ಇಂತೀಪರಿ ಯೋಚಿಸುತ್ತ ಮಧ್ಯಸೇವನೆ ಮಾಡುತ್ತ ಅರ್ಥಕೌಶಲ ಕೂತಿರುವಲ್ಲಿ ಸೇವಕ ಬಂದು “ರಾಜವೈದ್ಯರು ತಮ್ಮನ್ನು ಕಾಣಬೇಕಂತೆ” ಎಂದು ಹೇಳಿದ. ಇಷ್ಟೊತ್ತಿನಲ್ಲಿ ರಾಜ್ಯವೈದ್ಯ ಬಂದನೇ ಎಂದು ಅರ್ಥಕೌಶಲನಿಗೆ ಆಶ್ಚರ್ಯವಾಯಿತು. ಬಹಳ ಹೊತ್ತು, ಜೊತೆಯಲ್ಲೇ ಇದ್ದೆವಲ್ಲ! ಯಾಕಿರಬಹುದು? ಇರಲಿ, “ಹೋಗಿ ಒಳಗೆ ಕರೆದುಕೊಂಡು ಬಾ” ಎಂದು ಸೇವಕನ ಕಳಿಸಿ, ಲಗುಬಗೆಯಿಂದೆದ್ದು ಉಟ್ಟ ಕಚ್ಚೆ ಪಂಚೆಯನ್ನು ಸರಿಪಡಿಸಿಕೊಂಡು, ಮೈಮ್ಯಾಲೊಂದು ಬಟ್ಟೆ ಚೆಲ್ಲಿಕೊಂಡು ಕೂತ. ಕುಡಿದು ಮುಖವಾಗಲೇ ಬೆವರಿ ಕೆಂಪೇರಿತ್ತು. ಶಿಖರಸೂರ್ಯನನ್ನು ನೋಡಿ ನಗುತ್ತ ಎದ್ದು ಬಾಗಿಲತನಕ ಹೋಗಿ ಕೈಹಿಡಿದು ಒಳಗೆ ಕರೆತಂದ. ಪೀಠದಲ್ಲಿ ಕೂರಿಸುತ್ತ “ಊಟಕ್ಕೆ ಇಲ್ಲಿಯೇ ಆದೀತೋ?” ಅಂದ.

“ನನ್ನ ಊಟವಾಗಿದೆ ಪ್ರಧಾನಿಗಳೆ.”

-ಎಂದು ಶಿಖರಸೂರ್ಯ ಕೂತು ಸೇವಕನ ಕಡೆಗೆ ನೋಡಿದ. ತಕ್ಷಣ ಅರ್ಥಕೌಶಲ ನಿಂತಿದ್ದ ಸೇವಕನಿಗೆ ಮರೆಯಾಗಲು ಸೂಚಿಸಿ ತನ್ನ ಪೀಠವನ್ನು ಇನ್ನಷ್ಟು ಹತ್ತಿರ ಸರಿಸಿಕೊಂಡು ಕೂತು,

“ಏನಾದರೂ ವಿಶೇಷವಿದೆಯೆ ವೈದ್ಯನೇ?”

-ಎಂದು ಕೇಳಿ ಆಸಕ್ತಿಯಿಂದ ಅವನ ಮುಖವನ್ನೇ ಟಕಮಕ ನೋಡುತ್ತ ಕೂತ. ಎಲ್ಲಿಂದ ಸುರುಮಾಡಬೇಕೆಂದು ಯೋಚಿಸುತ್ತ ಶಿಖರಸೂರ್ಯ,

“ತಮ್ಮೊಂದಿಗೆ ಅಂತರಂಗ ಮಾತಾಡಬೇಕಿತ್ತು” ಅಂದ.

“ಸಿದ್ಧನಿದ್ದೇನಲ್ಲ…”

“ತಮ್ಮ ಗಮನಕ್ಕೆ ತಾರದೆ ನಾನು ವಿಷಕನ್ಯೆಯಿದ್ದ ಬದೆಗನ ಮನೆಗೆ ಹೋಗಿ ತಮ್ಮ ಮನಸ್ಸಿಗೆ ನೋವುಂಟು ಮಾಡಿದೆನೆನ್ನಿಸಿತು. ಆಚಾತುರ್ಯವನ್ನು ಕ್ಷಮಿಸಬೇಕು.”

-ಎಂದು ವಿನಯದಿಂದ ಹೇಳಿ, ಪಶ್ಚಾತ್ತಾಪವನ್ನು ಮುಖಭಾವದಿಂದ ಸೂಚಿಸಿ, ತೊಡೆಯ ಮೇಲಿನ ಪ್ರಧಾನಿಯ ಬಲ ಹಸ್ತ ಹಿಡಿದು ಮೆಲ್ಲಗೆ ಹಿಸುಕಿದ. ಅಮಲಿನ ಕಾರಣವೋ, ಅನಿರೀಕ್ಷಿತ ಶರಣಾಗತಿಯೋ ಅರ್ಥಕೌಶಲ ಕರಗಿ ಹೋದ.

“ನನಗೂ ಕೆಡುಕೆನಿಸಿತು ವೈದ್ಯ ಮಿತ್ರನೇ. ಹೇಳಲಾ ಯಾಕಂತ? ನಿನ್ನನ್ನ ಮಿತ್ರ ಅಂತ ಒಪ್ಪಿಕೊಂಡಾಗಿದೆ. ಅಂತರಂಗ ಬಹಿರಂಗ ಎಲ್ಲಾ ತೋರಿಸಿಯಾಗಿದೆ. ಸಂದರ್ಭ ಬಂದಿರಲಿಲ್ಲವಾದ್ದರಿಂದ ಶ್ವಾನಕೂಪ, ವಿಷಕನ್ಯೆಯರ ವಿಚಾರ ಹೇಳಿರಲಿಲ್ಲ. ತಾನಾಗೇ ತಿಳಿದಿದೆ. ಒಳ್ಳೇದೇ ಆಯ್ತು ಅಂತ ನಾನೂ ಸುಮ್ಮನಾದೆ. ಇಲ್ಲಿರೋದು ಇಷ್ಟೆ ಕಣಪ್ಪ.”

-ಎಂದು ಹೇಳುತ್ತ ಅರ್ಥಕೌಶಲ ವಿಶ್ವಾಸದಿಂದ ತನ್ನೆರಡೂ ಹಸ್ತಗಳಿಂದ ಶಿಖರಸೂರ್ಯನ ಕೈ ಹಿಡಿದುಕೊಂಡ. ಮತ್ತೂ ಮುಂದುವರಿದು ಹೇಳಿದ:

“ನನ್ನ ಸ್ನೇಹವನ್ನ ಇನ್ನು ಹ್ಯಾಗೆ ತೋರಿಸಲಿ ಹೇಳು. ಯಾಕಂತೀಯೋ? ಅರಮನೆಯ ಯಾವುದೇ ಮಹತ್ವದ ತೀರ್ಮಾನವೂ ನಿನ್ನ ಕಣ್ತಪ್ಪಿ ನಡೆಯುವುದಿಲ್ಲ. ಒಪ್ಪಿದೆಯಾ?”

“ಒಪ್ಪಿದೆ”

“ಅಷ್ಟೆ ಮತ್ತೆ. ನಿನಗದು ತಿಳಿದಿದ್ದರೆ ಇಂಥ ರಾತ್ರಿ ವೇಳೆ ನೀನಿಲ್ಲಿಗೆ ಬರುತ್ತಿರಲಿಲ್ಲ. ಈಗ ಬಂದದ್ದಕ್ಕೆ ನನಗೆ ಅಸಮಾಧಾನವಾಗಿದೆ ಅಂದುಕೋಬೇಡ. ನಿನ್ನನ್ನು ನೋಡಿ ನನ್ನ ಮನಸ್ಸು ಈಗ ಹಗುರವಾಯಿತು. ಇಗೊ.”

ಎಂದು ಸಸ್ನೇಹದಿಂದ ಕೈ ಅಮುಕಿ ಆಮೇಲೆ ಗಟಗಟ ಮದ್ಯಸೇವನೆ ಮಾಡಿ ಆ ಕ್ಷಣವನ್ನ ಆಚರಿಸಿದ. ಈಗ ಅನುಮಾನಗಳು ನಿವಾರಣೆಯಾಗಿ ಮನಸ್ಸು ಹಗುರವಾಗಿ ಅರ್ಥಕೌಶಲನ ಮುಖ ಕಳೆಕಳೆಯಾಯಿತು. ಶಿಖರಸೂರ್ಯ ಊಟವಾದ ಮೇಲೆ ಮುಟ್ಟುವುದಿಲ್ಲವೆಂದು ಗೊತ್ತಿದ್ದರೂ “ಸ್ನೇಹಕ್ಕಾಗಿ ನೀನೊಂದು ಗುಟುಕು ಸೇವಿಸಿದರೆ, ನಿಜ ಹೇಳುತ್ತೇನೆ ಮಿತ್ರಾ, ನಾನು ಧನ್ಯನಾಗುತ್ತೇನೆ.” ಎಂದು ಹೇಳಿದ. ಅವನ ನಿರೀಕ್ಷೆಯಂತೆಯೇ ರಾಜವೈದ್ಯ ನಿರಾಕರಿಸಿದಾಗ ಮುಂದೆ ಬಾಗಿ ಪಿಸು ದನಿಯಲ್ಲಿ ಆ ಕಡೆ ಈ ಕಡೆ ನೋಡಿ ಯಾರಿಲ್ಲವೆಂದು ಖಾತ್ರಿ ಮಾಡಿಕೊಂಡು ಹೇಳಿದ:

“ಬದೆಗನ ಮನೆಯಲ್ಲೊಂದು ಹುಡುಗಿಯಿತ್ತಲ್ಲ? ಆ ಮೂಗಿ! ಅಪ್ಸರೆ! ಅಪ್ಸರೆ ಅಲ್ಲವೇನಯ್ಯಾ? ನಿಜ ಹೇಳು….”

ಇವನು ತನ್ನ ಭಾವನೆಗಳನ್ನು ಅಡಗಿಸಿ ಹೊರತೆ ಪ್ರೋತ್ಸಾಹಿಸಲೆಂಬಂತೆ

“ನಿಜ ಪ್ರಧಾನರೆ, ಅಂಥ ಚೆಲುವೆಯನ್ನು ನಾನೀವರೆಗೆ ಕಂಡಿಲ್ಲ” ಅಂದ.

“ದೇವರಾಣೆ ಮಾಡಿ ಹೇಳುತ್ತೇನಯ್ಯಾ ಅವಳು ಪರಮ ಸುಂದರಿ. ಕಾಮಾತುರ ಕೆರಳಿಸುವ ಕಣ್ಣು, ಪ್ರಣಯ ಕಾಳಗಕ್ಕೆ ಆಹ್ವಾನಿಸುವ ಮಾಟದ ಮೈಕಟ್ಟು, ಆಹಾಹಾ ರತಿಯ ಸಾರಸ್ವರೂಪಳಯ್ಯಾ ಅವಳು! ಕಾಮನೊಂದಿಗೆ ರಮಿಸಬೇಕಾದವಳು ಇಲ್ಲಿ ಹುಟ್ಟಿ ಬಂದಿದ್ದಾಳೆ, ಅಷ್ಟೆ!”

ಶಿಖರಸೂರ್ಯನ ದೇಹದಲ್ಲಿ ಕೊಲೆಗಡುಕನ ಕಳೆ ಪ್ರವೇಶಿಸಿ ಮುಖ ಕಪ್ಪಾಗಿ ಮಿಂಚಿನ ಹಾಗೆ ಕಣ್ಣು ಹೊಳೆದವು. ಹಸ್ತ ಬಿರುಸಾಗಿ ಗಟ್ಟಿಯಾಗಿ ಮುಷ್ಟಿ ಬಿಗಿದು ಸಂಗ್ರಹಿಸಿದ ಶಕ್ತಿಯನ್ನು ಹೊರಬಿಡುವಂತೆ ಹಸ್ತ ಸಡಿಲು ಮಾಡಿದ. ಅರ್ಥಕೌಶಲ ಅನಿರೀಕ್ಷಿತವಾದ ಈ ಬದಲಾವಣೆಯನ್ನು ಗಮನಿಸಿದನಾದರೂ ಅವನಿಂದ ಮಾತು ಬರಲಿಲ್ಲವಾದ್ದರಿಂದ ನಿರ್ಲಕ್ಷಿಸಿ ಮುಂದುವರೆದ.

“ನಮ್ಮ ದುರ್ದೈವ, ಚಂಡಾಲ ಚಂಡೀದಾಸ ಅವಳನ್ನ ವಿಷಕನ್ಯೆ ಮಾಡಿಬಿಟ್ಟ. ಅದೂ ನಂದೇ ತಪ್ಪು ಅಂದುಕೊ. ನನ್ನನ್ನು ಸಂತೋಷಪಡಿಸಿ ಹಣ ಕೀಳೋದಕ್ಕೆ ಹಾಗೆ ಮಾಡಿದ್ದ. ಆವಾಗ ನಮಗೂ ವಿಷಕನ್ಯೆಯರ ಅಗತ್ಯವಿತ್ತು. ಇವನು ವಿಷವೈದ್ಯ. ನನಗೆ ಒಟ್ಟು ಆರು ಜನ ವಿಷಕನ್ಯೆಯರನ್ನ ಕೊಟ್ಟ. ಆದರೆ ಚಂಡೀದಾಸನೇ ವಿಷ ತೆಗೆಯಲು ಪ್ರಯತ್ನಿಸಿ ಸೋತ. ಆ ಮೂಗಿಯ ವಿಷವನ್ನ ತಗೀಬಹುದು ಅಂದೆಯಲ್ಲಪ್ಪ ನೀನು!”

“ಹೌದು ಪ್ರಧಾನರೆ, ಸಂತಾನ ಮಾತ್ರ ಸಾಧ್ಯವಿಲ್ಲ. ಆದರೆ ಖಂಡಿತ ವಿಷದ ಪರಿಣಾಮವನ್ನ ತಗ್ಗಿಸಬಹುದು.”

“ಭಲೆ ವೈದ್ಯ ನೀನು, ನಾವ್ಯಾರೂ ಈ ತನಕ ಕಂಡಿಲ್ಲದ ಕೇಳಿಲ್ಲದ್ದನ್ನ ಮಾಡ್ತೀನಂತಿಯಲ್ಲ ಮಾರಾಯಾ! ಬದೆಗನಿಗೆ ತಿಳಿಸ್ತೀನಿರು.”

ಶಿಖರಸೂರ್ಯನಿಗೆ ಈಗ ವಿಷಯ ತಿಳಿಸಲು ಇದು ಸಕಾಲವೆನ್ನಿಸಿತು-

“ಚಿಕ್ಕಮ್ಮಣ್ಣಿಯ ವತಿಯಿಂದ ಒಬ್ಬ ಸಂಧಿವಿಗ್ರಹಿಯನ್ನು ಬಿಳಿಗಿರಿಗೆ ಕಳಿಸಬೇಕೆಂದಿದ್ದೇನೆ. ತಮ್ಮ ಅಪ್ಪಣೆ ಬೇಕು.”

ಇದರ ಔಚಿತ್ಯವನ್ನು ತಕ್ಷಣ ಅರಿತ ಪ್ರಧಾನಿ ತನಗಿದು ಹೊಳೆಯದ್ದಕ್ಕೆ ಆಶ್ಚರ್ಯಪಟ್ಟು ಆಯಿತೆಂದು ಕೂಡಲೇ ಒಪ್ಪಿಕೊಂಡ. ಆದರೂ

“ಅಂಥ ಚಾಣಾಕ್ಷ ನಮ್ಮಲ್ಲಿ ಯಾರಿದ್ದಾರೆ ಮಾರಾಯಾ?”

ಎಂದು ಹತಾಶೆಯಿಂದ ಕೈ ಚೆಲ್ಲಿದ.

“ಅದನ್ನು ಚಿಕ್ಕಮ್ಮಣ್ಣಿಯೇ ನಿರ್ಧರಿಸಲಿ. ಒಟ್ಟಿನಲ್ಲಿ ಆಕೆಯ ಭಾವನೆಗಳನ್ನ ಅವರಿಗೆ ಸರಿಯಾಗಿ ತಿಳಿಸಿ ಬಾಂಧವ್ಯ ವೃದ್ಧಿಯಾಗುವಂತೆ ಮಾಡಬೇಕು. ಅಂದರೆ ಕೂದಲು ಕೊಂಕಿಸದೆ ಯುವರಾಜನನ್ನು ಒಪ್ಪಿಸುವಂತೆ ಮಾತಾಡಬೇಕು.”

“ಅಷ್ಟೆ ಕಣಪ್ಪ, ನೀನು ಮುಂದುವರಿ. ಅಗತ್ಯ ಬಿದ್ದಾಗ ನಾನೂ ನಿನ್ನ ಜೊತೆಗಿದ್ದೇನೆ, ಆಯ್ತಲ್ಲ?”

ಎಂದು ಇನ್ನಷ್ಟು ವಿವರಗಳನ್ನು ಚರ್ಚಿಸಿ ಅಲ್ಲಿಂದ ಶಿಖರಸೂರ್ಯ ತನ್ನ ಮನೆಗೆ ಹೋದ.