ಅದಕ್ಕೇ ಇದು ನಿಜವೇ? ಎಂದು ಅನುಮಾನ ಬರುತ್ತಿತ್ತು. ತಾನು ಮೊದಲಿನ ಚಿನ್ನಮುತ್ತ ಯಾ ಜಯಸೂರ್ಯ ಯಾ ಶಿಖರಸೂರ್ಯನೇ? ಅನ್ನಿಸುತ್ತಿತ್ತು. ಯಾರನ್ನೂ ನಂಬದ ಶಿಖರಸೂರ್ಯ ಈಗ ವಿದ್ಯುಲ್ಲತೆಯನ್ನು ನಂಬಿದ. ಮೊದಮೊದಲು ನಂಬಿಕೆ ಅಂಬೋದು ಕ್ಷಣಿಕವೆನ್ನುತ್ತಿದ್ದವನು ಈಗ ತನಗೇ ಗೊತ್ತಿಲ್ಲದ ಹಾಗೆ ನಂಬಿಕೆ ಬದುಕಿಗೊಂದು ಆಧಾರ ಕೊಡುತ್ತದೆಂದು ನಂಬುವವನಾದ. ಇನ್ನೊಬ್ಬರಿಗೆ ಈ ನಂಬಿಕೆಯನ್ನು ಹಂಚಲು ಸಿದ್ಧನಾಗದಿದ್ದರೂ ವಿದ್ಯುಲ್ಲತೆಯನ್ನು ಮಾತ್ರ ನಂಬಿದ. ಅವಳ ಸೂಕ್ಷ್ಮಗ್ರಹಿಕೆ, ಚುರುಕುತನ ವ್ಯವಹಾರಜ್ಞಾನ, ಒಳನೋಟಗಳು ಅವಳ ಬಗ್ಗೆ ಹೆಚ್ಚಿನ ಗೌರವ ಅಭಿಮಾನಗಳು ಮೂಡುವಂತೆ ಮಾಡಿದವು. ಸುಳ್ಳು ವಿನಯವನ್ನಾಗಲಿ, ನಿಷ್ಠೆಯನ್ನಾಗಲಿ ಅವಳೆಂದೂ ಅಭಿನಯಿಸುತ್ತಿರಲಿಲ್ಲ.

ತಾನು ಈವರೆಗೆ ಯಾರಿಗಾಗಿ ಮೀಸಲಾಗಿದ್ದೆನೋ ಆ ಗಂಡಸು ಇವನೇ ಎಂದು ವಿದ್ಯುಲ್ಲತೆಗೂ ಖಾತ್ರಿಯಾಯಿತು. ಮುಖ ನೋಡಿಯೇ ಇವನ ಇಷ್ಟಾನಿಷ್ಟಗಳನ್ನು, ಅಭಿಪ್ರಾಯಗಳನ್ನು ತಿಳಿಯುತ್ತಿದ್ದಳು. ಇಬ್ಬರ ಮಧ್ಯೆ ಸಂವಹನಕ್ಕೆ ಸರಳವಾದ ವ್ಯವಸ್ಥೆಯೊಂದನ್ನು ಬಹು ಬೇಗ ನಿರ್ಮಿಸಿಕೊಂಡರು. ಒಂದೆರಡು ನೋಟಗಳು, ಒಂದೆರಡು ಮುಗುಳು ನಗೆಗಳ ವಿನಿಮಯ, ಅಗತ್ಯ ಬಿದ್ದರೆ ಅನ್ಯರಿಗೆ ಕಾಣದಂತೆ ಒಂದೆರಡು ಕೈಬಾಯಿ ಸನ್ನೆಗಳು ಇವಿಷ್ಟರಿಂದಲೇ ಇಬ್ಬರೂ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಸಂದೇಹಕ್ಕೆ ಎಡೆ ಇಲ್ಲದಂತೆ ಸಂವಹನ ಮಾಡುತ್ತಿದ್ದರು. ಮಕ್ಕಳ ಬಗೆಗಿನ ತಂದೆಯ ಕರ್ತವ್ಯಗಳನ್ನು ಅವಳೇ ಜ್ಞಾಪಿಸಿ ಅವನ ಮಹತ್ವಾಕಾಂಕ್ಷೆಗಳನ್ನು ಉದ್ದೀಪಿಸಿದಳು. ಆಟಗುಳಿತನದ ಚಲನೆಯ ವಿಲಾಸದಿಂದ, ತನ್ನ ಹಾಗೇ ದೊಡ್ಡಗಾತ್ರದಲ್ಲಿ ಅಸಾಧಾರಣ ಮೈಕಟ್ಟಿನಿಂದ ಬೆಳೆಯುತ್ತಿದ್ದ ರವಿಕೀರ್ತಿ, ಹೊಳೆವ ನೀಲಿ ಕಣ್ಣಿನ, ನೀಳಗೂದಲಿನ ಅಪೂರ್ವ ಸುಂದರಿಯಾಗಿ ಅಸಾಧಾರಣ ಸ್ಮರಣಶಕ್ತಿಯುಳ್ಳ ಜಾಣೆಯಾಗಿ ಬೆಳೆಯುತ್ತಿದ್ದ ಮುದ್ದುಗೌರಿ ಇವರನ್ನು ಕಂಡಾಗಲೆಲ್ಲ ಕವಿರಾಜ ಭಾವೋದ್ವೇಗಕ್ಕೆ ಒಳಗಾಗಿ ಅವರ ಭವಿಷ್ಯದ ಕನಸು ಕಾಣಲಿಕ್ಕೆ ಸುರುಮಾಡಿದ್ದ. ವಿದ್ಯುಲ್ಲತೆ ಅವನ ಬಾಳಿಗೊಂದು ನೆಮ್ಮದಿ ಕೊಟ್ಟರೆ ಮಕ್ಕಳು ಅವನ ಬದುಕಿಗೊಂದು ಉದ್ದೇಶವನ್ನು, ಅರ್ಥವನ್ನು ಕೊಟ್ಟರು. ವಯಸ್ಸಾಗಿ ಧಣಿದವನ ಬದುಕಿಗೆ ಹೊಸ ಯೌವನ ಪ್ರಾಪ್ತಿಯಾಗಿ ಆನಂದಫಲಗಳು ದೊರೆಯಲಾರಂಭಿಸಿದವು.

ಛಾಯಾದೇವಿ ಮಾತ್ರ ಬಂದ ಎಲ್ಲಾ ಚಾಡಿಗಳಿಗೆ ಕಿವಿಯೊಡ್ಡುತ್ತ, ಹೊಸವನ್ನು ಹೊಸೆಯುತ್ತ, ತನ್ನ ಪರಿವಾರದೊಂದಿಗೆ ಅಸೂಯೆಯಿಂದ ಉರಿಯುತ್ತ ಕಾಲ ಕಳೆಯುತ್ತಿದ್ದಳು. ಮಕ್ಕಳೊಂದಿಗೆ ಬಿಳಿಗಿರಿಗೆ ಹೋಗಿದ್ದಳಲ್ಲ, ಅಲ್ಲಿಯಾದರೂ ನೆಮ್ಮದಿಯಿತ್ತೆ?

“ನಿನ್ನ ಗಂಡ ವಿಷಕನ್ಯೆಯ ಕೂಡಿಕೆ ಸಂಗ ಮಾಡಿರುವನಂತೆ! ಹೌಂದೆ!” ಎಂದು ಚಿಕ್ಕಮ್ಮನೂ ಕೇಳಿ ಸಹಾನುಭೂತಿ ಸೂಚಿಸಿದ್ದಳು. ಅಲ್ಲಿಯೂ ಬಹಳ ದಿನ ನಿಲ್ಲಲಾಗದೆ ವಾಪಸಾದಳು.

ಹಿಂದಿರುಗಿ ಕನಕಪುರಿಗೆ ಬರುವಾಗ ಇಳಿಹೊತ್ತಾಗಿತ್ತು. ಸೂರ್ಯನಾಗಲೇ ಪಡುವಣಕ್ಕೆ ಹೊರಳಿ, ಬಿಸಿಲು ತನ್ನ ಕಾವು ಕಳೆದುಕೊಂಡು ಚಿನ್ನದ ವರ್ಣಕ್ಕೆ ತಿರುಗಿತ್ತು. ಗಾಡಿಯ ಗಾಲಿಗಳು ಬಡಬಡ ಸದ್ದು ಮಾಡುತ್ತಿದ್ದವು. ಗೊರಸುಗಳ ಟಣತ್ಕಾರ, ಗಾಡಿಯ ಕುಲುಕಾಟಗಳಿಗೆ ಮಕ್ಕಳು ದಣಿದು ಅವಳ ತೊಡೆಯ ಮೇಲೆ ನಿದ್ದೆ ಹೋಗಿದ್ದವು. ಮನೆಯ ದಾರಿ ಬಂದ ಕೂಡಲೇ ಗಾಡಿ ನೇರ ಕನಕಪುರಿಗೆ ಹೋಗುವ ಬದಲು ಎಡಗಡೆಗೆ ತಿರುಗಿತು. ದಾರಿಯಲ್ಲೇ ಸಂಜೀವಿನಿ ಇತ್ತು.

ಗಾಡಿಯಿಂದ ಹಣಿಕಿ ಹಾಕಿದಾಗ ನೇರಳೆ ಮರದಡಿ ತನ್ನ ಪತಿರಾಯ ಮತ್ತು ವಿದ್ಯುಲ್ಲತೆ ಜೊತೆಯಾಗಿ ನಿಂತಿರುವುದು ಕಂಡಿತು! ಗಾಡಿಯನ್ನು ಮರೆಗೆ ನಿಲ್ಲಿಸಿದಳು. ನೋಡಿದರೆ ಶಿಖರಸೂರ್ಯ ಕೈಗೆ ನಿಲುಕುವ ಒಂದು ಟೊಂಗೆಯನ್ನೆಳೆದು ನೇರಳೆ ಹಣ್ಣುಗಳನ್ನ ಕಿತ್ತು ವಿದ್ಯುಲ್ಲತೆಗೆ ಕೊಡುತ್ತಿದ್ದ. ಅವಳು ತಗೊಂಡು ತಿನ್ನುತ್ತಿದ್ದಳು. ಅವಳ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. ಅವಳು ಒಮ್ಮೊಮ್ಮೆ ತನಗೆ ಬೇಕಾದ ಗೊಂಚಲ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಳು. ಈತ ಕೃತಾರ್ಥನಾಗಿ ಉಮೇದಿಯಿಂದ ಟೊಂಗೆಯನ್ನು ಬಗ್ಗಿಸಿ ಆ ಹಣ್ಣು ಅವಳಿಗೆ ಸಿಕ್ಕುವಂತೆ ಮಾಡುತ್ತಿದ್ದ. ಪ್ರೇಮದ ನಂಜೇರಿ ಇಬ್ಬರ ಮುಖಗಳೂ ಆನಂದವನ್ನು ಮುಕ್ಕಳಿಸುತ್ತ ಕೆಂಪೇರಿದ್ದವು. ಶಿಖರಸೂರ್ಯನ ಇಂಥ ನಗೆಯನ್ನು ಅವಳೆಂದೂ ಕಂಡಿರಲಿಲ್ಲ. ಅವಳಂಥ ಚೆಲುವೆ ತಾನಲ್ಲವೆಂದು ಒಪ್ಪಿಕೊಂಡಳು. ಕೂತಿದ್ದರೂ ಕಾಲಲ್ಲಿ ಶಕ್ತಿಯಿಲ್ಲವೆನ್ನಿಸಿ ಕಂಪಿಸಿದಳು. ಎದೆಗೆ ಚಳಿ ತಾಗಿ ಬಿಗಿಯಾಗಿ ಸೆರಗು ಹೊದ್ದು ಗಾಡಿ ಮುನ್ನಡೆಸಲು ಹೇಳಿದಳು. ತಾನು ಬೇಗ ಸಾಯಬಹುದೆನ್ನಿಸಿ ಗಾಬರಿಯಾಗಿ ಬೆವರಿದಳು. ತುಟಿಗಳನ್ನು ನಾಲಗೆಯಿಂದ ಸವರಿಕೊಂಡರೂ ಸಮಾಧಾನವಾಗಲಿಲ್ಲ. ತಾನು ಬಯಸಿದ ವೇಗದಲ್ಲಿ ಕುದುರೆ ಓಡುತ್ತಿಲ್ಲವೆನ್ನಿಸಿ ಕುದುರೆಗಳನ್ನು ಸಾಯುವಂತೆ ಹೊಡೆದು ಓಡಿಸಬೇಕೆಂದು ಆಜ್ಞೆಕೊಟ್ಟಳು.

ಮನೆಗೆ ಬಂದು ಪ್ರಯಾಣದ ದಣಿವೆಂದು ಹೇಳಿ ತನ್ನ ಕೋಣೆಗೆ ಹೋಗಿ ಜಂತಿ ನೋಡುತ್ತ, ಹಾಸಿಗೆಯಲ್ಲಿ ಬಿದ್ದುಕೊಂಡಳು. ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದಳು. ಆದರೆ ಮಕ್ಕಳಿವೆ. ಅವು ಅನಾಥವಾದರೆ ಗತಿ ಯಾರು? ಅನಾಥನಾದ ರವಿಯನ್ನು ಕಲ್ಪಿಸಿಕೊಂಡಳು ತಕ್ಷಣ ಕಣ್ಣೀರುಕ್ಕಿತು. ಮಕ್ಕಳಿಗಾಗಿ ಬದುಕಬೇಕೆಂದುಕೊಂಡಳು.

ಇತ್ತ ಶಿಖರಸೂರ್ಯನಿಗಾದರೂ ನೆಮ್ಮದಿಯಿತ್ತೆ? ದಿನವೆಲ್ಲಾ ಚಡಪಡಿಸುತ್ತಿದ್ದ. ಮನೆಯಲ್ಲಿದ್ದಾಗ ಮುಂಗೋಪ ಅವನ ಮೂಗಿನ ತುದಿಯಲ್ಲೇ ಕುಂತಿರುತ್ತಿತ್ತು. ಒಂದೇ ಸಮಾಧಾನವೆಂದರೆ ಮಕ್ಕಳ ಮುಂದೆ ಇಬ್ಬರೂ ತಮ್ಮ ಕೋಪತಾಪಗಳನ್ನ ನಿಯಂತ್ರಿಸಿಕೊಂಡಿದ್ದರು. ಚಿಕ್ಕಮ್ಮಣ್ಣಿಗೆ ವಿಷಯ ತಿಳಿದಿದ್ದರೂ ತಾನಾಗಿ ಬಾಯಿ ಹಾಕಿ ಜಗಳ ತೀರಿಸುವುದು ಅವಳ ಜಾಯಮಾನವಲ್ಲ.

ಶಿಖರಸೂರ್ಯನ ಹಿಂದಿನ ಜೀವನದ ಬಗ್ಗೆ ಯೋಚಿಸುವುದಕ್ಕೆ ಅಥವಾ ಕಲ್ಪಿಸಿಕೊಳ್ಳಲಿಕ್ಕೆ ಛಾಯಾದೇವಿಗೆ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ‘ಒಬ್ಬ ಮುದಿ ವೈದ್ಯನ ಸೇವೆ ಮಾಡಿಕೊಂಡು, ಮದ್ದರೆದು ಕೊಡುತ್ತ ಬೆಳೆದಿದ್ದಾನಾದೀತು. ಮೊದಮೊದಲು ಕಷ್ಟಪಟ್ಟಿದ್ದಾನು. ಆಮೇಲೆ ಅರ್ಥಕೌಶಲನ ಸಹಾಯದಿಂದ ಮುಂದೆ ಬಂದ:’ ಅವನ ತಂದೆ ತಾಯಿಗಳ ಬಗ್ಗೆಯಾಗಲಿ, ಬಂಧು ಬಳಗದ ಬಗ್ಗೆಯಾಗಲಿ ಅವಳ ಕುತೂಹಲ ಕೆರಳಲೇ ಇಲ್ಲ. ಅವಳಿಗೆ ವರ್ತಮಾನ ಇಷ್ಟ, ಮತ್ತು ಅದರಲ್ಲಿ ಬದುಕುವುದು ಅವಳಿಗೆ ಪ್ರಿಯವಾದದ್ದು. ಅದಕ್ಕೆ ಅಡ್ಡಿ ಬಂದವಳು ವಿದ್ಯುಲ್ಲತೆ!

ಅವಳ ಬಗ್ಗೆ ಯೋಚಿಸಿದಾಗೆಲ್ಲ “ಅಗ್ಗದ ಸೂಳೇರ ಜಾತೀದು!” ಎಂದು ಹೀಗಳೆದು ‘ಇವಳೊಬ್ಬಳು ತನ್ನ ಹಾಸಿಗೆಯಲ್ಲಿ ಪಾಲು ಬೇಡಲು ಬಂದಳು ಸೂಳೆಮುಂಡೆ!’ ಎಂದು ಬಯ್ದು “ಸಾಯಬಾರದೆ ಶನಿ!” ಎಂದು ಶಾಪ ಹಾಕುತ್ತಿದ್ದಳು. ವಿದ್ಯುಲ್ಲತೆಯ ಬಗ್ಗೆ ನೊಂದ ಹಾವಿನ ಸೇಡಿತ್ತು ಅವಳಲ್ಲಿ. ಯಾರು ಬಂದರೂ ಅವರೆದುರು ವಿದ್ಯುಲ್ಲತೆಗೆ ಹತ್ತೆಂಟು ಶಾಪ ಹಾಕುವುದನ್ನ ಮರೆಯುತ್ತಿರಲಿಲ್ಲ. ತನ್ನ ಕುಲವೇನು, ತನ್ನ ಸಂಸ್ಕೃತಿಯೇನು, ತನ್ನ ಅಂತಸ್ತೇನು, ತನ್ನ ಮರ್ಯಾದೆಯೇನು? ಎಂದುಕೊಳ್ಳುತ್ತ ಅವಳನ್ನು ಹೀನ ಶಬ್ದಗಳಲ್ಲಿ ನಿಂದಿಸಿ ಅದೊಂದು ಕಹಿಪದಾರ್ಥವೆಂಬಂತೆ ಮಾತಾಡುತ್ತ ತನ್ನ ಬಗ್ಗೆ ಅವರಲ್ಲಿ ಅನುಕಂಪ ಉಂಟಾಗುವಂತೆಯೂ, ಅವಳ ಬಗ್ಗೆ ತಾತ್ಸಾರವುಂಟಾಗುವಂತೆಯೂ, ಶಿಖರಸೂರ್ಯನ ಬಗ್ಗೆ (ಅಕ್ಕಪಕ್ಕ ಅವನ ಪಕ್ಷಪಾತಿಗಳಿಲ್ಲವೆಂದು ಖಾತ್ರಿ ಮಾಡಿಕೊಂಡು) ಅವನೆಷ್ಟು ಕ್ರೂರ ಅಮಾನುಷ ಎಂಬಂಥ ಭಾವನೆ ಬರುವ ಹಾಗೆಯೂ ಮಾತಾಡುತ್ತಿದ್ದಳು.

“ಅದರ ವಯಸ್ಸು ಗೊತ್ತಿಲ್ಲಮ್ಮ. ಮಾತಾಡಲಿಕ್ಕೆ ಬಾಯಿ ತೆಗೆದರೆ ಸಾಕು ನಮ್ಮ ದೊಡ್ಡಮ್ಮಣ್ಣಿಯ ಬಿಳಿನಾಯಿ ಕುಂಯ್‌ಗುಡೋದಿಲ್ಲವ? ಹಾಂಗಿರ್ತದೆ! ಅಯ್ಯೋ ಅಯ್ಯೋ ಮೊನ್ನೆ ಕುಂಯ್ಯೊ ಮುರ್ರೊ ಅಂತ ಏನೇನೋ ಅಂದ್ಕೊಂಡು ಕಣ್ಣೀರುಗರೀತಿತ್ತು! ಆಮ್ಯಾಲೆ ನಮ್ಮವನೇ ಬಂದು ಅನ್ನ ಹಾಕಿದನೋ ಏನು ಕತೆಯೋ ತಿಂದು ಸುಮ್ಮನಾಯ್ತು!…” ಇತ್ಯಾದಿ.

ನಿತ್ಯವೂ ವಿದ್ಯುಲ್ಲತೆ ‘ಈ ದಿನ ಯಾರೊಂದಿಗೆ ಮಾತಾಡಿದಳು, ಯಾರು ಎಷ್ಟು ಹೊತ್ತು ಅವಳ ಮನೆಯಲ್ಲಿದ್ದರು? ಏನೇನು ಮಾತಾಡಿದರು?’ ಎಂಬಿತ್ಯಾದಿ ವಿವರಗಳನ್ನು ಕಲ್ಪಿತವೋ ನಿಜವೋ ತರಿಸಿಕೊಳ್ಳುತ್ತಿದ್ದಳು. ಅವನ್ನು ಇನ್ನೊಬ್ಬರಿಗೆ ಹೇಳುವಾಗ ತನ್ನ ಕಲ್ಪನೆಯನ್ನೂ ಬೆರೆಸಿ ಇನ್ನೂ ವಿರೂಪಗೊಳಿಸಿ ಹೇಳುತ್ತಿದ್ದಳು. ಅವಳ ಹತ್ತಿರದ ಎಲ್ಲ ಆಭರಣ, ಸೀರೆಗಳ ಪಟ್ಟಿ ಇಟ್ಟುಕೊಂಡು, ಅವತ್ತು ಉಟ್ಟ ಸೀರೆ, ಧರಿಸಿದ ಆಭರಣಗಳಲ್ಲಿ ಅವಳೆಷ್ಟು ಅಸಹ್ಯ ಕಾಣುವಳೆಂದು ವಿವರಿಸಿ ಆನಂದಪಡುತ್ತಿದ್ದಳು. ದುರ್ದೈವವೆಂದರೆ ಅವಳು ಹೇಳಿದ ಒಂದು ಮಾತನ್ನೂ ಯಾರೂ ನಂಬುತ್ತಿರಲಿಲ್ಲ. ಯಾಕಂತಿರೋ? ಶಿಖರಸೂರ್ಯ ಕೊಟ್ಟ ಎಲ್ಲಾ ಆಭರಣ, ಸೀರೆಗಳಿಗಿಂತ ಅವಳ ನೀಲಿಕಣ್ಣುಗಳ ಕಾಂತಿ ಮತ್ತು ಮೋಹಕತೆ ಮಿಗಿಲಾಗಿತ್ತು.

ಆದರೆ ಶಿಖರಸೂರ್ಯ ಮತ್ತು ತನ್ನ ತಾಯಿಯ ಮುಂದೆ ಮಾತ್ರ ಛಾಯಾದೇವಿ ಬಾಯಿ ಬಿಗಿ ಹಿಡಿದುಕೊಂಡಿರುತ್ತಿದ್ದಳು. ಶಿಖರಸೂರ್ಯನಿಗೆ ಹೆದರುತ್ತಿದ್ದಳು. ತಾಯಿ ಬಯ್ಯುತ್ತಿದ್ದಳು. “ನೀನು ತಿಳಿದುಕೊಂಡಂಥ ಅಗ್ಗದ ಹುಡುಗಿ ಅಲ್ಲ ಅವಳು; ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡು” ಎಂದಿದ್ದಳು ತಾಯಿ.

“ನನಗೆ ನನ್ನ ಗಂಡ ಬೇಕು.”

ಎಂದು ಕಂಬನಿ ಮಿಡಿಯುತ್ತ ಇವಳು ಹೇಳಿದರೆ,

“ಅವನನ್ನು ಯಾರೂ ಕದ್ದಿಲ್ಲ. ಸುಮ್ಮನೇ ಗೋಳಾಡಬೇಡ”

ಎಂದು ಸಮಾಧಾನ ಮಾಡಲು ಪ್ರಯತ್ನಿಸಿದ್ದಳು. ಛಾಯಾದೇವಿ ಸಮಾಧಾನ ಹೊಂದಲಿಲ್ಲ. ನಿಟ್ಟುಸಿರಿಟ್ಟು,

“ನನಗೆ ನನ್ನ ಗಂಡ ಬೇಕು. ಆತ ನನ್ನ ಬಳಿಯಲಿಲ್ಲ ಅಂತ ನನಗೆ ಗೊತ್ತು. ಜೊತೆಯಲ್ಲಿ ಮಲಗುವುದಿಲ್ಲ. ಹತ್ತಿರ ಬಂದರೂ ಧ್ಯಾನ ಇನ್ನೆಲ್ಲೋ ಇರ್ತದೆ.”

ಎಂದರೆ-

“ಅದು ನಿನ್ನ ಭ್ರಮೆ” ಎಂದಿದ್ದಳು ತಾಯಿ. “ನಿನ್ನ ಭ್ರಮೆಗಳನ್ನ ಬದಿಗಿಟ್ಟು ಅವನಿಗೊಂದಿಷ್ಟು ನೆಮ್ಮದಿ ಕೊಡು, ರಾಜಕಾರಣ ಅಂದರೆ ಸೊಪ್ಪು ಕುದಿಸಿ ಪಲ್ಯ ಮಾಡಿದಂತಲ್ಲ.”

“ನೆಮ್ಮದಿ ಯಾಕೆ ಬೇಕವನಿಗೆ? ನಾನಿಲ್ಲವೆ?”

“ಅದನ್ನೇ ಹೇಳುತ್ತಿದ್ದೇನೆ, ಮುದ್ದುಮಗಳೇ,- ಅವನ ಚಿಂತೆಬಿಟ್ಟು ಮಕ್ಕಳ ಕಾಳಜಿ ಮಾಡು”.

ಎಂದವಳ ಕೂದಲು ಸಿಕ್ಕು ಬಿಡಿಸುತ್ತ ಹೇಳಿದ್ದಳು ತಾಯಿ. ಆಮೇಲೆ ಮಗಳ ಅವ್ಯವಸ್ಥೆಗೊಂಡ ಆಭರಣಗಳನ್ನು, ಸೀರೆ ಸೆರಗನ್ನು ಸರಿಪಡಿಸಿ, ಕಣ್ಣೀರಿನಿಂದ ಒದ್ದೆಯಾದ ಕೆನ್ನೆಗಳನ್ನು ಒರೆಸಿ,

“ವಿದ್ಯುಲ್ಲತೆ ಒಂದು ಮೇಣದ ಗೊಂಬೆ. ನಿನ್ನಂತೆ ಹೆಣ್ಣಲ್ಲ. ನೋಡಬಹುದೇ ವಿನಾ ಹಿಡಿಯಲಿಕ್ಕಲ್ಲ.”

ಎಂದೂ ಹೇಳಿದ್ದಳು. ಈ ಮಾತನ್ನು ಸಮಾಧಾನಕ್ಕಾಗಿ ಹೇಳಿದ್ದೆಂದು ತಾಯಿಯೇ ಅಂದುಕೊಂಡಿದ್ದಳು. ಛಾಯಾದೇವಿ ಮಾತ್ರ ಉರಿಯುತ್ತಲೇ ಇದ್ದಳು. ತನಗಾಗಿ ಮರುಗುವವರು ಯಾರೂ ಇಲ್ಲ, ತಂದೆತಾಯಿಗಳೂ ಮರುಗುವುದಿಲ್ಲ. ತಾನೇ ತನ್ನ ದೈವವನ್ನು ನೇರ್ಪುಗೊಳಿಸಿಕೊಳ್ಳಬೇಕು. ಈ ಊರಿನಲ್ಲಿ ಇಲ್ಲಾ ಅವಳಿರಬೇಕು, ಇಲ್ಲಾ ನಾನಿರಬೇಕು. ವಿದ್ಯುಲ್ಲತೆಯ ಮನೆಗೆ ಹೋಗಿ ಅವಳ ಕೈಕಾಲು ಕಟ್ಟಿಕೊಂಡು ಸೆರಗೊಡ್ಡಿ ಕೇಳುವುದು. ಮನ್ನಿಸಿದರೆ ಸೈ, ಮನ್ನಿಸದಿದ್ದರೂ ಸೈ, ಎದುರಿಸುವುದು! ಎಂದು ತೀರ್ಮಾನಿಸಿದಳು.

ವಿದ್ಯುಲ್ಲತೆಗೆ ಬಾಯಿ ಇರಲಿಲ್ಲವಾದರೂ ಹೃದಯ ಇತ್ತು. ಭಾವನೆಗಳನ್ನರಿಯುವ ಅಂತಃಕರಣ ಇತ್ತು. ಇನ್ನೊಬ್ಬರಿಗೆ ನೋವಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ಜಾಣ್ಮೆ ಇತ್ತು. ಶಿಖರಸೂರ್ಯನಿಗೆ ನೆಮ್ಮದಿ ಇಲ್ಲವೆಂದು, ಅದಕ್ಕೆ ಕಾರಣ ಛಾಯಾದೇವಿಯಲ್ಲ, ಅವನ ಆಳದಲ್ಲಿರುವ ಯಾವುದೋ ಆಕಾಂಕ್ಷೆಯೆಂದು ಅವಳಿಗೆ ತಿಳಿದಿತ್ತು. ಅದೇನೆಂದು ತಿಳಿಯುವ ಮೊದಲೇ ಒಂದು ದಿನ ಒಂದು ಘಟನೆ ನಡೆಯಿತು.

ಈಗಷ್ಟೇ ಸೂರ್ಯಹುಟ್ಟಿ ಎಳೆಬಿಸಿಲನ್ನ ಆಕಳಿಸುತ್ತಿರುವಾಗ ಬಾಗಿಲು ಬಡಿದ ಸದ್ದಾಯಿತು. ವಿದ್ಯುಲ್ಲತೆಯೇ ಹೋಗಿ ಕದ ತೆರೆದು ನೋಡಿದರೆ ಬಾಗಿಲಲ್ಲಿ ಛಾಯಾದೇವಿ! ಒದ್ದೆ ಸೀರೆ ಉಟ್ಟು, ಕೆನ್ನೆಗೆ ಅರಿಷಿಣ, ಹಣೆತುಂಬ ಕುಂಕುಮ ಬಡಿದುಕೊಂಡು, ಒದ್ದೆ ಕೂದಲು ಬೆನ್ನಮೇಲೆ ಹರವಿಕೊಂಡು ಕೈಯಲ್ಲಿ ಕುಂಕುಮದ ಭರಣಿ ಹಿಡಿದುಕೊಂಡು ದೈವದ ಆವೇಶವಾದವರಂತೆ ನಿಂತಿದ್ದಾಳೆ! ಬಾಗಿಲು ಪೂರ್ತಿ ತೆರೆದದ್ದೇ ಪ್ರವಾಹದಂತೆ ಒಳನುಗ್ಗಿ, ಒದ್ದೆ ಸೀರೆ ಸೆರಗಿನಿಂದ ಹೊಸ್ತಿಲು ಒರೆಸಿ ಅರಿಷಿಣ ಕುಂಕುಮ ಹಚ್ಚಿ ಎದುರಿನ ವಿದ್ಯುಲ್ಲತೆಗೂ ಕುಂಕುಮ ಹಚ್ಚಿ, ಒಳಗೊಂದು ಹೊರಗೊಂದು ಕಾಲಿಟ್ಟುಕೊಂಡು ಹೊಸ್ತಿಲ ಮೇಲೆ ಕೂತು ಬಿಟ್ಟಳು!  ಈ ಅನಿರೀಕ್ಷಿತದಿಂದ ಕಂಗಾಲಾಗಿ ವಿದ್ಯುಲ್ಲತೆ ಒಳಗೋಡಿ ತಾಯಿಯನ್ನು ಕರೆತಂದಳು. ನೋಡಿದರೆ ಈ ದೃಶ್ಯ! ಮುದುಕಿಗೆ ಮೂರ್ಛೆ ಬೀಳುವಷ್ಟು ಆಶ್ಚರ್ಯವಾಯಿತು. ಇದು ಕನಸೋ, ಎಚ್ಚರವೋ ತಿಳಿಯದೆ,

“ಏನಮ್ಮಾ ಇದು?” ಎಂದಳು.

ಛಾಯಾದೇವಿ ಹೊಸ್ತಿಲ ಮೇಲೆ ಕುಂತಿದ್ದವಳು ಎದ್ದು ಒದ್ದೆ ಸೀರೆಯ ಸೆರಗೊಡ್ಡಿ ವಿದ್ಯುಲ್ಲತೆಯ ಎದುರು ನಿಂತು,

“ಈ ಊರಲ್ಲಿ ಒಂದೋ ನಾನಿರಬೇಕು, ಇಲ್ಲಾ ನೀನಿರಬೇಕು. ನನ್ನ ಮಕ್ಕಳ ಮ್ಯಾಲೆ ಕರುಣೆ ತಗೊಂಡು ನೀನು ಜಾಗ ಖಾಲಿ ಮಾಡಿದರೆ ಸರಿ. ಇಲ್ಲಾ ನಾನೇ ನನ್ನ ತೌರಿಗೆ ಹೋಗ್ತೇನೆ; ಆಶೀರ್ವಾದ ಮಾಡು”

ಎಂದು ಹೇಳಿ ಬೆರಗಿನಲ್ಲಿ ಮೈಮರೆತು ನಿಂತಿದ್ದ ವಿದ್ಯುಲ್ಲತೆಯ ಕಾಲುಮುಟ್ಟಿ ನಾಟಕೀಯವಾಗಿ ನಮಸ್ಕರಿಸಿದಳು! ವಿದ್ಯುತ್ ಸ್ಪರ್ಶವಾದಂತೆ ವಿದ್ಯುಲ್ಲತೆ ಥಟ್ಟನೆ ಕಾಲು ಹಿಂತೆಗೆದುಕೊಂಡಳು. ಇವಳು ಹಿಂದೆ ಸರಿದರೆ ಇವಳೂ ಮುಂದೆ ಸರಿದು ಮತ್ತೆ ಕಾಲು ಗಟ್ಟಿಯಾಗಿ ಹಿಡಿದಳು! ವಿದ್ಯುಲ್ಲತೆ ಒಪ್ಪಿ ಕೈಮೇಲೆ ಕೈಯಿಟ್ಟು ಭಾಷೆ ಕೊಟ್ಟಮೇಲೆಯೇ ಛಾಯಾದೇವಿ ಕಾಲುಬಿಟ್ಟು ಎದ್ದು ಹೋದಳು. ಆ ದಿನವೇ ಅಣ್ಣ ಬದೆಗನೊಂದಿಗೆ ಚರ್ಚಿಸಿ ತಾಯಿ ಮಗಳು ಒಂದು ನಿರ್ಧಾರಕ್ಕೆ ಬಂದರು.