ಈಗೊಂದು ವಾರದಿಂದ ಶಿಖರಸೂರ್ಯ ಸಂಜೀವಿನಿಯ ಕಡೆಗೆ ಬಂದಿರಲಿಲ್ಲ. ಬರುವ ಸೂಚನೆಗಳೂ ಕಾಣಲಿಲ್ಲ. ವೈದ್ಯಶಾಲೆಯಲ್ಲೇ ಹೆಚ್ಚಿನ ಸಮಯ ಕಳೆಯುವನೆಂದು ಅಣ್ಣ ಬದೆಗನಿಂದ ತಿಳಿದಿದ್ದ ವಿದ್ಯುಲ್ಲತೆ ಅಲ್ಲಿಗೇ ಹೋಗಿ ನೋಡಿ ಬರಲು ತೀರ್ಮಾನಿಸಿದಳು. ಅಲ್ಲದೆ ಅನತಿದೂರದ ಮನೆಯಲ್ಲಿ ವಾಸವಾಗಿರುತ್ತಿದ್ದ ಛಾಯಾದೇವಿಯೂ ತೌರುಮನೆಗೆ ಹೋಗಿರುವ ಸುದ್ದಿ ತಿಳಿಯಿತು. ಇದೇ ಅನುಕೂಲಕರ ಸಂದರ್ಭವೆಂದು ವೈದ್ಯಶಾಲೆಗೆ ಹೋದಳು. ಶಿಖರಸೂರ್ಯ ಇರಲಿಲ್ಲ. ಇನ್ನೇನು ಬರುವ ಸಮಯವೆಂದು ಸೇವಕನಿಂದ ತಿಳಿದು ಮಹಡಿಯ ಕೋಣೆಗೆ ಹೋಗಿ ಕಾಯುತ್ತ ಕೂತಳು.

ಕೋಣೆ ನಿರಾಡಂಬರವಾಗಿತ್ತು. ಗೋಡೆಗೆರಡು ದೊಡ್ಡ ಕಿಡಕಿಗಳು, ಅಲಂಕರಿಸಿದ ಕಿತ್ತಳೆ ಬಣ್ಣದ ಪರದೆಗಳು, ಎರಡು ಕಿಡಿಕಿಗಳ ಮಧ್ಯೆ ನೇತಾಡುವ ತನ್ನ ಬುಡಕಟ್ಟು ಮರದ ದೇವರು, ಕೆಳಗೆ ಕಲಾವಂತಿಕೆಯಿಂದ ಮಾಡಿದ ಮರದ ಪೀಠಗಳು, ಒಂದು ಕಡೆ ಮಂಚ, ಮಂದದ ಮೇಲೆ ಚಿತ್ರವಿರುವ ಬಟ್ಟೆಯನ್ನು ಹಾಸಲಾಗಿತ್ತು. ಅದರ ಪಕ್ಕದ ಗೋಡೆಯ ಮೇಲೆ ಓರಣವಾಗಿ ನಿಲುವುಗನ್ನಡಿಯನ್ನ ತೂಗು ಹಾಕಿತ್ತು. ಕನ್ನಡಿಯಲ್ಲಿ ತನ್ನ ತೇಜೋಹೀನವಾದ ಬಿಳಿಚಿಕೊಂಡ ಮುಖ ಮೂಡಿತ್ತು. ಮೊದಲೇ ವಿಷಣ್ಣವಾಗಿದ್ದ ಕಣ್ಣುಗಳಲ್ಲೀಗ ಹತಾಶೆ ವ್ಯಕ್ತವಾಗುತ್ತಿತ್ತು. ಅದರ ಇನ್ನೊಂದು ಬದಿಗೆ ಎರಡು ಹಿತ್ತಾಳೆಯ ಸಮೆಗಳು, ಅವುಗಳ ನಡುವೆ ಎರಡು ತಾಡೋಲೆ ಗ್ರಂಥಗಳು, ಪಡುವಣದ ಎರಡೂ ಕಿಡಿಕಿಗಳಿಂದ ಸೂರ್ಯನ ಕೋಲುಬಿಸಿಲು ತೂರಿ ಬಂದು ನೆಲದ ಮೇಲೆ ಚಿನ್ನದ ಚಿತ್ತಾರ ಬಿಡಿಸಿತ್ತು.

ನೋಡುತ್ತ ಹೋದ ಹಾಗೆ ಮೈಯಲ್ಲಿ ಹುಷಾರಿಲ್ಲವೆನ್ನಿಸಿತು. ಹೃದಯ ಬಲವಾಗಿ ಬಡಿದುಕೊಳ್ಳತೊಡಗಿತು. ತಲೆ ಸುತ್ತಿರುಗಿ ಸಮೀಪದ ಪೀಠದಲ್ಲಿ ಒಂದು ನಿಮಿಷ ಒರಗಿ ಕೂತಳು. ಆಮೇಲೆ ವಿಶಾಲವಾಗಿ ಕಣ್ಣಗಲಿಸಿ ಏನಾಗುತ್ತಿದೆ ಎಂದು ತಂತಾನೇ ನೋಡಿಕೊಳ್ಳುತ್ತಿರುವಂತೆ ಉಸಿರುಗಟ್ಟಿ ನೆತ್ತಿಗೇರಿದಂತಾಗಿ ಕೂತಲ್ಲಿಂದ ಬೀಳುತ್ತಿರುವೆನೆ? ಅನ್ನಿಸಿತು. ಗಟ್ಟಿಯಾಗಿ ಪೀಠವನ್ನ ಹಿಡಿದುಕೊಂಡಳು. ತುರುಬು ಸಡಿಲಗೊಂಡು ಮೃದುವಾದ ಕೂದಲು ಭುಜದಗುಂಟ ಇಳಿಯಿತು. ತೇಲುಗಣ್ಣಾಗಿ ಪ್ರವಾಹದಲ್ಲಿ ಈಜುತ್ತಿರುವಂತೆ, ಕಷ್ಟಪಟ್ಟು ದಂಡೆಗೆ ಬರುತ್ತಿರುವಂತೆ ಅನ್ನಿಸಿತು. ರಾಜವೈದ್ಯನಿಗೆ ಹೆದರಿದ್ದೇನೆಯೆ? ಅವನ ಕೋಪ ಭಯಾನಕವೆಂಬುದು ನಿಜ. ಕಿವಿಯ ಕೂದಲು ನಿಮಿರಿ ಕಣ್ಣು ಕೆಂಜಗಾದಾಗ, ನರ ಬಿಗಿದು ಎದುರಿಗೆ ಏನು ಸಿಕ್ಕರದನ್ನೇ ಕೊಂದುಹಾಕುವ ಮೃಗೀಯ ಶಕ್ತಿ ಅವನ ಹಸ್ತಕ್ಕೆ ನುಗ್ಗತೊಡಗುತ್ತದೆ. ಹೀಗೊಮ್ಮೆ ಪ್ರಕಟವಾದ ಶಕ್ತಿ ಏನನ್ನಾದರೂ ನಾಶಮಾಡಿದಲ್ಲದೆ ಶಾಂತವಾಗುವುದೇ ಇಲ್ಲವೆಂದು ಅವಳಿಗೆ ಗೊತ್ತು. ಆಯ್ತು, ಜೀವನಾಶವಾದರೆ ಅದಕ್ಕಿಂತ ಹೆಚ್ಚಿನ ನೆಮ್ಮದಿ ಯಾವುದರಲ್ಲಿದೆ? ಎಂದು ಬಂದಿದ್ದನ್ನು ಎದುರಿಸಲು ಸಿದ್ಧಳಾದಳು.

ಆದರೆ ಹಾಗೆ ಮಾಡಿದ ಮೇಲೆ ಅವನಾದರೂ ಕೋಪವನ್ನಾದರೂ ನೋಡಬಹುದು. ಆದರೆ ಸ್ವಹಿಂಸೆ ಮಾಡಿಕೊಂಬ ಪಶ್ಚಾತ್ತಾಪದ ಪರಿತಾಪವನ್ನ ನೋಡಲಿಕ್ಕಾಗುವುದಿಲ್ಲ. ಪಶ್ಚಾತ್ತಾಪದ ತುದಿಗೆ ತಪ್ಪದೆ ತನ್ನಲ್ಲಿಗೇ ಬಂದು ಬಾಗಿಲು ತಟ್ಟುತ್ತಿದ್ದ. ಮಡಿಲಲ್ಲಿ ಮಲಗಿ ಸಮಾಧಾನಗೊಳ್ಳುತ್ತಿದ್ದ. ಆಗ ಇಬ್ಬರಲ್ಲೂ ಹೊಸಶಕ್ತಿ ಸಂಚಾರವಾಗುತ್ತಿತ್ತು. ಅವನಿಲ್ಲದೆ ನಾನಾದರೂ ಬದುಕಲುಂಟೆ? ನನಗಾಗಿ ತಾನೂ ವಿಷ ತಗೊಂಡು ತನಗೆ ತಾನೇ ಹೆಂಡತಿ ಮಕ್ಕಳಿಂದ ಅಸ್ಪೃಶ್ಯನಾದ!

ಅಷ್ಟರಲ್ಲಿ ಮೆಟ್ಟಿಲೇರಿ ಶಿಖರಸೂರ್ಯ ಬಂದ. ಅವಳನ್ನು ನೋಡಿದ್ದೇ ಅವನ ಕಣ್ಣು ಉಜ್ವಲವಾಗಿ ಹೊಳೆದವು. ಮುಖ ನಿಗಿ ನಿಗಿ ಪ್ರಕಾಶಮಾನವಾಗಿ ಆನಂದವನ್ನು ತುಳುಕಿಸಿತು. ಇವಳೂ ಅವನನ್ನು ನೋಡಿದ್ದೇ ತಡ ಕ್ಷಣಕಾಲ ಎಲ್ಲವನ್ನು ಮರೆತು ಅರಳಿ ಹೂವಾದಳು. ವಿಶ್ವಾಸದ ಮಂದಹಾಸ ಬೀರುತ್ತ ಎರಡೂ ತೋಳು ತೆರೆದು ಶಿಖರಸೂರ್ಯನಲ್ಲಿಗೆ ಧಾವಿಸಿ ಅವನ ತೆಕ್ಕೆಗೆ ಸೇರಿ ನೆಮ್ಮದಿಯಿಂದ ಅವನೆದೆಗೆ ಒರಗಿದಳು. ಅವನು ಹಾಗೇ ಅವಳನ್ನೆತ್ತಿಕೊಂಡು ತೊಡೆಯ ಮ್ಯಾಲಿಟ್ಟುಕೊಂಡೇ ಪೀಠದ ಮ್ಯಾಲೆ ಕುಂತು,

“ಹೇಳು ದೇವಿ, ಕರೆಕಳಿಸಿದ್ದರೆ ನಾನೇ ಬರುತ್ತಿದ್ದೆ. ನೀನಾಗಿ ಯಾಕೆ ಬಂದೆ?”

ಎಂದು ಕೆನ್ನೆಗೊಂದು ಮುದ್ದಿಟ್ಟು ಲಲ್ಲೆಗೆರೆಯುತ್ತ ಕೇಳಿದ. ನೇರ ಹೇಳುವುದಕ್ಕೆ ಭಯ. ‘ಇದ್ಯಾವ ಗ್ರಂಥ’ವೆಂದು ಕೈ ಮಾಡಿ ತೋರಿಸಿ ಕೇಳಿದಳು.

“ಇದು ಮನುಧರ್ಮಸಾರ. ಜನಕ್ಕೆ ಮೋಸ ಮಾಡುವುದಕ್ಕೆ ಎಲ್ಲೆಲ್ಲಿ ಅವಕಾಶಗಳಿವೆ ಅಂತ ನೋಡಬೇಕು. ಯಾಕಂತಿಯೋ? ಶಾಸ್ತ್ರೀಯವಾಗಿ ಮೋಸ ಮಾಡೋಣ ಅಂತ.”

“ಛೆ ಮೋಸಗಾರ ಅಂತ ತೋರಿಸಿಕೊಳ್ಳೋದಕ್ಕೆ ಅಷ್ಟೊಂದು ಇಷ್ಟಾನಾ ನಿಮಗೆ?” ಎಂಬಂತೆ ಎದೆಗೆ ಪುಟ್ಟದೊಂದು ಏಟು ಕೊಟ್ಟು ಸಿಟ್ಟು ಮಾಡಿದಳು.

“ನೀನೊಬ್ಬಳಾದರೂ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿದ್ದೀಯಲ್ಲ! ಸಾಕು. ಈಗ ಹೇಳು, ಯಾಕೆ ಬಂದೆ?”

ಇನ್ನು ಮುಂದಿನ ಅವರ ಸಂಭಾಷಣೆಯನ್ನು ಬರಹರೂಪದಲ್ಲಿ ಕೊಡುತ್ತೇವೆ. ಯಾಕಂತೀರೋ? ಇವನು ಭಾಷೆಯಲ್ಲಿ ಮಾತಾಡುವುದು, ಅವಳು ಮೃಗಗಳಂಥಹ ಹಾ ಹೂ ಸ್ವರ ಮಾಡಿ ಸನ್ನೆ ಭಾಷೆಯಲ್ಲಿ ಉತ್ತರಿಸುವುದು… ಇತ್ಯಾದಿ ಅವನಿಗೆ ಅರ್ಥವಾಗಬಹುದಾದರೂ ವಾಚಕರ ಅನುಕೂಲಕ್ಕಾಗಿ ಅವನು ಅಥೈಸಿಕೊಂಡಂತೆ ಸನ್ನೆ ಭಾಷೆಯನ್ನು ಕತೆಯ ಭಾಷೆಗೆ ಅನುವಾದಿಸಿ ಕೊಡುತ್ತೇವೆ.

ಆಮೇಲೆ ವಿದ್ಯುಲ್ಲತೆ ಅವನ ತೊಡೆಯ ಮ್ಯಾಲಿಂದ ಕೆಳಗಿಳಿದು ಹಿಂದೆ ಬಂದು ಎರಡೂ ಕೈಗಳಿಂದವನ ಕತ್ತು ಬಳಸಿ ಕೆನ್ನೆಗೆ ಕೆನ್ನೆ ತಾಗಿಸಿ ಕೇಳಿದಳು:

“ನೀವು ನನ್ನನ್ನು ನಿಜವಾಗಿ ಪ್ರೀತಿಸ್ತೀರಾ?”

“ನೂರನೇ ಸಲ ಹೇಳುತ್ತೇನೆ ಕೇಳು: ನಾನು ನಿನ್ನನ್ನು ಹೃತ್ಪೂರ್ವಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರೀತಿಸುತ್ತೇನೆ. ನಿನ್ನಷ್ಟು ಪ್ರೀತಿಯನ್ನು ನಾನು ಯಾರಿಗೂ ಕೊಟ್ಟಿಲ್ಲ. ಇದಕ್ಕೆ ನೀನೇ ಸಾಕ್ಷಿ! ಸಾಕೋ?”

ಎಂದು ಹೇಳಿ ತೋಳು ಹಿಡಿದೆಳೆದು ಅವಳನ್ನು ತನ್ನ ಬೆನ್ನು ಮತ್ತು ಕೆನ್ನೆಗೆ ಅಂಟಿಸಿಕೊಳ್ಳುತ್ತಿದ್ದಾಗ!,-

“ನಾನು ನಿಮ್ಮಿಂದ ದೂರ ಇದ್ದರೂ ಪ್ರೀತಿಸ್ತೀರಾ?”

-ಎಂದಳು. ಶಿಖರಸೂರ್ಯ ತಕ್ಷಣ ಗಂಭೀರವಾಗಿ, ತನ್ನ ಕಣ್ಣಿಂದ ತಪ್ಪಿಸಿಕೊಳ್ಳಬೇಕೆಂದ ಅವಳನ್ನು ಎಳೆದು ಎದುರು ನಿಲ್ಲಿಸಿಕೊಂಡು ನೋಡಿದ. ದೃಷ್ಟಿ ಭಯಾನಕವಾಗಿತ್ತು. ಅವನ ಕಣ್ಣುಗಳನ್ನ ಕಂಡು ಆಗಲೇ ಅವಳ ನೋಟ ಮತ್ತು ನಗೆಗಳಲ್ಲಿಯ ಆಟಗುಳಿತನ ಹೋಗಿ ಪುಕ್ಕಲು ತುಂಬಿತು. ಮಂಕಾಗಿ ನಿಂತಳು. ಅವನ ಉಸಿರಾಟದ ಮದ್ದಿನ ವಾಸನೆ ಮಾತ್ರ ತಪ್ಪದೆ ಅರಿವಿಗೆ ಬಂತು ಹೇಳಿದ:

“ನೀನೆಲ್ಲಿದ್ದರೂ ಪ್ರೀತಿಸ್ತೇನೆ; ಆಯ್ತ? ಈಗ ಹೇಳು, ನೀನ್ಯಾಕೆ ನನ್ನಿಂದ ಅಗಲಬೇಕಂತಿ?”

-ಎಂದು ಗಟ್ಟಿಯಾಗಿ ಹಿಡಿದುಕೊಂಡ. ಅವನ ಬಿಗಿ ಹಿಡಿತಕ್ಕೆ, ದನಿಯ ಬಿರುಸಿಗೆ ಗಾಬರಿಯಾಗಿ ಅವನ ಮುಖ ನೋಡುತ್ತಿರುವಂತೆ ಮುತ್ತಿನ ಕಣ್ಣೀರುಕ್ಕಿ ಬಂತು. ನರಳುವ ಪ್ರಾಣಿಯಂತೆ ದನಿಮಾಡುತ್ತ ಕೈ ಸನ್ನೆಯಲ್ಲಿ ಹೇಳಿದಳು:

“ಬೆಟ್ಟದಯ್ಯನಾಣೆ. ಇಷ್ಟು ದಿನ ಹೇಳಬಾರದು ಅಂತಲೇ ಇದ್ದೆ. ಆದರೀಗ ಹೇಳದಿರಲಿಕ್ಕೆ ಸಾಧ್ಯವಾಗುತ್ತಿಲ್ಲ. ದಯಮಾಡಿ ನನ್ನನ್ನ ಹದ್ದಿನ ಕೊಳ್ಳಕ್ಕೆ ಕಳಿಸಿಬಿಡಿರಿ. ನನ್ನನ್ನ ಹಾಗೆ ನೋಡಬ್ಯಾಡ್ರಿ. ನನ್ನ ಪಾಡಿಗೆ ನಾನು ಅಲ್ಲಿ ಸುಖವಾಗಿರ್ತೀನಿ. ಎಲ್ಲಿಯೂ ಹೋಗೋದಿಲ್ಲ.”

ಎನ್ನುತ್ತ ಮಕ್ಕಳ ಹಾಗೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಶಿಖರಸೂರ್ಯನ ಕಿವಿಯ ಕೂದಲು ನಿಮಿರಿದವು. ಆ ಕೂದಲು, ಆ ಕಣ್ಣುಗಳ ಕ್ರೂರವಾದ ನೋಟ, ಇವುಗಳನ್ನು ಎದುರಿಸಲಿಕ್ಕೆ ಇದ್ದಬಿದ್ದ ಧೈರ್ಯವನ್ನುಒಟ್ಟುಗೂಡಿಸಿಕೊಂಡು ದೂರ ಸರಿದಳು.

“ಯಾರಿಗೆ ಹೆದರಿ ನೀನು ಊರು ಬಿಟ್ಟು ಹೋಗುತ್ತಿರುವಿ ಅಂತ ನನಗ್ಗೊತ್ತು ಕಣೇ.”

“ಬೆಟ್ಟದಯ್ಯನ ಆಣೆ, ಯಾರಿಗೂ ಹೆದರಿಲ್ಲಾರೀ.”

“ನಾನು ಹೇಳಲ? ನನ್ನ ಮಡದಿ ಛಾಯಾದೇವಿಗೆ!”

ಇದನ್ನು ಕೇಳಿದ್ದೇ ವಿದ್ಯುಲ್ಲತೆ ಜಲಜಲ ಕಣ್ಣೀರು ಸುರಿಸುತ್ತ ಛಾಯಾದೇವಿ ನಿಜವಾಗ್ಲೂ ನನಗೆ ಹೇಳಿಲ್ಲ” ಎಂದು ಬಿಕ್ಕುತ್ತ ಕಣ್ಣೀರೊರೆಸಿಕೊಂಡಳು. ಶಿಖರಸೂರ್ಯ ಗೆದ್ದವನಂತೆ ಹುಮ್ಮಸುಗೊಂಡು ಹೇಳಿದ-

“ವಿಷಕನ್ಯೆ ನೀನು. ವಿಷ ತೆಗೆಯೋದಕ್ಕೆ ಒದ್ದಾಡ್ತ ಇದ್ದೀನಿ. ಖುದ್ದಾಗಿ ಕಾಡುಸುತ್ತಿ ನಾರು ಬೇರು ತರ್ತಾ ಇದ್ದೀನಿ. ಇದೆಲ್ಲಾ ನಿನಗೆ ಕಾಣಲಿಲ್ಲವಲ್ಲೆ! ‘ಆ ರಾಜಕುಮಾರಿಗೆ ಅನ್ಯಾಯ ಮಾಡಿದವಳು. ಮಕ್ಕಳ ತಂದೆಯನ್ನ, ತಾಯಿಯ ಗಂಡನನ್ನ ಕಸಿದುಕೊಂಡವಳು… ಅಯ್ಯೋ ಪಾಪವೆ! ಅಯ್ಯಯ್ಯೋ ಅನ್ಯಾಯವೇ!’ ಇದಕ್ಕೇ ಅಲ್ಲವೇನೆ ನೀನು ಹೆದರಿದ್ದು? ಕೇಳೆ ಹುಚ್ಚಿ, ಇದೇ ಜಗತ್ತು ನಿನ್ನನ್ನು ವಿಷಕನ್ಯೆ ಮಾಡಿತು. ನೀವೇನು ಮಾಡಿದಿರಿ?

“ಬೆಟ್ಟದಯ್ಯ ಮಾಡಿದರೆ ಯಾರೇನು ಮಾಡಲಾದೀತು ಅಂತ ಸುಮ್ಮನಾದಿರಿ. ನಿನ್ನ ದೇವರು ಮತ್ತು ಸಮಾಜ ಮಾಡಿದ ತಪ್ಪನ್ನ ಸರಿಪಡಿಸ್ತೇನೆ ಅಂತ ನಾನು ಬಂದೆ. ನಿನಗಿಟ್ಟ ವಿಷಕ್ಕೆ ಎರಡು ನಾಲಗೆಗಳಿದ್ದವು: ಒಂದು ನಿನ್ನನ್ನ ವಿಷಕನ್ಯೆ ಅಂತಿತ್ತು. ಇನ್ನೊಂದು ಸೂಳೆ ಅಂತಿತ್ತು.

“ಅಷ್ಟೇ ಅಲ್ಲ, ಒಂದು ದಿನ ನಿನ್ನನ್ನ ಕೊಲ್ಲುತ್ತಿದ್ದರು, ನಿನ್ನ ಅಕ್ಕನನ್ನ ಕೊಂದ ಹಾಗೆ! ಮುಂದೆ ಬಂದು ‘ನಾನು ಇವಳ ಯಜಮಾನ! ಅಂತ ನಿಂತೆ. ಸುಮ್ಮನಾದರು. ಖುದ್ದಾಗಿ ಮೈ ವಿಷ ಮಾಡಿಕೊಂಡು ನಿನಗೆ ಸುಖ ಕೊಟ್ಟೆ. ಸಾಲದೇನೆ ನಿನಗೆ? ನನಗೆ ದ್ರೋಹ ಮಾಡಿ ನನ್ನಿಂದ ದೂರ ಹೊಂಟಿದೀಯ?”

ಬಿದ್ದು ಉರುಳಾಡುವಂತೆ ಕೆನ್ನೆಗೆರಡೇಟು ಬಿಗಿಯಬೇಕೆಂದುಕೊಂಡ. ನನ್ನ ಮಡದಿಯ ಮುಂಗೈ ಹಿಡಿದು ಮಣಿಸಿದವಳು ಇವಳೇನಾ? ಮಡದಿಯ ಭಯದಲ್ಲಿ ವಿದ್ಯುಲ್ಲತೆ ಕುರೂಪಿಯಾಗಿ ಕಂಡಳು. ಇವಳಿಗೆ ಸಂಬಂಧಪಟ್ಟುದೆಲ್ಲ ಇವಳ ಮೈ, ಮುಖ, ಕೂದಲು, ಅಂಗಾಂಗಗಳು, ಇವಳುಟ್ಟ ಬಟ್ಟೆ ಎಲ್ಲ ಎಲ್ಲವೂ ಅಸಾಧಾರಣ, ಅಪ್ರತಿಮ ಅಪ್ಸರೆಗೆ ಸಮ ಎಂದುಕೊಂಡಿದ್ದ ವಿದ್ಯುಲ್ಲತೆ ಈ ದಿನ ಹೇಸಿಕೆ ಬರುವಷ್ಟು ವಿಕಾರವಾಗಿ ಕಂಡಳು. ಸೊತ ದನಿಯಲ್ಲಿ ಹೇಳಿದಳು.

“ಹದ್ದಿನ ಕೊಳ್ಳವೇನು ದೂರದ ನಾಡಲ್ಲ. ನಾನಲ್ಲಿ ಸುಖವಾಗಿರ್ತೀನಿ. ಬಿಡುವು ಮಾಡಿಕೊಂಡು ಬಂದರೆ ನಿಮಗೂ ವಿಶ್ರಾಂತಿ ಸಿಗುತ್ತದೆ. ನಮಗೆ ಹೆಚ್ಚಿನ ಅನುಕೂಲವೇನೂ ಬೇಡ. ವಾಸಿಸಲು ನಿಮ್ಮ ಅರಮನೆಯ ಹಿಂದಿನ ಒಂದು ಗೂಡಾದರೆ ಸಾಕು.”

“ನನಗೆ ವಂಚನೆ ಮಾಡಿ ಹೋಗ್ತಿಯೇನೆ?”

ಅವಳು ತನ್ನ ಹಿಂದಿನ ಮಾತನ್ನೇ ಮುಂದುವರಿಸಿದಳು.

“ನನ್ನ ಕಾಳಜಿಯಲ್ಲಿ ನೀವು ನಿಮ್ಮ ಸುಖವನ್ನು ಕೂಡ ನೋಡಿಕೊಳ್ಳಲಿಲ್ಲ. ಪ್ರೀತಿಯಲ್ಲಿ ಕಾಲ ಕಳೆದದ್ದು ಇಬ್ಬರಿಗೂ ಗೊತ್ತಾಗಲಿಲ್ಲ. ವಿಷಕನ್ಯೆಯಾದರೂ ಮೈ ಮರೆಯುವಷ್ಟು ಸುಖ ಕೊಟ್ಟಿರಿ. ಈ ತನಕ ನಿಮ್ಮ ದೇಹವನ್ನು ಮಾತ್ರ ಪ್ರೀತಿಸುತ್ತಿದ್ದೆ. ಈಗ ಇಡಿಯಾಗಿ ನಿಮ್ಮ ಆತ್ಮವನ್ನೂ ಪ್ರೀತಿಸುತ್ತೇನೆ. ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ. ಈ ಜಗತ್ತಿನಲ್ಲಿ ನನಗೆ ನಿಮಗಿಂತ ಹತ್ತಿರದವರು ಯಾರಿದ್ದಾರೆ? ನಿಮಗಿಂತ ಪ್ರಿಯರಾದವರು ಯಾರೂ ಇಲ್ಲ. ಬರಲೆ?”

ಎಂದು ಹೇಳಿ ಕಿಡಿಕಿಯ ಎಳೆಬಿಸಿಲು ಬಿಂಬಿಸಿ ಸೊಡರಿನಂತೆ ಹೊಳೆಯುತ್ತಿದ್ದ ಕಂಗಳಿಂದ ಅವನನ್ನೇ ನೋಡಿ, ಬಾಗಿ ಕಾಲುಮುಟ್ಟಿ ನಮಸ್ಕರಿಸಿ, “ನನ್ನನ್ನು ಆಶೀರ್ವದಿಸಿರಿ” ಎಂದಳು.

ಶಿಖರಸೂರ್ಯ ಅವಳನ್ನು ಎತ್ತಲೂ ಇಲ್ಲ, ಆಶೀರ್ವದಿಸಲೂ ಇಲ್ಲ. ಅವಳೇ ಬಿಕ್ಕಿಬಿಕ್ಕಿ ಅಳುತ್ತ ಓಡಿಹೋದಳು.

ಮಾರನೇ ದಿನವೇ ಬದೆಗನೇ ಖುದ್ದಾಗಿ ತನ್ನ ತಾಯಿತಂಗಿಯರನ್ನ ಕರೆದೊಯ್ದು ಹದ್ದಿನಕೊಳ್ಳದ ಅರಮನೆಯಲ್ಲಿ ಬಿಟ್ಟು ಬರುವಂತೆ ಶಿಖರಸೂರ್ಯ ವ್ಯವಸ್ಥೆ ಮಾಡಿದ.