ಒಳ್ಳೆಯ ವಾರ, ಒಳ್ಳೆಯ ಗಳಿಗೆ ಒಳ್ಳೆಯ ಮೂಹೂರ್ತದಲ್ಲಿ ಶಿಖರಸೂರ್ಯ ತನ್ನ ಭಾಗ್ಯದ ಸಿರಿ ಛಾಯಾದೇವಿಯನ್ನು ಮದುವೆಯಾದ. ಬಹಳ ದಿನಗಳಿಂದ ಸಮಾರಂಭಗಳನ್ನೇ ಕಾಣದಿದ್ದ ಅರಮನೆಯಲ್ಲಿ ಮದುವೆ ಮಂಗಳ ಕಾರ್ಯ ಜರುಗಿ ಕನಕಪುರಿಯ ಜನ ಸಡಗರಗೊಂಡರು. ಜಗತ್ತಿನ ಬೇಕಾದಷ್ಟು ಜನ ಮಹಾರಾಜರು ಇಲ್ಲವೆ ಅವರ ಪ್ರತಿನಿಧಿಗಳು, ಪ್ರಮುಖರು, ಮಾಂಡಳಿಕ ಮನ್ನೆಯರು, ಶೆಟ್ಟಿ ಸಾವ್ಕಾರ, ನಾಲ್ಕೂರ ಗುರಿಕಾರರು, ಹಿರಿಯರು, ದೊಡ್ಡವರು, ಭಾಗವಹಿಸಿ ಮದುವೆಗೆ ಶೋಭೆ ತಂದರು. ಬಿಳಿಗಿರಿಯ ಶಿವದೇವರಾಯ ಅನಾರೋಗ್ಯವೆಂದು ಬರಲಿಲ್ಲ. ಅವನ ಪ್ರತಿನಿಧಿಯಾಗಿ ಮಂತ್ರಿ ಬಂದಿದ್ದ. ಇದರಿಂದ ಅರ್ಥಕೌಶಲ ಮತ್ತು ಮಹಾರಾಣಿಗೆ ಆತಂಕವಾದರೂ ತೋರಿಸಿಕೊಳ್ಳಲಿಲ್ಲ. ಚಿಕ್ಕಮ್ಮಣ್ಣಿ ಮಾತ್ರ ಅಣ್ಣ ಬಾರದ್ದಕ್ಕೆ ಆತಂಕಗೊಳ್ಳಲೇ ಇಲ್ಲ, ಮಾತ್ರವಲ್ಲ ಉತ್ಸಾಹದಿಂದ ಮಂಗಳ ಕಾರ್ಯದಲ್ಲಿ ಭಾಗಿಯಾದಳು. ಒಳ್ಳೆಯ ಮೂಹೂರ್ತದಲ್ಲಿ ಮದುಮಗಳಿಗೆ ಗಿಣಿ ನೂರು ಬರೆದ ಅರವತ್ತು ಮೊಳದ ಪಟ್ಟೆಸೀರೆ ಉಡಿಸಿ ಕೈಗೆ ಗೆಜ್ಜೆ ಕತ್ತಿಕೊಟ್ಟು ಶೃಂಗರಿಸಿ, ಆರತಿ ಮಾಡಿ ದಂಡಿಗೆಯಲ್ಲಿ ಕೂರಿಸಿ ಧಾರೆಯ ಮಂಟಪಕ್ಕೆ ಕರೆದೊಯ್ಯುವುದರಿಂದ ಹಿಡಿದು, ದಂಡಿಗೆಯಿಂದ ಕೆಳಗಿಳಿಸಿ ಒಳ್ಳೆಯ ಗಳಿಗೆ ಮುಹೂರ್ತದಲ್ಲಿ ಚಪ್ಪರ ಹೊಗಿಸುವತನಕ ದಣಿವರಿಯದೆ ಕಾರ್ಯವೆಸಗಿದಳು. ಯುವರಾಜ ಕೂಡ ಬಂದ ಅತಿಥಿಗಳಿಗೆ ಆಸರೆಗೆ ಬೆಲ್ಲನೀರು ಕೊಡುವುದರಿಂದ ಹಿಡಿದು ಊಟ ವಸತಿಯವರೆಗಿನ ಕಾರ್ಯಗಳನ್ನ ಉತ್ಸಾಹದಿಂದ ನೋಡಿಕೊಂಡ. ಆಮೇಲೆ ವಧೂವರ ಧಾರೆಯ ಮಂಟಪದಲ್ಲಿ ಕುಳ್ಳಿರಿಸಿ ಕೂಡಿದ ಜನ ಕೈ ಮುಟ್ಟಿ ಸೇಸೆ ಹಾಕಿ ಹೆಣ್ಣೊಪ್ಪಿಸಿ ಕೊಟ್ಟರು.

ಮದುವೆಯ ಶಾಸ್ತ್ರಗಳೆಲ್ಲಾ ಮುಗಿದ ಮೇಲೆ ಮಗಳನ್ನು ಪ್ರಸ್ತಕ್ಕೆ ಕಳಿಸುವ ಮುನ್ನ ಚಿಕ್ಕಮ್ಮಣ್ಣಿ ತೃಪ್ತಿ ಮತ್ತು ಕೃತಜ್ಞತೆಯಿಂದ ಶಿಖರಸೂರ್ಯನ ಕೈ ಹಿಡಿದು “ಆಯ್ತು ಅಳಿಯಂದಿರೇ, ನಾನು ನಿಮಗೆ ಹೇಳಲಿಕ್ಕೇನಿದೆ? ಎಲ್ಲವನ್ನು ನೀವೇ ಬಲ್ಲಿರಿ. ಮಗಳು ಬಿಚ್ಚಿದ ಕೂದಲು ಕಟ್ಟಿಕೊಳ್ಳಲೂ ತಿಳಿಯದ ಹಸುಳೆ, ನೀವೇ ಸುಧಾರಿಸಿಕೊಳ್ಳಿ” ಎಂದು ಹೇಳಿ ಕೈಮುಗಿದು ಹೊರಡಲಿದ್ದಳು. ಅಷ್ಟರಲ್ಲಿ ಶಿಖರಸೂರ್ಯ

“ಇನ್ನುಮೇಲೆ ಈ ಮನೆಯೂ ನಿಮ್ಮದೇ. ನೀವೂ ಇಲ್ಲಿಯೇ ಇರಬಹುದಲ್ಲ, ತಾಯೀ.” ಅಂದ.

“ಉಂಟೆ ಅಳೀಮಯ್ಯನವರೆ, ಮಹಾರಾಜರನ್ನ ನೋಡಿಕೊಳ್ಳೋದಕ್ಕೆ ನಾನಿರಬೇಡವೆ?” ಎಂದು ಹೇಳಿ ವಿಶ್ವಾಸದಿಂದ ನಡೆದಳು.

ಮೊದಲರಾತ್ರಿ ಶಿಖರಸೂರ್ಯನಿಗೆ ಬೆಳ್ಳಿಯ ನೆನಪಾಯಿತು. ಛಾಯಾದೇವಿ ನಿದ್ರಿಸುತ್ತಿದ್ದಳು. ಆತ್ಮತೃಪ್ತಿಯ ಹರುಷದಿಂದ, ಯೌವನದ ಸಂಪನ್ನತೆಯಿಂದ, ಸುಂದರವಾದ ಕನಸು ಕಾಣುತ್ತಿದ್ದಳಾದ್ದರಿಂದ ಅವಳ ಮುಖ ಮಂದಹಾಸದಿಂದ ಅರಳಿತ್ತು. ಪಕ್ಕದಲ್ಲಿ ಕೂತಿದ್ದ ಈತ ಮುಖ ಗಂಟಿಕ್ಕಿ ಬಳಲಿದವನಂತೆ ಕಾಣುತ್ತಿದ್ದ. ಶಿವಾಪುರದಿಂದ ಓಡಿ ಬರುವ ರಾತ್ರಿ ಕದ್ದು ಬೆಳ್ಳಿಯಲ್ಲಿಗೆ ಹೋದದ್ದು, ಅವಳ ಒದೆ ಮತ್ತು ಕುರುಮುನಿಯ ಏಟು ನೆನಪಾಗಿ ಇನ್ನೊಮ್ಮೆ ಅವಮಾನಿತನಾದಂತಾಗಿ ಮುಖ ಮತ್ತು ಹಸ್ತಗಳ ನರ ಬಿಗಿದವು. ಸೇಡಿನ ಭಾವಾವೇಶಕ್ಕೆ ಒಳಗಾದರೂ ತಾನು ಕನಕಪುರಿಯ ರಾಜಕುಮಾರಿಯನ್ನು ಮದುವೆಯಾದುದು ತಿಳಿದರೆ ಬೆಳ್ಳಿಯ ಭಾವನೆ ಏನಾಗಬಹುದೆಂದು, ಹ್ಯಾಗಾಗಬಹುದೆಂದು ಊಹಿಸಲು ನೋಡಿದ. ಸಾಧ್ಯವಾಗಲಿಲ್ಲ. ಬಲಿಷ್ಠ ಹೆಂಗಸದು. ಬಹುಶಃ ಆಕೆ ಇದಕ್ಕೂ ತನಗೂ ಏನು ಸಂಬಂಧ ಎಂದು ನಿರ್ವಿಕಾರಳಾಗಿ ಇರಬಹುದು. ಕೂಡಲೇ ತನ್ನ ಬಗ್ಗೆ ತಾನೇ ಭಾವುಕನಾಗುತ್ತಿರುವೆನೆನ್ನಿಸಿ ಅಸಹ್ಯಪಟ್ಟುಕೊಂಡ.

ರಾಜಕುಮಾರಿಯನ್ನು ಮದುವೆಯಾದುದು ದೊಡ್ಡ ಸಾಧನೆಯಲ್ಲವೆಂದು ಶಿಖರಸೂರ್ಯನಿಗೆ ತಿಳಿದಿತ್ತು. ಇದು ಚಿಕ್ಕಮ್ಮಣ್ಣಿಯ ಸಂಕಲ್ಪವಾದರೂ ಮಹಾರಾಣಿ ಮತ್ತು ಅರ್ಥಕೌಶಲರ ಷಡ್ಯಂತ್ರದ ಒಂದು ತುಂಡು ಕೂಡ ಇದರಲ್ಲಿದೆ ಎಂದು ತಿಳಿದಿತ್ತು. ತನ್ನ ವಿಚಾರದಲ್ಲಿ ಗುಪ್ತಶೋಧ ನಡೆಯುತ್ತಿದೆಯೆಂದು ಗೊತ್ತಿದ್ದವನಿಗೆ ಇದರಿಂದ ಅನುಕೂಲವಾದುದು ನಿಜ. ಆದರೆ ಇದೂ ನಿಜ-ಚಿಕ್ಕಮ್ಮಣ್ಣಿಯ ಮಗ ತರುಣಚಂದ್ರ ಇದ್ದಕ್ಕಿದ್ದಂತೆ ಕಾಣೆಯಾದುದಕ್ಕೆ ಈ ದುಷ್ಟಕೂಟವೇ ಕಾರಣವೆಂಬ ಸಂಗತಿಯೂ ಆತನಿಗೆ ಖಚಿತವಾಗಿತ್ತು. ಆದ್ದರಿಂದಲೇ ತನ್ನ ಬೆನ್ನಿಗೂ ಎರಡು ಕಣ್ಣು ಮೂಡಿಸಿಕೊಂಡು ಸುತ್ತ ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ.