ಯುವರಾಜನ ನೇಮಕಾತಿಯಾಗದೆ ಮಹಾರಾಜನ ಮರಣವಾಗಿ ರಾಜ್ಯದಲ್ಲಿ ಒಂದು ಶೂನ್ಯ ಸ್ಥಿತಿ, ನಿರ್ಮಾಣವಾದುದು ನಿಜ. ಹಾಗಂತ, ನೆರೆಹೊರೆ ರಾಜರಾಗಲಿ, ಮಾಂಡಳಿಕರಾಗಲಿ, ‘ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯ’ ಒದಗಿತೆಂದು ಎಂದು ನಿಲ್ಲಲಿಲ್ಲ. ಯಾಕಂತಿರೋ, ಮಹಾರಾಜನಿದ್ದಾಗಲೂ ಈಗಲೂ ರಾಜ್ಯಭಾರ ನೋಡಿಕೊಳ್ಳುವವನು ಪ್ರಧಾನಿ ಅರ್ಥಕೌಶಲನೇ ಆಗಿರುವುದರಿಂದ ಅವನೇ ಏನಾದರೊಂದು ವ್ಯವಸ್ಥೆ ಮಾಡುತ್ತಾನೆಂದು, ಅವನಿಗೆ ಆಗಿಬರದ ವರ್ತಕರು ಕೂಡ ಬಾಯಿ ಹೊಲಿದುಕೊಂಡಿದ್ದರು.

ಅರ್ಥಕೌಶಲ ಜಾಣರ ಜಾಣ. ‘ನೀವು ಗಳಿಸುವ ಪ್ರತಿಯೊಂದು ಕಾಸಿಗೆ ಒಬ್ಬ ಕಳ್ಳನಿರುತ್ತಾನೆ ’ಎಂದು ಹೆದರಿಸಿ ವರ್ತಕರಿಗೆ ರಾಜನ ಅಗತ್ಯವನ್ನ, ಹಣವಿಲ್ಲದೆ ರಾಜ್ಯವಿಲ್ಲ, ವರ್ತಕನಿಲ್ಲದೆ ಹಣವಿಲ್ಲ ಎಂದು ರಾಜನಿಗೆ ವರ್ತಕರ ಅಗತ್ಯವನ್ನು ಮನದಟ್ಟು ಮಾಡಿಕೊಟ್ಟು ಇಬ್ಬರೂ ಸದಾ ಒಂದಾಗಿರುವಂತೆ ವ್ಯವಸ್ಥೆ ಮಾಡಿದ್ದ! ಯುದ್ಧವಿಲ್ಲದ ರಾಜ್ಯದಲ್ಲಿ ವರ್ತಕ ಬದುಕೋದುಂಟೆ? ಎಂದು ರಾಜನಿಗೆ ಹೇಳಿ ಯುದ್ಧಕ್ಕೆ ಪ್ರಚೋದನೆ ಕೊಟ್ಟು ಎಲ್ಲರ ಮಧ್ಯೆ ಒಂದು ಸಮತೋಲನ ಕಾದಿಟ್ಟುಕೊಂಡದ್ದು ಅವನ ಜಾಣ್ಮೆ. ಕೊಂಚದಲ್ಲಿ ಅವನ ಹಿನ್ನೆಲೆ ಅರಿತು ಇಂದಿನ ಇತಿಹಾಸಕ್ಕೆ ಪ್ರವೇಶಿಸೋಣ.

ಅರ್ಥಕೌಶಲನ ಮುತ್ತಾತ ಬಯಲು ಸೀಮೆಯಿಂದ ಒಂದು ಗುಡ್ಡ, ಒಂದು ಬಯಲು ದಾಟಿ, ತಾವರೆಕೆರೆ ಕಳೆದು ಗಟ್ಟದೀಚೆಯ ಕನಕಪುರಿಗೆ ವ್ಯಾಪಾರಕ್ಕಾಗಿ ಬಂದ. ಕನಕಪುರಿ ನೆರಳಿಗೆ ಹಿತಕರ, ನೀರಿಗೆ ಅನುಕೂಲಕರ ಜಾಗವೆಂದು ಇಲ್ಲಿಯೇ ನೆಲೆಸಿ ಬೆಳೆದ. ತಂದೆಗಿಂತ ಮಗ, ಮಗನಿಗಿಂತ ಮೊಮ್ಮಗ ದೊಡ್ಡವರಾಗಿ ಶ್ರೀಮಂತರಾಗಿ ಅರ್ಥಕೌಶಲನ ಕಾಲಕ್ಕೆ ಪ್ರಧಾನಿಯಾಗುವಷ್ಟರ ಮಟ್ಟಿಗೆ ಆ ಕುಟುಂಬ ಪ್ರಭಾವಶಾಲಿಯಾಗಿ ಬೆಳೆದಿತ್ತು. ಪಾರಂಪರಿಕ ಶ್ರೀಮಂತಿಕೆಯಿಂದ ಮಾತ್ರವಲ್ಲ ಅರ್ಥಕೌಶಲ ತನ್ನ ದೊಡ್ಡ ತಲೆಯ ಬುದ್ಧಿವಂತಿಕೆಯಿಂದಲೂ ಅತಿ ಶ್ರೀಮಂತ ವರ್ತಕನಾದ. ರಾಜನಿಷ್ಠೆಯಿಂದ ಅರಮನೆಯಲ್ಲಿ ಪ್ರಭಾವ ಬೆಳೆಸಿಕೊಂಡು ಪ್ರಧಾನಿಯಾದ. ಸುಮಾರು ಐವತ್ತು ವರ್ಷ ವಯಸ್ಸಿನ ಆತ ಸದೃಢನಾಗಿದ್ದ. ನಗೆಮಾರಿ ಮುಖದಲ್ಲಿರುವ ಹೊಳಪುಳ್ಳ ಕಣ್ಣುಗಳಲ್ಲಿ ಕರುಣೆಯುಳ್ಳವನಾಗಿದ್ದ. ಹೆಣ್ಣುಗಳನ್ನು ಕೆಣಕುವ, ಸ್ನೇಹಿತರ ಅಸೂಯೆಗೆ ಕಾರಣವಾಗುವ ಯಾವುದೋ ಒಂದು ವಿಶೇಷ ಗುಣ ಆ ಕಣ್ಣುಗಳಲ್ಲಿತ್ತು. ಒತ್ತಿ ಬಂದ ಎರಡೂ ಕೆನ್ನೆಗಳ ನಡುವೆ ತುಟಿಗಳು ಹಿಸುಕಲ್ಪಟ್ಟು ತುಸು ಮುಂದೆ ಬಂದಿದ್ದುವಾದರೂ ಬಾಯಿ ತೆರೆದಾಗ ಕಾಣುವ ಶುಭ್ರವಾದ ಹಲ್ಲುಗಳು ಮಾತ್ರ ಬಹಳ ಚಂದಾಗಿದ್ದವು. ಅವನ ಮಾತನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಅಲ್ಲದೆ ಮಾತಾಡುವಾಗ ಹುಬ್ಬು ಕುಣಿಸುತ್ತ ಹಣೆಯನ್ನು ಅಗಲಿಸಿ ಸಂಕುಚಿತಗೊಳಿಸಿ ಮಾತನಾಡುತ್ತಿದ್ದುದರಿಂದ ಅವನ ಮಾತಿಗೊಂದು ನಾಟಕೀಯವಾದ ರಂಗೇರುತ್ತಿತ್ತು. ಇವು ಎಲ್ಲರೂ ಅವನ ಮಾತುಗಾರಿಕೆಯನ್ನು ಮೆಚ್ಚೋದಕ್ಕೆ, ಹೆಂಗಳೆಯರು ಮನಸೋಲುವುದಕ್ಕೆ ಕಾರಣವಾಗಿದ್ದವು. ತಾನು ನಕ್ಕಾಗ ಚಂದ ಕಾಣುವುದು ಗೊತ್ತಾಗಿಯೇ ಸದಾ ನಗುತ್ತ ಮಾತಾಡುವ ಚಾಳಿಯನ್ನು ಬೆಳೆಸಿಕೊಂಡಿದ್ದ.

ಅವನ ನಗೆಮುಖದ ಸರಸ, ಹಾವಭಾವ ಮತ್ತು ರಸಿಕತೆಗೆ, ಇಂಥದನ್ನೇ ಅಪೇಕ್ಷಿಸುವ ಬೆಡಗಿ ಮಹಾರಾಣಿ ಗುಪ್ತವಾಗಿ ಒಲಿದದ್ದು ಹೆಚ್ಚಲ್ಲ. ಈ ವಿಷಯದಲ್ಲಿ ಅವನಿಗೆ ಆಗಿಬರದ, ಪ್ರೀತಿ ಮತ್ತು ಗಳಿಕೆಯಲ್ಲಿ ಇವನೊಂದಿಗೆ ಸ್ಪರ್ಧಿಸಿ ಸೋತ ಅಸೂಯಪರರು ಬೇಕಾದಷ್ಟು ಜನ ಸರೀಕ ವರ್ತಕರಿದ್ದರು. ಆದರೆ ಅವನ ಶತ್ರುಗಳು ಕೂಡ ಅವನ ರಾಜನಿಷ್ಠೆಯನ್ನ ಹೊಗಳುತ್ತಿದ್ದರು.

ಅವನ ರಾಜನಿಷ್ಠೆ ಕಿಂಚಿತ್ತೂ ಕೆಸರಿಲ್ಲದ್ದು, ಸಂಶಯಾತೀತವಾಗಿ ಪ್ರಾಮಾಣಿಕವಾದದ್ದು. ಆದ್ಯತೆಯ ವಿಷಯ ಬಂದರೆ ಅರಮನೆಯ ಹಿತ ಮೊದಲು, ನಂತರ ಸ್ವಂತ ಹಿತ; ಆಮೇಲೆ ಉಳಿದೆಲ್ಲ ಆಗಬೇಕು. ಪ್ರಸಂಗ ಬಂದರೆ ಅರಮನೆಗೋಸ್ಕರ ಸ್ವಂತ ಸುಖವನ್ನೂ ತ್ಯಾಗ ಮಾಡಿಯಾನು. ಇಷ್ಟು ವರ್ಷ ಅರಮನೆಯ ಹಣ ಮತ್ತು ಮರ್ಯಾದೆಗಳನ್ನು ಆತ್ಮಸಾಕ್ಷಿಯಾಗಿ ಕಾಪಾಡಿಕೊಂಡು ಬಂದವನು, ಶ್ರೀಮಂತಿಕೆಯಲ್ಲಿ ಹತ್ತರಲ್ಲಿ ಹನ್ನೊಂದನೆಯದಾಗಿದ್ದ ರಾಜ್ಯವನ್ನು ಮೊದಲ ಸ್ಥಾನಕ್ಕೇರಿಸಿದವನು! ಮಹಾರಾಣಿಯೇ ಅವನವಳಾಗಿರುವಾಗ ಅರಮನೆಗೆ ನಿಷ್ಠನಾಗದೇನು ಮಾಡಿಯಾನು? ಎಂದು ಆಗದವರು ಕದ್ದಾಡುವುದೂ ಇದೆ. ಅವನ ವ್ಯಕ್ತಿತ್ವದ ವಿಷಯವಾಯಿತಲ್ಲ, ಈಗ ಪ್ರಸ್ತುತಕ್ಕೆ ಬನ್ನಿರಿ:

ಯುವರಾಜನನ್ನು ಬಿಡಿಸಿ ತಂದು ಈ ಒಂದೂವರೆ ವರ್ಷದಲ್ಲಿ ಕನಕಪುರಿಯ ಆತ್ಮಸ್ಥೈರ್ಯ ಕುಸಿದು ಹೋಗಿತ್ತು. ಯುವರಾಜನ ವಿಲಾಸದ ಹವ್ಯಾಸಗಳಾಗಲಿ, ಬೇಲಿಯಿಲ್ಲದ ಬದುಕಿನ ಶೈಲಿಯಾಗಲಿ ಬದಲಾವಣೆಯಾಗಿರಲಿಲ್ಲ. ಇದೇ ಕಾರಣವಾಗಿ ಯುವರಾಜನಿಗೆ ಧನಪಾಲನ ಸ್ನೇಹವಾಗಿದೆಯೆಂದು ತಿಳಿದಾಗ ಪ್ರಧಾನಿ ಗಾಬರಿಯಾದ.

ದನಪಾಲ ದೊಡ್ಡ ಶ್ರೀಮಂತನೇನೋ ನಿಜ. ಅರ್ಥಕೌಶಲ ಮತ್ತು ಧನಪಾಲ ಇಬ್ಬರೂ ಸ್ಪರ್ಧಿಗಳು; ಶ್ರೀಮಂತಿಕೆಯಲ್ಲಿ ಮತ್ತು ಅಧಿಕಾರ ಗ್ರಹಣದಲ್ಲಿ ಅರ್ಥಕೌಶಲ ಮುಂದಿದ್ದ. ಆದರೆ ಧನಪಾಲ ಶ್ರೀಮಂತಿಕೆಯಲ್ಲಿ ಬಹಳ ಮುಂದಿದ್ದ. ಕನಕಪುರಿಯಲ್ಲಿಯ ಮೂರು ಜೂಜಾಟದ ಮಳಿಗೆಗಳಲ್ಲಿ ಮುಖ್ಯವಾದ ಎರಡನ್ನು ಅವನೇ ನಡೆಸುತ್ತಿದ್ದ. ವಿಷಕನ್ಯೆಯರನ್ನು ತಯಾರು ಮಾಡಿ ರಾಜರಿಗೆ ಮಾರುತ್ತಿದ್ದ. ಇದೇ ಕಾರಣವಾಗಿ ಚಂಡೀದಾಸ ಅವನ ಸ್ನೇಹಿತನಾಗಿದ್ದ. ಇಬ್ಬರ ಬಗೆಗೂ ಅರಮನೆಗೆ ಸದಭಿಪ್ರಾಯ ಇರಲಿಲ್ಲ. ಧನಪಾಲನಂತೂ ಅರ್ಥಕೌಶಲ ತನ್ನ ಪರಮಶತ್ರುವೆಂದೇ ಭಾವಿಸಿದ್ದ. ತನ್ನ ಅಭ್ಯುದಯಕ್ಕೆ ಅಡ್ಡಗಾಲು ಹಾಕುವಾತ ಇವನೇ ಎಂದು ನಂಬಿದ್ದ.

ಇದನ್ನು ತಿಳಿದ ಪ್ರಧಾನಿ ಅರಮನೆಯ ಸಂಪರ್ಕಕ್ಕೆ ಧನಪಾಲ ಬಾರದ ಹಾಗೆ ಸರ್ಪಗಾವಲು ಹಾಕಿ ಕಾಯುತ್ತಿದ್ದ. ಮಹಾರಾಜನಿರುವತನಕ ಕಾಪಾಡಿಕೊಂಡೂ ಇದ್ದ. ಆದರೆ ಚಂಚಲಚಿತ್ತದ ಯುವರಾಜನ ಬಗ್ಗೆ ಆ ನಂಬಿಕೆ ಇರಲಿಲ್ಲ.

ಧನಪಾಲ ಎತ್ತರದ ಆಕೃತಿಯ, ಬೋಳುದಲೆಯ ಮಧ್ಯವಯಸ್ಸಿನ ಕುಳ. ಮುಖ ಕಪ್ಪಗಿದ್ದರೂ ತುಂಬಿಕೊಂಡು ಹೊಳೆಯುತ್ತಿತ್ತು. ಸಡಿಲು ಅಂಗಿ ದರಿಸುತ್ತಿದ್ದ. ಕತ್ತಿನಲ್ಲಿ ಸದಾ ಹೆಬ್ಬೆರಳು ಗಾತ್ರದ ಚಿನ್ನದ ಸರ, ಹತ್ತೂ ಬೆರಳಿಗೆ ಹತ್ತು ಹರಳಿನುಂಗುರು ಧರಿಸುವ ಶೋಕಿಯವ. ಮಾತಿಗೊಮ್ಮೆ ನಗುತ್ತಿದ್ದನಾದ್ದರಿಂದ ಮತ್ತು ಹಾಗೆ ನಕ್ಕಾಗೊಮ್ಮೆ ಕಣ್ಣು ಸಂಕೋಚಗೊಳ್ಳುತ್ತಿದ್ದುದರಿಂದ ಅವನು ಚೇಷ್ಟೆ ಮಾಡುತ್ತಿದ್ದಾನೋ, ನಿಜ ಹೇಳುತ್ತಿದ್ದಾನೋ ಎಂದು ತಿಳಿಯುತ್ತಿರಲಿಲ್ಲ. ಇತರರ ಸಾಮರ್ಥ್ಯಗಳನ್ನು ಮೆಚ್ಚುವಂತೆ ಅಭಿನಯಿಸಬಲ್ಲವನಾದರೂ ಲಾಭವಿಲ್ಲದೆ ಯಾರನ್ನೂ ಓಲೈಸಿದವನಲ್ಲ. ಇದೆಯೆಂದಾದರೆ ದಾಸನಂತೆ ಹಲ್ಲುಗಿಂಜಬಲ್ಲಾತ. ಅರಮನೆಯಲ್ಲಿ ಆತನಿಗೆ ಪ್ರವೇಶವಿರಲಿಲ್ಲ, ನಿಜ. ಆದರೆ ಅರಮನೆಯೆಂದರೆ ಅರ್ಥಕೌಶಲ ಮತ್ತು ಮಹಾರಾಣಿ-ಇಬ್ಬರೇ ಅಲ್ಲವಲ್ಲ. ರಾಜಕುಮಾರನೂ ಇದ್ದ!

ರಾಜಕುಮಾರನಿಗೆ ಮಹಾರಾಜ ತನ್ನನ್ನು ಯುವರಾಜನನ್ನಾಗಿ ಮಾಡಲಿಲ್ಲವೆಂಬ ಕೊರಗು ಇದ್ದೇ ಇತ್ತು. ಅವನ ಮುಖದಲ್ಲಿದ್ದ ಚಿಂತೆಯ ಗೆರೆ ಅದೊಂದೇ. ಧನಪಾಲನಿಗೆ ಇಷ್ಟು ಸಾಕಲ್ಲ! ವಿಲಾಸಿನಿಯೊಬ್ಬಳ ಮನೆಯಲ್ಲಿ ರಾಜಕುಮಾರ ಸಿಕ್ಕೊಡನೆ ಹೋದವನೇ “ಮಹಾರಾಜರಿಗೆ ಜಯವಾಗಲೆಂದು” ಅಂಡೆತ್ತಿ, ಬಾಗಿ ನಮಸ್ಕರಿಸಿದ. ರಾಜಕುಮಾರ ಅಚ್ಚರಿಯಿಂದ ನಿಂತರೆ “ತಾವೇ ನಮ್ಮ ಮುಂದಿನ ಮಹಾರಾಜರು!” ಎಂದ. ವರ್ತಕಸಂಘದ ಅಧ್ಯಕ್ಷನ ಈ ಮಾತು ಕೇಳಿ ರಾಜಕುಮಾರನ ತಲೆ ತಿರುಗಿತು.

ಊರ ಹೊರಗಿನ ತನ್ನ ವಿಲಾಸಿ ಮಂದಿರಕ್ಕೆ ಕರೆದೊಯ್ದ. ಊಟಕ್ಕಿಂತ ಮುಂಚೆ ಕುಯ್ಯಲಿರುವ ಕೋಳಿಯ ಜೊತೆ ಆಟವಾಡುವುದು ರಾಜಕುಮಾರನ ಹವ್ಯಾಸ. ಉದ್ದಕೋಲಿನಿಂದ ಚುಚ್ಚಿ, ಅವು ಒದರಿದರೆ-ಆ ದನಿಯನ್ನು ಅನುಕರಿಸಿ ಕೊಲ್ಲುವುದು. ಧನಪಾಲ ನಾಲ್ಕು ಕೋಳಿಬಿಟ್ಟಿ ಮೆಚ್ಚಿ ನಗಾಡುವುದಕ್ಕೆ ವಿಲಾಸಿನಿಯರ ಜೊತೆಗೆ ತನ್ನ ಕುಮಾರಿಯರನ್ನೂ ಬಿಟ್ಟ!

ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಯುವರಾಜನನ್ನು ಕಾಯುತ್ತಿದ್ದ ಅರ್ಥಕೌಶಲನಿಗೆ ಅವನ ಕಣ್ಣು ತಪ್ಪಿಸಿ ಧನಪಾಲನೊಂದಿಗೆ ಸಲಿಗೆ ಬೆಳೆಸಿರುವುದು ಆಘಾತಕಾರಿ ವಿಷಯವಾಗಿತ್ತು. ಇದಕ್ಕೆ ಶಿಖರಸೂರ್ಯನ ಪರೋಕ್ಷ ಪ್ರೋತ್ಸಾಹವೂ ಇದ್ದಿತೆನ್ನುವುದನ್ನು ಹೇಳಿದ್ದೇವೆ. ಆದರೆ ಧನಪಾಲನಾಗಲೇ ಪ್ರಧಾನಿಯ ಲೆಕ್ಕಗಳನ್ನು ತಲೆಕೆಳಗೆ ಮಾಡಿಬಿಟ್ಟಿದ್ದ. ತನ್ನಿಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಯುವರಾಜನಿಗೆ ಕೊಟ್ಟು ಅರಮನೆಯ ಬೀಗನಾಗುವ ಹುನ್ನಾರಿನಲ್ಲಿದ್ದ! ಯುವರಾಜನಿಗೆ ತನ್ನ ಕುಮಾರಿಯರನ್ನು ಪರಿಚಯಿಸಿ ಸಲಿಗೆ ಬೆಳೆಯುವಂತೆ ಮಾಡಿದ್ದ. ಆದರೆ ಚಂಡೀದಾಸನಿಗೆ ಈ ಸಂಬಂಧ ಒಪ್ಪಿಗೆಯಿರಲಿಲ್ಲ. ಧನಪಾಲನಿಗೆ ಹೇಳಲಾರದ ಗುಟ್ಟೊಂದನ್ನು ಬಚ್ಚಿಟ್ಟುಕೊಂಡು,

“ಯುವರಾಜನ ಚಂಚಲ ಸ್ವಭಾವವನ್ನು ಕಂಡ ಮೇಲೂ ಹಿಂಗಾಡುತ್ತೀಯಲ್ಲ ಮಾರಾಯಾ, ಕೊಂಚ ನಿಧಾನ ಮಾಡು. ನಿನ್ನ ಅವಸರದಲ್ಲಿ ಮಕ್ಕಳ ಜೀವನ ಹಾಳಾಗಬಾರದಲ್ಲ.”

-ಎಂದೂ ತಾಕೀತು ಮಾಡಿದ್ದ.

“ಇನ್ನೆಂಥ ನಿಧಾನವೋ ಚಂಡಿ? ಹಕ್ಕಿ ಸಿಕ್ಕಾಗಲೇ ಹಿಡಿಯೋದು ಬಿಟ್ಟು ಮುಹೂರ್ತಕ್ಕಾಗಿ ಕಾಯುತ್ತಾರೆಯೇ”

-ಎಂದು ವಾದಿಸಿದ್ದ ಧನಪಾಲ. ‘ತಪ್ಪಿಸಲಾರದ್ದನ್ನು ತಪ್ಪಿಸಲು ನಾನ್ಯಾರು?’ ಎಂದುಕೊಂಡು ಚಂಡೀದಾಸನೂ ಸುಮ್ಮನಾಗಿ ಊರು ಬಿಟ್ಟಿದ್ದ.

ಇಂಥ ಯುವರಾಜನ ಬೆನ್ನು ಹತ್ತಿ ನಾವು ಬೇರೆ ರಾಜ್ಯಗಳನ್ನ ದೋಚುವುದಿರಲಿ ಇದ್ದುದನ್ನು ಕಾಪಾಡಿಕೊಂಡು ಹೋಗುವುದೇ ಕಷ್ಟವಾಗಿದೆಯೆಂದು ವರ್ತಕರು ಬಹಿರಂಗದಲ್ಲೇ ಆಡಿಕೊಳ್ಳುವಂತಾಗಿತ್ತು. ತೆರಿಗೆ ಸಂಗ್ರಹ ಕಡಿಮೆಯಾಗಿತ್ತು. ಆದಾಯವಿಲ್ಲದೆ ತೆರಿಗೆ ಎಲ್ಲಿಂದ ಕೊಡೋಣವೆಂದು ಶ್ರೀಮಂತ ವರ್ತಕರೇ ಕೇಳುತ್ತಿದ್ದರು. ಮಹಾರಾಜ ಸ್ವರ್ಗಸ್ಥನಾಗಿ ಒಂದು ತಿಂಗಳು ಕಳೆದರೂ ಯುವರಾಜನ ಪಟ್ಟವಾಗಿರಲಿಲ್ಲ. ಪಟ್ಟಾಭಿಷೇಕಕ್ಕೆ ಚಿನ್ನ ಇಲ್ಲವೆ ಹಣ ಕಕ್ಕಬೇಕಾದವರು ವರ್ತಕರೇ ತಾನೆ? ಯುವರಾಜ ರಾಜನಾದರೆ ಕಕ್ಕಿದ ಚಿನ್ನ ವಾಪಸಾದೀತೆಂದು ಯಾವ ಭರವಸೆಯಿದೆ? ಸಧ್ಯ ಗಳಿಸಿದಷ್ಟನ್ನು ಸಕಾಲ ಬರುವತನಕ ಉಳಿಸಿಕೊಂಡು ಹೋದರೆ ಸಾಕೆಂದು ಕೆಲವರೆಂದರೆ ಇನ್ನು ಕೆಲವರು ಜೂಜಾಡಿ ಸೋತೋ ಗೆದ್ದೋ ಕಾಲಹರಣ ಮಾಡುತ್ತಿದ್ದರು.

ಯುವರಾಜನನ್ನು ಯಾರು ಅಪಹರಿಸಿದರೆಂಬ ಬಗ್ಗೆಯೂ ಜನ ಬಹಿರಂಗವಾಗಿಯೇ ಚರ್ಚಿಸುತ್ತಿದ್ದರು: ‘ಬಿಳಿಗಿರಿರಾಯನ ಬಳಿ ಯುವರಾಜ ಇರಲಿಲ್ಲವಂತೆ’ದಿಂದ ಹಿಡಿದು ರಾಜವೈದ್ಯನೇ ಮಂಕು ಮರಳು ಮಾಡಿ ಯುವರಾಜನನ್ನು ಎಲ್ಲಿಂದಲೋ (ಅಂದರೆ ಅದೆಲ್ಲಿಂದ?) ಕರೆತಂದನೆಂಬುವವರೆಗೆ ಸುದ್ದಿಗಳು ಹಬ್ಬಿದ್ದವು. ಪ್ರಧಾನಿಯ ಬೇಹುಗಾರರು ತಂದ ಮಾಹಿತಿಗಳಂತೂ ಹೆಚು ಕಡಿಮೆ ಶಿಖರಸೂರ್ಯನ ಕಡೆಗೇ ಬೆರಳು ಮಾಡಿದ್ದವು. ಈ ಬಗ್ಗೆ ಯುವರಾಜನನ್ನು ಕೇಳಿದರೆ:

“ಕನಕಪುರಿಯ ಕಾಡಿನಲ್ಲಿ ನನ್ನ ಕಣ್ಣು ಬಾಯಿ ಕಟ್ಟಿ ಎಲ್ಲಿಗೋ ಒಯ್ದರು. ಎಲ್ಲಿಟ್ಟರೆಂದು ತಿಳಿಯದು. ಅದೊಂದು ಒಂಟಿ ಗುಡಿಸಲು. ನನ್ನನ್ನು ನೋಡಿಕೊಳ್ಳಲು ಇಬ್ಬರು ಧಡಿಯರಿದ್ದರು. ಯಾವಾಗಲೂ ನನ್ನ ಕೈ ಕಾಲು ಕಟ್ಟಿ ಚೆಲ್ಲಿರುತ್ತಿದ್ದರು. ಮಾತಾಡಲು ಬಾಯಿ ತೆರೆದರೆ ಸಾಕು ಒದೆಯುತ್ತಿದ್ದರು. ಅವನ ವಿನಾ ಇನ್ನೊಬ್ಬರ ಮುಖವನ್ನು ನಾನು ನೋಡಲೇ ಇಲ್ಲ. ಆಮೇಲೆ ಪುನಃ ಕಣ್ಣು ಕಟ್ಟಿ ಇನ್ನೆಲ್ಲೋ ಚೆಲ್ಲಿದರು. ಕಣ್ಣು ತೆರೆದಾಗ ಸುತ್ತಲೂ ನಮ್ಮ ಭಂಟರಿದ್ದರು.”

ಒಂದೆರಡು ಬಾರಿ ಈ ಸುದ್ದಿಗಳನ್ನು ಹೇಳಿ ಶಿಖರಸೂರ್ಯನ ಪ್ರತಿಕ್ರಿಯೆ ತಿಳಿಯಲು ಅರ್ಥಕೌಶಲ ಪ್ರಯತ್ನಿಸಿದನಾದರೂ ಆತ ಬಾಯಿ ಬಿಟ್ಟಿರಲಿಲ್ಲ. ಚಾಡಿಯ ಮೌಖಿಕ ಬೆಲೆ ತಿಳಿದು ‘ಪ್ರಧಾನಿಯೇ ಮಾಡಿಸಿರಬಹುದೇ?’ ಅಂತ ಕೆಲವರು ಅಂತಿದ್ದಾರೆಂಬ ಸುದ್ದಿಯನ್ನು ಹಬ್ಬಿಸಲು ಶಿಖರಸೂರ್ಯ ಪ್ರಯತ್ನಿಸಿದ. ಎಷ್ಟೇ ಚಾಣಾಕ್ಷನಿದ್ದರೂ ಅರ್ಥಕೌಶಲನಿಗೂ ಕನಕಪುರಿಯಲ್ಲಿ ಶತ್ರುಗಳಿದ್ದರು. ಈ ಚಾಡಿಯನ್ನವರು ನಂಬಿದರು ಎನ್ನುವುದಕ್ಕಿಂತ ಇಷ್ಟಪಟ್ಟರೆಂದು ಹೇಳುವುದೇ ಸೂಕ್ತ.

ಕೊನೆಗೆ ಈ ಎಲ್ಲ ಗೊಂದಲಗಳ ಹತಾಶೆ, ನಿರಾಸೆಗಳ ತೋರುಬೆರಳು ತನ್ನನ್ನೇ ತೋರಿಸುತ್ತವೆಂದು, ಇವೆಲ್ಲ ಒಂದು ದಿನ ತನಗೇ ಉರುಲಾಗುವುದೆಂದು ಶಿಖರಸೂರ್ಯನಿಗೆ ಯಾವಾಗ ಖಾತ್ರಿಯಾಯಿತೋ ಆವಾಗ ಗಾಬರಿಯಾದ. ತನ್ನ ಬಳಿಯಿದ್ದ ಒಟ್ಟು ಆರು ಕಡಾಯಿ ಚಿನ್ನಕ್ಕೆ ಧಕ್ಕೆ ಬಾರದ ಹಾಗೆ, ಯಾರಿಗೂ ಸಂದೇಹವೂ ಬಾರದ ಹಾಗೆ ಬದೆಗನೇ ರಾಜಕುಮಾರನನ್ನು ಅಪಹರಿಸಿರಬಹುದೆಂದು ವಿಶ್ವಾಸವಾಗುವಂತೆ ಗುಪ್ತದಲ್ಲಿ ಪ್ರಧಾನಿಗೆ ಹೇಳಿ ಕೈ ತೊಳೆದುಕೊಂಡು ಬಿಟ್ಟ!

ಇದ್ದಕ್ಕಿದ್ದಂತೆ ಒಂದು ದಿನ ಶ್ವಾನಕೂಪಕ್ಕೆ ಬರಬೇಕೆಂದು ಪ್ರಧಾನಿ ಸೇವಕನಿಂದ ಹೇಳಿ ಕಳಿಸಿದ. ಶಿಖರಸೂರ್ಯನಿಗೆ ಆ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ “ಶ್ವಾನಕೂಪಕ್ಕೆ ವೈದ್ಯನನ್ನು ತಳ್ಳಿದರೆ ಹ್ಯಾಗಾದೀತು!” ಎಂದೊಮ್ಮೆ ಮಹಾರಾಣಿ ತನ್ನ ವಿಕೃತ ಊಹೆಯನ್ನು ಹೇಳಿ ಕಣ್ಣಗಲಿಸಿದ್ದ ಸುದ್ದಿಯನ್ನು ತಿಳಿದಿದ್ದ. ಆಗಲೇ ರಾಜವೈದ್ಯ ಮಹಾರಾಣಿ ಮತ್ತವಳ ಅರಮನೆಯ ದೃಷ್ಟಿಯಲ್ಲಿ ತನ್ನ ಸ್ಥಾನಮಾನಗಳೇನೆಂಬುದನ್ನು ತೂಗಿ ಅಳತೆ ಮಾಡಿಕೊಂಡಿದ್ದ. ಇದೇ ಕಾರಣಕ್ಕಾಗಿ ಅದನ್ನೊಮ್ಮೆ ನೋಡಬೇಕೆಂದು ಹೋದ.

ಬೇರೆ ರಾಜ್ಯಗಳಲ್ಲಿ ಮನರಂಜನೆಗೆ ಕುಸ್ತಿ, ದ್ವಂದ್ವಯುದ್ಧ, ಬಗೆಬಗೆಯ ಪಂದ್ಯಾವಳಿಗಳಿರುವಂತೆ ಕನಕಪುರಿಯವರಿಗೆ ಶ್ವಾನಕೂಪದ ಆಟ ವಿಶೇಷ ಮನರಂಜನೆಯಾಗಿತ್ತು. ಚಿಕ್ಕಮ್ಮಣ್ಣಿ ಆಟದ ಬಗ್ಗೆ ಕೇಳಿ ಭಯದಿಂದ ಬಿಳಿಚಿಕೊಂಡು ನಡುಗಿದ್ದಳಾದ್ದರಿಂದ ಶ್ವಾನಕೂಪಕ್ಕೆ ಬರುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಅವಳನ್ನು ಕರೆಯುತ್ತಲೂ ಇರಲಿಲ್ಲ. ಆದರೆ ಮಹಾರಾಣಿ ಹಾಗಲ್ಲ. ಶ್ವಾನಕೂಪಕ್ಕೆ ತಳ್ಳಿ ನಾಯಿಗಳನ್ನು ಛೂ ಬಿಡುವ ಕಾರ್ಯಕ್ರಮವನ್ನಂತೂ ಮಹಾರಾಣಿ ಮಾತ್ರವಲ್ಲದೆ ರಾಜ, ಪ್ರಧಾನಿ ಮತ್ತು ಕನಕಪುರಿಯ ಪ್ರತಿಷ್ಠಿತರು ಕೂಡ ಇಷ್ಟುಪಟ್ಟು ನೋಡುತ್ತಿದ್ದರು. ಎಲ್ಲರೂ ಎಲ್ಲರಿಗೂ ಕೇಳಿಸುವಂತೆ ಚಪ್ಪಾಳೆ ತಟ್ಟಿ ನಗುತ್ತ, ಕೇಕೆ ಹಾಕುತ್ತ ನಾಯಿಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಅಲ್ಲದೆ ಆ ಆಟದ್ದೇ ಒಂದು ಭಾಷೆಯನ್ನು ಕಟ್ಟಿಕೊಂಡಿದ್ದರು: ಆತ (ಅಂದರೆ ಸಧ್ಯ ಬೇಟೆಯಾಡುತ್ತಿರುವ ನಾಯಿ) ಪಟ್ಟು ಹಾಕಿ ಕಚ್ಚುತ್ತಾನೆ… ರಕ್ತ ಪೋಲಾಗದಂತೆ ಹೀರುತ್ತಾನೆ, ಹಿನ್ನೆಗೆತದಿಂದ ಹಿಡಿಯುತ್ತಾನೆ. ಚೆಳ್ಳುಗುರಿನಿಂದ ಇರಿಯುತ್ತಾನೆ… ಅವನು ಅಂಜುಬುರುಕ… ಹೇತಲಾಂಡಿ… ಇತ್ಯಾದಿ. ಮಹಾರಾಣಿಯಂತೂ ತನಗೆ ಪ್ರಿಯವಾದ ನಾಯಿಗಳ ಹೆಸರು ಹಿಡಿದು ಕೂಗಿ ಕತ್ತಿಗೆ ಬಾಯಿ ಹಾಕು… ಅವಳ ತಿಗ ನೋಡಿಕೊ… ಇತ್ಯಾದಿ ಅಂದು ನಾಯಿಗಳಿಗೆ ನಿರ್ದೇಶನ ನೀಡುತ್ತಿದ್ದಳು. ನಾಯಿಗಳು ಅವಳು ಹೇಳಿದ ಹಾಗೇ ಮಾಡಿ, ಬಾವಿಯಲ್ಲಿಯ ಹೆಂಗಸು ಕಿರಿಚಿದರೆ ಇವಳು ಚಪ್ಪಾಳೆ ತಟ್ಟಿ ನಕ್ಕು ‘ಆತ ನಾನು ಹೇಳಿದಂತೆ ಕೇಳಿದ್ದರಿಂದ ಅವಳು ಬಲಿಯಾದಳು’ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಳು.

ಶ್ವಾನಕೂಪವೆಂದರೆ ಮೂವತ್ತಡಿ ವ್ಯಾಸದ, ಅಷ್ಟೇ ಆಳದ ಒಂದು ಬಾವಿ. ಕೈದಿಗಳನ್ನು ಅದರಲ್ಲಿ ತಳ್ಳಿ ನಾಯಿಗಳಿಂದ ಬೇಟೆಯಾಡಿಸುವುದೇ “ಶ್ವಾನಕೂಪದ ಆಟ” ತಳದಲ್ಲಿ ಸ್ವಚ್ಛವಾದ ಮಳಲನ್ನು ಹಾಕಿದ್ದು ಬೇಟೆಯಾಡುವ ನಾಯಿಗಳಾಗಲಿ, ಜೀವದಾಸೆಗೆ ತಪ್ಪಿಸಿಕೊಂಬ ಕೈದಿಗಳಾಗಲಿ ವೇಗವಾಗಿ ಚಲಿಸಲಾಗುತ್ತಿರಲಿಲ್ಲ. ಒಳಗಿನವರು ಗೋಡೆ ಹತ್ತಿ ಪಾರಾಗದಂತೆ ಬಾವಿಯ ಎತ್ತರ ಗೋಡೆಗಳನ್ನು ನುಣ್ಣಿಸಲಾಗಿದೆ. ತಳದಲ್ಲಿ ಬಿಲದಂಥ ಒಂದು ಕಿಂಡಿ, ಒಂದು ಬಾಗಿಲು ಇವೆ. ಅವನ್ನು ಕಬ್ಬಿಣದ ಶಲಾಕೆಯಿಂದ ಮಾಡಲಾಗಿದ್ದು, ಬಿಲದಿಂದ ನಾಯಿಗಳನ್ನೂ ಬಾಗಿಲಿನಿಂದ ಕೈದಿಗಳನ್ನೂ ಬಾವಿಗೆ ಬಿಡಲಾಗುತ್ತದೆ. ನಾಯಿ ಮತ್ತು ಕೈದಿ ಬಾವಿಗೆ ಬಂದೊಡನೆ ಎರಡರ ಕದ ಮುಚ್ಚಿ ಭದ್ರಪಡಿಸಲಾಗುತ್ತದೆ.

ಬಾವಿಯ ಸುತ್ತ ಮೇಲ್ಭಾಗದಲ್ಲಿ ಎರಡಡಿ ಎತ್ತರದ ಪೌಳಿ ಕಟ್ಟಿದ್ದು ಅದರಗುಂಟ ರಾಜ ಮತ್ತವನ ಪರಿವಾರ ಕೂರಲಿಕ್ಕೆ ಮರದ ಆಸನಗಳಿವೆ. ಉಳಿದಂತೆ ಪ್ರತಿಷ್ಠಿತ ರಸಿಕರು ಕೂರಲು ರಾಜಪರಿವಾರದ ಎದುರು ಉಳಿದವರು ಎಷ್ಟೇ ಸಂಕೋಚಗಳನ್ನು ಅಭಿನಯಿಸಿದರೂ ದೃಶ್ಯ ಕ್ರೂರ ಅಥವಾ ರಮಣೀಯವಾಗಿದ್ದಾಗ ಮಾತ್ರ ಎಲ್ಲರೂ ರಾಜನೆದುರಿನ ನಡಾವಳಿ ಮರೆತು ಉತ್ಸಾಹದಿಂದ ಕಿರುಚುತ್ತಾರೆ.

ಈ ದಿನ ಕಾರ್ಯಕ್ರಮ ಶುರುವಾಗುವ ಮುನ್ನ ಶ್ವಾನಕೂಪದ ಕಲ್ಲಿನ ಆಸನಗಳಲ್ಲಿ ಪ್ರತಿಷ್ಠಿತರು, ಮಾಂಡಳಿಕರು ಆಸೀನರಾಗಿ ರಾಜಕುಟುಂಬದ ಆಗಮನಕ್ಕಾಗಿ ಕಾಯುತ್ತಿದ್ದರು. ಕೆಲವರು ಇಂದಿನ ಬೇಟೆ ಯಾರೆಂದು ತಂತಮ್ಮಲ್ಲಿ ಚರ್ಚಿಸುತ್ತಿದ್ದರು. ಅಷ್ಟರಲ್ಲಿ ಕಹಳೆ ಮೊಳಗಿ ವಂದಿಮಾಗಧರು ಬಿರುದಾವಳಿ ಹೊಗಳಿ ಕೂತಿದ್ದವರೆಲ್ಲ ಎದ್ದು ನಿಂತರು. ಯುವರಾಜ ಮತ್ತು ಪ್ರಧಾನಿಯ ಜೊತೆಗೆ ಮಹಾರಾಣಿ ಬಂದಳು. ಅವರೊಂದಿಗೆ ಅಪರೂಪಕ್ಕೆ ಶಿಖರಸೂರ್ಯನೂ ಬಂದ. ಎದ್ದು ನಿಂತಿದ್ದವರೆಲ್ಲರೂ ಬಾಗಿ ಗೌರವ ಕೊಟ್ಟು, ಅದನ್ನು ಮಹಾರಾಣಿ ಸ್ವೀಕರಿಸಿದ ಮೇಲೆ ಕೂತರು. ಪ್ರಧಾನಿ ಶಿಖರಸೂರ್ಯನನ್ನು ತನ್ನ ಪಕ್ಕದಲ್ಲೇ ಕುಳ್ಳಿರಿಸಿಕೊಂಡ. ಇಬ್ಬರೂ ಅದು ಇದು ಮಾತಾಡುತ್ತ ಕೂತರು.

ಸ್ವಲ್ಪ ಸಮಯವಾದ ನಂತರ ಎಲ್ಲವೂ ಸಿದ್ಧವಾಗಿದೆಯೆಂದು ಸೂಚನೆ ಬಂದಮೇಲೆ ಮಹಾರಾಣಿ ಎಲ್ಲರ ಕಡೆ ಕೈ ಬೀಸಿ ತೆಂಗಿನ ಕಾಯಿ ಒಡೆದು ಸುರುಮಾಡಬಹುದೆಂದು ಅಪ್ಪಣೆ ಕೊಟ್ಟಳು. ಶ್ವಾನಕೂಪದ ತಳದಲ್ಲಿರುವ ಬಿಲದ ಬಾಗಿಲು ತೆರೆಯಿತು. ಒಳಗಿನಿಂದ ಜವಾರಿ ಹೋರಿಗಳಂಥ ಎಂಟು ಕರೀ ನಾಯಿಗಳು ಗೇಣುದ್ದ ಕೆಂಪು ನಾಲಗೆ ಚಾಚಿಕೊಂಡು ಬಾವಿಗೆ ಬಂದವು! ಎತ್ತರವಾಗಿ ಪ್ರಮಾಣಬದ್ಧ ಮೈಕಟ್ಟಿನ, ಕರಿಯ ಮಿಂಚುಗಳಂತೆ ಮಿರುಗುವ ನಾಯಿಗಳು ಸಾಣೆಹಿಡಿದ ಉಕ್ಕಿನ ನಾಯಿಗಳಂತೆ ಕಂಡವು. ಬಾವಿಯ ತುಂಬ ಅಲೆದಾಡಿ ಬೇಟೆ ಸಿಗದೆ ಪ್ರೇಕ್ಷಕರ ಕಡೆ ನೋಡಿ ಒಂದೆರಡು ಹೆಜ್ಜೆಗಳನ್ನು ಮೂಸಿ ನೋಡಿ ಬೊಗಳಿದವು. ಹಿರಿದ ನಾಲಗೆಗಳಿಂದ ಜೊಲ್ಲು ಸುರಿಸುತ್ತ ಚಂಚಲ ಕಣ್ಣುಗಳಿಂದ ಬೇಟೆಯನ್ನು ಹುಡುಕತೊಡಗಿದವು. “ಪಾದರಸದಂತೆ ನಿಂತಲ್ಲಿ ನಿಲ್ಲದೆ ಬೇಟೆ ಕಾಣದೆ ಚಡಪಡಿಸುವ ನಾಯಿಗಳನ್ನು ನೋಡುವುದೇ ಚಂದ”ವೆಂದು ಮಹಾರಾಣಿ ಕಣ್ಣಗಲಿಸಿ ಶಿಖರಸೂರ್ಯನ ಕಡೆಗೆ ನೋಡಿ ಅಂದಳು. ಪ್ರಧಾನಿ “ಹೌದು ಮಹಾರಾಣಿ” ಎಂದು ಸಮ್ಮತಿ ಸೂಚಿಸಿದ.

ಅಷ್ಟರಲ್ಲಿ ಇನ್ನೊಂದು ಬಾಗಿಲಿನಿಂದ ಹಿಂಗೈ ಕಟ್ಟಿದ, ಕಣ್ಣು, ಮುಖ ಕಾಣದಂತೆ ಮುಖಕ್ಕೆ ಬಟ್ಟೆ ಕಟ್ಟಿದ, ಸೊಂಟದ ಮೇಲೆ ಮಾತ್ರ ಬಟ್ಟೆ ಸುತ್ತಿಕೊಂಡಿದ್ದ ಒಬ್ಬ ದಾಂಡಿಗನನ್ನು ಬಾವಿಗೆ ತಳ್ಳಿ ಬಾಗಿಲಿಕ್ಕಿಕೊಂಡಿತು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಎಂಟೂ ನಾಯಿಗಳು ಕೈದಿಯ ಮೇಲೆ ಹಾರಿದವು. ಒಂದು ಅವನ ಕತ್ತಿಗೇ ಬಾಯಿ ಹಾಕಿ ಮುಖಕ್ಕೆ ಕಟ್ಟಿದ್ದ ಬಟ್ಟೆಯನ್ನು ಹರಿದು ಹಾಕಿತು. ಇನ್ನೊಂದು ಅವನ ಕೈಗೆ ಬಾಯಿ ಹಾಕಿ ಎಡಗೈ ರಟ್ಟೆಯನ್ನೇ ಹರಿದು ಹಾಕಿತು. ಮತ್ತೊಂದು ಬಾಯಿ ಹಾಕಿದಾಗ ಹಿಂಗೈ ಕಟ್ಟಿದ ಹಗ್ಗವೇ ಬಾಯಿಗೆ ಬಂದು ಕೈ ಸ್ವತಂತ್ರವಾದವು. ಅದೇ ಅವಕಾಶಕ್ಕಾಗಿ ಕಾಯುತ್ತಿದ್ದ ಕೈದಿ ತನ್ನೆದುರಿಗೆ ಹಾರಿಬಂದ ಒಂದು ನಾಯಿಯ ಎರಡೂ ಮುಂಗಾಲುಗಳನ್ನು ಹಿಡಿದು ಮುರಿದುಬಿಟ್ಟ! ಅದರ ಮುರಿದ ಸೊಟ್ಟ ಕಾಲುಗಳನ್ನೇ ಹಿಡಿದು ಇಡೀ ನಾಯಿಯನ್ನೇ ಆಯುಧದಂತೆ ಬೀಸುತ್ತ ಉಳಿದ ನಾಯಿಗಳ ಮೇಲೆ ಆಕ್ರಮಣ ಮಾಡಿ ಹೊಡೆಯತೊಡಗಿದ! ಕಾಕು ಕೇಕೆಗಳು ಮೊಳಗಿದವು. ಪ್ರೇಕ್ಷಕರು ಹೋ ಎಂದು ಮೆಚ್ಚಿಕೊಂಡು ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರಲು ಮಹಾರಾಣಿ “ಹುಲಿ ಹುಲಿ ಎಂದೊಂದು ನಾಯಿಯನ್ನು ಕರೆದು ಅವನ ಕಾಲು ಹಿಡಿ” ಎಂದು ಅಪ್ಪಣೆಯ ಕೂಗಿದಳು. ಆತ ಉರಿಯುವ ಕಂಗಳಿಂದ ಮ್ಯಾಲೆ ನೋಡಿದ. ಆಗಲೇ ಆತ ಬದೆಗನೆಂದು ಗೊತ್ತಾಗಿ, ಮಹಾರಾಣಿ ಮತ್ತು ಯುವರಾಜನನ್ನು ಬಿಟ್ಟು ಉಳಿದರೆಲ್ಲ ಸ್ತಬ್ಧರಾದರು!

ಶಿಖರಸೂರ್ಯ ತಾನೆಲ್ಲಿದ್ದೇನೆಂಬುದನ್ನೇ ಮರೆತು ಬಿಟ್ಟ. ಅವಮಾನದಿಂದ ಅವನ ಮುಖ ಕರ್ರಗಾಯಿತು. ಯುವರಾಜನನ್ನು ಕದ್ದುಕೊಂಡು ಹೋದವನು ಬದೆಗನೇ ಎಂದು ಹೇಳಿದ್ದು ತಾನೇ ಹೌದಾದರೂ ಅವನಿಗೆ ಇಂಥ ಶಿಕ್ಷೆ ಕೊಟ್ಟಾರೆಂದು ಊಹಿಸಿರಲಿಲ್ಲ. ಅಥವಾ ಇಂಥ ಶಿಕ್ಷೆ ಕೊಡುವ ಮೊದಲು ತನ್ನನ್ನೊಂದು ಮಾತು ಕೇಳಬಹುದಿತ್ತು ಎನ್ನಿಸಿ ಇರಿವ ಕಣ್ಣಿಂದ ಮಹಾರಾಣಿಯನ್ನು ನೋಡಿದ. ಇಡೀ ಅರಮನೆ ತನಗೆ ಎದುರಾಗಿದೆಯೆಂದು ಪ್ರಥಮ ಬಾರಿ ಅರಿವಾಗಿ ಬಿಟ್ಟಿತು. ಈವರೆಗಿನ ತನ್ನ ಕನಸುಗಳೆಲ್ಲ ಭ್ರಮೆಗಳೆಂದು ಗೊತ್ತಾಗಿ ಆಸನದ ಮೇಲೆ ಕುಸಿದ. ಪ್ರಧಾನಿಯನ್ನು ತಿರಸ್ಕಾರದಿಂದ ನೋಡಿ ತಕ್ಷಣ ತನ್ನನ್ನು ತಾನು ನಿಯಂತ್ರಿಸಿಕೊಂಡು ಒಣ ಮುಗುಳು ನಗೆ ಬೀರಿದ. ಉಳಿದವರು ಕೂಪದಲ್ಲಿ ನಡೆಯುತ್ತಿರುವ ಬದೆಗ ಮತ್ತು ನಾಯಿಗಳ ಹೋರಾಟ ನೋಡಿ ಆನಂದ ಪಡುತ್ತಿದ್ದರೆ ಪ್ರಧಾನಿ ಒಂದು ಕಣ್ಣಿನಿಂದ ಇವನನ್ನೇ ಗಮನಿಸುತ್ತಿದ್ದ.

ಸೇಡು ತೀರಿತೆಂದು ಯುವರಾಜ ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತ ಥೈ ಥೈ ಕುಣಿದಾಡಿದ. ವರ್ತಕರಲ್ಲಿ ಕೆಲವರು ಎದ್ದುನಿಂತು ಎರಡೂ ಕೈ ಎತ್ತಿ ಬದೆಗನ ಪರಾಕ್ರಮವನ್ನು ಮೆಚ್ಚಿ ಸ್ಪಷ್ಟ ಶಬ್ದಗಳಲ್ಲೇ ಪ್ರೋತ್ಸಾಹಿಸುತ್ತಿದ್ದರೆ ಮಹಾರಾಣಿ ನಾಯಿಗಳಿಗೆ ನಿರ್ದೇಶನ ನೀಡಿ ಪ್ರೋತ್ಸಾಹಿಸುತ್ತಿದ್ದಳು. ಬದೆಗ ಆಗಲೇ ಇನ್ನೊಂದು ನಾಯಿಯ ನಾಲ್ಕು ಕಾಲು ಹಿಡಿದೆತ್ತಿ ಗೋಡೆಗೆ ನಾಲ್ಕು ಬಾರಿ ಅಪ್ಪಳಿಸಿ ಕೊಂದು ಹಾಕಿದ್ದ. ಉಳಿದವು ಅವನ ಬಳಿ ಬರಲು ಹೆದರುತ್ತ, ಅಸಹಾಯಕತೆಯಿಂದ ಕುಂಯ್‌ಗುಡುತ್ತ ಬಿಲದ ಬಾಗಿಲ ಬಳಿ ಸೇರಿದ್ದವು. ಆಗಲೇ ಬದೆಗನೂ ರಕ್ತದ ಅತಿ ಸೋರಿಕೆಯಿಂದ ನಿಶ್ಯಕ್ತನಾಗಿದ್ದ. ಮೈತುಂಬ ರಕ್ತ ಸುರಿಯುತ್ತಿತ್ತು. ಎಡಗೆನ್ನೆ, ಎಡಗಿವಿ ಹರಿದು ಕಿವಿ ಜೋತಾಡುತ್ತಿತ್ತು. ಸೊಂಟದ ಮೇಲಿನ ಬಟ್ಟೆ ಕಳಚಿ ಬತ್ತಲಾಗಿದ್ದ. ಶಿಖರಸೂರ್ಯನ ಕಡೆಗೆ ಬೆರಳು ಚಾಚಿ “ಲೇ ನಾಯಿ ಥೂ!” ಎಂದುಗಿದು ಅವನ ಕಡೆಗೆ ಹಿಡಿ ಮಳಲನ್ನ ಎಸೆದ. ಅದು ತಪ್ಪಿ ಯುವರಾಜನ ಕಣ್ಣಿಗೆ ಬಿದ್ದು ಆತ “ಬೇರೆ ನಾಯಿ ಬಿಡ್ರೋ” ಎಂದು ಕಿರುಚಿದ. ಇನ್ನಷ್ಟು ಮಳಲು ತಗೊಂಡು ಕೋಪತಾಪಗಳಿಂದ ಮತ್ತೆ ಎಸೆದ. ಅದು ನೇರ ಮಹಾರಾಣಿಯ ಕಣ್ಣಿಗೇ ಬಿದ್ದು ಆಕೆ ಕಿಟಾರನೇ ಕಿರಿಚಿ ಮುಖ ಮುಚ್ಚಿಕೊಂಡಳು. ಉಳಿದವರು ಹೆದರಿ ಸ್ಥಳ ಬಿಟ್ಟು ದೂರ ಸರಿದರು.

ಪ್ರಧಾನಿ ಅಲ್ಲೇ ನಿಂತಿದ್ದ. ಅಷ್ಟರಲ್ಲಿ ಕಂದು ಬಣ್ಣದ, ಹಸುವಿನ ಗಾತ್ರದ ಹತ್ತು ನಾಯಿಗಳನ್ನು ಬಿಲದಿಂದ ಬಿಟ್ಟರು. ಅವು ವಿಕಾರವಾಗಿ ಬಾವಿ ಪ್ರತಿಧ್ವನಿಸುವಂತೆ ಒದರುತ್ತ ಏರಿಬಂದುದೇ ಆಯ್ತು, ಬದೆಗ ಜೀವದ ಆಸೆ ಬಿಟ್ಟು ವೀರಾವೇಶದಿಂದ ಕಿರಿಚಿ ಅವುಗಳ ಮೇಲೆ ಹಾರಿದ. ಹುಲಿಯಂಥ ನಾಯಿಗಳು ಅವನ ಮೇಲೆ ಮುಗಿಬಿದ್ದು ಎದುರಿಸಲಾರದೆ ಬದೆಗ ಅಂಗಾತವಾಗಿ ಕೆಳಗೆ ಬಿದ್ದ. ನಾಯಿಗಳು ಅವನ ಅಂಗಾಂಗಗಳನ್ನು ಎಳೆದೆಳೆದು ಹರಿದು ಹಾಕಿದವು. ಮಹಾರಾಣಿಯಿನ್ನೂ ಹುಚ್ಚಿಯಂತೆ ಕಿರುಚುತ್ತಿದ್ದಳು. ಆಗಲೇ ಶಿಖರಸೂರ್ಯ ಎಲ್ಲರೂ ನೋಡನೋಡುತ್ತಿರುವಂತೆ ಬಾವಿಯಲ್ಲಿ ಜಿಗಿದ! ಇಡೀ ಪ್ರೇಕ್ಷಕ ಸಮುದಾಯ ಹೋ ಎಂದೊದರಿ ಬಾವಿಯ ಸುತ್ತ ಮುಗಿಬಿದ್ದು ಸ್ತಬ್ಧವಾಯಿತು.

ನಾಯಿಗಳು ಬದೆಗನನ್ನು ಬಿಟ್ಟು ಶಿಖರಸೂರ್ಯನನ್ನು ನೋಡುತ್ತ ನೋಡುತ್ತ ಬಿಲದ ಕಡೆಗೆ ಸರಿದು ಹಿಂಡಾಗಿ ನಿಂತವು. ಕೆಲವು ಬಿಲದೊಳಗೆ ನುಗ್ಗುವುದಕ್ಕೂ ನೋಡಿದವು. ಆದರೆ ಒಂದು ನಾಯಿಯೂ ಶಿಖರಸೂರ್ಯನ ಬಳಿಗೆ ಸುಳಿಯಲಿಲ್ಲ; ಬೊಗಳಲಿಲ್ಲ! ಅವನೇ ಸಾಕಿದ ನಾಯಿಗಳಂತೆ ಬಾಲ ಅಲ್ಲಾಡಿಸುತ್ತ, ಆದರೆ ಅವನ ದೃಷ್ಟಿಯಿಂದಲೂ ತಪ್ಪಿಸಿಕೊಳ್ಳುತ್ತ, ಕ್ಷೀಣಸ್ವರದಲ್ಲಿ ಕುಂಯ್‌ಕುಂಯ್ ಮಾಡುತ್ತ ಬಿಲದ ಬಳಿ ಅದು ಮುಚ್ಚಿದ್ದರಿಂದ ಗುಂಪುಗೂಡಿ ನಿಂತವು. ಇನ್ನೊಂದು ಮನರಂಜನೆಯನ್ನು ಬಯಸಿದ್ದ ಪ್ರೇಕ್ಷಕರಿಗೆ ನಿರಾಸೆಯಾಯ್ತು. ಪ್ರಧಾನಿ, ಮೊದಲಾಗಿ ಎಲ್ಲರೂ ಪವಾಡ ಕಂಡವರಂತೆ ಕಣ್ಣು ಬಾಯಿ ಬಿಟ್ಟುಕೊಂಡು ನಿಂತರು. ಮಹಾರಾಣಿ ಮಾತ್ರ ‘ಛೂ’ ಎಂದು ‘ಹುಯಿಲು ಹುಯಿಲು’ ಎಂದು ನಾಯಿಗಳ ಹೆಸರುಗೊಂಡು ಬೇಟೆಯಾಡಲು ಪ್ರೋತ್ಸಾಹಿಸಿದಳಾದರೂ ನಾಯಿಗಳು ಕುಂಯ್‌ಗುಡುತ್ತ ದೂರ ಸರಿದವಷ್ಟೆ. ಶಿಖರಸೂರ್ಯ ಮಹಾರಾಣಿಯನ್ನ, ಪ್ರಧಾನಿಯನ್ನ ಕ್ರೂರದೃಷ್ಟಿಯಿಂದ ಇರಿದ. ಪ್ರೇಕ್ಷಕರ್ಯಾರೂ ಬೆಂಬಲಿಸಲಿಲ್ಲವಾಗಿ ಮಹಾರಾಣಿ ಅವರ ಮುಖ ನೋಡಿ ತಂತಾನೇ ಸುಮ್ಮನಾದಳು.

ಬದೆಗನಲ್ಲಿ ಶಕ್ತಿ ಉಳಿದಿರಲಿಲ್ಲಿ. ಇಡೀ ಮೈ ರಕ್ತದಲ್ಲಿ ಅದ್ದಿತೆಗೆದಂತಾಗಿತ್ತು. ಅವನ ಎಡಗಿವಿ, ಗುಪ್ತಾಂಗಗಳು ಹರಿದು ಜೋತು ಬಿದ್ದಿದ್ದವು. ಹೊಟ್ಟೆಯ ಕರುಳು ಕೂಡ ಹೊರಬಂದು ಜೋತಾಡುತ್ತಿತ್ತು. ಶಿಖರಸೂರ್ಯ ತನ್ನ ಭುಜದ ಮೇಲಿನ ಬಟ್ಟೆಯನ್ನು ಬದೆಗನಿಗೆ ಹೊದಿಸಿ ಕನಕಪುರಿಯ ಹೊಸದರ್ಶನದೊಂದಿಗೆ ಹೊರಬಂದ.

ನಾಯಿಗಳು ಶಿಖರಸೂರ್ಯನನ್ನು ಕಚ್ಚಲಿಲ್ಲವಾಗಿ ಎಲ್ಲರಿಗೂ ಹೊಯ್ಕಾದರೂ ಶಿಖರಸೂರ್ಯನಿಗಾಗಲಿಲ್ಲ. ಯಾಕೆನೆ ವಿದ್ಯುಲ್ಲತೆಗಾಗಿ ನಿತ್ಯ ವಿಷಸೇವನೆ ಮಾಡಿ ಸಾತ್ಮ್ಯ ಸಾಧಿಸಿದವನಾದ್ದರಿಂದ ನಾಯಿಗಳು ಅವನ ಬಳಿ ಸುಳಿಯುವುದಿಲ್ಲವೆನ್ನುವುದು ಅವನಿಗೆ ಗೊತ್ತಿತ್ತು. ಹಾಗಿದ್ದರೆ ಬದೆಗನನ್ನ ಆತ ಉಳಿಸಬಹುದಿತ್ತಲ್ಲ ಎಂದರೆ ನಾಲ್ಕು ಕಡಾಯಿ ಚಿನ್ನದ ಗುಟ್ಟು ಉಳಿಸಲಿಕ್ಕಾದರೂ ಬದೆಗ ಸಾಯಲೇಬೇಕಾಗಿತ್ತು. ಅವನು ಸಾಯುವನೆಂದು ಖಾತ್ರಿಯಾದಾಗ ಮಾತ್ರ ರಾಜವೈದ್ಯ ಬಾವಿಗೆ ಜಿಗಿದ! ಬಾವಿಗೆ ಜಿಗಿದು ನಿಮ್ಮ ‘ನಾಯಿಗಳಿಂದ ನನ್ನನ್ನು ಮುಟ್ಟುವುದು ಅಸಾಧ್ಯವೆಂದು ತೋರಿಸಿದ. ಆದರೆ ಬದೆಗ ‘ಲೇ ನಾಯಿ’ ಎಂದು ಇವನನ್ನು ಕುರಿತು ಕಿರಿಚಿದ್ದನ್ನು ಪ್ರಧಾನಿ ಗಮನಿಸಿದ್ದ!