ಅಣ್ಣ ಕಂಚೀಪಟ್ಟಣಕ್ಕೆ ಹೋದಮೇಲೆ ಗೌರಿ ಹೆಚ್ಚು ಒಂಟಿಯಾದಳು; ಏಕಾಂತಪ್ರಿಯಳಾದಳು. ಸುದೈವದಿಂದ ಅಣ್ಣನ ಬದಲು ಚಂಡೀದಾಸ ಸಿಕ್ಕ. ಅವಳಿಗೆ ಆತ ಧ್ಯಾನ ಮಾಡುವುದನ್ನ ಕಲಿಸಿದ. ಒಮ್ಮೆ “ನೀನು ಥೇಟ್ ಅಮ್ಮನ ಹಾಗೇ ಇದ್ದೀಯಮ್ಮ!” ಎಂದು ಹೇಳಿ ನಿಂತಲ್ಲೇ ಗದ್ಗದಿತನಾಗಿ ನಮಸ್ಕಾರ ಮಾಡಿದ. ಅವಳು ಸಂಕೋಚದಿಂದ ಓಡಿಹೋಗಿ ಅಜ್ಜಿಯ ಹಿಂದೆ ಅವಿತಿದ್ದಳು.

ಒಂದು ದಿನ ವೈದ್ಯಶಾಲೆಯಲ್ಲಿ ಚಂಡೀದಾಸನೊಬ್ಬನೇ ಯೋಚನೆ ಮಾಡುತ್ತ ಕೂತಿದ್ದ. ಈಗಿನ ಮಹಾರಾಜ ಸದಾ ಕಾಮೋದ್ರಿಕ್ತನಾಗಿರುವ ಮದ್ದಿನಂಥ ವಿಷ ತಗೊಂಡಿದ್ದ. ಅದನ್ನ ಯಾರು ಆತನಿಗೆ ಕೊಟ್ಟಿದ್ದರೋ, ಅದು ವಿಪರೀತಕ್ಕೆ ಮುಟ್ಟಿದರೆ ಮಹಾರಾಜ ಶಾಶ್ವತವಾಗಿ ವಿಕಲಾಂಗನಾಗಿ ಬಿದ್ದುಕೊಂಡಿರಬೇಕಾದ ಸ್ಥಿತಿ ಮುಟ್ಟುವುದು ನಿಶ್ಚಿತವಿತ್ತು. ಯಾಕೆಂದರೆ ಎಲ್ಲಿಂದಲೋ ಪ್ರವೇಶ ಮಾಡುವ ರೋಗ ಇನ್ನೆಲ್ಲೋ ತನ್ನ ಲಕ್ಷಣಗಳನ್ನು ತೋರಿಸುವಂತೆ, ಯಾವುದೋ ರೂಪದಲ್ಲಿ ತೋರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಮದ್ದು ಕೊಟ್ಟವನಿಗಲ್ಲದೆ ಬೇರೆಯವನಿಗೆ ಗುಣಪಡಿಸುವುದು ಸುಲಭ ಸಾಧ್ಯವಾಗದು. ಅಲ್ಲದೆ ಮಹಾರಾಜ ಸದಾ ಉನ್ಮತ್ತನಾಗಿರುವುದರಿಂದ ಪರೀಕ್ಷೆಗೆ ಸಹಕರಿಸುತ್ತಿರಲಿಲ್ಲ. ಮದುವೆ ಬೇಡವೆಂದು ಧನಪಾಲನಿಗೆ ತಾನು ಹೇಳಿದ್ದು ಫಲ ನೀಡಿರಲಿಲ್ಲ. ನಿವ್ವಳ ಲಾಭ ಸಿಕ್ಕುವಾಗ ಒಂದು ಹೆಣ್ಣು ಜೀವದ ಬಲಿ ಹೆಚ್ಚಲ್ಲ ಎನ್ನುವ ಪೈಕಿ ಅವನು. ಶಿಖರಸೂರ್ಯನಿಗೆ ಈ ಸಂಗತಿ ಹೇಳಿದಾಗ,

“ಅವರವರ ಕರ್ಮಕ್ಕೆ ನಾವೇನು ಮಾಡಲಾದೀತು? ಮಹಾರಾಜ ನನಗೂ ಸಹಕರಿಸುತ್ತಿಲ್ಲ” ಎಂದು ಹಾರಿಕೆಯ ಉತ್ತರ ಕೊಟ್ಟು ಜಾರಿಕೊಂಡಿದ್ದ. ಮದ್ದು ಕೊಟ್ಟವನು ಅವನೇ ಇರಬಹುದೆಂಬ ಸಂದೇಹವೂ ಚಂಡೀದಾಸನಲ್ಲಿ ಇದ್ದುದರಿಂದ ಈ ವಿಷಯವನ್ನ ಅವನೆದುರು ಬೆಳೆಸಿರಲಿಲ್ಲ. ತನ್ನ ಪಾಡಿಗೆ ತಾನು ಅಮ್ಮನ ಹೆಸರುಗೊಂಡು ಶಿವಪಾದನ ನೆನೆದು ಮಹಾರಾಜ ತಗೊಂಡಷ್ಟು ಮದ್ದು ಕೊಡುತ್ತ ಬಂದಿದ್ದ.

ಅಷ್ಟರಲ್ಲಿ ಗೌರಿ “ತಾತಾ ತಾತಾ” ಎಂದು ಗಿಳಿಯಂತೆ ಉಲಿಯುತ್ತ ಬಂದು ತೊಡೆಮೇಲೆ ಕೂತು “ನನಗೆ ಶಿವಪಾದನ ಕತೆ ಹೇಳು ಎಂದಳು. ವಿಷವೈದ್ಯದ ಬಗ್ಗೆ ಆಲೋಚಿಸುತ್ತಿದ್ದಾಗ ಈ ತಾಯಿ ಬಂದು ಶಿವಪಾದನ ಕತೆ ಹೇಳು ಎಂದಳಲ್ಲ! ಎರಡು ವಿರುದ್ಧ ಸಂಗತಿಗಳನ್ನ ಸಾಂಗತ್ಯಗೊಳಿಸಲು ಸಾಧ್ಯವಾಗದೆ ಸ್ವಲ್ಪ ಹೊತ್ತು ಸುಮ್ಮನೆ ಕೂತ. ಆಮೇಲೆ ತಾಯಿಯೇ ನನ್ನ ಪರೀಕ್ಷೆಗೆ ಬಂದಳೆಂದು ಗದ್ಗದಿತನಾದ. ತೊಡೆಯ ಮೇಲೆ ಕೂತು ಕುಲುಕುಲು ನಗುವ ಗೌರಿಯ ನೋಡಿ ಬಾಯಿಂದ ಮಾತು ಬಾರದಾಯ್ತು. ಕೆಳಗಿಳಿಸಲು ಮನಸ್ಸು ಬಾರದು. ಧಾರಾಕಾರ ಕಣ್ಣೀರು ಸುರಿಸುತ್ತ “ತಾಯೀ ತಾಯೀ” ಎಂದು ತೊದಲಿದರೆ ಅದು ಗಂಟಲಲ್ಲೇ ಬತ್ತಿ ಹೋಯ್ತು. ಗೌರಿ ಮಾತಾಡದಿದ್ದರೆ ಮೂರ್ಛೆ ಹೋಗುತ್ತಿದ್ದನೋ ಏನೊ, ಅಷ್ಟರಲ್ಲಿ ಗೌರಿ ಕೇಳಿದಳು:

“ಯಾಕೆ ತಾತಾ ಅಳುತ್ತಾ ಇದ್ದೀಯಲ್ಲ?” ಆಗಲೂ ತೊದಲಿದ.

“ಕತೆ ಬೇಡ ಅಂದರೆ ಆಟ ಆಡೋಣ.”

-ಅಂದಳು ಗೌರಿ. “ಆಯ್ತು ತಾಯೀ!” ಅಂದು ಸಾವರಿಸಿಕೊಂಡ.

* * *

ಇನ್ನೊಂದು ದಿನ ಈಗ ಮೂರು ದಿನಗಳಿಂದ ಚಿಲುಮೆಯಿಂದ ಸಿಡಿದ ಮೂರು ಚಿನ್ನದ ಕಾಳುಗಳನ್ನು ಅವಳ ಕೈಗಿತ್ತು. “ಭದ್ರವಾಗಿ ಹಿಡಿದುಕೊ ತಾಯಿ!” ಅಂದ. ಹಿಡಿದುಕೊಂಡಳು. “ಕಣ್ಣುಮುಚ್ಚಿಕೊ” ಅಂದ. ಮುಚ್ಚಿಕೊಂಡಳು. “ನಾನು ಹೇಳುವತನಕ ಕಣ್ಣು ತೆರೆಯಬೇಡ”ವೆಂದು ಹೇಳಿ ಮುಂದಿನ ಜಾಗವನ್ನ ತನ್ನ ಹೆಗಲ ಮೇಲಿನ ಬಟ್ಟಿಯಿಂದ ಹಸನು ಮಾಡಿ, ಅಲ್ಲಿ ಗೌರಿಯನ್ನು ಕೂರಿಸಿ ಮೆಲ್ಲನೆ ಪಾದಗಳನ್ನು ಒರೆಸಿ ಸ್ವಚ್ಚಮಾಡಿ, ಕೈ ಮುಗಿದು ದೂರ ಕೂತ.

“ತಾಯೀ ನಿನಗೆ ಇಷ್ಟವಾದವರು ಯಾರು?” ಅಂದ.

“ನನಗೆ ಎಲ್ಲರೂ ಇಷ್ಟ.”

“ನಿನಗೀಗ ಯಾರನ್ನು ನೋಡುವುದಕ್ಕೆ ಇಷ್ಟ?”

“ನಾನು ಹೇಳಿದವರನ್ನ ತೋರಿಸ್ತೀಯಾ ತಾತಾ?”

-ಎಂದು ಕೌತುಕದಿಂದ ಕಣ್ಣು ತೆರೆದಳು.

“ತೋರಿಸ್ತೀನಿ, ಎದುರಿಗಲ್ಲ, ನೀನು ಕಣ್ಣು ಮುಚ್ಚಿಕೊಂಡಿದ್ದರೆ ಒಳಗಣ್ಣಿಗೆ ತೋರಿಸ್ತೀನಿ ಆದೀತೋ?”

“ಆದೀತು. ಇಕೋ ಮುಚ್ಚಿಕೊಂಡೆ” ಎಂದು ಕಣ್ಣು ಮುಚ್ಚಿಕೊಂಡಳು.

“ಯಾರನ್ನ ನೋಡಬೇಕು?”

“ನನ್ನ ಸೋದರ ಮಾವ ತರುಣಚಂದ್ರನನ್ನ.”

“ಆಗಲಿ ಅವನ ರೂಪವನ್ನು ಕಲ್ಪಿಸಿಕೊ”

“ನಾನವನನ್ನ ನೋಡೇ ಇಲ್ಲ!”

“ನಾನೇ ತರುಣಚಂದ್ರ ಅಂತ ಯಾರಾದರೂ ನಿನ್ನ ಕನಸಿಗೆ ಬಂದರೆ ಆದೀತೊ?”

“ಹ್ಯಾಗಾದೀತು? ಅವನನ್ನ ಕಂಡರೆ ನನಗೆ ಇವನೇ ನನ್ನ ಮಾವ ಅಂತ ಗೊತ್ತಾಗ್ತದೆ.”

“ನೀನು ಅವನನ್ನು ನೋಡೇ ಇಲ್ಲವಲ್ಲ?”

“ಅದಕ್ಕೇ ಅವನನ್ನ ನೋಡಬೇಕು. ಅವನ ನೆನಪು ಮಾಡಿಕೊಂಡು ಅಜ್ಜಿ ಆಗಾಗ ಅಳ್ತಾಳೆ. ನಾನವನನ್ನ ಮದುವೆ ಆಗಬೇಕಾಗಿತ್ತಂತೆ.”

“ಹಾಗಾದರೆ ಗುಡಿಯಲ್ಲಿ ಶಿವ ಇದ್ದಾನಲ್ಲ, ಅವನನ್ನೇ ಕಲ್ಪಿಸಿಕೊ. ಅವನೇ ಬಂದು ತೋರಿಸ್ತಾನೆ.”

ತರುಣಚಂದ್ರ ಕಳೆದು ಹೋದ ವಿಷಯ ಚಂಡೀದಾಸನಿಗೆ ಕೊಂಚ ಗೊತ್ತಿತ್ತು. ಕಾಣೆಯಾಗಿದ್ದ ಅವನ ಬಗೆಗಿನ ಕುತೂಹಲವನ್ನು ಕೆದರಿ ಕೇಳಿ ಈ ಕೂಸಿನ ಭಾವನೆಗಳನ್ನು ನೋಯಿಸಲು ಮನಸ್ಸಾಗಲಿಲ್ಲ.

“ಕಂದಾ ಈಗ ನೀನು ಕಣ್ಣು ಮುಚ್ಚಿ ಬಲಗೈ ಮುಷ್ಟಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ಗುಡಿಯ ಶಿವನ ಜ್ಞಾಪಿಸಿಕೊ.”

“ಆಯ್ತು”

-ಎಂದು ಕಣ್ಣು ಮುಚ್ಚಿದಳು. “ಇನ್ನುಮೇಲೆ ನಾನು ಹೇಳುವತನಕ ಕಣ್ಣು ತೆರೆಯಬೇಡ. ಶಿವನನ್ನ ಪ್ರೀತಿಯಿಂದ ಅಂತಃಕರಣದಿಂದ ಕಲ್ಪಿಸಿಕೊಳ್ಳಬೇಕು” ಹೀಗೆ ಏನೇನೋ ಹೇಳುತ್ತ ಮಧ್ಯೆ ಮಧ್ಯೆ ‘ಓಂ ನಮಃ ಶಿವಾಯ’ ಎನ್ನುತ್ತ ಹೋದ.

ಗೌರಿಗೆ ಅವನ ದನಿ ಮಾತ್ರ ಕೇಳಿಸುತ್ತಿತ್ತು. ಮಾತಿನ ಅರ್ಥ ಅವಳಿಗೆ ತಲುಪಲೇ ಇಲ್ಲ. ಅವನೇನೋ ಹೇಳುತ್ತಿದ್ದ. ಅವಳೇನು ಕಲ್ಪಿಸಿಕೊಂಡಳೋ…. ಅವಳಿಗ್ಯಾವ ಅಹಂಕಾರಗಳೂ ಇರಲಿಲ್ಲವಾದ್ದರಿಂದ ಬಹುಬೇಗ ತನ್ನ ಕಲ್ಪನೆಯನ್ನ ತಲುಪಿ ಅಲ್ಲಿಂದ ಮುಂದೆ ನಡೆದಳು.

ಈಗ ಅವಳ ಮುಖದ ಮೇಲೆ ಸುಗ್ಗಿ ಕಾಲದ ಹಗಲಿನ ಕಾಂತಿ ಬಂದಿತ್ತು. ಅದನ್ನು ನೋಡಿ ಬೆರಗಿನಿಂದ ಚಂಡೀದಾಸ ಮೌನಿಯಾದ. ಯಾರೋ ಹೊಸಬನನ್ನು ಕಂಡಂತಿತ್ತು ಅವಳ ಮುಖ. ಹುಬ್ಬುಗಳ ಚಲನೆಯಲ್ಲಿ ಕೌತುಕ ಮತ್ತು ಆನಂದಗಳಿದ್ದವು. ಹೊಸಬನೊಂದಿಗಿನ ಅವಳ ಸಹವಾಸದಲ್ಲಿ ಒಂದು ಅಲೌಕಿಕ ಮೆರುಗಿದ್ದದ್ದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಈಗ ಅಪರಿಚಿತನೊಂದಿಗೆ ಸಂತೋಷಕರ ಸಂಭಾಷಣೆ ನಡೆಸುತ್ತಿರುವಂತೆ ಕಂಡಿತು. ತನ್ನಲ್ಲಿದ್ದ ಗೊಂಬೆಗಳನ್ನು ಅವನಿಗೆ ಕೊಟ್ಟು ಅವನ ಗೊಂಬೆಗಳನ್ನು ತಾನು ತಗೊಂಡಂತೆ ಕಂಗೊಳಿಸಿದಳು. ಚಿಕ್ಕಂದಿನ ಯಾವುದೋ ಹಾಡಿನ ಲಯಕ್ಕೆ ತಲೆದೂಗಿದಳು. ತಾಳ ಹಾಕಿದಂತೆ ತಲೆ ಹಾಕಿದಳು. ಆಕೆಯ ಮುಖದಲ್ಲಿ ಸ್ವಚ್ಛವಾದ ಕೋಮಲವಾದ ಸಹಜ ಕಾಂತಿ ಹೊಳೆಯುತ್ತಿತ್ತು. ಚಂಡೀದಾಸ ಬೆರಗಿನಿಂದ ಧಾರಾಕಾರ ಕಣ್ಣೀರು ಸುರಿಸುತ್ತ ನೋಡುತ್ತಿದ್ದ. ತಾಯಿಯಿಂದ ಹೊರಟ ಆನಂದದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಅನುಭವವನ್ನು ಪಡೆಯುತ್ತ ಕೈ ಮುಗಿದು ಕೂತ.

ಸ್ವಲ್ಪ ಹೊತ್ತಿನ ಬಳಿಕ ಗೌರಿ ಮೆಲ್ಲಗೆ ಕಣ್ಣು ತೆರೆದಳು. ಈಗಷ್ಟೇ ಪಡೆದ ಅನುಭವದ ನೆನಪು ಹಸಿಹಸಿಯಾಗಿ ಹಾಗೇ ಕಣ್ಣಿಗಂಟಿತ್ತು. ಚಕಿತ ನೇತ್ರಗಳಿಂದ ಚಂಡೀದಾಸನನ್ನು ನೋಡಿ, ಗುರುತಿಸಿ ಆಮೇಲೆ “ತಾತಾ!” ಅಂದಳು.

“ಏನು ತಾಯೀ?” ಅಂದ.

“ನನ್ನ ಮಾವನನ್ನ ಕಂಡೆ!” ಅಂದಳು.

“ನಿನಗೆ ಕಂಡವನು ನಿನ್ನ ಮಾವನೇ ಅಂತ ಹ್ಯಾಗೆ ಗೊತ್ತಾಯ್ತು?”

“ಅವನು ನನ್ನೆದುರಿಗಿದ್ದಾಗ ನನಗೆ ಇಂಥಾ ಸಂಶಯ ಬರಲೇ ಇಲ್ಲ.”

“ಈಗ?”

“ಈಗಲೂ ಇಲ್ಲ”

“ಹಾಗಿದ್ದರೆ ಅವನು ನಿನ್ನ ಮಾವನೇ ಹೌದು!”

-ಎಂದು ಚಂಡೀದಾಸ ಚಕಿತನಾಗಿ ಹೇಳಿದ.

* * *

ಇನ್ನೆರಡು ದಿನ ಕಳೆದ ಮೇಲೆ ಬೆಳಿಗ್ಗೆ ಚಂಡೀದಾಸ ಅರಮನೆಯ ಬಗ್ಗೆ ಯೋಚಿಸುತ್ತ ಕೂತಿದ್ದ. ಮುಖದಲ್ಲಿ ಬೇಸರವಿತ್ತು. ಅರಮನೆಯ ವ್ಯವಹಾರಗಳು ಧನಪಾಲನ ಕೈಮೀರಿ ನಿಭಾಯಿಸಲಾಗದೆ ಚಡಪಡಿಸುತ್ತಿದ್ದದ್ದು ಸ್ಪಷ್ಟವಾಗಿತ್ತು. ಸಾಲದ್ದಕ್ಕೆ ಶಿಖರಸೂರ್ಯನ ಸ್ಥಳದಲ್ಲಿ ಚಂಡೀದಾಸನನ್ನು ರಾಜವೈದ್ಯನನ್ನಾಗಿ ನಿಯಮಿಸುವ ಪ್ರಸ್ತಾಪವನ್ನು ಬೇಡ ಬೇಡವೆಂದರೂ ಕೇಳದೇ ಈ ದಿನವೂ ಮಹಾರಾಜನೆದುರು ಮಾಡಿಬಿಟ್ಟಿದ್ದ. ಮೊದಲನೆಯದಾಗಿ ಕನಕಪುರಿಯ ಮೋಹವನ್ನು ಚಂಡೀದಾಸನೆಂದೋ ಕಳಚಿಕೊಂಡಿದ್ದ. ಎರಡನೆಯದಾಗಿ ಶಿಖರಸೂರ್ಯನ ಸ್ಥಳದಲ್ಲಿ ಬಂದು ಒಕ್ಕರಿಸುವ ಸಣ್ಣ ಬುದ್ಧಿ ಅವನಿಗಿರಲಿಲ್ಲ. ಮೂರನೆಯದಾಗಿ ಆದಿತ್ಯಪ್ರಭ ಮಹಾರಾಜ ಧನಪಾಲನ ಪ್ರಸ್ತಾವ ಕೇಳಿ “ಈ ವೈದ್ಯನಿಗೆ ವಿಷಹಾಕದ ಇನ್ನೊಬ್ಬ ಮಗಳಿದ್ದಾಳೊ?” ಎಂದು ಕೇಳಿ ಬಿಟ್ಟಿದ್ದ. ಇದನ್ನು ಕೇಳಿ ಚಂಡೀದಾಸ ಕತಕತ ಕುದಿಯುತ್ತ ಹೇಳದೆ ಕೇಳದೆ ಬಂದುಬಿಟ್ಟಿದ್ದ.

ಅಷ್ಟರಲ್ಲಿ ಗೌರಿ ಬಂದಳು. ಅವಳನ್ನು ಕಂಡೊಡನೆ ಇವನ ಸಂತಾಪ ಸಂಕಟಗಳು ಕರಗಿ ಹಸನ್ಮುಖಿಯಾದ. ಆದರೆ ಗೌರಿ ಎಂದಿನಂತೆ ಉತ್ಸಾಹದಲ್ಲಿರಲಿಲ್ಲ. ಮುಖ ಬಾಡಿತ್ತು. ಅಲ್ಲದೆ ನಿತ್ಯದ ಆಭರಣಗಳನ್ನೂ ಧರಿಸಿರಲಿಲ್ಲ. ದೇಹ ಬಡವಾದಂತೆ ಕಾಣುತ್ತಿತ್ತು.

“ಯಾಕೆ ಕಂದಾ ಇಷ್ಟು ಬೇಗ ಬಂದುಬಿಟ್ಟೆ? ಕನಸಿನಲ್ಲಿ ಇವತ್ತೂ ಮಾವನನ್ನ ಕಂಡೆಯೋ ಹೇಗೆ?” ಅಂದ.

“ಹೂ ತಾತ, ಇವತ್ತು ಕನಸಿನಲ್ಲಿ ಬಂದು ‘ನಿನ್ನ ಕೈಯಲ್ಲೇನಿದೆ ನನಗ್ಗೊತ್ತು’ ಅಂದ.”

‘ಹೇಳು ನೋಡುವಾ’ ಅಂದೆ.

‘ಮೂರು ಚಿನ್ನದ ಕಾಳಿವೆ, ಹೌದಾ’ ಅಂದ, ಹೇಳಿದ್ದಕ್ಕೆ ಪೆಚ್ಚಾಗಿ ಕೈ ತೆರೆದು ತೋರಿಸಿದೆ, ‘ಚಿನ್ನವೆಂದರೆ ನನಗಿಷ್ಟವಿಲ್ಲ!’ ಅಂತ ಹೇಳಿ ಕೋಪದಲ್ಲಿ ಮಾಯವಾಗಿ ಬಿಟ್ಟ!”-ಎಂದು ಹೇಳಿ ಗೌರಿ ಮುತ್ತುಗಳಂಥ ಕಣ್ಣೀರು ಸುರಿಸುತ್ತ ತನ್ನ ಕೈಯಲ್ಲಿದ್ದ ಮೂರೂ ಚಿನ್ನದ ಕಾಳುಗಳನ್ನ ಚಂಡೀದಾಸನ ಕೈಗಿಟ್ಟಳು. ಬಿಕ್ಕಿಬಿಕ್ಕಿ ಅಳುತ್ತಿರುವ ಅವಳನ್ನ ಸಮಾಧಾನ ಮಾಡುವುದೇ ಸಮಸ್ಯೆಯಾಯಿತು. ತಲೆ ನೇವರಿಸುತ್ತ ‘ನೋಡು ಚಿನ್ನು….’ ಎಂದರೆ ತಕ್ಷಣ “ನನಗಿನ್ನು ಮ್ಯಾಲೆ ಚಿನ್ನು ಅನ್ನಬೇಡ ತಾತಾ” ಎಂದು ಹೇಳಿ ಅಳು ಮುಂದುವರಿಸಿದಳು.

“ಮುದ್ದು ಅಂತೀನಾಯ್ತ?” ಅಂದರೆ ಆಗಲೆಂಬಂತೆ ಕತ್ತು ಹಾಕಿದಳು.

“ಸಿಟ್ಟು ಮಾಡಿ ಹೋದವನು ಮತ್ತೆ ನನ್ನ ಕನಸಿಗೆ ಬರ್ತಾನ ತಾತಾ?”

-ಅಂದಳು. ಚಂಡೀದಾಸ ಅಲ್ಲೇ ಬದುವಿನ ಮ್ಯಾಲಿದ್ದ ಒಂದು ಅಡಕೆ ತಗೊಂಡು “ನೋಡು ಮದ್ದೂ, ಈ ಅಡಕೆ ತಗೊ. ಇದನ್ನ ಹಿಡಿದುಕೊಂಡು ಧ್ಯಾನ ಮಾಡು; ಸಿಟ್ಟು ಮಾಡಿಕೊಂಡು ಹೋದ ನಿನ್ನ ಮಾವ ಬರದೆ ಹೋದರೆ ಹೇಳು”

ಎಂದು ಹೇಳಿ ಅಡಕೆಯನ್ನ ಅವಳ ಕೈಗಿಟ್ಟ.

ಗೌರಿ ಅಡಕೆ ತಗೊಂಡು ಓಡತೊಡಗಿದಳು. ತಕ್ಷಣ ಏನೋ ನೆನಪಾಗಿ

“ಮುದ್ದೂ ಇಲ್ಲಿ ಬಾ” ಅಂದ. ಬಂದಳು. “ಕೈಯಲ್ಲಿ ಚಿನ್ನದ ಬಳೆ, ಕತ್ತಿನ ಸರ ಇವತ್ತಿಲ್ಲವಲ್ಲ ಯಾಕೆ?”

“ನನ್ನ ಮಾವನಿಗೆ ಚಿನ್ನ ಇಷ್ಟವಿಲ್ಲ. ಅದಕ್ಕೆ ತಗೆದು ಬಿಟ್ಟೆ!”

-ಎಂದು ಹೇಳಿ ಓಡಿದಳು. ಚಂಡೀದಾಸ ಕಣ್ತುಂಬಿಕೊಂಡು ಮದ್ದುವನ್ನೇ ನೋಡುತ್ತ ನಿಂತುಬಿಟ್ಟ.

ಅದರ ಮಾರನೇ ದಿನ ಚಂಡೀದಾಸ ಊರು ಬಿಡಲು ತಯಾರಾಗಿ ಶಿಖರಸೂರ್ಯನ ಭೇಟಿಗೆ ಬಂದ. ಶಿಖರಸೂರ್ಯ ವೈದ್ಯಶಾಲೆಯಲ್ಲಿ ಕೈಕಟ್ಟಿಕೊಂಡು ಚಿಂತೆ ಮಾಡುತ್ತ ನೆಲದ ಮೇಲೆ ಕೂತಿದ್ದ. ಆತ ಹಾಗೆ ಕೈಕಟ್ಟಿಕೊಂಡು ಹತಾಶನಾಗಿ ಕೂತಿದ್ದನ್ನು ಯಾರೂ ಕಂಡಿರಲಿಕ್ಕಿಲ್ಲ. ತನ್ನ ಸ್ಥಳದಲ್ಲಿ ಚಂಡೀದಾಸನನ್ನು ರಾಜವೈದ್ಯನನ್ನಾಗಿ ನಿಯಮಿಸಬೇಕೆಂದು ಯಾವಾಗ ಪ್ರಧಾನಿ ಯೋಚನೆ ಮಾಡಿದ್ದನೋ, ತನ್ನನ್ನು ಶ್ವಾನಕೂಪಕ್ಕಳಿಸಿ ನಾಯಿಗಳನ್ನ ಛೂ ಬಿಡಲು ಮಹಾರಾಣಿ ಯಾವಾಗ ಯೋಚನೆ ಮಾಡಿದಳೋ ಆಗಲೇ ಆತ ಕನಕಪುರಿಗೆ ಹೊರಗಿನವನಾಗಿಬಿಟ್ಟಿದ್ದ. ಮುಂದೇನೆಂದು ಹೊಳೆದಿರಲಿಲ್ಲ. ಶಿವಾಪುರದಿಂದ ಓಡಿಬಂದಾಗ ಹೆಂಡತಿ ಮಕ್ಕಳಿರಲಿಲ್ಲ. ಈಗ ಸಂಸಾರ ಕಟ್ಟಿಕೊಂಡಾಗಿತ್ತು. ಅವರಿಗೊಂದು ನೆಲೆಯ ವ್ಯವಸ್ಥೆಯಾಗಬೇಕು. ಅದನ್ನೇ ಯೋಚಿಸುತ್ತಿದ್ದಾಗ ಚಂಡೀದಾಸ ಬಂದು “ಊರು ಬಿಡಲು ಅಪ್ಪಣೆಯೆ?” ಅಂದ.

ಚಂಡೀದಾಸನ ಬಗ್ಗೆ ಶಿಖರಸೂರ್ಯನಲ್ಲಿ ಗೌರವಭಾವನೆ ಉಂಟಾಗಿತ್ತು. ಈ ಹಿಂದೆ ಕೂಡ ದುರಭಿಪ್ರಾಯ ಹೊಂದಿದ್ದು ಅರ್ಥಕೌಶಲನ ಚಾಡಿಗಳಿಂದ. ಈಗದ್ಯಾವುದಕ್ಕೂ ಅವಕಾಶವಿರಲಿಲ್ಲ. ಅಲ್ಲದೆ ತನ್ನ ಕೂಡಿಕೆಯ ಮಡದಿ ವಿದ್ಯುಲ್ಲೇಖೆಯ ತಂದೆಯೆಂಬ ಗೌರವ ಭಾವನೆಯೂ ಇತ್ತು. ಚಂಡೀದಾಸ “ಹೇಳಬೇಕಾದ ಒಂದು ಮಾತಿತ್ತಲ್ಲ…” ಎನ್ನುತ್ತ ಅವನ ಮುಂದೆ ನೆಲದ ಮೇಲೆ ಕೂತ.

“ಹಂಚಿಕೊಳ್ಳಬೇಕಾದ ಒಂದು ಮಾತಿತ್ತು.”-ಎಂದು ಇವನೂ ಅಂದ.

“ನೀನು ಹಂಚಿಕೊಳ್ಳಬೇಕಾದ ಮಾತು, ನಾನು ಹೇಳೋ ಮಾತೂ ಒಂದೇ ಆಗಿರಬಹುದೊ? ಅಂತ ಅನುಮಾನ ನನಗೆ. ಇರಲಿ, ಈಗ ನೀನು ಹಂಚಿಕೊಳ್ಳೋ ಮಾತು ಹೇಳು.”

-ಅಂದ ಚಂಡೀದಾಸ. ಶಿಖರಸೂರ್ಯ ಹೇಳಲೋ ಬೇಡವೋ ಹೇಳಿದರೆ ಹೇಡಿತನವಾದೀತ? ಅಂತ ಸ್ವಲ್ಪ ಹೊತ್ತು ತೂಗಿ ಕೊನೆಗೆ ಹೇಳಿದ:

“ನನ್ನ ಬಗ್ಗೆ ಅರಮನೆ ತಳೆದ ಧೋರಣೆಯಿಂದ ಬೇಸರವಾಗಿದೆ. ಊರು ಬಿಟ್ಟು ಹೋಗುವ ಆಲೋಚನೆ ಮಾಡಿದ್ದೇನೆ.”

-ಎಂದು ಹೇಳಿ ನೆಲ ನೋಡುತ್ತ ಸುಮ್ಮನಾದ. ವಿದ್ಯಮಾನಗಳು ಊಹಿಸಬಾರದಂತೆ ಘಟಿಸತೊಡಗಿದ್ದರಿಂದ ಚಂಡೀದಾಸನೂ ಏನಾದರೂ ಹೇಳುವ ಸ್ಥಿತಿಯಲ್ಲಿರಲಿಲ್ಲ.

“ನನಗೂ ಪರಿಸ್ಥಿತಿಯ ಅಂದಾಜು ಆಗುತ್ತಿಲ್ಲ ಮಿತ್ರಾ. ಆದರೆ ನಿನ್ನ ಭವಿಷ್ಯದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ಒಂದು ಮಾತು ಹೇಳೋಣ ಅನ್ನಿಸ್ತಿದೆ…. ಹೇಳಲೊ?”

“ಬೇಡ”

-ಎಂದು ಶಿಖರಸೂರ್ಯ ಅವನ ಉತ್ತರವನ್ನು ಕತ್ತರಿಸಿದ. ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದು ಕೊನೆಗೆ ಚಂಡೀದಾಸ ಎದ್ದ. ಬೀಳ್ಕೊಡಲು ಇವನೂ ಎದ್ದ. ತಬ್ಬಿಕೊಂಡು “ಮಕ್ಕಳನ್ನು ಚೆನ್ನಾಗಿ ನೋಡಿಕೊ” ಎಂದು ಹೇಳಿ ಚಂಡೀದಾಸ ನಡೆದ. ಇವನು ಭಾವುಕನಾಗಿ ನಿಂತುಕೊಂಡ.

ಚಂಡೀದಾಸ ಹೋಗಿ ಒಂದು ವಾರ ಕಳೆಯುವುದರೊಳಗಾಗಿ ಒಂದು ದಿನ ಅರಮನೆಗೂ ತಿಳಿಸದೆ ಹೆಂಡತಿ, ಮಗಳು ಮತ್ತು ಚಿಕ್ಕಮ್ಮಣಿ ಇವರನ್ನು ಕರೆದುಕೊಂಡು ಬಿಳಿಗಿರಿಗೆ ಹೋದ. ಅಲ್ಲಿ ಮೂವರನ್ನೂ ಬಿಟ್ಟು ತಾನೊಬ್ಬನೇ ಹದ್ದಿನ ಕೊಳ್ಳಕ್ಕೆ ಹೋಗಿ ವಿದ್ಯುಲ್ಲತೆಯೊಂದಿಗೆ ತೆಪ್ಪಗೆ ಇದ್ದುಬಿಟ್ಟ.

* * *

ಹದ್ದಿನಕೊಳ್ಳದಲ್ಲಿಯೂ ನಮ್ಮ ಕಥಾನಾಯಕ ಯಾರೊಂದಿಗೂ ಮನಸ್ಸು ಬಿಚ್ಚಿ ಮಾತಾಡಲಿಲ್ಲ. ಬರೀ ಮುಗುಳು ನಗೆ ಮತ್ತು ಹಾಹೂಗಳನ್ನೇ ಬದಲಿಸುತ್ತ ವಿದ್ಯುಲ್ಲತೆಗೆ ತನ್ನನ್ನು ತಾನು ಸಂಪೂರ್ಣ ಸಮರ್ಪಿಸಿಕೊಂಡು ಒಂದು ತಿಂಗಳಿದ್ದ.

ವಿದ್ಯುಲ್ಲತೆ ಮಾತ್ರ ಅವನು ಮಾತಾಡದ್ದಕ್ಕೆ ಬೇಸರ ಮಾಡಿಕೊಳ್ಳಲೇ ಇಲ್ಲ. ಆದರೆ ಹೇಳಿದಂತೆ ಕೇಳುತ್ತಿದ್ದನಾದ್ದರಿಂದ ಆನಂದದ ಶಿಖರದಲ್ಲಿದ್ದಳು. ಪಾದರಸದ ಬಳ್ಳಿಯಂತೆ ಸಂಚರಿಸುತ್ತ ಅವನ ಸೇವೆ ಮಾಡಿದಳು. ಅವನೊಮ್ಮೆ ಕಲ್ಲಕಟ್ಟೆಯ ಬಾವಿಗೆ ಹೋಗಿ ಹಲ್ಲುತೊಳೆದು ಬಹಿರ್ದೆಶೆ ಮುಗಿಸಿ ತಲೆಗೂದಲು ಬಿಚ್ಚಿ ಬೆನ್ನಿಗಿಕ್ಕಿಕೊಂಡು ಬಂದರಾಯ್ತು. ನೆತ್ತಿಗೆ ನೆಯ್ಯೆಣ್ಣೆ, ಕಿವಿಗೆ ಕೀಲೆಣ್ಣೆ ಬಿಟ್ಟು ಬೆನ್ನಿಗೆ ಬಿಸಿಎಣ್ಣೆ, ಎದೆಗೆ ತಂಪೆಣ್ಣೆ, ಪಾದಕ್ಕೆ ಹನಿಯೆಣ್ಣೆ ಹಚ್ಚಿ, ಉಗುರಿಗೆ ಉರಿಯೆಣ್ಣೆ ಪೂಸಿ ಸಾವಿರ ಚೊಂಬು ಬಿಸಿನೀರು ಸಾವಿರ ಚೊಂಬು ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದಳು. ಮೈಲಿಗೆ ಬಟ್ಟೆ ಬದಲಿಸಿ ಮಡಿಯುಡಿಸಿ ತಲೆಗೂದಲನ್ನ ಬೆನ್ನಿಗೆ ಕೊಡಹಿದರೆ ತಲೆಗೂದಲ ನೀರಹನಿ ಅಷ್ಟು ದೂರಕ್ಕೆ ಚಿಮ್ಮುತ್ತಿತ್ತು.

ಆಮೇಲೆ ಬಾಳೆಯೆಲೆ ಹಾಕಿ, ಹಾಕಿದ ಎಲೆಗೆ ನೀರು ಹನಿ ಚಿಮುಕಿಸಿ, ಮುತ್ತಿನ ಬಣ್ಣದ ಅನ್ನ, ಮೆಣಸು ಸೇರಿಸಿದ ಮೂವತ್ತು ಬಗೆಯ ಪಲ್ಯ, ಮಜ್ಜಿಗೆ ಸೇರಿಸಿ ಮಾಡಿದ ಹದಿನೈದು ಪಲ್ಯ, ತೆಂಗಿನ ಕಾಯಿ ಹಾಕಿದ ಹದಿನಾರು ಬಗೆಯ ಪದಾರ್ಥ ಬಡಿಸುತ್ತಿದ್ದಳು. ಅಮ್ಯಾಲೆ ನಿಂಬೆ ಮಾದಳದ ಉಪ್ಪಿನಕಾಯಿ ಬಡಿಸಿ ಅಕ್ಕಿಯ ಉಂಡೆಗೆ ಹಸಿರು ವರ್ಣದ ಸಾರು ಸುರಿಯುತ್ತಿದ್ದಳು. ಕೊನೆಯಲ್ಲಿ ಪಚ್ಚೆಸರಿನ ಪಾಯಸ ಹಾಕಿ ಘನವಾದ ಭೋಜನ ಪೂರೈಸಿದ ಮೇಲೆ ತೂಗುಯ್ಯಾಲೆಯಲ್ಲಿ ಕುಂತು ಸಂಚಿ ವೀಳ್ಯವ ಮೆಲ್ಲುತ್ತ ಸುಖಿಸುತ್ತಿದ್ದ.

ಅವನು ಕಾಡಿನಲ್ಲಿ ಸಂಚರಿಸಿ ಬಂದರೆ ಅವನ ಕೈಕಾಲು ತಾನೇ ತೊಳೆಯುತ್ತಿದ್ದಳು. ಮೋರೆಯ ಮುತ್ತು ಬೆವರು ತಾನೇ ಒರೆಸುತ್ತಿದ್ದಳು. ಬಟ್ಟಲಲ್ಲಿ ಬೆಲ್ಲ ಗಿಂಡಿಯಲ್ಲಿ ಹಾಲು ತಂದು ಕೈಯಾರೆ ಕುಡಿಸುತ್ತಿದ್ದಳು. ಬಾಳೆಯೆಲೆಯಲ್ಲಿ ಚಿಗುರು ವೀಳ್ಯ ಎಲೆ ಅಡಿಕೆ ಹೋಳು ಕೊಡುತ್ತಿದ್ದಳು. ಇಂತಿಪ್ಪ ಈ ಹುಡುಗಿ ಎಷ್ಟು ಸೇವೆ ಮಾಡಿದರೂ ಸಾಲದು ಸಾಲದೆಂದು ಚಡಪಡಿಸಿ ಸೇವೆ ಮಾಡಿದಳು.

ಸಂಜೆ ಮಲಗುವ ಮುನ್ನ ಮತ್ತು ಏಳುವಾಗ ಅವನು ಸದಾಕಾಲ ಹೀಗೆ ತನ್ನ ಸೇವೆ ಸ್ವೀಕರಿಸುತ್ತಲೇ ಇಲ್ಲೇ ಇರಲೆಂದು, ಜೊತೆಗೆ ಅವನ ಈಗಿನ ಅಸಹಜ ಮೌನಸ್ಥಿತಿ ಕೊನೆಗೊಂಡು ಮೊದಲಿನಂತೆ ನಗುನಗುತ್ತ ಬಾಳುವಂತಾಗಲೆಂದು ಬೆಟ್ಟದಯ್ಯನಲ್ಲಿ ನಿತ್ಯ ಎರಡು ಹೊತ್ತು ಕಪಿಲೆಯ ತುಪ್ಪದ ಸೊಡರಿಟ್ಟು ಪ್ರಾರ್ಥಿಸಿದಳು. ವ್ರತ ಮಾಡಿ ವಾರದಲ್ಲಿ ಮೂರು ದಿನ ಉಪವಾಸ ಮಾಡಿದಳು.

ಇಷ್ಟಾಗುವಾಗ ಇದ್ದಕ್ಕಿದ್ದಂತೆ ಒಂದು ದಿನ ಶಿಖರಸೂರ್ಯ ಅವಳಿಗೂ ಹೇಳದೆ ಕೇಳದೆ ಹದ್ದಿನ ಕೊಳ್ಳದಿಂದ ಮಾಯವಾದ.

ಇಲ್ಲೆಲ್ಲೋ ಹೋಗಿದ್ದಾನೆ, ಸಂಜೆ ಬಂದಾನೆಂದು ವಿದ್ಯುಲ್ಲತೆ ಕಾದಳು. ಬರಲಿಲ್ಲ. ಇಲ್ಲೇ ಅಕ್ಕಪಕ್ಕದ ಹಟ್ಟಿ, ಹಳ್ಳಿಗೆ ಹೋಗಿರಬೇಕೆಂದು ವಾರಗಳು ಕಾದಳು; ಬರಲಿಲ್ಲ. ಕನಕಪುರಿ, ತಪ್ಪಿದರೆ ಬಿಳಿಗಿರಿಗೆ ಹೋಗಿರಬಹುದೆಂದು ತಿಂಗಳು ಕಾದಳು; ಬರಲಿಲ್ಲ. ಅಷ್ಟೂ ಸ್ಥಳಗಳಿಗೆ ಭಂಟರನ್ನಟ್ಟಿ ವಿಚಾರಿಸಿದಳು; ಸಿಗಲಿಲ್ಲ. ದಯಮಾಡಿ ಹಿಂದಿರುಗಿ ಕಳಿಸೆಂದು ಬೆಟ್ಟದಯ್ಯನಲ್ಲಿ ಪ್ರಾರ್ಥಿಸುತ್ತ ಕಾದಳು. ಕೊನೆಗೆ ಬಂದಾಗ ಬರಲೆಂದು ತಪಿಸುತ್ತ ಕೂತಳು.

ಬಿಳಿಗಿರಿಯಲ್ಲಿ ಮಾತ್ರ ಆತಂಕ ತುಂಬಿತ್ತು. ಮೊದಮೊದಲು ಹದ್ದಿನ ಕೊಳ್ಳದಲ್ಲಿದ್ದಾನೆಂದು ಸುದ್ದಿ ಬಂತು. ಇಂದು ಬಂದಾನು ನಾಳೆ ಬಂದಾನೆಂದು ಸುಮ್ಮನಿದ್ದರು. ಆದರೆ ‘ಇಲ್ಲಿದ್ದಾನೆಯೇ?’ ಎಂದು ಬಿಳಿಗಿರಿಯಿಂದ ಯಾವಾಗ ಭಂಟ ಬಂದು ಕೇಳಿದನೋ ಆವಾಗ ಇವರೂ ಹತಾಶರಾಗಿ ಊಹಿಸುತ್ತ, ಚಿಂತಿಸುತ್ತ ಪ್ರಾರ್ಥಿಸುತ್ತ ಕೂತರು.

ವರ್ಷ ಕಳೆದರೂ ಯಾವಾಗ ಬರಲಿಲ್ಲವೋ ಆವಾಗ ಮಾತ್ರ ಆತ ಸತ್ತೇ ಹೋದನೆಂದು ನಂಬಿದರು. ಅಂಥವನೇ ಒಬ್ಬನನ್ನು ಅಲ್ಲಿ ಕಂಡೆವು. ಇಲ್ಲಿ ಕಂಡೆವು ಎಂದ ಯಾರ್ಯಾರದೋ ಮಾತೂ ಹುಸಿಹೋದವು. ಅಲ್ಲೆಲ್ಲೋ ಕಂಡಿದ್ದವನು ಹಿಂದಿರುಗಿ ಯಾಕೆ ಬರಲಿಲ್ಲ? ಆತ ಪಲಾಯನ ಮಾಡುವ ಹೇಡಿಯಂತೂ ಅಲ್ಲ. ತನಗಾದ ಅವಮಾನದ ಸೇಡು ತೀರಿಸಿಕೊಳ್ಳಲಿಕ್ಕೆ ಹೋಗಿದ್ದಾನೆಂದರೂ ಇಷ್ಟರಲ್ಲಿ ಬರಬೇಕಾಗಿತ್ತು. ಬರಲಿಲ್ಲವಾದ್ದರಿಂದ ಸತ್ತೇಹೋಗಿರಬೇಕೆಂದು, ಆದಿತ್ಯಪ್ರಭು ಕೊಲ್ಲಿಸಿರಬಹುದೆಂದು ಊಹಿಸಿ ಅದನ್ನೇ ಮತ್ತೆ ಮತ್ತೆ ಹೇಳಿಕೊಂಡು ನಂಬಿಯೂ ಬಿಟ್ಟರು.

ಸುದೈವದಿಂದ ಬಿಳಿಗಿರಿಯರಸ ತಂತಿ ಚಿಕ್ಕಮ್ಮಣ್ಣಿ, ಅವಳ ಮಗಳು ಮೊಮ್ಮಕ್ಕಳನ್ನು ತುಂಬ ವಿಶ್ವಾಸದಿಂದ ಕಂಡ, ಹಾಗೆ ಕಾಣುವುದಕ್ಕೆ ಕಾರಣವೂ ಇತ್ತು. ಆತನಿಗೆ ವಯಸ್ಸಾದ ಮೇಲೆ ಹುಟ್ಟಿದ ಮಗಳೊಬ್ಬಳಿದ್ದಳು. ಅವಳನ್ನು ರವಿಕೀರ್ತಿಗೆ ಕೊಟ್ಟು ಮದುವೆ ಮಾಡಬೇಕೆಂಬುದು ವೃದ್ಧ ರಾಜರಾಣಿಯರ ಆಸೆಯಾಗಿತ್ತು.

ಶಿಖರಸೂರ್ಯ ಎಲ್ಲಿಗೆ ಹೋದ? ಅವನಿಗೆ ಬೇಕಾದಷ್ಟು ನಿರಾಸೆಯಾಗಿದ್ದುದು ನಿಜ. ಅಧಿಕಾರದ ಕೈ ಬದಲಾದಾಗ ತನ್ನ ದೈವ ಖಲಾಯಿಸಬಹುದೆಂದು ಅಂದುಕೊಂಡಿದ್ದ. ಅಂದುಕೊಂಡಿದ್ದುದು ಹಿಂದುಮುಂದಾಗಿತ್ತು. ಕಷ್ಟಪಟ್ಟು ಕೂಡಿಟ್ಟ ಚಿನ್ನ ಅರಮನೆಯ ಪಾಲಾಗಿತ್ತು. ಶ್ವಾನಕೂಪಕ್ಕಿಳಿದು; ನಾಯಿಗಳು ಮೂಸದೇ ಹೆದರಿದ ಪ್ರಸಂಗವನ್ನು ತನ್ನ ಪ್ರತಾಪವಾಗಿಸಿ ಮೆರೆಯಬೇಕೆಂದರೆ ಮಹಾರಾಣಿ ನಾಯಿಗಳಿಗೆ ಛೂ ಹೇಳಿ ತನ್ನ ಮನಸ್ಸಿನಲ್ಲಿ ಅವನ ಸ್ಥಾನಮಾನವೇನೆಂದು ತಿಳಿಸಿದ್ದಳು ಮತ್ತು ಅರಮನೆಗೆ ತನ್ನ ಬಗ್ಗೆ ಈ ಅವಜ್ಞೆ ಯಾಕೆ ಬಂತೆಂದು ತಿಳಿಯದೆ, ಅರ್ಥಕೌಶಲನನ್ನ ಮಹಾರಾಣಿಯನ್ನ ಶಪಿಸಿದ್ದ. ಖಾಸಗಿಯಾಗಿ ಕಟ್ಟಿದ್ದ ಒಂದು ಕಡಮೆ ನಲವತ್ತಾಳಿನ ಎರಡು ಪಡೆಗಳನ್ನ ಕೂಡ ಬರಖಾಸ್ತ ಮಾಡಬೇಕಾಗಿ ಬಂತು. ತನ್ನ ಮಗನನ್ನ ಚಕ್ರವರ್ತಿಯನ್ನಾಗಿ ಮಾಡುವ ಆಸೆ ಕಣ್ಣೆದುರಿನಲ್ಲೇ ಮಣ್ಣುಗೂಡಿತ್ತು. ಚಂಡೀದಾಸನ ಭವಿಷ್ಯವಾಣಿ ಹುಸಿಹೋಗಿತ್ತು.

ಶಿಖರಸೂರ್ಯ ಬಹುದೊಡ್ಡ ಮಹತ್ವಾಕಾಂಕ್ಷಿ. ಹೋದಹೋದಲ್ಲಿ ಪರದೇಶಿಯಾಗಿದ್ದರೂ ಆ ಪ್ರದೇಶವನ್ನ ಭೌತಿಕವಾಗಿ ಮತ್ತು ಮಾನಸಿಕವಾಗಿ ಗೆಲುವುದಕ್ಕೆ ಹಂಬಲಿಸುತ್ತಿದ್ದ. ದಾರಿ ಎಂಥದೇ ಆಗಿರಲಿ ಒಮ್ಮೆ ಗುರಿಯ ಕಡೆಗೆ ಕಣ್ಣಿಟ್ಟರೆ ಅತ್ತಿತ್ತ ನೋಡಿದವನಲ್ಲ. ಶಿವಾಪುರದಲ್ಲಾಗಲಿ, ಕನಕಪುರಿಯಲ್ಲಾಗಲಿ ಪ್ರತಿಕೂಲ ದೈವನಾಗಿ ಸೋತವನೇ ವಿನಾ ಪ್ರಯತ್ನ ಹಾಗೂ ಸಂಕಲ್ಪದ ಕೊರತೆಯಿಂದಲ್ಲ. ಅವನಿಗೆ ನೆಮ್ಮದಿ ಸಿಕ್ಕಲೆಂದು ಹಾರೈಸೋಣ. ಅವನಿಲ್ಲವೆಂಬ ಮಾತ್ರಕ್ಕೆ ಇತಿಹಾಸ ನಿಲ್ಲುವುದಿಲ್ಲವಲ್ಲ. ಕನಕಪುರಿ, ಬಿಳಿಗಿರಿಯಲ್ಲಿ ಮುಂದುವರಿಯಿತು. ಅವನದೇ ಕುಡಿ ರವಿಕೀರ್ತಿಯ ಮೂಲಕ ಕಂಚಿಯಲ್ಲಿ ಚಿಗುರೊಡೆಯಿತು. ಇದು ಆಮೇಲೆ ಈಗ-