ಶಿಖರಸೂರ್ಯ ಕನಕಪುರಿಗೆ ಬಂದು ನರಳುತ್ತ ಬಿದ್ದಿದ್ದ ಮಹಾರಾಜನನ್ನು ಒಂದೇ ವಾರದಲ್ಲಿ ಗುಣಪಡಿಸಿ, ಆತ ಯಾರ ನೆರವಿಲ್ಲದೆ ಅರಮನೆ ಮತ್ತು ಉದ್ಯಾನಗಳಲ್ಲಿ ಅಲೆದಾಡುವಂತೆ ಮಾಡಿದ್ದು ಸರಿಯಷ್ಟೆ.

ರೋಗ ಮಗ್ಗಲು ಬದಲಿಸುತ್ತಿದ್ದಂತೆ ಮಹಾರಾಜನಿಗೆ ಬುದ್ಧಿ ಮರುಕಳಿಸಿ ಮರುಜನ್ಮ ಸಿಕ್ಕಂತಾಯ್ತು. ಈ ಹೊಸ ಜನ್ಮದಲ್ಲಿ ಅವನಿಗೆ ಮೂರು ಭಯಾನಕ ಸತ್ಯಗಳ ದರ್ಶನವಾಯಿತು. ಯಾರೋ ವಿಷವೂಡಿ ತನ್ನ ದೀರ್ಘಕಾಲದ ರೋಗಕ್ಕೆ ಕಾರಣರಾದರೆಂಬುದು, ನವೆದು ನವೆದು ಇನ್ನೇನು ಸಾಯಲಿದ್ದಾಗ ಶಿಖರಸೂರ್ಯ ಬಂದು ಉಳಿಸಿದನೆಂಬುದು ಒಂದನೇ ಸತ್ಯ. ಇದಕ್ಕೆ ಯುವರಾಜನ ಮಹತ್ವಾಕಾಂಕ್ಷೆಯೇ ಕಾರಣವೆಂದು, ಅವನಿಗೆ ಪ್ರಧಾನಿ ಮತ್ತು ಮಹಾರಾಣಿಯ ಬೆಂಬಲವಿದೆಯೆಂದೂ ತಿಳಿದು ಬಂದದ್ದು ಎರಡನೆಯ ಸತ್ಯ. ಯುವರಾಜ ಇದನ್ನು ಬಚ್ಚಿಟ್ಟುಕೊಳ್ಳಲೂ ಇಲ್ಲ. ಒಂದೆರಡು ಸಲ ಮಹಾರಾಣಿಯೊಂದಿಗೆ ಪಿಸುದನಿಯಲ್ಲಿ ಮಾತಾಡುತ್ತ, ಆದರೆ ಮಹಾರಾಜನಿಗೆ ಕೇಳಿಸುವಂತೆ ‘ರೋಗಗಳು ಮನುಷ್ಯನ ಸಾವಿನಾಸೆಯ ಪ್ರಕಟಣೆಗಳು’ ಎಂದು ಹೇಳಿದ್ದ! ಮೂರನೇ ಸತ್ಯವೆಂದರೆ ಸದರಿ ರೋಗದ ಅವಧಿಯಲ್ಲಿ ಸ್ವಂತ ಅರಮನೆಯ ಮೇಲಿನ ಅಧಿಕಾರ ಕಳೆದುಕೊಂಡಿದ್ದ ಮತ್ತು ಬಳಗದಲ್ಲಿದ್ದೂ ಒಂಟಿಯಾಗಿದ್ದ!

ಕೊನೆಯ ಸತ್ಯವನ್ನು ಮೊದಮೊದಲು ಅವನೇ ನಂಬಲಿಲ್ಲ. ‘ಈಗಲೂ ನಾನು ಮಹಾರಾಜನೇ! ಈ ಅರಮನೆಯ ಯಜಮಾನ ನಾನೇ!” ಎಂದು ಸೇವಕರ ಮುಂದೆ ಅನೇಕ ಬಾರಿ ಹೇಳಿಕೊಂಡ. ಬಿಳಿಗಿರಿರಾಯ ಸೋತಾಗ ಇವನಿಗೆ ಕೊಟ್ಟ ‘ವಿಜಯದ ಕಡಗ’ವನ್ನು ಪೆಟ್ಟಿಗೆಯಿಂದ ತೆಗೆಸಿ, ಬಲಗೈಗೆ ಧರಿಸಿಕೊಂಡು ಅಲುಗಲುಗಿ, ಸಪ್ಪಳ ಮಾಡಿ ಮಾಡಿ ‘ಕೇಳಿಸಿತ?’ ಎಂಬಂತೆ ಸೇವಕರ ಕಡೆಗೆ ವಿಜಯ ನಗೆ ಬೀರಿದ. ರೋಗಾವಸ್ಥೆಯಲ್ಲಿ ಮಹಾರಾಜ ಯಾವುದೇ ರಾಜಸಭೆಗೆ ಬರಲಾರನೆಂದೋ ಅಥವಾ ಬರಬಾರದೆಂದೋ ಅರ್ಥಕೌಶಲ ರಾಜಕುಮಾರನನ್ನು ಯುವರಾಜನೆಂದು ತಾನೇ ಹೆಸರಿಸಿ ಅವನ ನೇತೃತ್ವದಲ್ಲಿ ರಾಜಸಭೆಗಳನ್ನ ನಡೆಸುತ್ತಿದ್ದ. ಮೊದಮೊದಲು ವರ್ತಕರು ಒಪ್ಪಲಿಲ್ಲವಾದರೂ ಆಮೇಲೆ ಅನಿವಾರ್ಯವೆಂದು ಒಪ್ಪಿಕೊಳ್ಳಬೇಕಾಯಿತು. ಒಂದೆರಡು ಬಾರಿ ರಾಜಸಭೆಗಳಿಗೆ ಕರೆಯದಿದ್ದರೂ ಸಡಗರದಿಂದ ಮಹಾರಾಜ ಪ್ರವೇಶ ಮಾಡಿದ. ಯುವರಾಜನ ಕಣ್ಣು ಕೆಂಪಾದವು. ದಂಡನಾಯಕ, ಮಂತ್ರಿ ಮಾನ್ಯರು ಮತ್ತು ವರ್ತಕ ಸಮಾಜದ ಗಣ್ಯರು-ಎಲ್ಲರೂ ಎದ್ದುನಿಂತು ಬಾಗಿ ಗೌರವ ಕೊಟ್ಟರು. ಅವರಾಡುವ ಮಾತುಗಳನ್ನು ಬಾಯಿ ಮುಚ್ಚಿಕೊಂಡು ಕೇಳಿಸಿಕೊಂಡ. ಅವರ ಮಾತುಗಳಲ್ಲಿ ಸಮಸ್ಯೆಗಳು ತಲೆದೋರಿದಾಗ ಅದರ ಎಲ್ಲಾ ಜವಾಬ್ದಾರಿ ತನ್ನದೇ ಎಂಬಂತೆ ಹುಬ್ಬು ಗಂಟು ಹಾಕಿ ಚಿಂತೆ ಮಾಡಿದ. ‘ಬಿಳಿಗಿರಿರಾಯ ಅವಿಧೇಯತೆಯಿಂದ ನಡೆದುಕೊಳ್ಳುತ್ತಿದ್ದಾನೆ’ ಎಂದು ಅವರು ಹೇಳಿದರೆ ವಿಜಯದ ಕಡಗವನ್ನು ಮುಂಗೈಯಲ್ಲಿ ತಿರುಗಿಸುತ್ತ ‘ಅವನಿಗೆ ಈ ಕಡಗದ ನೆನಪು ಮಾಡಿಕೊಡಿರಿ’ ಎಂದು ಮುದಿನಾಯಿಯಂತೆ ಗುರುಗುಟ್ಟಿ ಒಬ್ಬನೇ ಗಹಗಹಿಸಿ ನಕ್ಕು ಹೊರಟು ನಿಂತಾಗ ಎಲ್ಲರೂ ಎದ್ದು ನಿಂತು ಗೌರ ಕೊಟ್ಟರಾದರೂ, ಇದೆಲ್ಲ ಸುಳ್ಳು ಅಭಿನಯವೇ ಶಿವಾಯಿ, ನಾನಿಲ್ಲದಾಗ ಬಯ್ಯುತ್ತಾರೆಂದು ಅಂದುಕೊಂಡು ಖೇದದಿಂದ ಹೋದ.

ಮಹಾರಾಣಿ ಇವನ ಕಡೆಗೆ ನೋಡುತ್ತಿರಲಿಲ್ಲ. ಆಕಸ್ಮಾತ್ ನೋಡಿದರೂ ತಿರಸ್ಕಾರದಿಂದ ‘ಇನ್ನೂ ಬದುಕಿದ್ದೀಯಾ ಮುದಿಯಾ?’ ಎಂಬಂತೆ ನೋಡುತ್ತಿದ್ದಳು. ಚಿಕ್ಕಮ್ಮಣ್ಣಿ ಆಗಾಗ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಳು, ಮಹಾರಾಜನ ಸೇವೆ ಮಾಡಲು ಹಾರೈಸುತ್ತಿದ್ದಳು. ಆದರೆ ಮಹಾರಾಣಿ ಕಣ್ಣು ಕಿಸಿದು ವಿಕಾರ ದೃಷ್ಟಿಯಿಂದ ಇರಿಯುತ್ತಿದ್ದಳಾಗಿ ಚಿಕ್ಕಮ್ಮಣ್ಣಿಯೂ ಮಹಾರಾಜನಲ್ಲಿಗೆ ಬರಲು ಹೆದರುತ್ತಿದ್ದಳು. ಯುವರಾಜ ಬರುತ್ತಿರಲಿಲ್ಲ. ಮಗಳು ಛಾಯಾದೇವಿಯಲ್ಲಿ ತಂದೆಯೆಂಬ ಅಂತಃಕರಣವಿತ್ತು. ಆದರೆ ಅವಳೂ ಹೆದರಿ ಬರುವುದನ್ನು ಕಡಿಮೆ ಮಾಡಿದ್ದಳು.

ಇನ್ನಿವನ ಕೊಬ್ಬಿನ ವಿಚಾರಕ್ಕೆ ಬರೋಣ. ಮೊದಲಿನ ಬೆನ್ನು ನೋವು ಈಗ ಪುನಃ ಕಾಣಿಸಿಕೊಂಡು ಮಹಾರಾಜ ನೊಂದ ನಾಯಿಯಂತೆ ನರಳುತ್ತಿದ್ದ. ಆದರೆ ಹೊಟ್ಟೆಯಲ್ಲಿ ಆಹಾರವಿದ್ದಾಗ ಆ ನೋವಿನ ಉಪಟಳ ಇರುತ್ತಿರಲಿಲ್ಲವಾದ್ದರಿಂದ ಯಾವಾಗಲೂ ಏನನ್ನಾದರೂ ಬಾಯಾಡಿಸುತ್ತಲೇ ಇರುತ್ತಿದ್ದ. ಇದರಿಂದಾಗಿ ಅವನಿಗೆ ಆಹಾರದಲ್ಲಿ ವಿಪರೀತವೆಂಬಂಥ ಆಸಕ್ತಿ ಮತ್ತು ರುಚಿ ಮೂಡಿ ಹಿಂದೆ ನಿರಾಕರಿಸುತ್ತಿದ್ದ ಕೆಲವು ಪದಾರ್ಥಗಳನ್ನು ತರಿಸಿ ಚಪ್ಪರಿಸಿ ತಿನ್ನುತ್ತಿದ್ದ. ಬಿಸಿಬಿಸಿಯಾದ ಆಹಾರವನ್ನು ತಾಸುಗಟ್ಟಳೆ ತಿನ್ನುವಾಗ ಸಹಜವಾಗಿ ಬೆವರು ಸುರಿಯುತ್ತಿತ್ತು. ಮೂಗು ಕಿವಿಗಳು ಕೆಂಪಾಗಿ ಕಣ್ಣು ಮೂಗಿನಲ್ಲಿ ರಾಡಿನೀರು ಬಂದು ನೋಡುವವರಿಗೆ ಅಸಹ್ಯವಾಗಿ ಕಾಣಿಸುತ್ತಿದ್ದುದೂ ಅವನ ಗಮನಕ್ಕೆ ಬರುತ್ತಿರಲಿಲ್ಲ. ತಿಂದು ಜೀರ್ಣವಾಗುವ ಮದ್ದು ತಗೊಂಡು ಮಲಗುವದು, ನಿದ್ದೆ ಬಾರದಿದ್ದರೆ ತನ್ನ ವಿಜಯದ ಕಡಗವನ್ನು ತಿರುಗಿಸುತ್ತ ಮೈಮರೆಯುವುದು, ನಿದ್ದೆ ಬಂದು ಅಂಗಾತ ಮಲಗಿದರೆ ಮದ್ದಾನೆ ಗರ್ಜಿಸಿದಂತೆ ಸುದೀರ್ಘ ಗೊರಕೆ ಹೊಡೆಯುವುದು ಅವನ ದಿನಚರಿಯಾಯಿತು. ಹೋಳಾಗಿ ಮಲಗಿದರೆ ಮಾತ್ರ ಗಾಳಿ ಬೀಸುವ ಸೇವಕರಿಗೆ ಭೀತಿಯಾಗುವಂತೆ ಸ್ಮಶಾನ ಮೌನ ಆವರಿಸುತ್ತಿತ್ತು.

ಹೀಗೆ ಮಿತಿಮೀರಿ ತಿನ್ನುತ್ತಲೇ ಇದ್ದರೆ ಕೊಬ್ಬು ಬಾರದಿರುತ್ತದೆಯೇ? ಅವನ ದೇಹಕ್ಕೆ ಕೊಬ್ಬೇರುತ್ತಿದ್ದ ಸಂಗತಿಯನ್ನು ಎಲ್ಲರಿಗಿಂತ ಮೊದಲು ಶಿಖರಸೂರ್ಯನೇ ಗಮನಿಸಿದ್ದ. ದೇಹದಲ್ಲಿ ಅನಿರೀಕ್ಷಿತ ಕೊಬ್ಬು ಸಂಗ್ರಹವಾಗಿ ತೋಳುಗಳು ಬಾತುಕೊಂಡಂತಾದುವಲ್ಲದೆ, ಚಲಿಸಿದಾಗ ಕುರುಡನ ಕೈಗಳು ಚಲಿಸಿದಂತೆ ಕಾಣುತ್ತಿದ್ದವು. ಕೂಡಲೇ ಶಿಖರಸೂರ್ಯ ಅಪಥ್ಯದ ಆಹಾರ ಕೊಡುತ್ತಿದ್ದೀರೆಂದು ಅಡಿಗೆಯವರಿಗೆ ಸಿಟ್ಟು ಮಾಡಿದ. ಅಪಥ್ಯ ಮಾಡಿದರೆ ಮಹಾರಾಜನ ಅನಾರೋಗ್ಯದ ಮೇಲೆ ತನ್ನ ಮದ್ದು ಕೆಲಸ ಮಾಡುವುದಿಲ್ಲವೆಂದು ಗೊಣಗುತ್ತ ತನ್ನ ವೈದ್ಯವಿದ್ಯೆಗೇನು ಅರ್ಥವೆಂದು ಪಶ್ಚಾತ್ತಾಪ ಪಟ್ಟ. ಆಮೇಲೆ ಮಹಾರಾಜ ತಿನ್ನಬೇಕಾದ ಆಹಾರ ಮತ್ತು ಅದರ ಪ್ರಮಾಣದ ಒಂದು ಪಟ್ಟಿ ಕೊಟ್ಟು ಇದನ್ನು ನಿಷ್ಠುರವಾಗಿ ಪಾಲಿಸಲೇಬೇಕೆಂದು ತಾಕೀತು ಮಾಡಿದ. ಮೊದಮೊದಲು ಪ್ರತಿಸಲ ಊಟ ಮಾಡುವಾಗಲೂ ಸೇವಕರು ಆ ಪಟ್ಟಿಯನ್ನು ಮಹಾರಾಜನ ತಟ್ಟೆಯ ಸಮೀಪದಲ್ಲಿ ಇಡುತ್ತಿದ್ದರು. ಮಹಾರಾಜ ಪಟ್ಟಿಯಲ್ಲಿ ಹೇಳಿದ ಪ್ರಮಾಣವನ್ನು ಒಂದೆರಡು ತುತ್ತುಗಳಲ್ಲಿ ಮುಗಿಸಿ, ‘ಇರುವೆ ಮತ್ತು ಇಲಿಗಳಿಗೆ ಕೊಡುವಷ್ಟು ಆಹಾರವನ್ನು ಒಬ್ಬ ರಾಜ ತಿಂದರೆ ರಾಜ್ಯವಾಳಲಿಕ್ಕೆ ಆಗುತ್ತದೇನ್ರಯ್ಯಾ?’ ಎಂದು ಗದರಿ ಹಲ್ಲಿಗೆ ರುಚಿಕರವಾದದ್ದನ್ನು ಬೇಕಾದಷ್ಟು ಹಾಕಿಸಿಕೊಂಡು ತಿನ್ನುತ್ತಿದ್ದ. ಅದಾಗಿ ಜೀರ್ಣವಾಗುವ ಸಸ್ಯಗಳನ್ನ ನಂಜಿಕೊಳ್ಳುವಾಗ ಅವನ್ನೂ ಪ್ರಮಾಣ ಮೀರಿ ಸೇವಿಸುತ್ತ, ‘ನಿಜ ಹೇಳಬೇಕೆಂದರೆ ಇದಪ್ಪ ಆರೋಗ್ಯಕರ ಆಹಾರವೆಂದರೆ! ಸರಳ ಆಹಾರವೆಂದರೂ ಇದೇ; ಬಡವರು, ಕಾಡುಜನರು ತಿನ್ನೋ ಆಹಾರವೆಂದರೂ ಇದೇ! ಉಳಿದದ್ದು ನಾವು ರಾಜರು ಅಂಬೋರು ತಿಂತೀವಲ್ಲ?-ಅದು, ಕೇವಲ ಹಲ್ಲಿನಿಂದ ಗೋರಿ ಅಗೆಧಂಗೆ ಕಣ್ರಯ್ಯಾ! ನಾಳೆಯಿಂದ ಇದನ್ನೇ ಹೆಚ್ಚಾಗಿ ಬಡಿಸಿರಿ.’ ಎಂದೂ ಉಪದೇಶ ಮಾಡುತ್ತಿದ್ದ. ಅಲ್ಲದೆ ಒಂದೊಂದು ದಿನ ಜೀರ್ಣವಾಗುವ ಸಸ್ಯಗಳೇ ರುಚಿಯಾಗಿದ್ದರೆ ಅವನ್ನೇ ಜಾಸ್ತಿ ತಿಂದು ತೃಪ್ತಿಗೊಂಡು ಬೆಳಿಗೆದ್ದು ಕೊಬ್ಬಿನ ಅಲ್ಪಾಂಶವಾದರೂ ಕರಗಿತೆ? ಎಂದು ನೋಡಿಕೊಳ್ಳುತ್ತಿದ್ದ.

ಅವನ ವಿಕಾರವಾದ ಹೊಟ್ಟೆ, ಅಸಹ್ಯಕರವಾಗಿ ಕೊಬ್ಬಿದ ತೋಳುಗಳು, ಇಳಿಬಿದ್ದ ಕೆಳದುಟಿ, ರಾಡಿ ಸೋರುವ ಕಣ್ಣುಗಳನ್ನು ಕಂಡಾಗ ಮಕ್ಕಳು ಹೇಸಿಕೊಳ್ಳುತ್ತಿದ್ದರು. ನೆಪ ಹೇಳಿ ಅವನೊಂದಿಗೆ ಊಟಮಾಡುವ ಅವಕಾಶಗಳನ್ನು ಈಗೀಗ ರಾಜಕುಮಾರಿ ಛಾಯಾದೇವಿಯೂ ತಪ್ಪಿಸಿಕೊಳ್ಳುತ್ತಿದ್ದಳು.

ಬಂದು ನೋಡುವ ಗೆಳೆಯರಿರಲಿಲ್ಲ. ಅಲ್ಲಿಗೆ ಬಂದ ಯಾರಾದರೂ ಪ್ರಜೆಗಳೋ ಅಧಿಕಾರಿಗಳೋ ನಮಸ್ಕಾರ ಮಾಡಿದರೆ ಮಹಾರಾಜ ಅನುಮಾನದಿಂದ ಅಥವಾ ಹೆದರಿಕೆಯಿಂದ ನೋಡುತ್ತಿದ್ದ. ಬಂದವರೊಂದಿಗೆ ಮಾತಾಡುವುದಕ್ಕೆ ಹಿಂಜರಿಯುತ್ತಿದ್ದ. ಅವನ ಹಿಂಜರಿಕೆಯಿಂದಾಗಿ ಬಂದವರೂ ಮಾತಾಡಿಸದೆ ಇದು ಅಭಿನಯ ಇಲ್ಲವೆ ಹುಚ್ಚಿರಬಹುದೆಂದು ಭಾವಿಸಿ ಸಹಾನುಭೂತಿ ಮತ್ತು ಸಂಕೋಚಗಳಿಂದ ಹಿಂದೆ ಸರಿಯುತ್ತಿದ್ದರು. ಅಥವಾ ಅವರು ಅವನ ಉತ್ತರಕ್ಕಾಗಿ ಕಾದು ಹಾಗೇ ನಿಂತರೆ ಏನು ಉತ್ತರ ಕೊಟ್ಟರೂ ಅವರು ನಂಬುವುದಿಲ್ಲವೆಂದು, ತಾನು ಮೋಸ ಹೋದುದು ಇವರಿಗೆ ತಿಳಿದಿದೆಯೆಂದು ಭಾವಿಸಿ ‘ಚೆನ್ನಾಗಿದ್ದೀನಿ’ ಎಂದು ಹೇಳಿ ಮಳ ಮಳ ಅವರ ಮುಖ ನೋಡುತ್ತಿದ್ದ. ಅವರು ಹೋದ ಮೇಲೆ ಒಬ್ಬನೇ ‘ತಾನು ಆಡಿದ್ದರಲ್ಲಿ ಅವರಿಗೇನಾದರೂ ದೋಷ ಕಂಡಿತೆ? ಅಥವಾ ಅವರು ಹೋಗಿ ಯುವರಾಜ ಅಥವಾ ಮಹಾರಾಣಿಗೆ ಹೇಳುವರೆ?’ ಎಂದೂ ಚಿಂತೆ ಮಾಡುತ್ತಿದ್ದ.

ಸಂಗೀತಕ್ಕೂ ಅವನಿಗೆ ಕಿವಿಗಳಿರಲಿಲ್ಲ. ಆತ ಇಷ್ಟಪಡುತ್ತಿದ್ದ ಒಂದೇ ಒಂದು ಆಟವೆಂದರೆ ಇಬ್ಬರು ಖೈದಿಗಳು ಮಲ್ಲಯುದ್ಧ ಮಾಡಿದರೆ, ಅವರನ್ನು ಶ್ವಾನಕೂಪದಲ್ಲಿ ತಳ್ಳಿ ಆ ನಾಯಿಗಳು ಅವರನ್ನು ಹರಿದು ತಿನ್ನುತ್ತಿದ್ದರೆ ನೋಡಿ ವಿಜಯದ ಕಡಗದ ಸಪ್ಪಳಾಗುವಂತೆ ಚಪ್ಪಾಳೆ ತಟ್ಟಿ ನಲಿಯುತ್ತಿದ್ದ. ಆದರೆ ಅದು ಇತ್ತೀಚೆಗೆ ನಡೆದಿರಲಿಲ್ಲ. ನಡೆದರೂ ಅವರು ಇವನನ್ನು ಕರೆದಿರಲಿಲ್ಲ.

ಸೇವಕರು ಬೆಕ್ಕಿನ ಹೆಜ್ಜೆ ಇಡುತ್ತ ಅಡಗಿ ನಿಂತು ಮಹಾರಾಜ ಅಡ್ಡಾಡುವುದನ್ನು ಕಂಡು ಚಕಿತರಾಗುತ್ತಿದ್ದರೂ ಯಾರೂ ಮುಂದೆ ಬಂದು ಕಾಣಿಸಿಕೊಳ್ಳುತ್ತಿರಲಿಲ್ಲ. ಮಹಾರಾಜ ಮಾತ್ರ ಆಗಾಗ ಬಾಗಿಲು ತಟ್ಟಿದ ಶಬ್ದ ಕೇಳಿಸಿ, ಹೋಗಿ ಬಾಗಿಲು ತೆರೆಯುತ್ತಿದ್ದ. ಯಾರೂ ಇಲ್ಲದನ್ನು ಗಮನಿಸಿ ಮತ್ತೆ ಬಾಗಿಲು ಮುಚ್ಚಿಕೊಂಡು ಬಂದು ವಿಜಯದ ಕಡಗದ ಸಪ್ಪಳ ಮಾಡುತ್ತ ಕೂರುತ್ತಿದ್ದ.

ರಾಜ ಹೆದರಿದ್ದಾನೆಂದು, ಆ ಹೆದರಿಕೆಯಿಂದಲೇ ದಿನೇ ದಿನೇ ಸಾವಿಗೆ ಸಮೀಪವಾಗುತ್ತಿದ್ದಾನೆಂದು ಸೇವಕರಿಗೆ ಗೊತ್ತಾಗಿತ್ತು. ಒಂದು ದಿನ ಯುವರಾಜನ ವರ್ತಕ ಚೇಲನೊಬ್ಬ ಇನ್ನೊಬ್ಬನಿಗೆ, ಮಹಾರಾಜನೂ ಕೇಳಿಸಿಕೊಳ್ಳುವಂತೆ ಒಂದು ಕತೆ ಹೇಳಿದ:

‘ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ರಾಜ ಇದ್ದ. ಅವನು ಕನ್ನಡಿ ಬಿಟ್ಟು ಬೇರೆ ಕಡೆಗೆ ನೋಡಿದವನೇ ಅಲ್ಲ. ಕನ್ನಡಿ ನೋಡುತ್ತಲೇ ಮಲಗುತ್ತಿದ್ದ. ಕನ್ನಡಿಯಲ್ಲೇ ಎಚ್ಚರಾಗುತ್ತಿದ್ದ. ಭೇಟಿಯಾಗಲು ಬಂದವನು ಕನ್ನಡಿಯಲ್ಲೇ ಮಾತಾಡುತ್ತಿದ್ದರು. ಇವನೂ ಅವರ ಪ್ರತಿಬಿಂಬದೊಂದಿಗೇ ಮಾತಾಡಿ ಕಳಿಸುತ್ತಿದ್ದ. ಹೆಂಡತಿ ಮಕ್ಕಳನ್ನು ಕೂಡ ಕನ್ನಡಿಯ ಮೂಲಕವೇ ನೋಡುತ್ತಿದ್ದ. ಮಾತಾಡುತ್ತಿದ್ದ, ಪ್ರೀತಿಸುತ್ತಿದ್ದ ಕೂಡ.

ಸದರಿ ರಾಜನಿಗೆ ಒಂದು ಸಲ ಕನ್ನಡಿಯಲ್ಲಿ ಕಾಡು ಕಂಡಿತು. ಹಾಗೆಯೇ ನೋಡುತ್ತಿರಬೇಕಾದರೆ ಕಾಡಿನೊಳಗಿನಿಂದ ಒಂದು ಧಡೂತಿ ಕರೀ ಕುದುರೆ ಓಡಿ ಬಂದು ‘ಹತ್ತು ಬಾ’ ಎಂದು ಕೆನೆಯುತ್ತ ಮಾತಾಡಿತು! ಕುದುರೆ ಮಾತಾಡಿತಲ್ಲಾ! ಎಂದು ಆಶ್ಚರ್ಯದಿಂದ ಕನ್ನಡಿ ಬಿಟ್ಟು ಹಿಂದೆ ನೋಡಿದರೆ ಕರಿ ಕುದುರೆ ಅಲ್ಲೇ-ಅವನ ಹಿಂದೆಯೇ ನಿಂತಿತ್ತು! ರಾಜ ನೋಡಿದವನೇ ಅಲ್ಲೇ ಹಾಗೇ ಸತ್ತ!’

ಸದರಿ ಕತೆಯನ್ನ ಕೇಳಿಸಿಕೊಂಡ ಮಹಾರಾಜ ಆ ದಿನ ಕನ್ನಡಿಯ ಕಡೆಗೆ ನೋಡಲಿಲ್ಲ! ಸೇವಕರ ಕಪಿಚೇಷ್ಟೆಗೆ ನಗಲಿಲ್ಲ. ಸದರಿ ವರ್ತಕನನ್ನ ಕರೆದು ಊರಲ್ಲಿ ಯಾರ್ಯಾರು ಸತ್ತರೆಂದು, ಕೇಳಿ ತಿಳಿದುಕೊಂಡಾದ ಮೇಲೆ ಕಳಿಸಿಬಿಟ್ಟ. ಮಹಾರಾಜ ಆ ದಿನ ಯಾವುದೋ ಅನಾಹತ ನಾದವನ್ನ ಆಲಿಸುವಂತೆ ಕಿಟಕಿಯ ಬಳಿ ನಿಂತುಕೊಂಡ. ಸಾವಿನ ಹೆಜ್ಜೆಗಳನ್ನು ಆಲಿಸುತ್ತಿರುವಂತೆ ಆಗವನ ಮುಖಚರ್ಯೆ ಇತ್ತು.

ಕೊನೆಯ ಸಲವೆಂಬಂತೆ ಅರಮನೆಯಲ್ಲಿ ಅಡ್ಡಾಡಿದ. ಸೇವಕರು ಸಿಕ್ಕರೆ ಅಲ್ಲಿಯ ಒಂದೊಂದು ವಸ್ತುವನ್ನೂ ತೋರಿಸಿ, ‘ಇದೆಲ್ಲ ನಾನೇ ತಂದದ್ದು. ಈ ರತ್ನಗಂಬಳಿಯನ್ನ ಕಾಶ್ಮೀರದ ರಾಜ ಕಾಣಿಕೆಯಾಗಿ ಕೊಟ್ಟ. ಇದು ವಿಜಯದ ಕಡಗ, ಬಿಳಿಗಿರಿರಾಯ ಸೋತು ಕೊಟ್ಟದ್ದು.’ –ಎಂದು ಹೇಳುತ್ತ ಕೈ ಕಡಗವನ್ನು ಅಲುಗಲುಗಿಸಿ ಸಂತೋಷಪಟ್ಟ. ಕಡಗದ ದನಿಯೇ ಅವನಿಗೆ ಮುದನೀಡುವ, ಕೊನೆಗೆ ದಣಿವು ಕೂಡಾ ಕೊಡುವ ಸಾಧನವಾಗಿತ್ತು. ಆ ದಿನ ಮಧ್ಯರಾತ್ರಿಯಾದರೂ ನಿದ್ದೆ ಬರದಿದ್ದಾಗ ಕಳ್ಳದನಿಯಲ್ಲಿ ಕಡಗದ ದನಿಯನ್ನ ಅನುಕರಿಸುತ್ತ ಮಲಗಿದ. ನಿದ್ದೆ ಬಂತೆಂದಾಗ ಹಳವಂಡೆಗಳು ಬೇಟೆಯಾಡತೊಡಗಿದ್ದವು.

‘ಈ ಹುಚ್ಚನನ್ನು ಅಡವಿಗಟ್ಟಿರೆಂದು, ನೀರಲ್ಲಿ ಮುಳುಗಿಸಿರೆಂದು, ಮಣ್ಣಲ್ಲಿ ಹುಗಿಯಿರೆ’ಎಂದು ಹೇಳುತ್ತ ಕನಕಪುರಿಯ ವರ್ತಕರು ತನ್ನ ಕಡೆಗೆ ಕಲ್ಲು ಬೀಸಿ ಎಸೆದರು… ಕೊಲೆಗೊಳಗಾದವರ, ಶ್ವಾನಕೂಪದಲ್ಲಿ ಸಾಯುತ್ತಿರುವವರ ಕಿರುಚಾಟಗಳು ಒದರಾಟಗಳು ಕೇಳಿಸಿದವು… ಯುವರಾಜನ ನೇತೃತ್ವದಲ್ಲಿ ತನ್ನ ಅಧೀನಕ್ಕೆ ಒಳಪಡದ ಪಾಳೆಯಗಾರರನ್ನೆಲ್ಲ ಬಂಧಿಸಿ ಸುಟ್ಟು ಬೂದಿ ಮಾಡುತ್ತಿದ್ದರು… ಹಾಳಾದ ಪಾಳೆಯಗಾರರಿಂದ ದೊರೆತ ಲಾಭ ಐಶ್ವರ್ಯಗಳನ್ನು ಹಂಚಿಕೊಳ್ಳುವ ಬಗ್ಗೆ ವರ್ತಕರು ಜಗಳಾಡುತ್ತಿದ್ದರು… ಹುಬ್ಬೇರಿಸಿ ನಗುವ ಮುಖಗಳು… ತುಟಿ ಅಲುಗುತ್ತಿವೆ ಮಾತು ಕೇಳಿಸುತ್ತಿಲ್ಲ…

ಆ ದಿನ ರಾಜ ಬೆಳಗಿನ ಸಮಯ ವರ್ತಕರನ್ನ ಉದ್ದೇಶಿಸಿ ರಣರಂಗದಲ್ಲಿ ನಿಂತ ವೀರಾಗ್ರಣಿಯಂತೆ ಮಾತಾಡುವ ಕನಸಾಯಿತು. ಹೇಳಿದ:

“ಈ ಯುದ್ಧವನ್ನ ನಾವು ಗೆಲ್ಲಲೇಬೇಕ್ರಯ್ಯಾ, ಗೆದ್ದರೆ ನಮ್ಮ ಪಾಳಯಗಳಲ್ಲಿ ಮುಕ್ತ ವ್ಯಾಪಾರ ಮಾಡುವುದಕ್ಕೆ ನಿಮಗೆ ಇಗೋ ಪರವಾನಗಿ ಸಿದ್ಧಪಡಿಸಿದ್ದೇನೆ. ಅಲ್ಲದೆ ತೆರಿಗೆಯಿಲ್ಲದೆ ಅಷ್ಟೂ ರಾಜ್ಯಗಳಲ್ಲಿ ನಿಮ್ಮ ವಸ್ತುಗಳನ್ನ ಮಾರುವ ಅಧಿಕಾರ ಮಾತ್ರವಲ್ಲ ಸ್ಥಳೀಯರು ಆ ವಸ್ತುಗಳನ್ನ ಮಾರಿದರೆ ಶೇಕಡಾ ನೂರರಷ್ಟು ತೆರಿಗೆಯನ್ನೂ ಕಕ್ಕುವ ವ್ಯವಸ್ಥೆ ಮಾಡುತ್ತೇನೆ. ಸಾಕೋ?” ಎಂದು ಸಾರಿದ.

ಹಾಗೇ ಹೇಳ ಹೇಳುತ್ತ,

“ಚಿನ್ನ, ಅಧಿಕಾರ, ಕೊಲೆ, ಸುಲಿಗೆ, ದುಃಖ-ಇವು ನನ್ನ ಖಾಸಗೀ ಶಬ್ದಗಳು. ಇವುಗಳಿಂದ ಮನುಷ್ಯನಿಗೆ ಮುಕ್ತಿಯೇ ಇಲ್ಲ!” ಎಂದು ಹೇಳಹೇಳುತ್ತ ಅಪರಾಧ ಮಾಡಿದವನು ತಾನೇ ಎಂದು ಹೆಚ್ಚು ಹೆಚ್ಚು ಖಾತ್ರಿಯಾಗಿ ನೋಯಲಾರಂಭಿಸಿದ. ಬಾಣ ನೆಟ್ಟು ಸಾಯಲಾರದ, ಆದರೆ ಬೇಟೆಗಾರನಿಗೂ ಸಿಕ್ಕದೆ ನರಳುತ್ತ ಬಿದ್ದ ಪ್ರಾಣಿಯ ಹಾಗೆ ನೋವನ್ನನುಭವಿಸಿದ. ತನ್ನ ಅಪರಾಧ ಯಾವುದೆಂದು ತಿಳಿಯದಾಯಿತು. ಆದರೆ ನೋವು ಅಧಿಕವಾಯಿತು. ಎದ್ದು ರಾಜಪೀಠದ ಮ್ಯಾಲೆ ಕುಳಿತ. ಅವರೆಲ್ಲ ಎದುರಿಗೆ ನಿಂತಿದ್ದಾರೆಂಬಂತೆ ಸ್ಪಷ್ಟವಾಗಿ ಶಬ್ದಗಳನ್ನು ಹಲ್ಲಿನಿಂದ ಚಚ್ಚಿದಂತೆ ಹೇಳಿದ:

“ಬೇರೆಯವರಿಗೆ ಮೋಸ ಮಾಡುವ ಮಾತು ಆಮೇಲೆ. ನಿಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದರೆ ಅದು ಹೆಚ್ಚು ಅಪಾಯಕಾರಿ. ಅದಕ್ಕಿಂತ ಭಯಂಕರ ಅಪಾಯಕಾರಿ ಯಾವುದಪ್ಪಾ ಅಂದರೆ ನಮಗೆ ನಾವೇ ಮೋಸ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸಂಗತಿ ಇದೆಯಲ್ಲ, ಅದು ಕಣ್ರಯ್ಯಾ!”-ಎಂದು ಹೇಳಿ ಆಮೇಲೆ ಎರಡೂ ಮುಷ್ಠಿಗಳನ್ನ ಬಿಗಿದು ಮೊಳಕಾಲುಗಳ ಮೇಲೆ ಕೋಪದಿಂದ ಗುದ್ದಿಕೊಳ್ಳುತ್ತ “ಆತ್ಮಹತ್ಯೆಯಿಂದ ಮಾನವ ಕುಲವನ್ನೇ ನಾಶಮಾಡುತ್ತಿದ್ದೇವೆ; ಗೊತ್ತೇನ್ರಯ್ಯಾ? ಇದಕ್ಕೆ ನಾನೊಬ್ಬ ಯಾಕೆ? ನೀವೆಲ್ಲರೂ ಅಪರಾಧಿಗಳೇ!” ಎಂದು ಕಿರಿಚಿ ಹೇಳಿದ.

ಆಮೇಲೆ ಮಹಾರಾಜ ಭಯಂಕರ ಮೌನದಲ್ಲಿ ಮುಳುಗಿಬಿಟ್ಟ!