ಕೆಲವರಿರುತ್ತಾರೆ, ಸೋಲುಗಳಿಂದ ಕಂಗಾಲಾಗಿ ತಮ್ಮ ಕಥೆ ಮುಗಿಯಿತೆಂದು ಆತ್ಮಹತ್ಯೆಗೆ ತಯಾರಾಗಿ ಇನ್ನೇನು ಕುಣಿಕೆ ಬಿಗಿದುಕೊಳ್ಳಬೇಕು-ಅಷ್ಟರಲ್ಲಿ ದೈವ ತನ್ನ ಮಗ್ಗಲು ಬದಲಿಸುತ್ತದೆ.

ಅರ್ಥಕೌಶಲನ ಸಾವು ಹತ್ಯೆಯಿಂದಾದರೂ ಅದನ್ನು ಬಚ್ಚಿಟ್ಟು ಆತ್ಯಹತ್ಯೆಯೆಂದು ಸಾರಲಾಯತು. ಶಿಖರಸೂರ್ಯನ ಚಾಡಿಯನ್ನು ನಂಬಿ ಹೋಗಿದ್ದ ಯುವರಾಜನಿಗೆ ಪ್ರಧಾನಿಯ ಮನೆಯಲ್ಲಿ ಚಿನ್ನದ ಕಡಾಯಿಗಳನ್ನು ಕಂಡಾಗ ಭಾರೀ ಆಘಾತವಾಯ್ತು. ದೇಶದ ಪ್ರಧಾನಿಯೇ ಅರಮನೆಯ ಚಿನ್ನವ ಕದ್ದವನೆಂದು ತಿಳಿದ ಮೇಲಂತೂ ಯುವರಾಜನನ್ನು ತಡೆಯುವವರೇ ಇಲ್ಲವಾದರು. “ನಾಳೆ ಬಂದು ನೋಡುತ್ತೇನೆ ಅಂತ ಮಹಾರಾಣಿಯವರಿಗೆ ತಿಳಿಸು!” ಎಂದು ಹೇಳುತ್ತಿದ್ದಂತೆ ಉಕ್ಕಿ ಬಂದ ಕೋಪವ ತಡೆಯಲಾರದೆ ಯುವರಾಜ ಪ್ರಧಾನಿಯ ಎದೆಗೆ ಜೋರಾಗಿ ಒದ್ದಿದ್ದ. ಪ್ರಧಾನಿ ಅಷ್ಟು ದೂರ ಸಿಡಿದು ಹೋಗಿ ಗೋಡೆಗೆ ತಲೆ ತಾಗಿ ಬಿದ್ದು ಅಲ್ಲೇ, ಆಗಲೇ ಸತ್ತಿದ್ದ. ಇವರ್ಯಾರೂ ಅದನ್ನು ಗಮನಿಸದೆ ಚಿನ್ನದ ಕಡಾಯಿಗಳೊಂದಿಗೆ ಅರಮನೆಗೆ ಬಂದಿದ್ದರು. ಇದರಿಂದ ಶಿಖರಸೂರ್ಯನಿಗಾದ ನಿವ್ವಳ ಲಾಭವೆಂದರೆ ಅರಮನೆಯ ಆರು ಕಡಾಯಿ ಹಣ ದೋಚಿದ ಹಾಗೂ ಯುವರಾಜನನ್ನು ಅಪಹರಿಸಿಟ್ಟ ಆಪಾದನೆ ಅರ್ಥಕೌಶಲನ ಹೆಸರಿಗೆ ಹೋದುದೆಷ್ಟೋ ಅಷ್ಟೇ.

ಆದರೆ ಅರ್ಥಕೌಶಲ ಹತ್ಯೆಯಿಂದಾಗಬಹುದಾಗಿದ್ದ ಶೂನ್ಯ ಸ್ಥಿತಿಯನ್ನು ಧನಪಾಲ ಮತ್ತವನ ಸ್ನೇಹಿತರು ಕೃತಕವಾಗಿ ತಪ್ಪಿಸಿ ಕನಕಪುರಿಯ ಬದುಕಿಗೊಂದು ವೇಗವನ್ನು ತಂದುಕೊಟ್ಟರು. ಧನಪಾಲನ ಮಗಳು ಗಜಲಕ್ಷ್ಮಿಯನ್ನು ಯುವರಾಜ ಮದುವೆಯಾಗಿ, ಪಟ್ಟಾಭಿಷೇಕವೂ ಆಗಿ ಯುವರಾಜನಾಗಿದ್ದವನು “ಚಂಡ ಪ್ರಚಂಡ ಆದಿತ್ಯಪ್ರಭ ಮಹಾರಾಜ”ನಾದನು. ಅರ್ಥಕೌಶಲನ ಜಾಗದಲ್ಲಿ ಧನಪಾಲ ಪ್ರಧಾನಿಯಾದ. ಮಹಾರಾಜ ಆದಿತ್ಯಪ್ರಭನ ಸಹಾಯದಿಂದ ಕರಾವಳಿಯ ಬಿಲ್ಲಪನ ಮಗ ಎರಡನೆಯ ಬಿಲ್ಲಪನನ್ನು ಸಂಹರಿಸಿ ಅಳೀಮಯ್ಯನಿಗೆ ಪಟ್ಟಗಟ್ಟಿ ಮಾಂಡಳಿಕನ ಮಾಡಿಕೊಂಡು ಧನಪಾಲನ ಎರಡನೆಯ ಮಗಳು ಶುಭಲಕ್ಷ್ಮಿಯನ್ನು ಕೊಟ್ಟು ಮದುವೆ ಮಾಡಲಾಯಿತು.

ಮದುವೆಯ ವಿಚಾರದಲ್ಲಾಗಲಿ, ಪಟ್ಟಾಭಿಷೇಕದ ವಿಚಾರದಲ್ಲಾಗಲಿ ಯಾರೂ ಶಿಖರಸೂರ್ಯನನ್ನು ಒಂದು ಮಾತು ಕೂಡ ಕೇಳಲಿಲ್ಲ. ಯುವರಾಜ ಮಹಾರಾಜನಾದರೆ ತನ್ನನ್ನು ಪ್ರಧಾನಿಯಾಗಿ ನಿಯಮಿಸಿಕೊಳ್ಳುತ್ತಾನೆಂದು ಶಿಖರಸೂರ್ಯ ಕನಸು ಕಂಡಿದ್ದ. ಅದೂ ಹುಸಿಯಾಗಿತ್ತು. ಸಂಬಂಧಿಕರಿಗೆ ವರ್ತಕರಿಗೆ ಕೊಟ್ಟಂತೆ ಇವನಿಗೂ ಮದುವೆ, ಪಟ್ಟಾಭಿಷೇಕಗಳ ಆಮಂತ್ರಣ ಕೊಟ್ಟಿದ್ದರೇ ಶಿವಾಯಿ ಯಾವೊಂದು ಸಂದರ್ಭದಲ್ಲೂ ರಾಜವೈದ್ಯನ ಸಲಹೆ ಸಹಕಾರ ಕೇಳಿರಲಿಲ್ಲ. ಇವನೂ ದೂರದ ಸಂಬಂಧಿಕರಂತೆ ಬಂದು ಅಕ್ಷತೆ ಚೆಲ್ಲಿ ಹೋಗಿದ್ದನಷ್ಟೆ. ಒಂದೇ ಸಮಾಧಾನವೆಂದರೆ ಮಹಾರಾಣಿಯನ್ನೂ ಕಡೆಗಣಿಸಿದ್ದರು. ಆಕೆ ಕಣ್ಣೀರುಗರೆಯುತ್ತ ಅಂತಃಪುರದಲ್ಲಿ ಕೂತಿದ್ದಳು. ಮಹಾರಾಣಿಗೇ ಹೀಗಾದ ಮೇಲೆ ತನಗಿನ್ನೇನೆಂದು ಇವನೂ ಸುಮ್ಮನಾಗಿದ್ದ.

ಶಿಖರಸೂರ್ಯ ಪೂರ್ತಿ ಪಾಪರಾಗಿದ್ದ. ಮಕ್ಕಳಿಗೆ ಕೊಡೋದಕ್ಕೆ ಅವನ ಬಳಿ ಉಗುರು ಬೆಚ್ಚಿಗಿನ ತೊಟ್ಟು ಪ್ರೀತಿ ಕೂಡ ಇರಲಿಲ್ಲ. ಮಡದಿ, ಮಕ್ಕಳ ಲಾಲನೆ ಪಾಲನೆಗಳನ್ನ ಚಿಕ್ಕಮ್ಮಣ್ಣಿಗೆ ವಹಿಸಿಕೊಟ್ಟು ಒಂಟಿತನದ ಬಂಜರಿನಲ್ಲಿ ತನ್ನನ್ನು ತಾನು ಬಂಧಿಸಿಕೊಂಡು ತಾನಾಯಿತು, ವೈದ್ಯಶಾಲೆಯಾಯಿತು –ಇದ್ದ.

ಮಗ ರವಿಕೀರ್ತಿ ತಂದೆಯಂತೆಯೇ ಧೈರ್ಯಶಾಲಿ ಮತ್ತು ಶೂರನಾಗಿದ್ದ. ತಾಯಿ, ಅಜ್ಜಿಯರಿಂದ, ಸರಿಕರಿಂದ, ಸೇವಕರಿಂದ ಕೂಡಿಸಿದ ಮಾಹಿತಿಯಿಂದ ತಂದೆಯ ಬಗ್ಗೆ ತಿಳಿಯಬೇಕಾದ್ದನ್ನೆಲ್ಲ ತಿಳಿದುಕೊಂಡಿದ್ದ. ತಿಳಿದ ಮೇಲೂ ಆತ ನಿಗೂಢ ವ್ಯಕ್ತಿಯಾಗಿ ಕಂಡಿದ್ದ. ಆದ್ದರಿಂದಲೇ ತಂದೆಗೆ ಹೆದರುತ್ತಿದ್ದ ಮತ್ತು ಗೌರವ ಕೊಡುತ್ತಿದ್ದ. ಆದರೆ ಶಿಖರಸೂರ್ಯ ಅಪಾಯಗಳನ್ನು ಸಾಧ್ಯವಾದಷ್ಟು ಮುಂದಾಗಿ ಊಹಿಸಿ ಅವು ಬರುವ ಮುನ್ನವೇ ನಿವಾರಿಸಿಕೊಳ್ಳುತ್ತಿದ್ದ. ರವಿಕೀರ್ತಿ ಮಾತ್ರ ಅವುಗಳನ್ನು ಮೈಮೇಲೆ ಹಾಕಿಕೊಂಡು ಎದುರಿಸುತ್ತಿದ್ದ. ಕೆಲವು ಸರಿ ಎದುರಿಸಲು ಗೊತ್ತಾಗದೆ ಅಪಾಯಕ್ಕೂ ಒಳಗಾಗುತ್ತಿದ್ದ. ಉಳಿದಂತೆ ಕುದುರೆ ಸವಾರಿ ಮಾಡುವುದರಲ್ಲಾಗಲಿ, ದ್ವಂದ್ವಯುದ್ಧದಲ್ಲಾಗಲಿ ಪುಂಡಾಟಿಕೆಯಲ್ಲಿ ಕೂಡ ಸರೀಕರಿಗಿಂತ ಮುಂದಿದ್ದ. ಎಲ್ಲರಿಗೂ ಪ್ರಿಯವಾಗುವಂತೆ ಮಾತಾಡುತ್ತಿದ್ದ. ನಗಾಡುತ್ತಿದ್ದ. ದೊಡ್ಡವರಿಗೆ ಗೌರವ ಕೊಡುತ್ತಿದ್ದ. ಒಮ್ಮೆ ಕಂಡವರು ಆ ಕ್ಷಣವೆ ಮಾರುಹೋಗುವಂಥ ಗುಣಗಳನ್ನು ಬೆಳೆಸಿಕೊಂಡಿದ್ದ.

ಮಗಳು ಮುದ್ದುಗೌರಿ ಮಾತ್ರ ಎಲ್ಲದರಲ್ಲಿ ಅಣ್ಣನಿಗೆ ವಿರುದ್ಧವಾಗಿದ್ದಳು. ಮೃದುವಾದ ನಡೆನುಡಿ, ಕನಸು ತುಂಬಿದ ಹಸಿರು ಕಣ್ಣು, ಸರಳವಾದ ಲಂಗದಾವಣಿ…. ಒಮ್ಮೆ ನೋಡಿದವರು ಅವಳ ಸರಳತೆಯನ್ನು ಮರೆಯುತ್ತಿರಲಿಲ್ಲ. ಆದರೆ ಗಿಜಿಗಿಜಿ ಜನ ಅಂದರೆ, ಬಾಗುವ ಸೇವಕರನ್ನು ಕಂಡರೆ ಅವಳಿಗಾಗದು. ಹೇಳಿಕೊಳ್ಳುವ ಗೆಳತಿಯರೂ ಅವಳಿಗಿರಲಿಲ್ಲ. ಸದಾಕಾಲ ಅಜ್ಜಿಗಂಟಿಕೊಂಡೇ ಇರುತ್ತಿದ್ದಳು. ಅಪರಿಚಿತರು ಬಂದಾಗಂತೂ ಒಳಮುಚುಕದಂತೆ ಮುದುಡಿ ಅಜ್ಜಿಯ ಹಿಂದೆ ಹುದುಗುತ್ತಿದ್ದಳು. ಅವಳೊಂದಿಗೇ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಅವಳೊಂದಿಗೆ ಮಲಗುತ್ತಿದ್ದಳು. ರಾತ್ರಿ ಬಹಳ ಹೊತ್ತಿನ ತನಕ ಅಜ್ಜಿ ಅವಳಿಗೆ ಶಿವಲೀಲೆ ಶಿವಾಚಾರದ ಪುರಾಣ ಕಥೆಗಳನ್ನ ಹೇಳುತ್ತಿದ್ದಳು. ಇವಳು ಬಟ್ಟಲುಗಣ್ಣು ತಕ್ಕೊಂಡು ಆ ಕಥೆಗಳನ್ನು ಕೇಳಿ ಕಲ್ಪಿಸಿಕೊಂಡು ತಾದಾದ್ಮ್ಯ ಹೊಂದುತ್ತಿದ್ದಳು. ಛಾಯಾದೇವಿಯಂತೂ ಅಜ್ಜಿ ಹೇಳುವ ಕತೆ ಹಾಡು ಕೇಳಿ ಮಗಳು ತೆಲೆಕೆಡಿಸಿಕೊಂಡಿದ್ದಾಳೆಂದೇ ಗಾಬರಿಯಾಗಿದ್ದಳು, ಮತ್ತು ಅವನ್ನೆಲ್ಲ ಅವಳ ತಲೆಯಿಂದೋಡಿಸಿ ಅವಳಿಗಾಗಿ ಒಂದು ವರ ನೋಡುವಂತೆ ತಾಯಿಗೆ ಹೇಳಿದ್ದಳು.

ಇನ್ನು ಛಾಯಾದೇವಿಯ ಬಗ್ಗೆ ಹೇಳುವುದೇ ಬೇಡ. ನಿಜದಲ್ಲಿ ಆಕೆ ತನ್ನೆಲ್ಲ ಯೌವನದ ಆಕರ್ಷಣೆ ಕಳೆದುಕೊಂಡಿದ್ದಳು. ಮೊಲೆಗಳು ದೊಡ್ಡದಾಗಿ ಬೆಳೆದು ಎದೆ ವಿಶಾಲವಾಗಿತ್ತು. ನಿತಂಬಗಳು ಪ್ರಮಾಣ ಮೀರಿ ಬೆಳೆದಿದ್ದವು. ನಿತ್ಯವೂ ಜರಿಸೀರೆ ಉಟ್ಟು ಕತ್ತಿನ ತುಂಬ ಭಾರವಾದ ಆಭರಣಗಳನ್ನು ಹೇರಿಕೊಳ್ಳುತ್ತಿದ್ದಳು. ತಲೆಗೂದಲು ಕಡಿಮೆಯಾಗಿ ಮುಖ ತಾಮ್ರದ ಪಾತ್ರೆಯಂತೆ ದುಂಡಗಾಗಿ ಕೆನ್ನೆಗಳು ಎರಡೂ ಬದಿಗಂಟಿದ ಇನ್ನೆರಡು ತಾಮ್ರದ ಗಿಂಡಿಗಳಂತೆ ಕಾಣುತ್ತಿದ್ದವು. ಗಂಡನ ಹಾಗೆಯೇ ಇವಳಿಗೂ ಜನ ಗೌರವ ಕೊಡುತ್ತಿದ್ದರು, ಹೆದರುತ್ತಿದ್ದರು.

ಈಗ ವಿದ್ಯುಲ್ಲತೆಯೂ ಇರಲಿಲ್ಲ. ಎಲ್ಲಿರುವಳೆಂಬ ಬಗ್ಗೆಯಾಗಲೀ, ಇಬ್ಬರಿಗೂ ಸಂಬಂಧ ಮುಂದುವರಿದ ಬಗ್ಗೆಯಾಗಲೀ ಯಾರಿಗೂ ಮಾಹಿತಿ ಇರಲಿಲ್ಲ. ಆದ್ದರಿಂದ ಗಂಡ ತನ್ನ ದಾರಿಗೆ ಬಂದನೆಂದೇ ನಂಬಿ ಸೇವಕಿಯಂತೆ ಶಿಖರಸೂರ್ಯನ ಸೇವೆ ಮಾಡಿಕೊಂಡಿದ್ದಳು. ಆದರಿದನ್ನು ಶಿಖರಸೂರ್ಯ ಗಮನಿಸಿರಲಿಲ್ಲ. ಆಕೆ ಯಾವುದಕ್ಕೂ ಒತ್ತಾಯ ಮಾಡಿದವಳಲ್ಲ. ಏನನ್ನೂ ಕೇಳಿದವಳಲ್ಲ, ತೃಪ್ತಿಯಿಂದಿರುವಳೆಂದೇ ಭಾವಿಸಿದ್ದ. ಮನೆಗೆ ಬಂದಾಗ ಆತನಲ್ಲಿ ಉತ್ಸಾಹ ಇರುತ್ತಿರಲಿಲ್ಲ. ದಣಿದವರಂತೆ ‘ದಯಮಾಡಿ ಯಾರೂ ಕಾಟ ಕೊಡಬೇಡಿ’ ಎಂಬಂತೆ ಇರುತ್ತಿದ್ದ. ಮಾತಿನಲ್ಲಿ ಲವಲವಿಕೆ ಇರುತ್ತಿರಲಿಲ್ಲ. ಖಾಲಿ ಕಣ್ಣುಗಳಿಂದ ನೋಡುತ್ತಿದ್ದ. ಆದರೂ ಒಮ್ಮೊಮ್ಮೆ ‘ಆತನನ್ನು ನಾನು ಇಷ್ಟು ಪ್ರೀತಿಸುತ್ತೇನಲ್ಲ-ಅದೇನಂಥ ಆಕರ್ಷಣೆ ಇದೆ ಅವನಲ್ಲಿ?’ ಎಂದು ಆಶ್ಚರ್ಯ ಪಡುತ್ತಿದ್ದಳು. ‘ನನ್ನ ಗುರುತಾದರೂ ಅವನಿಗಿದೆಯೋ ಇಲ್ಲವೋ…’ ಎಂದೂ ಕೇಳಿಕೊಂಡಿದ್ದಳು. ಇನ್ನು ಶಿಖರಸೂರ್ಯನೋ ಒಂದೊಂದು ಸಲ ರಾತ್ರಿ ಎಚ್ಚರವಾದಾಗ ‘ಪಕ್ಕದಲ್ಲಿ ಮಲಗಿದ್ದಾಳಲ್ಲಾ, ಯಾರಿವಳು!’ ಎಂದು ಆಶ್ಚರ್ಯದಿಂದ ನೋಡುತ್ತಿದ್ದ. ಏನಾದರಾಗಲಿ ಅವನೊಮ್ಮೆ ಮನೆಬಿಟ್ಟು ಹೊರಬಂದ ಅಂದರೆ ಛಾಯಾದೇವಿ ಅವನ ಮನಸ್ಸಿನಲ್ಲಿ ಸುಳಿಯುತ್ತಲೇ ಇರಲಿಲ್ಲ.

ಆ ಒಂದು ದಿನ ಹದ್ದಿನ ಕೊಳ್ಳದಿಂದ ಚಂಡೀದಾಸ ಬರುವವನಿದ್ದ. ಅವನನ್ನು ಭೇಟಿಯಾಗಲು ಶಿಖರಸೂರ್ಯ ವೈದ್ಯಶಾಲೆಗೆ ಹೋದ. ಮೆಟ್ಟಲೇರಿ ಮೇಲಿನ ಕೋಣೆಗೆ ಹೋಗುವುದರೊಳಗೆ ಚಂಡೀದಾಸ ಆಗಲೇ ಬಂದು ಒಂದು ಕಿಡಿಕಿಯಿಂದ ನಿಂತು ಹೊರಗಡೆ ನೋಡುತ್ತಿದ್ದ. ಇಳಿಹೊತ್ತಿನ ಮಾಗಿದ ಬಿಸಿಲು ಅವನ ಮುಖದ ಕೆಳಭಾಗದ ಮೇಲೆ ಬಿದ್ದು ಇನ್ನರ್ಧ ನೆರಳಲ್ಲಿತ್ತು. ಈತ ಬಂದರೂ ಹಿಂದುರುಗದೆ ತದೇಕಚಿತ್ತದಿಂದ ನೋಡುತ್ತ ಮಂದಹಾಸ ಬೀರುತ್ತಿರುವುದನ್ನು ಗಮನಿಸಿ ಇವನೂ ಹಿಂದಿನಿಂದ ಹೋಗಿ ಇನ್ನೊಂದು ಕಿಡಿಕಿಯಿಂದ ಅದೇ ದಿಕ್ಕಿನಲ್ಲಿ ದೃಷ್ಟಿ ಹರಿಸಿದ. ದೂರದ ನೇರಳೆ ಮರದಡಿ ಮಕ್ಕಳಿದ್ದರು. ಅವರಿಂದ ದೃಷ್ಟಿ ಕೀಳದೆ ಚಂಡೀದಾಸ ಹೇಳಿದ:

“ಆ ಹುಡುಗ ನಿನ್ನ ಮಗ ಅಲ್ಲವೊ?”

“ಹೌದು”

“ಅವನಿಗೆ ರಾಜಯೋಗವಿದೆ.”

“ಏನಂದೆ?”

“ಹೌದು. ಮಧ್ಯೆ ನಿನ್ನಿಂದಲೇ ಒಂದು ಕಂಟಕವಿದೆ. ಅದನ್ನು ದಾಟಿದರೆ ಸಾಮ್ರಾಟನಾಗುತ್ತಾನೆ. ಹುಷಾರಾಗಿ ನೋಡಿಕೊ. ನಿನ್ನ ಮಗಳು ಮಾತ್ರ ಯಾರೋ ದೇವತೆಯ ಅವತಾರ ಕಣಪ್ಪ!”

ಎಂದು ಹೇಳುತ್ತ ತಿರುಗಿ ಬಂದು ಪೀಠದ ಮೇಲೆ ಕೂತುಕೊಂಡ. ಶಿಖರಸೂರ್ಯ ಪ್ರಥಮಬಾರಿ ಎಂಬಂತೆ ಮಕ್ಕಳನ್ನು ನೋಡಿದ. ಕಟ್ಟುಮಸ್ತಾದ ಮೈಕಟ್ಟಿನ ಆಕರ್ಷಕ ನಿಲುವಿನ ರವಿಕೀರ್ತಿ ವಯಸ್ಸಿಗಿಂತ ದೊಡ್ಡವನಾಗಿ ಕಂಡ. ಸಂಪಿಗೆ ಎಸಳಿನ ನೇರ ಮೂಗಿನ ತುದಿ ಚೂಪಾಗಿತ್ತು. ಸ್ವಚ್ಛವಾದ ಬಿಳಿ ಹಲ್ಲಿನ ಮುಗುಳುನಗೆ ಚೆಲ್ಲುವ ತುಟಿಗಳು, ಬಾಚಿ ಹಿಂದೆ ಕಟ್ಟಿದ ಕಟ್ಟನ್ನು ಮೀರಿ ಕಿವಿ ಮುಚ್ಚಿದ್ದ ದಟ್ಟವಾದ ಕರಿ ಕೂದಲು, ತಲೆಯ ಬಲಭಾಗದಲ್ಲಿ ಸಹಜವಾಗಿ ಬೈತಲಾಗಿ ಬೇರ್ಪಟ್ಟಿದ್ದವು. ಅವನ ಮುಖದಲ್ಲೆಲ್ಲೋ ನಾಗರಿಕತೆಯಿಂದ ದೂರವಾದ ಒರಟುತನವಿತ್ತು. ಅದು ಅವನ ಮುಖಕ್ಕೆ ಕಾಡಿನ ಚಹರೆಯ ಜೊತೆಗೆ ಅನುಪಮ ಚೆಲುವಿಕೆಯನ್ನೂ ಕೊಟ್ಟಿದ್ದರಿಂದ ನಗುವುದಕ್ಕೆ ಇಲ್ಲವೆ ಹಾಡುವುದಕ್ಕೆ ಸಿದ್ಧವಾಗಿ ನಿಂತಂತಿದ್ದ. ಅಣ್ಣನನ್ನು ನೇರಳೆ ಮರದಡಿ ಬಿಟ್ಟು ಯಾವುದೋ ನೆಪದಿಂದ ವೈದ್ಯಶಾಲೆಯ ಕಡೆಗೆ ಬರುತ್ತಿದ್ದ ಮಗಳನ್ನು ನೋಡಿದ. ದೊಡ್ಡವಳಾಗಿದ್ದಾಳೆ! ತಾನು ಮರೆತಿದ್ದ ತನ್ನ ತಾಯಿಯ ಗುಣಲಕ್ಷಣ ಸೌಂದರ್ಯಗಳನ್ನೆಲ್ಲ ಯಥಾವತ್ತಾಗಿ ತಂದಿದ್ದಾಳೆ! ಮಕ್ಕಳನ್ನು ಪ್ರಥಮಬಾರಿ ಕಂಡಂತೆ ಉಕ್ಕಿ ಬಂದ ಹೆಮ್ಮೆಯನ್ನು ನಿಯಂತ್ರಿಸುತ್ತ ಶಿಖರಸೂರ್ಯ ಚಂಡೀದಾಸನ ಕಡೆತೆ ತಿರುಗಿದ. ಇದನ್ನೇ ಕಾಯುತ್ತಿದ್ದ ಚಂಡೀದಾಸ ಎದ್ದು ಬಂದು ಅವನ ಕೈ ಹಿಡಿದುಕೊಂಡು ಹೇಳಿದ:

“ನನ್ನ ಮಗಳ ಕೈ ಹಿಡಿದು ಉಪಕಾರ ಮಾಡಿದೆ ಗೆಳೆಯಾ. ಮಡದಿ, ಮಗಳು ಇಬ್ಬರೂ ಆನಂದವಾಗಿರೋದನ್ನ ನೋಡಿ ಹಿರಿ ಹಿರಿ ಹಿಗ್ಗಾಯ್ತು. ನಿನ್ನ ಉಪಕಾರ ಮರೆಯಲಾರೆ.”

-ಎಂದು ಹೇಳುತ್ತಾ ಆನಂದಬಾಷ್ಪಗಳನ್ನುದುರಿಸಿದ.

“ನಮ್ಮ ಸಂಬಂಧಕ್ಕೆ ಸಮ್ಮತಿಸಿದ್ದಕ್ಕೆ ನಾನು ಕೃತಜ್ಞತೆ ಹೇಳಬೇಕು. ಅದು ಬಿಟ್ಟು ನೀನೇ ಇಂಥ ಮಾತಾಡುತ್ತೀಯಲ್ಲ ಮಾರಾಯಾ” ಎಂದು ಹೇಳುತ್ತ ಶಿಖರಸೂರ್ಯ ಚಂಡಿದಾಸನನ್ನ ತಬ್ಬಿಕೊಂಡ.

“ಹಂಗಲ್ಲ ಮಾರಾಯ. ತಿಳಿದೂ ತಿಳಿದೂ ಚಂಡಾಲರ ವಿಷದೃಷ್ಟಿ ಬಿದ್ದವಳ ಕೈ ಹಿಡಿಯುವುದು ಸಾಮಾನ್ಯವಾದ ಮಾತೆ? ಅವಳಿಗೋಸ್ಕರ ನೀನು ವಿಷಸೇವನೆ ಮಾಡಿದೆಯಲ್ಲ, ಅದೇನು ಅಲ್ಪ ತ್ಯಾಗವೊ? ಸಾಲದು, ಸಾಲದು ಬರೀ ಕೃತಜ್ಞತೆ ಹೇಳಿದರೆ ಸಾಲದಪ್ಪಾ.”

ಎಂದು ಕೈ ಮುಗಿದು ಗದ್ಗದಿತನಾದ. ಅವನು ಕಣ್ಣೀರುಗರೆವುದನ್ನು ಕಂಡು ಶಿಖರಸೂರ್ಯನ ಕಣ್ಣು ಒದ್ದೆಯಾದವು. ತಕ್ಷಣ ಸಾವರಿಸಿಕೊಂಡು, ಭಾವುಕ ಸನ್ನಿವೇಶವನ್ನು ತಹಬಂದಿಗೆ ತರಬೇಕೆಂದು,-

“ಅದು ಸರಿ ಮಾರಾಯಾ, ನನ್ನ ಮಗನಿಗೆ ರಾಜಯೋಗವಿದೆ ಎಂದೆಯಲ್ಲ, ನಿನ್ನ ಊಹೆಗೆ ಆಧಾರವೇನು? ಮೊದಲು ಹೇಳು.”

ಚಂಡೀದಾಸನ ಅಭಿಮಾನ ಕೆರಳಿತು. ನಿಯಂತ್ರಿಸಿಕೊಂಡು, ಆದರೂ ಹೆಮ್ಮೆಯಿಂದ ಹೇಳಿದ:

“ನಾನು ಜ್ಯೋತಿಷ್ಯಶಾಸ್ತ್ರದಲ್ಲಿ ಪಂಡಿತನಯ್ಯಾ, ಹಾಗೆಂದು ಪೂಜ್ಯಪಾದನೇ ಆಶೀರ್ವಾದ ಮಾಡಿದ್ದು ಸಾಲದೊ?”

“ಶಿವಾಪುರದ ತಿಳುವಳಿಕೆ ನಿನಗೆ ಅಷ್ಟು ಪ್ರಯೋಜನವಾಯಿತೊ?”

“ಯಾಕೆ ನಿನಗೆ ಆಗಿಲ್ಲವೊ?”

“ಶಿವಾಪುರದ ಹಳೆ ಅಸಂಗತ ಬೇಡಿಕೆಗಳನ್ನು ನಾನು ಈಡೇರಿಸಲಾರೆ ವೈದ್ಯಮಿತ್ರಾ. ದೇವರಂತೆ, ಸ್ವರ್ಗ ನರಕಗಳಂತೆ, ಬಯಲಂತೆ, ಅಮ್ಮನಂತೆ-ಒಬ್ಬೊಬ್ಬರಿಗೆ ಒಂದೊಂದು ಥರ ಕಾಣಿಸುವ ಅಂಥ ಕಲ್ಪನೆಗಳ ಬೆನ್ನು ಹತ್ತಲಿಕ್ಕಾದೀತ?”

-ನಿರುತ್ಸಾಹದ ದನಿಯಲ್ಲಿ ಹೇಳಿದ ಶಿಖರಸೂರ್ಯ. ಚಂಡೀದಾಸ ಬಿಡಲಿಲ್ಲ-

“ಶಿವಾಪುರದ ತಿಳುವಳಿಕೆಯಿಂದಲೇ ಆರು ಕಡಾಯಿ ಚಿನ್ನ ಅರ್ಥಕೌಶಲನಲ್ಲಿದೆ ಅಂತ ಹೇಳಿದೆನಲ್ಲಪ್ಪ! ನಿಜವಾಗಲಿಲ್ಲವೊ?”

ಎಂದು ಕೆಣಕಿದ. ಶಿಖರಸೂರ್ಯ ಕೊಂಚ ನಾಚಿಕೊಂಡನಾದರೂ ಒಳಗಾಗಲಿಲ್ಲ. ಚಿನ್ನದ ಬಗೆಗೆ ಶಿವಪಾದನಲ್ಲಿ ವಿಜ್ಞಾನದಂಥ ಖಚಿತ ಜ್ಞಾನವಿದ್ದುದನ್ನು ಕೇಳಿ ತಿಳಿದಿದ್ದ. ಆ ಗುಟ್ಟುಗಳನ್ನು ಭೇದಿಸುವ ಉದ್ದೇಶವನ್ನು ಬಚ್ಚಿಟ್ಟುಕೊಂಡು ಶಿಖರಸೂರ್ಯ ಕೇಳಿದ:

“ಹೇಳು ಮಿತ್ರಾ, ನೀನು ಶಿವಪಾದನ ಪರಮಶಿಷ್ಯ. ನಾನು ಅಲ್ಲಿದ್ದಾಗ ಅನೇಕ ಸಲ ಶಿವಪಾದನೇ ನಿನ್ನ ಹೆಸರು ತಗೊಂಡು ಆನಂದ ಪಡುತ್ತಿದ್ದ.”

“ನಿಜವಾಗ್ಲೂ?”

-ನಡುವೆಯೇ ಅವನ ಮಾತು ಕತ್ತರಿಸಿ, ಆನಂದವನ್ನುನುಭವಿಸುತ್ತ ಕೇಳಿದ ಚಂಡೀದಾಸ.

“ನಾನ್ಯಾಕೆ ಸುಳ್ಳು ಹೇಳಲಿ ಮಾರಾಯಾ?”

“ಪರಮಾನಂದವಾಯ್ತು! ಧನ್ಯನಾದೆನಪ್ಪ! ನನ್ನ ತಂದೆ ನನ್ನನ್ನು ಕ್ಷಮಿಸಿದ್ದಾನೆ ಎಂದಾಯ್ತು! ನಾನಿನ್ನು ನಿಶ್ಚಿಂತೆಯಿಂದ ಸಾಯಬಹುದು!”

ಅವನ ಮುಖ ಅರಳಿ ಸುಖ ಹೊಳೆವ ಮಂದಹಾಸ ನೋಡಿ ಶಿಖರಸೂರ್ಯನಿಗೆ ತಮಾಷೆ ಮತ್ತು ಆಶ್ಚರ್ಯವಾಯಿತು. ಇವನು ಇಂಥ ಮುಗ್ಧಮೂರ್ಖನೆ!” ಎಂದು ತಮಾಷೆಯಾದರೆ ಒಂದು ಹಗುರು ಸುಳ್ಳಿಗೇ ‘ಧನ್ಯನಾದೆ ಅಂತಾನಲ್ಲ!”’ ಎಂದು ಆಶ್ಚರ್ಯವಾಯಿತು. ಅರ್ಥಕೌಶಲನನ್ನೆ ಎದುರು ಹಾಕಿಕೊಂಡು ಚಂಡೀದಾಸ ಇವನೇನ? ಎಂದು ಹೊಯ್ಕಾಯಿತು.

“ಯಾವ ಸಂದರ್ಭದಲ್ಲಿ ಶಿವಪಾದ ನನ್ನನ್ನು ಜ್ಞಾಪಿಸಿಕೊಂಡ? ನೆನಪಿದೆಯೋ?”

-ಉಕ್ಕಿಬಂದ ಭಕ್ತಿಯಿಂದ ಆಗಲೇ ಚಂಡೀದಾಸನ ಕೊರಳಸೆರೆ ಬಿಗಿದಿತ್ತು.

“ಚಿನ್ನದ ವಿಷಯದಲ್ಲಿಯೇ!”

– ಶಿಖರಸೂರ್ಯ ಇನ್ನೊಂದು ಸುಳ್ಳು ಉದುರಿಸಿದ. ಚಂಡೀದಾಸ ಜಲಜಲ ಕಣ್ಣೀರು ಸುರಿಸುತ್ತ,

“ಅಂಥಾ ನನ್ನ ಕರುಣಾಳು ತಂದೆಗೂ ಸುಳ್ಳು ಹೇಳಿದ ಚಂಡಾಲನಪ್ಪಾ ನಾನು?” ಎಂದು ಮಕ್ಕಳ ಹಾಗೆ ಮುಖ ಮುಚ್ಚಿಕೊಂಡು ಅಳತೊಡಗಿದ. ಅಳುವುದಕ್ಕೆ ಆಸ್ಪದ ಕೊಟ್ಟು ಆಮೇಲೆ ಕೇಳಿದ:

“ಯಾವ ಸಂದರ್ಭದಲ್ಲಿ ಸುಳ್ಳು ಹೇಳಿದೆ? ಯಾಕೆ ಹೇಳಿದೆ?”

-ಎಂದು ಕೆಣಕಿ ಕೇಳಿದ.

“ಯೋಗಭ್ರಷ್ಟನಯ್ಯಾ ನಾನು…..”

-ಎಂದು ಮತ್ತೆ ಬಿಕ್ಕಿದ. ಕಣ್ಣೀರುಕ್ಕಿ ಚಂಡೀದಾಸನ ಮುಖ ವಿಕಾರವಾಗಿತ್ತು. ದುಃಖದಿಂದ ಬಿಕ್ಕಿ ಕಂಪಿಸಿದ. ಶಿಖರಸೂರ್ಯ ಬೆರಗಿನಿಂದ ತಬ್ಬಿಬ್ಬಾದ!

ಶಿವಪಾದನ ಬಗ್ಗೆ ಶಿಷ್ಯರೆಲ್ಲರೂ ಇಷ್ಟೇ ಭಕ್ತಿಗೌರವಗಳನ್ನಿಟ್ಟುಕೊಂಡಿದ್ದರು. ತನ್ನ ವಿನಾ ಯಾರೊಬ್ಬರೂ ಅವನ ಶಕ್ತಿಯ ಬಗೆಗಾಗಲಿ, ಅಂತಃಕರಣದ ಬಗೆಗಾಗಲಿ ಅನುಮಾನ ಪಟ್ಟವರಲ್ಲ. ದೇವರನ್ನು ಕಂಡಂತೆ ಅವನ ಪಾದಧೂಳಿ ಪಡೆದು ರೋಮಾಂಚಿತರಾಗುತ್ತಿದ್ದರು, ಧನ್ಯರಾಗುತ್ತಿದ್ದರು. ದೇವರಂಥಾ ದೇವರು ಸನ್ನಿಧಿಯನ್ನು ಕೊಟ್ಟರೂ ಒಂದೆರಡು ಗಂಟೆಗಳಲ್ಲಿ ವಿಸರ್ಜನೆಯಾಗದಿದ್ದರೆ ಬೇಸರವಾಗುತ್ತದೆ. ಶಿವಪಾದನ ವಿಷಯ ಹಾಗಲ್ಲ. ಅವನ ಸನ್ನಿಧಿಯಲ್ಲಿದ್ದವರು ಅಲ್ಲಿದ್ದಷ್ಟು ಸಮಯವೂ ಆನಂದೋದ್ರೇಕದಲ್ಲಿ ಇರುತ್ತಿದ್ದರು. ಇದು ಪವಾಡವೆಂದು ಮತ್ಸರದಿಂದಲೇ ಶಿಖರಸೂರ್ಯ ಒಪ್ಪಿಕೊಂಡಿದ್ದ. ಚಂಡೀದಾಸನನ್ನು ಕೆಣಕಲೆಂದು ಮತ್ತೆ ಹೇಳಿದ:

“ಮಿತ್ರಾ, ಯೋಗಭ್ರಷ್ಟನಾದ ಘಟನೆಯನ್ನು ಕೇಳುವುದಕ್ಕೆ ಯಾರಿಗೆ ಸಂತೋಷವಾದೀತು? ಆದರೆ ಶಿವಪಾದನ ವಿಷಯ ಕೇಳಿದಷ್ಟೂ ಜಪತಪಾದಿ ಪೂಜೆ ಪುನಸ್ಕಾರ ಪಾರಾಯಣ ಮಾಡಿದ ತೃಪ್ತಿಯಾಗುವುದರಿಂದ ಕೇಳಿದೆನೇ ವಿನಾ ನಿನ್ನನ್ನ ನೋಯಿಸುವ ಉದ್ದೇಶದಿಂದಲ್ಲ. ನಿನಗೆ ಸಂಕೋಚವಾಗುವಂತಿದ್ದರೆ ಹೇಳಬೇಡ.”

ಎಂದು ಇನ್ನೊಂದು ಸುಳ್ಳು ಬಿಟ್ಟ.

ಶಿವಪಾದನ ವಿಷಯದಲ್ಲಿ ಅವನ ಶಿಷ್ಯರ್ಯಾರೂ ಕುಹಕವನ್ನಾಗಲಿ, ಅಭಿನಯವನ್ನಾಗಲಿ ಕಂಡವರಲ್ಲ. ಚಂಡೀದಾಸ ಪಶ್ಚಾತ್ತಾಪದ ಕಣ್ಣೀರು ಸುರಿಸುತ್ತ ಹೇಳಿದ:

“ನಾನು ಯೋಗಭ್ರಷ್ಟನಾದುದು ನಿಜ. ಅಲ್ಲಿದ್ದ ಮೊದಲಿನ ಮೂರು ವರ್ಷ ವಿಷವಿದ್ಯೆ ಕಲಿತೆ. ವಿಷವಿದ್ಯೆ ಎಂದರೆ ವಿಷ ಸೇವಿಸಿದವರ ವಿಷ ತೆಗೆಯುವುದು. ಆದರೆ ಕದ್ದು ಹೆಂಗೂಸುಗಳನ್ನ ವಿಷಕನ್ಯೆ ಮಾಡುವ ವಿಧಾನವನ್ನೂ ಕಲಿತೆ. ಜೊತೆಗೆ ರಸವಿದ್ಯೆಯಲ್ಲೂ ಆಸಕ್ತಿ ಬೆಳೆಯಿತು. ಅವರಿಗೆ ಹೇಳದೆಯೇ ಅಲ್ಲಿದ್ದ ಗ್ರಂಥರಾಶಿಯ ಉಪಯೋಗ ಪಡೆದು ಎರಡೂ ಅಪವಿದ್ಯೆಗಳನ್ನ ಕಲಿತೆ, ಕದ್ದು ಚಿಲುಮೆ ಕೂಡ ಸೇದುತ್ತಿದ್ದೆ.”

“ಅಂದರೆ ರಸವಿದ್ಯೆಯನ್ನ ನಿನಗೆ ಶಿವಪಾದ ಕಲಿಸಲೇ ಇಲ್ಲ.”

“ಇಲ್ಲ. ಅದೊಂದೇ ಅಲ್ಲ ವಿಷ ಹಾಕುವ ವಿದ್ಯೆಯನ್ನೂ ಕಲಿಸಲಿಲ್ಲ.”

“ಅಂದರೆ ನೀನು ಕಲಿತದ್ದು ಅವನಿಗೆ ಗೊತ್ತಿರಲಿಲ್ಲ.”

“ಹಾಗಂತ ನಾನು ಅಂದುಕೊಂಡಿದ್ದೆ. ಒಂದು ದಿನ ಒಂದು ಲೋಹದ ಗಟ್ಟಿಯನ್ನು ಚಿನ್ನವಾಗಿಸಿದೆ ನೋಡು! ಪ್ರಪಂಚವನ್ನೇ ಗೆದ್ದಷ್ಟು ಸಂತೋಷವಾಯಿತಯ್ಯ! ಹೆಮ್ಮೆಯಿಂದ ಬೀಗಿಬಿಟ್ಟೆ. ಒಂದು ದಿನ ಶಿವಪಾದ ಚಿನ್ನದ ಗಟ್ಟಿ ಸಮೇತ ಬಾ ಅಂತ ನನಗೆ ಹೇಳಿ ಕಳಿಸಿದ. ಹೋದೆ. ಶಿಷ್ಯರೆಲ್ಲಾ ಆಗಲೇ ಅಮ್ಮನ ಮುಂದೆ ಸೇರಿದ್ದರು. ನಾನು ಚಿನ್ನದ ಗಟ್ಟಿಯನ್ನ ಬಟ್ಟೆಯಲ್ಲಿ ಸುತ್ತಿ ಹಿಡಿದುಕೊಂಡಿದ್ದೆ. ಶಿವಪಾದ ಎಲ್ಲರನ್ನೂ ಕುರಿತು ಹೇಳಿದ:

“ಮಕ್ಕಳೇ, ನಿಮಗೆಲ್ಲಾ ನನ್ನೊಬ್ಬ ಶಿಷ್ಯನ ಪವಾಡಶಕ್ತಿಯನ್ನು ತೋರಿಸೋಣ ಅಂತ ಕರೆದೆ. ಈ ಬೆಟ್ಟಕ್ಕೆ ಸಾವಿರಾರು ಶಿಷ್ಯರು ಬಂದು ವಿದ್ಯೆಯನ್ನು ಕಲಿತು ಹೋಗಿದ್ದಾರೆ. ಆದರೆ ಇಂಥ ಅಪರೂಪದ ಸಿದ್ಧಿ ಪಡೆದವರೊಬ್ಬರೂ ಇಲ್ಲ. ಲೋಕದಲ್ಲಿ ಲೋಹದಿಂದ ಚಿನ್ನ ಮಾಡಿದವರಿದ್ದಾರೆ. ಆದರೆ ಲೋಹದ ಗಟ್ಟಿಯಿಂದ ಸೆಗಣಿ ಮಾಡಿದವರು ಯಾರಾದರೂ ಇದ್ದಾರೆಯೆ? ನಮ್ಮಲ್ಲೇ ಇದ್ದಾನೆ ಅಂಥ ಒಬ್ಬ ವಿಜ್ಞಾನಿ! ಇಕೋ ಇವನೇ ಆ ಮಹಾನುಭಾವ.

ಎಂದು ನನ್ನನ್ನು ತೋರಿಸಿದ! ಎಲ್ಲರೂ ನಗತೊಡಗಿದರು. ನನ್ನ ಸರೀಕರೂ ನಕ್ಕರು. ನನ್ನ ಸ್ವಾಭಿಮಾನ ಕೆರಳಿತು. ಒಂದು ಹೆಜ್ಜೆ ಮುಂದೆ ಹೋಗಿ,

“ತಪ್ಪು ಗುರುವೆ, ನನ್ನ ಸಾಧನೆಯ ಬಗ್ಗೆ ನಿನಗ್ಯಾರೋ ತಪ್ಪು ಹೇಳಿದ್ದಾರೆ. ನಾನು ಮಾಡಿದ್ದು ಲೋಹದಿಂದ ಚಿನ್ನವನ್ನ, ಸೆಗಣಿಯನ್ನಲ್ಲ! ಇಕೋ ನೋಡಿರಿ….”

ಎಂದು ಕೈ ಮುಂದೆ ಮಾಡಿ ಗಟ್ಟಿಯ ಮೇಲಿನ ಬಟ್ಟೆ ತೆಗೆದ, ನೋಡಿದರೆ ಅಲ್ಲಿದ್ದುದು ಸೆಗಣಿ!

ಎಲ್ಲರೂ ಗೊಳ್ಳೆಂದು ಇನ್ನಷ್ಟು ನಕ್ಕರು. ನನ್ನ ಸರೀಕರು ಚಪ್ಪಾಳೆ ತಟ್ಟಿ ನಕ್ಕರು. ಮುಖಕ್ಕೆ ಮಸಿ ಹಚ್ಚಿ ಕನ್ನಡಿ ಹಿಡಿದಂಗಾಗಿ, ಮಾನಕ್ಕೆ ಹೀನಾಯವಾಗಿ, ಮರ್ಯಾದೆಗೆ ಅವಮರ್ಯಾದೆಯಾಗಿತ್ತು. ಅಂಗಾಲಿನಿಂದ ನೆತ್ತಿಯತನಕ ಕಂಪಿಸಿ ಧೊಪ್ಪೆಂದು ಬಿದ್ದು ಗುರುವಿನ ಪಾದ ಹಿಡಿದುಕೊಂಡೆ. ಗುರು ಅಪ್ಪಣೆ ಕೊಟ್ಟರು:

“ಇಷ್ಟು ಕಲ್ತಿದ್ದೀಯಲ್ಲ, ಇನ್ನು ಸಾಕಪ್ಪ ತಮ್ಮ, ನೀನಾಯ್ತು, ನಿನ್ನ ಹಡಬೆತನವಾಯ್ತು, ನಿನ್ನ ದುರಾಸೆಯಾಯ್ತು – ಈ ಮೂರಕ್ಕೂ ಕೂಲಿಯಾಗಿ ನೀ ಸೇದೋ ಚಿಲುವೆಯೊಳಗಿಂದ ದಿನಾ ಒಂದು ಗುಂಜಿ ತೂಕ ಬಂಗಾರ ಉದರ್ತದೆ. ಸಾಕಲ್ಲ? ಇನ್ನು ಇಲ್ಲಿಂದ ತೊಲಗು ತಮ್ಮ.”

ಇದಪ್ಪ ನನ್ನ ದೈವ! ಈಗ ನಿನ್ನ ಮುಂದೆ ಹಿಂಗಿದ್ದೀನಿ!”

-ಎಂದು ಹೇಳಿ ಖಿನ್ನನಾದ. ಅವನ ಖೇದದಲ್ಲಿ ಕಿಂಚಿತ್ತೂ ಭಾಗಿಯಾಗದೆ,-

“ಇಂಥಾ ಅಡಗೂಲಜ್ಜಿ ಕಥೆಗಳನ್ನ ನೀನು ನಂಬುತ್ತೀಯಲ್ಲ ಮಾರಾಯಾ, ಈಗಲೂ ನಿನ್ನ ಚಿಲುಮೆಯಿಂದ ಒಂದು ಗುಂಜಿ ಬಂಗಾರ ಉದುರುತ್ತದೆ?” ಅಂದ.

“ಹೌದು”

“ಪ್ರಮಾಣವಾಗಿಯೂ?”

“ಇದಕ್ಕೆ ಪ್ರಮಾಣ ಯಾಕಯ್ಯಾ? ಕಣ್ಣಾರೆ ನೋಡಬಹುದಲ್ಲಾ?”

-ಚಂಡೀದಾಸ ಸಹಜ ದನಿಯಲ್ಲಿ ಹೇಳಿದ. ಶಿಖರಸೂರ್ಯ ಮಾತಿನ ಹಿಂದೆ ಮತಲಬಿಯನ್ನು ಅಡಗಿಸಿ ಕೃತಕ ನಯದಿಂದ ಹೇಳಿದ,

“ಹಾಗಾದರೆ ಇಕಾ ಕೇಳು” ಎನ್ನುತ್ತ ಚಂಡೀದಾಸನ ಮುಂದೆ ಬಂದು,

“ಎರಡು ಚಿಲುಮೆ ತಗೊಳ್ಳುವಾ. ನಿನ್ನ ಚಿಲುಮೆಯಲ್ಲಿ ಹಾಕಿದ ಸೊಪ್ಪನ್ನೇ ಇನ್ನೊಂದಕ್ಕೂ ಹಾಕೋಣ.”

“ಸರಿ.”

“ಒಂದನ್ನು ನೀನು ಸೇದು. ಇನ್ನೊಂದನ್ನು ನಾನು ಸೇದುತ್ತೇನೆ. ಎರಡರಲ್ಲೂ ಚಿನ್ನ ಇದ್ದರೆ ಅಥವಾ ಇಲ್ಲದಿದ್ದರೆ ನಿನ್ನ ಗುರುವಿನ ವಾಕ್ಯ ಹುಸಿಯಾದಂತೆ! ಆಯಿತಲ್ಲ?”

ಈತ ಗುರುವನ್ನ ಹುಸಿ ಮಾಡಲು ಯಾಕಿಷ್ಟು ಉತ್ಸಾಹಗೊಳ್ಳುತ್ತಿದ್ದಾನೆ? ಸಾಮಾನ್ಯವಾಗಿ ಗುರುನಿಂದೆ ಮಾಡಿದಾಗ ಚಂಡೀದಾಸ ಕೋಪಾವಿಷ್ಟನಾಗುತ್ತಿದ್ದ. ಈಗ ಇವನ ರಹಸ್ಯೋದ್ದೇಶವೇನೆಂದು ಯೋಚನಾಮಗ್ನನಾಗಿ ಕೇಳಿದ:
“ನೀನೂ ಅದೇ ಗುರುವಿನಿಂದ ಕಲಿತವನು. ಅವನ ಶಕ್ತಿಯ ಬಗ್ಗೆ ಅನುಮಾನ ಇದೆಯೊ?”

“ಯಾಕಿರಬಾರದು?”

“ಹೌಂದಪ್ಪ ಅಂಥ ಅನುಮಾನ ಯಾಕೆ ಬಂತು?”

“ಇಬ್ಬರಿಗೂ ಗೊತ್ತಾಗಲೆಂದೇ ಹೇಳ್ತಿರೋದು, ಗುರುವಾಕ್ಯ ನಿಜವಿದ್ದಲ್ಲಿ ನಿನ್ನ ಚಿಲುಮೆಯಲ್ಲಿ ಮಾತ್ರ ಚಿನ್ನ ಇರಬೇಕು. ಅದಲ್ಲವಾದಲ್ಲಿ ಎರಡರಲ್ಲೂ ಚಿನ್ನ ಇರುತ್ತದೆ ಅಥವಾ ಇರೋದಿಲ್ಲ! ಸರಿಯಾ?”

“ನಿನಗೂ ನನ್ನ ಹಾಗೆ ಗುರುವಾಕ್ಯವಾಗಿದ್ದರೆ ನಿನ್ನ ಚಿಲುವೆಯಲ್ಲೂ ಚಿನ್ನ ಇರುತ್ತದೆ.”

“ಖಂಡಿತ ಗುರುವಾಕ್ಯವಾಗಿಲ್ಲ.”

“ಹಾಗಿದ್ದರೆ ನನ್ನ ಚಿಲುಮೆಯಲ್ಲಿ ಮಾತ್ರ ಚಿನ್ನ ಇದ್ದರೆ ನೀನು ಅನುಭವಿಸುವ ಶಿಕ್ಷೆ ಏನು?”

“ಶ್ವಾನಕೂಪಕ್ಕೆ ಬೀಳುತ್ತೇನಯ್ಯಾ”

“ಭಲೇ ಬೆರಿಕಿ ನೀನು! ಶ್ವಾನಕೂಪಕ್ಕೆ ಬಿದ್ದರೂ ನಿನಗೇನೂ ಆಗಲಾರದೆಂದು ನಿನಗೆ ಗೊತ್ತಿಲ್ಲವೊ?

“ಯಾಕೆ ನಾನು ಮನುಷ್ಯನಲ್ಲವೇ?”

“ನಿನ್ನ ಮೈ ಆಗಲೇ ವಿಷಮಯವಾಗಿದೆ ಮಾರಾಯಾ; ಯಾವ ನಾಯಿಗಳೂ ನಿನ್ನನ್ನು ಮುಟ್ಟಲಾರವು. ನಿನ್ನ ಮೈ ಬೆವರಿನ ವಾಸನೆಯನ್ನು ನಾಯಿಗಳು ಸಹಿಸೋದು ಸಾಧ್ಯವೇ ಇಲ್ಲ.”

ತಕ್ಷಣವೆ ಶಿಖರಸೂರ್ಯ ಕೇಳಿದ:
“ನಿನಗಿದು ಹ್ಯಾಗೆ ತಿಳಿಯಿತು?”

“ನಾನೂ ವಿಷವಿದ್ಯೆ ಬಲ್ಲವನಲ್ಲವೊ!”

ಚಂಡೀದಾಸನ ಬಗ್ಗೆ ಕೊಂಚ ಗಾಬರಿಗೊಂಡು ಸುಮ್ಮನೇ ಕೂತ. ಆಮೇಲೆ ಮೆಲ್ಲಗೆ “ಇವತ್ತು ನಿನ್ನ ಊಟ ನಮ್ಮ ಮನೆಯಲ್ಲೇ ಆಗಲಿ. ಊಟವಾದ ಮೇಲೆ ಚಿಲುಮೆ ತುಂಬೋಣ, ಬಾ”

ಎಂದು ಚಂಡೀದಾಸನನ್ನು ಕರೆದುಕೊಂಡು ಹೊರಟ.

ಮೆಟ್ಟಲ ಮೇಲೆ ನಿಂತು ಇದೆಲ್ಲವನ್ನು ಕದ್ದು ಕೇಳಿಸಿಕೊಂಡ ಗೌರಿ ಇವರಿಗಿಂತ ಮುಂಚೆ ಮನೆಗೆ ನಡೆದಳು.

ಮಾರನೇ ಬೆಳಿಗ್ಗೆ ಸೇವಕರು ಏಳುವ ಮುನ್ನವೇ ಗೌರಿ ಎದ್ದು ಮುಖ ತೊಳೆದುಕೊಂಡು ಇನ್ನೊಬ್ಬರ ಕೈಗೆ ನಿಲುಕದಂತೆ ಎತ್ತರದ ಮ್ಯಾಲೆ ಚಿಲುಮೆ ಇಟ್ಟ ಸ್ಥಳವನ್ನೇ ನೋಡುತ್ತ ಕೂತಳು. ಆಮೇಲೆ ಶಿಖರಸೂರ್ಯ ಬಂದ. ಚಂಡೀದಾಸನೂ ಬಂದ. ಇಟ್ಟ ಸ್ಥಳದಿಂದ ಚಿಲುಮೆಗಳನ್ನು ಮೆಲ್ಲಗೆ ತಕ್ಕೊಂಡು “ಇದು ನಿಂದು” ಎಂದು ಒಂದು ಚಿಲುಮೆಯನ್ನು ಚಂಡೀದಾಸನತ್ತ ಸರಿಸಿ ತನ್ನದೆಂದುಕೊಂಡ ಚಿಲುಮೆಯನ್ನು ಮೆಲ್ಲಗೆ ನೆಲಕ್ಕೆ ತಟ್ಟಿದ. ಬರೀ ಬೂದಿ ಬಂತು. ಒಳಗೆ ಇನ್ನೂ ಬೂದಿ ಉಳಿದಿದೆಯೇ? ಎಂದು ಪರೀಕ್ಷಿಸಿದ. ಆಮೇಲೆ ಚಂಡೀದಾಸನ ಮುಂದಿಟ್ಟ ಚಿಲುಮೆಯನ್ನ ತಟ್ಟಿದ. ಜೋಳದ ಕಾಳಿನ ಗಾತ್ರದ ಚಿನ್ನದ ಗುಂಡು ಬಿತ್ತು! ಉಜ್ಜಿ ನೋಡಿದ-ಅಸಲಿ ಚಿನ್ನವೇ! ಮಾತಿಲ್ಲದೆ ಕೂತ. ಇದನ್ನೆಲ್ಲ ಕದ್ದು ನೋಡುತ್ತಿದ್ದ ಗೌರಿ ಮಾತ್ರ ಭಯಭಕ್ತಿಯಿಂದ ಕಣ್ಣಗಲ ಮಾಡಿಕೊಂಡು ಕೋಣೆಯ ಮೂಲೆಯಲ್ಲಿ ನಿಶ್ಯಬ್ದಳಾಗಿ ಕೂತಳು.

ಸೋಲಿನಿಂದ ಶಿಖರಸೂರ್ಯನ ಮುಖ ಕೆಂಪೇರಿತ್ತು. ತಾನು ಅಣಕಕ್ಕೆ ಗುರಿಯಾಗಬೇಕಾಯಿತೆಂದು ನಾಚಿಕೊಂಡ. ಚಂಡೀದಾಸ ಸಹಾನುಭೂತಿಯಿಂದ ಹೇಳಿದ:

“ನಿನ್ನ ವಿದ್ಯೆಯ ಮುಂದೆ ನನ್ನ ವಿದ್ಯೆ ಕಿಂಚಿತ್ ಎನ್ನಿಸಿ ಬಿಟ್ಟೆಯಲ್ಲಯ್ಯಾ… ಪ್ರಮಾಣ ಮಾಡಿ ಹೇಳುತ್ತೇನೆ, ವಿಷಕನ್ಯೆಯ ಸಹವಾಸ ಮಾಡಿಯೂ ಬದುಕಿದವನು ನಾನು ತಿಳಿದಂತೆ ನೀನೊಬ್ಬನೇ!”

“ಅದಿರಲಿ ಪಂಥ ಇವತ್ತೂ ಮುಂದುವರಿಯಬೇಕು. ಈ ದಿನ ಚಿಲುಮೆಗಳನ್ನು ಬದಲು ಮಾಡೋಣ.”

ಸ್ವಲ್ಪ ಹೊತ್ತು ಸುಮ್ಮನಿದ್ದ ಚಂಡೀದಾಸ ಆಗಲೆಂದ.

ಆ ದಿನ ರಾತ್ರಿ ಚಿಲುಮೆಗಳನ್ನು ಬದಲಿಸಿ ಒಂದೇ ಸೊಪ್ಪನ್ನ ಎರಡರಲ್ಲೂ ತುಂಬಿ ಸೇದಿ ಇಟ್ಟರು. ಮಾರನೇ ದಿನವೂ ಚಂಡೀದಾಸನ ಚಿಲುಮೆಯಿಂದ ಮಾತ್ರ ಚಿನ್ನ ಬಂತು. ಖಿನ್ನನಾಗಿ ಶಿಖರಸೂರ್ಯ ಹೇಳಿದ:

“ನಿಜ ಹೇಳುತ್ತೇನೆ ಮಿತ್ರಾ, ಪಾದದಿಂದ ಕತ್ತಿನತನಕ ಮನುಷ್ಯನ ಬೆಲೆ ಇರೋದು ದಿನಕ್ಕೊಂದು ಹಣ ಮಾತ್ರ. ಆದರೆ ಕತ್ತಿನಿಂದ ಮೇಲೆ ಹೋದರೆ ಅದರ ಬೆಲೆ ದಿನಕ್ಕೆ ಎಷ್ಟು ಕೊಟ್ಟರೂ ಕಡಿಮೆ. ಮಜ್ಜೆ ಮಾಂಸದ ದೇಹ ನಮ್ಮನ್ನು ಎಲ್ಲಿಗೂ ಒಯ್ಯೋದಿಲ್ಲ. ಆದರೆ ತಲೆ ಮಾತ್ರ ಎಲ್ಲಿಗೂ ಒಯ್ಯಬಹುದು, ಅಂತ ನಂಬಿದವನು ನಾನು. ನನ್ನ ನಂಬಿಗೆಯನ್ನ ನೀನು ಇವತ್ತು ಹುಸಿ ಮಾಡಿದೆ!”