ಗೌರಿ ಮನೆಯಲ್ಲಿ ಹೇಳದೆ ಕೇಳದೆ ಯಾತ್ರಿಕರ ಜೊತೆ ಶಿವಾಪುರಕ್ಕೆ ಹೋದಳೆಂದು ಕೇಳಿ ಮಹಾರಾಜ ಆಘಾತದಿಂದ ಸ್ತಬ್ಧನಾದ! ಅಳುತ್ತಿದ್ದ ಚಿಕ್ಕಮ್ಮಣ್ಣಿಯನ್ನಾಗಲಿ, ಮಡದಿಯನ್ನಾಗಲಿ ಸಮಾಧಾನ ಮಾಡಲಿಲ್ಲ. ಚಿಂತೆ ಮಾಡುತ್ತಿದ್ದ ಮಗನ ಕಡೆಗೆ ನೀಡಲಿಲ್ಲ. ವ್ಯಾಕುಲರಾಗಿದ್ದ ಸೇವಕರ ಕಡೆಗೆ ನೋಡಲಿಲ್ಲ. ಸೀದಾ ತನ್ನ ಕೋಣೆಗೆ ಹೋಗಿ ಬಂಡೆಯನನ್ನು ಕರೆತರಲು ಸೇವಕನನ್ನಟ್ಟಿ ಉಳಿದವರಿಗೆ ಹೊರಗೆ ನಿಂತಿರಲು ಹೇಳಿ ಪೀಠದ ಮೇಲೆ ಕುಂತ ಬೆರಳು ಬೆರಳಿಗೆ ಹೆಣೆದು ಔಗಳ ಮ್ಯಾಲೆ ಗದ್ದಾ ಹೇರಿ ನಿರುತ್ಸಾಹಿಯಾಗಿ ಚಿಂತೆ ಮಾಡುತ್ತ ಕೂತ.

ಈಗವನ ಅಹಂಕಾರಗಳು ಬೃಹದಾಕಾರವಾಗಿ ಬೆಳೆದಿದ್ದವು. ಒಂದು ಕಡೆಮೆ ಇಪ್ಪತ್ತು ದೇಶಗಳಿಗೆ ಚಕ್ರವರ್ತಿಯೆಂಬ, ಚಿನ್ನವ ಸೃಷ್ಟಿಸಿದವನೆಂಬ, ವಜ್ರದೇಶಿಯಂಬ, ಅಜೇಯನೆಂಬ, ಆಗಾಧ ಪಂಡಿತನೆಂಬಿತ್ಯಾದಿ ಅಷ್ಟಮದಗಳು ಸೇರಿ ಅವನ ಅಹಂಕಾರವನ್ನ ದೇವರ ಅಹಂಕಾರಕ್ಕೆ ಕೊಂಚವೇ ಕಡಿಮೆಯೆಂಬಷ್ಟು ಬೆಳೆಸಿದ್ದವು. ಚಕ್ರವರ್ತಿಯಾಗಿ ಇನ್ನೊಬ್ಬ ಚಕ್ರವರ್ತಿಗೆ ಮಗಳನ್ನು ಕೊಡುತ್ತೇನೆ ಎಂಬ ಕೊಟ್ಟ ಭಾಷೆಯನ್ನು ಮಗಳು ಧಿಕ್ಕರಿಸಿದಳಲ್ಲಾ ಎಂಬ ಕೋಪ ದ್ವೇಷಗಳಿಂದ ಬೆಂಕಿಯಲ್ಲಿ ನಿಂತ ಹಾಗೆ ಚಡಪಡಿಸಿದ.

ಆ ದಿನ ಮಗಳು ಆಡಿದ ಮಾತುಗಳು ನೆನಪಾದವು. ತರ್ಕಬದ್ಧವಾಗಿ ಶಿವಾಪುರದ ಪರವಾದ ಮಂಡಿಸಿದ್ದಳು. ಆ ಬಗ್ಗೆ ದೃಡವಾದ ನಿಲುವು ತಳೆದಿದ್ದಳೂ ಮತ್ತು ಆ ನಿಲುವನ್ನಾಕೆ ನಂಬಿದ್ದಳು. ತನಗೂ ಅದನ್ನು ಖಾತ್ರಿ ಮಾಡಲು ಪ್ರಯತ್ನಿಸಿದ್ದಳು. “ನನ್ನ ದಾರಿಗೆ ಬಾ” ಇಲ್ಲದಿದ್ದರೆ ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ” ಎಂದು ಸ್ಪಷ್ಟವಾಗಿ ಸೂಚಿಸಿದ್ದಳು. ಸ್ವಲ್ಪ ಕಾಲ ಸಂದರೆ ತಾನಾಗಿಯೇ ದಾರಿಗೆ ಬಂದಾಳೆಂಬ ನಂಬಿಕೆ ಹುಸಿ ಹೋಗಿತ್ತು. ಅಕ್ರಮ ಗರ್ಭಿಣಿಯಾಗಿದ್ದಳು. ಅವಳ ಭವಿಷ್ಯದ ಬಗೆಗಿನ ಇವನ ನಂಬಿಕೆಗಳೆಲ್ಲ ತಿರುವು ಮುರುವಾಗಿದ್ದವು. ಅಲ್ಲದೆ ನನ್ನ ವಾದಕ್ಕೆ ನಿನ್ನದು ತರ್ಕಬದ್ಧವಾದ ಪ್ರತಿವಾದವಾಗಲಿಲ್ಲ. ಎಂದು ಹೇಳಿದಂತಿತ್ತು ಅವಳ ಕೊನೆಯ ಮಾತು. ತಾನು ಕೊಟ್ಟ ಸೌಲಭ್ಯಗಳು, ತನ್ನ ಶ್ರೀಮಂತಿಕೆ, ಅಂತಸ್ತು – ಇವೆಲ್ಲ ಶಿವಾಪುರದ ಮುಂದೆ ತುಚ್ಛವೆಂದು ತಿರಸ್ಕರಿಸಿ ಹೋಗಿದ್ದಳು. ಒಂದು ಕಡಿಮೆ ಇಪ್ಪತ್ತು ದೇಶಗಳ ಚಕ್ರವರ್ತಿ ತಂದೆಯ ಮುಖಕ್ಕೆ ಮಸಿ ಬಳಿದು, ಕಂಚಿಯ ಚಕ್ರವರ್ತಿಯ ಪಟ್ಟ ಮಹಿಷಿಯಾಗುವ ಅವಕಾಶವನ್ನು ಕಾಲಲ್ಲಿ ಒದ್ದು ಶಿವಾಪುರಕ್ಕೆ ಹೋದಳೆಂದು ಮುಖ ವಿಕಾರವಾಗಿ, ಕಿವಿಗೂದಲು ನಿಮಿರಿ ನಿಂತವು. ಕೋಪ ಶಿವಾಪುರದ ಮೇಲೆ ತಿರುಗಿತು. ನಾಗಾರ್ಜುನ ಅಣಕಿಸಿದಂತಾಯಿತು.

“ಬುಡದಿಂದ ಸುರುವಾಗಿ ಬೆಟ್ಟದ ಮ್ಯಾಲಿನ ಅಮ್ಮನ ಗವಿಯಿರುವವರೆಗಿನ ಬೃಹತ್‌ ಬಂಡೆ ಚಿನ್ನದಯ್ಯಾ! ಅದನ್ನ ವಶಪಡಿಸಿಕೊಂಡರೆ ಪ್ರಪಂಚದಲ್ಲಿ ನಿನ್ನ ಕೈ ಹಿಡಿಯೋನು ಯಾವನಿದ್ದಾನೆ? ಇಂದ್ರನಿಗೂ ನಿನ್ನಂಥ ಐಶ್ವರ್ಯವಿಲ್ಲಯ್ಯಾ!”

ಶಿಖರಸೂರ್ಯ ಪುಳಕಿತನಾಗಿದ್ದ ಶಿವಾಪುರವನ್ನು ನಾಶಮಾಡಿಯಾದರೂ ಗವಿಯನ್ನು ವಶಮಾಡಿಕೊಂಬ ಕನಸನ್ನ ಆಗಲೇ ಕಂಡಿದ್ದ. ಶಿವಾಪುರದ ನಾಶಕ್ಕೆ ಈಗ ಬೇಕಾದಷ್ಟು ಕಾರಣಗಳು ಒದಗಿ ಬಂದವು. ಕನಕಪುರಿ ಇಲ್ಲವೆ ಶಿವಾಪುರ – ಎರಡರಲ್ಲಿ ಒಂದೇ ಉಳಿಯಬೇಕೆಂದು ಮುಷ್ಟಿ ಬಿಗಿದು ತೀರ್ಮಾಣಿಸಿದ.

* * *

ಬಂಡೆಯ ಬಂದಾಗ ಶಿಖರಸೂರ್ಯನ ಕೋಣೆಯಲ್ಲಿ ಕತ್ತಲಿತ್ತು. ಸೇವಕರು ಹೊರಗೇ ನಿಂತುಕೊಂಡು ಒಳಗೆ ಮಹಾಪ್ರಭುಗಳಿರುವುದನ್ನು ಸನ್ನೆಯಿಂದ ತಿಳಿಸಿದರು. ಕರೆಸಿದ್ದರಿಂದ ಅಂತರಂಗ ಮಾತಾಡುವುದಿರಬೇಕೆಂದು ಬಂಡೆಯ ಒಳಗೆ ಕಾಲಿಟ್ಟ. ಮೂಲೆಯ ಪೀಠದಲ್ಲಿ ಒಬ್ಬನೇ ಕೂತು ಎದುರುಗಡೆಯೇ ನೋಡುತ್ತಿದ್ದ. ಬಂಡೆಯ ಬಂದು ನಮಸ್ಕಾರವನ್ನಾಚರಿಸಿದ. ಶಿಖರಸೂರ್ಯ ಕತ್ತಲುಗಿಸಿ ಅವನ ನಮಸ್ಕಾರವನ್ನು ಸ್ವೀಕರಿಸಿದ. ಬೆಳಕು ಸಾಲದೆಂದು ಬಂಡೆಯ ಕಿಡಕಿಯ ಬಾಗಿಲು ತೆಗೆಯಲು ಹೋದಾಗ ಬೇಡವೆಂಬಂತೆ ಕೈಸನ್ನೆ ಮಾಡಿದ. ತನ್ನ ಮುಖಭಾವಗಳು ಅನ್ಯರಿಗೆ ಕಾಣಬಾರದೆಂದು ಅಡಗಿರುವಂತಿತ್ತು ಅವನ ಭಂಗಿ. ಬಹಳ ಹೊತ್ತಾದ ಮೇಲೆ ಅವನ ನಿಜರೂಪ ಪ್ರತ್ಯಕ್ಷವಾಯಿತು. ಅಸ್ವಸ್ಥನಾಗಿದ್ದ, ನೋವನ್ನನುಭವಿಸುತ್ತಿರುವಂತೆ ಕಂಡ. ತಗ್ಗಿದ ದನಿಯಲ್ಲಿ ಕೇಳಿದ:

“ವಿಷಯ ಗೊತ್ತಾಯಿತೇನಯ್ಯ?”

“ಗೊತ್ತಾಯಿತು ಮಹಾಪ್ರಭು, ತಾವು ಅಪ್ಪಣೆ ಕೊಟ್ಟರೆ…”

“ಮೂರು ಜನ ಭಂಟರನ್ನು ಕಳಿಸು, ಸಾಕು.”