ಪ್ರಧಾನಿಯ ಮನೆಯಿಂದ ಬಂದವನು ಸೀದಾ ಅಟ್ಟ ಏರಿ ಸುಕ್ರನನ್ನು ಕರೆಸಿದ. ಆತ ಬಂದೊಡನೆ ಪಕ್ಕದಲ್ಲಿ ಕೂರಿಸಿಕೊಂಡು ಗರಡೀಮನೆ ಮತ್ತು ಬಯಲಿನಲ್ಲಿ ನಡೆದದ್ದನ್ನೆಲ್ಲ ಹೇಳಿದ. ಬದೆಗನ ವಿಚಾರ ಬರುತ್ತಲೂ
“ನಿನ್ನ ಗೆಳೆಯ ಬದೆಗ ಹ್ಯಾಗೆ?” ಅಂದ.
“ಗೆಳೆಯ ಅಲ್ಲ, ನಾವಿಬ್ಬರೂ ಕರುಳು ಹಂಚಿಕೊಂಡವರು.”
“ಅಂದರೆ?”
“ಅಕ್ಕತಂಗಿಯರ ಮಕ್ಕಳು. ಅಂದರೆ ನನ್ನಮ್ಮನಿಗೆ ಅವನಮ್ಮ ತಂಗಿಯಾಗಬೇಕು. ಅವ ನಿಮ್ಮ ಕನಕಪುರಿಯ ದಂಡು ಸೇರಿಕೊಂಡ. ನಾನು ಬಿಳಿಗಿರಿಯ ದಂಡು ಸೇರಿಕೊಂಡೆ.”
“ಹಾಗಿದ್ದರೆ ಇಲ್ಲಿ ಕೇಳು: ಅವನಿಲ್ಲದಾಗ ನಾನು ಮತ್ತು ಬೆಟ್ಟ ಅವನ ಮನೆಗೆ ಹೋಗಿದ್ದೆವು. ನಾವು ಅವನ ಮನೆಗೆ ಹೋದ ವಿಚಾರ ಅವನಿಗೆ ಸರಿಬಂದಂತೆ ಕಾಣಲಿಲ್ಲ.”
“ಅರಮನೆಯವರು ಅಂದರೆ ಅವನಿಗೆ ಆಗಿಬರಾಕಿಲ್ಲ. ಅವರ ಮನೆಯಲ್ಲಿ ನಿನಗೇನು ಸಿಕ್ಕೀತು ನನ್ನೊಡೆಯಾ?”
ಸುಕ್ರ ಬೇಸರದಿಂದ ಅಂದ. ತಾನು ಅವನಿಲ್ಲದಾಗ ಅವನ ಮನೆಗೆ ಹೋದದ್ದು ಸುಕ್ರನಿಗೂ ಸರಿಬರಲಿಲ್ಲವೆಂದು ಸ್ಪಷ್ಟವಾಯಿತು. ಈಗ ಸತ್ಯ ಹೇಳುವುದು ಉಚಿತವೆನ್ನಿಸಿ
“ಸಮಾಧಾನದಿಂದ ಕೇಳು: ವಿಷಕನ್ಯೆಯ ಶೋಧ ಮಾಡುತ್ತ ಅಲ್ಲಿಗೆ ಹೋಗಿದ್ದೆವು….”
ತಕ್ಷಣ ಸುಕ್ರನ ಮುಖ ಕಬ್ಬಿಣದಂತೆ ಕಪ್ಪಿಟ್ಟಿತು. ಅವಡುಗಚ್ಚಿದನೆಂದು ತೋರುತ್ತದೆ, ಗದ್ದ ಬಿರುಸಾಯಿತು. ತಕ್ಷಣ ತಪ್ಪೊಪ್ಪಿಕೊಳ್ಳುವಂತೆ ಶಿಖರಸೂರ್ಯ ಹೇಳಿದ:
“ನೀನು ನನ್ನ ಆತ್ಮೀಯನಾಗಿರೋದರಿಂದ ಹೇಳುತ್ತಿದ್ದೇನೆ ಕೇಳು: ನನಗೆ ಅವನ ಮನೆಯಲ್ಲಿರುವ ಆ ಮೂಗಿ ಹುಡುಗಿ ಬೇಕು.”
ಸುಕ್ರ ತಾಳ್ಮೆ ಕಳೆದುಕೊಂಡು “ಅವಳು ವಿಷಕನ್ಯೆ ಒಡೆಯಾ.” ಅಂದ ಎತ್ತರದ ದನಿಯಲ್ಲಿ. ಶಿಖರಸೂರ್ಯನೂ ದನಿ ಎತ್ತರಿಸಿ ಆದರೆ ಸಮಾಧಾನದಿಂದ ಹೇಳಿದ:
“ನನಗದು ಗೊತ್ತು. ಅದಕ್ಕೇ ನನಗವಳು ಬೇಕು. ಅವಳ ವಿಷ ತೆಗೆಯೋದು ನನ್ನ ವೈದ್ಯವಿದ್ಯೆಗೇ ಸವಾಲು. ನೀನು ಮತ್ತು ಬದೆಗ ದೊಡ್ಡ ಮನಸ್ಸು ಮಾಡಿ ಒಪ್ಪುವುದಾದರೆ ಅವಳ ವಿಷ ತೆಗೆದು ಧರ್ಮದಲ್ಲಿ ಕೂಡಿಕೆ ಮಾಡಿಕೊಳ್ಳೋದು ನನ್ನ ಆಸೆ.”
ಸುಕ್ರ ಮಾತಿಲ್ಲದೆ ರಾಜವೈದ್ಯನ ಮುಖಕ್ಕೆ ಮುಖ ಕೊಟ್ಟು ನೋಡಿ ಜಲ ಜಲ ಕಣ್ಣೀರು ಸುರಿಸತೊಡಗಿದ. ಶಿಖರಸೂರ್ಯನಿಗೆ ಆಶ್ಚರ್ಯ ಮತ್ತು ಗೊಂದಲವಾಯಿತು. ತಾನವನ ಭಾವನೆಗಳಿಗೆ ಗಾಯ ಮಾಡಿದನೆಂದು ಪಶ್ಚಾತ್ತಾಪವಾಯಿತು. ಅಷ್ಟರಲ್ಲಿ ಸುಕ್ರ ಮುಂದೆ ಬಂದು ಶಿಖರಸೂರ್ಯನಿಗೆ ಆಶ್ಚರ್ಯ ಮತ್ತು ಗೊಂದಲವಾಯಿತು. ತಾನವನ ಭಾವನೆಗಳಿಗೆ ಗಾಯ ಮಾಡಿದನೆಂದು ಪಶ್ಚಾತ್ತಾಪವಾಯಿತು. ಅಷ್ಟರಲ್ಲಿ ಸುಕ್ರ ಮುಂದೆ ಬಂದು ಶಿಖರಸೂರ್ಯನ ಕೈಹಿಡಿದು “ನಿಜವೆ ಒಡೆಯಾ?” ಅಂದ.
“ಸೂರ್ಯನಾಣೆಗೂ ನಿಜ ಮಾರಾಯ. ನಿನ್ನ ಮನಸ್ಸು ನೋಯಿಸೋದು ಖಂಡಿತ ನನ್ನ ಉದ್ದೇಶವಲ್ಲ.”
ಸುಕ್ರ ಮೆಲ್ಲಗೆ ಬಂದು ಶಿಖರಸೂರ್ಯನ ಕೈಗಳನ್ನು ತಗೊಂಡು ಹಣೆಗಂಟಿಸಿಕೊಂಡು, ಆಮೇಲೆ ಮ್ಯಾಲೆದ್ದು ರಾಜವೈದ್ಯನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು “ಆಟು ಮಾಡು ನನ್ನಪ್ಪಾ” ಅಂದ. ಮತ್ತೆ “ಆದರೂ ಸಂಶೆ ಬರ್ತದೆ, ವಿಷ ಒಯ್ತದಂತೀಯ ನನ್ನೊಡೆಯಾ?” ಅಂದ.
“ಕೊಂಚ ಕಡಿಮೆಯಾಗುತ್ತದೆ ಅದರಲ್ಲಿ ಸಂಶಯವೇ ಬೇಡ. ಆಕೆಗೆ ಉಳಿದೆಲ್ಲಾ ನೆಮ್ಮದಿ ಸಿಕ್ಕಬಹುದು. ಆದರೆ ಸಂತಾನಪ್ರಾಪ್ತಿಯಿಲ್ಲ. ಯಾಕಂತೀಯೋ? ಚಿಕ್ಕಂದಿನಲ್ಲಿ ವಿಷ ಹಾಕಿದ್ದರಿಂದ ಗರ್ಭ ಸುಟ್ಟುಹೋಗಿದೆ. ಅಷ್ಟೇ ಅಲ್ಲ, ಅವಳೊಂದಿಗೆ ಕೂಡಬೇಕಾದವನು ಕೂಡ ವಿಷ ನುಂಗಿರಬೇಕು. ನುಂಗದೆ ಸಂಪರ್ಕ ಮಾಡಿದರೆ ಅವನೂ ಸಾಯುವುದು ನಿಶ್ಚಿತ. ಆದ್ದರಿಂದ ಚೆನ್ನಾಗಿ ವಿಚಾರ ಮಾಡಿ ಹೇಳು.”
ಸುಕ್ರ ಅಳುತ್ತಲೇ ಹೇಳಿದ:
“ಅದು ನನಗೂ ತಂಗಿ ಒಡೆಯಾ. ನಮಗ್ಯಾರಿಗೂ ಗೊತ್ತಾಗದಂತೆ ಆ ಚಂಡಾಲ ಕೂಸಿಗೆ ವಿಷ ಹಾಕಿಬಿಟ್ಟ! ನಾವು ಕುಲದಲ್ಲಿ ತಾಯಿ ಒಕ್ಕಲು. ಆದರೆ ವಿಷದವರಲ್ಲ. ನೀನು ಉದ್ಧಾರ ಮಾಡ್ತೀನಂದರೆ ಬ್ಯಾಡಂತೀವ ಶಿವನೆ?”
“ಹಾಗಾದರೆ ಒಂದು ಕರಾರು”
“ಅರಮನೆಗೆ ಈ ಸುದ್ದಿ ತಲುಪಕೂಡದು. ಯಾಕಂತೀಯೋ? ಆ ಹೆಣ್ಣಿನ ಮೇಲೆ ಅರಮನೆಯ ಕಾಕದೃಷ್ಟಿ ಬೀಳಕೂಡದು.”
ಕರಾರು ಕೇಳಿ ಆನಂದದಿಂದ ಸುಕ್ರನ ಕಣ್ಣು ಫಳ್ಳನೆ ಹೊಳೆದವು. “ಆಯ್ತು ಒಡೆಯಾ” ಎಂದು ಅಂಡೆತ್ತಿ ನಮಸ್ಕಾರವನ್ನಾಚರಿಸಿದ.
ಸುಕ್ರ ಬದೆಗರಿಗಾಗಿ ಶಿಖರಸೂರ್ಯ ನಿಜವಾಗಿ ಮರುಗಿದ. ಸುಕ್ರನ ಕೈ ಹಿಡಿದೆತ್ತಿ ಪುನಃ ಪಕ್ಕದಲ್ಲಿ ಕೂರಿಸಿಕೊಂಡು ಅವನ ಭುಜದ ಮ್ಯಾಲೆ ಕೈಯಿಟ್ಟು ಹೇಳಿದ.
“ಸುಕ್ರ, ಹೊಸ ಕಳ್ಳು ತಯಾರಿಸಿದ್ದೇನೆ. ರುಚಿ ನೋಡ್ತೀಯಾ?”
ಕಳ್ಳು ಎಂಬ ಶಬ್ದ ಕಿವಿ ಮೇಲೆ ಬಿದ್ದುದೇ ತಡ ಸುಕ್ರನ ಮುಖ ಕಳೆಕಳೆಯಾಗಿ ಹೊಳೆಯಿತು. “ದಯವಿಟ್ಟು ಬೇಗ ಕೊಡು” ಎಂಬಂತೆ “ದಯ್ಮಾಡಿ ಬೇಡ ಒಡೆಯಾ” ಎಂದು ಹೇಳಿ ನಾಚಿಕೊಂಡ.
ಕಳ್ಳು ಒಳಗಿಳಿದ ಮೇಲೆ ಸುಕ್ರನ ಕಣ್ಣು ಕೋಪದಿಂದ ಗೂಳಿಯ ಕಣ್ಣಿನಂತೆ ಕೆಂಪಗಾದವು. ತಲೆ, ಹಣೆ, ಕತ್ತಿನಿಂದ ಬೆವರಿಳಿಯತೊಡಗಿತು. ‘ಮತ್ತೆ ಯಾಕೆ ಕೋಪಗೊಂಡ?’ ಎಂದು ಶಿಖರಸೂರ್ಯ ಆಶ್ಚರ್ಯಪಡುತ್ತಿರುವಾಗ ಬಾಯಿಬಿಟ್ಟ.
“ಅರಮನೆ ಕಂಡರೆ ನನಗಾಗಲ್ಲ ಒಡೆಯಾ. ಅದು ಸೊಕ್ಕಿನ ಮನೆ. ಮನಶೇರು ಕಾಣ್ಸಾಕೇ ಇಲ್ಲ. ನನಗೆಲ್ಲಾ ಗೊತ್ತಾಯ್ತದೆ; ನಿನಗೂ ಅರಮನೆ ಆಗಿ ಬರೋದಿಲ್ಲ. ಅದಕ್ಕೇ ನನಗೆ ನೀನು ಇಷ್ಟದವನು. ಆ ಮಂದಿ ಶ್ವಾನಕೂಪದಲ್ಲಿ ಜೀವಂತ ಜನರನ್ನು ತಳ್ಳಿ ಮೋಜು ನೋಡುತ್ತಾರಲ್ಲ, ಅವರು ಮನಿಶೇರು ಅಂತೀಯ ನೀನು? ಆ ಕೂಪದಲ್ಲಿ ನಿನ್ನನ್ನ ತಳ್ಳಿದರೆ ಎಂಗಿರ್ತದೆ ಅಂತಾಳಲ್ಲ ಆಯಮ್ಮಾ! ಇಂಥವಳನ್ನು ನಂಬು ಅಂತೀಯಲ್ಲ ಮಾರಾಯಾ!”
ಎಂದು ಹಣೆ ಹಣೆ ಬಡಿದುಕೊಂಡ. ಶಿಖರಸೂರ್ಯನಿಗೂ ಆಶ್ಚರ್ಯವಾಯಿತು. ಮತ್ತು ಮಹಾರಾಣಿಯ ಬಗೆಗೆ ಕೋಪ ಬಂತು. ಅದನ್ನ ಆಮ್ಯಾಲೆ ನೋಡಿದರಾಯ್ತೆಂದು, “ಬದೆಗನಿಗೂ ಅರಮನೆ ಕಂಡರೆ ಆಗಿಬರೋದಿಲ್ಲವಂತಲ್ಲ, ಯಾಕೆ?” ಅಂದ. ಸುಕ್ರ ಗಟಗಟ ಕಳ್ಳು ಹಿಡಿದ. ಹೇಳುವುದೋ ಬೇಡವೋ ಎಂದು ವಿಚಲಿತನಾದಾಗ ಶಿಖರಸೂರ್ಯ ಮತ್ತೆ ಹೇಳಿದ:
“ಹೇಳಬಹುದು ಅನ್ನಿಸಿದರೆ ಹೇಳು. ಬೇಸರವಾಗುವಂತಿದ್ದರೆ ಬೇಡ.”
ಕಳ್ಳಿನ ಹನಿಹನಿಯನ್ನು ಆನಂದಿಸಿ ದೊಡ್ಡ ಹೊಟ್ಟೆಗಿಳಿಸಿ ಬಾಯೊರಿಸಿಕೊಂಡು “ಕೇಳು” ಅಂದ.
ಬದೆಗಿನ ಬಗ್ಗೆ ಸಕ್ರ ಹೇಳಿದ್ದನ್ನು ನಮ್ಮ ಭಾಷೆಯಲ್ಲಿ ಕಥಾಂತರಿಸುತ್ತೇವೆ;
ಕೇಳಿರಿ: ಸುಕ್ರ:
“ಕನಕಪುರಿಯ ರಾಜ ಬಿಳಿಗಿರಿಯ ಮ್ಯಾಲೆ ದಾಳಿಮಾಡಲು ತಯಾರಿ ನಡೆಸಿದ್ದ ದಿನಗಳವು. ಆಗಲೇ ಹೇಳಿದ್ದೆನಲ್ಲ ನಡಾವಳಿಯಿಂದ ಬದೆಗ ನನಗೆ ತಮ್ಮನಾಗಬೇಕು. ಅವನಿಗೆ ಹೊಸಪ್ರಾಯ ಬಂದಾಗ ಅವನಾಗಲೇ ಕನಕಪುರಿಯ ಸೈನ್ಯದಲ್ಲಿ ಭಂಟನಾಗಿ ಹೆಸರು ಮಾಡಿಕೊಂಡಿದ್ದ. ಪ್ರಾಯಕ್ಕೆ ಬಂದೊಡನೆ ನಾವೇ ಗೊಲ್ಲಗೋಕುಲದ ಚೆಂದೊಳ್ಳೆ ಹುಡುಗಿ ಸಿರಿಲಕ್ಕಿಯ ತಂದು ಮದುವೆ ಮಾಡಿದೆವು.
ಬದೆಗ ಹಸುವಾದರೆ ಇವನ ಹೆಂಡತಿ ಚಿರತೆ! ಮದುವೆಯಾದೊಡನೆ ತಾಯಿಯ ಮನೆ ತೊರೆದು ಬೇರೆ ಮನೆ ಮಾಡಿಕೊಂಡಿದ್ದ. ಆವಾಗ ನಡೆದದ್ದು ಈ ಕತೆ.
ಒಂದು ದಿನ ಏನಾಯ್ತಪ್ಪ ಅಂದರೆ, ರಾಜಕುಮಾರ ಕುದುರೆಯೇರಿ ಶ್ವಾನಕೂಪಕ್ಕೆ ಹೋಗುತ್ತಿದ್ದಾಗ ಕುದುರೆಗೆ ಬಾಯಾರಿಕೆಯಾಗಿ ನದಿಯ ಕಡೆಗೆ ಒಂದೇ ಸಮನೆ ಓಡತೊಡಗಿತು. ನದಿಯ ಇಳಿಜಾರು ದಡದಲ್ಲಿ ಇಳಿಯುತ್ತಿದ್ದಾಗ ಸೀರೆ ಒಗೆದು ಒಣಗು ಹಾಕುತ್ತಿದ್ದ ಬದೆಗನ ಮಡದಿ ಸಿರಿಲಕ್ಕಿಯನ್ನ ರಾಜಕುಮಾರ ಕಂಡ. ಕಂಡುದೇ ಹುರುಪು ಬಂತು ನೋಡು, ಕುದುರೆಯನ್ನು ಆ ಕಡೆಗೆ ಓಡಿಸುತ್ತ-
“ಕುದುರೆ ಬಂತು ಸೀರೆ ಎತ್ತು”
-ಎಂದು ನಗಾಡುತ್ತ ಎರಡು ಮೂರು ಬಾರಿ ಕೂಗಿ ಹೇಳಿದ. ಅವಳು ಸೀರೆ ಎತ್ತುವುದರೊಳಗೆ ಎರಡು ಬಾರಿ ಕುದುರೆಯ ಕಾಲಿಗೆ ಸಿಕ್ಕ ಸೀರೆಯ ಮೇಲೆ ಅದರ ಕೆಸರುಗಾಲಿನ ಹೆಜ್ಜೆ ಮೂಡಿ ಹೊಲಸಾಯಿತು. ಕುದುರೆ ಸವಾರ ರಾಜಕುಮಾರನೆಂದರಿಯದ ಅವಳು,
“ಯಾವೋನ್ಲಾ ಹೈವಾನ? ಮಡಿ ಸೀರೆ ರಾಡಿಯಾಯ್ತು, ಕಣ್ಣು ನೆತ್ತೀಮ್ಯಾಲಿದ್ದಾವೇನ್ಲಾ” ಎಂದಳು.
“ರೇಗಬೇಡವೇ ಹುಡುಗಿ. ನಾನು ಯಾರು ಅಂತ ಗೊತ್ತಾದರೆ ಓಡಿ ಬಂದು ಮಾವಾ ಅಂತೀಯ!”
ಎಂದ ರಾಜಕುಮಾರ ಚಿಗುರು ಮೀಸೆಯಲ್ಲಿ ನಗುತ್ತ.
“ನಾನರಿಯದ ಅದ್ಯಾವ ಪುಂಡನೋ ನೀನು? ನನ್ನ ಗಂಡನಿಗೆ ಗೊತ್ತಾದರೆ ನಿನ್ನ ಚಿಗುರು ಮೀಸೆಯನ್ನು ಮಣ್ಣುಗಾಣಿಸಿಯಾನು, ಹೋಗು ಹೋಗು”
ಎಂದಳು. ಆತ ಹೋಗಲಿಲ್ಲ.
“ನಿನ್ನ ಗಂಡ ನಾಳೆ ದಂಡಿಗೆ ಹೋಗ್ತಾನೆ. ಆಗಲಾದರೂ ನಾನು ನಿನಗೆ ಬೇಕಾಗ್ತೀನಿ, ನೋಡ್ತಿರು.”
ಸಿರಿಲಕ್ಕಿ ತನ್ನ ಪಾಡಿಗೆ ತಾನು ಸೀರೆ ಒಗೆದು ಹಿಂಡಿ, ಹೆಗಲ ಮೇಲೆ ಹಾಕಿಕೊಂಡು, ಕೊಡ ತುಂಬಿಕೊಂಡು ಮನೆ ಕಡೆ ಹೊರಟಳಾದರೂ ಆತ ತನ್ನನ್ನೇ ಹಸಿದ ಕಣ್ಣುಗಳಿಂದ ನೋಡುತ್ತಿರುವ ಬಗ್ಗೆ ಒಳಗೊಳಗೆ ಪುಳಕಗೊಂಡಿದ್ದಳು. ರಾಜಕುಮಾರನೂ ಅಷ್ಟೆ. ಪ್ರಾಯದಲ್ಲಿ ತನ್ನ ಮೊದಲನೇ ಹೆಜ್ಜೆಯಿಟ್ಟು ಪುಳಕಿತನಾದ ಕಿಶೋರ. ರಾಜಕುಮಾರನಾದ್ದರಿಂದ ಅವನಾಡಿದ್ದೇ ಆಟ, ಮಾಡಿದ್ದೇ ಮಾಟ! ಹೇಳಕೇಳೋರಿಲ್ಲ, ಶಿಕ್ಷೆಯ ಭಯವಿಲ್ಲ. ಬೇಲಿಯಿಲ್ಲದ ಬದುಕು ನೋಡು! ಸಾಲದ್ದಕ್ಕೆ ಒಂದು ಹುಡುಗಿಯ ಪ್ರೇಮಪಾಶದಲ್ಲಿ ಬೀಳುವುದೆಂದರೆ ಅದೊಂದು ಸುಮಧುರ ಅನುಭವ. ಕಲ್ಪನೆಗೆ ಮೀರಿದ ಆನಂದವನ್ನು ಕೊಡುವಂಥದ್ದು. ಆದರೆ ಅದು ಅವಗಡಿಸಿದರೆ ಅಪಾಯಕಾರಿಯಾದ ಶಿಕ್ಷೆಯೂ ಆಗಬಹುದೆಂದು ಗೊತ್ತಿಲ್ಲದವ. ಹೊತ್ತ ಕೊಡವ ಎಡಗೈಯಿಂದ ಹಿಡಿದುಕೊಂಡು, ವಯ್ಯಾರದಿಂದ ಮುಂದೆ ಮುಂದೆ ಹೊರಟಿದ್ದ ಸಿರಿಲಕ್ಕಿ ಹಿಂದಿನಿಂದ ಬರುತ್ತಿದ್ದ ರಾಜಕುಮಾರನ ಆಸಕ್ತ ಇಂದ್ರಿಯಗಳಿಗೆ ಹಬ್ಬವಾದಳು. ಮೊದಲೇ ಅವಳ ಸ್ತನ, ವದನ, ಯೌವನಕ್ಕೆ ಬೆರಗಾಗಿದ್ದಾತ ಈಗವಳ ಬಡನಡು, ತುಂಬಿದ ನಿತಂಬಗಳ ಲಯಬದ್ಧ ಚಲನೆಯಿಂದ ಆಕರ್ಷಿತನಾದ. ಭರ್ತಿ ಯೌನವದಿಂದ ಕೂಡಿದ ಆ ಸೊಬಗುಗಾತಿಯ ಸೌಂದರ್ಯಕ್ಕೆ ಯುವರಾಜ ಪರವಶನಾಗಿ ಹಿಂದೆ ಹಿಂದೆ ಅನತಿದೂರದಲ್ಲಿ ಕುದುರೆ ನಡೆಸುತ್ತ ಬೆನ್ನು ಹತ್ತಿದ. ಬಹಳ ಹೊತ್ತು ಅವನ್ಯಾಕೋ ಮಾತಾಡಲಿಲ್ಲವೆಂದು ಈಕೆ ಹಿಂದಿರುಗಿ ನೋಡಿದರೆ ಆತ ಎವೆಯಿಕ್ಕದೆ ಇವಳನ್ನೇ ನೋಡುತ್ತಿದ್ದಾನೆ! ಇದ್ಯಾವುದೋ ಎಳೆನಿಂಬೆ ಇದರೊಂದಿಗೆ ಆಟ ಆಡಬೇಕೆಂದು,
“ಏನ್ಹಂಗೆ ದುರುಗುಟ್ಟಿ ನೋಡ್ತೀಯ?” ಅಂದಳು.
“ನಿನ್ನನ್ನೇ ನೋಡೋದು”
“ಯಾಕೆ, ಹೆಂಗಸರ ಮುಕ ಕಂಡಿಲ್ಲವ?”
“ಬೇಕಾದಷ್ಟು ಕಂಡಿದ್ದೇನೆಯೇ, ನಿನ್ನಂಥ ಚಲುವೆಯನ್ನ ಕಂಡಿಲ್ಲ ಅಷ್ಟೆ.”
“ಅಂಗೆಲ್ಲ ದುರುಗುಟ್ಟಿ ನೋಡಿದರೆ ಏನ್ಮಾಡತೀನಿ ನೋಡಿಕೊ”
“ನೋಡ್ತೀನೇ ಇನ್ನೂ ನೋಡ್ತೀನಿ ಏನೇ ಮಾಡ್ತಿ?”
“ನನ್ನ ಗಂಡನಿಗೆ ಹೇಳಿ…”
“ನಿನ್ನ ಗಂಡ ದಂಡಿಗ್ಹೋಗ್ತಾನೆ, ಆವಾಗೇನೇ ಮಾಡ್ತಿ?”
“ಏ ಹುಚ್ಚಾ, ಅಕಾ ಯಾರೋ ಬರ್ತಿದಾರೆ. ನೋಡಿದರೆ ಏನಂದುಕೊಂಡಾರು? ಈಗೇನು ಹೋಗ್ತಿಯ? ಇಲ್ಲಾ ಕೂಗಂತೀಯಾ?”
ಎಂದು ಹೇಳಿ ಬೇರೆ ದಾರಿ ಹಿಡಿದಳು. ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದು ಆಮೇಲೆ ಮತ್ತೇನೋ ನೆನಪಾಗಿ ಕುದುರೆ ಓಡಿಸಿ ಅವಳನ್ನ ಅಡ್ಡಗಟ್ಟಿ ನಿಲ್ಲಿಸಿದ. ನಾಚಿ ಕೆಂಪೇರಿದ ಮುಖದಿಂದ ಹೇಳಿದ:
“ನೆನಪಿಡೇ ಇವಳೆ. ನಾನು ಹುಚ್ಚನಲ್ಲ, ರಾಜಕುಮಾರ! ನಿನ್ನ ನೋಡೋದಕ್ಕೆ ನಾಳೇನೂ ಇಲ್ಲಿಗೇ ಬರ್ತೀನಿ. ಸಂಜೇತನಕ ದುರುಗುಟ್ಟಿ ನೋಡ್ತೀನಿ. ಅದೇನ್ಮಾಡ್ತಿಯೋ ಮಾಡಿಕೊ.”
ಎಂದು ಹೇಳಿ ಕುದುರೆ ಓಡಿಸಿದ.
ಮಾರನೇ ದಿನ ಮುಂಜಾನೆ ಮೂರು ತಾಸು ಹೊತ್ತೇರಿತ್ತು. ಆಗಲೇ ನದಿಯ ಬಳಿಯ ಹುಲ್ಲುಗಾವಲಲ್ಲಿ ರಾಜಕುಮಾರನ ಕುದುರೆ ಮೇಯುತ್ತಿತ್ತು. ನಿನ್ನೆ ಅವಳು ಸೀರೆ ಒಗೆದ ಕಲ್ಲಿನ ಮ್ಯಾಲೆ ಕುಂತುಗೊಂಡು ನದಿಯನ್ನೇ ನೋಡುತ್ತಿದ್ದ. ಸೂರ್ಯನ ಎಳೆಬಿಸಿಲಿನ ಚಿನ್ನದ ಕಿರಣಗಳು ತೆರೆಗಳಲ್ಲಿ ಹೊಳೆಯುತ್ತ ನಂದುತ್ತ ಆಟ ಆಡುತ್ತಿದ್ದವು. ನೀರಿನ ಮೇಲೆ ಟಿಟ್ಟಿಭಗಳು ಸುತ್ತುಗಟ್ಟಿದ್ದವು. ಚಿಳಿಮಿಳಿ ಮೀನು ಆಗಾಗ ಹಾರಿ ಹನಿ ನೀರಿನ ಸಣ್ಣ ಸಣ್ಣ ಮುತ್ತುಗಳನ್ನು ಹಾರಿಸುತ್ತಿದ್ದವು. ದಡದಲ್ಲಿದ್ದ ದೊಡ್ಡ ನೇರಳೆ ಮರಗಳಲ್ಲಿ ಕಳಿತ ಹಣ್ಣು ಗೊಂಚಲು ಗೊಂಚಲಾಗಿ ಬಿಸಿಲಿನಲ್ಲಿ ಹೊಳೆಯುತ್ತ ದಟ್ಟ ನೀಲಿ ರತ್ನಗಳ ಕಾಂತಿಯನ್ನು ಸೂಸುತ್ತಿದ್ದವು. ಅವಳು ಬಂದೇ ಬರುತ್ತಾಳೆಂಬ ರಾಜಕುಮಾರನ ನಂಬಿಕೆ ಹುಸಿಹೋಗಲಿಲ್ಲ.
ದೂರದಲ್ಲಿ ಸಿರಿಲಕ್ಕಿ ಇವನನ್ನೇ ನೋಟಗಳಿಂದ ಹುಡುಕುತ್ತ ಬರುವುದನ್ನು ಗಮನಿಸಿ ಈ ಖಳನಾಯಕ ಮರದ ಮರೆಗೆ ಅವಿತು ನಿಂತ. ಬಂದವಳು ಸೀರೆಯನ್ನ ಮೊಳಕಾಲಿನತನಕ ಎತ್ತಿ, ನೀರು ತುಂಬಿಕೊಂಡು ಸುತ್ತ ಹುಡುಕು ದೃಷ್ಟಿಯಿಂದ ನೋಡಿದಳು. ಯಾರೂ ಕಾಣಿಸಲಿಲ್ಲ. ಆದರೆ ಹುಲ್ಲುಗಾವಲಲ್ಲಿ ನಿನ್ನೆಯ ಕುದುರೆ ಮೇಯುತ್ತಿತ್ತು! ಈಗ ಮರದ ಮರೆಯಲ್ಲಿ ದೃಷ್ಟಿ ಚೆಲ್ಲಿ ಹುಡುಕತೊಡಗಿದಾಗ ಅವಿತಿದ್ದ ರಾಜಕುಮಾರ ಹೊರಬಂದು ಅವಳೆದುರು ಧುತ್ತೆಂದು ನಗುತ್ತ ನಿಂತ.
“ಯಾಕೆ ಬಂದೆ? ಏನು ಬೇಕು ನಿನಗೆ?” ಅಂದಳು.
“ಏನು ಬೇಕಂತ ಗೊತ್ತಿಲ್ಲವೇ?”
ಎಂದು ಹೇಳುತ್ತ ಸಮೀಪಹೋಗಿ ಸಿರಿಲಕ್ಕಿಯ ಸೊಂಟಕ್ಕೆ ಕೈ ಸುತ್ತಿದ. “ಇದೆಲ್ಲ ಬ್ಯಾಡ, ಸುಮ್ನೆ ಹೋಗು” ಎಂದು ಅವನ ಕೈಯನ್ನ ಸರಿಸಿ ದುರುಗುಟ್ಟಿ ನೋಡಿ ಎರಡು ಹೆಜ್ಜೆ ಹಿಂದೆ ಸರಿದಳು. ಕ್ಷಣ ಗಾಬರಿಗೊಂಡ ರಾಜಕುಮಾರ ತಕ್ಷಣವೇ ಆತ್ಮವಿಶ್ವಾಸ ತಳೆದು ಬೆನ್ನಟ್ಟಿ ಹೋಗಿ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆನ್ನೆಗೆ ಮುದ್ದಿಟ್ಟ. ಅವನ ಚುಂಬನದಲ್ಲಿನ್ನೂ ಭಯವಿತ್ತು. ತನ್ನ ಯಾವುದೋ ಅಮೂಲ್ಯವಸ್ತುವನ್ನೀತ ಕದಿಯುತ್ತಿದ್ದಾನೆಂದು ಅವಳಿಗನ್ನಿಸಿತು. ಉಳಿಸಿಕೊಳ್ಳುವ ಕೊನೆಯ ಪ್ರಯತ್ನವೆಂದು ಅವನ ಮುಖವನ್ನು ಹಿಂದಕ್ಕೆ ತಳ್ಳಿದಳು. ಮಾಡಿದ ಪ್ರಯತ್ನದಲ್ಲಿ ಶಕ್ತಿಯೇ ಇರಲಿಲ್ಲ.
ತನ್ನ ಬೀಡಿಗೆ ಬಂದ ಮೇಲೆ ಮಾತ್ರ ಅವಳ ಮನಸ್ಸಿನಲ್ಲಿ ಬಿರುಗಾಳಿ ಎದ್ದಿತು. ಗಂಡ ದಂಡಿಗೆ ಹೋಗಿದ್ದ. ಅವಳೀಗ ಕೇವಲ ರಾಜಕುಮಾರನನ್ನೇ ಕುರಿತು ಯೋಚನೆ ಮಾಡುತ್ತಿದ್ದಳು. ಎಲ್ಲೆಲ್ಲೂ ಅವನೇ ಕಾಣುತ್ತಿದ್ದ. ನಿದ್ರೆ ಬರಲಿಲ್ಲ. ಅವನ ಹೆಜ್ಜೆ ಸಪ್ಪಳವನ್ನು ಕೇಳಲು ಕಾತರಳಾದಳು.
ಮಾರನೇ ದಿನ ಅವನನ್ನು ನೋಡಿದಾಗ ನಗೆ ಬಂತು. ಆದರದು ಆನಂದ ಉಲ್ಲಾಸಗಳ ನಗೆಯಾಗಿರಲಿಲ್ಲ. ಭಯ ಮತ್ತು ದಾರಿತಪ್ಪುತ್ತಿದ್ದೇನೆಂಬ ದುಃಖ ಆತಂಕಗಳು ಅಡಕವಾಗಿದ್ದ ನಗೆ ಅದು. ಅವಳ ಹೃದಯವಿನ್ನೂ ದುರ್ಬಲ ಸ್ವರದಲ್ಲಿ ಅವಳನ್ನು ಎಚ್ಚರಿಸುತ್ತಲೇ ಇತ್ತು. ಆದರೆ ಅವಳ ಸಮಸ್ತ ಪ್ರಾಣ ಅವನಿಗಾಗಿ ಹಾತೊರೆಯುತ್ತಿತ್ತು. ಆತ ಬಂದು ಸಮೀಪದಲ್ಲೇ ನಿಂತ. ಅವನ ಉದ್ವೇಗದ ಉಸಿರಾಟ ಅವಳಿಗೆ ಕೇಳಿಸುತ್ತಿತ್ತು. ಅವಳ ಎದೆ ಬಡಿತ ಅವನ ಕಿವಿಗೆ ಕೇಳಿಸುವಷ್ಟು ಜೋರಾಗಿತ್ತು. ಅವಳ ಬಗ್ಗೆ ಅವನಲ್ಲಿ ಅನುಕಂಪವೇನೋ ಮೂಡಿತು. ಮರುಕ್ಷಣವೇ ಪಶುತ್ವ ಎಚ್ಚರಾಗಿ ಅವಳ ಬೇಟೆಗೆ ಸಿದ್ಧನಾದ. ತೋಳು ಹಿಡಿದೆಳೆದ. ಅವಳ ಕಾಲಲ್ಲಿ ಶಕ್ತಿ ಸಾಲದೆ ಬೀಳುತ್ತಿರುವಷ್ಟರಲ್ಲಿ ರಾಜಕುಮಾರ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮುಖದ ತುಂಬ ಮುದ್ದುಕೊಟ್ಟ. ಸಿರಿಲಕ್ಕಿ ಥರಥರ ನಡುಗಿದಳು. ಕುರಿಮರಿಯನ್ನೆತ್ತಿಕೊಂಡಂತೆ ಅವಳನ್ನು ಹೊತ್ತೊಯ್ದು ಬದಿಯ ಮೆಳೆಯಡಿಯ ಮಳಲಿನಲ್ಲಿ ಚೆಲ್ಲಿಕೊಂಡ. ಇಬ್ಬರಿಗೂ ಹುಚ್ಚಡರಿತು.
ಇವರ ಸಂತೋಷ ಬಹುದಿನ ಬಾಳಲಿಲ್ಲ. ಬಿಳಿಗಿರಿಯಲ್ಲಿ ಗೆದ್ದು ನಿಮ್ಮ ರಾಜ ವಾಪಾಸಾದ. ಯುದ್ಧದಲ್ಲಿ ಬದೆಗ ಅಪಾರ ಶೌರ್ಯ, ಜಾಣತನಗಳನ್ನು ಮೆರೆದು ಬಹುಮಾನಿತನಾಗಿದ್ದ. ಬಂದ ಬಹುಮಾನಗಳನ್ನು ಊರವರಿಗೆ, ಬಂಧು ಬಾಂಧವರಿಗೆ ಆಪ್ತೇಷ್ಟರಿಗೆ ತೋರಿಸಿ ಹೆಮ್ಮೆಪಟ್ಟ. ಆದರೆ ಮೂರನೇ ದಿನ ಸಾಯಂಕಾಲ ಮಡದಿಯ ವಿಷಯ ತಿಳಿದು ಅವನಲ್ಲಿ ಭೂತಪ್ರವೇಶವಾಗಿ ಬಿಟ್ಟಿತ್ತು. ಬೀಡಿಗೆ ಬಂದ. ಆಗವನ ಬೀಡಿನಲ್ಲಿ ತಾಯಿ ತಂಗಿಯರ್ಯಾರೂ ಇರಲಿಲ್ಲ.
ಅವನ ನಡಿಗೆ ಭಾರವಾಗಿತ್ತು. ನಡೆದಂತಿರಲಿಲ್ಲ. ಕಾಲು ಎತ್ತಿ ಎತ್ತಿ ಇಡುತ್ತ ನಿಧಾನವಾಗಿ ಒಳಗೆ ಬಂದು ಹೆಂಡತಿಯ ಮುಖ ನೋಡದೆ ಶತಪಥ ತಿರುಗಿದ. ಮೂಲೆಯಲ್ಲಿ ನಿಂತು ಅಗೋಚರ ಶತ್ರುವನ್ನಿರಿಯುವಂತೆ ಬಲಗೈ ಮುಷ್ಟಿಮಾಡಿ ಇನ್ನೊಂದು ಅಂಗೈಗೆ ಗುದ್ದಿಕೊಂಡ. ಅಡಿಗೆ ಮನೆಯ ಕಡೆಗೆ ಕಿರಾತ ದೃಷ್ಟಿಯಿಂದ ನೋಡಿ ಭಯಂಕರ ಕೋಪದ ಭಾವಪ್ರದರ್ಶನ ಮಾಡಿ, ಹಲ್ಲು ತಿಂದು, ಇನ್ನೊಮ್ಮೆ ಗುದ್ದಿಕೊಂಡು ಆಮೇಲೆ ತಿರುಗಿದ. ನಡುನಡುವೆ ಏನೇನೋ ಗೊಣಗುತ್ತಿದ್ದ. ಕೋಪದಿಂದ ಮನಸ್ಸನ್ನು ಪರಚಿಕೊಳ್ಳುತ್ತಿದ್ದ. ಭುಜ ಕುಣಿಸಿ ತನ್ನ ಅಸಹಾಯಕತೆಯನ್ನು ಅನೇಕ ಭಂಗಿಗಳಲ್ಲಿ ಅಭಿವ್ಯಕ್ತಿಸುತ್ತಿದ್ದ. ಆಮೇಲೆ ಸೋತವನಂತೆ ಭುಜ ಇಳಿಬಿಟ್ಟು ಗಡಂಚಿಯ ಮೇಲೆ ಕೂತ.
ಅಡಿಗೆ ಮನೆಯಲ್ಲಿ ಇದನ್ನೆಲ್ಲ ಕದ್ದು ನೋಡುತ್ತಿದ್ದ ಸಿರಿಲಕ್ಕಿಗೆ ಏನೊಂದೂ ತಿಳಿಯಲಿಲ್ಲ. ಎರಡು ದಿನ ನಗುನಗುತ್ತ ಇದ್ದನಾದ್ದರಿಂದ ಅವನಿಗೇನೂ ತಿಳಿದಿಲ್ಲವೆಂದೇ ಅವಳ ಲೆಕ್ಕವಾಗಿತ್ತು. ಈ ದಿನ ಇನ್ನೇನೋ ಆಗಿರಬೇಕೆಂದುಕೊಂಡು ಸಹಾನುಭೂತಿ ಮತ್ತು ಪ್ರೀತಿಯ ಭಾವನೆಗಳ ನೆರೆಬಂದು ನಿಯಂತ್ರಿಸಲಾರದೆ ಬಳಿ ಬಂದು ಹೆಗಲಮೇಲೆ ಕೈ ಹಾಕಿ,
“ಯಾಕ ಹಿಂಗಿದ್ದೀ? ಯಾರೇನಾರ ಅಂದರೇನು?”
ಅಂದಳು ಅವನ ಗುಂಗುರು ಕೂದಲಲ್ಲಿ ಬೆರಳಾಡಿಸುತ್ತ. ಅವನ ಮೈಯಿಂದ ಗಂಡಸಿನ ಬೆವರು ಮತ್ತು ವಾಸನೆ ಬರುತ್ತಿತ್ತು. ಅವನ ಜೊಂಡು ಮೀಸೆ ಜೋತಾಡುತ್ತಿತ್ತು. ಬದೆಗ ಮಾತಾಡಲಿಲ್ಲ. ಹೊರಗೆ ಕತ್ತಲು ದಟ್ಟವಾಗುತ್ತಿತ್ತು. ಅವಳ ಮುಖ ನೋಡದೇ ಕೇಳಿದ.
“ನನ್ನಲ್ಲಿದ್ದ ಎಲ್ಲ ವೀರ್ಯದೊಂದಿಗೆ ನಿನ್ನನ್ನ ಪ್ರೀತಿಸಿದೆನಲ್ಲೇ ಮಡದಿ, ಹೇಳು ಇಂಥ ಗಂಡನ ಮರ್ಯಾದೆಯನ್ನ ಹೆಂಗೆ ಕಾಪಾಡಿದೆ?”
ಸಿರಿಲಕ್ಕಿಗೆ ಈಗ ವಿಷಯ ತಿಳಿದು ಎದೆ ದಸಕ್ಕೆಂದು ಕುಸಿಯಿತು. ಥರಥರ ನಡುಗಿ ಸೀರೆ ಸೆರಗನ್ನು ಬಾಯಲ್ಲಿ ಕಟ್ಟಿಕೊಂಡು ಬರುವ ಬಿಕ್ಕನ್ನು ತಡೆಹಿಡಿದು, ಹಿಂದೆ ಹಿಂದೆ ಹೆಜ್ಜೆ ಇಡುತ್ತ ಅಡಿಗೆ ಮನೆ ಬಾಗಿಲಲ್ಲಿ ನಿಂತು ಮುಂದೇನು ಕಾದಿದೆಯೋ ಎಂದು ಬದೆಗನನ್ನೇ ನೋಡುತ್ತ ನಿಂತಳು. ಗೂಟಕ್ಕೆ ತೂಗುಹಾಕಿದ್ದ ಬಾರುಕೋಲು ತಗೊಂಡು ಅದನ್ನು ನೇವರಿಸುತ್ತ “ಬಾಯಿ ಬಿಡೇ” ಎಂದು ಗದರಿದ. ಸಿರಿಲಕ್ಕಿ ಹತಾಶಳಾಗಿ ಓಡಿ ಬಂದು ಧೊಪ್ಪನೆ ಅವನ ಕಾಲಮೇಲೆ ಬಿದ್ದು,
“ನನ್ನನ್ನು ಕೊಲ್ಲು, ನಿನ್ನ ಕಾಲು ಬೀಳ್ತೀನಿ ಕೊಲ್ಲು”
-ಎಂದು ಗಟ್ಟಿಯಾಗಿ ಅವನ ಕಾಲು ಹಿಡಿದು ತಲೆ ಗಿಟ್ಟಿಸಿದಳು. ಬದೆಗ ಅವಳ ತುರುಬಿಗೆ ಕೈಹಾಕಿ ದನಕ್ಕೆ ಹೊಡೆದಂತೆ ನಾಲ್ಕು ಕಟೆದ ನೋಡು, ಬಾರಿನಗುಂಟ ಬಾರಿನಳತೆಯ ಚರ್ಮ ಕಿತ್ತು ಬಂತು. ಕಿಟಾರನೆ ಕಿರಿಚಿ ಬಟ್ಟೆಯ ಗಂಟಿನಂತೆ ಮುದ್ದೆಯಾಗಿ ಬಿದ್ದುಬಿಟ್ಟಳು. ಕರುಳು ಚುರ್ರೆಂದು ತಾನೆಷ್ಟು ಅವಳನ್ನ ಪ್ರೀತಿಸುತ್ತಿದ್ದೆ ಅಂತ ಬದೆಗನಿಗೆ ಅರಿವಾಯ್ತು. ತಿರಸ್ಕಾರ ಬೆರೆತ ಆ ಪ್ರೀತಿ ಈಗ ಭೀಕರವಾಗಿತ್ತು. ಹಾಗೇ ಗೋಡೆಗಾಧಾರವಾಗಿ ಕೂತುಕೊಂಡ. ಸೊಗಸಿನ ಹಾಸಿಗೆ ಬಿಟ್ಟು ಬರಿ ನೆಲದಲ್ಲಿ ಕವಚಿ ಮಲಗಿದ್ದಳು ಹೆಣ್ಣು.
ಬಹಳ ಹೊತ್ತಿನ ತನಕ ಇಬ್ಬರೂ ತುಟಿ ಬಿಚ್ಚಲಿಲ್ಲ. ಹೊರಗಿನ ತಂಗಾಳಿ ಬೀಸಿದಾಗ ಸಣ್ಣದಾಗಿ ಸಿರಿಲಕ್ಕಿ ನರಳಿದ್ದು ಕೇಳಿಸಿತು. ಎತ್ತಿಕೊಂಡು ಅವಳ ಮುಖ ನೋಡಿದ. ಕಣ್ಣೀರಿನಿಂದ ಒದ್ದೆಯಾಗಿದ್ದ ಕಣ್ಣು ಕೆನ್ನೆಗಳನ್ನ ಚುಂಬಿಸಿದ. ಬೆನ್ನು ಹಿಡಿದಿದ್ದ ತನ್ನ ಎಡಗೈ ಮ್ಯಾಲೆ ಬಾರು ಮೂಡಿ ಚರ್ಮ ಕಿತ್ತಲ್ಲಿಂದ ಹರಿವ ನೆತ್ತರಿಂದ ಕೈ ಒದ್ದೆಯಾಯ್ತು.
“ಏನೇನು ನಡೆಯಿತು ಹೇಳೇ ಮುದ್ದಿನ ಮಡದಿ; ಅಂಗೈ ಅರಗಿಣಿಯಂಗೆ ನೋಡಿಕೊಂಡ್ನಲ್ಲೇ, ಯಾಕೆ ಹಿಂಗಾಯ್ತು? ಇಷ್ಟದಲ್ಲಿ ಸೋತೆಯೋ ಕಷ್ಟದಲ್ಲಿ ಸೋತೆಯೋ? ಹೇಳೆ”
-ಎಂದ ತಾನೂ ಕಣ್ಣೀರು ಸುರಿಸುತ್ತ, ಸಿರಿಲಕ್ಕಿ ಬಿಕ್ಕಿದಳೆ ವಿನಾ ಮಾತಾಡಲಿಲ್ಲ. ಬಿಕ್ಕುತ್ತ ಪುನಃ ಅವನ ಕಾಲು ಹಿಡಿದು “ಕೊಲ್ಲು ನನ್ನ” ಎಂದಳು. ಇನ್ನಷ್ಟು ಕೋಪ ಬಂದು ಬದೆಗ ಅವಳ ತುರುಬಿಗೆ ಕೈ ಹಾಕಿ “ಹೇಳೋದಿಲ್ಲವೇನೇ?” ಅಂದ.
“ಇಲ್ಲ.”
“ಅಂಗಾ? ಮಾಡಬಾರದ ಕೆಲಸಕ್ಕೆ ಕೊಡಬಾರದ ಶಿಕ್ಷೆಯೇ ಸೈ”
-ಎಂದು ಅವಳ ಜುಟ್ಟು ಹಿಡಿದು ಕೈ ದಣಿಯುವಷ್ಟು ಗುದ್ದಿದ. ಕಾಲು ದಣಿಯುವಷ್ಟು ಒದ್ದ. ಆಮೇಲೆ ಅವಳ ತಲೆಯಿಂದ ಅವಳ ಕೂದಲನ್ನು ಕೀಳಬೇಕೆಂದು ತಲೆಗೆ ಜಿಗ್ಗಾಲು ಕೊಟ್ಟು ಜೋರಿನಿಂದ ಎಳೆದ. ಸಿರಿಲಕ್ಕಿ ವಿಕಾರವಾಗಿ ಕಿರಿಚಿದ್ದೇ ಆಯಿತು, ಆ ದನಿಗೆ ಬೆರಗಾಗಿ ಕೈ ಸಡಿಲು ಬಿಟ್ಟ. ತಕ್ಷಣ ಅವಳು ಜೋರಿನಿಂದ ಅವನ ಮುಖಕ್ಕೆ ಒದ್ದು ಎದ್ದು ಓಡಬೇಕೆನ್ನುವಷ್ಟರಲ್ಲಿ ಕಾಲು ಇವನ ಕಾಲಿಗೆ ತಾಕಿ ಬಿದ್ದಳು. ಈತ ತಕ್ಷಣ ರಭಸದಿಂದ ಅವಳ ಕಾಲು ಹಿಡಿದೆಳೆದ. ಬೆನ್ನುಮೇಲಾಗಿ ಬೊಕ್ಕ ಬೋರಲಾಗಿ ಬಿದ್ದಳು. ಕೂಡಲೇ ಅವಳ ಮೇಲೆ ಹಾರಿ ಬೆನ್ನುಹುರಿಗೆ ಬಾಯಿ ಹಾಕಿ ಕುರಿಮರಿಯನ್ನು ಚಿರತೆ ಸಿಗಿಯುವಂತೆ ಹಲ್ಲಿನಿಂದ ಸಿಗಿದು ಎಡಗಡೆ ಚೆಲ್ಲಿದ. ಅಡಿಗೆ ಕೋಣೆಯ ಬಾಗಿಲ ಚೌಕಟ್ಟಿಗೆ ತಲೆ ಬಡಿದು ತಲೆ ಬೆನ್ನುಗಳಿಂದ ನೆತ್ತರು ಸುರಿದು ಮಡುಗಟ್ಟಿತು.
ಮಾರನೆ ಬೆಳಿಗ್ಗೆ ಅವಳ ಹೆಣವ ಒಂದು ಕಡಿತ ಕಡಿದು ಇಕ್ಕಡಿ ಮಾಡಿದ. ಇನ್ನೊಂದು ಕಡಿತ ಕಡಿದು ಮೂರು ತುಂಡು ಮಾಡಿ ಮೂರು ಹಾದಿ ಕೂಡುವಲ್ಲಿ ಇಟ್ಟು ನಾಯಿ ನರಿ ಹದ್ದು ಕಾಗೆಗಳಿಗೆ ಭಕ್ಷ್ಯಭೋಜ್ಯ ನೀಡಿದ. ನದಿಗೆ ಬಂದು ಋಣ ತೀರಿತೆಂದು ಮೂರು ಬೊಗಸೆ ನೀರು ಬಿಟ್ಟ. ಅಲ್ಲೇ ಸಿರಿಲಕ್ಕಿ ಬಟ್ಟೆ ಒಗೆವ ಕಲ್ಲಿನ ಮೇಲೆ ರಾಜಕುಮಾರನಿಗಾಗಿ ಕಾಯುತ್ತ ಕೂತ.
ನಾಕು ತಾಸು ಹೊತ್ತೇರಿರಬೇಕು ರಾಜಕುಮಾರ ಕುದುರೆಯೇರಿ ಬಂದ. ಕೊಡಲಿ ಹಿಡಿದುಕೊಂಡು ಕೂತ ಬದೆಗನನ್ನು ನೋಡಿದ್ದೇ ಕಾಡಿನಲ್ಲಿ ಕದುರೆಯನ್ನ ಓಡಿಸಿದ. ಆಮ್ಯಾಲೆ ಬದೆಗನ ಸಿಟ್ಟು ಇಳಿಯಿತು ಅಂತಿಟ್ಟುಕೊ. ಈ ಕತೆಯನ್ನ ಹೇಳಿ ಕೇಳೋದರಿಂದ ಯಾರಿಗೂ ಯಾವ ಪುಣ್ಯಫಲ ಇಲ್ಲವಾಗಿ ನೀನೂ ಯಾರ ಮುಂದೂ ಹೇಳಬ್ಯಾಡ ನನ್ನೊಡೆಯಾ” ಅಂದು, ಮುಂದೆ ಬದೆಗನ ಅಧಿಕಾರ ಮತ್ತು ಸಂಬಳಗಳನ್ನು ಹೆಚ್ಚಿಸಿ ಬದೆಗ ತನಗಾದ ಅವಮಾನವನ್ನು ಮರೆಯುವಂತೆ ಪ್ರಧಾನಿ ವ್ಯವಸ್ಥೆ ಮಾಡಿದ್ದನ್ನು ಹೇಳಿ ಸುಕ್ರ ತನ್ನ ಕಥೆ ಮುಗಿಸಿದ.
Leave A Comment