ಇಂತಿಪ್ಪ ಸ್ಥಿತಿಯಲ್ಲಿ ತೆರೆಗಳಿಲ್ಲದ ಕೆರೆಯಲ್ಲಿ ಕಲ್ಲು ಚೆಲ್ಲಿದಂತೆ ಅರ್ಥಕೌಶಲ ಮನೆಗೆ ಚಂಡೀದಾಸ ಬಂದ! ಬೇಸಿಗೆಯ ದಿನಗಳಾದ್ದರಿಂದ ಮನೆಯ ಹೊರಗೆ ಕಟ್ಟೆಯ ಮೇಲೆ ಅರ್ಥಕೌಶಲ ಕುಂತಿದ್ದ. ಅನತಿ ದೂರದಲ್ಲಿ ಕಟ್ಟುಮಸ್ತಾದ, ಕುಬ್ಜಾಕೃತಿಯ ವ್ಯಕ್ತಿಯೊಬ್ಬ ಅಗಲವಾದ ಬೆನ್ನಿನ ಕುದುರೆಯ ಮೇಲೆ ಕೂತು ತನ್ನ ಮನೆಯ ಕಡೆಗೇ ಬರುತ್ತಿರುವುದನ್ನು ನೋಡಿ ಪ್ರಧಾನಿ ದಿಗಿಲುಗೊಂಡ. ಗೋದಿ ಬಣ್ಣದ, ಗಿಡ್ಡ ಮೂಗಿನ, ಸೂರ್ಯನ ಬಿಸಿಲಿನಲ್ಲಿ ಕಬ್ಬಿಣದ ಅಚ್ಚಿನಂತೆ ಕಾಣುತ್ತಿದ್ದ ಮುಖದ ವ್ಯಕ್ತಿ ನೆರಿಗೆ ನೆರಿಗೆಯಾಗಿ ನೇತಾಡುವ ದೊಗಳೆ ಅಂಗಿ ಹಾಕಿಕೊಂಡಿದ್ದ. ದಟ್ಟಕೂದಲ ಭಾರಕ್ಕೆಂಬಂತೆ ತಲೆ ಹಿಂದಕ್ಕೆ ವಾಲಿತ್ತು. ಉಬ್ಬಿದ ಕೆನ್ನೆ ಮತ್ತು ಹುಲುಸಾದ ಹುಬ್ಬಿನ ಕೂದಲ ಮಧ್ಯೆ ಕಣ್ಣು ಹುದುಗಿ ಹೋಗಿದ್ದವು. ಆಗಾಗ ಉಬ್ಬು ಹಲ್ಲುಗಳನ್ನು ಪ್ರದರ್ಶಿಸುತ್ತ ಪೊದೆಗೂದಲಲ್ಲಿ ಬೆರಳಾಡಿಸುತ್ತಿದ್ದ. ಸಂಗೀತ ತಾಳಲಯಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ತನ್ನ ಉತ್ತಮ ತಳಿಯ ಕುದುರೆಯ ಪಕ್ಕೆಯ ಚೋದಕಗಳನ್ನೊತ್ತಿ ಮುಂದೆ ಮುಂದೆ ಬರುತ್ತಿದ್ದ ಅವನನ್ನು ನೋಡಿ ಅರ್ಥಕೌಶಲ ಚಕಿತನಾದ. ಆದರೆ ಅದನ್ನು ತೋರಿಸಿಕೊಳ್ಳದೆ ಮುಗುಳು ನಗುತ್ತ ಎದ್ದು “ಬರಬೇಕು ಬರಬೇಕು ವೈದ್ಯ ಮಹಾಶಯ ಬರಬೇಕು” ಎಂದು ಕಟ್ಟೆಯಿಂದ ಕೆಳಗಿಳಿದು ಬಂದು ಆಗಷ್ಟೆ ಕುದುರೆಯಿಂದಿಳಿದು ನಿಂತಿದ್ದ ಚಂಡೀದಾಸನ ಕೈ ಹಿಡಿದು ಕಟ್ಟೆಯ ಮೇಲೆ ಕರೆದೊಯ್ದು ಕೂರಿಸಿದ. “ಲೇ ಯಾರೇ ಅಲ್ಲಿ? ಬಾಯಾರಿಕೆಗೆ ತಗಂಬಾರೆ” ಎಂದು ಸೇವಕಿಗೆ ಆಜ್ಞೆ ಮಾಡಿದ. ಸೇವಕಿ ಬರುವುದು ತಡವಾಯಿತೆಂದು ಬಾಗಿಲಿಗೆ ಹೋಗಿ ನಿಂತ.

ಒಬ್ಬಳು ಗಿಂಡಿಯಲ್ಲಿ ನೀರು ತಂದುಕೊಟ್ಟಳು. ಚಂಡೀದಾಸ ನೀರು ತಗೊಂಡು ಕೈಕಾಲಿನ ಪುಡಿಧೂಳು, ಮೋರೆಯ ಜಿಡ್ಡು ಬೆವರು ತೊಳೆದು ಕಳೆದ. ಆಮೇಲೆ ಪುನಃ ಕಟ್ಟೆಯೇರಿ ಹಾಸಿದ ಚಿತ್ತಾರದ ಕಂಬಳಿಯ ಮೇಲೆ ಕೂತ. ಇನ್ನೊಬ್ಬಳು ಬಟ್ಟಲಲ್ಲಿ ಬೆಲ್ಲ, ಬೆಳ್ಳಿಗಿಂಡಿಯಲ್ಲಿ ಹಾಲು ಹಿಡಿದುಕೊಂಡು ಬರುವಾಗ ಹೊಸ್ತಿಲ ಮೇಲುಪಡಿ ತಾಗಿತು. ನೋವಿಗೆ ಕೆಳಗಿನ ಹೊಸ್ತಿಲು ಎಡವಿದಳು. “ಹೊಸ್ತಿಲ ಮೇಲುಪಡಿ ತಾಗುವುದಾದರೆ ಹೆಣ್ಣೇ ತುಸು ಬಾಗಿ ಬರಬೇಕು; ಹೊಸ್ತಿಲು ಎಡವಿದರೆ ಕಾಲೆತ್ತಿ ನಡೆಯಬೇಕು.” ಎಂದು ಹೇಳಿ ಚಂಡೀದಾಸನಿಗೆ ಬಾಯಾರಿಕೆಗೆ ಕೊಟ್ಟ. ಬಾಳೆಯೆಲೆಯಲ್ಲಿ ಚಿಗುರು ವೀಳ್ಯ, ಎಲೆ ಅಡಿಕೆ ಹೋಳು ಕೊಟ್ಟ. ಎಲಡಿಕೆ ಹಂಚಿ ತಿಂಬಾಗ ಆ ಸುದ್ದಿ ಈ ಸುದ್ದಿ ಪಕ್ಕದ ಹಲವು ಸುದ್ದಿಗಳ ಮಾತಿಗೆ ತೊಡಗಿದರು. ಚಂಡೀದಾಸ ಹೇಳಿದ:

“ಅಯ್ಯಾ ಪ್ರಧಾನರೇ ನಾನೆಂದೂ ಒಳಗೊಂದು ಹೊರಗೊಂದು ಆಡಿದವನಲ್ಲ ಹೌದೊ?”

“ಹೌದು”

“ನಿಮ್ಮ ಮುಂದೊಂದು ಹಿಂದೊಂದು ಆಡಿದವನಲ್ಲ; ಹೌದೊ?”

“ಹೌದು”

“ನೀವು ಈ ಎರಡೂ ಆಡಬಲ್ಲರಿ; ಅದು ನಿಮ್ಮ ಕರ್ಮ. ನನ್ನದಂತೂ ಇಷ್ಟೆ ಕಣ್ರಪ್ಪ. ಪಟ್ಟಣಶೆಟ್ಟರಲ್ಲಿಗೆ ಹೋಗಿದ್ದೆ. ಅವರಿಲ್ಲ, ಈಗ ನಾನು ಹೋಗಬೇಕಾದ್ದು…”

“ಗುಣಶೀಲಳಲ್ಲಿಗೆ,”

“ಅವಳೂ ಇಲ್ಲ. ಯಾವನೋ ನಿಮ್ಮ ರಾಜವೈದ್ಯನನ್ನು ಕಟ್ಟಿಕೊಂಡು ಊರು ಬಿಟ್ಟಳಂತಲ್ಲ ಮಾರಾಯ, ನಿಜವೋ?”

“ಹಾಗಲ್ಲ, ನಮ್ಮ ರಾಜವೈದ್ಯ ಅವಳ ಮಗಳನ್ನು ಇಷ್ಟಪಟ್ಟದ್ದು ನಿಜ…”

“ಇಷ್ಟಪಡಬಾರದಲ್ಲ! ಅವಳು ವಿಷಕನ್ಯೆ ಅಲ್ಲವೊ?”

“ಅವನೂ ನಿನ್ನಂಥ ಹಟಮಾರಿ ವೈದ್ಯನೇ! ಏನೇನು ಮಾಡಿಕೊಂಡಿದ್ದಾನೋ ತಿಳಿಯದು. ಆ ಮನೆತನದೊಂದಿಗೆ ಅವನ ಸಲುಗೆಯಂತೂ ಇದೆ.”

“ಆಯ್ತು; ನಿಮ್ಮೊಂದಿಗೆ ಎರಡು ಮಾತಾಡೋದಿದೆ. ಆಗಬಹುದೋ?”

“ಆದೀತು, ಒಳಗೆ ಹೋಗೋಣವ?”

“ಇಲ್ಲೇ ಕೇಳಿ. ಎರಡೇ ಎರಡು ಮಾತಿವೆ. ಒಂದು ನಿಮಗೆ ಹೇಳುವಂಥದ್ದು, ಇನ್ನೊಂದು ಧನಪಾಲನಿಗೆ. ನಿಮ್ಮ ಮಾತು ಇಗೋ ಕೇಳಿಕೊಳ್ಳಿ: ಕರಾವಳಿಯ ರಾಜ ಆಳುವ ಬಿಲ್ಲಪ್ಪ ಗೊತ್ತಲ್ಲ?”

“ಗೊತ್ತು”

“ಆತ ಸತ್ತು ಹೋದ. ಅದು ಅಳಿಯಸಂತಾನದ ಮನೆತನ. ಬಿಲ್ಲಪ್ಪನ ಅಳಿಯ ಜೀವರಾಯ ಮತ್ತು ಮಗ ಎರಡನೇ ಬಿಲ್ಲಪ್ಪ ರಾಜ್ಯಕ್ಕಾಗಿ ಕದನವಾಡುತ್ತಿದ್ದಾರೆ. ಈಗ ಅಳಿಯನೇ ನ್ಯಾಯವಾಗಿ ರಾಜನಾಗಬೇಕು. ಆದರೆ ರಾಜನ ಮಗ ಒಪ್ಪುತ್ತಿಲ್ಲ. ಅಳೀಮಯ್ಯ ಜೀವರಾಯನಿಗೆ ನಿಮ್ಮ ಸಹಾಯ ಬೇಕು. ಅದಕ್ಕಾಗಿ ನನ್ನನ್ನು ಕಳಿಸಿದ್ದಾನೆ. ನಿಮ್ಮ ಗೋಳು ಮರೆತು ಸಹಾಯ ಮಾಡಬಲ್ಲಿರೊ? ಕೈತುಂಬ ಚಿನ್ನದ ಪ್ರತಿಫಲ ಉಂಟು ಮಾರಾಯರೇ, ಅದಾಗಿ ಮಿಕ್ಕು ದೋಚುವ ವ್ಯವಹಾರವನ್ನ ಕನಕಪುರಿಗೆ ಹೇಳಿಕೊಡಬೇಕೋ? ಯಾವುದಕ್ಕೂ ಮಹಾರಾಣಿಯವರೊಂದಿಗೆ ಯೋಚನೆ ಮಾಡಿಕೊಂಡು ಬನ್ನಿ, ಸಂಜೆ ಧನಪಾಲನ ಮನೆಗೆ ಊಟಕ್ಕೆ ಬರ್ತೀರಂತಲ್ಲ? ಅಲ್ಲಿ ಹೇಳಿದರಾಯ್ತು. ಬರಲೋ?”

ಎಂದು ಎದ್ದು ನಡೆದೇಬಿಟ್ಟ! ಇರು ಎಂದು ಇವನೂ ಒತ್ತಾಯ ಮಾಡಲಿಲ್ಲ. ಒಂದೆರಡು ಹೆಜ್ಜೆ ಇಡುವಷ್ಟರಲ್ಲಿ ಯಾವುದೋ ವಿಚಿತ್ರ ವಾಸನೆಗೆ ಬೆರಗಾದಂತೆ ಮೂಗರಳಿಸಿ ನಿಂತು, ತಕ್ಷಣ ಹಳೆಯ ವೈರಿ ನೆನಪಾಗಿ ಅರ್ಥಕೌಶಲ ಕಡೆಗೊಮ್ಮೆ ನೋಡಿ ಏನೋ ಕೇಳಬೇಕನ್ನಿಸಿತು. ಸಕಾಲವಲ್ಲವೆಂದು ತನ್ನ ಆಸಕ್ತಿಯನ್ನು ಮುಚ್ಚಿಕೊಂಡು, “ಬರ್ತೀರಲ್ಲ?” ಎಂದು ಪುನಃ ಕೇಳಿ ಉತ್ತರಕ್ಕಾಗಿ ಕಾಯದೆ ನಡೆದ.

ಚಂಡೀದಾಸನೂ ಒಂದು ಕಾಲಕ್ಕೆ ಕನಕಪುರಿಯ ಭ್ರಷ್ಟ ಜೀವನದ ಭಾಗವಾಗಿದ್ದವನೇ; ಅರ್ಥಕೌಶಲನ ಕೃಪೆಯಲ್ಲಿದ್ದವನೇ. ಆಗಿನ ಕಾಲದಲ್ಲಿ ಐವತ್ತಾರು ದೇಶಗಳಲ್ಲಿ ಇವನ ಸಮಾನ ವಿಷವಿದ್ಯೆ ಬಲ್ಲವರು ಯಾರೂ ಇಲ್ಲವೆಂದು ಇವನ ಖ್ಯಾತಿ. ರಸವಿದ್ಯೆಯಲ್ಲೂ ಇವನಿಗೆ ಪರಿಶ್ರಮವಿತ್ತು. ಚಿನ್ನವನ್ನ ಆಸುಪಾಸು ಎಲ್ಲಿ ಬಚ್ಚಿಟ್ಟರೂ, ಎಷ್ಟು ಬಚ್ಚಿಟ್ಟರೂ ಕರಾರುವಕ್ಕಾಗಿ ಅದು ಎಲ್ಲಿದೆಯೆಂದು ಎಷ್ಟಿದೆಯೆಂದು ಹೇಳಬಲ್ಲ ವಿದ್ಯೆ ಇವನಲ್ಲಿತ್ತು. ಹೂತ ಎರಡು ನಿಧಿಗಳನ್ನುಪತ್ತೆ ಹಚ್ಚಿ ತೆಗೆಸಿ ಬಹುಮಾನ ಪಡೆದಿದ್ದ. ತೆಗೆದ ಮೇಲೆ ಆ ನಿಧಿಯ ಮ್ಯಾಲೆ ಮಹಾರಾಜರ ವಿನಾ ಯಾರಿಗೂ ಅಧಿಕಾರ ಸಲ್ಲದೆಂದು ಅರ್ಥಕೌಶಲ ಆ ನಿಧಿಯನ್ನು ಅರಮನೆಗೇ ಒಪ್ಪಿಸಿದ್ದ.

ಚಂಡೀದಾಸನಿಗೆ ವಿಷವಿದ್ಯೆಯಲ್ಲೂ ಅಷ್ಟೇ ಗತಿಯಿತ್ತೆಂದು ಹೇಳಿದೆವಲ್ಲ? ಸಮಾಜದ ಬಡವರು, ದುರ್ಬಲರು, ಹೊಟ್ಟೆಪಾಡಿಗಾಗಿ ಹಾತೊರೆವ ಕುಟುಂಬಗಳ ಹೆಂಗೂಸುಗಳನ್ನು ಆಯ್ದು ಕೈತುಂಬ ಹಣಕೊಟ್ಟು ಚಿಕ್ಕಂದಿನಲ್ಲೇ ವಿಷವೊಡುತ್ತ ಸಾತ್ಮ್ಯವಾಗಿಸಿ, ದೊಡ್ಡವರನ್ನಾಗಿ ಮಾಡಿ ಅರ್ಥಕೌಶಲನಿಗೆ ಮಾರುತ್ತಿದ್ದ. ಇದು ಅರಮನೆಗೂ ತಿಳಿದಿತ್ತು. ಮೊದಮೊದಲು ಈತನ ವಿದ್ಯೆಯ ಬಗ್ಗೆ ಎಲ್ಲರೂ ಚಕಿತರಾದರೂ ಇವನ ಮುದ್ದಿನಿಂದ ಮಹಾರಾಜನ ರೋಗ ಉಲ್ಬಣಗೊಂಡಾಗ ವಿಷವಿಕ್ಕಿರಬಹುದೆಂದು ಶಂಕಿಸಿ ಊರು ಬಿಡಿಸಿ ಹೊರಗಟ್ಟಿದ್ದರು. ಆಗ ಇವನಿಗಾಗಿದ್ದ ಮಿತ್ರನೆಂದರೆ ಧನಪಾಲನೊಬ್ಬನೇ. ಆಗ ಹೊರಗೆ ಹೋದವನು ಇವತ್ತು ಪುನಃ ಧನಪಾಲನ ಭೇಟಿಗಾಗಿ ಬಂದಿದ್ದ.

ನಡಾವಳಿಯಿಂದ ಧನಪಾಲನ ತಾಯಿ ಅರ್ಥಕೌಶಲನಿಗೆ ಸೋದರತ್ತೆ. ಆ ಹೊತ್ತು ಮುಂಜಾನೆ ಬಂದು ಅರ್ಥಕೌಶಲನನ್ನು ಊಟಕ್ಕೆ ಆಮಂತ್ರಿಸಿದ್ದಳು. ಒಪ್ಪಿಕೊಂಡಿದ್ದ. ಆದರೀಗ ಚಂಡೀದಾಸನೂ ಅವರ ಅತಿಥಿಯಾದುದರಿಂದ ಹೋಗುವುದೇ? ಬೇಡವೇ? ಎಂದು ಯೋಚನೆಯಾಯಿತು. ವಿಷದ ಅನುಮಾನವೂ ಬಂತು. ಕೊನೆಗೆ ಅತ್ತೆಯ ಹಿರಿತನಕ್ಕಾದರೂ ಮರ್ಯಾದೆ ಕೊಡಲೇಬೇಕೆಂದು ಮನಸ್ಸು ಮಾಡಿ, ಜೊತೆಗೆ ಶಿಖರಸೂರ್ಯನನ್ನೂ ಕರೆದೊಯ್ಯಬೇಕೆಂದು ಸೇವಕನನ್ನು ಅಟ್ಟಿದ. ನಿರೀಕ್ಷಿಸಿದಂತೆ ಶಿಖರಸೂರ್ಯ ಅರೆಮನಸ್ಸಿನಿಂದಲೇ ಬಂದ.

ಇಬ್ಬರೂ ತೋಟದ ಮನೆಗೆ ಹೋದಾಗ ಸೂರ್ಯ ಮುಳುಗಿ ಹೆಚ್ಚು ಸಮಯವಾಗಿತ್ತು. ಬೇಸಿಗೆಯ ದಿನಗಳಾದ್ದರಿಂದ ಹಗಲಿನ ಶಕೆಯಿನ್ನೂ ಆರಿರಲಿಲ್ಲ. ಎರಡು ತಿಂಗಳಿಂದ ಮಳೆಯಾಗಿರಲಿಲ್ಲ. ದೂರದಿಂದ ಗೋಧೂಳಿಯ ವಾಸನೆ ಬರುತ್ತಿತ್ತು. ಜೊತೆಗೆ ನದಿ ದಂಡೆಯ ಕೊಳೆತ ಸಸ್ಯಗಳ ವಾಸನೆಯೂ ಅದರಲ್ಲಿ ಬೆರೆತಿತ್ತು. ನಿಶ್ಚಲವಾಗಿದ್ದ ನದಿಯ ನೀರು ಮಡುಗಟ್ಟಿದ ರಾಡಿನೀರಿನಂತೆ ಕಾಣುತ್ತಿತ್ತು.

ಅಲ್ಲಿದ್ದದ್ದು ಕೆಂಪು ಇಟ್ಟಿಗೆಯ ಸುಂದರವಾದ ಮನೆ. ಫಾಲ್ಗುಣ ಮಾಸದ ಚೌತಿ ಚಂದ್ರ ಕಿವಿಯಿಂದ ಕಿವಿತನಕ ನಗುತ್ತಿದ್ದ. ಬೆಳ್ದಿಂಗಳಿನ್ನೂ ಬಲಿತಿರಲಿಲ್ಲ. ಇಬ್ಬರೂ ಕುದುರೆಗಳನ್ನು ಕಟ್ಟುವುದಕ್ಕೆ ಸೇವಕರ ಕೈಗೆ ಕೊಟ್ಟು ಮನೆಯೊಳಕ್ಕೆ ಹೋದರು. ಆಗಲೇ ಚಂಡೀದಾಸ, ಧನಪಾಲ ಕೂತವರೆದ್ದು ಇಬ್ಬರನ್ನೂ ಸ್ವಾಗತಿಸಿದರು. ಉಭಯಕುಶಲೋಪರಿ ವಿಚಾರಿಸಿಕೊಳ್ಳುತ್ತ ಚಿತ್ರವಿರುವ ಕಂಬಳಿ ಹಾಸಿದ್ದ ಹೊರಸುಗಳ ಮೇಲೆ ಕುಳಿತರು. ಶಿಖರಸೂರ್ಯ ಅನಿರೀಕ್ಷಿತವಾಗಿ ಬಂದುದಕ್ಕೆ ಅಲ್ಲಿದ್ದವರೆಲ್ಲ ಸಂತೋಷಪಟ್ಟರು. ಧನಪಾಲನ ತಾಯಿ ಒಳಗೆ ಅಡಿಗೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು. ಗಾಳಿಯಿಲ್ಲದೆ ತೋಟದ ತರುಮರಗಳ ಎಲೆ ಕೂಡ ಚಲಿಸುತ್ತಿರಲಿಲ್ಲ. ಶಿಖರಸೂರ್ಯ ಮೊದಲ ಬಾರಿ ಇಲ್ಲಿಗೆ ಬಂದುದರಿಂದ ಅಪರಿಚಿತ ಸ್ಥಳ ಆಕರ್ಷಕವೆನ್ನಿಸಿತು. ಅಷ್ಟರಲ್ಲಿ ಸೇವಕರು ಗೊಳಬಾರಸವೆಂಬ ಅಪೂರ್ವ ಮದ್ಯವನ್ನು ಗಿಂಡಿಗಳಿಗೆ ಬಗ್ಗಿಸಿ ಇಟ್ಟರು. ಈಗಷ್ಟೇ ಹುರಿದ ಖಾರದ ಧಾನ್ಯ, ಬಿಳಿಗಿರಿಯ ಮಸಾಲೆ ಬೆರೆಸಿ ಕರಿದ ಹಿಟ್ಟು-ಇವನ್ನು ಜೇನಿನಲ್ಲಿ ಸಂಸ್ಕೃರಿಸಿದ ಕೊಬ್ಬರಿಯ ತಿಂಡಿಗಳನ್ನು, ನೋಡಿ ಅರ್ಥಕೌಶಲ ತುಟಿಗಳಲ್ಲಿ ಸಂತೋಷದ ಮಂದಹಾಸ ಮೂಡಿತು.

ಇದೆಲ್ಲ ಅವನ ಅತ್ತೆಯೇ ಕಷ್ಟಪಟ್ಟು ಸಿದ್ಧಪಡಿಸಿದ್ದು. ಅಡಿಗೆಯ ರುಚಿ, ಗಂಧಗಳಲ್ಲಿ ಅವಳ ಹಸ್ತಗುಣ ಎದ್ದು ಕಾಣುತ್ತಿತ್ತು. ಪ್ರತಿಯೊಂದರ ರುಚಿ ನೋಡುತ್ತ “ಇಂಥ ಅಡಿಗೆಯನ್ನ ನಿನ್ನ ಕೈಯಿಂದ ವಿನಾ ಬೇರೆಲ್ಲೂ ನಾನು ತಿಂದಿಲ್ಲ”ವೆಂದು ನಿಜ ಮತ್ತು ಪ್ರಶಂಸೆಗಳನ್ನು ಬೆರೆಸಿ ಹೇಳಿ, ಮದ್ಯದ ಪಾತ್ರೆಗೆ ಕೈ ಇಟ್ಟ. ವಾಸನೆ ಪರಿಚಿತವೆನ್ನಿಸಿ ಶಿಖರಸೂರ್ಯ ತಕ್ಷಣ ತನ್ನ ಮುಂದಿನ ಗಿಂಡಿಯನ್ನೆತ್ತಿ ಮೂಸಿ ನೋಡಿ ಒಂದು ಗುಟುಕು ರುಚಿ ನೋಡಿ ಇಟ್ಟ.

ಚಂಡೀದಾಸ ಇವನನ್ನೇ ತೀಕ್ಷ್ಣವಾಗಿ ನೋಡುತ್ತಿದ್ದ. ಅರ್ಥಕೌಶಲನಿಗೆ ಆ ಸ್ಥಳ ಪರಿಚಿತವಾದರೂ ಈ ದಿನ ಅದ್ಯಾಕೋ ವಾತಾವರಣದಲ್ಲಿ ಅಹಿತಕರ ಕೃತಕತೆ ಕಂಡು ಬಂತು. ಪ್ರಧಾನಿಗೆ ಹೊಸ ಮದ್ಯದ ಬಗ್ಗೆ ಕೊಂಚ ಮಾಹಿತಿ ಕೊಡುವುದು ಉಚಿತವೆನ್ನಿಸಿ ಶಿಖರಸೂರ್ಯ ಹೇಳಿದ:

“ಗೊಳಬಾರಸ ಇದು. ಶಕ್ತಿಶಾಲಿ ಮದ್ಯ. ನಿಧಾನವಾಗಿ ಕುಡಿಯಬೇಕು. ರುಚಿಯೆಂದು ಗಟಗಟ ಕುಡಿದರೆ ಇದರಂಥ ಅಪಾಯಕಾರಿ ರಸ ಇನ್ನೊಂದಿಲ್ಲ.”

ಚಂಡೀದಾಸ ಈಗ ಇನ್ನಷ್ಟು ಎಚ್ಚರಿಕೆಯಿಂದ ಶಿಖರಸೂರ್ಯ ಅಂದರೆ ತನ್ನ ಸ್ಥಳದಲ್ಲಿ ರಾಜವೈದ್ಯನಾದವನನ್ನ, ಅಂದರೆ ವಿಷಕನ್ಯೆಯಾದ ತನ್ನ ಮಗಳನ್ನು ವರಿಸಿದ ಅಳಿಯನನ್ನ, ಅವನ ಆಜಾನುಬಾಹು ಆಕೃತಿಯನ್ನ, ಮಾಂಸದಿಂದಲ್ಲ ಉಕ್ಕಿನಿಂದಲೇ ಮಾಡಿದಂತಿದ್ದ ಆ ಗಡುಸು ಮುಖವನ್ನ, ಆ ಮುಖಕ್ಕೆ ಗರುಡನ ಚಹರೆ ಕೊಟ್ಟು ನಿಗುರಿದ ಕಿವಿಗೂದಲನ್ನ, ಆಳವಾದ ಕಣ್ಣುಗಳಿಂದ ಬಾಣದಂತೆ ಬರುವ ದೃಷ್ಟಿಗಳನ್ನ ಗಮನಿಸಿದ. ತಾನು ತಿಳಿದಂತೆ ಈತನೂ ಸಂತೋಷದಲ್ಲಿಲ್ಲ; ಈತನೂ ತನ್ನ ಹಾಗೇ ಕ್ರೂರಿ, ವಂಚಕ, ದ್ರೋಹಿ, ಕಚ್ಚೆಹರುಕ ಮಹತ್ವಾಕಾಂಕ್ಷಿ ಎಂದೆನ್ನಿಸಿ ರಾಜವೈದ್ಯನ ಬಗ್ಗೆ ಇದ್ದ ವೈರವಡಗಿ ಸಹಾನುಭೂತಿ ಉಂಟಾಯಿತು. ತನ್ನ ಜಾಗ ಬಿಟ್ಟು ಶಿಖರಸೂರ್ಯನ ಬಳಿಗೆ ಹೋಗಿ ಭುಜದ ಮೇಲೆ ಕೈ ಇಟ್ಟು ಹೇಳಿದ:

“ಹೇಳು ಮಿತ್ರಾ ಈ ರಸವನ್ನ ನೀನೆಲ್ಲಿ ಸೇವಿಸಿದ್ದೆ?”

“ಅಮ್ಮನ ಆಶ್ರಮದಲ್ಲಿ ಸೇವಿಸಿದೆನೆಂದು ನಿನಗೂ ಗೊತ್ತಿದೆ.”

“ಯಾವ ಅಮ್ಮನ ಆಶ್ರಮ?”

“ಅದೂ ನಿನಗೆ ಗೊತ್ತಿದೆ.”

“ಸರಿ ಈ ಬಗ್ಗೆ ನಾನೇನೂ ಹೇಳಬಾರದೆಂದು ನೀನು ಹೇಳಿದ ಹಾಗಾಯ್ತು. ಇಗೋ ಬಿಟ್ಟೆ.”

ತಕ್ಷಣ ಶಿಖರಸೂರ್ಯನಿಗೆ ಅನ್ನಿಸಿತು ತನ್ನ ಬಗ್ಗೆ ಇವನಾಗಲೇ ವಿಷಯ ತಿಳಿದುಕೊಂಡೇ ಬಂದಿದ್ದಾನಾದ್ದರಿಂದ ಹುಷಾರಾಗಿರಬೇಕೆಂದುಕೊಂಡ. ಅಷ್ಟರಲ್ಲಿ ಅರ್ಥಕೌಶಲ,

“ಏನ್ರಯ್ಯಾ, ಇಬ್ಬರೇ ಏನೇನೋ ಒಗಟಿನಲ್ಲಿ ಮಾತಾಡಿಕೊಳ್ತಿದ್ದೀರಾ?”

ಅಂದ. ಶಿಖರಸೂರ್ಯ ಹೇಳಿದ:

“ಎಲ್ಲಾ ರೋಗಗಳಿಗೂ ಈ ಮದ್ಯ ದಿವ್ಯೌಷಧಿ. ಅಲ್ಲವೆ ಚಂಡೀದಾಸರೆ?”

“ಹೌದು ಹೌದೆಂದು” ಅವನೂ ಒಪ್ಪಿಗೆ ಸೂಚಿಸಿದ

ಆದರೆ ಅವನ ಮಾತಿನಲ್ಲಿ ವ್ಯಂಗ್ಯವಿತ್ತೆ? ಎಂದು ಅನುಮಾನ ಬಂತು. ಚಂಡೀದಾಸನ ಮಾತಿನಲ್ಲಿರುವ ಆಯುಧಗಳನ್ನ ಅವುಗಳಿರುವ ಸ್ಥಳದಲ್ಲೇ ಮುರಿಯಬೇಕೆಂದು ರಾಜವೈದ್ಯ ನಿರ್ಧರಿಸಿದ.

ಅರ್ಥಕೌಶಲನಿಗೆ ಮದ್ಯದ ಶಕ್ತಿಯ ಬಗ್ಗೆ ಶಿಖರಸೂರ್ಯ ಹೇಳಿದ್ದು ಮೊದಮೊದಲು ನೆನಪಿತ್ತು. ಹೆಚ್ಚು ಹೆಚ್ಚು ಕುಡಿದಂತೆ ಮದ್ಯದ ರುಚಿಯೇರಿ ಮಿತ್ರರಿಗೆ ಚೇಷ್ಟೆಯ ಮಾತಾಡಿ ಮನಸಾರೆ ನಕ್ಕ. ವಿಚಿತ್ರವೆಂದರೆ ನಗುವಾಗ ಅವನ ದನಿ ತಾರಕಕ್ಕೇರುತ್ತಿತ್ತು. ನಗೆಯ ಅಂತ್ಯದಲ್ಲಿ ಹೆಂಗಸಿನ ದನಿಯಂತಾಗಿ ಇನ್ನೂ ಸ್ವಲ್ಪ ನಕ್ಕರೆ ಅತ್ತು ಬಿಡುತ್ತಾನೆನ್ನುವಂತೆ ಕೇಳಿಸುತ್ತಿತ್ತು. ಇದು ಅನಿರೀಕ್ಷಿತವೆನ್ನಿಸಿ ಉಳಿದವರು ನಗದೆ ಟಕಮಕ ಪರಸ್ಪರ ನೋಡಿಕೊಂಡು ಪ್ರಧಾನಿಯನ್ನೇ ನೋಡುತ್ತಿದ್ದರು. ಪ್ರಧಾನಿ ನಕ್ಕಷ್ಟೂ ಕುಡಿವ ಮತ್ತೆ ಕುಡಿವ ಆಸೆಯಾಗುತ್ತಿತ್ತು. ಕುಡಿದಷ್ಟೂ ನಗುತ್ತಿದ್ದ. ನಗುತ್ತಲೇ ಶಿಖರಸೂರ್ಯನಿಗೆ ಹೇಳಿದ “ಜೀವನದಲ್ಲಿ ಇಂಥ ತಿನಿಸು ನಿನಗೆ ಮತ್ತೊಮ್ಮೆ ದೊರೆಯಲಾರದಣ್ಣ. ಸಾವು ನಿಶ್ಚಿಯ. ಯಾವುದೂ ಶಾಶ್ವತವಲ್ಲ. ಅಂತಿಮವಾಗಿ ನಾವು ಹ್ಯಾಗೆ ಸಾಯುತ್ತೇವೆ ಅನ್ನೋದು ಮುಖ್ಯ. ನಾವು ಹ್ಯಾಗೆ ಬದುಕಿರುತ್ತೇವೋ ಅದರ ಫಲ ನಮ್ಮ ಸಾವಿನಲ್ಲಿ ಕಾಣುತ್ತದೆ! ಅಂತ ನನ್ನ ಅಭಿಪ್ರಾಯ. ನೀ ಏನಂತಿ?”

ಅಷ್ಟರಲ್ಲಿ ಸೇವಕರು ಬಾಳೆಯೆಲೆ ಹಾಕಿ ಅವುಗಳ ಮೇಲೆ ಕೋಲುದರ್ಭೆಯ ಕಡ್ಡಿಗಳಿಂದ ಗಿಂಡಿ ನೀರು ಸಿಂಪಡಿಸುತ್ತ ಬಂದರು. ಮಿಡಿಗಾಯಿ ಉಪ್ಪಿನಕಾಯಿ ಬಡಿಸಿ ಮಲ್ಲಿಗೆ ಬಣ್ಣದ ಅನ್ನ, ಸೌತೆಪಳದ್ಯ ಬಡಿಸಿದರು. ಪಚ್ಚೆ ವರ್ಣದ ಇನ್ನೊಂದು ಪಲ್ಯ ಬಡಿಸಿ ಬಗೆ ಬಗೆ ಪದಾರ್ಥಗಳ ನಡುವೆ ತುಪ್ಪವ ಸುರಿದು ಅದಕ್ಕೊಪ್ಪುವ ಚಟ್ನಿಯ ಬಡಿಸಿದರು. ಅತಿಥಿಗಳು ಬಿಸಿಬಿಸಿ ಉಂಡು ಬಗ ಬಗ ಬೆವೆತರು. ಎಂಜಲುಗೈ ತೊಳಕೊಂಡು ಎದ್ದು ಹೊರಸಲ ಮ್ಯಾಲೆ ಕುಂತು ಅಡಿಕೆ ವೀಳ್ಯ ಮೆಲ್ಲುತ್ತ ಆ ಸುದ್ದಿ ಈ ಸುದ್ದಿ ಊರಿನ ವರ್ತಮಾನ ಮಾತಾಡುತ್ತಿರಲು ಅರ್ಥಕೌಶಲ ಹೇಳಿದ:

“ಆಯಿತಯ್ಯಾ ವೈದ್ಯಮಿತ್ರಾ, ಈಗ ವಿಷಯಕ್ಕೆ ಬರೋಣ”

“ಹೇಳುವುದನ್ನೆಲ್ಲ ಮಧ್ಯಾಹ್ನವೇ ಹೇಳಿದೆನಲ್ಲ ಪ್ರಧಾನರೇ, ಅದೇನಿದ್ದರೂ ಈಗ ನೀವೇ ಹೇಳಬೇಕು.”

-ಎಂದ ಚಂಡೀದಾಸ.

“ಮಧ್ಯಾಹ್ನ ಶಿಖರಸೂರ್ಯ ಇರಲಿಲ್ಲ. ಈಗ ಬಂದಿದ್ದಾನೆ. ನಿನ್ನ ಮಾತು ನಿನ್ನ ಬಾಯಿಂದ ಬಂದರೇ ಚಂದ. ಯಾಕಂತೀಯೋ? ಅರಮನೆಯ ವ್ಯವಹಾರ ಇವನಿಗೂ ಗೊತ್ತು.”

“ಆಯ್ತು, ಕೇಳಿ ಸ್ವಾಮೀ, ಕರಾವಳಿಯ ಬಿಲ್ಲಪನ ಅಳೀಮಯ್ಯ ಜೀವರಾಯ ದೊರೆ ಕನಕಪುರಿಯ ಸಹಾಯ ಕೇಳಿ ನನ್ನನ್ನು ಕಳಿಸಿದ್ದಾನೆ. ಆಗುತ್ತೊ? ಇಲ್ಲವೊ? ಅಪ್ಪಣೆ ಕೊಡಿ.”

-ಎಂದು ಹೇಳಿ ಶಿಖರಸೂರ್ಯನ ಕಡೆಗೆ ನೋಡಿದ. ಶಿಖರಸೂರ್ಯನೂ ಚಂಡೀದಾಸ ಮತ್ತವನ ಮಾತುಗಳನ್ನ ತೂಗುತ್ತಿದ್ದ: ಚಂಡೀದಾಸ, ಧನಪಾಲರು ದುಷ್ಟರೆಂದು ಅರಮನೆಯಲ್ಲಿ ಖ್ಯಾತಿಯಿದೆ! ಅರ್ಥಕೌಶಲ ಕಡಿಮೆ ದುಷ್ಟ. ಆದರೆ ಮೂವರಲ್ಲೂ ಹಾಸ್ಯಪ್ರಜ್ಞೆ ಇತ್ತು. ವೈರಿಯನ್ನು ಮಿತ್ರನೆಂಬಂತೆ ನಗಿಸುತ್ತ ಕೊಲ್ಲುವ, ಕೊಂದಾದ ಮೇಲೆ ಅವನ ಬಳಗವನ್ನ ಮೈಮರೆಸುವಂತೆ ನಗಿಸುವ ಕಲೆಯಲ್ಲಿ ಕನಕಪುರಿ ಖ್ಯಾತಿವೆತ್ತ ಪಟ್ಟಣ. ಆದರೆ ತಮ್ಮೆಲ್ಲ ನಗೆ, ನಯವಂಚನೆಯ ಕೊನೆಗೆ ದೋಚುವುದಕ್ಕೆ ಅಂತಿಮ ಸಮ್ಮತಿ ಕೊಡುವವರೆಂದರೆ ಅರ್ಥಕೌಶಲ ಮತ್ತು ಮಹಾರಾಣಿ-ಎಂದು ಆತನಿಗೆ ಗೊತ್ತಿತ್ತು. ಅದಕ್ಕೇ ಆತ ಯಾರನ್ನು ನೊಡಿದರೂ ಈತನ ಬಗ್ಗೆ ಅರ್ಥಕೌಶಲನ ಅಭಿಪ್ರಾಯವೇನಿರಬಹುದು?’ ಎಂದು ಅಳತೆ ಮಾಡಿಯೇ ಅವರೊಂದಿಗೆ ಬಹುರಂಗದಲ್ಲಿ ಆ ಪ್ರಮಾಣದ ಸಲಿಗೆ ಬೆಳೆಸುತ್ತಿದ್ದ. ಇಂಥ ವಲಯಗಳಲ್ಲಿಯೇ ಕನಕಪುರಿಯ ವಿಶಿಷ್ಟತೆ ಬೆಳಕಿಗೆ ಬರುತ್ತಿತ್ತು. ಅದು ಯಾವಾಗಲೂ ಅರ್ಥಕೌಶಲನಂಥ ವ್ಯಕ್ತಿಗಳನ್ನೇ ಕೇಂದ್ರಕ್ಕೆ ಆಯುತ್ತಿತ್ತು. ಮತ್ತು ಅವನೆಂಥಾ ಬೆರಿಕಿ ಆಗಿರುತ್ತಿದ್ದ ಅಂದರೆ ಮುಗುಳುನುಗುತ್ತಲೂ ಇರುತ್ತಿದ್ದ, ಕಣ್ಣೀರೂ ಸುರಿಸುತ್ತಿದ್ದ. ಇವನು ಸೂಲಗಿತ್ತಿಗೂ ಸಿಗದವನು. ಇದನ್ನರಿತೇ ಶಿಖರಸೂರ್ಯ ತನ್ನ ಮಗನಿಗೆ ಹೇಳಿದ್ದ: “ನಗುನಗುತ್ತಲೇ ನೀನು ಕಣ್ಣೀರು ಸುರಿಸಬಲ್ಲೆಯಾದರೆ ನೀನೇ ಕಣಯ್ಯ ಕನಕಪುರಿಯ ಸಾಮ್ರಾಟ!”

ಅಷ್ಟರಲ್ಲಿ ಅರ್ಥಕೌಶಲ ಕೇಳಿದ:

“ಸಹಾಯ ಅಂದರೇನು? ಧನಸಹಾಯವ? ಸೈನ್ಯ ಸಹಾಯವ?”

“ಎರಡೂ ಸೈ” ಅಂದ ಚಂಡೀದಾಸ.

“ನೀನು ಕೇಳಿದ ಎರಡೂ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿಲ್ಲ ವೈದ್ಯಮಿತ್ರನೇ. ಯುವರಾಜರ ಪಟ್ಟಾಭಿಷೇಕಕ್ಕೇ ಹಣದ ಅಡಚಣೆಯಾಗಿದೆ. ಇನ್ನು ನೆರೆ-ಹೊರೆಯವರಿಗೆ ಧನಸಹಾಯ ಮಾಡುವುದುಂಟೆ? ಇದಕ್ಕಿಂತ ಹೆಚ್ಚಿಗೆ ನನ್ನನ್ನ ಕೇಳಬೇಡ”

ಈ ತನಕ ಸುಮ್ಮನಿದ್ದ ಧನಪಾಲ ಪ್ರಧಾನಿಯ ಕುತಂತ್ರವನ್ನು ಬಯಲು ಮಾಡಬೇಕೆಂದು,-

“ಅರಮನೆಗೆ ಧನದ ಅಭಾವ ಆಗೋದುಂಟೆ ಪ್ರಧಾನರೆ? ಉಪ್ಪಿನವನು ಅತ್ತ ಅಂತ ತೆಂಗಿನಕಾಯಿಯವನೂ ಅತ್ತರೆ ಜನ ನಗದೆ ಇರ್ತಾರೆಯೆ?” ಅಂದ.

ಅವನಷ್ಟೇ ಖಚಿತವಾಗಿ ಆದರೆ ಉದ್ವೇಗಗೊಳ್ಳದೆ ಪ್ರಧಾನಿ ಹೇಳಿದ:

“ನನಗೆ ತಿಳಿದಿದ್ದನ್ನು ನಾನು ಹೇಳಿದೆ. ಯಾವುದಕ್ಕೂ ಹೇಳಕೇಳುವುದಕ್ಕೆ ಮಹಾರಾಣಿಯವರಿದ್ದಾರೆ. ನೀನೇ ಹೋಗಿ ಕೇಳು.”

ಅಷ್ಟರಲ್ಲಿ ಈವರೆಗೆ ಯಾರಿಗೂ ಕಾಣದಿದ್ದ, ಆದರೆ ಬಾಗಿಲೊಳಕ್ಕೆ ನಿಂತು ಇವರ ಮಾತುಗಳನ್ನ ಆಲಿಸುತ್ತಿದ್ದ ಧನಪಾಲನ ತಾಯಿ ಬಾಗಿಲಿನ ಚೌಕಟ್ಟಿನಲ್ಲಿ ನಿಂತು ಹೇಳಿದಳು:

“ಅಲ್ಲಪ್ಪ ಅರ್ಥಕೌಶಲ, ಅರಮನೆಯಲ್ಲಿ ಧನ ಇಲ್ಲ ಅಂತೀಯ. ಆಯ್ತಪ; ನಾವು ಕೋಡ್ತೇವೆ; ನಮ್ಮ ಮಗುವನ್ನ ಯುವರಾಜನಿಗೆ ಮದುವೆ ಮಾಡಿಕೊಂಡರೆ ಪಟ್ಟಾಭಿಷೇಕದ ಖರ್ಚು ವೆಚ್ಚ ಕೂಡ ನಾವೇ ನೋಡಿಕೊಂಡು ಮದುವೇನೂ ಮಾಡಿಕೊಡ್ತೀವಿ. ಇದನ್ನಾದರೂ ಒಪ್ಪಿಕೊ.”

“ತಾಯೀ ಧನಪಾಲನಿಗೆ ನಾನು ಹೇಳಿದ್ದೇನೆ; ಇನ್ನೂ ಒಮ್ಮೆ ಹೇಳುತ್ತೇನೆ ಕೇಳು; ನಾನು, ನೀನು ಮತ್ತು ಧನಪಾಲ ಮೂವರೂ ಮಹಾರಾಣಿಯವರ ಹತ್ತಿರ ಹೋಗೋಣ. ಅವರು ಯುವರಾಜರನ್ನ ಕರೆಸಿ ಮದುವೆಗೆ ಒಪ್ಪಿಸಿದರೆ ಧಾಂಧೂಂ ಸಡಗರದಿಂದ ಮದುವೆ ಮಾಡೋಣ, ಆದೀತೋ?”

ಧನಪಾಲ ಅಸಮಾನದಿಂದ ಹೇಳಿದ.

“ಪ್ರಧಾನಿ ಹ್ಯಾಗೆ ಹೇಳಿದರೆ ಹಾಗೆ ಅಂತ ಯುವರಾಜ ತನ್ನ ಮನದ ಇಂಗಿತ ಹೇಳಿಯಾಗಿದೆ. ನೀವು ಹೀಗೆ ಹೇಳ್ತೀರಾ! ಈ ಸಂಬಂಧ ನಿಮಗಿಷ್ಟವಿಲ್ಲ ಅನ್ನಿ ಸ್ವಾಮೀ.”

“ನೀನೊಬ್ಬ ಮೂರ್ಖ, ನನ್ನಿಷ್ಟ ಅಲ್ಲವೋ ಮದುವೆ ಆಗಬೇಕಾದವನ ಇಷ್ಟಾನಿಷ್ಟ ಕೇಳು ಅಂದದ್ದು. ದಯವಿಟ್ಟು ನನ್ನನ್ನ ಅರ್ಥಮಾಡಿಕೊಳ್ಳಿ ತಾಯೀ.”

“ಏನೋಪ್ಪ ಯುವರಾಜನ ಮೇಲೆ ನಿನಗೊಂದು ಅಧಿಕಾರ ಇದೆ ಅಂತ ಅವನೇ ಹೇಳಿದ್ದರಿಂದ ಒಪ್ಪಿಸು ಅಂದಿವಿ. ಮಹಾರಾಣಿಯೂ ನಿನ್ನ ಮಾತು ಮೀರುವುದಿಲ್ಲ, ಒಂದು ಮಾತು ಹೇಳು ಅಂದಿವಿ. ನೀನೇ ಆಗೋದಿಲ್ಲ ಅಂದಮೇಲೆ ಯಾರೇನು ಮಾಡಲಾದೀತು? ಬಿಡು. ನಮ್ಮ ದೈವ ಸುಮಾರು.”

ದನಪಾಲನಿಗೆ ಅರ್ಥಕೌಶಲನ ಮಾತು ಸವಾಲೆನಿಸಿತು. ಜಿದ್ದಿನಿಂದ ಹೇಳಿದ:

“ಯುವರಾಜರನ್ನ ಈಗಲೇ ಇಲ್ಲಿಗೇ ಕರೆಸಿ ಈ ಮದುವೆಗೆ ಒಪ್ಪಿಗೆ ಇದೆ ಅಂತ ಅನ್ನಿಸಿದರೆ?”

“ಇಲ್ಲಿ ಬೇಡ ಮಾರಾಯಾ, ಈಗಲೇ ಬೇಕಾದರೆ ಮಹಾರಾಣಿಯ ಮುಂದೆ ಹೇಳಿಸು, ಮದುವೆ ಮಾಡಿಬಿಡೋಣ.”

ಮುದುಕಿಗೆ ಅರ್ಥಕೌಶಲನ ಮಾತು ತರ್ಕಬದ್ಧವೆನಿಸಲಿಲ್ಲ. ತಮ್ಮ ಸಂಬಂಧ ಈತನಿಗೆ ಸಮ್ಮತವಿಲ್ಲವೆನಿಸಿ ಕೊನೆಯದಾಗಿ,

“ಏನೋಪ್ಪ ಪಟ್ಟಾಭಿಷೇಕಕ್ಕೆ ಹಣ ಇಲ್ಲ ಅಂತೀಯ. ನಾವೇ ಪಟ್ಟಾಭಿಷೇಕವನ್ನೂ ಮಾಡ್ತೀವಿ ಅಂದರೆ ಆಗೋದಿಲ್ಲ ಅಂತೀಯ. ಹೋಗಲಿ ಕರಾವಳಿ ರಾಜನಿಗಾದರೂ ನೀನು ಸಹಾಯ ಮಾಡಿದರೆ ಆತ ನಮ್ಮ ಒಂದು ಮಗುವನ್ನ ಮದುವೆ ಆಗ್ತಾನಂತೆ, ಹಾಗಾದರೂ ಮಾಡು. ಏನೋ, ನಮ್ಮವನು ಅಂತ ಬಾಯಿಬಿಟ್ಟು ಕೇಳಿದೆನಪ್ಪ. ಇನ್ನು ನಿನ್ನಿಷ್ಟ.”

-ಎಂದು ಹೇಳಿ ಒಳಕ್ಕೆ ಹೋದಳು. ಧನಪಾಲ ಹುಬ್ಬುಗಂಟಿಕ್ಕಿ ಜಿಗುಪ್ಸೆಯಿಂದ ನುಡಿದ,

“ಸುತ್ತುಬಳಸಿ ಮಾತಾಡಿ ನಾವೆಲ್ಲಿಗೂ ಮುಟ್ಟೋದಿಲ್ಲ ಪ್ರಧಾನರೇ, ಯುವರಾಜರನ್ನ ಅಪಹರಿಸಿದವರು ಯಾರೆಂದು ಇನ್ನೂ ಪತ್ತೆಯಾಗಲಿಲ್ಲ. ಇದಕ್ಕೆಲ್ಲಾ ಹೊಣೆ ಯಾರು? ನೀವೋ? ರಾಜವೈದ್ಯರೋ? ಹೇಳಿ ಸ್ವಾಮೀ.”

“ಮದುವೆಗೂ ಇದಕ್ಕೂ ಏನಯ್ಯಾ ಸಂಬಂಧ?” ಎಂದು ಅರ್ಥಕೌಶಲ. ತಕ್ಷಣ ಶಿಖರಸೂರ್ಯ ಬಾಯಿಹಾಕಿದ,-

“ನನ್ನ ಕೇಳಿದರೆ ಇದನ್ನೆಲ್ಲ ಚರ್ಚಿಸುವ ಸಂದರ್ಭ ಇದಲ್ಲ. ನಮ್ಮ ಮಾತು ಇಲ್ಲಿಗೆ ಮುಗಿದರೆ ಉತ್ತಮ.”

“ಯಾಕೆ ಮುಗಿಯಬೇಕು? ನನ್ನ ಪ್ರಶ್ನೆಗೆ ಉತ್ತರ ಕೊಡಿ ಸ್ವಾಮೀ, ಕನಕಪುರಿಯ ಜೀವನ ಗಬ್ಬೆದ್ದು ನಾರುತ್ತಿದೆ. ಬುಡಕಟ್ಟಿನ ಮಾಂಡಳಿಕರು ಕೂಡ ಒಬ್ಬೊಬ್ಬರೇ ಉದುರಿ ಹೋಗುತ್ತಿದ್ದಾರೆ. ಹಿಡಿಯೋದಕ್ಕೆ ತಾಕತ್ತಿಲ್ಲ. ಪೇಟೆಯಲ್ಲಿ ಕಾಸಿನ ವ್ಯಾಪಾರವಿಲ್ಲ. ಇದಕ್ಕೆಲ್ಲಾ ಕಾರಣ ಏನು? ಯುವರಾಜನ ಅಪಹರಣ ಸ್ವಾಮೀ! ಈಗ ಹೇಳಿ ಅವರ ಅಪಹರಣದ ನಾಟಕದ ಸೂತ್ರಧಾರ ಯಾರು?”

ಎಂದು ಹಟ ಹಿಡಿದ. ಅರ್ಥಕೌಶಲ ತಾಳ್ಮೆಗೆಟ್ಟು,

“ನೀನ್ಯಾರಯ್ಯಾ ನನ್ನ ಕೇಳೋದಕ್ಕೆ?” ಅಂದ.

“ಕನಕಪುರಿಯ ತೆರಿಗೆದಾರ! ವರ್ತಕ ಸಂಘದ ಅಧ್ಯಕ್ಷ ಸ್ವಾಮಿ! ನನಗೆ ಇದನ್ನೆಲ್ಲ ತಿಳಿಯುವ ಹಕ್ಕಿದೆ.”

ಶಿಖರಸೂರ್ಯನೆದ್ದು,

“ಮಹಾರಾಣಿಯವರೇ ಅಂತಿಮ ತೀರ್ಮಾನ ತಗಂಬೋರಾದ್ದರಿಂದ ಅವರಲ್ಲಿಗೇ ಹೋಗೋದು ಉತ್ತಮ ಅಲ್ಲವೆ?”

-ಅಂದ. ಸಮಯ ಕಾಯುತ್ತಿದ್ದ ಚಂಡೀದಾಸ

“ನಿಮ್ಮ ಹತ್ತಿರವೇ, ನಿಮ್ಮ ಮನೆಯಲ್ಲೇ ಹತ್ತು ರಾಜ್ಯ ನಡೆಸುವಷ್ಟು ಚಿನ್ನ ಇದೆಯಲ್ಲ ಪ್ರಧಾನರೇ!”

-ಅಂದ! ಅರ್ಥಕೌಶಲ ಹೊರಡುವುದಕ್ಕೆ ಎದ್ದು ನಿಂತು,

“ಇದು ನಿನ್ನ ರಸವಿದ್ಯೆ ಹೇಳಿಕೊಟ್ಟ ಸುಳ್ಳು!”

ಎಂದು ಹೇಳಿದ. ಇದನ್ನು ಕೇಳಿದ್ದೇ ಚಂಡೀದಾಸನಿಗೆ ಅವಮಾನವಾಗಿ ಎದೆಯಲ್ಲಿ ಸೇಡಿನ ಕಿಡಿ ಹೊತ್ತಿತ್ತು.

“ಇಗೋ ಖಚಿತವಾಗಿ ಹೇಳ್ತೇನೆ ಕೇಳಿ: ನಿಮ್ಮ ಮನೆಯಲ್ಲಿ ಆರು ಕಡಾಯಿ ಚಿನ್ನ ಇಲ್ಲ ಅಂದರೆ ಈ ಕ್ಷಣವೆ ತಲೆದಂಡ ಕೊಟ್ಟೇನು! ನನ್ನಿಂದ ನೀವೇ ಎರಡು ಬಾರಿ ನಿಧಿ ತೆಗೆಸಿದಿರಿ ನೆನಪಿಲ್ಲವೆ ಪ್ರಧಾನರೇ? ‘ನಿಧಿ ವಿಷಯದಲ್ಲಿ ಚಂಡೀದಾಸನ ಮುಂದೆ ಛಪ್ಪನೈವತ್ತಾರು ದೇಶಗಳಲ್ಲಿ ಯಾರಿಲ್ಲ! ಯಾರೂ ಇಲ್ಲ!!’ ಅಂತ ನೀವೇ ಅರಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದಿರಿ!”

-ಎಂದು ಹೇಳುತ್ತ ಜಗಳಕ್ಕೆ ಕಾದವರಂತೆ ಎದ್ದು ನಿಂತ. ಅವನ ದನಿಯಲ್ಲಿ ತನ್ನ ಬಗ್ಗೆ ತನ್ನ ವಿದ್ಯೆಯ ಬಗ್ಗೆ ಆತ್ಮವಿಶ್ವಾಸವಿತ್ತು. ತನಗಾಗಲಿ ತನ್ನ ವಿದ್ಯೆಗಾಗಲಿ ಆಗುವ ಅವಮಾನವನ್ನ ಅವನೆಂದೂ ಸಹಿಸುವಾತನಲ್ಲ. ಮಾತಾಡುವಾಗ ಆತ ತನ್ನ ತೋರುಬೆರಳುಗಳನ್ನ ಅಲುಗಿಸುತ್ತ ಪ್ರಧಾನಿಯನ್ನು ಗದುರುವಂತೆ ಕಾಣುತ್ತಿತ್ತು.

ಬೆಳುದಿಂಗಳು ಬಲಿತಿದ್ದರೂ ಹಗಲಿನ ಸೆಕೆಯಿನ್ನೂ ಹಾಗೇ ಇತ್ತು. ಅನತಿ ದೂರದಲ್ಲಿ ತರುಲತೆಗಳಿದ್ದರೂ ಅವೂ ಸುಂದರವಾಗಿ ಕಾಣುತ್ತಿರಲಿಲ್ಲ. ಚಂದಿರನ ಸುತ್ತ ಧೂಳು ಮುಸುಕಿದಂತೆ ಬೂದಿಬಣ್ಣದ ಮೋಡ ಮುಸುಕಿತ್ತು. ಇಲ್ಲಿಗೆ ಬರಬಾರದಿತ್ತೆಂದು ಪ್ರಧಾನಿಗೆ ಅನ್ನಿಸಿತು. ಆದರೆ ಹಿರಿತನಕ್ಕೆ ಗೌರವ ಕೊಟ್ಟು ಬಂದಾಗಿತ್ತು. ಇಲ್ಲಿ ನೋಡಿದರೆ ಎಲ್ಲರೂ ವೈರಿಗಳಾಗಿದ್ದಾರೆ! ಮಧ್ಯಾಹ್ನ ಚಂಡೀದಾಸನಿಗೆ ಬಾಯಾರಿಕೆ ಕೊಡುವಾಗ ಅಪಶಕುನವಾದದ್ದು ನೆನಪಾಗಿ ವಿಷಾದವಾಯ್ತು.

“ಆಯ್ತಪ್ಪ, ನಾನು ಬರ್ತೀನಿ; ನಾಳೆ ಮಾತಾಡೋಣ”

ಎಂದು ಹೇಳಿ ಅಲ್ಲಿಂದ ಕಾಲ್ದೆಗೆಯಲಿಕ್ಕೆ ನೋಡಿದ. ಜಗಳಕ್ಕೆ ಸಿದ್ಧನಾಗಿದ್ದ ಚಂಡೀದಾಸನಿಗೆ ನಿರಾಸೆಯಾಯ್ತು.

“ತಲೆದಂಡ ಎಂದು ನನ್ನ ಪಂಥ ಹೇಳಿದೆ. ನಿಮ್ಮ ಪಂಥ ಹೇಳಲೇ ಇಲ್ಲವಲ್ಲ ಪ್ರಧಾನರೇ.”

-ಎಂದು ಹೋಗುತ್ತಿದ್ದ ಅರ್ಥಕೌಶಲನ ಕೆಣಕಿ ಸವಾಲಿನಂತೆ ಎದುರು ನಿಂತ! ಪ್ರಧಾನಿ ಸುಮ್ಮನೇ ನಿಂತ. ಚಂಡೀದಾಸ ಬಿಡಲಿಲ್ಲ.

“ನನ್ನ ಪಂಥ ಮಾತ್ರ ಕೇಳಿ ನಿಮ್ಮದನ್ನ ಹೇಳದಿದ್ದರೆ ಹ್ಯಾಗೆ ಪ್ರಧಾನರೆ? ನಿಮ್ಮ ಮನೆಯಲ್ಲಿ ಆರು ಕಡಾಯಿ ಚಿನ್ನದ ಹಣ ಇದ್ದದ್ದೆ ನಿಜವಾದರೆ ಎರಡು ಕಡಾಯಿ ನನ್ನದೊ?”

“ಯಾರದೋ ಹಣವನ್ನ ಕೊಡೋದಕ್ಕೆ ನಾನ್ಯಾರಯ್ಯಾ?”

“ಯಾರದೋ ಹಣ ನಿಮ್ಮಲ್ಲಿಗೆ ಹ್ಯಾಗೆ ಬಂತು ಸ್ವಾಮಿ?”

“ಅದು ನಮ್ಮ ನಮ್ಮ ವಿಶ್ವಾಸವಯ್ಯಾ, ಅದನ್ನೆಲ್ಲಾ ದೊಡ್ಡಮನುಷ್ಯ ನಿನ್ನ ಮುಂದೆ ಹೇಳಬೇಕೊ? ತೊಲಗಯ್ಯಾ”

ಆಮೇಲೆ ತಂತಾನೇ ಮಾತಾಡಿಕೊಂಡಂತೆ ಚಂಡೀದಾಸ ಹೇಳಿದ:

“ಆರು ಕಡಾಯಿ ಹಣ ಇಟ್ಟುಕೊಂಡು ಪಟ್ಟಾಭಿಷೇಕಕ್ಕೆ ಹಣ ಇಲ್ಲ ಅಂತಾರೆ! ಯಾರದೋ ಹಣ ಪ್ರಧಾನರ ಮನೆಯಲ್ಲಿ! ಈ ರಾಜ್ಯವನ್ನ ದೇವರೇ ಕಾಪಾಡಬೇಕು!…”

ಧನಪಾಲ ತಾಳ್ಮೆಗೆಟ್ಟು ನಿಂತ ಪ್ರಧಾನಿಯನ್ನ ನೋಡುತ್ತ,

“ಇದಕ್ಕೆಲ್ಲಾ ದೇವರ್ಯಾಕೆ ಬರಬೇಕಣ್ಣ? ವರ್ತಕರೇ ಮುಂದೆ ಬಂದು ಕಾಪಾಡುತ್ತಾರೆ, ಬೇಕೆನಿಸಿದರೆ ಚಾಣಕ್ಯನೇ ಮುಂದಾಗಿ ಅರಸೊತ್ತಿಗೆ ಬದಲು ಮಾಡುತ್ತಾನೆ.”

ಅರ್ಥಕೌಶಲ ಉಕ್ಕಿಬಂದ ಸಿಟ್ಟನ್ನ ನಿಯಂತ್ರಿಸಿಕೊಂಡು ಕುದುರೆ ಏರಿ, ಧನಪಾಲನನ್ನ ಹರಿತ ದೃಷ್ಟಿಯಿಂದ ಇರಿಯುತ್ತ ಹೇಳಿದ-

“ವರ್ತಕ ಕುಲದ ಜ್ಞಾನಜ್ಯೋತಿಯ ಹಾಗೆ ಮಾತಾಡಬೇಡ. ಅರಸೊತ್ತಿಗೆ ಬದಲಾಗೋದು ವರ್ತಕನಿಂದಲ್ಲ. ಒಬ್ಬ ಪುಂಡ, ಒಬ್ಬ ಚಾಣಕ್ಯ ಇವರಿಬ್ಬರ-ಕಲಬೆರಕೆಯಿಂದ! ಪುಂಡನಿಗೆ ಅರಸೊತ್ತಿಗೆ ಬೇಕು. ಚಾಣಕ್ಯನಿಗೆ ಹೊಸ ಸುಖಗಳು ಬೇಕು. ಅದಕ್ಕಾಗಿ ಇಬ್ಬರೂ ಕಲಬೆರಕೆಯಾಗಿ ಬಡಪ್ರಜೆಯ ಬಳಿಗೆ ಹೋಗುತ್ತಾರೆ. ಪ್ರಜೆಯನ್ನ ಕಂಡರೆ ಇಬ್ಬರಿಗೂ ಹೇಸಿಕೆ. ಆದರೂ ಅವನನ್ನ ಸಂಗೀತದಲ್ಲದ್ದಿದ ಹೊಗಳಿಕೆಯಲ್ಲಿ ಉಸಿರುಗಟ್ಟುವಂತೆ ಮುಚ್ಚುತ್ತಾರೆ. ಆತ ಹೊಗಳಿಕೆಯಿಂದ ಉಬ್ಬಿ ತನ್ನ ಬಲ ಕೊಡುತ್ತಾನೆ. ಆ ಬಲದಿಂದ ಪುಂಡ ಅರಸನಾಗ್ತಾನೆ. ಚಾಣಕ್ಯ ಅಧಿಕಾರಿಯಾಗ್ತಾನೆ. ಬಡ ಪ್ರಜೆಗೂ ಬಹುಮಾನವಿದೆ, ಅವನ ಹೆಗಲ ಮೇಲೆ ಹೊಸ ನೊಗ ಬರುತ್ತದೆ! ಇದು ರಾಜಕಾರಣ!”

“ಹಾಗಿದ್ದರೆ ವರ್ತಕನಿಗೆ ಏನೂ ಇಲ್ಲವೊ?”

“ಇದೆ! ವರ್ತಕನಿಲ್ಲದೆ ರಾಜ್ಯ ಬದುಕಲಾರದು. ಯುದ್ಧವಿಲ್ಲದೆ ವರ್ತಕ ಬದುಕಲಾರ! ಅರಸೊತ್ತಿಗೆ ಬದಲು ಮಾಡ್ತೇನೆ ಅಂದೆಯಲ್ಲ, ಅದಕ್ಕೇ ರಾಜಕಾರಣದ ಮೊದಲ ಪಾಠ ಗೊತ್ತಿರಲಿ ಅಂತ ಹೇಳಿದೆ. ಇಕೊ ಹೊರಟೆ!”

-ಎಂದು ಹೇಳಿ ಕುದುರೆ ಓಡಿಸಿದ. ಶಿಖರಸೂರ್ಯನೂ ಕುದುರೆ ಹತ್ತಿದ.

* * *

ಶಿಖರಸೂರ್ಯ ಬಿಟ್ಟ ಬಾಣದ ಹಾಗೆ ತನ್ನ ವೈದ್ಯ ಶಾಲೆಗೆ ಕುದುರೆ ಓಡಿಸಿದ. ಅಲ್ಲಿ ನೋಡಿದರೆ ಬೆಟ್ಟ ಮತ್ತು ಹುಲಿಯರ ಬದಲು ಬೇರೆ ಇಬ್ಬರು ಕಾವಲುಗಾರರಿದ್ದರು! ಧಸ್ಸೆಂದು ಎದೆ ಕುಸಿಯಿತು. ಅಯ್ಯೋ ನನ್ನ ಬದುಕು ಕೊಚ್ಚೆ ನೀರಲ್ಲಿ ಕೊಚ್ಚಿ ಹೋಯಿತೆಂದು ಹೃದಯ ಪರಚಿಕೊಂಡ.

“ಬೆಟ್ಟ ಹುಲಿಯರೆಲ್ಲಿ?”

-ಎಂದು ಕೋಪದಲ್ಲಿ ಕಂಪಿಸುತ್ತ ದನಿ ಎತ್ತರಿಸಿ ಕಣ್ಣು ಕಿಸಿದು ಕೇಳಿದ.

“ತಮ್ಮಟ್ಟಿಗೆ ಓಗವ್ರೆ. ಅವರ ಜಾಗದಲ್ಲಿ ನಾವಿದ್ದೀವಿ!” ಎಂದೊಬ್ಬ ಹೆಳಿದ.

“ನಿಮ್ಮನ್ನ ನಿಯಮಿಸಿದವರ್ಯಾರು?”

“ಸುಕ್ರಣ್ಣ”

“ನಿಜ ಬೊಗಳು”

-ಎಂದು ಬಲವಾಗಿ ಅವನ ಕೆನ್ನೆಗೆ ಹೊಡೆದ. ಏಟಿನ ರಭಸಕ್ಕೆ ಅವನು ಅಷ್ಟು ದೂರ ಹೋಗಿ ಬಿದ್ದ. ಇನ್ನೊಬ್ಬನನ್ನು ಎಡಗೈಯಲ್ಲಿ ಹಿಡಿದು ಬಲಗೈಯಿಂದ ಅವನದೇ ಭಲ್ಲೆ ಕಸಿದುಕೊಂಡು, ಏಳಲಿದ್ದವನ ಮೇಲೆ ಕಾಲಿಟ್ಟು, ಗಂಟಲ ಮೇಲೆ ಭಲ್ಲೆ ಊರಿ ಕೇಳಿದ.

“ನಿಜ ಬೊಗಳು” ನಿಮ್ಮನ್ನ ನೇಮಿಸಿದವರು ಯಾರು?”

“ಪ್ರಧಾನರು.”

ಕಿರುಚಲಿಕ್ಕಾಗಲಿ, ಬಿಡಿಸಿಕೊಳ್ಳಲಿಕ್ಕಾಗಲಿ ಅವಕಾಶ ಕೊಡದೆ ಚಕ್ಕನೆ ಇಬ್ಬರನ್ನೂ ಭಲ್ಲೆಯಿಂದ ಇರಿದು ನೆಲಮನೆಗೆ ಧಾವಿಸಿದ. ದಡ ದಡ ಇಳಿದು ನೋಡಿದರೆ ಆರೂ ಚಿನ್ನದ ಕಡಾಯಿಗಳು ಕಣ್ಮರೆಯಾಗಿದ್ದವು! ತಕ್ಷಣ ಮ್ಯಾಲೆ ಬಂದು ಕುದುರೆಯೇರಿ ಅರಮನೆಗೆ ಓಡಿಸಿದ.

ಮಲಗಿದ್ದ ಯುವರಾಜನನ್ನ ಎಬ್ಬಿಸಿ, ಭೇಟಿಯಾಗಿ ಪ್ರಧಾನಿಯ ಮನೆಯಲ್ಲಿ ಆರು ಕಡಾಯಿ ಚಿನ್ನದ ಹಣ ಇದ್ದುದನ್ನ ಹೇಳಿದ. ಪ್ರಧಾನಿಯೇ ಹಣಕ್ಕಾಗಿ ತಮ್ಮನ್ನು ಅಡಗಿಸಿಟ್ಟುದೆಂದು ಹೇಳಿದ. ಯುವರಾಜ ಆವಕ್ಕಾಗಿ ಇವನನ್ನೆ ನೋಡುತ್ತಿದ್ದರೆ ಈತ ಮುಂದುವರೆದು, ‘ಬೇರೆ ಕಡೆಗೆ ಸಾಗಿಸುವ ಮುನ್ನ ಈಗಲೇ ತಾವು ಪರೀಕ್ಷಿಸಿದರೆ, ಹಣ ಖಂಡಿತ ಸಿಕ್ಕುತ್ತದೆ’ ಎಂದ! ‘ಉದ್ದೇಶಪೂರ್ವಕ ಹಣ ಇಟ್ಟುಕೊಂಡು ಪಟ್ಟಾಭಿಷೇಕವನ್ನು ಮುಂದೂಡುತ್ತಿದ್ದಾನೆಂದು ಹೇಳಿದ. ಈಗಲ್ಲದಿದ್ದರೆ ಬೆಳಿಗ್ಗೆ ಹೋದರೂ ಹಣ ಸಿಕ್ಕಲಾರದೆಂದು ಎಚ್ಚರಿಸಿದ.

ಚಪಲ ಚಿತ್ತದ ಯುವರಾಜ ತಕ್ಷಣವೇ ಮಹಾರಾಣಿಗೂ ತಿಳಿಸದೆ ತನ್ನ ಭಂಟರೊಂದಿಗೆ ಅರ್ಥಕೌಶಲನ ಮನೆಗೆ ದಾಳಿಯಿಟ್ಟೇ ಬಿಟ್ಟ!

ಆರು ಕಡಾಯಿ ಚಿನ್ನದ ಹಣದೊಂದಿಗೆ ಯುವರಾಜ ಅರಮನೆಗೆ ಹಿಂದಿರುಗಿ ಬಂದಾಗ ಮಧ್ಯರಾತ್ರಿ ಮೀರಿತ್ತು. ಸೇವಕಿಯರು ಬೇಡಬೇಡವೆಂದರೂ ಮಲಗಿದ್ದ ಮಹಾರಾಣಿಯನ್ನ ಎಬ್ಬಿಸಿದರು. ಕೋಪದಲ್ಲಿ ಸಿಡಿಮಿಡಿಗೊಳ್ಳುತ್ತ ಆಕೆ ಬಂದಾಗ “ಅಮ್ಮಾ ರಾಜಮಾತೇ” ಎಂದು ಉದ್ದಕ್ಕೂ ಶಿರಸಾಷ್ಟಾಂಗ ನಮಸ್ಕರಿಸಿ,

“ನನ್ನನ್ನು ಅಪಹರಿಸಿದ್ದು ಯಾರೆಂದು ಗೊತ್ತಾಯಿತು ತಾಯಿ! ಕಳ್ಳ ಮಾಲು ಸಮೇತ ಕೈಗೆ ಸಿಕ್ಕಿಬಿದ್ದ! ಇಕೊ ಆರು ಕಡಾಯಿ ಚಿನ್ನ! ಇದೆಲ್ಲದರ ರೂವಾರಿ ನಿಮ್ಮ ಪ್ರಧಾನಿ!”

-ಎಂದು ಕಡಾಯಿಗಳ ಮೇಲಿನ ಬಟ್ಟೆ ತೆಗೆದು ತೋರಿಸಿದ. ಗೆಲುವಿನ ಹೆಮ್ಮೆ ಅಹಂಕಾರಗಳಿಂದ ಅವನ ಮುಖ ಫಳಫಳ ಹೊಳೆಯುತ್ತಿತ್ತು. ಚಿನ್ನ ಕಂಡು ಮಹಾರಾಣಿಗೆ ಸಂತೋಷವಾಯಿತಾದರೂ ಇದನ್ನೆಲ್ಲ ಪ್ರಧಾನಿ ಮಾಡಿದ್ದು ಎಂಬುದನ್ನು ನಂಬದಾದಳು.

“ಇದೆಲ್ಲ ನಿಜವಾಗಿ ಪ್ರಧಾನಿಯ ಮನೆಯಲ್ಲಿತ್ತೇ?” ಎಂದಳು.

“ಹೌದು ರಾಜಮಾತೇ ಹೌದು. ಇದನ್ನೆಲ್ಲ ಅವರ ಮನೆಯಿಂದಲೇ, ಇವೇ ಕೈಗಳಿಂದ, ಈಗಷ್ಟೇ ತಂದೆವು! ಹೌದೇನ್ರೋ?”

-ಎಂದು ಭಂಟರನ್ನು ಕೇಳಿ “ಹೌದು ಮಹಾರಾಣಿ” ಎಂದು ಅವರೂ ಸಾಕ್ಷಿ ನುಡಿವಂತೆ ಮಾಡಿದ.

“ನೀವಿದನ್ನು ತರುವಾಗ ಪ್ರಧಾನಿಗಳು ಮನೆಯಲ್ಲಿದ್ದರೆ?”

“ಇದ್ದ ರಾಜಮಾತೆ. ಇದನ್ನೆಲ್ಲ ಅವನೆದುರಿನಲ್ಲೇ ತಂದೆವು. ಹೌದೇನ್ರೋ?”

“ಹೌದು ಹೌದು ಮಹಾರಾಣಿ. ನಾಳೆ ಬೆಳಿಗ್ಗೆ ಬಂದು ತಮ್ಮನ್ನು ಕಾಣುತ್ತೇನೆ. ಮಹಾರಾಣಿಯವರಲ್ಲಿ ನನ್ನ ಪರವಾಗಿ ವಿಜ್ಞಾಪಿಸಿ ಅಂತ ಅಂದರು.”

“ಆಯ್ತು, ಈ ಕಡಾಯಿಗಳನ್ನ ನನ್ನ ಕೋಣೆಯಲ್ಲಿಡಿ. ನಾಳೆ ಬೆಳಿಗ್ಗೆ ವಿಚಾರಿಸುವಾ. ಈಗ ನೀವು ಹೋಗಿ ಮಲಗಿಕೊಳ್ಳಿ.”

-ಎಂದು ಎಲ್ಲರನ್ನೂ ಕಳಿಸಿ ಆಮೇಲೆ ಯುವರಾಜನೊಬ್ಬನನ್ನೇ ಕರೆದು,

“ನಾಳೆ ಬೆಳಿಗ್ಗೆ ನಾವು ವಿಚಾರಿಸುತ್ತೇವೆ. ಕೋಪದ ಆವೇಶದಲ್ಲಿ ಪ್ರಧಾನಿಗಳ ಬಗ್ಗೆ ನೀನು ಲಘುವಾಗಿ ಮಾತನಾಡಬಾರದು. ಅವರು ನಿನ್ನ ತಂದೆ ಸಮಾನರೆಂಬುದು ನೆನಪಿರಲಿ.”

-ಎಂದು ತಾಕೀತು ಮಾಡಿ ಕಳಿಸಿದಳು.

ತಡವಾಗಿ ನಿದ್ದೆಗೆ ಸಂದ ಮಹಾರಾಣಿ ಹಕ್ಕಿಗಳ ಚಿಲಿಪಿಲಿ ಸುಪ್ರಭಾತದೊಂದಿಗೆ ಎಚ್ಚರವಾದಾಗ ಸೊಗಸಾದ ಹರ್ಷದಾಯಕವಾದ ಮುಂಜಾನೆ ಎದುರುಗೊಂಡಿತು. ಸೂರ್ಯೋದಯದೊಂದಿಗೆ ತಂಪುಗಾಳಿಯೂ ಬೀಸಿ ಮನಸ್ಸು ನಿಶ್ಚಿಂತ ಹಕ್ಕಿಯಂತೆ ಹಗುರವಾಗಿದ್ದಾಗ ಎದುರಿಗಿದ್ದ ಆರು ಕಡಯಿಗಳನ್ನು ಕಂಡು ನೆಮ್ಮದಿಯ ಕ್ಷಣಗಳು ಧಸಕ್ಕೆಂದು ಕುಸಿದು ಹೋದವು. ಕೂಡಲೆ ಸೇವಕನೊಬ್ಬನನ್ನು “ಪ್ರಧಾನಿಯನ್ನ ಕರೆತು ತಾ” ಎಂದು ಓಡಿಸಿದಳು. ಅವಳಿಗರಿವಿಲ್ಲದಂತೆಯೇ ಚಡಪಡಿಕೆಯಿಂದ ತಾಳ್ಮೆಗೆಟ್ಟಳು. ಚಿಂತೆ ಆತಂಕಗಳಿಂದ ಮನಸ್ಸು ಭಾರವಾಗಿ ಬಲ ಮುಂಗೈ ಮೇಲೆ ಗದ್ದ ಊರಿ ಕುಂತಳು.

ಸಾಮಾನ್ಯವಾಗಿ ಬೆಳಿಗ್ಗೆದ್ದು ಪಾದರಸದಂತೆ ಚಲನಶೀಲವಾಗುವ ಮಹಾರಾಣಿ ಇವತ್ತು ಪೀಠ ಬಿಟ್ಟು ಎದ್ದಿರಲಿಲ್ಲ. ಸೇವೆ ಹೇಳಬಹುದೆಂದು ಒಬ್ಬಳಾದ ಮೇಲೆ ಒಬ್ಬಳು ಸೇವಕಿಯರು ಬಂದು ಕಾದು ಕಾದು ಹೋದರು. ಸೇವಕಿಯರಿಗೆ ಹೇಳುವಂಥಾದ್ದು ಏನೂ ಇರಲಿಲ್ಲವಾದ್ದರಿಂದ ಬಾಯಿಂದ ಮಾತು ಬರಲಿಲ್ಲ. ಬಂದ ಮಾತುಗಳು ತನಗೇ ಕೇಳಿಸದಷ್ಟು ಕೃಶವಾಗಿದ್ದವು. ಕೃಶವಾದ ದನಿಯಲ್ಲೇ,

“ಪ್ರಧಾನಿಗಳು ಬಂದರೇನು ನೋಡೇ…” ಎಂದಳು.

ಆಮೇಲೆ ಮತ್ತೆ ಘನವಾದ ಮೌನ ಕೋಣೆಯನ್ನು ಆವರಿಸಿತು.

ಕೊನೆಗೂ ಸೇವಕ ಬಂದು ಬಾಗಿ ನಿಂತು,

“ಮಹಾರಾಣಿ, ಪ್ರಧಾನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!”

ಎಂದು ಅಳುತ್ತ ಹೇಳಿದ. ಮಹಾರಾಣಿ ಎದ್ದು “ಹಾ!” ಎಂದು ಬಾಯಿ ತೆರೆದವಳು ಹಾಗೇ ಕುಸಿದಳು.