತಿ ವಾಸಂತಿಯ ಬಗ್ಗೆ ತಂದೆಗೆ ಹೇಳಲು ಸದವಕಾಶಕ್ಕಾಗಿ ಕಾಯುತ್ತಿದ್ದ.

ರವಿಕೀರ್ತಿಯೂ ತನ್ನ ಪಾಲಿನ ಯುದ್ಧವನ್ನು ಹುರುಪಿನಿಂದ ಮಾಡಿ ಹೆಸರು ಗಳಿಸಿದ್ದ. ಯಾವುದೋ ಒಂದು ಸಂತೋಷದ ಗಳಿಗೆಯಲ್ಲಿ ಸಹಜವಾಗಿಯೇ ತನ್ನ ಬಗ್ಗೆ ಶಿಖರಸೂರ್ಯನಲ್ಲಿ ಅಭಿಮಾನ ಮೂಡಿ ತನ್ನಾಸೆಯನ್ನ ಈಡೇರಿಸುವನೆಂದು ರವಿ ನಂಬಿದ್ದ. ತನ್ನ ಪರವಾಗಿ ತಂದೆಗೆ ಹೇಳಲು ಚಿಕ್ಕಮ್ಮಣ್ಣಿ ಅಥವಾ ತಾಯಿಯ ಸಹಾಯ ಕೇಳಬಹುದಿತ್ತು. ಇದ್ದಾಗ ಶಿಖರಸೂರ್ಯನಿಗೆ ಹೆದರುತ್ತಿದ್ದಳು. ಗೌರಿಯ ಬಗ್ಗೆ ರವಿಗಿದ್ದದ್ದು ಸ್ನಿಗ್ಧವಾತ್ಸಲ್ಯ. ತಂದೆ ಬಿರುಸಾಗಿ ಮಾತಾಡಿದರೇ ತಂಗಿಯ ಮನಸ್ಸು ನೋಯುತ್ತದೆಂದು ಅವಳ ಬಗ್ಗೆಯೂ ಹಳಹಳಿಸಿದ ಹ್ಯಾಗೂ ತಂದೆಗೆ ವಿಷಯ ಗೊತ್ತಾಗಿದೆ ಅವನೇ ಕರೆಸಬಹುದೆದು ಕಾದ.

ಇತ್ತ ಚಂಡೀದಾಸ ಬಂದು ಹೋಗಾಗಿನಿಂದ ಶಿಖರಸೂರ್ಯ ವ್ಯಗ್ರನಾಗಿದ್ದ. ಚಂಡಿದಾಸ ಅವನಿಗೆ ಮಾಗಲಾಗದ ಗಾಯ ಮಾಡಿದ್ದ. ‘ಚಿನ್ನಮುತ್ತಾ’ ಎಂದು ಕರೆದನಾಗಿ ಅವನಿಗೂ ಇಡೀ ಶಿವಾಪುರಕ್ಕೂ ತಾನ್ಯಾರೆಂದು ಗೊತ್ತಾಗಿದೆ ಎಂದಾಯಿತು. ಸುಮಾರು ವರ್ಷಗಳಿಂದ ಜೋಪಾನವಾಗಿ ಬಚ್ಚಿಟ್ಟ ಸಂಗತಿ ಈ ಪರಿ ಅಗ್ಗವಾಗಿ ಬಹಿರಂಗವಾದೀತೆಂದು ಅವನು ಲೆಕ್ಕ ಹಾಕಿರಲಿಲ್ಲ. ಶಿವಪಾದನಿಗೆ ತಾನು ಹೆಸರು ಬದಲು ಮಾಡಿದ್ದು ಕೂಡ ಗೊತ್ತಿತ್ತು ಎಂದ ಹಾಗಾಯಿತು. ಆದರೂ ಆತ ತೋರಿಸಿಕೊಳ್ಳದೆ ತನ್ನನ್ನು ಗಮನಿಸುತ್ತಿದ್ದ ಎಂದಾಯಿತು.

ಎರಡನೇ ಸಂಗತಿ ಎಂದರೆ ರವಿ ಕಂಚಿಯಲ್ಲಿ ವಿಶ್ವರೂಪಾಚಾರ್ಯನ ಹುಡುಗಿಯನ್ನು ಪ್ರೀತಿಸಿದ್ದು, ‘ಒಬ್ಬನ ಜೀವನ ನಿರ್ಣಾಯಕ ಹಂತಕ್ಕೆ ಬಂದಾಗ ಪ್ರೌಢವಾಗಿ ವಿವೇಕದಿಂದ ವರ್ತಿಸಬೇಕೇ ಶಿವಾಯಿ ಹುಡುಗಾಟವಾಡಬಾರದು. ವಿದ್ಯಾರ್ಜನೆಗಾಗಿ ಕಂಚಿಗೆ ಕಳಿಸಿದರೆ ವಿದ್ಯೆ ಗಳಿಸಬೇಕೋ? ಪ್ರೀತಿ ಗಳಿಸಬೇಕೋ? ಇಂಥ ಮೂರ್ಖತನಕ್ಕೆ ಏನಾದರೂ ಅರ್ಥವಿದೆಯೇ?’ ಆದರೆ ಅಸಮಾಧಾನವನ್ನು ತೋರಿಸಿಕೊಳ್ಳಲೇ ಇಲ್ಲ.

ಒಂದು ದಿನ ರವಿ ಮಧ್ಯಾಃನ ಶಿಖರಸೂರ್ಯನಲ್ಲಿಗೆ ಬಂದು ವಾಸಂತಿಯ ವಿಷಯವನ್ನೆತ್ತಿ ವಿಶ್ವರೂಪಾಚಾರ್ಯರು, ಅವರಿಗಿದ್ದ ಪ್ರಭಾವವನ್ನು ಹೇಳಿ ವಾಸಂತಿಯ ಗುಣಶೀಲಗಳನ್ನು ಹೊಗಳಿ ತಾನು ಅವಳನ್ನು ಮದುವೆಯಾಗುವುದಾಗಿ ಹೇಳಿದ. ಮಗುವಾದ ಸಂಗತಿಯನ್ನು ಮಾತ್ರ ಹೇಳಲಿಲ್ಲ. ಮನಸ್ಸು ಮಾಡಿದರೆ ರವಿ ಕೂಡ ತನ್ನಷ್ಟೇ ಕಠಿಣವಾದ ನಿಲುವು ತಳೆಯಬಲ್ಲನೆಂದು ಗೊತ್ತಿದ್ದುದರಿಂದ ಶಿಖರಸೂರ್ಯ ಯಾವುದೇ ವಿಧದಲ್ಲಿ ಅವನ ಮನಸ್ಸು ವ್ಯಗ್ತವಾಗದಂತೆ ಜಾಣತನದಿಂದ ಸನ್ನಿವೇಶವನ್ನು ನಿಭಾಯಿಸಬೇಕೆಂದು ತೀರ್ಮಾನಿಸಿದ. ಕೋಪವನ್ನು ನಿಯಂತ್ರಿಸಿಕೊಂಡು ಹಿರಿತನದ ಹುಸಿಗೋಪವನ್ನು ಅಭಿನಯಿಸುತ್ತ,

“ಅಲ್ಲಯ್ಯಾ ಯುವರಾಜ, ಹೇಳೋರು ಕೇಳೋರು ನಿನಗ್ಯಾರೂ ಇಲ್ಲವಾ? ನಿನ್ನ ಮಿತ್ರ ಕಂಚಿಯ ಹಾಲಿ ಚಕ್ರವರ್ತಿ ಶ್ವೇತಕೇತು ಪರಾಕ್ರಮಶಾಲಿ, ನಿನ್ನ ಖಾಸಾಸ್ನೇಹಿತ. ಇಂತಿರುವಲ್ಲಿ ಇದನ್ನೆಲ್ಲ ಬಳಸಿಕೊಂಡು ನೀನೂ ಚಕ್ರವರ್ತಿಯಾಗುವುದು ಜಾಣತನವೋ? ಪ್ರೇಮ ಪ್ರೀಓತಿ ಅಂತ ಶಿಲ್ಪಿಯ ಶಾಲೆಯಲ್ಲಿ ಉಳಿ ಚಾಣ ಕಾಸಲು ತಿದಿ ಊದುವುದು ಜಾಣತನವೋ?”

– ಎಂದು ಹೇಳಿ ಕಪಟನಗೆಯಿಂದ ಮಗನ ಮುಖವನ್ನೇ ಅಧ್ಯಯನ ಮಾಡಿ, ಈ ಸಂಬಂಧದಲ್ಲಿ ತನಗೂ ಆಸಕ್ತಿಯಿದೆ ಎಂದು ತೋರಿಸಿಕೊಳ್ಳುವಂತೆ ವಾಸಂತಿಯ ಬಗ್ಗೆ, ಅವಳ ತಂದೆಯ ಬಗ್ಗೆ ಅನೇಕ ನಿರೀಕ್ಷಿತ, ಆದರೆ ರವಿಗೆ ಸಂತೋಷವಾಗುವಂಥ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡ ಮತ್ತು ಈ ಉತ್ತರಗಳಿಂದ ಸಂತುಷ್ಟನಾದಂತೆಯೂ ಅಭಿನಯಿಸಿದ. ಆಮೇಲೆ ತಂತಾನೇ ಗೊಣಗಿಕೊಂಡಂತೆ, ಆದರೆ ಮಗನಿಗೂ ಕೇಳಿಸುವಂತೆ, –

“ಆಯಿತಯ್ಯರಾಜನಿಗೆ ಒಬ್ಬಳೇ ಹೆಂಡತಿ ಅಂತಿಲ್ಲವಲ್ಲ. ಮೊದಲು ಹಿರಿಯರ ಮಾತಿಗೆ ಮನ್ನಣೆ ಕೊಟ್ಟು ಕಂಚೀ ರಾಜಕುಮಾರಿಯನ್ನು ಮದುವೆಯಾಗು. ಆಮೇಲೆ ಬೇಕಾದರೆ ಪ್ರೇಮವೋ, ರಾಗೋದ್ರೇಕವೋ ಇಲ್ಲಾ ನಿನ್ನ ಹಟಮಾರಿತನವೋ ನಿನಗಿಷ್ಟ ಬಂದಂತೆ ಅವಳನ್ನೂ ಕಟ್ಟಿಕೋ.”

– ಎಂದು ಹೇಳಿದ. ತಕ್ಷಣ ರವಿ “ಅದಾಗದಪ್ಪ”. ಎಂದು ಸಿಡಿದು ಕೂಡಲೇ ಮಾತು ಬಿರುಸಾಯಿತೆಂದು ಮೆತ್ತಗಿನ ದನಿಯಲ್ಲಿ-

“ಮಾತು ಕೊಟ್ಟಿದ್ದೇನೆ ನನಗೆ ವಾಸಂತಿ ಬೇಕು, ವಾಸಂತಿ ಮಾತ್ರ ಬೇಕು. ಇನ್ನೊಬ್ಬರಿಗೆ ನನ್ನ ಪ್ರೀತಿಯನ್ನು ಹಂಚಲಾರೆ. ದಯಮಾಡಿ ನನ್ನ ಇದೊಂದಾಸೆಗೆ ನೀನು ಒಪ್ಪಿಗೆ ಕೊಡಪ್ಪ. ಉಳಿದಂತೆ ನಿನ್ನ ಯಾವ ಆಸೆಗೂ ನಾನು ಅಡಚಣೆ ಮಾಡುವುದಿಲ್ಲ.”

– ಎಂದು ಕೈ ಮುಗಿದ. ಶಿಖರಸೂರ್ಯ ಉಕ್ಕಿಬಂದ ಕೋಪವನ್ನು ನಿಯಂತ್ರಿಸಿಕೊಂಡು ತಕ್ಷಣ ಮುಖದಲ್ಲಿ ಮುಗುಳು ನಗೆಯನ್ನು ಮೂಡಿಸಿಕೊಂಡು,

“ಆಯಿತಯ್ಯ, ಯುವರಾಜನ ಮಾತನ್ನು ಮನ್ನಿಸದಿದ್ದರಾಗುತ್ತೇನಯ್ಯಾ?”

ಎನ್ನುತ್ತ ಮಗನ ಭುಜದ ಮ್ಯಾಲೊಂದು ಮೆಚ್ಚುಗೆ ಏಟು ಕೊಟ್ಟು “ಸಂತೋಷವಾಯಿತೇನಯ್ಯಾ ಯುವರಾಜಾ?” ಅಂದ. ರವಿಯ ಕಣ್ಣು ಫಳ್ಳನೆ ಹೊಳೆದು ಮುಖ ಕೆಂಪೇರಿ, ಅಡರಿದ ಸಂತೋಷವನ್ನು ತಡೆಹಿಡಿಯಲಾರದೆ ತಂದೆಯ ಕಾಲುಮುಟ್ಟಿ ನಮಸ್ಕಾರ ಮಾಡಿದ. ಎದ್ದು ತಂದೆಯ ಮುಖ ನೋಡಿ ಹೊರಗೋಡಿದ.

ಈವರೆಗೆ ತನ್ನ ಕಣ್ಣರಿಕೆಯ ಜಗತ್ತು ತನ್ನ ನಿಯಂತ್ರಣದಲ್ಲಿದ್ದ ಬಗ್ಗೆ ಆತ್ಮ ವಿಶ್ವಾಸದಿಂದ ಇದ್ದ ಶಿಖರಸೂರ್ಯ ಈಗ ಎಲ್ಲವೂ ತನ್ನ ಕೈಮೀರಿ ಹೋಗುತ್ತಿದೆ ಎನ್ನಿಸಿ ಹತಾಶೆ ಕೋಪಗಳಿಂದ ಎರಡೂ ಮುಷ್ಟಿಗಳಿಂದ ಗೋಡೆಗೆ ಗುದ್ದಿ ಕಿಡಿಕಿಗೆ ಬೆನ್ನಾಣಿಸಿ ನಿಂತ. ಕಿಡಕಿಯಾಚೆ ನಿಚ್ಚಳವಾಗಿ ಹೊಳೆಯುವ ಇಳಿಹೊತ್ತಿನ ಬಿಸಿಲು ಹಿನ್ನೆಲೆಗಿತ್ತು. ಇವನ ನಿಮಿರಿದ ಕಿವಿಗೂದಲು ಉರಿಯುವ ಜ್ವಾಲೆಯಂತೆ ಕಂಡವು.

ಮಾರನೇ ದಿನ ಬೆಳಿಗ್ಗೆಯೇ ಶಿಖರಸೂರ್ಯ ನಾಲ್ಕು ಜನ ಮೇವಿನ ಸೈನಿಕರನ್ನ ಕರೆದು

“ಬೊಂತೆಯನ ಜೊತೆ ಕಂಚಿಗೆ ಹೋಗಿ, ಅವನು ತೋರಿಸಿದ ಮನೆಯಲ್ಲಿಯ ಎಲ್ಲರನ್ನು ಮುಗಿಸಬೇಕು. ಅದಾದ ಮೇಲೆ ಬೊಂತೆಯನನ್ನೂ ಮುಗಿಸಿ ಬರಬೇಕು. ಬೊಂತೆಯ ತಪ್ಪಿಸಿಕೊಳ್ಳದ ಹಾಗೆ ಹುಷಾರಿನಿಂದಿರಬೇಕು. ತಿಳಿಯಿತೋ?”

ಅವರು ತಿಳಿಯಿತೆಂದಾಗ ಬೊಂತೆಯನನ್ನ ಕರೆಯಿಸಿದ.

ಬೊಂತೆಯ ಬಂದು ಅಂಡೆತ್ತಿ ಪ್ರಣಾಮಗಳನ್ನು ಆಚರಿಸಿ ತಲೆ ಕೆಳಗೆ ಹಾಕಿ ನಿಂತ.

“ಬೊಂತೆಯ ಕಂಚಿಯಲ್ಲಿ ವಾಸಂತಿ ಅಂತ ಯುವರಾಜನ ಗೆಳತಿ ಇದ್ದಾಳಂತಲ್ಲ ಗೊತ್ತ?”

ಅಂದ, ಬೊಂತೆಯ ಗೊತ್ತು ಎಂಬಂತೆ ಕತ್ತು ಹಾಕಿದ. “ಇಲ್ಲೆ ಬಾ” ಎಂದು ಅವನನ್ನೂ ಮೇವಿನ ಸೈನಿಕರನ್ನು ಕರೆದು.

“ಇಲ್ಲಿ ನಿಂತಿದ್ದಾರಲ್ಲ, ಇವರಿಗೆ ಆ ಹುಡುಗಿಯ ಮನೆ ತೋರಿಸಿ ಬರಬೇಕು ಯಾರೆದುರಿಗೂ ಈ ವಿಷಯ ಬಿಡಕೂಡದು. ತಿಳಿಯಿತೋ?”

ಬೊಂತೆಯ ಗಾಬರಿಯಿಂದ ಕಣ್ಣಗಲಿಸಿ ಒಡೆಯನನ್ನೇ ನೋಡಿ ಆಗಲೆಂದು ಕತ್ತು ಹಾಕಿದ.

ಬೊಂತೆಯ ಬೇರೆಲ್ಲೂ ಹೋಗಲು ಅವಕಾಶ ಕೊಡದೆ ಹೇಳಿದ:

“ಎಲ್ಲರೂ ಈಗಲೇ ಹೊರಡತಕ್ಕದ್ದು!”