ಅದಾಗಿ ‘ಹಾ’ ಅನ್ನುವುದರೊಳಗಾಗಿ ಶಿಖರಸೂರ್ಯನ ವಜ್ರದೇಹದ ಸುದ್ದಿ ಪುರದ ತುಂಬ ಹಬ್ಬಿತು. ಬಿಳಿಗಿರಿರಾಯನ ಭಂಟರು ಅವನನ್ನ ಹ್ಯಾಗೆ ಇರಿದರು? ಇವನು ಹ್ಯಾಗೆ ಎದುರಿಸಿದ? ಹ್ಯಾಗೆ ಅವರೆಲ್ಲ ಶರಣಾಗಿ ಬಾಗಿ ನಿಂತರು… ಇತ್ಯಾದಿ, ಆಳಿಗೊಂದು ಕತೆ ಹುಟ್ಟಿಕೊಂಡವು. ಅವನ್ನು ಕೇಳಿ ಮಹಾರಾಜನಿಗೆ ಸಂತೋಷವಾದರೆ ವಣಿಕರಿಗೆ ಅವನನ್ನ ಶ್ವಾನಕೂಪದಲ್ಲಿ ತಳ್ಳಿ ಮಜ ಮೋಜು ತಗಂಬಹುದೆಂಬ ಆಸೆಯಾಯಿತು. ಕೆಲವರಿಗೆ ತಾವೂ ವಜ್ರಕಾಯರಾಗಬೇಕೆಂಬ ಅಪೇಕ್ಷೆ ಹುಟ್ಟಿತು. ಅರ್ಥಕೌಶಲ ಮತ್ತು ಮಹಾರಾಣಿಗೆ ಸದಾಕಾಲ ಆತ ತಮ್ಮ ಆಜ್ಞಾಧಾರಕ ಭಂಟನಾಗಿರಬೇಕೆಂಬ, ತನ್ನ ದೇಹ, ಆಯುಧ ಮತ್ತು ಜಾಣತನ-ಎಲ್ಲವನ್ನೂ ತಮ್ಮ ಸೇವೆಗೆ ಮುಡುಪಿಡುವಂತೆ ಮಾಡಬೇಕೆಂಬ ಹಂಬಲವಾಗಿ ಅವನ ಸ್ನೇಹಕ್ಕಾಗಿ ಕಾತರಿಸಿದರು.

ಸಾಮಾನ್ಯವಾಗಿ ತನ್ನ ಮನಸ್ಸಿನ ಯಾವುದೇ ಭಾವನೆಯನ್ನು ಯಾರಿಗೂ ತೋರಗೊಡದ ಶಿಖರಸೂರ್ಯ ಈ ದಿವಸ ಅಡಿಗೆಯ ಆಳುಗಳೊಂದಿಗೆ ಮುಗುಳ್ನಗುತ್ತ ಮಾತಾಡಿದ. ಅದೇ ಮಧ್ಯಾಹ್ನ ಚಿಕ್ಕಮ್ಮಣ್ಣಿಗೆ ಭೇಟಿಯಾಗಿ ಭಂಟರಿಗೆ ಹಣ ಕೊಟ್ಟು ವಾಪಸು ಕಳಿಸಿದ್ದನ್ನು ಹೇಳಿದ. ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿ ಆಕೆ ಕೇಳದಿದ್ದರೂ ಇವಿಷ್ಟು ಮಾತ್ರೆಗಳನ್ನು ತಗೊಳ್ಳಲೇಬೇಕೆಂದು ಒತ್ತಾಯದಿಂದ ಕೊಟ್ಟು ಛಾಯಾದೇವಿಗೆ ತಾಯಿಯ ಬಗ್ಗೆ ಕಾಳಜಿ ವಹಿಸಲು ತಾಕೀತು ಮಾಡಿದ. ಶಿಖರಸೂರ್ಯ ತನ್ನೊಂದಿಗೆ ಮಾತಾಡಿದ್ದರಿಂದ, ತನಗೊಂದು ಜವಾಬ್ದಾರಿ ಹೇಳಿದ್ದರಿಂದ ಛಾಯಾದೇವಿ ಹರ್ಷಾತಿರೇಕದಿಂದ ಪುಳಕಿತಳಾಗಿ ಆಗಲಾಗಲೆಂದು ಹೇಳಿದಳು. ಅದು ಅವನಿಗೆ ತಿಳಿಯಿತೋ ಇಲ್ಲವೋ ಎಂದುಕೊಂಡು “ತಪ್ಪದೇ ತಗೊಳ್ಳುತ್ತೇನೆ” ಅಂದಳು. ಅದೂ ಸಾಲದೆನಿಸಿ “ನೀವು ಹೇಳಿದ ಹಾಗೆ ತಪ್ಪದೆ ಅಮ್ಮನ ಕಾಳಜಿ ವಹಿಸುತ್ತೇನೆ” ಎಂದು ಹೇಳಿ. ‘ಪರಿಣಾಮ ಸರಿಯಾಗಿ ಆಯಿತೇ?’ಎಂದು ಮಳಮಳ ಅವನ ಮುಖ ನೋಡಿದಳು. ಶಿಖರಸೂರ್ಯ ಮುಗುಳು ನಕ್ಕು ಅವಳ ಕಣ್ಣಲ್ಲಿ ಕಣ್ಣಿಟ್ಟು ಒಂದು ಸಲ ನೋಡಿದ. ಹುಡುಗಿ ಅಡಿಯಿಂದ ಮುಡಿತನಕ ಥರಥರ ನಡುಗಿದಳು.

ಶಿಖರಸೂರ್ಯ ವಿಜಯದ ನಗೆ ನಗುತ್ತ ಮುಂದೆ ನಡೆದ. ಮಹಾರಾಜನ ದೊಡ್ಡ ಕೋಣೆಯ ಮುಂದೆ ದಾಟಿ ಹೋಗುವಾಗ ಬಾಗಿಲು ತನಕ ಮಹಾರಾಜ ಬಂದು ಮೆಲ್ಲಗೆ “ಬಾ” ಎಂದು ಕೈಮಾಡಿ ಕರೆದ. ಶಿಖರಸೂರ್ಯ ಕ್ಷಣ ನಿಂತು ಯೋಚಿಸಿದ. ‘ಮಹಾರಾಜನಾಗಿ ಅಕ್ಕಪಕ್ಕ ಸೇವಕರ್ಯಾರು ಇದ್ದಂತಿಲ್ಲವಲ್ಲ’! –ಎಂದು ಆಶ್ಚರ್ಯವಾಯಿತು. ಅನುಕೂಲವಾಯಿತೆಂದು ಮಹಾರಾಜರ ಕೋಣೆ ಹೊಕ್ಕ. ಮಹಾರಾಜ ಬಾಗಿಲು ಮುಂದೆ ಮಾಡಿ ಶಿಖರಸೂರ್ಯನ ಕೈ ಹಿಡಿದು ಆಸನದಲ್ಲಿ ಕುಳ್ಳಿರಿಸಿ ಎದುರಿನ ಆಸನದಲ್ಲಿ ತಾನು ಕುಳಿತುಕೊಂಡ. ಸಂಕೋಚ, ನಾಚಿಕೆಗಳಿಂದ ಮುಖ ಬೆವರಿತ್ತು. ಮಹಾರಾಜ ಶಿಖರಸೂರ್ಯನ ಎರಡೂ ಹಸ್ತಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಮೆಲ್ಲಗೆ ‘ಕವಿರಾಜ, ಮಾತಾಡಬೇಕು.” ಅಂದ. “ತಮ್ಮ ಕೃಪೆ” ಎಂದು ಹೇಳಿ ಇವನೂ ಸಿದ್ಧನಾದ. ಮಹಾರಾಜ ಬಾಗಿಲವರೆಗೆ ಹೋಗಿ ಆ ಈ ಕಡೆ ನೋಡಿ ಯಾರಿಲ್ಲದ್ದನ್ನು ಖಾತ್ರಿಮಾಡಿಕೊಂಡು ಬಂದು ಮತ್ತೆ ರಾಜವೈದ್ಯನ ಕೈ ಹಿಡಿದ. ಈ ಸಲ ಅವನ ಕೈ ನಡುಗುತ್ತಿದ್ದವು. ಪಿಸುದನಿಯಲ್ಲಿ.

“ನನಗೆ ಕೊಬ್ಬು ಹೆಚ್ಚಾಗುತ್ತಿದೆ. ಕೊಬ್ಬಿನ ವಿಷ ಹಾಕಿದ್ದಾರಂತೆ, ಹೌದೆ?”

ಎಂದು ಹೇಳಿ ಮಳ ಮಳ ರಾಜವೈದ್ಯನ ಮುಖ ನೋಡಿದ.

“ಹಾಗಿದ್ದರೆ ಮದ್ದು ನಿಮ್ಮ ಕೈಯಲ್ಲಿಯೇ ಇದೆ. ಕಡಿಮೆ ಊಟ ಮಾಡಿ.”

“ಆಗುತ್ತಿಲ್ಲ.”

“ಆಯ್ತು, ಅದಕ್ಕೂ ಮದ್ದಿದೆ.”

-ಎಂದು ಹೇಳಿ ಅವನ ಕೊಬ್ಬಿನ ದೇಹ ನೋಡಿದ. ಶಿಖರಸೂರ್ಯನ ಚಿರತೆಯ ಕಣ್ಣು ಭಗ್ಗನೆ ಹೊಳೆದವು. ‘ಸಾವಿನ ವಿನಾ ನಿನಗೆ ಬೇರೆ ಯಾರೂ, ಯಾವುದೂ ಸುಖ ಕೊಡಲಾರದು, ಮಹಾರಾಜ‘ ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಗುಳುನಕ್ಕ. ಈ ಸಲದ ಅವನ ಉಕ್ಕಿನ ಮುಗುಳು ನಗೆ ಹೆಚ್ಚು ಅಗಲವಾಗಿತ್ತು. ಕೆನ್ನೆಯ ತೆರೆಗಳು ಕಿವಿಯಿಂದ ಕಿವಿತನಕ ಹಬ್ಬಿದ್ದವು. ಅಷ್ಟರಲ್ಲಿ ಅರ್ಥಕೌಶಲನ ಮನೆಯಲ್ಲಿ ಸಂಜೆಯ ಊಟಕ್ಕೆ ಕರೆಬಂತು.

ಅರ್ಥಕೌಶಲನ ಊಟಗಳೆಂದರೆ ಅವನು ಮೂಗಿನ ಮಟ ಕುಡಿಯುವುದು, ಕುಡಿಯುವತನಕ ಒಂದು ಥರ ಮಾತಾಡುವುದು, ಕುಡಿದಾದ ಮೇಲೆ ಇನ್ನೊಂದು ಬಗೆಯ ಮಾತಾಡುವುದು. ಆದರೆ ಈ ಎರಡೂ ಬಗೆಯ ಮಾತುಗಳು ಅವನ ಆಭಿನಯದ ಭಾಗಗಳಾಗಿದ್ದು ತನ್ನ ಪತ್ತೇದಾರಿಕೆಯನ್ನು ಮುಚ್ಚುವುದಕ್ಕೆ ಅವನೇ ಸೃಷ್ಟಿಸಿಕೊಂಡ ಹೊದಿಕೆಯೆಂದು ಶಿಕರಸೂರ್ಯನಿಗೆ ಗೊತ್ತಿತ್ತು. ಆ ದಿವಸದ ಊಟಕ್ಕೆ ಯುವರಾಜ ಆದಿತ್ಯಪ್ರಭ ಬಂದಿದ್ದ. ಮಹಡಿಯ ಮೇಲೆ ಪಾನಗೋಷ್ಟಿ ನಡೆಯಿತು. ಕೆಳಗಡೆ ಊಟದ ತಯಾರಿ ನಡೆದಾಗ ನಾಯಿ ಬೊಗಳಿದ್ದು ಕೇಳಿ ಮಹಾರಾಣಿ ಬಂದುದನ್ನು ಕವಿರಾಜ ಸರಿಯಾಗಿಯೇ ಗ್ರಹಿಸಿದ. ಮಹಾರಾಣಿಯಾದವಳು ಪ್ರಧಾನಿಯ ಮನೆಗೆ ಬರುವುದು ಅಸಹಜವೆನ್ನಿಸಿದರೂ ಸಂಬಂಧಿಕರೆಂಬುದರಿಂದ ಇರಬಹುದೆಂದು ಸಮಾಧಾನ ತಂದುಕೊಂಡ.

ಆಶ್ವರ್ಯವೆಂದರೆ ಈ ದಿನ ಶಿಖರಸೂರ್ಯನೂ ಕುಡಿಯುವುದಕ್ಕೆ ಸುರುಮಾಡಿದ. ಇವನೇ ಹೆಚ್ಚಾಗಿ ಕುಡಿದು, ಮುರಿದು ಮಾತಾಡುತ್ತ, ಅವರ ಮಾತಿಗೆ ತಲೆದೂಗುತ್ತ ಕೂತ. ಯುವರಾಜ ಮತ್ತು ಅರ್ಥಕೌಶಲ ಕೂಡ ಇವನ ಮಾತು ನಂಬಿ ತಮ್ಮ ಅಭಿನಯ ನಿಲ್ಲಿಸಿದರು. ಶಿಖರಸೂರ್ಯ ಹೇಳಿದ:

“ನಿಜ ಹೇಳ್ತೀನಿ ಪ್ರಧಾನಿಗಳೆ, ಪ್ರಪಂಚದ ಕೊನೇ ದಿನ ಬಂದಿದೆ ಸ್ವಾಮೀ! ಕನಕಪುರಿ ನಾಶವಾಗುತ್ತೋ ಇಲ್ಲವೋ, ಬೇಕಾದರೆ ಇದೊಂದು ಉಳಿಯಲೂಬಹುದು. ಆದರೆ ಪ್ರಪಂಚ ನಾಶವಾಗೋದು ಖಚಿತ!”

-ಎಂದು ಹೇಳಿ ಅಭಿನಯದಲ್ಲಿ ತೇಲುಗಣ್ಣಾದಾಗ ಇಬ್ಬರೂ ಪರಸ್ಪರ ಮುಖ ನೋಡಿ ತೃಪ್ತಿಯ ನಗೆ ನಕ್ಕರು. ದೂರದಲ್ಲಿ ಕಾಣದ ಹಾಗೆ ಕತ್ತಲೆಯಲ್ಲಿದ್ದ ಮಹಾರಾಣಿಯ ಕಡೆಗೆ ಕಣ್ಸನ್ನೆ ಮಾಡಿ, ಶಿಖರಸೂರ್ಯನನ್ನು ತೋರಿಸಿ ಅರ್ಥಕೌಶಲ ಹುಬ್ಬು ಹಾರಿಸಿದ. ಇದು ಸಕಾಲವೆಂದರಿತು ಶಿಖರಸೂರ್ಯನ ಪಾತ್ರೆಗೆ ಇನ್ನಷ್ಟು ಮದ್ಯ ಸುರಿಯುತ್ತ ನೇರವಾಗಿ ಕೇಳಿದ:

“ಅರಮನೆಯಲ್ಲಿ ಇವತ್ತು ಮಹಾರಾಜನ ಭೇಟಿ ಮಾಡಿದೆಯಲ್ಲ, ಮಹಾರಾಜರ ಆರೋಗ್ಯ ಸರಿಯಿದೆಯೇ ವೈದ್ಯನೆ? ಅಥವಾ……?

ಮಹಾರಾಜನ ವಿರುದ್ಧವಾಗಿ ಅರ್ಥಕೌಶಲ, ಮಹಾರಾಣಿ ಹಾಗೂ ಅವರ ಮಗ ಆದಿತ್ಯಪ್ರಭ ಗುಂಪಾಗಿ ಅಧಿಕಾರ ಕಸಿಯಲು ಹಾತೊರೆಯುತ್ತಿರುವ ಸಂಗತಿಯನ್ನು ಶಿಖರಸೂರ್ಯ ಮೊದಲೇ ಅನುಮಾನಿಸಿದ್ದ. ಆ ಮುದಿ ದೊರೆ ಸಕಾಲದಲ್ಲಿ ಹಿಂದೆ ಸರಿಯದಿದ್ದರೆ, ಸಾಯಿಸಿಯಾದರೂ ಮುಂದೆ ಬರುವ ಮಹತ್ವಾಕಾಂಕ್ಷೆ ಆದಿತ್ಯಪ್ರಭನಿಗಿದ್ದದ್ದು ತಿಳಿದಿತ್ತು. ಈ ಮುದಿರಾಜ ಇರುವತನಕ ಎಳ್ಳುಕಾಳಷ್ಟು ಚಿನ್ನವೂ ಈ ರಾಜ್ಯಕ್ಕೆ ಬಾರದೆಂದು ಅರ್ಥಕೌಶಲ ಆಪ್ತರೆದುರಿಗೆ ಹೇಳಿದ್ದನ್ನ ಶಿಖರಸೂರ್ಯನೇ ಕೇಳಿಸಿಕೊಂಡಿದ್ದ. ಈಗ ಹೇಳಿದ:

“ನೋಡಿ ಪ್ರಧಾನರೇ, ನಾನು ವೈದ್ಯ. ಮಹಾರಾಜರ ಗುಪ್ತ ರೋಗಗಳನ್ನೇ ಆಗಲಿ ಬಹಿರಂಗದ ರೋಗಗಳನ್ನೇ ಆಗಲಿ ಇನ್ನೊಬ್ಬರೆದುರಿಗೆ ಹೇಳಬಾರದು. ಯಾಕಂತೀರೋ? ಮಹಾರಾಜರ ಆರೋಗ್ಯದ ಮೇಲೆ ರಾಜ್ಯದ ದೈವ ನಿರ್ಣಯ ನಿಂತಿರುತ್ತದೆ. ಸರಿ ಅಂತೀರೋ ಅಲ್ಲ ಅಂತೀರೋ?”

“ಅದು ಸರಿ ರಾಜವೈದ್ಯನೇ, ನಾವು ಮಹಾರಾಜರಿಗೆ ನೇರ ಸಂಬಂಧಪಟ್ಟವರಲ್ಲವೆ? ನಮಗೂ ತಿಳಿಯುವುದು ಬೇಡವೇ?”

“ಅದಕ್ಕೇ ನಾನು ನಿಮಗೆ ಹೇಳಲಿಲ್ಲ. ಯಾಕಂದರೆ ಮಹಾರಾಜರೇ ತಮಗೆ ತಿಳಿಸುತ್ತಾರೆ? ಅಲ್ಲವೇ?”

ಇದನ್ನು ಅರ್ಥಕೌಶಲ ಊಹಿಸಿರಲಿಲ್ಲ. ಆತ್ಮೀಯರೆಂದ ಮೇಲೆ ನಮಗೆ ಮಹಾರಾಜ ಹೇಳಿಯೇ ಹೇಳುತ್ತಾನೆಂಬುದು ತಾರ್ಕಿಕವಾಗಿಯೇ ಇದೆ, ನಿಜ. ಆದರೂ ಈತ ಕೊಂಚದವನಲ್ಲ. ತಾವು ಬಚ್ಚಿಟ್ಟ ಮಾತುಗಳನ್ನೇ ಆಡುತ್ತಿದ್ದಾನೆಂದು ಊಹಿಸಿದ. ತೇಲುಗಣ್ಣಿನ ಅಂಚಿನಿಂದ ಪ್ರಧಾನಿಯ ಮುಖವನ್ನೇ ನೋಡುತ್ತ ಆದಿತ್ಯಪ್ರಭ ಹೇಳಿದ:

“ವಿಷಯ ಹಾಗಲ್ಲ ವೈದ್ಯನೇ; ಮಹಾರಾಜರಿಗೆ ನೇರ ಸಂಬಂಧಪಟ್ಟವರು ನವಾದ್ದರಿಂದ ನೋವಾಗದಿರಲೆಂದೇ ಮಹಾರಾಜರು ನಮಗೆ ಕೆಲವು ಸಂಗತಿಗಳನ್ನು ಹೇಳೋದೆ ಇಲ್ಲ. ಬದಲು ತಮ್ಮ ತಾವೇ ಹಿಂಸಿಸಿಕೊಳ್ಳುತ್ತಾರೆ.”

-ಎನ್ನುತ್ತ ಪ್ರಧಾನಿಯ ಮುಖ ನೋಡಿದ ಆತ ಮೆಚ್ಚಿಕೊಳ್ಳಲೆಂದು. ಈಗ ಕತ್ತಲೆಯಲ್ಲಿದ್ದ ಮಹಾರಾಣಿ ದನಿ ನಡುಗಿಸಿ ಗದ್ಗದಳಾಗಿ ಕೇಳಿದಳು:

“ಇದು ನಿನಗೆ ಗೊತ್ತಿಲ್ಲದ ವಿಚಾರವೇ ರಾಜವೈದ್ಯನೇ? ನಾನಾಗಲಿ, ಯುವರಾಜರೇ ಆಗಲಿ, ನನ್ನ ಅಣ್ಣನವರಾದ ಪ್ರಧಾನಿಗಳೇ ಆಗಲಿ ನಾವೆಲ್ಲ ಮಹಾರಾಜರನ್ನೇ ನಂಬಿ ಜೀವ ಹಿಡಿದವರಲ್ಲವೇ?”

ಎಂದು ಹೇಳಿ ಒಂದು ಸಲ ಬಿಕ್ಕಳಿಸಿ “ಮಹಾರಾಜರಿಗೆ ಯಾವುದಾದರೂ ಹೊಸ ಖಾಯಿಲೆ ಸುರುವಾಗಿದೆಯೇ? ವೈದ್ಯನೇ?” ಎಂದಳು. ಅವಳ ದನಿಯಲ್ಲಿಯ ಯಾವ ಭಾಗವನ್ನು ಗ್ರಹಿಸಿತೋ ಅವಳ ನಾಯಿ ದೊಡ್ಡದಾಗಿ ಬೊಗಳಿತು. ಅದರ ದನಿಯೂ ಗದ್ಗದವಾಗಿತ್ತು. ಮಹಾರಾಣಿಯ ದನಿ ಕೇಳಿ ಗಡಬಡಿಸಿ ಶಿಖರಸೂರ್ಯ ಎದ್ದು ನಿಂತ. ಅರ್ಥಕೌಶಲ ಕುಳಿತುಕೊಳ್ಳಲು ಸನ್ನೆ ಮಾಡಿದ. ಹೆದರುವಂತೆ ಅಭಿನಯಿಸುವ, ಗೌರವಕ್ಕೆ ಎದ್ದು ನಿಲ್ಲುವ ಅಭಿನಯದಲ್ಲಿ ಅವರಿಗೆ ಕೊಡುವ ಉತ್ತರವನ್ನು ಮರೆಮಾಚುವಂತೆ ಇವನೂ ಅಭಿನಯಿಸುತ್ತಿದ್ದ. ಎಲ್ಲರೂ ಸ್ತಬ್ಧರಾದ ಮೇಲೆ ಅರ್ಥಕೌಶಲ ಪಿಸುದನಿಯಲ್ಲಿ ಮತ್ತೆ ಅದೇ ಪ್ರಶ್ನೆ ಕೇಳಿದ. ಉತ್ತರಕ್ಕೆ ಅವರೆಷ್ಟು ಕಾತರರಾಗಿದ್ದರೆಂದು ತಿಳಿದು ಅವರ ಮಹತ್ವಾಕಾಂಕ್ಷೆಯ ಅರಿವಾಗಿ ‘ಈಗ ಸಮ್ಮನಿರೆಂದು ಆಮೇಲೆ ತಿಳಿಸುವುದಾಗಿ’ ಕದ್ದು ಹೇಳಿದ.

ಊಟವಾದ ಮೇಲೆ ಎಲಡಿಕೆ ಮೆಲ್ಲುವಾಗ ಅರ್ಥಕೌಶಲ ಮತ್ತೆ ಅದೇ ಪ್ರಶ್ನೆ ಕೇಳಿದ.

“ಅದು ಭಯಂಕರ ರೋಗವಲ್ಲ ಪ್ರಧಾನಿಗಳೇ, ಅವರು ಮನಸ್ಸು ಮಾಡಿದರೆ ಒಂದು ವಾರದಲ್ಲಿ ವಾಸಿಯಾಗಬಹುದಾದ್ದು. ಕೆಲವು ಪಥ್ಯಗಳಿವೆ. ಅವರೇ ಪಥ್ಯ ಪಾಲಿಸುವ ದೊಡ್ಡ ಮನಸ್ಸು ಮಾಡಬೇಕು.”

ಎಂದು ಹೇಳಿ ನೇರವಾಗಿ ಇಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ “ಮಹಾರಾಜರಿಗೆ ಈ ಸಲ ಬಂದಿರೋದು ಭಯದ ರೋಗ!”

ಎಂದು ಹೇಳಿ ಒಳಗೆ ಮಂದ ಬೆಳಕಿನಲ್ಲಿ ಪೀಠದ ಮೇಲೆ ಕುಳಿತಿದ್ದ ಮಹಾರಾಣಿಯ ಕಡೆಗೂ ನೋಡಿದ. ಅರ್ಥಕೌಶಲ ತಾಳ್ಮೆಕಳೆದುಕೊಂಡು ಕೇಳಿದ:

“ಅವರೇ ಮನಸ್ಸು ಮಾಡುವುದೆಂದರೇನು ವೈದ್ಯನೇ?”

“ಮಾನಸಿಕ ರೋಗ.”

“ಅದು ವಯಸ್ಸಿಗೆ ಸಹಜ”

“ಅಲ್ಲ, ಭಯ ಹೊರಗಿನದು. ಬಿಳಿಗಿರಿರಾಯ ಹ್ಯಾಗೆ ದೈವಾಧೀನನಾದನೆಂದು ಅವರಿಗೆ ತಿಳಿದಿದೆ.”

“ಹ್ಯಾಗೆ ಅಂದರೆ ಜೀವ ಹೋಗಿ”

-ಪ್ರಧಾನಿ ನಗುತ್ತ ಹೇಳಿದ.

“ಅಲ್ಲ, ವಿಷಕನ್ಯೆಯ ಸಂಪರ್ಕದಿಂದ!”

ಅರ್ಥಕೌಶಲನ ನಗು ವಿಕಾರವಾಗಿ ಯಾರೋ ತನ್ನನ್ನು ಅವಮಾನಿಸಿದಂತಾಗಿ ಮುಖ ಕಪ್ಪಗಾಯಿತು. ನಕ್ಕಂತೆ ಸೋಗು ಮಾಡಿದರೂ ಒಳಗೊಳಗೆ ಭಯವಾಯಿತು. ಕೃತಕ ನಗೆಯನ್ನು ಮುಂದುವರಿಸಲಾರದೆ, ಉಕ್ಕುವ ಉದ್ವೇಗವನ್ನು ಹತ್ತಿಕ್ಕಲಾರದೆ, ಎದ್ದುಹೋಗಿ ನೀರು ಕುಡಿದು ಬಂದ. ಆಮೆಲೆ ವ್ಯಥೆಭರಿತ ದನಿಯನ್ನು ಗಡುಸಾಗಿಸಿ ಮಾತಿನಲ್ಲಿ ಗಾಢವಾದ ರಾಜನಿಷ್ಠೆಯನ್ನು ಪ್ರದರ್ಶಿಸುತ್ತ ಹೇಳಿದ:

“ಇಂಥ ಕತೆಗಳನ್ನು ಮಹಾರಾಜರು ನಂಬುತ್ತಾರಲ್ಲ ಮಾರಾಯಾ!”

“ಕತೆಯಾಗುವುದಕ್ಕೆ ನಾಲ್ವರು ವಿನಾ ಈ ಸುದ್ದಿ ಯಾರಿಗೂ ತಿಳಿದಿಲ್ಲ ಪ್ರಧಾನಿಗಳೇ. ಮಹಾರಾಜರಾಯ್ತು ಈಗ ನೀವು ಮೂವರಾಯ್ತು.”

“ಅಂದರೆ ಈ ಸುದ್ದಿಯ ಜನಕ ನೀನೇ ಎಂದಾಯ್ತು!”

ಶಿಖರಸೂರ್ಯ ಈ ಮಾತಿನಿಂದ ಎಷ್ಟೂ ವಿಚಿಲಿತನಾಗದೆ “ನಿಜ” ಎಂದು ಹೇಳಿ ತನ್ನ ಮಾಮೂಲಿ ವರಸೆಯಲ್ಲಿ ಹೇಳಿದ:

“ಬಿಳಿಗಿರಿರಾಯ ವಿಷಕನ್ಯೆಯಿಂದ ಮರಣ ಹೊಂದಿದ ಸುದ್ದಿಯನ್ನು ರಾಜ್ಯ ನಡೆಸುವ ನೇತಾರರಿಗೆ ತಿಳಿಸಬೇಕಾದ್ದು ರಾಜವೈದ್ಯನಾದ ನನ್ನ ಕರ್ತವ್ಯ. ನಾನದನ್ನು ಮಾಡಿದ್ದೇನೆ. ಇದು ಹೇಳಲೇಬೇಕಾದ ಮಾತು. ಆಶ್ವರ್ಯವೆಂದರೆ ಮಹಾರಾಜರಿಗಿದು ಗೊತ್ತೇ ಇರಲಿಲ್ಲ. ಮಧ್ಯದವರ್ಯಾರೋ ಮಾಡಿದ್ದೆಂದು ತಿಳಿದು ಭಯಭೀತರಾದರು.”

ಈ ಮಾತು ಕೇಳಿದ್ದೇ ಅಸಮಾಧಾನದಿಂದ ಮತ್ತೆ ಅರ್ಥಕೌಶಲನ ಮುಖ ಕಿವುಚಿ ವಿಕಾರಗೊಂಡಿತು. ಮುಂದೆ ಮಾತು ಬೆಳೆಸಿದರೆ ಅದರ ತುದಿ ತನ್ನಲ್ಲಿಗೇ ಬಂದು ತಲುಪಬಹುದೆಂದು ಅರಿವಾಗಿ ಅವನ ಮಾತುಗಳನ್ನು ಕತ್ತರಿಸಿ ಆಜ್ಞೆಯೆಂಬಂತೆ ದರ್ಪದಿಂದ ಹೇಳಿದ:

“ಸುದ್ದಿಯ ಸತ್ಯಾಸತ್ಯತೆಯ ವಿಚಾರ ಆಮೇಲೆ ತಿಳಿಯೋಣ. ಮಹಾರಾಜರಿಗೆ ಹೇಳಿದ ಹಾಗೆ ಅವರ ಆಪ್ತರಾದ ನಮಗೂ ತಿಳಿಸಿದ್ದು ಒಳ್ಳೆಯದಾಯಿತು. ನಿನಗಿನ್ನೂ ಆಶ್ಚರ್ಯವಾದೀತು: ಸುದ್ದಿ ನಮಗೂ ತಿಳಿದಿರಲಿಲ್ಲ ವೈದ್ಯನೇ! ಸದ್ಯಕ್ಕೆ ಈ ಸುದ್ದಿ ನಮ್ಮಲ್ಲೇ ಇರಲಿ. ಯಾಕಂತೀನಿ, ಇದು ಎರಡು ನೆರೆಹೊರೆ ರಾಜ್ಯಗಳ ಆಂತರಿಕ ಸಂಬಂಧದ ವಿಚಾರ; ಗೊತ್ತಾಯಿತಲ್ಲ?”

ಮಹಾರಾಣಿ ತನ್ನ ನಾಯಿಯನ್ನು ಒದ್ದಳೆಂದು ತೋರುತ್ತದೆ, ಅದು ಕುಂಯೋ ಎಂದೊದರಿ ಸುಮ್ಮನಾಯಿತು. ಮತ್ತೆ ಮೌನ ವ್ಯಾಪಿಸಿತು. ಅರ್ಥಕೌಶಲ ಮೆಲ್ಲಗೆ ಮುಖ ಮುಂದೆ ತಂದು ಶಿಖರಸೂರ್ಯ ತನ್ನ ಒಳಗೆ ಇಣಿಕಿ ಹಾಕದಂತೆ ಎಚ್ಚರ ವಹಿಸಿ, ಕೆಟ್ಟದ್ದನ್ನು ತಾನೆಂದೂ ಯೋಚಿಸುವುದೇ ಸಾಧ್ಯವಿಲ್ಲವೆಂಬಂಥ ವಿಶ್ವಾಸವನ್ನು ಎದುರಿನವರಲ್ಲಿ ಮೂಡಿಸಲು ಪ್ರಯತ್ನಿಸುತ್ತ, ಭಾವಕ್ಕೆ ತಕ್ಕಂಥ ಏರಿಳುವುಗಳನ್ನು ದನಿಯಲ್ಲಿ ಮಾಡದೆ, ಸ್ಥಿರವಾದ ಮಂದಹಾಸ ಬೀರುತ್ತ ಹೇಳಿದ:

“ನೋಡು ಮಿತ್ರಾ, ನೀನು ನಮ್ಮವ್ವ. ನೀನು ಈ ಊರಿಗೆ ಬಂದಾಗ ಮೊದಲು ನನ್ನ ಮನೆಗೇ ಬಂದೆಯಲ್ಲ, ಆಗಲೇ ನೀನು ನಮ್ಮ ಬಳಗದ ಸದಸ್ಯನಾಗಿಬಿಟ್ಟೆ. ನಿನ್ನ ಬಿಟ್ಟು ನಾವು ಆಲೋಚನೆ ಮಾಡೋದನ್ನ ಎಂದಾದರು ಕಲ್ಪಿಸಿದ್ದೀಯಾ? ಸಾಧ್ಯವಿಲ್ಲ. ಯಾಕೆ ಹೇಳು? ಯಾಕೆಂದರೆ ನಿಜವಾಗಿ ಸಾಧ್ಯವಿಲ್ಲ. ಅದಕ್ಕೆ!”

ಶಿಖರಸೂರ್ಯ ಸುಮ್ಮನೇ ಕುಂತಿದ್ದ. ಅರ್ಥಕೌಶಲ ಈಗ ಒಲಿಸಿಕೊಳ್ಳುವ ಉಪಾಯವಾಗಿ ಬಲಗೈ ಶಿಖರಸೂರ್ಯನ ಭುಜದ ಮ್ಯಾಲಿರಿಸಿ ಸ್ನೇಹದಿಂದ ಹೇಳಿದ:

“ನೀನ್ಯಾಕೆ ಯುವರಾಜನನ್ನು ವಜ್ರದೇಹಿಯನ್ನಾಗಿ ಮಾಡಬಾರದು?”

ಮಹಾರಾಜ ಅಥವಾ ಯುವರಾಜ ಅಥವಾ ಪ್ರಧಾನಿ ಅಥವಾ ಈ ಮೂವರೂ ವಜ್ರದೇಹಿಗಳಾಗುವ ಆಮಿಷದಿಂದ ತನ್ನ ಬಳಿ ಬರುತ್ತಾರೆಂದು ಶಿಖರಸೂರ್ಯ ನಿರೀಕ್ಷಿಸಿದ್ದ. ಈತನಕ ಅವರಿಬ್ಬರ ಸಹವಾಸದಲ್ಲಿ ಅಪಮೇಳವಾದಂತೆ, ವಯಸ್ಸು ಮಾತ್ರವಲ್ಲ ಮನಸ್ಸು ಕೂಡ ಹೊಂದಾಣಿಕೆ ಆಗದೆ, ಇಬ್ಬರೂ ತನ್ನ ಬಗ್ಗೆ ಮರುಗುವಂತೆ ಕೂತಿದ್ದ ಆದಿತ್ಯಪ್ರಭ ಈಗ ಉತ್ಸಾಹದಿಂದ ಅದರಿಂದ ಹೊರಬರಬೇಕೆಂದು ಮಾತಾಡಿದ.

“ಮಿತ್ರಾ, ನಮ್ಮ ರಾಜ್ಯಕ್ಕೆ ನಿನ್ನ ಸೇವೆ ಬೇಕು. ಕೇವಲ ರಾಜವೈದ್ಯನಾಗಿ ಮಾತ್ರವಲ್ಲ, ರಾಜ್ಯದ ಆಪ್ತಮಿತ್ರನಾಗಿ, ಸೇನಾನಿಯಾಗಿ, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಬಳಗದವನಾಗಿ ನಿನ್ನ ಸೇವೆ ಬೇಕು. ಮಾವನವರು ಹೇಳಿದ ಹಾಗೆ ನಾವ್ಯಾರೂ ಯಾವುದೇ ಸಂದರ್ಭದಲ್ಲಿ ನಿನ್ನ ಬಿಟ್ಟು ಆಲೋಚನೆ ಮಾಡಿದವರೇ ಅಲ್ಲ. ಕನಕಪುರಿ ಬಲಿಷ್ಠ ಸಾಮ್ರಾಜ್ಯವಾಗಬೇಕು. ಐವತ್ತೈದೂ ದೇಶಗಳನ್ನು ಆಳುವ ಏಕಮೇವ ಸಾಮ್ರಾಜ್ಯವಾಗಬೇಕು. ಈ ನಮ್ಮ ಸಂಕಲ್ಪಕ್ಕೆ ನೀನೇ ದಾರಿದೀಪ, ನೀನೇ ಗುರು, ನೀನೇ ನಾಯಕ. ಈ ಸಾಧನೆಗಾಗಿ ನನಗೆ ವಜ್ರದೇಹ ಬೇಕು. ಅದನ್ನು ಕೊಡೋದು ನಿನ್ನಿಂದ ಮಾತ್ರ ಸಾಧ್ಯ. ನೀನು ದೊಡ್ಡ ಮನಸ್ಸು ಮಾಡಬೇಕು.”

ಶಿಖರಸೂರ್ಯ ಆದಿತ್ಯಪ್ರಭನ ಮಾತು ಕೇಳುತ್ತ, ಅವನ ಹಾವಭಾವಗಳ ಮೂಲಕ ಅವನ ಹೃದಯದಲ್ಲಿ ಇಣಿಕಿ ನೋಡುತ್ತ, ತನ್ನ ಮಹತ್ವಾಕಾಂಕ್ಷೆಯನ್ನು ಅದರೊಂದಿಗೆ ತಾಳೆ ಹಾಕುತ್ತ ಕೂತಿದ್ದ. ಜೊತೆಗೆ ಎದುರಿಗಿದ್ದ ಅರ್ಥಕೌಶಲನ ಮತ್ತು ಹದ್ದಿನ ನೆರಳಿನಂತೆ ಆಗಾಗ ಸಂಚಿರಿಸಿ ಕದ್ದು ಕೇಳಿಸಿಕೊಳ್ಳುತ್ತಿದ್ದ ಮಹಾರಾಣಿಯನ್ನೂ ಗಮನಿಸುತ್ತಿದ್ದ. ಯುವರಾಜ ಭಾವಾವೇಶದಿಂದ ಮಾತಾಡಿದ್ದರಿಂದ ಮಾತು ಮುಗಿದ ಮೇಲೆ ಕೆಂಪಗಾದ ಮುಖದಲ್ಲಿ ಕಿರುಬೆವರು ಮೂಡಿತ್ತು. ಅನಗತ್ಯ ಭಾವಾವೇಶಕ್ಕೆ ಒಳಗಾದನೆಂಬ ಸಣ್ಣ ನಾಚಿಕೆಯೂ ಮುಖದಲ್ಲಿತ್ತು. ಶಿಖರಸೂರ್ಯ ಗದ್ಗದ ಕಂಠದಿಂದ ಮೆಲ್ಲನೆ ಉಸುರಿದ:

“ನಿಮ್ಮ ಮಾತು ಕೇಳಿ ಉದ್ವೇಗಕ್ಕೆ ಒಳಗಾಗಿದ್ದೇನೆ; ಕ್ಷಮಿಸಿ ಯುವರಾಜರೇ. ಪ್ರಧಾನಿಗಳೇ, ಮಹಾರಾಣಿಯವರು ಹಾಗೂ ನಿಮ್ಮ ನಂಬಿಕೆಗೆ ಅರ್ಹನಾದುದು ನನ್ನ ಸೌಭಾಗ್ಯ! ತಮ್ಮ ಸ್ನೇಹದ ಋಣವನ್ನು ಒಂದು ಜನ್ಮದಲ್ಲಿ ತೀರಿಸುವುದು ಸಾಧ್ಯವೇ? ಎಂದು ಚಿಂತೆಯಾಗಿದೆ ನನಗೆ. ಯುವರಾಜರನ್ನು ವಜ್ರದೇಹಿಯಾಗಿ ಮಾಡುವ ಕೆಲಸವನ್ನು ಒಪ್ಪುತ್ತೇನೆ. ಆದರೆ ತಾವಿಟ್ಟ ವಿಶ್ವಾಸಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಮಹಾರಾಜರ ಸೇವೆ ಮಾಡಲಾಗುತ್ತಿಲ್ಲವಲ್ಲ-ಎಂಬುದೇ ನನ್ನ ಚಿಂತೆಯಾಗಿದೆ. ನನ್ನ ಮಾತನ್ನು ತಾವು ನಂಬಬೇಕು ಪ್ರಧಾನಿಗಳೇ…”

-ಎಂದು ಹೇಳುತ್ತ ಮುಂದಿದ್ದ ಅರ್ಥಕೌಶಲನ ಎರಡೂ ಹಸ್ತಗಳನ್ನು ತನ್ನ ಹಸ್ತಗಳಲ್ಲಿ ಇಟ್ಟುಕೊಂಡು ಅಪಾರವಾದ ಗಾಢಸ್ನೇಹವನ್ನು ಸೂಚಿಸುವಂತೆ ಮೆಲ್ಲಗೆ ಹಿಸುಕಿ ಅರ್ಥಕೌಶಲ ಮತ್ತು ಯುವರಾಜರಿಗೆ ಕಾಣಿಸುವಂತೆ ಎರಡು ಹನಿ ಕಣ್ಣೀರು ಸುರಿಸಿದ. ಅರ್ಥಕೌಶಲ ಹೇಳಿದ:

“ಮಿತ್ರಾ, ಗಾಢವದ ನಂಬಿಕೆ, ವಿಶ್ವಾಸ, ಪ್ರೀತಿ ನಮ್ಮ ನಮ್ಮಲ್ಲಿ ಇರದಿದ್ದರೆ ನಾವು ಇಲ್ಲಿ ಹೀಗೆ ಕೂಡ್ತಿದ್ದಿವ ಒಟ್ಟಾಗಿ? ಮಹಾರಾಜರ ರೋಗ ಪರಿಹಾರ ಮಾಡಿದೆ. ಬಿಳಿಗಿರಿರಾಯನ ಸಾವನ್ನ ಚಾಕಚಕ್ಯತೆಯಿಂದ ನಿಭಾಯಿಸಿದೆ!  ಸ್ವಲ್ಪ ಯೋಚನೆ ಮಾಡು; ನೀನಿಲ್ಲದಿದ್ದರೆ ಆ ಕಾಡು ಜನರ ಮೇಲೆ ಸೈನ್ಯ ಬಿಟ್ಟುಕೊಂಡು ರಾಡಿ ಮಾಡಿಕೊಳ್ತಿದ್ದಿವಿ! ಅಂಥ ಯಾವ ಉಸಾಬರಿಯೂ ಇಲ್ಲದೆ ಸಮಸ್ಯೆ ಬಗೆಹರಿಯಿತಲ್ಲವೊ? ಇದನ್ನೆಲ್ಲ ಅರಮನೆ ಮರೆಯೋದು ಸಾಧ್ಯವೇ? ಈಗ ಹೇಳು ಮಹಾರಾಜರ ವಿಷಯದಲ್ಲೇನಾದರೂ ಸಮಸ್ಯೆ ಇದೆಯೆ?”

“ಸಮಸ್ಯೆ ಇದೆ ಪ್ರಧಾನರೆ, ಮಹಾರಾಜರು ಅಖಂಡ ಸುಖದ ಬದುಕನ್ನು ಬಾಳಿದವರು, ಬೆಳೆದವರು; ಆಹಾರದಲ್ಲಿ ಸಂಯಮ ತೋರುತ್ತಿಲ್ಲ ಎನ್ನುವುದು ನನ್ನ ಸಮಸ್ಯೆ. ಇದೇ ಮುಂದುವರಿದು ಒಂದು ವರ್ಷದಲ್ಲಿ ಏನಾದರೂ ಎಡವಟ್ಟಾದರೆ ಆಗುವ ದುಷ್ಪರಿಣಾಮಕ್ಕೆ ನಾನು ತಲೆ ಕೊಡಬೇಕಾಗುತ್ತದೆ.”

ಮೂವರಲ್ಲೂ ಮೌನ ಆವರಿಸಿತು. ಒಂದೇ ಮಾತಿನಲ್ಲಿ ಅಲ್ಲಿದ್ದ ಮೂವರಿಗೂ ಪ್ರಿಯವಾಗುವಂಥ ವಿಷಯಗಳನ್ನು ಜಾಣ್ಮೆಯಿಂದ ಬಹಿರಂಗಪಡಿಸಿ ಅವರ ಕುತಂತ್ರಕ್ಕೆ ಕುಮ್ಮಕ್ಕು ಕೊಟ್ಟ ಶಿಖರಸೂರ್ಯ. ಮಹಾರಾಜರ ಆಯುಷ್ಯ ಇನ್ನೊಂದು ವರ್ಷವೆಂದು ಹೇಳಿ- ನಿಶ್ಚಿಂತವಾಗಿ ಇರಿ ಎಂಬ ಸಂದೇಶವನ್ನೂ ಕೊಟ್ಟು, ಆಹಾರದಲ್ಲಿ ಸಂಯಮ ತೋರಿಸುತ್ತಿಲ್ಲವಾದ್ದರಿಂದ ಹೆಚ್ಚು ತಿನ್ನಲು ಪ್ರೋತ್ಸಾಹಿಸಿದರೆ ನಿಮಗೆ ಬೇಗ ಫಲ ಉಂಟೆಂಬ ಆಸೆಯನ್ನೂ ಹಚ್ಚಿ, ಕ್ಷಿಪ್ರ ಪರಿಣಾಮ ತೋರಿಸಿದ ಮದ್ದು ವಿಷಕಾರಿಯಾಗಿ ಹುಸಿಹೋದ ತನ್ನ ಸಂತೋಷವನ್ನು ಅನುಭವಿಸಿದ. ಮಹಾರಾಣಿ ಕುಡಿದು ಮುಖ ಕೆಂಪೇರಿಸಿಕೊಂಡಳು. ಅರ್ಥಕೌಶಲ ಕೂತವನ್ನು ಕೂತೇ ಕನಸು ಕಾಣತೊಡಗಿದ. ಶಿಖರಸೂರ್ಯ ಯಾವಾಗಲೋ ನಗುನಗುತ್ತ ಮಾಯವಾಗಿದ್ದ!