ಶಿಖರಸೂರ್ಯ ಬಂದಾಗ ಅರಮನೆ ಬಣಗುಡುತ್ತಿತ್ತು. ಜನ ಇರಲಿಲ್ಲ. ಇದ್ದವರ ಮುಖಗಳ ಮೇಲೆ ಹೆಣಗಳ ಕಳೆ ಇತ್ತು. ಒಳಕ್ಕೆ ಹೋದರೆ ಅದಿನ್ನೂ ಬಣಗುಡುತ್ತಿತ್ತು. ಮಹಾರಾಜರ ಕೊಠಡಿಯ ಬಾಗಿಲಿಕ್ಕಿತ್ತು. ಸೇವಕನ ಹಿಂದಿನಿಂದ ನೇರವಾಗಿ ಮಹಾರಾಣಿಯ ಮುಖ ಕಳಾಹೀನವಾಗಿ ಗುರುತು ಸಿಗುತ್ತಿರಲಿಲ್ಲ. ಶಿಖರಸೂರ್ಯನನ್ನು ನೋಡಿದ್ದೇ ಕೊಂಚ ಚೇತರಿಸಿಕೊಂಡಳು. ಅವಳ ಜಂಬಗಳಿಗೆ ಗಾಯವಾದದ್ದು ಸ್ಪಷ್ಟವಿತ್ತು. ಅವಮಾನದ ಭಾರಕ್ಕೆ ತಲೆ ಕುಸಿದು ತೊಣಚಿ ಹೊಕ್ಕ ಹಸುವಿನಂತೆ ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಶತಪಥ ತಿರುಗುತ್ತ ಪರಿತಪಿಸುತ್ತಿದ್ದಳು. ಅವಳ ಪೀಠದಿಂದ ಅತಿದೂರದಲ್ಲಿ ಅರ್ಥಕೌಶಲ ಕೈಕೈ ಹೊಸೆಯುತ್ತ, ದವಡೆಯಲ್ಲಿ ಚಿಂತೆಗಳಲ್ಲಿ ಜಗಿಯುತ್ತ ನಿಂತಿದ್ದ. ಪಕ್ಕದಲ್ಲೇ ಕೈಕಟ್ಟಿಕೊಂಡು, ಸೇನಾಪತಿ ಬಲವಂತನೂ ನಿಂತಿದ್ದ.

ಶಿಖರಸೂರ್ಯ ಸ್ವಲ್ಪ ಹೆಚ್ಚಾಗಿಯೇ ಬಾಗಿ ಮಹಾರಾಣಿಗೆ ನಮಸ್ಕಾರವನ್ನಾಚರಿಸಿ

“ಅಪ್ಪಣೆಯಾಗಲಿ ಮಹಾರಾಣಿ,”

ಎಂದ. ವಿನಯದಿಂದ ಹೇಳಿದನೋ, ವ್ಯಂಗ್ಯವಾಗಿ ಹೇಳಿದನೋ ಎಂದು ಮಹಾರಾಣಿ ಕಣ್ಣು ಕಿಸಿದು ಅವನನ್ನೇ ನೋಡಿದಳು. ಅಂಥ ಯಾವ ದುಷ್ಪಗುಣಗಳೂ ಕಾಣಲಿಲ್ಲವಾಗಿ ಅರ್ಥಕೌಶಲನ ಕಡೆಗೆ ನೋಡಿ,-

“ನಿನ್ನ ನರಿಭಾಷೆಯಲ್ಲಿ ಅದೇನು ಹೇಳುತ್ತೀಯೋ ಹೇಳಿಕೋ.”

ಅಂದಳು. ಅರ್ಥಕೌಶಲ ಮುಂದೆ ಬಂದು-

“ವೈದ್ಯನೇ, ಯುವರಾಜನನ್ನು ಬಿಳಿಗಿರಿರಾಯ ಸೆರೆಹಿಡಿದಿದ್ದಾನೆ!”

ಎಂದು ಹೇಳಿದ. ತನಗೇನೂ ಗೊತ್ತಿಲ್ಲದೆ, ತಾನಿದನ್ನು ನಂಬುತ್ತಿಲ್ಲವೆಂಬಂತೆ ಅವನನ್ನೇ ನೋಡುತ್ತ,

“ನಿಜವಾಗ್ಲೂ?” ಎಂದು ಶಿಖರಸೂರ್ಯ ಆಶ್ಚರ್ಯ ಆಘಾತಗಳನ್ನು ಅಭಿನಯಿಸಿದ. ಮಹಾರಾಣಿ ತಾಳ್ಮೆಗೆಟ್ಟಳು,-

“ಹೌದಯ್ಯ. ವಿವರಗಳನ್ನು ಆಮೇಲೆ ಕೇಳಿಕೊ. ಈಗ ಯುವರಾಜನನ್ನು ಬಿಡಿಸಿ ತರಬೇಕು. ಉಪಾಯ ಹುಡುಕು. ನನಗೆ ಬೇಕಾದ್ದು ನಿನ್ನ ಮಾತು, ಮಾತು ಕೊಟ್ಟಾದ ಮೇಲೆ ಮಾತನ್ನು ಉಳಿಸಿಕೊಳ್ಳಬೇಕು. ಒಂದು ವಾರದಲ್ಲಿ ಒಂದು ಕೂದಲು ಕೂಡ ಕೊಂಕದ ಹಾಗೆ ನನ್ನ ಮಗ ನನ್ನ ಮುಂದಿರಬೇಕು. ಆದೀತ?”

-ಎಂದು ಹೇಳಿ ಕೆಲವೇ ನಿಮಿಷ ಉತ್ತರಕ್ಕಾಗಿ ಕಾದು, ಅದು ಬಾರದೆ, ಈದ ಹುಲಿಯಂತೆ ಇಬ್ಬರನ್ನೂ ಕ್ರೂರ ದೃಷ್ಟಿಯಿಂದ ಇರಿದು ಒಳ ಕೋಣೆಗೆ ಹೊರಟಳು. ಹೋಗುವ ದಾರಿಯಲ್ಲಿ ಅಳುಮೋರೆಯಲ್ಲಿ ನಿಂತಿದ್ದ ಚಿಕ್ಕಮ್ಮಣ್ಣಿಯನ್ನು ತಿರಸ್ಕಾರದಿಂದ ನೋಡಿ ಮರೆಯಾದಳು.

ಈಗ ಅಲ್ಲಿ ಉಳಿದವರು ಪ್ರಧಾನಿ, ಸೇನಾಪತಿ ಮತ್ತು ಶಿಖರಸೂರ್ಯ ಮೂವರೆ. ಪ್ರಧಾನಿಯ ಮುಖ ಬಾಡಿತ್ತು. ತುಟಿ ಒಣಗಿ ಮಸಿ ಬಳಿದಂತೆ ಕಪ್ಪಗಾಗಿದ್ದವು. ನಾನು ಕೂಡ ನಿಮ್ಮಂತೆಯೇ, ನಿಮ್ಮಷ್ಟೇ ಚಿಂತಾಕ್ರಾಂತನಾಗಿದ್ದೇನೆಂದು ತೋರಿಸುವುದು ಸೂರ್ಯನ ಉದ್ದೇಶವಾಗಿತ್ತು. ಆದರೆ ಉಳಿದಿಬ್ಬರ ಮುಖ ನೋಡಿ ಆನಂದದಾಯಕವಲ್ಲದ ಕೆಲಸದಲ್ಲಿ ತೊಡಗಿದ್ದೇನೆಂಬಂತೆ ಮುಖ ಮಾಡಿಕೊಂಡು ಕೇಳಿದ:

“ಬಿಳಿಗಿರಿಯ ಕಡೆಯಿಂದ ಸಂದೇಶವೇನಾದರೂ ಬಂದಿದೆಯೇ ಪ್ರಧಾನಿಗಳೆ?”

“ಇಲ್ಲ, ಆದರೆ ಮೊದಲು ಬಂದ ಸಂದೇಶದ ಪ್ರಕಾರ ಎಂಟು ಹಂಡೆ ಚಿನ್ನ ಕೊಟ್ಟರೆ ಯುವರಾಜನನ್ನು ಬಿಡುತ್ತೇವೆ. ಇಲ್ಲದಿದ್ದರೆ ಯುವರಾಜನ ಆಸೆ ಬಿಡಿರಿ ಅಂದಿದ್ದಾರೆ.”

“ಎಂಟು ಹಂಡೆ ಚಿನ್ನ?”

ಸೂರ್ಯ ಕೇಳಿದ. ಈಗ ಅರ್ಥಕೌಶಲ ಬಾಯಿ ಬಿಡಲೇಬೇಕಾಯಿತು. ಅವನತ ಮುಖನಾಗಿಯೇ ಹೇಳಿದ:

“ಬಿಳಿಗಿರಿಯ ಹಿಂದಿನ ರಾಜರು ಎಲ್ಲೋ ಚಿನ್ನ ಬಚ್ಚಿಟ್ಟಿದ್ದಾರೆಂದು ತಿಳಿಯಿತು. ಈಗಿನ ರಾಜರೂ ನಮ್ಮ ಭಂಟರೂ ಅದರ ಶೋಧನೆಯಲ್ಲೇ ಇದ್ದರು. ಮೊನ್ನೆ ಮೊನ್ನೆ ಅಡಗಿಸಿಟ್ಟ ಚಿನ್ನದ ಸುಳಿವು ಸಿಕ್ಕಂತಾಗಿ ಯುವರಾಜ ಅವಸರ ಮಾಡಿದ. ಭಂಟರನ್ನು ಕರೆದುಕೊಂಡು ಸೇನಾಪತಿಗೂ ಹೇಳದೆ ಹೋಗಿ ಸಿಕ್ಕುಬಿದ್ದ! ಚಿನ್ನ ಮಾಯವಾಗಿದೆ. ತಗೊಂಡವರು ನಾವೇ ಅಂತ ಅವರ ಅನುಮಾನ. ಅನಾಯಾಸ ಹೋಗಿ ಸಿಕ್ಕುಬಿದ್ದನಲ್ಲ, ಹಿಡಿದುಕೊಂಡು ಆಟ ಆಡಿಸ್ತಿದ್ದಾರೆ.”

ಅವಶ್ಯವಿದ್ದಷ್ಟು ವಿಷಯಗಳನ್ನು ಮಾತ್ರ ಅರ್ಥಕೌಶಲ ಹೇಳಿದರೂ ಎಷ್ಟೋ ವಿಷಯ ಬಚ್ಚಿಟ್ಟಿದ್ದನ್ನು ಕಂಡು ಹಿಡಿಯಲು ಶಿಖರಸೂರ್ಯನಿಗೆ ಕಷ್ಟವಾಗಲಿಲ್ಲ. ಆದರೂ ತಿಳಿಯೋಣವೆಂದು ತೋರಿಸಿಕೊಳ್ಳಲು

“ಹಾಗಾದರೆ ಆ ಚಿನ್ನ ಎಲ್ಲಿ?” ಅಂದ.

“ಗೊತ್ತಿಲ್ಲವಪ್ಪ”

ಹತಾಶನಾಗಿ ಹೇಳಿದ ಅರ್ಥಕೌಶಲ,-

“ಅವರೇ ತಗೊಂಡು ನಮ್ಮ ಚಿನ್ನ ಕಕ್ಕಿಸಲಿಕ್ಕೆ ಹೀಗೆ ಹೇಳಿದ್ದಾರೋ? ಯಾರಾದರೂ ನಿಜವಾಗಿ ಕದ್ದಿದ್ದಾರೋ? ಗೊತ್ತಿಲ್ಲ. ಇಷ್ಟಂತೂ ನಿಜ: ನಾವು ಅವರ ಚಿನ್ನ ತಗೊಂಡಿಲ್ಲ. ನನ್ನ ಅಂದಾಜಿನ ಪ್ರಕಾರ ನಾವು ಚಿನ್ನ ಕಕ್ಕಬೇಕಾದ್ದು ಅನಿವಾರ್ಯ. ಯಾಕಂತೀಯೋ? ಹಿಂದಿನ ರಾಜರು ತಂದ ಚಿನ್ನವನ್ನು ತಿಂದಿವಲ್ಲ? ಅದನ್ನು ಕಕ್ಕಿಸಬೇಕೂಂತ ಅವರ ಉದ್ದೇಶ ಇರಬಹುದು.”

‘ಹಾಗಾದರೆ ಇವರಿಂದಲೂ ಒಂದಷ್ಟು ಚಿನ್ನ ಕಕ್ಕಿಸಬಹುದು ಎಂದಾಯಿತು?’ ಎಂದುಕೊಂಡ ಶಿಖರಸೂರ್ಯ. ಆದರೀಗ ಹುಟ್ಟಾ ಭಂಟನಾಗಿ ಸೇನಾಪತಿ ಮಾತಾಡಲೆಂದು ಸೂಚಿಸಲು-

“ಹೀಗೆ ಹೀಗೆ ಮಾಡಬಹುದೆಂದು ಸೇನಾಪತಿಗಳು ಒಂದು ಯೋಜನೆ ಹೇಳಲಿ. ನಾವದನ್ನು ಅನುಸರಿಸುವಾ. ಮುಖ್ಯ ಮಹಾರಾಣಿಯವರು ಆಜ್ಞಾಪಿಸಿದಂತೆ ಯುವರಾಜರ ಕೂದಲು ಕೊಂಕದ ಹಾಗೆ ಕೆಲಸವಾಗಬೇಕು – ಅಲ್ಲವೇ ಪ್ರಧಾನಿಗಳೆ?” ಅಂದ.

“ಅಷ್ಟೆ ಕಣಪ್ಪ!”

ಎಂದು ಭಾರ ಇಳಿದಂತೆ ಹಗುರವಾಗಿ ಹೇಳಿದ ಅರ್ಥಕೌಶಲ. ಸೇನಾಪತಿ ಹೇಳಿದ:

“ಯಾವ ಕಡೆಯಿಂದ ನೋಡಿದರೂ ನಾವೇ ತೊಂದರೆಯಲ್ಲಿದ್ದೇವೆಂದು ತೋರುತ್ತದೆ ಪ್ರಧಾನಿಗಳೆ. ನಮ್ಮವರು ಮುನ್ನೂರು ಜನ ಭಂಟರಿದ್ದಾರೆ. ನೆರೆಹೊರೆ ಮಾಂಡಳಿಕ ಮನ್ನೆಯರನ್ನ ಸೇರಿಸಿಕೊಂಡರೂ ಐನೂರಾಯ್ತು. ಇಷ್ಟು ಜನ ಭಂಟರಿಂದ ಅವರನ್ನು ಎದುರಿಸಲಾಗುವುದಿಲ್ಲ. ಬಿಳಿಗಿರಿಯವರಿಗೆ ನೆರೆಹೊರೆಯವರಿಂದ ನಿವ್ವಳ ಸಹಾಯವಿದೆ. ನಾವೇ ದಂಡೆತ್ತಿ ಹೋದರೆ ಯುದ್ಧ ತಿಂಗಳಾನುಗಟ್ಟಲೆ ನಡೆಯಬಹುದು. ನಮಗೆ ಆಹಾರ ನೀರು ಸಿಗುವುದೂ ಕಷ್ಟ. ಹಳ್ಳಿಗಳನ್ನ ಲೂಟಿ ಮಾಡಿ ತಿನ್ನಬೇಕೆಂದರೆ ಆ ಭಾಗದಲ್ಲಿನ್ನೂ ಈ ವರ್ಷದ ಕುಯ್ಲಾಗಿಲ್ಲ. ನಮಗೀಗ ಪಡುಮಲೆ ರಾಜರ ಸಹಾಯ ಸಿಕ್ಕರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ಅವರಲ್ಲಿ ಒಳ್ಳೆ ಭಂಟರಿದ್ದಾರೆ. ಆಹಾರದ ಕೊರತೆಯನ್ನೂ ನೀಗಿಸುತ್ತಾರೆ. ಸದ್ಯಕ್ಕೆ ಪಡುಮಲೆಯವರ ಸಹಾಯ ಕೇಳಿ ಮುಂದುವರಿಯುವುದು ಕ್ಷೇಮ.”

“ಏನಿದ್ದರೂ ನೀವು ಯುದ್ಧದ ಮಾತನ್ನೇ ಆಡುತ್ತಿದ್ದೀರಿ. ಹಾಗಂತ ದಂಡೆತ್ತಿ ಹೋದರೆ ಯುವರಾಜರ ಜೀವಕ್ಕೆ ಅಪಾಯವಲ್ಲವೇದ?

-ಎಂದು ಶಿಖರಸೂರ್ಯ ಅಡ್ಡಬಾಯಿ ಹಾಕಿದ.

“ಹೌದಲ್ಲ ದಂಡನಾಯಕರೆ! ಸಮಸ್ಯೆಗೆ ಯುದ್ಧ ಖಂಡಿತ ಪರಿಹಾರವಲ್ಲ. ಯುವರಾಜರ ಕೂದಲು ಕೊಂಕದ ಹಾಗೆ ಬಿಡಿಸಿಕೊಂಡು ಬರುವ ಉಪಾಯ ಹೇಳಿಯಪ್ಪಾ.”

-ಎಂದು ಅರ್ಥಕೌಶಲ ಹೇಳಿ “ಸರಿಯಲ್ಲವೇ?” ಎಂಬಂತೆ ಶಿಖರಸೂರ್ಯನ ಮುಖ ನೋಡಿದ. ಆದರೆ ಮೂಲ ಚಿಂತೆಯ ಭಾರ ಹಾಗೇ ಇತ್ತು. ರೆಪ್ಪೆಗಳನ್ನ ಸಂಕೋಚಗೊಳಿಸಿ ಹರಿತ ದೃಷ್ಟಿಯಿಂದ ಅರ್ಥಕೌಶಲನ ಒಳಗಿಣುಕುತ್ತ ಶಿಖರಸೂರ್ಯ ಹೇಳಿದ

“ಇದಕ್ಕೂ ವಿಷಕನ್ಯೆ ಕಾಣೆಯಾದುದಕ್ಕೂ ಸಂಬಂಧವಿರಬಹುದೆ ಪ್ರಧಾನರೆ?”

ನಿದ್ದೆ ಹೋಗಿದ್ದವನ ಮೇಲೆ ತಣ್ಣೀರೆರಚಿದಂತೆ ಬೆಚ್ಚಿಬಿದ್ದ ಅರ್ಥಕೌಶಲ ತನ್ನೆಲ್ಲ ಬುದ್ಧಿಯನ್ನು ಜಾಗೃತಗೊಳಿಸಿ ಕಾವಲಿಗಿಟ್ಟುಕೊಂಡು “ಛೇ ಛೇ” ಅಂದ. ‘ಸಂಬಂಧವಿರಲಾರದು’ ಎಂದು ದಂಡನಾಯಕ ಹೇಳಿದನಾದರೂ ಶಿಖರಸೂರ್ಯ ಅವನ ಕಡೆಗೆ ನೋಡಲೇ ಇಲ್ಲ. ಅರ್ಥಕೌಶಲ ಮಾತ್ರ ಭೀತನಾದಂತೆ ಕಂಡಿತು. ಕಿಡಿಕಿಯಲ್ಲಿ ದೃಷ್ಟಿಯನ್ನು ನೆಟ್ಟು ಕೂತ. ಕೊನೆಗೆ ಇಂದಿನ ಸಭೆಯ ಚರ್ಚೆಗೊಂದು ಕೊನೆ ಹೇಳಬೇಕಿತ್ತಲ್ಲ-ಅರ್ಥಕೌಶಲ ಹೇಳಿದ:

“ಈಗಂತೂ ಹೀಗೆ ಮಾಡೋಣ: ವೇಷಾಂತರದಿಂದ ಬಿಳಿಗಿರಿಗೆ ಹೋದ ಭಂಟರು ಏನು ಸುದ್ದಿ ತರುತ್ತಾರೋ ನೋಡೋಣ. ದಂಡೆತ್ತಿ ಹೋಗುವ ವಿಚಾರವನ್ನ ಇಂದಿನ ಮಟ್ಟಿಗೆ ಬಿಟ್ಟರೂ ದಂಡನಾಯಕ ನಮ್ಮ ಸೈನ್ಯವನ್ನು ಸಜ್ಜಾಗಿಡಲಿ. ಪಡುಮಲೆ ರಾಜರು ನಾನು ತಿಳಿದಂತೆ ಸಹಾಯಕ್ಕೆ ಬಂದೇ ಬರುತ್ತಾರೆ. ಅಲ್ಲಿಗೂ ಸಂದೇಶ ಕಳಿಸಿರೋಣ. ಮತ್ತೆ ನಾಳೆ ಭೇಟಿಯಾಗೋಣ. ನಾನೀಗಲೂ ಹೇಳುವುದೇನೆಂದರೆ ವಿಷಕನ್ಯೆ ಕಾಣೆಯಾದುದಕ್ಕೂ ಇದಕ್ಕೂ ಸಂಬಂಧವಿಲ್ಲ. ಮುಂದಿನದು ದೈವೇಚ್ಛೆ!”

ಶಿಖರಸೂರ್ಯ ಅವಸರದಲ್ಲಿ ಸೀದಾ ತನ್ನ ಮನೆಗೆ ಬಂದು ಯಾರೊಂದಿಗೂ ಮಾತಾಡದೆ ಮೆಟ್ಟಿಲುಗಳಿಂದ ಅನತಿ ದೂರದಲ್ಲಿ ನಿಂತಿದ್ದ ಛಾಯಾದೇವಿಯನ್ನೂ ಗಮನಿಸದೆ ದಡದಡ ಮೇಟ್ಟಿಲೇರಿ ಅಟ್ಟಕ್ಕೆ ಹೋಗಿ ಶತಪಥ ಅಡ್ಡಾಡತೊಡಗಿದ. ದೊಡ್ಡ ದನಿ ಮಾಡಿ ನಗಬೇಕೆನಿಸಿತ್ತು. ನಕ್ಕಿದ್ದರೆ ಖಂಡಿತ ಕೇಳಿದವರಿಗೆ ಸಂತೋಷವಾಗುತ್ತಿರಲಿಲ್ಲ. ಮನಸ್ಸಿಗೆ ವಿಚಿತ್ರವಾದ ಹಿತವಾಗಿತ್ತು. ಅರಮನೆ ಅನಾಥವಾಗಿತ್ತು. ಮಹಾರಾಣಿಗೆ ತನ್ನ ನೆರವು ಬೇಕಾಗಿತ್ತು. ಅರ್ಥಕೌಶಲನ ಪ್ರಸಿದ್ಧ ಬುದ್ಧಿ ಕೈಕೊಟ್ಟಿತ್ತು. ಸೈನ್ಯ ಕೂಡ ಅಸಹಾಯಕವಾಗಿತ್ತು. ಈಗ ನಿಜವಾಗಿ ತಾನು ಒಂಟಿಯಾದಂತೆನಿಸಿತು. ಇಂಥ ಕ್ಷಣಗಳನ್ನು ತನ್ನೊಂದಿಗೆ ಹಂಚಿಕೊಂಡು ನಗುವಂಥ ಯಾರ ಸಂಬಂಧವನ್ನೂ ಆತ ಗಳಿಸಿರಲಿಲ್ಲ. ಮಹಾರಾಣಿ, ಅರ್ಥಕೌಶಲರು ಅನುಭವಿಸುತ್ತಿರುವ ಒಳಹಿಂಸೆಯನ್ನು ಕಲ್ಪಿಸಿಕೊಂಡು, ಕಲ್ಪನೆಯಲ್ಲೇ ಅವರಿಗೆ ಇನ್ನಷ್ಟು ಹಿಂಸೆ ಕೊಟ್ಟು ನೋಡಿದ. ಅರ್ಥಕೌಶಲ ತನ್ನ ನೆರವಿಗೆ ಬಂದ ಸಂಗತಿ ಅವನಿಗೆ ನೆನಪಾಯಿತಾದರೂ ಅದು ಭಾವುಕತೆ ಎಂದುಕೊಂಡು ಮರೆತ.

ಹಿಂದೆ ಕೂಡ ಮೈಮುರಿದುಕೊಂಡು ಕಾಡಿನಲ್ಲಿ ಬಿದ್ದಿದ್ದ ತನ್ನನ್ನು ಹೊತ್ತು ತಂದು ಸೇವೆ ಮಾಡಿದ ಜಟ್ಟಿಗ, ಬೆಳ್ಳಿ, ಶಿವಪಾದ, ಕುರುಮನಿಯ ನೆನಪಾದಾಗಲೂ ಹೀಗೇ ಅಂದುಕೊಂಡಿದ್ದ. “ಇನ್ನೊಬ್ಬರ ಉಪಕಾರ ನೆನೆದುಕೊಂಡು ಬದುಕುವಾತ ತನ್ನ ಸುಖ ಮತ್ತು ಅಸ್ತಿತ್ವಗಳನ್ನು ಮರೆಯುತ್ತಾನೆ. ಆತ್ಮೀಯ, ಆನಂದದ ಕ್ಷಣಗಳಲ್ಲಿ ಬೇರೆಯವರನ್ನು ನೆನಪಿಸಿಕೊಳ್ಳುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ. ಹಾಗೆ ನೆನಪಿಗೆ ಬರುವವರು ಸ್ವಾರ್ಥಿಗಳಾದ ಕೊಲೆಗಡುಕರು!” ಎಂದುಕೊಂಡು ಸ್ವತಂತ್ರವಾದ ಏಕಾಂತ ಬಯಸಿದ.