ಅದಾಗಿ ಒಂದು ವಾರ ಕಳೆದಿರಬೇಕು, ಚಂಡೀದಾಸನೊಂದಿಗೆ ವೈದ್ಯಶಾಲೆಯಲ್ಲಿ ಶಿಖರಸೂರ್ಯ ವಿಷವೈದ್ಯದ ಬಗ್ಗೆ ಚರ್ಚಿಸುತ್ತಿದ್ದಾಗ ಸುಕ್ರ ದೇವಾಲಯದ ಅರ್ಚಕನನ್ನು, ಅವನೊಂದಿಗೆ ಒಬ್ಬ ಬಾಲ ವಟುವನ್ನು ಕರೆದುಕೊಂಡು ಬಂದ. ಅರ್ಚಕ ಮಂತ್ರಪೂರ್ವಕ ಆಶೀರ್ವದಿಸಿದ. ಶಿಖರಸೂರ್ಯ ಪೀಠ ತೋರಿಸಿದ. ಅವನು ಕೂತ ಮೇಲೆ ಯಥೋಚಿತ ಗೌರವಾರ್ಪಣೆ ಮಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು “ಅಪ್ಪಣೆಯಾಗಲಿ” ಅಂದ. ಶಿಖರಸೂರ್ಯ ತೋರಿದ ಗೌರವದಿಂದ ಪ್ರಸನ್ನಚಿತ್ತನಾಗಿ ಅರ್ಚಕ ಆಹ್ಲಾದಕರ ಮಂದಹಾಸ ಬೀರುತ್ತ,

“ನಿಮಗೂ ನಿಮ್ಮ ಕುಟುಂಬಕ್ಕೂ ಕುಲಪತಿಗಳು ಆಶೀರ್ವಾದ ಕಳಿಸಿದ್ದಾರೆ”

-ಎಂದ. ಶಿಖರಸೂರ್ಯನೂ ಬಾಗಿ “ನಮ್ಮ ಭಾಗ್ಯ” ಅಂದ.

“ನಿಮ್ಮ ಚಿರಂಜೀವಿಯವರು ಏನಾದರೂ ಹೇಳಿದರೊ?”

-ರಾಜವೈದ್ಯನ ಮನಸ್ಸನ್ನು ಒಳಹೊಕ್ಕು ನೋಡುವಂತೆ ಜಪ್ಪಿಸಿ, ಕೇಳಿದ ಅರ್ಚಕ.

“ಇಲ್ಲವಲ್ಲ!”

“ಆಶ್ಚರ್ಯ!”

“ಏನು ವಿಷಯ?”

“ನಿಮ್ಮ ಸುಕುಮಾರ ರವಿಕೀರ್ತಿಯವರ ಅವಿನಯದ ನಡತೆಯಿಂದ ಗುರುಗಳು ಬೇಸತ್ತು, ಅನಿವಾರ್ಯವಾಗಿ ಅವರನ್ನು ವಿದ್ಯಾಪೀಠದಿಂದ ಹೊರ ಹಾಕಿದ್ದಾರೆ.”

ಅನಿರೀಕ್ಷಿತ ವಿಷಯ ಕೇಳಿ ಶಿಖರಸೂರ್ಯನಿಗೆ ಅಘಾತವಾಯ್ತು. ರವಿಕೀರ್ತಿಯಿಂದ ಈ ಬಗೆಯ ನಡೆಯನ್ನಾತ ನಿರೀಕ್ಷಿರಲಿಲ್ಲ. ನಿಜ ಹೇಳಬೇಕೆಂದರೆ ಮೊದಲು ಅರ್ಚಕನ ಮಾತನ್ನು ನಂಬಲಿಲ್ಲ. ಆದರೂ ಅರ್ಚಕನೇ ತಾನಿದ್ದಲ್ಲಿಗೇ ಬಂದು ಹೇಳಿದ್ದರಿಂದ ಆಶ್ಚರ್ಯ, ಕೋಪ ಅನುಮಾನಗಳಿಂದ.

“ಏನಯ್ಯಾ ಇದು? ರವಿಕೀರ್ತಿ ಎಲ್ಲಿ?”

-ಎಂದು ಸುಕ್ರನ ಕಡೆಗೆ ನೋಡಿದ. ಕರೆತರಲು ಸೇವಕರು ಹೋದುದನ್ನು ತಿಳಿಸುತ್ತಿರುವಲ್ಲಿ ರವಿಕೀರ್ತಿ, ಅವನ ಹಿಂದಿನಿಂದ ಬಂಡೆಯ, ಅಪರಾಧಿಗಳಂತೆ ಬಂದು ಹೊರಗೆ ನಿಂತರು. ತಾಳ್ಮೆಗೆಟ್ಟಿದ್ದ ಶಿಖರಸೂರ್ಯ ರವಿಯನ್ನ “ಒಳಗೆ ಬಾರಯ್ಯಾ” ಎಂದು ಕರೆದ. ರವಿಕೀರ್ತಿ ಒಳಗೆ ಬಂದ. ಇವರ್ಯಾರಿಗೂ ಗೊತ್ತಿಲ್ಲದಂತೆ ಗೌರಿ ಒಳಬಂದು ಮೂಲೆಯಲ್ಲಿ ಹುದುಗಿದ್ದಳು. ರಾಜವೈದ್ಯ ಕೋಪದಿಂದುರಿವ ಕಂಗಳಿಂದ ಮಗನನ್ನು ನೋಡಿದ.

ರವಿಕೀರ್ತಿ ತಂದೆಯ ಎದುರಿಗೆ ಬಂದು ಹಿಂದೆ ಕೈಕಟ್ಟಿಕೊಂಡು ಏನು ಬಂದರೂ ಎದುರಿಸಲು ಸಿದ್ಧನಾದಂತೆ ಎದೆ ಸೆಟೆಸಿ ಎದುರಿನ ಗೋಡೆ ನೋಡುತ್ತ ನಿಂತ. ಮೊಳಕಾಲಿನ ತನಕ ಸಣ್ಣ ದಡಿಯ ಕಂದುಬಣ್ಣದ ದೋತ್ರ ಉಟ್ಟಿದ್ದ. ಅದೇ ಬಣ್ಣದ ಬಟ್ಟೆಯೊಂದನ್ನು ಭುಜಗಳು ಮುಚ್ಚುವಂತೆ ಹೊದ್ದಿದ್ದ. ಭುಜಗಳ ಮೇಲಾಡುವ ಅಚ್ಚ ಕಪ್ಪು ವರ್ಣದ ಕೂದಲು ಅವನ ಒಟ್ಟಾರೆ ನಿಲುವಿಗೆ ಆಕರ್ಷಣೆ ತಂದಿತ್ತು. ಹುಬ್ಬುಗಂಟಿಕ್ಕಿ ಮಾತಾಡಲೇ ಕೂಡದೆಂಬಂತೆ ಗಟ್ಟಿಯಾಗಿ ತುಟಿಗಳನ್ನು ಬಿಗಿದುಕೊಂಡುದರಿಂದ ಮುಖ ಗಂಭೀರವಾಗಿತ್ತು. ಸದಾ ಫಳ ಫಳ ಹೊಳೆವ ಹುಡುಗನ ಮುಖ ಈ ಪರಿ ಬಿರುಸಾದದ್ದನ್ನು ತಂದೆ ಕಂಡಿರಲೇ ಇಲ್ಲ. ಈಗ ನೋಡಿದರೆ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿ ನಿಂತಿದ್ದಾನೆ! ‘ಏನೋ ತಪ್ಪು ಮಾಡಿರಬೇಕು. ಇಲ್ಲದಿದ್ದರೆ ಅರ್ಚಕರು ಇಲ್ಲಿಯವರೆಗೆ ಬರುತ್ತಿದ್ದರೆ?’ ಎಂದು ನಂಬಿ ವ್ಯಂಗ್ಯವಾಗಿ ಹೇಳಿದ:

“ಮಕ್ಕಳಾದವರು ಬೆಳೆದು ದೊಡ್ಡವರಾಗಿ ತಂದೆಗೆ ಕೀರ್ತಿ ತರುತ್ತಾರಂತೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಕೀರ್ತಿ ತಂದೆಯಲ್ಲಾ ಮಗನೇ! ಮನೆತನಕ್ಕೆ, ನನಗೆ, ನಿನ್ನ ವಿದ್ಯಾಪೀಠಕ್ಕೂ ಕೀರ್ತಿ ತಂದೆಯಲ್ಲಪ! ಅರ್ಚಕರು ಹೇಳಿದ್ದಕ್ಕೆ ಏನಾದರೂ ಹೇಳೋದಿದೆಯಾ? ಇದ್ದರೆ ಹೇಳು.”

-ಎಂದ. ಶಿಖರಸೂರ್ಯನ ವ್ಯಂಗ್ಯದ ಮಾತಿನಿಂದ ಅರ್ಚಕನು ಸಂತೋಷಗೊಂಡದ್ದು ಅವನ ಮಂದಹಾಸದಿಂದಲೇ ತಿಳಿಯುತ್ತಿತ್ತು. ಕೋಪದಿಂದ ಶಿಖರಸೂರ್ಯನ ಕಣ್ಣು ಕೆಂಪಾದುದು ಸ್ಪಷ್ಟವಿತ್ತು. ನೋಡಿ ಸಕ್ರ, ಚಂಡೀದಾಸರು ಆತಂಕಗೊಂಡರು. ಚಂಡೀದಾಸ ನಡುವೆ ಬಾಯಿ ಹಾಕಿ

“ಅದೇನೆಂದು ಮೊದಲು ಅವನಿಗೆ ಹೇಳಬೇಕು ರಾಜ್ಯವೈದ್ಯರೇ” ಅಂದ.

“ವಿದ್ಯಾಪೀಠದಿಂದ ಹೊರಗೆ ಹಾಕಿದ್ದಾದರೂ ಅವನಿಗೆ ಗೊತ್ತಿರಲೇಬೇಕಲ್ಲ?”

-ಎಂದು ಶಿಖರಸೂರ್ಯ ಚಂಡೀದಾಸನಿಗೆ ಹೇಳಿ “ಯಾಕೆ ಗೊತ್ತೇನಯ್ಯಾ?” ಅಂದ.

“ಗೊತ್ತು”

“ಯಾಕೆ ನಿನ್ನನ್ನ ಹೊರಗೆ ಹಾಕಿದರು? ಹೇಳು”

“ಅವರು ನನ್ನನ್ನ ಮತ್ತು ಬಂಡೆಯನನ್ನ ಅವಮಾನಿಸಿದರಪ್ಪ”

“ಅವರು ಅರ್ಚಕರು”

“ಅವರೂ ಮಿತಿಬಾರದಪ್ಪ”

“ಮಿತಿಮೀರುವಂಥಾದ್ದು ಏನು ಮಾಡಿದರು?”

-ಎಂದು ಗುಡುಗಿದ. ರವಿ ಸುಮ್ಮನೆ ಎದುರಿನ ಕಿಡಕಿಯ ಕಡೆಗೆ ನೋಡುತ್ತ ತಂದೆಯ ಬಿರುಸು ನೋಟವನ್ನಾಗಲಿ ಬಿರುಸು ದನಿಯನ್ನಾಗಲಿ ಗಮನಿಸಲೇ ಇಲ್ಲವೆಂಬಂತೆ ನಿಂತ.

“ಹೇಳು ಏನು ಮಿತಿಮೀರಿದರು? ಹೇಳದಿದ್ದರೆ ಅರ್ಚಕರು ಹೇಳಿದ್ದೆಲ್ಲಾ ನಿಜವಾಗುತ್ತದೆ. ನೀನು ಎದುರಿಸಬೇಕಾದ ಶಿಕ್ಷೆಯೂ ಎರಡು ಪಟ್ಟಾಗುತ್ತದೆ. ನೋಡಿಕೊ”

“ಸ್ವಾಭಿಮಾನ ಇದ್ದವರು ಸಹಿಸಲಾರದ್ದನ್ನ ಅಂದರಪ್ಪ”

ತಕ್ಷಣ ಪ್ರತಿಭಟಿಸಲೆಂಬಂತೆ ಅರ್ಚಕರು ಎದ್ದು ಪುನಃ ಕೂತು ಹೇಳಿದರು;

“ನಾವೇನೂ ಅನ್ನಲಿಲ್ಲವಪ್ಪ! ಬೇಕಾದರೆ ಇಕೊ ಇವನನ್ನೇ ಕೇಳಿರಿ. ಹೇಳಿರಿ ವಟುಗಳೇ…. ಅಲ್ಲಿ ಏನೇನು ನಡೆಯಿತು?”

ಎಲ್ಲರೂ ಆ ವಟುವಿನ ಕಡೆಗೆ ನೋಡತೊಡಗಿದರು. ಕೂತಿದ್ದ ವಟು ಎದ್ದುನಿಂತು ಎರಡೂ ಕೈ ಕಟ್ಟಿಕೊಂಡು,

“ಇವನು ನಮಗೆ ಅವಾಚ್ಯ ಶಬ್ದಗಳಿಂದ ಬೈದನು. ಅಲ್ಲದೆ ಕೊಟ್ಟ ಪ್ರಸಾದವನ್ನು ಮುಖದ ಮೇಲೆ ಎರಚಿದನು ಮತ್ತು ನಮ್ಮ ಕೆನ್ನೆಗೆ ಹೊಡೆದು ಹೋದನು.”

-ಎಂದು ಹೇಳಿ ಮೆಚ್ಚುಗೆಗಾಗಿ ಅರ್ಚಕನ ಕಡೆಗೆ ಆಸೆಗಣ್ಣಿನಿಂದ ನೋಡಿ “ಸರಿಯೆ ಗುರುಗಳೇ” ಎಂದು ಕೇಳಿದ. ಸುಕ್ರ, ಚಂಡೀದಾಸರಿಬ್ಬರೂ ಪರಸ್ಪರರನ್ನು ನೋಡಿಕೊಂಡು ಅರ್ಚಕನನ್ನು ನೋಡಿದರು. ಆತ ಮೆಚ್ಚುಗೆಯಿಂದ ತನ್ನ ಶಿಷ್ಯನನ್ನು ನೋಡಿದ. ವಟು ಹೇಳಿದ್ದು ಕೊಂಚ ಕೃತಕವೆನಿಸಿದರೂ ಭಲೆ ಎಂಬಂತೆ ಬಾಲಕನ ಬೆನ್ನು ತಟ್ಟಿ ಪಕ್ಕದಲ್ಲಿ ಕುಳ್ಳಿರಿಸಿಕೊಂಡ ಚಂಡೀದಾಸ “ಇದು ಉರು ಹೊಡೆದ ಪಾಠದಂತಿದೆ, ಅಲ್ಲವೊ?” ಎಂದು ಹೇಳುವಷ್ಟರಲ್ಲಾಗಲೇ ಶಿಖರಸೂರ್ಯನ ಕಿವಿಯ ಕೂದಲು ನಿಮಿರಿ ಹಸ್ತಗಳು ಬಿರುಸಾಗಿದ್ದವು. ಪೀಠದಿಂದೆದ್ದು ನೇರ ರವಿಕೀರ್ತಿಯ ಮುಂದೆ ಹೋಗಿ, ಮುಖಕ್ಕೆ ಮುಖ ಕೊಟ್ಟು ನಿಂತು,

“ವಟು ಹೇಳಿದ್ದು ಸತ್ಯವೊ?” ಅಂದ ಒರಟು ದನಿಯಲ್ಲಿ.’

“ಹೌದು” ಅಂದ ರವಿ.

ಶಿಖರಸೂರ್ಯ ಕೊಂಚ ಹಿಂದೆ ಸರಿದು ಫಳಾರನೆ ರವಿಯ ಎಡ ಕೆನ್ನೆಗೆ ಜೋರಿನಿಂದ ಏಟು ಹಾಕಿದ. ಏಟಿನ ಸಪ್ಪಳಕ್ಕೆ ಇಡೀ ಮೊಗಸಾಲೆ ಸ್ತಬ್ಧವಾಗಿ ನಿಶ್ಚಲವಾಯಿತು. ರವಿ ಅಲುಗಲಿಲ್ಲ, ಕುಸಿಯಲಿಲ್ಲ. ಹಿಂದೆ ಕಟ್ಟಿದ ಕೈ ಬಿಚ್ಚಲಿಲ್ಲ. ಹೊಡೆದ ರಭಸಕ್ಕೆ ಮುಖ ಓರೆಯಾದುದು ನಿಜ. ಆಮೇಲೆ ಪುನಃ ತನ್ನ ಮೊದಲ ನಿಲುವಿನಲ್ಲೇ, ಯಾರೂ ತನ್ನನ್ನು ಹೊಡೆಯಲೇ ಇಲ್ಲವೆಂಬಂತೆ ಸ್ಥಿರವಾಗಿ ನಿಂತುಕೊಂಡ. ಮುಖದಲ್ಲಿ ಕೂಡ ಏನೂ ಬದಲಾವಣೆ ಕಾಣಲಿಲ್ಲ – ಎಡಕೆನ್ನೆಯ ಮೇಲೆ ಶಿಖರಸೂರ್ಯನ ನಾಲ್ಕು ಬೆರಳು ಮೂಡಿದ್ದನ್ನು ಬಿಟ್ಟರೆ.

ಇಲ್ಲಿಯತನಕ ಮೂಲೆಯಲ್ಲಿ ಮುದುಡಿ ಕೂತಿದ್ದ ಗೌರಿ “ಅಣ್ಣಾ” ಎಂದು ಅಳುತ್ತ ಓಡಿಬಂದು ರವಿಯನ್ನು ತಬ್ಬಿಕೊಂಡು ತಂದೆಯನ್ನು ಎದುರಿಸುವಂತೆ ಅಣ್ಣನನ್ನು ಹಿಂದಿಕ್ಕಿ ನಿಂತುಕೊಂಡು

“ಅಲ್ಲಿದ್ದವನು ವಟು ಒಬ್ಬನೇ ಅಲ್ಲ, ಬಂಡೆಯನೂ ಇದ್ದ. ಬೇಕಾದರೆ ಅವನನ್ನೇ ಕೇಳಿ.”

-ಎಂದಳು. ರವಿಕೀರ್ತಿ ತಂಗಿಯ ಕಣ್ಣೀರೊರೆಸುತ್ತ,

“ಮದ್ದು, ಮನೆಗೆ ನಡೆ, ನೀನಿಲ್ಲಿಗೆ ಬರಬಾರದು.” ಎಂದ.

ಶಿಖರಸೂರ್ಯ ಕಣ್ಣು ಕೆಂಪಗೆ ಮಾಡಿಕೊಂಡು ಕೇಳಿದ

“ಮದ್ದು, ಯಾರು ನಿನಗೆ ಇಲ್ಲಿಗೆ ಬರಹೇಳಿದ್ದು?”

“ನಾನೇ ಬಂದೆ”. ಅಂದಳು.

“ಈಗ ಮನೆಗೆ ನಡೆ”

-ಎಂದು ಗುಡುಗಿದ. ಗೌರಿ ಹೆದರಿ ಜೋರಾಗಿ

“ದೇವಸ್ಥಾನದಲ್ಲಿದ್ದವರು ಈ ವಟು ಮಾತ್ರ; ಅರ್ಚಕರು ಇರಲಿಲ್ಲ.”

-ಎಂದು ಹೇಳಿ ಜೋರಾಗಿ ಅಳುತ್ತ ಅಲ್ಲಿಂದ ಓಡಿಹೋದಳು. ಚಂಡೀದಾಸ ಸುಮ್ಮನಿರಲಿಲ್ಲ.

“ಗೌರಿ ಹೇಳಿದ್ದು ಅಲ್ಲಿದ್ದವನು ವಟು ಮಾತ್ರ. ಅರ್ಚಕರಲ್ಲ. ಹೌದೊ?”

“ಯಾರು ಪೂಜೆ ಮಾಡುವರೋ ಅವರೇ ಅರ್ಚಕರು. ತಮಗದು ತಿಳಿದಿರಬೇಕಲ್ಲ, ವೈದ್ಯರೆ?”

-ಎಂದು ಅರ್ಚಕ ಚಂಡೀದಾಸನ ವಾದವನ್ನ ಕತ್ತರಿಸಿದ, ಚಂಡೀದಾಸ ಬಿಡಲಿಲ್ಲ,

“ಪೂಜೆ ಮಾಡುವುದಕ್ಕೆ ಸಂಸ್ಕಾರದ ಅಗತ್ಯ ಇಲ್ಲವೋ?”

“ಸಂಸ್ಕಾರ ಇಲ್ಲದವನನ್ನು ಗುರುಗಳು ಪೂಜೆಗೆ ನಿಯಮಿಸುವುದುಂಟೆ ವೈದ್ಯರೇ”

-ಎಂದು ಪ್ರಶ್ನಿಸಿ ಅವರ ವಾದಕ್ಕೆ ಕೊನೆ ಮಾಡಲು ನೋಡಿದ.

“ಯಾಕೆ ಇದೆಲ್ಲ ನಡೆಯಿತು ಅಂತ ತಿಳಿಯುವುದಕ್ಕಾದರೂ ಬಂಡೆಯನ ಸಾಕ್ಷಿ ಕೇಳಬಹುದಲ್ಲ?”

ಶಿಖರಸೂರ್ಯ ಕೇಳಿದ:

“ನಾವು ಹೆಸರಿಸಲಾಗದ ಆ ಶೂದ್ರ ಅಲ್ಲಿದ್ದುದು ನಿಜ, ಆದರೆ ಜನ್ಮಶ್ರೇಷ್ಠರ ವಿರುದ್ಧ ಶೂದ್ರ ಸಾಕ್ಷಿ ನುಡಿಯಬಾರದಲ್ಲ!”

“ಸಾಕ್ಷಿ ಕೇಳುತ್ತಿಲ್ಲ. ಅರ್ಚಕರೇ, ನಡೆದ ಸಂಗತಿ ಏನೆಂದು ಕೇಳುತ್ತಿದ್ದೇವೆ.”

“ನಡೆದ ಸಂಗತಿಯನ್ನ ನಾವು ಹೇಳಿಯಾಯಿತಲ್ಲ. ನಮ್ಮ ಮಾತಿನಲ್ಲಿ ನಂಬಿಕೆ ಇಲ್ಲವೆಂದಾದರೆ….”

“ನಂಬಿಕೆಯ ಪ್ರಶ್ನೆಯಲ್ಲ ಅರ್ಚಕರೇ, ಇದು ನ್ಯಾಯದ ಪ್ರಶ್ನೆ. ಹೀಗೆ ನಡೆಯಿತೆಂದು ಬಾಲಕ ಸಾಕ್ಷಿ ನುಡಿಯಬಲ್ಲನಾದರೆ ಬಂಡೆಯನೂ ಹೇಳಬಹುದಲ್ಲ? ಅವನಿಗೂ ಕಣ್ಣಿವೆ.”

“ಅನುಮಾನ ಬಂದಲ್ಲಿ ಧರ್ಮಸೂಕ್ಷ್ಮವನ್ನು ಹೇಳಬೇಕಾದ್ದು ನಮ್ಮ ಕರ್ತವ್ಯವಾದ್ದರಿಂದ ಹೇಳಿದ್ದೇವೆ.”

-ಎಂದು ಹೇಳಿ ಎದ್ದು ನಿಂತಾಗ ಶಿಖರಸೂರ್ಯ, ಇದಕ್ಕೆಲ್ಲ ಒಂದು ಕೊನೆ ಕೊಡಬೇಕೆಂದು

“ಆಯ್ತು ಅರ್ಚಕರೇ, ನಾವು ಅವರನ್ನು ವಿಚಾರಿಸಿಕೊಳ್ತೇವೆ. ನೀವು ಹೊರಡಿ.”- ಅಂದ.

“ಶಿಕ್ಷೆ ಏನೆಂದು ತಿಳಿದು ಬರಲು ಗುರುಗಳು ಹೇಳಿದರು.”

“ನೀವೇ ಬಹಿಷ್ಕಾರ ಹಾಕಿಬಿಟ್ಟಿದ್ದೀರಲ್ಲ?”

“ಅದು ತಾತ್ಪೂರ್ತಿಕ. ಶಿಕ್ಷೆ ಆಗಬೇಕಾದ್ದು ನಿಮ್ಮ ಚಿರಂಜೀವಿಗಲ್ಲ, ಈ ಶೂದ್ರನಿಗೆ! ಯಾಕೆಂದರೆ ಇಷ್ಟೆಲ್ಲಾ ರದ್ಧಾಂತಕ್ಕೆ ಪ್ರಚೋದನೆ ಕೊಟ್ಟವನು ಇವನೇ! ಈ ಶೂದ್ರನಿಗೆ ಶಿಕ್ಷೆ ಆಗುವತನಕ ಮಾತ್ರ ನಿಮ್ಮ ಚಿರಂಜೀವಿಗೆ ಶಿಕ್ಷೆ. ಇವನಿಗೆ ಕೊಟ್ಟ ಕೂಡಲೇ ನಿಮ್ಮ ಚಿರಂಜೀವಿಯನ್ನ ಹಿಂತೆಗೆದುಕೊಳ್ಳುತ್ತೇನೆ.”

ಚಂಡೀದಾಸ, ಸುಕ್ರ ಇಬ್ಬರೂ ದೃಷ್ಟಿಗಳ ವಿನಿಮಯ ಮಾಡಿಕೊಂಡು ರಾಜವೈದ್ಯನ ಕಡೆಗೆ ನೋಡಿದರು. ಶಿಖರಸೂರ್ಯ ಮತ್ತೆ ಅರ್ಚಕನನ್ನೇ ಕೇಳಿದ

“ಶಿಕ್ಷೆ ಏನಾಗಬೇಕೆಂದು ಗುರುಗಳು ಅಪ್ಪಣೆ ಕೊಡಲಿಲ್ಲವೆ?”

“ಧರ್ಮಗ್ರಂಥ ಮತ್ತು ನ್ಯಾಯಶಾಸ್ತ್ರಗಳನ್ನು ಪರಿಶೀಲಿಸಿ ಹೇಳಿದ್ದಾರೆ: ಶೂದ್ರನಿಗೆ ಇಂಥ ಅಪರಾಧಕ್ಕೆ ಮರಣ ದಂಡನೆಯೇ ಸರಿಯಾದ ಶಿಕ್ಷೆ!”

ಬಂಡೆಯ ನಿಂತಲ್ಲೇ ಥರಥರ ನಡುಗಿದ! ಸುಕ್ರ ಬಾಯ್ದೆರೆದು ಒಮ್ಮೆ ರಾಜವೈದ್ಯನನ್ನ, ಇನ್ನೊಮ್ಮೆ ಅರ್ಚಕನನ್ನ ನೋಡುತ್ತ ಬಾಯಿಗೆ ಮಾತು ಬಾರದೆ ತಬ್ಬಿಬ್ಬಾಗಿ ನಿಂತುಬಿಟ್ಟ. ಶಿಖರಸೂರ್ಯ ಒತ್ತಾಯದ ಅನುಕಂಪವನ್ನು ತಂದುಕೊಂಡು ಹೇಳಿದ:

“ಅರ್ಚಕರೇ ರಾಜ್ಯದ ಕಾನೂನುಗಳನ್ನು ಪರಿಶೀಲಿಸಿ ನಾವೇ ಶಿಕ್ಷೆ ಕೊಡುತ್ತೇವೆ ಅಂತ ಗುರುಗಳಿಗೆ ಹೇಳಿ, ನೀವಿನ್ನು ಹೊರಡಬಹುದು.”

“ಆಯ್ತು.”

-ಎಂದು ಅರ್ಚಕರು ಹೊರಡುತ್ತ ಆಶೀರ್ವಾದದ ಮಂತ್ರೋಚ್ಛಾರಣೆಗಾಗಿ ಬಾಯಿ ತೆರೆಯಲಿದ್ದಾಗ ಶಿಖರಸೂರ್ಯ ತಕ್ಷಣ ಕೈ ಮುಗಿದು ಬಾಗಿಲು ತೋರಿಸಿದ. ಅರ್ಚಕ ಬಾಯಿ ಮುಚ್ಚಿಕೊಂಡು ಹೋದ. ಹಿಂದಿನಿಂದ ವಟುವೂ ಹೋದ.

ಈಗ ಚಂಡೀದಾಸ ಸಿಡಿದ,-

“ಸಾಕ್ಷಿ ಬೇಡ ಸ್ವಾಮಿ, ಏನು ನಡೆಯಿತಂದಾದರೂ ಗೊತ್ತಾಗಬೇಕಲ್ಲವೊ?”

ರವಿಕೀರ್ತಿಯನ್ನ ವಿದ್ಯಾಪೀಠದಿಂದ ಹೊರಗೆ ಹಾಕಿದ್ದು, ಅರ್ಚಕನ ಅಸಂಗತ ಬೇಡಿಕೆ ಇವೆಲ್ಲವುಗಳಿಂದ ಶಿಖರಸೂರ್ಯನಿಗೆ ಬೇಸರವಾಗಿ ಬಂಡೆಯನ ವಿವರ ಕೇಳುವುದರಲ್ಲಿ ಆಸಕ್ತಿ ಇರಲಿಲ್ಲ. ಚಂಡೀದಾಸ ಮತ್ತೆ ಕೇಳಿದ;

“ಹೇಳು ಬಂಡೆಯ ಅಲ್ಲಿ ನಡೆದದ್ದೇನು?”

ಕೊನೆಗೂ ಬಂಡೆಯ ಬಾಯಿ ಬಿಟ್ಟ,

“ಚಿಕೋಡೇರ್ಜೊತೆ ನಾನೂ ದೇವಸ್ಥಾನಕ್ಕೋಗಿದ್ದೆ. ಪೂಜಾರಪ್ಪ ನನ್ನ ಒರಗೇ ನಿಲ್ಲಿಸಿದ. ಅಂಗಾದ್ರೆ ನಾನೂ ಒಳಾಕೆ ಬರಾಕಿಲ್ಲ ಅಂತ ಚಿಕ್ಕೊಡೇರೂ ಒರಗೇ ನಿಂತಕಂಡ್ರು. ನೀವೂ ಒಳಕ ಬನ್ನಿ ಅಂದರೂ ಓಗನಿಲ್ಲ. ತೀರ್ತಪ್ರಸಾದ ಇಲ್ಲೇ ಇಬ್ರಿಗೂ ಕೊಡಿ ಅಂದ್ರು. ಅವರಿಗೆ ಕೊಟ್ಟು ನನಕ್ಕೊಡಲಿಲ್ಲ, ನನಗೂ ಬ್ಯಾಡ ಅಂದು ಪ್ರಸಾದವ ಕೆಳಾಕ ಚೆಲ್ಲಿ ಬಿಟ್ಟರು. ಅವರಿಗೆ ಕ್ವಾಪ ಬಂತು. ‘ಸೂಳೇಮಗ್ನೇ ಪ್ರಸಾದ ಕೆಳಗಾಕ್ತೀಯ?’ ಅಂತ ಬೈದು ಪ್ರಸಾದಾನ್ನ ರಪ್ಪಂತ ಚಿಕ್ಕೋಡರ ಮಕ್ಕಕ್ಕ ರಾಚಿ ಒಳೀಕೊಂಟರು. ಇವರು ಅವಯ್ಯನ್ನ ಇಡದೆಳೆದು ಒಂದೇಟು ಕೊಟ್ಟರು, ಇಷ್ಟೇಯ ನಡೆದದ್ದು.”

“ಅಂದರೆ ನಿಮಗೆ ತೀರ್ಥಕೊಟ್ಟೋರು ದೊಡ್ಡ ಅರ್ಚಕರೋ? ಚಿಕ್ಕವರೋ?”

“ಚಿಕ್ಕವರು, ಆ ಹುಡುಗ ಬಂದದ್ನಲ್ಲ, ಅವನೇ, ದೊಡ್ಡೋರಿರಲಿಲ್ಲ.”

ಮೂವರಿಗೂ ಆಘಾತವಾಯ್ತು, ಚಂಡೀದಾಸ ಕೇಳಿದ:

“ರವಿಕೀರ್ತಿ ಇದು ನಿಜವೊ?”

“ಹೌದು”

ಚಂಡೀದಾಸನಿಗೆ ಕೋಪ ಬಂತು:

“ನೀನೇನು ಮನುಷ್ಯನೋ? ಪಶುವೋ? ವಟು ಹೇಳಿದ್ದಕ್ಕೂ ಹೌದು ಅಂದೆ. ಈಗ ಬಂಡೆಯ ಹೇಳಿದ್ದಕ್ಕೂ ಹೌದು ಅಂತೀಯ! ನಿಜ ಯಾವುದು?”

“ಅಲ್ಲಿದ್ದವನು ಆ ವಟು ಮಾತ್ರ. ವಟುವಿನಿಂದಲೇ ನಮಗೆ ಮಂಗಳಾರತಿ ಆದದ್ದು. ಅಪ್ಪನಿಗೆ ತಾಳ್ಮೆ ಇಲ್ಲ. ನಿನ್ನ ಕುಲಪತಿಗಳೆದುರಿಗೆ ನಾನು ಇದನ್ನೇ ಹೇಳಿದೆ. “ದೊಡ್ಡವನೋ ಚಿಕ್ಕವನೋ – ಅರ್ಚಕ ಅರ್ಚಕನೇ! ಅಂತ ಸಮರ್ಥಿಸಿಕೊಂಡರು. ದೊಡ್ಡ ಅರ್ಚಕನನ್ನ ಕಳಿಸಿದ್ದೂ ಅವರೇ”

ಈಗ ಮೂವರ ಬಾಯಿಂದಲೂ ಮಾತು ಬರಲಿಲ್ಲ. ಚಂಡೀದಾಸ ತನಗೇ ತಾನೇ ಮಾತಾಡಿಕೊಂಡ.

“ನಾನೂ ಮೂರು ವರ್ಷ ಶಿವಪಾದನ ಆಶ್ರಮದಲ್ಲಿದ್ದೆನಪ್ಪ. ಒಂದು ದಿನವೂ ಗುರು ನನ್ನ ಕುಲ ಕೇಳಲಿಲ್ಲ. ಇಲ್ಲಿ ನೋಡಿದರೆ ಶೂದ್ರನಿಗೆ ಸಾಕ್ಷಿ ನುಡಿವ ಹಕ್ಕಿಲ್ಲ. ಸಾಲದ್ದಕ್ಕೆ ಸಣ್ಣ ಬಾಲಕ ಆ ವಟು ಸಹಜವಾಗೇ ಮಾಡಿದ ತಪ್ಪಿಗೆ ಶೂದ್ರ ತಲೆ ಒಪ್ಪಿಸಬೇಕು! ಇದ್ಯಾವ ಸೀಮೆಯಲ್ಲಿದ್ದೇನೆ ನಾನು!”

ವಿದ್ಯಾಪೀಠದ ಅಸಂಗತ ನಿಲುವು ಶಿಖರಸೂರ್ಯನಿಗೆ ಆಮೇಲೆ ಅರ್ಥವಾಯ್ತು. ‘ಬಂಡೆಯನಿಗೆ ಮರಣದಂಡನೆ ಕೊಡಬೇಕು; ತಪ್ಪಿದರೆ ರವಿಕೀರ್ತಿಗೆ ಶಿಕ್ಷಣವಿಲ್ಲ’ ಎನ್ನುವುದನ್ನ ವಿದ್ಯಾಪೀಠ ತಿಳಿಸಿತ್ತು. ಆ ಸೀಮೆಯಲ್ಲಿದ್ದ ಅದೊಂದು ವಿದ್ಯಾಪೀಠವೇ ಹೀಗಾದರೆ ಹ್ಯಾಗೆಂದು ಚಂಡೀದಾಸನಿಗೆ ಹೇಳಿದಾಗ-

“ನಿನ್ನ ಮುಂದೆ ಮೂರು ಆಯ್ಕೆಗಳಿದ್ದಾವೆ. ನಿನ್ನ ಕುಮಾರನನ್ನ ಶಿವಪಾದನ ಬೆಟ್ಟದಲ್ಲಾದರೂ ಇಡು. ಬೆಟ್ಟ ಏನೆಂದು ನಿನಗೇ ಗೊತ್ತಿದೆ. ಕಂಚೀಪಟ್ಟಣದ ಪುರುಷೋತ್ತಮನ ಆಶ್ರಮದಲ್ಲಾದರೂ ಇಡು, ಅಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನ ಶಾಸ್ತ್ರೀಯಪದ್ಧತಿಯಲ್ಲಿ ಕಲಿಸಿ ಕೊಡೋದುಂಟು. ಅದೂ ಬೇಡವೆಂದರೆ ನಿನ್ನ ಕನಕಪುರಿಯ ನರಕದಲ್ಲಾದರೂ ಇಡು.”

ಎಂದು ಚಂಡೀದಾಸ ಹೇಳಿದ. ಶಿಖರಸೂರ್ಯ ಯೋಚನೆ ಮಾಡಲೇಬೇಕಾಯಿತು.

ಆಶ್ಚರ್ಯವೆಂದರೆ ಚಂಡೀದಾಸ ತನ್ನ ಹವ್ಯಾಸದಂತೆ ಈ ಸಲ ಊರು ಬಿಡಲೇ ಇಲ್ಲ, ಒಂದು ತಿಂಗಳಾದರೂ ಕನಕಪುರಿಯಲ್ಲೇ ಇದ್ದ. ಈಗೀಗ ಶಿಖರಸೂರ್ಯನಿಗೆ ಹೆಚ್ಚು ಆಪ್ತನಾದ. ಕಾರಣ ಹೀಗಿರಬಹುದು: ಧನಪಾಲ ಪ್ರಧಾನಿಯಾದೊಡನೆ ಶಿಖರಸೂರ್ಯನ ಬದಲು ಅವನೇ ರಾಜವೈದ್ಯನಾಗೆಂದು ಹೇಳಿದ್ದ. ಅದನ್ನು ಚಂಡೀದಾಸ ಸ್ಪಷ್ಟವಾಗಿ ನಿರಾಕರಿಸಿದ್ದ. ಅಲ್ಲದೆ ವೈದ್ಯದಲ್ಲಿ ಶಿಖರಸೂರ್ಯನ ಮುಂದೆ ನಾನಲ್ಲ ಎಂದೂ ಹೇಳಿದ್ದ. ಇದು ಗೊತ್ತಾಗಿ ಆತ ಆಪ್ತನಾಗಿರಬಹುದು.

ಆದರೆ ಶಿಖರಸೂರ್ಯ ಪಾಪರಾಗಿದ್ದ, ಮೊದಲಿದ್ದ ಅಧಿಕಾರ ಕೈ ತಪ್ಪಿ ಹೋಗಿತ್ತು. ಕೈಲಿದ್ದ ಚಿನ್ನವನ್ನ ಕಳೆದುಕೊಂಡಿದ್ದ. ಧನಪಾಲನಿಗೂ ಇವನಿಗೂ ಅಷ್ಟಕಷ್ಟೆ. ಸುಕ್ರನ ಪಡೆಗಳಿಗೆ ಸಂಬಳ ಕೊಡಲಾರದೆ ಬಂಟರನ್ನು ಮನೆಗೆ ಕಳಿಸಲಾಗಿತ್ತು.

ಇತ್ತ ಕನಕಪುರಿಯ ಸ್ಥಿತಿಯಾದರೂ ಸರಿಯಿತ್ತೆ? ಹೊಸರಾಜ, ಹೊಸ ಪ್ರಧಾನಿ ಬಂದು ಚಿನ್ನದ ದಿನಗಳು ಅಸ್ತಂಗತವಾದಂತೆ ಕನಕಪುರಿ ಕಳೆಗುಂದಿತ್ತು. ಇಬ್ಬರು ವಿನಾ ಮಾಂಡಳಿಕರೆಲ್ಲ ಉದುರಿ ಹೋಗಿ ಸ್ವತಂತ್ರರಾಗಿದ್ದರು. ಇನ್ನು ಕೆಲವರು ನಿಷ್ಠೆ ಬದಲಿಸಿ ನೆರೆರಾಜರ ಮಾಂಡಳಿಕ ಮನ್ನೆಯರಾಗಿದ್ದರು. ಸರೀಕರಾಜರ ಮೇಲೆ ಯಕ್ಕಶ್ಚಿತ್‌ಪ್ರಭಾವವೂ ಉಳಿದಿರಲಿಲ್ಲ. ತೆರಿಗೆ ಕೇಳಿದರೆ ಸ್ವಯಂ ಕನಕಪುರಿಯ ಶೆಟ್ಟಿ ಸಾವ್ಕಾರರೇ ಯಾವ ಪುರುಷಾರ್ಥಕ್ಕೆ ಕೊಡಬೇಕೆಂದು ಟೀಕಿಸಿದ್ದರು. ಸಣ್ಣಪುಟ್ಟ ಲೇನಾ ದೇನಾ ವ್ಯವಹಾರಗಳು ಆಯವ್ಯಯಗಳು, ಲಾಭ ಲುಕ್ಸಾನುಗಳು, ಜಾತಿ ವರ್ಗಗಳ ಬೆರಕೆಗಳು, ಸಣ್ಣ ಚಾಡಿಗಳು, ನಾಚಿಗೆ ಬರಿಸುವ ಲೈಂಗಿಕ ಕಲೆಗಳು ಮತ್ತು ವ್ಯವಹಾರಗಳು-ಇತ್ಯಾದಿಗಳಿಂದ ರಾಜಧಾನಿ ಗುಸುಗುಸು ಅಂತಿತ್ತೇ ಹೊರತು ದೊಡ್ಡ ಸುದ್ದಿಯ ಯುದ್ಧ ಕದನಗಳ ಘಟನೆಗಳೊಂದೂ ನಡೆಯಲಿಲ್ಲ. ಜನ ಹಿಂದಿನ ಕಾಲದ ದಿನಮಾನಗಳನ್ನು ಅಂದರೆ ಅರ್ಥಕೌಶಲ ಮತ್ತು ಗುಣಾಧಿಕ್ಯ ಮಹಾರಾಜರ ಕಾಲವನ್ನು ದೊಡ್ಡದು ಮಾಡಿ ಮಾತಾಡುತ್ತಿದ್ದರು.

ಇದ್ದ ಒಬ್ಬಿಬ್ಬರು ಅವಿನೀತ ಮಾಂಡಳಿಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದರೂ ವರ್ತಕರು ಒಪ್ಪಲಿಲ್ಲ. ಹೇಳಿದರು,

“ಯುದ್ಧಕ್ಕೆ ಹಣ ಬೇಕು, ಹಣ ಕೊಡೋರು ವರ್ತಕರು. ವ್ಯವಹಾರದಲ್ಲಿ ಲಾಭದ ಕಡೆಗೆ ಗಮನ ಇರೋಹಾಗೆ ಇಲ್ಲೂ ಇರಬೇಕಪ್ಪ. ಲಾಭ ಇದ್ದರೆ ಹಣ ಕೊಡೋಣ, ಇಲ್ಲವ? ಇದೊಂದು ಕೆಟ್ಟ ವ್ಯವಹಾರ, ಅಷ್ಟೆ!” ಎಂದು ಹೇಳಿಬಿಟ್ಟರು. ಕೆಲವರಂತೂ ಆಡಳಿತ ಮಂಡಳಿಯ ಸಭೆಯಲ್ಲೇ, ಆದಿತ್ಯಪ್ರಭ ಮಹಾರಾಜನ ಎದುರಿನಲ್ಲೇ “ಯುದ್ಧ ಮಾಡಲು, ಬಿಡಲು ಹೇಳಬೇಕಾದವರು ನಾವು, ವರ್ತಕರು. ನಾವು ಹೇಳಬೇಕಾದರೂ ನಮಗೆ ಜವಾಬ್ದಾರಿ ಇವೆ. ಒಂದು ದೇಶ ಯುದ್ಧ ತಡೆದುಕೊಳ್ಳಬೇಕಾದರೆ ಸಮೃದ್ಧಿ ಬೇಕು. ಸಮೃದ್ಧಿ ಇದ್ದರೇ ಬುದ್ಧಿಜೀವಿಗಳ ಬುದ್ದಿ ಕೆಲಸ ಮಾಡೋದು. ಎರಡೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿ ಪ್ರಜೆಗಳಿರಬೇಕಾದರೆ ಅಂಥವರಿಂದ ಯುದ್ಧ ತಡೆದುಕೊಳ್ಳಲಿಕ್ಕೆ ಆದೀತೆ?”

ಆದಿತ್ಯಪ್ರಭ ತನ್ನನ್ನು ನಂಬದೆ ಧನಪಾಲನನ್ನು ನಂಬಿದ್ದು ಕೂಡ ಒಳ್ಳೆಯ ಲಕ್ಷಣವೆ ಅಂದುಕೊಂಡ ಶಿಖರಸೂರ್ಯ. ಸನ್ನಿವೇಶ ಈಗ ತಾನು ಬಯಸಿದಂತೆಯೇ ಮಾಗುತ್ತಿರುವ ಎಲ್ಲ ಲಕ್ಷಣಗಳು ಕಂಡು ಬಂದವು. ತನ್ನ ಭವಿಷ್ಯ ಉಜ್ವಲವಾಗಬೇಕಾದರೆ ಚಂಡೀದಾಸನ ಸಹಾಯ ಬೇಕೇಬೇಕೆಂಬ ತೀರ್ಮಾನಕ್ಕೆ ಬಂದ. ಚಂಡೀದಾಸನನ್ನು ಈಗ ಹೆಚ್ಚಿನ ಆದರದಿಂದ ಕಾಣತೊಡಗಿದ.

ಕಂಚೀ ಪಟ್ಟಣದ ಪುರುಷೋತ್ತಮನ ಆಶ್ರಯದಲ್ಲಿ ರವಿಕೀರ್ತಿಯ ಅಧ್ಯಯನವೆಂದು, ಜೊತೆಗೆ ಬೊಂತೆಯನನ್ನೂ ಜೋಡಿ ಮಾಡಿ ಇಡುವುದೆಂದು ಶಿಖರಸೂರ್ಯ ತೀರ್ಮಾನಿಸಿದ. ಸ್ವಯಂ ತಾನೇ ಮಗನನ್ನು ಬಿಟ್ಟು ಬರಲು, ಜೊತೆಗೆ ಚಂಡೀದಾಸನನ್ನೂ ಕರೆದುಕೊಂಡು ಹೋದ.

ಪುರುಷೋತ್ತಮನನ್ನು ಒಪ್ಪಿಸುವುದು ಕಷ್ಟವಾಗಲಿಲ್ಲ. ಹೋಗುತ್ತ ಬರುತ್ತ ಎಂಟು ದಿನಗಳ ಕಾಲ ಕುದುರೆಗಾಡಿಯಲ್ಲಿ ಚಂಡೀದಾಸ ಮತ್ತು ಶಿಖರಸೂರ್ಯ ಜೊತೆ ಇದ್ದರಲ್ಲ, ದಾರಿಯಲ್ಲಿ ಅತಿ ಎಂಬಷ್ಟು ಚಂಡೀದಾಸನನ್ನು ಆದರಿಸಿ, ಅತೀ ಎಂಬಷ್ಟು ಅವನ ಅಹಂಕಾರವನ್ನ ಕೆರಳಿಸಿ ಹೊಗಳಿ ತೃಪ್ತಿ ಮಾಡಿದ. ಬರುವಾಗ ಕನಕಪುರಿ ತಲುಪುವ ಮುನ್ನ ಕೇಳಿದ:

“ನೀನು ನನಗೊಂದು ಉಪಕಾರ ಮಾಡಬಲ್ಲೆಯಾ?”

“ಮಾಡಬಲ್ಲೆ, ಆದರೆ ಆ ಉಪಕಾರದಿಂದ ನೀನೇನು ಪ್ರಯೋಜನ ಪಡೆಯುತ್ತೀ ಅನ್ನುವುದನ್ನು ಮೊದಲು ಹೇಳು,”

ಶಿಖರಸೂರ್ಯನಿಗೆ ಆಶ್ಚರ್ಯವಾಯಿತು ಆದರೂ ಪರೀಕ್ಷಿಸಬೇಕೆಂದು

“ಉಪಕಾರ ಏನೆಂದು ನಾನು ಹೇಳಲಿಲ್ಲ, ಆದರೂ ಗೊತ್ತಾಯಿತೆ?”

“ಹೌದು”

“ಏನು ಹೇಳು ನೋಡೋಣ.”

“ನಿನಗೆ ಚಿನ್ನ ಮಾಡುವ ವಿದ್ಯೆ ಬೇಕು; ಅಪಾರ ಚಿನ್ನ ಬೇಕು ಹೌದೋ?”

ಶಿಖರಸೂರ್ಯ ಪೆಚ್ಚು ಮುಖ ಹಾಕಿ, ಆದರೂ ಹೆಚ್ಚಿನ ಕೌತುಕದಿಂದ ಕೇಳಿದ:

“ಹೌದು”

“ಅದನ್ನೇ ನಾನೂ ಹೇಳಿದೆ. ಅದರಿಂದ ನಿನಗೇನು ಪ್ರಯೋಜನ? ಅಂತ ಮೊದಲು ಹೇಳು. ಅಂದರೆ ಆ ವಿದ್ಯೆ ಕೊಡುವ ವ್ಯಕ್ತಿಯನ್ನ ತೋರಿಸುತ್ತೇನೆ.”

“ಇಷ್ಟೆಲ್ಲಾ ಹೇಳಿದವನು ಅದೂ ನಿನಗೆ ಗೊತ್ತಿರಬೇಕಲ್ಲ.”

“ಗೊತ್ತಿದೆ. ಆದರೂ ಹೇಳು”

“ನಾನು ಜನೋಪಕಾರ ಮಾಡಬೇಕು. ಈ ಪ್ರಪಂಚವನ್ನ ಬಡತನದಿಂದ ಮುಕ್ತಗೊಳಿಸಬೇಕು.”

ಚಂಡೀದಾಸ ತೊಡೆ ತಟ್ಟಿ ಹೃತ್ಪೂರ್ವಕ ನಕ್ಕ, ಭಂಗಿತನಾಗಿ ಶಿಖರಸೂರ್ಯ ಕೇಳಿದ,

“ಯಾಕೆ ನಕ್ಕೆ ಹೇಳು?”

“ಈ ಮಾತನ್ನ ನಾನು ನಂಬುತ್ತೇನೆ ಅಂತ ಅಂದುಕೊಂಡೆಯಲ್ಲವೊ? ಅದಕ್ಕೆ!”

“ನನ್ನ ನಿಜ ಗೊತ್ತಿದ್ದರೆ ಹೇಳು. ನಿನ್ನ ನಿಗೂಢ ವಿದ್ಯೆಯನ್ನಾದರೂ ಪರೀಕ್ಷಿಸೋಣ.”

“ಪರೀಕ್ಷೆ ಆಮೇಲೆ, ಈಗ ವಿಷಯ ತಿಳಿದುಕೊ: ನೀನು ಚಿನ್ನ ಮಾಡುವ ವಿದ್ಯೆ ಬೇಕೆಂತ ಕೇಳ್ತಿರೋದು; ಸಾಮ್ರಾಟನಾಗಲಿಕ್ಕೆ! ನೀನು ಸಾಮ್ರಾಟನಾಗಲೂಬಹುದು. ತೊಂದರೆಯೇನೆಂದರೆ ಮಂತ್ರದ ಚಿನ್ನ ಚಿನ್ನವಾಗದಣ್ಣಾ! ತಿರುಮಂತ್ರ ಹಾಕುವಾತ ಎದುರಾದರೆ ನಿನ್ನ ಕತೆ ಮುಗಿಯಿತು! ಅದಕ್ಕೇ ಹೇಳುತ್ತೇನೆ ಮಿತ್ರಾ ಚಿನ್ನದ ಆಸೆ ಮಾಡುವಾತ ಒಂದೆರಡಲ್ಲ; ಹತ್ತು ಸಲ ಬೆರಳು ಮಡಿಚಿ ಯೋಚನೆ ಮಾಡಬೇಕು! ನಿರ್ಧಾರ ತಗೋಬೇಕು!”

ಚಂಡೀದಾಸನ ಮಾತಿನಲ್ಲಿ ಸಹಜವಾದ ಸ್ನೇಹವಿತ್ತು, ಅನುಕಂಪವಿತ್ತು. ಶಿಖರಸೂರ್ಯನ ಅನಿಸಿಕೆಯೇ ಬೇರೆ ಇತ್ತು. ಇವನ ಮಾತಿನ ಹಿಂದೆ ರಹಸ್ಯೋದ್ದೇಶವೇನಾದರೂ ಇದೆಯ? ಅಂತ ಹುಡುಕಿದ. ತನ್ನ ಪಾಡಿಗೆ ತಾನು ಚಂಡೀದಾಸ ಮುಂದುವರೆಸಿದ:

“ಜನೋಪಕಾರಕ್ಕಾಗಿ ಚಿನ್ನಬೇಕು, ಅಂದೆಯಲ್ಲ; ನನಗ್ಯಾಕೆ ನಗು ಬಂತು ಗೊತ್ತೊ? ನಾಗಾರ್ಜುನ ನನ್ನ ಗುರುವಿಗೆ ಇದೇ ಉತ್ತರ ಕೊಟ್ಟಿದ್ದ. ಶಿವಪಾದನಂತೆ ನನಗೂ ನಗು ಬಂತು. ನನ್ನ ಗುರು ಕೊಟ್ಟ ಉತ್ತರವನ್ನೇ ನಾನೂ ಕೊಟ್ಟೆ! ಶಿವಪಾದ ಹೇಳಿದ ಇನ್ನೂ ಒಂದು ಮಾತು ತಿಳಿದುಕೊ: ಚಿನ್ನ ಅಂದರೆ ಸಂಗ್ರಹ. ಒಬ್ಬ ಒಂದು ವರ್ಷದ ಶ್ರಮದಿಂದ ಹತ್ತು ಚೀಲ ಧಾನ್ಯ ಬೆಳೀತಾನೆ. ನೀನು ಅದನ್ನು ಹತ್ತು ಚಿನ್ನದ ಹಣದಲ್ಲಿ ಸಂಗ್ರಹಿಸುತ್ತೀ ಅಲ್ಲವೊ? ಇದೇ ಸಂಗ್ರಹ. ಸಂಗ್ರಹ ಮಾಡಿದಾಗಲೇ ನೀನು ಸಮಾಜವನ್ನ ಉಳ್ಳವ-ಇಲ್ಲದವ-ಅಂತ ಎರಡಾಗಿ ಒಡೆದುಬಿಟ್ಟೆ!”

ಶಿಖರಸೂರ್ಯನಿಗೆ ಬೋರು ಬೋರಾಯಿತು. ಶಿವಾಪುರದ ನೆನಪುಗಳಿಂದ ಇವನು ಹೊರಬರಲಾರನೆಂದು ತೀರ್ಮಾನಿಸಿ ನಿರುತ್ಸಾಹದ ನೀರಸ ದನಿಯಲ್ಲಿ ಕೆಣಕಿದ-

“ಆಯಿತಪ್ಪ, ಸಂಗ್ರಹಿಸೋದನ್ನ ಬಿಟ್ಟರೆ ನಿನ್ನ ಗುರು ಹೇಳುವ ಸಮಾನತೆ ಬಂದಂಗಾಯ್ತೊ?”

“ಖಂಡಿತ”

ಅಗೋ! ಅಲ್ಲಿ ನೋಡು ಸಮಾನರು ಕೂತಿದ್ದಾರೆ; ಹಾಂಗಿರಬೇಕು ನಿನ್ನ ಗುರುವಿನ ಸಮಾಜ!”

-ಎಂದು ಅನತಿದೂರದ ಮರದಡಿ ಕೆಲವು ಕೂತು, ಕೆಲವು ಒರಗಿ, ಕೆಲವು ಹಾರಾಡಿ ಕೆಲವು ಚೇಷ್ಟೆಯಲ್ಲಿ ತೊಡಗಿರುವ ಕಪಿಗಳ ಹಿಂಡು ತೋರಿಸಿ ಶಿಖರಸೂರ್ಯ ಹೋ ಎಂದು ಗಹಗಹಿಸಿ ನಕ್ಕ. ಚಂಡೀದಾಸ ನಗಲಿಲ್ಲ. ಕೋತಿಗಳನ್ನೇ ನೋಡುತ್ತ ಕೂತ. ಮತ್ತೆ ಶಿಖರಸೂರ್ಯನೇ ವಿನೋದದ ನಗೆಯನ್ನ ನಿಯಂತ್ರಿಸಿ ಕೇಳಿದ:

“ನಾಗಾರ್ಜುನ ಈಗಲೂ ಇದ್ದಾನಾ?”

“ಇದ್ದಾನೆ”

“ನಿಜವಾಗ್ಲೂ?”

“ನಿಜವಾಗ್ಲೂ ಇದ್ದಾನೆ. ನಿನ್ನ ಹದ್ದಿನ ಕೊಳ್ಳದ ಪಡುವಣದಂಚಿಗೆ ಗರುಡನ ಬೆಟ್ಟ ಇದೆಯಲ್ಲ, ಆದರ ಶಿಖರದಲ್ಲಿ!”

ಚಂಡೀದಾಸನ ಮಾತಿನಲ್ಲಿ ದೊಡ್ಡ ಮನುಷ್ಯನಿಗೆ ಸಹಜವಾದ ಅನುಗ್ರಹ ಭಾವವಿದ್ದುದನ್ನು ಶಿಖರಸೂರ್ಯ ಒಪ್ಪಿಕೊಂಡ.