ಆದಾಗಿ ಒಂದು ವಾರ ಕಳೆದರೂ ಯುವರಾಜ ಒಮ್ಮೆಯೂ ವಜ್ರಕಾಯದ ಮಾತೆತ್ತಲಿಲ್ಲ. ಆದರೆ ಆತ ಇನ್ನಾವುದೋ ಗುಪ್ತ ಹುನ್ನಾರದಲ್ಲಿ ಮುಳುಗಿರುವಂತೆ ಕಾಣಿಸುತ್ತಿತ್ತು. ಶಿಖರಸೂರ್ಯನೂ ಈ ಬಗ್ಗೆ ಮಾತಾಡಲಿಲ್ಲ.

ಒಂದು ದಿನ ಕೋಳಿ ಕೂಗಿ ಬೆಳಕೇರುವಾಗ ಶಿಖರಸೂರ್ಯ ನದಿಯಲ್ಲಿ ಮಿಂದು ಮನೆಗೆ ಬಂದಾಗ ಅಂಗಳದಲ್ಲಿ ನಾಲ್ಕು ಮಂದಿ ಕಾಡುಜನ ಗೊಂಡೆ ಕಟ್ಟಿದ ಕೋಲುಗಳನ್ನು ಹಿಡಿದುಕೊಂಡು ಶಿಸ್ತಿನಿಂದ ನಿಂತಿದ್ದರು. ಇವನನ್ನು ಕಂಡುದೇ ನಾಲ್ವರೂ ಅಂಡೆತ್ತಿ ಬಾಗಿ, ಎರಡು ಸಲ ನೆಲ ಬಡಿದು ನಮಸ್ಕಾರವನ್ನಾಚರಿಸಿ ನಿಂತರು. ನಾಲ್ವರೂ ಉನ್ನತ ಕಾಯರು, ದೊಡ್ಡ ಗಾತ್ರದವರು. ತಟ್ಟಿನಂತೆ ಉರುಟಾಗಿ ನೆಯ್ದ ಬಟ್ಟೆ ಹೊದ್ದು ಅಂಥದನ್ನೇ ಉಟ್ಟಿದ್ದರು. ಉತ್ತರೀಯದಂತೆ ಬಟ್ಟೆಯೊಂದನ್ನು ಭುಜದ ಮ್ಯಾಲೆ ಚೆಲ್ಲಿಕೊಂಡಿದ್ದರು. ಅವರಲ್ಲಿಯ ಒಬ್ಬನನ್ನು ಮಾತ್ರ ಶಿಖರಸೂರ್ಯ ಗುರುತಿಸಿದ. ಅವನ ಒಂದು ಕಣ್ಣು ಚಿಕ್ಕದಾಗಿದ್ದು ಆಗಾಗ ತಂತಾನೇ ಸಂಕುಚಿತವಾಗುತ್ತಿತ್ತು. ಹಾಗೆ ಸಂಕುಚಿತವಾದಾಗಲೆಲ್ಲ ಆತ ಕಣ್ಣು ಹೊಡೆದಂತೆ ಭಾಸವಾಗುತ್ತಿತ್ತು. ಅತಿ ಸೋಜಿಗದ ಅಪರಿಚಿತ ವಸ್ತುವನ್ನು ಕಂಡಾಗ ಆಗುವ ಕುತೂಹಲ ಇವನನ್ನು ಕಂಡಾಗಲೂ ಆಯಿತು.

ಇವನನ್ನು ಸುಕ್ರ ಮೂಬೆರಿಕಿ ಎಂದು ವರ್ಣಿಸಿದ್ದ. ಪತ್ತೇದಾರಿಯಲ್ಲಿ, ನರರ ಸ್ವಭಾವಗಳನ್ನು ಗುರುತಿಸುವಲ್ಲಿ, ಮತ್ತು ಮೋಸ ಮಾಡುವುದರಲ್ಲಿ ಹಾಗೂ ನಂಬಿಕೆಯಲ್ಲಿ ಇವನನ್ನು ಸರಿಗಟ್ಟುವವರು ಯಾರಿಲ್ಲವೆಂದು ಹೇಳಿದ್ದ. ಜೊತೆಗೆ ಇವನು ಸುಕ್ರನಿಗೂ ನಂಬಿಗಸ್ಥ. ಬಿಳಿಗಿರಿರಾಯನ ಶವದ ಬಳಿ ಬಂದಾಗ ಭಲ್ಲೆಯಿಂದ ಇರಿದು ನೋಡುತ್ತ ನಿಂತಿದ್ದವನು ಇವನೇ ಎಂದು ಗುರುತಿಸಿದ. ಶಿಖರಸೂರ್ಯ ಅವನ ಬಳಿಗೆ ಹೋಗಿ “ಬೆಟ್ಟ!” ಅಂದ. ಅವನು “ಹೌಂದು ನನ್ನೊಡೆಯಾ” ಎಂದು ಹೇಳಿ ಕಣ್ಣು ಹೊಡೆದು ಮಂದಹಾಸ ಬೀರಿ ಇನ್ನೊಮ್ಮೆ ನಮಸ್ಕಾರವನ್ನಾಚರಿಸಿದ.

ಇನ್ನೊಬ್ಬ ಕಟ್ಟುಮಸ್ತು ಮೈಕಟ್ಟಿನ, ದಪ್ಪ ಕೈಗಳ ವ್ಯಕ್ತಿ; ಒಂದೇ ಕಡೆ ನೋಡುತ್ತ ನಿಂತಿದ್ದ. ಅವಸರದಲ್ಲಿ ಒಡ್ಡೊಡ್ಡಾಗಿ ಕೆತ್ತಿದ ಬಂಡೆಗಲ್ಲಿನ ಮೂರ್ತಿಯಂತಿದ್ದ. ಆತನ ಹೆಸರು ಕೂಡ ಬಂಡೆಯನೆಂದೇ ಇತ್ತು. ಅವನ ನಿರ್ಭಾವದ ಮುಖದಲ್ಲಿ ಸಹಜ ಗೆರೆಗಳೊಂದೋ ಇರಲಿಲ್ಲ. ಭಾವನೆಗಳನ್ನು ಅಭಿವ್ಯಕ್ತಿಸುವಾಗ ಗೆರೆ ಮೂಡಬಹುದಿತ್ತೇನೋ, ಆದರೆ ಅವನನ್ನ ನೋಡಿದರೆ ಅವನೆಂದೂ ಭಾವನೆಗಳನ್ನ ಅನುಭವಿಸಿದವನಲ್ಲ ಎಂಬಂತಿದ್ದ. ಒರಟುತನ ಅವನ ದಪ್ಪ ಮುಖದಲ್ಲಿ ಅಚ್ಚೊತ್ತಿದಂತೆ ಇದುದ್ದರಿಂದ ಅವನನ್ನು ಕಂಡಾಗ ಯಾರಿಗಾದರೂ ಭಯವಾಗುತ್ತಿತ್ತು. ಶೂರ. ಯುದ್ಧಕಲೆಯನ್ನ ಚೆನ್ನಾಗಿ ಬಲ್ಲವನು. ಇತರರಿಗೆ ಅರಿವಾಗುವಂತೆ ಮಾತಾಡುವುದು ಅವನಿಗೆ ತಿಳಿಯದೆಂದೂ ಸುಕ್ರ ಹೇಳಿ ಕಳಿಸಿದ್ದ. ಇನ್ನೊಬ್ಬ ಮನುಷ್ಯ ಸಹಜವಾದ ಭಾವನೆಗಳನ್ನುಳ್ಳ ಎತ್ತರ ಕಾಯದವನು. ಮನೆಯಲ್ಲಿ ಕಾವಲಿಗೆ ಇಲ್ಲವೆ ಸಂದೇಶ ರವಾನೆಗೆ ಇರಲೆಂದು ಸುಕ್ರ ಹೇಳಿದ್ದ.

ಕೊನೆಯವನು ಬೊಂತೆಯ: ಸುಕ್ರ ಹೇಳಿ ಕಳಿಸಿದ್ದ;

“ನಿನಗೆ ಬೇಕೆನಿಸಿದಾಗ ಯಾರನ್ನಾದರೂ ಕೊಲೆ ಮಾಡುವ ಆಯುಧ ಇವನು! ನೀನು ಹೇಳಿದವರನ್ನ ಹೇಳಿದ ಸಮಯಕ್ಕೆ ಕೊಂದು ಹೇಳಿದಲ್ಲಿ ಚೆಲ್ಲಿ ಬರೋದೊಂದೇ ಇವನಿಗೆ ಗೊತ್ತಿರುವ ಕಸಬು, ಗುರಿ. ಯಾಕೆ ಕೊಲ್ಲಬೇಕೆಂದು ಇವನು ಕೇಳುವುದಿಲ್ಲ. ಕೊಂದದ್ದಕ್ಕೆ ಪ್ರತಿಫಲವೂ ಬೇಕಿಲ್ಲ. ಕೊಲ್ಲುತ್ತಾನೆ, ಯಾಕೆಂದರೆ ನೀನು ಹೇಳುತ್ತಿ, ಆದ್ದರಿಂದ ಈತ ನಿನ್ನ ಹತ್ತಿರ ಅನ್ಯರಿಗೆ ಕಾಣದ ಅಪಾಯಕಾರಿ ಆಯುಧ ಇದ್ದಂತೆ. ಆಯುಧಕ್ಕೂ ಇವನಿಗೂ ವ್ಯತ್ಯಾಸವೆಂದರೆ ಆಯುಧ ಒಮ್ಮೊಮ್ಮೆ ಹುಸಿಹೋಗಬಹುದು, ಇವನಲ್ಲ!”

ಬೆಟ್ಟನೇ ಉಳಿದ ಮೂವರಿಗೂ ನಾಯಕನೆಂದಾಯಿತು. ಮೊದಲಿನ ಮೂವರಿಗೂ ನಾಗರಿಕ ಭಾಷೆ ಬರುತ್ತಿತ್ತಾದ್ದರಿಂದ ಅವರಿಂದ ಕೆಲಸ ತೆಗೆಯುವುದು ಕಷ್ಟವಾಗಲಿಕ್ಕಿಲ್ಲವೆಂದು ಅನ್ನಿಸಿತು. ಆದರೆ ನಾಲ್ಕನೆಯ ಬೊಂತೆಯನಿಗೆ ಬಾಯಿ ಇಲ್ಲ; ಮೂಗ. ಆದರೂ ಸುಕ್ರ ಕಳಿಸಿರಬೇಕಾದರೆ ಅವನ ಉಪಯೋಗ ಇರಲೇಬೇಕೆಂದು ಇಟ್ಟುಕೊಂಡ. ನಾಲ್ವರೂ ಅವನ ವೈದ್ಯ ಶಿಷ್ಯರೆಂದು ಅರ್ಥಕೌಶಲನಿಗೆ ಹೇಳಿ ಅವರ ಸೇವೆಯನ್ನು ಒಪ್ಪಿಕೊಂಡ.

* * *

ಶಿಖರಸೂರ್ಯನ ‘ಅರಮನೆ ವಹಿವಾಟ’ದ ಮೂರು ವರ್ಷಗಳ ಈ ಅವಧಿಯಲ್ಲಿ ಎಷ್ಟು ಪ್ರಯತ್ನಿಸಿದರೂ ನಿರ್ಲಕ್ಷಿಸಲಾರದ ಮತ್ತೆ, ಮತ್ತೆ ಅನಾಯಾಸ ನೆನಪಿಗೆ ಬರುವ ವ್ಯಕ್ತಿ ಎಂದರೆ ಚಿಕ್ಕಮ್ಮಣ್ಣಿ. ಬೇರೆಯವರಿಗಾಗಿ ಸದಾ ಸ್ಪಂದಿಸುವ ಹೃದಯದ ಅವಳನ್ನು ಮರೆಯುವುದು ಸಾಧ್ಯವೇ ಇರಲಿಲ್ಲ. ಅವಳ ನೆನಪು ಬಹಳ ಹೊತ್ತು ಇದ್ದಾಗ ಹೋಲಿಕೆಗಾಗಿ ಮಹಾರಾಣಿ ನೆನಪಾಗುತ್ತಿದ್ದಳು. ಮಹಾರಾಣಿ ತನ್ನ ಅಪ್ರಿಯವಾದ, ಕ್ರೂರವಾದ ಕಣ್ಣು ಮತ್ತು ಕುಹಕತನ, ಲಜ್ಜೆಗಟ್ಟು ಪ್ರದರ್ಶಿಸುವ ಹೆಚ್ಚುಗಾರಿಕೆ, ಸ್ಪಷ್ಟವಾಗಿ ಅಭಿನಯವೆಂದು ಕಾಣುವ ಧೂರ್ತವಿನಯ, ಇವುಗಳನ್ನು ತನ್ನ ಸೌಂದರ್ಯದಿಂದ ಬಚ್ಚಿಡಲಾಗದ ರಾಕ್ಷಸಿಯಂತೆ ಕಾಣುತ್ತಿದ್ದಳು. ಅವಳನ್ನಾತ ದ್ವೇಷಿಸುತ್ತಿದ್ದ. ಯಾಕೆಂದರೆ ಆಕೆ ಚಿಕ್ಕಮ್ಮಣ್ಣಿಯನ್ನು ತನ್ನ ಸೇವಕಿಯೆಂಬಂತೆ ನಡೆಸಿಕೊಳ್ಳುತ್ತಿದ್ದಳು. ಇದೇ ಕಾರಣಕ್ಕಾಗಿ ಶಿಖರಸೂರ್ಯ ಒಳಗೊಳಗೆ ರಾಜ ಮತ್ತು ಪ್ರಧಾನಿಯನ್ನೂ ದ್ವೇಷಿಸುತ್ತಿದ್ದ. ರಾಜ ಚಿಕ್ಕಮ್ಮಣ್ಣಿಯ ಅಸಹಾಯಕತೆಯ ಎಲ್ಲಾ ಪ್ರಯೋಜನ ಪಡೆಯುತ್ತಿದ್ದ. ರಾತ್ರಿ ಉಪಯೋಗಿಸಿ ಹಗಲು ಮಹಾರಾಣಿಗೆ ಹೆದರಿ ಚಿಕ್ಕಮ್ಮಣ್ಣಿ ಅರಮನೆಯ ಗೌರವಕ್ಕೆ ತಕ್ಕ ಹೆಣ್ಣಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದ. ಆದರೂ ಬೇರೆ ದೇಶದ ರಾಜ, ಮಂತ್ರಿ ಬಂದಾಗ ಚಿಕ್ಕಮ್ಮಣ್ಣಿಯನ್ನ ಜೊತೆ ಕರೆಯುತ್ತಿದ್ದ. ಆಗವಳು ಬಹಳ ಸಂತೋಷದಿಂದ ಬರುತ್ತಿದ್ದಳು. ರಾಜನ ಬಗ್ಗೆ ನಿಜವಾದ ಪ್ರೀತಿ ಇದ್ದ ಪತಿವ್ರತೆ ಅವಳು.

ಇದನ್ನೇ ಶಿಖರಸೂರ್ಯ ಇಷ್ಟಪಡುತ್ತಿರಲಿಲ್ಲ. ಗಂಡ ಇಷ್ಟು ಕೆಟ್ಟದಾಗಿ ನಡೆಸಿಕೊಂಡರೂ ಅವನು ಕರೆದಾಗ ಹೋಗುವಳಲ್ಲ! ಇವಳಿಗೆ ಮಾನ ಅವಮಾನಗಳ ವ್ಯತ್ಯಾಸವೇ ತಿಳಿಯುವುದಿಲ್ಲವೆ? ತನ್ನ ಗಂಡನ ದ್ರೋಹ, ಮಹಾರಾಣಿಯ ಕುಹಕ, ತನ್ನ ಬಾಯಿಲ್ಲದ ಗಾಯಗಳು-ಇವುಗಳ ವಿಷಯ ಇವಳಿಗೇನೂ ತಿಳಿಯುವುದಿಲ್ಲವೆ? ಕೊನೇಪಕ್ಷ ಮಕ್ಕಳ ಬಗೆಗಿನ ಅರಮನೆಯ ನಿರ್ಲಕ್ಷವನ್ನಾದರೂ ತಿಳಿಯಬ್ಯಾಡವೆ? ಅವಳ ಕಳೆದುಹೋದ ಮಗ ತಿರುಗಿಬಾರದುದಕ್ಕೆ ಕಾರಣ ಯಾರು? ರಾಜನೇ ಇರಬೇಕು! ಅಷ್ಟಾದರೂ ಇವಳಿಗೆ ತಿಳಿಯಬಾರದೆ? ಅಥವಾ ಅವಮಾನದಲ್ಲೇ ಈ ಹೆಂಗಸಿಗೆ ಸಂತೋಷವಿದೆಯೆ? ಹಾಗಾದರೆ ಈಕೆ ನನ್ನ ಸಹಾನುಭೂತಿಗೆ ಯೋಗ್ಯಳಲ್ಲ ಎನಿಸುತ್ತಿತ್ತು. ಆದರೆ ಆಕೆಯ ಪ್ರಶಾಂತವಾದ ಮುಗುಳುನಗೆಯ ಮುಖ ಮತ್ತು ಇಂಪಾದ ದನಿ ಕೇಳಲು ಸದಾ ಕಾತರನಾಗಿರಲು ಕಾರಣವೇನು? ಅವಳ ಸರಳತನ, ಹೊಳೆವ ಕಣ್ಣು-ಇನ್ನೇನೋ ಹೇಳುತ್ತವೆ. ಪ್ರೀತಿಗೆ ನಾಚಿಕೆಯಿಲ್ಲ. ಪ್ರೀತಿಗೆ ಸೀಮೆಯಿಲ್ಲ. ಅದು ಎಲ್ಲವನ್ನು ತಾಳಿಕೊಳ್ಳುತ್ತದೆ. ಯಾವುದೇ ಪ್ರಸಂಗದಲ್ಲಿ ಅದು ಪ್ರೀತಿಸದೆ ಇರಲಾರದು! ಯಾವುದದು? ತಕ್ಷಣ ಹೊಳೆಯಿತು: ಅದು ಅವಳ ತಾಯ್ತನ! ಆ ಕ್ಷಣವೆ ಅವನಿಗೆ ಶಿವಾಪುರ ಗವಿಯ ಅಮ್ಮನ ಕಣ್ಣು ನೆನಪಾಗಿ – ಆ ವಿಚಾರ ಅಲ್ಲಿಗೆ ನಿಲ್ಲಿಸುತ್ತಿದ್ದ.

ಇತ್ತ ಚಿಕ್ಕಮ್ಮಣ್ಣಿಯ ಚಿಂತೆಗಳು ಹೆಚ್ಚಾಗಿದ್ದವು. ಅಣ್ಣನ ನಿಧನದಿಂದ ಅವಳ ಅಳಿದುಳಿದ ಆಸೆಗಳೂ ಇದ್ದಿಲಾಗಿದ್ದವು. ಅರಮನೆಯಲ್ಲಿಯ ದೇವರ ಗುಡಿಗೆ, ತೆವಳಿದಂತೆ ಮೆಲ್ಲಗೆ ಹೆಜ್ಜೆ ಇಡುತ್ತ ಹೋಗಿ ವಿಗ್ರಹದ ಮುಂದೆ-ಕಣ್ಣು ಮುಚ್ಚಿಕೊಂಡು ಕೂರುತ್ತಿದ್ದಳು. ಒಮ್ಮೊಮ್ಮೆ ಕೂತವಳು ಚಲನೆಯಿಲ್ಲದೆ ಕೂತೇ ಇರುತ್ತಿದ್ದಳು. ಆಗ ಮಾತ್ರ ನಿರ್ಜೀವ ಗೊಂಬೆಯಂತೆ ಕಾಣುತ್ತಿದ್ದಳು. ಒಮ್ಮೊಮ್ಮೆ ನಿಟ್ಟುಸಿರುಬಿಟ್ಟು ಕಳೆದುಕೊಂಡ ಮಗನ ನೆನಪಾಗಿ ಕಣ್ಣೀರು ಸುರಿಸುತ್ತಿದ್ದಳು. ದುಃಖ ಒತ್ತರಿಸಿ ಬಂದರೆ “ನನ್ನ ನಂದಾದೀಪವ ನಂದಿಸಿದೆಯೋ ಶಿವನೇ!” ಎಂದು ಮುಖ ಮುಚ್ಚಿಕೊಂಡು ಮಕ್ಕಳ ಹಾಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಮಗಳು ಛಾಯಾದೇವಿಗೂ ಇದೇ ಗತಿಯಾದರೆ ಹ್ಯಾಗೆಂದು ಹಗಲು ರಾತ್ರಿ ಚಿಂತಿಸುತ್ತಿದ್ದಳು. ಛಾಯಾದೇವಿ ತನ್ನ ಕಣ್ಣಿನಿಂದ ಅರೆಗಳಿಗೆ ಮರೆಯಾದರೂ ಕಳವಳಗೊಳ್ಳುತ್ತಿದ್ದಳು. ಇಂಥ ಸಂದರ್ಭಗಳಲ್ಲಿ ಪೂಜಾರಿ ಬಂದರೆ ಆಕೆಗೆ ಸಂತೋಷವಾಗುವಂತೆ ಪೂಜೆ ಮಾಡಿ, ಪ್ರಸಾದ ಕೊಟ್ಟು ಸಮಾಧಾನದ ನಾಲ್ಕು ಮಾತು ಹೇಳುತ್ತಿದ್ದ. ಅದರಲ್ಲಿ ‘ಕಳೆದ ಮಗ ತಿರುಗಿ ಸಿಕ್ಕುವನೆಂದು, ಛಾಯಾದೇವಿಯನ್ನು ಶಿವ ಕಾಪಾಡುತ್ತಾನೆಂದು’ ಎರಡು ಮಾತು ತಪ್ಪದೆ ಸೇರಿಸುತ್ತಿದ್ದ. ಆಗ ಮಾತ್ರ ಚಿಕ್ಕಮ್ಮಣ್ಣಿಯ ಉದ್ವೇಗ ಕಡಿಮೆಯಾಗಿ ಕಳೆಕಳೆಯಾಗುತ್ತಿದ್ದಳು. “ಹೌದೆ ನನ್ನಪ್ಪಾ!” ಎಂದು ಅವನ ಮುಂದೆ ಕೂತು ಅವನು ಹೇಳುವ ಎಲ್ಲ ದಂತಕತೆಗಳನ್ನು, ಶಿವನ ಪರವಾಗಿ ಕೊಡುವ ಭರವಸೆಗಳನ್ನು ಧ್ಯಾನದಿಂದ, ನಂಬುಗೆಯಿಂದ ಕೇಳಿ ತೃಪ್ತಿ ಹೊಂದುತ್ತಿದ್ದಳು.

ಒಮ್ಮೆ ಗುಡಿಯಲ್ಲಿ ಒಬ್ಬಳೇ ಕೂತು ತಾನಿದ್ದ ಸ್ಥಿತಿಯ ನೆನೆದು ಸಂಕಟ ಪಡುತ್ತಿದ್ದಳು. ಶಿಖರಸೂರ್ಯ ಅವಳಿಗೆ ಗೊತ್ತಾಗದಂತೆ ಅವಳ ಹಿಂದೆಯೇ ಮೂಲೆಯಲ್ಲಿ ನಿಂತುಕೊಂಡಿದ್ದ. ಸುಮ್ಮನೆ ಕೂತಿದ್ದ ಚಿಕ್ಕಮ್ಮಣ್ಣಿ ಇದ್ದಕ್ಕಿದ್ದಂತೆ “ಅಂದದ ಮಗ, ಚಂದದ ಮಗ, ರೂಪುರೇಖೆ ಸುದ್ದುಳ್ಳ ಮಗನ ಕಸಿದೆಯಲ್ಲೋ ಶಿವನೇ!” ಎಂದು ಆಕಾಶದ ಕಡೆ ನೋಡಿ ಶಿವದುಃಖ ಮಾಡುತ್ತ ಸಂಕಟದ ಆಧಿಕ್ಯದಲ್ಲಿ ತನ್ನ ಕೂದಲು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಶಿಖರಸೂರ್ಯ ಹೋಗಿ ಮೆಲ್ಲನೆ ಕೈಹಿಡಿದು “ಅಮ್ಮಾ” ಅಂದ. ಆಶ್ಚರ್ಯದಿಂದ ಚಿಕ್ಕಮ್ಮಣ್ಣಿ ಅವನ ಕಡೆ ನೋಡಿದರೆ- ಶಿಖರಸೂರ್ಯ! ಮುಖ ಪ್ರಕಾಶಮಾನವಾಯಿತು. “ಹೌದು, ನನ್ನ ಮಗ ನನ್ನೊಂದಿಗಿದ್ದಿದ್ದರೆ ಇಂದು ಹೀಗೇ ಅಮ್ಮಾ ಅಂತಿದ್ದ!” ಎಂದು ಹೇಳುತ್ತ ಶಿಖರಸೂರ್ಯನ ತೋಳುಗಳನ್ನ ಬಿಗಿಯಾಗಿ ಹಿಡಿದುಕೊಂಡಳು. ತಾನಾಡಿದ್ದು ನಂಬಿಕೆಯಾಗದೆ ಹಿಂದೆ ಸರಿದು ಶಿಖರಸೂರ್ಯನನ್ನು ಕಣ್ತುಂಬ ನೋಡಿದಳು. ಮುಖದಲ್ಲಿ ಕಪಟ ಕಾಣಲಿಲ್ಲವಾಗಿ ಮತ್ತೆ ತೋಳು ಹಿಡಿದುಕೊಂಡು ಚಿಕ್ಕವನಾಗಿದ್ದಾಗಿನ ಪುತ್ರಭಾಷಿತರ ನೆನದಳು. ಆನಂದವಾಗಿ ಯಾತನೆಯೂ ಆಗಿ, ಕೊರಳ ಸೆರೆ ಬಿಗಿದು, ಮುತ್ತಿನಂತ ಕಣ್ಣೀರು ಸುರಿಸುತ್ತ ಏನನ್ನೋ ನೆನೆಯುತ್ತಿದ್ದಾಗ ಯಾವಾಗಲೋ ಅಲ್ಲಿಗೆ ಬಂದಿದ್ದ ಪೂಜಾರಿ ಇದನ್ನೆಲ್ಲ ನೋಡಿ ಅವನೂ ಕಣ್ಣು ಒದ್ದೆ ಮಾಡಿಕೊಂಡು, ಇವರನ್ನು ಎಚ್ಚರಿಸಲೆಂದು ಗಂಟೆ ದನಿ ಮಾಡಿದ. ದೇವರು ಶುಭನುಡಿದನೆಂದು ಚಿಕ್ಕಮ್ಮಣ್ಣಿ ಎದ್ದಳು.

ಒಂದು ದಿನ ಮೂರು ಸಂಜೆ ಸುರುವಾಗುವ ಮುನ್ನವೇ ಚಿಕ್ಕಮ್ಮಣ್ಣಿ ದೇವಾಲಯಕ್ಕೆ ಬಂದಿದ್ದಳು. ಪೂಜಾರಿ ಇನ್ನೂ ಬಂದಿರಲಿಲ್ಲ. ಕಣಗಿಲೆ ಮರದ ಕೆಳಗೆ ಉದುರಿದ್ದ ತಾಜಾ ಹೂಗಳನ್ನು ಆರಿಸಿ ಉಡಿ ತುಂಬಿಕೊಳ್ಳುತ್ತಿದ್ದಳು. ಇವಳಿಗೆ ಗೊತ್ತಿಲ್ಲದ ಹಾಗೆ ದೂರ, ಗುಡಿಯ ಮರೆಯಲ್ಲಿ ಬೆಟ್ಟ. ಇವಳನ್ನೇ ಗಮನಿಸುತ್ತ ನಿಂತಿದ್ದ. ಚಿಕ್ಕಮ್ಮಣ್ಣಿಯ ಸರಳತೆಗೆ ಆತ ಬೆರಗಾಗಿದ್ದ. ಮಹಾರಜನ ಕೈಧಾರೆಯ ಮಡದಿಯಾಗಿ, ಬಿಗುಮಾನದ ನಡೆಯಿಲ್ಲ. ಆಕರ್ಷಕ ಭಾವ ಭಂಗಿಗಳಿಲ್ಲ, ಮಾತಿನಲ್ಲಿ ದರ್ಪವಿಲ್ಲ, ಸೇವಾಪರಿವಾರವಿಲ್ಲ, ಅಂಗರಕ್ಷಕರಿಲ್ಲ. ಸಂತೆಗೆ ಬಂದ ಸಾಮಾನ್ಯಳಂತೆ ಕಣಗಿಲ ಹೂವಾರಿಸುತ್ತ ಅಡ್ಡಾಡುತ್ತಿದ್ದಾಳೆ! ಮರುಕದಿಂದ ಮೈಮರೆಯುತ್ತ ನಿಂತಿದ್ದಾಗ ಚಿಕ್ಕಮ್ಮಣ್ಣಿ ಆಕಸ್ಮಾತ್ತಾಗಿ ಈ ಕಡೆ ತಿರುಗಿ ಇವನನ್ನ ನೋಡಿದಳು – “ಯಾರದು? ಬಾಪ್ಪಾ ಇಲ್ಲಿ” ಅಂದಳು. ಬಂದ.

‘ನನ್ನ ಕಂಡರೆ ನಿನಗೂ ಬೇಸರ ಏನಪ್ಪಾ?” ಅಂದಳು.

-ರಾಜ್ಯದ ಚಿಕ್ಕರಾಣಿ ಸೇವಕನಿಗೆ ಹೇಳುವ ಮಾತೇ ಇದು? ಬೆಟ್ಟ ಹಿಂದೆ ಮುಂದೆ ನೋಡದೆ ಹಾಜರಾಗಿ ಬಾಗಿ ನಮಸ್ಕಾರವನ್ನಾಚರಿಸಿ “ಮಹಾರಾಣಿ” ಅನ್ನಬೇಕಾಗಿತ್ತು, ಅದವನ ಬಾಯಿಂದ ಬಾರದೆ “ತಾಯೀ!” ಎಂದು ಹೇಳಿ ಬಾಗಿ ನಿಂತ.

“ಈಗೆರಡು ವಾರಗಳಿಂದ ನೋಡುತ್ತಿದ್ದೇನೆ; ಬೆಳಿಗ್ಗೆ ಬಂದವನು ಮದ್ದುಕೊಟ್ಟು ಇಲ್ಲೇ ಸುಳಿದಾಡುತ್ತಿ. ನೋಡಿದಾಗೊಮ್ಮೆ ಮುಖ ಕೆಳಗೆ ಹಾಕಿ ನೆಲ ನೋಡುತ್ತಿ. ಊಳಿಗದ ಕೆಲಸ ಏನೂ ಇಲ್ಲದಿದ್ದರೆ ಉದ್ಯಾನದ ತರುಮರ ನೋಡಿಕೊಳ್ಳುತ್ತಿ. ಇದನ್ನೆಲ್ಲ ಇಷ್ಟದಲ್ಲಿ ಮಾಡುತ್ತೀಯೋ? ಕಷ್ಟದಲ್ಲಿ ಮಾಡುತ್ತೀಯೋ ನನ್ನಿಂದ ನಿನಗೇನಾದರೂ ಆಗಬೇಕಾದಿದ್ದೆದೆಯೆ ನನ್ನಪ್ಪಾ?”

ದೊಡ್ಡ ದೇಶದ ರಾಣಿ ಸರಳ ಮಾತಾಡಿದರೆ ಬೆಟ್ಟನಂಥವನಿಗೆ ಹ್ಯಾಗನಿಸಬೇಡ? ತನ್ನ ಕುಣಿವ ಹುಬ್ಬು ಕಾಣದಷ್ಟು ಬಾಗಿ ಹೇಳಿದ:

“ನಾನು ಬೆಟ್ಟ. ಬಿಳಿಗಿರಿರಾಯನ ಭಂಟ ತಾಯಿ.”

ತಕ್ಷಣ ಚಿಕ್ಕಮ್ಮಣ್ಣಿ ಯಾರಾದರೂ ಇದ್ದಾರೆಯೇ ಅಂತ ಆ ಈ ಕಡೆ ನೋಡಿ, ಬೆಟ್ಟನ ಸಮೀಪ ಬಂದು,

“ಯಾಕಾಗಿ ಬಂದೆಯಪ್ಪಾ? ನಾವೇ ಅಭದ್ರ ಅನಾಥರಾಗಿರುವಾಗ ನೀನು ಬೇರೆ ಬಂದು ಸೇರಿಕೊಂಡೆಯಾ?” ಅಂದಳು.

“ನಾನು ಈಗ ನಿಮ್ಮ ರಾಜವೈದ್ಯನ ಭಂಟ ತಾಯಿ. ಅವನೇ ನಿನಗೂ ರಾಜ-ಕುಮಾರಿಗೂ ಯಾವುದೇ ತೊಂದರೆ ಅಥವಾ ಕೊರತೆ ಆಗದ ಹಾಗೆ ನೋಡಿಕೊಂಡಿರಬೇಕೆಂದೇ ನನ್ನನ್ನ ನೇಮಿಸಿರೋದು. ಬೇಕಾದರೆ ರಾಜವೈದ್ಯನನ್ನೇ ಕೇಳು ತಾಯಿ!”

ಚಿಕ್ಕಮ್ಮಣ್ಣಿ ಈ ಮಾತು ಕೇಳಿ ಆನಂದಪರವಶಳಾಗಿ ಬಿಟ್ಟಳು. ಮಗಳು ಮತ್ತು ತನ್ನ ಬಗ್ಗೆ ಕಾಳಜೀ ಮಾಡೋದಕ್ಕೆ ಶಿವ ಯಾರನ್ನೋ ಕಳಿಸಿದ್ದಾನೆ ಅಂದುಕೊಂಡಳು. ತನ್ನ ಮಗಳು ಸುರಕ್ಷಿತಳೆಂಬ ಭಾವನೆ ಬಂದು ನೆಮ್ಮದಿಯಿಂದ ಜಲ ಜಲ ಕಣ್ಣೀರು ಮಿಡಿದಳು. ಶಿಖರಸೂರ್ಯನ ಬಗ್ಗೆ ಕೃತಜ್ಞತಾ ಭಾವ ಬಂತು ನಿಜ; ಅದಕ್ಕೂ ಮಿಗಿಲಾಗಿ ಆತನ ಒಳ್ಳೆಯತನದ ಪ್ರಯೋಜನ ಪಡೆದು ಖಾಯಮ್ಮಾಗಿ ಮಗಳ ಯೋಗಕ್ಷೇಮವನ್ನು ಆತನಿಗೊಪ್ಪಿಸುವ ಯೋಗಭಾಗ್ಯ ಕೂಡಿಬರಲೆಂದು ಶಿವನಲ್ಲಿ ಪ್ರಾರ್ಥಿಸಿದಳು. ಆವಾಗಲೇ ಗರ್ಭಗುಡಿಯ ಬಾಗಿಲು ಫಳ್ಳನೆ ತೆರೆದುಕೊಂಡು ಒಳಗೆ ಸಾಲು ಸೊಡರಿನ ಬೆಳಕಾಯಿತು! ಶುಭಶಕುನವಾಯಿತೆಂದು ಭಾವಪರವಶಳಾಗಿ ಬೆಟ್ಟನನ್ನು ಮರೆತು ಗುಡಿಯ ಕಡೆಗೆ ನಡೆದಳು.