ಶಿಖರಸೂರ್ಯನ ಕುಲನಾಮ ಹುಟ್ಟುಕಟ್ಟುಗಳನ್ನು ಕೇಳಿತಿಳಿದ ಚಿಕ್ಕಮ್ಮಣ್ಣಿ ಪುಳಕಿತಳಾದಳು. ಸಾಕ್ಷಾತ್ ಶಿವನೇ ಹೀಗೆ ಎಲ್ಲರನ್ನು ದೇವರ ಮುಂದಿನ ಹೂವೆತ್ತಿದಷ್ಟು ಸುಲಭವಾಗಿ ಬೇರೀಜು ಮಾಡಿಕೊಡುತ್ತಿದ್ದಾನೆಂದು ನಂಬಿದ್ದಳು. ತಾನೇ ಹೇಳಿದರೆ ಮಹಾರಾಣಿಯ ಅಹಂಕಾರ ಕೊಂಕಿ ಕೆಲಸ ಹುಸಿದೋದೀತೆಂದು, ಮಹಾರಾಣಿಗೆ ಹೇಳಿ ಅವಳಗುಂಟ ಮುಂದುವರಿಯಲೆಂದು ಮಹಾರಾಜ ಮತ್ತು ಚಿಕ್ಕಮ್ಮಣ್ಣಿ ಹಾರೈಸಿದರು.

ಮಹಾರಾಣಿ ಅರ್ಥಕೌಶಲರು ಇಂಥದನ್ನು ಮೊದಲೇ ಆಲೋಚಿಸಿದ್ದರು. ಸವತಿಯ ಮಗಳಾದ ಛಾಯಾದೇವಿಯನ್ನು ಯಾವನೋ ಹಾದಿಹೋಕನಿಗೆ ಕಟ್ಟಿ ಕೈತೊಳೆದು ಕೊಳ್ಳುವುದರಲ್ಲಿ ಅವರ ಕ್ಷೇಮವಿತ್ತೇ ಹೊರತು ಯಾವನೋ ರಾಜನಿಗೆ ಕಟ್ಟಿದರೆ ಇಂದಿಲ್ಲಾ ನಾಳೆ ಅವನು ತಲೆನೋವಾಗುವವನೇ! ಅದರ ಬದಲು ವೈದ್ಯನ ಕತ್ತಿಗೆ ಕಟ್ಟಿದರೆ ಇಬ್ಬರೂ ಮದ್ದರೆಯುತ್ತ ವೈದ್ಯಶಾಲೆಯಲ್ಲೇ ಬಿದ್ದಿರುತ್ತಾರೆ. ಕೊಂಚ ಬಲಾಢ್ಯನೇ ಆದ ವೈದ್ಯ ಶಾಸ್ತ್ರೀಯವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ನಮ್ಮ ವಶದಲ್ಲಿರುತ್ತಾನೆ! ಇದನ್ನು ತಾವೇ ಮಾಡಬೇಕೆಂದಿದ್ದರು. ಆದೀಗ ತಾನಾಗಿ ಕೂಡಿಬಂದಿರುವುದರಿಂದ ಮಹಾರಾಣಿಯೂ ಉತ್ಸಾಹಭರಿತಳಾಗಿ ಶಿಖರಸೂರ್ಯ, ಯುವರಾಜ ಮತ್ತು ಅರ್ಥಕೌಶಲರನ್ನು ಕರೆತರಲು ಸೇವಕರನ್ನು ಅಟ್ಟಿದಳು.

ಮಹಾರಾಣಿ ಅರಮನೆಯ ಶಕ್ತಿಕೇಂದ್ರವೆಂಬುದನ್ನು ಚಿಕ್ಕಮ್ಮಣ್ಣಿ ಸರಿಯಾಗಿಯೇ ಗ್ರಹಿಸಿದ್ದಳು. ಗಂಡ ಮಹಾರಾಜ ಅವಳಿಗೆ ಹೆದರುತ್ತಿದ್ದ. ಮಗ ಯುವರಾಜ ಹೆದರುತ್ತಿದ್ದ. ಅರ್ಥಕೌಶಲನಲ್ಲದೆ ದೇವರ ಪೂಜಾರಿ ಮತ್ತು ಊರ ವರ್ತಕರು ಕೂಡ ಅವಳಿಗೆ ಹೆದರುತ್ತಿದ್ದರು. ಅವಳಿದ್ದಾಗ ಅವಳ ನಾಯಿಗಳಿಗೂ ಗೌರವ ಕೊಡುತ್ತಿದ್ದರು. ಗಂಡಸರ ಆಲೋಚನೆಗಳನ್ನ ಉಪಯೋಗಿಸುವುದರಲ್ಲಿ ಮಹಾನಿಪುಣೆ ಮಹಾರಾಣಿ. ಯಾರೇ ಇರಲಿ, ತನ್ನನ್ನ ವಿರೋಧಿಸಿದವರ ವಿರುದ್ಧವಂತೂ ಸ್ವಚ್ಛಂದವಾಗಿ ನಾಲಗೆ ಹರಿ ಬಿಡುವುದರಲ್ಲೂ ಚೂಪು ಮಾತುಗಳಿಂದ ಕೆಣಕಿ ಅಂಥವರೊಂದಿಗೆ ಹಗೆ ಎಸಗುವುದರಲ್ಲೂ ಅವಳನ್ನು ಮೀರಿಸುವಂಥವರಿರಲಿಲ್ಲ.

ಅಂತಃಪುರದ ಅತಿದೊಡ್ಡ ಕೋಣೆ ಅವಳದೆ. ಅದರ ತುಂಬ ದೇಶವಿದೇಶಗಳಿಂದ ತರಿಸಿದ ಕನ್ನಡಿಗಳಿದ್ದವು. ಬೆಳಗಾನೆದ್ದರೆ ಅವಳೇಳುವುದು ಕನ್ನಡಿ ತೋರಿಸಿದ ಬೆಳಕಿನಲ್ಲಿ!

ಇಂತಪ್ಪ ಕನ್ನಡಿಯ ಅಂತಃಪುರದಲ್ಲಿ ಕಂತು ಅವಳು ಮಾಡಿಕೊಂಬ ಶೃಂಗಾರಕ್ಕೆ ಕನಿಷ್ಠ ಎರಡು ಗಂಟೆ ಬೇಕಾಗುತ್ತಿತ್ತು. ಯಾರಾದರೂ ನೋಡಲಿ ಬಿಡಲಿ ಶೃಂಗಾರವಿಲ್ಲದೆ ಒಂದು ದಿನವೂ ಅಂತಃಪುರದಿಂದ ಹೊರಗೆ ಬಂದವಳೇ ಅಲ್ಲ. ಅರಮನೆಯಿಂದ ಹೊರಗಡೆ ಹೊರಟರೆ ಬೆಳಗಿನ ಶೃಂಗಾರ ಕಳಚಿ ಇನ್ನೆರಡು ಗಂಟೆ ಇನ್ನೊಂದು ಬಗೆಯ ಶೃಂಗರ ಮಾಡಿಕೊಳ್ಳುತ್ತಿದ್ದಳು. ನೆರಿಗೆಯ ತೀಡಿ ತೀಡಿ ಮೂವತ್ತು ಮೊಳದ ಚಂದ್ರಗಾವಿಯನುಟ್ಟು, ಬಿಗಿದ ಹೆದೆಯಂಥ ಎದೆಗೆ ಕಸೂತಿ ಹೂ ಬರೆದ ಕುಬಸವ ತೊಟ್ಟು, ವಾರೆದುರುಬಿಗೆ ಮಲ್ಲಿಗೆಯ ಮಾಲೆಯ ಮುಡಿದು, ನೊಸಲಲ್ಲಿ ಸೂರ್ಯ ತಿಲಕವನ್ನಿಟ್ಟು; ವಜ್ರದ ನತ್ತು, ಜಾಜಿ, ಎಂಟೆಳೆ ಸರ, ಸೊಂಟಕ್ಕೆ ಗಜಲಕ್ಷ್ಮಿ ಪಟ್ಟಿಯ ಬಿಗಿದುಕೊಂಡು ಕೈತುಂಬ ವಜ್ರದ ಬಳೆಯಿಟ್ಟುಕೊಂಡು ಅಲಂಕೃತಳಾಗಿ ಚೆಲುವ ಚೆಲ್ಲುತ ಬಂದರೆ ಮಹಾರಾಜ ಕೂಡ ಅವಳನ್ನು ಕದ್ದು ನೋಡಿ ನಿಟ್ಟುಸಿರು ಬಿಡುತ್ತಿದ್ದ. ನಡೆವಾಗಿನ ಅವಳ ನಿತಂಬಗಳ ಲಯಕ್ಕೆ ಸ್ವಯಂ ಶಿಖರಸೂರ್ಯನೂ ಮಾರುಹೋಗಿದ್ದನೆಂಬ ಬಳಿಕ ಅವಳ ಸೌಂದರ್ಯವನ್ನು ವಾಚಕರೇ ಊಹಿಸಿಕೊಳ್ಳಬೇಕು.

ಇಷ್ಟು ಹೇಳಿ ಇನ್ನಾಕೆಯ ಹವ್ಯಾಸದ ಬಗ್ಗೆ ಹೇಳದಿದ್ದರೆ ಆಕೆಯ ಪರಿಚಯವೇ ಅಪೂರ್ಣ. ಆಕೆಯ ನಾಯಿ ಸಾಕುವ ಹವ್ಯಾಸ ಕೂಡ ದೇಶವಿದೇಶಗಳಲ್ಲಿ ಸುದ್ದಿಯಾಗಿತ್ತು. ಯಾವನೊಬ್ಬ ರಾಜನಿಗೆ ಕನಕಪುರಿಯ ರಾಜನ ಕೃಪೆಯಾಗಬೇಕಿದ್ದರೆ ಒಂದು ಬೆಲೆಯುಳ್ಳ ತಳಿಯ ಅಪರೂಪದ ನಾಯಿಯನ್ನು ಕಾಣಿಕೆಯಾಗಿ ಕೊಟ್ಟರಾಯಿತು; ಕೆಲಸವಾಯಿತೆಂದೇ ಲೆಕ್ಕ! ಊರಾಚೆಯ ಕಾಡಿನಲ್ಲಿ ಸಾವಿರೆಕೆರೆ ತೋಟ ಇದೆ. ಅದೇ ಶ್ವಾನಪುರ. (ಈ ಹೆಸರನ್ನು ಸೂಚಿಸಿದ ಕಾಶ್ಮೀರಿ ಪಂಡಿತನಿಗೆ ಮಹಾರಾಣಿ ಶಾಲು ಹೊದಿಸಿ ಸನ್ಮಾನ ಮಾಡಿದಳಂತೆ.) ಸದರಿ ಶ್ವಾನಪುರದಲ್ಲಿ ದೂರ ದೂರ ಕಟ್ಟಿದ ಸುಮಾರು ಐವತ್ತು ಮನೆಗಳಿವೆ. ಮನೆಗೊಂದು ತಳಿಯ ನಾಯಿಗಳಿವೆ. ಐವತ್ತಾರೂ ದೇಶಗಳ ನಾಯಿಗಳಲ್ಲದೆ ಅವುಗಳ ಶುದ್ಧ ತಳಿಯ ನಾಯಿ, ಅಶುದ್ಧ ತಳಿಯ ನಾಯಿ, ಕಸಿಮಾಡಿ ಬೆರೆಸಿದ ಹೊಸ ತಳಿಯ ನಾಯಿ, ಅರಚುವ ನಾಯಿ, ಹಡುವ ನಾಯಿ, ಬೊಗಳುವ ನಾಯಿ, ಕೌಟುಂಬಿಕ ನಾಯಿಗಳಲ್ಲದೆ ಹಾದೀನಾಯಿ, ಬೀದೀನಾಯಿ, ಕಾಡುನಾಯಿ, ಹುಚ್ಚುನಾಯಿ ಕೂಡ ಇವೆ. ಒಂದೊಂದು ತಳಿಗೂ ಅದಕ್ಕದಕ್ಕೆ ಅದರದರದೇ ಆಳುಕಾಳು ಚಾಕರ ನೌಕರ ಬೇರೆ ಬೇರೆ. ಅವುಗಳ ಆಹಾರ ವಿಹಾರ ಮೈಥುನ ಮಕ್ಕಳ ಫಲಪುತ್ರ ಸಂತಾನ-ಯಾವುದಕ್ಕೂ ತೊಂದರೆ ಇಲ್ಲ.

ಶ್ವಾನಪುರದ ನಾಯಿಗಳಿಗೆ ಜೀವದ ಹಂಗುದೊರೆಯ ಬೇಟೆಯಾಡುವ, ದ್ವಂದ್ವ ಯುದ್ಧ ಮಡುವ ವಿಶೇಷ ಶಿಕ್ಷಣ ಕೊಡಲಾಗುತ್ತಿತ್ತು. ವರ್ಷದ ವಿಶೇಷ ಹಬ್ಬ ಹರಿದಿನಗಳಂದು, ಆಮಂತ್ರಿತ ಅತಿಥಿಗಳೆದುರು ವಿಶಿಷ್ಟವಾಗಿ ತಯಾರಿಸಿದ ಶ್ವಾನಕೂಪದ ಅಂಗಣದಲ್ಲಿ ಎರಡು ತಳಿಯ ನಾಯಿಗಳನ್ನು ಎದುರೆದುರೆ ಬಿಟ್ಟು ಅವು ಬೊಗಳಿ ಕಚ್ಚಿ ಎಳೆದಾಡಿ ಪರಸ್ಪರರನ್ನು ಕೊಲ್ಲುವತನಕ ಹೋರಾಡುವ ದೃಶ್ಯವನ್ನು ಅತಿಥಿಗಳು ನೋಡಿ ಆನಂದಪಡುತ್ತಿದ್ದರು. ಇದು ಸಾಮಾನ್ಯ ಮನರಂಜನೆ. ವಿಶೇಷ ಮನರಂಜನೆ ಯಾವುದೆಂದರೆ ಯುದ್ಧ ಕೈದಿಗಳ ಮೇಲೆ, ಕೊಲೆಗಡುಕರ ಮೇಲೆ, ಅವಿಧೇಯ ಸೇವಕರ ಮೇಲೆ, ಅರಮನೆಗೆ ಬೇಡವಾದವರ ಮೇಲೆ ನಾಯಿಗಳನ್ನು ಛೂ ಬಿಟ್ಟು ಬೇಟೆಯಾಡಿಸುವ ಆಟ ಮಾತ್ರ ರೋಮಾಂಚಕಾರಿಯಾದುದು. ಇವಲ್ಲದೆ ಮಹಾರಾಣಿ ಖುದ್ದಾಗಿ ಸಾಕಿ ಮುದ್ದಿಸುವ, ಆಟವಾಡುವ ಮೂರು ನಾಲ್ಕು ತಳಿಯ ನಾಯಿಗಳು ಅಂತಃಪುರದಲ್ಲಿವೆ. ಅವುಗಳಿಗೆ ಅವಳ ಅಕ್ಕಪಕ್ಕ ಕೂರುವ, ನಿಲ್ಲುವ ಕೆಲವಕ್ಕೆ ಅವಳ ತೊಡೆಯ ಮೇಲೇರುವ ಅವಕಾಶ ಕೂಡ ಇದೆ.

ಅವಳ ಆತ್ಮಗೌರವ ಮತ್ತು ಅಭಿರುಚಿಗಳೂ ಹಾಗೆಯೇ ಇವೆ. ಅವಳಿಗೆ ಏನನ್ನ ಕಾಣಿಕೆ ಕೊಟ್ಟರೂ ಅದು ಇಡೀ ಜಗತ್ತಿನಲ್ಲಿ (ಅಂದರೆ ಐವತ್ತೈದೂ ದೇಶಗಳಲ್ಲಿ) ಇಂಥದಿಲ್ಲ ಅನ್ನಿಸುವಂಥ ಅಪರೂಪದ ವಸ್ತುವಾಗಿರಬೇಕು. “ಸಾಲದು ಸಾಧಾರಣ, ಅಸಾಧಾರಣವೆ ಆಗಬೇಕು.” ಎಂದು ರಾಗವಾಗಿ, ಗಿಳಿ ಪದ್ಯ ಓದಿದ ಹಾಗೆ ಕಾಣಿಕೆ ಕೊಡುವವರಿಗೆ ಹೇಳುತ್ತಿದ್ದಳು. ವಿದೇಶಗಳಿಂದ ಯಾರಾದರೂ ಗೌರವಾನ್ವಿತರು ಬಂದಾಗ ಮಹಾರಾಜ ಮಹಾರಾಣಿ ಇಬ್ಬರೂ ಒಡ್ಡೋಲಗ ಕೊಡುವುದಿದ್ದಲ್ಲಿ ಇವಳನ್ನು ಕರೆದೊಯ್ಯಲು ಪ್ರಧಾನಿಯೇ ಬರಬೇಕು. ಅತಿಥಿಗಳ ಪ್ರಭಾವ, ಶ್ರೀಮಂತಿಕೆಗಳನ್ನು ಹೇಳಿದ ಮೇಲೆ ಬರುವುದೂ ಬಿಡುವುದೂ ಅವಳಿಷ್ಟ.

ವಿದೇಶೀ ಗೌರವಾನ್ವಿತ ಅತಿಥಿಗಳು ಬಂದು ಇವಳನ್ನ ಬಾಯಿ ತೆರೆದುಕೊಂಡೇ ನೋಡಿ ಇವಳಿಗಿರುವ ಸ್ವಮೋಹ ನೋಡಿ ಕೊಂಚ ಹೊಗಳಿದರೆ ಆಮೇಲೆ ನಾಲ್ಕೈದು ತಿಂಗಳು ಅವಳು ಅದನ್ನೇ ಹೇಳಿಕೊಂಡು ಬೀಗುವ ಪರಿಯಂತೂ ಅವಳಿಗೆ ಮಾತ್ರ ಸಾಧ್ಯ. ಒಂದು ಸಣ್ಣ ಮಾದರಿ ನೋಡಿರಿ:

“ಅದೇನು ಸೌಂದರ್ಯ ರಾಶಿಯಿದೆಯೋ ನನ್ನಲ್ಲಿ, ನನಗೇ ಗೊತ್ತಿಲ್ಲ ಮಾರಾಯರೇ! ಯಾರೇ ಬರಲಿ, ನನ್ನ ನೋಡಿ ಬಾಯಿ ತಗೀತಾರೆ! ವಯಸ್ಸಾದ ಅತಿಥಿಗಳಿದ್ದರೇ ಒಳ್ಳೆಯದು, ಮುಖ ಕೊಟ್ಟು ಮಾತಾಡಲಿಕ್ಕಾದರೂ ಸಾಧ್ಯ. ಹದಿವಯಸ್ಸಿನವರು ಬಂದರಂತೂ, -ಅಬ್ಬ! ನನ್ನನ್ನ ಕಣ್ಣಿಂದ ಹರಿದುಕೊಂಡು ತಿನ್ನೋಹಾಗೆ ನೋಡೋದೆ! ಹೋಗಲಿ ಅಂದರೆ ಬೇಗನೆ ನಿಂತ ಜಾಗ ಖಾಲಿ ಮಾಡ್ತಾರೆಯೇ? ಅದೂ ಇಲ್ಲ! ಕಣ್ಣು ಪಿಳುಕಿಸದೆ ನೋಡುತ್ತ ನಿಂತುಬಿಡುತ್ತಾರೆ! ಅದಕ್ಕೇ ಮಾತಾಡಬೇಕಾದರೆ ನಾನು ಅವರ ಕಡೆಗೆ ನೋಡೋದೇ ಇಲ್ಲ; ನನ್ನ ಮೂಗಿನ ತುದಿ ನೋಡಿಕೊಳ್ತೇನೆ! ಇನ್ನೇನು ಮಾಡಲಿ ಹೇಳಿ. ಯಾವ್ಯಾವ್ದೋ ದೇಶಗಳ ಅರಮನೇಲಿ ನನ್ನ ಚಿತ್ರ ಹಾಕಿದ್ದಾರಂತೆ! ನನಗೆ ಹೇಳದೆ ಕೇಳದೆ ನನ್ನ ಚಿತ್ರ ಬರಿಸಿ ಹಾಕೋದು ನಾಗರಿಕತೆಯ ಲಕ್ಷಣ ಅಲ್ಲ ಅಂತ ಅವರಿಗೆ ಯಾರು ಹೇಳೋರು?” ಇತ್ಯಾದಿ!

ಐವತ್ತಾರೂ ದೇಶಗಳ ಮಹಾರಾಣಿ ತಾನಾಗಬೇಕೆಂಬ, ಪ್ರಪಂಚದ ಎಲ್ಲರೂ ತನ್ನ ಪ್ರಜೆಗಳಾಗಿರಬೇಕೆಂಬ ಆಸೆಗಳು ಅವಳಲ್ಲಿ ಇದ್ದವಾದರೂ ಇದಿಷ್ಟೇ ಅವಳ ಆಸೆಯೆಂದು ಹೇಳಬರುವಂತಿರಲಿಲ್ಲ. ಒಟ್ಟಿನಲ್ಲಿ ಅವಳು ಮಹತ್ವಾಕಾಂಕ್ಷೆಯ ಹೆಂಗಸೆಂದು ಹೇಳಬಹುದೇ ವಿನಾ ಅದೇನೆಂದು ಅಳತೆ ಮಾಡಿ ಹೇಳುವುದಾಗಲಿ, ವರ್ಣಿಸುವುದಾಗಲಿ ಸಾಧ್ಯವಿಲ್ಲವಾಗಿ ಮೊಗಮ್ಮಾಗಿ ಹೇಳುವುದೇ ಉಚಿತ:- ಚಿನ್ನ, ಅಧಿಕಾರ, ಸಾರ್ವಭೌಮತ್ವಗಳಿಗಾಗಿ ಸದಾ ಬಾಯ್ದೆರೆದ, ತೃಪ್ತಿಯೇ ಇಲ್ಲದ ನಿರಂತರ ದಾಹವೇ ಈ ಮಹಾರಾಣಿ!

ಶಿಖರಸೂರ್ಯ ಬಂದಾಗ ಮಹಾರಾಣಿ ನಾಯಿಮರಿಯೊಂದನ್ನು ಕಂಕುಳಲ್ಲಿಟ್ಟುಕೊಂಡು “ಕಳ್ಳ ನೀನು” ಎನ್ನುತ್ತ ಮುದ್ದುಮಾಡುತ್ತಿದ್ದಳು. ಅವಳ ಒಂದು ಬದಿಯಲ್ಲಿ ಅರ್ಥಕೌಶಲ ಎದ್ದು ಬಂದು ಬರಮಾಡಿಕೊಂಡು ಇನ್ನೊಂದು ಪೀಠದಲ್ಲಿ ಕೂರಿಸಿ ತಾನೂ ಪೀಠದಲ್ಲಿ ಕೂತ. ಮಹಾರಾಣಿ “ಕ್ಷಮವೇ ರಾಜವೈದ್ಯನೇ” ಅಂದಳು ನಾಯಿಮರಿಯನ್ನೇ ನೋಡುತ್ತ. ಮೂವರ ಮುಖ ನೋಡಿ ಆಗಲೇ ಒಂದು ಸುತ್ತು ಮಾತುಕತೆ ನಡೆದಿದೆ ಎಂದುಕೊಂಡ ಶಿಖರಸೂರ್ಯ, “ತಮ್ಮ ಕೃಪೆ ಮಹಾರಾಣಿ” ಎನ್ನುತ್ತ ಬಾಗಿ ನಮಸ್ಕಾರವನ್ನಾಚರಿಸಿದ. ಅರ್ಥಕೌಶಲ ನಗುತ್ತ ಹೇಳಿದ:

“ಇದು ಭಾರೀ ಬೆಲೆಯ ಕುದುರೆ ಮಹಾರಾಣಿ! ಒಮ್ಮೆ ಕೊಂಡರೆ ಸಾಲದು. ಸವಾರಿ ಮಾಡಿದಾಗೊಮ್ಮೆ ಕೊಳ್ಳಬೇಕು. ಕೊಂಡಾಗೊಮ್ಮೆ ದುಬಾರಿ ಬೆಲೆ ಕೊಡಬೇಕು!”

ಪ್ರಧಾನಿಯ ಹಾಸ್ಯಕ್ಕೆ ಮಹಾರಾಣಿಯೂ ನಗುತ್ತ ಹೇಳಿದಳು:

“ಖಾಯಂ ಆಗಿ ಒಮ್ಮೆಕೊಂಡು ಅರಮನೆಯಲ್ಲಿ ಕಟ್ಟಿಹಾಕೋಣ; ಬೆಲೆ ಎಷ್ಟಾದರೂ ಆಗಲಿ. ಆದೀತೆ ರಾಜವೈದ್ಯನೇ?”

“ಸನ್ನಿಧಿಯಲ್ಲಿ ಬೆಲೆ ಕೇಳಲುಂಟೆ? ತಾವಾಗಲೇ ನನ್ನ ಮೇಲೆ ಹಕ್ಕಿನ ಯಜಮಾನಿ ಯಾಗಿದ್ದೀರಿ, ಆಜ್ಞೆ ಆಗಲಿ ಮಹಾರಾಣಿ.” ಅಂದ.

“ಪ್ರಧಾನಿಗಳೇ….”

“ನೀನು ಸತ್ಪಾತ್ರ ಹೌದೋ ಅಲ್ಲವೋ. ನಿನ್ನ ಮೇಲೆ ಮಹಾರಾಣಿಯವರ ಅನುಗ್ರಹವಂತೂ ಯಥೇಚ್ಛವಾಗಿ ಆಗಿದೆ ರಾಜವೈದ್ಯನೇ, ಅದು ನಿನ್ನ ಸೌಭಾಗ್ಯ,”

ಅರ್ಥಕೌಶಲನ ಮಾತಿಗೆ ಶಿಖರಸೂರ್ಯ ಮಹಾರಾಣಿಯನ್ನು ಪ್ರಶ್ನಾರ್ಥಕವಾಗಿ ನೋಡಿದ. ಅವಳು ನಾಯಿ ಮರಿಯ ಬೆಚ್ಚನೆಯ ಕತ್ತಿನಲ್ಲಿ ಬೆರಳಾಡಿಸುತ್ತ ಅದರಲ್ಲಿ ತನ್ಮಯಳಾದಂತೆ ಅಭಿನಯಿಸುತ್ತಿದ್ದಳು. ಆಮೇಲೆ ಯಾರೂ ಮಾತಾಡಲಿಲ್ಲವಾಗಿ ಶಿಖರಸೂರ್ಯ “ಅರ್ಥವಾಗಲಿಲ್ಲ”ವೆಂಬಂತೆ ಎಲ್ಲರ ಮುಖ ನೋಡಿದ. ಯುವರಾಜ ತನ್ನ ತಾಯಿಯ ಕಡೆಗೆ ಮುಖ ಮಾಡಿ ಅವಳೇ ಹೇಳುವಳೆಂಬಂತೆ ಸನ್ನೆ ಮಾಡಿದ. ಈಗ ಮೂವರು ಅವಳ ಕಡೆಗೇ ನೋಡುತ್ತಿರುವಾಗ ಮಹಾರಾಣಿ ನಾಯಿಮರಿಯ ನೋಡಿಕೊಂಡೇ ಹೇಳಿದಳು:

“ಅರ್ಥವಾಗದ್ದು ಇದರಲ್ಲಿ ಏನಿದೆ ರಾಜವೈದ್ಯನೇ? ನೀನು ನಮ್ಮ ಕುಟುಂಬದ ಸದಸ್ಯನಾಗಿರಬೇಕೆಂದು ನನ್ನ ಇಚ್ಛೆ. ಆದ್ದರಿಂದ ಗುರುಹಿರಿಯರ ಒಪ್ಪಿಗೆ ಪಡೆದುಕೊಂಡು ನಿನಗೂ ನಮ್ಮ ರಾಜಕುಮಾರಿ ಛಾಯಾದೇವಿಗೂ ಕಲ್ಯಾಣ ಮಾಡಬೇಕೆಂದು ದೊಡ್ಡ ಮನಸ್ಸು ಮಾಡಿದ್ದೇನೆ. ಈಗಲಾದರೂ ನಿನ್ನ ಮುಖದಲ್ಲಿ ಒಂದು ಮುಗುಳು ನಗೆ ಮೂಡೀತು ಅಂತ ಹಾರೈಸೋಣ. ಆದೀತೋ?”

ಶಿಖರಸೂರ್ಯನ ಮುಖದಲ್ಲಿ ಮುಗುಳುನಗೆ ಮೂಡಿತು. ಯಾಕೆಂದರೆ ಇದು ತಾನು ಊಹಿಸಿದಂತೇ ನಡೆದಿತ್ತು.

“ಇದು ನನ್ನ ಸೌಭಾಗ್ಯವೆಂದುಕೊಳ್ಳುತ್ತೇನೆ. ಮಹಾರಾಣಿ!”

ಎಂದು ಹೇಳುತ್ತ ಎರಡೂ ಕೈಜೋಡಿಸಿ ಮಹಾರಾಣಿಗೆ ಬಾಗಿದ. ಮಹಾರಾಣಿ ದಯಮಾಡಿ ಮುಖ ಸಡಿಲಿಸಿ ದೊಡ್ಡದಾಗಿ ತೃಪ್ತಿಯ ನಗೆ ನಕ್ಕಳು.