ಸುಕ್ರ ಬಿಳಿಗಿರಿಗೆ ಹೋಗಿ ಬಂದರೂ ಬಯಸಿದ ಪ್ರಯೋಜನವಾಗಲಿಲ್ಲ. ಅರಸು ಪ್ರಧಾನಿಯಿರಲಿ, ಸಾಮಾನ್ಯ ಭಂಟರೂ ವೈಯಕ್ತಿಕವಾಗಿ ಕನಕಪುರಿಯಿಂದ ಅವಮಾನಗೊಂಡವರ ಹಾಗೆ ಬಾಯಿಗೊಂದೊಂದು ಉದ್ಧಟತನದ ಮಾತಾಡಿದ್ದರು. ಭೂಮಿಯ ಮೇಲೆ ನಾವಿರಬೇಕು, ಇಲ್ಲಾ ಅವರಿರಬೇಕು ಎಂಬಂಥ ವೀರಾವೇಶದ ಜಂಬಗಳನ್ನು ಕೊಚ್ಚಿಕೊಂಡಿದ್ದರು.

ಇಂಥ ನಿರಾಸೆಯ ವಾತಾವರಣದಲ್ಲೂ ಸುಕ್ರ ಬಿಳಿಗಿರಿಯವರ ಮನಸ್ಸಿನಲ್ಲಿ ಚಿಕ್ಕಮ್ಮಣ್ಣಿ ಮತ್ತು ರಾಜವೈದ್ಯನ ಬಗ್ಗೆ ಸದಭಿಪ್ರಾಯ ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದ. ಅದಕ್ಕಾಗಿ ಅವನು ಅವರಿಬ್ಬರನ್ನು ಕನಕಪುರಿಯ ಅರಮನೆಯ ಬಳಗದಿಂದ ಬೇರ್ಪಡಿಸಿ ಅವರ ಒಂಟಿತನ, ಅವರು ಎದುರಿಸುವ ದೌರ್ಜನ್ಯಗಳನ್ನು ಇತ್ಯಾದಿ ಬಣ್ಣಿಸಿ ಅವರೂ ನಿಮ್ಮ ಬಳಗವೆಂದು ಹೇಳಿದ್ದ ಮತ್ತು ನಂಬಿಸಿದ್ದ. ಇದು ಸುಕ್ರನ ರಾಯಭಾರದ ದೊಡ್ಡ ಸಾಧನೆ.

ಅಂತೂ ದಂಡು ಮತ್ತು ಅವರು ಕೇಳಿದ ಎಂಟು ಸಾವಿರದ ಬದಲು ನಾಲ್ಕು ಸಾವಿರ ಹಣ ತಗೊಂಡು ಶಿಖರಸೂರ್ಯ ಯುದ್ಧಕ್ಕೆ ಹೊರಡುವುದೆಂದು ನಿರ್ಧಾರವಾಯಿತು. ಯುದ್ಧ ಮಾಡದೆ ಅವರು ಕೇಳಿದ ಹಣ ಕೊಟ್ಟು ಯುವರಾಜನನ್ನು ಬಿಡಿಸಿತರುವುದಷ್ಟೆ ಶಿಖರಸೂರ್ಯನ ಕೆಲಸ. ಅವರು ಹಣ ತಗೊಂಡೂ ಕೈ ಎತ್ತದಂತೆ, ಯುವರಾಜನ ಜೀವಕ್ಕೆ ಅಪಾಯವಾಗದಂತೆ ಕರೆತರುವುದು ರಾಜವೈದ್ಯನ ಕರ್ಮಕೌಶಲಕ್ಕೆ ಬಿಟ್ಟದ್ದು. ಇದೆಲ್ಲವೂ ಕೈಮೀರಿ ಅನಿವಾರ್ಯವಾದರೆ ಯುದ್ಧ ಮಾಡುವುದೆಂದು ತಾಕೀತು ಮಾಡಲಾಯಿತು.

ಇತ್ತ ಕನಕಪುರಿಗೆ ತಿಳಿಯದಂತೆ ಸುಕ್ರನ ನೇತೃತ್ವದಲ್ಲಿ ಒಂದು ಕಡಿಮೆ ನಲವತ್ತರ ಎರಡು ಪಡೆಗಳನ್ನು ಸಿದ್ಧ ಮಾಡಿಟ್ಟು ಅವರು ಬಿಳಿಗಿರಿ ಸಮೀಪದ ಹದ್ದಿನ ಕೊಳ್ಳದಲ್ಲಿ ತನ್ನ ಆಜ್ಞೆಗಾಗಿ ಕಾಯುತ್ತಿರುವಂತೆ ಶಿಖರಸೂರ್ಯ ಸುಕ್ರನಿಗೆ ಹೇಳಿ ಕಳಿಸಿದ.

ಹೊರಡುವ ಮುನ್ನ ರಾಜವೈದ್ಯ ಚಿಕ್ಕಮ್ಮಣ್ಣಿಯಲ್ಲಿಗೆ ಹೋಗಿ, ಬಾಗಿ ನಮಸ್ಕಾರವ ಮಾಡಿ ಕೈಮುಗಿದೇ ನಿಂತುಕೊಂಡ. ಚಿಕ್ಕಮ್ಮಣ್ಣಿ ಜಯ ಒದಗಲೆಂದು ಹಾರೈಸಿ, ಆಶೀರ್ವಾದ ಮಾಡಿ, ಹೇಳಿದಳು:

“ನನ್ನ ಚಿಕ್ಕಣ್ಣಂಗೆ ಹೇಳಿ ಅಳಿಯಂದಿರೇ, ತಾಯಿ ಮಗಳ ಬಗ್ಗೆಯಾದರೂ ಯೋಚಿಸಿ ಯುವರಾಜನನ್ನು ಕಳಿಸಿಕೊಡಬೇಕೆಂದು ಸೆರೆಗೊಡ್ಡಿ ಬೇಡಿದೆ ಅಂತ ಹೇಳಿರಿ. ಯುದ್ಧ ಮಾಡದೆ ಯುವರಾಜನನ್ನು ಕರೆತಂದರೆ ಬಹಳ ಒಳ್ಳೆಯದು. ಯುದ್ಧದ ಪ್ರಸಂಗ ಅನಿವಾರ್ಯವಾದರೆ ಬಿಳಿಗಿರಿಯನ್ನು, ಬಿಳಿಗಿರಿಯ ಬಳಗವನ್ನ ಕಾಪಾಡಿರಿ. ತೌರುಮನೆಯ ಮಗಳಾಗಿ ನಾನಿಷ್ಟು ಹೇಳಬಲ್ಲೆ. ಮುಂದಿನದು ಶಿವನ ಚಿತ್ತ!”

ಸಿದ್ಧತೆಗಳೆಲ್ಲ ಮುಗಿದ ಮೇಲೆ ಕನಕಪುರಿಯ ದಂಡು ಬೆಳ್ಳಿ ಮೂಡುವ ಮುನ್ನ ಬಿಳಿಗಿರಿ ಗುರಿಯಾಗಿ ಹೊರಟಿತು. ನೂರಾಳಿನ ಮೂರು ಪಡೆಗಳಾಗಿ ಹೊರಟ ದಂಡು ಕನಕಪುರಿ ಬಿಟ್ಟು ಬಹಳ ಹೊತ್ತಿನ ತರುವಾಯ ಹಟ್ಟಿಯೊಂದರಲ್ಲಿ ಕೋಳಿ ಕೂಗಿದ್ದನ್ನು ಕೇಳಿಸಿಕೊಂಡಿತು. ಅಗತ್ಯವಿದ್ದಲ್ಲಿ ಮಾತ್ರ ಮಾತಾಡುವ ಭಂಟರು, ಕುದುರೆ, ಕತ್ತೆಗಳ ಕಾಲಸಪ್ಪಳ ಹಾಗೂ ಚಿನ್ನದ ಹಂಡೆ ಮತ್ತು ಸಿಡಿತಲೆ ಹೇರಿದ ಬಂಡಿಗಳ ಗಾಲಿಗಳ ಸದ್ದಿನಿಂದಾಗಿ ಕಾಡು ಭಯಭೀತಿಗೊಂಡು ಪಿಸುಗುಡುವಂತೆ ಕೇಳಿಸುತ್ತಿತ್ತು.

ಎರಡು ಹಗಲು ಎರಡು ರಾತ್ರಿ ನಡೆದು ಮೂರನೇ ದಿನದ ಬೆಳಿಗ್ಗೆ ಬಿಳಿಗಿರಿ ಬೆಟ್ಟ ತಲುಪಿದ ದಂಡು ಬಿಡದಿ ಹೂಡಿ, ಪ್ರಾತರ್ವಿಧಿಗಳನ್ನು ತೀರಿಸುವ ಮೊದಲೇ ಇವರ ಆಗಮನದ ಸಮಯವನ್ನು ಅರಿತು ಬಿಳಿಗಿರಿ ಭಂಟರು ಎದುರುಗೊಂಡು, ಮೂರು ಸಲ ಕಿರಿಚಿ ದಾಳಿ ನಡೆಸುವ ಸೂಚನೆ ಕೊಟ್ಟರು! ನೆಲದ ಮೇಲಿನ್ನೂ ತಳವೂರದ, ಮಾನಸಿಕವಾಗಿ ದಣಿವು ಮತ್ತು ಅರೆನಿದ್ದೆಯ ಮಂಪರಿನಲ್ಲಿದ್ದ ಕನಕಪುರಿ ಭಂಟರಿಗೆ ಇದು ಅನಿರೀಕ್ಷಿತವಾಗಿತ್ತು. ಅವಸರವಸರವಾಗಿ ಕೈಗೆ ಕೈಯಂಗಿ, ಮೈಗೆ ಮೈಯಂಗಿ, ಕಾಲಿಗೆ ಚಲ್ಲಣ ಹಾಕಿಕೊಂಡರು. ಕೈದುಗಳ ಹೊರತೆಗೆಯುವಷ್ಟರಲ್ಲಿ ಸನ್ನೆಯ ಕೊಂಬು ಹಲಗೆಯ ಶಬ್ದ ಕೇಳಿಸಿತು. ಇವರು ಸದ್ದನ್ನಾಲಿಸಿ ಸಿದ್ಧರಾಗುವುದಕ್ಕೇ ಅವಕಾಶ ಕೊಡದೆ ದಂಡಿಗೆ ದಳವಾಯಿಯಾಗಿ ಕುದುರೆ ಮೇಲಿದ್ದ ಬಲವಂತನೇ ಗುರಿಯಾಗಿ ಎಸೆದ ಬಾಣವೊಂದು ಬಲವಂತ ತನ್ನ ಭಲ್ಲೆಯನ್ನು ಬಲವಾಗಿ ಹಿಡಿದುಕೊಂಡಿದ್ದ. ಬೆವರಿನಿಂದ ಅಂಗೈ ತೊಯ್ದು ಹೋಯಿತು. ಇನ್ನೊಂದು ಬಾಣ ಬಂದಾಗ ತಲೆತಗ್ಗಿಸಿ ಕುದುರೆಯ ಕತ್ತಿಗೆ ಒರಗಿದ. ಕುದುರೆಯ ಬೆವರಿನ ವಾಸನೆ ಅವನ ಮೂಗು ತುಂಬಿತು.

ಈ ಅನಿರೀಕ್ಷಿತ ಆಕ್ರಮಣದಿಂದ ಸೇನಾಪತಿಯ ರಕ್ತ ವೇಗವಾಗಿ ಚಲಿಸತೊಡಗಿತು. ಆದರೆ ಜಾತಿವಂತ ಭಂಟನಾಗಿದ್ದರಿಂದ ಸ್ವಲ್ಪ ಹೊತ್ತಿನಲ್ಲಿಯೇ ಅವನ ನರನಾಡಿಗಳು ನಿಯಂತ್ರಣಕ್ಕೆ ಬಂದು ಸ್ಥಿರಗೊಂಡವು. ಕಿವಿಗಳಲ್ಲಿ ಮಾತ್ರ ಹಿಂದೆ ಹಾದು ಹೋದ ಬಾಣಗಳ ಸೊಂಯ್ ಸೊಂಯ್ ಶಬ್ದ ಸುತ್ತುತ್ತಲೇ ಇತ್ತು. ಆದರೆ ಯಾವಾಗ ಇನ್ನೊಂದು ಬಾಣ ಗುರಿತಪ್ಪಿ ಕುದುರೆಯ ಕತ್ತಿಗೆ ನೆಟ್ಟಿತೋ ಕುದುರೆ ಚಂಗನೆ ಮೇಲೆ ನೆಗೆಯಿತು. ಅನಿರೀಕ್ಷಿತ ನೆಗೆತದಿಂದ ಬಲವಂತ ಕೆಳಗಡೆ ಬಿದ್ದ. ಮರುಕ್ಷಣವೇ ಇನ್ನೊಮ್ಮೆ ನೆಗೆದ ಕುದುರೆ ಗೊರಸಿನ ಕಾಲನ್ನು ಅವನ ತೊಡೆಯ ಮೇಲೂರಿದಾಗ ಅವನ ತೊಡೆಯೆಲುಬು ಮುರಿದ ಕರಕರ ಸದ್ದು ಕೂಡ ಕೇಳಿಸಿತು! ಅಷ್ಟರಲ್ಲಿ ಹಿಂದಿನಿಂದ ಬಂದ ವೈರಿಭಂಟನ ಕುದುರೆ ಕೂಡ ಅದೇ ಜಾಗದಲ್ಲಿ ಕಾಲೂರಿ ಓಡಿಹೋಯಿತು. ಬಲವಂತ ನರಳಲಿಲ್ಲವಾದರೂ ಕಾಲು ಹಿಡಿದುಕೊಂಡು, ಹಲ್ಲುಕಚ್ಚಿ, ಜೋರಿನಿಂದ ಕಣ್ಣು ತೆರೆದಾಗ ಕಣ್ಣು ಹೊರಬಂದಂತೆನಿಸಿತು. ಆಮೇಲೆ ಕನಕಪುರಿಯ ಅನೇಕರ ಕುದುರೆಗಳು ಸವಾರರ ಸಮೇತ ನೆಲಕ್ಕುರುಳಿದವು. ಬಲವಂತನ ಕಣ್ಣೀರು ಚಿಮ್ಮಿ ಕೆನ್ನೆಗಳು ಒದ್ದೆಯಾದವು. ದೂರದ ಕಂದಕದ ಕಡೆಯಿಂದ ಬಲವಂತನತ್ತ ಈಟಿ ಹಿಡಿದುಕೊಂಡೊಬ್ಬ ಭಂಟ ಓಡಿಬರುತ್ತಿದ್ದ. ಅಷ್ಟರಲ್ಲಿ ಶಿಖರಸೂರ್ಯ ಖಡ್ಗ ಹಿರಿದುಕೊಂಡು ಬಂದವನೇ ಬಿಳಿಗಿರಿ ಸೈನಿಕನ ತಲೆಗೆ ಬಲವಾದ ಏಟು ಕೊಟ್ಟ. ಭಂಟನ ಮುಖ ಕರ್ರಗಾಗಿ ತಲೆ ಕೆಳಗಾಗಿ ಉರುಳಿ ಬಿದ್ದ. ನೆತ್ತರು ಚಿಮ್ಮಿ ಭುಜದಗುಂಟ ಕೆಳಗಿಳಿದು ಬಟ್ಟೆ ಕೆಂಪಗಾಯಿತು.

ಬೇರೊಂದು ದಿಕ್ಕಿನಲ್ಲಿದ್ದ ಬಿಳಿಗಿರಿ ಭಂಟರೂ ಒಟ್ಟಾಗಿ ಬಲವಂತನ ಹಿಂದಿನಿಂದ ಬಂದು ಅವನ ಮತ್ತವನ ಹಿಂದಿನ ಭಂಟರ ಮೇಲೆ ಬಿದ್ದರು. ಈ ಅನಿರೀಕ್ಷಿತ ಆಕ್ರಮಣದಿಂದ ಅಕ್ಕಪಕ್ಕದ ಎಲ್ಲ ಕನಕಪುರಿ ಭಂಟರು ತತ್ತರಿಸಿ, ಬಿಲ್ಲು ಬಾಣ ಈಟಿ ಖಡ್ಗಗಳ ಎಸೆದು ವಿರುದ್ಧ ದಿಕ್ಕಿಗೆ ಪಲಾಯನ ಗೈದರು. ಈಗ ಶಿಖರಸೂರ್ಯ ತನ್ನ ದೊಡ್ಡ ದೇಹವನ್ನು ಬಿಳಿಗಿರಿಯವರ ಎದುರಿಗೊಡ್ಡಿ ನಿಂತ! ಒಂದು ಕ್ಷಣ ಬಿಳಿಗಿರಿ ದಂಡಿನಲ್ಲಿ ಗೊಂದಲವುಂಟಾಗಿ ಎಲ್ಲವೂ ನಿಶ್ಯಬ್ಧವಾಯಿತು.

ಅಷ್ಟರಲ್ಲಿ ಒಬ್ಬ ಭಂಟ “ವೈದ್ಯ! ರಾಜವೈದ್ಯ! ಸಲ್ಲದು ಸಲ್ಲದು ಇವನೊಂದಿಗೆ ಕದನ! ಬನ್ರೋ!” ಎಂದು ಮುನ್ನುಗ್ಗುತ್ತಿರುವ ತನ್ನ ಭಂಟರನ್ನು ತಡೆದ. ಕ್ಷಣಮಾತ್ರದಲ್ಲಿ ಬಿಳಿಗಿರಿ ಭಂಟರಲ್ಲಿ ಪರಿವರ್ತನೆಯಾಗಿ ಅಷ್ಟೇ ಶೀಘ್ರ ಪರಿಣಾಮವೂ ಕಂಡು ಬಂತು. ಕೈದುಗಳ ಸುಮ್ಮನೆ ಹಿಡಿದುಕೊಂಡು ಒಬ್ಬೊಬ್ಬರೇ ರಾಜವೈದ್ಯನನ್ನು ತದೇಕದೃಷ್ಟಿಯಿಂದ ನೋಡುತ್ತ ಹಿಂದಿರುಗಿದರು! ಒಬ್ಬಿಬ್ಬರು ನಮಸ್ಕಾರವನ್ನೂ ಆಚರಿಸಿದರು!

ಈ ಬೆಳವಣಿಗೆಯಿಂದ ಶಿಖರಸೂರ್ಯ ನಿಬ್ಬೆರಗಾದ. ಇದು ಸುಕ್ರನ ರಾಯಭಾರದ ಪವಾಡವೆಂದು ತಿಳಿಯಲು ರಾಜವೈದ್ಯನಿಗೆ ಬಹಳ ಸಮಯ ಹಿಡಿಯಲಿಲ್ಲ. ಸಾವಧಾನದಿಂದ ಯೋಚಿಸುವ ಸಮಯವೂ ಇದಲ್ಲವೆನ್ನಿಸಿ, ದಂಡಿನ ಕಡೆಗೆ ನಡೆದ. ಕುದುರೆಯಿಂದಿಳಿದು ಬದೆಗನನ್ನು ಕರೆದು ಸೇನಾಪತಿಯ ಬಳಿ ನಿಲ್ಲಿಸಿ, ಅಕ್ಕ ಪಕ್ಕ ಅಲ್ಲೇ ಹುಡುಕಾಡಿ ಸಿಕ್ಕ ಒಂದು ಸೊಪ್ಪನ್ನು ದಳವಾಯಿಯ ತೊಡೆಯ ಗಾಯದ ಮೇಲೆ ಹಿಂಡಿದ. ಆಮೇಲೆ ತನ್ನ ಎದೆ ಮೇಲಿನ ಬಟ್ಟೆಯ ಒಂದು ತುಂಡು ಹರಿದು ಗಾಯಕ್ಕೆ ಕಟ್ಟಿದ. ತೊಡೆಯ ಕೆಳಗೆ ರಕ್ತ ಮಡುಗಟ್ಟಿತ್ತು. ಬಟ್ಟೆಯ ಮೇಲೆಯೇ ಇನ್ನೊಮ್ಮೆ ಸೊಪ್ಪು ಹಿಂಡಿದ. ತುಸು ಹೊತ್ತಾದ ಬಳಿಕ ರಕ್ತ ಸೋರುವುದು ಕಡಿಮೆಯಾಯ್ತು. ಗಾಡಿ ತರಿಸಿ ಮೆಲ್ಲಗೆ ಸೇನಾಪತಿಯನ್ನು ಅದರಲ್ಲಿಸಿರಿ ಒಬ್ಬ ಭಂಟನನ್ನು ಜೊತೆಗಿಟ್ಟು ಕನಕಪುರಿಗೆ ಕಳಿಸಿದ.

ಕನಕಪುರಿಯ ಅನೇಕ ಭಂಟರು ಕುದುರೆ, ಈಟಿ, ಬಿಲ್ಲು ಬಾಣ ಕಳೆದುಕೊಂಡು ಬಿದ್ದು ನರಳುತ್ತಿದ್ದರು. ಒಬ್ಬನ ಕೆನ್ನೆಯ ಮೇಲೆ ಕುದುರೆ ಲಾಳದ ಗುರುತು ಮೂಡಿತ್ತು. ಇನ್ನೊಬ್ಬನ ಮುಖದಲ್ಲಿ ಸುಟ್ಟುಕೊಂಡ ಚರ್ಮದಂಥ ಗಾಯವಾಗಿತ್ತು. ಆತ ಬಿಳಿಗಿರಿಯ ಭಂಟರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಮಾತಿಗೊಮ್ಮೆ ವೀರಾವೇಶದಿಂದ ಎದ್ದೆದ್ದು ಬೀಳುತ್ತಿದ್ದ. ಹಲ್ಲು ಕಚ್ಚುತ್ತ ಸೇಡು ತೀರಿಸಿಕೊಂಬ ಆಣೆ ಪ್ರಮಾಣ ಮಾಡುತ್ತ ಶಾಪಗಳ ಕಿರುಚುತ್ತಿದ್ದ. ಇನ್ನೊಬ್ಬನ ತುಟಿ ಮತ್ತು ಗದ್ದದ ಚರ್ಮ ಹರಿದು ಕಿತ್ತ ನಾರಿನಂತೆ ಅವನ ಕಲ್ಲೀಮೀಸೆ ಜೋತಾಡುತ್ತಿತ್ತು.

ಅಂದಿನ ಯುದ್ಧ ಅನಿರೀಕ್ಷಿತವಾಗಿ ಇಳಿಹೊತ್ತಿಗೇ ಒಂದು ನಿಲುಗಡೆಗೆ ಮುಟ್ಟಿದ್ದರಿಂದ ಶಿಖರಸೂರ್ಯ ಎಲ್ಲರ ಉಸಾಬರಿಯನ್ನು ಬದೆಗನಿಗೆ ವಹಿಸಿಕೊಟ್ಟ. ಸುಕ್ರನನ್ನು ಕರೆತರಲು ಭಂಟನೊಬ್ಬನನ್ನಟ್ಟಿ ತಾನು ಸೀದಾ ಬಿಳಿಗಿರಿಯ ಅರಮನೆಗೆ ಕುದುರೆ ಓಡಿಸಿದ.

ಇಡೀ ಬಿಳಿಗಿರಿ ತನ್ನ ಮನಸ್ಸುಗಳನ್ನು ಅಲಂಕರಿಸಿಕೊಂಡು ಇವನನ್ನು ಸ್ವಾಗತಿಸಲು ಸಿದ್ಧವಾಗಿತ್ತು. ಅದ್ಯಾವುದನ್ನೂ ಗಮನಿಸದೆ ಸೀದಾ ಅರಮನೆಗೆ ಹೋಗಿ “ಯುವರಾಜನೆಲ್ಲಿ?” ಎಂದು ಅರಸು ಪ್ರಧಾನರನ್ನು ಕೇಳಿದ. ಆವಾಗ ಗುಟ್ಟು ಬಯಲಾಯಿತು: ಯುವರಾಜ ಅವರಲ್ಲಿ ಇರಲಿಲ್ಲ!

ಹತಾಶೆ, ನಾಚಿಕೆಗಳಿಂದ ಶಿಖರಸೂರ್ಯನ ಮುಖ ವಿವರ್ಣವಾಯಿತು. ತಾನಿನ್ನು ಅಣಕಕ್ಕೆ, ಅವಿಶ್ವಾಸಕ್ಕೆ ಗುರಿಯಾಗಬೇಕಾಯಿತೆಂದು ಅನ್ನಿಸಿ ಕನಕಪುರಿಯಲ್ಲಿ ತನ್ನ ಮುಖದಲ್ಲಿ ಬಿಂಬಿತವಾಗಬಹುದಾದ ಬಾಲಿಶ ಪ್ರವೃತ್ತಿಗೆ ನಾಚಿಕೊಂಡ. ಸರಿಪಡಿಸಲಾರದ ತಪ್ಪು ದಾರಿಯಲ್ಲಿ ತಾನು ಹೆಜ್ಜೆಯಿಟ್ಟೆನೆಂದು ಖಾತ್ರಿಯಾಗಿತ್ತು. ಸಿಡುಕಿನ ಮುಖದಿಂದ ಅತ್ತಿತ್ತ ಅಲೆದಾಡಿದ. ಮುಷ್ಠಿ ಬಿಗಿದು ಸಡಿಲಗೊಳಿಸಿ ಪೀಠದ ಮೇಲೆ ಕೂತ, ಎದ್ದ. ಅರಸು ಪ್ರಧಾನರಿಬ್ಬರೂ ನಿಶ್ಯಬ್ದರಾಗಿ ಇವನನ್ನೇ ನೋಡುತ್ತ ಕೂತರು. ನೋಟದ ಮೂಲಕ ಒಳಕ್ಕಿಳಿದು ಹೃದಯಗಳನ್ನು ಭೇದಿಸುವಂತೆ ನೇರ ಅವರ ಮುಖ ನೋಡುತ್ತ ಅರಸು ಪ್ರಧಾನರನ್ನು ಪುನಃ ಪುನಃ ಪ್ರಶ್ನಿಸಿದ. ಸಿಕ್ಕ ಉತ್ತರ ಮಾತ್ರ ಒಂದೇ; ನಮಗೆ ತಿಳಿಯದು. ಆಮೇಲೆ ಬಿಳಿಗಿರಿಯರಸ ಹೇಳಿದ:

“ನಿಮ್ಮಲ್ಲಿ ಯುವರಾಜನಿಲ್ಲವೆಂದು ತಿಳಿಯಿತು. ನಮ್ಮಲ್ಲಿದ್ದಾನೆಂದು ಹೇಳಿ ನಾವು ಕಳೆದುಕೊಂಡ ಚಿನ್ನವನ್ನು ನಿಮ್ಮಿಂದ ವಸೂಲಿ ಮಾಡುವುದೊಂದೇ ನಮ್ಮ ಉದ್ದೇಶವಾಗಿತ್ತು; ಇಷ್ಟೆ ಕಣಪ್ಪ!”

“ಇದರ ಪರಿಣಾಮ ಏನಾಗುತ್ತದೆಂದು ಊಹಿಸಿದ್ದೀರಾ?”

“ಖಂಡಿತ ಊಹಿಸಿದ್ದೆವು. ಎಲ್ಲವೂ ನಮ್ಮ ಲೆಕ್ಕದಂತೆ ನಡೆದಿದ್ದರೆ ನಾವು ಸುರಕ್ಷಿತವಾಗಿ ಅವರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದೆವು. ಈ ಸಲದ ನಮ್ಮ ತಯಾರಿ ಮೂರು ಪಟ್ಟು ಹೆಚ್ಚಿತ್ತು. ನೀವು ಯುದ್ಧಕ್ಕೆ ಬಂದುದರಿಂದ ನಮ್ಮ ಯೋಜನೆ ತಲೆಕೆಳಗಾಯ್ತು.”

ಅದೇನೋ ನಿಜವೆ. ಅವರ ಯೋಜನೆಯಂತೆ ಮೊದಲೇಟಿಗೇ ದಳವಾಯಿಯನ್ನು ಮುಗಿಸಿ ಕನಕಪುರಿಯವರಿಗೆ ಏಳಲಾರದ ಏಟು ಕೊಟ್ಟಿದ್ದರು. ಕನಕಪುರಿಯ ಅಶ್ವದಳ ಸಂಪೂರ್ಣ ನಾಶವಾಗಿ ಸುಮಾರು ನಲವತ್ತು ಕುದುರೆಗಳನ್ನು ಕಳೆದುಕೊಂಡಿದ್ದರು. ಅಸಮಾಧಾನದ ಸಂಕಟದಿಂದ ಶಿಖರಸೂರ್ಯ ಕೇಳಿದ-

“ಇದು ತಪ್ಪಲ್ಲವೇ?”

“ಆಶ್ರಿತ ರಾಜನ ಚಿನ್ನವ ಅಪಹರಿಸಿ ಅವನನ್ನ ವಿಷಕನ್ಯೆಯ ಸಾಂಗತ್ಯದಿಂದ ಕೊಲ್ಲಿಸುವುದು ಸರಿಯೊ? ನೀವೇ ಹೇಳಿ ಕವಿರಾಜರೇ.”

ಶಿಖರಸೂರ್ಯ ಸುಮ್ಮನಾದ. ಆದರೆ ಪ್ರಧಾನಿ ಸುಮ್ಮನಿರದೆ ಮುಂದುವರೆಸಿದ.

“ಮಹಾರಾಜರು ಸಾವಿಗೀಡಾದ ದುಃಖದಲ್ಲೇ ನಾವಿರುವಾಗ ಯುವರಾಜ ಭಂಟರೊಡನೆ ಬಂದು ಬಚ್ಚಿಟ್ಟ ಚಿನ್ನವ ಕದ್ದುಕೊಂಡು ಹೋದ. ಅದು ಸರಿಯೊ? ಅವನನ್ನು ಬಂಧಿಸದೆ ಚಿನ್ನಕ್ಕಾಗಿ ಪ್ರಯತ್ನ ಮಾಡಿದ್ದರಿಂದ ನಾವು ಎಡಬಿಡಂಗಿಯಾದೆವು. ಇಲ್ಲದಿದ್ದರೆ ಈಗವನು ನಮ್ಮ ಬಂಧಿಯಾಗಿರುತ್ತಿದ್ದ. ಆಗ ಮಾತ್ರ ಯಾರು ಬಂದು ಕೇಳಿಕೊಂಡರೂ ನಾವು ಅವನನ್ನು ಬಿಡುತ್ತಿರಲಿಲ್ಲ.”

ಪ್ರಧಾನಿಯ ತರ್ಕಸರಣಿ ಸರಿಯಾಗಿಯೇ ಇತ್ತು. ಕನಕಪುರಿಯದೆ. ಅತಿಯಾಸೆಯಿಂದಾಗಿ ಪರಿಣಾಮವನ್ನು ಅನುಭವಿಸಬೇಕಷ್ಟೆ. ಎಂದು ಮನಸ್ಸಿನಲ್ಲಿಯೆ ಯೋಚಿಸಿ “ಆದರೆ ಯುವರಾಜ ಏನಾದ? ಆತ ಸತ್ತದ್ದಾದರೂ ಖಾತ್ರಿಯಾಗಬೇಕಲ್ಲ?” ಎಂದು ಅರ್ಧ ತನಗೂ ಅರ್ಧ ಪ್ರಧಾನಿಗೂ ಹೇಳಿದ.

“ನನಗೂ ಅದೇ ಆಶ್ವರ್ಯ ಕವಿರಾಜರೇ! ನಮ್ಮ ಚಿನ್ನ ದೋಚಿಕೊಂಡು ಕನಕಪುರಿಗೆ ಹೋದ ಅಂದುಕೊಂಡೆವು. ಅವನು ಅಲ್ಲಿಗೇ ಬಂದಿಲ್ಲವೆಂದರೆ ನಮಗೂ ಆಶ್ಚರ್ಯವೇ!”

“ಆಯ್ತು ಈ ಅರಮನೆಯ ಅಳಿಯನಾಗಿ ಹೇಳುತ್ತೇನೆ: ಪ್ರಧಾನರೆ, ನೀವು ಪುನಃ ಯುದ್ಧಕ್ಕೆ ತೊಡಗಬಾರದು.”

ಅದಕ್ಕೆ ಅರಸು ಹೇಳಿದ:

“ಮಾವನಾಗಿ ನಿಮಗೂ ಒಂದು ಮಾತು ಹೇಳುತ್ತೇನೆ: ನೀವು ನಮ್ಮ ಮನೆತನದ ಅಳಿಯಂದಿರು, ನಮ್ಮ ಕ್ಷೇಮವನ್ನು ನೋಡಿಕೋಬೇಕಾದ ಜವಾಬ್ದಾರಿಯೂ ನಿಮ್ಮದೇ, ಅದು ಇಂದಿನಿಂದಲೇ ಸುರುವಾಗಲಿ, ನಮ್ಮಲ್ಲೇ ಉಳಿಯಿರಿ.” ಅಂದ.

ಶಿಖರಸೂರ್ಯ ಅವರ ಆತಿಥ್ಯ ವಹಿಸಿಕೊಂಡು ಸುಕ್ರನ ಕರೆತರಲು ಸೇವಕನನ್ನು ಅಟ್ಟಿ, ಚಡಪಡಿಸುತ್ತ ಕೂತ.