ಸುಕ್ರ ಒಳಗೆ ಬಂದಾಗ ಶಿಖರಸೂರ್ಯ ಒಬ್ಬನೇ ಪೀಠದಲ್ಲಿ ಕುಳಿತು ಚಿಂತೆ ಮಾಡುತ್ತಿದ್ದ. ಅಸಮಾಧಾನದಿಂದ ಮುಖ ಕಿವುಚಿ, ಕೂದಲು ಕೆದರಿ ವಿಕಾರಗೊಂಡಿತ್ತು. ಸುಕ್ರ ಬಂದು ನಮಸ್ಕಾರವನ್ನಾಚರಿಸಿ ಕೂರುವುದೋ ನಿಲ್ಲುವುದೋ ತಿಳಿಯದೆ ಯೋಚಿಸುತ್ತಿದ್ದಾಗ ಅವನ ಮುಖ ನೋಡದೆ ಶಿಖರಸೂರ್ಯ “ಕೂರು ಸುಕ್ರ” ಅಂದ. ನೆಲದ ಮ್ಯಾಲೆ ಕುಂತ. “ಮ್ಯಾಲೆ ಕೂರು” ಅಂದ. ಸುಕ್ರ ಅನತಿ ದೂರದ ಪೀಠದಲ್ಲಿ ಕೂತ. ಇವನು ಮಾತಾಡಲೆಂದು ಅವನು, ಅವನು ಸುರುಮಾಡಲೆಂದು ಇವನು ಮಾತಿಲ್ಲದೆ ಸುಮಾರು ಹೊತ್ತು ಕೂತರು. ಹೇಳುವುದಕ್ಕೆ ಹೊಸದೇನೂ ಇಲ್ಲವೆಂದು ಶಿಖರಸೂರ್ಯನಿಗೆ ಗೊತ್ತಿತ್ತು. ಏನೋ ಆತಂಕವಿದೆಯೆಂದು ಸುಕ್ರನಿಗೆ ಗೊತ್ತಾಯಿತು. ಶಿಖರಸೂರ್ಯ ಹತಾಶನಾಗಿ ಬಾಯಿಬಿಟ್ಟ.

“ಸುಕ್ರಾ ನಾನು ಸೋತೆ.”

ಏನಂದೆ? ಎಂಬಂತೆ “ಒಡೆಯಾ…?” ಅಂದ ಸುಕ್ರ.

“ಸುಕ್ರಾ, ಯುವರಾಜನೆಲ್ಲಿ?”

“ಇದೇ ಅರಮನೆಯಲ್ಲಿ! ಯಾಕೆ ಅರಮನೆಯಲ್ಲಿ ಇಲ್ಲವೆ ಒಡೆಯಾ?”

ಎನ್ನುತ್ತ ಆಘಾತ ಅನುಭವಿಸಿ ಎದ್ದುನಿಂತ. ಶಿಖರಸೂರ್ಯ ಮಾತಾಡದೆ ಇಲ್ಲವೆಂದು ಕತ್ತಲುಗಿಸಿ ದಯನೀಯವಾಗಿ ಸುಕ್ರನ ಕಡೆ ನೋಡಿದ. ಸುಕ್ರ ಹೊಯ್ಕಿನಿಂದ ಬಾಯಮೇಲೆ ಕೈ ಇಟ್ಟುಕೊಂಡು ಶಿಖರಸೂರ್ಯನ ಮುಂದೆ ನೆಲದ ಮೇಲೆ ಕೂತ.

“ನಮ್ಮ ಮುಂದೆ ಎರಡು ಪ್ರಶ್ನೆ ಇವೆ. ಯುವರಾಜ ಸತ್ತಿದ್ದಾನೆಯೇ? ಇಲ್ಲಾ ಜೀವಂತ ಇದ್ದಾನೆಯೇ? ಸತ್ತಿದ್ದರೆ ಯಾರು ಕೊಂದರು? ಯಾವಾಗ? ಯಾಕೆ? ಬದುಕಿದ್ದರೆ ಎಲ್ಲಿದ್ದಾನೆ?”

“ಅರಮನೆಯಲ್ಲಿ ಇಲ್ಲ ಅಂತಿಯಾ?”

“ಖಂಡಿತಾ ಇಲ್ಲಿಲ್ಲ ಮಾರಾಯ. ಯುವರಾಜ ಬಿಳಿಗಿರಿಯಲ್ಲಿ ಇಲ್ಲ ಅಂತಾಯ್ತಲ್ಲ, ಕಳೆದುಕೊಂಡ ಚಿನ್ನದ ಆಸೆಯಿಂದ ಈ ಆಟ ಹೂಡಿದ್ದಾರೆ, ಮೂರ್ಖರು. ಹಾಗಂತ ಬಿಳಿಗಿರಿಯನ್ನು ದಂಡಿಸಲಿಕ್ಕಾದೀತ?”

ಬಿಳಿಗಿರಿ ಸುಕ್ರನ ಮಾತೃಭೂಮಿ ಎಂದು ಶಿಖರಸೂರ್ಯ ಬಲ್ಲ. ಅಲ್ಲದೇ ಆ ವಿಚಾರವೂ ಅವನಲ್ಲಿರಲಿಲ್ಲ. ಮಾತಿಗೆ ಮಾತು ಬಂದು ಹೇಳಿದ್ದ ಅಷ್ಟೆ. ಕನಕಪುರಿ ದಂಡಿಸಬೇಕೆಂದರೂ ಸುಕ್ರ ಹೇಳಿದಂತೆ ಬಿಳಿಗಿರಿ ಈಗ ಬಲಾಢ್ಯ ರಾಜ್ಯವಾಗಿತ್ತು.

“ಹಾಗಿದ್ದರೆ ನೀನೇ ಹೇಳಯ್ಯಾ, ನಾನೇನು ಮಾಡಲಿ? ಬರಿಗೈಯಲ್ಲಿ ನಿರ್ಲಜ್ಜನಾಗಿ ಕನಕಪುರಿಗೆ ಹೋಗಲ? ಇಲ್ಲಾ ಸಾಯಲ?”

ಸಮಸ್ಯೆಯ ಗಾಂಭೀರ್ಯದ ಅರಿವಾಗಿ ಸುಕ್ರ ತಲೆಯ ಮೇಲೆ ಕೈ ಇಟ್ಟುಕೊಂಡು ‘ಎಲಾ ಬೆಟ್ಟದಯ್ಯನೇ!’ ಎಂದು ಹಾಗೇ ಕುಸಿದು ಕೂತ. ಆಮೇಲೆ ತಂತಾನೇ ಹಸ್ತಾಭಿನಯ ಮಾಡುತ್ತ ಪ್ರಶ್ನೋತ್ತರಿಸಿಕೊಳ್ಳತೊಡಗಿದ. ಸ್ವಗತದಲ್ಲೇ ಒಂದು ತೀರ್ಮಾನಕ್ಕೆ ಬಂದು

“ಯುವರಾಜ ಈ ಲೋಕದಲ್ಲೇ ಇಲ್ಲ ಅಂದಮ್ಯಾಕೆ ನಾವೆಲ್ಲಿಂದ ತರಬೇಕು ಒಡೆಯಾ?” ಅಂದ.

“ಹಾಗಿದ್ದರೆ ಹ್ಯಾಗೆ ಇಲ್ಲದಾದ? ಯಾಕೆ? ಸತ್ತನ? ಮಾಯವಾದನ?”

“ಅದನ್ನೆಲ್ಲಾ ಶೋಧನೆ ಮಾಡೋಣೇಳು. ನಮಗವನು ಸಿಗಾಕಿಲ್ಲ ಅನ್ನು. ಹಾಗಂತ ನೇಣು ಹಾಕ್ಕೋ ಅಂತೀಯಾ?”

“ಅದಲ್ಲಪ್ಪ ನಾನು ಹೇಳೋದು. ನೀನೇ ಹೇಳಯ್ಯಾ, ಕೊಟ್ಟ ಮಾತು ಹೆಚ್ಚೊ? ಮಾತು ಮುರಿದು ಬದುಕೋದು ಹೆಚ್ಚೊ?”

“ಕೊಟ್ಟ ಮಾತು ಹೆಚ್ಚು.”

“ಅಷ್ಟೆ ಕಣಯ್ಯಾ, ಇಲ್ಲಿಗೆ ಬರೋದಕ್ಕೆ ಮುಂಚೆ ಯುವರಾಜನನ್ನು ಕೂದಲು ಕೊಂಕದ ಹಾಗೆ ತಂದುಕೊಡ್ತೇನೆ ಅಂತ ಮಹಾರಾಣಿಗೆ ಮಾತು ಕೊಟ್ಟೆ. ಈಗ ಬರಿಗೈಲಿ ಹೋಗೋದು ಯೋಗ್ಯವ?”

“ನೀ ಯೇಳಾದು ನಿಜ. ಕೊಟ್ಟಮಾತು ಬಿಟ್ಟ ಮ್ಯಾಕೆ ಏನುಳೀತು?”

ಎಂದು ನಿರಾಸೆಯಿಂದ ತಲೆಮೇಲೆ ಕೈಹೊತ್ತು ಕೂತ ಸುಕ್ರ. ಹುಲಿಯಂಥವ ಕೊಟ್ಟ ಮಾತಿನ ವಿಚಾರ ಬಂದ ತಕ್ಷಣವೆ ಮೆತ್ತಗಾಗಿ ಅಳುಮುಖ ಮಾಡಿದ್ದನ್ನು ನೋಡಿ ಅವನ ಬಗ್ಗೆ ಅಪಾರ ಮೆಚ್ಚುಗೆ ಉಂಟಾಯ್ತು ಶಿಖರಸೂರ್ಯನಿಗೆ. ಜೊತೆಗೇ ಈತನನ್ನು ಉಪಯೋಗಿಸಿಕೊಂಬ ಸುಲಭೋಪಾಯವೂ ಸಿಕ್ಕಿತು. ಭಾವುಕತೆಗೆ ಒಳಗಾದಂತೆ ಹತ್ತಿರ ಹೋಗಿ, ಅವನ ಭುಜದ ಮ್ಯಾಲೆ ಸ್ನೇಹದಿಂದ ಬಲಗೈ ಊರಿ ಮಾತಿಗೆ ತಡಕಾಡಿದಂತೆ ಅಭಿನಯಿಸಿ,

“ಸುಕ್ರಾ” ಅಂದ.

“ಒಡೆಯಾ” ಎಂದು ಎದ್ದು ನಿಂತ ಸುಕ್ರ.

“ಮುಳುಗೋನಿಗೆ ಹುಲ್ಲುಕಡ್ಡಿ ಆಧಾರ ಅಂದಂತೆ ಈಗ ಒಂದು ದಾರಿ ಉಳಿದಿದೆ ಸುಕ್ರ.”

“ಅದೇನು ನನ್ನಪ್ಪ”

“ಇದು ಗೊತ್ತು ಮುಟ್ಟಿದರೆ ನಾನು ಉಳಿಯುತ್ತೇನೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ.”

“ಅದೇನು ಹೇಳು ಶಿವ, ಬೆಟ್ಟದಯ್ಯ ಇದ್ದಾನೆ.”

-ಎಂದು ಇನ್ನೇನು ಅಳುವ ಸ್ಥಿತಿಯಲ್ಲಿ ನಿಂತ ಸುಕ್ರ. ಶಬ್ದಗಳಿಗೆ ಮುದ್ದಿನ ಶಕ್ತಿ ತುಂಬಿ ನೇರವಾಗಿ ಸುಕ್ರನ ಕಣ್ಣುಗಳನ್ನೇ ನೋಡುತ್ತ ಹೇಳಿದ:

“ಸುಕ್ರ, ಯುವರಾಜನನ್ನ ಬದೆಗ ಬಚ್ಚಿಟ್ಟಿರಬಹುದ?”

“ಅವನ್ಯಾಕೆ ಬಚ್ಚಿಡ್ತಾನೆ?”

“ಹಳೇ ಸೇಡಿನಿಂದ”

“ಅವ ಅದನೆಲ್ಲಾ ಮರ್ತಿದಾನಒಡೆಯಾ… ನಾ ನಂಬಲಾರೆ….”

ಎನ್ನುತ್ತ ಹಿಂದೆ ಸರಿದ. ಬರಬರುತ್ತ ಕಣ್ಣಂಚಿನಲ್ಲಿ ಸಣ್ಣ ಅನುಮಾನ ಮೂಡಿದ್ದರಿಂದ “ನಿನ್ನ ಸಮಾಧಾನಕ್ಕಾಗಿ ಬೇಕಾದರೆ ಕೇಳಲ?” ಎಂದ. ಯುವರಾಜ ಸಿಕ್ಕಿದ್ದರೆ ಶಿಖರಸೂರ್ಯ ನಿಜವಾಗಿ ಸಾಯುವನೆಂದು ಅವ ಬದುಕಿದರೆ ಸಾಕೆಂದು ಸಮೀಪ ಬಂದು ‘ಇದೂ ಒಂದು ಒರೆಗೆ ಹಚ್ಚುವಾ’ ಎಂದು,-

“ಬೆಟ್ಟದಯ್ಯನ ದಯದಿಂದ ಯುವರಾಜ ಬದೆಗನಿಂದ ಬದುಕಿರಲೂಬಹುದು. ನಾ ಈಗಲೇ ಹೋಗಿ ಇಚಾರಿಸಿಕೊಂಬರ್ಲಾ? ಅಂದ.

“ಸೂಕ್ಷ್ಮ ಇದೆ ಇರು. ಬದೆಗ ಅವನನ್ನು ಕೊಂದಿರಬಹುದು. ಇಲ್ಲಾ ಬಚ್ಚಿಟ್ಟಿರಬಹುದು. ಇಲ್ಲಾ ಎರಡೂ ಸುಳ್ಳಿರಬಹುದು. ಬದೆಗ ನಮ್ಮವನು. ಅವನಿಗೆ ಅಪಾಯ ಒದಗಬಾರದು. ವಿಷಯ ನಮ್ಮ ಮೂವರಲ್ಲೇ ಇರಬೇಕು. ನೀನು ಹೀಗೆ ಕೇಳಿದೆ ಅಂತ ಗೊತ್ತಾದರೂ ಪ್ರಧಾನಿ ಬದೆಗನನ್ನು ಬಿಡಲಾರ. ಅದಕ್ಕೇ ಇನ್ನೊಬ್ಬರಿಗೆ ಇದರ ವಾಸನೆ ಬರಕೂಡದು.”

ಶಿಖರಸೂರ್ಯನ ಅಂತಃಕರಣಕ್ಕೆ ಸುಕ್ರ ಬೆಂಕಿಯ ಮುಂದಿನ ಬೆಣ್ಣೆಯಂತೆ ಕರಗಿದ. ಬದೆಗನ ಜೀವದ ಬಗ್ಗೆ ತಕ್ಷಣ ಚುರುಕಾಗಿ “ಅಂಗೇ ಆಗಲೇಳು” ಎಂದು ಹೇಳಿ,

“ಇಲ್ಲೀದನ್ನೆಲ್ಲ ನೀನು ನೋಡಿಕೊ. ಕನಕಪುರಿ ಬಿಟ್ಟರೂ ಬಿಳಿಗಿರಿ ಎಂದಿಗೂ ನಿನ್ನ ಕೈ ಬಿಡುವುದಿಲ್ಲ. ಇದನ್ನ ಚೆನ್ನಾಗಿ ನೋಡಿಕೊ. ನಾ ಬರೋಗಂಟಾ ಜೀವಕ್ಕೇನೂ ಮಾಡ್ಕೊಳ್ಳಾಕಿಲ್ಲ ಅಂತ ಬೆಟ್ಟದಯ್ಯನ ಮ್ಯಾಲೆ ಆಣೆ ಇಡು”

ಎಂದು ಅವನ ಬಲಗೈ ತಗೊಂಡು ತನ್ನೆರಡೂ ಹಸ್ತಗಳಲ್ಲಿ ಹಿಡಿದುಕೊಂಡ. ಶಿಖರಸೂರ್ಯ ಸುಕ್ರನ ಹಸ್ತಕ್ಕೆ ತನ್ನ ಇನ್ನೊಂದು ಹಸ್ತ ಸೇರಿಸಿ ಸುಕ್ರನನ್ನ ಬಾಚಿ ತಬ್ಬಿಕೊಂಡು “ಬೆಟ್ಟದಯ್ಯನ ಆಣೆ, ನೀ ಬರೋತನಕ ಏನೂ ಮಾಡಿಕೊಳ್ಳೋದಿಲ್ಲ” ಅಂತ ಹೇಳಿ ಆತ್ಮೀಯವಾದ ಕಣ್ಣೀರೆಂಬಂತೆ ಹರ್ಷದ ಕಣ್ಣ ಹನಿ ಉಕ್ಕಿಸಿ ಹಿಂದೆ ಸರಿದು ಸುಕ್ರನಿಗೆ ಕಾಣುವಂತೆ ಕಣ್ಣೊರೆಸಿಕೊಂಡು ಕಳಿಸಿದ. ಸುಕ್ರ ಮುದುಕಿಯರಂತೆ ಬಿಕ್ಕುತ್ತ ಹೋದ.

ಈಗ ಇಡೀ ಬಿಳಿಗಿರಿಯ ಅರಮನೆ ಮತ್ತು ಊರು ಶಿಖರಸೂರ್ಯನ ವಶವಾದವು. ಅದೇನು ಕನಕಪುರಿಯಂಥ ದೊಡ್ಡ ಮತ್ತು ಭವ್ಯವಾದ ಅರಮನೆ ಅಲ್ಲ. ಊರಿಂದ ಪ್ರತ್ಯೇಕವಾಗಿ, ಎತ್ತರದಲ್ಲಿದ್ದ ದೊಡ್ಡ ಮನೆ, ಅಷ್ಟೆ. ಮರದ ದೊಡ್ಡ ದೊಡ್ಡ ತಲೆಗಳಿಂದ ಕಟ್ಟಿದ್ದು ಅಪರೂಪದ ಕೆತ್ತನೆ ಕೆಲಸಗಳಿಂದ ಅಲಂಕೃತಗೊಂಡು ಸುಂದರವಾಗಿತ್ತು. ಅಲ್ಲಿಂದ ಅನತಿ ದೂರದಲ್ಲಿ ಊರಿತ್ತು. ಚಿಕ್ಕದೊಂದು ಪೇಟೆಯೂ ಇದ್ದ ಊರು. ರಸ್ತೆಗಂಟಿದ ಪ್ರತಿಯೊಂದು ಮನೆಯೂ ಒಂದಿಲ್ಲೊಂದು ಮಸಾಲೆ ಮಾರುವ ಅಂಗಡಿಯಾದ್ದರಿಂದ ವರ್ತಕರಲ್ಲದವರು ಎಲ್ಲಿರುತ್ತಾರೆ ಎಂಬ ಅನುಮಾನ ಬರುವಂತಿತ್ತು. ಅದಕ್ಕೇ ಏಲಕ್ಕಿ ಐದು ಸಾವಿರ, ಮೆಣಸು ಹತ್ತುಸಾವಿರದ ಸೀಮೆಅರಸ-ಎಂದೇ ಬಿಳಿಗಿರಿ ಅರಸನ ಬಿರುದು.

ಊರಿನವರು ಸದಾ ಮುಗುಳುನಗುವ ಸುಂದರ ಜನ. ಹಸಿರಿನಂಥ ಮುಗ್ಧರು. ಶಿಖರಸೂರ್ಯನಂತೂ ಅಲ್ಲಿಯ ಎಲ್ಲರ ಮೇಲೆ ಪ್ರಭಾವ ಬೀರಿಬಿಟ್ಟ. ಅವನ ವೈದ್ಯ ವಿದ್ಯೆಯ ಬಗ್ಗೆ, ವಜ್ರದೇಹದ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಅವನ ಎತ್ತರವಾದ, ಆಕರ್ಷಕವೂ, ಕಿವಿಗೂದಲಿನಿಂದ ಭಯಾನಕವೂ ಆದ ವ್ಯಕ್ತಿತ್ವದಿಂದ ಎಲ್ಲರೂ ಅವನ ಸ್ನೇಹ ಸಂಪಾದನೆಗಾಗಿ ಹಾರೈಸುವಂತೆ ಮಾಡಿದ. ವೈರಿ ಕಡೆಯ ಭಂಟನೆಂದು ಯಾರೂ ತಿಳಿಯಲೊಲ್ಲರು. ಅವನು ಕೇಳುವ, ಬಯಸುವ ಯಾವುದೇ ಸೇವೆಯನ್ನು ಮಾಡುವುದಕ್ಕೆ ವಯಸ್ಸಾದ ರಾಜರಾಣಿಯರಿಬ್ಬರು ಹೊರತು ಉಳಿದೆಲ್ಲರೂ ತುದಿಗಾಲ ಮೇಲೆ ಸಿದ್ಧವಾಗಿದ್ದರು.

ಅರಮನೆಯಲ್ಲಂತೂ ಚಿಕ್ಕಮ್ಮಣ್ಣಿಯ ಅಳಿಯನೆಂದು ಎಲ್ಲರೂ ಆತ್ಮೀಯ ಗೌರವ ಕೊಡುತ್ತಿದ್ದರು. ಇವನೊಂದಿಗೆ ಮಾತಾಡಲು ಹವಣಿಸುತ್ತಿದ್ದರು. ವಿಚಿತ್ರ ಹಸ್ತಾಭಿನಯಗಳಿಂದ ಬಗೆಬಗೆಯ ನಮಸ್ಕಾರಗಳನ್ನಾಚರಿಸುತ್ತಿದ್ದರು. ಅವರ ಭಾಷೆ ಬೇಗ ಅರ್ಥವಾಗುತ್ತಿರಲಿಲ್ಲವಾದರೂ ಮಾತಿಗೊಮ್ಮೆ ಕವಿರಾಜನೆಂದೋ, ಚಿಕ್ಕಮ್ಮಣ್ಣಿಯ ಅಳಿಯನೆಂದೋ ಒಮ್ಮೊಮ್ಮೆ ಪಿಸುದನಿಯಲ್ಲಿ ಶಿಖರಸೂರ್ಯನೆಂದೋ ಹೇಳುತ್ತಿದ್ದರು.

ಬೆಳಿಗ್ಗೆ ನ್ಯಾರೆ ಮಾಡಿ ಕೈತೊಳೆದೇಳುವಷ್ಟರಲ್ಲಿ ಮಹಾರಾಣಿ ಸೇವಕಿಯ ಕೈಹಿಡಿದುಕೊಂಡು ಬಂದು

“ಅಳಿಯನೇ, ನಿನ್ನನ್ನು ಕಣ್ಣಾರೆ ಕಾಣುವ ಭಾಗ್ಯ ನನಗಿಲ್ಲವಪ್ಪ. ದೇವರು ಕಣ್ಣು ಕಸಿದುಕೊಂಡು ಬಿಟ್ಟ. ಹತ್ತಿರ ಬಾ. ಆಶೀರ್ವಾದ ಮಾಡುತ್ತೇನೆ.”

ಎಂದು ಹತ್ತಿರ ಕರೆದು ಬೆನ್ನು ಭುಜ ಸವರಿ ತಲೆ ಮೇಲೆ ಕೈಯಿಟ್ಟು “ನೂರು ವರ್ಷ ಬದುಕು ನನ್ನಪ್ಪಾ. ನನ್ನಕ್ಕ ಚೆನ್ನಾಗಿದ್ದಾಳಪ್ಪ?” ಅಂದಳು. “ಚೆನ್ನಾಗಿದ್ದಾಳೆ ತಾಯೀ” ಅಂದು ಅವಳ ಕಣ್ಣ ನೋಡಿ, “ಇರಿ ಹಾಗೇ” ಎಂದು ಸ್ವಲ್ಪ ಹೊತ್ತು ಅವಳ ಕಣ್ಣಗಲಿಸಿ ನೋಡಿ-ನಾಡಿ ಹಿಡಿದು ತಾಳೇ ಮಾಡಿ – ಸೇವಕನೊಬ್ಬನನ್ನು ಕರೆದುಕೊಂಡು ಅರಮನೆಯ ಹೊರಗೆ ಹೋದ. ಹೇಳದೆ ಕೇಳದೆ ಹೀಗೆ ಹೊರಗೆ ಹೋದದಕ್ಕೆ ಎಲ್ಲರಿಗೂ ಆಶ್ಚರ್ಯವಾಯಿತು.

ಊರ ಹೊರಭಾಗದ ಕಾಡಿನಲ್ಲಿ ಮಧ್ಯಾಹ್ನದವರೆಗೆ ಅಲೆದು ಸೊಪ್ಪು ತಂದ. ಬಂದು ಅಂಗೈಯಲ್ಲಿ ತಿಕ್ಕಿ ರಸರಸ ಮಾಡಿ ಮಹಾರಾಣಿಯ ಕಣ್ಣಲ್ಲಿ ಹಿಂಡಿದ. ಅರಮನೆಯ ಎಲ್ಲರೂ ಕಿಂಚಿತ್ ಸದ್ದು ಮಾಡದೆ ಅವನ ವೈದ್ಯಗಾರಿಕೆಯನ್ನು ಗಮನಿಸಿದರು. ಕೆಲವರು ಅವನ ವೈದ್ಯಕೀಯ ಪವಾಡಗಳ ಬಗ್ಗೆ ಪಿಸುದನಿಯಲ್ಲಿ ಮಾತಾಡಿಕೊಂಡು ಆನಂದಪಟ್ಟರು. ಅವಕಾಶ ಸಿಕ್ಕರೆ ಅರಸು ಮೊದಲುಗೊಂಡು ಆಳು ಕಡೆಯಾಗಿ ಎಲ್ಲರೂ ಅವನೊಂದಿಗೆ ಮಾತಾಡಲು ಸಿದ್ಧರಿದ್ದರು. ಆದರೆ ಅವನ ಚಿಂತಗಳೇ ಬೇರೆ. ಅವು ಅವರಿಗೆ ಅರ್ಥವಾಗುವಂತಿರಲಿಲ್ಲ.

ಸುಕ್ರ ಬಂದಿರಲಿಲ್ಲ. ಆತನಿಂದ ಸುದ್ದಿಯೂ ಬಂದಿರಲಿಲ್ಲ. ನಿರಾಸೆಯ ಸುದ್ದಿ ತಂದರೆ ಹ್ಯಾಗೆ ಎದುರಿಸುವುದೆಂದು ಯೋಚಿಸುತ್ತ ಕೂತಿದ್ದ. ಆದರೆ ತನ್ನ ಆತಂಕವನ್ನು ಯಾರಿಗೂ ತೋರಿಸಿಕೊಳ್ಳದೆ ಅನುಗ್ರಹಿಸುವಂತೆ ಎಲ್ಲರ ಕಡೆಗೆ ನೋಡುತ್ತ, ಅದೇನು ಇದೇನೆಂದು ಕೇಳಿ ಕೇಳಿ ಅರಮನೆಯ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುತ್ತಿದ್ದ. ಅರಸು, ಪ್ರಧಾನಿಯೊಂದಿಗೆ ಹರಟೆ ಹೊಡೆದ. ಅವರು ಬೇಟೆಯಾಡುವ ಕ್ರಮ, ಅಲ್ಲಿ ಸಿಕ್ಕುವ ಪ್ರಾಣಿಗಳ ಬಗ್ಗೆ ತಿಳಿಯುತ್ತ ಸುತ್ತಲಿನ ಭೂಗೋಳವನ್ನು ಅಧ್ಯಯನ ಮಾಡಿದ. ಇಂಥ ಭಾವುಕ ಮತ್ತು ಹೆಂಗರುಳಿನ ಜನ ಇಷ್ಟೊಂದು ಶ್ರೀಮಂತ ರಾಜ್ಯವನ್ನು ಹ್ಯಾಗೆ ನಿಭಾಯಿಸುವರೆಂದು ಚಕಿತನಾದ. ಅರಸನಲ್ಲಿಗೆ ಹೋಗಿ ದೇಹವನ್ನು ಪರೀಕ್ಷಿಸಿ ಅವನ ಆರೋಗ್ಯ ಸುಧಾರಣೆಯ ಮದ್ದು ಕೊಡುವುದಾಗಿ ಹೇಳಿದ. ಅವನೆಲ್ಲಿ ಹೋದರೂ ಹೆಂಗಸರು ಕದ್ದು ಅವನನ್ನೇ ನೋಡುತ್ತಿದ್ದರು. ಆಕಸ್ಮಾತ್ ಆತನ ದೃಷ್ಟಿ ಅವರ ಮ್ಯಾಲೆ ಬಿದ್ದರೆ ಮುಗುಳುನಗುತ್ತ ಅವನ ದೃಷ್ಟಿಗಳನ್ನು ಸ್ವಾಗತಿಸುತ್ತಿದ್ದರು.

ಸಾಯಂಕಾಲವಾಗುವಾಗ ಪ್ರಧಾನಿ ಭೇಟಿಯಾದಾಗ ಆತ ಕೇಳದಿದ್ದರೂ

“ಕನಕಪುರಿಯಿಂದ ಸಂದೇಶ ಕಳಿಸಿದ್ದಾರಂತೆ ಅದಕ್ಕಾಗಿ ಕಾಯುತ್ತಿದ್ದೇನೆ” ಎಂದು ಹೇಳಿ ಅವನ ಕುತೂಹಲ ಕೆರಳಿಸಲು ನೋಡಿದ. ಅವನು ಸ್ಪಂದಿಸಲೇ ಇಲ್ಲ. ಅಂತೂ ರಾತ್ರಿಯಾಗಿ ಮಹಾರಾಣಿಯ ಕಣ್ಣಿಗೆ ಇನ್ನೊಮ್ಮೆ ಮದ್ದು ಹಿಂಡಿ ಉಂಡು ಮಲಗುವ ಹೊತ್ತಿಗೆ “ಒಡೆಯಾ” ಎಂದು ಸುಕ್ರನ ದನಿ ಕೇಳಿಸಿ ಗಡಬಡಿಸಿ ಎದ್ದು ಬಂದು ಕೋಣೆಯ ಬಾಗಿಲು ತೆಗೆದ. ಸುಕ್ರ ಕಂಡೊಡನೆ ಸರ್ರನೆ ಅವನ ಕೈಹಿಡಿದೆಳೆದುಕೊಂಡು ಒಳಬಂದು “ಹೋದ ಕೆಲಸವೇನಾಯ್ತು?” ಅಂದ.

“ನಿನಗೊಂದು ಬೆಲ್ಲದ ಸುದ್ದಿ ತಂದಿವ್ನಿ.”

ಎಂದು ಹೇಳಿ ಶಿಖರಸೂರ್ಯನ ಕಿವಿಯಲ್ಲಿ

“ಯುವರಾಜ ಈಗ ನಮ್ಮ ವಶದಲ್ಲವ್ನೆ”

ಎಂದು ಪಿಸುದನಿಯಲ್ಲಿ ನುಡಿದ. ಶಿಖರಸೂರ್ಯ ಜೋರಿನಿಂದ ಸುಕ್ರನ ಎಳೆದು ತಬ್ಬಿ, ತಕ್ಷಣ ಭಾವುಕತೆ ಎನ್ನಿಸಿ, ಬಿಟ್ಟು ಅವನ ಬಲ ಹಸ್ತವನ್ನು ತನ್ನೆರಡೂ ಹಸ್ತಗಳಿಂದ ಬಿಗಿ ಹಿಡಿದು, ತುಸುಹೊತ್ತು ಹಾಗೇ ಇದ್ದು “ಊಟಕ್ಕೇನು ಮಾಡಿದೆ?” ಅಂದ. ತಕ್ಷಣ ಸುಕ್ರ “ಬದೆಗ ಬಂದವ್ನೆ. ಹೋಗಿ ಕರೆದು ತಾ ಒಡೆಯಾ” ಎಂದು ಹೇಳಿದ. “ಕಾಣಲಿಲ್ಲವಲ್ಲ ಮಾರಾಯಾ” ಎನ್ನುತ್ತ ಹೊರಬಂದು ಮೂಲೆಯಲ್ಲಿ ನಿಂತಿದ್ದ ಬದೆಗನನ್ನು ಬರಸೆಳೆದು ತಬ್ಬಿಕೊಂಡು, ಬೆನ್ನು ಚಪ್ಪರಿಸಿ, ಕೈಹಿಡಿದು ಒಳಕ್ಕೆ ಕರೆತಂದ. ನೋಡಿದರೆ ಮೂವರ ಕಣ್ಣುಗಳೂ ಭಾವೋದ್ವೇಗದಿಂದ ಒದ್ದೆಯಾಗಿದ್ದವು. ಪರಸ್ಪರ ಮಾತಿಲ್ಲದೆ ಮೂವರೂ ತುಸುಹೊತ್ತು ನಿಂತಿದ್ದು, ಆಮೇಲೆ ಶಿಖರಸೂರ್ಯ ತನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು “ಮೊದಲು ಊಟ” ಎಂದು ಹೇಳಿ ಊಟದ ವ್ಯವಸ್ಥೆಗಾಗಿ ಹೊರಗಡೆ ಹೋದ.

ಆಮೇಲೆ ರಾತ್ರಿ ಬಹಳ ಹೊತ್ತಿನ ತನಕ ಮೂವರೇ ಕಿರುದನಿಯಲ್ಲಿ ಮಾತಾಡುತ್ತಾ ಕೂತರು. ಸುಕ್ರ ಮತ್ತು ಬದೆಗರ ಮೈಮುಖಗಳು ಧೂಳು ಬೆವರಿನಿಂದ ಹೊಲಸಾಗಿದ್ದವು. ಅಷ್ಟು ದೂರದಿಂದಲೂ ಅವರ ಮೈಯಿಂದ ಗಬ್ಬು ವಾಸನೆ ಬರುತ್ತಿತ್ತು. ಸುಕ್ರನಿಂದ ವಿವರಗಳು ತಿಳಿದುಬಂದವು:

ಶಿಖರಸೂರ್ಯ ಅಂದುಕೊಂಡಂತೆಯೇ ಬದೆಗ ಚಿನ್ನದ ಕಳವಿನ ರಾತ್ರಿ ಕಗ್ಗತ್ತಲೆಯ ಸಮಯ ಸಾಧಿಸಿ ವೈರಿ ಭಂಟರ ಕಡೆಯಿಂದ ನುಗ್ಗಿ ಯುವರಾಜನನ್ನು ಹಿಂದಿನಿಂದ ಇರಿದ. ಯುವರಾಜ “ಅಯ್ಯೋ” ಎಂದು ಕಿರಿಚಿ ಬಿದ್ದ. ಅವನು ಸತ್ತನೆಂದೇ ಬದೆಗ ತಿಳಿದಿದ್ದ. ಆದರೆ ತುಸು ಹೊತ್ತಾದ ಮೇಲೆ ಅದು ಮೂರ್ಛೆಯೆಂದು ಗೊತ್ತಾಗಿ ಮೂರ್ಛೆ ತಿಳಿದೇಳುವ ಲಕ್ಷಣ ಕಂಡು ಶಿಕ್ಷೆಯ ಬಗ್ಗೆ ಮನಸ್ಸು ಬದಲಿಸಿದ. ಯುವರಾಜನ ಬಾಯಿ ಕಟ್ಟಿ ಗೋಣಿ ಚೀಲದಲ್ಲಿ ತುಂಬಿ ಹೊತ್ತುಕೊಂಡೊಯ್ದ. ತನ್ನ ಬೀಗರ ಹಟ್ಟಿಯಾದ ಬೆಟ್ಟದಯ್ಯನ ಗುಡಿಯಲ್ಲಿಟ್ಟು ಇಬ್ಬರು ದಡಿಯರನ್ನ ಕಾವಲಿಗಿಟ್ಟು ಬಂದ.

ಇಷ್ಟು ದಿನವೂ ಅವರು ಅವನ ಜೊತೆ ಮಾತಾಡಿರಲಿಲ್ಲ. ಅಗತ್ಯವಿದ್ದಾಗ ಮಾತ್ರ ಬಾಯಿ ಬಿಚ್ಚಿ, ಉಳಿದಂತೆ ಕೈಬಾಯಿ ಕಟ್ಟಿಯೇ ಚೆಲ್ಲಿದ್ದರು. ಸ್ವಲ್ಪ ಸಲಿಗೆ ತಗೊಂಡರೂ, ದಡಿಯರು ಯುವರಾಜನನ್ನು ಪುಂಡು ದನವನ್ನು ಬಡಿದ ಹಾಗೆ ಬಡಿದು ಹಣ್ಣು ಮಾಡಿದ್ದರು. ಒದರಿದರೂ ಪ್ರಯೋಜನವಿರಲಿಲ್ಲ. ಯಾಕೆಂದರೆ ಯುವರಾಜನನ್ನು ಕೂಡಿಹಾಕಿದ ಬೆಟ್ಟದಯ್ಯನ ಗುಡಿ ಹಟ್ಟಿಯ ಬಿಟ್ಟು ದೂರದಲ್ಲಿತ್ತು. ತಪ್ಪಿಕೊಂಡ ಅವನಿಗೆ ತನ್ನನ್ನು ಹಿಡಿದು ತಂದವರ್ಯಾರೆಂದು, ಯಾಕೆಂದು, ತಾನೆಲ್ಲಿದ್ದೇನೆಂದು ತಿಳಿಯಲಿಲ್ಲ. ಕೊನೆಯಲ್ಲಿ ಸುಕ್ರ ತುರ್ತಾಗಿ ಹೇಳಿದ-

“ಬದೆಗ ನಿನ್ನ ಮಾತಿಗೆ ಗೌರವ ಕೊಟ್ಟು ಯುವರಾಜನನ್ನು ಬಿಟ್ಟವ್ನೆ. ಆದರಿನ್ನೂ ತನ್ನ ಹಳೇ ಕೋಪವ ಬಿಟ್ಟಿಲ್ಲ. ಒಂದೆರಡು ಬುದ್ಧೀ ಮಾತು ಹೇಳಿ ಅವನ ಕೋಪವ ಪಳಗಿಸು.”

ಶಿಖರಸೂರ್ಯ ತಕ್ಷಣ ಬದೆಗನನ್ನು ಬೆಳಕನ್ನು ಮೆಲುಕಾಡಿಸುವ ಕಣ್ಣುಗಳಿಂದ ನೋಡಿದ. ಬದೆಗ ಉಗುರು ಕಚ್ಚುತ್ತ ಕುಂತಿದ್ದ. ಕೋಪಗೊಂಡ ಗೂಳಿಯ ಕಣ್ಣಿನಂತೆ ಅವನ ಕಣ್ಣು ಕೆಂಪಾಗಿದ್ದವು. ಮುಖ ಕಿವುಚಿ ವಿಕಾರವಾಗಿತ್ತು. ತಿರಸ್ಕಾರ ಹಾಗೂ ಕ್ರೌರ್ಯಗಳನ್ನು ಸೂಚಿಸಲು ಆತ ಪ್ರಯತ್ನಿಸುತ್ತಿರುವ ಹಾಗಿತ್ತು. ಶಿಖರಸೂರ್ಯ:

“ಬದೆಗ, ನನಗೆ ಉಪಕಾರ ಮಾಡಿದೆ ಮಾರಾಯ, ನಾನಿದನ್ನ ಎಂದಿಗೂ ಮರೆಯಲಾರೆ.”

-ಎಂದ. ರಾಜವೈದ್ಯನ ಮಾತು ಕೇಳಿ ತಕ್ಷಣ ಅನಿರೀಕ್ಷಿತ ಮದ್ದಿನಂತೆ ಬದೆಗ ಸಿಡಿದು ಬಿಟ್ಟ-

“ಯಾರಿಗೆ ಬೇಕಿತ್ತು, ನಿನ್ನುಪಕಾರ? ಅವ ನನ್ನ ಗಂಡಸ್ತನಕ್ಕೇ ಔಮಾನ ಮಾಡಿ ನಾಯಿಗಿಂತ ಕಡೆಯಾಗಿ ಬದುಕುವಂತೆ ಮಾಡಿದ. ಅದು ನೆಪ್ಪಾದರೆ ಸಾಕು. ಈ ನಾಯಿನರಕದಲ್ಲಿ ಇನ್ನೂ ಬದುಕಿದ್ದೀನಲ್ಲೋ ಬೆಟ್ಟದಯ್ಯ ಅಂತ ಚೀರೋ ಹಂಗಾಯ್ತದೆ. ಇದೊಂದು ಸಣ್ಣ ಸೇಡು ತೀರಿಸಿಕೊಂಬೋವಾ ಅಂತಂದರೆ ನೀ ಅಡ್ಡ ಬಂದಿ!”

“ಹೌದೋ, ಅಂಥವ ಅಂದೇ ಕೊಲ್ಲಬೇಕಾಗಿತ್ತು. ಹೊತ್ತುಕೊಂಡು ಬೆಟ್ಟದಯ್ಯನ ಗುಡಿಗ್ಯಾಕೋ ಒಯ್ದೆ?”

“ನನ್ನ ಅಕ್ಕನ್ನ ಕೊಂದಿದ್ದರಲ್ಲ? ಇವನನ್ನೂ ಹಾಗೇ ಕೊಲ್ಲೋವಾ ಅಂತ ಕಾದಿದ್ದೆ. ನಡುವೆ ನೀ ನಿಂತಿಯಲ್ಲ ಮಾರಾಯಾ? ನನಗೀಗ ನನ್ನೇಲು ನಾನೇ ತಿಂದಂಗಾಯ್ತಿದೆ.”

ಎನ್ನುತ್ತ ಮತ್ತೆ ಮತ್ತೆ ಅದೇ ಮೊಂಡಾದ ಉಗುರು ಕಚ್ಚುತ್ತ ಕೂತ. ಒದೆಗನ ಬಗ್ಗೆ ಸುಕ್ರನಲ್ಲೂ ಕಳವಳವಿತ್ತು. ಮಾತು ಬದಲಿಸಲೆಂದು, ಆದರೂ ತನ್ನ ಕುತೂಹಲ ಮರೆಯದೆ ಚಕಿತ ನೇತ್ರಗಳಿಂದ ನೋಡುತ್ತ

“ಅಂಗಾದರೆ ಒಡೆಯಾ, ಅದೆಂಗೆ ನಿನಗೆ ಯುವರಾಜ ಬದೆಗನಲ್ಲವ್ನೆ ಅಂತ ಗೊತ್ತಾಯ್ತು?”

“ನಿಜ ಹೇಳಲ ಸುಕ್ರ? ಬೆಟ್ಟದಯ್ಯನೇ ಕನಸಿನಲ್ಲಿ ಬಂದು ಬದೆಗನನ್ನು ತೋರಿಸಿ ನಕ್ಕ!”

ಎಂದೊಂದು ಸುಳ್ಳು ಬಿಟ್ಟ. ಇಬ್ಬರೂ ತಣ್ಣಗಾದರು! ಸುಕ್ರ “ನನ್ನೊಡೆಯಾ” ಅಂದು ತೆರೆದ ಬಾಯಿ ತೆರೆದಂತೆ ಕೂತಲ್ಲೇ ಕೈಮುಗಿದ. ಬದೆಗನೂ ಹಣ್ಣಾಗಿ

“ಔಂದೆ ಒಡೆಯಾ?” ಅಂದ.

“ಬೆಟ್ಟದಯ್ಯನ ಆಣೆಗೂ ನಿಜ ಬದೆಗ!”

ಇಂತೆಂದು ನುಡಿಯ ಬೀಸು ಬಲೆ ಎಸೆದು ಅವನ ಕೈ ತಗೊಂಡು ವಿಶ್ವಾಸ ಮೂಡುವಂತೆ ಹಿಸುಕಿ ಮೀನು ತಾನಾಗಿ ಬಂದು ಬಲೆಗೆ ಬೀಳುವಂತೆ ನಿಗೂಢ ನಗೆ ನಕ್ಕ. ನಿರೀಕ್ಷೆಯಂತೆ ಕೂಡಲೇ ಬದೆಗ ಅವನ ಕಾಲಿಗೆರಗಿದ!

ಬೆಳಿಗ್ಗೆ ಮೂವರೂ ಇನ್ನೂ ನಿದ್ರೆಯಲ್ಲಿದ್ದಾಗ ಅರಮನೆಯಲ್ಲಿ ಸಡಗರದ ಕಿರುಚಾಟ ಕೇಳಿಸಿತು. ಎದ್ದು ಏನೆಂದು ವಿಚಾರಿಸಿದರೆ; ಮಹಾರಾಣಿಗೆ ದೃಷ್ಟಿ ಬಂದಿತ್ತು! ಅದನ್ನಾಕೆ ಕಿರಿಚಿ ಕೂಗಿ ಎಚ್ಚರಿಸಿ ಹೇಳಿ ಆನಂದ ಪಡುತ್ತಿದ್ದಳು. ಹಾ ಎನ್ನುವುದರೊಳಗಾಗಿ ಸುದ್ದಿ ಊರು ತಲುಪಿ ಜನ ಹಿಂಡು ಹಿಂಡಾಗಿ ಅರಮನೆಗೆ ನುಗ್ಗತೊಡಗಿದರು. ಪ್ರಧಾನಿಯೂ ಓಡಿ ಬಂದ. ಅರಮನೆ ಮತ್ತು ಊರಿನ ಜನರ ಆಶ್ಚರ್ಯ ಆನಂದಗಳ ಬೆಲೆಯನ್ನು ವಸೂಲು ಮಾಡುವುದಕ್ಕೆ ಶಿಖರಸೂರ್ಯ ಹಂಚಿಕೆ ಹಾಕಿದ. ಅರಸು ಮತ್ತು ಪ್ರಧಾನಿ ಇರುವಲ್ಲಿಗೆ ಹೋದ. ಇಬ್ಬರೂ ಆನಂದ ಹೆಮ್ಮೆಗಳ ಮಡುವಿನಲ್ಲಿ ಮುಳುಗೇಳುತ್ತಿದ್ದರು. ನಮಸ್ಕಾರಗಳ ಆಚರಣೆ ಮುಗಿದು, ಅಳಿಯಂದಿರ ಗುಣಗಾನವಾಗಿ ಆಮೇಲೆ ಶಾಂತವಾಗಿ ಹೇಳಿದ:

“ಮಹಾರಾಜರಲ್ಲಿ ನನ್ನದೊಂದು ಪ್ರಾರ್ಥನೆಯಿದೆ. ಅಪ್ಪಣೆಯಾದರೆ ಕೇಳುತ್ತೇನೆ” ಅಂದ.

“ಅವಶ್ಯವಾಗಿ ಕೇಳಿ ಅಳಿಯಂದಿರೇ.”

“ನಿಮ್ಮ ಆಳ್ವಿಕೆಯ ಹದ್ದಿನ ಕೊಳ್ಳ ವೈದ್ಯರ ಸಸ್ಯಕಾಶಿ ಎಂದು ಕೇಳಿಬಲ್ಲೆ. ಆಗಾಗ ಅಲ್ಲಿದ್ದು ನನ್ನ ವೈದ್ಯಕೀಯ ಪ್ರಯೋಗಗಳನ್ನು ಮಾಡಿಕೊಂಡಿರಲಿಕ್ಕೆ ಅನುಮತಿ ಸಿಕ್ಕರೆ ನಾನು ಧನ್ಯ.”

ಎಂದು ಅನುಮಾನದಿಂದ ಕೇಳಿ ಅರಸು ಪ್ರಧಾನರ ಮುಖ ನೋಡಿದ. ಈಗ ರಾಜ ಬಾಯಿಹಾಕಿ

‘ಏನು’ ಮಾತು ಅಳಿಯಂದಿರೇ, ಇಡೀ ಕೊಳ್ಳ ನಿಮ್ಮದು. ಕೊಳ್ಳದಲ್ಲಿರುವ ಅರಮನೆಯೂ ನಿಮ್ಮದೇ ಅಂದುಕೊಳ್ಳಿರಿ. ಅಲ್ಲಿಗೆ ಬಂದವರು ನಮ್ಮಲ್ಲಿಗೂ ಆಗಾಗ ಬರುತ್ತಿರಿ. ನಮ್ಮ ಅರಮನೆಯಲ್ಲಿ ನಿಮಗೆ ರೋಗಿಗಳ ಕೊರತೆಯಂತೂ ಆಗುವುದಿಲ್ಲ.”

ಎಂದು ಹೇಳಿ ಡೊಳ್ಳು ಬಾರಿಸಿದಂತೆ ದೊಡ್ಡದಾಗಿ ನಕ್ಕ. ಇಂತು ಬಿಳಿಗಿರಿಯವರ ವಿಶ್ವಾಸ ಮತ್ತು ಹದ್ದಿನ ಕೊಳ್ಳದ ಕಾಣಿಕೆ ಪಡೆದು, ಕನಕಪುರಿಯವರು ಬಿಳಿಗಿರಿಗೆ ಕೊಡಲು ಹೇಳಿದ್ದ ಚಿನ್ನವನ್ನು ಗೌಪ್ಯವಾಗಿ ತನ್ನ ಮನೆಗೇ ತಲುಪಿಸಲು ಸುಕ್ರನಿಗೆ ವಹಿಸಿಕೊಟ್ಟು ಶಿಖರಸೂರ್ಯ ಕನಕಪುರಿಗೆ ಹೊರಟು ನಿಂತ. ಬೀಳ್ಕೊಡುತ್ತ ಅರಸು,- ‘ಮೊಮ್ಮಕ್ಕಳು ಸಮೇತ ಛಾಯಾದೇವಿ, ಚಿಕ್ಕಮ್ಮಣ್ಣಿಯನ್ನು ಕಳಿಸಲು’ ಹೇಳಿ ಕಳಿಸಿಕೊಟ್ಟ.