ಮೊದಲು ಕೂಡ ತಂದೆ ಮಗಳ ಮಧ್ಯೆ ಹೇಳಿಕೊಳ್ಳುವಂಥ ಸಲಿಗೆ ಇರಲಿಲ್ಲ. ಶಿಖರಸೂರ್ಯನಿಗೆ ರವಿಕೀರ್ತಿಯ ಬಗ್ಗೆ ಇದ್ದ ಪ್ರೀತಿ ಗೌರಿಯ ಬಗ್ಗೆ ಇರಲಿಲ್ಲ. ಮಗಳು ಎನ್ನುವುದಕ್ಕಿಂತ ಅವಳೊಂದು ಜವಾಬ್ದಾರಿ, ಇನ್ನೊಬ್ಬರ ಮನೆ ಬೆಳಗುವಂಥವಳು. ಒಬ್ಬ ಒಳ್ಳೆ ವರನ ಕತ್ತಿಗೆ ಕಟ್ಟಿದರೆ ತನ್ನ ಕರ್ತವ್ಯಕ್ಕೆ ಸೀಮೆ ಎಳೆದಿದ್ದ. ಈಗಲೂ ಅಷ್ಟಕ್ಕೆ ಬದ್ದನಾಗಿದ್ದ. ಕಂಚೀ ದೊರೆ ಕೇಳಿದ್ದರಿಂದ ಇವಳನ್ಯಾಕೆ ಅವನಿಗೆ ಕಟ್ಟಬಾರದೆಂದು ಎಕ್ಕ ಹಾಕಿದ್ದ. ರವಿಯೆದುರು ಈ ವಿಷಯ ಪ್ರಸ್ತಾಪಿಸಿದ್ದ. ತಂಗಿಯ ಒಲವು ಗೊತ್ತಿದ ರವಿ ಈ ಬಗ್ಗೆ ತಂದೆಯನ್ನು ಪ್ರೋತ್ಸಾಹಿಸಲಿಲ್ಲ. ಯಾವುದಕ್ಕೂ ಮುದ್ದುವನ್ನು ಒಂದು ಮಾತಿ ಕೇಳಬಹುದಲ್ಲ! ಎಂದು ಹಾರಿಕೆಯ ಮಾತಾಡಿದ್ದ. ಮಕ್ಕಳಿಗೆ ಸಲಿಗೆ ಹೆಚ್ಚಾಯಿತೆಂದು ಅಜ್ಜಿಗೂ ಅಂದಿದ್ದ. ಈಗ ನೋಡಿದರೆ ಮಗಳ ಕಳಂಕದಿಂದಲೇ ಚಕ್ರವರ್ತಿ ಶಿಖರಸೂರ್ಯನ ಚರಿತ್ರೆ ಸುರುವಾಗಿದೆ. !

ಶಿಖರಸೂರ್ಯ ತಂತಾನೇ ಅಂದುಕೊಂಡ:

“ಒಂದು ಕಡೆ ದಿನಾ ಕಾಣಿಕೆ ತರುವ ಮಾಂದಳಿಕರು ಹೊಗಳಿ ಮಹಾಪ್ರಭುವಿನ ಅಹಂಕಾರ ಹೊತ್ತಿಸುವ ಘಟನೆಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ತಾನು ಬಯಸಿದ ಹುಡುಗಿಯ ಹಿಂದೆ ಮಗ ಓಡುತ್ತಿದ್ದಾನೆ! ಕನಕಪುರಿಯ ರಾಜಕುಮಾರಿ, ಚಕ್ರವರ್ತಿ ಶಿಖರಸೂರ್ಯನ ಕುಮಾರಿ ಶಿವಾಪುರದ ಬುಡಕಟ್ಟಿನ ಒಂದು ಸಾಮಾನ್ಯ ಕರಡಿಯನ್ನು ವರಿಸಿ ಗರ್ಭಿಣಿಯಾಗಿದ್ದಾಳೆ! ಇದು ಪವಾಡವಲ್ಲವೆ! ಜೋಗ್ತಿಯರು ಆಗಲೆ ಅವಳ ಬಗ್ಗೆ ಹಾಡು ಕಟ್ಟಿ ಊರಾಡಿ ಹೊಟ್ಟೆ ಹೊರೆಯುತ್ತಿರಬಹುದು. ನನ್ನ ಮಗಳ ಹೆಸರಿನಲ್ಲಿ ಗುಡಿಗುಂಡಾರಗಳಾಗಲೇ ಎದ್ದಿರಬಹುದು. ಮಗಳು ನನ್ನ ಪಟ್ಟವನ್ನು ಕಸಿದು ಶಿವಾಪುರದ ಆ ಕರಡಿಗೆ ಕೊಟ್ಟರೂ ಆಶ್ಚರ್ಯವಿಲ್ಲ ಅಥವಾ ಆ ಕರಡಿಯೇ ಮಗಳ ಮೂಲಕ ಕನಕಪುರಿಯನ್ನ ಪ್ರವೇಶಿಸುವ ಕನಸು ಕಂಡಿರಬಹುದು. ಇಲ್ಲ ಇಲ್ಲ ಇದು ಸಾಧ್ಯವಿಲ್ಲ. ಕನಕಪುರಿ ಸಿಂಹಾಸನವನ್ನು ನಾನು ಕೊಡಲಾರೆ, ಹೆಣ್ಣೆ! ನೀನು ಮತ್ತು ನಿನ್ನ ಪ್ರಿಯಕರ ಯಮಪುರಿಗೆ ಹೋಗಲೇಬೇಕು. ಅಲ್ಲಿ ನಿಮ್ಮ ರಾಜ್ಯ ಕಟ್ಟಿಕೊಂದು ಆಳಬಹುದು..”

ಇಂಥ ಅನೇಕ ಸಂಗತಿಗಳನ್ನ ಒಬ್ಬನೇ ಇದ್ದಾಗ ಅಂದಾಡಿಕೊಳ್ಳುವುದಿತ್ತು.

ನಿಜ ಹೇಳಬೇಕೆಂದರೆ ತಂದೆ ಮಕ್ಕಳ ಸಂಬಂಧ ಕೂಡ ತನಗೆ ಉಪಯೋಗವಾಗಬೇಕೆಂದು ಬಯಸಿದವನಾತ. ಆತ ಮದುವೆಯಾದದ್ದೇ ಆಶ್ಚರ್ಯ. ಯಾಕಂತೀರೋ? ಆತ ಭಾರೀ ಸ್ವತಂತ್ರ ಕುಳ. ಯಾರೇ ಆಗಲಿ ಅವನಾಸೆಯ ವಿರುದ್ಧ ಹೋಗುವುದನ್ನು ತಮ್ಮ ಬಿನ್ನಾಭಿಪ್ರಾಯದ ಹೊಲಸು ನೆರಳು ತನ್ನ ಮೇಲೆ ಚೆಲ್ಲುವುದನ್ನ ಆತ ಸಹಿಸುತ್ತಿರಲಿಲ್ಲ. ಭಾವನೆಗಳಂತೂ ಅವನ ವ್ಯಕ್ತಿತ್ವದ ಯಾವ ಮೂಲೆಯಲ್ಲಿ ಇರಲಿಲ್ಲ. ಅಲ್ಲದೆ ಎಂಥಾ ಪ್ರಬಲ ಹೆಂಗಸು ಅವನ ಪಕ್ಕದಲ್ಲಿ ನಿಂತರೂ ದಯನೀಯವಾಗಿ ಯಾತನಾ ಸ್ಥಿತಿಯಲ್ಲಿರುವಂತೆ ಕಾಣುತ್ತಿದ್ದಳು. ಸ್ವಯಂ ಅವನಿಗೇ ಅದು ಅಸಹ್ಯಕರವಾಗಿತ್ತು! ಅದಕ್ಕೆ ಅವನು ಯಾವುದೇ ಸಂದರ್ಭದಲ್ಲಿ ಯಾವುದೇ ಹೆಂಗಸಿಗೆ ಸಲಹೆಯನ್ನಾಗಲಿ ಅಭಿಪ್ರಾಯವನ್ನಾಗಲಿ ಕೇಳಿದವನಲ್ಲ, ಈಗ ಮಗಳು ಎದುರು ನಿಂತಿದ್ದಾಳೆ! ಇದಕ್ಕೆಲ್ಲಾ ತಾನು ಯೋಚನೆ ಅಮಡಿದ ಉಪಾಯವೇ ಸೈ! ಎಂದು ಮತ್ತೆ ಮತ್ತೆ ಖಾತ್ರಿ ಮಾಡಿಕೊಂಡ.

ಗೌರಿ ಮಾತ್ರ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಸುಮ್ಮನಿದ್ದಳು. ತಾನು ತಂದೆಯ ಕಣ್ಣಿಗೆ ಬಿದ್ದರೆ ತಪ್ಪು, ತನ್ನ ವಿಷಯ ಯಾರಾದರೂ ಆಗನೆದುರಿಗೆ ಎತ್ತಿದರೆ ತಪ್ಪು, ತಾನು ಏನಾದರೂ ಅಂದರೆ ತಪ್ಪು, ಅನ್ನದಿದ್ದರೆ ತಪ್ಪು. ಕೊನೆಗೆ ತಂದೆ ತನ್ನನ್ನು ನೋಡದಿರುವ ತನ್ನೊಂದಿಗೆ ಮಾತಾಡದಿರುವ ಯಾವ ಸಂಗತಿಯಿಂದಲೂ ಆಕೆ ವಿಚಳಿತಲಾಗಲಿಲ್ಲ. ಆ ದಿನ ಅವಳ ಕತ್ತು ಹಿಸುಕಿ ಕೊಲ್ಲುವುದಕ್ಕೆ ನೋಡಿದ. ಆಮೇಲೆ ಅವಮಾನಿಸಿದ…. ಸುದೈವಕ್ಕೆ ಇನ್ನೊಬ್ಬರೆದುರು ಆಡಿಕೊಂಡಿರಲಿಲ್ಲ. ಇವಳೂ ಯಾವುದೋ ಒಂದು ನಿರ್ಧಾರ ತಗೊಂಡು ಧೈರ್ಯವಾಗಿದ್ದಳು. ಜೊತೆಗೆ ಕನಸುಗಳಿದ್ದವು. ಬೆಳ್ದಿಂಗಳು ಬಂದಾಗ ಮಾತ್ರ ಕನಸುಗಳಿಂದ ಘಾಸಿಯಾಗುತ್ತಿದ್ದಳು. ಅವಳು ತನ್ನ ಕನಸುಗಳನ್ನು ತಾಳೋಲೆಗಳಲ್ಲಿ ಬರೆದಿಟ್ಟಿದ್ದಳು. ಅವುಗಳಲ್ಲಿ ಕೆಲವನ್ನು ನಾವು ಕದ್ದು ನೋಡಿ ಅವಳ ಅನುಮತಿ ಇಲ್ಲದೆ ತೊರಿಸುತ್ತಿದ್ದೇವೆ. ನೋಡಿರಿ:

(ಇಲ್ಲಿ ಬರುವ ಜೋಗಿ ಜಂಗಮ ಅಂದರೆ ನಿನ್ನಡಿ ಎಂದುತಿಳಿಯಬೇಕು. )

ಕನಸಿನಲ್ಲಿ ಕಾಣಿಸಿಕೊಂಡ ಜೋಗಿ ಜಂಗಮ
ಏನೊಂದನೂ ನುಡಿದಾಡದೆ ಸೀದಾ ಪಾದವ ಬೆಳೆಸಿದ ದೇವರ ಕೋಣೆಗೆ
ಗಬಗಬ ನೈವೇದ್ಯ ತಿಂದು
ಬಾಯೊರೆಸಿಕೊಂಡ! ಭೇದಿಸಲಾಗದ ಕತ್ತಲೆಯಲ್ಲಿ
ಅದು ತನ್ನ ಉಡುಪು ಎಂಬಂತೆ
ಮಾಯವಾದ.

ಇನ್ನೊಂದು

ಗರ್ಭಗುಡಿಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದೆ.
ಆಗೋ ಮೂಲೆಯಲ್ಲಿ ನಿಂತಿದ್ದ
ಜಿಂಕೆಗಾಗಿ ಹೋಂಚಿದ ಹುಲಿಯಂತೆ!
ಒಂದು ಹೆಜ್ಜೆ ಹಿಂದಿಟ್ಟರೂ ಮುಂದಿಟ್ಟರೂ
ಅವ್ವಯ್ಯಾ ಹುಲಿ ಹಾರಿ ಮೈಮ್ಯಾಲೇ ಬರುತ್ತದೆ!
ಥರಥರ ನಡುಗಿ
ಕಣ್ಣಿಗೆ ಕತ್ತಲೆ ಅಡರಿ ಕೈಯ ನೈವೇದ್ಯ ಜಾರಿ
ಜೋಕೆ ತಪ್ಪಿ ಕೆಳಗೆ ಭಿಳುವಷ್ಟರಲ್ಲಿ ಹಾರಿ ಬಂದು ಜಂಗಮ ಕೈ ಹಿಡಿದು ನಿಲ್ಲಿಸಿದ.
ಶಿವನಿಚ್ಛೆ ಎನ್ನುತ್ತ ನೈವೇದ್ಯವ ತಗೊಂಡು
ಬಿಲ್ವಪತ್ತಿಯೆಲೆ ಕೈಗಿಟ್ಟು
ಗರ್ಭಗುಡಿಯಲ್ಲಿ ಮಾಯವಾದ!

ಮತ್ತೊಂದು ರಾತ್ರಿ,

ಅಗೋ ಆ ಎದುರಿಗಿನ ಮರದಾಚೆ
ಯಾರೋ ಕಂದಿಲು ಹಿಡಿದು ನಿಂತಿದ್ದ,
ಗಾಬರಿಯಾದೆ.
ಬಾಗಿಲು ಬಡಿಯದೆ ನೇರ
ಕೋಣೆಯೊಳಗೇ ಬಂದ
ಆಗಲೇ ಗೊತ್ತಾಯಿತು;
ಬಂದವನು ಚಂದ್ರಮ,
ಅಲ್ಲಲ್ಲ ಜಂಗಮ!
ಹಿಗ್ಗಿನ ಬಾಗಿಲು ತೆರೆದು ಒಳನುಗ್ಗಿದವು ನೋಡು ಚುಕ್ಕೆಗಳು
ಒಂದೊಂದೇ ಕೋಲು ಬೆಳಕಾಗಿ ಕೆಳಕ್ಕೇ
ನನ್ನ ಮನೆಯೊಳಕ್ಕೇ
ಇಳಿದು,
ಬೆರಳಿಗೆ ಬೆರಳು ಹೆಣೆದು ಕುಣಿದಾಡಿದವು
ಶಬ್ದಗಳ ಚೆಲ್ಲಾಡಿ!
ಶಬ್ದಗಳೆಲ್ಲಾ ನಿಶ್ಯಬ್ಧಗಳಾಗಿ ಮನೆಯೆಲ್ಲ ಬೆಳಕಿನ ಬಯಲಾದಾಗ
ನೀನೆಲ್ಲಿದ್ದೆ ಜಂಗಮ?

ಇಂತಪ್ಪ ಕನಸುಗಳ ಕಾನ ಮಾಡುತ್ತ ನಿನ್ನಡಿಯ ವಿರಹದಲ್ಲಿ ಗೌರಾ ಇರಲಾಗಿ ಒಂದು ಮುಂಜಾನೆ ದೇವಾಲಯಕ್ಕೆ ಹೋಗಿದ್ದಳು. ದೇವಾಲಯದ ಪೌಳಿಯ ಒಂದು ಮೂಲೆಯಲ್ಲಿ ಬಡಕಲು ದೇಹದ, ಉದ್ದ ಮೂಗಿನ, ಬಿಟ್ಟ ಕೂದಲಿನ, ಕೈಯಲ್ಲಿ ಚೌಡಿಕೆ ಹಿಡಿದ, ಮುಖದ ತುಂಬ ಹಚ್ಚೆಯ ಹಸಿರು ಚಿತ್ರಗಳಿದ್ದ ಮುದುಕಿ ಕೂತಿದ್ದನ್ನು ಕಂಡಳು. ಆಕೆಯ ಪಕ್ಕದಲ್ಲಿ ಒಬ್ಬ ನಡು ಹರೆಯದ, ನಾಚಿಕೆಯಿಂದ ಮುಖ ಮುಚ್ಚುವಂತೆ ಸೀರೆಯುಟ್ಟ ಹೆಂಗಸು ಕೈಯಲ್ಲಿ ಏಕತಾರಿ ಹಿಡಿದು ಕೂತಿದ್ದಳು. ಇನ್ನೊಮ್ಮೆ ನೋಡಿದಾಗ ಅದು ಹೆಂಗಸಲ್ಲ, ಹೆಣ್ಣಿನಂತಿದ್ದ ಗಂಡಸೆಂದು ಗೊತ್ತಾಯಿತು.

ಅನ್ನದಾತೆಯೊಬ್ಬಳು ಸಿಕ್ಕಳೆಂದು ಇಬ್ಬರೂ ಖುಶಿಯಾದರು “ಬಾ ತಾಯಿ ಬಾ” ಎಂದು ಸ್ವಾಗತಿಸಿ ಹೆಣ್ಣಿಗ ಯುವಕ ಗೌರಿ ಕೂರಲು ಹರಿವಿದ್ದ ಸಾಮಾನುಗಳನ್ನು ಸರಿಸಿ ಜಾಗ ಮಾಡಿಕೊಟ್ಟ. ಅಪರಿಚಿತರ ಮುಂದೆ ಕೂರುವುದಕ್ಕೆ ಸಂಕೋಚವಾದರೂ ಗೌರಿ ಹೋಗಿ ಕೂತು ‘ನೀವುಯಾರು? ಎಲ್ಲಿ ಹೊರಟ್ಟಿದ್ದೀರಿ?’ ಎಂದಳು. ಹೆಣ್ಣಿಗ ಮುಂದಾಗಿ ಬಾಗಿ,

“ನಾವು ಅಮ್ಮನ ಜೋಗೇರು, ನಾನು ಗಂಗಿ ಇವಳು ಗುಣದಮ್ಮ”

“ಅಮ್ಮ ಅಂದರೆ ಯಾವ ಅಮ್ಮ”

“ಶಿವಾಪುರದಮ್ಮ”

ತಕ್ಷಣ ಗೌರಿಯ ಮೈಮೇಲೆ ಪುಳಕವೆದ್ದು ಕಣ್ಣುಗಳಲ್ಲಿ ಬೆಳಕಾಡಿತು. ಉತ್ಸಾಹದಿಂದ,

“ಶಿವಪಾದ…. ನಿನ್ನಡಿ ಆ ಶಿವಾಪುರದಮ್ಮನ?”

ಇವರಿಬ್ಬರಿಗೂ ಹೋದ ಜೀವ ಬಂದಷ್ಟು ಸಂತೋಷವಾಯಿತು. ಉತ್ಸಾಹದಿಂದ,

“ಹೌದೆಂದವ್ವಾ ಹೌಂದು! ಹೌಂದು!”.

-ಎಂದು ಏಕಕಾಲಕ್ಕೆ ದನಿಗೂಡಿಸಿದರು. ಒಪ್ಪೊತ್ತಿನ ಊಟದ ಖಾತ್ರಿಯಾಗಿ ಗೌರಿ ಕೇಳದೆಯೇ ತಮ್ಮ ವಿಷಯ ಹೇಳಿಕೊಂಡು ಕನಕಪುರಿಯ ಬಗೆಗಿನ ತಮ್ಮ ಅಸಮಾಧಾನವನ್ನೂ ತೋಡಿಕೊಂಡೇ ಬಿಟ್ಟರು. ಗುಣದಮ್ಮ ಹೇಳಿದಳು:

“ಇದೆಂಥಾ ಊರು ತಾಯಿ? ನಮ್ಮಂಥಾ ಯಾತ್ರಿಕರು ಇರೋದಕ್ಕೆ ಒಂದು ಧರ್ಮಶಾಲೆಯಿಲ್ಲ, ಒಂದು ಛತ್ರವಿಲ್ಲ, ದಾನವಿಲ್ಲ, ಧರ್ಮವಿಲ್ಲ, ರಾಜಧಾನಿಯಂತೆ! ತಗೊಂಡೇನು ಮಾದೋದು? ಅದೇ ಶಿವಾಪುರ ನೋಡು, ಯಾರ ಮನೆಗ್ಹೋದರೂ ಒಂದು ರೋಟ್ಟಿ ಕೊಡ್ತಾರ. ಇಲ್ಲೇನಿದೆ ಮಣ್ಣೂ? ಗುಡೀ ಹೊಕ್ಕರ ಪೂಜಾರಿ ಹೊರಗ ಹೋಗ್ರಿ ಅಂತಾನ! ಊರು ತುಂಬ ಬರೀ ಅಂಗಡಿ! ಅನ್ನಾ ಮಾರೋ ಅಂಗಡಿ! ನೀರು ಮಾರೋ ಅಂಗಡಿ! ಇಲ್ಲಿ ಮಂದಿ ಹೆಂಗ ಬದಕ್ತಾರ!”

ಅಷ್ಟರಲ್ಲಿ ಗೌರಿ ಮುಂದೆ ಬಂದು ಕೇಳಿದಳು:

“ನೀವು ಶಿವಾಪುರ ನೋಡಿರಿ?”

“ನೋಡದೇನ ತಂಗಿ? ವರ್ಷಾ ಹೋಗಿ ಶಿವಾಪುರ ಬೆಟ್ಟ ಹತ್ತತೀವಿ. ನಾಕೈದ ದಿನಾ ವಸ್ತಿ ಇದ್ದ ಬರ್ತಿವಿ. ಪುಣ್ಯ ಮಾಡಿರಬೇಕವಾ ಅಂತಾ ಜಾಗ ನೋಡಾಕ!”

ಮುದುಕಿ ಹೇಳಿದಳು:

“ಖರೇ ಹೇಳತೇನ ತಂಗೀ, ಶಿವಾಪುರ ಬೆಟ್ಟ ಅಂದರ ಏನಂದುಕೊಂಡೀಯೇ ನನ್ನ ಹಡೆದವ್ವಾ? ಅದು ಕೈಲಾಸ! ಎಷ್ಟೊಂದು ತರುಮರ ಅದಾವ! ಎಷ್ಟೊಂದು ಗಿಡಗಂಟಿ ಬಳ್ಳೀ! ಒಂದೊಂದು ಬೆಳೆಯೋದಕ್ಕೂ ಬೆಳೆದು ಬದುಕೋದಕ್ಕೂ ಪುಷ್ಕಳ ಜಾಗಾ ಐತಿ, ಹವಾ ಐತಿ ನೀರ ಐತಿ! ಇಷ್ಟಾದರೂ ಗಿಡಾ ಆಗಲಿ, ಬಳ್ಳಿ ಆಗಲಿ, ಒಂದರ್ಹಾಂಗ ಒಂದಿಲ್ಲ. ಒಂದೆಸಳು ಸೈತ ಒಂದರ್ಹಾಂಗ ಒಂದಿಲ್ಲ. ಮತ್ತ ನೋಡಿದರ ಎಲ್ಲಾ ಒಂದs ಥರಾ ಕಾಣಿಸ್ತಾವ! ಕೂಡಿ ಬದುಕೋದನ್ನ ನೋಡಬೇಕಂದರ ಶಿವಾಪುರ ನೋಡಬೇಕ ಎವ್ವಾ!”

ಇಬ್ಬರ ಮಧ್ಯೆ ಶಿವಾಪುರದ ವಿಷಯ ಹೇಳೋದಕ್ಕೆ ಸ್ಪರ್ಧೆ ನಡೆದ ಹಾಗಿತ್ತು. ತಕ್ಷಣ ಗಂಗ ಎತ್ತಿಕೊಂಡ,

“ನೀನು ಶಿವಪಾದನ್ನ ನೋಡೀ ಏನ ತಂಗಿ?”

“ಇಲ್ಲ” ಎಂದಳು ಗೌರಿ.

“ಅಹಾಹಾ ಅವ ಸಾಕ್ಷಾತ ಶಿವನ ಶಿವಪಾದ ಎವ್ವಾ!”

“ಅವನ ವಯಸ್ಸೆಷ್ಟು?”

ಮುದುಕಿ ಹೇಳುವುದಕ್ಕೆ ಮುಂದಾದಳು.

“ನಮ್ಮಂಥಾ ಪಾಮರ ಮಂದಿಗೆ ಶಿವಪಾದನ ವಯಸ್ಸು ಹೇಳಕಾದೀತೇನ ಎವ್ವಾ! ಹತ್ತು ಸಲ ನೋಡಿದರ ಹತ್ತ ನಮೂನಿ ಕಾಣಿಸ್ತಾನು! ಹುಡುಗ ಅಂದರ ಮುದುಕನ್ಹಾಂಗ ಕಾಣತಾನು! ಮುದುಕ ಅಂದರ ಕೂಸಿನ್ಹಾಂಗ ಕಾಣತಾನು! ಎವ್ವಾ ಎವ್ವಾs ಅವ ಸರ್ವದೇವತಾಮಯ!”

ಈಗ ಗಂಗ ಮುಂದಾದ –

“ಅವನ ಕಣ್ಣ ನೋಡಬೇಕs ಎವ್ವಾ. ಲಿಂಗವ ಉಜ್ಜಿ ಉಜ್ಜಿ ತೊಳೆದ ಇಟ್ಟಾಂಗ ಅವನ ಕಣ್ಣು! ಗುಡ್ಯಾಗೀನ ಗಂಟೀ ಬಾರಿಸಿದಾಂಗ ಅವನ ದನಿ. ಮರಣವ ಗೆದ್ದವನು. ಮೂರು ಕಾಲ ಬಲ್ಲವನು, ಬೆಟ್ಟದ ಗವೀ ಜೋಡೀ ಮಾತಾಡುವಾತ, ಗುಡುಗು ಮಿಂಚಿನ ಮಾತು ಅರಿದಾತ!…”

ಎಂದು ಹೇಳುತ್ತ ತನ್ನ ವರ್ಣನೆಯಲ್ಲಿ ತಾನೇ ತನ್ಮಯನಾಗಿ “ಎವ್ವಾ ಎವ್ವಾ ನನ್ನ ಶಿವಪಾದನೇ!” ಎನ್ನುತ್ತ ಕೆನ್ನೆ ಬಡಿದುಕೊಂಡು ನೆಲಮುಟ್ಟಿ ಶಿವಪಾದನಿಗೆ ನಮಸ್ಕಾರವನ್ನಾಚರಿಸಿದ.

ಉತ್ಸಾಹ ತೀರದ ಅವರ ಮಾತಿನಿಂದ ಗೌರಿ ಭಾರೀ ಪ್ರಭಾವಿತಳಾದಳು. ಅವರು ಹೇಳುವಷ್ಟನ್ನೆಲ್ಲಾ ಕೇಳಿ ಆದ ಮೇಲೆ ಈಗ ಖಾಲಿಯಿದ್ದ ವೈದ್ಯಶಾಲೆಯಲ್ಲಿ ಅವರಿಗೆ ಉಳಿಯುವ ಮತ್ತು ಊಟದ ವ್ಯವಸ್ಥೆ ಮಾಡಿದಳು.

ಅದಾಗಿ ಮಾರನೆಯ ಸಂಜೆ ಗೌರಿ ಸೇವಕರ ಸಹಾಯದಿಂದ ಆಹಾರವ ಕದ್ದು ಮನೆಯಿಂದ ಮಾಯವಾದದ್ದನ್ನು ರವಿಕೀರ್ತಿ ಕಂಡ. ದೂರದಿಂದಲೇ ಬೆಂಬತ್ತಿ ಹೋಗಿ ಆಕೆ ಎಲ್ಲಿಗೆ ಹೋಗುತ್ತಿರುವಳೆಂಬುದನ್ನ ಪತ್ತೆ ಹಚ್ಚಿದ. ಆಮೇಲೆ ಹೊತ್ತು ಕಳೆದರೂ ಆಕೆ ಬಾರದಿರುವುದನ್ನು ಕಂದು ತಾನೂ ವೈದ್ಯಶಾಲೆಗೆ ಹೋದ. ನೋಡಿದರೆ, – ಮುದುಕಿಯೊಬ್ಬಳು ಚೌಡಿಕೆ ಬಾರಿಸುತ್ತ ಶಿವಾಪುರದಮ್ಮನ ಹಾಡು ಹೇಳುತ್ತಿದ್ದಾಳೆ! ಇನ್ನೊಂದು ಏಕತಾರಿಯ ಹೆಂಗಸು ಕುಣಿಯುತ್ತಿದೆ!

ರವಿಯನ್ನು ಕಂದಕೂಡಲೇ ಶಿಶುಸದೃಶ ಮಂದಹಾಸದಿಂದ ಹಾಡುತ್ತಿದ್ದ ಮುದುಕಿ ತಕ್ಷಣ ಹಾಡು ನಿಲ್ಲಿಸಿದಳು. ಹೆಣ್ಣಿಗ ಕುಣಿತ ನಿಲ್ಲಿಸಿ ರವಿಯನ್ನೇ ನೋಡುತ್ತಿದ್ದ. ಇವರೆದುರಿಗೆ ಕೂತಿದ್ದ ಗೌರಿ ಅಣ್ಣನನ್ನು ನೋಡಿದ್ದೇ ತಪ್ಪು ಮಾಡಿದಂತೆ ಮುಖ ಸಪ್ಪೆ ಮಾಡಿಕೊಂಡು ನಿಂತಳು. ನೋಡುವುದಕ್ಕೆ ಭಿಕ್ಷುಕರಂತಿದ್ದ ತನ್ನ ಅತಿಥಿಗಳನ್ನ ಬೇರೆಯವರಿಗೆ ತೋರಿಸಲು ಅವಳು ಇಷ್ಟಪಡುತ್ತಿರಲಿಲ್ಲ. ಅವಳಿಗೆ ಅವರ ಬಗ್ಗೆ ಅಪಾರ ಗೌರವ ಭಾವನೆ ಇದ್ದಂತಿತ್ತು. ಯಾರಾದರೂ ಅವರನ್ನು ನೋಡಿ ನಕ್ಕರೂ ಅವಳ ಮನಸ್ಸು ನೋಯುತ್ತಿತ್ತು. ರವಿ ತನಗೆ ಗೊತ್ತಿಲ್ಲದೆ ಅಲ್ಲಿಗೆ ಬಂದದ್ದು ಅವಳಿಗಿಷ್ಟವಾಗಲಿಲ್ಲ. ರವಿ ಚಕಿತನಂತೆ ಕಂಡು ಬಂದುದರಿಂದ ಅವರನ್ನು ನೋಡಿ ನಗಾಡಬಹುದೆನಿಸಿ ನೇತ್ರಗಳಿಂದಲೇ ಅತಿಥಿಗಳಿಗೆ ಅವಮಾನ ಮಾಡಬೇಡ ಎಂದು ಕೇಳುವಂಥ ಭಾವ ಪ್ರದರ್ಶನ ಮಾಡಿದಳು.

ರವಿ ಸ್ವಲ್ಪ ಹೊತ್ತು ಸುಮ್ಮನಿದ್ದು ಅವರನ್ನೇ ನೋಡತೊಡಗಿದ. ಅತಿಥಿಗಳಿಬ್ಬರೂ ಕೆನ್ನೆ ಹಣೆಗಳಿಗೆ, ಮುಂಗೈ ಮೊಳಕೈಗಳಿಗೆ ಭಸ್ಮ ಬಳಿದುಕೊಂಡಿದ್ದರು. ಆ ಹೆಣ್ಣಿಗ ಸೀರೆಯುಟ್ಟಿದ್ದರೂ ಆತ ಹೆಣ್ಣಲ್ಲವೆಂದು ಗಡ್ಡ ಬೋಳಿಸಿದ ಒರಟಾದ ಗದ್ದದಿಂದ ತಿಳಿಯುತ್ತಿತ್ತು. ಪರೀಕ್ಷಕರ ನೇತಗಳಿಂದ ನೋಡುತ್ತಿದ್ದುದರಿಂದ ಹೆಣ್ಣಿಗ ನಾಚಿಕೊಂಡಂತೆ ಅಧೋನೇತ್ರನಾಗಿ ಆಗಾಗ ದಪ್ಪ ಹುಬ್ಬುಗಳ ಕೃತಿಮ ಸ್ತ್ರೀನೇತ್ರಗಳಿಂದ ನೋಡುತ್ತಿದ್ದುದರಿಂದ ಹೆಣ್ಣಿಗ ನಾಚಿಕೊಂಡಂತೆ ಅಧೋನೇತ್ರನಾಗಿ ಆಗಾಗ ದಪ್ಪ ಹುಬ್ಬುಗಳ ಕೃತ್ರಿಮ ಸ್ತ್ರೀನೇತ್ರಗಳಿಂದ ರವಿಯನ್ನು ನೋಡುತ್ತಿದ್ದ. ಮುದುಕಿ ಮಾತ್ರ ಕಿಡಕಿಯಾಚೆ ದೃಷ್ಟಿ ಹಾಯಿಸುತ್ತ ರವಿಯ ನೇತ್ರಗಳನ್ನು ನಿವಾರಿಸಿದಳು.

“ಇವರ್ಯಾರು? ಎಲ್ಲಿಯವರು?”

– ಎಂದು ರವಿ ಗೌರಿಯನ್ನು ಕೇಳಿದ.

ಇವರು ಶಿವಾಪುರದ ಆಮ್ಮನ ಜೋಗ್ತಿಯರು, ವರ್ಷಕ್ಕೊಮ್ಮೆ ಅಮ್ಮನ ಸನ್ನಿಧಿಗೆ ನಡೆದುಕೊಂಡೇ ಹೋಗಿ ಬರುತ್ತಾರೆ ಅಮ್ಮನ ಕಥೆಯನ್ನ ಸೊಗಸಾಗಿ ಹಾಡುತ್ತಾರೆ.”

ಅಪ್ಪನಿಗೆ ಗೊತ್ತಿಲ್ಲದೆ ನಡೆದ ಕಾರ್ಯಕ್ರಮವಿದೆಂದು ರವಿಗೆ ಸ್ಪಷ್ಟವಾಯಿತು. ಗೌರಿಯಲ್ಲಿ ಮೂಡಿದ ವಯಸ್ಸಿಗೆ ಮೀರಿದ ಈ ಆಸಕ್ತಿಯಿಂದ ರವಿಗೆ ಆಶ್ಚರ್ಯವಾಯಿತು. ಹಾಗೆಯೇ ತಂದೆಗೆ ಗೊತ್ತಾಗದಂತೆ ಕದ್ದು ಅಮ್ಮನ ಕಥೆ ಕೇಳಿಸಿಕೊಳ್ಳುತ್ತಿದ್ದ ಅವಳ ಧೈರ್ಯವನ್ನು ಮೆಚ್ಚಿಕೊಂಡ. ರವಿ ಹಾಗೆ ಮೂಕವಿಸ್ಮಿತನಾದುದನ್ನು ನೋಡಿ ಮುದುಕಿ ಚೌಡಿಕೆಯನ್ನು ಮಿಡಿದು “ಹಾಡೋಣವ?” ಎಂದು ಕೇಳಿ ಉತ್ತರಕ್ಕೆ ಕಾಯದೆ,

“ಅಮ್ಮನ ಕತಿ ಕೇಳಿದರ ನಿನ್ನ ಏಳೇಳು ಜನ್ಮ ಪಾವನ ಆಗತಾವ; ಕುಂತು ಕೇಳು ಶಿವಾ.”

ಎಂದು ಇನ್ನೊಮ್ಮೆ ಚೌಡಿಕೆ ಮಿಡಿದಳು. ರವಿಯ ಚಿತ್ತ ಬೇರೆ ಯೋಚನೆಗಳಲ್ಲಿ ತೊಡಗಿದ್ದರಿಂದ ಬೇಡವೆಂಬಂತೆ ಕೈ ಮಾಡಿದ. ತಕ್ಷಣ ಗೌರಿ ಮುಂದೆ ಬಂದು ಈಗ ಬೇವೆಂಬಂತೆ ಮುದುಕಿಗೆ ಕೈ ಅಲುಗಿ ತೋರಿಸಿದಳು. ಮುದುಕಿ ಬಿಡಲಿಲ್ಲ,-

‘ಯಾಕ ಬ್ಯಾಡಂತಿ ಮಗಳ? ಯಜಮಾನಪ್ಪ ದೊಡ್ಡಮನಿಶ್ಯಾ ಅದಾನ? ಅಮ್ಮನಿಗೆ ಬೇಕಾದವನು: ಕೆಳಲಿ.’

– ಅಂದಳು. ಅವಸರದಲ್ಲಿದ್ದಂತೆ ರವಿ ಎದ್ದು,

“ಗಳಿಗೆ ಹೊತ್ತು ತಂಗಿಯ ಜೊತೆ ಮಾತಾಡುವುದಿದೆ. ಕರೆದೊಯ್ಯುತ್ತೇನೆ”

-ಎಂದು ಹೇಳಿ ಗೌರಿಯ ಕೈ ಹಿಡಿದುಕೊಂಡು ವೈದ್ಯಶಾಲೆಯ ಮಹಡಿಗೆ ಕರೆದೊಯ್ದು ‘ಇವನು ಗೌರಿಯ ಅಣ್ಣನಿರಬೇಕು; ಮುಖಚರ್ಯೆ ಹಾಗೇ ಇದೆ’ ಎಂದು ಜೋಗ್ತಿಯರಿಬ್ಬರೂ ಮಾತಾಡಿಕೊಂಡರು.

ಮಹಡಿಯ ಮೇಲೆ ಬಂದು ಕಿಡಕಿ ಬಾಗಿಲು ತೆಗೆದು, ಪೀಠದ ಮ್ಯಾಲಿನ ಧೂಳೊರೆಸಿ ತಂಗಿಯನ್ನಲ್ಲಿ ಕೂರಿಸಿ, ಎದುರಿನ ಪೀಠದಲ್ಲಿ ತಾನು ಕೂತು,

“ಏನು ಮಾಡ್ತಾ ಇದ್ದೀ ಮುದ್ದೂ?”

– ಅಂದ ತಂದೆಯ ಬಗೆಗಿನ ಭಯ, ತಂಗಿಯ ಬಗೆಗಿನ ಚಿಂತೆ ಅವನ ಕಣ್ಣು ಮುಖಗಳಲ್ಲಿ ಸ್ಪಷ್ಟಾವಾಗಿ ಮೂಡಿತ್ತು. ಚಿಂತೆ ಭಯಗಳ್ಯಾಕೆಂದರೆ ಶಿಖರಸೂರ್ಯ ಗೌರಿಯ ಬಗ್ಗೆ ತೋರಿಸಿದ್ದಕ್ಕಿಂತ ಹೆಚ್ಚು ಸಿಟ್ಟಾಗಿದ್ದ. ಅವಳು ಎಣಿಸಿದ್ದಕ್ಕಿಂತ ಹೆಚ್ಚು ಕ್ರೂರಿಯಾಗಿದ್ದ. ಇದು ತನಗೆ ಮಾತ್ರ ಗೊತ್ತಿತ್ತು; ಗೌರಿಗೆ ತಿಳಿದಿರಲಿಲ್ಲ.

“ನೀನು ಈ ಜೋಗೇರ ಹಾಡು ಕೇಳೋದು ಅಪ್ಪನಿಗೆ ಗೊತ್ತಾದರೆ ಏನಾದೀತು ಅಂತ ಯೋಚನೆ ಮಾಡಿದ್ದೀಯಾ?”

– ಅಂದ. ಗೌರಿ ಶಿವಾಪುರದ ವಿಷಯದಲ್ಲಿ ಯಾವುದೇ ಭಾವುಕ ಹೊಂದಾಣಿಕೆಗೆ ಸಿದ್ಧಳಿರಲಿಲ್ಲ.

“ಅಣ್ಣಾ, ನಿನ್ನೊಂದಿಗೆ ಮಾತಾಡೋಣ ಅಂತಲೇ ಇದ್ದೆ. ಈಗ ನೀನು ಒಬ್ಬನೇ ಸಿಕ್ಕಿದ್ದು ಒಳ್ಳೆಯದೇ ಆಯಿತು. ಈ ವಿಷಯದಲ್ಲಿ ಸಹಾಯ ಮಾಡುವುದಕ್ಕಾದರೆ ಮಾಡು. ಆಗದಿದ್ದರೆ ಬೇಡ. ನಾನಂತೂ ಶಿವಾಪುರಕ್ಕೆ ಹೋಗಲೇಬೇಕು. ಜೋಗೇರ ಜೊತೆಗೆ ನಾಳೆಯೇ ಹೋಗುತ್ತಿದ್ದೇನೆ. ನಾನು ಹೋದ ಮೇಲೆ ಅಪ್ಪನಿಗೆ ಹೇಳಿಕೊ. ಅಣ್ಣನಾಗಿ ನೀನು ಇಷ್ಟು ಸಹಾಯ ಮಾಡಬೇಕು. ಇಷ್ಟಾಗಿಯೂ ನನ್ನನ್ನ ಯಾರಾದರೂ ತಡೆದಿರೋ – ನನ್ನ ಜೀವ ನನ್ನ ಕೈಯಲ್ಲಿದೆ.”

ಮದ್ದಿನ ಶಕ್ತಿಯಿದ್ದ ಅವಳ ಮಾತು ಕೇಳಿ ರವಿಗೆ ಆಘಾತವಾಯಿತು. ಮಾತುಗಳಿಗಾಗಿ ತಡಕಾಡಿದ. ಗೌರಿ ತಂದೆಗಿಂತ ಹಟಮಾರಿ ಮಾತ್ರವಲ್ಲ, ತನ್ನ ಬಗ್ಗೆ ತಾನು ತಂದೆಗಿಂತ ಕ್ರೂರಿಯಾಗಬಲ್ಲಳೆಂದು ರವಿಗೆ ಗೊತ್ತಿತ್ತು. ನಿರುತ್ಸಾಹದ ದನಿಯಲ್ಲಿ “ಹೀಗೆಂದರೆ ಹ್ಯಾಗೆ ಮುದ್ದು?” – ಅಂದ. ಗೌರಿ ತನಗವನ ಮಾತು ಕೇಳಲೇ ಇಲ್ಲವೆಂಬಂತೆ ಎದ್ದು, ಹೊರಟೇಬಿಟ್ಟಳು. ತಕ್ಷಣ ರವಿ ಹೋಗಿ “ಮುದ್ದು ನನ್ನ ಮಾತು ಕೇಳು” ಎಂದು ಅಡ್ಡಗಟ್ಟಿ, ಎಳೆತನದ ನೆನಪಾಗುವಂತೆ ಗದ್ದ ಹಿಡಿದು ರಮಿಸುತ್ತ ಪುನಃ ಪೀಠಕ್ಕೆ ಕರೆತಂದು ಕೂರಿಸಿದ. ರವಿ ಅವಳ ಮುಂದೆ ಕೆಳಗೆ ಕೂತು, “ಮುದ್ದೂ ಹೇಳಿದ ಹಿತ ನುಡಿ ಕೇಳು….” ಅವನ ಮಾತಿನ್ನೂ ಬಾಯಲ್ಲೇ ಇತ್ತು. ಗೌರಿಯ ಕೊರಳ ಸೆರೆ ತುಂಬಿ ಬಂತು. ಮುತ್ತಿನಂಥ ಕಣ್ಣೀರು ಸುರಿಸುತ್ತ ಹೇಳಿದಳು:

“ಅಣ್ಣಾ ನನಗಿರೋನು ನೀನೊಬ್ಬನೇ ಅಣ್ಣ. ನಿನಗೊಬ್ಬನಿಗೇ ಹೇಳಿ ಹೋಗೋಣವೆಂದುಕೊಂಡಿದ್ದೆ. ನಿನಗೆ ಹೇಳಿದ್ದೇನೆ. ನಾಳೆ ನನ್ನ ಗಂಡನ ಮನೆ ಶಿವಾಪುರಕ್ಕೆ ಹೋಗುತ್ತಿದ್ದೇನೆ. ಅಣ್ಣ ತಂದೆ ತಾಯಿ ಅಜ್ಜಿ – ಎಲ್ಲಾ ನೀನೇ ಆಗಿ ಆಶೀರ್ವದಿಸು.

“ಆದರೆ ಮುದ್ದೂ ಇನ್ನೂ ಮಾದುವೆಯಾಗಬೇಕಲ್ಲವೇ?”

“ಅದನ್ನ ನಾನೇ ನೋಡಿಕೊಳ್ಳುತ್ತೇನೆ. ಬರಬೇಕೆಂದು ಶಿವಪಾದನ ಆಜ್ಞೆಯಾಗಿದೆ, ಹೊರಟಿದ್ದೇನೆ.”

“ಶಿವಪಾದ? ಅವನ್ಯಾವಾಗ ನಿನ್ನನ್ನ ಕಂಡ?”

“ನಿನ್ನೆ ಕನಸಿನಲ್ಲಿ”

“ಇಂಥಾ ವಿಷಯಗಳಲ್ಲಿ ಕನಸಗಳನ್ನ ನಂಬಲಿಕ್ಕಾಗುತ್ತದ ಮುದ್ದು?”

“ನಾನು ನಂಬುತ್ತೇನೆ. ಕಳಿಸದಿದ್ದರೆ ಸಾಯುತ್ತೇನೆ. ಇದೇ ಕೊನೇ ಮಾತು”

ಎಂದು ಹೇಳಿ ಮುಂದೆ ಮಾತಿಗೆ ಅವಕಾಶ ಕೊಡದೆ ದೃಢನಿರ್ದಾರದಿಂದ ಎದ್ದು “ನನ್ನನ್ನು ಆಶೀರ್ವದಿಸು” ಎಂದು ಅಣ್ಣನ ಕಾಲುಮುಟ್ಟಿ ನಮಸ್ಕರಿಸಿದಳು. ಈಗ ಸಂವಾದದಿಂದ ಪ್ರಯೋಜನವಿಲ್ಲವೆಂದು ಸ್ಪಷ್ಟವಾಯಿತು.

ತಕ್ಷಣ ರವಿ ಭಾವುಕನಾಗಿ ಅವಳನ್ನೆಬ್ಬಿಸಿ ತಬ್ಬಿಕೊಂಡ. ಕಷ್ಟಪಟ್ಟು ಉಕ್ಕಿಬಂದ ಬಿಕ್ಕುಗಳನ್ನು ಹಲ್ಲಿಕಚ್ಚಿ ತಡೆದುಕೊಂಡ. ಆದರೆ ಕಣ್ಣೀರಿನ ಬಿಸಿಹನಿ ಬೆನ್ನಮೇಲೆ ಬಿದ್ದು ಗೌರಿ ಮುಖ ನೋಡಿದಳು. ಈಗ ಮಾತ್ರ ರವಿಯ ದುಃಖದ ಕಟ್ಟೆಯೊಡೆದು ಬಿಕ್ಕಿದ. ಗೌರಿ ಅವನ ಕಣ್ಣೀರು ಒರೆಸುತ್ತ ಕೇಳಿದಳು:

“ನನ್ನದೊಂದು ಮಾತು ನಡೆಸಿಕೊಡ್ತೀಯಾ ಆಣ್ಣಾ?”

“ಖಂಡಿತ ನಡೆಸಿಕೊಡ್ತೀನಿ; ಅದೇನು ಹೇಳು ಮುದ್ದು”

ಮಾತು ಕೋಡು.”

“ಇಗೋ ಕೊಟ್ಟೆ.”

ಎಂದು ಕೈಮೇಲೆ ಕೈ ಇತ್ತು ಭಾಷೆ ಕೊಟ್ಟಾದ ಮೇಲೆ ಇವತ್ತು ಅಪರೂಪಕ್ಕೆ ಧರಿಸಿದ್ದ ಚಿನ್ನದ ಸರವನ್ನ ಅವನ ಕೈಗಿಟ್ಟು, “ಇದನ್ನು ವಾಸಂತಿಗೆ ಕೋಡ್ತಿಯಾ?” ಎಂದಳು

“ನನ್ನ ಪುಟ್ಟ ತಂಗೀ, ಮುದ್ದು ತಂಗೀ, ಏನವಸರ ನಾನಿನ್ನೂ ಇಲ್ಲಿರ್ತಿನಿ…. ಹೋಗುವಾಗ ಕೊಡು.”

“ಇಲ್ಲ ಅವಳ ಬಗ್ಗೆ ನನಗೆ ಕೆಟ್ಟ ಕನಸಾಗಿದೆ. ನೀನು ಕೂಡಲೇ ಕಂಚಿಗೆ ಹೋಗಿ ಅವಳನ್ನು ನೋಡಲೇಬೇಕು, ಈ ಸರವನ್ನು ಕೊಡಲೇಬೇಕು. ನಾಳೆಯೇ ನೀನು ಹೊರಟರೆ ನನಗೆ ಆನಂದವೇ?”

“ಆಗಲೀ ಮುದ್ದು. ಇದನ್ನು ಕಂಡು ಅವಳೆಷ್ಟು ಸಂತೋಷ ಪಡ್ತಾಳೆ ಗೊತ್ತಾ?”

“ಆಯ್ತು, ಅವಳು ಹ್ಯಾಗೆ ಸಂತೋಷಪಟ್ಟಳೆಂದು ಇದನ್ನು ಕೊಟ್ಟು ಬಂದಾದ ಮೇಲೆ ಹೇಳು.”

“ಖಂಡಿತ”

“ಅಣ್ಣಾ ನನಗಿರೋನು ನೀನೊಬ್ಬನೇ ಅಣ್ಣ, ನೀನು ವಾಸಂತಿಯ ಬಗ್ಗೆ ಯಾವಾಗಲೂ ಪ್ರೀತಿಯಿಂದಿರಬೇಕು. ಮಗುವನ್ನ ಕೂಡ ನೀವಿಬ್ಬರೂ ಚೆನ್ನಾಗಿ ನೋಡಿಕೋಬೇಕು.”

“ಆಯಿತಮ್ಮ”

“ಮದುವೆಗೆ ಮುನ್ನ ಹುಟ್ಟಿದ ಕೂಸು ಅಂತ ದೂಷಿಸಬಾರದು”

“ಇಲ್ಲ ಮುದ್ದು, ನಾನು ಎಂದಿಗೂ ವಾಸಂತಿಯನ್ನು ಬಯ್ಯುವುದಿಲ್ಲ ಅವಳಿಗೆ ನೋವಾಗುವಂತೆ ನಡೆದುಕೊಳ್ಳುವುದಿಲ್ಲ. ನಮ್ಮ ಮಗುವನ್ನ ನಾವೀಬ್ಬರೂ ಚೆನ್ನಾಗಿ ನೋಡಿಕೊಳ್ತೇವೆ. ಆ ಮಗು ಹೆಣ್ಣಾಗಿದ್ದರೆ ಮುದ್ದು ಗೌರಿ ಅಂತ ಕರೀತೇನೆ. ನಿನಗೆ ಸಮಾಧಾನವಾಯ್ತೆ ಮುದ್ದು?”

– ಎಂದು ಗೌರಿಯ ಕೈತಗೊಂಡು ತನ್ನೆರಡೂ ಕಣ್ಣುಗಳಿಗೆ ಭಾವಪೂರ್ಣವಾಗಿ ಒತ್ತಿಕೊಂಡ. ಇಬ್ಬರ ಕಣ್ಣಲ್ಲಿಯೂ ಮತ್ತೆ ನೀರಾಡಿತು. ತಕ್ಷಣ ನೆನಪಾಗಿ ಕೇಳಿದ:

“ನನ್ನದೂ ಒಂದು ಮಾತಿದೆ. ನಡೆಸಿಕೊಡ್ತೀಯಾ ಮುದ್ದು?”

“ಖಂಡಿತ. ಅದೇನು ಹೇಳು”

“ನಿನ್ನೊಂದಿಗೆ ಬೊಂತೆಯನನ್ನು ಕಳಿಸಿಕೊಡ್ತೇನೆ. ನನ್ನ ಸಮಾಧಾನಕ್ಕಾಗಿ ಬೇಡ ಅನ್ನಬಾರದು. ಅವ ಬೇಡವೆಂದರೆ ನಾನೇ ಬರ್ತೇನೆ.”

ಕನಕಪುರಿಯ ಯಾವುದೂ ತನ್ನೊಂದಿಗೆ ಇರಬಾರದೆಂದು ಗೌರಿ ನಿರ್ಧರಿಸಿದ್ದಳು. ಆದರೆ ಅಣ್ಣನ ಮಾತು ತೆಗೆದು ಹಾಕಲಾರದೆ,

“ಆಯ್ತು, ಬೊಂತೆಯನೇ ಇರಲಿ. ನೀನು ಬಂದರೆ ಅಪ್ಪ ಇಬ್ಬರನ್ನೂ ಬಿಡುವುದಿಲ್ಲ ಆದರೆ ವಿಷಯ ಮಾತ್ರ ಗುಟ್ಟಾಗಿರಬೇಕು.”

ಎಂದಳು. “ಆಯ್ತು” ಎಂದು ಅವನೊಪ್ಪಿದ ಮೇಲೆ ಗೌರಿ ಅಣ್ಣನನ್ನು ತಬ್ಬಿಕೊಂಡು ಅಲ್ಲಬೆಲ್ಲ ಕೊಟ್ಟು ಹೊರಟಳು. ರವಿ ಬೊಂತೆಯನ ಕೇರಿಗೆ ಹೊರಟ.

* * *

ತಕ್ಷಣ ರವಿ ಅವಸರದಲ್ಲಿ ಕುದುರೆಯೇರಿ ಬೊಂತೆಯನ ಗುಡಿಸಲಿಗೆ ಓಡಿಸಿದ. ಅದು ಇಕ್ಕಟ್ಟಾದ ಕೊಳಗೇರಿ, ಜನಗಳಾಗಲೇ ಉಂಡು ಮಲಗಿದ್ದರು. ವಯಸ್ಸಾದ ಕೆಲವರು ಮಾತ್ರ ಗುಡಿಸಲ ಹೊರಗಿನ ಸಣ್ಣ ಕಟ್ಟೆಗಳ ಮೇಲೆ ಕೂತುಕೊಂಡು ಹರಟೆ ಹೊಡೆಯುತ್ತಿದ್ದರು. ಕುದುರೆ ಕಂಡು ರಾಜಕಾರ್ಯವೆಂದು ಭಾವಿಸಿ ಸೈನ್ಯದಲ್ಲಿದ್ದವರು ಚುರುಕಾದರು. ಬಂದವನು ಯುವರಾಜನೆಂದು ಒಬ್ಬ ವಯಸ್ಸಾದ ಸೈನಿಕನಿಗೆ ಗುರುತಾಗಿ ಭಯ ಉತ್ಸಾಹಗಳಿಂದ “ಯುವರಾಜ!” ಎಂದು ಜೋರಾಗಿ ಕಿರುಚಿ ಅಂಡೆತ್ತಿ ನಮಸ್ಕಾರವನ್ನಾಚರಿಸುವಷ್ಟರಲ್ಲಿ ರವಿ ಕೆಳಗಿಳಿದು “ಬೊಂತೆಯನ ಗುಡಿಸಲು ಯಾವುದು” ಅಂದ. ತಕ್ಷಣ ಮುದುಕ ಎದ್ದು ಪಕ್ಕದ ಗುಡಿಸಲು ತೋರಿಸಿ “ಅವನೂ ಇಂದು ಸಂಜೆಯಷ್ಟೇ ಬಂದ” ಎಂದು ಹೇಳಿ “ಏ ಬೊಂತಾ ಯುವರಾಜರು ಬಂದವರೆ ಬಾರ್ಲಾ” ಅಂದು ಬೊಂತೆಯನ ಗುಡಿಸಲು ಬಾಗಿಲು ಬಡಿದ. ತಕ್ಷಣ ಒಳಗಿನ ದೀಪವಾರಿದ್ದು ಬಾಗಿಲ ಕಿಂಡಿಯ ಮೂಲಕ ಗೊತ್ತಾಯಿತು. ಇದು ಇಬ್ಬರಿಗೂ ಅನಿರಿಕ್ಷಿತವಾಗಿತ್ತು. ರವಿಯಿನ್ನೂ ಆಶ್ಚರ್ಯದಲ್ಲಿದ್ದ. ಮುದುಕನಿಗೆ ಕೋಪ ಬಂತು. ‘ಯುವರಾಜರು ಬಂದಾರೆಂದರೂ ಹಿಂಗ ಮಾಡ್ತಾನಲ್ಲ ಇವ!’ ಎಂದು ಜೋರಾಗಿ ಬಾಗಿಲು ಬಡಿದು, –

“ಲೇ ಯಾರು ಬಂದಾರು ನೋಡಬಾರಲೇ ಮಂಗ್ಯಾ, ಯುವರಾಜರು ನಿನ್ನ ಕೇಳಿಕೊಂಡ ಬಂದರೆ ದೀಪ ಕಳೀತೀಯಲ್ಲ, ಬಾ ಹೊರಗೆ”

– ಎಂದು ಜೋರಿನಿಂದ, ಇಡೀ ಓಣಿ ಎಚ್ಚರವಾಗುವಂತೆ ಬಾಗಿಲು ಬಡಿದ. ಅವನ ಅರ್ಭಟ ಕೇಳಿ ಅಕ್ಕಪಕ್ಕದ ಗುಡಿಸಲಿನವರೂ ಬಂದು ನಮಸ್ಕಾರಗಳನ್ನಾಚರಿಸಿ ಬಂದ ಪ್ರತಿಯೊಬ್ಬರೂ ತಾವು ಸಹಾಯ ಮಾಡಲೆಂದೂ ಒಬ್ಬೊಬ್ಬರೂ ಬೊಂತೆಯನನ್ನು ಕೂಗಿ ಬಾಗಿಲು ಬಡಿದರು.

ದೀಪ ಹಚ್ಚದೆ ಬಾಗಿಲು ಮಾತ್ರ ತೆರೆಯಿತು. ಬಾಗಿಲೆದುರಿಗೇ ರವಿ ನಿಂತಿದ್ದ. ಬಿಟ್ಟ ಬಾಣದ ಹಾಗೆ ಕುಂಯ್ ಕುಂಯೆಂದು ನರಳುತ್ತ ಬೊಂತೆಯ ಬಂದು ರವಿಯ ಪಾದಗಳ ಮೇಲೆ ಬಿದ್ದು, ಉರುಳಾಡತೊಡಗಿದ. ಚುರುಕು ಸನ್ನೆಗಳ ಮೂಲಕ ಯಾವುದೋ ಅನಾಹುತ ಸುದ್ದಿಯನ್ನಾತ ತಿಳಿಸುತ್ತಿದ್ದ ಮತ್ತು ಅದರಲ್ಲಿ ತನ್ನದೇನೂ ತಪ್ಪಿಲ್ಲವೆಂಬಂತೆ ಕ್ಷಮಾಪಣೆ ಕೇಳುತ್ತಿದ್ದ. ಕೊನೆಗೆ ಸನ್ನೆಗಳ ಅರ್ಥವನ್ನು ರವಿಗ್ರಹಿಸಲಿಲ್ಲವಾದ್ದರಿಂದ ತನ್ನ ಹಣೆಗೆ ಪಟ ಪಟ ಹೊಡೆದುಕೊಂಡು ತಲೆಗೂದಲು ಕಿತ್ತುಗೊಂಡು, ತನ್ನ ಅಸಹಾಯಕತೆಗೆ ತಾನೇ ಮರುಗತೊಡಗಿದ. ಆದರೆ ಇದನ್ನೆಲ್ಲ ಕೇಳುವಷ್ಟು ತಾಳ್ಮೆಯಾಗಲಿ, ಸಮಯವಾಗಲಿ ರವಿಗಿರಲಿಲ್ಲ.

ತಕ್ಷಣ ರವಿ ಅವನನ್ನೆಬ್ಬಿಸಿ ಬಾಯಿ ಮುಚ್ಚಿಕೊಂಡಿರಲಿಕ್ಕೆ ಸನ್ನೆ ಮಾಡಿ ಎಲ್ಲರಿಂದ ಪ್ರತ್ಯೇಕವಾಗಿ ಏಕಾಂತಕ್ಕೆ ಕರೆದೊಯ್ದ. ಬೊಂತೆಯ ನಡುಗುತ್ತಿದ್ದದ್ದು ಕತ್ತಲೆಯಲ್ಲಿ ರವಿಗೆ ಗೊತ್ತಾಗುವಂತಿರಲಿಲ್ಲ. ಅವನ ಕಿವಿಯಲ್ಲಿ ಅವಸರದಿಂದ ಹೇಳಿದ:

“ಯಾರಿಗೂ ಹೇಳಕೂಡದು. ಮುದ್ದುಗೌರಿ ಶಿವಾಪುರಕ್ಕೆ ನಾಳೆ ಬೆಳಿಗ್ಗೆ ಹೋಗುತ್ತಿದ್ದಾಳೆ. ಅವಳೊಂದಿಗೆ ಇನ್ನಿಬ್ಬರು ಜೋಗ್ತಿಯರಿದ್ದಾರೆ. ಮೂವರು ಬೆಳ್ಳೀ ಮೂಡೋ ಹೊತ್ತಿಗೆ ವೈದ್ಯಶಾಲಿಯಿಂದ ಹೊರಡುತ್ತಾರೆ. ನೀನೂ ಗೌರಿಯೊಂದಿಗೆ ಶಿವಾಪುರಕ್ಕೆ ಹೋಗಬೇಕು. ದಾರಿಯಲ್ಲಿ ಅವಳ ಕೂದಲು ಕೊಂಕದ ಹಾಗೆ ರಕ್ಷಣೆ ಮಾಡಿಕೊಂಡಿರಬೇಕು. ಗೊತ್ತಾಯಿತ?”

ಹೋದ ಪ್ರಾಣ ಬಂದಷ್ಟು ನೆಮ್ಮದಿಯಾಯ್ತು ಬೊಂತೆಯನಿಗೆ. ಧೂಪ್ಪನೆ ರವಿಯ ಕಾಲಮೇಲೆ ಬಿದ್ದು ನಮಸ್ಕಾರವನ್ನಾಚರಿಸಿದ. ಹೇಳಿದ್ದಕ್ಕೆಲ್ಲ ಆಗಲೆಂದು ಕತ್ತು ಹಾಕಿದ. ರವಿಗಿನ್ನೂ ಖಾತ್ರಿಯಾಗಲಿಲ್ಲವೇನೋ ಎಂದು ಆಣೆ ಪ್ರಮಾಣ ಮಾಡಿದ ಸನ್ನೆ ಮಾಡಿದ. ತನ್ನ ಪ್ರಾಣವನ್ನ ಕೊಟ್ಟಾದರೂ ಗೌರಿಯನ್ನು ರಕ್ಷಿಸುವೆನುಂದು ನೆಲ ಬಡಿದು ಹೇಳಿದ. ರವಿಗೆ ನೆಮ್ಮದಿಯಾಯಿತು. ಮತ್ತೆ ಹೇಳಿದ:

“ಕಾಲ್ನಡಿಗೆಯಲ್ಲೇ ಹೋಗಬೇಕು…. ಗೊತ್ತಾಯಿತಾ?”

ಗೌರಿಯ ಜೊತೆಗೆ ಹೋಗು ಎಂದದ್ದೇ ಎಪ್ಪಾ ಕನಕಪುರಿಯ ದುಃಸ್ವಪ್ನದಿಂದ ಮುಕ್ತನಾದೆನೆಂದು ಕೈಲಾಸ ಹರಿದು ಮೈಮ್ಯಾಲೆ ಬಿದ್ದವನಂತೆ ಬೊಂತೆಯ ಹುರುಪುಗೊಂಡ. ರವಿಗಿನ್ನೂ ಅದು ತಿಳಿದಿಲ್ಲವೆಂದು ಮರುಗಿ ದಿಂಡುರುಳಿ ಹೋಗುವುದಕ್ಕೂ ಸಿದ್ದನಿರುವವನಿಗೆ ಕಾಲ್ನಡಿಗೆಯೇನು ಮಹಾ! ಈಗಲೇ ಹೊರಡುತ್ತೇನೆಂದು ಸನ್ನೆ ಭಾಷೆಯಲ್ಲಿ ತಿಳಿಸಿದ.

ಗೌರಿ ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ರವಿಯೂ ಬಾಯಿ ಬಿಡಲಿಲ್ಲ. ತನ್ನ ಬಟ್ಟೆಗಳಲ್ಲಿ ಉತ್ತಮವಾದುವನ್ನ ಆಯ್ದು ಗಂಗನಿಗಾಗಿ, ಒಳ್ಳೆಯ ಸೀರೆಯೊಂದನ್ನು ಗುಣದಮ್ಮನಿಗಾಗಿ ತೆಗೆದಿಟ್ಟಳು. ಸರಳವಾದ ನೂಲಿನ ಬಟ್ಟೆಗಳನ್ನು ತನಗಾಗಿ ಇಟ್ಟುಕೊಂಡು ಒಟ್ಟಾಗಿ ಒಂದು ಗಂಟು ಕಟ್ಟಿ ಮೂಲೆಯಲ್ಲಿಟ್ಟಳು. ಅಷ್ಟರಲ್ಲಿ ಸೇವಕಿ ತಂದುಕೊಟ್ಟ ಹಾಲು ಕುಡಿದು ಆಗಲೇ ನಿದ್ರಿಸುತ್ತಿದ್ದ ಆಜ್ಜಿಯ ಬಳಿ ಮಲಗಿಕೊಂಡಳು. ಗೌರಿ ಮಲಗಿದ ಮೇಲೆ ಶಿಖರಸೂರ್ಯ ಒಳಗಿಣಿಕಿ ಮಗಳ ಮುಖವನ್ನೊಮ್ಮೆ ನೋಡಿಹೋದ. ಸೇವಕಿ ಗೌರಿಗೆ ಕೊಟ್ಟ ಹಾಲಿನಲ್ಲಿ ಮಹಾರಾಜ ವಿಷ ಬೆರೆಸಿದ್ದ!

ಆ ದಿನ ರಾತ್ರಿ ರವಿಗೆ ನಿದ್ರೆ ಹತ್ತಲೇ ಇಲ್ಲ. ತಂಗಿ ಕೊಟ್ಟ ಸರವನ್ನು ಕೈಯಲ್ಲಿಟ್ಟುಕೊಂಡು ಮಲಗಿದ್ದಾಗ ವಾಸಂತಿಯ ನೆನಪಾಯಿತು. ಮುದ್ದುವಿನ ಕನಸಿನಲ್ಲಿ ಬಂದಿದ್ದಳಂತೆ ಬೇಗ ಕಂಚಿಗೆ ಹೋಗಲು ಹೇಳಿದ್ದಾಳೆ. ಹೋಗಬೇಕೆಂದು ನಿರ್ಧಾರ ಮಾಡಿದ. ಬೆಳಗಿನ ತಂಗಾಳಿಗೆ ಸ್ವಲ್ಪ ನಿದ್ದೆ ಹತ್ತಿತು.