ಆಮೇಲಿನ ಎರಡು ವರ್ಷಗಳಲ್ಲಿ ಶಿಖರಸೂರ್ಯನಿಗೆ ಅವಳಿಜವಳಿ ಮಕ್ಕಳಾದುದೇ ಮುಖ್ಯ ಘಟನೆ. ಗಂಡು ಹೆಣ್ಣು ಎಳೇಕೂಸುಗಳ ಮುಖದರ್ಶನವಾದ ದಿನ ಮಾತ್ರ ಶಿಖರಸೂರ್ಯ ಆನಂದದಿಂದ ಪುಳಕಿತನಾಗಿದ್ದ. ಮಡದಿ ಛಾಯಾದೇವಿಯನ್ನು ತಬ್ಬಿಕೊಂಡು ಮೂಕವಿಸ್ಮಿತನಾಗಿ, ಮಕ್ಕಳ ಮುಖಗಳನ್ನು ಮತ್ತೆ ಮತ್ತೆ ನೋಡುತ್ತ ಭಾವುಕನಾಗಿದ್ದ. ಭೀತಿ ಮತ್ತು ಪ್ರೀತಿ ಎರಡೂ ಗೊತ್ತಿಲ್ಲದ ಪಶುವಿನಂತಿದ್ದವನು ಪ್ರಥಮ ಬಾರಿ ತನ್ನನ್ನು ಮೀರಿದ ಒಂದರಿಂದ ವಿಪರೀತವಾದದ್ದು, ತನ್ನ ಅಹಂಕಾರಕ್ಕೆ ತೃಪ್ತಿ ತುಳುಕುವಷ್ಟು ಕನಸು ಕಾಣುತ್ತ ಕಂಡು, ಬೆರಗಾಗಿ ಕೆನ್ನೆ ನೋಯುವಷ್ಟು ಮುಗುಳು ನಗುತ್ತ ಅಂಗೈ ಮೇಲಿನ ಗೊಂಬೆಯಂತೆ ಕೂತಿದ್ದಳು.

ಸದಾ ಒಂದಿಲ್ಲೊಂದು ಲಾಭಾದಾಯಕ ಯುದ್ಧದಲ್ಲೋ ಅದರ ತಯಾರಿಯಲ್ಲೋ ತೊಡಗುವ, ಸಂದರ್ಭಗಳು ಒದಗದಿದ್ದಲ್ಲಿ ಎರಡು ರಾಜ್ಯಗಳ ಮಧ್ಯೆ ಜಗಳ ತಂದಾದರೂ ಲಾಭ ಪಡೆವ, ಅದೂ ಸಾಲದೆಂದು ಮೂರು ವರ್ಷಕ್ಕೊಂದು ದೊಡ್ಡ ಯುದ್ಧವನ್ನೇ ಮಾಡುವ ಕನಕಪುರಿಗೆ ಶಿಖರಸೂರ್ಯನಿಗೆ ಮಕ್ಕಳಾದದ್ದು ಹೇಳಿಕೊಳ್ಳುವಂಥ ಘಟನೆ ಅಲ್ಲ ನಿಜ. ಆದರೆ ಮಹಾರಾಜ, ಪ್ರಧಾನಿ ಮತ್ತು ಮಹಾರಾಣಿಗಿದು ಮಹತ್ವದ ಘಟನೆಯಾಗಿತ್ತು. ಮಹಾರಾಣಿ ಪ್ರಧಾನಿಗಳಿಗಂತೂ ಭಯಂಕರ ಘಟನೆಯಾಗಿತ್ತು!

ಮಹಾರಾಜನ ಹಸಿವು ಮತ್ತು ದೇಹ ದಿನೇ ದಿನೇ ಹೆಚ್ಚುತ್ತಿದ್ದವಾದರೂ ಮಹಾರಾಣಿಗಿದು ಸಾಲದಾಗಿತ್ತು. ಭೇಟಿಯಾದಾಗೊಮ್ಮೆ “ಇವತ್ತು,” (ಇವತ್ತು ಸಾಯುವನೆ?) ಎಂಬಂತೆ ಸನ್ನೆಯಲ್ಲಿ ಅರ್ಥಕೌಶಲನನ್ನು ಕೇಳುತ್ತಿದ್ದಳು. ಇವನೂ ಸನ್ನೆಯಲ್ಲೇ ಇಲ್ಲವೆನ್ನುತ್ತಿದ್ದ. ಗೌಪ್ಯತೆ ಕಾಯಬೇಕಾಗಿದ್ದರಿಂದ ಮತ್ತು ಪರಿಣಾಮ ಕಣ್ಣೆದುರಿನಲ್ಲಿಯೇ ಕಾಣುತ್ತಿದ್ದುದರಿಂದ ದಿನ ಎಣಿಸುತ್ತ ಕೂತಿದ್ದಳು ಮಹಾರಾಣಿ.

ಈ ಮಧ್ಯೆ ಶಿಖರಸೂರ್ಯ ವೈದ್ಯರಿಗೆಲ್ಲ ಸಸ್ಯಕಾಶಿಯಾದ ಹದ್ದಿನ ಕೊಳ್ಳಕ್ಕೆ ಹೋಗಿದ್ದ. ಅದು ಅಕ್ಷರಶಃ ಸಸ್ಯಗಳ ನಿಧಿ. ದಂತಕತೆಗಳ ವೈದ್ಯ ನಾಗಾರ್ಜುನ ರಸವಿದ್ಯೆ ಕಲಿತದ್ದು, ಪ್ರಯೋಗಿಸಿ ಯಶಸ್ವಿಯಾದದ್ದು, ಅದರ ಮುಂದಿನ-ಧಾನ್ಯದಿಂದ ಚಿನ್ನಮಾಡುವ ವಿದ್ಯೆಯನ್ನು ಕಲಿತದ್ದೂ ಇಲ್ಲಿಯೇ, ಇದೇ ಕೊಳ್ಳದಲ್ಲಿ ಎಂದು ಕೊಳ್ಳದ ಖ್ಯಾತಿ. ಬಿಳಿಗಿರಿ ರಾಜ್ಯಕ್ಕೆ ಸೇರಿದ ಆ ಕೊಳ್ಳದ ದಿನ್ನೆಯ ಮೇಲೆ ರಾಜನ ಸುಂದರವಾದ ಚಿಕ್ಕ ಅರಮನೆಯಿದೆ. ಎರಡು ದಿನ ಅಲ್ಲಿ ತಂಗಿ ನಾರು ಬೇರು ಸಂಗ್ರಹಿಸಿಕೊಂಡು ಬಂದಿದ್ದ. ಮನೆಗೆ ಬರುವ ಮುನ್ನ ಅರಮನೆಗೆ ಹೋಗಿ ಮಹಾರಾಜನ ಆರೋಗ್ಯ ಪರೀಕ್ಷಿಸಿ ಹೊರಗೆ ಬಂದರೆ ಎದುರಿಗೆ ಪ್ರಧಾನಿ ಸಿಕ್ಕ. ಯಥಾಪ್ರಕಾರ ಕಣ್ಣಲ್ಲೇ ಪ್ರಶೋತ್ತರವಾಗಿ ಮನೆಗೆ ಬಂದನಾದರೂ ಮನಸ್ಸಿಗೆ ಕಿರಿಕಿರಿಯನ್ನೆಸಿತು.

ಎಷ್ಟೇ ಚೆನ್ನಾಗಿ ಸಜ್ಜನಿಕೆಯ ಅಭಿನಯ ಮಾಡಿದರೂ ಪ್ರಧಾನಿಗೆ ತನ್ನಲ್ಲಿ ನಂಬಿಕೆಯಿರಲಿಲ್ಲವೆಂದು ಶಿಖರಸೂರ್ಯನಿಗೆ ತಿಳಿದಿತ್ತು. ವಿಷದ ವ್ಯವಹಾರದಲ್ಲಿ ಉಪಯೋಗಿಸಿಕೊಂಡ ವೈದ್ಯನನ್ನು ತಕ್ಷಣ ಮುಗಿಸಿಬಿಡುವುದು ಪ್ರಧಾನಿಯ ಪದ್ಧತಿ. ಆದರೆ ತಾನು ವಜ್ರದೇಹಿ, ಹೊರಗಟ್ಟಿದರೆ ಗೌಪ್ಯತೆ ಬಯಲಾಗುವ ಭಯ. ಬಿಸಿತುಪ್ಪ ನುಂಗಲಾರ-ಉಗಿಯಲಾರ! ಹಾಗೆಂದು ಅವ ಸುಮ್ಮನಿರಲಿಲ್ಲ. ತನ್ನ ಸುತ್ತ ಕಟ್ಟು ನಿಟ್ಟಾದ ಕಾವಲಿಟ್ಟಿದ್ದರೂ ಸುಕ್ರನ ನೇತೃತ್ವದಲ್ಲಿ ತಾನೊಂದು ಖಾಸಗಿ ಪಡೆಯನ್ನ ಸಾಕಿದ ವಿಷಯ ಪ್ರಧಾನಿಗೆ ತಿಳಿದಿರಲಿಲ್ಲ. ಮಹಾರಾಜನ ವಿಷಯದಲ್ಲಿ ತನ್ನ ವೈದ್ಯವೇನೋ ಗುರಿಯನ್ನ ಮುದ್ಧತಿನಂತೆ ಮುಟ್ಟಲಿತ್ತು. ಆದರೆ ಆಮೇಲೆ ಪ್ರಧಾನಿಯ ಗುರಿಯೇನೆಂಬುದು ತಿಳಿಯದಾಗಿತ್ತು. ಇದನ್ನೇ ಯೋಚಿಸುತ್ತ ಮನೆಗೆ ಬಂದ.

ಈ ದಿನ ಮಹಾರಾಜ ಚಿಕ್ಕಮ್ಮಣ್ಣಿಯೊಂದಿಗೆ ರಾಜವಯದ್ಯನ ಮನೆಗೆ ಬಂದು ಮೊಮ್ಮಕ್ಕಳನ್ನು ನೋಡಿ ಕೈತುಂಬ ಕಾಣಿಕೆ ನೀಡಿ ಹೋಗಿದ್ದ. ಛಾಯಾದೇವಿಗಂತೂ ಬಹಳ ಖುಶಿಯಾಗಿತ್ತು. ಮಹಾರಾಜ ತನ್ನ ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದಲ್ಲದೆ ಮಗನ ಕೈಗೆ ವಿಜಯದ ಕಡಗವನ್ನು ಹಾಕಿ ಕಣ್ತುಂಬ ನೋಡಿ, ಆಮೇಲೆ ಕಡಗವನ್ನು ಕಳಚಿಕೊಂಡು ಹೋಗಿದ್ದ! ಇದನ್ನ ನೆನೆದಂತೆ ಛಾಯಾದೇವಿಯ ಕನಸುಗಳು ಕೆರಳಿದವು. ಆನಂದೋತ್ಕರ್ಷದಲ್ಲಿ ಕನ್ನಡಿಮುಂದೆ ಅತ್ತೂ ಬಿಟ್ಟಳು.

ಮಹಾರಾಜ ಇಂದು ತಮ್ಮ ಮಗನ ಬಗ್ಗೆ ಆಡಿದ ಮಾತನ್ನು ಹೇಳಿ ತನ್ನ ಕನಸುಗಳನ್ನು ಗಂಡನಿಗೆ ಹೇಳಬೇಕೆಂದುಕೊಂಡಳು. ಆಗ ಅವನ ಮುಖ ಹ್ಯಾಗಾಗಬಹುದು? ಕಲ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಸದಾ ಬಿಗಿದ ಹುಬ್ಬಿನ, ಮಾತಾಡಬೇಡವೆಂದು ತಾಕೀತು ಮಾಡುವ ಚೂಪು ಮೂಗಿನ, ನಾನೆಲ್ಲಾ ಬಲ್ಲೆನೆಂಬ ಛಲದ ಕಣ್ಣಿನವನಿಗೆ ತನ್ನ ಕನಸುಗಳನ್ನು ಹ್ಯಾಗೆ ಹೇಳುವುದೆಂದು ಛಾಯಾದೇವಿ ನಿಟ್ಟುಸಿರುಬಿಟ್ಟಳು. ಆದರೆ ಇಂದಿನ ವಿಷಯ ತುರ್ತಿನದಾಗಿತ್ತು. ಮಹಾರಾಜ ತನ್ನ ಮಗನನ್ನು ಎತ್ತಿಕೊಂಡು ಮುದ್ದಾಡುವಾಗ ಏನೋ ಆಡಿದ್ದ! ಆ ಮಾತನ್ನು ಮತ್ತು ಅದರ ನೆಪದಲ್ಲಿ ಇನ್ನಷ್ಟು ಸಂಗತಿಗಳನ್ನು ಗಂಡನಿಗೆ ಹೇಳಬೇಕಿತ್ತು.

ಮಹಾರಾಜ ರಾಜಕುಮಾರ ಆದಿತ್ಯಪ್ರಭನನ್ನು ಯುವರಾಜನನ್ನಾಗಿ ಮಾಡಲು ಒಪ್ಪಿರಲಿಲ್ಲ. ಮಹಾರಾಣಿಯ ಪರವಾಗಿ ಯಾರಾದರೂ ಆ ವಿಷಯ ಎತ್ತಿದರೆ ಕೇಳಿಸದಂತೆ ಇರುತ್ತಿದ್ದ, ಇಲ್ಲವೆ ಮುಗುಳು ನಗುತ್ತಿದ್ದ. ಇದು ಮಹಾರಾಣಿ, ಪ್ರಧಾನಿ ಮತ್ತು ರಾಜಕುಮಾರ ಮೂವರನ್ನೂ ಕೆರಳಿಸುತ್ತಿತ್ತು. ಮಹಾರಾಣಿಯಂತೂ ಚಡಪಡಿಸಿ ತಾಳ್ಮೆಗೆಡುತ್ತಿದ್ದಳು. ಅದು ಅವಳ ಕಣ್ಣುಗಳಲ್ಲಿ ಪ್ರತಿಬಿಂಬಿತವಾಗುತ್ತಿತ್ತು. ಈ ದಿನ ಮಹಾರಾಜ ಛಾಯಾದೇವಿಯ ಮಗನನ್ನು ಎತ್ತಿಕೊಂಡು ಮುದ್ದಾಡಿ ಆಸು ಪಾಸು ಬೇರೆ ಯಾರೂ ಇಲ್ಲದ್ದನ್ನು ನೋಡಿ “ಇವನೇ ನಮ್ಮ ಯುವರಾಜ” ಎಂದಿದ್ದ!

“ನಿಮ್ಮ ಮನಸ್ಸಿನಲ್ಲಿ ಹಾಗಿದ್ದರೆ ರಾಜಸಭೆಯಲ್ಲಿ ಹೇಳಬಹುದಲ್ಲ ಅಪ್ಪಾಜಿ” ಎಂದು ಮಗಳು ಪುಸಲಾಯಿಸಿ ನೋಡಿದ್ದಳು. ಮಹಾರಾಜ ಅರ್ಥಪೂರ್ಣವಾಗಿ ಮಗಳನ್ನು ನೋಡಿ ತೋರುಬೆರಳು ತುಟಿಗಿಟ್ಟುಕೊಂಡು,-

“ತರುಣಚಂದ್ರನಿಗಾದ ಗತಿಯೇ ಇವನಿಗೂ ಆದೀತು, ಸುಮ್ಮನಿರಮ್ಮ!” ಎಂದಿದ್ದ. ಕೇಳಿ ಇವಳೂ ಗಾಬರಿಯಾಗಿದ್ದಳು.

ಈಗೀಗ ಸಾಯುವ ಎಲ್ಲ ಲಕ್ಷಣಗಳೂ ಮುದಿರಾಜನಲ್ಲಿ ಕಾಣತೊಡಗಿದ್ದವು. ರಾಜಕುಮಾರ ಆದಿತ್ಯಪ್ರಭ ಇದ್ದಕಿದ್ದಂತೆ ಒಂದು ಕಡಿಮೆ ನಲವತ್ತರ ಪಡೆ ತಗೊಂಡು ರಾಜಕಾರಣಕ್ಕೆಂದು ರಾಜಧಾನಿಯಿಂದ ದೂರ ಹೋಗಿದ್ದ. ಅದೂ ಯಾಕಾಗಿ ಹೋದನೆಂಬ ಸಂಗತಿಯೂ ತಿಳಿದಿತ್ತು. “ಅವನು ಹಿಂದಿರುಗಿ ಬರುವುದರೊಳಗೆ ಮಹಾರಾಜ ತನ್ನ ಮಗನ ಹೆಸರನ್ನು ಯುವರಾಜನೆಂದು ಘೋಷಿಸಲಾದೀತೆ?” ಎಂಬ ಆಸೆಯೂ ಇತ್ತು. ಕಾಲ ಮಿಂಚಿದರೆ ಏನೇನೋ ಆಗಬಹುದೆಂಬ ಆಂತಕವೂ ಇತ್ತು. ಅಷ್ಟರಲ್ಲಿ ಶಿಖರಸೂರ್ಯ ಬಂದೇ ಬಿಟ್ಟ.

ಬಂದವನು ಪೀಠದಲ್ಲಿ ಮುಂಗೈಮೇಲೆ ಗದ್ದ ಊರಿ ಕೂತು ತನ್ನ ರಾಣಿಯ ಕಡೆಗೆ ಪರಿಚಯವಿಲ್ಲದವಂತೆ ನೋಡಿದ.

“ರಾಜಧಾನಿಗೆ ಬಂದು ಹೊತ್ತಾಯಿತೇ ಸ್ವಾಮಿ?”

-ಎಂದಳು ಛಾಯಾದೇವಿ ಅವನ ಪಕ್ಕದ ಪೀಠದಲ್ಲಿ ಕೂರುತ್ತ. ಶಿಖರಸೂರ್ಯ ಮಾತಾಡಲಿಲ್ಲ.

“ಬಾಯಾರಿಕೆಗೆ ಏನಾದರೂ ಕೊಡಲೇ ಸ್ವಾಮಿ?”

ಅಂದಳು. ಆಗ ಶಿಖರಸೂರ್ಯ ಅವಳ ಕಡೆಗೆ ನೋಡುತ್ತ “ಆಗಬಹುದು ದೇವಿ”

-ಎಂದು ಹೇಳಿದ್ದೇ ಛಾಯಾದೇವಿ ಉತ್ಸಾಹಗೊಂಡು ಸೇವಕಿಯನ್ನು ಕೂಗುತ್ತ ಒಳಗೋಡಿದಳು. ಸೇವಕಿಗೆ ಹೇಳುವುದು ಹೇಳಿ, ಅಷ್ಟೇ ವೇಗವಾಗಿ ಶಿಖರಸೂರ್ಯನಲ್ಲಿಗೆ ಬಂದು ತುಟಿತುಂಬ ಮಂದಹಾಸ ಬೀರುತ್ತ ಕೂತಳು. ಗಂಡನನ್ನು ಆಕೆ ಎಷ್ಟು ಪ್ರೀತಿಸುತ್ತಿದ್ದಳೋ ಅದಕ್ಕೂ ಹೆಚ್ಚು ಅವನಿಗೆ ಹೆದರುತ್ತಿದ್ದಳು. ಗಂಡನೊಂದಿಗೆ ಅಂತರಂಗ ಮಾತಾಡಲು ಅವಕಾಶ ಕೂಡಿಬಂತೆಂಬ ನಿರಾಳ ಭಾವ ಅವಳಲ್ಲಿ ಮೂಡಿದ್ದರೂ ವಿಚಾರಗಳ ಅನುಕ್ರಮಣಿಕ ಮಾಡಿಕೊಳ್ಳಲು ಹೆಣಗುತ್ತಿದ್ದಳು. ಅಲ್ಲದೆ ಹ್ಯಾಗೆ ಸುರುಮಾಡಬೇಕೆಂಬ ಸಮಸ್ಯೆಯೂ ಕಾಡಿತು. ಅಷ್ಟರಲ್ಲಿ ಸೇವಕಿ ಬಂದು ಬೆಳ್ಳಿಯ ಗಿಂಡಿಯಲ್ಲಿ ನೀರು, ಬಟ್ಟಲಲ್ಲಿ ಬೆಲ್ಲ ತಂದು ಒಡತಿಗೆ ಕೊಟ್ಟಳು. “ಯಾರನ್ನೂ ಒಳಗೆ ಬಿಡಬೇಡ” ಎಂದು ಸೇವಕಿಗೆ ತಾಕೀತು ಮಾಡಿ ಬಾಗಿಲಿಕ್ಕಿಕೊಂಡು ಮುಗುಳು ನಗುತ್ತ ನೀರು ಬೆಲ್ಲ ಗಂಡನಿಗೆ ಕೊಟ್ಟು, ಶಿಖರಸೂರ್ಯನ ಪೀಠದಲ್ಲೇ ಜಾಗ ಮಾಡಿಕೊಂಡು, ಅವನಿಗೆ ಹತ್ತಿರ ಕೂತು ಅವನ ಮುಖ ನೋಡಿದಳು. ಅವನ ಮುಖದಲ್ಲೇನಿದೆ? ತಿಳಿಯಲಿಲ್ಲ. ಅದೆಂದೂ ತಿಳಿಯುವುದೂ ಇಲ್ಲ! ‘ದೇವರೇ ಇವನ ಮನಸ್ಸು ಪ್ರಸನ್ನವಾಗಲಿ. ನನ್ನ ಮಾತನ್ನು ಕೇಳಿಸಿಕೊಳ್ಳಲಿ’ ಎಂದು ಪ್ರಾರ್ಥಿಸಿಕೊಂಡಳು. ಆತ ಬೆಲ್ಲ ತಿಂದು ನೀರು ಕುಡಿದ. ಹೇಳಿದಳು:

“ಮಹಾರಾಜರ ಆರೋಗ್ಯ ಪೂರ್ತಿ ಹದಗೆಟ್ಟಿದೆ. ಬೆಳಿಗ್ಗೆ ಮನೆಗೆ ಬಂದಿದ್ದರು. ನಮ್ಮ ರವಿಯನ್ನು ಎತ್ತಿ ಮುದ್ದಾಡಿ ‘ಮಗಳೆ ಇದು ಕೊನೇ ಆಶೀರ್ವಾದ’…. ಅಂತ ಏನೇನೋ ಆಡಿಕೊಳ್ತಾ ಇದ್ದರು.”

-ಎಂದು ಹೇಳಿ ಬಾಗಿಲ ಕಡೆಗೆ ನೋಡಿದಳು. ಮುಂದುವರೆದು,
“ಹಾಗಂತ ನಾವು ಸುಮ್ಮನಿರಲಿಕ್ಕಾದೀತ? ಇವತ್ತು………”
-ಎಂದು ಹೇಳಿ ಅವನ ಕಿವಿಯ ಬಳಿ ಬಾಯಿ ಒಯ್ದು…..
“ಮಹಾರಾಜರು ನಮ್ಮ ರವಿಯನ್ನು ಎತ್ತಿ ಮುದ್ದಾಡಿ ‘ಇವನೇ ನಮ್ಮ ಯುವರಾಜ!’ ಅಂದರು!”

‘ನಿಮ್ಮ ಅಭಿಪ್ರಾಯ ಇದೇ ಆಗಿದ್ದರೆ ರಾಜಸಭೆಯಲ್ಲಿ ಹೇಳಿ ಅಪ್ಪಾಜಿ’ ಅಂದೆ. ‘ತರುಣಚಂದ್ರನಿಗಾದಂತೆ ಇವನಿಗೂ ಆದರೆ ಗತಿಯೇನಮ್ಮ?’ ಅಂದರು. ಮುಂದೆ ಮಾತಾಡಲಿಲ್ಲ.”

ಕೇಳಿ ಶಿಖರಸೂರ್ಯ ಮೈಮನಸ್ಸುಗಳಲ್ಲಿ ಬಿಸಿರಕ್ತ ಹರಿದಾಡಿ ಮೈಯಂತ ಮೈಯೆಲ್ಲ ಪಾದರಸದಂತೆ ಚಲನಶೀಲವಾಯಿತು. ತಕ್ಷಣ ತನ್ನಲ್ಲಾದ ಬದಲಾವಣೆಗಳನ್ನು ಮುಚ್ಚಿಕೊಂಡು ಯಥಾತಥಾ ಇದ್ದವನಂತೆ ಮುಖದ ಮೇಲೆ ನಿರ್ಲಿಪ್ತತೆಯನ್ನು ಹೇರಿಕೊಂಡ. ತನ್ನಿಚ್ಛೆಯ ನುಡಿದ ಮಡದಿಯ ಬಗ್ಗೆ ಮೆಚ್ಚುಗೆ ಮೂಡಿತಾದರೂ ಮುಂದಿನ ಹುನ್ನಾರಿಗಾಗಿ ತಯಾರಿ ಸಾಲದೆನ್ನಿಸಿತು. ಪೀಠದಿಂದ ಎದ್ದು ಆ ಈ ಕಡೆ ಹೆಜ್ಜೆ ಹಾಕುತ್ತ ಅಭಿನಯ ಸುರುಮಾಡಿದ:

“ನಿಮ್ಮನ್ನು ಮದುವೆಯಾಗುವ ಮುನ್ನ ನಾನು ಯಾರಾಗಿದ್ದೆ? ಒಬ್ಬ ಅಳಲೇಕಾಯಿ ವೈದ್ಯ! ನನ್ನೆಲ್ಲ ವಿದ್ಯೆ ಬಳಸಿ ವಿಷವುಂಡ ಮಹಾರಾಜರನ್ನು ಬದುಕಿಸಲಿಕ್ಕೆ ಪ್ರಯತ್ನಿಸಿದೆ. ಮಹಾರಾಜರು ಪಥ್ಯ ಮಾಡುತ್ತಿಲ್ಲ!”

-ಎಂದು ಹೇಳಿ ನಾಟಕೀಯವಾಗಿ ಸರ್ರನೇ ತಿರುಗಿ ಮಡದಿಯ ಮುಂದೆ ಬಂದು “ಇದರಲ್ಲಿ ನನ್ನ ಅಪರಾಧವೇನಿದೆ ದೇವಿ?”

ಅಂದ. ಮಹಾರಾಜನಿಗೆ ತಾನು ಕೊಟ್ಟ ಬೇಮದ್ದಿನ ಸುಳಿವೇನಾದರೂ ಸಿಕ್ಕಿದೆಯೋ? ಅಂತ ತಿಳಿಯಲು ಮಳಮಳ ಅವಳ ಮುಖವನ್ನೇ ನೋಡಿದ.

ಇದ್ಯಾವುದರ ಪರಿವೆಯಿಲ್ಲದ ಛಾಯಾದೇವಿಯ ಅಂತಃಕರಣವಾಗಲೇ ಕರಗಿ ಕಣ್ಣೀರಾಗಿ ಹರಿಯಲು ತಯಾರಾಗಿತ್ತು.

“ನನಗಿದೆಲ್ಲಾ ಗೊತ್ತು ಸ್ವಾಮಿ, ಇದರಲ್ಲಿ ನಿಮ್ಮ ತಪ್ಪೇನಿದೆ? ಪಥ್ಯ ಮಾಡದೆ ವೈದ್ಯ ನಾಟುವುದುಂಟೆ? ಮಹಾರಾಜರಿಗೂ ಇದು ಗೊತ್ತಿದೆ.”

“ನನ್ನಿಂದ ನಿಮಗೆ ಯಾವ ಸುಖವೂ ಸಿಗಲಿಲ್ಲ ದೇವೀ. ಮಹಾರಾಣಿಯಾಗಿ ಮೆರೆಯಬೇಕಿದ್ದವಳು ಪ್ರಧಾನಿಯ ಕುತಂತ್ರಕ್ಕೆ ಬಲಿಯಾಗಿ ಒಬ್ಬ ಗುರುತಿಲ್ಲದ ವೈದ್ಯನ ಮಡದಿಯಾಗಿ ಬದುಕುತ್ತಿರುವುದು ನನಗೆ ಸಂತೋಷವೆಂದು ಭಾವಿಸಿದಿರಾ?”

“ಹಾಗೆಲ್ಲ ಹೇಳಿದರೆ ನನಗೆ ದುಃಖವಾಗುತ್ತದೆ. ಈಗ ನನಗೇನು ಕಡೆಮೆಯಾಗಿದೆ? ನಾನು ಬಯಸಿದ ಸುಖವೆಲ್ಲ ಸಿಕ್ಕಿದೆಯೆಲ್ಲ!”

-ಎಂದು ಬಿಕ್ಕಿದಳು. ಶಿಖರಸೂರ್ಯ ಹಿಂದುರುಗಿ ಬಂದು ಕಣ್ಣೀರು ಸುರಿಸುತ್ತಿದ್ದ ಛಾಯಾದೇವಿಗೆ ಹತ್ತಿರ ಕೂತು, ಬೆನ್ನಮೇಲಿನ ಸೀರೆಯ ಮೇಲೆ ಕೈಯೂರಿ ಹೇಳಿದ:

“ನನ್ನಿಂದ ನಿಮಗೆ ಸುಖ ಸಿಕ್ಕಿದೆಯೆಂದರೆ ಅದು ನಿಮ್ಮ ಔದಾರ್ಯ”

“ನೋಡಿ ನೀವಿಂಥ ಮಾತು ಹೇಳಿದರೆ ನನಗೆ ಅಳು ಬರುತ್ತದೆ. ನನ್ನಾಣೆ.”

-ಎಂದು ಅಳತೊಡಗಿದಳು. ಅವಳ ಮುಗ್ಧತೆಗೆ ಅನುಕಂಪ ಮಾಡಿ, ಹೆಗಲ ಬಟ್ಟೆಯಿಂದ ಅವಳ ಕಣ್ಣೀರೊರೆಸಿ, ಕೇಳಿದ:

“ನಮ್ಮ ಚಿರಂಜೀವಿ ಮಗನ ಬಗೆಗಿನ ನಿಮ್ಮ ಕರುಳು ನನಗೆ ಅರ್ಥವಾಗುತ್ತದೆ ದೇವಿ, ಆದರೆ ನಾವು ಏನನ್ನಾದರೂ ಮಾಡುವುದು ಸಾಧ್ಯವೇ?”

“ಗಂಡಸರ ಮನಸ್ಸುಗಳು ಎಷ್ಟು ಜಟಿಲ, ಎಷ್ಟು ಆಳ ಅಂತ ನಮಗೇನು ಗೊತ್ತು? ಅವರನ್ನು ನಾವು ಹೆಂಗಸರು ಎದುರಿಸಲಾದೀತೆ? ಹೀಗೆ ಮಾಡು ಅಂತ ನೀವು ಹೇಳಿದರೆ ನಾನು ಹಾಗೆ ಮಾಡಬಲ್ಲೆ.”

ನಿರೀಕ್ಷಿತ ಉತ್ತರ ಇಷ್ಟು ಬೇಗ ಸಿಕ್ಕೀತೆಂಬ ಭರವಸೆಯಿರಲಿಲ್ಲ. ಮಾತುಗಳನ್ನ ಇನ್ನಷ್ಟು ಚೂಪಾಗಿಸಿ-

“ರಾಜ್ಯದ ಸ್ಥಿತಿಗತಿ ನಿಮಗೆ ಗೊತ್ತೇ ದೇವಿ? ಭಂಟರಿಗೆ ಸಂಬಳವಿಲ್ಲ. ಮಹಾರಾಜರ ಆರೋಗ್ಯದ ವಿಚಾರ ಗೊತ್ತಾಗಿ ಮಾಂಡಳಿಕರು ಸ್ವತಂತ್ರರಾಗಿದ್ದಾರೆ. ಕೆಲವರು ಒಟ್ಟಾಗಿ ನಮ್ಮ ಮೇಲೆ ಏರಿ ಬಂದರೂ ಆಶ್ಚರ್ಯವಿಲ್ಲ. ವಣಿಜರು ತೆರಿಗೆ ಕೊಡುತ್ತಿಲ್ಲ. ರಾಜಕುಮಾರ ತಮ್ಮ ವಿಲಾಸಕ್ಕಾಗಿ ವರ್ತಕರಿಂದ ಹತ್ತು ವರ್ಷಗಳ ತೆರಿಗೆಯನ್ನು ಮುಂಗಡವಾಗಿ ವಸೂಲಿ ಮಾಡಿದ್ದಾರೆ! ಈಗ ರಾಜ್ಯ ನಡೆಸೋದೇ ಕಷ್ಟವಾಗಿದೆ. ಗೊತ್ತೆ ದೇವಿ?”

-ಎಂದು ಹೇಳಿ ಅವಳ ಮುಖ ನೋಡಿದ.

“ನೀವು ಅಂದುಕೊಂಡಷ್ಟು ಅಲ್ಲವಾದರೂ ರಾಜ್ಯದ ವಿದ್ಯಮಾನಗಳು ನನಗೂ ಅಷ್ಟಿಷ್ಟು ಗೊತ್ತು ಸ್ವಾಮಿ. ಮಹಾರಾಜನಂತೆ ನಾವೂ ಅಸಹಾಯಕರು. ರಾಜ್ಯದ ಹಣಕಾಸಿನ ಕಡಾಯಿ ಚಿನ್ನದ ಹಣವನ್ನು ತನ್ನ ಅಂತಃಪುರದಲ್ಲಿ ಇಟ್ಟುಕೊಂಡಿದ್ದಾಳೆ!”

ಆಶ್ಚರ್ಯ ಮತ್ತು ಮೆಚ್ಚುಗೆಗಳನ್ನು ಅಭಿನಯಿಸುತ್ತ, ಅನುಭವಿಸುತ್ತ, ಮಂದಹಾಸದಿಂದ ಮಡದಿಯನ್ನೇ ನೋಡುತ್ತ ಕೂತ. ಇವನನ್ನ ಮೆಚ್ಚಿಸಿದಕ್ಕೆ ಛಾಯಾದೇವಿಯ ಸಂತೋಷ ಕುದಿವ ಹಾಲಿನಂತೆ ಉಕ್ಕಿ ಹರಿಯಿತು. ಅವಳ ನಿರೀಕ್ಷೆಗೂ ಮೀರಿ ಪತಿರಾಯ ಖುಷಿಯಾಗಿದ್ದ. ಅವಳಿಗರಿವಿಲ್ಲದೆಯೇ ರಾಜಕೀಯದ ರಂಗ ಪ್ರವೇಶ ಮಾಡಿದ್ದಳು. ಆ ಪ್ರವೇಶದ ಸಂಭ್ರಮವನ್ನು ಆನಂದಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಹೇಳಿದ:

“ದೇವಿ ನಿಮ್ಮನ್ನು ಸಂತೋಷ ಪಡಿಸುವ ಅವಕಾಶಕ್ಕಾಗಿ ಅನೇಕ ದಿನಗಳಿಂದ ಕಾದಿದ್ದೆ. ಅದೀಗ ಸಿಕ್ಕಿದೆಯೆಂದು ನನ್ನ ನಂಬಿಕೆ. ಅದು ಕೈಗೂಡಬೇಕಾದರೂ ನಿಮ್ಮ ಸಹಾಯಹಸ್ತ ಬೇಕೇ ಬೇಕು.”

“ಅದೇನು ಹೇಳಿ ಸ್ವಾಮಿ.”

“ನಿಮ್ಮ ಅಣ್ಣ ಆದಿತ್ಯಪ್ರಭ ಮಹತ್ವಾಕಾಂಕ್ಷಿ. ಯುವರಾಜನಾಗುವ ಹಕ್ಕಿನವನು….”

ತಕ್ಷಣ ಶಿಖರಸೂರ್ಯನ ಮಾತನ್ನು ಕತ್ತರಿಸಿ ಗುಡುಗಿದಳು:

“ಅದೇ ನೀವು ಮಾಡುತ್ತಿರುವ ತಪ್ಪು. ಯುವರಾಜನಾಗೋದಕ್ಕೆ ಅವನಿಗೇನು ಹಕ್ಕಿದೆ ಸ್ವಾಮಿ?”

“ಅಂದರೆ?”

“ಆದಿತ್ಯಪ್ರಭ ಪ್ರಧಾನಿಗೆ ಹುಟ್ಟಿದವನು. ಇದು ಮಹಾರಾಜರಿಗೂ ಗೊತ್ತಿದೆ. ಅದಕ್ಕೇ ಅವರು ಅವನನ್ನು ಯುವರಾಜನನ್ನಾಗಿ ಮಾಡುತ್ತಿಲ್ಲ ಯುವರಾಜನಾಗೋದು ನನ್ನ ಮಗ ರವಿಕೀರ್ತಿಯ ಹಕ್ಕು.”

-ಎಂದು ಹೇಳಿ “ಇದೇ ನ್ಯಾಯವಾದ ತೀರ್ಮಾನ” ಎನ್ನುವಂತೆ ಮುಷ್ಟಿ ಬಿಗಿದು ಶಿಖರಸೂರ್ಯನ ತೊಡೆ ಗುದ್ದಿದಳು. ಶಿಖರಸೂರ್ಯ ಬೆಕ್ಕಸಬೆರಗಾದ. ಮತ್ತೆ ಛಾಯಾದೇವಿ ಮುಂದುವರೆಸಿದಳು.:

“ಅವನೀಗ ನನ್ನ ಸೋದರಮಾವನ ಚಿನ್ನ ದೋಚುವುದಕ್ಕೆ ಹೋಗಿದ್ದಾನೆ.”

“ಸೋದರಮಾವನ ಚಿನ್ನ ಅಂದರೆ?”

“ಬಿಳಿಗಿರಿ ಮಹಾರಾಜ, ನನ್ನ ಸೋದರಮಾವ, ತಮ್ಮನ ಜೊತೆ ಯುದ್ಧಮಾಡಿ ಸೋತು ಇಲ್ಲಿಗೆ ಬರುವಾಗ ಅರ್ಧ ಚಿನ್ನ ಬಚ್ಚಿಟ್ಟು ಇನ್ನರ್ಧ ಇಲ್ಲಿಗೆ ತಂದಿದ್ದ. ತಂದದ್ದನ್ನ ಮಹಾರಾಣಿ, ಪ್ರಧಾನಿ ದೋಚಿಕೊಂಡರು. ಹ್ಯಾಗೂ ಸತ್ತುಹೋದರಲ್ಲಾ, ಸಿಕ್ಕರೆ ಬಚ್ಚಿಟ್ಟಿದ್ದನ್ನೂ ತಗಂಬೋಣ ಅಂದುಕೊಂಡು ಇಷ್ಟು ದಿನ ಹುಡುಕಿಸಿದರು. ಅದು ಇರುವ ಸ್ಥಳ ಗೊತ್ತಾಗಿ ನನ್ನಣ್ಣ ಹೋಗಿದ್ದಾನೆ. ಆತ ಬರೋದರೊಳಗೆ ನೀವು ತಂದೆಯ ಜೊತೆಗೆ ಒಂದು ಮಾತು ಆಡಬಹುದಲ್ಲಾ- ಅಂತಾ ನನ್ನಾಸೆ.”

ಶಿಖರಸೂರ್ಯ ಯೋಚನಾಮಗ್ನನಾದ. ಎಳೆ ಮನದ ಸರಳೆ ಅಂದುಕೊಂಡ ತನ್ನ ಮಡದಿಯ ಮನ್ಸು ಎಷ್ಟು ಜಟಿಲ ಅನ್ನಿಸಿ ಆಶ್ಚರ್ಯವಾದರೆ ತನ್ನ ಹುಳುಕುಗಳ ಅರಿವೂ ಇವಳಿಗಿರಬಹುದೇ? ಎಂದು ಚಿಂತಿಸಿದ. ಆಕೆ ಹೇಳಿದ್ದರಲ್ಲಿ ತನಗೆ ಈವರೆಗೆ ತಿಳಿಯದಿದ್ದ ಬೇಕಾದಷ್ಟು ಸಂಗತಿಗಳಿದ್ದವು. ತನ್ನ ಗುಪ್ತಚಾರರಿಗೂ ತಿಳಿಯದ ಸಂಗತಿಗಳು ತನ್ನ ಸೌಭಾಗ್ಯವತಿಗೆ ತಿಳಿದಿರಬೇಕಾದರೆ ಇವಳ ಬಳಿಯೂ ಗುಪ್ತಚಾರರಿದ್ದಾರೆಂದಾಯಿತು. ಸೌಂದರ್ಯದಲ್ಲಿ ಅಲ್ಲವಾದರೂ ಮಹತ್ವಾಕಾಂಕ್ಷೆಯಲ್ಲಿ ಇವಳೂ ಮಹಾರಾಣಿಯ ಸ್ಪರ್ಧಿಯಾಗಬಲ್ಲವಳೆನ್ನಿಸಿತು. ಪ್ರಧಾನಿ, ಮಹಾರಾಜ, ಮಹಾರಾಣಿ, ವರ್ತಕ ಸಂಘ, ವರ್ತಕರು, ಆದಿತ್ಯಪ್ರಭ, ತಾನು, ತನ್ನ ಮಡದಿ ಇಷ್ಟೊಂದು ಜನರಿಗೆ ಸ್ವತಂತ್ರವಾದ ಗುಪ್ತಚಾರ ದಳಗಳಿದ್ದಾವೆಂದರೆ ಕನಕಪುರಿಯ ರಾಜಕಾರಣ ಎಷ್ಟು ಜಟಿಲ! – ಎಂದು ತಬ್ಬಿಬ್ಬಾದ. ತಡಮಾಡಬಾರದೆಂದು ಎದ್ದು ಮಾತಿಗೊಂದು ಮುಕ್ತಾಯ ಕೊಡಲು,

“ನಮ್ಮ ಮಗ ರವಿಕೀರ್ತಿ ನಿಮ್ಮ ಆಯ್ಕೆ ಅಲ್ಲವೆ ದೇವಿ?” ಅಂದ.

“ನಮ್ಮ ಆಯ್ಕೆಯಲ್ಲ ಸ್ವಾಮೀ, ಮಹಾರಾಜರ ಆಯ್ಕೆ ಎಂದು ಹೇಳಿರಿ.”

ಎಂದು ಪತಿಯನ್ನು ತಿದ್ದಿ ಕಳಿಸಿದಳು.

ಶಿಖರಸೂರ್ಯ ವೈದ್ಯಶಾಲೆಗೆ ಬಂದವನೇ ಸುಕ್ರನಿಗೆ ಸೂಕ್ತ ಸಂದೇಶ ಕಳಿಸಿದ.