ಈ ಎರಡು ವರ್ಷಗಳ ಅವಧಿಯಲ್ಲಿ ಮಹತ್ವದ ಘಟನೆಗಳೇನೂ ನಡೆಯಲಿಲ್ಲ. ಮಹಾರಾಣಿ ಮತ್ತು ಅರ್ಥಕೌಶಲರ ಅಪೇಕ್ಷೆಯಂತೆ ಕಡ್ಡಿಯಂತೆ ಬಡಕಲಾಗಿದ್ದ ಯುವರಾಜನನ್ನು ವಜ್ರದೇಹಿಯನ್ನಾಗಿಸಲು ಶಿಖರಸೂರ್ಯ ಒಪ್ಪಿಕೊಂಡು ಅವನನ್ನು ತನ್ನ ಕಾಳಜಿಯ ವಲಯಕ್ಕೆ ತಗೊಂಡಿದ್ದ. ಚಪಲಚಿತ್ತದ ಯುವರಾಜನನ್ನು ನಿತ್ಯ ವ್ಯಾಯಾಮ, ಅಂಗಮರ್ಧನವೇ ಮುಂತಾದ ಕಟ್ಟುನಿಟ್ಟಿನ ಶಿಸ್ತಿಗೊಳಪಡಿಸಿದ್ದ. ಪಥ್ಯಾಹಾರದ ಜೊತೆಗೆ ಶಕ್ತಿವರ್ಧಕದ ಹೆಸರಿನಲ್ಲಿ ಕಾಮಾತಿಕಾಮದ ಮದ್ದನ್ನೂ ಕೊಡುತ್ತಿದ್ದ. ಆತ ತುಡುಗು ದನದಂತೆ ಆಗಾಗ ಮಾಯವಾಗುವುದನ್ನ ತೂಕಡಿಸುವಂತೆ ಅಭಿನಯಿಸುತ್ತ ಪ್ರೋತ್ಸಾಹಿಸುತ್ತಿದ್ದ! ಈ ಕಡೆ ತಾನು ಬೇಸಿಗೆಯ ಋತುಮಾನದ ಹವಾಮಾನ ನೋಡಿಕೊಂಡು ವಿದ್ಯುಲ್ಲತೆಯ ದೇಹದ ವಿಷ ಇಳಿಸುವ ಪ್ರಯೋಗವನ್ನೂ ಆರಂಭಿಸಿದ್ದ. ವಿದ್ಯುಲ್ಲತೆಗೆ ನಿತ್ಯವೂ ಮದ್ದಿನ ಉಪಚಾರವಾಗಬೇಕಿದ್ದಿತಲ್ಲದೆ ಅವಳ ದೇಹದ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿತ್ತು. ಆದ್ದರಿಂದ ತನ್ನ ಮನೆ ಸಮೀಪದ ಮನೆ ‘ಸಂಜೀವಿನಿ’ಯಲ್ಲಿ ಅವಳ ಮತ್ತು ಅವಳ ತಾಯಿಯ ವಾಸ್ತವ್ಯದ ವ್ಯವಸ್ಥೆ ಮಾಡಿದ್ದ. ಅದು ವಿಶಾಲವಾದ, ಮರದ ಕೆತ್ತನೆ ಕೆಲಸಗಳಿಂದ ಅಲಂಕರಿಸಿ ಮನೆ, ಬದೆಗನ ಹಟ್ಟಿಯಿಂದ ಬಂದ ಮೂರು ಜನ ಆಳುಗಳಿದ್ದರಲ್ಲದೆ ಮನೆಯ ಹಿಂಭಾಗ ಮತ್ತು ಮುಂಭಾಗದಲ್ಲಿ ಅಪರೂಪದ ಸಸ್ಯಗಳು, ನೇರಳೆ ಮರಗಳಿದ್ದ ತೋಟವಿತ್ತು.

ಶಿಖರಸೂರ್ಯ ತದೇಕಧ್ಯಾನದಿಂದ ವಿದ್ಯುಲ್ಲತೆಯ ವಿಷ ತೆಗೆಯಲು ಪ್ರಯತ್ನಿಸುತ್ತಿದ್ದ. ತಾನು ಕಲಿತುದರ ಜೊತೆಗೆ ಪರ ವಿರೋಧವಾಗಿ ವರ್ತಿಸುವ ಬೇರೆ ವಿಷಗಳ ಮಿಶ್ರಣ ಮತ್ತು ಅವುಗಳ ವರ್ತನೆಗಳನ್ನು ಅಧ್ಯಯನ ಮಾಡುತ್ತ ಪ್ರಯೋಗ ನಡೆಸಿದ್ದ. ತನ್ನ ಸಹಜ ಆಸಕ್ತಿಗಳನ್ನು ತಾತ್ಪೂರ್ತಿಕವಾಗಿ ಹಿಂದಕ್ಕೆ ತಳ್ಳಿ ದಿನದ ಅನೇಕ ತಾಸುಗಳನ್ನು ವಿಷದ ಯೋಚನೆ ಹಾಗೂ ಪ್ರಯೋಗಗಳಲ್ಲೇ ಕಳೆಯುತ್ತಿದ್ದ. ಇಲ್ಲವೆ ಕಾಡಿನ ನಾರು ಬೇರು ಸಸ್ಯಗಳೊಂದಿಗೆ ಕಳೆಯುತ್ತಿದ್ದ. ಆಕೆಯ ಎಂಜಲು ಬೆವರುಗಳನ್ನು ಬಾಳೆಯೆಲೆಯಲ್ಲಿ ಸಂಗ್ರಹಿಸಿ ಇರುವೆ ಮತ್ತು ಇತರೇ ಕೀಟಗಳು ಮುತ್ತಿ ತಿಂದಾಗ ಆಗುವ ಪರಿಣಾಮಗಳನ್ನ ಗಮನಿಸುತ್ತಿದ್ದ. ಕ್ರಮ ತಪ್ಪದೆ ಮದ್ದು ಮತ್ತು ನಿರ್ದಿಷ್ಟ ಪಥ್ಯದ ಆಹಾರ ನೀಡುತ್ತ ಅವಳ ಮೇಲಾಗುವ ಪರಿಣಾಮಗಳನ್ನ ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದ. ಇದು ಅನೇಕರ ಊಹಾಪೋಹ ಚಾಡಿಗಳಿಗೆ ಕಾರಣವಾಗಿ-ಹೀಗೆ ಹುಟ್ಟಿದ ಜಾನಪದವೆಲ್ಲ ಛಾಯಾದೇವಿಯನ್ನೇ ಹುಡುಕಿಕೊಂಡು ಬರುವಂತಾಯಿತು. ಶಿಖರಸೂರ್ಯ ಮತ್ತು ವಿದ್ಯುಲ್ಲತೆಯ ಮಧ್ಯೆ ಅಕ್ರಮ ಸಂಬಂಧವಿರಲೇಬೇಕೆಂದು ಬರುತ್ತಿದ್ದ ಸುದ್ದಿಗಳು ಕೂಡಿಕೆಯಾಗಿದೆ ಎಂಬಲ್ಲಿಗೂ ತಲುಪಿದ್ದವು. ಛಾಯಾದೇವಿಯೀಗ ಅಸೂಯೆಯಿಂದ ಕುದಿಯತೊಡಗಿದ್ದಳು.

ಸುಂದರ ಜೋಡಿ ಮಕ್ಕಳ ತಾಯಾದ ಹೆಮ್ಮೆ, ರಾಜವೈದ್ಯನಾದರೂ ಪ್ರಧಾನಿಗೆ ಕಮ್ಮಿಯಿಲ್ಲದ ಗೌರವುಳ್ಳ ಗಂಡನ ಮಡದಿಯಾದ ಅಹಂಕಾರ-ಇವುಗಳಿಂದ ಅವಳಿಗೇ ಗೊತ್ತಿಲ್ಲದ ಒಂದು ಗತ್ತು ಅವಳ ವ್ಯಕ್ತಿತ್ವದಲ್ಲಿ ಸೇರಿಕೊಂಡಿತ್ತು. ಅವಳಿಗೇ ಪ್ರತ್ಯೇಕವಾದ ಪಲ್ಲಕ್ಕಿ ಮತ್ತು ಬೋಯಿಗಳಿದ್ದರು. ಚಿಕ್ಕ ಪರಿವಾರವಿತ್ತು. ಬಿಳಿಗಿರಿಯಿಂದ ಹೇರಳ ಕಾಣಿಕೆ ಬರುತ್ತಿತ್ತು. ಅಳತೆಗೆ ಸಿಗದಷ್ಟು ತಾಯ ಮಮತೆ ಇತ್ತು. ಹೀಗಾಗಿ ಸೇವಕ, ಪರಿಚಾರಕರಿಂದ ಮಾತ್ರವಲ್ಲದೆ ಗಂಡನಿಂದಲೂ ಕೆಲವು ಕರ್ತವ್ಯಗಳನ್ನಾಕೆ ನಿರೀಕ್ಷಿಸುತ್ತಿದ್ದಳು ಮತ್ತು ಅವು ಈಡೇರದಿದ್ದಲ್ಲಿ ಅವಳ ಅಹಂಕಾರ ಕೊಂಕುತ್ತಿತ್ತು.

ನೀವೇ ಕಂಡಂತೆ ಶಿಖರಸೂರ್ಯ ಯಾರನ್ನೂ ಅತಿಯಾಗಿ ಹಚ್ಚಿಕೊಂಡವನಲ್ಲ. ಅವನ ವಿನಾ ಅವನೊಳಗೆ ಇನ್ಯಾರೂ ಇಲ್ಲವೆಂದೇ ಛಾಯಾದೇವಿಯ ಸಾಮಾನ್ಯ ತಿಳುವಳಿಕೆಯಾಗಿತ್ತು. ಆದರೆ ಮಕ್ಕಳೊಂದಿಗೆ ಮಾತ್ರ ಮೈ ಮರೆಯುತ್ತಿದ್ದ. ಮಕ್ಕಳೊಂದಿಗೆ ಆಡುವಾಗ ಅವನ ಕಣ್ಣು ಥರಾವರಿ ಬಣ್ಣಗಳಿಂದ ಲಕಲಕಿಸುತ್ತಿದ್ದವು ನಿಜ. ಅದನ್ನೂ ಅತಿಗೊಯ್ದವನಲ್ಲ. ಈಗ ವಿದ್ಯುಲ್ಲತೆಯ ಜೊತೆಗೆ ರೋಗದ ನೆಪದಲ್ಲಿ ಅನೇಕ ತಾಸುಗಳನ್ನ ಕಳೆಯುತ್ತಿದ್ದನಲ್ಲ, ಮಡದಿಗೆ ಅಸೂಯೆ ಅಡರಿತು. ಅವಳಲ್ಲಿಗೆ ಹೋಗಬಾರದೆಂದು, ಮೈತುಂಬ ಹುಳು ತುಂಬಿರುವ ಅತ್ತೀಹಣ್ಣಿನಂಥ ಅವಳ ವಿಷಸಂಪರ್ಕದಿಂದ ದೂರವಿರಬೇಕೆಂದು, ಅದರಿಂದ ವಿಷದ ಸಂಪರ್ಕ ಮಕ್ಕಳಿಗೂ ತಗಲೀತೆಂದು ಮೆಲ್ಲಗೆ ಹೇಳಿ ನೋಡಿದಳು. ಅವನು ತಿರಸ್ಕಾರದ ಬಿರುನೋಟ ಬೀರಿದೊಡನೆ ಮುದುಡಿಕೊಂಡಳು: ತಾಯಿಗೆ ಹೇಳಿದಳು. ಮಗಳ ಕಥೆಯನ್ನು ನಂಬಿ ಅವಳೂ ನವುರಾಗಿ ಹೇಳಿ ನೋಡಿದಳು. ಶಿಖರಸೂರ್ಯ ಕೇಳಿ ಸುಮ್ಮನಾದನಷ್ಟೆ.

ಚಿಕ್ಕಂದಿನಿಂದಲೂ ಅಷ್ಟೆ; ಶಿಖರಸೂರ್ಯ ಪಡ್ಡೆ ವಯಸ್ಸಿನ ಸುಖಗಳಿಂದ ವಂಚಿತನಾಗಿದ್ದ. ಚಂದಮುತ್ತನೊಂದಿಗಿದ್ದಾಗ ಅಸೂಯೆ ಮತ್ತು ಅದರಿಂದುಂಟಾಗುವ ಉದ್ವೇಗಗಳಲ್ಲದೆ ಬೇರೆ ಭಾವನೆಗಳಿಗೆ ಆಸ್ಪದವಿಲ್ಲವಾಗಿತ್ತು. ಶಿವಾಪುರದ ಕುರುಮುನಿ ಮತ್ತು ಜಟ್ಟಿಗರಿಬ್ಬರೂ ಇವನ ಅಸೂಯೆಗೆ ಕಾರಣರಾಗಿದ್ದರು. ದೇಶಕ್ಕಾಗಿ, ದೇವರಿಗಾಗಿ, ತನ್ನ ಕುಲ ಕುಟುಂಬಕ್ಕಾಗಿ ಬದುಕುವವರದು ಒಂದು ಜಾತಿಯಾದರೆ, ತನಗೋಸ್ಕರ ಮಾತ್ರ ಬದುಕುವವರದು ಇನ್ನೊಂದು ಜಾತಿ. ಶಿಖರಸೂರ್ಯ ಎರಡನೆಯ ಜಾತಿಯವನು. ತನಗೆ ಹಿತಕರವಲ್ಲವಾದರೆ ತಂದೆ ತಾಯಿಗಳಾದರೂ ಸರಿ ತಿರಸ್ಕರಿಸುವವನು. ನಿರೀಕ್ಷಿಸಿದ್ದನ್ನು ಕೊಡಲಿಲ್ಲವಾದರೆ ಅಂಥವರನ್ನ ದ್ವೇಷಿಸುವವನು. ತನ್ನನ್ನು ಕೇಂದ್ರದಲ್ಲಿಟ್ಟುಕೊಂಡು ಉಳಿದೆಲ್ಲವನ್ನು ಪರಿಘವಾಗಿಸಿ ಕೇಂದ್ರದ ಸುತ್ತ ತಿರುಗುವಂತೆ ಮಾಡುವವನು.

ಒಂದು ದಿನ ಇಳಿಹೊತ್ತಿನಲ್ಲಿ ಶಿಖರಸೂರ್ಯ ಕಾಡಿನಿಂದ ಸೀದಾ ಸಂಜೀವಿನಿಗೆ ಬಂದು ಹಿತ್ತಲ ತೋಟದಲ್ಲಿ ನಿಂತ. ಈಗೊಂದು ತಾಸಿನ ಹಿಂದೆಯಷ್ಟೆ ಹನಿ ಹನಿ ಮಳೆಯಾದ್ದರಿಂದ ಸಂಜೆ ಸೂರ್ಯನ ಹೊಂಬಿಸಿಲಲ್ಲಿ ಇಡೀ ತೋಟ ಮಿಂದ ಹೆಣ್ಣಿನ ಹಾಗೆ ಲಕಲಕ ಹೊಳೆಯುತ್ತಿತ್ತು. ತೋಟದ ಅಂಚನ್ನು ಆವರಿಸಿದ್ದ ನೇರಳೆ ಮರಗಳು ಕಳಿತ ಹಣ್ಣಿನ ಗೊಂಚಲುಗಳಿಂದ ಬಿಸಿಲಲ್ಲಿ ಮಿರುಗುತ್ತಿದ್ದವು. ಮಣ್ಣಿನ ವಾಸನೆಗೆ ಹೂಮರಗಳ ವಾಸನೆ ಸೇರಿ ಉನ್ಮಾದಗೊಳಿಸುವ ಪರಿಮಳ ಇಡಗಿತ್ತು. ವಾತಾವರಣ ನಿಶ್ಯಬ್ದವಾಗಿದ್ದರೂ ಆಗಾಗ ಕೂಗುವ ಗೊರವಂಕನ ದನಿ ಮಾತ್ರ ಇಡೀ ತೋಟವನ್ನ ವ್ಯಾಪಿಸುವಂತಿತ್ತು.

ಅಷ್ಟರಲ್ಲಿ ವಿದ್ಯುಲ್ಲತೆಯ ತಾಯಿ ಸೊಂಟದ ಮೇಲೆ ಕೈಇಟ್ಟುಕೊಂಡು ನಿಧಾನವಾಗಿ ನಡೆಯುತ್ತ ಹಿತ್ತಲಿಗೆ ಬಂದಳು. ಬೆನ್ನಮೇಲೆ ಇಳಿಬಿದ್ದ ಮುದುಕಿಯ ವಿರಲ ಕೂದಲು ಬಂಗಾರದ ಕೂದಲಿನಂತೆ ಕಂಡುವಾದರೂ ಬಾಡಿದ್ದವು. ಬಹಳ ನೋವುಂಡ ಮುಖ; ದಣಿದು ಕಳೆಗುಂದಿತ್ತು. ಕಣ್ಣುಗಳಲ್ಲಿ ಆಸಕ್ತಿಯ ಚಂಚಲತೆ ಇರಲಿಲ್ಲ. ತಕ್ಷಣ ಶಿಖರಸೂರ್ಯ ಮರೆಯಲ್ಲಿ ನಿಂತ. ಮುದುಕಿ “ಗೊಂಬೇ” ಎನ್ನುತ್ತ ಯಾರನ್ನೋ ತುಸು ಹೊತ್ತು ಹುಡುಕಿ, ಆಮೇಲೆ ನೆಲ ನೋಡಿ ಹೆಜ್ಜೆ ಇಡುತ್ತ ಮುಂದುವರಿದಳು. ಅನತಿ ದೂರದ ನೇರಳೆ ಮರದಡಿಯಿಂದ ವಿದ್ಯುಲ್ಲತೆ ಎದ್ದು ನಿಂತಳು. ವಿದ್ಯುಲ್ಲತೆಗೆ ಗೊಂಬೆ ಎನ್ನುವ ಸಾರ್ಥಕವಾದ ಮುದ್ದಿನ ಹೆಸರಿದೆಯೆಂದು ಶಿಖರಸೂರ್ಯನಿಗೆ ತಿಳಿದಿರಲಿಲ್ಲ. ಮುದುಕಿಗೆ ಅವಳು ತಕ್ಷಣ ಕಾಣಲಿಲ್ಲ. ಟಕಮಕ ಹುಡುಕುತ್ತಿದ್ದಾಗ-ವಿದ್ಯುಲ್ಲತೆ ಮೂಗರು ಮಾಡುವಂಥ ಒಂದು ಶಬ್ದ ಮಾಡಿ ತಾಯಿಗೆ ಕೈ ಬೀಸಿದಳು. ಮುದುಕಿ ಆ ಕಡೆ ನೋಡಿ “ಬಾ ಕಂದಾ” ಎಂದು ಕರೆದಳು. ವಿದ್ಯುಲ್ಲತೆ ಉಡುತುಂಬ ಆಯ್ದ ನೇರಳೆ ಹಣ್ಣುಗಳೊಂದಿಗೆ ತಾಯ ಬಳಿಗೆ ಜಿಂಕೆಯಂತೆ ನೆಗೆಯುತ್ತ ಬಂದು ಉತ್ಸಾಹದಿಂದ ತುಂಬಿದ ಉಡಿ ತೆರೆದು ತಾಯಿಗೆ ಹೆಮ್ಮೆಯಿಂದ ತೋರಿಸಿದಳು.

“ನೋಡಿದೆಯಾ, ಕಳಿತ ಅಣ್ಣು ಉಡೀಲಿ ಆಕಬಾರದು ಅಂತ ಯೇಳಾಕಿಲ್ಲವ ನಿಂಗೆ? ನೋಡು ಲಂಗ ಒಲಸಾಯ್ತು. ಬಾ ಒಳೀಕೆ”

-ಎಂದು ಮಗಳ ಕೈ ಹಿಡಿದುಕೊಂಡು ಹಿಂದಿರುವ ಮನೆ ಬಾಗಿಲ ಕಡೆ ನಡೆದಳು. ಮಾತಾಡಲಿಲ್ಲವಾದರೂ ಮಗಳ ಬಗ್ಗೆ ತಾಯಿಯ ಹೃದಯ ಕರುಣಾರ್ದೃವಾಗಿ ಮಿಡಯುತ್ತಿತ್ತು. ಮಗಳಿಗಿದರ ಪರಿವೆ ಇರಲಿಲ್ಲ. ಉಡಿತುಂಬ ಹಣ್ಣು ಪಡೆದ ಗೆಲುವು ಮತ್ತು ಉತ್ಸಾಹವೇ ಅವಳ ಮುಖದಲ್ಲಿ ಮಿಂಚುತ್ತಿತ್ತು. ಅದೊಂದು ಅಸಾಧಾರಣ ಸಾಧನೆಯೆಂಬಂತೆ ತೋರಿಸುತ್ತಿದ್ದಳು. ಎರಡು ಬಾರಿ ವಿದ್ಯುಲ್ಲತೆಯ ಹಣೆ ಮತ್ತು ಕತ್ತಿನ ಬೆವರನ್ನು ಸೀರೆಯಂಚಿನಿಂದ ಒರೆಸಿ, ತಲೆ ನೇವರಿಸಿ ಮುದ್ದು ಕೊಡುವ ಉತ್ಕಟೇಚ್ಛೆಯನ್ನು ತಡೆದುಕೊಂಡಳು. ಅಷ್ಟರಲ್ಲಿ ಸೇವಕಿ ಬಂದು ಛಾಯಾದೇವಿ ಬಂದುದನ್ನು ತಿಳಿಸಿದಳು!

ಸೂರ್ಯ ಮುಳುಗುವುದಕ್ಕೆ ಇನ್ನೂ ಗಳಿಗೆ ಸಮಯವಿತ್ತು. ಬಿಸಿಲಿನ ತೀಕ್ಷ್ಣತೆ ಕಡಿಮೆಯಾಗಿ ಸಂಜೆಯ ಸಣ್ಣ ಚಳಿ ಮೆಲ್ಲಗೆ ಆವರಿಸತೊಡಗಿತ್ತು. ನೇರಳೆ ಮರದ ಕಡೆಯಿಂದ ಮಲ್ಲಿಗೆಯೂ ಸೇರಿದ ಮಿಶ್ರ ಪರಿಮಳ ಸೂಸುತ್ತಿತ್ತು. ಸೇವಕಿ ಮುದುಕಿಗೆ ಏನು ಹೇಳಿ ಕರೆದೊಯ್ದಳೆಂದು ಶಿಖರಸೂರ್ಯನಿಗೆ ತಿಳಿಯಲಿಲ್ಲ. ವಿದ್ಯುಲ್ಲತೆ ಉಡಿಯಲ್ಲಿಯ ಹಣ್ಣುಗಳನ್ನು ಒಂದೊಂದೇ ಆರಿಸಿ ತಿನ್ನುತ್ತ ತಾನೂ ಮನೆಯಂಗಳಕ್ಕೆ ಬಂದಾಗ ತಕ್ಷಣ ತನ್ನ ತಾಯಿ ಆಶ್ಚರ್ಯದಿಂದ ನಿಂತದ್ದು ಕಾಣಿಸಿತು. ನೋಡಿದರೆ ಇನ್ನೊಬ್ಬ ಸೇವಕಿ ಬಂದು ಸೀರುದನಿಯಲ್ಲಿ ಕಿರಿಚಿ ಹೇಳಿದಳು:

“ವಿದ್ಯುಲ್ಲಮ್ಮ ಅಂದರೆ ನೀನೇನಾ?”

“ಯಾಕೆ?”

“ರಾಣಿ ಛಾಯಾದೇವಿ ಕೂಗತವಳೆ”

“ಯಾಕಂತೆ?”

“ನೀ ಬಂದು ಕೇಳಿಕೊಳ್ಳಮ್ಮಾ. ಯಾಕೆ? ಎತ್ತ? ಸೇವಕಿಗೆ ಹೇಳ್ತಾರ?”

ಹಿಂದುಮುಂದೆ ಗೊತ್ತಾಗದೆ ಮುದುಕಿ ಚಿಂತೆಗೀಡಾಗಿ, ಹುಬ್ಬು ಗಂಟಿಕ್ಕಿ ಕೇಳಿದಳು:

“ಛಾಯಾದೇವಿ? ಅವಳ್ಯಾರಮ್ಮ?”

ಅಷ್ಟರಲ್ಲಿ ಬೋಯಿಗಳು ಛಾಯಾದೇವಿ ಕೂತಿದ್ದ ಪಲ್ಲಕ್ಕಿಯನ್ನು ತುಸು ಮುಂದೆ ತಂದರು. ಒಳಗಿದ್ದ ಛಾಯಾದೇವಿ ಪರದೆ ಸರಿಸಿ,

“ನನ್ನನ್ನೇ ಯಾರೂಂತ ಕೇಳೋಳು-ಎಷ್ಟು ಧೈರ್ಯವೆ ನಿನಗೆ?”

-ಎಂದು ಗುಡುಗಿದಳು. ಹಿಂದಿನಿಂದ ಬಂದ ಶಿಖರಸೂರ್ಯ ಮೆಲ್ಲಗೆ ಕಂಟಿಯ ಮರೆಗೆ ಸರಿದು ನಡೆಯುತ್ತಿರುವುದನ್ನು ಗಮನಿಸುತ್ತ ನಿಂತುಕೊಂಡ. ಮದುವೆಯಾದ ಮೇಲೂ ಛಾಯಾದೇವಿ ಕಲಿತದ್ದು ಕಡಿಮೆ. ಅವಳಲ್ಲಿದ್ದುದ್ದು ಬಿಳಿಗಿರಿ ಬುಡಕಟ್ಟಿನ ಒರಟು ರಕ್ತ. ಹೆಚ್ಚು ದನಿ ಮಾಡಿದರೆ ಹೆಚ್ಚು ಪರಿಣಾಮ ಬೀರುತ್ತದೆಂದು ಅವಳ ತರ್ಕ. ಅದರದು ಸೇವಕರನ್ನು ಬೆದರಿಸಲು, ಅವರಿಂದ ಹೆಚ್ಚು ಕೆಲಸ ತೆಗೆಯಲು ಬೈಗಳಿಗೆ ಯೋಗ್ಯವಾದ ದನಿಯೆಂದು ಅವಳಿಗೆ ತಿಳಿಯದು.

“ನೋಡೇ ಮುದಿಯಳೆ, ಇದು ರಾಜ್ಯವೈದ್ಯ ಶಿಖರಸೂರ್ಯನ, ಅಂದರೆ ನನ್ನ ಗಂಡನ ಮನೆ. ಇಲ್ಲಿ ಇರಬೇಕಾದರೆ ನನ್ನ ಅನುಮತಿ ಬೇಕು. ಅಗೋ ಆ ಬಿಳಿಗೂಬೆ ನಿಂತಿದೆಯಲ್ಲ, ಅಂಥವರಿಗೆಲ್ಲಾ ಇಲ್ಲಿ ಅವಕಾಶ ಇಲ್ಲ. ಗೊತ್ತಾಯ್ತೇನೆ ಮುದಿಗೂಬೆ?”

ಛಾಯಾದೇವಿ ಬಾಯಿಂದ ಈ ಪರಿಯ ಸಂಭಾಷಣೆ ಬಂದಾವೆಂದು ರಾಜವೈದ್ಯನೆಂದೂ ಊಹಿಸಿರಲಿಲ್ಲ. ಮುದುಕಿ ಶಾಂತಿಚಿತ್ತಳಾಗಿ, ಮುಖದಲ್ಲಾಗಲಿ, ದನಿಯಲ್ಲಾಗಲಿ ಯಾವುದೇ ವ್ಯಗ್ರತೆಯನ್ನ ತೋರದೆ ಹೇಳಿದಳು:

“ನೋಡಮ್ಮಾ, ರಾಜವೈದ್ಯ ನಿನಗೇನಾಗಬೇಕೋ ನನಗೆ ತಿಳೀದು. ನೀನೇಳ್ದೆಯಲ್ಲ ಆ ಬಿಳಿಗೂಬೆ-ಅದು ನನ್ನ ಕೂಸು. ರಾಜವೈದ್ಯ ಅದರ ವೈದ್ಯ. ಅವ್ನೇ ನಮ್ಮನ್ನಿಲ್ಲಿ ಇಟ್ಟವ್ನೆ. ನಿನಗೇನಾರ ಬೇಕಿದ್ದರೆ ಅವನ್ನೇ ಕೇಳಿಕೊ ಹೋಗು.”

ಆಘಾತ ಅವಮಾನಗಳಿಂದ ಧಗಧಗ ಕಿಚ್ಚಿನಲ್ಲಿ ನಿಂತಹಾಗೆ ಛಾಯಾದೇವಿ ಚಡಪಡಿಸಿದಳು. ಪಲ್ಲಕ್ಕಿಯನ್ನ ಕೆಳಗಿಡಲು ಜಬರದಸ್ತ ಸನ್ನೆ ಮಾಡಿ ಕೆಳಗಿಸಿದೊಡನೆ ಸರ್ರನೆ ತೆರೆ ಸರಿಸಿ ವಿದ್ಯುಲ್ಲತೆಯ ಮುಂದೆ ಹೋದಳು. ಅವಳು ಏನೇನೂ ಅರಿಯದೆ ತನ್ನ ಉಡಿತೆರೆದು ಅಷ್ಟೂ ನೇರಳೆ ಹಣ್ಣು ಕೊಡಲು ಉಡಿಯನ್ನ ಮುಂದೆ ಮಾಡಿದಳು. ತಾನೇನು ಮಾಡುತ್ತಿದ್ದೇನೆಂದರಿಯದೆ “ನನ್ನ ಸವುತೇ, ನನಗೆ ಚಳ್ಳೇಹಣ್ಣು ತಿನ್ನಸ್ತಿಯೇನೆ?” ಎಂದು ಕಿರಿಚಿ ಬಲಗೈ ಎತ್ತಿ ಬೀಸಿ ಇನ್ನೇನು ಕೆನ್ನೆಗೆ ಏಟು ಚಲ್ಲಬೇಕು-ವಿದ್ಯುಲ್ಲತೆಗೆ ಪರಿಸ್ಥಿತಿಯ ಅರಿವಾಯಿತು. ಉಡಿಬಿಟ್ಟು ತನ್ನ ಬಲಗೈ ಬಲವನ್ನೆಲ್ಲ ಉಪಯೋಗಿಸಿ ಛಾಯಾದೇವಿಯ ಮುಂಗೈ ಹಿಡಿದಳು! ದೊಡ್ಡ ಕಣ್ಣುಗಳ ಉಕ್ಕಿನ ಶಲಾಖೆ ದೃಷ್ಟಿಯನ್ನ ಅವಳ ಕಣ್ಣಲ್ಲಿ ನೆಟ್ಟು ನಿಂತಳು. ಆ ಬಿಳಿ ಹುಡಿಗಿಯ ಬಲದ ಮುಂದೆ ಗಡಗಡ ನಡುಗಿ ಸಮತೋಲ ತಪ್ಪಿದರೂ ತೋರಗೊಡದೆ ಭಂಡತನದಿಂದ ಛಾಯಾದೇವಿ ಒದರಿದಳು:

“ಅತ್ತೀಹಣ್ಣಿನಂಗೆ ಒಳಗೆಲ್ಲ ಕ್ರಿಮಿ ತುಂಬಿಕೊಂಡು, ಕೊಳೆಯೋ ಹೆಣ್ಣೇ… ಹೊರಗೆ ನೋಡು ಎಂಗಿದಾಳೆ ಥಳುಕು ಬಳುಕು…”

ಮರೆಯಲ್ಲಿ ನಿಂತಿದ್ದ ರಾಜವೈದ್ಯನನ್ನ ಕಂಡಳಾದ್ದರಿಂದ ಮುದುಕಿ ಬರೆದ ಚಿತ್ರದ ಹಾಗೆ ಸುಮ್ಮನೆ ನಿಂತಿದ್ದಳು. ವಿದ್ಯುಲ್ಲತೆಯ ಮುಖ ಕೆಂಪಗಾಗಿ ಮೂಗಿನ ಅರಳೆ ಬಿರುಸಾಗಿದ್ದವು. ಛಾಯಾದೇವಿ ಅಲ್ಲಾಡದ ಹಾಗೆ ಅವಳ ಕೈಯನ್ನ ಬಲವಾಗಿ ಹಿಡಿದು ಬಿಟ್ಟಿದ್ದಳು. “ಕೈ ಬಿಡೇ ಕಪಿಯೇ” ಎಂದು ಛಾಯಾದೇವಿ ಕೈಬಿಡಿಸಿಕೊಳ್ಳಲು ಹೋರಾಡುತ್ತ ಅಸಹಾಯಕಳಾಗಿ ತನ್ನ ಸೇವಕಿಯತ್ತ ನೋಡಿದಳು. ಆಕೆ ಮುಂದೆ ಬರತೊಡಗಿದಾಗ ಮುದುಕಿ ಬಂದು ಕೈ ಬಿಡಿಸಿ ಮಗಳನ್ನು ಹಿಂದೆ ಹಾಕಿಕೊಂಡು ನಿಂತಳು.

“ನೋಡಮ್ಮ ನೀನು ರಾಣಿಯೇ ಆಗಿರು. ಅಂಗಂತ ಎಲುಬಿಲ್ಲದ ನಾಲಿಗೇನ್ನ ಅಂಗೆಲ್ಲಾ ಅರಿಬಿಡಬಾರ್ದಮ್ಮ. ಇವತ್ತಿಗಿಟ್ಟು ಸಾಕು, ಇನ್ನು ಒರಡು”

“ನನಗೇ ಆಜ್ಞೆ ಮಾಡ್ತೀಯೇನೆ?” ಎಂದು ಛಾಯಾದೇವಿ ಕಿರಿಚಿದಳು.

ವಿದ್ಯುಲ್ಲತೆ ಮುಂದೆ ಬಂದು ಬಾಯಮೇಲೆ ಬೆರಳಿಟ್ಟುಕೊಂಡು “ಬಾಯ್ಮುಚ್ಚು” ಎಂಬಂತೆ ಸನ್ನೇ ಮಾಡಿದಳು. ಅವಳನ್ನು ನೋಡಿ ಛಾಯಾದೇವಿ ಇನ್ನಷ್ಟು ಗಾಬರಿಯಾಗಿ ಹಿಂದೆ ಸರಿದಳು. ಛಾಯಾದೇವಿಯ ಮುಖದಲ್ಲಿ ಕೊಲೆಗಡುಕಿಯ ಕಳೆಹೊಳೆದು ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ಥರಥರ ನಡುಗಿದಳು. ತಕ್ಷಣ ಸೇವಕಿ ಬಂದು ಕೈ ಆಧಾರ ಕೊಟ್ಟುದರಿಂದ ಸರಿಹೋಯ್ತು. ಇಲ್ಲದಿದ್ದಲ್ಲಿ ಬಿದ್ದೇ ಬಿಡುತ್ತಿದ್ದಳು. ತಕ್ಷಣ ರೇಶ್ಮೆ ಸೀರೆಯ ಸರಸರ ಸದ್ದು ಮಾಡುತ್ತ ಪಲ್ಲಕ್ಕಿಯಿದ್ದಲ್ಲಿಗೆ ಹೋಗಿ ಒಳಗೆ ಕೂತಳು. ಪಲ್ಲಕ್ಕಿ ಮರಗಳಲ್ಲಿ ಮರೆಯಾಯಿತು. ಸೂರ್ಯನಾಗಲೇ ಅಸ್ತಂತಗನಾಗಿ ಮಬ್ಬು ಬೆಳಕು ಆವರಿಸಿತ್ತು. ಮೆಲ್ಲಗೆ ಶಿಖರಸೂರ್ಯ ಹೊರಗೆ ಬಂದ. ಅವನನ್ನು ನೋಡಿ ಮಗಳನ್ನು ಅಲ್ಲಿಯೇ ಬಿಟ್ಟು ಮುದುಕಿ, ರಾಜವೈದ್ಯ ಬಂದಿರುವ ಬಗ್ಗೆ ಸನ್ನೆ ಮಾಡಿ ತಿಳಿಸಿ. ಮನೆಯೊಳಕ್ಕೆ ಹೋದಳು.

ಕಣ್ಣಿಗೆ ಕೋಮಲೆಯಾಗಿ ಕಂಡ ವಿದ್ಯುಲ್ಲತೆಯ ಸ್ವಾಭಿಮಾನ ಮತ್ತು ತನ್ನ ಮಡದಿಯ ಮುಂಗೈ ಹಿಡಿದು ಪ್ರತಿಭಟಿಸಿದ ರೀತಿ ನೋಡಿ ಅವಳ ಬಗ್ಗೆ ಶಿಖರಸೂರ್ಯನಲ್ಲಿ ಅಪಾರವಾದ ಮೆಚ್ಚುಗೆ ಉಂಟಾಯಿತು. ಸಹಾಯಕ್ಕಾಗಿ ರಾಜವೈದ್ಯನತ್ತ ನೋಡದೆ, ಒದರದೆ ಒಬ್ಬಳೇ ಛಾಯಾದೇವಿಯನ್ನ ಎದುರಿಸಿ ಗೆದ್ದಿದ್ದಳು! ಮನಸ್ಸಿನಲ್ಲೇ ಭಲೆ! ಅಂದ. ಛಾಯಾದೇವಿ ಅವಳ ಮುಂದೆ ಬಹಳ ಸಣ್ಣವಳಾಗಿ, ಅಗ್ಗದ ಜಗಳಗಂಟಿಯಾಗಿ ಕಂಡಳು. ಇವಳು ಬೆಳ್ಳಿಯಂಥ ಅಸಲೀ ಹೆಣ್ಣೆಂದು ಅನಿಸಿತು. ತೆಳ್ಳಗೆ ಬೆಳ್ಳಗಿದ್ದುದರಿಂದ ಇರುವುದಕ್ಕಿಂತ ಹೆಚ್ಚು ಎತ್ತರವಾಗಿ ಕಾಣಿಸುತ್ತಿದ್ದಳು. ಅವಳು ಹೊದ್ದ ದಾವಣಿ ಅವಳ ಮೈಗಂಟಿದ ಚರ್ಮವೆಂಬಂತೆ ಕಂಡಿತೇ ವಿನಾ, ಹೊದ್ದ ಉಡುಪಿನಂತೆ ಕಾಣಲೇ ಇಲ್ಲ. ಎಷ್ಟೇ ಸಡಿಲವಾದರೂ ಲಂಗ ಮಾತ್ರ ಅವಳ ನಿತಂಬಗಳ ದುಂಡು ಸೀಮೆಯನ್ನ ಗುರುತಿಸಿತ್ತು. ವಿದ್ಯುಲ್ಲತೆ ಹಿಂದಿರುಗಿದಾಗ ಶಿಖರಸೂರ್ಯ ಅವಳ ಹಿಂದೆಯೇ ನಿಂತಿದ್ದನ್ನು ನೋಡಿ ಮೊದಲು ಭೀತಿ, ಆಶ್ಚರ್ಯಗಳಿಂದ ಮುಖಚರ್ಯೆ ಬದಲಾಯಿತು. ರಾಜವೈದ್ಯ ಬಂದು ಮೆಲ್ಲಗೆ ಅವಳ ಭುಜದ ಮೇಲೆ ಕೈಯಿಟ್ಟ. ವಿದ್ಯುಲ್ಲತೆ ಗಾಂಭೀರ್ಯದಿಂದ ಹಾಗೇ ನಿಂತಿದ್ದಳು. ಬೆನ್ನು ಸವರಿ ಸಮಾಧಾನ ಮಾಡಲು ನೋಡಿದ.

ತುಸು ಸಮಯವಾದ ಬಳಿಕ ಮೆಲ್ಲಗೆ ಅವಳ ಗದ್ದ ಹಿಡಿದು ಮೇಲೆತ್ತಿದಾಗ ನೋಟಗಳು ಪರಸ್ಪರ ಎದುರಾದವು. ಸನ್ಯಾಸಿಯಂತಿದ್ದ ಸೂರ್ಯನ ಕಣ್ಣುಗಳಲ್ಲಿಯ ವಿನೋದ ಮತ್ತು ಆತುರತೆಯನ್ನು ಪ್ರಥಮಬಾರಿ ಕಂಡು ವಿದ್ಯುಲ್ಲತೆಯ ದಾವಣಿಯಲ್ಲಿಯ ಮೊಲೆಗಳು ಕಂಪಿಸಿ ನಿಮಿರಿದವು. ಬೆಳ್ಳಿಯ ಸೌಂದರ್ಯಕ್ಕೆ ಮರುಳಾಗಿ ಚಿರತೆಯಂತೆ ಹುರಿಗೊಂಡಿದ್ದ ಮೈಯಲ್ಲಿ ಬಲಾಢ್ಯವಾದ ಆವೇಶ ಹೊಕ್ಕಂತಾಗಿ ಅವಳ ಒದ್ದೆ ಮುಖವನ್ನ ಕೈಯಲ್ಲಿ ಹಿಡಿದುಕೊಂಡು ಮುಖದ ತುಂಬ ಮುದ್ದುಕೊಟ್ಟ. ಕೆನ್ನೆ ತುಟಿಗಳನ್ನ ಸವಿಯುತ್ತ ಬಾಯೊಳಕ್ಕೆ ನಾಲಗೆ ತೂರಿ ಅವಳ ಎಂಜಲನ್ನು ಹೀರಿಕೊಂಡ. ಅವನ ಬಲಾಢ್ಯ ಬಾಹುಬಂಧನದಲ್ಲಿ ಸಿಕ್ಕು ಸುಖದ ನೋವಿನಲ್ಲಿ ಮುಲುಗುತ್ತ ವಿದ್ಯುಲ್ಲತೆ ವಿಲಿವಿಲಿ ಒದ್ದಾಡಿದಳು. ಬಹಳ ಹೊತ್ತಿನ ಮೇಲೆ ಬಿಟ್ಟಾಗ ಸುಖದ ಮತ್ತೇರಿ ಇಬ್ಬರ ಮೈ ಬಿಸಿಯಾಗಿದ್ದವು. ಕಾಲಲ್ಲಿ ಶಕ್ತಿ ಸಾಲದೆ ವಿದ್ಯುಲ್ಲತೆ ಬೀಳುವಂತಾಗಿ ಅವನಿಗಂಟಿಕೊಂಡೇ ನಿಂತಳು. ಮೆಲ್ಲಗೆ ಅವಳ ಕೆನ್ನೆಗಳನ್ನು ತಟ್ಟಿ ಎಚ್ಚರಿಸಿ “ಒಳಗೆ ನಡೆ” ಎಂದು ಸನ್ನೆ ಮಾಡಿದ. ಇಬ್ಬರಿಗೂ ಅಗಲುವ ಮನಸ್ಸಿರಲಿಲ್ಲ. ಇನ್ನೂ ಅಂಟಿಕೊಂಡೇ ಇರುವುದನ್ನ ನೋಡಿ ಅವಳನ್ನು ಬಾಗಿಲವರೆಗೆ ಬಿಟ್ಟು ಒಂದು ಮರದ ಬಳಿ ಬಂದ.

ಕಣ್ಣಿಗೆ ಕತ್ತಲೆ ಬಂದಂತಾಗಿ ಹಾಗೇ ಮರಕ್ಕಂಟಿಕೊಂಡೇ ಕೆಳಕ್ಕೆ ಜರುಗಿ ಕುಸಿದ. ವಿಷವಾಗಲೇ ಅವನ ಒಳಕ್ಕೆ ಇಳಿದಿತ್ತು. ತನ್ನ ವಜ್ರದೇಹಕ್ಕೆ ಘಾಸಿ ಮಾಡಲಾರದೆಂದು ಗೊತ್ತಿದ್ದರೂ ಒಂದು ಕ್ಷಣ ಭಯವಾಗಿ ಮೈ ತಣ್ಣಗಾಯ್ತು. ಕಣ್ಣು ಮುಚ್ಚಿಕೊಂಡು ತನ್ನೊಳಗೆ ನಡೆಯುತ್ತಿರುವುದನ್ನು ಗಮನಿಸುತ್ತ ಹಾಗೇ ಕೂತ. ಸುಮಾರು ಒಂದು ಗಂಟೆಯ ತರುವಾಯ ಅಪಾಯವಿಲ್ಲವೆಂದು ಖಾತ್ರಿಯಾಗಿ ಎದ್ದು ಯಾರಿಗೂ ಹೇಳದೇ ಮನೆಗೆ ಹೋದ.

ಮಾರನೇದಿನ ಮದ್ದನ್ನು ಕಳಿಸಿದನೇ ವಿನಾ ತಾನಾಗಿ ಸಂಜೀವಿನಿಯ ಕಡೆ ಹೋಗಲಿಲ್ಲ. ನ್ಯಾರೇ ಮಾಡುವ ಸಮಯದಲ್ಲಿ ಉಣ್ಣಲು ಬಿಸಿಗಂಜಿ ಕೇಳಿದ. ಛಾಯಾದೇವಿ ಬಿಸಿಗಂಜಿ ತಂದರೆ ತಂಗುಳನ್ನ ಬೇಕೆಂದ. ತಂಗುಳನ್ನ ತಂದಾಗ ಮೊಸರು ಬೇಕಂದ, ಮೊಸರು ತಂದರೆ ತಾನು ಕೇಳಿದ್ದು ಮಜ್ಜಿಗೆ ಅಂದ. ಮಜ್ಜಿಗೆ ತಂದರೆ “ನಿನ್ನಂಥ ಜಗಳಗಂಟಿಯ ಇನ್ನು ಕಾಣೆನಲ್ಲಾ!” ಎಂದು ಬಯ್ಯಬಾರದ ಬೈಗುಳ ಬೈದು “ನಿನ್ನಂಥವಳ ಕಟ್ಟಿಕೊಂಡು ಏಗಾಡುವುದು ನನ್ನಿಂದಾಗಲಿಕ್ಕಿಲ್ಲ”ವೆಂದೂ ಬಿರುನುಡಿದ. ತಲೆಯ ಮೇಲೆ ಆಕಾಶ ಕಳಚಿಬಿದ್ದಂತೆ ಛಾಯಾದೇವಿ ಎದೆ ಬಡಿದುಕೊಂಡು ಅತ್ತಳು. ಸೇವಕಿಯರು ಸಮಾಧಾನ ಮಾಡಿದಷ್ಟೂ ಹೆಚ್ಚು ಅತ್ತಳು. ಇದೆಲ್ಲ ಆ ಕೊಳೆತ ಬಿಳಿಗೂಬೆಯ ಪ್ರಭಾವವೆಂದು ಇನ್ನಷ್ಟು ಅತ್ತಳು. ಸಮಾಧಾನ ಮಾಡಲಿಕ್ಕೆ ತಾಯಿ ಬರಲಿಲ್ಲವೆಂದು ಮತ್ತಷ್ಟು ಅತ್ತಳು. ಮಕ್ಕಳು ತಮ್ಮ ಪಾಡಿಗೆ ತಾವು ಆಡಿಕೊಂಡಿದ್ದರೆ ಅದಕ್ಕೂ ಅತ್ತಳು. ನಿನ್ನೆ ನೀನು ವಿದ್ಯುಲ್ಲತೆಯ ಜೊತೆಗೆ ಜಗಳಾಡಿದ್ದು ತಪ್ಪೆಂದು ತಿಳಿಸಿ ಹೇಳಲು ಈ ನಾಟಕವಾಡಿದ್ದ ಶಿಖರಸೂರ್ಯ, ಆಮೇಲೆ ಛಾಯಾದೇವಿಯ ಅಳಾಪ ನೋಡಿ ಇದು ವಾಸಿಯಾಗದ ರೋಗವೆಂದು ತನ್ನ ಪಾಡಿಗೆ ತಾನು ಸುಮ್ಮನಾದ.

ಅಂದು ರಾತ್ರಿ ಶಿಖರಸೂರ್ಯನಿಗೆ ಬಹಳ ಹೊತ್ತು ನಿದ್ದೆ ಬರಲಿಲ್ಲ. ಮಲಗಿದ್ದ ಮಕ್ಕಳನ್ನು ನೋಡುತ್ತ ಕೂತ. ನಿರ್ಮಲವಾದ ಸ್ವಪ್ನನಿದ್ದೆಯಲ್ಲಿ ಮಕ್ಕಳಿಬ್ಬರೂ ದೇವತೆಗಳಂತೆ ಮಲಗಿದ್ದರು. ಅತ್ತು ಕರೆದು ರಾಡಿ ರಂಪ ಮಾಡಿಕೊಂಡು ಛಾಯಾದೇವಿ ಮಲಗಿದ್ದಳು. ಮೊದಲ ಬಾರಿಯೆಂಬಂತೆ ದೊಡ್ಡದಾಗಿ ಗೊರಕೆ ಹೊಡೆಯುತ್ತಿದ್ದ ಮಡದಿಯನ್ನ ನೋಡಿದ. ಅವಳ ಎಡಗಿವಿಯ ಕೆಳಗೊಂದು ಸಣ್ಣ ಮಚ್ಚೆಯಿತ್ತು. ಅದರಲ್ಲೆರಡು ಕರಿಕೂದಲು ಹುಟ್ಟಿಕೊಂಡಿದ್ದು ಅವು ಅಲ್ಲೇ ಒರಗಿದ್ದವು. ಅರೆದೆರೆದ ಬಾಯಿಂದ ಬೆಳ್ಳುಳ್ಳಿಯ ವಾಸನೆಯ ಉಸಿರು ಹೊಮ್ಮಿ ಬೆವರಿನ ವಾಸನೆಯೊಂದಿಗೆ ಬೆರೆತು ಸಹಿಸಲು ಕಷ್ಟವಾಗುತ್ತಿತು.

ನಂತರ ನಲವತ್ತೆಂಟು ದಿನ ಏನೇನೂ ಸಂಭವಿಸಲಿಲ್ಲ. ಅಷ್ಟು ದಿನವೂ ಶಿಖರಸೂರ್ಯ ಹಠಯೋಗದಿಂದೆಂಬಂತೆ ದಿನಾಲು ಕೊಂಚ ವಿಷ ಸೇವನೆ ಮಾಡುತ್ತ ಸಾತ್ಮ್ಯಕ್ಕಾಗಿ ಹಾರೈಸುತ್ತಿದ್ದ. ಹೆಂಡತಿ ಮಕ್ಕಳನ್ನು ಸ್ಪರ್ಶದಿಂದ ದೂರ ಇಟ್ಟು, ಪ್ರತ್ಯೇಕ ಮಲಗುತ್ತಿದ್ದ. ಸಂಜೀವಿನಿಯ ಕಡೆಗೆ ಹೋಗುವುದನ್ನು ಕಡಿಮೆ ಮಾಡಿದ್ದ. ಮದ್ದಿಗೆ ವಿದ್ಯುಲ್ಲತೆ ಸಹಕರಿಸುತ್ತಿದ್ದಳು ಮತ್ತು ಇಬ್ಬರ ಮಧ್ಯೆ ಏನೇನೂ ನಡೆದಿಲ್ಲವೆಂಬಂತೆ ಸಹಜವಾಗಿದ್ದಳು. ಆದರೆ ಆತ ಸಂಜೀವಿನಿಗೆ ಬಂದರೆ, ಬಂದಾಗಿನಿಂದ ಹೋಗುವತನಕ ಅವನ ಮೇಲಿನ ಕಣ್ಣು ಕೀಳುತ್ತಿರಲಿಲ್ಲ.

ನಲವತ್ತೊಂಬತ್ತನೆಯ ದಿನ ಸೂರ್ಯ ಮುಳುಗುವ ಸಮಯದಲ್ಲಿ ರಾಜವೈದ್ಯ ಸಂಜೀವಿನಿಯ ನೇರಳೆ ಮರದಡಿ ಕೂತಿದ್ದ. ಛಾಯಾದೇವಿಯು ಮಕ್ಕಳನ್ನು ಕರೆದುಕೊಂಡು ಎರಡು ವಾರಗಳ ಹಿಂದೆ ಬಿಳಿಗಿರಿಗೆ ಹೋಗಿದ್ದಳು. ದೊಡ್ಡ ನೇರಳೆ ಮರಗಳಿದ್ದ ಸ್ಥಳ ಅದು. ಅದರಂಚಿಗೆ ನದಿಯ ಒತ್ತಿನ ನೀರು ನಿಂತುದರಿಂದ ಅದಕ್ಕೊಂದು ಸ್ವತಂತ್ರ ಸರೋವರದ ಘನತೆ ಬಂದಿತ್ತು. ತಿಳಿಯಾದ ನೀರು, ಅದರ ಸಣ್ಣ ಸಣ್ಣ ತೆರೆಗಳು, ಅದರ ಮೇಲೆ ಎಳೆಮೀನಿಗೆ ಗುರಿಯಿಡುವ ಟೀವಕ್ಕಿಗಳು-ಇವನ್ನೆಲ್ಲ ನೋಡುತ್ತ ಕೂರುವುದು ಅವನ ಇತ್ತೀಚಿನ ಹವ್ಯಾಸವಾಗಿತ್ತು. ಸಂಜೆಯ ಮಬ್ಬಿನ ಮೇಲೆ ಎಳೆಬೆಳುದಿಂಗಳು ಹರಡತೊಡಗಿತ್ತು. ಬೆಳ್ಳಿಯ ನೆನಪಾಯಿತು, ಅದನ್ನೇ ಮೆಲುಕಾಡಿಸುತ್ತ ಕೂತಿದ್ದಾಗ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ಬೆಳುದಿಂಗಳಾಗಲೇ ಬಲಿತು ವಾತಾವರಣ ನಿಶ್ಯಬ್ದವಾಗಿತ್ತು. ಹಸಿವಿನ ಅರಿವಾಗಿ ಎದ್ದ. ಮದ್ದುಕೊಟ್ಟು ಬೇಗನೆ ಹೊರಡಬೇಕೆಂದು ತಿರುಗಿದರೆ ಹಿಂದಿನ ಮರಕ್ಕಂಟಿಕೊಂಡು ಇನ್ಯಾರೋ ಕೂತಿದ್ದರು. ಕೂತಿದ್ದವಳು ವಿದ್ಯುಲ್ಲತೆ! ಇವನನ್ನು ನೋಡಿ ಅವಳೂ ಎದ್ದಳು. ಆಶ್ಚರ್ಯದಿಂದ ಸಮೀಪ ಹೋದ. ಅವಳು ಮನೆ ಕಡೆ ನಡೆದಳು. ತುಸು ಹೊತ್ತು ಅವಳನ್ನೇ ನೋಡುತ್ತ ನಿಂತ. ಲಂಗದ ನರಿಗೆಗಳನ್ನು ಲಯಬದ್ಧವಾಗಿ ತಳ್ಳುತ್ತ ತನ್ನ ಪ್ರಮಾಣಬದ್ಧ ಆಕೃತಿಯನ್ನು ಬೆಳುದಿಂಗಳ ತೆರೆಗಳಲ್ಲಿ ತೇಲಿಸುತ್ತ ನಡೆದಳು. ಹಿಂದಿನಿಂದ ಇವನೂ ನಡೆದ.

ಹಿತ್ತಲ ಬಾಗಿಲು ತೆಗೆದೊಡನೆ ಸ್ವಾಗಿತಿಸುವುದಕ್ಕೆ ಬಾಗಿಲಲ್ಲಿ ನಿಂತು ಈತ ಒಳಹೋಗುವುದಕ್ಕೆ ಅವಕಾಶ ಮಾಡಿಕೊಟ್ಟಳು. ಆಗಲೇ ಮನೆಯಲ್ಲಿದ್ದ ತಾಯಿ ಮತ್ತು ಸೇವಕಿ ಉಂಡು ಮಲಗಿದ್ದರು. ಈತ ಅವಳಿಗೆ ತನ್ನ ಹೊಟ್ಟೆ ತೋರಿಸಿ ತಿನ್ನಲು ಏನಾದರೂ ಕೊಡು ಎಂದು ಸನ್ನೆ ಮಾಡಿದ. ಅವಳ ಮೃದುವಾದ ಕೆನ್ನೆಗಳಿಗೆ ಬಣ್ಣವೇರಿದ್ದು ಅಂಥ ಮಂದ ಬೆಳಕಿನಲ್ಲೂ ಕಂಡಿತು. ಭಾವೋದ್ವೇಗಕ್ಕೆ ಒಳಗಾಗಿ ಉಕ್ಕಿಬಂದ ನಾಚಿಕೆಯ ಮಂದಹಾಸವನ್ನ ಕಷ್ಟದಿಂದ ನಿಯಂತ್ರಿಸುತ್ತ ಅವನ ಕೈ ಹಿಡಿದು ಒಳಕ್ಕೆ ಕರೆದೊಯ್ದಳು. ಬಚ್ಚಲಿಗೆ ಕರೆದೊಯ್ದು ಕೈಕಾಲಿಗೆ ಬಿಸಿನೀರು ಹಾಕಿ ತೊಳೆದಳು. ಕೈ ವಸ್ತ್ರದಿಂದ ಕೈಕಾಲು ಒರಸಿ ಅಡಿಗೆ ಮನೆಗೆ ಕರೆತಂದಳು.

ಸರಳವಾದ ಅಡಿಗೆ ಮನೆಯಲ್ಲಿ ಊಟಕ್ಕೆ ಕೂರುವುದಕ್ಕೂ ವ್ಯವಸ್ಥೆಯಿತ್ತು. ಗೋಡೆಗಳ ಮೇಲೆ ಕೆಂಪು ಮತ್ತು ಬಿಳಿ ಬಣ್ಣಗಳಲ್ಲಿ ಹಬ್ಬಿದ ಬಳ್ಳಿಯ ಚಿತ್ರ ಬಿಡಿಸಿದ್ದರು. ಒಲೆಯ ಸುತ್ತ ಮಾತ್ರವಲ್ಲದೆ ಊಟಕ್ಕೆ ಕೂರುವ ಸ್ಥಳದ ಸುತ್ತಲೂ ರಂಗೋಲಿ ಬಿಡಿಸಿದ್ದರು. ಮೂಡಣದ ಕಿಡಿಕಿಯಿಂದ ಮಲ್ಲಿಗೆಯ ಮಾದಕ ಪರಿಮಳ ಬರುತ್ತಿತ್ತು. ಭರ್ಜರಿಗೆ ಒಗ್ಗಿಕೊಂಡಿದ್ದ ರಾಜವೈದ್ಯನಿಗೆ ಈ ಅಡಿಗೆ ಮನೆಯ ಸರಳತೆ ಬಹಳ ಹಿಡಿಸಿತ್ತು. ವಾತಾವರಣ ನಿಶ್ಯಬ್ದವಾಗಿದ್ದು ಹೊರಗಿನ ಮರದೆಲೆಗಳ ಸರಸರ ಸದ್ದು ಕೂಡ ಕೇಳಿಸುತ್ತಿತ್ತು. ಸೌಜನ್ಯವತಿಯಾದ, ದುಂಡುದೋಳಿನ, ಉಬ್ಬಿದೆದೆಯ ಚೆಲುವೆ ಚೈತನ್ಯ ಉತ್ಸಾಹಗಳಿಂದ ನಳನಳಿಸುತ್ತಿದ್ದಳು. ಗುರುನಿತಂಬಗಳು ನರ್ತಿಸುವಂತೆ ನಡೆಯುತ್ತ ವಿದ್ಯುಲ್ಲತೆ ಬಂದು ಬಾಳೆಯೆಲೆ ಹಾಕಿ ನೀರಿನ ಗಿಂಡಿಯ ಬಳಿಯಿಟ್ಟು ಸಿಂಪಡಿಸಿಕೊ ಎಂದು ಸನ್ನೆ ಮಾಡಿದಳು. ಅವಳ್ಯಾಕೆ ಹಾಗೆ ಮಾಡಿದಳೆಂದು ವಿಷವೈದ್ಯನಿಗೆ ಗೊತ್ತಾಯಿತು. ಈಗ ಅವನಲ್ಲಿ ಆತ್ಮವಿಶ್ವಾಸವೂ ಬಲಿತಿತ್ತು. ನೀನೇ ಸಿಂಪಡಿಸು ಎಂದು ಸನ್ನೆ ಮಾಡಿದ. ವಿದ್ಯುಲ್ಲತೆಗೆ ತನ್ನ ವಿಷ ನೀಗಿತೇ ಎಂದು ಆನಂದದಿಂದ ರೋಮಾಂಚನವಾಯ್ತು! ಉತ್ಸಾಹದಿಂದ ನೀರು ಸಿಂಪಡಿಸಿದಳು. ಎಲೆ ಒರೆಸಿ ಹಸನು ಮಾಡಿ ತನ್ನ ವೈದ್ಯನ ಕಡೆಗೆ ಕೃಪಾಕಟಾಕ್ಷ ಬೀರುತ್ತ, ಸುಂದರವಾದ ವೃಕ್ಷದ ಮೇಲಿನ ದಾವಣಿಯನ್ನು ಒಮ್ಮೆ ಎಳೆದು ಸರಿಪಡಿಸಿಕೊಂಡು ಮುತ್ತಿನ ವರ್ಣದ ಅನ್ನ, ಪಚ್ಚೆ ವರ್ಣದ ತಂಬುಳು ಹಾಕಿದಳು.

ರಾಜವೈದ್ಯ ಉದ್ದೇಶಪೂರ್ವಕ ನೆಲುವಿನ ಕಡೆಗೆ ನೋಡಿದ. ಅಲ್ಲಿ ಅವಳ ತಾಯಿಗಾಗಿ ತಾನೇ ತಯಾರಿಸಿಕೊಟ್ಟ ಕಳ್ಳು ಇತ್ತು. ಆ ಕಡೆ ಕೈ ತೋರಿಸಿ ಬೇಕು ಎಂದು ಸನ್ನೆ ಮಾಡಿದ. ವಿದ್ಯುಲ್ಲತೆ ಕಿಲಕಿಲ ನಗುತ್ತ ಅದನ್ನು ತಂದು ಅವನ ಮುಂದಿಟ್ಟು ಒಂದು ಸಣ್ಣ ಚಟಿಗೆಯನ್ನು ಪಕ್ಕಕ್ಕಿಟ್ಟು ಹ್ಯಾಗೆ ಕುಡಿಯುವನೆಂದು ಕದ್ದು ಓರೆ ನೋಟ ಬೀರುತ್ತ ಪಲ್ಯ ಬಡಿಸಿದಳು. ನಿಂಬೆ ಮಾದಳದ ಉಪ್ಪಿನಕಾಯಿ ಬಡಿಸಿದಳು. ನಂಜಿಕೊಳ್ಳುತ್ತ ಕುಡಿದಾಗ ಬೆರಗಿನಿಂದ ನೋಡಿದಳು. ಆತ ಉಂಡು ಎಂಜಲು ತೊಳೆದುಕೊಳ್ಳುವವರೆಗೂ ಅವಳ ಮಂದಹಾಸ ಅವನಲ್ಲೇ ನೆಟ್ಟಿತ್ತು.

ಆಮೇಲೆ ತುಗೂಯ್ಯಾಲೆಯಲ್ಲಿ ಕುಂತು ಅಡಿಕೆ ವೀಳ್ಯ ಮೆಲ್ಲುವಾಗ ಅವಸರವಸರವಾಗಿ ಅವಳೂ ಊಟ ಮಾಡಿ ಬಂದು, ಅವನಷ್ಟೇ ತೃಪ್ತಿಯಿಂದ ಪಕ್ಕದಲ್ಲಿ ನಿಂತಳು. ರಾಜವೈದ್ಯ ಅವಳನ್ನು ನೋಡಿದ. ಅಹಂಕಾರವಿಲ್ಲದೆ ಅವಳ ಸರಳ ಸ್ನೇಹಶೀಲ ಮನೋಭಾವ ಅವನ ಒಡ್ಡತನವನ್ನು ಮರೆಮಾಡಿತ್ತು. ಹೆಣ್ಣನ್ನ ಅದರ ನಿಜವಾದ ಬಣ್ಣದಲ್ಲಿ ನೋಡಬಲ್ಲನೆಂಬ ಅಹಂಕಾರಿಯ ಮಾಂಸಖಂಡಗಳಲ್ಲಿ ಭಾವ್ರೋದ್ರೇಕ ಮೂಡಿ ಅವನ ಜಂಬಗಳನ್ನ ನಡುಗಿಸಿತ್ತು. ಲೋಕವನ್ನ ಅದು ಇರುವಂತೆಯೇ ಒಪ್ಪಿಕೊಂಡು, ಅದರ ವಿಪರೀತಗಳನ್ನು ಮೌನವಾಗಿ ಸಹಿಸುವ ಹೆಣ್ಣಾಗಲಿ, ಹೇಳಿದಂತೆ ಕೇಳಿಕೊಂಡು ಬಿದ್ದಿರುವ ದಡ್ಡ ಹೆಣ್ಣಾಗಲಿ ಇವನಿಗಾಗದು.

ಇವಳು ಬೆಳ್ಳಿಯಂತೆಯೇ ಚುರುಕು ಬುದ್ಧಿ ಮತ್ತು ಹರಿತ ಸೌಂದರ್ಯಗಳಿಂದ ಗಂಡಿನ ಶಕ್ತಿಗೆ ಸವಾಲೆಸೆಯಬಲ್ಲ ಹೆಣ್ಣೆಂದು ಗೊತ್ತಾಗಿತ್ತು. ಆ ದಿನ ನೋಡನೋಡುತ್ತಿರುವಂತೆ ಪುಣ್ಯಕೋಟಿ ಹಸುವಿನಂತಿದ್ದವಳು, ಹುಲಿಯಾಗಿ ಕೈಯುಗುರು ಕೋರೆಹಲ್ಲುಗಳ ಮಸೆದು ನಿಂತಾಗ ಹುಲಿಯಂತಿದ್ದ ರಾಣಿ ಜಿಂಕೆಯಾಗಿ ಥರಥರ ನಡುಗಿದ್ದಳು. ಇನ್ನೊಂದು ಹೆಣ್ಣಿನಲ್ಲಿ ಸಿಕ್ಕದ ಯಾವುದೋ ಆಕರ್ಷಕ ಗುಣ ಇವಳಲ್ಲಿದೆಯೆಂದು ಅಂದೇ ಖಾತ್ರಿಯಾಗಿತ್ತು.

ಒಂದು ಹುಡುಗಿಯ ಪ್ರೇಮಪಾಶದಲ್ಲಿ ಬೀಳುವುದು ಸುಮಧುರ ಅನುಭವವಾಗಿರುವಂತೆಯೇ ಅದು ಅಪಾಯಕಾರಿಯಾದ ಶಿಕ್ಷೆಯೂ ಹೌದೆಂಬುದನ್ನು ರಾಜವೈದ್ಯನಿಗೆ ಹೇಳಿಕೊಡಬೇಕೆ? ಆ ದಿನ ಛಾಯಾದೇವಿಯ ಮುಂಗೈ ಹಿಡಿದು ಪ್ರತಿಭಟಿಸಿದಾಗ ಇವನೆದೆಯಲ್ಲಿ ಮಲಗಿದ್ದ ಚಿರತೆ ಮೈಮುರಿಗೆದ್ದು ಇಡೀ ನರಮಂಡಲ ಹುರಿಗೊಂಡು ಬೇಟೆಯಾಡುವ ಹಂಬಲ ಹೊಮ್ಮಿತ್ತು. ಆ ಛಲದಿಂದಲೇ ತನಗೆ ಸವಾಲಾದ ಅವಳ ವಿಷದ ಎಂಜುಲು ಹೀರಿ ಆವೇಶಭರಿತನಾಗಿದ್ದ. ವಿಷದ ಪರಿಣಾಮದಿಂದ ಹೆದರಿದ್ದಕ್ಕೆ ಒಳಗೊಳಗೇ ಅವಮಾನಗೊಂಡಿದ್ದ. ಆದರೆ ವಿದ್ಯುಲ್ಲತೆ ಅಂಥ ಭಾವಾವೇಶದಿಂದ ಹೆದರಿದ್ದಕ್ಕೆ ಒಳಗೊಳಗೇ ಅವಮಾನಗೊಂಡಿದ್ದ. ಆದರೆ ವಿದ್ಯುಲ್ಲತೆ ಅಂಥ ಭಾವಾವೇಶದವಳಲ್ಲ. ಸಮಾನರನ್ನು ಗೌರವಿಸುವವಳು, ಪ್ರೀತಿಸುವವಳು. ಪ್ರೇಮ ಕಟಾಕ್ಷದಿಂದ ನೋಡಿ ಕೃಪೆ ಮಾಡುವವಳು. ಇವಳ ನೋಟ ಚಂದ, ನಗು ಚಂದ, ಮಂದಾನಿಲದಲ್ಲಿ ಅಲುಗಾಡುವ ಮುಂಗುರುಳು ಚಂದ, ಕೆನ್ನೆಯ ಮೇಲಿನ ಕುಳಿ ಚಂದ, ನಿಲುವು ಕೂಡ ಇವಳನ್ನು ಪ್ರೀತಿಸುವಂತೆ ಮಾಡಿದ್ದವು. ತನ್ನ ಹಾವ ಭಾವ ವಿಲಾಸ ಭಂಗಿಯಿಂದ ಒಂದು ಕ್ಷಣದಲ್ಲೇ ಶಿಖರಸೂರ್ಯನನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು. ದಾವಣಿ ಸರಿದಾಗ ಅದನ್ನವಳು ಸರಿಸಿ ಮೈ ಮುಚ್ಚಿಕೊಂಬ ರೀತಿಯೇ ಬೆರಗುಗೊಳಿಸಿತ್ತು. ಯೌವನದಿಂದ ಕೂಡಿದ ಸೊಬಗುಗಾತಿಯ ಸೌಂದರ್ಯಕ್ಕೆ ಇವನು ವಿವಶನಾಗಿ ಬಿಟ್ಟದ್ದು ಇವಳೊಂದು ಹೆಣ್ಣು ಚಿರತೆಯೆಂಬ ಕಾರಣಕ್ಕೆ! ಇವಳು ಜಿಂಕೆಗಳಿಗೆ ಚಿರತೆ, ಪ್ರೇಮಿಗೆ ಪ್ರೇಯಸಿಯಾಗಬಲ್ಲಳೆಂಬ ಕಾರಣಕ್ಕೆ!

ರಾಜವೈದ್ಯ ಊಟಮಾಡಿ ತನ್ನ ಮನೆಗೆ ಹೋಗುವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ಮಲಗುವ ವ್ಯವಸ್ಥೆ ಮಾಡಲು ವಿದ್ಯುಲ್ಲತೆ ಹೊರಟಳು. ಇವನೂ ಎದ್ದ. ವಿದ್ಯುಲ್ಲತೆ ಅವನ ಮುಖ ನೋಡಿದಳು. ಅವನಲ್ಲಿ ತಾಕಲಾಡುವ ಭಾವನೆಗಳ ಅರಿವಾಯ್ತು ಅವಳಿಗೆ. ಮೂಕಿಯಾದರೂ ಸ್ತ್ರೀಗುಣ ಜಾಗೃತಳಾದ ಅವಳು ಅವನನ್ನು ಸರಿಯಾಗಿ ಗ್ರಹಿಸಿದ್ದಳು. ಅವನ ದೇಹಾಕೃತಿ, ಪೊದೆ ಬೆಳೆದ ಕಿವಿ, ಭುಜದ ಮೇಲೊರಗಿ ಈಗಷ್ಟೆ ಬೆಳ್ಳಗಾಗುತ್ತಿರುವ ಕೂದಲು, ಅವನ ಪ್ರಾಣಿಬಲ – ಇವನ್ನೆಲ್ಲ ಆಕೆ ಗಮನಿಸಿದ್ದಳು. ಅವನ ಕಣ್ಣುಗಳನ್ನೇ ನೋಡುತ್ತಿದ್ದ ಅವಳಿಗೆ ಇದ್ದಕ್ಕಿದ್ದಂತೆ ಅಲ್ಲಿರುವ ಎಲ್ಲ ವಸ್ತುಗಳಲ್ಲಿ ಜೀವಸಂಚಾರವಾದಂತೆನಿಸಿತು. ಉರಿಯುತ್ತಿರುವ ದೀಪಕ್ಕೂ ಜೀವವಿದೆಯೆನ್ನಿಸಿತು. ಕೈಹಿಡಿದು ತಾನು ಮಲಗುತ್ತಿದ್ದ ಕೋಣೆಯತನಕ ಕರೆದೊಯ್ದಳು. ತನ್ನ ಗ್ರಹಿಕೆಯಲ್ಲಿ ಕೊಂಚ ಅನುಮಾನ ತೋರಿ ಹಾಸಿಗೆಯ ಕಡೆಗೆ ಕೈ ನೀಡಿ ಇಲ್ಲಿ ಮಲಗಿ ಎಂದು ಸೂಚಿಸಿದಳು. ಈತ ಅವಳನ್ನು ಪುಟ್ಟ ಗೊಂಬೆಯಂತೆ ಎತ್ತಿಕೊಂಡು ಮುದ್ದಿಸುತ್ತ ಹಾಸಿಗೆಗೊಯ್ದು ದೀಪ ಆರಿಸಿದ.

ರಾಜವೈದ್ಯನಿಗೆ ಎಚ್ಚರವಾಗಿ ಕಣ್ಣು ತೆರೆದಾಗ ಹೊರಗೆ ಆಗಲೇ ಮುಂಜಾನೆಯಾಗಿ ಹೊಂಬಿಸಿಲು ಬಿದ್ದಿತ್ತು. ಅದರೊಂದಿಗೆ ಚಳಿ ಕೂಡ ಇತ್ತು. ಆಗೀಗ ಹಕ್ಕಿಗಳ ಪ್ರಿಯವಾದ ಉಲಿ ಬಿಟ್ಟರೆ ಬೇರೊಂದು ಶಬ್ಧವಿರಲಿಲ್ಲ. ವಿದ್ಯಲ್ಲತೆ ದಿಂಬಿನ ಮೇಲೆ ರೇಶ್ಮೆ ಕೂದಲು ಹರವಿ ಕೂಸಿನ ಹಾಗೆ ತುಟಿಗಳನ್ನು ಅರೆದೆರೆದು ನಿರ್ಭಯ ಗೃಪ್ತಿಯಿಂದ ಮಲಗಿದ್ದಳು. ಕೂದಲು ನೇವರಿಸಿ ಮೆಲ್ಲಗೆ ಅವಳ ಹಣೆಗೂ, ನಂತರ ತುಟಿಗೂ ಮುದ್ದು ಒತ್ತಿದ. ಅವಳ ಬೆಚ್ಚಗಿನ ಉಸಿರು ಪರಿಮಳಭರಿತವಾಗಿತ್ತು.

ಅವಳಿಗೂ ಎಚ್ಚರವಾಗಿ ಕಣ್ದೆರೆದಾಗ ಶಿಖರಸೂರ್ಯ ತನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದುದರಿಂದ ನಾಚಿ ಅವನ ತೆಕ್ಕೆಗೆ ಸರಿದು ಕಣ್ಣು ಮುಚ್ಚಿಕೊಂಡಳು. ಪ್ರಸನ್ನವಾಗಿ ಸಂತೃಪ್ತಿಯಿಂದ ಇವ ತೇಲುಗಣ್ಣಾದ. ಇವನಿಗೆ ಪ್ರಥಮ ಬಾರಿ ಸ್ತ್ರೀಸುಖ ಸಿಕ್ಕಿತ್ತು. ಆ ಸುಖ ಕಳಂಕರಹಿತವಾಗಿತ್ತು. ಅನುಮಾನರಹಿತವಾಗಿತ್ತು. ಭಯರಹಿತವಾಗಿತ್ತು. ಸ್ವತಂತ್ರವಾಗಿತ್ತು.