ಮಾರನೇ ಬೆಳಿಗ್ಗೆ ಬೆಟ್ಟನನ್ನು ಜೊತೆ ಕರೆದುಕೊಂಡು ಶಿಖರಸೂರ್ಯ ಕಾಲ್ನಡಿಗೆಯಿಂದಲೇ ಕಾಡಿಗೆ ಹೋದ. ನಾರು ಬೇರು ಹುಡುಕುವುದಕ್ಕೆಂದು ನೆಪ ಹೇಳಿದ್ದರೂ ಬೆಟ್ಟ ಹೇಳಿದ ಕೆಲವು ಸಂಗತಿಗಳನ್ನು ಖಾತ್ರಿ ಮಾಡಿಕೊಳ್ಳುವ ಅಗತ್ಯವಿತ್ತು. ಬೆಟ್ಟ ತೋರಿಸಿದಂತೆ ನದಿಯ ಒತ್ತಿನಗುಂಟ ಹೊರಟು ಪಾತ್ರ ಸಣ್ಣದಾಗಿರುವಲ್ಲಿ ಸಂಕದ ಮ್ಯಾಲಿಂದ ದಾಟಿ ಆಚೆ ಹೋದರು. ಕಾಡು ದಟ್ಟವಾಗುತ್ತ ಬಂದಂತೆ ಬೆಟ್ಟ ಮುಂದಾದ, ಶಿಖರಸೂರ್ಯ ಹಿಂದಿನಿಂದ ನಡೆದ. ಬರಬರುತ್ತ ಸೂರ್ಯನ ಮುಖವೇನು, ಆಕಾಶವೂ ಕಾಣಿಸದಾಯ್ತು. ಕೆಲವು ಸಲ ಸಹಾಯ ಮಾಡಲು ಬೆಟ್ಟ ಕೈನೀಡಿದಾಗ ಶಿಖರಸೂರ್ಯ ನಿರಾಕರಿಸಿ ಹಾಗೇ ಸಾಗಿದ. ವೈದ್ಯನ ಕಣ್ಣು ತನ್ನ ಕಣ್ಣಿಗಿಂತ ಹರಿತವಾಗಿದ್ದವು. ಅಪರಿಚಿತವಾದ ದಟ್ಟ ಕಾಡಿನಲ್ಲಿ ಅಷ್ಟೊಂದು ಕತ್ತಲಿದ್ದರೂ ಶಿಖರಸೂರ್ಯ ಒಂದು ಬಾರಿಯೂ ತಪ್ಪಿ ಹೆಜ್ಜೆ ಇಡಲಿಲ್ಲ, ಎಡವಲಿಲ್ಲ, ತಡವರಿಸಲಿಲ್ಲ! ಹಗಲು ಬೆಳಕಿನಲ್ಲಿ ಪರಿಚಿತ ದಾರಿಯಲ್ಲಿ ನಡೆದಾಡುವಂತೆ ನಡೆದುದನ್ನು ಕಂಡು ಬೆಟ್ಟ ಬೆರಗಾದ. ದಟ್ಟ ಕಾಡು ಮುಗಿದು ವಿರಳವಾಗುತ್ತಿದ್ದಂತೆ ಬೆಳಕು, ಬಿಸಿಲು ಬಂದು ದೂರದಲ್ಲೊಂದು ಸುಣ್ಣ ಬಳಿದ ಸುಂದರ ಮನೆ ಕಂಡಿತು. ‘ಇದೇನಾಶ್ಚರ್ಯ’ ಎಂಬಂತೆ ಬೆಟ್ಟನನ್ನು ನೋಡಿದ.

“ಅದೋ, ಅಥವಾ ಆ ಮನೆ ಆಚೆಯದೋ ಸ್ವರ್ಣಲತೆಯ ಮನೆ ಒಡೆಯಾ. ಅದರಾಚೆ ಇನ್ನೊಂದು ಒತ್ತಿದೆ. ಅದನ್ನು ದಾಟಿದರೆ ಸಿಕ್ಕೋದೇ ಶ್ವಾನಕೂಪ. ನಾವು ಸುತ್ತು ಬಳಸಿ ಹೋಗಬೇಕು.”

ಎಂದು ಬೆಟ್ಟ ಹೇಳಿ ಎಡಕ್ಕೆ ತಿರುಗುವಷ್ಟರಲ್ಲಿ ದೂರದಲ್ಲಿ ಕೆಂಪು ಲಂಗದಲ್ಲಿದ್ದ ಹುಡುಗಿಯೊಂದು ಚಲಿಸಿದಂತಾಗಿ ಶಿಖರಸೂರ್ಯ ಅವಳನ್ನು ನೋಡುತ್ತ ಹಾಗೇ ನಿಂತ.

ಸುಣ್ಣದ ಮನೆಯತನಕ ಸುಮಾರು ಮೂರೆಕರೆಯ ತೆಳುವಾದ ಕಾಡಿನಲ್ಲಿ ಸಂಪಿಗೆ ಪಾರಿಜಾತ ಮರಗಳೇ ಹೆಚ್ಚಿಗಿದ್ದವು. ಆ ಮನೆತನಕ ಮೂರಡಿ ಅಗಲದ ಕಾಲುದಾರಿ ಇದ್ದು ಇಕ್ಕೆಲಗಳಲ್ಲಿ ಆಕಾಶಮಲ್ಲಿಗೆಯ ಮರಗಳಿದ್ದವು. ಅರಳಿದ ಹಾಗೂ ಅರಳಿ ಉದುರಿದ ಹೂಗಳಿಂದಾಗಿ ತೀಕ್ಷ್ಣವಾದ ಪರಿಮಳ ಇಡಗಿ ವಾತಾವರಣ ಸುಖಕರವಾಗಿತ್ತು. ಕಾಡಿನ ತಂಪಿನಿಂದಾಗಿ ಎಳೆಬಿಸಿಲು ಕೂಡ ತನ್ನ ಹದನ ಕಳೆದುಕೊಂಡು ಆಹ್ಲಾದಕರವಾಗಿತ್ತು. ಹುಡುಗಿ ಪುನಃ ಕಂಡು ಮರಗಳಲ್ಲಿ ಮರೆಯಾದಳು. ಅವಳು ಮರೆಯಾದ ದಿಕ್ಕನ್ನೇ ಗಮನಿಸುತ್ತ ಶಿಖರಸೂರ್ಯ ಅಲ್ಲೇ ನಿಂತ. ಬಹಳ ಹೊತ್ತು ಅವಳು ಕಾಣಿಸಲಿಲ್ಲ. ಜಾಡು ತಪ್ಪಿತೆಂದು ಬೇಟೆಯ ನಾಯಿಯಂತೆ ಕಣ್ಣಿಂದ ಹುಡುಕಿದ. ಅಗೋ ಅಲ್ಲಿ ಪಾರಿಜಾತದ ಮರವ ಅಲುಗಿ ಉದುರಿದ ಹೂಗಳನ್ನು ಆಯ್ದು ಲಂಗದಂಚಿನ ಉಡಿಯಲ್ಲಿ ತುಂಬಿಕೊಂಡಳು. ತೊಡೆತನಕ ಕಾಲುಗಳೆರಡೂ ದಂತದ ಕಾಲುಗಳಂತೆ ಶುಭ್ರವಾಗಿ ಹೊಳೆದವು. ಈಗ ಆ ಕಡೆಗೇ ನಡೆದ. ಹುಡುಗಿ ಹೂ ತಗೊಂಡು ಮನೆಗೋಡಿದಳು. ಆ ಮನೆಯೇ ಗುರಿಯಾಗಿ ಶಿಖರಸೂರ್ಯನೂ ಧಾವಿಸಿದ.

ಹೊರಗೆ ನಾಯಿಗಳಾಗಲಿ, ಆಳುಗಳಾಗಲಿ ಇರಲಿಲ್ಲ. ನೇರಹೋಗಿ ಬಾಗಿಲಲ್ಲಿ ನಿಂತು ಚಿಲಕ ಬಡಿದ. ಹೊರಗೆ ಬಂದವಳು ಅದೇ ಚೆಲುವೆ. ಒಂದು ಕ್ಷಣ ತೆರೆದ ಬಾಯಿ ತೆರೆದಂತೇ ಬೆರಗಾಗಿ ನಿಂತ. ಯಾರೀಕೆ? ವಯಸ್ಸು ಹದಿನೆಂಟಕ್ಕೆ ಹೆಚ್ಚಿಗಿರಲಾರದು. ಲಂಗವಾಗಲಿ, ಎದೆಗುಪ್ಪಸವಾಗಲಿ, ಅವಳ ಹುರಿಗೊಂಡ ಯೌವನವನ್ನು ಅಡಗಿಸಿಡಲು ಸಾಧ್ಯವಾಗಿರಲಿಲ್ಲ. ಬಾಗಿದ ಹುಬ್ಬಿನ ಕೆಳಗೆ ಅಚ್ಚರಿಯಿಂದರಳಿದ ದೊಡ್ಡಕಣ್ಣು, ಅರೆದೆರೆದ ತೊಂಡೆದುಟಿಗಳು, ನಡುವೆ ಹೊಳೆವ ದಂತಪಂಕ್ತಿ, ಭುಜ ಮತ್ತು ಬೆನ್ನಿನ ಮೇಲೆ ಸ್ವಚ್ಛಂದವಾಗಿ ಇಳಿಬಿದ್ದ ಮಿರುಗೂದಲಿಗೆ ಗಂಡಿನ ಮನಸ್ಸನ್ನು ಬಂಧಿಸಿಡುವ ಆಕರ್ಷಣೆ ಇತ್ತು.

ಈ ಕಾಡಿನಲ್ಲಿ ಈ ಪರಿಯ ಸೊಬಗನ್ನು ಶಿಖರಸೂರ್ಯ ನಿರೀಕ್ಷಿಸಿರಲಿಲ್ಲ. ಅವಳನ್ನು ಕಂಡುದೇ ಪ್ರಥಮ ಬಾರಿ ತನ್ನ ಉಡುಪು ಒರಟಾಗಿದೆಯೆಂದು ಅನ್ನಿಸಿತು. ಸೊಂಟಕ್ಕೊಂದು ಒರಟಾದ ದಟ್ಟಿ ಸುತ್ತಿಕೊಂಡು ಇನ್ನೊಂದು ದಟ್ಟಿಯನ್ನು ಮೈಮ್ಯಾಲೆ ಹೊದ್ದಿದ್ದನಷ್ಟೆ. ಆದರೆ ಈ ಭಾವನೆ ಅವನಲ್ಲಿ ಬಹಳ ಹೊತ್ತು ಉಳಿಯಲಿಲ್ಲ. ಅವಳ ಸೌಂದರ್ಯವನ್ನೇ ಧ್ಯಾನಿಸುತ್ತ ನೋಡತೊಡಗಿದ. ಹಾಲಿನ ಕೆನೆವರ್ಣದ ಮುಖದ ಮ್ಯಾಲೆ ಸೂರ್ಯನ ಎಳೆಬಿಸಿಲು ಬಿದ್ದು ಕಾಂತಿಯಿಂದ ಹೊಳೆಯುವಂತೆ ಮಾಡಿತ್ತು. ಕೆಂದುಟಿಗಳನ್ನು ತುಸುವೇ ಅಗಲಿಸಿ ಅನುಮಾನದಿಂದ ಹೊಮ್ಮುವ ಮೋಹಕ ಮುಗುಳು ನಗೆಯನ್ನು ಒತ್ತಾಯದ ಬಿಗುಮಾನದಿಂದ ತಡೆಹಿಡಿದಿದ್ದಳು. ಕೆನ್ನೆಗಳಲ್ಲಿ ಸಣ್ಣ ಕುಳಿ ಬಿದ್ದು ತುದಿಯಲ್ಲಿ ತುಸುವೇ ಬಾಗಿದ ಮೂಗಿನಿಂದಾಗಿ ಇಡೀ ಮುಖಕ್ಕೊಂದು ವಿಶೇಷ ಕಳೆ ಬಂದಿತ್ತು. ಕಣ್ಣುಗಳಿಗೆ ಮತ್ತು ಬರಿಸುವ ಯೌವನದ ಆ ಪದ್ಮಿನಿ, ಮಾದಕ ಪರಿಮಳದ ಭರಣಿ ಅವನಿಗೇ ಗೊತ್ತಿಲ್ಲದಂತೆ ಅವನಂತರಂಗದ ಒಳಗೊಳಗೆ ಭರಿತಳಾದಳು. ನೋಡನೋಡುತ್ತಿರುವಂತೆ ಅವನ ಉತ್ಸಾಹ ಬೆರಗುಗಳು ಸಹಾನುಭೂತಿಗೆ ತಿರುಗಿ ಕಂಡುದನ್ನು ನಂಬಲಾರದವಂತೆ ನೋಡತೊಡಗಿದ. “ಮೀಸಲು ನೆಲ ಈ ಹುಡುಗಿ! ನೇಗಿಲಿರಲಿ, ಇನ್ನೊಬ್ಬರ ಕಾಲು ಕೂಡ ಮೂಡದ ಇಂಥವಳಿಗೂ ಈ ಗತಿಯೆ!” ಅಂದುಕೊಂಡ. ಬಿಳಿಗಿರಿರಾಯನ ಕೊಲೆಗೆ ಕಾರಣವಾದ ಕುಟುಂಬ ಇಲ್ಲಿಯೇ ಇರಬೇಕೆಂಬ ನಂಬಿಕೆಯಿಂದ-

“ನಿನಗೆ ಸ್ವರ್ಣಲತೆ ಗೊತ್ತ?”

ಅಂದ. ಹುಡುಗಿ ತಕ್ಷಣ ಗಾಬರಿಯಾಗಿ ಒಂದು ಹೆಜ್ಜೆ ಹಿಂದೆ ಸರಿದಳು. ಅಷ್ಟರಲ್ಲಿ “ಯಾರದು?” ಎನ್ನುತ್ತ ಒಳಗಡೆಯಿಂದ ಹಣ್ಣು ಮುದುಕಿಯೊಬ್ಬಳು ಹೊರಬಂದಳು. ಮುಖಬಾಡಿ ದೇಹ ಕೃಶವಾಗಿ ಬಾಗಿದ್ದಳು. ಕೆನ್ನೆ ಹಣೆಗಳಲ್ಲಿ ಗೆರೆ ಮೂಡಿದ್ದವು. ಬಿಳಿವರ್ಣದ ದೇಹ ಗೋದಿಬಣ್ಣಕ್ಕೆ ತಿರುಗುತ್ತಿದ್ದ ಲಕ್ಷಣಗಳಿದ್ದವು. ಆದರೆ ಕಣ್ಣುಗಳಲ್ಲಿ ನಿಚ್ಚಳ ಬೆಳಕಿತ್ತು. ನಿಷ್ಕಾಳಜಿಯಿಂದ ಕೂದಲು ಕೆದರಿತ್ತು. ಅಂಥದರಲ್ಲೂ ಹೊಳೆವ ಓಲೆ ಮತ್ತು ಮೂಗುತಿ ಧರಿಸಿದ್ದಳು. ಒಂದು ಕಾಲದ ಸುಂದರಿಯೆಂದು, ಹೋಲಿಕೆಯಲ್ಲಿ ಈ ಹುಡುಗಿಯ ತಾಯಿಯೆಂಬುದು ಸ್ಪಷ್ಟವಾಗಿ ತಿಳಿಸುವಂತಿತ್ತು – ಅವಳ ಲಕ್ಷಣ. ಶಿಖರಸೂರ್ಯನ ಅಸಾಧಾರಣ ನಿಲುವು ಮತ್ತು ಆಕಾರಗಳಿಂದ ವಿಚಲಿತಳಾದರೂ ಧೈರ್ಯ ತಂದುಕೊಂಡು ಮುಂದೆ ಬಂದು, ಸೊಂಟದ ಮೇಲೆ ಕೈಯೂರಿಕೊಂಡು ನಿಂತು ಇವನನ್ನೇ ತುಸು ಹೊತ್ತು ನೋಡಿದಳು. ಮುದುಕಿ ಬಂದೊಡನೆ ಹುಡುಗಿ ಅವಳ ಹಿಂದೆ ಮುದುರಿದಳು. ಮುದುಕಿ ಮುಖ ಮುಂದೆ ಮಾಡಿ “ಯಾರಪ್ಪ ನೀನು?” ಎಂದಳು.

“ರಾಜ್ಯವೈದ್ಯ ಶಿಖರಸೂರ್ಯ.”

ತಕ್ಷಣ ಹುಡುಗಿ ಮಾತಾಡುವ ತಾಯಿಯನ್ನು ತಡೆಯಲು ಕೈಸನ್ನೆ ಮಾಡುವಷ್ಟರಲ್ಲಿ “ಆಯಿತು ಇಲ್ಲಿಗ್ಯಾಕಪ್ಪ ಬಂದೆ?” ಎಂದು ಕೇಳಿಯೇ ಬಿಟ್ಟಿದ್ದಳು. ಶಿಖರಸೂರ್ಯ ಹಿಂದೆ ಮುಂದೆ ನೋಡದೆ ವಿಚಾರ ಮಾಡದೆ,

“ಬಿಳಿಗಿರಿರಾಯನೊಂದಿಗಿದ್ದ ಸ್ವರ್ಣಲತೆಯನ್ನು ನೋಡಬೇಕಾಗಿತ್ತು.”

ಅಂದ. ಆ ಮುದುಕಿ ದೂರದ ಮನೆಯನ್ನ ಕೈಮಾಡಿ ತೋರಿಸುತ್ತ,

“ಅಗೋ ಅಲ್ಲಿದೆಯಲ್ಲ ಕೆಂಪು ಹಂಚಿನ ಮನೆ. ಅದೇ ಅವಳ ಮನೆ. ನೀನು ರಾಜ್ಯವೈದ್ಯನೇ ಆಗಿರು, ಅವನಜ್ಜನೇ ಆಗಿರು. ಅಲ್ಲೂ ನಿನ್ನಂಥವನೇ ಒಬ್ಬ ಕವಿರಾಜ ಇದ್ದ. ಅವನೂ ನಿನ್ನ ಹಾಗೇ ಬಿರುದು ಬಾವಲಿ ಪಡೆದವನೇ. ನಿನ್ನ ದರ್ಪ, ಜಂಬಗಳನ್ನು ಅವನ ಮುಂದೆ ಕೊಚ್ಚಿಕೋ ಹೋಗು.”

ಎಂದು ಹೇಳಿ, “ನಡಿಯೇ ಒಳಗೆ” ಎಂದು ಮಗಳನ್ನು ಒಳಕ್ಕೆ ಕರೆದುಕೊಂಡು ನಡೆದಳು. ಶಿಖರಸೂರ್ಯ ಅವಸರದಲ್ಲಿ “ಆದರೆ…” ಅಂದ.

“ನಿನಗೆ ಬೇಕಾದ್ದೆಲ್ಲ ಅಲ್ಲೇ ಸಿಕ್ಕೀತು ಹೋಗಪ್ಪ” ಎಂದು ಹೇಳಿ ಇನ್ನೊಂದು ಮಾತಿಗೆ ಕಾಯದೆ ಇವನ ಮುಖದ ಮೇಲೆಯೇ ಬಾಗಿಲಿಕ್ಕಿಕೊಂಡಳು. ಕೋಪ ಬಂತಾದರೂ ಅದನ್ನು ಕೇಳಿಸಿಕೊಳ್ಳಲು ಇಬ್ಬರಲ್ಲಿ ಒಬ್ಬರೂ ಇರಲಿಲ್ಲವಾದ್ದರಿಂದ ನಿರಾಶನಾಗಿ ಹಿಂದಿರುಗಿದ. ಅನತಿ ದೂರದಲ್ಲಿ ನಿಂತಿದ್ದ ಬೆಟ್ಟ ಇವನನ್ನು ಅನುಸರಿಸಿದ.

ಇಬ್ಬರೂ ಮುದುಕಿ ತೋರಿಸಿದ ಕಡೆಗೆ ಕಳ್ಳ ನೋಟ ಬೀರಿದಾಗ ಲಂಗದ ಹುಡುಗಿ ಹಿತ್ತಲ ಬಾಗಿಲಲ್ಲಿ ನಿಂತಿದ್ದನ್ನು ಕಂಡ. ಇವನು ಗಮನಿಸಿದ್ದು ಗೊತ್ತಾದೊಡನೆ ಅವಳು ಮೆಲ್ಲನೆ ಒಳಕ್ಕೆ ಸರಿದಳು.

ಕೆಂಪು ಹೆಂಚಿನ ಮನೆ ಸಾಧಾರಣವಾದದ್ದು, ಬೀಗ ಹಾಕಿತ್ತು. ಸುತ್ತ ನಿರ್ಜನವಾಗಿತ್ತು. ಸುತ್ತು, ಬಳಸಿ, ಕಿಡಿಕಿಗಳಿಂದ ಒಳಗಿಣಕಿದರು. ಒಳಗೆ ಕತ್ತಲಿತ್ತು. ಹಾಗೆಯೇ ವಾಪಾಸಾದರು. ಬರುವಾಗ ಶಿಖರಸೂರ್ಯನ ಕಳ್ಳನೋಟಗಳಿಗೆ ಹುಡುಗಿಯಾಗಲಿ, ಮುದುಕಿಯಾಗಲಿ ಸಿಕ್ಕಲಿಲ್ಲ. ಆದರೆ ಹಿತ್ತಲು ಮಾತ್ರ ಕಾಳಜಿಯಿಂದ ಬೆಳೆಸಿದ ಹೂಹಣ್ಣಿನ ಮರಗಳಿಂದ ಸುಂದರವಾಗಿತ್ತು.

ಬಿಳಿಮನೆ ದಾಟಿ ಬಂದ ಮೇಲೆ ಶಿಖರಸೂರ್ಯ “ಈ ಮನೆ ನಿನಗೆ ಗೊತ್ತ ಬೆಟ್ಟ?” ಎಂದು ಕೇಳಿದ.

“ಗೊತ್ತು ಒಡೆಯಾ. ಆ ಮುದಿ ಹೆಂಗಸು ಒಬ್ಬ ದೇವದಾಸಿ, ಹೆಸರು ಗುಣಶೀಲ. ಅವಳಿಗೆ ಮೂರು ಜನ ಮಕ್ಕಳು. ದೊಡ್ಡವ ಬದೆಗ, ರಾಜರಲ್ಲಿ ನೂರಾಳ್ಪಡೆಯ ದಂಡನಾಯಕ. ನಿಮ್ಮ ಭಂಟ ಸುಕ್ರನ ಗೆಣೆಕಾರ ಮತ್ತು ನಂಟ. ಸ್ವರ್ಣಲತೆ ಮತ್ತು ಆಗಲೇ ಲಂಗದ ಹುಡಿಗೆಯ ಕಂಡೆಯಲ್ಲ, ಇವರಿಬ್ಬರೂ ಒದೆಗನ ತಂಗಿಯರು. ಆ ಮುದಿ ಹೆಂಗಸು ಚಂಡೀದಾಸನ ಪ್ರೇಯಸಿ.”

“ಚಂಡೀದಾಸ ಯಾರು?”

“ನೀನು ಬರುವ ಮುನ್ನ ಅವನೇ ಕನಕಪುರಿಯ ಜನಪ್ರಿಯ ವೈದ್ಯ. ಜೊತೆಗೆ ಮಳೆಯಾಳ ಮದ್ದುಮಾಟದ ವಾಮಾಚಾರಿ. ಚಿನ್ನ ಎಲ್ಲಿದ್ದರೂ ಮನಸ್ಸು ಮಾಡಿದರೆ ಅದು ತನ್ನಲ್ಲಿಗೇ ಬರುವಂತೆ ಮಾಡುತ್ತಿದ್ದ. ಧನಪಾಲ ಶೆಟ್ಟರ ಚಿನ್ನದ ಚೊಂಬು ತನ್ನಲ್ಲಿಗೇ ಬರುವಂತೆ ಮಾಡಿದ್ದ! ಜೊತೆಗೆ ಕಚ್ಚೆಹರಕ. ಇಂಥ ಪ್ರತಾಪಗಳಿಂದ ಬೇಸತ್ತ ಜನ ಅವನನ್ನು ಊರು ಬಿಟ್ಟು ಓಡಿಸಬೇಕೆಂದಾಗ ಪ್ರಧಾನಿಗೆ ಅವನಲ್ಲಿ ಆಸಕ್ತಿ ಮೂಡಿತು. ಇದೇ ಕೆಂಪು ಹೆಂಚಿನ ಮನೆಯಲ್ಲಿ ಕದ್ದು ಭೇಟಿಯಾಗುತ್ತಿದ್ದರು. ಕುಡಿದಾಗ ಅಮಲಿನಲ್ಲಿ ಚಂಡೀದಾಸ ಪ್ರಧಾನಿಯ ಔದಾರ್ಯವನ್ನು ಹೊಗಳುತ್ತಿದ್ದ. ಪ್ರಧಾನಿಯಿಂದ ಯಥೇಚ್ಛ ಹಣ ಪಡೆದು ಮಂತ್ರ ತಂತ್ರಗಳಿಂದ ಬಡವಿ ಗುಣಶೀಲಳ ಮನ ಮರಳು ಮಾಡಿ ಅವಳ ಇಬ್ಬರೂ ಹುಡುಗಿಯರನ್ನು ವಿಷಕನ್ಯೆಯರನ್ನಾಗಿ ಮಾಡಿಬಿಟ್ಟ!

“ಒಂದು ದಿನ ಇದ್ದಕ್ಕಿದ್ದಂತೆ, ಇವತ್ತು ನೀನು ನೋಡಿದೆಯಲ್ಲ, ಲಂಗ ಹಾಕಿದ ಹುಡುಗಿ?-ಅವಳನ್ನು ನೋಡಿ “ಅಯ್ಯೋ ಕಂದಾ ನಿನಗೂ ವಿಷ ಹಾಕಿದೆನೇ? ನನ್ನಂಥಾ ಚಂಡಾಲ ಇನ್ನಿಲ್ಲ”ವೆಂದು ಅತ್ತು ಕರೆದು ಪಶ್ಚಾತ್ತಾಪ ಪಟ್ಟ. ಎಲ್ಲೆಲ್ಲಿಗೋ ಹೋಗಿ ಬೇಕಾದಷ್ಟು ವಿಷವಿದ್ಯೆ ಕಲಿತು ಬಂದು ಅವಳ ವಿಷ ತೆಗೆಯಲು ನೋಡಿದ. ಆಗಲಿಲ್ಲ. ಎಲ್ಲೋ ಮಾಯವಾಗಿ ಬಿಟ್ಟ. ಚಿನ್ನ ಶೋಧನೆಗಾಗಿ ಆಗಾಗ ವರ್ತಕರು ಅವನನ್ನು ಕರೆಸುವುದಂಟಂತೆ.

ಅದೇನಾದರಾಗಲಿ, ತಂಗಿಯರನ್ನ ವಿಷಕನ್ಯೆಯರನ್ನಾಗಿ ಮಾಡಿದ್ದು ಮೊದಮೊದಲು ಬದೆಗನಿಗೂ ತಿಳಿದಿರಲಿಲ್ಲ. ಯಾವಾಗಲೋ ಒಂದು ದಿನ ಗೊತ್ತಾಗಿ ಆ ಮನೆಯ ಸಹವಾಸ ತೊರೆದು ಮದುವೆಯಾಗಿ ಬೇರೆ ಬಂದು ಬಿಟ್ಟ.

“ಆ ದಿನ ಸ್ವರ್ಣಲತೆಯನ್ನು ಕರೆತಂದು ರಾಜರ ಕೋಣೆಯಲ್ಲಿ ಹೊಗಿಸಿದವನು ಪ್ರಧಾನಿಯ ಆಪ್ತ ಸೇವಕ. ಇದು ಸಾಮಾನ್ಯವಾಗಿ ರಾಜರಲ್ಲಿ ನಡೆದ ಲೈಂಗಿಕ ವ್ಯಾಪಾರವೆಂದು ನಾವಂದುಕೊಂಡೆವು. ಆದರೆ ನಮ್ಮ ಕಣ್ಣೆದುರಿನಲ್ಲೇ ನಮ್ಮ ರಾಜರು ಮರಣ ಹೊಂದಿದರಲ್ಲ, ನಮಗೆ ಆಘಾತವಾಯ್ತು. ಮೊದಮೊದಲು ಯಾಕೆ? ಏನು? ಎತ್ತ? ನಮಗೆ ತಿಳಿಯಲಿಲ್ಲ. ನಾವೂ ಅಷ್ಟೊಂದು ಕೋಪಾವಿಷ್ಟರಾಗಿದ್ದೆವು. ತನಿಖೆ ನಡೆದರೆ ಅದರ ತುದಿ ತನಗೇ ತಲುಪುವುದೆಂದು ಪ್ರಧಾನಿ ಸ್ವರ್ಣಲತೆಯನ್ನು ಕೊಲ್ಲಿಸುವ ವ್ಯವಸ್ಥೆ ಮಾಡಿದ. ಮಹಾರಾಣಿ, ಯುವರಾಜ ಮತ್ತು ಪ್ರಧಾನಿ ಈ ಮೂವರು ಎದುರಿನಲ್ಲಿಯೇ ಅವಳ ಅವಸಾನವಾಯಿತಂತೆ ಒಡೆಯಾ…”

ಈ ಕತೆಯನ್ನು ಬೆಟ್ಟನೂ ದುಃಖದಿಂದಲೇ ಹೇಳಿದ.

ಇಬ್ಬರೂ ಹಿಂದಿರುಗಿ ಮನೆಗೆ ಬಂದಾಗ ಐದು ತಾಸು ಹೊತ್ತೇರಿತ್ತು. ಮನೆಗೆ ಬಂದವನೇ ಅವಸರದಲ್ಲಿ ಊಟ ಮಾಡಿ ಕುದುರೆ ಹತ್ತಿ ಅರ್ಥಕೌಶಲನಲ್ಲಿಗೆ ಹೊರಟ. ಕೂಡಲೆ ಕುದುರೆ ನಿಲ್ಲಿಸಿ “ಬೆಟ್ಟಾ…” ಎಂದು ಕೂಗಿದ. ಬೆಟ್ಟ ಓಡಿಬಂದೊಡನೆ “ಸುಕ್ರನಿಗೆ ಬರಹೇಳಬೇಕಲ್ಲ” ಅಂದ. ಬೆಟ್ಟ ಬಾಗಿ “ಆಯ್ತು ಒಡೆಯಾ” ಅಂದ. ಶಿಖರಸೂರ್ಯ ಕುದುರೆ ಓಡಿಸಿದ.

ಸಾಂಸರ್ಗಿಕ ರೋಗದಂತೆ ಸುದ್ದಿ ಹಬ್ಬಿ ಇಡೀ ಕನಕಪುರಿ ಸ್ತಬ್ಧವಾಗಿತ್ತು. ಪೇಟೆಯ ಮೂಲೆಮೂಲೆಗಳಲ್ಲಿ, ಅಂಗಡಿಗಳಲ್ಲಿ, ಓಣಿಗಳ ಸಂದಿಗೊಂದಿಗಳಲ್ಲಿ ಜನ ಸಣ್ಣ ಸಣ್ಣ ಗುಂಪುಗಳಾಗಿ ಪಿಸುದನಿಯಲ್ಲಿ ಕದ್ದಾಡಿ, ಪಶ್ಚಾತ್ತಾಪ ಪಡುವಂತೆ ಇಲ್ಲವೆ ಕೋಪತಾಪಗಳನ್ನು ಅಭಿವ್ಯಕ್ತಿಸುವಂತೆ ಮಾತಾಡುತ್ತಿದ್ದರು. ಇಡೀ ಕನಕಪುರಿ ಅವಮಾನದಿಂದ ಕುದಿಯುತ್ತಿತ್ತು. ಅವರ ಸೈನ್ಯಶಕ್ತಿಯ ಅಹಂಕಾರಕ್ಕೆ, ಶ್ರೀಮಂತಿಕೆಯ ಧಿಮಾಕಿಗೆ, ಐವತ್ತಾರು ದೇಶಗಳಲ್ಲಿ ಶ್ರೇಷ್ಠರು ತಾವೆಂಬ, ಅಜೇಯರು ತಾವೆಂಬ ಜಂಬಗಳಿಗೆ ಗಾಯವಾಗಿತ್ತು. ಬಿಳಿಗಿರಿಯಂಥ ಕ್ಷುದ್ರ ದೇಶಕ್ಕೆ ಈ ಧೈರ್ಯವೇ? ಎಂದು ಮಕ್ಕಳೂ ಮಾತಾಡಿಕೊಂಬಂಥ, ಸ್ತ್ರೀಯರೂ ಕದ್ದಾಡುವಂಥ ವಿಷಯವಾಯಿತು. ಕನಕಪುರಿಯ ಪ್ರತಿಯೊಬ್ಬ ಪ್ರಜೆ ವಯಸ್ಸಿನ ಭೇದವಿಲ್ಲದೆ ತನತನಗೆ ತಿಳಿದ ದಾರಿಯಿಂದ ಬಿಳಿಗಿರಿಯನ್ನ ಧೂಳೀಪಟ ಮಾಡುವ ಕನಸು ಕಾಣುತ್ತಿದ್ದ. ಆದರೆ ಯುವರಾಜನ ಅಮೂಲ್ಯ ಜೀವ ಬಿಳಿಗಿರಿಯ ಕೈಯಲ್ಲಿತ್ತು. ಸ್ವಲ್ಪ ಹೆಚ್ಚುಕಮ್ಮಿಯಾದರೂ ಅವನ ಜೀವಕ್ಕೆ ಅಪಾಯವಿದ್ದುದರಿಂದ ಎಲ್ಲರ ಕಲ್ಪನೆ ಅಲ್ಲಿಗೇ ಬಂದು ನಿಲ್ಲುತ್ತಿತ್ತು.

ಶಿಖರಸೂರ್ಯ ಸೀದಾ ಅರಮನೆಗೆ ಬಂದ. ರಸ್ತೆ ಮತ್ತು ಪೇಟೆಯಲ್ಲಿ ಕುದುರೆಗಾಡಿಗಳಾಗಲಿ, ಎತ್ತಿನ ಗಾಡಿಗಳಾಗಲಿ ಇರಲಿಲ್ಲ. ಅರಮನೆ ಬಿಕೋ ಎನ್ನುತ್ತಿತ್ತು. ಚಡಪಡಿಕೆಯಿಂದಾಗಿ ಚಲನಶೀಲವಾಗಿದ್ದವರು ಮಹಾರಾಣಿ ಮತ್ತು ಅರ್ಥಕೌಶಲ ಇಬ್ಬರೇ. ಮಹಾರಾಜ ಕಂಗಾಲಾಗಿ ತಲೆಯ ಮೇಲೆ ಕೈಹೊತ್ತು ತನ್ನ ಕೋಣೆಯಲ್ಲಿ ಕುಳಿತುಬಿಟ್ಟಿದ್ದ. ಸೇವಕರಿಗೆ ಅವನನ್ನು ಮಾತಾಡಿಸುವ ಅಥವಾ ಉಪಚರಿಸುವ ಧೈರ್ಯವಿರಲಿಲ್ಲ.

ಶಿಖರಸೂರ್ಯ ಬಂದಾಗ ಮಹಾರಾಣಿ ಒಳಗಿದ್ದಳು. ಹಜಾರದಲ್ಲಾಗಲೇ ಅರ್ಥಕೌಶಲ, ಪರಮಶೆಟ್ಟಿ ಮತ್ತು ಸೇನಾಪತಿ ಕೂತಿದ್ದರು. ಯಾರೊಬ್ಬರ ಮುಖದ ಮೇಲೂ ಕಳೆಯಿರಲಿಲ್ಲ. ಅರ್ಥಕೌಶಲ ಹೆಣದಂತೆ ಕಾಣುತ್ತಿದ್ದ. ಈತನಕ ಪರಸ್ಪರ ಮುಖ ನೋಡದೆ ನೆಲವನ್ನು, ತಪ್ಪಿದರೆ ಮಹಾರಾಣಿಯ ಕೋಣೆಯ ಬಾಗಿಲನ್ನು ಟಕಮಕ ನೋಡುತ್ತಿದ್ದ ಎಲ್ಲರೂ ಶಿಖರಸೂರ್ಯ ಬಂದೊಡನೆ ತುಸು ಕಳೆಕಳೆಯಾದರು. ಎಲ್ಲರೂ ಮೊದಲೇ ಮಾತಾಡಿಕೊಂಡು ಒಂದು ನಿರ್ಧಾರಕ್ಕೆ ಬಂದ ಹಾಗೆ, ಇವನಿಗಾಗಿಯೇ ಕಾಯುತ್ತಿರುವಂತೆ ಕಂಡಿತು. ಸೇನಾಪತಿಯ ಪಕ್ಕದಲ್ಲಿದ್ದ ಪೀಠದಲ್ಲಿ ಕುಳಿತು ಯಾರಾದರೂ ಉತ್ತರ ಕೊಡಲೆಂದು “ಏನಾದರೂ ಹೊಸ ಸುದ್ದಿ?” ಎಂದು ಕೇಳಿ ಉತ್ತರಕ್ಕಾಗಿ ಒಬ್ಬೊಬ್ಬರನ್ನೇ ನೋಡಿದ. ಯಾರೂ ಉತ್ತರಿಸಲಿಲ್ಲ. ಕೊನೆಗೆ ಅರ್ಥಕೌಶಲನೇ ಜೋಲುಮುಖ ಹಾಕಿ ಏನು ಹೇಳುವನೋ ಎಂಬ ಆತಂಕದಿಂದಲೇ ಪೀಠದಲ್ಲಿದ್ದುಕೊಂಡೇ ಮುಂದೆ ಬಾಗಿ ಶಿಖರಸೂರ್ಯನಿಗೆ ಹೇಳಿದ:

“ಈ ಸಂದರ್ಭದಿಂದ ಕನಕಪುರಿಯನ್ನು ನೀನೇ ಪಾರುಮಾಡಬೇಕು ಮಿತ್ರಾ!”

“ಅಂದರೆ?”

“ಸಂಧಾನಕ್ಕಾಗಿ ಸೇನಾಪತಿಯ ಜೊತೆ ನೀನು ಬಿಳಿಗಿರಿಗೆ ಹೋಗಬೇಕೆಂದು ಮಹಾರಾಣಿಯವರ ಅಪೇಕ್ಷೆ.”

“ನಮ್ಮದೂ ಕೂಡ”

ಎಂದು ಪಟ್ಟಣಶೆಟ್ಟಿ ನಡುವೆ ಬಾಯಿ ಹಾಕಿ ಎದ್ದು ಹೋಗಿ ಶಿಖರಸೂರ್ಯನ ಕೈಹಿಡಿದುಕೊಂಡು,

“ನಿನ್ನ ಮೇಲೆ ವರ್ತಕ ಸಮಾಜಕ್ಕೆ ನಂಬಿಕೆ ಇದೆ. ನೀನದನ್ನು ಹುಸಿ ಮಾಡಬಾರದು.”

ಎಂದು ಮೆಲ್ಲನೆ ಕೈ ಹಿಸುಕಿದ. ಪರಮಶೆಟ್ಟಿ ಕೂತಲ್ಲೇ,

“ಹೌದು ರಾಜವೈದ್ಯನೇ”

ಎಂದು ವಿನಂತಿಸಿಕೊಂಡ. ಸೇನಾಪತಿ ವಿಶ್ವಾಸದಿಂದ ಇವನನ್ನೇ ನೋಡುತ್ತಿದ್ದ. ಆದರೆ ಸೇನಾಪತಿಯನ್ನು ಜೊತೆಯಲ್ಲಿ ಸೇರಿಸಿಕೊಳ್ಳಲು ಈತನಿಗೆ ಮನಸ್ಸಿರಲಿಲ್ಲ. ಆ ಬಗ್ಗೆ ಹೆಚ್ಚಿಗೆ ತಲೆ ಕೆಡಸಿಕೊಳ್ಳದೆ ಮುಂದಿನ ಕಾರ್ಯಕ್ರಮದ ಬಗ್ಗೆ ಕೇಳಬೇಕೆಂಬಷ್ಟರಲ್ಲಿ ಧುತ್ತೆಂದು ಮಹಾರಾಣಿ ಬಂದಳು. ಎಲ್ಲರೂ ಎದ್ದುನಿಂತರು. ಮಹಾರಾಣಿ ಕೂತು,

“ವಿಷಯ ಹೇಳಿದೆಯ ಪ್ರಧಾನಿ?” ಎಂದಳು.

“ವಿವರಗಳನ್ನು ಚರ್ಚಿಸಬೇಕು ಮಹಾರಾಣಿ”

“ಈ ಪ್ರಧಾನಿಯ ಮಾತೇ ಹೀಗೆ. ನಿನಗೆ ವಿಷಯ ಅರ್ಥವಾಯಿತ ರಾಜವೈದ್ಯನೇ?”

ಬಾಗಿಕೊಂಡೇ “ಅರ್ಥವಾಯಿತು ಮಹಾರಾಣಿ” ಎಂದು ಶಿಖರಸೂರ್ಯ.

“ಈಗ ನೀನೇ ಹೇಳು. ನಿನ್ನಿಂದ ಈ ಕೆಲಸ ಆದೀತ? ಇಲ್ಲವ?”

ಬಾಗಿದ್ದ ಶಿಖರಸೂರ್ಯ ಹಣೆಯ ಕಡೆಯಿಂದ ಮಹಾರಾಣಿಯನ್ನು ನೋಡಿದ. ಕೂದಲು ಕೆದರಿ ಕಣ್ಣ ಸುತ್ತ ಕಪ್ಪು ವಲಯಗಳು ಮೂಡಿ ನೋಡಿದವರು ಭಯ ಬೀಳುವಂತೆ ವಿಕಾರವಾಗಿದ್ದಳು.

“ತಾವು ತಮ್ಮ ವೈದ್ಯನನ್ನು ನಂಬಬಹುದು ಮಹಾರಾಣಿ”

ತಕ್ಷಣ ಮಹಾರಾಣಿ ಕಿರಿಚಿ “ಏನು ಹಾಗಂದರೆ” ಅಂದಳು.

“ಯುವರಾಜರನ್ನು ಕೂದಲು ಕೊಂಕದ ಹಾಗೆ ಹಿಂದಿರುಗಿ ತರುತ್ತೇನೆ ಮಹಾರಾಣಿ.”

“ಚಿಕ್ಕದಾಗಿ ಹೇಳು ಎಷ್ಟು ದಿನ, ವಾರ ಮುದ್ದತು ಬೇಕು?”

“ಎರಡು ವಾರ ಮಹಾರಾಣಿ.”

“ಆಯ್ತು!”

ಎಂದು ಅಸಹಜ ಎತ್ತರದ ದನಿಯಲ್ಲಿ ಸಮಾಧಾನ ಮತ್ತು ದುಃಖ ಬೆರೆತ ದನಿಯಲ್ಲಿ ಹೇಳಿ ಎದ್ದು ಹಸನ್ಮುಖದಿಂದ ಶಿಖರಸೂರ್ಯನನ್ನು ಒಂದೆರಡು ನಿಮಿಷಗಳ ಕಾಲ ನೋಡುತ್ತ ಹಾಗೇ ನಿಂತುಕೊಂಡಳು. ಮೂಗಿನ ಎರಡೂ ಬದಿಯಿಂದ ಕಣ್ಣೀರು ಸುರಿಯುತ್ತಿತ್ತು. ಗದ್ಗದ ಕಂಠದಲ್ಲಿ “ನಿನಗೆ ಜಯವಾಗಲಿ ರಾಜವೈದ್ಯನೇ” ಎಂದು ಹೇಳಿ ಕಣ್ಣೀರು ಮಿಡಿಯುತ್ತ ಒಳಗೆ ಹೋದಳು.

ಅರ್ಥಕೌಶಲ ಶಿಖರಸೂರ್ಯನನ್ನು ತಬ್ಬಿಕೊಂಡು ಅವನೂ ಕಣ್ಣೀರು ಮಿಡಿದ.

ಮಾರನೇ ಬೆಳಿಗ್ಗೆಯೇ ಸುಕ್ರ ಬಂದ. ನ್ಯಾರೇ ಆದ ಮೇಲೆ ಸುಕ್ರನೊಬ್ಬನನ್ನೇ ಅಂತರಂಗಕ್ಕೆ ಕರೆದೊಯ್ದು ಎದುರಿಗೆ ಕೂರಿಸಿಕೊಂಡು ಇಡೀ ಸಂದರ್ಭವನ್ನು ತಕ್ಕಡಿಯಲ್ಲಿಟ್ಟು ತೂಗಿದಂತೆ ಪ್ರಶ್ನೆಗಳನ್ನು ಹೇಳಿ ಕೇಳಿದ. ಅಧ್ಯಯನ ಮಾಡಿದ ಮೇಲೆ ಸುಕ್ರ ಹೇಳಿದ:

“ನೀನಾಗಿ ಅವಸರ ಮಾಡಬೇಡ ನನ್ನೊಡೆಯಾ. ಬಿಳಿಗಿರಿಯಿಂದ ಏನೇನು ಸಂದೇಶಗಳು ಬರುತ್ತವೋ ನೋಡ್ತಿರೋಣ. ಬಿಳಿಗಿರಿರಾಯರು ಕನಕಪುರಿಯ ವೈರಿಗಳು. ನಿನಗಲ್ಲವಲ್ಲ? ಚಿಕ್ಕಮ್ಮಣ್ಣಿ ಈಗಲೂ ಬಿಳಿಗಿರಿರಾಯರಿಗೆ ತಂಗಿಯೇ; ಆದ್ದರಿಂದ ಕರುಳಿನ ಮಿಡಿತ ಇದ್ದೇ ಇರುತ್ತದೆ. ಚಿಕ್ಕಮ್ಮಣ್ಣಿಯ ಪರವಾಗಿ ಯಾರಾದರೂ ಒಬ್ಬ ಯೋಗ್ಯನನ್ನು ಬಿಳಿಗಿರಿಗೆ ಅಟ್ಟಬಹುದಲ್ಲ? ಬಿಳಿಗಿರಿಯವರು ಒಲಿದರೆ ನಮಗೆ ಅನುಕೂಲವೇ: ಒಲಿಯದಿದ್ದರೂ ಅನುಕೂಲವೇ! ಯಾಕಂತೀಯೋ? ಪರಿಸ್ಥಿತಿಯನ್ನು ಅಂದಾಜು ಮಾಡುವುದಕ್ಕೆ ಸ್ವಲ್ಪ ಸಮಯ ತಗೊಂಡಂಗಾಯ್ತು.”

ಇದಕ್ಕಿಂತ ಉತ್ತಮ ಸಲಹೆ ಇನ್ನಿಲ್ಲವೆನ್ನಿಸಿತು. ಹಾಗೆಯೇ ‘ರಾಯಭಾರಕ್ಕೆ’ ಸುಕ್ರನಿಗಿಂತ ಉತ್ತಮರ್ಯಾರೂ ಹೊಳೆಯಲಿಲ್ಲ.

“ನಿನಗಿಂತ ಯೋಗ್ಯ ಮತ್ತು ನಂಬಿಕಸ್ಥ ನನಗ್ಯಾರಿದ್ದಾರೆ ಸುಕ್ರ? ಇದು ರಕ್ತ ಸಂಬಂಧವನ್ನು ಜೋಡಿಸುವ ಕೆಲಸ. ಹುಷಾರಾಗಿ ಮಾಡಬೇಕು. ಏನಂತಿ?”

ಸುಕ್ರ ಸ್ವಲ್ಪ ಹೊತ್ತು ಸುಮ್ಮನೇ ಕೂತ. ಶಿಖರಸೂರ್ಯ ಮುಂದುವರೆಸಿದ-

“ನೀನು ಬಿಳಿಗಿರಿಯ ಭಂಟನಾಗಿದ್ದವ. ಇಲ್ಲಿಯ ಸಂದರ್ಭವನ್ನು ಒಲ್ಲವ. ಚಿಕ್ಕಮ್ಮಣ್ಣಿ ಅವರ ಮನೆ ಮಗಳು. ನಾನು ಚಿಕ್ಕಮ್ಮಣ್ಣಿಯ ಅಳಿಯ, ಅಂದರೆ ಈಗಿನ ರಾಯರಿಗೂ ಅಳಿಯ. ಈಗ ಯುವರಾಜನನ್ನು ಕರೆತರುವ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ.”

“ನೀ ಹೇಳಿದ್ದೂ ಬರೋಬ್ಬರಿ ಒಡೆಯಾ. ಯಾವುದಕ್ಕೂ ಒಬ್ಬ ರಾಯಭಾರಿಯನ್ನ ಬಿಳಿಗಿರಿಗೆ ಕಳಿಸೋದು ಒಳ್ಳೇದು ಅಂತ ಪ್ರಧಾನಿಗೆ ಹೇಳಿರು. ಅವನ ಮನಸ್ಸಿನಲ್ಲೂ ಯಾರಾದರೂ ಇರಬಹುದು. ಈ ಮಧ್ಯೆ ಚಿಕ್ಕಮ್ಮಣ್ಣಿಯ ಜೊತೆಗೂ ಮಾತಾಡೋಣ.”

ಇದೇ ಸರಿಯೆಂದು ಶಿಖರಸೂರ್ಯ ಅರ್ಥಕೌಶಲನಲ್ಲಿಗೆ ಹೋದ.

ಅರ್ಥಕೌಶಲ ಮನೆಯಲ್ಲಿರಲಿಲ್ಲ. ಊರಾಚೆಯ ಶಸ್ತ್ರಾಭ್ಯಾಸದ ಬಯಲಿನಲ್ಲಿ ಇರುವನೆಂದು ಗೊತ್ತಾಗಿ ಅಲ್ಲಿಗೇ ಹೋದ. ಅಲ್ಲಿ ನೋಡಿದರೆ ಆಗಲೇ ಸೇನಾಪತಿ ಬಲವಂತ ಪರವೂರುಗಳಲ್ಲಿದ್ದ ಭಂಟರನ್ನು ಕರೆಸಿ ತೀವ್ರವಾದ ಶಸ್ತ್ರಾಭ್ಯಾಸ ಮತ್ತು ಅಣಕಯುದ್ಧವನ್ನು ಸುರು ಮಾಡಿಸಿಯೇ ಬಿಟ್ಟಿದ್ದ. ಬದೆಗನಿಗೂ ಕರೆ ಹೋಗಿ ಬಂದಿದ್ದ. ಇಡೀ ದಂಡಿನಲ್ಲಿ ಬಲವಂತನ ತರುವಾಯ ಬದೆಗನನ್ನೇ ಅರ್ಥಕೌಶಲ ಮುಂತಾದವರು ವಿಶೇಷವಾಗಿ ಕಾಣುತ್ತಿದ್ದರು. ಶಿಸ್ತು, ಕವಾಯತು ಮತ್ತು ಮಲ್ಲಯುದ್ಧ ತರಬೇತಿಯಲ್ಲಿ ಅವನನ್ನು ಬಿಟ್ಟರಿನ್ನಿಲ್ಲವೆಂಬ ಖ್ಯಾತಿಯಿತ್ತು ಅವನಿಗೆ. ಯುದ್ಧಗಳಾದಾಗ ವಣಿಜರು ಪ್ರತ್ಯೇಕವಾಗಿ ಕಾಣಿಕೆ ನೀಡಿ ಬದೆಗನಿಗೆ ಗೌರವ ತೋರಿಸಿದ್ದೂ ಇದೆ. ಆತ ಬಯಲಿನಂಚಿಗೆ ಇರುವ ಗರಡೀ ಮನೆಯಲ್ಲಿ ತನ್ನ ಭಂಟರಿಗೆ ತರಬೇತಿ ಕೊಡುವಲ್ಲಿ ಅರ್ಥಕೌಶಲನಿರುವನೆಂದು ಕೇಳಿ ಅಲ್ಲಿಗೇ ಹೋದ.

ಸುಮಾರು ಹತ್ತು ಜನ ಯುವಕರಿಗೆ ಬದೆಗ ಮಲ್ಲಯುದ್ಧ ಹೇಳಿಕೊಡುತ್ತಿದ್ದ. ಒಬ್ಬಿಬ್ಬರು ಜೋಡಿಯಾಗಿ ಅಭ್ಯಾಸದ ಹೋರಾಟ ನಡೆಸಿದ್ದರು. ಬದೆಗ ಆಗಾಗ ಒಂದೊಂದು ಜೋಡಿಯ ಹತ್ತಿರ ಹೋಗಿ ತಿದ್ದುತ್ತಿದ್ದ; ಹೇಳಿಕೊಡುತ್ತಿದ್ದ. ಇಲ್ಲವೆ ತಾನೇ ಮಾಡಿ ತೋರಿಸುತ್ತಿದ್ದ. ಅವರ ಆಚೆ ತುದಿಯಲ್ಲಿ ನಿಂತಿದ್ದ ಅರ್ಥಕೌಶಲ ಶಿಖರಸೂರ್ಯನ ನೋಡಿ ಇಲ್ಲಿಗೇ ಬಂದ. ಮಲ್ಲರು ಇಬ್ಬರಿಗೂ ವಂದನೆ ಸಲ್ಲಿಸಿ ಅಭ್ಯಾಸದಲ್ಲಿ ತೊಡಗಿದರು.

ಅರ್ಥಕೌಶಲನ ಜೊತೆಗೆ ಪಿಸುದನಿಯಲ್ಲಿ ವಿಚಾರಿಸಿದಾಗ ಬಿಳಿಗಿರಿಯ ಹಳೆಯ ಸಂದೇಶವೇ ಬರವಣಿಗೆಯ ರೂಪದಲ್ಲಿ ಬಂದಿರುವುದು ಗೊತ್ತಾಯಿತು. ಸದರಿ ಬರವಣಿಗೆಯನ್ನ ನಂಬುವುದಕ್ಕೆ ಹ್ಯಾಗೋ ಹಾಗೆ ನಂಬದಿರುವುದಕ್ಕೂ ಕಾರಣಗಳಿದ್ದವು. ಅರ್ಥಕೌಶಲನೇ ನಂಬಿದ್ದ. ಅವನ ಅನುಭವ ಆಳವಾಗಿರುವುದರಿಂದ ಅವನನ್ನು ನಂಬದಿರುವುದೂ ಕಷ್ಟವೆ.

ಬಲವಂತನಾಗಲೇ ಸೇನೆಗೆ ಕವಾಯತು ಸುರುಮಾಡಿದ್ದನ್ನು ನೋಡಿ, ಬದೆಗನೂ ಸಿಡಿತಲೆ ಮದ್ದಿನ ಗುಂಡು ಆಯುಧಗಳನ್ನು ಎಣಿಕೆ ಮಾಡಿ ಜೋಡಿಸಿಟ್ಟುಕೊಂಡಿದ್ದಲ್ಲದೆ ಈ ಹಿಂದೆಯೇ ದೊಡ್ಡ ಚಕ್ರಗಳ ಎರಡು ವಿಶೇಷ ಗಾಡಿಗಳನ್ನು ಬಡಿಗರಿಂದ ಮಾಡಿಸಿದ್ದ. ಅಲ್ಲದೆ ನಿಖರವಾಗಿ ಗುರಿ ಹಿಡಿದು ಸಿಡಿತಲೆಗಳನ್ನು ಸಿಡಿಸಲು ಗಾಡಿಗಳಲ್ಲಿದ್ದ ಯಂತ್ರಗಳಿಗೆ ಉಕ್ಕಿನ ಉದ್ದ ನಳಿಕೆಗಳನ್ನು ಜೋಡಿಸಿ ತಯಾರು ಮಾಡಿಕೊಂಡಿದ್ದ. ಅವುಗಳ ಕಾರ್ಯ ನಿರ್ವಹಣೆಯನ್ನು ತಿಳಿಸಿಕೊಡಲು ಚೋಳದೇಶದ ಒಬ್ಬ ಕಮ್ಮಾರ ಬಂದಿದ್ದ. ಪ್ರಧಾನಿ ಸಿಡಿತಲೆಗಳ ಬಗ್ಗೆ ಕೇಳಿದ್ದೇ ತಡ ಕಮ್ಮಾರನೊಂದಿಗೆ ಪ್ರಧಾನಿಯನ್ನು ದೊಡ್ಡಗಾಲಿಯ ಗಾಡಿಗಳ ಬಳಿಗೆ ಕರೆದೊಯ್ದ. ಶಿಖರಸೂರ್ಯ ಆ ಕಡೆ ಹೋಗಿ ಅನತಿ ದೂರದಲ್ಲಿ ನಡೆಯುತ್ತಿದ್ದ ಮಲ್ಲಯುದ್ಧದ ಅಭ್ಯಾಸವನ್ನೂ, ಆಗಾಗ ಬದೆಗನನ್ನೂ ನೋಡುತ್ತ ನಿಂತ.

ಬದೆಗ ಕಟ್ಟುಮಸ್ತಾದ ಮೈಕಟ್ಟಿನ, ಗಟ್ಟಿಮುಟ್ಟ ಆರಡಿ ಎತ್ತರದ ಆಸಾಮಿ, ಚೌರಸಾಕಾರದ ಭುಜಗಳು, ಹೋರಿಯಂಥ ಹಿಣಿಲು ಬಂದ ಕತ್ತು, ಚಿಕ್ಕ ತಲೆಯಲ್ಲಿ ಗುಂಗುರುಕೂದಲು, ಮುಖದ ತುಂಬ ಮೈಲಿ ಕಲೆಗಳಿದ್ದ ವಿಕಾರ ಮುಖದಲ್ಲಿ ದೊಡ್ಡ ಮೂಗಿನ ಕೆಳಗೆ ಜೊಂಡು ಮೀಸೆಯಿದ್ದವು. ಆದರೆ ನಕ್ಕಾಗ ಕಾಣಿಸುವ ಮುತ್ತಿನ ಸಾಲಿನಂಥ ಬಿಳಿಹಲ್ಲುಗಳಿಂದಾಗಿ ಮುಖದಲ್ಲೊಂದು ಆಕರ್ಷಣೆ ಮತ್ತು ನಂಬಿಕೆಯನ್ನು ಪ್ರೇರಿಸುವ ಕಳೆ ಇತ್ತು. ಆದರೆ ಅವನ ಆಳವಾದ ಕಣ್ಣುಗಳನ್ನು ತಿಳಿಯಲಾಗುತ್ತಿರಲಿಲ್ಲ. ಉದ್ದವಾದ ತೋಳುಗಳ ತುದಿಗೆ ಚೌರಸಾಕಾರದ ಹಸ್ತಗಳಿಂದಾಗಿ ಮಹಾ ಒರಟನಂತೆ ಕಂಡರೂ ಒಟ್ಟಾರೆ ನಂಬಿಗಸ್ಥ, ಸಜ್ಜನ, ದಯಾಳು ಎಂದು ನೋಡಿದವರಲ್ಲಿ ಭಾವನೆ ಹುಟ್ಟಿಸುವವನು.

ಪ್ರಧಾನಿ ಮತ್ತು ರಾಜವೈದ್ಯನ ಮಾತುಕತೆ ನಡೆದಾಗ ಬದೆಗ ವಿಶೇಷವಾಗಿ ಶಿಖರಸೂರ್ಯನನ್ನೇ ಗಮನಿಸುತ್ತಿದ್ದ. ಬದೆಗನ ಚಾಣಾಕ್ಷತನ ಮತ್ತು ಯುದ್ಧ ನಿರ್ವಿವಾದವಾದುವೆಂದು, ತಾನು ಊಹಿಸಿದ್ದಕ್ಕಿಂತ ಹೆಚ್ಚು ಚೂಟಿ ಎಂದು ಶಿಖರಸೂರ್ಯನಿಗೆ ಖಾತ್ರಿಯಾಯಿತು. ಆತ ಒತ್ತು ಕೊಟ್ಟು ಮೂರು ಸಂಗತಿಗಳನ್ನು ಕೇಳಿದ: “ನನಗೆ ಎಂಟಾಳು, ನಿಂತುಕೊಳ್ಳೋದಕ್ಕೆ ಆಯಕಟ್ಟಿನ ಜಾಗ ಕೊಟ್ಟು ಸರಿಯಾದ ಗುರಿ ತೋರಿಸಿ ಹಿಂದೆ ಸರಿಯಿರಿ. ಆಮೇಲೆ ನನ್ನ ಕೈ ನೋಡಿರಿ.” ಅವನ ಉರಿಯುವ ಜಂಬಕ್ಕೆ ಎಣ್ಣೆ ಸುರಿದಂತೆ ಶಿಖರಸೂರ್ಯ ಮೆಚ್ಚುಗೆಯಿಂದ ಮುಗುಳುನಗುತ್ತಿದ್ದ. ಸಿಡಿತಲೆಯ ಬಗೆಗಿನ ಅವನ ತಿಳುವಳಿಕೆ ಮತ್ತು ಪರಿಣತಿ ಆಸುಪಾಸು ರಾಜ್ಯಗಳಲ್ಲಿಯೇ ಯಾರೊಬ್ಬರಿಗೂ ಇರಲಿಲ್ಲವೆಂದು ಅರ್ಥಕೌಶಲನೇ ಒಪ್ಪಿದ್ದ. ಯಾರು ಎಂಥ ಸಿಡಿತಲೆ ಮಾಡಬಲ್ಲರು, ಅವುಗಳ ಗರಿಷ್ಠ ಪ್ರಯೋಜನವೇನು? ಎಂಬ ಬಗ್ಗೆ ಖಚಿತ ಜ್ಞಾನ ಅವನಿಗಿದ್ದದ್ದೂ ಅವನ ಹೆಚ್ಚುಗಾರಿಕೆ. ಸಣ್ಣ ಸಿಡಿತಲೆಯಿಂದ ದೊಡ್ಡ ಅಪಾಯಗಳನ್ನು ಹ್ಯಾಗೆ ಮಾಡುವುದೆಂಬ ವಿದ್ಯೆಯ ಜೊತೆಗೆ ವೈರಿಗಳ ಸಿಡಿತಲೆಗಳನ್ನು ದ್ವಂಸ ಮಾಡುವ ವಿಶಿಷ್ಟ ವಿದ್ಯೆಯೂ ಅವನಿಗೆ ತಿಳಿದಿತ್ತು. ಆದ್ದರಿಂದಲೇ ಅನೇಕರು ಅವನ ಗುರಿಯ ಮೇಲೆ ಪಣ ಕಟ್ಟುತ್ತಿದ್ದ ಸಂಗತಿ ಸುಳ್ಳಲ್ಲವೆನಿಸಿತು.

ಇಲ್ಲಿ ಬದೆಗ ತನ್ನೆಲ್ಲ ವಿದ್ಯೆಯ ಪ್ರದರ್ಶನದಿಂದ ಶಿಖರಸೂರ್ಯನನ್ನು ಪ್ರಭಾವಿಸಲು ಹವಣಿಸುವಂತಿತ್ತು. ಈಗ ಅರ್ಥಕೌಶಲ ಕೇಳಿದ:

“ಆಯಿತಯ್ಯ, ಇವನ್ಯಾರು ಗೊತ್ತ?”

-ಎಂದು ಶಿಖರಸೂರ್ಯನನ್ನು ತೋರಿಸಿದ.

“ರಾಜ್ಯವೈದ್ಯರು ಯಾರಿಗೆ ಗೊತ್ತಿಲ್ಲ ಬುದ್ಧಿ? ಅವರಿಗೆ ನಾವೂ ಗೊತ್ತು. ಕೇಳಿ ಬೇಕಾದರೆ….”

-ಎಂದು ಹೇಳಿ ಸಂತೋಷದಿಂದ ಮೈಲಿ ಕಲೆಗಳ ಕಪ್ಪು ಮುಖದಲ್ಲಿ ಬಿಳಿನಗೆ ನಗುತ್ತ ಗೌರವದ ನೋಟದಿಂದ ಶಿಖರಸೂರ್ಯನನ್ನು ನೋಡಿದ. ಅರ್ಥಕೌಶಲ ಗೊಂದಲಗೊಂಡಿದ್ದು ಸ್ಪಷ್ಟವಿತ್ತು. ತಕ್ಷಣ ಶಿಖರಸೂರ್ಯ ಸಂದರ್ಭವನ್ನು ನಿಭಾಯಿಸಲು ಮುಂದೆ ಬಂದು,

“ಹೌದು ಪ್ರಧಾನರೆ, ನಾರು ಬೇರು ಹುಡುಕುತ್ತಿದ್ದಾಗ ಇವನ ಪೈಕಿ ಒಬ್ಬ ಮೂಗಿ ಹುಡುಗಿ ಭೇಟಿಯಾದಳು. ಪಾಪ ಇಂಥ ಮುಗ್ಧ ಹುಡುಗಿಯನ್ನು ವಿಷಕನ್ಯೆ ಮಾಡಿದ್ದಾರಲ್ಲ ಅಂತ ಕೆಡುಕೆನಿಸಿತು.”

ಎಂದು ಹೇಳಿ. ಇಬ್ಬರಿಗೂ ಆಘಾತ ಕೊಟ್ಟ. ಅರ್ಥಕೌಶಲ ಒಳಗೊಳಗೆ ಭಯಕಂಪಿತನಾಗಿ ಅವಸರದಲ್ಲಿ ಕೇಳಿದ:

“ವಿಷಕನ್ಯೆ ಅಂತ ನಿನಗವರು ಹೇಳಿದರೆ?”

“ಇಲ್ಲ”

“ಮೂಗಿ ಅಂತ?”

“ಅದನ್ನೂ ಹೇಳಲಿಲ್ಲ”

“ಮತ್ತೆ ನಿನಗಿವೆಲ್ಲ ಹ್ಯಾಗೆ ಗೊತ್ತಾಯ್ತು?”

“ನಾನು ನಿಮ್ಮ ರಾಜವೈದ್ಯನಲ್ಲವೆ ಪ್ರಧಾನರೆ? ನನ್ನ ವೈದ್ಯ ವಿದ್ಯೆಗೆ ಸವಾಲಾಗಬಲ್ಲ ರೋಗಿ ಅವಳು.”

ಬದೆಗನಿಗೆ ತಡೆಯಲಾಗಲಿಲ್ಲ.

“ಅಂದರೆ ನೀವು ಅವಳ ವಿಷವನ್ನ ತೆಗೆಯಬಲ್ಲೆ ಅಂತೀರಾ ಬುದ್ಧಿ?”

“ಕೊಂಚ ಕಡಿಮೆ ಮಾಡಬಹುದು.”

ಇಬ್ಬರಿಗೂ ಇನ್ನೊಂದು ಆಘಾತವಾಯ್ತು. ಇವನು ಕಡಿಮೆ ನೀರಿನಲ್ಲಿ ಮುಳುಗೋನಲ್ಲ ಎಂದು. ಆದರೆ ಆಶ್ಚರ್ಯ ವ್ಯಕ್ತಪಡಿಸುತ್ತ ಕೂರುವ ಸಮಯವಿದಲ್ಲ ಎಂದೂ ಚುರುಕಾಗಿ ಗ್ರಹಿಸಿ ಅರ್ಥಕೌಶಲ ಕೇಳಿದ:

“ಅಲ್ಲಿ ಇನ್ನೂ ಏನೇನು ಕಂಡೆ ರಾಜವೈದ್ಯನೇ?”

“ಅಲ್ಲೆಲ್ಲೋ ಶ್ವಾನಕೂಪ ಇದೆ ಅಂತ ಯಾರೋ ಹೇಳಿದರು. ನಾನು ಆ ಕಡೆ ಹೋಗಲಿಲ್ಲ.”

‘ಸಧ್ಯ’ ಎಂದು ಅರ್ಥಕೌಶಲ ಸಮಾಧಾನದ ನಿಟ್ಟುಸಿರು ಬಿಟ್ಟರೂ ಈತ ಸುಳ್ಳು ಹೇಳುತ್ತಿರಬಹುದೆಂದೂ ಊಹಿಸಿ ನೆಮ್ಮದಿಗೆಟ್ಟ. ಬದೆಗನಿಗೂ ಆಶ್ಚರ್ಯವಾಗಿತ್ತು. ಹಾಗೆಯೇ ಅವನಲ್ಲಿ ಆಶಾಂಕುರವೂ ಕುಡಿಬಿಟ್ಟಿತ್ತು. ಅವನ ಕಣ್ಣುಗಳಲ್ಲಿ ಅದನ್ನು ಕಾಣಬಹುದಿತ್ತು. ಯಾಕಂತಿರೋ? ಒಮ್ಮೆ ವಿಷಕನ್ಯೆಯಾದವಳು ಕೊನೆತನಕ ವಿಷಕನ್ಯೆಯಾಗಿಯೇ ಸಾಯಬೇಕೆಂಬುದು ಅವನು ಕೇಳಿ ನಂಬಿದ್ದ ಮಾತು. ಅವನೊಬ್ಬನೇ ಅಲ್ಲ, ಎಲ್ಲರೂ ಹಾಗೆ ನಂಬಿದ್ದರು. ಅದೀಗ ಹುಸಿಯಾಗಿತ್ತು. ಶಿಖರಸೂರ್ಯ ವಿಷಕನ್ಯೆಯ ವಿಷಯ ತಿಳಿದ ಬಗ್ಗೆ ಉಕ್ಕಿ ಬಂದ ಕೋಪ, ಅಸಮಾಧಾನಗಳನ್ನು ತೋರಲಾಗದೆ ಒಳ ಉದ್ವೇಗಕ್ಕೆ ಒಳಗಾಗಿ ಬದೆಗನನ್ನು ಕುರಿತು ಅರ್ಥಕೌಶಲ ಕೇಳಿದ:

“ಏನಯ್ಯಾ ವೀರಾ; ನಿನ್ನ ಯಾವುದಾದರೊಂದು ವರಸೆಯನ್ನು ವೈದ್ಯನಿಗೆ ತೋರಿಸಬಲ್ಲೆಯಾ?”

“ರಾಜವೈದ್ಯರ ಮುಂದೆ ನನ್ನ ವರಸೆಯೆ?”

ಎಂದು ಬದೆಗ ಹೇಳಿ ವೈದ್ಯನನ್ನೇ ನೋಡಿದ. “ಸರಿಬಿಡಪ್ಪ” ಎಂದು ಅರ್ಥಕೌಶಲ ಎದ್ದು “ಸಂಜೆ ಹೇಳಿ ಕಳಿಸ್ತೀನಿ” ಎಂದು ಶಿಖರಸೂರ್ಯನಿಗೆ ಹೇಳಿ ಹೊರಟ.

ಆ ದಿನ ಅರ್ಥಕೌಶಲ ನೆಮ್ಮದಿಗೆಟ್ಟ. ವೈದ್ಯದ ನೆಪದಲ್ಲಿ ಶಿಖರಸೂರ್ಯ ಎಲ್ಲಿ ಬೇಕಾದಲ್ಲೆ ಅಲೆದಾಡಿದ್ದು, ವಿಷಕನ್ಯೆಯರಿರುವ ಸ್ಥಳವನ್ನು ನೋಡಿದ್ದು ಸರಿಬರಲಿಲ್ಲ. ಆದರೆ ಅವನನ್ನು ನಿಯಂತ್ರಿಸುವಂತೆಯೂ ಇರಲಿಲ್ಲ. ತನಗೆ ತಿಳಿಯದಂತೆ ಗಮನಿಸಬಾರದ್ದನ್ನು ರಾಜ್ಯವೈದ್ಯ ಗಮನಿಸಿಯಾಗಿತ್ತು. ಒಂದಿಲ್ಲೊಂದು ದಿನ ಗೊತ್ತಾಗಲೇ ಬಹುದಾದದ್ದು ಈಗ ಗೊತ್ತಾಯಿತೆಂಬ ಸಮಾಧಾನವಾದರೂ ತನಗೆ ಹೇಳಕೇಳದೆ ಆತ ಸಂಗತಿಗಳನ್ನ ತಿಳಿದದ್ದರ ಬಗ್ಗೆ ಅಸಮಾಧಾನವಾಯಿತು. ಅಲ್ಲದೆ ಆತ ಯಾವುದನ್ನೂ ತಿಳಿಸಿ ಮಾಡುವ ಪೈಕಿ ಅಲ್ಲ. ಹಾಗಂತ ಅವನ ಸಾಮರ್ಥ್ಯಗಳನ್ನ ನಿರಾಕರಿಸುವಂತಿರಲಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಯುವರಾಜನನ್ನು ಬಿಡಿಸಿ ತರುವುದು ಅವನಿಂದಲ್ಲದೆ ಬೇರಾರಿಂದಲೂ ಸಾಧ್ಯವಿಲ್ಲವೆಂಬ ನಂಬಿಕೆ ಅರ್ಥಕೌಶಲನಲ್ಲಿ ಮಾತ್ರವಲ್ಲ ಮಹಾರಾಣಿ, ವರ್ತಕ ಸಂಘ ಮತ್ತು ನಾಗರಿಕರಲ್ಲಿಯೂ ಇತ್ತು. ಯುವರಾಜ ಸಿಕ್ಕದೆ ದಿನಗಳು ಕಳೆಯುತ್ತಿದ್ದಂತೆ ಮಹಾರಾಣಿ ಹೆಚ್ಚು ಹೆಚ್ಚು ಉದ್ವಿಗ್ನಗೊಳ್ಳುತ್ತಿದ್ದಳು. ಅವಳನ್ನು ಸಮಾಧಾನ ಪಡಿಸುವ ವಿಶಿಷ್ಟ ಶಕ್ತಿಯಿದ್ದುದೂ ಶಿಖರಸೂರ್ಯನಲ್ಲಿ ಮಾತ್ರ…..