ಆದಾಗಿ ಒಂದು ದಿನ ಕಳೆದು, ಎರಡು ದಿನ ಹೋಗಿ, ಮೂರನೇ ಹಗಲು ಮಾಗಿ ರಾತ್ರಿಯಾಗಿ ಶಿಖರಸೂರ್ಯ ಗಾಢನಿದ್ದೆಯಲ್ಲಿದ್ದಾಗ ಕನಸಿನಲ್ಲಿ ಯಾರೋ ‘ಒಡೆಯಾ’ ಅಂದಂತೆ ಕೇಳಿಸಿ ಎಚ್ಚರಾದ. ಎಚ್ಚರಾದ ಮೇಲೂ “ಒಡೆಯಾ” ಎಂದ ಸಣ್ಣ ದನಿ ಕೇಳಿಸಿ ತಕ್ಷಣ ಎದ್ದು ಕೂತ. ಬೆಟ್ಟನ ದನಿಯಂತಿತ್ತು. ಸುಕ್ರನ ಭೇಟಿಗೆ ಹೋಗಿದ್ದವ ಈಗ ಬಂದನೆಂದು ಕಾಣುತ್ತದೆ ಎಂದು ಹೋಗಿ ಮೆಲ್ಲನೆ ಬಾಗಿಲು ತೆರೆದು ನೋಡಿದ. ಬೆಟ್ಟನ ಜೊತೆಗೆ ಸುಕ್ರನೂ ನಿಂತಿದ್ದ! ಇಬ್ಬರೂ ಬಾಗಿ ಯಥೋಚಿತ ನಮಸ್ಕಾರ ಗೌರವ ಸೂಚಿಸಿದ ಮೇಲೆ ಸುಕ್ರ ಸಮೀಪ ಬಂದು “ಮಾತಾಡಬೇಕು ಒಡೆಯಾ” ಅಂದ. ಸೇವಕರು ಎಲ್ಲೆಂದರಲ್ಲಿ ಮಲಗಿದ್ದರಿಂದ ಮೂವರೂ ಮಾತಾಡದೆ ದೂರದ ಗೋವಿನ ಕೊಟ್ಟಿಗೆಯ ಬಳಿಗೆ ಹೋದರು. ಸ್ಥಳ ಸುರಕ್ಷಿತವೆಂದು ಖಾತ್ರಿಯಾದ ಮೇಲೆ “ಹೇಳು ಸುಕ್ರ” ಅಂದ.

ಬಿಳಿಗಿರಿಯ ಅಳಿದ ಮಹಾರಾಜ ಬಚ್ಚಿಟ್ಟ ಚಿನ್ನ ನಮಗೆ ಸಿಕ್ಕಿದೆ ಒಡೆಯಾ!” ಎಂದು ಹೇಳುತ್ತಿರುವಂತೆ ಶಿಖರಸೂರ್ಯ ಸುಕ್ರನ ಎರಡೂ ಕೈಹಿಡಿದು ಅಭಿಮಾನ ಮತ್ತು ಉಕ್ಕಿದ ಸಂತೋಷದಿಂದ ಆಮುಕಿದ. ಸುಕ್ರ ಮುಂದುವರೆಸಿ,

“ಚಿಕ್ಕಮ್ಮಣ್ಣಿಯ ಬಳಿಗೆ ಹೋಗಿ….”

ಎಂದು ಹೇಳುತ್ತಿರುವಂತೆ ಶಿಖರಸೂರ್ಯ ಮಧ್ಯದಲ್ಲೇ ಬಾಯಿ ಹಾಕಿ

“ಮೂರ್ಖಾ ಅವಳ ಬಳಿಗ್ಯಾಕೆ ಹೋದಿರಿ?” ಅಂದ.

“ಇನ್ನೂ ಹೋಗಿಲ್ಲ ಹೋಗಬೇಕು.”

“ಯಾಕೆ?”

“ಒಡೆಯನೇ ಇದು ಅವಳ ಅಣ್ಣನ ನಿಧಿ. ಇಲ್ಲಿಗೆ ಬರುವಾಗ ಅರ್ಧ ತಂದು ಅರ್ಧ ಅಡಗಿಸಿಟ್ಟ ನಿಧಿ. ಅಂದಮೇಲೆ ಅವಳಿಗೇ ಸೇರಬೇಕಲ್ಲವೆ? ಅದು ಎಲ್ಲಿರಬೇಕೆಂದು ಹೇಳಬೇಕಾದವಳೂ ಅವಳೇ ಅಲ್ಲವೆ?”

ತಕ್ಷಣ ಶಿಖರಸೂರ್ಯ ಕೋಪ ಅಸಮಾಧಾನಗಳನ್ನು ನಿಯಂತ್ರಿಸಿಕೊಂಡು ತಾನಿರುವ ಸಂದರ್ಭವನ್ನು ಜ್ಞಾಪಿಸಿಕೊಂಡು

“ಮುಂದೆ?” ಅಂದ.

“ಆಕೆಗೆ ವಿಷಯ ತಿಳಿಸಿ ಎಲ್ಲಿಡಬೇಕೆಂದು ಕೇಳುವುದಾಗಲಿಲ್ಲ. ಅದನ್ನ ನೀನೇ ಮಾಡಬೇಕು. ಇದು ಯಾರಿಗೂ ಗೊತ್ತಾಗಬಾರದು.”

“ಈಗ ಚಿನ್ನ ಎಲ್ಲಿದೆ?”

“ಹೊರಗೆ ಗಾಡಿ ನಿಂತಿದೆ. ನಾಲ್ಕು ಹಂಡೆ ತುಂಬಿವೆ.”

“ಇಡೋಣ ಬನ್ನಿ”

ಎಂದು ಹೇಳುತ್ತ ಮೂವರೂ ಮನೆಗೆ ಬಂದು ಹಿತ್ತಲ ಬಾಗಿಲ ಕಡೆಯಿಂದ ಚಿನ್ನ ತುಂಬಿದ ಹಂಡೆಗಳನ್ನು ತಂದು ಧಾನ್ಯಸಂಗ್ರಹದ ಕೋಣೆಯಲ್ಲಿರಿಸಿದರು. ಆಮೇಲೆ ಸೇವಕಿಯರನ್ನೆಬ್ಬಿಸಿ ಜೊತೆಗಿದ್ದ ಒಂದು ಕಡಿಮೆ ನಲವತ್ತು ಭಂಟರಿಗೆ ಅಡಿಗೆ ಮಾಡಲಿಕ್ಕೆ ಹೇಳಿ ಸುಕ್ರನನ್ನು ಏಕಾಂತಕ್ಕೆ ಕರೆದೊಯ್ದು ವಿವರಗಳನ್ನು ಕೇಳಿದ. ಆಗಲೇ ಬಿಳಿಗಿರಿಯ ಈಗಿನ ರಾಯ ಯುವರಾಜನನ್ನು ಸೆರೆಹಿಡಿದ ವಿಚಾರ ಗೊತ್ತಾಯಿತು.

“ಹ್ಯಾಗೆ?” ಅಂದ ಕುತೂಹಲ ತಾಳದೆ.

“ನಾವೇನೋ ನೀನು ಹೇಳಿದ ಹಾಗೆ ಬಿಳಿಗಿರಿಯ ಅಳಿದ ರಾಯ ಬಚ್ಚಿಟ್ಟ ಚಿನ್ನದ ಹುಡುಕಾಟದಲ್ಲಿದ್ದೆವು. ಇಷ್ಟು ದಿನವೂ ಸುಳಿವು ಸಿಕ್ಕಿರಲಿಲ್ಲ. ಆ ಕಡೆ ಬಿಳಿಗಿರಿ ಭಂಟರೂ ಶೋಧನೆಯಲ್ಲಿದ್ದರು. ಅವರಿಗೆ ತಿಳಿಯದಂತೆ ನಾವು, ನಮಗೆ ತಿಳಿಯದಂತೆ ಅವರು; ಅವರಿಗೆ ಗೊತ್ತಿದೆಯೆಂದು ನಾವು, ನಮಗೆ ಗೊತ್ತಿದೆಯೆಂದು ಅವರು ನಂಬುತ್ತ, ಪರಸ್ಪರರನ್ನು ಅನುಮಾನಿಸುತ್ತಾ ಅನುಸರಿಸುತ್ತಿದ್ದೆವು!”

“ನೀವು ಯಾರ ಪಡೆಯೆಂದು ಅವರಿಗೆ ಗೊತ್ತಿದೆಯೊ?”

ಆತಂಕದಿಂದ ಕೇಳಿದ ಶಿಖರಸೂರ್ಯ.

“ಇಲ್ಲ ಇಲ್ಲ. ಯಾವದೋ ಬುಡಕಟ್ಟಿನ ದರೋಡೆಕೋರರೆಂದು ತಿಳಿದಿದ್ದಾರೆ.”

“ಆಮೇಲೆ?”

“ಒಂದುವಾರದ ಹಿಂದೆ ಗೊತ್ತಾಯಿತು; ನಾವಿಬ್ಬರಲ್ಲದೆ ಇನ್ನೂ ಒಂದು ತಂಡ ಅದೇ ಚಿನ್ನದ ಶೋಧದಲ್ಲಿದೆ ಎಂದು! ನಿಧಿ ಇರುವ ಜಾಗ ಪತ್ತೆ ಮಾಡಿದವರೂ ಅವರೇ!”

“ಅವರ್ಯಾರು?”

“ನಿನ್ನ ಪ್ರಧಾನಿಯ ಭಂಟರು! ನಾವಿನ್ನೂ ನಿಧಿಗಾಗಿ ಚಡಪಡಿಸುತ್ತಿದ್ದಾಗಲೇ ನಿನ್ನ ಸಂದೇಶ ಬಂತು. ನಿನ್ನ ಯುವರಾಜ ಒಂದು ಕಡಿಮೆ ನಲವತ್ತಾಳಿನ ಒಡೆಯನಾಗಿ, ಬಂಡೀ ಸಮೇತ ಬಂದಾ ನೋಡು, – ಆಗಲೇ ಗೊತ್ತಾಯಿತು ನಿಧಿ ಇವರಿಗೆ ಸಿಕ್ಕಿದೆಯೆಂದು! ಕತ್ತಲಾಗಿತ್ತು! ಆಗಲೇ ನಾವೂ ಅವರ ಭಂಟರ ಹಾಗೇ ಬಟ್ಟೆತೊಟ್ಟುಕೊಂಡು ಅವರ ಹಾಗೇ ಬಂಡಿ ಹೂಡಿಕೊಂಡು ಹೋದೆವು. ನಮ್ಮ ಬಂಡಿಯಲ್ಲಿದ್ದ ಹಂಡೆಗಳಲ್ಲಿ ಕಲ್ಲುಮಣ್ಣಿಟ್ಟು ಮುಚ್ಚಳ ಹಾಕಿ ತಟ್ಟು ಕಟ್ಟಿದ್ದೆವು. ಅವರು ಬರುತ್ತಿದ್ದಾಗ ದಾರಿ ತಪ್ಪಿಸಿ ಕಾವಲುಗಾರರನ್ನು ಮಾತ್ರ ಕೊಂದು ಚಾಕಚಕ್ಯತೆಯಿಂದ ಬಂಡಿಗಳ ಬದಲಿಸಿ ಅವರ ಬಂಡಿಯನ್ನು ನಾವು ಹೊಡೆದುಕೊಂಡು ಅಡ್ಡದಾರಿಯಿಂದ ಬಂದೆವು. ಅವರು ಇನ್ನೊಂದು ಅಡ್ಡದಾರಿ ಹಿಡಿದು ಹೋಗುವಾಗ, ದಾರಿತಪ್ಪಿ ಬಿಳಿಗಿರಿ ಭಂಟರ ಕೈಯಲ್ಲಿ ಸಿಕ್ಕು ಬಂಧಿಗಳಾದರು. ಇಷ್ಟೆ ಒಡೆಯಾ ನಡೆದದ್ದು. ಇದಿಷ್ಟು ಸುದ್ದಿಯನ್ನು ಚಿಕ್ಕಮ್ಮಣ್ಣಿಗೆ ತಿಳಿಸಿ ಅವಳ ಕೈಗೆ ಚಿನ್ನ ಒಪ್ಪಿಸಿದೆಯಾದರೆ ನಮ್ಮ ಕೆಲಸ ಮುಗಿಯಿತು.”

“ಆಯ್ತು ಅದನ್ನು ನಾನೇ ಮಾಡ್ತೀನಿ ಬಿಡಯ್ಯಾ”

“ಅಷ್ಟಾದರಾಯ್ತು ಒಡೆಯಾ.”

ಶಿಖರಸೂರ್ಯ ಎದ್ದ. ಇವರೂ ಎದ್ದರು.

“ನಿನ್ನ ಯುವರಾಜನ ಗತಿ ಮಾತ್ರ ಬೆಟ್ಟದಯ್ಯನೇ ಗತಿ!”

ಎಂದು ಹೇಳಿ ಸುಕ್ರ ಚಪ್ಪಾಳೆ ತಟ್ಟಿ ನಕ್ಕ! ಶಿಖರಸೂರ್ಯ ಸಕ್ರನ ಬೆನ್ನುತಟ್ಟಿ ಮನಸಾರೆ ನಕ್ಕ. ಊಟವಾದ ಮೇಲೆ ಭಂಟರು ಮಲಗಲಿಲ್ಲ. ಸುಕ್ರ ವಿನಾ ಎಲ್ಲರೂ ತಮ್ಮ ಹಟ್ಟಿಗೆ ಹೊರಟುಹೋದರು.

ಸುಕ್ರ ಮತ್ತವನ ಭಂಟರ ಚಾಣಾಕ್ಷತನ ಮತ್ತು ಸಮಯ ಬುದ್ಧಿಗಳನ್ನು ಶಿಖರಸೂರ್ಯ ಮೆಚ್ಚಿಕೊಂಡ. ಹೇಳಿಕೊಳ್ಳುವಂಥ ಲಾಭವಾಗಿತ್ತು. ಒಳಗೆ ಹೋಗಿ ನಿದ್ರಿಸುತ್ತಿದ್ದ ಮಡದಿಯನ್ನು ಹೃತ್ಪೂರ್ವಕ ಮುದ್ದಿಸಿದ. ನಿದ್ದೆ ಬಾರದೆ ಸುಕ್ರ ಹೇಳಿದ್ದರ ಹಿಂದು ಮುಂದುಗಳನ್ನು ಬೇರೀಜು ಮಾಡುತ್ತಿದ್ದಾಗ ಬೆಳ್ಳಿಮೂಡಿ ಹಕ್ಕಿಯ ಸ್ವರ ಹೊಮ್ಮಿತು. ಎದ್ದು ಮುಳುಗು ಹಾಕಿ ಬರಲು ನದಿಗೆ ಹೊರಟ.

ಹಿಂದಿರುಗಿ ಬಂದಾಗ ಬೆಳ್ಳಂ ಬೆಳಕಾಗಿ ಆಗಲೇ ಚಿಕ್ಕಮ್ಮಣ್ಣಿ ಅರಮನೆಯಿಂದ ಅಳಿಯನ ಮನೆಗೆ ಬಂದಿದ್ದಳು. ಅವಳ ಉತ್ಸಾಹವಂತೂ ಹೇಳತೀರದು.

ಸೇವಕಿಯಂತೆ ಅಡಿಗೆಯಟ್ಟು ಮಗಳು ಮೊಮ್ಮಕ್ಕಳನ್ನು ಮೀಯಿಸಿದಳು. ಬಾಳೆಯೆಲೆ ಹಾಕಿ, ಹಾಕಿದ ಎಲೆಗೆ ನೀರಿನ ಹನಿ ಚಿಮುಕಿಸಿ ಮಲ್ಲಿಗೆ ವರ್ಣದ ಅನ್ನ, ಪಚ್ಚೆವರ್ಣದ ಸೊಪ್ಪಿನ ಸಾರು ಬಡಿಸಿ ನಡುವೆ ತುಪ್ಪವ ಸುರಿದು ಅದಕ್ಕೊಪ್ಪುವ ಉಪ್ಪಿನಕಾಯಿ ಬಡಿಸಿದಳು. ಮೆಣಸು ಸೇರಿಸಿ ಮಾಡಿದ ಹನ್ನೆರಡು ಬಗೆಯ ಪಲ್ಯ, ಮಜ್ಜಿಗೆ ಸೇರಿಸಿ ಮಾಡಿದ ಐದಾರು ಬಗೆಯ ಪಲ್ಯ ಬಡಿಸಿ, ಹುಳಿ ಸೇರಿಸಿ ಮಾಡಿದ ಆರು ಬಗೆಯ, ತೆಂಗಿನ ಕಾಯಿ ಹಾಕಿ ಮಾಡಿದ ಒಂಬತ್ತು ಬಗೆಯ ಪದಾರ್ಥಗಳ ಹಾಕಿ ಘನವಾದ ನ್ಯಾರೇ ಮಾಡಿಸಿ ತೃಪ್ತಿಪಟ್ಟಳು.

ಆಮೇಲೆ ಚಿಕ್ಕಮ್ಮಣ್ಣಿಯ ಜೊತೆ ಮಾತಾಡಲು ಕಾಯುತ್ತಿದ್ದ ಶಿಖರಸೂರ್ಯ ದೂರದಲ್ಲಿ ಬೆಟ್ಟ ನಿಂತುದನ್ನು ನೋಡಿ, ಆತ ನೋಡುತ್ತಿರುವ ಹಾಗೇನೇ, ಸಮಯ ಸಾಧಿಸಿ

“ಅಂತರಂಗ ಮಾತಾಡಬೇಕು ತಾಯೀ” ಅಂದ.

“ಹೇಳಿ ಅಳೀಮಯ್ಯನವರೆ.” ಅಂದಳು.

ಸರಸರ ಬಳಿಗೆ ಬಂದು –

“ಮೊದಲಿನಂತೆ ನಾನು ನಿಮ್ಮ ಮಗನಾಗಿ ಇರೋದು ನನಗಿಷ್ಟ. ಬಹುವಚನ ಬೇಡ. ನೀವು ಉಡುಗೊರೆಯಾಗಿ ಕೊಟ್ಟ ಚಿನ್ನ ಬೇಡ ತಾಯಿ.” ಅಂದ.

“ಉಂಟೆ ಅಳಿಯಂದಿರೆ? ಆ ಚಿನ್ನ ನಿಮ್ಮದು, ನನ್ನದಲ್ಲ. ನೀವದನ್ನ ತಕ್ಕೊಳ್ಳದಿದ್ದರೆ ಶಿವನಾಣೆ. ನೀವು ಅದನ್ನು ಇನ್ನೊಮ್ಮೆ ಬೇಡ ಅಂದರೂ ನನ್ನಾಣೆ.”

ಎಂದು ಹೇಳಿ ಸರಸರ ಅರಮನೆಗೆ ಹೊರಟಳು. ಬೆಟ್ಟ ಕೇಳಿಸಿಕೊಂಡು ಹಿಂದೆ ಸರಿದು ನಿಂತು. ಚಿಕ್ಕಮ್ಮಣ್ಣಿ ಹೋಗುವತನಕ ಕಾದಿದ್ದು ಆಮೇಲೆ ಶಿಖರಸೂರ್ಯನ ಬಳಿಗೆ ಹೋಗಿ ಹೇಳಿದ:

“ಮಹಾರಾಣಿಯ ಸೇವಕ ಹೊರಗೆ ಕಾಯುತ್ತಿದ್ದಾನೆ. ಈಗಲೇ ನೀನು ಹೋಗಬೇಕೆಂತೆ, ಒಡೆಯಾ!”

ಎಂದು ಹೇಳಿ ನಕ್ಕ.